(ಚಕ್ರವರ್ತಿಗಳು – ಆರನೆಯ ಸುತ್ತು)
ದೇವಕಿ ಮುನಿಸಿಕೊಂಡಿದ್ದಳು. “ಬೆಟ್ಟ ಗುಡ್ಡ ಏರ್ತೀರಿ, ಬಂದು ಕೊಚ್ತೀರಿ, ಪೇಪರಿಗೆ ಗೀಚ್ತೀರಿ, ನಮಗೆ ಸಿಕ್ಕಿದ್ದೇನು?” ಒಂದರ್ಥದಲ್ಲಿ ನಿಜ. ಮಗ ಸಣ್ಣವನಾದ್ದರಿಂದ ಎಲ್ಲಾದಕ್ಕೂ ಒಯ್ಯುವುದು ಅಸಾಧ್ಯ. ಸಹಜವಾಗಿ ಅವನಿಗೆ ಜೊತೆಯಾಗಿ ಈಕೆಯೂ ನಿಲ್ಲುವುದು ಅನಿವಾರ್ಯ. (ನಾನು ನಿಂತರೆ ಕಾರ್ಯಕ್ರಮವೇ ಆಗುವುದಿಲ್ಲ!) ಮಡದಿಯ ದುಃಖವೂ ನ್ಯಾಯವೇ ಎಂದು ಕಂಡು, ಅದೊಂದು ಆದಿತ್ಯವಾರ (೨೭-೧೦-೧೯೮೫) ನಾಲ್ಕು ಬೈಕೇರಿ ಹೊರಟ ನಮ್ಮ ತಂಡ ಬಹುತೇಕ ದಂಪತಿಗಳದ್ದೇ. ನಾನು, ನನ್ನ ಹೆಂಡ್ತಿ, ಮತ್ಮಗು ಯೆಜ್ದಿ ಮೇಲಿದ್ದೆವು. ಹಿಂದಿನಂತೇ ಬಸವರಾಜು, ಶಾಂತಾ ರಾಜದೂತನ ಮೇಲೆ. [ಬಸವರಾಜು ಇಂದು ಹಿರಿಯ ಪತ್ರಕರ್ತನಾಗಿ ನಿವೃತ್ತ (ಮೈಸೂರಿನಲ್ಲಿದ್ದಾರೆ) ಎನ್ನೋದೇ ಹವ್ಯಾಸೀ ಅಂಕಣಗಳ ಸರಣಿ ನೋಡುವಾಗ ಹೆಚ್ಚು ಪ್ರವೃತ್ತ ಎನ್ನೋದೇ! ಇವರೀರ್ವರ ಮಗ ಮಿಲಿಂದ ಸಿ.ಎಫ್.ಟಿ.ಆರೈ ನೌಕರನಾದರೂ ತಬ್ಲಾವಾದನದಲ್ಲಿ ಬಾಲಭಾಸ್ಕರ] ಮತ್ತೊಂದು ರಾಜದೂತನ ಮೇಲೆ ಚಾರ್ಲ್ಸ್, ಬ್ಯೂಲಾ [ತಲೆನೂರ್ಮಲೆ ಘಾಟಿ, ಕರಿಕೆ ದಾರಿಯಲ್ಲೆಲ್ಲ ಬಂದ ಅದೇ ಚಾರ್ಲ್ಸ್ ಅಂದು ಔಷಧ ಕಂಪೆನಿಯೊಂದರ ಪ್ರತಿನಿಧಿ. ಇಂದು ಸ್ವೋದ್ಯೋಗೀ ಮತ್ತು ಅನಿಮಲ್ ಕೇರ್ ಟ್ರಸ್ಟಿನ ತುರುಸಿನ ಕಾರ್ಯಕರ್ತ. ಈತ ನವವಿವಾಹಿತನಾಗಿ ನಮಗೆ ಪರಿಚಯಿಸುತ್ತಿದ್ದ ಬ್ಯೂಲಾ ಕಾಲೇಜ್ ಅಧ್ಯಾಪಿಕೆ. ಈಕೆ ಇಂದು ಅದೇ ವೃತ್ತಿಯಲ್ಲಿ ಹಿರಿತನದೊಡನೆ ದಾಂಪತ್ಯದಲ್ಲಿ ಎರಡು ಮಕ್ಕಳ ಅಮ್ಮನೂ ಹೌದು] ಮತ್ತು ಕೊನೆಯಲ್ಲಿ ಜಾವಾದ ಮೇಲೆ ಅರವಿಂದ, ಬಾಲಾ. ಕ್ಷಮಿಸಿ, ಕೊನೆಯ ಜೋಡಿ ಮಾತ್ರ ದಂಪತಿಗಳಲ್ಲ. “ಶಾನುಭಾಗರ ಮಗಳೂ… ಮದುವೆ ಇಲ್ಲಾ ಇನ್ನೂ” ಎಂದು ಹಾಡಿಕೊಂಡಿದ್ದ ಪ್ರಾಯದ ಅರವಿಂದರಾವ್ (ನೆನಪಿದೆಯಲ್ಲ, ಅದೇ ಜಂಕೂಸ್ ಇಂಡಿಯಾ…?) ಮತ್ತು ಬಾಲಕೃಷ್ಣ! [ಅರವಿಂದ್ ಸದ್ಯ ‘ರಾಜಸಿಂಹ’ (ಲಯನ್ ಪ್ರೆಸಿಡೆಂಟ್), ವೃತ್ತಿಯಲ್ಲಿ ನೋವಾ ಟೆಕ್ ಪ್ರಯೋಗಾಲಯದ ಮುಖ್ಯಸ್ಥ, ಗಾಯತ್ರಿ ಪತಿ ಮತ್ತು ಎರಡು ಮಕ್ಕಳ ಅಪ್ಪ. ಬಾಲಕೃಷ್ಣ ಸೋಮಯಾಜಿ ಮುಂಬೈಯಲ್ಲಿ ಮಝಗಾಂವ್ ಡಾಕಿನ ಹಿರಿಯ ತಂತ್ರಜ್ಞ, ಉಷಾಪತಿ, ಅರ್ಪಿತಪಿತ.]
ದಕ್ಷಿಣ ಕನ್ನಡಿಗರಿಗೆ (ಜಿಲ್ಲೆಯವರಿಗೆ) ಬಯಲು ಸೀಮೆಗೇರಲು ಕೆಲವು ಘಾಟೀ ಮಾರ್ಗಗಳಿವೆ. ಅವುಗಳಲ್ಲಿ ಅಗ್ರಪೀಠ ಬೆಂಗಳೂರಿಗೆ ಸಮೀಪ ಎಂಬ ಕಾರಣಕ್ಕೆ ಶಿರಾಡಿಗೇ ಸಲ್ಲುತ್ತದೆ (ಆ ಕಾಲದಲ್ಲೇ ಇದು ರಾಷ್ಟ್ರೀಯ ಹೆದ್ದಾರಿ ಕೂಡಾ). ಈಚೆಗೆ ಅದಕ್ಕೆ ಸೇರ್ಪಡೆಗೊಂಡ ರೈಲು ಮಾರ್ಗ ಹೆಚ್ಚಿನ ಪ್ರಾಕೃತಿಕ ಸೌಂದರ್ಯ ವೀಕ್ಷಣೆಗೆ ಅವಕಾಶವನ್ನು ಮಾಡಿಕೊಡುವುದರೊಡನೆ ಆಕರ್ಷಣೆಯನ್ನೂ ಗಳಿಸಿದೆ. [ಲೇಖನದ ‘ಈಚೆಗೆ’ಯಲ್ಲಿ ಅಲ್ಲಿ ಮೀಟರ್ ಗೇಜಿತ್ತು. ಆದರೆ ಏತನ್ಮಧ್ಯ ಅದು ಸುಮಾರು ಆರು ವರ್ಷಗಳ ಕಾಲ ಉನ್ನತೀಕರಣದ ಹೆಸರಿನಲ್ಲಿ ಮುಚ್ಚಿ ಕುಳಿತು, ಇಲಾಖೆಯ ನಿಧಾನದ್ರೋಹ ಅನುಭವಿಸಿ ವಾಸ್ತವದ ಈಚೆಗೆ ಬ್ರಾಡ್ ಗೇಜಾಗಿದೆ] ಹೆದ್ದಾರಿ ಕಣಿವೆಯಲ್ಲಿ ಹೊಳೆಯ ಸಾಂಗತ್ಯವಹಿಸಿದರೆ ರೈಲಿನ ರಸ್ತೆ ಶಿಖರ ಸಾಲಿನ ಸಾಮೀಪ್ಯ ಸಾಧಿಸಿದೆ.
ರೈಲ್ವೇ ರಸ್ತೆ ರಚನೆಯ ಕಾಲದಲ್ಲಿ ಹೆದ್ದಾರಿಯಿಂದ ಅನೇಕ ಮಣ್ಣದಾರಿಗಳು ಹೊಳೆಯ ತತ್ಕಾಲೀನ ಸೇತುವೆಗಳನ್ನು ಹಾಯ್ದು ಘಟ್ಟವೇರುವುದನ್ನು ನಾನು ಗಮನಿಸಿದ್ದೆ, ಮತ್ತು ಒಂದೆರಡನ್ನು ಅನುಸರಿಸಿದ್ದೂ ನೆನಪಿತ್ತು. ಆ ದಾರಿ ಜಾಲದಲ್ಲಿ ಮುಖ್ಯವಾದದ್ದನ್ನು ಬಳಸಿಕೊಳ್ಳುವಂತೆ ನಮ್ಮದೊಂದು ಯೋಜನೆ ಹಾಕಿದೆವು. ಹೆದ್ದಾರಿಯ ಸವಿಯೋಟ ಮೊದಲು. ಅನಂತರ ಸಿಕ್ಕ ಸೇತುವೆಯಲ್ಲಿ ಮಣ್ಣು ದಾರಿ ಹಿಡಿದು ಮೂರುನಾಲ್ಕು ಕಿಮೀ ಅಂತರದೊಳಗೆ ರೈಲ್ವೇ ದಾರಿ. ಮತ್ತೆ ಸರ್ವೇಕ್ಷಣ ಇಲಾಖೆಯ ಭೂಪಟ ಸೂಚಿಸುವಂತೆ ಆಚಿನ, ಅಂದರೆ ಘಟ್ಟದ ಮೇಲಿನ ಹಳ್ಳಿ ಜಾಡೋ ಕೂಪು ದಾರಿಯೋ ಅನುಸರಿಸಿ ಮಾಂಕನಹಳ್ಳಿ, ಬಿಸಿಲೆಗಾಗಿ ಮರಳುವುದು.
ಉಪ್ಪಿನಂಗಡಿ ಆದ ಮೇಲೆ ಸಿಗುವ ಮುಖ್ಯ ಕವಲೂರು ಗುಂಡ್ಯ. ಆ ವಲಯದಲ್ಲಿನ್ನೂ ಮೀಟರ್ ಗೇಜ್ ಕಂಬಿ ಹಾಕುತ್ತಿದ್ದ ಕಾಲದಲ್ಲೇ ನಮ್ಮ ಒಂದು ತಂಡ ಗುಂಡ್ಯದವರೆಗೆ ಕಾರು ಮಾಡಿ ಬಂದು, ಯಾವುದೋ ಸೇತುವೆಯಲ್ಲಿ ನಡೆದು ದಿನವಿಡೀ ಗುಹೆ, ಸೇತುವೆ, ಜಾಡು, ನಿಲ್ದಾಣಗಳ ವಿವಿಧ ಹಂತದ ಕಾರ್ಯಭಾರವನ್ನು ನೋಡಿ “ಅಬ್ಬಾ” ಎಂದು ಮರಳಿದ್ದು ನೆನಪಿತ್ತು. ಆಗ ಬರಲಿದ್ದ ಎಡಕುಮೇರಿ ನಿಲ್ದಾಣದ ಜಾಗದ ಕೆಲಸಗಳನ್ನೆಲ್ಲಾ ನೋಡಿ, ಹೆದ್ದಾರಿಗೆ ನಾವಿಳಿದು ಬಂದ ಜಾಗ – ಕೆಂಪೊಳೆ. ಅನಂತರದ ದಿನಗಳಲ್ಲಿ ಅಲ್ಲಿ ರೈಲಿನಲ್ಲೇ ಸವಾರಿ ಹೋದ ಅನುಭವದಲ್ಲೂ ಕೆಂಪೊಳೆ ಕೇಳಿದ್ದ ನೆನಪಿನಲ್ಲಿ ಪ್ರಸ್ತುತ ನಮ್ಮ ಬೈಕೋಟ ನೇರ ಅದನ್ನೇ ಉದ್ದೇಶಿಸಿತ್ತು.
[ಭಾರೀ ಸಾರ್ವಜನಿಕ ಹಣದ ಹೊಳೆಯನ್ನು ವ್ಯಕ್ತಿ ಸ್ವಾರ್ಥದ ಕಟ್ಟೆಗಳಿಗೆ ತಿರುಗಿಸುವುದಕ್ಕಿದ್ದ ಹೆಸರು ‘ನೇತ್ರಾವತಿ ನದಿ ತಿರುವು.’ (ವಾಸ್ತವದಲ್ಲಿ ನೇತ್ರಾವತಿ ಈಗಾಗಲೇ ತಿರುಗಿಯಾಗಿದೆ ಎಂಬ ಭಯಂಕರ ಸುದ್ದಿಯನ್ನು ಗೆಳೆಯ ಸುಂದರ ರಾಯರು ಈಚೆಗೆ ಹೊರಹಾಕಿದ್ದಾರೆ. ಅದನ್ನು ಓದಲು ಇಲ್ಲಿ ಚಿಟಿಕೆಹೊಡೆಯಿರಿ.) ಆದರೆ ಅದು ಗಳಿಸಿದ ಜನವಿರೋಧದ ಅಲೆಗೆ ಬೆದರಿದ ಪುಡಾರಿ-ಕಂತ್ರಾಟುದಾರ ಕೂಟ ಈಚೆಗೆ ‘ಇದು ಅದಲ್ಲ’ ಎಂಬಂತೆ ಪ್ರಚಾರಕ್ಕೆ ಬಿಟ್ಟ ಹೆಸರು ‘ಎತ್ತಿನಹೊಳೆ ಎತ್ತು ನೀರಾವರಿ.’
ತಮಾಷೆ ಎಂದರೆ ನದಿ ತಿರುವಿನಲ್ಲಿ ಚಲಾವಣೆಗೆ ತಂದ ನಾಣ್ಯಗಳು – ವ್ಯರ್ಥ ಸಮುದ್ರ ಸೇರುವ ನೀರು, ಬಳಸುವುದು ಗುರುತ್ವಾಕರ್ಷಣದ ಬಲವಾದ್ದರಿಂದ ಪರಿಸರ ಸ್ನೇಹಿ, ಇತ್ಯಾದಿಯನ್ನು ಹೊಸ ಯೋಜನೆ ಜಾಣ ಮರೆವಿಗೆ ತಳ್ಳುತ್ತದೆ. ಯೋಜನೆಯ ಪ್ರಕಾರ ಎತ್ತಿನ ಹೊಳೆಯಲ್ಲಿ ಸಂಗ್ರಹವಾಗುವ ಅಲ್ಪ ನೀರಿನ ಮೌಲ್ಯವನ್ನು, ಸಂಗ್ರಹಿಸುವ ವ್ಯವಸ್ಥೆ ಮತ್ತು ಎತ್ತಲು ಬಳಸುವ (ವಿದ್ಯುತ್-) ಶಕ್ತಿಯ ಮೌಲ್ಯಗಳಿಗೆ ತುಲನೆ ಮಾಡಿದರೆ ಯಾರೂ ಹೇಳುತ್ತಾರೆ ಇದು ಪ್ರಾಯೋಗಿಕವಲ್ಲ. ಇನ್ನೂ ದೊಡ್ಡ ತಮಾಷೆಯೆಂದರೆ ಈ ಎತ್ತಿನಹೊಳೆಯೇ ಮುಂದುವರಿದು ಕೆಂಪೊಳೆ, ಗುಂಡ್ಯಹೊಳೆ, ಕುಮಾರಧಾರೆಯೆಂದೆಲ್ಲಾ ಹೇಳಿಸಿಕೊಂಡು ಅಂತಿಮವಾಗಿ ‘ಯಾವುದು ಅಲ್ಲ’ ಎಂದರೋ ಅದೇ ನೇತ್ರಾವತಿಯಾಗುತ್ತದೆ; ಎತ್ತಿನ ಹೊಳೆ ಭಾವನಲ್ಲ, ಅಕ್ಕನ ಗಂಡ!]
ಶಿರಾಡಿ ಕಣಿವೆಯ ಈ ಪ್ರಧಾನ ಹೊಳೆಗೆ ರೈಲ್ವೇಯವರು ಹಳಿ ಇಡುವ ಕಾಲದಲ್ಲಿ ಅಸಂಖ್ಯ ಸೇತುವೆಗಳನ್ನು ಮಾಡಿದ್ದರು. ಅವುಗಳಲ್ಲಿ ಬಹುತೇಕ ಬೇಸಗೆಯ ದಿನಗಳ ತತ್ಕಾಲೀನ ಉಪಯೋಗಕ್ಕಾದರೂ ಕೆಂಪೊಳೆಯದು ಹಾಗಲ್ಲ; ಸಬಲ ಮತ್ತು ಸಾರ್ವಕಾಲಿಕ. ಅಸಂಖ್ಯ ಗುಹೆ, ಸೇತುವೆಗಳಲ್ಲದೆ ಬೆಟ್ಟದ ಮೇಲಿದ್ದ ಎಡಕುಮೇರಿ ನಿಲ್ದಾಣ ರಚನೆಯಲ್ಲಿ ಮತ್ತು ರೈಲು ಸಂಚಾರಕ್ಕೆ ತುರ್ತು ಪರಿಸ್ಥಿತಿ ಒದಗಿದರೆ ಪರ್ಯಾಯ ಬಳಕೆಗೂ ಇದು ಪ್ರಧಾನ ಸಂಪರ್ಕ ಸೇತುವಾಗಿ ಪರಿಗಣಿಸಿದ್ದಿರಬೇಕು. ಬಲವಾದ ಕುಂದಗಾಲು, ಅಡ್ಡಭೀಮುಗಳ (>ಭೀಮ>Beam?) ಮೇಲೆ ಹಾಸಿದ ದಪ್ಪನ್ನ ಭಾರೀ ತಗಡುಗಳಿದ್ದರೂ ನಮಗೆ ಒಂಟಿ ಸವಾರಿ ಮಾತ್ರ ಸಾಧ್ಯವಾಯ್ತು. ಕಾರಣ, ತಗಡಿನ ಮೇಲ್ಮೈಯಲ್ಲಿ ಅಡ್ಡಡ್ಡಲಾಗಿ ಒತ್ತೊತ್ತಾಗಿ ತುಂಬಾ ಚಡಿಗಳಿದ್ದವು; ಲಾರಿಗಳ ಚಕ್ರ ಜಾರಬಾರದೆನ್ನುವ ವ್ಯವಸ್ಥೆಯಿದ್ದಿರಬೇಕು. ಮುಂದೆ ಏರುದಾರಿ ವಿಶಾಲವೇನೋ ಇತ್ತು. ಆದರೆ ವರ್ತಮಾನದ ಬಳಕೆದಾರರು ಕೇವಲ ಪಾದಚಾರಿಗಳಾದ್ದರಿಂದ ಒಂದು ಸವಕಲು ಜಾಡುಳಿದು ಕಮ್ಯುನಿಸ್ಟ್ ಕಳೆ, ಪೊದರು, ಉದುರು ಸೌದೆ ಎಲ್ಲ ಕವಿದುಬಿಟ್ಟಿತ್ತು. ನಮ್ಮದು (ದ್ವಿಚಕ್ರಿಯಾದರೂ) ಒಂದೇ ಸಾಲಿನ ಚಕ್ರವಾದ್ದರಿಂದ ನಿರ್ಯೋಚನೆಯಿಂದಲೇ ಜೋಡಿ ಸವಾರಿಗಿಳಿದೆವು.
ಕಳೆದ ಮಳೆಗಾಲದಲ್ಲೆಂದೋ ಒಂದೆಡೆ ಅಂಚಿನ ಸಣ್ಣ ದರೆ ಕುಸಿದು ಸಾಮಾನ್ಯ ಮರವೊಂದು ದಾರಿಗಡ್ಡ ಮಲಗಿತ್ತು. ನಮ್ಮ ಪರ್ವತಾರೋಹಣ ಪ್ರಜ್ಞೆಯಲ್ಲಿ ಅಡ್ಡಿ ನಿವಾರಣೆಗಿಂತಲೂ ಮುಂದೆ ನುಗ್ಗುವ ಸಾಧ್ಯತೆಗಳ ಶೋಧಕ್ಕೇ ಆದ್ಯತೆ. ಈಗಾಗಲೇ ರೂಢಿಸಿದ್ದಂತೆ ಮರದ ಬೊಡ್ಡೆಯ ಆಚೀಚೆ ಕಾಡುಕಲ್ಲಿನ ಸೇತು ಮಾಡಿ, ಬೈಕ್ ನೂಕಿ ದಾಟಿಸಿ, ಮುಂದುವರಿದೆವು. ಸವಾಲಿನ ವೈವಿಧ್ಯ ಬಡ್ತಿ ತೆಗೆದುಕೊಳ್ಳುತ್ತಿದ್ದಂತೆ ನಮ್ಮ ಶೋಧ ಸಾಮರ್ಥ್ಯ ಹೆಚ್ಚಬೇಕಾಯ್ತು. ಮುಂದೆ ಅಡ್ಡ ಸಿಕ್ಕ ಮರದ ಬೊಡ್ಡೆ ಅಗಾಧವಾದರೂ ದರೆ ಕುಸಿದಿರಲಿಲ್ಲ. ದರೆಯಂಚಿನಲ್ಲಿ ಪೊದರು, ಕಸ ಬಿಡಿಸಿ, ಬೊಡ್ಡೆಯಡಿಯಲ್ಲಿ ಬೈಕ್ ನುಗ್ಗಿಸಿದೆವು. ದಾರಿ ಮತ್ತೊಂದು ಸೆಡ್ಡು ಹೊಡೆಯಿತು. ಬಿದ್ದ ಮರವೂ ಅಗಾಧ, ಜರಿದ ದರೆಯೂ ಅಸಾಮಾನ್ಯ. ಮರದ ಬಹುತೇಕ ಬೇರ ಜಾಲ ಹರಿದಿತ್ತು. ಉಳಿದ ಒಂದೆರಡನ್ನು ಜಾಣತನದಲ್ಲಿ ಕಡಿದು ಕಳೆದೆವು. ಮತ್ತೆ ಮುರುಕು ಕೋಲು, ಕೈ ಬಳಸಿ ನುಸುಲಾದ ಮಣ್ಣನ್ನು ನಮ್ಮನುಕೂಲಕ್ಕೆ ಹರಡಿ ಬೈಕ್ ನೂಕಿ ದಾಟಿಸಿಕೊಂಡೆವು.
ಎತ್ತರಕ್ಕೇರುತ್ತ ನಮ್ಮನ್ನು ಹಿಡಿದಿಡುವಲ್ಲಿ ಮರ, ದರೆ ಕೈಚೆಲ್ಲಿದವು. ಈಗ ಕೊರಕಲು, ಕಲ್ಲುಗುಂಡುಗಳ ಸರದಿ. ಅರವಿಂದರ ಹಳೇ ಜಾವಾ (ನೆನಪುಂಟಲ್ಲಾ – ಜಂಕೂಸ್!) ಅನಿರೀಕ್ಷಿತ ಗುಂಡಿ ಕುಪ್ಪಳಿಸುವಾಗ ಎಡದ ಫುಟ್ ರೆಸ್ಟ್ ಮುರಿದು ಬಿತ್ತು. ಸಾಮಾನ್ಯ ಸವಾರಿಗಳಲ್ಲಿ ಅದೊಂದು ದೊಡ್ಡ ಸಮಸ್ಯೆ ಅಲ್ಲ. ಆದರೆ ಇಲ್ಲಿ ಹಾಗಲ್ಲ. ಒರಟು ಸವಾರಿಯಲ್ಲಿ ಫುಟ್ ರೆಸ್ಟಿನ ಮೇಲಿನ ಗಟ್ಟಿ ಹೆಜ್ಜೆ ಅವಶ್ಯವೇ. ಅರವಿಂದರ ಹಿರಿಯರು ನಾಟೀ ಔಷಧಿಯಲ್ಲಿ ಖ್ಯಾತರಂತೆ. ಅದರ ವ್ಯಂಗ್ಯಂದಂತೆ ಅರವಿಂದ ಬೈಕಿಗೆ ವನೌಷಧಿ ಮಾಡಿಯೇ ಬಿಟ್ಟರು. ಒಂದು ಗಟ್ಟಿ ಕಾಡು ಕೋಲು ಆಯ್ದು, ಅಳತೆಗೆ ಕತ್ತರಿಸಿ, ಬೇಕಾದ ಜಾಗಕ್ಕೆ ಹೊಂದಿಸಿ ಹಗ್ಗದಲ್ಲಿ ಬಿಗಿದು ಕಟ್ಟಿದರು! ಶಾಂತಾಸಮೇತ ಬಸವರಾಜ್ ಬಲು ಗಂಭೀರವಾಗಿ ಒಂದು ಏರನ್ನು ಉತ್ತರಿಸುತ್ತಿದ್ದರು. ಆದರೆ ಚಕ್ರದಡಿಗೆ ಸಿಕ್ಕ ಕೆಲವು ಪುಟಗೋಸಿ ಕಲ್ಲ ಹರಳು ಸಿಕ್ಕಿ ಎಲ್ಲ ಗೊಂದಲಮಯ. ಬೈಕಿನ ಬೊಬ್ಬೆ, ಹೊಗೆ, ದೂಳು ಶಾಂತವಾದಾಗ ನಮ್ಮ ಸಹಾಯ ಹಸ್ತಗಳು ತಲಪಿದ್ದವು. ಬಸವರಾಜ್ ಪ್ಯಾಂಟಿನ ಮಣ್ಣು ಕೊಡವುತ್ತಿದ್ದರು. ಅಶಾಂತಾ ಎರಡುರುಳು ಮುಗಿಸಿ, ಎದ್ದು, ತರಚಲು ಗಾಯಗಳ ಲೆಕ್ಕ ತೆಗೆಯುತ್ತಿದ್ದರು. ಶಾಂತ ಬೈಕ್ ಅಡ್ಡ ಮಲಗಿತ್ತು. ಚಾರ್ಲ್ಸ್ ಘಟ್ಟ ನೋಡಿದ ಮೇಲೆ ಆಗಬೇಕಾಯ್ತೇನೋ ಘಾಟಿ! ಮದುವೆಯಾದ ಹೊಸತನವೂ ಸೇರಿ ಹೆಂಡತಿ ಬ್ಯೂಲಾಳ ಬಗ್ಗೆ ಕಾಳಜಿ ನಟಿಸಿ ಆಕೆಯನ್ನು ನಡೆಸಿದ್ದೇ ಹೆಚ್ಚು. ಆದರೆ ಬ್ಯೂಲಾಳಿಗಿಂತ ಆಕೆಯ ಹೊಸಾ ಚಪ್ಪಲಿ ಬೇಗ ಬಳಲಿತು – ಉಂಗುಷ್ಟವೇ ಕಿತ್ತು ಬಂತು. ಇದಕ್ಕೆ ಅವರಲ್ಲಿ ಪರಿಹಾರವಿದ್ದದ್ದು ಮಾತ್ರ ಆಶ್ಚರ್ಯ. ಯಾಕೆ ತಂದಿದ್ದರೋ ಏನೋ ಚಾರ್ಲ್ಸ್ ಚೀಲದಿಂದ ಒಂದು ಜೊತೆ ಹವಾಯ ಚಪ್ಪಲಿ ಹೊರಬಂತು; ಬ್ಯೂಲಾ ನಡಿಗೆ ನಿಷ್ಕಂಟಕ!
ನನ್ನದು ಎರಡೂವರೆ ಜನರ ವಿಶಿಷ್ಟ ಸವಾರಿ. ದೇವಕಿಯೇನೋ ಹಿಂದೆ ಗಟ್ಟಿಯಾಗೇ ಕೂರುತ್ತಿದ್ದಳು. ಆದರೆ ನಗರ ಸವಾರಿಯಲ್ಲೆಲ್ಲಾ ನನ್ನೆದುರು ಕುಳಿತು, ಕೇವಲ ಪೆಟ್ರೋಲ್ ಟ್ಯಾಂಕಿನ ಮೇಲೆ ಬರಿಗೈ ಊರುವ ನಾಲ್ಕರ ಪೋರ – ಅಭಯನನ್ನು ಇಂಥ ದೊಡ್ಡ ಸವಾರಿಗಳಲ್ಲಿ ನಂಬುವ ಹಾಗಿರಲಿಲ್ಲ. ಆತನಿಗೆ ಮುಂಜಾವಿನ ಚಳಿಗಾಳಿ, ದೂಳು ಕಸ ತೊಂದರೆ ಕೊಡಬಹುದು. ಮತ್ತವನೇ ಬೇಕಾ ಬಿಟ್ಟಿ ಆಧಾರ ನಿರಾಕರಿಸಿ ಕುಳಿತೋ ಬಾಲ ಸಹಜವಾದ ನಿದ್ರೆ ಮಾಡಿಯೋ ಸಂಚಾರದ ಆಕಸ್ಮಿಕಗಳಲ್ಲಿ ಅನಿರೀಕ್ಷಿತಗಳಿಗೆ ಈಡಾಗಬಹುದು ಎಂದು ತರ್ಕಿಸುತ್ತಿದ್ದೆವು. ಹಾಗಾಗಿ ಅವನನ್ನು ನನ್ನ ಬೆನ್ನಿಗೆ, ಅಂದರೆ ಇಬ್ಬರ ನಡುವೆ ಇರುಕಿಸಿಯೇ ಹೋಗುತ್ತಿದ್ದೆವು. ಅಂಥಾ ಸಂದರ್ಭಗಳಲ್ಲಿ ನನ್ನ ಬೆನ್ನಷ್ಟೇ ಕಾಡುವಾಗ ಅವನಾದರೂ ಸುಮ್ಮನೆ ಕೂರುವುದು ಕಷ್ಟವಿತ್ತು. ಅದಕ್ಕೂ ಹೆಚ್ಚಿಗೆ ಅವನ ಒರಟು ಚಪ್ಪಲಿ ಪಾದಗಳು ದೇವಕಿಯ ಪಾದಗಳ ಮೇಲೇ ಇಡುವುದು ಅನಿವಾರ್ಯವಾಗುತ್ತಿತ್ತು. ಅವನು ಕಾಲಾಡಿಸಿದಾಗೆಲ್ಲಾ ಚಪ್ಪಲಿಯಡಿಯ ಚಡಿ, ಮಣ್ಣು, ಕೊಳಕೆಲ್ಲಾ ದೇವಕಿಯ ಪಾದದ ಮೇಲೆ ಉಜ್ಜಿ ಪ್ರತಿ ದೀರ್ಘ ಸವಾರಿಯ ಕೊನೆಯಲ್ಲಿ ಅವನಿಗೆ ಪ್ರತ್ಯೇಕ ಸಹಸ್ರನಾಮಾರ್ಚನೆ ಇದ್ದದ್ದೇ! ಆ ಸ್ಥಿತಿಯಲ್ಲಿ ಹೋಗಲಿ ಪಾಪ, ಎಂದು ಅವನು ನಿದ್ರೆ ಮಾಡಿದರೂ ನಮ್ಮದು ಆಕ್ಷೇಪಣೆಯೇ; ಪುಟ್ಟ ಕಾಲುಗಳು ಒಳದೂಗಿ ಚಕ್ರ ಸಂಪರ್ಕಕ್ಕೆ ಬಂದೀತೇ ಎನ್ನುವ ಸಂಶಯ. ಈ ಎಲ್ಲ ಲೆಕ್ಕಾಚಾರದಲ್ಲಿ ಕೆಂಪೊಳೆ ಮೇಲಿನ ಕಚ್ಚಾ ಸವಾರಿಯಲ್ಲಿ ತುಸು ಅಧೈರ್ಯ ಕಾಡುವಲ್ಲೂ ದೇವಕಿ ಅಭಯರಿಗೆ ನಡಿಗೆ ಕಡ್ಡಾಯ!
ಸುಮಾರು ಆರು ಕಿಮೀ ಅಂತರವನ್ನು ಮೂರೂವರೆ ಗಂಟೆ ಅವಧಿಯಲ್ಲಿ ಕ್ರ(ಶ್ರ)ಮಿಸಿ ರೈಲ್ವೇ ಹಳಿ ತಲಪಿದೆವು. ಲಾರಿ ದಾರಿಯನ್ನು ಪೂರ್ಣ ನಿರಾಕರಿಸಿ ಕೆಲವು ಸವಕಲು ಜಾಡುಗಳು ಅಲ್ಲಿ ಇಲ್ಲಿ ಕಾಣಿಸಿಕೊಂಡದ್ದಿತ್ತು. ಅವು ಬಹುಶಃ ಸದ್ಯ ಬಳಕೆಯಲ್ಲಿರುವ ಒಳದಾರಿಗಳಿರಬಹುದಾದರೂ ಬೈಕ್ ನುಗ್ಗಿಸಹೊರಟಿದ್ದರೆ ಕತ್ತೆ ಚಾಕರಿ ಹೆಚ್ಚಿ, ಇನ್ನಷ್ಟು ಶ್ರಮ ಹಾಕಿ, ಹಿಂದೆಯೇ ಉಳಿಯುತ್ತಿದ್ದೆವೆಂಬ ಬಗ್ಗೆ ನಮಗೇನೂ ಸಂಶಯವಿರಲಿಲ್ಲ. ಇಲ್ಲಿ ಹಳಿ ನಮ್ಮ ಬಲಬದಿಯಿಂದ (ಮಂಗಳೂರು ಕಡೆಯಿಂದ ಏರುತ್ತ ಬರುತ್ತಾ) ಸುರಂಗ ಒಂದರಿಂದ ಪ್ರಕಟವಾಗಿ ಎಡದ ಕೊಳ್ಳದ ಮೇಲಿನ ಸೇತುವೆಯಿಂದಾಚೆಗೆ ಸಾಗಿತ್ತು. ಸುರಂಗದಾಚೆ ಕೆಲಸದಲ್ಲಿದ್ದ ಗ್ಯಾಂಗ್ ಮನ್ ಒಬ್ಬನಿಗೆ ಬೈಕ್ ಸದ್ದು ಕೇಳಿ ನಂಬಲಾಗದಿದ್ದರೂ ಬಂದ. ನಮ್ಮನ್ನು ಕಂಡು ಆತನ ಆಶ್ಚರ್ಯಕ್ಕೆ ಕೊನೆಯೇ ಇಲ್ಲ. ಆದರೂ ಸಂಭಾಳಿಸಿಕೊಂಡು ನಮ್ಮ ಸಹಾಯಕ್ಕೆ ಒದಗಿದ. “ಮೇಲೊಂದು ಕಿಮೀ ಹೋದರೆ ಸ್ಟೇಶನ್ ಸಿಕ್ಕುತ್ತೆ. ಅಲ್ಲಿಗಿನ್ನೇನು ಸ್ವಲ್ಪ ಹೊತ್ತಲ್ಲಿ ಕೆಳ್ಗಿಂದ ಗೂಡ್ಸ್ ರೈಲೊಂದು ಬರುವುದಿದೆ. ಮುಂದಿನ ಲಾರಿ ದಾರಿ ಕಣಿವೆಗಿಳಿದು, ಗುಹೆ ಸುತ್ತಿ ಹೋಗೋದು ಪೂರ್ತಿ ಕೆಟ್ಟು ಹೋಗಿದೆ. ನೀವು ಹಳಿಗುಂಟಾ ಬೇಗ ಬೈಕೋಡಿಸಿ. ರೈಲು ಬರೋದನ್ನ ನಾ ನೋಡಿಕೊಳ್ತೇನೆ. ನೀವು ಮುಂದೆ ಸ್ಟೇಶನ್ನಿಂದ ರೈಲು ಹಿಡಿದು ಸಕ್ಲೇಶಪುರಕ್ಕೆ ಹೋಗಿ, ದಾರಿಯಲ್ಲೆ ವಾಪಾಸಾಗಬಹುದು” ಎಂದ.
ಆಕಸ್ಮಿಕ ಮತ್ತು ಕಾನೂನು ರೀತಿಯಲ್ಲೂ ಸರಿಯಲ್ಲದ ಸಲಹೆ ಎಂದೇ ನಾವು ಲಾರಿ ದಾರಿ ಅನುಸರಿಸುವುದನ್ನೇ ಆಯ್ದುಕೊಂಡೆವು. ಒಂದು ಕಿರು ಸೇತುವೆಯನ್ನು ತಪ್ಪಿಸುವ ಕಣಿವೆಗಿಳಿದು ಏರುವಲ್ಲೇ ಎಲ್ಲ ಸಹವಾರರನ್ನು ಕಳಚಿಕೊಳ್ಳುವುದು ಅನಿವಾರ್ಯವಾಯ್ತು. ಮುಂದೆ ಕಣಿವೆ ದೊಡ್ಡದು, ಬಳಸು ಮಾರ್ಗ ಕಠಿಣ. ಭೂಕುಸಿತ, ತೆರೆದ ಮೈಯಾದ್ದರಿಂದ ಭಾರೀ ಮುಳ್ಳ ಪೊದರೆಲ್ಲ ಹಾಗೂ ಹೀಗೂ ನಿವಾರಿಸಿ ಸೇತುವೆಯ ನೇರ ತಳವೇನೋ ತಲಪಿದೆವು. ಅಲ್ಲಿ ಹಿಂದೆ ತೊರೆ ದಾಟುವಾಗ ಲಾರಿಗಳು ಹೂಳದಂತೆ ಜೋಡಿಸಿದ್ದ ಹಾಸು ಬಂಡೆಗಳೆಲ್ಲಾ ಕೆಲವು ಋತುಮಾನಗಳ ಸವಕಳಿಯಲ್ಲಿ ಅಸ್ತವ್ಯಸ್ತವಾಗಿ, ಪಾಚಿಗಟ್ಟಿ ಪಕ್ಕಾ ಜಾರುಬಂಡೆಗಳೇ ಆಗಿದ್ದವು. ಅಕ್ಕಪಕ್ಕದಲ್ಲಿ ಇಬ್ಬಿಬ್ಬರ ಕೈಯಾಸರೆ ಕೊಟ್ಟು ಕಷ್ಟದಲ್ಲಿ ಒಂದೊಂದನ್ನೇ ದಾಟಿಸಿದೆವು. ಮುಂದೆ ಬೆಟ್ಟವನ್ನೇ ಸೀಳಿ ಮಾಡಿದ ಏರುದಾರಿ ಎಂದರೆ ಅಕ್ಷರಶಃ ಪ್ರತಿ ಮಳೆಗಾಲದಲ್ಲಿ ಭಾರೀ ಚರಂಡಿಯೇ ಆಗಿದ್ದ, ಮನುಷ್ಯ ಬಳಕೆಗೆ ಪೂರ್ಣ ನಿರುಪಯುಕ್ತವಾಗಿದ್ದ ಜಾಡು. ಮೇಲಿನಿಂದ ತೆಳು ನೀರು, ಅಂದಾಜಿಗೆ ಸಿಗದ ಗೊಸರು ನೆಲದಲ್ಲಿ ಪೂರ್ಣ ಬಲವೂಡಿ ಏರಬೇಕಿತ್ತು. ಕೇವಲ ಜಾಣ ಲೆಕ್ಕದಲ್ಲಿ ಕೇಳಿದ್ದ ಎರಡಡಿ ಏರಿ, ಒಂದಡಿ ಇಳಿಯುವ ಆಟ ಇಲ್ಲಿ ವಾಸ್ತವ! ಹಿಂದಿನ ಚಕ್ರ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ತೂರಾಡುತ್ತಿರಲು, ಎರಡೂ ಬದಿಗೆ ಕಾಲಿಳಿಬಿಟ್ಟು ನೆಲ ಒದ್ದು, ಕೆಲವೆಡೆ ಬಿದ್ದು, ಅವರಿವರ ಸಹಾಯದಿಂದ ಎದ್ದು ಮತ್ತೆ ಹಳಿ ತಲಪುವಾಗ ಆದರ್ಶಗಳೆಲ್ಲಾ ಆರಿಹೋಗಿದ್ದವು. ಗ್ಯಾಂಗ್ ಮ್ಯಾನ್ ಸಲಹೆ ಅಪ್ಯಾಯಮಾನವಾಗುಳಿಯಿತು. ನಿರ್ಲಜ್ಜವಾಗಿ ಹಳಿಗಳ ನಡುವೆ ಬೈಕ್ ಎತ್ತಿಟ್ಟು, ಮರದಡ್ಡಗಳ ಮೇಲೆ ನಿಧಾನವಾಗಿ ಗುಡುಗುಡಿಸುತ್ತ ಎಡಕುಮೇರಿ ನಿಲ್ದಾಣ ಸೇರಿದೆವು.
ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ ಸುಮಾರು ೪೯ ಕಿಮೀ ಹೆಚ್ಚುಕಮ್ಮಿ ಏಕಪ್ರಕಾರ ಏರಿಬರುವ ರೈಲಿಗೆ (ಮತ್ತು ಪ್ರಯಾಣಿಕರಿಗೂ) ವಿಶ್ರಾಂತಿ ನೀಡಲು ಹುಟ್ಟಿದ ನಿಲ್ದಾಣ ಎಡಕುಮೇರಿ. ಹಾಗೇ ಸಕಲೇಶಪುರದ ಕಡೆಯಿಂದ ಇಳಿದಿಳಿದು ಬರುವ ರೈಲು ಆಕಸ್ಮಿಕಗಳಿಗೇನಾದರೂ ಸಿಕ್ಕಿ ಮುಕ್ತ ಓಟಕ್ಕಿಳಿದರೆ, ಅಪಾಯಕ್ಕೀಡಾಗದಂತೆ ಜಾಡು ತಪ್ಪಿಸಿ ನಿಲ್ಲಿಸಲು ಸಜ್ಜುಗೊಂಡ ತಾಣವೂ ಈ ಎಡಕುಮೇರಿ. ಮೂಲದಲ್ಲಿ ‘ಹೇಳ್ಕಳಾಕ್ ಒಂದ್ ಜೋಪ್ಡಿ, ಕೇಳ್ಸ್ಕಳಾಕ್ ಒಂದ್ ನರ್ಪಿಳ್ಳೆ’ ಇಲ್ಲದ ಹೆಸರದು. ಇಂದೂ ನಿಲ್ದಾಣದ ವ್ಯವಸ್ಥೆಯ ಜನಗಳು ಅವರ ವಸತಿ ಬಿಟ್ಟರೆ ಇದು ದುರ್ಗಮ ಬೆಟ್ಟದ ನಿರ್ಜನ ಮೂಲೆ. ಹಳಿ ಹಾಸುವ ಕಾಲದಲ್ಲಿ ಶಿರಾಡಿ ಮಾರ್ಗದಿಂದ ಅಸಂಖ್ಯ ದಾರಿ ವಾಹನ ಎಡಕುಮೇರಿಗೆ ಭೇಟಿಕೊಟ್ಟದ್ದುಂಟು. ಈಚೆಗೆ, ಅಂದರೆ ಸುಮಾರು ಮೂರು ವರ್ಷಗಳ ಹಿಂದೆ, ಮಳೆಗಾಲದಲ್ಲಿ ಹಳಿಯುದ್ದಕ್ಕೆ ಅಸಾಮಾನ್ಯ ಭೂ ಕುಸಿತಗಳು ಉಂಟಾದಾಗ ಮುಖ್ಯ ಲಾರಿ ದಾರಿ ಸ್ವಲ್ಪ ಜೀರ್ಣೋದ್ಧಾರ ಕಂಡಿತ್ತಂತೆ. ಆದರೆ ಆಗಲೂ ಕಾಣದ ಬೈಕ್ ಸವಾರರು ಈಗ ಹಳಿಗುಂಟ ಏರಿ ಬಂದಾಗ ಅಲ್ಲಿನವರ ಆಶ್ಚರ್ಯಕ್ಕೆ ಕೊನೆಯೇ ಇಲ್ಲ.
ಎಡಕುಮೇರಿಯ ಕ್ಯಾಂಟೀನ್ ಬಹಳ ಹಿಂದೆಯೇ ನಮ್ಮ ಮನ ಗೆದ್ದಿತ್ತು. ಇಲ್ಲಿ ಸೇತುವೆ, ಗುಹೆಗಳ ರಚನೆ, ಹಳಿಗಳ ಜೋಡಣೆ ನಡೆದ ಕಾಲದಲ್ಲೊಮ್ಮೆ ನಡೆದು ಹೋದ ನೆನಪಿತ್ತು. ಅದರ ಕಥನವನ್ನು ಇಲ್ಲೇ ಮುಂದೊಂದು ಅಧ್ಯಾಯದಲ್ಲಿ ಕೊಡುತ್ತಿದ್ದೇನೆ. ಆ ಕಾಲದಲ್ಲಿನ್ನೂ ಯಂತ್ರಗಳ ಬಲದಷ್ಟೇ ಮನುಷ್ಯ ಬಲವೂ ಕೆಲಸ ಮಾಡುವ ಆವಶ್ಯಕತೆಯಿತ್ತು. ಸಹಜವಾಗಿ ಅಸಂಖ್ಯ ಕೂಲಿ, ವಸತಿ, ಮಲೆ, ವನ್ಯಜೀವಿಗಳು, ಮಳೆ, ನೀರು ಎಲ್ಲವೂ ತತ್ಕಾಲೀನ ಮತ್ತು ಕೇವಲ ಸ್ವಯಂ ಪೂರ್ಣವಷ್ಟೇ ಆಗಬೇಕಿತ್ತು. ನೋಡುವ ಕುತೂಹಲದಲ್ಲಿ ಬರುತ್ತಿದ್ದ ಹೊರಗಿನವರು, ಅವರಿಗೆ ಸೌಕರ್ಯ ಕಲ್ಪಿಸುವ ವ್ಯವಸ್ಥೆಗಳೇನೂ ಇರುವುದು ಸಾಧ್ಯವಿರಲಿಲ್ಲ, ಇರಲಿಲ್ಲ ಸಹಾ. ನಾವಾದರೋ ಬುತ್ತಿಯೂಟ, ಕುಡಿಯುವ ನೀರೂ ಹೊತ್ತೊಯ್ದಿದ್ದೆವು. ಆಗ ಹಸಿವು ಹಿಂಗಿದ್ದಿರಬಹುದು, ರುಚಿಗೆ ಇಂಬು ಸಿಕ್ಕಿರಲಿಲ್ಲ.
ಆದರೆ ಒಮ್ಮೆ ಅಲ್ಲಿ ರೈಲು ಸಂಚಾರ ತೊಡಗಿದ ಮೇಲೆ ಮೊದಲ ಕೆಲವು ದಿನಗಳಲ್ಲೇ (ಮೊದಲ ದಿನದ ಔಪಚಾರಿಕ ಗೊಂದಲಗಳು ನಮ್ಮ ರುಚಿಗೆಡಿಸುತ್ತವೆ ಎಂದು ಉದ್ದೇಶಪೂರ್ವಕ ತಪ್ಪಿಸಿದ್ದೆವು.) ನಮ್ಮ ತಂಡವೊಂದು ರೈಲೇರಿ ಸಕಲೇಶಪುರದತ್ತ ಹೊರಟಿತ್ತು. ಅಲ್ಲಿನ ರಚನಾಕಾಲದ ನಮ್ಮ ನಡಿಗೆಯನ್ನೆಲ್ಲಾ ರೈಲಿನ ಗಾರ್ಡು, ಚಾಲಕರಿಗೆಲ್ಲಾ ಜಾಣ್ಮೆಯಲ್ಲಿ ಹೇಳುತ್ತ ಹೇಳುತ್ತಾ ವಾಸ್ತವದ ಘಾಟೀ ದಾರಿ ಶುರುವಾಗುವಾಗ ನಮ್ಮ ಇಡೀ ತಂಡ ಎದುರಿನ ಡೀಜೆಲ್ ಇಂಜಿನ್ನಿನ ಮೂಗಿನ ಮೇಲೇ ಸ್ಥಾನ ಗಿಟ್ಟಿಸಿತ್ತು. ಆ ಕುರಿತು ನಾನು ಲಿಖಿತ ದಾಖಲೆಗಳೇನೂ ಇಟ್ಟಿಲ್ಲವಾದ್ದರಿಂದ ಇಂದು ವಿಸ್ತರಿಸುವಲ್ಲಿ ಸೋಲುತ್ತೇನೆ. ಆದರೆ ಘಾಟಿಯ ಉದ್ದಕ್ಕೂ ವಿಚಿತ್ರ ಭಂಗಿಗಳಲ್ಲಿ ನಿಂತು, ಕೂತು, ಗಾಳಿ, ಬಿಸಿಲು, ಕೆಲವೆಡೆ ಗುಹಾ ಮುಖಗಳಲ್ಲಿ ಬೀಳುತ್ತಿದ್ದ ಝರಿ ನೀರಿಗೂ ಒಡ್ಡಿಕೊಂಡಿದ್ದೆವು. ಕಣಿವೆಯ ಆಳಕ್ಕೆ ನಿರಾಧಾರ ಬೀಳುವವರಂತೆ ಧಾವಿಸಿ, ಎಡಕ್ಕೋ ಬಲಕ್ಕೋ ಗಂಭೀರವಾಗಿ ಚೂರುಚೂರೇ ತಿರುಗುವಾಗ ಚಕ್ರಗಳ ಪ್ರತಿ ಕೀಚಿಗೂ ನಮ್ಮ ಕಿರಿಚು ಸೇರಿಸಿ ಸಂಭ್ರಮಿಸಿದ್ದೆವು. ಅದೇ ಗುಹೆಗಳಿಗೆ ನುಗ್ಗುವಾಗಂತೂ ನಮಗೆ ಘನವಾಗಿ ಕೈಗೆ ಸಿಗುವಂಥಾ ಕತ್ತಲೆಗೆ ಢಿಕ್ಕಿ ಹೊಡೆದ ಭಾವ. ಘಾಟಿಯುದ್ದಕ್ಕೂ ಮೇಲಿಂದ ಮೇಲೆ ಚಾಲಕರು ಹಾರನ್ ಬಾರಿಸುತ್ತಲೇ ಇದ್ದರು. ಆ ಬಲವಾದ ವ್ಯಾಕ್ಯೂಮ್ ಹಾರನ್ಗಳ ಬಳಿಯಿದ್ದವರು ಕಾಲಕಾಲಕ್ಕೆ ಎಷ್ಟು ಕಿವಿ ಮುಚ್ಚಿಕೊಂಡರೂ ಮತ್ತೆರಡು ದಿನ ಅರೆಕಿವುಡು ಅನುಭವಿಸುವ ಸ್ಥಿತಿ ತಿಳಿದಿದ್ದರೂ ಘಾಟಿ ಅನುಭವಿಸುವ ಉತ್ಸಾಹ ಕುಗ್ಗಲೇ ಇಲ್ಲ.
ಇವೆಲ್ಲಕ್ಕೆ ಕಳಶಪ್ರಾಯವಾಗಿ ಎಡಕುಮೇರಿ ತಲಪಿದಾಗ ಆ ಕ್ಯಾಂಟೀನ್ ತಿನಿಸುಗಳ ರುಚಿ, ಬಲ್ಲವನೇ ಬಲ್ಲ! (ನಾವು ದೈಹಿಕವಾಗಿ ಬಳಲಿ, ಬಾಯಾರಿ, ಹಸಿದಿದ್ದದ್ದೂ ತಂತ್ರಜ್ಞಾನದ ಸಾಧನೆಯ ಧನ್ಯತೆ, ವಾತಾವರಣದ ತಂಪು, ದೃಶ್ಯದ ಸೊಂಪು ಸೇರಿದ್ದದ್ದೂ ಆ ತಿನಿಸಿನ ಮಹತ್ವವನ್ನು ಪ್ರಭಾವಿಸಿದ್ದಿರಬಹುದು ಎನ್ನುವುದು ಕುಹಕ!)
ಬೈಕ್ ಸಾಹಸಯಾನದಲ್ಲೂ ಎಡಕುಮೇರಿಯ ಕ್ಯಾಂಟೀನ್ ನಮ್ಮ ರಸನೆಗಳನ್ನು ಧಾರಾಳ ತಣಿಸಿತು. ಮುಂದೆ ಯೋಜನೆಯಂತೆ ನಾವು ರೈಲ್ವೇ ಹಳಿಗೆ ಅಲ್ಲೆಲ್ಲೋ ಘಟ್ಟದ ನೇರ ಮೇಲಿಂದ ಬಂದಿಳಿವ ಮಾಂಕನಹಳ್ಳಿ ದಾರಿ ಹುಡುಕಿ ಮುಂದುವರಿಯಬೇಕಿತ್ತು. ಆದರೆ ಆ ಒಂದೆರಡು ಕಿಮೀ ಆಸುಪಾಸಿನಲ್ಲೆಲ್ಲೂ ದಾರಿಯಿರಲಿ, ಸವಕಲು ಜಾಡೂ ಅತ್ತಣಿಂದ ಬಂದು ಸೇರುವವು ತಾವು ಕಂಡಿಲ್ಲವೆಂದು ರೈಲ್ವೇ ಇಲಾಖೆಯ ಸಿಬ್ಬಂದಿಗಳು ಸ್ಪಷ್ಟಪಡಿಸಿದರು. ಮತ್ತೆ ಹೆಚ್ಚು ಶೋಧ ಮಾಡುವುದಿದ್ದರೂ ಪ್ರಾರಂಭಿಕವಾಗಿ ನಾವು ರೈಲ್ವೇ ಹಳಿಗಾಗಿ ಕನಿಷ್ಠ ಐವತ್ತರವತ್ತಡಿ ಎತ್ತರಕ್ಕೆ ಲಂಬವಾಗಿ ಕಡಿದ ದರೆಯನ್ನು ಉತ್ತರಿಸಿಯೇ ಮುಂದುವರಿಯ ಬೇಕಿತ್ತು. ಈ ಅಸಾಧ್ಯ ಸವಾಲು ನಮ್ಮ ನಕ್ಷೆಯಲ್ಲಿರಲೂ ಇಲ್ಲ. ಹಾಗಾಗಿ ನಾವು ಮೊದಲು ಸಿಕ್ಕ ಗ್ಯಾಂಗ್ ಮ್ಯಾನಿನ ಸಲಹೆಯನ್ನೇ ಮಾನ್ಯ ಮಾಡಿ ಮೊದಲು ಬರಲಿದ್ದ ಗೂಡ್ಸ್ ದಾರಿ ಕಾದೆವು. ಆದರೆ ಸ್ವಲ್ಪೇ ಹೊತ್ತಿನಲ್ಲಿ ಗೂಡ್ಸ್ ರದ್ದಾಗಿರುವ ಸಮಾಚಾರ ಬಂದ ಮೇಲೆ ಸಂಜೆ ಐದೂವರೆಯ ಪ್ಯಾಸೆಂಜರ್ ರೈಲು ಬರುವವರೆಗೆಂದು ಹೀಗೇ ನಿಲ್ದಾಣದಿಂದ ಮುಂದೆ ಕಾಲಾಡಿಸುತ್ತಾ ಹೊರಟೆವು.
“ಎಲ್ಲೆಲ್ಲೂ ಸೊಬಗಿದೆ, ಎಲ್ಲೆಲ್ಲೂ ಸೊಗಸಿದೆ…” ಎಂದಿತ್ಯಾದಿ ಸಾಗುವ ಯಕ್ಷಗಾಯನ ಈಚಿನ ದಿನಗಳಲ್ಲಿ ಬಡಗುತಿಟ್ಟಿನ ವೃತ್ತಿಮೇಳಗಳ ಭಾಗವತರ ಒಂದು ಸಿದ್ಧ ಅಸ್ತ್ರ! ಅವರವರ ತಾಕತ್ತಿನ ಮೇರೆಗೆ ಕಳ್ಳಧ್ವನಿ, ನರಳಾಟ, ಬಾಯ್ತಾಳಗಳನ್ನು ಬಹಳ ಉತ್ಸಾಹದಿಂದ ತುಂಬಿ ಕನಿಷ್ಠ ಕಾಲು-ಅರ್ಧ ಗಂಟೆ ಭರ್ಜರಿಯಾಗಿ ಕಸಪೋಷಣೆ ಮಾಡುತ್ತಾರೆ. ಬೆಳಕಿಗೆ ಕುಳಿತವ ಮೈಕ್ ಇಕೋಫೋನಿಕ್ಕಿಗೆ ಬದಲಿಸಿ, ಕೆಂಪು ಹಳದಿ (ಸಂಪಾಜೆಯಲ್ಲೊಮ್ಮೆ ವರ್ಣ ಚಕ್ರವನ್ನೂ ಕೊಟ್ಟಿದ್ದರು) ಬಣ್ಣ ಬೆಳಕುಗಳಲ್ಲಿ ಕಣ್ಣಾಮುಚ್ಚಾಲೆಯಾಡಿ ಯಾವ ಕ್ಲಬ್ಬು ಪಬ್ಬುಗಳ ವಾತಾರಾವಣಕ್ಕೆ ಕಡಿಮೆಯಿಲ್ಲದಂತೆ ನೋಡಿಕೊಳ್ಳುತ್ತಾರೆ. ಮುಮ್ಮೇಳದಲ್ಲಿ ಯುವಜೋಡಿಯಿದ್ದರೆ ನಾಟ್ಯಶಾಸ್ತ್ರಕಾರ ಸತ್ತ. ಅಲ್ಲದಿದ್ದರೂ ಪಾತ್ರಧಾರಿಗಳಿಂದ ರಂಗದ ಹಲಿಗೆಯ ಬಲ ಪರೀಕ್ಷೆಯಂತೂ ಧಾರಾಳ ನಡೆಯುವುದು ನಾನು ಎಷ್ಟೂ ಕಂಡಿದ್ದೇನೆ. ಆದರೆ ನಿಜ ಪ್ರಕೃತಿಯ ಮಡಿಲಿನಲ್ಲಿ ಈ ಯಾವ ತೀವ್ರ ಭಾವಗಳಿಗೂ ಅವಕಾಶವೇ ಇಲ್ಲ. ಹಳಿಗಳಲ್ಲೇ ತುಸು ಮುಂದುವರಿದಂತೆ ಆ ಯಕ್ಷಗಾಯನದ ಶಬ್ದಾರ್ಥಗಳ ಸಾರ್ಥಕ್ಯ ಕಂಡುಕೊಂಡೆವು. ಸಹಜ ತಂಪು ಹವೆಯಲ್ಲೂ ಮಿದುವಾಗಿ ಸಂಚರಿಸುವ ಗಾಳಿ ಬೆಟ್ಟದ ಎತ್ತರಗಳಲ್ಲಿದ್ದ ಹೊಂಬಣ್ಣದ ಹುಲ್ಲನ್ನು ನೇವರಿಸುತ್ತಿದ್ದರೆ ಅದೇನು ಹೊಳಪು. ಮರಗಳೆತ್ತರ ಚಿಗುರಿನಿಂದ ಹಣ್ಣಿನವರೆಗೆ ಬಣ್ಣಗಾರನ ಅಂಗಡಿ ತೆರೆದು ಹುಲ್ಲಿನ ಲಹರಿಗೆ ಮಂದಸ್ಮಿತ ಸೇರಿಸಿದಂತಿತ್ತು. ಸುಳಿಗಾಳಿ ದಾರಿಯ ಪ್ರತಿ ಬಾಗು, ಪ್ರತಿ ಮೂಲೆಯನ್ನು ವಿರಾಮದಲ್ಲಿ ಅರಸುತ್ತ ತೇಲುವ ಹದ್ದಿನ ಜೋಡಿ, ಅವುಗಳ ಜಾಡನ್ನೆಲ್ಲಾ ಅವಸರದಲ್ಲಿ ಅಳಿಸುವಂತಾಡುವ ಬಾನಾಡಿಗಳ ನೋದುತ್ತ ಮೈಮರೆತೆವು. ಝರಿ ತೊರೆಗಳು ಮಾರ್ಗರಚನೆಯ ಗಾಯ ನೋವುಗಳನ್ನು ಮರೆತು ಮತ್ತೆ ನಿರ್ಮಲ ಕೆಲೆತದಲ್ಲಿ ನಿರತವಾಗಿದ್ದವು. ಪುಟ್ಟ ಮಡುಗಳಲ್ಲೂ ಮೇಲೆ ಜೇಡಗಳು ಜಾರುಬೂಟುಗಟ್ಟಿ ಕವಾಯತು ನಡೆಸಿದ್ದರೆ, ಒಮ್ಮೊಮ್ಮೆ ನೆರಳಿನಂತೆ, ನೀರಾಳದಲ್ಲಿ ಮೀನುಗಳು ಚುರುಕಾಗಿಯೇ ಇದ್ದವು. ಕಸಸೇತುವೆಯ ಕುಂದಕ್ಕೆ ಪಾಚಿಯ ಹಸುರು ಮೆತ್ತಿ, ನೋಟಕ್ಕೆ ಮೆದುವಾಗಿತ್ತು. ಗುಹೆಯ ಕಗ್ಗಲ್ಲ ಹೊರ ಅಂಚಿನ ಒರಟಿನಲ್ಲೂ ನೇಲುತ್ತ ಬಳುಕಾಡುವ ಸೀತೆ ಹೂ, ಜಲ್ಲಿ ಹಾಸಿನ ಹೊರಗಿನ ಬಸಿ ಕಾಲುವೆಯ ದಪ್ಪ ಹುಲ್ಲಿಗೆ ಶೋಭೆ ತರುವ ಹಳದಿ ಹೂ. ಸಮಯದ ಪರಿವೆಯೊಂದು ಬಿಡುವುದಾಗಿದ್ದರೆ ಇನ್ನೇನೇನು ಅನಾವರಣಗೊಳ್ಳಲಿತ್ತೋ ಎಂದುಕೊಂಡು ನಿಲ್ದಾಣಕ್ಕೆ ಮರಳಿದೆವು.
ಎಡಕುಮೇರಿ ನಿಲ್ದಾಣದಲ್ಲಿ ಬೈಕುಗಳಿಗೆ ನಮ್ಮ ಜೊತೆಗೇ ಒಯ್ಯುವಂತಹ ಭಾಂಗಿಯ ಬಾಡಿಗೆ ಕೊಟ್ಟು ರಸೀದಿಯೂ ನಮಗೆಲ್ಲರಿಗೆ ಟಿಕೇಟೂ ಮಾಡಿಟ್ಟುಕೊಂಡೆವು. ನಿಲ್ದಾಣದಲ್ಲಿ ಎತ್ತರಿಸಿದ ಪ್ಲ್ಯಾಟ್ ಫಾರಂ ಇರಲಿಲ್ಲ. ಆದರೆ ದಾರಿಯಿಲ್ಲದಲ್ಲೂ ಬೈಕನ್ನು ಎತ್ತಿ, ನೂಕಿ ತಂದದೇ ವಿಶ್ವಾಸದಲ್ಲಿ ಆಳೆತ್ತರಕ್ಕೂ ತೋಳ್ಬಲದಲ್ಲೇ ತುಂಬುವ ವಿಶ್ವಾಸ ನಮ್ಮದು. ಆದರೆ ರೈಲು ಬಂದಾಗ ನಮ್ಮ ನಿರೀಕ್ಷೆಗಳು ಸ್ವಲ್ಪ ಹೆಚ್ಚೇ ಆಯ್ತೆಂದನ್ನಿಸಿತು. ಸಾರ್ವಜನಿಕ ಸಾಗಣೆಯ ರೈಲುಗಳಲ್ಲೂ ಬ್ರೇಕ್ವ್ಯಾನ್ ಎಂಬ ಸಾಮಾನು ಸಾಗಣೆಯ ವಿಭಾಗವಿರುವುದು ನಮಗೆ ತಿಳಿದಿತ್ತು. ಅಲ್ಲೇನು ಸ್ವಲ್ಪ ಗಂಟು ಗದಡಿಗಳಿರುತ್ತವೆ ಎಂದುಕೊಂಡದ್ದು ತಪ್ಪಾಗಿ, ಎರಡು ಸ್ಕೂಟರ್ ಮತ್ತವನ್ನು ಸಮಾಧಿ ಮಾಡುವಷ್ಟೂ ಕಟ್ಟುಗಳು ತುಂಬಿ ಬಾಗಿಲೇ ತೆರೆಯುವಂತಿರಲಿಲ್ಲ. ಇನ್ನು ಪ್ರಯಾಣಿಕರ ವಿಭಾಗದಲ್ಲೂ ಎಳ್ಳು ತೂರಿದರೆ ನೆಲಮುಟ್ಟದ ಪರಿಸ್ಥಿತಿ ನೆನಪಿಸುವಂತಿತ್ತು
ಆದರೆ ನಾವು ಎರಡು ತುಂಬುವ ರಿಕ್ಷಾಕ್ಕೆ ಹನ್ನೆರಡು, ಆರು ತುಂಬುವ ಕಾರಿಗೆ ಇಪ್ಪತ್ತೆರಡು ತುಂಬುವ ಜಾಣ ಜಿಲ್ಲೆಯಲ್ಲಿ ಪಳಗಿದವರು. (ಹೌದು, ಆ ಕಾಲದಲ್ಲಿ ಅಂಬಾಸಿಡರ್ ಸರ್ವಿಸ್ ಕಾರುಗಳು ಬೆಳ್ತಂಗಡಿ-ಕಿಲ್ಲೂರು, ಪುತ್ತೂರು-ಉಪ್ಪಿನಂಗಡಿ, ಬೆಳ್ಳಾರೆ-ಸುಳ್ಯದಂತ ಒಳದಾರಿಗಳಲ್ಲಿ ಬಾಗಿಲು ಮುಚ್ಚಿದ ಕಾರಿನೊಳಗೇ ಇಪ್ಪತ್ತೆರಡು ಮಂದಿಯನ್ನು ತುಂಬಿ, ಅವರ ಹೊರೆಗಳನ್ನು ಡಿಕ್ಕಿಯಲ್ಲಿ ಗಿಡಿದು, ಸಾಗಿಸುತ್ತಿದ್ದದ್ದು ಮಾಮೂಲು ಸಂಗತಿ!) ತುಸು ಸಂದಿ ಕಾಣಿಸಿದ ಒಂದೊಂದು ಡಬ್ಬಿಯ ಬಾಗಿಲ ಓಣಿಗೆ ಒಂದೊಂದು ಬೈಕ್ ಏರಿಸಿಯೇ ಬಿಟ್ಟೆವು.
ಶಿರಾಡಿ ಘಾಟೀ ಮಾರ್ಗದ ರೈಲಿನಲ್ಲಿ ಅಂದೇನು, ಇಂದೂ ನನಗೆ ತಣ್ಣಗೆ ಕುಳಿತುಕೊಳ್ಳುವ ಯೋಚನೆ ಬರುವುದೇ ಇಲ್ಲ. ಎಲ್ಲ ಬೇರೆ ಬೇರೆ ಬಾಗಿಲ ಬುಡಗಳಲ್ಲೇ ಠಿಕಾಣಿ ಹೂಡಿದೆವು. ಗುಹೆ ಸೇತುವೆಗಳ ರಚನಾ ವೈಭವ, ಬೆಟ್ಟ ಕಣಿವೆಗಳ ಚಂದವನ್ನು ಇನ್ನಷ್ಟು ಸೂರೆಗೊಳ್ಳುತ್ತ ಸಕಲೇಶಪುರ ತಲಪಿದೆವು. ಬೈಕ್ಗಳನ್ನು ದಾರಿಗಿಳಿಸಿದೆವು. ಮರುಪಯಣದ ಶಿರಾಡಿ ಹೆದ್ದಾರಿ ಅನುಭವದ ಭಿತ್ತಿಯಲ್ಲಿ ಪ್ರತಿಸಲದಂತೆ ಹೊಸದೇ ಕುಸುರಿಗೆಲಸ ನಡೆಸಿದರೂ ವಿವರಿಸುವಲ್ಲಿ ನನ್ನ ಭಾಷೆ ಸೋಲುತ್ತದೆ. ಮತ್ತೆ ರಾತ್ರಿಯಾದರೂ ಸುಖವಾಗಿ ಮಂಗಳೂರು ಸೇರಿದೆವು ಎಂದು ಪ್ರತ್ಯೇಕ ಹೇಳಬೇಕೇ?
ತೀರಾ ಈಚಿನವರೆಗೆ, ಅಂದರೆ ಕಾಂಕ್ರಿಟೀಕರಣ, ಚತುಷ್ಪಥಗಳಂತಹ ಯೋಜನೆಗಳು ಬರುವುದಕ್ಕೂ ಮೊದಲಿನ ‘ದಾರಿಗಳ ವೈಭವ’ದಲ್ಲಿ ಅಥವಾ ಅನಿರೀಕ್ಷಿತವಾಗಿ ಹಳ್ಳಿಮೂಲೆಗಳಿಗೆ ಅರಿವಿಲ್ಲದೇ ಹೋಗಿ ನಿಮಗೂ ಇಂಥಾ ಅನುಭವ ಲಾಭ ಆಗಿರಬೇಕಲ್ಲಾ? ಆ ಉದಾಹರಣೆ ಮತ್ತು ಅನುಭವದ ಬಲದಲ್ಲಿ ಸವಿವರ ಪ್ರತಿಕ್ರಿಯಾ ಅಂಕಣ ತುಂಬಿ ಜಾಲತಾಣವನ್ನು ಸಮೃದ್ಧಗೊಳಿಸುವಿರಾಗಿ ನಂಬಿದ್ದೇನೆ.
ಮಂಗಳೂರಿನಲ್ಲಿದ್ದಾಗ ಎಡಕು ಮೇರಿಗೆ ಸಾಮೂಹಿಕ ಪಿಕ್ ನಿಕ್ ಆಯೋಜಿಸ್ಲ್ಪಟ್ಟಿತ್ತು. ಸೌಂಸಾರ ಸಮೇತ ಅದರಲ್ಲಿ ಭಾಗವಹಿಸಿ ಎಡಕು ಮೇರಿಯ ನಿಸರ್ಗ ಸೌಂದರ್ಯವನ್ನು ಅನುಭವಿಸಿದ್ದು ಇನ್ನೂ ಮಾಸಿಲ್ಲ. ನಿಮ್ಮ ಲೇಖನ ಓದುವಾಗ ಎಡಕು ಮೇರಿಯಲ್ಲಿ ತಿರುಗಿದ ನೆನಪಾಯಿತು. ಧನ್ಯವಾದಗಳು.
Nemma rail odidha bike lekhana chennagi ithu… dhari ali nivu patta shrama mathu nemma devaki avara sahane mechuvanthdu…
I have been reading all your blogs but as usual not commentins on them.I especially liked your bike trip along the subramanya rail road,AMAZING FEAT HATS OFF TO YOU.