[ಮಂಗಳೂರಿನ ಯಾವುದೋ ಇಲಾಖಾ ಕಛೇರಿಯಲ್ಲಿ ಐವತ್ತು ವರ್ಷಕ್ಕೂ ಮಿಕ್ಕ ಭೂದಾಖಲೆಗಳು ಅಟ್ಟಿಬಿದ್ದಿದ್ದವಂತೆ. ಹವಾಮಾನ ಪ್ರಭಾವ, ದೂಳು, ಜಿರಳೆ, ಗೆದ್ದಲು ಇತ್ಯಾದಿ ಪಾರುಕಂಡ ಅಷ್ಟನ್ನೂ ದೂಳು ಹೊಡೆದು ಬಲೆ ಕಳೆದು ಮುಂದುವರಿಸುವಲ್ಲೇ ಅನ್ನ ಕಾಣಬೇಕಾದ ಬುದ್ಧಿ ಶೂನ್ಯರು ಎಲ್ಲ ಸುಟ್ಟು ಕಛೇರಿ ಬೆಳಗಿದರಂತೆ. ಅಪೂರ್ವಕ್ಕಾದರೂ ಬರಬಹುದಾಗಿದ್ದ ಕುತೂಹಲದ ಕಣ್ಣುಗಳು ಇನ್ನು ತಣಿಯವು, ಹಳಗಾಲದ ಕಿಡಿಯೊಂದು ವರ್ತಮಾನದ ದೀವಟಿಗೆ ಬೆಳಗುವ ಚಂದ ಇನ್ನು ಸಿಗದು. ಉದ್ದೇಶ, ಗ್ರಹಿಕೆಗಳೇನೇ ಇರಲಿ ನೂರಿನ್ನೂರು ವರ್ಷಗಳ ಹಿಂದಿನ ಪಾಶ್ಚಾತ್ಯ ಮತಪ್ರಚಾರಕರು ಹಿಡಿದಿಟ್ಟ ‘ವರ್ತಮಾನದ ನೋಟಗಳು’, ಮತ್ತವನ್ನು ಕಾಪಿಟ್ಟು ಕಾಲಕಾಲಕ್ಕೆ ಹೊಸಬೆಳಕು ಕೊಟ್ಟು ಭವಿಷ್ಯ ಉಜ್ವಲ ಮಾಡುವ, ಹೊಸ ಅರ್ಥಧಾರೆಗಳನ್ನು ಹರಿಸಿ ಬೆಳೆ ತೆಗೆಯುವ ಮಂದಿಯನ್ನಾದರೂ ನೋಡಿ ಕಲಿಯಬಾರದಿತ್ತೇ ಎನ್ನುವ ಕೊರಗು ಮಾತ್ರ ನಮಗುಳಿಯಿತು. ಏನೋ ಹುಡುಕುತ್ತಾ ಇನ್ನೇನೋ ಎಡವಿ ಮತ್ತದರ ಬೆನ್ನು ಹಿಡಿದು ಬಂದ ಜರ್ಮನಿಯ ರೆ| ಹಾಕೆ ಮತ್ತಷ್ಟೇ ತೀವ್ರ ಕಾಳಜಿಯ (ನಮ್ಮ) ಮಹಾಲಿಂಗ ಭಟ್ಟರ ಜುಗಲಬಂದಿ ಪ್ರಜಾವಾಣಿಯ ೨-೧೦-೧೦ರ ಕರಾವಳಿ ಪುಟದಲ್ಲಿ ಬಂತು. ಇದೂ ಕಾಪಿಡುವ ಸಂಗತಿ. ಕೇವಲ ‘ಗಜೇಟ್’ (=ಹಳೆ ಪೇಪರ್) ಆಗಿ ‘ಸರಕಾರೀ ಭೂ ದಾಖಲೆ’ಯಂತೆ ಆಗಬಾರದೆಂಬ ಹಂಬಲದಲ್ಲಿ ಇಲ್ಲಿ ಪ್ರಕಟಿಸಲು ಕೇಳಿಕೊಂಡೆ. ಉತ್ಸಾಹಿ ಮಹಾಲಿಂಗರು ಪ್ರಜಾವಾಣಿಯಲ್ಲಿ ಸ್ಥಳಾನುಕೂಲಕ್ಕಾಗಿ ಹೇಳದೆಬಿಟ್ಟ ಇನ್ನಷ್ಟು ಅಂಶಗಳನ್ನು ಸೇರಿಸಿಕೊಟ್ಟಿದ್ದಾರೆ. ಅವರು ಮತ್ತು ಹಾಕೆಯವರು ಕೊಟ್ಟ ಹೆಚ್ಚಿನ ಚಿತ್ರಗಳೂ ಬ್ಲಾಗಿಗರಿಗೆ ಲಾಭ. ಹಾಕೆಯವರು ಬ್ಲಾಗಿನ ಸಾಧ್ಯತೆಗಳನ್ನು ದುಡಿಸಿಕೊಳ್ಳುವಂತೆ ಒಂದು ಟ್ಯೂನನ್ನೂ ಕೊಟ್ಟಿದ್ದಾರೆ – ಅಶೋಕವರ್ಧನ]

ಡಾ| ಕೆ. ಮಹಾಲಿಂಗ ಭಟ್

ಮೊನ್ನೆ ಒಬ್ಬರು ಜರ್ಮನಿಯ ಪ್ರೊಟೆಸ್ಟೆಂಟ್ ಫಾಸ್ಟರ್ ಸಿಕ್ಕಿದ್ದರು. ಅವರು ಮಂಗಳೂರಿನ ಅತ್ರಿ ಬುಕ್ ಸೆಂಟರಿನಲ್ಲಿ ಸಂಗೀತದ ಪುಸ್ತಕ ತೆಗೆಯುತ್ತಿದ್ದರು. ವ್ಯಾಪಾರದ ಗಡಿಬಿಡಿ ನಡುವೆ ಅಶೋಕವರ್ಧನ ಅವರು ಪರಿಚಯಿಸದಿದ್ದರೆ ಒಂದೆರಡು ನಿಮಿಷದಲ್ಲಿ ನಾನೆಲ್ಲೋ… ಅವರೆಲ್ಲೋ… ಕನ್ನಡದ ಜನಪದ ಹಾಡುಗಳಿಗೆ ಸಂಬಂಧಿಸಿದ ಅಚ್ಚರಿಯ ಮಾಹಿತಿಯೊಂದು ನನಗೆ ತಪ್ಪಿ ಹೋಗುತ್ತಿತ್ತು. ಆ ಹಾಡನ್ನು ಅವರು ಅಲ್ಲೇ ಅಂಗಡಿಯಲ್ಲಿ ಜರ್ಮನ್ ಉಚ್ಚಾರದಲ್ಲಿ ಹಾಡಿದರು “ಬಾರೋ ಗೀಜುಗಾ ಬಾರೋ ಗೀಜುಗಾ….”

ರೆವರೆಂಡ್ ರಾಲ್ಫ್ ಹಾಕೆ. ಪ್ರಾಯ ಐವತ್ಮೂರು. ಹುಟ್ಟಿದ್ದು ಪಶ್ಚಿಮ ಜರ್ಮನಿಯ ಹಿಂದುಳಿದ ನಾಡಿನಲ್ಲಿ. ಅದು ಬರ್ಲಿನ್ ಗೋಡೆಗೆ ಕೇವಲ ೩೦ ಕಿಮೀ ದೂರದಲ್ಲಿತ್ತಂತೆ.! ಕ್ರಿಸ್ತನ ಆಧ್ಯಾತ್ಮದ ಜೊತೆಗಿನ ಈ ವ್ಯಕ್ತಿ ಸಂಗೀತದ ಮೋಹಿ. ಅದರ ಸಂಶೋಧನೆಗೆ ಇಳಿದವರು. ದಕ್ಷಿಣ ಭಾರದ ಹಳೆಯ ಚರ್ಚ್ ಹಾಡುಗಳನ್ನು ಹುಡುಕುತ್ತಾ ಕರಾವಳಿಗೆ ಬಂದಿದ್ದರು. ಶತಮಾನಗಳಾಚೆಯ ಕ್ರೈಸ್ತ ಗೀತೆಗಳನ್ನು ಕೇಳುವುದು, ಸಂಗ್ರಹಿಸುವುದು, ಅವನ್ನು ಸಂಗೀತದ ಸಂಕೇತ ಅಕ್ಷರಗಳಲ್ಲಿ ಅತ್ಯಂತ ಖಚಿತವಾಗಿ ಬರೆಯುವುದು, ಕಾಲದೊಡನೆ ಅದು ಬದಲಾದ ಬಗೆ ಅರಿಯುವುದು ಹೀಗೆ ಅವರ ಶೋಧನೆ ಸಾಗುತ್ತದೆ. ಹಾಡುಗಾರರಿಂದ ಧ್ವನಿ ಮುದ್ರಿಸಿಕೊಂಡ ಒಂದು ಹಾಡು ಕೇವಲ ಮೂರು ಗಂಟೆಗಳ ಧ್ಯಾನದಲ್ಲಿ ಅವರ ಕೈಯ ಲ್ಯಾಪ್ ಟಾಪಿನಲ್ಲಿ ಸಂಕೇತಾಕ್ಷರಗಳ ಸ್ವರ ಲಿಪಿ ಪಡೆಯುತ್ತದೆ. ಇಂದಿಗೆ ೧೬೦ ವರ್ಷಗಳ ಹಿಂದೆ ಪ್ರೊಟೆಸ್ಟೆಂಟ್ ಕ್ರೈಸ್ತ ಮಿಶನರಿಗಳು ಮಂಗಳೂರು, ಧಾರವಾಡ ಕೊಡಗು… ಹೀಗೆ ಕನ್ನಡ ನಾಡಿನ ಹಲವೆಡೆ ಓಡಾಡಿದರು. ಕ್ರಿಸ್ತನ ಸಂದೇಶವನ್ನು ಕನ್ನಡದಲ್ಲಿ, ತುಳುವಿನಲ್ಲಿ ಕಟ್ಟಿ ಧರ್ಮ ಬೋಧಿಸಿದರು. ಜನನ, ಮದುವೆ, ಮರಣವೆಂಬ ಬದುಕಿನ ವಿಧಿಗಳಲ್ಲಿ, ಚರ್ಚಿನ ಪೂಜಾಕ್ರಮಗಳಲ್ಲಿ ಅಪಾರ ಹಾಡುಗಳು ಬೇಕಿತ್ತು. ಆ ಕಾಲದ ಪ್ರಖ್ಯಾತ ಪಾಶ್ಚಾತ್ಯ ಟ್ಯೂನ್ಗಳಿಗೆ ಒಗ್ಗುವಂತೆ ದೇಸಿ ಭಾಷೆಗಳಲ್ಲಿ ನೂರಾರು ಗೀತೆಗಳ ರಚನೆಯಾಯ್ತು. ಅಂದರೆ ಅರ್ಥ ಮತ್ತು ರಾಗ ಜರ್ಮನಿಯದ್ದು, ಭಾಷೆಯೊಂದೇ ಈ ನೆಲದ್ದು! ಇದೊಂದು ಜಾಗತಿಕ ಸಂಸ್ಕೃತಿ ಕಸಿ.

ಪೂರ್ವ ದೇಶಗಳ ಸಂಸ್ಕೃತಿಯ ಅಧ್ಯಯನ ಮಿಶನರಿಗಳ ಧರ್ಮ ಪ್ರಸಾರದ ಗುರಿಯ ಭಾಗ. ಜರ್ಮನಿಯಿಂದ ನೂರು ವರ್ಷದುದ್ದದಲ್ಲಿ ೧೧೫ ಪ್ರೊಟೆಸ್ಟೆಂಟ್ ಮಿಶನರಿಗಳು ಬಂದರು. ಅವರಲ್ಲಿ ಕಿಟ್ಟೆಲ್, ತ್ಸೀಗ್ಲರ್ ತರಹದ ಕೆಲವರು ಕನ್ನಡ ಸಂಸ್ಕೃತಿಯ ಮೋಹದ ಮೋಡದಲ್ಲಿ ಧ್ಜರ್ಮದ ತಳ ಮೀರಿ ತೇಲಿಹೋದರು. ಸಾವಿರಾರು ಮೈಲಿ ದೂರದಿಂದ ಬಂದವರಿಗೆ ಮೂಲ ಉದ್ದೇಶ ಮರೆತುಹೋಗಿತ್ತು. ಇದನ್ನು ಏನೆಂದು ಕರೆಯುವುದು? ಕನ್ನಡದ ಜನಸಂಸ್ಕೃತಿಯ ಶಕ್ತಿ ಎನ್ನಲೇ?

ನಮಗೆ ಡಿಸ್ನರಿ ಕೊಟ್ಟ ಕಿಟ್ಟೆಲ್ ಹೆಸರು ಕನ್ನಡದೊಳಗೆ ಜೀವಂತವಿದೆ. ಆತ ವರುಷಗಟ್ಟಲೆ ಓದುತ್ತಾ ಬರೆಯುತ್ತಾ ಇದ್ದ ಮನೆ ಈಗಲೂ ಮಂಗಳೂರಿನೊಳಗೆ ಬಾಳುತ್ತಿದೆ. ಆದರೆ ಈ ರೆ| ಎಫ್. ತ್ಸೀಗ್ಲರ್ ಯಾರು? ಅವನು ಕಿಟ್ಟೆಲಿನ ಸಮಕಾಲೀನ. ಭಾರತದ ಗಿಡಗಳನ್ನು ಸದಾ ತನ್ನ ಕೈಯಲ್ಲಿ ಹಿಡಿದು ಸುತ್ತಾಡುತ್ತಿದ್ದವ. ಜನರೊಂದಿಗೆ ಅದರ ಬಗ್ಗೆ ಕೇಳಿ ತಿಳಿಯುತ್ತಿದ್ದವ. ಇದರಿಂದ ಕಿಟ್ಟೆಲ್ ನಿಘಂಟಿಗೆ ಹಲವು ಸಸ್ಯಗಳ ಹೆಸರು ಸಿಗಲು ಸಾಧ್ಯವಾಯಿತು.

ತ್ಸೀಗ್ಲರ್ ಎಂಥಾ ಅಧ್ಯಾಪಕನೆಂದರೆ ಮಂಗಳೂರಿಗೆ ಬಂದ ಒಂದೇ ವರ್ಷದಲ್ಲಿ ಜನಪ್ರೀತಿ ಪಡೆದಿದ್ದ. ಅವನು ಕಲಿಸುತ್ತಿದ್ದ ಶಾಲೆ ಮುಚ್ಚಿ ಅವನನ್ನು ಧಾರವಾಡಕ್ಕೆ ಕಳುಹಿಸಲು ಹೊರಟಾಗ ಅದು ಬೇಡವೆಂದು ತುಳುವರು ಹಟ ಹಿಡಿದಿದ್ದರು.ತನ್ನ ಸುಪೀರಿಯರ್ಸ್ ಹೇಳಿದಂತೆ ಅವನು ೧೮೬೭ರಲ್ಲಿ ಧಾರವಾಡಕ್ಕೆ ಹೋಗಲೇಬೇಕಾಯ್ತು. ಜನ, ನೆಲ, ಭಾಷೆ, ಕಾವ್ಯ ಅವನಿಗೆ ಹೋದಲ್ಲೆಲ್ಲಾ ಒಲಿಯುತ್ತಿತ್ತು. ಹೇಗೆಂದರೆ ೧೮೯೩ ಮತ್ತು ೧೮೯೪ರಲ್ಲಿ ಧಾರವಾಡದ ವಿದ್ಯಾವರ್ಧಕ ಸಂಘದ ಅಧ್ಯಕ್ಷನನ್ನಾಗಿ ಅಲ್ಲಿಯ ಜನ ತ್ಸೀಗ್ಲರ್ನನ್ನೇ ಕೂರಿಸಿದರು. ಇದೆಲ್ಲಾ ಶ್ರೀನಿವಾಸ ಹಾವನೂರರು ‘ಹೊಸಗನ್ನಡ ಅರುಣೋದಯ’ ಗ್ರಂಥದಲ್ಲಿ ಕೊಡುವ ದಾಖಲಾತಿ.

‘ಗಣಿತ ಕಲಿಸುವುದು ಹೇಗೆ’ ‘ಕನ್ನಡ ಭಾಷೆಯ ಖಜಾನೆಗೆ ಕೀಲಿಕೈ ಹೇಗೆ’ ಹೀಗೆ ಹಲವು ಮಗ್ಗುಲುಗಳಲ್ಲಿ ತ್ಸೀಗ್ಲರ್ ಚಿಂತಿಸಿದ, ಬರೆದ, ಪುಸ್ತಕ ತಂದ. ‘ಕಿಟ್ಟೆಲ್ ಕನ್ನಡ- ಇಂಗ್ಲಿಷ್’ ನಿಘಂಟು ಮಾಡಿದರೆ, ತ್ಸೀಗ್ಲರ್ ‘ರಿವರ್ಸ್’ ಮಾಡಿದ! ಅವನ ಡಿಕ್ಷನರಿ ಹೊಸದಾಗಿ ಹುಟ್ಟುತ್ತಿದ್ದ ಶಾಲೆಗಳಿಗೆ ಬಹು ಉಪಕಾರ ಮಾಡಿತು. ಈ ಕೆಲಸ ಜರ್ಮನಿಯ ಮೇಲಿನವರಿಗೆ ರುಚಿಸಲಿಲ್ಲ. “ಧರ್ಮ ಪ್ರಚಾರ ಮರೆತೆಯೇನು” ಎಂದರು, “ಗಣಿತ ಬೋಧನೆ ಕಡಿಮೆ ದರ್ಜೆಯ ಮಿಶನರಿ ಕೆಲಸ ಎಂದು ನನಗೆ ಕಾಣುತ್ತಿಲ್ಲವಲ್ಲಾ” ಎಂದು ಉತ್ತರಿಸಿದ ತ್ಸೀಗ್ಲರ್!

ಇಂಥಾ ತ್ಸೀಗ್ಲರ್ ಹುಬ್ಬಳ್ಳಿಯ ನೀರು ಕುಡಿದು ಬರೇ ಒಂದು ವರ್ಷ ಆಗಿತ್ತು. ಹಳ್ಳಿಯ ಹೆಣ್ಣುಮಕ್ಕಳು ಹಾಡಿದ್ದ ಧಾಟಿಗಳ ತಬ್ಬಿ ಹಿಡಿದು, ಬರೆದು ಇಟ್ಟು, ಜರ್ಮನಿಗೆ ಕಳುಹಿಸುವ ಸಾಹಸ ಮಾಡಿದ. ನೆನಪಿರಲಿ ಧ್ವನಿಮುದ್ರಣ ಇಲ್ಲದ ಕಾಲವದು. ಪ್ರೊಟೆಸ್ಟೆಂಟ್ ಕನ್ನಡದಲ್ಲಿ ಹೇಳುವುದಿದ್ದರೆ ಅವನು ಈಗ ಮೂವತ್ತಾರರ ಯೌವನಸ್ಥ! ಬೆಕ್ಕಿನ ಕಣ್ಣು, ದುಂಡಗಿನ ಮೂಗು, ಸುರುಳಿ ಸುರುಳಿಯಾಗಿ ಚಂದಕ್ಕೆ ಗಡ್ಡ ಬರುತ್ತಿತ್ತು. ಕನ್ನಡ ರಾಗಗಳು ಚರಿತ್ರೆಯಲ್ಲಿ ಮೊದಲ ಬಾರಿಗೆ ಯುರೋಪಿನ ಸ್ವರಾಕ್ಷರಕ್ಕೆ ಇಳಿದು ಹಡಗಿನಲ್ಲಿ ತೇಲಿದ್ದವು. ಈ ಚಾರಿತ್ರಿಕ ಸಂದರ್ಭದ ಕಾಲ ೧೮೬೮-೬೯.

ನೂರನಲುವತ್ತು ವರ್ಷ್ಗಳ ಬಳಿಕ ಈಗ ಹಾಡುಗಳ ಹಿಂಬಾಲಿಸಿ ಭಾರತದಲ್ಲಿ ಸುತ್ತಾಡುತ್ತಿದ್ದಾರೆ ರೆ| ಹಾಕೆ. ಅತ್ರಿಯವರ ಅಂಗಡಿಯಲ್ಲಿ ಆತ ಹಾಡಿದ ‘ಬಾರೋ ಗೀಜುಗಾ’ ಈ ಪ್ರಾಚೀನ ಮೆಲಡಿಗಳಲಿ ಒಂದು. ಕಿಟ್ಟೆಲ್ ‘ಬಾಲಗೀತೆ’ಗಳಿಗಾಗಿ ಜರ್ಮನಿಯ ಪತ್ರಾಗಾರಗಳಲ್ಲಿ ರೆ| ಹಾಕೆ ಹುಡುಕುತ್ತಿದ್ದರು.

ಇಂಡಿಯಾದಿಂದ ಬಂದ ೧೮೬೯ರ ವಾರ್ಷಿಕ ವರದಿಯೊಂದರಲ್ಲಿ ನಾಲ್ಕು ಪುಟಗಳು ವಿಶೇಷವಾಗಿ ‘ಅಟ್ಯಾಚ್’ ಆದುದು ಕಣ್ಣಿಗೆ ಬಿತ್ತು. ಸ್ವರಾಕ್ಷರಗಳನ್ನು ಓದಿ, ಹಾಡಿ, ಅಚ್ಚರಿಪಟ್ಟು, ಮಂಗಳೂರಿಗೆ ಬರುವಾಗ ಹಾಕೆ ತಂದಿದ್ದರು. ಅವರು ಹೇಳುತ್ತಾರೆ, “ಇದರಲ್ಲಿ ಹನ್ನೆರಡು ಹಾಡುಗಳಿವೆ. ಕೆಲವು ಮರಾಠಿ, ಕೆಲವು ಇಂದು ಮರೆಯಾಗಿರುವ ಚರ್ಚ್ ಗೀತೆ, ಕೆಲವು ಕನ್ನಡದ ಜಾನಪದ ಹಾಡು. ಜನರು ಹಾಡಿದ ಸಾಲನ್ನು ರೋಮನ್ ಲಿಪಿಯಲ್ಲಿ ಹಾಗೇ ಬರೆದು, ಅವುಗಳ ಟ್ಯೂನನ್ನು ಸಂಕೇತಾಕ್ಷರಗಳಲ್ಲಿ ಮೂಡಿಸಿ, ಜರ್ಮನಿ ಭಾಷೆಯಲ್ಲಿ ಸಾಲುಗಳ ವಿವರಣೆಯನ್ನು ಸಹಾ ತ್ಸೀಗ್ಲರ್ ಬರೆದಿದ್ದಾರೆ. ಈ ಕೆಲಸ ಅವರ ಹಿರಿಯರಿಗೆ ರುಚಿಸಲಿಲ್ಲ. ಯುರೋಪಿನ ಶ್ರೇಷ್ಠ, ಶುದ್ಧ ಧಾರ್ಮಿಕ ಸಂಗೀತವನ್ನು ಅಲ್ಲಿನ ಜನರಿಗೆ ಕಲಿಸಿ ಅವರನ್ನು ‘ಸಂಸ್ಕಾರ’ವಂತರನ್ನಾಗಿ ಮಾಡುವ ಬದಲು, ಅಲ್ಲಿಯವರ ‘ನೇಟಿವ್’ ರಾಗ ಕಳಿಸುವ ಅಧಿಕಪ್ರಸಂಗ ಮಾಡಿದನಲ್ಲಾ ಈ ತ್ಸೀಗ್ಲರ್! “ಸ್ಟಾಪ್ ದಟ್ ನಾನ್ಸೆನ್ಸ್” ಎಂಬ ಕಠಿಣ ಉತ್ತರ ಬಂತು. ಮುಂದೆ ತ್ಸೀಗ್ಲರ್ ಹಾಡುಗಳ ಟ್ಯೂನ್ ಸಂಗ್ರಹಿಸಿದಂತೆ ಕಾಣುವುದಿಲ್ಲ.

ಹಾಕೆಗೆ ಕನ್ನಡ ಬಾರದು. ಸಂಗೀತಗಾರನಾದ ಅವರು ಟ್ಯೂನನ್ನು ಹಾಡಬಲ್ಲರು! ಸಂಗೀತ ಲಿಪಿಗೆ ಭಾಷೆಯ ಹಂಗಿಲ್ಲವಲ್ಲಾ! ಅವರ ಕನ್ನಡ ಜನಪದ ಹಾಡಿಗೆ ಪಾಶ್ಚಾತ್ಯ ಸಂಗೀತದ ಮೂರಿ ಇದೆ. ತ್ಸೀಗ್ಲರನ ಶತಮಾನದಾಚೆಯ ಜರ್ಮನ್ ವಿವರಣೆಯನ್ನು ಅವರಿಂದ ಅನುವಾದಿಸುತ್ತ, ರೋಮನ್ ಲಿಪಿಯ ಒಂದೊಂದೇ ಅಕ್ಷರ ಜೋಡಿಸುತ್ತ, ನಾನು – ಅಚಿದು ಹಳ್ಳಿಗರು ಹಾಡಿರಬಹುದಾಗಿದ್ದ ಕನ್ನಡ ಶಬ್ದಗಳನ್ನು ಊಹಿಸತೊಡಗಿದೆ. ನಿಧಾನಕ್ಕೆ ಹಾಡು ಮೂಡತೊಡಗಿತು.

“ಹಸು ಮಕ್ಕಳು ಆಡಿದರೆ ಹಸನ ಏನ್ ಎನ್ನ ಅಂಗಳ” ಇದು ತ್ರಿಪದಿ! “ಮುತ್ತು ನದಿಗ್‌ಹೋಗಿ ಮುತ್ತಾನು ತಂದು ಮುತ್ತಿನಂತೆ ಗೋಡೆ ಕಟ್ಟಿದ್ದೀ- ಬಾರೋ ಗೀಜಗ.” ಇದೊಂದು ಮುತ್ತಿನಂತಹಾ ಹಾಡು, ತ್ಸೀಗ್ಲರಿಗೆ ಕೊಡಗಿನಲ್ಲಿ ಸಿಕ್ಕಿದ್ದು! “ಜರ- ಬಾಗಿಲು ತೆರೆಯೇ ದೊರೆಯೇ, ನಿನ್ನ ಕೆರೆಯ ನೀರಿಗೆ ಬರುವೆ” – ಫಸ್ಟ್ ಕ್ಲಾಸ್ ಪ್ರಣಯ! ಆದರೆ ಇದೇನು ‘ಜರ’ ಎಂದರೆ? ಪ್ರೊ| ಕೆ.ಎಲ್ ರೆಡ್ದಿ ಹೇಳಿದರು, “ಜರ ಎಂದರೆ ಮರಾಠಿಯಲ್ಲಿ ಸ್ವಲ್ಪ…” ಹ್ಹೋ! ಗೊತ್ತಾಯ್ತು – ತುಸುವೇ ಬಾಗಿಲು ತೆರೆಯಲು ಹೇಳುವ ಪ್ರಣಯಿನಿಯ ತೀವ್ರ ಯಾಚನೆ! ಕನ್ನಡದೊಳಗೆ ಮರಾಠೀ ಶಬ್ದ, ಸಂಕಲನದೊಳಗೆ ಮರಾಠೀ ಹಾಡು, ಕ್ರೈಸ್ತ ಗೀತೆಗಳನ್ನೊಳಗೊಂಡ ಸಂಗ್ರಹಕ್ಕೆ ಹಿಂದೂ ಮೆಲಡೀಸ್ ಎಂಬ ಶೀರ್ಷಿಕೆ!

ಇದೆಲ್ಲಾ ಹೇಗೆ? ಯಾಕೆ? ಒಂದು ಕ್ಷಣ ಈ ಕಾಲ ಮರೆತು ಕಣ್ಣು ಮುಚ್ಚೋಣ. ಇಂದಿನ ಭಾಷಾ ರಾಜ್ಯದ ಗಡಿಗಳಿಲ್ಲ. ಬ್ರಿಟಿಷರ ಆಡಳಿತದ ದೃಷ್ಟಿಯಲ್ಲಿ ಹುಬ್ಬಳ್ಳಿಯು ‘ಸದರ್ನ್ ಮರಾಠ’ದ ಭಾಗ. ಭಾರತವೆಲ್ಲಾ ಯುರೋಪಿನ ಒರಟು ನೋಟಕ್ಕೆ ‘ಹಿಂದುಸ್ಥಾನ.’ ನಾವು ನೂರೈವತ್ತು ವರ್ಷ ದಾಟಿ ಬಂದು ಬೇಕಾಗಿಯೋ ಬೇಡವಾಗಿಯೋ ಈಗ ಏನೇನೋ ಮಾಡಿಕೊಂಡಿದ್ದೇವೆ! ಹೊಸ ಕನ್ನಡದ ಅರುಣೋದಯ ಕಾಲದ ಹಕ್ಕಿಚಿಲಿಪಿಲಿಯಂತೆ ಕೇಳುತ್ತಿದೆ, ತ್ಸೀಗ್ಲರ್ ಬರೆದಿಟ್ಟ ಧಾಟಿಗಳು!

ಹಾಕೆ ಹೇಳಿದ ೧೮೦೦ರ ಕಾಲದ ಒಂದು ಕತೆಯೊಡನೆ ಮುಗಿಸುವೆ. ಹೂಗ್ಲಿ ನದಿಯಲ್ಲಿ ಸಾಗುವ ಅಂಬಿಗರ ಹಾಡು ಕೇಳಿ ಕಲ್ಕತ್ತಾದಲ್ಲಿದ್ದ ಅಂದಿನ ಬಿಳಿಯರಿಗೆ ಬಹು ಖುಶಿ. ಅವುಗಳ ಸ್ವರ ಪ್ರಸ್ತಾರ ಬರೆದುಕೊಂಡು ಹಡಗಿನಲ್ಲಿ ಅದನ್ನು ಯುರೋಪಿಗೆ ಒಯ್ದರು. ಹಾಡುವ ಧಾಟಿಗಳನ್ನು ಬರೆದ ಆ ಪುಟಗಳು ಯುರೋಪು ಖಂಡದಲ್ಲೆಲ್ಲ ಪೂರ್ವ ದೇಶದ್ದು ಎಂಬ ವಿಶೇಷ ಆಕರ್ಷಣೆಯಿಂದ ಮಾರಾಟವಾದವು. ಪಾಶ್ಚಾತ್ಯ ಸಂಗೀತ ಲಿಪಿಗೆ ದೇಶ ಮತ್ತು ಭಾಷೆಯ ಹಂಗಿಲ್ಲವಲ್ಲಾ! ‘ಇಂಡಿಯನ್ ಟ್ಯೂನ್ಸ್’ ಅಂತ ಆರ್ಕೆಸ್ಟ್ರಾಗಳಲ್ಲಿ ಕೂಡಾ ಅವು ಸೇರಿಹೋದವು.

ಯಾಕೋ ಕಲ್ಕತ್ತಾದ ಬಿಳಿ ಹೆಂಗಸರು ತಮ್ಮ ಗಂಡಸರ ಈ ಸಂಗೀತ ಸಂಗ್ರಹಿಸುವ ತಿರುಗಾಟಕ್ಕೆ, ಹಡುಗಳ ಮೇಲೆ ಪ್ರೇಮ ತೋರುವುದಕ್ಕೆ ಸೊಪ್ಪು ಹಾಕಲಿಲ್ಲ. ಬರೆದಿಟ್ಟ ರಾಗಗಳ ಸಮುದ್ರಯಾನವು ನಿಂತಿತು. ಪಶ್ಚಿಮಕ್ಕೆ ಒಮ್ಮೆ ಬಂದು ಸೇರಿಬಿಟ್ಟ ರಾಗಪುಟಗಳೇ ಮತ್ತೆಮತ್ತೆ ಮುದ್ರಣವಾದವು. “ಹಾಡಿದ್ದೇ ಹಾಡಿದ ಕಿಸಬಾಯಿ ದಾಸ” ಎಂಬಂತೆ ಅವುಗಳನ್ನೇ ಪುನಃ ಪುನಃ ಸಂಗೀತಗಾರರು ಹಾಡಿದರು, ನುಡಿಸಿದರು! ದಶಕ ಉರುಳಿತು. ಯುರೋಪಿನಲ್ಲಿ ಇಂಡಿಯನ್ ಟ್ಯೂನ್ಸ್ ಕೇಳಿ ಇಷ್ಟಪಟ್ಟಿದ್ದ ಇಂಗ್ಲೆಂಡಿನ ಕೆಲವರು ಕಲ್ಕತ್ತಾಗೆ ಬಂದು ಕುತೂಹಲದಿಂದ ಅಂಬಿಗರಲ್ಲಿ ಹುಡುಕಿದರೆ ಇಲ್ಲಿ ಅವು ಇರಲಿಲ್ಲ! ಎಲ್ಲಿ ಹೋದವು? ಹೂಗ್ಲಿ ನದಿಯ ಹುಟ್ಟುಗಾರರು ದೋಣಿ ಸಾಗುವಾಗ ಹಾಡುವುದನ್ನೇನೋ ನಿಲ್ಲಿಸಿರಲಿಲ್ಲ. ಆದರೆ ಹುಡುಕುತ್ತಿದ್ದ ಆ ರಾಗಗಳು ಕೇಳಲೇ ಇಲ್ಲ!

ರಾಗಗಳೇನೋ ಲೋಕಪಯಣ ಮಾಡಿದ್ದವು. ಕೇಳಿದ ಬಿಳಿ ಕಿವಿಯಿಂದ ಸಂಗೀತ ಬರೆವ ಬೆರಳಿಗೆ, ಮುಂದೆ ಆ ಕಾಗದ ನೋಡಿ ಹಾಡುವ ಇನ್ನೊಂದು ಹೊಸ ಬಿಳಿಬಾಯಿಗೆ, ಅಲ್ಲಿಂದ ಮುಂದೆ ಇನ್ನೊಂದು ಸಂಗೀತ ನುಡಿಸುವ ಬಿಳಿ ಬೆರಳಿಗೆ ಹೀಗೆ ಸಾಗುತ್ತಾ ಸಗುತ್ತಾ ಹೋದಂತೆ ಅವುಗಳ ಭಾರತೀಯ ಬಣ್ಣ ಮಾಯವಾಗಿತ್ತು! ಹಲವು ಸಲ ನಡೆದ ಸಂಸ್ಕೃತಿಗಳ ಕೈ ಬದಲಾವಣೆಯಲ್ಲಿ ಟ್ಯೂನ್‌ಗಳು ಹೊಸ ವೇಷ ತೊಟ್ಟಿದ್ದವು. ಗುನುಗುತ್ತಾ ಹುಡುಕುತ್ತಾ ಈಗ ಬಂದವರಿಗೆ ಅವುಗಳ ಮೂಲ ಚಹರೆ ಸಿಗುತ್ತಿರತಿಲ್ಲ! ಸಾಹಿತ್ಯದ ಅನುವಾದದಂತೆ ಧಾಟಿಗಳ ಅನುವಾದಗಳೂ ಅಸಾಧಾರಣ ಸವಾಲು. ಅವರವರ ನೆಲ ಸಂಸ್ಕೃತಿಗಳು ಮೆದುಳಿನ ಕೋಶಗಳ ಒಳಸೇರಿ ಎಷ್ಟು ತುಂಟತನ ಮಾಡುತ್ತವೆಯೆಂದರೆ, ಇನ್ನೊಂದು ಸಂಸ್ಕೃತಿಯನ್ನು ಸರಿಯಾಗಿ ಅರ್ಥ ಮಾಡಲು ಬಿಡುವುದಿಲ್ಲ. ಹಾಗಾಗಿ ನಾವು ಹೊಸಪರಿಸರದಲ್ಲಿ ಓದಿದ್ದು, ಕಂಡದ್ದು ಪೂರ್ತಿ ನಿಜವಲ್ಲ, ಕೇಳಿದ್ದು ಕೂಡಾ!