ಬಹುಮಂದಿಗೆ ಪಶ್ಚಿಮ ಘಟ್ಟದ ದಿಗ್ಗಜಗಳ (ಕುದುರೆಮುಖ, ಕುಮಾರ ಪರ್ವತ…) ಗಹನತೆ ಅಡಿ, ಮೀಟರ್ಗಳಲ್ಲಿ ಹೇಳಿದರೆ ಮುಟ್ಟುವುದಿಲ್ಲ. ಅವರಿಗೆ ನಿತ್ಯ ಕಾಣುವ ಬಲ್ಲೇರಿ, ಕಳಂಜಿಮಲೆ, ಬಿರುಮಲೆ, ಬಂಟಮಲೆಗಳೇ ನಿಜದ ಅಳತೆಗೋಲು. ನಾನು ಅವನ್ನೂ ಅನುಭವಿಸುವ ಸರಣಿಯಲ್ಲಿ, ಒಂದು ಮಳೆ ದಿನದ ಬೆಳಿಗ್ಗೆ ಬಂಟಮಲೆ ಆಯ್ದುಕೊಂಡಿದ್ದೆ. ತಂಡ ನಾಲ್ಕು ಬೈಕೇರಿ, ಪಂಜ ತಲಪಿತ್ತು. ಮತ್ತೆ ಅಲ್ಲಿ ಇಲ್ಲಿ ವಿಚಾರಿಸುತ್ತ ಸುಮಾರು ಹನ್ನೊಂದು ಕಿಮೀ ಕಳೆದು, ಬಿಳಿಮಲೆಯಲ್ಲಿದ್ದ ಪುರುಷೋತ್ತಮರ ಮನೆ ಸೇರಿದ್ದು ಒಂದು ಆಕಸ್ಮಿಕ. ಪುರುಷೋತ್ತಮರು ಆ ದಿನಗಳಲ್ಲಿ ಮಂಗಳೂರು ವಿವಿ ನಿಲಯದಲ್ಲಿದ್ದರು (೧೯೮೭). ಹಾಗಾಗಿ ಅವರು ನಮಗೆ ಮನೆಯಲ್ಲಿ ಸಿಗಲಿಲ್ಲ. ನಾವು ಬೈಕು, ಜಿಗಣೆಗೆ ಬೆದರಿದ ಅಭಯ, ಜತೆಗೆ ದೇವಕಿಯನ್ನು ಪುರುಷೋತ್ತಮರ ತಾಯಿಗೊಪ್ಪಿಸಿ, ಕಾಡು ನುಗ್ಗಿದ್ದೆವು. ಸುಮಾರು ಎರಡು ಗಂಟೆಯ ಅವಧಿಯಲ್ಲಿ, ಶಿಖರ ವಲಯವನ್ನು ತಲಪಿ ಸುತ್ತಾಡಿ, ಬುತ್ತಿಯೂಟ ಮಾಡಿ ಮುಗಿಸಿದ್ದೆವು. ಅನಂತರ ಉತ್ಸಾಹದಲ್ಲಿ ಇಳಿಯುತ್ತ ಮಳೆ, ಮಂಜು, ಹುಲ್ಲು, ಪೊದರುಗಳ ಫಿತೂರಿಯಲ್ಲಿ ದಿಕ್ಕು ತಪ್ಪಿ ತಲಪಿದ್ದು ಎದುರು ಮೈಯ ಏರಿಮಲೆ, ಗುತ್ತಿಗಾರು. ಮತ್ತೆ ಬಾಡಿಗೆ ವಾಹನ ಹಿಡಿದು ಪಂಜಕ್ಕಾಗಿ ಬಿಳಿಮಲೆ ಸೇರಿ, ಮರಳಿದ ಪ್ರಕರಣ ಸುಖಾಂತ ಸಾಹಸವೇ ಅನ್ನಿಸಿತ್ತು. ಆದರೆ….
‘ಕಾಗೆ ಮುಟ್ಟಿದ ನೀರು’ ಹೇಳುವಂತೆ, ರೋಯ್ತನೆಂಬ ಅದೇ ಬಂಟಮಲೆಯ ಬಾಲಕನ ಜನನಾರಭ್ಯ ಬೆಳವಣಿಗೆಯ ಬವಣೆ ಒಂದು ದಿನದ್ದಲ್ಲ. ಬಡತನ, ಏಕಾಕಿತನ, ಬಾಲ ಮನಸ್ಸಿನ ಭಯಗಳು, ಜೋಯ್ಸರ ಅಡ್ಡಗಾಲು, ಅಪ್ಪನ ಅಸಹಾಯಕತೆ, ಅಮ್ಮನ ಛಲ, ಅಣ್ಣಂದಿರ ತ್ಯಾಗ….. ಒಂದು ಮುಖದ ಕಷ್ಟ, ಸುಖಗಳು. ಪೊರೆ ಕಳಚಿ ಎದ್ದ ಪುರುಷೋತ್ತಮನನ್ನೂ ಬಿಡದ ವೃತ್ತಿರಂಗದ ಹಿಂಸೆಗಳು, ಸಾಮಾಜಿಕ ಅಪಾರ್ಥಗಳು, ಕಾಡುವ ಕಾಯಿಲೆಗಳು, ಸಾಧನಾ ಛಲ, ವಿಸ್ತರಿಸಿದ ಕ್ಷಿತಿಜ, ಪ್ರವಾಸಗಳು, ವಿದ್ವತ್ ಮನ್ನಣೆಗಳು…. ಇನ್ನೊಂದು ಮುಖದ ಏಳು ಬೀಳುಗಳು. ಅವುಗಳಲ್ಲಿ ಹೆಚ್ಚಿನವು ಅನಿವಾರ್ಯವಾಗಿ, ಅಯಾಚಿತವಾಗಿ ಒದಗಿದವು. ಅವುಗಳ ಮೇಲೂ ಬದುಕಿಗೊಂದು ಹೆಚ್ಚಿನ ಅರ್ಥ ಕೊಡುವಂತೆ ತಾನೇ ಎಳೆದು ಹಾಕಿಕೊಂಡ ಮದುವೆ, ಸಾಮಾಜಿಕ ಹೋರಾಟಗಳು, ಹವ್ಯಾಸಗಳು, ಎಲ್ಲಕ್ಕೂ ಮುಖ್ಯವಾಗಿ ವೃತ್ತಿರಂಗದ ಸವಾಲುಗಳು ಹತ್ತು ಹನ್ನೆರಡು. ಹೀಗೆ ಥಾನುಗಟ್ಟಳೆ ಬರೆದರೂ ಉತ್ಪ್ರೇಕ್ಷೆ ಅನ್ನಿಸದಂಥ ಆತ್ಮಕಥಾನಕವನ್ನು ಪುರುಷೋತ್ತಮ ಬಿಳಿಮಲೆ ಕೇವಲ ಮುನ್ನೂರು ಪುಟಗಳೊಳಗೇ ಅಡಕವಾಗಿಟ್ಟದ್ದಕ್ಕೆ ಹೆಸರು – ಕಾಗೆ ಮುಟ್ಟಿದ ನೀರು. ಇಲ್ಲಿ ಮತ್ತೆ ನೆನಪಾಗುತ್ತದೆ ಎ.ಎನ್. ಮೂರ್ತಿರಾಯರ ಮಾತು – ಹಿಮಾಲಯವನ್ನು ಕಣ್ತುಂಬಿಕೊಂಡು ಆನಂದಿಸುವುದು ತಪ್ಪಲ್ಲ. ಆದರೆ ಅದನ್ನೇ ಜೀವನಕ್ಕೆ ಒಗ್ಗಿಸಿಕೊಳ್ಳುವುದು ಕಠಿಣ.
ಪುರುಷೋತ್ತಮ ಬಿಳಿಮಲೆ ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯದ ಕನ್ನಡ ಅಧ್ಯಾಪಕ (೧೯೭೮-೮೪) ಎಂದೇ ನನ್ನ ಪರಿಚಯಕ್ಕೆ ಬಂದವರು. ಪುಸ್ತಕ ವ್ಯಾಪಾರಿಯಾದ ನನ್ನಲ್ಲಿಗೆ ಅಧ್ಯಾಪಕರುಗಳು ಬರುತ್ತಿದ್ದದ್ದು ವಿಶೇಷವೇನೂ ಅಲ್ಲ. ಆದರೆ ನನ್ನ ಪರ್ವತಾರೋಹಣ ಹವ್ಯಾಸಕ್ಕೆ ಸಂಬಂಧ ಪಟ್ಟಂತೆ ಇವರು ನನಗೆ ತುಸು ಹೆಚ್ಚು ಹತ್ತಿರವಾದರು. ೧೯೮೦ರ ದಶಕದಲ್ಲಿ, ಉದಯವಾಣಿಯ ಗೆಳೆಯ ಈಶ್ವರ ದೈತೋಟರ ಪ್ರೇರಣೆಯಲ್ಲಿ, ನಾನು ಈ ವಲಯದ ಪ್ರಾಕೃತಿಕ ಗುಹೆಗಳನ್ನು ಸರಣಿಯಲ್ಲಿ ಶೋಧಿಸಿ, ಬರೆಯುವ ಅನಿವಾರ್ಯತೆಯಲ್ಲಿದ್ದೆ. ಆ ಸಮಯಕ್ಕೆ ಬಿಳಿಮಲೆಯವರ ಗೆಳೆಯರ ಬಳಗ ಸುಳ್ಯ ಸಮೀಪದ ‘ಮಂಡೆಕೋಲು ಬಾಂಜಾರ’ (ಗುಹೆ) ಹೊಕ್ಕು ಹೊರಟಿತ್ತು. ಆ ಅನುಭವವನ್ನು ಅವರು ಪತ್ರಿಕಾ ಲೇಖನ ಮಾಡಿದಾಗ, ಊರವರನ್ನು ‘ನಿಮ್ಮ ಪರಿಸರ ತಿಳಿದುಕೊಳ್ಳಿ’ ಎಂದು ಎಬ್ಬಿಸುವ ಉತ್ಸಾಹದಲ್ಲೋ ಏನೋ ನನ್ನನ್ನು ಈ ಪ್ರದೇಶದವನಲ್ಲ ಎಂಬಂತೆ ಬಿಂಬಿಸಿದ್ದರು.
ನನಗೆ ಸಣ್ಣ ನಗು ಬಂತು. ಅವರ ಕಥನವೇನೋ ಪ್ರಾಮಾಣಿಕವಾಗಿಯೂ ಅನ್ಯರಿಗೆ ಪ್ರೇರಕವಾಗುವಂತೆಯೂ ಇತ್ತು. ಹಾಗಾಗಿ, ಅದರಲ್ಲಿ ನನ್ನ ಅನುಭವದ ನಿಕಷಕ್ಕೆ ನಿಲುಕಿದ ಕೆಲವು ಸಣ್ಣ ತಪ್ಪುಗಳನ್ನು ನೇರ ಬಿಳಿಮಲೆಯವರಿಗೆ (ಪತ್ರಿಕೆಗಲ್ಲ) ಬರೆದಿದ್ದೆ. ಅವರೂ ಅಷ್ಟೇ ಸೌಜನ್ಯದಲ್ಲಿ ಅವನ್ನು ಒಪ್ಪಿಕೊಂಡಿದ್ದರು. ಈಗ ವಿಶೇಷ ಎಂದರೆ, ಅದನ್ನು ನೆನಪಿಟ್ಟು ಪ್ರಸ್ತುತ ಆತ್ಮಕಥಾನಕದಲ್ಲೂ ಸೇರಿಸಿದ್ದಾರೆ! ಹಾಗೇ ಇನ್ನೊಬ್ಬರಿಗೆ ನೋವಾಗುವಂತ ಎಷ್ಟೋ ಸಂಗತಿಗಳನ್ನು ಅವರು ಹೇಳದುಳಿದಿರುವುದು, ಹೇಳಿದಲ್ಲೂ ತೇಲು ಮಾತುಗಳಲ್ಲಿ ಮುಗಿಸಿರುವುದನ್ನೂ ನಾನು ಈ ಕೃತಿಯಲ್ಲಿ ಗುರುತಿಸಬಲ್ಲೆ.
ಬಿಳಿಮಲೆಯವರ ಗೆಳೆಯರ ಬಳಗ ಕನಕ ಮಜಲು ಸಮೀಪ ಇನ್ನೊಂದೇ ಮುಚ್ಚಿದಂತಿದ್ದ ಗುಹೆಯನ್ನು ಗುರುತಿಸಿದರು. ಮತ್ತೆ ಉತ್ಸಾಹ ಹೆಚ್ಚಿ ಪಿಕ್ಕಾಸು ಗುದ್ದಲಿ ಹಿಡಿದು ಅದನ್ನು ಪೂರ್ಣ ತೆರೆದಿಟ್ಟು ಪತ್ರಿಕಾ ಸುದ್ಧಿ ಮಾಡಿದರು. ಆ ದಿನಗಳಲ್ಲಿ ನನ್ನ ಅನುಭವಗಳು ಕೇವಲ ಪ್ರಾಕೃತಿಕ ಗುಹಾವಲಯಕ್ಕಷ್ಟೇ ಸೀಮಿತವಾಗಿದ್ದವು. ಹಾಗಾಗಿ ಪ್ರಾಕೃತಿಕ ಗುಹೆಯನ್ನಿವರು ಕೆಡಿಸಿದರು ಎಂದೇ ಭಾವಿಸಿ, ನಾನು ಸಕಾರಣ ವಿರೋಧಿಸಿ, ಪತ್ರಿಕೆಗೇ ಬರೆದಿದ್ದೆ. ನಿಜದಲ್ಲಿ ಅದು ಪ್ರಾಚೀನ ಮನುಷ್ಯಕೃತ ರಚನೆಯೆಂದೂ (ಸಮಾಧಿ,) ಬಿಳಿಮಲೆ ಬಳಗ ಮಾಡಿದ್ದು ವೈಜ್ಞಾನಿಕ ಉತ್ಖನನವೇ ಹೊರತು ಪ್ರಕೃತಿ ವಿರೋಧೀ ಕ್ರಮವಲ್ಲ ಎಂದೂ ಇತಿಹಾಸ ತಜ್ಞ ಪುಂಡೀಕಾಯ್ ಗಣಪಯ್ಯ ಭಟ್ ಪ್ರಮಾಣಿಸಿದ್ದರು. ಪುರುಸೊತ್ತಿನಲ್ಲಿ ನಮ್ಮ ಬಳಗವೂ ಅದನ್ನು ನೋಡಿ ಒಪ್ಪಿಕೊಂಡೆವು. ಪುಸ್ತಕದಲ್ಲಿ ಈ ಗುಹೆಯ ಶೋಧನಾ ವಿವರಗಳ ಉಲ್ಲೇಖವಿದೆ, ನನ್ನ ದುಡುಕಿನದ್ದಿಲ್ಲ.
ಮಂಡೆಕೋಲು ಬಾಂಜಾರದ ನೆನಪಿನ ಸಣ್ಣ ಕವಲು, ನನ್ನ ಮಟ್ಟಿಗೆ ಬಿಳಿಮಲೆಯವರ ವೈಚಾರಿಕ ನಡೆಗಳಿಗೆ ಒಂದು ಪ್ರವೇಶಿಕೆಯಾಗಿಯೇ ಕಾಣುತ್ತದೆ. ಗುಹಾ ಅನಾವರಣ ಸರಣಿಯಲ್ಲಿ ‘ನಾನೇ ಪ್ರಥಮ’ ಎನ್ನುವ ಹಠ ನನಗಿರಲಿಲ್ಲ. ಹಾಗಾಗಿ ಪುರುಷೋತ್ತಮ ಬಳಗ ನೋಡಿದ ಮಂಡೆಕೋಲು ಬಾಂಜಾರವನ್ನು ನೋಡಲೆಂದೇ ಮುಂದೊಂದು ದಿನ ನಮ್ಮ ಬಳಗ ಕಟ್ಟಿಕೊಂಡು ಹೋಗಿದ್ದೆ, ಸಂತೋಷಿಸಿದೆ. ಆಗ ಭೇಟಿಯಾಗಿದ್ದ ಸ್ಥಳದ ಭೂಮಾಲೀಕರು, ಬಿಳಿಮಲೆಯವರ ಪ್ರಸ್ತಾಪ ಬಂದಾಗ, “ಬಿಳಿಮಲೆ ತ್ರೀ-ಸಿ – ಕಮ್ಯೂನಿಸ್ಟ್, ಕಮ್ಯೂನಲ್ ಮತ್ತು ಕ್ರಿಮಿನಲ್” ಎಂದು ಕಟಕಿಯಾಡಿದ್ದರು. ನನ್ನ ಕೆಲವು ಅಂಧ ಸಂಪ್ರದಾಯವಾದಿ ಆತ್ಮೀಯರೂ ಬಿಳಿಮಲೆಯವರ ಓದು, ಒಡನಾಟ ಇಲ್ಲದೆಯೂ (ಇಂದಿನ ವಾಟ್ಸಪ್ ವಿವಿ ನಿಲಯದ ಉತ್ಪನ್ನಗಳ ಹಾಗೆ) “ಜಾತೀವಾದಿ, ಸಂಕುಚಿತ ಮನಸ್ಸಿನವ..” ಎಂದು ಹೇಳುವುದನ್ನೂ ಕೇಳಿದ್ದೆ. ಅವನ್ನು ನಾನು ಎಂದೂ ಅನುಮೋದಿಸಲಿಲ್ಲ ಎನ್ನುವುದು ಪ್ರತ್ಯೇಕ. ಅವರೆಲ್ಲ ಈ ಪುಸ್ತಕದಲ್ಲಿ ಕನಿಷ್ಠ ಪುರುಷೋತ್ತಮ – ಶೋಭನಾ ವಿವಾಹ ಪ್ರಕರಣ ಮತ್ತು ಇಂದಿನವರೆಗೂ ಎರಡು ಕುಟುಂಬಗಳ ನಡುವಣ ಹಾರ್ದಿಕ ಸಂಬಂಧದ ಪುಟಗಳನ್ನು ಇನ್ನಾದರೂ ಓದಿಕೊಳ್ಳುವುದು ಉತ್ತಮ.
ಒಂದೊಮ್ಮೆ ಪುರುಷೋತ್ತಮ ಸಂಕುಚಿತ ಬುದ್ಧಿಯವರೇ ಆಗಿದ್ದರೆ, ಗುಹಾಪ್ರಕರಣಗಳಿಂದಲೋ ನನ್ನ ಹುಟ್ಟಿನ ಆಕಸ್ಮಿಕ ಗುರುತಿಸಿಯೋ ನನ್ನನ್ನು ವೈರಿಯಾಗಿ ಕಾಣಬಹುದಾಗಿದ್ದವರು ಉದಾರವಾಗಿಯೇ ನಡೆಸಿಕೊಂಡಿದ್ದಾರೆ ಮಾತ್ರವಲ್ಲ, ವಿಶೇಷವಾಗಿಯೇ ಗುರುತಿಸಿದ್ದಾರೆ ಎನ್ನುವುದಕ್ಕೆ ಒಂದೆರಡು ನಿದರ್ಶನಗಳು. ಪುಸ್ತಕೋದ್ಯಮದಲ್ಲಿ ನಾನು ಉದ್ದಕ್ಕೂ ಕಟು ವಿಮರ್ಶಕನೆಂದೇ ಹೆಸರಾದವ. ಅದರಲ್ಲೂ ಮುಖ್ಯವಾಗಿ ಸರಕಾರೀ ಪುಸ್ತಕೋದ್ಯಮ ಎಂಬ ಮಹಾಭ್ರಷ್ಟ ಶತಪದಿ ನನ್ನ ಸಂಪರ್ಕಕ್ಕೆ ಕೈ ಚಾಚಿದಾಗೆಲ್ಲ ನಿರ್ದಯದಿಂದ ಕಡಿಯುವ ಕೆಲಸ ನಡೆಸಿದ್ದೆ. (ಅಂಥ ಲೇಖನಗಳ ಸಂಕಲನವೇ ನನ್ನ ‘ಪುಸ್ತಕ ಮಾರಾಟ ಹೋರಾಟ’) ಹೀಗೆ ಸದಾ ಗಂಟಿಕ್ಕಿದ್ದ ನನ್ನ ಹುಬ್ಬಿಗೆ ಸ್ವಲ್ಪ ಸಡಿಲುವ ಅವಕಾಶ ಕಲ್ಪಿಸಿದವರು ಪುರುಷೋತ್ತಮ ಬಿಳಿಮಲೆ. ಆ ವರ್ಷ (೧೯೮೦ರ ದಶಕದಲ್ಲಿರಬೇಕು) ದಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸುಳ್ಯದಲ್ಲಿ ಪ್ರಥಮ ಬಾರಿಗೆ ನಡೆಯುವುದಿತ್ತು. ಅದರ ಸ್ವಾಗತ ಸಮಿತಿಯ ಯಾವುದೋ ಅಧಿಕಾರದಲ್ಲಿ ಬಿಳಿಮಲೆ ನನ್ನನ್ನು ಸಂಪರ್ಕಿಸಿ, ವಿಶಿಷ್ಟ ಪ್ರಬಂಧ ಮಂಡನೆಗೆ ಒಪ್ಪಿಸಿದರು. ವಿಷಯ – ಪುಸ್ತಕೋದ್ದಿಮೆಯಲ್ಲಿ ರಸಪ್ರಸಂಗಗಳು! ಅದು ಬೇಸಗೆ ದಿನದ ಮಧ್ಯಾಹ್ನ ಊಟಾನಂತರದ ಮೊದಲ ಅವಧಿ. ನಾನೇನು ವಾಗ್ಮಿಯಲ್ಲ, ಸ್ಪಷ್ಟ ಬರೆದುಕೊಂಡು ಹೋಗಿ ಓದಿದ್ದೆ. ಎಲ್ಲ ತೂಕಡಿಸುವ ಹೊತ್ತಿಗೆ ನನ್ನದು ಜೋಗುಳವಾಗುತ್ತದೆ ಎಂದೇ ಭಾವಿಸಿದ್ದೆ. ವ್ಯತಿರಿಕ್ತವಾಗಿ ಅದ್ಭುತ ಯಶಸ್ಸನ್ನೆ ಕಂಡಿತ್ತು. (ಆಸಕ್ತರು ನೋಡಿ: ದುಡ್ಡು ಕೆಟ್ಟದ್ದು ನೋಡಣ್ಣ ) ಚಾರಣಿಗನೇ ಆದ ನನಗೆ, ಅಷ್ಟಾಗಿ ಶೋಧಿಸದ ಹೊಸ ದಿಕ್ಕು ತೋರಿದ್ದರು ಬಿಳಿಮಲೆ.
ತಂದೆಯ ಹವ್ಯಾಸ ಮತ್ತು ತಾಯಿಯ ಪ್ರೋತ್ಸಾಹದಿಂದ ಯಕ್ಷಗಾನದೊಲುಮೆ ಪುರುಷೋತ್ತಮರ ಸಹಜಾತ ಎಂದರೆ ತಪ್ಪಾಗದು. ಅದಕ್ಕೆ ಸ್ಪಷ್ಟ ಶಿಕ್ಷಣದ ಮುಖ ಸಿಕ್ಕಿದ್ದು ಅವರ ಮಂಗಳೂರು ವಿವಿ ನಿಲಯದ ವೃತ್ತಿಯ ಅವಧಿಯಲ್ಲಿ (೧೯೮೪ -೯೨) ಎಂದು ಅವರೇ ಹೇಳಿಕೊಂಡಿದ್ದಾರೆ. ನಾನವರ ಪಾತ್ರಾಭಿನಯ ನೋಡಲು ಕಾದಿದ್ದೆ. ಆ ಒಂದು ರಾತ್ರಿ ಇವರು ಕಲಾಗಂಗೋತ್ರಿಯ ಸದಸ್ಯರೊಂದಿಗೆ ಮೂಲ್ಕಿ ಸಮೀಪದ ಸಸಿಹಿತ್ಲುವಿನಲ್ಲಿ ಆಟ ಇಟ್ಟುಕೊಂಡದ್ದನ್ನು ನನಗೆ ತಿಳಿಸಿದ್ದರು. ಅದನ್ನು ನೋಡಲೆಂದೇ ನಾನು ಅಪರಾತ್ರಿಯಲ್ಲಿ ದಾರಿ ಹುಡುಕಿಕೊಂಡು, ಅದೇ ಮೊದಲು ಸಸಿಹಿತ್ಲಿನ ಭಗವತಿ ದೇವಸ್ಥಾನಕ್ಕೆ ಹೋಗಿದ್ದೆ. ಹೊಯ್ಗೆ ಹಾಸಿನ ಅಂಗಳದಲ್ಲಿ ಕುಳಿತು, ಸಾಕ್ಷರತೆಯ ಕುರಿತ ಆಖ್ಯಾನವೊಂದರಲ್ಲಿ ವೇಷಧಾರೀ ಪುರುಷೋತ್ತಮರನ್ನು ಕಂಡಿದ್ದೆ. ಕರಾವಳಿ ವಲಯದಲ್ಲಿ ಅನ್ಯ ವೃತ್ತಿಯ ಮಂದಿ ಖಯಾಲಿಗಾಗಿ ವೇಷ ಮಾಡುವುದು ಹೊಸತೂ ಅಲ್ಲ, ಕಡಿಮೆಯೂ ಏನಲ್ಲ. ಮತ್ತೆ ಪುರುಷೋತ್ತಮರ ಕುಣಿತ ನುಡಿಗಳ ನೆನಪೇನೂ ನನಗುಳಿದಿಲ್ಲ. ಆದರೆ ಯಕ್ಷಗಾನ ಮತ್ತು ದಾಯಾದೀ ಕಲೆಗಳ ನೆಪದಲ್ಲಿ ಪುರುಷೋತ್ತಮರು ಜಪಾನ್ ವಿದ್ವಾಂಸರುಗಳೊಂದಿಗೆ ನಡೆಸಿದ ಸಾಂಸ್ಕೃತಿಕ ವಿನಿಮಯ ಮಾತ್ರ ತುಂಬಾ ದೊಡ್ಡದು. ಅದಕ್ಕೆ ಉದಾಹರಣೆಯಾಗಿ ಹೆಸರಿಸಬಹುದಾದ ಒಂದು ದೊಡ್ಡ – ಹೆಸರು ಸುಮಿಯೋ ಮೊರಿಜಿರಿ ಮತ್ತು ಒಂದು ಘಟನೆ – ತೆಂಕುತಿಟ್ಟಿನ ಯಕ್ಷಗಾನ ತಂಡವನ್ನು ಜಪಾನಿಗೊಯ್ದು ಯಶಸ್ವೀ ಪ್ರದರ್ಶನಗಳನ್ನು ಕೊಟ್ಟದ್ದು.
೧೯೯೨ – ೯೮ರ ಅವಧಿಯಲ್ಲಿ ಬಿಳಿಮಲೆ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿದ್ದರು. ವಿವಿ ನಿಲಯ ತನ್ನ ಬಹುಮುಖೀ ಚಟುವಟಿಕೆಗಳಲ್ಲಿ ಸರಕಾರದ ಸಾಕ್ಷರತಾ ಆಂದೋಲನದಲ್ಲಿ ಸೇರಿಕೊಂಡಿತ್ತು. ವಯಸ್ಕರ ಪೂರಕ ಓದಿಗೆ ಅನುಕೂಲವಾಗುವಂತೆ ನೂರಾರು ಕಿರು ಪುಸ್ತಗಳನ್ನು ಬರೆಸಿ, ಪ್ರಕಟಿಸುವ ಕೆಲಸ ಇದರ ಪಾಲಿನದಿತ್ತು. ಅದಕ್ಕೆ ಲೇಖಕರನ್ನು ಆಯುವ ಕಾಲದಲ್ಲಿ ಸಂಪಾದಕ ಸಮಿತಿಯ ಎದುರು “ಬೆಟ್ಟ ಗುಡ್ಡಗಳಿಗೆ ಯಾರೆಂದು ಕೇಳಿದ್ದೀರಿ” ಎಂಬ ಪ್ರಶ್ನೆ ಬಂದಾಗ, ನನ್ನ ಹೆಸರನ್ನು ಪುರುಷೋತ್ತಮರೇ ಹೇಳಿದ್ದಿರಬೇಕು. ಆ ದಿನಗಳಲ್ಲಿ ಕವಿವಿ ಇನ್ನೂ ವಿರೂಪಾಕ್ಷ ದೇವಳದ ಎದುರಿನ ಕಲ್ಲ ಮಂಟಪಗಳಲ್ಲೇ ಅಂಬೆಗಾಲಿಡುತ್ತಿತ್ತು. ಆದರೇನು ಬಿಳಿಮಲೆ, ಮೈಸೂರಿನ ಗೆಳೆಯ (ಇಂಗ್ಲೀಷ್ ಎಮ್ಮೆಯಲ್ಲಿ ನನಗಿಂತ ಒಂದು ವರ್ಷ ಹಿರಿಯ) ಓ.ಎಲ್ ನಾಗಭೂಷಣ ಸ್ವಾಮಿ, ರಹಮತ್ ತರೀಕೆರೆಯಂಥಾ ವಿದ್ವಾಂಸರುಗಳ ಜತೆ ಎರಡೋ ಮೂರೋ ದಿನ ಒಡನಾಡಿದ್ದು, ನನ್ನ ಲೆಕ್ಕಕ್ಕೊಂದು ಹೆಚ್ಚಿನ ಪುಸ್ತಕ ಸೇರಿದ್ದು (ನೋಡಿ: ಬೆಟ್ಟಗುಡ್ಡಗಳು) ನನಗಂತು ಅಪೂರ್ವ ಸವಿನೆನಪು.
ಪುಸ್ತಕ ವ್ಯಾಪಾರಿಯೇ ಆದ್ದರಿಂದ ನಾನು ಬಿಳಿಮಲೆಯವರ ಎಲ್ಲ ಪುಸ್ತಕಗಳನ್ನೂ ನನ್ನ ಮಿತಿಯಲ್ಲಿ ಕೊಂಡು, ಮಾರಿದ್ದೇನೆ, ವಿಶೇಷವೇನೂ ಇಲ್ಲ. ಆದರೆ ಆತ್ಮಕಥಾನಕದೊಳಗೆ ಅವಕಾಶ ಒದಗಿದಲ್ಲೆಲ್ಲ ಮತ್ತು ಹೊರಗೂ ಈ ಸಣ್ಣ ಸಂಬಂಧವನ್ನೇ ವಿಶೇಷವಾಗಿ ಗುರುತಿಸಿ ಗೌರವಿಸಿದ್ದನ್ನು ಒಂದೆರಡು ನಿದರ್ಶನಗಳನ್ನು ಸೂಕ್ಷ್ಮದಲ್ಲಿ ಹೇಳುತ್ತೇನೆ. ಒಮ್ಮೆ ಅದೆಲ್ಲಿಂದಲೋ ಇವರು ರಾತ್ರಿ ಬಸ್ಸಿನಲ್ಲಿ ತುಸು ಬೇಗನೆ ಮಂಗಳೂರಿಗೆ ಬಂದಿಳಿದಿದ್ದರಂತೆ. ಆದರೆ ಮನೆ ಸೇರಿಕೊಳ್ಳಲು ಸಿಟಿ ಬಸ್ ತೊಡಗುವವರೆಗೆ ಒಂದೆರಡು ಗಂಟೆಗಳ ಕಾಲ ಕಾಯಬೇಕಿತ್ತು. ಆಗ ಅವರು ಕಾದದ್ದು ಸಾಮಾನ್ಯರು ಹೇಳುವಂತೆ ಜ್ಯೋತಿ ವೃತ್ತವೋ ಕ್ವಾಲಿಟಿ ಹೋಟೆಲ್ಲೋ ಬಲ್ಮಠವೋ ಅಲ್ಲ; ಅತ್ರಿ ಬುಕ್ ಸೆಂಟರ್ ಎದುರು! ಇನ್ನೊಮ್ಮೆ ಅವರ ಯಾವುದೋ ಒಂದು ಪುಸ್ತಕದ ಔಪಚಾರಿಕ ಲೋಕಾರ್ಪಣಕ್ಕೆ (ಆ ಮೂಲಕ ಸ್ವಲ್ಪವಾದರೂ ಸಾರ್ವಜನಿಕ ಗಮನ ಸೆಳೆಯುವ ಪ್ರಯತ್ನ ತಪ್ಪಲ್ಲ) ಸಮಯಾನುಕೂಲ ಇರಲಿಲ್ಲ ಎಂದು ತೋರುತ್ತದೆ. ಆದರೂ ಅಚ್ಚುಕೂಟದಿಂದ ಮೊದಲ ಪುಸ್ತಕದ ಕಟ್ಟನ್ನು ಸೀದಾ ನನ್ನ ಅಂಗಡಿಗೆ ತಂದು, ನನ್ನ ಗಲ್ಲಾದ ಮೇಲಿಟ್ಟು, ನನ್ನಿಂದಲೇ ಅನೌಪಚಾರಿಕ ಅನಾವರಣ ಮಾಡಿಸಿದ್ದರು. ಹಾಗೆಂದು ನಾನು ‘ಗೌರವ ಪ್ರತಿ’ ಏನೂ ತೆಗೆದುಕೊಳ್ಳಲಿಲ್ಲ (ನನ್ನ ತತ್ವದಂತೆ). ಅಂದು ಅಂಗಡಿಗೆ ಬೇಕಾದಷ್ಟು ಪ್ರತಿಗಳನ್ನು, ಎಂದಿನಂತೆ ನಗದು ಕೊಟ್ಟು ಖರೀದಿಸಿದ್ದೆ.
ಬಿಳಿಮಲೆಯವರ (ತಂಗಿಯ ಗಂಡ) ಭಾವ ಶ್ರೀನಿವಾಸ ಕಾರ್ಕಳ ನನಗೆ ಮೊದಲು ಪರ್ವತಾರೋಹಣ ಆಸಕ್ತನಾಗಿಯೇ ಪರಿಚಯಕ್ಕೆ ಬಂದವರು. ಅವರು ಮನೆಯಂಗಳದ ಆಕಸ್ಮಿಕದಲ್ಲಿ, ಎಂದೂ ಪೂರ್ಣ ಚೇತರಿಸಿಕೊಳ್ಳಲಾಗದ ದೈಹಿಕ ಸ್ಥಿತಿ ಮುಟ್ಟಿದ್ದೊಂದು ದುಃಖದ ಕತೆ. ಹಾಗಾದ ಹೊಸತರಲ್ಲಿ ಶ್ರೀನಿವಾಸ್ ತನ್ನ ಚಿಕಿತ್ಸೆ, ವೃತ್ತಿ, ವಾಸದ ನೆಲೆ, ಆರ್ಥಿಕತೆ, ಮಡದಿ ಮಗನ ಭವಿಷ್ಯ ಎಂದಿತ್ಯಾದಿ ಬಹುಮುಖೀ ಒತ್ತಡದಲ್ಲಿದ್ದರು. ಆ ದಿನಗಳಲ್ಲಿ ಬಿಳಿಮಲೆ ತನ್ನದೇ ಒತ್ತಡಗಳ ಸಹಿತ ದೂರದ ದಿಲ್ಲಿಯಲ್ಲಿದ್ದರು. ಆದರೂ ಶ್ರೀನಿವಾಸ್ ಕುರಿತ ಸಹತಾಪದಲ್ಲಿ ಅವರು ನೆನೆಸಿಕೊಂಡ ಒಂದು ಸಣ್ಣ ಸಾಂತ್ವನದ ಅಂಶ ‘ದುಃಖಾರ್ತರು’. ಇದು ಮೂಲದಲ್ಲಿ – ‘ಲೆ ಮಿಸರೇಬಲ್ಸ್’, ಖ್ಯಾತ ಫ್ರೆಂಚ್ ಲೇಖಕ ವಿಕ್ಟರ್ ಹ್ಯೂಗೊನ ಪ್ರಸಿದ್ಧ ಕಾದಂಬರಿ. ಇದರ ಕನ್ನಡಾನುವಾದವನ್ನು ನನ್ನಜ್ಜ – ಎಪಿ ಸುಬ್ಬಯ್ಯ ಮಾಡಿದ್ದರೆ, ಮರುಪ್ರಕಟಿಸಿದವ ನಾನು. (ಮುದ್ರಿತ ಪ್ರತಿ ಈಗಲೂ ಲಭ್ಯ – ರೂ. ಎಪ್ಪತ್ತು) ಬಿಳಿಮಲೆ ನನಗೆ ದೂರವಾಣಿಸಿ ಒಂದು ಪ್ರತಿ ಶ್ರೀನಿವಾಸರಿಗೆ ಮುಟ್ಟಿಸಲು ಕೇಳಿಕೊಂಡಿದ್ದರು. ಕಾಗೆ ಮುಟ್ಟಿದ ನೀರಿನಲ್ಲಿ, ಆ ಕಥೆ (ಜೀನ್ವಾಲ್ಜೀನ್) ಶಾಲಾ ದಿನಗಳಲ್ಲೇ ತನಗೆ ಪರಿಚಯವಾದ ಬಗೆ ಮತ್ತು ಮುಂದೆ ಇಡೀ ಕಾದಂಬರಿಯನ್ನೇ ಓದಿ, ಹೃದಯಕ್ಕೆ ಹಚ್ಚಿಕೊಂಡದ್ದರ ಉಲ್ಲೇಖವನ್ನು ಬಿಳಿಮಲೆ ಚೆನ್ನಾಗಿಯೇ ಮಾಡಿದ್ದಾರೆ.
೧೯೯೬ರ ನನ್ನ ಭಾರತ ಬೈಕ್ ಯಾನದ ಎರಡನೇ ಕಂತಿನ ಕೊನೇ ಹಂತದಲ್ಲಿ ನಾವು ಹೊಸಪೇಟೆ ಮುಟ್ಟಲಿದ್ದೆವು. ಅದಕ್ಕೆ ಸುಮಾರು ಎರಡು ತಿಂಗಳು ಮುಂಚಿತವಾಗಿಯೇ ನಾನು ಪುರುಷೋತ್ತಮರಿಗೆ “ಒಂದು ರಾತ್ರಿಗೆ ನಾಲ್ಕು ಮಂದಿಗೆ ಉಚಿತ ಅಥವಾ ರಿಯಾಯ್ತಿ ದರದ ನೆಲೆ ಕಾಣಿಸಬಲ್ಲಿರಾ?” ಎಂದು ಪತ್ರಿಸಿದ್ದೆ. ಜೊತೆಗೇ “ಆ ದಿನದಂದು ‘ಸಾಹಸಯಾನದಲ್ಲಿ ಬಂದವರೊಡನೆ ಅನೌಪಚಾರಿಕ ಸಂವಾದ’ ನಡೆಸಿದರೆ ವಿವಿನಿಲಯಕ್ಕೆ ಏನಾದರೂ ಉಪಯುಕ್ತವಾದೀತೆಂದು ನಿಮಗನ್ನಿಸಿದರೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಹಕರಿಸಲು ನಾವು ಸಿದ್ಧ” ಎಂದೂ ಸೇರಿಸಿದ್ದೆ.
ನಮ್ಮ ಹೊಸಪೇಟೆ ವಾಸಕ್ಕೆ ಬಿಳಿಮಲೆಯವರು ತನ್ನ ಮನೆಯನ್ನೇ ಮುಕ್ತವಾಗಿರಿಸಿದ್ದರು. ಅದು ವಾರ್ಷಿಕ ಬೇಸಗೆ ರಜಾದಿನಗಳಾದ್ದರಿಂದ ಸರಿಯಾಗಿಯೇ ಅವರ ಹೆಂಡತಿ (ಶೋಭನಾ) ಮತ್ತು ಮಗ (ಅನನ್ಯ) ಊರಿಗೆ ಹೋಗಿದ್ದರು. ನಾವಲ್ಲದಿದ್ದರೆ ಬಿಳಿಮಲೆಯೂ ಹೋಗುತ್ತಿದ್ದರೋ ಏನೋ! ಅದನ್ನೇನೂ ಹೇಳದೆ, ಕಾದು ನಮ್ಮನ್ನು ಮನೆಗೆ ಸೇರಿಸಿಕೊಂಡಿದ್ದರು. ಮತ್ತೆ ಮನೆಯೂಟ ಹಾಕಲಾಗದ ಸಂಕೋಚಕ್ಕೆಂಬಂತೆ, ಅವರ ವಿದ್ವಾಂಸ ಗೆಳೆಯರೊಡನೆ ನಮಗೆ ಆಯ್ದ ಹೋಟೆಲೊಂದರಲ್ಲಿ ರಾತ್ರಿಯೂಟವನ್ನೂ ಇಟ್ಟುಕೊಂಡಿದ್ದರು. ಆ ಸಮಯದಲ್ಲಿ ಹೊಸಪೇಟೆಯಲ್ಲೇ ಇದ್ದ (ನನಗೆ ಮೊದಲೇ ಪರಿಚಿತರಾಗಿದ್ದ) ಜಪಾನೀ ವಿದ್ವಾಂಸ ಸುಮಿಯೋ ಮೊರಿಜಿರಿಯವರೂ ಊಟಕ್ಕೆ ಜತೆಯಾಗಿದ್ದರು. ಮರುದಿನ ಬೆಳಗ್ಗಿನ ಚಾ ಸತ್ಕಾರಕ್ಕೆ ನಾವು ಮೊರಿಜಿರಿಯವರ ಮನೆಗೇ ಹೋಗುವಂತಾದ್ದೂ ಬಿಳಿಮಲೆಯವರ ಸೌಜನ್ಯದ ಭಾಗವೇ ಸರಿ. ಅವನ್ನೆಲ್ಲ ಮೀರಿ… ಕೊನೆಯಲ್ಲಿ ಬಿಳಿಮಲೆ, ನಮಗೆ ಕುಲಪತಿ ಕಂಬಾರರ ಧರ್ಮ ದರ್ಶನವನ್ನಷ್ಟೇ ಮಾಡಿಸಿ, ಹಾರ್ದಿಕವಾಗಿ ಬೀಳ್ಕೊಂಡಿದ್ದರು. ಅಂದು ನಮಗೆ ಏನೂ ತಿಳಿದಿರದ ಕಂಬಾರರ ಕುಹಕದ ಮುಖ್ಯಾಂಶವನ್ನು, ಇಂದು ‘ಕಾಗೆ ಮತ್ತು ನೀರು’ವಿನಲ್ಲಿ ಅನಿವಾರ್ಯವಾಗಿ, ಆದರೆ ಬಹಳ ಸಂಯಮದಲ್ಲಿ ಬಿಳಿಮಲೆ ನಿರೂಪಿಸಿದ್ದಾರೆ.
ಇದು ಅನಾವರಣಗೊಳಿಸುವ ‘ಸರಸ್ವತೀ ಮಂದಿರ’ದ ಬೌದ್ಧಿಕ ಭ್ರಷ್ಟತೆ ನಿಜಕ್ಕೂ ಆಘಾತಕರ. ಪುಸ್ತಕದಲ್ಲಿ ಶೋಷಿತರಾಗಿ ಮೂರೇ ಹೆಸರುಗಳ (ಬಿಳಿಮಲೆ, ಮೊರಿಜಿರಿ ಮತ್ತು ಕಂಬತ್ತಳ್ಳಿ) ಉಲ್ಲೇಖವಿದ್ದರೂ ನಿಜದಲ್ಲಿ ಇನ್ನೆಷ್ಟು ವಂಚಿತ ವ್ಯಕ್ತಿಗಳು ಇದ್ದಿರಬಹುದು? ಇವರೆಲ್ಲರನ್ನು ಕಳಚಿಕೊಂಡೂ ವಿವಿನಿಲಯದ ನಿಗದಿತ ಹುದ್ದೆಗಳು ಖಾಲಿಯುಳಿಯಲಿಲ್ಲ ಎನ್ನುವಾಗ, ಸೇರಿಕೊಂಡ ಹೆಗ್ಗಣಗಳ ಸಂಖ್ಯೆ ಅದೆಷ್ಟು ದೊಡ್ಡದಿರಬಹುದು? ಇವನ್ನೆಲ್ಲ ‘ಕನ್ನಡ’ ಎಂಬ ಭ್ರಮಾಲೋಕದಲ್ಲಿ ಹುಟ್ಟು ಹಾಕಿದ್ದಲ್ಲದೆ, ನಿರ್ಲಜ್ಜವಾಗಿ ಪೋಷಿಸುವ ರಾಜಕಾರಣಿಗಳು ಎಂಥ ನೀಚರಿರಬೇಕು? ಈ ವಿವರಗಳ ಓದಿನ ಮುನ್ನೆಲೆಯಲ್ಲಿ ಅಂದು ಕಂಬಾರರು ನಮ್ಮೊಡನೆ ಸಂವಾದದ ಅವಕಾಶವನ್ನು ಯಾಕೆ ಬಳಸಿಕೊಳ್ಳಲಿಲ್ಲ ಎಂಬುದು ತುಂಬ ಸ್ಪಷ್ಟವಾಗಿದೆ.
ಬಿಳಿಮಲೆಯವರು ೧೯೯೮ರಿಂದ ಮೊದಲ ಹದಿನೇಳು ವರ್ಷ ದಿಲ್ಲಿ-ಅಮೆರಿಕನ್ ಆಗಿಯೂ ಮತ್ತೆ ದಿಲ್ಲಿ-ಕನ್ನಡಿಗನಾಗಿಯೂ ವೃತ್ತಿ ನಿರತರಾಗಿದ್ದಾರೆ. (ಸದ್ಯದಲ್ಲಿ ಅಲ್ಲೇ ನಿವೃತ್ತ ಜೀವನವನ್ನೂ ನಡೆಸುವಂತೆ ತೋರುತ್ತದೆ.) ಅವರು ದಿಲ್ಲಿಗೆ ಬರುವುದಕ್ಕೂ ಸುಮಾರು ಎಂಟು ವರ್ಷ ಮೊದಲೊಮ್ಮೆ (೧೯೯೦) ನಾನು ದೆಹಲಿ ಕರ್ನಾಟಕ ಸಂಘದ ಆಶ್ರಯದಲ್ಲಿ ಐದಾರು ದಿನ ತಂಗುವ ಅನಿವಾರ್ಯತೆಗೆ ಸಿಲುಕಿಕೊಂಡಿದ್ದೆ. (ನೋಡಿ:ಸೀಳೋಟದ ಕೊನೆಗೊಂದು ಸೀಳುನೋಟ) ೨೦೦೧ರಲ್ಲಿ ಇದೇ ದೆಹಲಿ ಕರ್ನಾಟಕ ಸಂಘ ನನ್ನ ತಂದೆ – ಜಿಟಿ ನಾರಾಯಣ ರಾವ್ಗೆ ಶಿವರಾಮ ಕಾರಂತ ಪ್ರಶಸ್ತಿ ಕೊಡುವುದಿತ್ತು. ನಾನು ಸಂಘದ ಅವ್ಯವಸ್ಥೆಯ ಅನುಭವದಲ್ಲಿ, ವೃದ್ಧ ತಂದೆ ತಾಯಿಯರಿಗೆ ರಕ್ಷಕನಾಗಿ ಜತೆಗೊಟ್ಟಿದ್ದೆ. ಬೆಳಿಗ್ಗೆ ದಿಲ್ಲಿ ತಲಪಿದ ನಮಗೆ ಸಂಘದ ಕಟ್ಟಡದ್ದೇ ಅತಿಥಿಗಳ ಕೋಣೆಯಲ್ಲಿ ವಾಸ ವ್ಯವಸ್ಥೆ ಮಾಡಿದ್ದರು. ಆ ಕೋಣೆ, ಒಟ್ಟಾರೆ ಕಟ್ಟಡ ಶಿಥಿಲ ಸ್ಥಿತಿಯಲ್ಲಿತ್ತು. ಅದರ ಹಿತ್ತಿಲ ತೆರೆದಂಗಳದಲ್ಲೇ ಶಾಮಿಯಾನ ಹಾಕಿ ಸಭಾವ್ಯವಸ್ಥೆ ನಡೆದಿತ್ತು. ಆದರೆ ಮಧ್ಯಾಹ್ನಕ್ಕಾಗುವಾಗ ಭೋರೆಂದು ಮಳೆ ಬಂದು ವ್ಯವಸ್ಥೆಗಳೆಲ್ಲ ತೊಳೆದು ಹೋಯ್ತು. (ಸಭೆಯನ್ನು ಮತ್ತೆ ತಮಿಳು ಸಂಘದ ಸುವ್ಯವಸ್ಥಿತ ಸಭಾಭವನಕ್ಕೆ ವರ್ಗಾಯಿಸಿ ನಡೆಸಿದರು, ಬಿಡಿ) ಆಗ ಇನ್ನೂ ದಿಲ್ಲಿಯವರಾಗುತ್ತಿದ್ದ ಬಿಳಿಮಲೆ, ಇವಕ್ಕೆಲ್ಲ ಸಾಕ್ಷಿ ಎನ್ನುವಂತೆ ಪುಟ್ಟ ಮಗನ ಸಹಿತ ಪ್ರೇಕ್ಷಕ ವರ್ಗದಲ್ಲಿದ್ದರು. ಮುಂದೊಂದು ದಿನ ಸಂಘದ ಆಡಳಿತ ವೈಫಲ್ಯ ಮತ್ತು ಕಟ್ಟಡದ ಶೈಥಿಲ್ಯ ಹೋಗಲಾಡಿಸಲೆಂದೇ ಬಿಳಿಮಲೆ ಸಂಘದ ಅಧ್ಯಕ್ಷ ಪದವಿಗೇರಿದ್ದರು, ಕಾರ್ಯ ಸಾಧಿಸಿದರು. ಇಂದು ಅದು ಬರಿಯ ಭವನವಲ್ಲ, ನಿಸ್ಸಂದೇಹವಾಗಿ ಬಂಟಮಲೆಯಿಂದ ಬೆಳೆದು ನಿಂದ ತೇನ್ ಸಿಂಗನ ಎವರೆಸ್ಟ್.
ದೆಹಲಿ ಕರ್ನಾಟಕ ಸಂಘದ ಪುನರುತ್ಥಾನದಿಂದ ತೊಡಗಿದಂತೆ, ಸಂಘದ ಮುಖವಾಣಿಯಾಗಿ ‘ಅಭಿಮತ’ ಎಂಬ ಮಾಸಿಕವೂ ಪ್ರಕಟವಾಗುತ್ತಿತ್ತು. (ಈಗಲೂ ಇರಬಹುದು, ನನಗೆ ತಿಳಿದಿಲ್ಲ.) ಬಿಳಿಮಲೆಯವರು ತಮ್ಮ ಆತ್ಮಕಥಾನಕದ ಕೆಲವು ತುಣುಕುಗಳನ್ನು ಅದರಲ್ಲೂ ಇತರೆಡೆಗಳಲ್ಲೂ ಪ್ರಕಟಿಸಿದ್ದನ್ನು ನಾನು ಓದಿ, ಸಾಮಯಿಕ ಕಿರು ಪ್ರತಿಕ್ರಿಯೆಗಳನ್ನು ಕಳಿಸಿದ್ದಿದೆ. ಆದರೆ ಇಲ್ಲಿ ಅವೂ ಸೇರಿಬಂದಂತೆ ಪೂರ್ಣ ಕಥನ ಓದಿಮುಗಿಸಿದಾಗ ಮೂಡಿದ ಧನ್ಯತೆಗೆ, ನನ್ನ-ಬಿಳಿಮಲೆ ಸಾಂಗತ್ಯಗಳನ್ನಿಷ್ಟು ಪೋಣಿಸುವಂತಾಯ್ತು. ಬಿಳಿಮಲೆಯವರ ವಿಸ್ತಾರ ಓದು, ಅಧ್ಯಾಪನ, ಲೋಕ ಸಂಚಾರ, ಸಾರ್ವಜನಿಕ ವ್ಯವಹಾರಗಳ ಸಾರವಿದು. ಜೀವನದುದ್ದಕ್ಕೆ ಡೈರಿ ಇಟ್ಟು, ಕರಾರುವಾಕ್ಕಾಗಿ ಗಂಟೆ ಮಿನಿಟಿನ ದಾಖಲೆ ಕೊಟ್ಟು, ಉಂಡದ್ದೇನು ಉರ್ಚಿದ್ದೆಷ್ಟು ಎಂಬ ಲೆಕ್ಕ ಪುಸ್ತಕವನ್ನೇ ಆತ್ಮ ಕಥೆ ಎಂದು ಭ್ರಮಿಸುವವರ ಸಂತೆಯಲ್ಲಿ ಕಾಗೆ ಮುಟ್ಟಿದ ನೀರು ತೀರಾ ವಿರಳ ಮಾಲು. ಸಂಕುಚಿತ ಬುದ್ಧಿ, ನಿರಾಧಾರ ಪೂರ್ವಾಗ್ರಹಗಳನ್ನು ಬದಿಗೊತ್ತಿ ಎಲ್ಲರೂ ಓದಲೇ ಬೇಕಾದ ಕೃತಿ – ಕಾಗೆ ಮುಟ್ಟಿದ ನೀರು.
ಚಿತ್ರಗಳ ಕೃಪೆ: ಬಿಳಿಮಲೆಯವರ ಫೇಸ್ ಬುಕ್ ಖಾತೆ
ಈ ಪುಸ್ತಕದ ಬಗ್ಗೆ ಕುಹಕಗಳು ಏಳುತ್ತಿರುವ ಈ ಸಂದರ್ಭದಲ್ಲಿ ಇಂತಹುದೊಂದು ಸಹೃದಯ ಲೇಖನ ಫೇಸ್ಬುಕ್ನಲ್ಲಿ ಪ್ರಕಟವಾಗ ಬೇಕಾದ ಜರೂರಿತ್ತು. ಅದನ್ನು ನೀವು ನಿರ್ಮಮವಾಗಿ ನೆರವೇರಿಸಿದ್ದೀರಿ. ಧನ್ಯವಾದಗಳು ಸರ್
ನಾವು ವಿದ್ಯಾರ್ಥಿಗಳಾಗಿದ್ದಾಗ ದಯಮಾಡಿ ಅತ್ರಿ ಬುಕ್ ಸೆಂಟರಿಗೆ ಹೋಗಿ. ಅವಕಾಶ ಇದ್ದಲ್ಲಿ ಪುಸ್ತಕಗಳನ್ನು ಖರೀದಿಸಿ. ಹೆಚ್ಚು ಹಣದ್ದಾದರೆ ಗ್ರಂಥಾಲಯದಿಂದ ಪಡೆಯಿರಿ. ಯಾವ ಕಾಲಕ್ಕೂ ಪುಸ್ತಕಗಳನ್ನು ಎಲ್ಲಿಂದಲೂ ಕದಿಯಬೇಡಿ ಪುಟಗಳನ್ನು ಹರಿದು ಹಾಕಬೇಡಿ ಅನ್ನುತ್ತಿದ್ದರು
ಪುಸ್ತಕ ಕುರಿತು… ಓದಲು ಉತ್ಸುಕತೆ ಮೂಡಿಸುವ ಬರಹ… ಆತ್ಮಕಥೆಯ ಬಗೆಗೆ ಆಪ್ತತೆಯಿಂದ ಕೂಡಿದ ತೌಲನಿಕ ಸಾಕ್ಷಿತ್ವವನ್ನು ನೀಡುವಲ್ಲಿ ಪರಿಣಾಮಕಾರಿ ಅಭಿಪ್ರಾಯವನ್ನು ಹೊಂದಿರುವ ನುಡಿಗಳು.