(ಕೊಡಂಜೆ ಕಲ್ಲಿನ ಕಥಾಜಾಲ – ೨)

ಕೊಡಂಜೆ ಕಲ್ಲನ್ನು ಕತ್ತೆಕಿವಿ ಎಂದು ಗುರುತಿಸಿದವರು ಐತಿಹಾಸಿಕ ನಾವಿಕರು. ನಾನು ಅದರಲ್ಲೇ ಮುಂದುವರಿದು ಗುರುತಿಸುವ ಅನುಕೂಲಕ್ಕೆ ಮೊದಲ ಕೋಡುಗಲ್ಲನ್ನು ‘ನಿಮಿರುಗಿವಿ’ ಎಂದೂ ಆಚಿನದ್ದು, ಸುಮಾರು ಐವತ್ತು ಅರವತ್ತಡಿ ತಗ್ಗಿನದ್ದನ್ನು ‘ಮೊಂಡುಗಿವಿ’ ಎಂದೇ ಗುರುತಿಸಿಕೊಂಡಿದ್ದೆ. ಮತ್ತೂ ಮುಂದುವರಿದು ಎರಡೂ ಕಿವಿಗಳ ನಡುವಣ ಸಂಪರ್ಕ ದಿಬ್ಬವನ್ನು ಕತ್ತೆಯ ‘ಮಂಡೆ’ ಎಂದೂ ಆಶ್ರಮಕ್ಕೆ ಸಾಗುವ ಕಾಲ್ದಾರಿ ವಲಯವನ್ನು ‘ಹೆಕ್ಕತ್ತು’ ಎಂದೂ ಭಾವಿಸಿಕೊಳ್ಳಿ. ಸಾಹಸ ಬಯಸಿ ಕೊಡಂಜೆ ಕಲ್ಲಿಗೆ ಹೋಗುವವರಿಗೆ ಎರಡು ಜಾಡುಗಳಿವೆ. ಹೆಚ್ಚಿನವರು ಕಾಲ್ದಾರಿಯಲ್ಲೇ ಹೆಕ್ಕತ್ತು ಹಾಯ್ದು, ಗುಹಾಶ್ರಮದ ಆವರಣದವರೆಗೆ ಸಾಗಿ, ಎಡದ ಅಸ್ಪಷ್ಟ ಜಾಡಿಗೆ ಕವಲೊಡೆಯುತ್ತಾರೆ. ಇದು ಆಶ್ರಮದ ಚಪ್ಪರವೇ ಆಗಿರುವ ಭಾರೀ ಹಾಸುಬಂಡೆಯ ನೆತ್ತಿಯಲ್ಲೇ ಸಾಗಿ ಪೂರ್ವ ಮಗ್ಗುಲಿನ ಕುರುಚಲು ಕಾಡು ಸೇರಿಸುತ್ತದೆ. ಅಲ್ಲಿರುವ ಸ್ಪಷ್ಟ ಸವಕಲು ಜಾಡಿನಲ್ಲಿ ಹತ್ತೇ ಮಿನಿಟಿನ ನಡಿಗೆಯಲ್ಲಿ ನಿಮಿರುಗಿವಿಯನ್ನಷ್ಟೇ ಬಳಸಿ ಕತ್ತೆಯ ಮಂಡೆಗೇರುತ್ತಾರೆ. ಇನ್ನೂ ಕೆಲವರು ಡಾಮರು ದಾರಿ ಮತ್ತು ಮಣ್ಣ ದಾರಿ ಬಿಟ್ಟ ಮೇಲೆ ಪಶ್ಚಿಮ ಮಗ್ಗುಲಲ್ಲೇ ಹಾಯ್ದು, ಪುಡಿಗಲ್ಲು ಮಣ್ಣು ತುಳಿದು, ಹುಲ್ಲು ಮುಳ್ಳು ನುಗ್ಗುನುರಿ ಮಾಡಿ ಕತ್ತೆಮಂಡೆ ಸೇರುವುದೂ ಇದೆ. ಒಟ್ಟಾರೆ ಸಾರ್ವಜನಿಕರಿಗೆ ಕತ್ತೆ ಮಂಡೆಯಿಂದಲೇ ನಿಜ ಶಿಲಾರೋಹಣ ಸುರು. ವಾಸ್ತವವಾಗಿ ನನ್ನ ಮೊದಲ ಪ್ರಯತ್ನದಂದು ಅದಕ್ಕೊಂದು ಬಳಕೆಯ ಜಾಡಿದೆ ಎಂದು ನನಗೆ ತಿಳಿದೇ ಇರಲಿಲ್ಲ. ಕೊಡಂಜೆಗೆ ನಾನೇ ವಾಸ್ಕೋಡಗಾಮಾ ಎನ್ನುವ ಹುಮ್ಮಸ್ಸು; ಅದಕ್ಕೊಂದು ಏರುಮಾರ್ಗ ನಿಷ್ಕರ್ಷಿಸುವವನ ಹಮ್ಮು! ಶಿಲಾರೋಹಣದ ಪಾಠವೇ ಹಾಗೆ – ಬಂಡೆಗಳಲ್ಲಿ ಎರಡೇ ವಿಧ, ಏರಿದ್ದು, ಏರದ್ದು. ಏರಲಾಗದ್ದು ಎಂದಿಲ್ಲ. ಕೊಡಂಜೆಯ ಕುರಿತು ನನಗೆ ಸಿಕ್ಕ ಸ್ಥಳಪುರಾಣಗಳೆಲ್ಲ ಪೂರ್ವತಪ್ಪಲಿನ ಗುಹಾಶ್ರಮದ ಮಹಿಮೆಯನ್ನು ಮಾತ್ರ ಬಿತ್ತರಿಸಿದ್ದು ನನಗೆ ಹಿಡಿಸಿರಲಿಲ್ಲ. ನನ್ನ ಸ್ಪಷ್ಟ ಲಕ್ಷ್ಯ ನಿಮಿರುಗಿವಿ.

ಹಾಗಾಗಿ ಆ ಮೊದಲ ಯತ್ನದಲ್ಲಿ, ಹಿಂದಿನ ಅಂಕಣದಲ್ಲಿ ಹೇಳಿದಂತೆ, ಕಲ್ಲಗುಪ್ಪೆ ಸೇರಿದ ಮೇಲೆ ನೇರ ನಿಮಿರುಗಿವಿಯ ಬುಡವನ್ನೇ ಮುಟ್ಟಿದ್ದೆವು. ಅಲ್ಲಿನ ಗೋಡೆಯಂತಾ ಮೈಯಲ್ಲಿ ಸುಮಾರು ಮೂವತ್ತಡಿ ಎತ್ತರಕ್ಕೊಂದು ಆಳದ ಸೀಳು ತೋರುತ್ತಿತ್ತು. ಅದರುದ್ದಕ್ಕೆ ಬೇರ ಜಾಲ ಇಳಿಬಿಟ್ಟು ಮೇಲೊಂದು ಪುಟ್ಟ ಮರ, ರಾವಣನೆದುರು ಕುಳಿತ ಅಂಗದನಂತ್ತಿತ್ತು. ನಾನು ಶಿಲಾರೋಹಣದಲ್ಲಿ ಭಾರೀ ಕುಶಲನೇನೂ ಅಲ್ಲ (ಥಿಯರಿ ಸ್ಟ್ರಾಂಗು, ಪ್ರ್ಯಾಕ್ಟಿಕಲ್ ವೀಕು). ಆದರೆ ಯಾವುದನ್ನೂ ಪ್ರಯತ್ನ ಮಾಡದೇ ಬಿಟ್ಟುಕೊಡುವವನೂ ಅಲ್ಲ. ಸೀಳಿನುದ್ದಕ್ಕೆ ಆರೇಳು ಅಡಿ ಹತ್ತಿ ನೋಡಿದ್ದೂ ಆಯ್ತು. ಸೂಕ್ತ ರಕ್ಷಣೆಯಿಲ್ಲದೆ ಹೆಚ್ಚಿನ ಕೆಲಸಕ್ಕಿಳಿಯುವುದು ಸಾಹಸವಲ್ಲ, ಆತ್ಮಹತ್ಯಾ ಯತ್ನ ಎಂದೂ ನನಗೆ ತಿಳಿದಿದ್ದುದರಿಂದ ಅಂದಿನ ಪ್ರಯತ್ನವನ್ನು ಅಷ್ಟಕ್ಕೆ ನಿಲ್ಲಿಸಿ, ಕೆಳಗಿಳಿದೆ. (ಮುಂದೊಂದು ದಿನ ಮೇಲಿನಿಂದ ರಕ್ಷಣಾ ಹಗ್ಗ ಕೊಡುವುದು ಸಾಧ್ಯವೆಂದು ಕಂಡಾಗ ಪೂರ್ಣಗೊಳಿಸಿದ್ದೂ ಆಗಿದೆ, ಬಿಡಿ)

ನಿಮಿರುಗಿವಿ ಇನ್ನೇನಾದರೂ ದಾರಿ ತೋರುತ್ತದೆಯೇ ಎಂದು ಬಂಡೆಯನ್ನು ಮುಟ್ಟಿಕೊಳ್ಳುತ್ತಲೇ ಪೂರ್ವ ದಿಕ್ಕಿಗೆ ಸುತ್ತುವರಿಯತೊಡಗಿದೆವು. ಪುಡಿಗಲ್ಲ ರಾಶಿ, ಮರಬಲ್ಲೆಗಳ ಮರಸನ್ನು ಹರಿದುಕೊಂಡು ಇನ್ನೂ ಮೂವತ್ತಡಿ ಇಳಿಯಲಿಲ್ಲ, ನಿಮಿರುಗಿವಿಯೆತ್ತರಕ್ಕೆ ಒಂದು ಭಾರೀ ಕೊರಕಲು ಕಾಣಿಸಿತು. ಇದು ಪೂರ್ವಕ್ಕೆ ತೆರೆದುಕೊಂಡಿದ್ದುದರಿಂದ ಗುಪ್ಪೆ ಕಲ್ಲ ಮೇಲಿನಿಂದ ನಮಗೆ ಕಾಣಿಸಿರಲಿಲ್ಲ. ಏಕವಾಗಿದ್ದ ನಿಮಿರುಗಿವಿ ಇಲ್ಲಿ ನೂರಿನ್ನೂರು ಅಡಿಗೂ ಎತ್ತರಕ್ಕೆ ನೇರ ಸೀಳಿ ಬೇರ್ಪಟ್ಟು ನಿಂತಿತ್ತು. ಹೊರ ಅಂಚಿನಲ್ಲಿ (ಚಿಮಣಿ ತಂತ್ರ ಅಸಾಧ್ಯವೆಂಬ ಆರ್ಥದಲ್ಲಿ) ಆರೇಳಡಿಯಷ್ಟು ಅಂತರವಿದ್ದರೂ ಒಳಗೆ ಸರಿದಂತೆ ಸಮೀಪಿಸಿದ್ದು ಕಾಣುವಾಗ ನನಗೆ ಚಿಮಣಿ ಸಾಧ್ಯತೆ ಸ್ಪಷ್ಟವಾಯ್ತು. ಅಂದು ಆ ಕೊರಕಲನ್ನು ಅಷ್ಟಕ್ಕೇ ಬಿಟ್ಟು ಮುಂದುವರಿದು, ಸರ್ವ ಬಳಕೆಯ ಜಾಡು ಕಂಡುಕೊಂಡು ಶಿಖರ ಸಾಧಿಸಿದ್ದೆವು. ಮತ್ತೆ ಕೆಲವೇ ವಾರಗಳಲ್ಲಿ ಯೋಗ್ಯರನ್ನು ಜೊತೆಮಾಡಿಕೊಂಡು ಬಂದು, ಈ ಕೊರಕಲಿನ ಮೂಲಕ ಶಿಖರಕ್ಕೆ ಹೊಸತೇ ದಾರಿ ಅನಾವರಣ ಮಾಡಿದ್ದೆವು. ಅನಂತರದ ವರ್ಷಗಳಲ್ಲಿ, ಈ ಜಾಡಿನಲ್ಲಿ ನಾನು ಒಯ್ದ ತಂಡಗಳಿಗೆ ಲೆಕ್ಕವಿಲ್ಲ. ಆಶ್ಚರ್ಯವೆಂದರೆ ಈ ಸಲದ ಭೇಟಿಯೂ ಸೇರಿದಂತೆ ನಾನು ಈ ಜಾಡಿನಲ್ಲಿ ಒಂದೇ ಒಂದು ಗೋಡೆ ಬರಹವನ್ನಾಗಲೀ ಮನುಷ್ಯ ಬಿಟ್ಟ ಕಸವನ್ನಾಗಲೀ ಕಂಡಿಲ್ಲ. ಅಂದರೆ ನಾವು ಬಯಸದೆಯೂ ಈ ಜಾಡಿನ ‘ಸ್ವಾಮ್ಯ’ ಇನ್ನೂ ನಮ್ಮ (ಆರೋಹಣ ಪರ್ವತಾರೋಹಿಗಳು ಸಾಹಸಿಗಳು) ಹೆಸರಿನಲ್ಲೇ ಇದೆ! (ಅಥವಾ ನಮ್ಮಷ್ಟೇ ಪರಿಸರವನ್ನು ಶುದ್ಧವಾಗಿಡುವ ಮನೋಭಾವದವರೇ ಹೋಗಿರಲೂಬಹುದು)

ಬನ್ನಿ, ಬನ್ನಿ, ಪೀಠಿಕಾ ಪುರಾಣ ಲಂಬಿಸಿ, ಕೊರಕಲ ಬಾಯಿಗೆ ತಂದು ನಿಲ್ಲಿಸಿದ ನಿಮ್ಮನ್ನು ಮರೆತುಬಿಟ್ಟೆ ಎಂದು ತಪ್ಪು ತಿಳೀಬೇಡಿ. ಆಲಿಬಾಬನ ಸೂಸಮ್ಮ ತನ್ನ ರಹಸ್ಯ ದ್ವಾರ ತೆರೆದಂತೆ ಭಾರೀ ಬಂಡೆಗುಂಡುಗಳ ನಡುವೆ ಸಪುರ ಓಣಿ ನಮ್ಮೆದುರು ತೆರೆದಿತ್ತು. ಅಲ್ಲಿನ ನೆಲ ಮೊದಲ ಸುಮಾರು ಹತ್ತಡಿ ಒಂದು ಸ್ತರ. ಮತ್ತೆ ಸುಮಾರು ಆರಡಿ ಎತ್ತರದ ಕಲ್ಲ ದಿಬ್ಬ ಏರಿದರೆ ಕೊನೆವರೆಗೆ ತುಸುವೇ ಏರು ಜಾಡು ಮಾತ್ರ. ಭಾರೀ ಮೇಲೆ ಒಂದೆರಡು ಬಂಡೆಗುಂಡು ಕೀಲುಗಲ್ಲಿನಂತೆ ಸಿಕ್ಕಿಕೊಂಡಿದ್ದದ್ದೂ ಮತ್ತು ಮೇಲೆಲ್ಲೋ ಹಸಿರು ನಗುತ್ತಿದ್ದಿರಬಹುದಾದ ಗಿಡದ ಉದ್ದನ್ನ ಬೇರುಗಳು ನೇತುಬಿದ್ದುಕೊಂಡಿದ್ದದ್ದೂ ಆ ಮಬ್ಬು ಬೆಳಕಿನಲ್ಲಿ ಹೆಚ್ಚಿನ ನಿಗೂಢತೆ ಮೂಡಿಸುತ್ತಿತ್ತು. ನೂರಾರು ವರ್ಷಗಳ ಕಲ್ಲದೂಳು, ಯಾವುವೋ ವನ್ಯಜೀವಿಗಳ ಉಚ್ಚಿಷ್ಟಗಳೆಲ್ಲಾ ಪದರುಪದರುಗಳಾಗಿ ನೆಲದಲ್ಲಿ ಕುದುರಿ, ದಪ್ಪ ಕಂಬಳಿಯ ಮೇಲೇ ನಡೆದ ಭಾವ ಬರುತ್ತಿತ್ತು. ಅದರ ವಿಶಿಷ್ಟ ವಾಸನೆಗೆ ಬಾವಲಿಮೂರಿಯೂ ಸೇರಿ ನಾವು ಪ್ರತಿ ಹೆಜ್ಜೆಯನ್ನೂ ಅರ್ಧ ಹಿಂಜರಿಕೆಯಲ್ಲೇ ಇಡಬೇಕಿತ್ತು.

ಹಿಂದೆ, ಪೈ ಮಾಸ್ಟ್ರ ಪೀಯೂಸಿ ಮಕ್ಕಳನ್ನು ಕಟ್ಟಿಕೊಂಡು ಬಂದಾಗ ಇಂಥಾ ಯಾವುದೇ ಯೋಚನೆಗಳಿಲ್ಲದೆ ನುಗ್ಗಿದ್ದೆವು. ಆಗ ತೀರಾ ಅನಿರೀಕ್ಷಿತವಾಗಿ ಗುಹೆಯೊಳಗಿಂದ ಆರೆಂಟು ಕಾಡು ಹಂದಿಗಳು ಯಾವ ಆಕ್ರೋಶ ಆಟೋಪವಿಲ್ಲದೆ ನಮ್ಮತ್ತ ಓಡಿ ಬಂದಿದ್ದವು. ನಾನಿನ್ನೂ ಬಾಗಿಲಬಳಿಯೇ ಹುಡುಗರನ್ನು ಮೇಲಿನ ಸ್ತರಕ್ಕೇರಿಸಿಕೊಳ್ಳುವುದರಲ್ಲಿದ್ದುದರಿಂದ ಅನನುಭವಿ ಹುಡುಗರೇ ಸಾಲಿನ ಮುಂಚೂಣಿಯಲ್ಲಿದ್ದರು. ಅದೃಷ್ಟಕ್ಕೆ ಮಕ್ಕಳೆಲ್ಲಾ ವಿಶೇಷ ಗಾಬರಿಗೆಡದೆ ಪಕ್ಕಕ್ಕೆ ಸರಿದು ದಾರಿಕೊಟ್ಟಿದ್ದರು. ಹಂದಿಗಳಾದರೋ ಅಷ್ಟೇ ಸಹಜವಾಗಿ ಪುಟ್ಟ ಡುರುಕಿ ಹಾಕುತ್ತಾ ಸಾಲುಗಟ್ಟಿ ಓಡಿಹೋಗಿದ್ದವು. ಅಂದು, ಗಾಯಾಳು ಕಾಡುಹಂದಿ ದುಂಡೆತ್ತಿ ಹುಲಿಯನ್ನಾದರೂ ಬೆಂಡೆತ್ತುವ ಬೇಟೆ ಕತೆಗಳನ್ನು ಓದಿದ ಪ್ರಭಾವದಲ್ಲಿ, ವನ್ಯಜೀವಿಗಳೆಂದರೆ ಕ್ರೂರಮೃಗಗಳೆಂದೇ ನಂಬಿದ್ದ ನನಗೆ ಆ ಘಟನೆ ನಂಬಲಾಗದ ಸತ್ಯವಾಗಿಯೇ ಕಾಣಿಸಿತ್ತು. ಮುಂದೆ ಎಲ್ಲಾ ಕಾಲದಲ್ಲು ‘ಈ ಬಾರಿ ಅದೃಷ್ಟ ನಮಗೆ ವಿಪರೀತವಾದರೆ ಬರಿಯ ಹಂದಿಯಲ್ಲ ಚಿರತೆಯೋ ಹುಲಿಯೋ ಎದುರಾಗಬಹುದು’, ಭೂಮಿಯಲ್ಲಿ ಮನುಷ್ಯ ಮಾತ್ರ ಅಲ್ಲ ಎಂಬ ಎಚ್ಚರ ಉಳಿಸಿಕೊಂಡೇ ಒಳನುಗ್ಗುತ್ತಿದ್ದೆವು.

ಮಹಾಕೊರಕಲು ಒಳಸರಿದಂತೆ ಕಿರಿದಾಗುತ್ತದೆ. ಸುಮಾರು ಐವತ್ತರವತ್ತಡಿಯ ಕೊನೆಯಲ್ಲಿ ಮೇಲೆ ಕೀಲುಗಲ್ಲುಗಳು ಹೆಚ್ಚುವುದರೊಡನೆ ಬಂಡೆಗಳೂ ಪರಸ್ಪರ ತಾಗಿ ನಿಂತು ಎದುರು ಹೆಚ್ಚುಕಡಿಮೆ ಕತ್ತಲ ಗುಹೆಯೊಂದು ಎದುರಾಗುತ್ತದೆ. (ಈ ಕೊನೆಯಲ್ಲಿ ಎಡಕ್ಕೆ ಇನ್ನೊಂದು ಕೊರಕಲೂ ತೆರೆದುಕೊಳ್ಳುವುದನ್ನೂ ಇಲ್ಲೇ ಹೇಳಿಬಿಡಬೇಕು. ಅದು ನಾವಾಗಲೇ ಕೆಳಗಿಂದ ಕಂಡ ‘ರಾವಣನೆದುರು ಕುಳಿತ ಅಂಗದ’ ಮರದ ಎತ್ತರಕ್ಕೆ ತಲಪಿಸುತ್ತದೆ.) ಗುಹಾದ್ವಾರದಲ್ಲೊಂದು ಭಾರೀ ಬಂಡೆ ತುಂಡು – ‘ಸುಗ್ರೀವಕಲ್ಲು’, ಹಾರುಹೊಡೆದು ಬಿದ್ದಂತಿತ್ತು. (ನನ್ನ ರಾಮಾಯಣದಲ್ಲಿ ವಾಲಿ ಮಾಯಾವಿ ರಕ್ಕಸನನ್ನು ಅಟ್ಟಿಕೊಂಡು ನುಗ್ಗಿದ್ದು ಇದೇ ಕತ್ತಲಮಾಟೆಗೆ. ವಾಲಿ ಒಳಗೆ ದಿನಗಟ್ಟಳೆ ಯುದ್ಧಕೊಡುತ್ತಾ ಕಳೆದುಹೋದಂತಾಗುವಾಗ ದಿಕ್ಕೇಡಿ ದ್ವಾರಪಾಲಕ – ಸುಗ್ರೀವ, ಗುಹೆಯ ಬಾಯಿಗೆ ಅಡ್ಡ ಮುಚ್ಚಿಟ್ಟ ಕಲ್ಲೇ ಇದು. ಮತ್ತೆ ತೆರೆದು ಬಿದ್ದಿದೆಯಲ್ಲಾ ಎನ್ನಬೇಡಿ. ಯುದ್ಧ ಗೆದ್ದ ವಾಲಿ ಹೊರಬರುವಾಗ ಒದ್ದು ತೆರೆದದ್ದೂ ನೆನಪಿಸಿಕೊಳ್ಳಿ!) ಇಲ್ಲಿ ಎರಡು ಬಂಡೆಗೋಡೆಗಳೂ ಸಮೀಪಿಸಿದ್ದರಿಂದ ಸುಮಾರು ಮೂವತ್ತಡಿ ಎತ್ತರದ ಪ್ರಶಸ್ತ ಚಿಮಣಿ ನಮ್ಮನ್ನು ಬೇರೊಂದೇ ಸ್ತರಕ್ಕೆ ಏರಿಸುತ್ತದೆ. ಗಮನಿಸಿ, ಕೊರಕಲ ಬಾಯಿಯಲ್ಲಿ ಕಂಡ ಶಿಖರದೆತ್ತರಕ್ಕೆ ಇದು ನೇರ ರಹದಾರಿ ಅಲ್ಲ.

ಸುಗ್ರೀವ ಕಲ್ಲು ಮೆಟ್ಟಿ ನಿಂತರೆ ನೇರ ಮೇಲೆ ಸುಮಾರು ಮೂವತ್ತಡಿ ಅಂತರದಲ್ಲಿ ದೊಡ್ಡದೊಂದು ಕೀಲುಗಲ್ಲಿದೆ. ಆ ಕಲ್ಲಿನ ಹೊರ ಬದಿಯನ್ನು ಲಕ್ಷ್ಯವಾಗಿಟ್ಟುಕೊಳ್ಳುವುದು ಸುಲಭ ಚಿಮಣಿ ಹತ್ತುವ ಜಾಡು. ಆದರೆ ಕೊನೆಯಲ್ಲಿ ಕೀಲುಗಲ್ಲು ಏರುವಾಗ ಎರಡೂ ಬದಿಯ ಬಂಡೆಯ ಉಬ್ಬುತಗ್ಗುಗಳು ಅನುಕೂಲಕ್ಕೆ ಒದಗುವುದಿಲ್ಲ. ಆಗ ಕೊರಕಲಿನ ಆಳಕ್ಕೆ ಉದುರಿಬೀಳುವ ಆಕಸ್ಮಿಕ ಉಪೇಕ್ಷಿಸುವಂತದ್ದಲ್ಲ. ಈ ಆಕಸ್ಮಿಕದ ವಿರುದ್ಧವೋ ಕನಿಷ್ಠ ಭಯ ನಿವಾರಣೆಗೋ ರಕ್ಷಣಾ ಹಗ್ಗ ಬೇಕೇಬೇಕು. [೭-೯-೮೨ರ ಉದಯವಾಣಿಯ ಕತ್ತರಿಕೆ – ಮೇಲೇರುವ ಮಂತ್ರ, ನೋಡಿ] ಮೊದಲ ಕೀಲುಗಲ್ಲಿನಿಂದ ಸುಮಾರು ಹತ್ತಡಿ ಒಳಗೆ ಇನ್ನೊಂದು ಕೀಲುಗಲ್ಲಿನ ನೆಲೆ ಇದೆ. ಚಿಮಣಿ ಮಾಡುತ್ತಾ ಈ ಎರಡನೆಯ ನೆಲೆಯತ್ತ ಓರೆಯಲ್ಲಿ ಹೋಗುವುದು ಹೆಚ್ಚು ಧೈರ್ಯ ಕೊಡುತ್ತದೆ. ಇದು ಮೊದಲಿಗೆ ತುಂಬ ಸುಲಭವೇ ಕಂಡರೂ ನಾಲ್ಕೈದು ನಡೆ ಎತ್ತರ ತಲಪಿದ್ದೇ ಬಂಡೆಯ ಸಂದು ತೀರಾ ಸಪುರವಾಗಿ ಕೈಕಾಲು ಆಡಿಸುವುದೇ ಪ್ರಯಾಸಕ್ಕಿಟ್ಟುಕೊಳ್ಳುತ್ತದೆ. ಬಂಡೆಗೋಡೆಗಳಲ್ಲಿನ ಹೆಚ್ಚಿನ ಚಡಿ, ಬಿರುಕುಗಳೂ ಕೆಳಮುಖವಾಗಿದ್ದು ಪ್ರಗತಿ ಬಲು ಕಷ್ಟ.

ಚಿಮಣಿ ಜಾಡನ್ನು ಶೋಧಿಸಿದ ತರುಣದಲ್ಲಿ ನಾನು ಏರಲು ಅನುಸರಿಸಿದ ಜಾಡು ಇಂದು ಮರೆತಿದ್ದೇನೆ. ಹಾಗೆಂದು ಪ್ರಾಯ (ಅರೆಮರುಳಿನ ಅಂಚು ತಲಪಿದವನು!) ಮತ್ತು ಅನುಭವದಲ್ಲಿ ಹಿರಿತನದಲ್ಲಿ ಆದರ್ಶ ಕಲ್ಪಿಸುವ ಮುಂದಾಳು ಆಗಿ ನಿಂತು ತಪ್ಪು ಪ್ರದರ್ಶನ ಕೊಡಬಾರದಲ್ಲಾ. ಹಾಗಾಗಿ ರಕ್ಷಣಾ ಹಗ್ಗವಿಲ್ಲದ ನಾನು ಮೊದಲ ಕೀಲುಗಲ್ಲಿನ ಲಕ್ಷ್ಯ ಇಟ್ಟುಕೊಳ್ಳಲಿಲ್ಲ. ಬದಲಿಗೆ ನನ್ನನ್ನು ಅನುಸರಿಸುವವರಿಗೆ ರಕ್ಷಣೆ ಕೊಡುವ ಉದ್ದೇಶದಲ್ಲಿ ರಕ್ಷಣಾ ಹಗ್ಗದ ಒಂದು ತುದಿಯನ್ನು ನನ್ನ ಸೊಂಟಕ್ಕೆ ಕಟ್ಟಿಕೊಂಡು ಎರಡನೇ ಕೀಲುಗಲ್ಲಿನತ್ತ ಏರಿದೆ. ಮೊದಲು ಸ್ಪಷ್ಟ ಚಿಮಣಿ ಭಂಗಿಗಳು ಸಹಕಾರಿಗಳಾಗುತ್ತವೆ. ಮುಂದೆ ಮಡಚಿದಾಗ ಮೊಣಕಾಲು ಸಿಕ್ಕಿಕೊಳ್ಳುವ, ಓರೆಯಲ್ಲಷ್ಟೇ ತಲೆ ದಾಟಿಸುವಷ್ಟು ಚಿಮಣಿ ಸಪುರವಾಗುವಲ್ಲಿ ಹೊಸಬರು ಗಾಬರಿಗೆಡುವಂತಿತ್ತು ನನ್ನ ಚಲನೆ. ಎರಡೂ ಹಸ್ತವನ್ನು ಕೆಳಮುಖವಾಗಿ ಎದುರು ಬಂಡೆಗೊತ್ತಿ ಸೊಂಟ ಮತ್ತು ಭುಜಗಳನ್ನು ಹಿಂದಿನ ಬಂಡೆಗೆ ಅಂಟಿಸಿದೆ. ಕಾಲುಗಳನ್ನು ನೇರ ನೇಲಲು ಬಿಟ್ಟು, ಕೇವಲ ಕೈ ಮತ್ತು ಬೆನ್ನಿನ ತಿಣುಕಾಟದಲ್ಲಿ ಮೇಲೆ ಸರಿದು ಎರಡನೇ ಕೀಲುಗಲ್ಲು ಏರಿಬಿಟ್ಟೆ. ಇಲ್ಲಿ ಮತ್ತೆ ಬಂಡೆ ಸಂದು ತೆರೆದುಕೊಳ್ಳುತ್ತದೆ, ಒಳಕ್ಕೆ ವಿಶಾಲ ಗುಹೆಯನ್ನೂ ತೋರುತ್ತದೆ. ಆದರೆ ಇಷ್ಟು ಸಾಧಿಸುವಲ್ಲಿ ನಾನೆರಡು ಬಾರಿಯಾದರೂ ಅಸಹಾಯಕನಂತೆ ನಿಶ್ಚಲವಾಗಿ ಉಳಿದದ್ದು (ವಾಸ್ತವವಾಗಿ ವಿಶ್ರಾಂತಿ ಪಡೆದದ್ದು) ಮತ್ತು ದಮ್ಮು ಕಟ್ಟಿ ನಡೆಸಿದ ಚಟುವಟಿಕೆಗಳು ವೀಕ್ಷಕರಲ್ಲಿ ಚಳಿ ಹುಟ್ಟಿಸಿತ್ತು. ಹೋಲಿಕೆಯಲ್ಲಿ ಮೊದಲ ಕೀಲುಗಲ್ಲಿನತ್ತ ಸರಿಯುವ ಜಾಡಿಗಿಂತ ಇದು ನಿರಪಾಯಕಾರಿ. ಆದರೆ ಆರೋಹಿಯ ಏರುವ ಛಲ ಮತ್ತು ವೈಯಕ್ತಿಕ ಮಿತಿಗಳನ್ನು ಗರಿಷ್ಠ ಪರೀಕ್ಷಿಸಿ, ಚಿಮಣಿ ಏರುವ ತಂತ್ರವನ್ನು ಯಾರಿಗೂ ಗಟ್ಟಿ ಮಾಡುವುದರಲ್ಲಿ ಈ ಜಾಡು ಗಟ್ಟಿಗವೇ ಸರಿ!

ಇಲ್ಲೇ ಬ್ಲಾಗ್ ಲೋಕದಲ್ಲಿ, ಸ್ವಲ್ಪ ಸಮಯದ ಹಿಂದೆ, ನನ್ನೊಡನೆ ರಂಗನಾಥ ಸ್ತಂಭಕ್ಕೆ ಬಂದವರಿಗೆ ಈಗ ಹೊಸದಾಗಿ ನಾನು ಮತ್ತೆ ಹಗ್ಗ ಬಳಸುವ ಕ್ರಮ ಮತ್ತದು ಒದಗಿಸುವ ಭದ್ರತೆಯ ವಿವರಗಳ ಬಗ್ಗೆ ಅಕ್ಷರ ಹೊಸೆಯುವುದಿಲ್ಲ. ಮೊದಲ ಕೀಲುಗಲ್ಲಿನ ಮೇಲೇ ನನ್ನ ‘ರಕ್ಷಕ’ನ ಸ್ಥಾನವನ್ನು ಗಟ್ಟಿ ಮಾಡಿಕೊಂಡು ಕೆಳಗಿನವರಿಗೆ ಹಗ್ಗ ಕೊಟ್ಟೆ. ನನ್ನ ದೃಷ್ಟಿಗೆ ಕೀಲುಗಲ್ಲು ಅಡ್ಡವಿದ್ದುದರಿಂದ ಆರೋಹಿ ಕಾಣುತ್ತಿರಲಿಲ್ಲ, ಹಾಗಾಗಿ ಸ್ಪಷ್ಟ ನಿರ್ದೇಶನಗಳನ್ನು ಕೊಡದಾದೆ. ಸಹಜವಾಗಿ ಪ್ರತಿಬಾರಿಯೂ ನಾನು ಮೇಲಿನಿಂದಲೇ ಹಾಕಿಕೊಟ್ಟ ವಿಶೇಷ ಗಂಟನ್ನು ಸ್ವಂತ ಸೊಂಟಕ್ಕೆ ಬಿಗಿದುಕೊಳ್ಳುವಲ್ಲಿ ತಪ್ಪುವುದು, ಗೋಡೆ ಮೈಯಲ್ಲಿ ಹಿಡಿಕೆಗಳನ್ನು ಹುಡುಕುವುದು, ರಕ್ಷಣೆಗೆ ಮಾತ್ರ ಇದ್ದ ಹಗ್ಗವನ್ನೇ ಆಧಾರವಾಗಿ ಬಳಸಲು ಎಳಸುವುದು, ಪ್ರಾಣವೇ ಹೋಯ್ತೋ ಎನ್ನುವಂತೆ ವೃಥಾ ಆತಂಕಿಸುವುದು ಇತ್ಯಾದಿ ಇದ್ದದ್ದೇ. ಹೊತ್ತ ಚೀಲ, ಕ್ಯಾಮರಗಳಿರಲಿ ಕೆಲವರು ಕಾಲಿನ ನೆಲೆ ಗಟ್ಟಿ ಮಾಡುವ ನೆಪದಲ್ಲಿ ಶೂ ಕಳಚಿದ್ದೂ ಆಯ್ತು. ಅಂಥದ್ದರಲ್ಲಿ ಒಬ್ಬರನ್ನುಳಿದು ಎಲ್ಲರೂ ಎರಡೋ ಮೂರನೆಯದೋ ಪ್ರಯತ್ನದಲ್ಲಷ್ಟೇ ಉತ್ತೀರ್ಣರಾದರು. ಮತ್ತೆ ಹೆಚ್ಚಿನವರು ನಾನು ನುಸುಳಿದ ಸಂದಿನಲ್ಲೇ ಒದ್ದಾಡಿ ಯಶಸ್ವಿಯಾಗಿದ್ದರು. ಎಲ್ಲ ಬರುವ ಮೊದಲೇ ಕೆಳಗುಳಿದ ಸಾಮಾನು ಸರಂಜಾಮುಗಳನ್ನು ಹಗ್ಗದಲ್ಲಿ ಕಂತುಗಳಲ್ಲಿ ಕೊಡಪಾನದಂತೆ ಮೇಲೆಳೆದುಕೊಂಡಿದ್ದರಿಂದ ಮುಂದಿನ ಹಂತಕ್ಕೆ ನಿರಾತಂಕ ಬಡ್ತಿ ತೆಗೆದುಕೊಂಡೆವು.

ಎರಡನೇ ಕೀಲುಗಲ್ಲಿನಿಂದಾಚೆ ಗುಹೆ ಹತ್ತು ಹನ್ನೆರಡಡಿ ಒಳಕ್ಕೆ ಚಾಚಿಕೊಂಡಿತ್ತು. ಆ ಕೊನೆಯಲ್ಲೊಂದು ದೊಡ್ಡ ಬೆಳಕಿಂಡಿ. ಆಚೆಗೆ ಕೆಳನೋಟಕರಿಗೆ ನೇರ ನೂರಿನ್ನೂರು ಅಡಿಯ ಪಶ್ಚಿಮದ್ದೇ ಅಂದರೆ ನಾವು ಕಾರುಬಿಟ್ಟು ಬಂದ ಕೊಳ್ಳದ್ದೇ ದರ್ಶನ. ಆ ಕಂಡಿ ಭಾರೀ ಬಂಡೆ ಗುಂಡುಗಳ ಒಟ್ಟಣೆಯಲ್ಲಿ ಒದಗಿದ್ದರಿಂದ ಬಹುಮಹಡಿಯ ಕಿಟಕಿಯೊಂದರಿಂದ ಇಣುಕುವ ಅಥವಾ ಹೊರನುಸುಳುವ ಅಪಾಯವೇನೂ ಇರಲಿಲ್ಲ. ಆದರೂ ರಕ್ಷಣಾ ಹಗ್ಗವನ್ನು ಕೈತಾಂಗಿನಂತೆ ವ್ಯವಸ್ಥೆ ಮಾಡಿದ್ದಾಯ್ತು. ಒಬ್ಬೊಬ್ಬರೇ ಕಂಡಿಯಿಂದ ನಿಧಾನಕ್ಕೆ ತೂರಿ ಹೊರ ಬಂದು, ಹಿಂದಕ್ಕೆ ತಿರುಗಿ, ಸುಲಭ ಓರೆಯಲ್ಲಿ ಹುದುಗಿಸಿಟ್ಟಂತ ಪುಟ್ಟಪುಟ್ಟ ಬಂಡೆಯ ಮೇಲೆ, ಎಡೆಎಡೆಯಲ್ಲಿ ಬೆಳೆದ ಹುಲ್ಲಿನ ಆಧಾರದಲ್ಲಿ ಸ್ವತಂತ್ರವಾಗಿಯೇ ಸುಮಾರು ಮೂವತ್ತಡಿ ಹತ್ತಿದೆವು. ಅಲ್ಲೊಂದು ಬಾಲ್ಕನಿಯಂತ ಸ್ವಲ್ಪ ವಿಸ್ತಾರವಾದ ಜಾಗ. ಚಿಮಣಿ ಏರಿದ, ಪ್ರಪಾತದ ಭಯ ಹತ್ತಿಕ್ಕಿ ಮೇಲೆ ಬಂದ ಸಂಭ್ರಮವೆಲ್ಲವನ್ನೂ ಇಲ್ಲಿ ವಿರಾಮದಲ್ಲಿ ಕುಳಿತು ಸುಧಾರಿಸಿಕೊಂಡೆವು. ಬಲ ತಪ್ಪಲಿನ ಕಲ್ಲಕೋರೆ, ಎಡ ಮಗ್ಗುಲಿನಲ್ಲಿ ಪುಟ್ಟ ಕೆರೆ, ಅನತಿ ದೂರದಲ್ಲಿ ರಣಗುಡುವ ಬಿಸಿಲಿನಲ್ಲಿ ನಮ್ಮ ಕಾರು, ಮತ್ತಾಚೆ ಕರಿಕಾಯುವ ಡಾಮರು ದಾರಿ. ಮುಂದುವರಿದ ನೋಟಕ್ಕೆ ಮೂಡಬಿದ್ರೆಯೇನು, ಕಾರ್ಕಳವೇನು, ಮಂಜುಮಸುಕು ಬಿಟ್ಟರೆ ದಿಗಂತದಲ್ಲಿ ಸಾಕ್ಷಾತ್ ಅರಬ್ಬೀ ಸಮುದ್ರವೂ ಹಾಜರಿ ಹಾಕಬಹುದಿತ್ತು. ಬೆವರೊರಸಿ, ತರಚಲು ಗಾಯಗಳ ಲೆಕ್ಕ ತೆಗೆದು, ನೆನಪಿಗೆ ಮೊಬೈಲ್, ಕ್ಯಾಮರಾಗಳಲ್ಲಿ ಒಂದೆರಡು ಕ್ಲಿಕ್ಕಿಸಿ ನಿಶ್ಚಿಂತ ತಾಣ ಸೇರುವ ತರಾತುರಿ ಎಲ್ಲರದು. ಮಧ್ಯಾಹ್ನದ ಒಂದೂವರೆ ಗಂಟೆಯೇ ಕಳೆದಿದ್ದರೂ ಶಿಖರ ತಲಪುವವರೆಗೆ ನೀರೊಂದನ್ನುಳಿದು ಇನ್ನೇನನ್ನೂ ಯೋಚಿಸದ ಸ್ಥಿತಿ ವರ್ತಮಾನದ ತಂಡದ್ದು. ಆದರೆ…

ಸುಮಾರು ಮೂವತ್ತು ವರ್ಷದ ಹಿಂದೆ ಹೀಗೇ ನನ್ನ ನಂಬಿ ಬಂದ (ಮುಖ್ಯವಾಗಿ ಎಂಸಿಎಫ್ ಮಿತ್ರರು) ಹತ್ತು ಮಂದಿಯ ಕೂಟದ ಉತ್ಸಾಹ ಬೇರೆ ಬಗೆಯದು. ಚಿಮಣಿ ಏರಿಕೆಯಲ್ಲಿ ಅನಿವಾರ್ಯತೆ ಮೂಡಿಸಲು ನಿಮಿರುಗಿವಿ ಮಂಡೆಗೆ ಅನ್ಯ ಮತ್ತು ಸುಲಭ ಮಾರ್ಗಗಳಿಲ್ಲ ಎಂದೇ ಅವರನ್ನು ನಂಬಿಸಿದ್ದೆ. ತಂಡ ದೊಡ್ಡದೇ ಇದ್ದರೂ ಇಂದಿನದ್ದಕ್ಕೆ ಹೋಲಿಕೆಯಲ್ಲಿ ಸಾಕಷ್ಟು ಬೇಗನೇ ಈ ಬಂಡೆ-ಬಾಲ್ಕನಿ ತಲಪಿದ್ದೆವು. ವಿಶ್ರಮಿಸುವಾಗಲೂ ಮುಂದಿನ ಸಾಧ್ಯತೆಗಳನ್ನು ಶೋಧಿಸುವ ದೃಷ್ಟಿಯಲ್ಲಿ ಎಲ್ಲ ವಿರಮಿಸಿರಲಿಲ್ಲ. ಇಲ್ಲಿ ಮೂಲ ನಿಮಿರುಗಿವಿಯ ಬಂಡೆ (ನೆಲದಿಂದೆದ್ದದ್ದು) ಸ್ವಲ್ಪ ಸಪಾಟಾಗಿಯೇ ಮುಗಿದಂತಿತ್ತು. ಅದರ ಮೇಲೆ ಎರಡು ಭಾರೀ ಬಂಡೆ ಹೋಳುಗಳು ಒಂದನ್ನೊಂದು ನೂಕಿ ನಿಂತದ್ದೇ ನಮ್ಮ ಬಾಲ್ಕನಿಯ ರಚನೆ. ಈ ಬಂಡೆಗಳ ಬುಡದಲ್ಲಿ ಪೂರ್ವಕ್ಕೆ ತೆರೆದಿದ್ದ ತೆವಳು ಸಂದಿ ಅಥವಾ ಸುರಂಗ ಎನ್ನಿ, ನಮ್ಮ ಮುಂದಿನ ದಾರಿ ಎಂದೂ ತಂಡಕ್ಕೆ ತೋರಿಸಿದ್ದೆ. ಆದರೆ ಉತ್ತರದ ಬಂಡೆ ಹೋಳು ಮುಖ್ಯ ಬಂಡೆಯ ಅಂಚಿನಿಂದ ಸ್ವಲ್ಪ ಹಿಂದೆ ನಿಂತಿತ್ತು. ಸಹಜವಾಗಿ ಅಲ್ಲೊಂದು ತಗ್ಗಿ ನಡೆಯಬಹುದಾದ ಮುಂಚಾಚಿಕೆ ಇತ್ತು. ಹಗ್ಗದ ರಕ್ಷಣೆಯಿದೆಯಲ್ಲಾಂತ ಇದರಲ್ಲಿ ನಡೆದು ಶಿಖರಕ್ಕೆ ಇನ್ನೊಂದೇ ಜಾಡು ಶೋಧಿಸಿದ್ದು ಅಂದಿನ ಸಾಧನೆ. ಬಂಡೆನೆಲ ಪ್ರಪಾತದತ್ತ ತುಸುವೇ ಇಳಿಜಾರಾಗಿತ್ತು. ಸಾಲದ್ದಕ್ಕೆ ಮೇಲೆ ಕುಳಿತ ಬಂಡೆಯಡಿಯಿಂದ ಮಳೆಗಾಲದಲ್ಲಿ ಹಿಡಿದಿಟ್ಟ ನೀರಪಸೆ ಜಿನುಗಿ ಹರಿದು ಅಲ್ಲಲ್ಲಿ ಹಸಿರು ಅರಶಿನಗಳ ವಿವಿಧ ಛಾಯೆಯ ಪಾಚೀ ಜಾಡು ಇನ್ನೂ ಹಸಿಮಿನುಗುತ್ತಿತ್ತು. ಎಲ್ಲಕ್ಕೂ ಹೆಚ್ಚಿನ ಭಯ ಹುಟ್ಟಿಸುವಂತೆ ಹತ್ತು ಹೆಜ್ಜೆಯಾಚೆ ಭಾರೀ ಹೆಜ್ಜೇನಿನ ಹುಟ್ಟೊಂದು ಗೊಂಯ್ ಗುಡುತ್ತಲೂ ಇತ್ತು. ಅಂದಿನ ನನ್ನಂಗಡಿ ಸಹಾಯಕ – ಪ್ರಕಾಶ್ ನಾಟೇಕರನಲ್ಲೋ ಗೊಬ್ಬರ ಕಂಪನಿಯೊಂದರ ಪ್ರತಿನಿಧಿಯಾಗಿದ್ದ ಮಿತ್ರ ಕಿರಣ್ ಕುಲಕರ್ಣಿಯಲ್ಲೋ ಹಗ್ಗ ಹಿಡಿದುಕೊಳ್ಳಲು ಕೊಟ್ಟು ನಾನೇ ಮುಂದುವರಿದಿದ್ದೆ. ಸಾಕಷ್ಟು ಜೇನ್ನೊಣಗಳು ರೆಕ್ಕೆ ಕಂಪಿಸುತ್ತಾ ನೀರಪಸೆ ನೆಕ್ಕಲು ನೆಲದಲ್ಲಿದ್ದವು. ನಾನೆಷ್ಟು ತಗ್ಗಿ, ಬಗ್ಗಿ ನಡೆದರೂ ಒಂದೊಂದು ಕೆಲಸಗಾರ ನೊಣ ಗೂಡಿಗೆ ಧಾವಿಸುವಲ್ಲಿ ನನಗೆ ಡಿಕ್ಕಿ ಹೊಡೆದದ್ದೂ ಇತ್ತು. ಆದರೆ ನಾನು ಯಾವವಕ್ಕೂ ನೋವು ಉಂಟಾಗಿ, ಒಟ್ಟಾರೆ ಹಿಂಡು ಕೆರಳದ ಎಚ್ಚರವಹಿಸಿ ಕೆಲಸ ಪೂರೈಸಿದ್ದೆ. ಆದರೆ ಸ್ವಲ್ಪೇ ಸಮಯದನಂತರ ನಡೆದ ಭಾರೀ ಆಕಸ್ಮಿಕದ ಮುನ್ನೆಲೆಯಲ್ಲಿ ಈ ‘ಸಾಹಸ’ ಎಷ್ಟು ದೊಡ್ಡ ಮೂರ್ಖತನವೆಂದು ಯಾವತ್ತೂ ಅನ್ನಿಸಿದೆ. ಅದರ ವಿವರಗಳನ್ನು ಮುಂದಿನ ಕಂತಿಗಿಟ್ಟುಕೊಂಡು ಇಂದೇನಾಯ್ತೂಂತ ಸದ್ಯ ಮುಗಿಸಿ ಬಿಡ್ತೇನೆ.

ಬಂಡೆಹೋಳುಗಳ ಬುಡದ ಸುರಂಗದಲ್ಲಿ ಒಬ್ಬೊಬ್ಬರೇ ತೆವಳಿ ದಾಟಿದರು. ಆಚೆ ಕೊನೆಯಲ್ಲಿ ನಡೆಯಲು ಸುಮಾರು ಎರಡಡಿಯಷ್ಟೇ ಅಗಲದ ಅಂಚು ಉಳಿಸಿ ಮತ್ತೆ ಪ್ರಪಾತ ಬಾಯಿ ತೆರೆದಿತ್ತು. ಅಲ್ಲಿ ಕಾಲು ಜಾರಿದರೆ ನಾವು ಚಿಮಣಿ ಏರಿಕೆಗೆ ತೊಡಗಿದ ಸುಗ್ರೀವ ಬಂಡೆಗೇ ಅಪ್ಪಳಿಸಬಹುದಿತ್ತು. ಶಿಲಾರೋಹಣದಲ್ಲಿ ಅಪಾಯಗಳ ಅಂದಾಜು ಸ್ಪಷ್ಟ ಕಂಡುಕೊಂಡಂತೇ ಕ್ರಿಯೆಯಲ್ಲಿ ಅದನ್ನು ಮೀರುವ ಧೈರ್ಯ ಇರಲೇಬೇಕು. (ಜೀವನದಲ್ಲೂ ಹಾಗೇ ಬಿಡಿ) ಇದು ಕೆಲವರಿಗೆ ಸ್ವಭಾವತಃ ಇರುತ್ತದೆ, ಹಲವರಿಗೆ ಬುದ್ಧಿಪೂರ್ವಕವಾಗಿ ರೂಢಿಸಿಕೊಳ್ಳಬೇಕಾಗುತ್ತದೆ. ‘ಆಳದ ಭಯ’ (Vertigo) ಎನ್ನುವುದು ಒಂದು ಮಾನಸಿಕ ಸ್ಥಿತಿಯಾಗಿಯೇ ಹಲವರನ್ನು ಕಾಡುತ್ತದೆ. ಅಂಥ ಒಂದಿಬ್ಬರು ಈ ಪ್ರಪಾತದಂಚಿನ ನಡಿಗೆಯನ್ನು ನಮ್ಮೆಲ್ಲರ ಬಹುವಾದ ಉತ್ತೇಜಕ ಮಾತುಗಳ ನಡುವೆಯೂ ಅಕ್ಷರಶಃ ತೆವಳಿ ಮುಗಿಸಿದರು! ಹೀಗೆ ಪಶ್ಚಿಮದ ಬಾಲ್ಕನಿಯಿಂದ ಬಂದು ತಲಪಿದ ಜಾಗವನ್ನು ಪೂರ್ವ ಬಾಲ್ಕನಿ ಎನ್ನಬಹುದು. ಇಲ್ಲಿ ನಾವು ನುಸುಳಿ ಬಂದ ಎರಡು ಬಂಡೆ ಹೋಳುಗಳ ಮೂಲಾಧಾರವಾದ ನಿಜಶಿಖರದ ಅತ್ಯುನ್ನತ ಕೇಂದ್ರದ ಬುಡ ಕಾಣುತ್ತೇವೆ. ಈ ಅಂಶ ಒಂದೆಡೆ ಬಂಡೆ ಹೋಳಿನ ನಡುವೆ ಸುಮಾರು ಎಂಬತ್ತಡಿ ಎತ್ತರದ ನೇರ ಚಿಮಣಿ ಮಾರ್ಗದಲ್ಲೂ ಇನ್ನೊಂದೆಡೆ ಸ್ವಲ್ಪ ಪ್ರಪಾತದಂಚಿನಲ್ಲಿ ನಡೆದರೆ ಸುಲಭದ ಬಳಸು ನಡಿಗೆ ದಾರಿಯಲ್ಲೂ ಶಿಖರವನ್ನು ತೋರಿಸುವುದಿತ್ತು. ನನ್ನ ಮೊದಮೊದಲ ಕೊಡಂಜೆ ಕಾರ್ಯಕ್ರಮಗಳಲ್ಲಿ ಅನುಸರಿಸುವವರಿಗೆ ಸುಲಭದ ದಾರಿಯ ಇರವನ್ನೇ ನಾನು ಬಿಟ್ಟುಕೊಡದೇ ಚಿಮಣಿ ಹತ್ತುವುದನ್ನು ಅನಿವಾರ್ಯ ಮಾಡಿಸಿ ನಗುತ್ತಿದ್ದೆ! ಆದರೆ ಆಗಲೇ ಸೂಚಿಸಿದ ಎಂಸಿಎಫ್ ಬಳಗದ ಅನುಭವದ ಪಾಠ ನನ್ನಿಂದ ಆ ತುಂಟತನವನ್ನು ಇಂದು ದೂರ ಮಾಡಿದೆ. ಅಂದಿನ ಬಳಗಕ್ಕೆ ಎರಡನೇ ಚಿಮಣಿ ಅನಿವಾರ್ಯ ಮಾರ್ಗ. ಇಂದಿನ ಬಳಗ ಎರಡನೇ ಚಿಮಣಿಗೆ ಒಡಂಬಡಲಿಲ್ಲ.

ಆಳದ ಭಯ ಇರುವವರಿಗೆ ‘ಸುಲಭದಮಾರ್ಗ’ವೂ ಅಷ್ಟೇನೂ ಸುಲಭವಾಗಲಿಲ್ಲ. ಮತ್ತೆ ಇಪ್ಪತ್ತು ಮೂವತ್ತಡಿ ದೂರವನ್ನು ಯೋಗ್ಯತಾನುಸಾರ ನಡೆದು, ನಾಲ್ಗಾಲರಾಗಿ, ತೆವಳಿಯೂ ಪಾರುಗಾಣಿಸಿದ್ದಾಯ್ತು. ಇದು ಶಿಖರವಲಯದ ವಿರಾಮ ತಟ್ಟು. iತ್ತೆ ಸ್ವಲ್ಪವೇ ಆರಾಮ ನಡಿಗೆಯಲ್ಲಿ ಉತ್ತರಕ್ಕೆ ಸರಿದು, ಹಿಮ್ಮುಖರಾಗಿ ಕೆಲವು ಪುಡಿಬಂಡೆಗಳನ್ನು ಸುಲಭವಾಗಿ ಹತ್ತುವುದಷ್ಟೇ ಬಾಕಿಯಿತ್ತು. ಆದರೆ ಗಂಟೆ ಎರಡೂವರೆಯಾಗಿದ್ದುದರಿಂದ ಉದರದ ಕರೆಗೆ ಮೊದಲ ಆದ್ಯತೆ. ಮೂಡಬಿದ್ರೆಯಲ್ಲಿ ತಿಂಡಿ ಕಟ್ಟಿಸಿಕೊಳ್ಳುವಾಗ ನಾವು ಜಿಪುಣರಾಗಬಾರದಿತ್ತು ಎಂಬ ಭಾವ ಕೆಲವರಲ್ಲಿತ್ತು. ಆದರೆ ರೋಹಿತ್ ಮತ್ತು ಅಭಿನವರ ಪಾಲು ನಮ್ಮ ಚೀಲಗಳಲ್ಲೇ ಬಂದದ್ದು, ಕೆಲವು ಮಿತ್ರರು ಮನೆಯಿಂದ ತಂದ ಸಣ್ಣ ಹೆಸರಿನ ದೊಡ್ಡ ತಿನಿಸುಗಳು ನಮಗೆ ಅಜೀರ್ಣವಾಗುವಷ್ಟಿತ್ತು! ನೀರು ಮಾತ್ರ ಬಂಡೆಯ ಬುಡ ಮುಟ್ಟುವವರೆಗೆ ಸ್ವಲ್ಪವಾದರೂ ಉಳಿಸಿಕೊಳ್ಳಬೇಕೆಂಬ ತಾಕೀತಿನ ಮೇಲೆ ರೇಶನ್ ಮಾಡಿಕೊಂಡೆವು.

ಜಠರಾಗ್ನಿ ತಣಿಯುತ್ತಿದ್ದಂತೆ ಸುತ್ತಣ ನೋಟ ಮನಸ್ಸಿಗಿಳಿಯತೊಡಗಿತು. ಊಟಕ್ಕೆ ಕುಳಿತ ಸ್ಥಳ ಸಣ್ಣ ಪುಡಿಗಲ್ಲುಗಳ ಒಂದು ಸಣ್ಣ ಮರೆ, ತಟ್ಟು. ಅಲ್ಲಿ ಹಿಂದೆ ಎಂಸಿಎಫ್ ಬಳಗದ ಭೇಟಿಯ ಕಾಲದಲ್ಲಿ ನಾಲ್ಕು ಒಣ ಹುಲ್ಲಿನ ಬುಡಗಳಷ್ಟೇ ಇದ್ದವು. ಇಂದು ಆಶ್ಚರ್ಯಕರವಾಗಿ ಹಾಲೊಸರುವ ಭಾರೀ ಗಿಡವೊಂದು ಹಸುರು ನಳನಳಿಸುತ್ತಿತ್ತು. ಅದರ ಬೆಳವಣಿಗೆಯ ಸ್ದಮೃದ್ಧಿ. ಹೊತ್ತ ಅಸಂಖ್ಯ ದೋರೆಗಾಯಿಗಳು ಪ್ರಕೃತಿಯ ಧಾರಾಳತನಕ್ಕೆ ದೊಡ್ಡ ಸಾಕ್ಷಿ. ನಮ್ಮ ಮಟ್ಟಿಗೆ ಅದರ ತಿನ್ನುವ ಯೋಗ್ಯತೆ ಏನೇ ಇರಲಿ, ಆ ಇರುಕಿನಲ್ಲಿ ಬೆಳೆದ ಅದರ ನಿಜ ಫಲಾನುಭವಿಗಳು ಬೇರೇ ಇದ್ದಾರೆ (ಮಂಗ, ಹಕ್ಕಿಗಳು?) ಎಂಬ ಅರಿವು ಮತ್ತು ಒಟ್ಟಾರೆ ಗಿಡವನ್ನು ಇದ್ದಂತೇ ಕೇವಲ ನೋಡಿ ಸಂತೋಷಪಡುವ ಎಚ್ಚರ ನಮ್ಮದಾಗಿತ್ತು. ಜೊತೆಗೆ ಅದು ಯಾವ ರೀತಿಯಲ್ಲೂ ಮನುಷ್ಯನ ಉಪಯೋಗಕ್ಕೆ ಒದಗದಿರಲಿ ಎಂಬ ಹಾರೈಕೆಯೂ ದೃಢವಾಗಿತ್ತು!

ನಮ್ಮ ಪದತಲದಿಂದ ಉತ್ತರಕ್ಕಿದ್ದ ಇಳಿಜಾರಿನಲ್ಲಿ ಹಿಂದಿನ ಯಾರೋ ಉತ್ಸಾಹಿಗಳು ಕಲ್ಲುಗೀರಿ ಏರು ದಾರಿಗೆ ಬಾಣದ ಗುರುತುಗಳನ್ನು ಹಚ್ಚಿದ್ದು ಕಾಣುತ್ತಿತ್ತು. ಇದು ಸಾಮಾನ್ಯರು ‘ಕತ್ತೆ ಮಂಡೆ’ಯಿಂದ ನಿಮಿರುಗಿವಿಗೇರಲು ಬಳಸುವ ದಿಕ್ಕು. ಬಂಡೆಯ ಸ್ವಾಭಾವಿಕ ದಿಣ್ಣೆ ತಗ್ಗುಗಳನ್ನನುಸರಿಸಿ ಸುಮಾರು ನಾನೂರು ಐನೂರು ಅಡಿಯ ‘ಜಾರುಬಂಡೆ’ಯ ಕೊನೆಯಲ್ಲಿ ಕತ್ತೆಮಂಡೆ, ಅರ್ಥಾತ್ ಗಿಡಮರಗಳ ಆಧಾರ ಒದಗುವ ದೃಢನೆಲ. ಕಟ್ಟಿಯೋ ಕಡಿದೋ ಮಾಡಿದ ಮೆಟ್ಟಲುಗಳೂ ಆಧರಿಸಲು ಪೈಪಿನ ಕೈತಾಂಗಲ್ಲದಿದ್ದರೂ ಕನಿಷ್ಠ ಪುಡಿಗಲ್ಲುಗಳ ಒಟ್ಟಣೆಯನ್ನಾದರೂ ನಿರೀಕ್ಷಿಸಿದ್ದ ನಮ್ಮ ಬಳಗದ ಕೆಲವು ಮಂದಿಯ ಇಳಿಯುವ ಚಿಂತೆಯನ್ನು ಈ ನೋಟ ಹೆಚ್ಚಿಸಿತು! iಂಡೆಯ ತಟ್ಟಿನ ಆಚೆಗೆ ‘ಮೊಂಡುಗಿವಿ’ಯನ್ನು ಅವರೆಲ್ಲ ಮೊದಲ ಬಾರಿಗೆ ನೋಡುತ್ತಿದ್ದರು. ನೆಲದಲ್ಲಿ ಅರ್ಧಕ್ಕೆ ಹುಗಿದ ಭಾರೀ ಗೋಲದ ದಕ್ಷಿಣ ಮುಖವನ್ನು ಶಿಖರದಿಂದ ನಾಭಿಯವರೆಗೆ ಸಪಾಟಾಗಿ ಕೆತ್ತಿ ಇಟ್ಟಂತಿತ್ತು ಆ ಬಂಡೆ. ನಾಭಿ ಎಂದೆನೇ ಹೌದು, ಬಂಡೆಯ ಸುಮಾರು ಆ ಎತ್ತರದಲ್ಲಿ ಒಂದು ಪ್ರಾಕೃತಿಕ ಗುಹೆ ತೆರೆದು ನಿಂತಿದೆ. ಅದರಲ್ಲಿ ಮಳೆಗಾಲದ ನೀರು ತುಂಬಿ ಮಿತಿಯರಿತು ಬಳಸುವ ಪ್ರಾಣಿಪಕ್ಷಿಗಳೇನು ಮನುಷ್ಯನಿಗೂ ಸರ್ವ ಋತುಗಳಲ್ಲಿ ಕುಡಿಯಲು ಒದಗಿಸುವ ತಾಕತ್ತು ಉಳಿಸಿಕೊಂಡಿದೆ. ಆದರೆ ಅದನ್ನು ಬಳಸುವ ನಮ್ಮ ಜನಗಳ ಸಾರ್ವಜನಿಕ ಶುಚಿತ್ವದ ಬಗ್ಗೆ, ಪರಿಸರಪ್ರಜ್ಞೆಯ ಬಗ್ಗೆ ನನಗೆ ಹೊಸತೇನೂ ಹೇಳುವುದುಳಿದಿಲ್ಲವಾದ್ದರಿಂದ ಇಲ್ಲೇ ಎಚ್ಚರಿಗೆ ಹೇಳಿಬಿಡುತ್ತೇನೆ. ನಿಮ್ಮ ಕೊಡಂಜೆ ಭೇಟಿ ಕಾಲದಲ್ಲಿ ಮೊದಲು ಸಿಕ್ಕ ಪುಟ್ಟ ಕೆರೆಯಂತೆ ಇದನ್ನೂ ಕೇವಲ ನೋಡಿ ಸಂತೋಷಪಡಿ. ನೀರಗುಹೆಯ ಎದುರು ಬಂಡೆಯೊಂದಷ್ಟು ವಿಸ್ತಾರಕ್ಕೆ ಜಗುಲಿ ಕೊಟ್ಟಿದೆ. ಅಲ್ಲೇ ನೀರಬಲದಲ್ಲಿ ಎದ್ದು, ಬಲಿತ ಒಂದು ಭಾರೀ ಮರವಂತೂ ಧಾರಾಳ ನೆರಳು ಒದಗಿಸುತ್ತದೆ. ಪಡುವಣಗಾಳಿ ‘ಕಿವಿ’ಗಳೆಡೆಯಲ್ಲಿ ವರ್ಷಪೂರ್ತಿ ನುಸಿದು ಸಾಗುವ ಪರಿಗೆ ಮೈಯೊಡ್ಡಿ ಮಲಗಿದರೆ ಅದ್ಭುತ ಪ್ರಕೃತಿಧಾಮ; ನಿವಾಳಿಸಿ ಬಿಸಾಕಬೇಕು ಎಲ್ಲ ನಾಗರಿಕ ವಿರಾಮಧಾಮ. ಅವೆಲ್ಲವನ್ನು ಇಳಿದ ಮೇಲೆ ಹೆಚ್ಚಿನ ವಿವರಗಳಲ್ಲಿ ನೋಡಲು, ಅನುಭವಿಸಲು ಸಂಕಲ್ಪಿಸಿ ಇರುವುದನ್ನು ಅನುಭವಿಸಲು ಸಜ್ಜುಗೊಂಡೆವು. [ನೋಡಿ: ೨೭-೮-೮೨ರ ಉದಯವಾಣಿ ಕತ್ತರಿಕೆ – ಪ್ರಕೃತಿಸಿರಿ]

ಪುಡಿಬಂಡೆಗಳನ್ನುತ್ತರಿಸಿ ಶಿಖರದ ಅತ್ಯುನ್ನತ ದಿಬ್ಬದಲ್ಲಿ ನಿಂತದ್ದಾಯ್ತು. ಅದರ ಪಕ್ಕದಲ್ಲೇ ನಾಲ್ಕಡಿ ಕೆಳ ಸರಿದರೆ ನಮ್ಮವರು ನಿರಾಕರಿಸಿದ ಎರಡನೇ ಚಿಮಣಿಯ ನೆತ್ತಿ ಬಾಯಿಬಿಟ್ಟು ದರ್ಶನ ಕೊಟ್ಟಿತು. ಅದರ ಮೇಲೆ ಸೇತುವೆಯಂತೆ ಬಿದ್ದಿದ್ದ ದೊಡ್ಡ ಬಂಡೆ ಮೆಟ್ಟಿ ಮುಂಚಾಚಿಕೊಂಡಿದ್ದ ಶಿಖರದ ಜೋಡಿ ಕಲ್ಲಿನ ಮೇಲೂ ನಿಂತು ಸಂಭ್ರಮಿಸಿದ್ದಾಯ್ತು. ಇತ್ತ ಮೂಡಬಿದ್ರೆಯಿಂದ ಕಾರ್ಕಳದವರೆಗೂ ಅತ್ತ ನಾರಾವಿ ಕುದುರೆಮುಖದವರೆಗೂ ಭೂಪಟವೇ ವಿಸ್ತರಿಸಿ ಬಿದ್ದಂತೆ ಸ್ಥಳಗಳನ್ನು ಗುರುತಿಸಿ ಆನಂದಿಸಿದೆವು. ಉರಿಬಿಸಿಲು ಮರೆಯುವಂತೆ ಬೀಸುತ್ತಿದ್ದ ತಂಗಾಳಿಯೊಡನೆ ಭಾವಶ್ರುತಿಯನ್ನು ಮೇಳೈಸಿ ಒಮ್ಮೆಗಂತೂ ಇಳಿಯುವ ಚಿಂತೆಯನ್ನು ಎಲ್ಲರೂ ಮರೆತರು ಎಂದರೆ ಅತಿಶಯೋಕ್ತಿಯಲ್ಲ!

‘ಚಿಮಣಿಯ ಏರುಜಾಡು ನಿಸ್ಸಂದೇಹವಾಗಿ ತೊಂಬತ್ತು ಡಿಗ್ರಿಯದ್ದಿತ್ತು. ಇಳಿದಾರಿ ಸುಲಭವೆಂದುಕೊಂಡರೆ, ಅರುವತ್ತು ಎಪ್ಪತ್ತು ಡಿಗ್ರಿ! ಅಲ್ಲಿ ಒಂದೇ ಪೆಟ್ಟಿಗೆ ಪಾತಾಳವಾದರೆ ಇಲ್ಲಿ ಉರುಳುರುಳಿ ಅದೇ ಸ್ಥಿತಿಗೆ ಮುಟ್ಟುವ ಅಪಾಯ ನಿಶ್ಚಯ’ – ಇದು ಕೆಲವರ ಮನಸ್ಸಿನ ದುಮ್ಮಾನ. ವಾಸ್ತವದಲ್ಲಿ ಬಂಡೆ ಧಾರಾಳ ಚಕ್ಕೆ ಎದ್ದು, ಒಡಕು ಬಿರುಕುಗಳಿಂದ ಅನುಭವಿಗಳಿಗೆ ಖಚಿತ ಮತ್ತು ನಿರಪಾಯಕರವಾದ ಜಾಡು ತೋರುತ್ತಿತ್ತು. ಆದರೆ ಆಳದ ಭಯ ಹತ್ತಿಕ್ಕಲಾಗದವರು ಏರುವಲ್ಲಿ ಕವುಚಿ ತೆವಳಿದ್ದರೆ, ಈಗ ಕುಳಿತು ಅಂಡೆಳೆದರು. (ಎಲ್ಲ ಮುಗಿದು ಮೂಡಬಿದ್ರೆಯಲ್ಲಿ ನಾವು ಕಾಫಿಗೆ ಹೋಗುವಾಗ ಒಬ್ಬ ಜರ್ಕಿನ್ನನ್ನು ತನ್ನ ಹಿಂಬದಿಗೆ ಮುಚ್ಚಿಕೊಳ್ಳುತ್ತಿದ್ದದ್ದು ಸುಮ್ಮನಲ್ಲ!) ಹಗ್ಗದ ರಕ್ಷಣೆ ಕೊಟ್ಟು, ಸರಿಯಾದ ಅವರೋಹಣ ಕ್ರಮಗಳನ್ನು ಹೇಳಿದ್ದೆಲ್ಲ ಪಾಠಪಟ್ಟಿಗೂ ಮೊದಲೇ ಗೈಡ್ ಹುಡುಕಿಟ್ಟವರಂತೆ ಉಪೇಕ್ಷಿಸಿದವರೇ ಹೆಚ್ಚು. ಹಾಗೂ ಹೀಗೂ ಕತ್ತೆಮಂಡೆ ಮುಟ್ಟಿದಾಗ ಹೆಚ್ಚಿನವರಿಗೆ ಇನ್ನು ಹೆಚ್ಚೇನೂ ಸಾಧ್ಯವಿಲ್ಲ ಎನ್ನುವ ಧನ್ಯತೆಯೋ ದಣಿವೋ ಬಂದಿತ್ತು. ನನ್ನ ಒತ್ತಾಯಕ್ಕೆ ಮೊದಲಿಳಿದ ಒಂದಿಬ್ಬರು ಮೊಂಡುಗಿವಿಯ ನೀರಗುಹೆಯನ್ನು ನೋಡಿ ಬಂದರು. ಅನಂತರ ಎಲ್ಲ ಒಟ್ಟಾದಾಗ ನೀರಗುಹೆ, ಪೂರ್ವ ತಪ್ಪಲಿಗಾಗಿ ಆಶ್ರಮ ನೋಡುವುದು ಕಾರ್ಯಕ್ರಮಗಳನ್ನು ನಿರಾಕರಿಸಿ, ನೇರ ಕಾರಿಗಿಳಿಯುವುದರತ್ತವೇ ಮನಸ್ಸು ಮಾಡಿದರು. ಕೊಡಂಜೆ ಸಮೂಹದ ಪಶ್ಚಿಮ ಮೈಯ ದಟ್ಟ ಕಾಡು, ಪೊದರು, ಆಗೀಗ ದಿಕ್ಕು ತಪ್ಪಿಸಲೇಬೇಕಾಗುವಂತೆ ಅಡ್ಡ ಒದಗುತ್ತಿದ್ದ ಬಂಡೆಗಳನ್ನು ಕ್ರಮವಾಗಿ ನಿವಾರಿಸಿ ಐದು ಗಂಟೆಯ ಸುಮಾರಿಗೆ ಕಾರು ಸೇರಿದೆವು.

(ಮುಂದುವರಿಯುತ್ತದೆ)

[ಡಾ| ಸಂದೇಶ್ ಶೆಟ್ಟಿ ಬಲು ಸಂಕೋಚದ ತರುಣ. ಆದರೆ ಈ ಕೊಡಂಜೆ ಭೇಟಿಯಲ್ಲಿ ಮಾತ್ರ ಯಾಕೋ ಫೋಟೋ ತೆಗೆಯುವಲ್ಲೆಲ್ಲ ವಿಶಿಷ್ಟವಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದದ್ದು ಇನ್ನೊಬ್ಬ ಮಿತ್ರ ಸರಿಯಾಗಿಯೇ ಗುರುತಿಸಿದ. ಸ್ವಲ್ಪ ಕೆಣಕಿದಾಗ ತಿಳಿಯಿತು, ಇನ್ನೊಂದು ತಿಂಗಳಲ್ಲಿ ಸಂದೇಶ್ ಮದುವೆ ನಡೆಯುವುದಿತ್ತು. ಅದಕ್ಕೂ ಮೊದಲೇ ಇಲ್ಲಿನ ಚಿತ್ರಗಳನ್ನು ಭಾವೀ ಪತ್ನಿಗೆ ತೋರಿಸುವ ರಮ್ಯ ಕಲ್ಪನೆ ಈತನ ಸಂಕೋಚ ಹರಿದಿತ್ತು! ನಾವೆಲ್ಲ ಮಧ್ಯಾಹ್ನ ಊಟಕ್ಕೆ ಕುಳಿತ ಜಾಗದಲ್ಲಿ ಈ ಮಾತು ಬಂದಾಗ ನಾನು ಸಣ್ಣದಾಗಿ ನೆನಪಿಸಿಕೊಂಡೆ. ಹೂಂ, ಮೂವತ್ತು ವರ್ಷಗಳ ಹಿಂದೆ, ಇದೇ ಜಾಗದಲ್ಲಿ ನಮ್ಮ ತಂಡದ್ದು ಜೀವನ್ಮರಣ ತುರ್ತು ಮೂಡಿದ್ದಾಗ ನನ್ನ ಮದುವೆಗೂ ಒಂದು ತಿಂಗಳು ಅವಕಾಶವುಳಿದಿತ್ತು! ಕೊಡಂಜೆ ಕಲ್ಲಿನ ಆ ಎಂದೂ ಮರೆಯಲಾಗದ ರೋಮಾಂಚಕ ಕಥನ ‘ಮಧುಚುಂಬನ’ಕ್ಕೆ ಉಸಿರು ಗಳಿಸಿ ಬರುತ್ತೇನೆ. ವಾರ ಪುರುಸೊತ್ತು ಕೊಡಿ. ಏತನ್ಮಧ್ಯೆ ಇದುವರೆಗಿನ ಕತ್ತೆಕಿವಿಯ ಕಥೆಗೆ ಬರಲಿ ನಿಮ್ಮ ಲತ್ತೆ.]