ರಂಗನಾಥ ವಿಜಯ ಭಾಗ ಆರು

[ಕಳೆದ ಕಂತಿನ ಕೊನೆಯಲ್ಲಿ ಇಷ್ಟು ಹತ್ತಿರವಾದರೂ ಅಷ್ಟು ದೂರ (ತದ್ದೂರೇ ತದಂತಿಕೇ ಎಂದೇನೋ ಅಂತಾರಲ್ಲಾ ಹಾಗೆ) ಎನ್ನುವ ಭಾವದೊಡನೆ ರಂಗನಾಥ ಸ್ತಂಭ ಎಂಬ ದೈತ್ಯನ ಭುಜದಂಚಿನಲ್ಲಿ ನಿಲ್ಲಿಸಿದ್ದೆ. ‘ಬೊಬ್ಬೆ ವಿನಿಮಯದಲ್ಲಿ ನಮ್ಮ ನಿರಾಶೆಯನ್ನು ಹುಗಿದಿಟ್ಟರೂ ಸವೆದ ಜಾಡನ್ನು ಮರಳಿ ಸವೆಸಲು ತಿರುಗಿದೆವು’ ಎಂದೇ ಮುಗಿಸಿದ್ದೆ. ಓ ಅದು ನಾವು ತಿರುಗಿದ್ದಲ್ಲ ಮಾರ್ರೇ ನಮ್ಮ ಕತ್ತು ಮಾತ್ರ ತಿರುಗಿದ್ದಪ್ಪಾ! ಬನ್ನಿ ಬನ್ನಿ ಮುಂದ್ ಹೋಪಾ…]

ರಂಗನಾಥ ಸ್ತಂಭದ ಉತ್ತರಮೈ ಕೆಳಗಿನಿಂದ ಮುಂಚಾಚಿಕೆಯಂತೇ ಇದ್ದರೂ ಮೇಲಿನಂಶ ನಮ್ಮಲ್ಲಿ ನವಚೇತನವನ್ನೇ ತುಂಬಿತು. ಉತ್ತಮ ಮಹಲುಗಳ ಹಿತ್ತಲ ಕುಪ್ಪೆಯಂತೆ ಇಲ್ಲಿ ಪುಡಿ ಬಂಡೆಗಳ ಒಟ್ಟಣೆ, ಹುಲ್ಲು, ಮುಳ್ಳು, ಬಳ್ಳಿಯೂ ಸಾಕಷ್ಟು ಕುದುರಿತ್ತು. ನಾವೋ ಚಿಂದಿ ಆಯುವವರು. ಆದರೂ ಒಂದು ಹೊತ್ತಿನ ದಿವ್ಯಕ್ಕಾಗಿ ‘ಕುಪ್ಪೆ’ ಕಂಡ ಸಂಭ್ರಮದಲ್ಲಿ ಆತುರ ತೋರದ ಸಂಯಮಿಗಳು. ಸುಮಾರು ಐವತ್ತಡಿ ಅಂತರದವರೆಗೆ ಸಣ್ಣ ಡುಬ್ಬದಂತೇ ಕಂಡರೂ ಅಭದ್ರ ರಚನೆಯಂತಿತ್ತು. ಆಚೆಗೆ ಅನತಿ ದೂರದಲ್ಲಿ ಶಿಖರವೇ ಕಾಣಿಸುತ್ತಿತ್ತು. ಇನ್ನಷ್ಟು ಉತ್ತರ ಮೈಗೆ ಸರಿದು ಅನ್ಯ ಸಾಧ್ಯತೆಗಳನ್ನು ಹುಡುಕಲು ಸಮಯವಿರಲಿಲ್ಲ. ಹಾಗಾಗಿ ಸ್ವಲ್ಪ ಅಪಾಯಕಾರಿಯೇ ಆದರೂ ಸರಿ ಎಂದು ಶಿಖರ ಸಾಧನೆಗೆ ಹೊಸ ಕೆಚ್ಚು ಮೂಡಿಸಿಕೊಂಡೆವು. ಹಿಂದೆಂದೋ ಸಿಡಿಲಿನ ಬಹು ಹೊಡೆತ ತಿಂದು ಸೀಳುಸೀಳಾಗಿದ್ದ ಬಂಡೆ ಎದೆಗಳ ಮೇಲೆ ಮೊದಲ ಇಪ್ಪತ್ತು ಅಡಿಗಳು. ಬಂಡೆ ಕಳಚಿ ಬಂದರೂ ಆಧಾರಕ್ಕೆ ಮುಷ್ಠಿಮಾಡಿ ಹಿಡಿಯುವ ಹುಲ್ಲು ಕಿತ್ತು ಕೈಗೆ ಬಂದರೂ ನೇರ ಎಂಟನೂರಡಿ ಆಳಕ್ಕೆ ಸಂದುಹೋಗುವ ಚಿತ್ರ ಎಲ್ಲರಿಗಿಂತಲೂ ಹೆಚ್ಚು ಮುಂದಾಳಾಗಿ ಹೋಗುವ ನನಗಿತ್ತು. ಸಹಜವಾಗಿ ಅಲ್ಲಿ ಪ್ರತಿ ಹೆಜ್ಜೆ, ಪ್ರತಿ ಹಿಡಿಕೆಯಲ್ಲಿ ನಾನು ಪೂರ್ತಿ ಇರಲಿಲ್ಲ. ‘ಅರೆ! ಇದೇನು, ಎಲೆಯ ಮೇಲಿದ್ದೂ ಎಲೆಗಂಟದ ನೀರಹನಿಯಂತೆ… ಎಂಬರ್ಥದ ಅಧ್ಯಾತ್ಮಿಕ ಮಾತುಗಳು’ ಎಂದು ಹುಬ್ಬೇರಿಸಬೇಡಿ. ಹೆದರಬೇಡಿ, ಗೀತಾಪ್ರವಚನ ಚಟವೇನೂ ಇಲ್ಲ. ಆಕಸ್ಮಿಕ ಸಂಭವಿಸಿದರೆ ಯಾವ ಕ್ಷಣದಲ್ಲೂ ಇನ್ನೊಂದು ಹಿಡಿಕೆ ಬಾಚಿಕೊಳ್ಳುವ, ನಿಂತ ನೆಲೆಗೊಂದು ಬದಲಿ ದಕ್ಕಿಸಿಕೊಳ್ಳಲು ಸಜ್ಜಾಗಿದ್ದೆ ಎಂದಷ್ಟೇ ಅರ್ಥ. ಬಿದ್ದರೆ ಪಾತಾಳ, ಗೆದ್ದರೆ ಆಕಾಶ. ನನ್ನ ರಕ್ಷಣಾ ಹಗ್ಗವನ್ನು ದೇವು ಕೆಳಗಿನೊಂದು ಭದ್ರ ನೆಲೆಯಲ್ಲಿ ಕುಳಿತು ನಿಯಂತ್ರಿಸುತ್ತಿದ್ದಂತೆ ಏರಿದೆ (ರೇಖಾಚಿತ್ರ ನೋಡಿ). ನನ್ನಿಂದ ಏನೂ ತಪ್ಪಾಗಲಿಲ್ಲ. ಇಲ್ಲವೇ ಇಲ್ಲ ಎನ್ನಲಾಗದಂತೆ ಹಗ್ಗದ ಚಲನೆಗೆ ಸಿಕ್ಕು ಸಣ್ಣ ಎರಡು ಮೂರು ಕಲ್ಲ ಚೂರುಗಳು ನಿರಪಾಯಕರವಾಗಿ ಉರುಳಿಹೋದವು. ಮತ್ತೆ ನಾನು ಭದ್ರ ನೆಲೆ ಹಿಡಿದು ಕುಳಿತು ಒಬ್ಬೊಬ್ಬರನ್ನೇ ಬಲು ಎಚ್ಚರದಿಂದ ನನ್ನೆತ್ತರಕೆ ಏರಿಸಿಕೊಳ್ಳತೊಡಗಿದೆ.

ಪ್ರಾಯದಲ್ಲಿ ಭಟ್ಟರು ನಮ್ಮ ತಂಡದ ಹಿರಿಯರು. ಸಾಹಸಾನುಭವದಲ್ಲಿ, ಮುಖ್ಯವಾಗಿ ಶಿಲಾರೋಹಣದಲ್ಲಿ ಎಲ್ಲರಿಗಿಂತ ಕಿರಿಯರು. ಆದರೆ ಒಳ್ಳೆಯ ಗಾಳಿಗೆ ಸದಾ ಮುಕ್ತವಾಗಿರುವ ಅವರ ಮನೋಭಾವ ಇಂಥಾ ಒಂದು ಪ್ರಪಾತದಂಚಿಗೆ ತಂದೀತೆಂದು ಊಹಿಸಿಯೇ ಇರಲಿಲ್ಲ. ಅವರ ಮಾತಿನಲ್ಲೇ ಕೇಳಿ. “ಎಡಗಾಲು ಈ ಗುಂಡಿಗೆ, ಬಲಗಾಲು ಹಗುರಕ್ಕೆ ಅಲುಗಾಡುವ ಮೇಲಿನ ತುಣುಕಿಗೆ. ಎಡಗೈ ಹಿಡಿದ ಗರಿಕೆ ಜುಟ್ಟೇನೋ ಗಟ್ಟಿಯಿತ್ತು ಆದರೆ ಬಲಗೈಗೆ ಅಲುಗುವ ಬಂಡೆಯಾಚಿನ ಒಣ ತುಂಬೆ ಕಡ್ಡಿ ಕಿತ್ತು ಬರುವಂತಿದೆ. ದಡಬಡಾಯಿಸಿ ರಕ್ಷಣಾಹಗ್ಗವನ್ನೇ ಹಿಡಿದೆ, ಬಾಗಿದ ಮೊಣಕಾಲು ಬಂಡೆಗೆ ಕೊಟ್ಟು ತುದಿಗಾಲ ಹಿಡಿತ ತಪ್ಪಿ ಹೋ. . .” ಎನ್ನುವುದರೊಳಗೆ ಕೆಳಗಿನಿಂದ ಸೂಚನೆ ಕೊಡುತ್ತಿದ್ದವರ “ಬಿಲೇ ಟೈಟ್” ಕೂಗು ಕೆಲವರನ್ನಾದರೂ ತಲ್ಲಣಿಸುವಂತೆ ಮೊಳಗಿತು. ಮೊದಲೇ ಹೇಳಿದಂತೆ ಆ ಜಾಗದಲ್ಲಿ ಎಲ್ಲರ ನಿರ್ವಹಣೆ ಜವಾಬ್ದಾರಿ ನಾನೇ ಹೊತ್ತಿದ್ದೆ. ಭಟ್ಟರು ಒಮ್ಮೆ ಒಂದೆರಡಲ್ಲ ನಾಲ್ಕೂ ಆಧಾರ ತಪ್ಪಿಸಿಕೊಂಡಿದ್ದರು. ಆದರೆ ಆತಂಕಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟವಾದಾಗ ಉಳಿದವರಿಗೆ ಹೆಚ್ಚು ವಿಶ್ವಾಸ ತುಂಬಿತು. ಆದರೂ ಅಭಯನಿಗೆ ಅಪ್ಪ ಸ್ವಲ್ಪ ಉಡಾಫಿ ಎಂಬ ಸಂಶಯ. ನನಗೋ ‘ಮಗ ವೃಥಾ ನಿಧಾನಿ’ ಎಂಬ ಸಿಡುಕು. ಮೂರನೆಯವ ದೇವುಗಿದು ಕಂಡದ್ದು ಹೀಗೆ. “ವರ್ಧನರು ಮಗನಿಗೆ ಉದಾರವಾಗಿ ದಾಟಿಸುತ್ತಿದ್ದ ಸಲಹೆಗಳು, ಹುರಿದುಂಬಿಸುವ ಮಾತುಗಳು ಅವನಿಗೆ ಛೇಡನೆಯಂತೆ ಕೇಳಿ ಆತ ಮಕ್ಕಳಾಟಿಕೆಯಲ್ಲಿ ಉರಿದುಬೀಳುತ್ತಿದ್ದದ್ದು ನನಗಂತೂ ಉಲ್ಲಾಸ ಕೊಡುತ್ತಿತ್ತು.”

ಮುಂದೆ ಸ್ವಲ್ಪ ಒಳಮೈಯಲ್ಲಿ ಹತ್ತಿಪ್ಪತ್ತಡಿ ವಿರಾಮದ ಏರು. ಹುಲ್ಲು, ಮುಳ್ಳಬಲ್ಲೆಗಳನ್ನು ನಿವಾರಿಸಿಕೊಂಡು ನಾವು ಈಗ ತಲಪಿದ ಹಂತ ನಮ್ಮ ತಿರುಪೇರಿನ ಕೊನೆಯಲ್ಲಿ ಎದುರಾದ ಗೋಡೆಯಂಥಾ ಬಂಡೆಯ ನೆತ್ತಿ. ಆ ಆಳದಿಂದೆದ್ದ ಕಲ್ಲಿನ ಸೀಳು ಇಲ್ಲಿ ಒಳಮೈಗೆ ತಿರುಗುವಾಗ ಮೇಲ್ಮೈಯಲ್ಲಿ ಒಂದು ದೊಡ್ಡ ಕಲ್ಲ ಹೋಳನ್ನೇ ಪ್ರತ್ಯೇಕಿಸಿಟ್ಟಿತ್ತು. ಶಿಖರ ಸಾಧನೆಗೆ ನಮಗೆ ಅದನ್ನೇರುವುದು ಅನಿವಾರ್ಯವಿತ್ತು. ಸುಮಾರು ಮೂವತ್ತಡಿ ಎತ್ತರದ ಮುಖ್ಯ ಬಂಡೆ ಮತ್ತು ಆ ಹೋಳಿನ ನಡುವೆ ಎರಡು ಜನ ಭುಜಕ್ಕೆ ಭುಜ ತಾಗಿಸಿ ನಿಲ್ಲುವಷ್ಟು ಅಗಲದ ಸಂದು ಇತ್ತು. ಇಂಥಾ ಪ್ರಾಕೃತಿಕ ಕೊರಕಲನ್ನು ಹಿಂದಿನ ಕುಶಲ ಪರ್ವತಾರೋಹಿಗಳು ಕಾರ್ಖಾನೆಗಳ ಹೊಗೆ ಚಿಮಣಿಗೆ ಹೋಲಿಸಿ ಹಾಗೇ ಹೆಸರಿಸಿದ್ದಾರೆ. ಕಾರ್ಖಾನೆಯ ದುರಸ್ತಿಯ ಕಾಲಗಳಲ್ಲಿ ನೂರಾರು ಅಡಿ ಎತ್ತರವೂ ಇರಬಹುದಾದ ಚಿಮಣಿ ಶುದ್ಧಿ ಬಹುಮುಖ್ಯ ಕೆಲಸವೇ ಸರಿ. ಆಗ ಅಲ್ಲಿ ಸ್ಫುರಿಸಿರಬಹುದಾದ ತಂತ್ರ – ಚಿಮಣಿ ಹತ್ತುವಿಕೆ, ರೂಪಸಾಮ್ಯದ ಪ್ರಾಕೃತಿಕ ಕೊರಕಲುಗಳಲ್ಲೂ ಬಳಕೆಗೆ ಬಂದಂತಿವೆ. ನೀವು ಹರಿಕಥೆ ದಾಸಯ್ಯನೆಂದು ನನ್ನನ್ನು ತಮಾಶೆ ಮಾಡಿದರೂ ಸರಿ, ಚಿಮಣಿ ಏರಿಕೆ ಅಥವಾ chimney climbing ಗೆ ಪೀಠಿಕೆಯಾಗಿ ನಾನೊಂದು ಉಪಕಥೆ ಹೇಳಲೇಬೇಕು. (ಭಕ್ತ ಜನವೇ ಒಕ್ಕೊರಲಿನಲ್ಲಿ ಹೇಳಿ ರಂಗನಾಥಸ್ತಂಭಕ್ಕೇ ಜಯ್!)

ಕೊಡಂಜೆಗೊಂದು ಕೋಡಗ ಜಾಡು! ಚಿಮಣಿ ತಂತ್ರಾಭ್ಯಾಸಕ್ಕೆ ನಮ್ಮ ವಲಯದ ಪ್ರಶಸ್ತ ಸ್ಥಳ ಮೂಡಬಿದ್ರೆಯ ಸಮೀಪದ ಕೊಡಂಜೆಕಲ್ಲು. ರಂಗನಾಥ ಏರೋಣಕ್ಕೂ ಎರಡು ವಾರ ಮುನ್ನ ನಾವು ಅಲ್ಲಿಗೆ ಹೋದದ್ದನ್ನು ನಾನು ಮೊದಲೇ ಹೇಳಿದ್ದೇನೆ. ಇಲ್ಲಿ ಅದನ್ನು ಸ್ವಲ್ಪ ಹೆಚ್ಚಿನ ವಿವರಗಳಲ್ಲಿ ನೋಡೋಣ.

ಕೊಡಂಜೆಯಲ್ಲಿ ಮುಖ್ಯವಾಗಿ ಎರಡು ಭಾರೀ ಬಂಡೆ ಕೊದಿಗಳಿವೆ. ಶತಮಾನದ ಹಿಂದಿನ ಕಡಲಯಾನಿಗಳು ಮಂಗಳೂರು ಬಂದರ ಗುರುತಿಸಲು ಬಳಸುತ್ತಿದ್ದ ಪ್ರಮುಖ ಭೂ ನಿಶಾನಿಯ ಪಟ್ಟಿಯಲ್ಲಿ ಇದು ಕತ್ತೆಕಿವಿ (Ass’s ears) ಎಂದೇ ಪ್ರಸಿದ್ಧ. ಮೂದಬಿದ್ರೆಯಿಂದ ನಾರಾವಿಗೆ ಹೋಗುವ ದಾರಿಯ ಬದಿಯಿಂದ ತೊಡಗುವಾಗ ಎದುರು ಸಿಗುವ, ಭಾರೀ ಬಂಡೆಗಳ ಒಟ್ಟಣೆಯಂತೆ ತೋರುವ, ಹೆಚ್ಚು ಎತ್ತರದ ಕೊಡಿ ನಿಮಿರಿದ ಕಿವಿ ಎನ್ನಬಹುದು. ಅದರ ಉತ್ತರಕ್ಕೆ ಗುಮ್ಮಟದಂತಿರುವುದು ಮೊಂಡುಗಿವಿ. ನಿಮಿರುಗಿವಿಯ ಪೂರ್ವ ತಪ್ಪಲಿನಲ್ಲೊಂದು ಗುಹಾಶ್ರಮವಿದೆ. ಸಹಜವಾಗಿ ಕೊಡಂಜೆಗೆ ಹೆಚ್ಚು ಭೇಟಿಕೊಡುವವರು ಆಶ್ರಮದ ಭಕ್ತರು. ಅವರು ಸ್ವಯಂ ಸೇವೆಯಲ್ಲಿ ಮಾಡಿಕೊಂಡ ಕಾಲುದಾರಿ ಮತ್ತು ಕಚ್ಚಾ ಮೆಟ್ಟಿಲ ಸಾಲು ಹಿಡಿದು, ದಕ್ಷಿಣದ ದಿಬ್ಬವನ್ನುತ್ತರಿಸಿ ಮುಖ್ಯ ಬಂಡೆಗಳೆರಡಕ್ಕೂ ದೂರದ ‘ನಮಸ್ಕಾರ’ ಹಾಕಿಬಿಡುತ್ತಾರೆ. ಸ್ವಲ್ಪ ಹೆಚ್ಚಿನ ಉಮೇದಿನವರು ಹಾಗೇ ಗುಹಾಶ್ರಮದ ನೆತ್ತಿ ಹಾಯ್ದು, ಕುರುಚಲು ಕಾಡಿನೊಳಗಣ ಸವಕಲು ಜಾಡು ಹಿಡಿದು ಕತ್ತೆನೆತ್ತಿ (ಎರಡು ಬಂಡೆಗಳ ನಡುವಣ ತಟ್ಟು) ಮುಟ್ಟುವುದಿದೆ. ಮತ್ತೂ ಚಟಬಿಡದವರು, ಸಹಜ ಶಿಲಾರೋಹಿಗಳು ಆ ಒಳಮೈಯಿಂದ ನಿಮಿರುಗಿವಿಯನ್ನು ಏರುವುದಿದೆ. ಮೊಂಡುಗಿವಿ ಪ್ರಯತ್ನಿಸಿದವರು ಬಹಳ ಕಡಿಮೆ.

ಚಿಮಿಣಿ ಕ್ಲೈಂಬಿಂಗ್ ವಿವರಣೆಗೆ ಡಿಸ್ಕವರಿ ಚ್ಯಾನಲ್ಲಿನವರ ವಿವರಣಾತ್ಮಕ ವೀಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ.

ಒಲವು, ತರಬೇತಿಗಳೆರಡೂ ಮೇಳೈಸಿದ ನಾನು ೧೯೭೭ರ ಸುಮಾರಿಗೆ ಬೇರೊಂದೇ ಜಾಡು – ನಿಮಿರುಗಿವಿಗೆ ಚಿಮಣಿಸರಣಿ, ಕಂಡುಕೊಂಡಿದ್ದೆ. ಆಶ್ರಮ ದಾರಿಯಲ್ಲಿ ದಿಬ್ಬ ಏರಿದ ಕೂಡಲೇ ಉತ್ತರಕ್ಕೆ ತಿರುಗಿ ನೇರ ನಿಮಿರುಗಿವಿಯ ಬುಡಕ್ಕೆ ನುಗ್ಗಬೇಕು. ಆಲಿಬಾಬನ ಸೂಸಮ್ಮ ತನ್ನ ರಹಸ್ಯ ದ್ವಾರ ತೆರೆದಂತೆ ಭಾರೀ ಬಂಡೆಗುಂಡುಗಳ ನಡುವೆ ಮೊದಲೊಂದು ಸಪುರ ಓಣಿ. ಸುಮಾರು ಆರೇಳಡಿ ಅಗಲದ ಓಣಿ ಒಳಸರಿದಂತೆ ಕಿರಿದಾಗುತ್ತ ಒಂದು ಕತ್ತಲ ಗುಹೆಯೇ ಆಗಿಬಿಡುತ್ತದೆ. ಗುಹಾದ್ವಾರದಲ್ಲಿ ‘ಸುಗ್ರೀವಕಲ್ಲು’ – ಭಾರೀ ಬಂಡೆ ತುಂಡು. (ನಿಮಗೆ ರಾಮಾಯಣ ಗೊತ್ತುಂಟಲ್ವೋ? ಅದರಲ್ಲಿ ಮಾಯಾವಿ ರಕ್ಕಸ ಕಿಷ್ಕಿಂದೆ ಕಾಡಿದ್ದು ನೆನಪಿಸಿಕೊಳ್ಳಿ. ವಾಲಿ ಸುಗ್ರೀವರು ಆತನ ಬೆನ್ನಟ್ಟಿದರು. ನನ್ನ ರಾಮಾಯಣದ ಮಾಯಾವಿ ಸೀದಾ ಬಂದು ಸೇರಿದ್ದು ಈ ಕೊಡಂಜೆ ಗುಹೆ. ಮತ್ತೆ ವಾಲಿ ಒಳಗೆ ನುಗ್ಗಿ ದಿನಗಟ್ಟಳೆ ಕಾಳಗ ಕೊಟ್ಟದ್ದು, ದಿಕ್ಕೇಡಿ ದ್ವಾರಪಾಲಕ ಸುಗ್ರೀವ ಕದಮುಚ್ಚಿ ಕಿಷಿಂದೆಗೆ ಮರಳಿದ್ದು, ವಿಜಯೀ ವಾಲಿ ಹೊರಬರಲು ಕದಮುಚ್ಚಿದ ಬಂಡೆಯನ್ನು ಒದ್ದು ಕಳೆದದ್ದು ಎಲ್ಲಾ ನಿಮಗೆ ನಾನ್ಯಾಕೆ ಹೇಳಲಿ. ಆ ಅದೇ ಬಂಡೆ ಈ ಸುಗ್ರೀವಕಲ್ಲು!) ಅಲ್ಲಿ ಆ ಬಂಡೆ ಓಣಿಯ ಎರಡೂ ಮೈ ಸಮೀಪಿಸಿ ಸುಮಾರು ಮೂವತ್ತಡಿ ಎತ್ತರಕ್ಕೆ ಸುಂದರ ‘ಚಿಮಣಿ’ ಉಂಟಾಗಿದೆ. ಇದು ಆರೋಹಿಗಳಿಗೆ ಕಾಣುವಷ್ಟು ಸರಳವಾಗಿ ಇಲ್ಲ. ಆದರೆ ತೊಡಗಿದ ಎಂಥವರಿಗೂ ಏರಿಕೆಯ ಶಕ್ತಿ ಮತ್ತು ಮಿತಿಗಳನ್ನು ಗಟ್ಟಿಯಾಗಿ ಕಲಿಸಿಬಿಡುತ್ತದೆ! ಒಟ್ಟಾರೆ ಕೊಡಂಜೆಯ ಹೆಚ್ಚಿನ ಕಥನಕ್ಕೆ ಮುಂದೊಂದು ದಿನ ಸ್ವತಂತ್ರ ಲೇಖನವೇ ಬರಲಿದೆ. ಅಲ್ಲಿವರೆಗೆ, ಭಕ್ತ ಜನವೇ ಒಕ್ಕೊರಲಿನಲ್ಲಿ ಹೇಳಿ ರಂಗನಾಥಸ್ತಂಭಕ್ಕೇ ಜಯ್!

ಕೊಡಂಜೆ ಸಾಹಸಿಗಳಿಗೆ ರಂಗನಾಥದ ಚಿಮಣಿ ಒಂದು ಸಂಗತಿಯೇ ಅಲ್ಲ. ಆದರೆ ಅಭ್ಯಾಸಕ್ಕೆ ಚಕ್ಕರ್ ಹೊಡೆದ ಗಣಪತಿ ಭಟ್ಟರ ಪಾಡನ್ನು ಅವರ ಮಾತಿನಲ್ಲೇ ಕೇಳಿ. “ನನಗಿದು ಹೊಸ ಅನುಭವ. ‘ಇದಕ್ಕೆ ಬೆನ್ನು, ಅದಕ್ಕೆ ಕಾಲು. ಇದರ ಮಡಚು, ಅದರ ಚಾಚು. ಇಲ್ಲಿ ಕಾಲು ಅಲ್ಲಿ ಕೈ. ಬೆನ್ನು ಎತ್ತು, ಮಡಚಿದ್ದರ ವಿಸ್ತರಿಸು, ಚಾಚಿದ್ದರ ಸೆಳಕೋ…’ ಸೂಚನೆಗಳು ಪುಂಖಾನುಪುಂಖ. ಯಾವುದು ಮೊದಲು ಯಾವುದು ಅನಂತರ, ನಾನು ತಬ್ಬಿಬ್ಬು. ನಿಧಾನಕ್ಕೆ ಗ್ರಹಿಸುತ್ತ ಏರಿದೆ.

ದೇವುಗೆ ಎರಡು ಹೆಂಡಿರು. ಒಬ್ಬಾಕೆಗೆ ಸದಾ ಇನ್ನೊಬ್ಬರತ್ತ ಕಣ್ಣು ಹೊಡೆಯುವ ಚಪಲ. ಆದರೂ ಪತಿವ್ರತೆ – ದೇವು ಕತ್ತಿಗೆ ಸದಾ ಜೋತು ಬಿದ್ದಾಕೆ. ಮೊತ್ತೊಬ್ಬಾಕೆಗೆ ಹಿಂಗದ ಹಸಿವು; ತೀರಿಸಿಕೊಳ್ಳುವುದೇನಿದ್ದರೂ ದೇವು ಬೆನ್ನಿಗೆ ಬಿದ್ದೇ. ನಾನು ಮಂಗಳೂರಿನಲ್ಲಿ ಬಸ್ಸಿಗೆ ಸೀಟು ಕಾದಿರಿಸುವ ಕಾಲದಲ್ಲಿ ದೇವು, “ನಾವು ಬರುವುದು ಮೂವರು ಆದರೆ ಸೀಟು ಒಂದೇ ಸಾಕು” ಎಂದು ಒಗಟು ನುಡಿದದ್ದು ನಿಜವೇ. ಅಷ್ಟೆಲ್ಲಾ ಆದರೂ ಚಿಮಣಿ ಏರುವ ತುರ್ತಿನಲ್ಲಿ ದೇವು ತನ್ನವರನ್ನು ಪರಹಸ್ತಕ್ಕಿಡಲೇ ಬೇಕಾಯ್ತು. ಕ್ಯಾಮರಾವನ್ನು ಕತ್ತಿನಿಂದ ಕಳಚಿ, ಬೆನ್ನ ಚೀಲವನ್ನು ಇಳಿಸಿ ಒಟ್ಟು ಹಗ್ಗಕ್ಕೆ ಕಟ್ಟಿ ಮೇಲಕ್ಕೇರಿಸಲು ದೇವು ಒಪ್ಪಲೇಬೇಕಾಯ್ತು! ಮತ್ತಿನದ್ದರಲ್ಲಿ ಭಟ್ಟರ ಮಾತಿಗೆ ಸಾಮ್ಯ ದೇವು ಮಾತಿನಲ್ಲೂ ಕಂಡರೆ ನನ್ನನ್ನು ಬಯ್ಯಬೇಡಿ. “ಬೆನ್ನು ಒತ್ತು, ಎಡಗಾಲು ಎದುರು ತುಳಿ. ಬಲಗಾಲು ಹಿಂದಿನ ಬಂಡೆಗೆ ಮಡಚು. ಬಲಗೈಯಲ್ಲಿ ಮುಂದಿನ ಬಂಡೆ ಎಡಗೈಯಲ್ಲಿ ಹಿಂದಿನ ಒತ್ತುತ್ತಿದ್ದಂತೆ, ಬೆನ್ನು ಎತ್ತು, ಮಡಚಿದ ಕಾಲಿನ ಮೇಲೆ ನಿಲ್ಲು. ದೇಹ ಮೇಲೇರಿದ್ದೇ ಮತ್ತೆ ಬೆನ್ನು ಒತ್ತು, ಬಲಗಾಲು ಎದುರು ತುಳಿ, ಎಡಗಾಲು ಹಿಂದಿನ…” ಕ್ರಮಪಾಠ ಧಾರೆಯಲ್ಲಿ ಉಸಿರಾಡುವುದೆಲ್ಲಿ, ಬೆವರೊರೆಸುವುದು ಯಾವಾಗ ದೇವುಗೆ ಹೇಳಿದವರಿಲ್ಲ. ಕಾಲು ಚಾಚಿದ್ದು ಹೆಚ್ಚಾಗಿ ಜಾರಿದಂತನಿಸಿತು, ಬೆನ್ನೂರುವ ಅವಸರದಲ್ಲಿ ತರಚಿರಬೇಕು ಮತ್ತೆ “ಬಿದ್ದೆನಯ್ಯೋ” ಎನ್ನುವ ಹಂತದಲ್ಲಿ ನಡುವೆ ಕೀಲಿನಂತೆ ಕೂತಿದ್ದ ಬಂಡೆ ವಿಶ್ರಾಂತಿ ಕಟ್ಟೆಯಾಗಿ ಒದಗಿತು.

ಹೌದು, ನಾನೂ ಅಲ್ಲಿ ವಿರಮಿಸಿದ್ದೆ ಆದರೆ ಬೇರೆಯೇ ಕಾರಣಕ್ಕೆ. ಆ ಚಿಮಣಿಯ ಸಂದಿನಲ್ಲೆಲ್ಲೋ ಬೇರು ಹುದುಗಿಸಿ, ಬಂಡೆಯ ಮಂಡೆಗೇ ಛತ್ರಿ ಹಿಡಿದಂತೆ ಒಂದು ಸಪುರ ಮರ ಹಬ್ಬಿತ್ತು. ಆ ಕೀಲು ಬಂಡೆಯಿಂದ ಮೇಲಕ್ಕೆ ಏರುವಾಗ ಮರದ ಕಾಂಡ ಅನಿವಾರ್ಯವಾಗಿ ಅನುಕೂಲವಾಗಿಯೂ ನಮಗೆ ಸಿಕ್ಕುತ್ತಿತ್ತು. ಮರಾ ನಾಮಬಲದಿಂದ ಕಟುಕ ಸ್ಥಾನೋನ್ನತಿ ಪಡೆದದ್ದು ನಿಜವಾದರೆ ಪದೋನ್ನತಿ ಪಡೆಯಲು ನಾವ್ಯಾಕೆ ನೆಚ್ಚಬಾರದು ನಿಜದ ಮರಾ? ಪುಷ್ಟವಾದ ಒಂದು ತೋಳಿನ ಗಾತ್ರದಲ್ಲಿದ್ದ ಮರದ ಕಾಂಡ, ನಾವು ಆಧರಿಸಿದಾಗ ಅತ್ತಿತ್ತ ತೊನೆದರೂ ನಮ್ಮ ಭಾರ ತಾಳಿಕೊಳ್ಳುವುದರಲ್ಲಿ ಏನೂ ಸಂಶಯವಿರಲಿಲ್ಲ. ಆದರೆ ತೀರಾ ವಿರಳ ಜನಸಂಪರ್ಕವಿದ್ದ ಸ್ಥಳಗಳಲ್ಲಿ ನಾವು ನುಗ್ಗುತ್ತಿದ್ದೇವೆ ಎಂಬ ನನ್ನ ಅರಿವು ಮರವನ್ನು ಒಂದೆರಡು ಬಾರಿ ತೀವ್ರ ಅಲುಗಾಡಿಸಿ, ಪರೀಕ್ಷಿಸಿಯೇ ಒಪ್ಪಿಕೊಳ್ಳುವಂತೆ ಮಾಡಿತು. ಇಲ್ಲವಾದರೆ ಅದು ನಮ್ಮ ದೃಷ್ಟಿಗೆ ನಿಲುಕದ ಮೇಲೆ ಅದು ಭಾರೀ ಜೇನುಗೂಡನ್ನು ಕೆದಕುತ್ತದೆಯೇ, ಸಡಿಲ ಮಣ್ಣುಕಲ್ಲಿನ ಕುಪ್ಪೆಯನ್ನು ನಮ್ಮ ತಲೆಗೇ ಕವುಚುತ್ತದೆಯೇ ಎನ್ನುವ ಭಯ. ಇಂಥ ಜಾಗ್ರತೆಯಿದ್ದೂ ಹಿಂದೊಮ್ಮೆ ಕೊಡಂಜೆಕಲ್ಲಿನಲ್ಲಿ ಸಿಕ್ಕ ‘ಮಧುಚುಂಬನ’ವನ್ನು (ಇಲ್ಲ, ಇಲ್ಲಿ ಉಪಕಥನಕ್ಕಿಳಿಯುವುದಿಲ್ಲ. ಅನುಕೂಲದಲ್ಲಿ ಮುಂದೊಂದು ದಿನ ಹೀಗೇ ಬರೆಯುತ್ತೇನೆ) ಮರೆಯಲಾದೀತೇ? ಜಮಾಲಾಬಾದಿನ ನೇರಮೈ ಏರುತ್ತಿದ್ದಾಗ ಮಗುಚಿದ ಭಾರೀ ಬಂಡೆಯ ಕಥೆ, ಇಲ್ಲೇ ಹಿಂದಿನ ಪುಟಗಳಲ್ಲಿ ನೀವೂ ಓದಿದ್ದೀರಿ – ಉಪೇಕ್ಷಿಸುವುದುಂಟೇ? ಇಲ್ಲಿ ಅಂಥದ್ದೇನೂ ಇರಲಿಲ್ಲ. ಮತ್ತೆ ಚಿಮಣಿತಂತ್ರವನ್ನು ಬಿಟ್ಟು ಕಾಂಡವನ್ನು ಹಿಡಿದು ಸುಲಭವಾಗಿ ಬಂಡೆಯ ನೆತ್ತಿ ತಲಪಿದೆವು. ಅದು ಸಪಾಟಿತ್ತು. ನೂರಡಿಯಾಚೆ, ಕುರುಚಲು ಪೊದರುಗಳೆಡೆಯ ಸುಲಭ ನಡೆಮಡಿಯಲ್ಲಿ ರಂಗನಾಥನ ಶಿಖರ ತೋರುತ್ತಿತ್ತು.

ಭಾವನೆಗಳ ಅಮಲು ‘ಮೊದಲು ಯಾರು’ ಎನ್ನುವ ಪ್ರಶ್ನೆ, ಹುಸಿ ಗೌರವ ತರುವುದುಂಟು. ಯಾರದೋ ದುಡ್ಡು, ಇನ್ಯಾರದೋ ದುಡಿಮೆ, ಮತ್ತ್ಯಾರದೋ ಮೆರೆತ, ಮಗುದೊಬ್ಬರ ಬಳಕೆ ಇತ್ಯಾದಿ ಠಕ್ಕುಗಳಿಗೆ ನಮ್ಮಲ್ಲಿ ಆಸ್ಪದವಿರಲಿಲ್ಲ. ಸಾಧನೆ ತಂಡದ್ದು. ಸಹಜವಾಗಿ ಪ್ರತಿ ವ್ಯಕ್ತಿ ತಂಡದ ಒಂದು ಹೆಜ್ಜೆ. ಚಿಮಣಿ ಏರುವವರಿಗೆ ಹಗ್ಗ ಇಳಿಬಿಟ್ಟು ಕುಳಿತವ ನಾನು, ಅದನ್ನು ಮೊದಲು ಬಳಸಿದವ ಅಭಯ. ಮುಂದೆ ನಿರಪಾಯ ಜಾಡು ಸ್ಪಷ್ಟವಿದ್ದುದರಿಂದ ಆತ ಹಾಗೇ ಮುಂದುವರಿದ. ಹುಶಾರಿನಿಂದ ಮುಳ್ಳಕೈಗಳನ್ನು ಸರಿಸಿ, ಹುಲ್ಲು ಬಗೆದು ನಡೆದ. ಕೊನೆಯಲ್ಲಿ ಎಡಕ್ಕೆ ಅಥವಾ ದಕ್ಷಿಣದಿಕ್ಕು ಎನ್ನಿ, ಸಣ್ಣ (ಬಂಡೆ) ದಿಣ್ಣೆ. ಸುಲಭ ಚಡಿಗಳನ್ನು ಆಯ್ದು ಏರಿದ, ಒಮ್ಮೆಗೇ ಇನ್ನು ಎತ್ತರವಿಲ್ಲದ ಎತ್ತರ ತಲಪಿದ. ಸತತ ಮೂರು ಗಂಟೆಯ ಶ್ರಮದಲ್ಲಿ ಅಂದರೆ ಮಧ್ಯಾಹ್ನ ಹನ್ನೆರಡು ಗಂಟೆಯ ವೇಳೆಗೆ ನಮ್ಮ ತಂಡ ರಂಗನಾಥ ವಿಜಯ ಸಾಧಿಸಿತ್ತು.

ಉಪಾಧ್ಯರ ಲಹರಿಯಲ್ಲಿ: ಉಪಾಧ್ಯರ ತಲೆ ಕುಂಬಾಗಿ, ಯೋಚನೆಗಳು ವಜ್ರದುಂಬಿಗಳಾಗಿದ್ದವು. ಸ್ತಂಭದ ಬುಡ ಬಿಟ್ತು ಹೊಸದೇ ಸಾಹಸ ಮಾಡಿ ಶಿಬಿರ ಸ್ಥಾನವನ್ನು ಸೇರಿದರೂ ಶಾಂತವಾಗಲಿಲ್ಲ. ಬೆವರೊರಸಿದರು, ನೀರು ಕುಡಿದರು, ಶತಪಥ ಹಾಕಿದರು, ಸ್ತಂಭ ನಿಟ್ಟಿಸಿದರು, ನಿಟ್ಟುಸಿರೂಬಿಟ್ಟರು. ಹಸಿರು ಸಾಲಿನ ನಡುವೆ ಕ್ಷುದ್ರ ಜಂತುಗಳಂತೆ ಕಂಡು ಕಾಣದಂತಿದ್ದ ಏರುತ್ತಿದ್ದ ಐವರು ಈಗ ಬಲಕ್ಕೆ ಸರಿದು ಆಕಾಶರೇಖೆಗೆ ಬಂದರು. ಖಚಿತ ಸ್ತಂಭದ ಮೈಯಿಂದ ಅಷ್ಟೂ ಜನ ಒಮ್ಮೆಲೆ ಸಾವಿರಾರು ಅಡಿ ದೂರದ ದಿಗ್ಭಿತ್ತಿಗೆ ಅಂಟಿಸಿದ ನಗಣ್ಯ ಕಸದಂತೆ ತೋರತೊಡಗಿದ್ದರು. ಭೀಕರ ಕೊಳ್ಳದ ನೂರಾರು ಅಡಿ ಮೇಲೆ ಅಲ್ಲಿ ಇಲ್ಲಿ ತೂಗಿಬಿದ್ದಂತೆ ಕಾಣುವುದು ನಿಜಕ್ಕೂ ಗಿಡವೋ ಹುಲ್ಲೋ ಅಲ್ಲಾ ನಮ್ಮವರೆಯೋ ಎಂಬ ಸಂಶಯ ಉಪಾಧ್ಯರಿಗೆ ಬಲಿಯುತ್ತಲೇ ಹೋಯ್ತು. ಗಿಡಮರಗಳ ಆಧಾರ. ರಕ್ಷಣೆ ಇಲ್ಲದೇ ಅನೂಹ್ಯ ಆಳದಿಂದ ಅನಂತ ಎತ್ತರಕ್ಕೆ ಏರುವ ಕ್ರಿಯೆ. ಕಾಲವೇ ನಿಂತಂತೆ ಪ್ರಗತಿ. ಬಂಡೆಯ ಚಡಿ, ಕೊರಕಲು, ಪೊಟರೆಯಂತ ಪೊಳ್ಳು ಹುಡುಕಿ ಏರುವಲ್ಲಿ ತಡವಾಗುತ್ತಿರಬೇಕು ಎಂದು ಯೋಚಿಸುತ್ತಿದ್ದಂತೆ ಉಪಾಧ್ಯರಿಗೆ ಹೊಸದೇ ಭಯ ಅಮರಿಕೊಂಡಿತು. ಫಕ್ಕನೆ ಆರೋಹಿ ಕೈಯಿಟ್ಟ ಪೊಟರೆಯೊಂದರಿಂದ ಯಾವುದೋ ಧ್ಯಾನದಲ್ಲಿ ಕುಳಿತ ಹಕ್ಕಿಯೋ ಇನ್ನೊಂದೋ ಬುರ್ರೆಂದು ಹೊರಚಿಮ್ಮಿದರೆ ಇವರ ಗತಿ? ಗಾಬರಿಯಿಂದ ಕೈಬಿಟ್ಟು, ಹಗ್ಗದಲ್ಲಿ ನೇತುಬಿದ್ದು ಮತ್ತದರ ತುಯ್ತಕ್ಕೆ ಇತರರು… ಸ್ತಂಭ ಹತ್ತಲಾಗದ ಹತಾಶೆಗೆ ಕಿಡಿಯಿಡುವ ದುಷ್ಟಯೋಚನೆಗಳು. ಅದನ್ನು ದೇವಕಿ, ಜೋನಾಸರಿಗೆ ತಿಳಿಸಿ ಅವರ ತಲೆಯನ್ನೂ ಕರಡು ಮಾಡುವ ಬುದ್ಧಿ ಉಪಾಧ್ಯರದ್ದಲ್ಲ. ಬದಲಿ ಕೆಲಸ ಹಚ್ಚಿ ಮರೆಯಲೆತ್ನಿಸುತ್ತ “ಬನ್ನಿ, ಆಚೆ ಬೆಟ್ಟಕ್ಕೆ ಹೋಪ” ಎಂದು ಹೊರಟೇಬಿಟ್ಟರು.

ದೇವಕಿ ಹತ್ತುವ ನಿರೀಕ್ಷೆಯೇ ಇಟ್ಟುಕೊಂಡವಳಲ್ಲ ಆದ್ದರಿಂದ ನಿರ್ಲಿಪ್ತಳಾಗಿದ್ದಳು. ಆದರೆ ಕಷ್ಟಸುಖಗಳಲ್ಲಿ ಜೊತೆಗೆ ಹೆಜ್ಜೆ ಹಾಕುತ್ತೇನೆ ಎಂದು ಯಾರದೋ ಸಮಕ್ಷಮದಲ್ಲಿ ಪ್ರಮಾಣ ಮಾಡಿದ್ದನ್ನು ಮರೆಯದವಳು. ಹಾಗೇಂತ ಭಾರೀ ಧೈರ್ಯಸ್ಥೆ ಆಗುವುದು, ದೈಹಿಕ ಮಿತಿ ಮೀರುವುದು ಸಾಧ್ಯವಿರಲಿಲ್ಲ. ಆತಂಕಗಳು ಅವಳವೂ ಇದ್ದರೂ ಅವು ನಿರಾಕಾರ. ಅವನ್ನು ಹತ್ತಿಕ್ಕುವಂತೆ ಹೊಟ್ಟೆ ಪಕ್ಷಪಾತಿಯಾದಳು; ಉಪಾಧ್ಯರನ್ನು ತಡೆದು ಮೂವರಿಗೂ ತಿಂಡಿ ಹಂಚಿದಳು. ಅಲ್ಲೇ ಅಡ್ಡಾಡಿದಳು. ಪ್ರೇಕ್ಷಕರಾಗಿ ಬಂದಿದ್ದ ಹತ್ತೆಂಟು ಯುವಕರೊಡನೆ ಇವರು ಹರಟಲು ಪ್ರಯತ್ನಿಸಿದರು. ಅವರಿಗೆ ಕನ್ನಡೀ ವರಾದ್, ಇವರಿಗೆ ತಮಿಳ್ ತೆರಿಯಾದ್! ಆದರೂ ಎಲ್ಲೂ ಪರಸ್ಪರ ಮುಟ್ಟದ ಡಬಲ್ಲ್ ರೋಡಿನ ಟ್ರಾಫಿಕ್ಕಿನಂತೆ ಏನೇನೋ ಸಂಭಾಷಣೆ ನಡೆಸಿದರು. ಹೀಗೆ ಇನ್ನೇನು ಗಂಟೆ ಹನ್ನೆರಡು ಮುಟ್ಟಿತು ಎನ್ನುವಾಗ ಒಮ್ಮೆಗೆ ಸ್ತಂಭದ ನೆತ್ತಿಯಲ್ಲೊಂದು ಮಾನವ ಜೀವ ಚಿಮ್ಮಿತು! ದೇವಕಿ ಲೆಕ್ಕಕ್ಕೆ ಅದು ‘ಮುಂದಾಳು ಅಶೋಕ್.’ ದೇಹಭಾಷೆ ನೋಡಿ ಉಪಾಧ್ಯರ ತೀರ್ಮಾನ ‘ಅಭಯ.’ ಮತ್ತೆ ಅಲ್ಲೇ ಐದು ಹತ್ತು ಮಿನಿಟಿಗೊಂದು ತಲೆ ಮೊಳೆದು ಪೂರ್ಣ ಐದಾಗುವಾಗ ಗಂಟೆ ಹನ್ನೆರಡೂವರೆ. ಮಸುಕುಗಟ್ಟಿದ ದೂರದ ಪರ್ವತಮಾಲೆಯಿಂದ ತುಸುವೇ ಎತ್ತರಕ್ಕೆ, ರಂಗನಾಥ ಸ್ತಂಭಕ್ಕೇ ಮೂಡಿತ್ತು ಐದು ಕೋಡು. ಲೆಕ್ಕ, ಗುರುತು ಸರಿಯಾದ ಮೇಲೆ ಕ್ಯಾಮರಾ ತುಂಬಿಕೊಂಡರು. ಅದಕ್ಕಿಂತ ಹೆಚ್ಚಿನ ದಾಖಲೆ, ಸಂವಹನ ಕೂಡಾ ನಡೆಯಲಿಲ್ಲ. ಪರಸ್ಪರ ಧ್ವನಿ ಏರಿಸಿ ಆಡಿದ ಮಾತುಗಳೆಲ್ಲಾ ಬರಿಯ ಬೊಬ್ಬೆಗಳು. ಕೇವಲ ಅರ್ಧ ಗಂಟೆಯ ಒಳಗೆ ಅವರು ಇಳಿಯ ಹೊರಟಿರಬೇಕು, ಕಣ್ಮರೆಯಾದರು.

ಈಗ ಮತ್ತೆ ಸಮಯ ಮನಸ್ಸಿನ ಮೇಲೆ ಭಾರ ಹಾಕುವ ಸನ್ನಿವೇಶ. ಬೆಳಗ್ಗಿನ ಬಳಲಿಕೆ ದೂರವಾಗಿತ್ತು, ಹಸಿವು ಹಿಂಗಿತ್ತು. ಸುಮ್ಮನೇ ಕುಳಿತರೆ ನಿದ್ದೆ ಬಾಕಿ ಅಮರಿ, ತಿಳಿವು ಕಡಿಮೆಯಾಗಿ ಆತಂಕಕ್ಕೆ ಗೊಂದಲ ಸೇರಿ ಅಧ್ವಾನವಾಗುವ ಭಯ. ದೇವಕಿ ಜಾಗೃತಳಾದಳು. (ಭಕ್ತ ಜನವೇ ಒಕ್ಕೊರಲಿನಲ್ಲಿ ಹೇಳಿ ರಂಗನಾಥಸ್ತಂಭಕ್ಕೇ ಜಯ್!)

ಆನಂದಾನುಭೂತಿ: ಆನಂದನ ಪತ್ರ-ಲೇಖನದ ಸಂಭ್ರಮದ ಪರಿ ಬೇರೇ. ಅವನ ಮಾತಿನಲ್ಲೇ ಮುಂದುವರಿಯೋಣಾ “ಗುರುಕೃಪಾಹೀನರಾದ ನಾವು ತಬ್ಬಲಿಗಳಂತೆ ಪ್ರಪಾತದಂಚಿನಲ್ಲಿ ತೆವಳೀ ತೆವಳೀ ಅಂತಿಮವಾಗಿ ಕೊಡಿ ತಲಪಿದೆವು. ಅತ್ತ ನಮ್ಮನ್ನು ಅದುವರೆಗೆ ಕಾಣದೇ ಚಡಪಡಿಸುತ್ತಿದ್ದವರಿಗೆ ಮೂಡಿದ ಆನಂದಕ್ಕೆ ಪಾರವೇ ಇಲ್ಲ. ಕೂಡಲೇ ಕೋತಗೇರಿ ಆಕಾಶವಾಣಿಯಿಂದ ನಮ್ಮ ಅಸಮ ಸಾಹಸವನ್ನು ಜಗದಗಲಕ್ಕೆ ಬಿತ್ತರಿಸಲಾಯಿತು. (ಕ್ಷಮಿಸಿ, ಆನಂದನಿಗೆ ಸುಂದರ ಕಲ್ಪನೆಗಳು ಬರುತ್ತಿರುತ್ತವೆ. ಇಂದಿಗೂ ಕೋತಗೇರಿಯಲ್ಲಿ ಆಕಾಶವಾಣಿ ನಿಲಯವಿಲ್ಲ!) ಹತ್ತಲು ಸುಮಾರು ನಾಲ್ಕು ಗಂಟೆ, ಇಳಿಯಲು ಎರಡು ಗಂಟೆ ನಮ್ಮ ವೇಗಸೂಚಿ. ದೇಶ, ಕಾಲದ ಈ ದೂರದಲ್ಲಿ ನಿಂತು ನಾನು ನೆನಪಿಸಿಕೊಳ್ಳುವುದಿಷ್ಟೆ, ಪ್ರದೀಪನ ಶಿಲಾರೋಹಣ ಚಾಕಚಕ್ಯತೆ, ಗೋವಿಂದರಾಜರ ನೇತೃತ್ವ ಇಲ್ಲದಿದ್ದರೆ ರಂಗನಾಥ ಸ್ತಂಭ ಜಯಿಸಿದ ಕೀರ್ತಿ ನನ್ನ ಪಾಲಿನದಾಗುತ್ತಿರಲಿಲ್ಲ.”

ಗಗನಯಾನಿಗಳು: ರಂಗನಾಥನ ಮಂಡೆ ಎರಡು ಹೋಳು. ದಕ್ಷಿಣದ ಪಾಲು ದೊಡ್ಡದು; ಸುಮಾರು ಮೂರಡಿ ಅಗಲ, ಹದಿನೈದು ಅಡಿ ಉದ್ದದ ತಗ್ಗುತೆಮರುಗಳ ದಿಣ್ಣೆ. ಮತ್ತೂ ದಕ್ಷಿಣಕ್ಕೆ, ಎರಡಡಿ ತಗ್ಗಿನಲ್ಲಿ ಇಳಿಜಾರಾಗಿ ಪ್ರಪಾತದತ್ತ ಕಣ್ಮರೆಯಾಗುವ ನೆಲ. ಹೆಚ್ಚಿನ ಧೈರ್ಯದಲ್ಲಿ ಅಲ್ಲೂ ತುಸುವೇ ಕಾಲಾಡಿಸಬಹುದಿತ್ತು. ಹೋಳೆರಡರ ಸಂದಿನಲ್ಲಿ ಒಂದು ಭಾರೀ ಮುಳ್ಳುಗಿಡ, ಭರವಸೆಯ ನಿಶಾನಿ ಬೇರೂರಿತ್ತು. ಹಿಂದಿನ ದಿನ ಶಿಬಿರಸ್ಥಾನದಿಂದ ತೋರಿದ್ದ ಹಸುರುಗೈ ಅದರದ್ದೇ ಒಂದು ರೆಂಬೆ. ಶಿಖರದ ಇನ್ನೊಂದು ಹೋಳಿನ ಮೇಲಂತೂ ಇದರದೇ ಹೊದಿಕೆ. ಅದನ್ನು ಜಾಗ್ರತೆಯಲ್ಲಿ ಸುಧಾರಿಸಿದರೂ ಅಲ್ಲಿ ಹೆಚ್ಚೆಂದರೆ ನಾಲ್ಕೈದು ಹೆಜ್ಜೆ ಹಾಕುವಷ್ಟೇ ಅವಕಾಶ. ಒಟ್ಟಾರೆ ಶಿಖರಕ್ಕೆ ಇನ್ನೂ ಐದು ಮಂದಿ ಬಂದಿದ್ದರೆ ದೃಶ್ಯ ವೀಕ್ಷಣೆಗೆ ನಾವು ಸರದಿಯ ಸಾಲು ಹಿಡಿಯಬೇಕಾಗುತ್ತಿತ್ತು! ಸುತ್ತ ಬೋಳು ಆಕಾಶ. ಚಿತ್ತಾರವಿಡಲು ಬಿಳಿಯ ಮೋಡಗಳೂ ಇರಲಿಲ್ಲ. ಬೀಸುಗಾಳಿಯೂ ನಮ್ಮನ್ನು ವಿಚಾರಿಸಿಕೊಳ್ಳಲು ಬರಲಿಲ್ಲ. ಬಿಸಿಲು ಪೂರ್ಣವಿದ್ದರೂ ‘ರಣಗುಡುವ’, ‘ತಲೆ ಚುರುಗುಟ್ಟುವ’ ಇತ್ಯಾದಿ ವಿಶೇಷಣಗಳು ನಿರುಪಯುಕ್ತವಾಗುವಂತೆ ಹಗಲು ನಮಗೆ ಪ್ರಶಸ್ತವಾಗಿಯೇ ಇತ್ತು. ಇದೇ ವಲಯದಲ್ಲಿ ಆದರೆ ಹವಾಮಾನ ವೈಪರೀತ್ಯದಲ್ಲಿ ನಾನು ತಾತಾರ್ ಶಿಖರ ಹತ್ತಿದ್ದನ್ನು ನೀವು ಓದಿಯೇ ಇದ್ದೀರಿ. (ಇಲ್ಲವಾದರೆ ಕೂಡಲೇ ಇದೇ ಕಳೆದ (೨೦೧೦ರ) ಜನವರಿ ಎಂಟನೇ ತಾರೀಕಿನಿಂದ ತೊಡಗಿದಂತೆ ಆರು ಕಂತುಗಳಲ್ಲಿ ಧಾರಾವಾಹಿಯಾದ ‘ಹೋಗೋಣ ಬನ್ನಿ ತಾತಾರಿಗೆ’ ಅವಶ್ಯ ಓದಿ ನೋಡಿ) ಭೋರಿಡುವ ಗಾಳಿ, ಕೊರೆಯುವ ಚಳಿ, ಮುಸುಕಿಕ್ಕುವ ಮಂಜು, ರಾಚುವ ಮಳೆ ಹೀಗೆ ಯಾವುದೇ ಒಂದು ವಕ್ಕರಿಸಿದ್ದರೂ ನಮ್ಮ ಕತೆ ಬರಿಯ ರೋಚಕ ಅನುಭವವಾಗದೆ ದುರಂತ ಕಥೆಯೇ ಆಗಿಬಿಡುತ್ತಿತೋ ಏನೋ!

ದಿಗಂತದಲ್ಲಿ ಬೆಟ್ಟಗಳೇ ಕಟ್ಟಿದ ಕೋಟೆ, ನಡುವೆ ಭವಾನಿ ನದಿಯ ಜಾಲ, ಎಲ್ಲಾ ಎಲ್ಲವೂ ಒಂದು ಬೀಸು ನೋಟಕ್ಕೇ ನಮ್ಮದು. ದೂರ ಪೂರ್ವದಲ್ಲಿ ಭವಾನಿಸಾಗರ ನೆಲಕ್ಕೆ ಹಾಸಿದ ಬಿಳಿ ಹಚ್ಚಡ. ಉಳಿದಂತೆ ಹಸುರಿನ ಕಂಬಳಿ ಸರ್ವವ್ಯಾಪಿ. ಅಲ್ಲೊಂದು ಇಲ್ಲೊಂದು ಮರ ಎಲೆಯುದುರಿಸಿದ ರಿಕ್ತತೆಯಲ್ಲೋ ಹೊಸ ಚಿಗುರಿನ ಚಿಮ್ಮುಗೆಯಲ್ಲೋ ಕುಸುಮಿಸಿದ ಸಂಭ್ರಮದಲ್ಲೋ ಕಲಾಕುಸುರಿಯಂತೆ ಶೋಭಿಸುತ್ತಿತ್ತು. ನದಿಯ ವಿಸ್ತಾರ ಪಾತ್ರೆ ಇದ್ದಲ್ಲಿ ಮಾತ್ರ ಭೂಮಿಯನ್ನು ಕಂಬಳಿಯ ರೀತಿಯಲ್ಲಿ ಮಡಚಲು ಹೊರಟಿದ್ದ ಕೆಂಪುಗಣ್ಣಿನ ರಾಕ್ಷಸನ (ಹಿರಣ್ಯಾಕ್ಷ) ಕಥೆಗೆ ಇಲ್ಲಿದೆ ಸ್ಫೂರ್ತಿ ಎಂದು ಅನ್ನಿಸಿ ರೋಮಾಂಚನವಾಯ್ತು. ಅಬ್ಬಾ ಎಂದರೆ ಆರಡಿಯ ವಾಮನರಿಗೆ ಸಾವಿರ ಅಡಿಯ ತ್ರಿವಿಕ್ರಮತ್ವ ಲಭಿಸಿ, ಭೂಮಿ ಅಳೆದು ಮುಗಿಸಿದ ಭಾವ ನಮ್ಮದು! ಹತ್ತುವ ಉದ್ದಕ್ಕೂ ಗೆಯ್ಮೆಯ ಸಂಪತ್ತಿನ ಅರಿವು ಇದ್ದರೂ ಮುಕ್ತವಾಗಿ, ಎಲ್ಲರೂ ಒಂದಾಗಿ ಅನುಭವಿಸುವ ವಿರಾಮ ದಕ್ಕಿರಲಿಲ್ಲ. ಆದರೆ ರಂಗನಾಥನ ನೆತ್ತಿಯಲ್ಲಿದ್ದ ಅರ್ಧ ಗಂಟೆಯುದ್ದಕ್ಕೂ ಸಣ್ಣಪುಟ್ಟ ತಿನಿಸು ಕುರುಕುತ್ತಾ ನೀರು ಗುಟುಕರಿಸುತ್ತಾ ಕ್ಯಾಮರಕ್ಕೆ ಪೋಸು ಕೊಡುತ್ತಾ ಹತ್ತುವಾಗಿನ ರೋಮಾಂಚಕ ಸನ್ನಿವೇಶಗಳನ್ನು ಉತ್ಪ್ರೇಕ್ಷಿಸುತ್ತಾ ಇಳಿಯಲಿರುವ ಆಳವನ್ನು ಯೋಚಿಸಿ ಒಳಚಳಿಯಲ್ಲಿ ಕಂಪಿಸುತ್ತಾ ಇದ್ದರೂ ದೃಶ್ಯಾವಳಿಗಳ ಸುಂದರ ಛಾಪು ನಮ್ಮ ಮೇಲೆ ಆಗುತ್ತಲೇ ಇತ್ತು; ನಾವು ಇನ್ನಿಲ್ಲದಂತೆ ಸಂಭ್ರಮಿಸಿದೆವು.

(ಮುಂದುವರಿಯಲಿದೆ)

[ಆಡಳಿತದ ಸುಪುಷ್ಟತೆಗಾಗಿ ಜನನಾಯಕರೆಂದೇ ಬಿಂಬಿಸಲ್ಪಟ್ಟ ಜನಗಳು ಎಲ್ಲ ಮರೆತು ‘ತುಳಿ, ಎಳಿ’ಗಳನ್ನು ಸ್ವಾರ್ಥ ಸಾಧನೆಗೆ ಬಳಸುತ್ತಿರುವ ಕಾಲಕ್ಕೆ, ಅವನ್ನು ಹೊಸ ಅನುಭವದೆತ್ತರಕ್ಕೆ ಬಳಸಿ ಯಶಸ್ವಿಯಾದ ನಮ್ಮ ಸಂತೋಷಕ್ಕೆ ನಿಮ್ಮ ಸಂತೋಷವನ್ನು ಕೇಳಲು ಕಾತರನಾಗಿದ್ದೇನೆ. ನಿಮ್ಮ ಸಿದ್ಧಿಯ ಅಭಿವ್ಯಕ್ತಿ ಶುದ್ಧ ಕನ್ನಡವೋ ಆಂಗ್ಲ ಲಿಪಿಯ ಕನ್ನಡವೋ ಅಲ್ಲಾ ಶುದ್ಧ ಇಂಗ್ಲೀಷೇ ಆದರೂ ಸರಿ, ಭಾವ ಮುಖ್ಯ. (ಹಿಂದ್)‘ಉಳಿ’ಯಬೇಡಿ, (ಸಂಕೋಚದಲ್)‘ಅಳಿ’ಯಬೇಡಿ]