(ವನ್ಯಪುನರುತ್ಥಾನದಲ್ಲೊಂದು ಸಣ್ಣ ಪ್ರಯೋಗ ಭಾಗ ೨)
“ಮಂಜೂ, ಗುಂಡುಕಟ್ಟೆ ಬಂತು” ಕಂಡಕ್ಟರ್ ಬಿಗಿಲು ಹೊಡೆದು ಹೇಳಿದ. ಒಂದು ಹೋಟ್ಲು, ಕಾಲುಕಟ್ಟಿದ ಒಂಜಿ ಕಟ್ಟದ ಕೋರಿ, ಒಕ ಡಾಕ್ಟ್ರು, ಗೋಳಿಮರದ ಮರೆಯಲ್ಲಿ ಕಸಾಯಿ ಅಡ್ಡೆ-ಮೀನ ಕಟ್ಟೆ, ತಟ್ಟಿ ಜೋಪಡಿಯಂತೆ ಗಡಂಗು, ನಾಲ್ಕು ಗುಟ್ಕಾಮಾಲಾಲಂಕೃತ ಸರ್ವಸರಕಿನ ಅಂಗಡಿ, ಎಂಟು ಮನೆ ಮತ್ತೆ ಬೀಡಾಡಿ ಜನ, ಜಾನುವಾರು, ನಾಯಿ. ಅತ್ತ ಎರಡು ಮಿನಾರು, ಇತ್ತ ಸ್ವಲ್ಪ ತಗ್ಗಿನಲ್ಲಿ ಪರ್ಯಾಯವಾಗಿ ಹಸಿರು, ಕೇಸರಿ ಪತಾಕೆ ಶೋಭಿಸುವ ಸಣ್ಣ ಮೈದಾನ ಹೀಗೆ ಮೋಂಟುಗೋಳಿ ಪೇಟೆ ಮುಗೀತು ಎನ್ನುವಲ್ಲಿ ಇಳಿದದ್ದಾಯ್ತು. ಬೋಳೋಬೋಳು ಪದವು, ರಣಗುಡುವ ಬಿಸಿಲಿನಲ್ಲಿ, ನಾಲ್ಕು ಮುಳ್ಳು ಪೊದರು, ಸುಟ್ಟುಳಿದ ಮುಳಿಕರಿ ಬಿಟ್ಟರೆ ಎಲ್ಲವೂ ಬೆಂಗಾಡಿನದೇ ರೂಪ! ತುಸುವೇ ತಗ್ಗುದಿಣ್ಣೆಗಳ ಮುರಕಲ್ಲ ಹರಹು – ಸುಟ್ಟು ರಸಸೋತ ಜೇನ ಎರಿಯದ್ದೇ ರೂಪ. ಮತ್ತೆ ಎಲ್ಲಿ ನೋಡಿದರೂ ಅಳತೆಗೆ ಕಡಿದಿಟ್ಟ ಕಲ್ಲ ಒಟ್ಟಣೆ, ನಕ್ಕರಿಕಲ್ಲಿನ ರಾಶಿ, ಹರಕು ಡಾಮರಿನಂಚಿನಲ್ಲಿ ಹುಗಿಯುವ ಚರಳು, ಪದವಿನ ಸುಳಿಗಾಳಿಗೇಳುವ ದೂಳು ಎಲ್ಲಾ ಮುರಮಯ! ಕೈಯಲ್ಲಿ ಹಿಡಿದ ಹದಿನಾರು ಪುಟದ ಕರೆಯೋಲೆಯೇನೋ ‘ಬನ್ನಿ ಅಭಯಾರಣ್ಯಕೆ’ ಎಂದರೂ ನಕ್ಷೆ ಸರಿಯಿದ್ದೀಯಾ ಎಂದರೂ ಪುಷ್ಟಿಕೊಡುವಂತೆ ಹಸಿರು, ತಣ್ಪು ಕಾಣುತ್ತಿರಲಿಲ್ಲ. ಕತ್ತು ಹೊರಹೊರಳಿಸುವಾಗ ನಾಲ್ಕು ಹೆಜ್ಜೆ ಹಿಂದೆ, ದಾರಿ ಬದಿಯಲ್ಲೊಂದು ಬ್ಯಾನರು. ಅರ್ಧಂಬರ್ಧ ಕಟ್ಟಿಬಿಟ್ಟ ಕಟ್ಟಡ ಒಂದರ ತುಕ್ಕಿನ ಸರಳಿಗೂ ಗಲಗಲ ಎನ್ನುವ ಅಕೇಸಿಯಾ ಮರದ ರೆಂಬೆಗೂ ಮೈತ್ರಿ ಮಾಡಿ ಕಟ್ಟಿಕೊಂಡಿತ್ತು ‘ಅಭಯಾರಣ್ಯಕ್ಕೆ ದಾರಿ.’
ಮುರಕಲ್ಲ ಮೋಟುಗೋಡೆಯ ನಡುವೆ ಮಣ್ಣದಾರಿ. ನೂರೇ ಅಡಿಯಂತರದ ಕೊನೆಗೊಂದು ಉರುವಾಲು. (ಆಚೀಚೆ ಬದಿಯಲ್ಲಿ ನಿಶ್ಚಿತ ಅಂತರದ ತೂತವಿದ್ದ ಹಲಿಗೆ ನಿಲ್ಲಿಸಿ, ದಾರಿಯಗಲಕ್ಕೆ ನಿಲ್ಲಬಲ್ಲ ಉದ್ದನ್ನ ಗಳು ತುರುಕಿಟ್ಟಾ ‘ಗೇಟು’). ಮುಂದುವರಿದರೆ ಬಲಕ್ಕೆ ಎರಡು ಕೊಕ್ಕೋ ಒಂದು ಬೌವೌ ಮನೆ (ಸಣ್ಣ ಒಕ್ಕಲು – ಭಂಡಾರಿ ಮನೆ) ಮತ್ತೆ ಬಲಕ್ಕಷ್ಟೇ ಬಂದ ಮುರಕಲ್ಲ ಗೋಡೆ ಅಭಯಾರಣ್ಯದ್ದೇ ಆವರಣ. ಖಾಲೀ ಆಕಾಶಕ್ಕೆ ಆವರಣ ಕಟ್ಟಿ ಗೇಟು ಹಾಕಿದಂತೆ ಎದ್ದು ಕಾಣುವ ಎರಡು ಕುಂದ, ಗಟ್ಟಿ ಕಬ್ಬಿಣದ ಗೇಟ್. ಅದರ ಮೇಲಿನ ಬರಹ ‘ಅಭಯಾರಣ್ಯ’ ಇರದಿದ್ದರೆ ದಾರಿ ತಪ್ಪಿದ ಭ್ರಮೆ ಯಾರಿಗೂ ಬರುವಂಥ ರಿಕ್ತತೆ ಮುಂದುವರಿದಿತ್ತು! ಒಳಗೆ ಓರೆಯ ದಾರಿಯಲ್ಲಿ ಐವತ್ತೇ ಹೆಜ್ಜೆ ಕಾಡ್ಮನೆಗೆ. ಹಾಂ, ಅಲ್ಲಿ ಜೀವ ಆಡುತ್ತಿತ್ತು.
ಕುಟುಂಬದವರು ಹಿಂದಿನ ರಾತ್ರಿಯೇ ಎಡೆಂಬಳೆ ಮನೆಯಲ್ಲಿ ಸೇರಿದ್ದರೂ ಮುಖ್ಯ ಮೂವರು (ಅಶೋಕ, ದೇವಕಿ ಮತ್ತು ಅಭಯ) ಚಿಮಣಿ ದೀಪದ ಬೆಳಕಿನ ಬಲದಲ್ಲಿ ಕಾಡ್ಮನೆಯಲ್ಲೇ ಉಳಿದುಕೊಂಡಿದ್ದರು. ಹೆಸರಿನಷ್ಟು ಅನಾಗರಿಕತೆ ಮನೆಯೊಳಗೇನೂ ಇಲ್ಲ. ಸ್ವಚ್ಛ ಕಕ್ಕಸು, ಪರಿಷ್ಕೃತ ಸೌದೆ ಒಲೆಯ ಬಿಸಿನೀರ ಹಂಡೆಯಿದ್ದ ಬಚ್ಚಲು ಮತ್ತು ಸರಳ ಗ್ಯಾಸ್ ಒಲೆ ಹಾಗೂ ಮಿತ ಪಾತ್ರೆಪರಡಿಯೊಡನೆ ಸಜ್ಜುಗೊಂಡಿದ್ದ ಅಡುಗೆಮನೆ ಇವರ ಬೆಳಗನ್ನು ಸಮರ್ಥವಾಗಿಯೇ ಪೂರೈಸಿತ್ತು. ಮನೆಯ ಎದುರು ಮತ್ತು ಬಲದ ಅಂಗಳಗಳೆರಡೂ ಮನೆ ಕಟ್ಟುವ ಕಾಲದ ಚಟುವಟಿಕೆಗಳಿಂದ ಬೋಳಾಗಿತ್ತು. ಅಲ್ಲಿನ ಮುಳ್ಳು ಕಲ್ಲನ್ನಷ್ಟು ಹಸನುಗೊಳಿಸಿ, ಸಣ್ಣಪುಟ್ಟ ತಗ್ಗುತೆಮರನ್ನು ಮಟ್ಟಮಾಡಿದ್ದಾಗಿತ್ತು. ಎದುರಂಗಳದ ಎಡ ಕೊನೆಯಲ್ಲಿ ಪುಟ್ಟದಾಗಿ ಗಟ್ಟಿ ಮಾಡಿದ್ದ ಮಣ್ಣದಿಬ್ಬವೇ ವೇದಿಕೆ. ಎರಡೂ ಅಂಗಳಕ್ಕೆ ಶಾಮಿಯಾನ, ನೂರಿನ್ನೂರು ಪ್ಲ್ಯಾಸ್ಟಿಕ್ ಕುರ್ಚಿ. ಹಳ್ಳಿಮೂಲೆಯಾದರೇನು ಸಭೆ ಸಾಕಷ್ಟು ದೊಡ್ಡದೇ ನಿರೀಕ್ಷಿತವಾದ್ದಕ್ಕೇ ವಿದ್ಯುಜ್ಜನಕ ತರಿಸಿ ಮೈಕಿನ ವ್ಯವಸ್ಥೆಯೂ ಸಜ್ಜಾಗಿತ್ತು. ತೊಕ್ಕೊಟ್ಟಿನ ಬೃಂದಾವನ ಹೋಟೆಲಿನವರು ಬೆಳಿಗ್ಗೆ ಬೇಗ ಬಂದವರಿಗೆ ಉಪಾಹಾರ, ಮಧ್ಯಾಹ್ನಕ್ಕೆ ಊಟ ಮತ್ತು ಸಂಜೆಗೆ ಉಪಾಹಾರಗಳ ನಿರ್ವಹಣೆ ಸರಳ ಸಂಭ್ರಮಕ್ಕೆ ಕಳೆಗಟ್ಟುವಂತಿತ್ತು. ಅತ್ರಿ ಮೈಸೂರಿನದೇ ಇರಲಿ, ಮಂಗಳೂರಿನದೇ ಇರಲಿ ಸಾರ್ವಜನಿಕ ಪ್ರದರ್ಶನದ ವ್ರತಪೂಜಾದಿಗಳನ್ನೊಂದೂ ನಂಬದ ಮತ್ತು ಮಾಡದ ಕುಟುಂಬ! ಹಾಗಾಗಿ ಕರೆಯೋಲೆ ಸಿಕ್ಕ ಸಂಬಂಧಿಕರಿಗೆ ಕುತೂಹಲ, ಸಂಭ್ರಮಗಳ ಭಾಗವಹಿಸಿಕೆಯನ್ನು ಅನಿವಾರ್ಯ ಮಾಡಿತ್ತು. ಇನ್ನು ಪರಿಸರ, ಚಾರಣ ಚಟುವಟಿಕೆಗಳಲ್ಲಿ ಭಾಗಿಗಳಾದವರು, ದೈಹಿಕವಾಗಿ ಹಿಂದುಳಿದರೂ ಪ್ರಕೃತಿಯೊಡಣೆ ಮಾನಸಿಕ ಅನುಸಂಧಾನದಲ್ಲಿ ಅತ್ಯುತ್ಸಾಹಿಗಳು ದೀಪ್ತ ಕಣ್ಣುಗಳೊಡನೆ ಕರ್ತವ್ಯ ಎಂಬಂತೇ ಬಂದಿದ್ದರು. ಹಾಗೂ ಬರಲಾಗದ ದೂರ, ಅನ್ಯಕಾರ್ಯ ಒತ್ತಡಗಳವರು ಮಾಡಿದ ದೂರವಾಣಿ ಕರೆ, ಬರೆದ ಪತ್ರ, ಲೇಖನ ಇಲ್ಲಿ ಉದ್ಧರಿಸತೊಡಗಿದರೆ ಸುನಾಮಿಗೆ ಸಿಕ್ಕ ಜಪಾನೀ ವಾಹನ ಸಮ್ಮರ್ದದಂತಾದೀತು ಬ್ಲಾಗ್ ಓದುಗ ಬಳಗ!
ಅಪರಾಹ್ನ ಎರಡು ಗಂಟೆಗೆ ಸರಿಯಾಗಿ ವೇದಿಕೆಯ ಮೇಲಿನ ನಾಲ್ಕೇ ಮಾತು “ಎಲ್ಲರಿಗೂ ನಮಸ್ಕಾರ, ಆದರದ ಸ್ವಾಗತ. ಈಗ ಆಶಯ ಗೀತೆ – ಶ್ರೀ ಸುಬ್ರಾಯ ಚೊಕ್ಕಾಡಿಯವರಿಂದ”. ಕರೆಯೋಲೆ ಓದಿಯೇ ಬಂದವರಿಗೆ ತಿಳಿದೇ ಇತ್ತು – ಈ ಸುಪ್ರಸಿದ್ಧ ಸಾಹಿತಿ ನಿವೃತ್ತ ಶಾಲಾ ಅಧ್ಯಾಪಕ, ಲೇಖಕ. ಇವರ ಮುಖ್ಯ ಅಭಿವ್ಯಕ್ತಿ – ಕಾವ್ಯ. ಚೊಕ್ಕಾಡಿ ಹಳ್ಳಿ ಮೂಲೆಯ ಸುಬ್ರಾಯಮಾಸ್ಟ್ರಿಗೆ ಆರ್ಥಿಕ ದೊಡ್ಡಸ್ತಿಕೆ ಎಂದೂ ಇರಲಿಲ್ಲವಾದರೂ ತನ್ನ ಗ್ರಾಮೀಣ ಪರಿಸರದಲ್ಲಿ ಸಾಹಿತ್ಯಾಸಕ್ತಿಯನ್ನು ಪಸರಿಸುವಲ್ಲಿ ಇವರ ‘ಸುಮನಸಾ ವಿಚಾರವೇದಿಕೆ’ ಬಲು ದೊಡ್ಡ ಸಂಪತ್ತು. ಗೋಷ್ಠಿಗಳಲ್ಲಿ ಸುಬ್ರಾಯರ ಕಂಚಿನಕಂಠ ಸ್ವರಚಿತ ಕವಿತೆಗಳನ್ನು ಅರ್ಥಪುಷ್ಟಿಯೊಡನೆ ರಾಗ ಭಾವ ಪೂರಕವಾಗಿಯೂ ಪ್ರಸ್ತುತಪಡಿಸುವುದು ಕೇಳಿಯೇ ಆನಂದಿಸಬೇಕು. ಅಭಯಾರಣ್ಯದ ಸಂದರ್ಭಕ್ಕೆ ಹೊಂದುವಂತೆ ಇವರು ಬರೆದು ತಂದ ಕವಿತೆ ‘ನಮಿಸುವೆನು ತಾಯೆ, ಹಸಿರುಡೆಯ ಮಾಯೆ’ ಕೇಳಿ ಹಿರಿಯ ಸಾಹಸೀ ಕೃಷಿಕ ಎ.ಪಿ. ತಿಮ್ಮಪ್ಪಯ್ಯ, ಅಷ್ಟೇನೂ ದೊಡ್ಡ ಸಾಹಿತ್ಯ ಓದಿಕೊಂಡವರಲ್ಲದಿದ್ದರೂ ಕಣ್ಣು ಮಂಜುಗಟ್ಟಿ, ಅವರ ಕಾಲಿಗೇ ಎರಗುವಷ್ಟು ಭಾವದೀಪ್ತರಾಗಿದ್ದರು! ಸಭೆಯ ರೋಮಾಂಚನವೂ ಖಂಡಿತಾ ಕಡಿಮೆಯದ್ದಲ್ಲ. ಈ ಕವನದ ಲಿಖಿತ ಪ್ರತಿಯನ್ನು ಮುಂದಾಗಿಯೇ ಪಡೆದು, ರಾಗಬದ್ಧಗೊಳಿಸಿ ತಂದಿದ್ದ (ಮಣಿಪಾಲದ) ಹಿಂದೂಸ್ತಾನೀ ಯುವ ಗಾಯಕ ಪ್ರತಿಭಾವಂತ ರವಿಕಿರಣರ ಪ್ರಸ್ತುತಿ, ‘ಮಹಾಕಾವ್ಯ’ ಗಾತ್ರದಿಂದಲ್ಲ, ಅಭಿವ್ಯಕ್ತಿಯ ಅನಂತ ಸಾಧ್ಯತೆಯಿಂದ ಎನ್ನುವುದಕ್ಕೊಳ್ಳೆ ಉದಾಹರಣೆಯೇ ಆಯ್ತು. ಮೂಲದಲ್ಲಿ ಅಭಯಾರಣ್ಯದ ಆತಿಥೇಯ, ಎಲ್ಲಾ ಗಾನಪ್ರಸ್ತುತಿಗಳನ್ನು ಪತ್ರಕರ್ತ, ಲೇಖಕ, ಕವಿ, ಚಿತ್ರಕಾರ, ಗಾಯಕ, ಯಕ್ಷಗಾನ ಭಾಗವತ, ಹಲವು ವಾದ್ಯನುಡಿ ನಿಪುಣ ಎಂದಿತ್ಯಾದಿ ಚೆನ್ನಾಗಿಯೇ ಪರಿಚಿತರಿದ್ದ ಗುರುರಾಜ ಮಾರ್ಪಳ್ಳಿಯವರಿಂದ ಕೇಳಿಕೊಂಡಿದ್ದ. ಆದರೆ ಅವರೇ ರವಿಕಿರಣರನ್ನು ಮುಂದೆ ನಿಲ್ಲಿಸಿ, ತಾವು ಬಾನ್ಸುರಿ ಸಹವಾದನವನ್ನು ಒದಗಿಸಿದ್ದು ಸಭಿಕರನ್ನು ನಿಸ್ಸಂದೇಹವಾಗಿ ರಸಾಸ್ವಾದನೆಯ ಗಿರಿಶೃಂಗಗಳಲ್ಲೇ ಆಡಿಸಿತು.
‘ಸುರಿಯುವ ನೀರನ್ನು ಹಿಡಿದಿಟ್ಟುಕೊಳ್ಳಿ, ಓಡುವ ನೀರನ್ನು ನಡೆಸಿ, ನಡೆಯುವ ನೀರನ್ನು ತೆವಳಿಸಿ ಇಂಗಿಸಿ’ ಶ್ರೀಪಡ್ರೆ ಆ ಕಾಲದಲ್ಲಿ ಗಟ್ಟಿಯಾಗಿ ಹೇಳುತ್ತಿದ್ದ ಮಾತು. ಶ್ರೀಪಡ್ರೆ ಮೂಲತಃ ಸಣ್ಣ ಕೃಷಿಕ. ಮತ್ತೆ ಹವ್ಯಾಸಿ ಪತ್ರಕರ್ತನ ನೆಲೆಯಲ್ಲಿ ‘ಮಾಡಿದರು, ಹೇಳಿದರು’ ಇತ್ಯಾದಿ ಒಕ್ಕಣೆಗಳನ್ನು ಮೀರಿ ಗ್ರಾಮೀಣ ಆಗುಹೋಗುಗಳನ್ನು ಅನುಭವಿಸಿ ಗಟ್ಟಿ ಧ್ವನಿಯಾದರು. ಇಂಚುಪಟ್ಟಿ ಹಿಡಿದ ವರದಿಗಾರನ ನಿರಪೇಕ್ಷತೆಯಲ್ಲುಳಿಯದೆ ಚಳವಳಿಗಳ ನೇತಾರನೇ ಆದರು. ‘ವಾಣೀನಗರದ ಮಾಣಿ’ ಇಟ್ಟ ಒಂದೊಂದು ಹೆಜ್ಜೆ (ಕೃಷಿಕನ ಕೈಗೆ ಲೇಖನಿ ಅಥವಾ ಅಡಿಕೆ ಪತ್ರಿಕೆ, ಜಲಸಂರಕ್ಷಣೆ, ಎಂಡೋಸಲ್ಫಾನ್ ಪೀಡೆ ಇತ್ಯಾದಿ) ತ್ರಿವಿಕ್ರಮ ಗುರುತು. ಅಂದು ಅಭಯಾರಣ್ಯದಲ್ಲಿ ಪ್ರಾಕೃತಿಕ ಸಮೃದ್ಧಿಯ ವಿಕಾಸಕ್ಕೆ ‘ಅಭಯಾರಣ್ಯ’ಗಳ ಸರಣಿಯೇ ಬರಬೇಕೆಂದು ಇವರು ಕೊಟ್ಟ ಸೋದಾಹರಣ ಮಾತುಗಳು ಬಂಜೆಯಾಗದು.
“ಯಾವ ಮೋಹನ ಮುರಳಿ ಕರೆಯಿತೋ. . .” ರವಿಕಿರಣ್ ಮಾರ್ಪಳ್ಳಿ ಜೋಡಿ ಪ್ರಸ್ತುತಿಯ ಬೆನ್ನಿಗೆ ಮದ್ರಾಸ್ ವಿವಿನಿಲಯದ ವಿಶ್ರಾಂತ ಪ್ರಾಧ್ಯಾಪಕ ಕುಶಾಲಪ್ಪ ಗೌಡರು ಜಿ.ಟಿ. ನಾರಾಯಣ ರಾಯರ ಹೊಸ ಪುಸ್ತಕ ‘ಸಪ್ತಸಾಗರದಾಚೆಯೆಲ್ಲೋ’ ಲೋಕಾರ್ಪಣಗೊಳಿಸಿ ಅವರ ಮೆಚ್ಚು ನುಡಿಗಳನ್ನಾಡಿದರು. ಕವಿ ಅಡಿಗರ ನುಡಿಗಳ ವಿಷಾದ ಕಳಚಿ, ಸಮ್ಮಾನದ ತೊಡವು ತೊಡಿಸಿದಾಗ ಜಿಟಿನಾ ಕಂಡ ಮೂರ್ತಿ – ಭಾರತ ಸಂಜಾತ, ಭೌತಶಾಸ್ತ್ರದ ಶೃಂಗವಿಹಾರಿಯಾದರೂ (ನೊಬೆಲ್ ಪುರಸ್ಕೃತ) ಬಹುಜನ ಅಜ್ಞಾತ ಸುಬ್ರಹ್ಮಣ್ಯನ್ ಚಂದ್ರಶೇಖರ್! ಶುದ್ಧ ಖಭೌತ ವಿಜ್ಞಾನವಲಯಗಳಲ್ಲೂ ತೀರಾ ಉಪೇಕ್ಷಿತ ಮೂಲೆಯಲ್ಲೆಲ್ಲೋ ತಪಸ್ಸು, ಸಿದ್ಧಿಗಳಲ್ಲೇ ಪೂರ್ಣ ತೃಪ್ತರಾಗಿದ್ದ ಎಸ್.ಚಂದ್ರಶೇಖರ್ ವೈಜ್ಞಾನಿಕ ಜೀವನ ಚರಿತ್ರೆ ಬರೆಯುವ ಉಮೇದು ೧೯೯೦ರ ದಶಕದ ಮೊದಲ ಭಾಗದಲ್ಲಿ ಜಿಟಿನಾಗೆ ಬರುತ್ತದೆ. ಸುಚಂ ಚಿಕ್ಕಪ್ಪ, ಸ್ವತಃ ನೊಬೆಲ್ ಪುರಸ್ಕೃತ, ಸಿವಿ ರಾಮನ್ನರ ಕುರಿತು ಇದೇ ಉತ್ಸಾಹದಲ್ಲಿ ಹಿಂದೊಮ್ಮೆ ಬೆನ್ನು ಹಿಡಿಯ ಹೋಗಿ ‘ಪ್ರಥಮ ಚುಂಬನ ದಂತಭಗ್ನ’ವಾದದ್ದು ಜಿಟಿನಾ ಮರೆತಿರಲಿಲ್ಲ. ಆದರೆ ಅಂದು ‘ಒಂಟಿಗಾಲ ಮೇಲೆ ನಿಂತು, ನೀರು ಆಹಾರವನ್ನೂ ಬಿಟ್ಟು’ ‘ರಾಮನ್ನಾಯಣ’ (ಓದಿ ನೋಡಿ: ವಿಜ್ಞಾನ ಸಪ್ತರ್ಷಿಗಳು, With great minds) ಸಾಧಿಸಿದ ಸಾತ್ವಿಕ ಕೆಚ್ಚು ಜಿಟಿನಾರಲ್ಲಿ ಹಿಂಗಿರಲಿಲ್ಲ. ಶಿಕಾಗೋ ವಿವಿನಿಲಯದ ಸುಚಂ ಏಕಾಂತ ಭಂಗ ಮಾಡಿ, ಒಲಿಸಿಕೊಂಡು, ‘ಸುಬ್ರಹ್ಮಣ್ಯನ್ ಚಂದ್ರಶೇಖರ್’ ಎಂದೇ ಹೆಸರಿಸಿದ ಅವರ ಜೀವನ ಸಾಧನೆಯನ್ನು ಕನ್ನಡದಲ್ಲಿ ತಂದೇ ಬಿಟ್ಟರು. (೧೯೯೫ ರ ಪ್ರಕಟಣೆ. XXIV + ೪೦೮ ಪುಟಗಳು + ೮ ವರ್ಣ ಮತ್ತು ೧೪ ಕಪ್ಪು ಬಿಳುಪು ಚಿತ್ರಗಳು + ರೇಖಾಚಿತ್ರಗಳು + ಚಂದ್ರಶೇಖರರ ಹಸ್ತಾಕ್ಷರದ ಪ್ರತಿಕೃತಿ. ಅಷ್ಟಾಗಿಯೂ ಬೆಲೆ ಕೇವಲ ರೂ ಐವತ್ತೈದು ಮಾತ್ರ.)
ಜಿಟಿನಾ ಎರಡನೇ ಮಗ – ಆನಂದವರ್ಧನ, ಅಮೆರಿಕಾದ ಪ್ರಜೆಯಾದರೂ ಪ್ರಜ್ಞೆ ಭಾರತೀಯವೇ. ಸಹಜವಾಗಿ ತನ್ನ ಬಂಧುಗಳನ್ನು ಅದರಲ್ಲೂ ಮುಖ್ಯವಾಗಿ ಅಪ್ಪಮ್ಮರನ್ನು ತನ್ನಲ್ಲಿಗೆ ಕರೆಸಿಕೊಳ್ಳಬೇಕೆಂದು ಪ್ರಯತ್ನ ನಡೆಸಿಯೇ ಇದ್ದ. ‘ದೇವರು ನನ್ನ ಪ್ರಥಮ ವೈರಿ, ಪ್ರಯಾಣ ಎರಡನೇದು’ ಎಂದೇ ಸಾರುತ್ತ ಬಂದಿದ್ದರು. ಸುಬ್ರಹ್ಮಣ್ಯನ್ ಚಂದ್ರಶೇಖರ್ ಪುಸ್ತಕ ಪ್ರಕಟವಾದ ಮೇಲೆ ಹೊಸ ಹೊಳಹು ಕಂಡಿತು. ಆನಂದನಿಗೆ ಪತ್ರ ಹಾಕಿದರು ‘ಸುಚಂ ಭೇಟಿ ಮತ್ತು ಸಂದರ್ಶನ ಸಾಧ್ಯತೆಯೊಡನೆ ನಾನಲ್ಲಿಗೆ ಬರಲು ಸಿದ್ಧ.’ ನೇರ ಸುಚಂಗೂ ಒಂದು ಪತ್ರ. ಸುಚಂ ಪರೋಕ್ಷವಾಗಿ ಒಡ್ಡಿದ ಕಠಿಣ ಪರೀಕ್ಷೆಗಳನ್ನುತ್ತರಿಸಿಯೇ ಜಿಟಿನಾ ಮೊದಲ ಪುಸ್ತಕ ತಂದಿದ್ದರಲ್ಲವೇ. ಹಾಗಾಗಿ ಈ ಬಾರಿ ‘ಭಕ್ತ ಪರಾಧೀನ ದೇವ’ ಎಂಬಂತೆ ಜಿಟಿನಾ ದಂಪತಿಯ ಅಮೆರಿಕಾ ಪ್ರವಾಸಕ್ಕೆ ಎಲ್ಲ ಕೂಡಿಬಂತು. ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರನ್ನು ಶಿಕಾಗೋ ವಿಶ್ವವಿದ್ಯಾನಿಲಯದ ಅವರ ಕಛೇರಿಯಲ್ಲಿ, ಮನೆಯಲ್ಲಿ (ಒಟ್ಟಾರೆ ಎರಡು ದಿನ) ಸುದೀರ್ಘ ಸಂದರ್ಶಿಸುವ ಭಾಗ್ಯ ಇವರಿಗೊದಗಿತು. ಸಂದರ್ಶನದ ಎಲ್ಲಾ ವಿವರಗಳನ್ನು ಕೇಂದ್ರವಾಗಿಟ್ಟುಕೊಂಡು ಹರಿದ ಪ್ರವಾಸ ಕಥನ ‘ಸಪ್ತಸಾಗರದಾಚೆಯೆಲ್ಲೋ. . .’ (viii + ೩೨೮ ಪುಟಗಳು, ಅಸಂಖ್ಯ ಚಿತ್ರಗಳೊಂದಿಗೆ ಬೆಲೆ ಕೇವಲ ರೂ ಅರುವತ್ತು ಮಾತ್ರ) ವಿಜ್ಞಾನ, ಪ್ರವಾಸಕಥನ, ಆತ್ಮಕಥೆಗಳು ಮುಪ್ಪುರಿಗೊಂಡ ಅನನ್ಯ ಕೃತಿ ಸಪ್ತಸಾಗರದಾಚೆಯೆಲ್ಲೋ. . .
ಸಪ್ತಸಾಗರದಾಚೆಯೆಲ್ಲೋ ಪ್ರಕಟಗೊಳ್ಳುವ ಸುಮಾರಿಗೇ ಮೈಸೂರಿನ ಇಂಗ್ಲಿಷ್ ಸಂಜೆ ಪತ್ರಿಕೆ – ಸ್ಟಾರ್ ಆಫ್ ಮೈಸೂರು (ಸಂಪಾದಕ – ಕೆ.ಬಿ.ಗಣಪತಿ, ಜಿಟಿನಾರ ಹಳಗಾಲದ ಶಿಷ್ಯ) ಒತ್ತಾಯಿಸಿ ಇದೇ ಪ್ರವಾಸಾನುಭವವನ್ನು ಸ್ವತಂತ್ರವಾಗಿ ಇಂಗ್ಲಿಶಿನಲ್ಲೂ (ಸಿನಿ-ಕರು ಹೇಳುವಂತೆ ಡಬ್ಬಿಂಗ್ ಅರ್ಥಾತ್ ಅನುವಾದವಲ್ಲ) ಧಾರಾವಾಹಿಯಾಗಿ ಪ್ರಕಟಿಸಿದರು. ಕಾಲಾನುಕ್ರಮದಲ್ಲಿ (೧೯೯೯) ಅದೂ ಪುಸ್ತಕ ರೂಪದಲ್ಲಿ ಪ್ರಕಟವಾಯ್ತು. Crossing the Dateline viii+ 144 pages, illustrated ರೂ ನಲವತ್ತು ಮಾತ್ರ.
೧೯೯೭ರಲ್ಲಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ಮಹತ್ಸಾಧನೆಯ ಬಹುದೊಡ್ಡ ಭಾಗವಾದ ಕೃಷ್ಣವಿವರಗಳ ಕುರಿತೇ ಜಿಟಿ ನಾರಾಯಣ ರಾಯರಿಂದ ವಿಶೇಷ ಉಪನ್ಯಾಸವನ್ನು ಹಾಸನದ ಎವಿಕೆ ಮಹಿಳಾ ಕಾಲೇಜು ವ್ಯವಸ್ಥೆ ಮಾಡಿತು. ಉತ್ತರೋತ್ತರವಾಗಿ ಅದನ್ನು ಜಿಟಿನಾ ಅವರಿಂದಲೇ ಪರಿಷ್ಕರಿಸಿ ಪಡೆದು ಪುಸ್ತಕ ರೂಪದಲ್ಲೂ ಪ್ರಕಟಿಸಿ, ಮೂರೂವರೆ ಸಾವಿರ ಪ್ರತಿಗಳನ್ನು ತಾನೇ ವಿತರಿಸಿತು. (ಕೃಷ್ಣವಿವರಗಳು viii+ ೨೬೪ ಮತ್ತು ೨೨ ಚಿತ್ರಗಳು ರೂ ಮೂವತ್ತು ಮಾತ್ರ) ಅದರಲ್ಲಿನ ಲೇಖಕನ ಅರಿಕೆಯ ನಾಲ್ಕು ವಾಕ್ಯ. “ಮೂರು ಸ-ರಸಯಾತ್ರೆಗಳ ಸಂಯುಕ್ತ ಪಾಕ ಈ ಪುಸ್ತಕ. ೧. ಬೆಳಕಿನ ಮೇಲೆ ಬೆಳಕು ಬೀರಲು ಮಾಡಿರುವ ಪ್ರಯತ್ನವಿದು. ೨. ಪ್ರೊ|ಎಸ್. ಚಂದ್ರಶೇಖರ್ ಜೊತೆ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಆತ್ಮೀಯ ಸಂವಾದಲೀನನಾಗಲು ಒದಗಿದ ಅಪೂರ್ವ ಅವಕಾಶ. ೩. ಎವಿಕೆ ಮಹಿಳಾಕಾಲೇಜು ಅಂದಾಜು ಮೂರುಸಾವಿರ ‘ವಿಕಿರಣಪಟು’ ವಿದ್ಯಾರ್ಥಿನಿ, ಗುರು ಮತ್ತು ಪ್ರೇಕ್ಷಕವೃಂದಕ್ಕೆ ‘ಕೃಷ್ಣವಿವರಗಳು’ ಕುರಿತು ಉಪನ್ಯಾಸವಿತ್ತ ವಿಶೇಷ ಪರಿತೋಷ.” ಆಗ ಅತ್ರಿ-ಜಿಟಿನಾ ಸಹಯೋಗದ ಸುಚಂ ಗ್ರಂಥ ಸರಣಿಯಲ್ಲಿ ಇದನ್ನೂ ವಿಸ್ತೃತ ಕನ್ನಡ ಸಾರಸ್ವತ ಲೋಕಕ್ಕೆ ತಲಪಿಸಲೆಂದು ಅತ್ರಿ ಒಂದೂವರೆ ಸಾವಿರದಷ್ಟು ಹೆಚ್ಚುವರಿ ಪ್ರತಿಗಳನ್ನು ಮಾಡಿಸಿಕೊಂಡಿತು. ಆದರೆ ಈ ಎಲ್ಲಾ ಪ್ರಕಟಣೆಗಳ ಕುರಿತು ೨೦೧೧ರಲ್ಲಿ ಅಂದರೆ ಕನಿಷ್ಠ ಹದಿನಾಲ್ಕು ವರ್ಷಗಳ ಮೇಲೆ, ಪ್ರಕಾಶಕನ ವಿಷಾದದ ನುಡಿ ಕೇಳಿ, “ಆ ನಾಲ್ಕೂ ಪುಸ್ತಕಗಳ ಸಾಕಷ್ಟು ಪ್ರತಿಗಳು ಬಣ್ಣ ಕಳೆದುಕೊಳ್ಳುತ್ತಾ ರಟ್ಟು ಕಳಚಿಕೊಳ್ಳುತ್ತಾ ಇನ್ನೂ ನನ್ನಲ್ಲಿ ಉಳಿದಿವೆ. (ಬಿಡಿ ಪುಸ್ತಕ ವ್ಯಾಪಾರಿ ಮತ್ತು ಕನ್ನಡ ಓದುಗರ ಬಗ್ಗೆ ಇಲ್ಲೇ ಎರಡು ವಾರದ ಹಿಂದೆ ಪ್ರಕಟವಾದ ‘ಮಾರಾಟಗಾರನ ತಲ್ಲಣಗಳು’ ನೋಡಿ) ವಿಶ್ವವಿದ್ಯಾನಿಲಯಾದಿ ಶಿಕ್ಷಣ ಸಂಸ್ಥೆಗಳಲ್ಲಿನ ಪದನಿಮಿತ್ತ ಸಾಹಿತಿಗಳು ಬಹುತೇಕ ಇವನ್ನು ವಿಜ್ಞಾನವೆಂದು ದೂರ ನೂಕುತ್ತಾರೆ. ಅಂಥಲ್ಲಿನ ಹೆಚ್ಚಿನ ಪ್ರಾಯೋಜಿತ ವಿಜ್ಞಾನಿಗಳು ಇವನ್ನು ಸಾಹಿತ್ಯವೆಂದು ನಿರಾಕರಿಸುತ್ತಾರೆ. ಈ ಪುಸ್ತಕಗಳ ಹದಿನಾಲ್ಕು ವರ್ಷದ ದೀರ್ಘ ಬಾಳಿಕೆಯನ್ನು ಒಂದು ಮಾತಿನ ಮಿತಿಯೊಳಗೆ ಹಿಡಿಯುವಾಗ ಇವುಗಳ ಕುರಿತಂತೆ ಬಂದ ಮೆಚ್ಚು ಮಾತುಗಳು, ಕೃತಜ್ಞತಾ ಪತ್ರಗಳು, ಈಚೆಗೆ ನೋಡಿದ ಒಟೋಶೋಗೋನ ನಾಟಕ – ನೀರಿನ ನಿಲುತಾಣದ ಭಯಹುಟ್ಟಿಸುವ ನೀರವತೆಯನ್ನೇ ಮೆರೆಸುತ್ತವೆ. ಪುಸ್ತಕ ಮಾರಾಟದ ಸೋಲು ಕಾಲಧರ್ಮ!”
ಒಹ್ಹೋ, ಒಂದು ಪುಸ್ತಕ ಲೋಕಾರ್ಪಣದ ಕುರಿತು ನಾಲ್ಕು ಸಾಲಿಗೆ ಹೊರಟು, ನಾಲ್ಕು ಪುಸ್ತಕಗಳ ಕುರಿತು ನಲ್ವತ್ತು ಸಾಲು ಬರೆದೆನೆಂದು ತಪ್ಪು ತಿಳಿಯಬೇಡಿ. ನಿಜ ಅರ್ಥದಲ್ಲಿ ಲೋಕ ಇವನ್ನು ಹೇಗೆ ಸ್ವೀಕರಿಸುತ್ತಿದೆ ಎನ್ನುವ ಕುತೂಹಲಕ್ಕಷ್ಟೇ ಲಂಬಿಸಿದೆ. ಅಭಯಾರಣ್ಯದ ಅಷ್ಟು ಕಲಾಪಗಳನ್ನು ಪೂರ್ವಾರ್ಧವೆಂದರೆ ಉಳಿದರ್ಧ ತಾಳಮದ್ದಳೆ. ಕವಿ ಅಮೃತ ಸೋಮೇಶ್ವರರು ಯಕ್ಷಗಾನ ಬಯಲಾಟಕ್ಕಾಗಿ ರಚಿಸಿದ ಪ್ರಸಂಗ ‘ಚಕ್ರವರ್ತಿ ದಶರಥ.’ ಅದರ ಅಂಶವಾದ, ವೃಕ್ಷರಕ್ಷಣಾ ಸಂದೇಶವುಳ್ಳ ಕಥಾಭಾಗವನ್ನು ಸ್ವತಃ ಅಮೃತರೇ ಪ್ರತ್ಯೇಕಿಸಿ, ಪರಿಷ್ಕರಿಸಿದ ಪ್ರಸಂಗ ‘ಮಾರಿಷಾ ಕಲ್ಯಾಣ’ ಅಂದು ಅರ್ಥಪೂರ್ಣವಾಗಿ ವಿಜೃಂಭಿಸಿತು. ಪ್ರಸಂಗ ಸೂಚನೆ, ಸಹಕಲಾವಿದರ ಬಗ್ಗೆ ಸಲಹೆ ಮತ್ತು ಕೂಟ ಸಂಘಟನೆ, ಪ್ರಯೋಗದ ನಡೆ ನಿರ್ದೇಶನವನ್ನೂ (ಸುಮಾರು ೭೫ ಕಾವ್ಯ ಖಂಡಗಳ ಮೂಲಕೃತಿಯಿಂದ ಅಂದಿನ ಪ್ರದರ್ಶನಕ್ಕೆ ಸುಮಾರು ಮೂವತ್ತನ್ನು ಸಂಗ್ರಹಿಸಿಕೊಂಡಿದ್ದರು) ಪ್ರಭಾಕರ ಜೋಶಿಯವರು ಸಮರ್ಥವಾಗಿ ಮಾಡಿದರು. ಭಾಗಿಗಳಾದ ಅಷ್ಟೂ ಜನಪ್ರಿಯ ಕಲಾವಿದರ ಬಗ್ಗೆ ವಿಸ್ತೃತ ಪರಿಚಯ ಕೊಡುವ ಅಧಿಕಪ್ರಸಂಗಕ್ಕೆಳಸದೆ ಕರೆಯೋಲೆಯ ಕಿರುಪರಿಚಯಗಳನ್ನಷ್ಟೇ ಪರಿಷ್ಕೃತ ನಕಲಿಸುತ್ತೇನೆ. ಹಿಮ್ಮೇಳದಲ್ಲಿ ಭಾಗವತ – ವೆಂಕಟ್ರಮಣ ಐತಾಳ (ಆದಾಯಕರ ಇಲಾಖೆಯಿಂದ ಸ್ವಯಂನಿವೃತ್ತಿ ಪಡೆದ ಹವ್ಯಾಸಿ ಭಾಗವತ, ಗಮಕಿ, ಪುರೋಹಿತ), ಮದ್ದಳೆ – ಪಿ. ಕೃಷ್ಣಯ್ಯ ಆಚಾರ್, ಚಂಡೆ – ಗಣೇಶ ಐತಾಳ ಮತ್ತು ಶ್ರುತಿ – ಅನಂತವರ್ಧನ.
ಮುಮ್ಮೇಳದಲ್ಲಿ ಪ್ರಚೇತಸನಾಗಿ ಎಂ. ಪ್ರಭಾಕರ ಜೋಷಿ [ಅಧ್ಯಾಪಕ (ಇಂದು ಪ್ರಾಂಶುಪಾಲನಾಗಿ ನಿವೃತ್ತ), ಲೇಖಕ, ಅರ್ಥದಾರಿ, ಬಹುಮುಖೀ ವಿದ್ವಾಂಸ], ಚಂದ್ರನಾಗಿ ಕುಂಬಳೆ ಸುಂದರರಾವ್ [ವೃತ್ತಿಪರ ಯಕ್ಷಗಾನ ಕಲಾವಿದ (ಆಟಗಳಿಂದ ಇಂದು ನಿವೃತ್ತರಾದರೂ ಅರ್ಥದಾರಿಯಾಗಿ ಸದಾ ಪ್ರವೃತ್ತ ಮತ್ತು ಯಕ್ಷ-ಅಕಾಡೆಮಿಯ ಅಧ್ಯಕ್ಷ), ಮಾಜೀ ಶಾಸಕ], ಶಿವನಾಗಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ [ನಿವೃತ್ತ ಮುಖ್ಯೋಪಾಧ್ಯಾಯ, ಲೇಖಕ, ಅರ್ಥದಾರಿ], ಧನ್ವಂತರಿ ಮತ್ತು ವನದೇವಿಯಾಗಿ ಎಂ. ಲಕ್ಷ್ಮೀನಾರಾಯಣ ಸಾಮಗ [ಅಧ್ಯಾಪಕ (ಇಂದು ಪ್ರಾಂಶುಪಾಲನಾಗಿ ನಿವೃತ್ತ), ಆಟ ಕೂಟ ನಾಟಕಗಳ ಕಲಾವಿದ], ಚಿತ್ರಮುಖನಾಗಿ ಶಂಭು ಶರ್ಮ ವಿಟ್ಲ [ಅಧ್ಯಾಪಕ, ಅರ್ಥದಾರಿ], ಪದ್ಮಕನಾಗಿ ಭಾಸ್ಕರ ರೈ ಕುಕ್ಕುವಳ್ಳಿ [ಅಧ್ಯಾಪಕ, ಅರ್ಧದಾರಿ, ಸಂಘಟಕ]. ಕಾಲಮಿತಿ, ಪರಿಸರದ ಪ್ರಭಾವ ಮತ್ತು ಸನ್ನಿವೇಶದ ಮಹತ್ವವನ್ನು ಯಥೋಚಿತವಾಗಿ ಬಳಸಿಕೊಂಡು ನಡೆದ ಪ್ರಸಂಗ ನಿಜಕ್ಕೂ ಸ್ಮರಣೀಯ.
ಪರಿಸರದ ಬಗ್ಗೆ ಇಲ್ಲಿ ಘೋಷಣೆ ಹಾಕುತ್ತಿಲ್ಲ, ಕೆಲಸವಾಗುತ್ತಿದೆ ಎನ್ನುವುದನ್ನು ಮನಗಂಡು ಸೇರಿದ ಸಭೆ ವ್ಯಕ್ತಿ ಮೌಲಿಕವಾಗಿಯೂ ಸಂಖ್ಯೆಯಲ್ಲೂ ಅಸಾಧಾರಣವಾಗಿತ್ತು. ವನ್ಯಪುನರುತ್ಥಾನದ ಪ್ರೇರಣೆ ಕೊಟ್ಟ ಡಾ| ಸೋನ್ಸ್ ಅಪರಿಮಿತ ಆನಂದದೊಡನೆ ಹಾಜರಿದ್ದರು. ಕೊಡಗಿನ ಪಕ್ಷಿಗಳನ್ನು ನೋಡಿದ್ದಲ್ಲದೆ ವೈಜ್ಞಾನಿಕವಾಗಿ ಪುಸ್ತಕದಲ್ಲೂ ಹಿಡಿದಿಟ್ಟ (ಕೊಡಗಿನ ಖಗರತ್ನಗಳು) ಮತ್ತು ಪರಿಸರ ರಕ್ಷಣೆ ಬಗ್ಗೆ ಕೈಯಾರೆ ಸಚಿತ್ರ ಸಂದೇಶಪತ್ರಗಳನ್ನು ಎರಡು ದಶಕಗಳಿಗೂ ಮಿಕ್ಕು ಕಾಲದಿಂದ ರಚಿಸಿ, ಉಚಿತವಾಗಿ ಕಳಿಸಿ ಸಮಾಜ ಜಾಗೃತಿ ನಡೆಸಿರುವ ವೈದ್ಯ ನರಸಿಂಹನ್ (ಹೆಚ್ಚಿನ ಪರಿಚಯಕ್ಕೆ ಇಲ್ಲೇ ‘ಕೀಪಿಟಪ್ ನರಸಿಂಹನ್’ ನೋಡಿ) ವಿರಾಜಪೇಟೆ ದೂರವಲ್ಲ ಎಂದೇ ಬಂದಿದ್ದರು. ಮಾರಿಷಾ ಕಲ್ಯಾಣದ ಕವಿ ಅಮೃತ ಸೋಮೇಶ್ವರರ ಉಲ್ಲಸಿತ ಉಪಸ್ಥಿತಿ ತಾಳಮದ್ದಳೆ ಕಳೆಗಟ್ಟುವುದರಲ್ಲಿ ಅನುಕ್ತ ಪಾತ್ರಧಾರಿ! ಸಾಹಿತ್ಯಪ್ರೀತಿ, ಪರಿಸರಪ್ರೇಮ, ಅಭಿಮಾನವೇ ಮೊದಲಾದ ನೂರೆಂಟು ನೆಪ ಹಿಡಿದು ಬಂದ ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಎಂ. ರಾಮಚಂದ್ರ ಮೊದಲಾಗಿ ಇಷ್ಟ, ಮಿತ್ರ, ಬಾಂಧವರನ್ನು ನಾನು (ಮಂಜ, ಅರ್ಥಾತ್ ಅಶೋಕನ ಮಂಜುಮಂಜಾದ ನೆನಪು!) ಹೆಸರಿಸಿ, ಗುರುತಿಸುವ ಔಪಚಾರಿಕತೆ ಬಿಟ್ಟು, ಮುಸ್ಸಂಜೆಗೆ ಮಧುರ ನೆನಪುಗಳ ದೊಡ್ಡ ಗಂಟು ಹೊತ್ತು ನಿರ್ಗಮಿಸಿದೆ.
*** ***
ಮಾತಿನ ಅಲಂಕಾರಕ್ಕೇ ಅಂದಿನ ತಾಳಮದ್ದಳೆಯ ಸ್ಮರಣೀಯತೆ ಕಳೆದು ಹೋಗದಂತೆ ಮುಂದೆ ಅತ್ರಿ ಪ್ರಕಾಶನದಲ್ಲೇ ‘ಮಾರಿಷಾ ಕಲ್ಯಾಣ’ ಪುಸ್ತವನ್ನೂ ಪ್ರಕಟಿಸಿದೆ. (ಸಚಿತ್ರ ೭೨ ಪುಟಗಳ ಕಿರು ಹೊತ್ತಗೆಯ ರೂಪಾಯಿ ಮೌಲ್ಯ ಹದಿನೆಂಟು ಮಾತ್ರ) ಯಕ್ಷಗಾನ ಸಾಹಿತ್ಯ ಪ್ರಪಂಚದಲ್ಲಿ ಧೈರ್ಯವಾಗಿ ಹೇಳಬಲ್ಲೆ ಈ ತೆರನ ಪುಸ್ತಕ ಇದೊಂದೇ; ನಿಸ್ಸಂದೇಹವಾಗಿ ಅದ್ವಿತೀಯ. ಮೊದಲು ಅಂದಿನ ಪ್ರದರ್ಶನವನ್ನು ಆಡಿಯೋ ಟೇಪಿನಲ್ಲಿ (೬೦ ಮಿನಿಟ್ ಅವಧಿಯ ಎರಡೂವರೆ ಟೇಪ್) ಪೂರ್ಣ ಧ್ವನಿಗ್ರಹಣ ಮಾಡಿದ್ದೆವು. ಅನಂತರ ಅದನ್ನು ಪೂರ್ಣ ಕಾಗದಕ್ಕೆ ಇಳಿಸಿದ ಸಾಹಸ ನನ್ನ ಹೆಂಡತಿ ದೇವಕಿಯದು. ಧ್ವನಿಗ್ರಹಣದ ಅಸ್ಪಷ್ಟತೆ, ಅದಕ್ಕೂ ಮಿಗಿಲಾಗಿ ಆಶು ಸಾಹಿತ್ಯ ಲಿಪಿರೂಪ ಪಡೆಯುವಾಗ ಕೆಲವು ಅರ್ಥ ಸಂದಿಗ್ಧತೆಗಳನ್ನು ಉಂಟುಮಾಡುತ್ತಿತ್ತು. ಅಂಥವನ್ನು ಮಾತ್ರ ಎಲ್ಲ ಕಲಾವಿದರ ಪೂರ್ಣ ಸಹಮತದೊಡನೆ ಪರಿಷ್ಕರಿಸಿದೆವು. ಉಳಿದಂತೆ ಆಶು ಸಾಹಿತ್ಯದ ಭಾಷೆ ಬರಹದ್ದಕ್ಕಿಂತ ಸಡಿಲವಾಗಿರುವಿಕೆ ಈ ಕಲಾಪ್ರಕಾರದ ಸ್ವರೂಪದಲ್ಲೇ ಇರುವ ಲಕ್ಷಣ. ಪ್ರಯೋಗದಲ್ಲಿ ಅದು ಸೊಗಯಿಸುವುದರಿಂದ ಇಲ್ಲಿ ಗ್ರಾಂಥಿಕ ವ್ಯಾಕರಣವನ್ನು ಹೇರಿಲ್ಲ. ಅರ್ಥದೊಡನೆ ತೀರ ಅವಶ್ಯವಾದ ಸೂಚನೆಗಳನ್ನು ಅಲ್ಲಲ್ಲೇ ಕಂಸದಲ್ಲಿ ಕೊಡಲಾಗಿದೆ. ಮುಖ್ಯ ಅರ್ಥವಾಹಿನಿಯ ನಡುವೆ ಮೂಡಿದ ಕೇವಲ ಅನುಮೋದಕ ಅಥವಾ ಚುಟುಕು ಪ್ರತಿಕ್ರಿಯಾತ್ಮಕ ಮಾತುಗಳಲ್ಲಿ ಔಚಿತ್ಯವರಿತು ಕೆಲವನ್ನು ಕಂಸದೊಡನೆ ಬಳಸಿಕೊಂಡಿದೆ.
ಪುಸ್ತಕದ ಮೊದಲ ಅಂಕದಲ್ಲಿ ಕವಿಯ ಪೂರ್ಣ ರಚನೆಯನ್ನು ಕೊಡಲಾಗಿದೆ. ಇದು ಮುಂದಿನ ಆಟ, ಕೂಟಗಳ ಸಂಘಟಕರ ಪ್ರಧಾನ ಲಕ್ಷವಾಗಬೇಕು. ಇದನ್ನು ಹಿಂಬಾಲಿಸಿ ಕವಿಯೇ ಕೊಟ್ಟ ಕಥಾಸಾರಾಂಶ ಗದ್ಯದಲ್ಲಿದೆ. ಪುಸ್ತಕದ ಪ್ರಧಾನ ಭಾಗ ಅಭಯಾರಣ್ಯದಲ್ಲಿ ಬಂದ ಅರ್ಥ. ಇದರ ಹರಹನ್ನು ಕಾಲಮಿತಿಗೊಳಪಡಿಸಿದ್ದರಿಂದ (ಕತ್ತಲೆಗೆ ಮುನ್ನ ಮುಗಿಸಲೇ ಬೇಕು. ಅಭಯಾರಣ್ಯದಲ್ಲಿ ಉದ್ದೇಶಪೂರ್ವಕವಾಗಿ ಬೆಳಕಿನ ವ್ಯವಸ್ಥೆ ಮಾಡಿರಲಿಲ್ಲ. ಮತ್ತೆ ಸಭಾಸದರಿಗೆ ದೂರದೂರಿಗೆ ಸಾರ್ವಜನಿಕ ವಾಹನ ಸೌಕರ್ಯಕ್ಕೆ ತೊಂದರೆಯಾಗಬಾರದು) ಅಂದಿನ ಪ್ರದರ್ಶನದ ನಡೆಗನುಕೂಲವಾಗಿ ಕೆಲವು ಪದ್ಯಗಳನ್ನು ಆರಿಸಿಕೊಂಡಿದ್ದರು. ಅಂದರೆ ಮೂಲರಚನೆಯ ಸುಮಾರು ಎಪ್ಪತ್ತೆರಡು ಕಾವ್ಯಖಂಡಗಳಲ್ಲಿ ಸುಮಾರು ನಲ್ವತ್ತನ್ನು ಕೈಬಿಟ್ಟಿದ್ದರು. ಅರ್ಥವಾಹಿನಿಯ ನಡುವೆ ಪದ್ಯ ಬಂದಲ್ಲಿ, ಆಯ್ದುಕೊಂಡ ಖಂಡದ ಮೊದಲ ಹಾಗೂ ಕೊನೆಯ ಒಂದೆರಡು ಶಬ್ದಗಳನ್ನು ಮಾತ್ರ ಪದ್ಯ ಸೂಚನೆಯೊಡನೆ ಕಂಸದಲ್ಲಿ ಕೊಡಲಾಗಿದೆ.
*** *** ***
(ಮುಂದಿನ ಕಂತು: ಅಭಯಾರಣ್ಯದಲ್ಲೊಂದು ಪರಿಸರ ಶಿಬಿರ)
ನೆನಪುಗಳ ಸಂಚಿಯಲ್ಲಿ ಇರುವ ಸರಕೆಲ್ಲವೂ ಹೀಗಯೇ ಹೊರಬರಲಿ
ಪ್ರಿಯ ಅಶೋಕವರ್ಧನರಿಗೆ ನಮಸ್ಕಾರ. ಅಂದು ನಾನೂ ನಿಮ್ಮ ಕಾರ್ಯಕ್ರಮದಲ್ಲಿ ಹಾಜರಿದ್ದುದರಿಂದ ಹಳೆ ನೆನಪು ಮತ್ತೆ ಮರುಕಳಿಸಿ ಖುಷಿ ಆಯಿತು.
nimma maneya opening ge banda nenapu banthu. A dina Premanandaravaru, avra jothege banda ondu videshi film crew nenapideya?
🙂
ನರೇಂದ್ರ = ನರೇಂದ್ರ ನಾಯಕ್?ಪ್ರೇಮಾನಂದ, ವಿದೇಶೀ ತಂಡ ನೆನಪಿಲ್ಲ – ಮಂಜಣ್ಣನಿಗೆ 🙂 ಆದರೆ ಮತ್ತೆ ಕೆಲವು ಕಾಲದ ಮೇಲೆ ಅಲ್ಲೇ ನಡೆದ ನಮ್ಮ ಶಿಬಿರದಲ್ಲಿ ನೀವು ಪವಾಡ ರಹಸ್ಯ ಬಯಲು ಮಾಡಿದ್ದು ನೆನಪಿದೆ ಮತ್ತು ಅದರ ವಿವರಗಳನ್ನು ಮುಂದಿನ ಕಂತಿನಲ್ಲಿ ಹಾಕುತ್ತಿದ್ದೇನೆ. ಅಶೋಕವರ್ಧನ
ಪ್ರಿಯ ಅಶೋಕ ವರ್ಧನ,'ಮಂಜು ನೆನಪು' ಭಾಗವನ್ನು ಪೂರ್ತಿಯಾಗಿ ಓದಿದೆ. ಅದರ ಸೆಳೆತಕ್ಕೆ ಮುಖ್ಯ ಕಾರಣ ಜಿಟಿನಾ ಅವರ ಪುಸ್ತಕಗಳ ರಕ್ಷಾಪುಟಗಳು. ಅವರ ಸಾಹಸಗಳ ಬಗ್ಗೆ ಓದುತ್ತ ಹಳೆಯ ನೆನಪುಗಳು ನುಗ್ಗಿ ಬಂದವು. ಜಿಟಿನಾ ಜತೆಗೆ ಕಳೆದ ಅನೇಕ ರಸನಿಮಿಷಗಳು ಹಾಗೂ ಅವರಿಂದ ಬಂದ ಅಂಚೆ ಕಾರ್ಡುಗಳು ಮೆಲುಕಾದವು.ಧನ್ಯವಾದಗಳು.ನಾಹೆ.
ಅಶೋಕ ವರ್ಧನರಿಗೆ, ವಂದೇಮಾತರಮ್. ತಾ.೨೧-೪-೨೦೧೧ ರಿಂದ ತಾ ೬-೫-೨೦೧೧ ರ ತನಕ ಕಾಂಗ್ರೆಸ್ಸ್ ಪಕ್ಸದ ಪರವಾಗಿ ಕಡಪ ಉಪಅಚುನಾವಣೆಯಲ್ಲಿ ಪ್ರಚಾರ ನಂತರ ತಾ ೧೩-೫-೨೦೧೧ ರಂದು ಮಂಗಳೂರು ಮದುವೆ, ಈ ಮಧ್ಯ ನಂತರ ಬಿಡಿವಿಲ್ಲದ ಮದುವೆ ಮುಂಜಿ ಸಮಾರಂಭಗಳ ಸಂಭ್ರಮ. ಮದುವೆಗೆ ಕರೆದರೆ ಹೋಗಬೇಕು. ಸಾವು ಕೇಳಿದರೆ ಹೋಗಬೇಕು. ನನ್ನ ಸಿದ್ದಾಂತ. ತಂದೆಯವರು ನನಗೆ ನಾಲ್ಕು ವರ್ಷವಿರುವಾಗಲೇ ಇಹಲೋಕ ಯಾತ್ರೆ ಪೂರೈಸಿದ್ದರಿಂದ ನನಗೆ ಉಪನಯನ ವಾದ ಮರುದಿನದಿಂದ ಶವಯಾತ್ರೆಯಲ್ಲಿ ಭಾಗವಹಿಸಲು ಅದಿಕಾರ. ಕರ್ನೂಲಿನಲ್ಲಿ ಸತ್ತವಾರ್ತೆ ತಿಳಿದೊಡನೆ ಮೂವತ್ತು ರೂಪಾಯಿಯ ಒಂದು ಹೂವಿನ ಹಾರದೊಂದಿಗೆ ಮನೆಯವರಿಗೆ ಸಾಂತ್ವನ ಹೇಳುವುದು ನನ್ನ ದರ್ಮ. ಅವರಿಗೆ ಸಮಾಧಾನ ಇದೆಯೋ ಇಲ್ಲವೋ ಹೂವಿನ ಅಂಗಡಿಯ ಸಾಬಿ ಮಾತ್ರ ಔಪಚಾರಿಕವಾದ ಶೊಕದ ಮಾತುಗಳನ್ನು ಹೇಳಿ “ಯಾವಗಲೂ ಬರುತ್ತಾ ಇರಿ ಸ್ವಾಮಿ” ಎಂದಾಗ ಅವನು ಮನಸ್ಸಿನಲ್ಲಿ ಹಿಗ್ಗುತ್ತಾನೆ ಎನ್ನುವುದಕ್ಕೆ ಸಂಶಯವಿಲ್ಲ.ಬನ್ನಿ. ಇಲ್ಲಿದ್ದಾನೆ ಹರಿಶ್ಚಂದ್ರನ ಪ್ರತಿನಿಧಿ. “ಎನಯ್ಯಾ ಹೇಗಿದ್ದೀಯಾ”? ಎಂದರೆ “ಏನು ಗ್ರಹಚಾರ ಸ್ವಾಮಿ. ಆ ದುಷ್ಥ ದೇವರಿಗೆ ನನ್ನ ಮೇಲೆ ಕರುಣೆಯೆ ಇಲ್ಲ. ಎರಡು ದಿನಗಳಿಂದ ಯಾರೂ ಬರಲಿಲ್ಲ. ಮಹಾರಾಜರು ಇಂದು ನೀವು ಬಂದಿರಿ. ಸಂತೋಷ. ನಾನು ಆನಂದದಲ್ಲಿ ತೇಲಾಡುತ್ತೇನೆ. ನನ್ನ ಹೆಂಡತಿ ಮಕ್ಕಳು ಹೊಟ್ಟೀ ತುಂಬಾ ಉಣ್ಣುತ್ತಾರೆ”. ಅಶ್ಲೀಲದ ಅಂಚಿನಲ್ಲಿರವ ಒಂದು ಗಾದೆ. “ಅಜ್ಜಿಗೆ ಅರಿವೆ ಚಿಂತೆ. ಮಗಳಿಗೆ ಮಿಂಡರ ಚಿಂತೆ”. ಇಂತಹ ಕಷ್ಟಗಳು ನನ್ನ ಉತ್ತರಾದಿಕಾರಿಗಳಿಗೆ ಬರಬಾರದು. ಜಿ.ಟಿ.ನಾ. ವ್ವರಂತೆ ನನ್ನ ಪಾರ್ಥಿವ ಶರೀರ ಕರ್ನೂಲು ವೈದ್ಯಕೀಯ ಕಲಾಶಾಲೆಗೆ ದಾನ ಮಾಡಿದ ಉಯಿಲನ್ನು ಹತ್ತು ವರ್ಷಗಳ ಹಿಂದೆಯೆ ಅಲ್ಲಿನ ಪ್ರಾಚಾರ್ಯರಿಗೆ ಮತ್ತು ಸರಕಾರದ ಸಂಬಂಧ ಪಟ್ಟವರಿಗೆ ಕೊಟ್ಟೀದ್ದೇನೆ. ನಂತರ ಪುರೋಹಿತರ ಕಾಲ. ಬ್ರಾಹ್ಮಣ್ಯವನ್ನು ಹೆಚ್ಚಿಗೆ ಟೀಕಿಸುವಂತಿಲ್ಲ. ಈಗ ಮದುವೆಯೆಂಬ ಮಾರುಕಟ್ಟೆಯಲ್ಲಿ ಈ ವರ್ಗಕ್ಕೆ ಗಿರಾಕಿಯೆ ಇಲ್ಲ. ಇದು ಸಣ್ಣ ಸೌಟಿನವರ ಭವಣೆಯಾದರೆ ದೊಡ್ಡ ಸೌಟಿನವರು ಸಂಗತಿಯೂ ಇಷ್ಟೆ. ಅವರೂ ಇಂದು ಗಿರಾಕಿಗಳನ್ನು ನಿರ್ದೇಶಿಸುವ ಸ್ತಿತಿಯಲ್ಲಿದ್ದರೂ, ಅವರ ಮಕ್ಕಳೇ ಇನ್ನೊಬ್ಬ ಅಡಿಗೆಯವನನ್ನು ಮದುವೆಯಾಗುವುದಿಲ್ಲ. “ಮೃದುಜಾಲದ” (Software) ದಿನಗಳು. ಹುಟ್ಟುವಾಗ ಎಲ್ಲರೂ ಮೃದುಜಾಲಗಳೇ. ತದನಂತರ ಕಠಿಣಜಾಲ (Hardware) ವಾಗಿ ಮತ್ತೆ ನಿಧಾನವಾಗಿ ಮೃದುಜಾಲವಾಗಿ ಕಡೆಕಾಲದಲ್ಲಿ ಹಳೆ ಕಬ್ಬಿಣವಾಗಿ ಸುಡುವುದೊ ಹುಗಿಯುವುದೊ ಆಗುತ್ತದೆ. “ಬದ್ಕು ಜಟಕಾ ಬಂಡಿ. ವಿಧಿಯದರ ಸಾಹೆಬ್. ಮದುವೆಗೋ ಮಸಣಕ್ಕೊ ಹೋಗುತಿಹುದು ನೋಡು ಮಂಕು ತಿಮ್ಮ”.ಈ ರಾಮಯಣ ನಿಮಗೆ ಬೇಕಿಲ್ಲವಾದದ್ದು. ದೇವರುಮತ್ತು ಪ್ರಯಾಣ ಸು.ಚ. ರವರಿಗೆ ಎರಡು ವೈರೈಗಳಾದರೆ, ರಾಜಗೊಪಾಲಾಚಾರಿಯವರಿಗೆ “You! Communists, are my enemy No. 1. No 2 is PWD. Since I cannot dispense with the second one, I put all my energy and unless you are rooted out from this country, I am not going to rest” . ಇಂದು ಬದುಕಿದ್ದಿದ್ದರೆ ದೀದಿ (ಮಮತಾ) ಯನ್ನು ರೈಟರ್ಸ್ ಭವನದಲ್ಲಿ ನೋಡಿ ಎಷ್ಟು ಸಂತೋಷ ಪಡುತ್ತಿದ್ದರೊ! ಅಭಯಾರಣ್ಯದಲ್ಲಿ ಅಭಯನೊಂದಿಗೆ “ಪ್ರಶಾಂತ ವನದಲಿ ಸಂತಸದ ಮನದಲಿ” ಅಶೋಕ ದೇವಕಿಯರ ಮಧುಚಂದ್ರದ ವಿವರಣೆ ಸೊಗಸಾಗೆದೆ. ಭವದೀಯ.ಯಕ್ಶಗಾನದ ನೆನಪು ಸೊಗಸಾಗಿದೆ.
ಪ್ರಿಯ ಬ್ಲಾಗಿಗರೆ,ಕಣಜ ಜಾಲತಾಣ (www.kanaja.in) ಕರ್ನಾಟಕ ಜ್ಞಾನ ಆಯೋಗದ ಮಹತ್ವದ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಈ ಯೋಜನೆಯು ಕನ್ನಡಿಗರಿಗಾಗಿಯೇ ರೂಪುಗೊಳ್ಳುತ್ತಿರುವ ಜಾಲತಾಣ. ಈ ಜಾಲತಾಣದ ಬಗ್ಗೆ ನಿಮ್ಮ ಬ್ಲಾಗಿನಲ್ಲೂ ಸೂಕ್ತ ಪ್ರಚಾರ ಸಿಗಬೇಕೆಂಬುದು ನಮ್ಮ ವಿನಂತಿ. ದಯಮಾಡಿ (http://kanaja.in/?page_id=10877) ಈ ಕೊಂಡಿಯಲ್ಲಿ ಇರುವ `ಕಣಜ' ಬ್ಯಾನರುಗಳನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದು ಕೋರಿಕೆ. ಇಲ್ಲಿ ಕೊಟ್ಟಿರುವ ಚಿತ್ರದ ಕೆಳಗೆ ಇರುವ ಸಂಕೇತ ವಾಕ್ಯವನ್ನು ನಿಮ್ಮ ಬ್ಲಾಗಿನ ಹೊಸ ಬ್ಲಾಗ್ ಪ್ರಕಟಣೆ ಜಾಗದಲ್ಲಿ ಪೇಸ್ಟ್ ಮಾಡಿದರೆ ಕಣಜದ ಬ್ಯಾನರ್ ನಿಮ್ಮಲ್ಲಿ ಪ್ರಕಟವಾಗುತ್ತದೆ. ಎಂಬೆಡ್ ಮಾಡುವ ಬಗೆ ಹೇಗೆಂದು ತಿಳಿಯಬೇಕಿದ್ದರೆ ದಯಮಾಡಿ (projectmanager@kanaja.in) ಈ ಮೈಲಿಗೆ ಕಾಗದ ಬರೆಯಿರಿ. ಕಣಜ ಜಾಲತಾಣದಲ್ಲಿ ನಿಮ್ಮ ಬ್ಲಾಗುಗಳನ್ನೂ ಪಟ್ಟೀಕರಿಸಲಾಗಿದೆ, ಗಮನಿಸಿ. ಬ್ಲಾಗ್ ಲೋಕದ ಮಾಹಿತಿ ಲೇಖನಗಳು ಕನ್ನಡಕ್ಕೆ ಕೊಡುಗೆ ನೀಡುತ್ತಿರುವುದನ್ನು ಸ್ವಾಗತಿಸುತ್ತ `ಕಣಜ'ವನ್ನೂ ನಿಮ್ಮ ಸಹ-ಬ್ಲಾಗ್ ಎಂದೇ ಪರಿಗಣಿಸಿ ಬೆಂಬಲ ನೀಡಿ, ಪ್ರಚಾರ ನೀಡಿ ಎಂದು ವಿನಂತಿಸಿಕೊಳ್ಳುವೆವು. ತಮ್ಮ ವಿಶ್ವಾಸಿಬೇಳೂರು ಸುದರ್ಶನಸಲಹಾ ಸಮನ್ವಯಕಾರ, ಕಣಜ ಯೋಜನೆ(ಕರ್ನಾಟಕ ಜ್ಞಾನ ಆಯೋಗದ ಯೋಜನೆ)ಈ ಮೈಲ್: projectmanager@kanaja.netwww.kanaja.inವಿಳಾಸ: ಇಂಟರ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಬೆಂಗಳೂರು ನಂ 26/ಸಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ ಬೆಂಗಳೂರು – 560100ದೂರವಾಣಿ: ೯೭೪೧೯೭೬೭೮೯
ಕಾಡ್ಮನೆ ಕಾಡ್ಮನೆಯಾಗಿಯೇ ಉಳಿದಿರುವುದು ಸಂತೋಷ.ಕಾಡ್ಮನೆಯ ಮೊದಲದಿನದ ವರದಿ ಮತ್ತೊಮ್ಮೆ ಹಳೆಯ ಮಧುರ ನೆನಪುಗಳು ಮರುಕಳಿಸುವಂತೆ ಮಾಡಿತು.