(ರಂಗನಾಥ ಸ್ತಂಭ ವಿಜಯ ಭಾಗ -೧)

ಇಲ್ಲಿ ನನ್ನ ಲಕ್ಷದ್ವೀಪ ಕಥನ ಸಾಪ್ತಾಹಿಕ ಕಂತಿನಲ್ಲಿ ಸಾಗಿದ್ದಂತೆ ಲೋಕಮುಖದಲ್ಲಿ ಎಂತವರನ್ನೂ ಕಲಕುವ ಅಸಾಮಾನ್ಯ ಘಟನೆಗಳು ಬೆಳೆಯುತ್ತಲೇ ಇದ್ದವು/ ಇವೆ. ಕೆಂಜಾರಿನಲ್ಲಿ ದುಬೈ ಕೂಲಿಕಾರರೂ ಹರಪನಹಳ್ಳಿಯಲ್ಲಿ ಬೆಂಗಳೂರು ಕೂಲಿಕಾರರೂ ದಾರುಣವಾಗಿ ಸುಟ್ಟುಹೋದರು. ದಾಂತೇವಾಡ ಸಾಲದೆಂದು ಬಂಗಾಳದಲ್ಲೂ ನಡೆದ ನಕ್ಸಲ್ ನರಮೇಧ ರಾಷ್ಟ್ರವನ್ನೇ ತಲ್ಲಣಿಸಿತು. ಪ್ರಕೃತಿ ಧಾರಾಳವಿದ್ದರೂ ದುರಾಸೆಗಳ ರಾಜ್ಯದಲ್ಲಿ ವಿದ್ಯುತ್ತಿಲ್ಲ, ನೀರಿಲ್ಲ, ದವಸಧಾನ್ಯಗಳ ಬೆಲೆ ಮುಟ್ಟದ ಎತ್ತರವಿಲ್ಲ, ತರಕಾರಿ (ಕೃಷಿಕರ) ತಕರಾರು ಮುಗಿದದ್ದೇ ಇಲ್ಲ. ವೇದಿಕೆ ಕೊಡುವ ಎಲ್ಲಾ ವಿಷಯಗಳ ಮೇಲೆ (ಅಂದರೆ, ಆಶಯದಲ್ಲಿ ಪರಸ್ಪರ ಬದ್ಧ ವಿರೋಧವಿರುವ ವಿಚಾರಗಳಲ್ಲೂ) ಕಳೆದ ಕ್ಷಣದ ನೆನಪಿಲ್ಲದಂತೆ ‘ಪ್ರಚಾರ ಭಾಷಣವನ್ನೇ’ ಮಾಡುವ ಅಧಿಕಾರಿಗಳು, ರಾಜಕಾರಣಿಗಳು, ಮಠಾಧಿಪತಿಗಳು, ಕೊನೆಗೆ ಕಾವಲು ನಾಯಿಗಳೂ (ಮಾಧ್ಯಮಗಳು) ಯಾವ ಮುಚ್ಚುಮರೆಯಿಲ್ಲದೇ ಸ್ವಾರ್ಥವೊಂದನ್ನೇ ಪ್ರತಿನಿಧಿಸುತ್ತಿದ್ದಾರೆ. ಸಾರ್ವಜನಿಕಹಿತ ಎಂಬ ಅತ್ಯುನ್ನತ ಮೌಲ್ಯ ತಲಪಿದ ರಸಾತಳ ಯಾವ ಲೆಕ್ಕಕ್ಕೂ ಸಿಗದು.

ತಲಾ ಎಂಬತ್ತು ಲಕ್ಷದ ಹತ್ತೆಂಟು ವಾಲ್ವೋಗಳನ್ನು ಓಡಿಸಿ ತಿಂಗಳೊಳಗೆ ಭಾರೀ (ತಲಾ ಅಲ್ಲ, ಒಟ್ಟು) ಐದು ಲಕ್ಷದ ಲಾಭ ಘೋಷಿಸಿದ ನಿಲುವಿಗೆ, ಅದನ್ನು ಕನಿಷ್ಠ ವಿಮರ್ಶಿಸುವ ಧೈರ್ಯವಿಲ್ಲದ (ಬೆನ್ನುಹುರಿ ಮುರಕೊಂಡ ರಾಜಸ್ತಾನೀ ಉಡಗಳಂತಿರುವ) ಮಾಧ್ಯಮಿಕ ವರದಿಗಳಿಗೆ ನಗುವುದೋ ಅಳುವುದೋ ನನಗರ್ಥವಾಗಿಲ್ಲ. ಎಂಎಸ್‌ಇಜೆಡ್ ಎಂಬ ಭ್ರಾಮಕ ಲೋಕಕ್ಕೆ ನಿಜ ಸಮೃದ್ಧಿಯ ಗ್ರೆಗರಿ ಪತ್ರಾವೋ ಮನೆ, ಕೃಷಿ, ಎಲ್ಲಕ್ಕೂ ಮಿಗಿಲಾಗಿ ಅವರ ದಿಟ್ಟತನ ಕಣ್ಣಕಿಸರಾಯ್ತು; ಕಳೆದೊಗೆದಿದ್ದಾರೆ. ವಿಶ್ವ ಹೂಡಿಕೆಯ ಮೇಳ ನಡೆಸಿ ತೇಲಿಬಿಟ್ಟ ಲಕ್ಷಾಂತರ ಕೋಟಿ ಮೊತ್ತದ ಹಣ, ಎಷ್ಟೋ ಲಕ್ಷ ಉದ್ಯೋಗ ಸೃಷ್ಟಿಯ ಸಪ್ತವರ್ಣದ, ಮಿರಿಮಿರಿ ಮೈಯ ಭಾರೀ ನೊರೆಗುಳ್ಳೆ ಹಾರುತಿದೆ ನೋಡಿದಿರಾ? ಸಾಮಾನ್ಯರ ನಿತ್ಯಕ್ಕೇ ಇಲ್ಲದ ವಿದ್ಯುತ್, ನೀರು, ಸೂರು, ಟಾರುಗಳ ಪೂರೈಕೆ ಇವಕ್ಕೆ ನಿರಂತರವಂತೆ! ಬಿಡಿ, ಅದೇನಿದ್ದರೂ ನಂಬಿಬರುವವರ ಗ್ರಹಚಾರ. ಆದರೆ ತಮ್ಮಷ್ಟಕ್ಕೇ ಸಂತೃಪ್ತ, ಗೌರವಪೂರ್ಣ ರಾಷ್ಟ್ರ ಕಟ್ಟುವ ಕೆಲಸದಲ್ಲಿ ನಿರತರಾದ ಲಕ್ಷಾಂತರ ಉದ್ದಿಮೆ, ಕೋಟ್ಯಂತರ ಗ್ರೆಗರಿಪತ್ರಾವೋಗಳನ್ನು ವಿಕೃತಗೊಳಿಸಿ, ಈ ಗುಳ್ಳೆ ಸಿಡಿದಾಗ ಉಳಿಯುವುದು ನಾಲ್ಕೇ ಹನಿ! ಸ್ವಾವಲಂಬನೆಯ ಜಪದಲ್ಲೇ ಗಳಿಸಿದ ಸ್ವಾತಂತ್ರ್ಯವಿದು ಎಂಬುದನ್ನು ಮರೆತು, ಎಂದೂ ನನಸದ ಕನಸಿನ ಗುಲಾಮರಾಗಲು ಎಷ್ಟೊಂದು ಸಂಭ್ರಮ!

‘ನಾನು’ ಸರಿಯಿದ್ದರೆ ಊರು ಸರಿ ಎಂದು ನನಗೆ ತಿಳಿದಂತೆ ವೈಯಕ್ತಿಕವಾಗಿ ನಿರ್ವಹಿಸಬಹುದಾದ ಕೆಲವೇ ಹೋರಾಟಗಳನ್ನು ಗಮನಿಸೋಣ. ಅರಣ್ಯ ಇಲಾಖೆಯ ಕಣ್ಣಡಿಯಲ್ಲೇ ಶಿಶಿಲ-ಭೈರಾಪುರ ಮತ್ತು ಹೆಗ್ಡೆಮನೆ-ಸುಬ್ರಹ್ಮಣ್ಯದ ನಡುವಣ ದಟ್ಟಾರಣ್ಯಗಳು ರಾಜಾರೋಷವಾಗಿ ಬುಲ್ಡೋಜರ್ ಟಿಪ್ಪರ್ ಸೌಕರ್ಯದಲ್ಲಿ ಕಳ್ಳದಾರಿಗಳನ್ನು ತೆರೆದು ತೋರುತ್ತಿವೆ. ಚಿಕ್ಕಮಗಳೂರಿನ ಗೆಳೆಯ ಗಿರೀಶ್ ತಾತ್ಕಾಲಿಕ ಕಾನೂನಿನ ತಡೆಗಟ್ಟೆ ಕಟ್ಟಿದರೂ ಅನಾಚಾರವರ್ಷ ಹೆಚ್ಚಿರುವಾಗ ಪ್ರವಾಹವನ್ನು ನಂಬುವಂತಿಲ್ಲ. (ಅದೇ ವಿಚಾರದಲ್ಲಿ ಈ ವಲಯದಿಂದ ಹೋದ ನನ್ನ ಅಹವಾಲು ಪತ್ರ, ನೆನಪಿನೋಲೆ ಕಳೆದ ಸುಮಾರು ಮೂರು ತಿಂಗಳಿನಿಂದ ಸೂಕ್ತಕ್ರಮಕ್ಕಾಗಿ ಕ್ಯೂನಲ್ಲೆ ಇದೆ!) ಗುಂಡ್ಯ ವಿದ್ಯುತ್ ಯೋಜನೆಯ ವಿರುದ್ಧ ಸಕಲೇಶಪುರದ ಗೆಳೆಯ ಕಿಶೋರ್ ಕುಮಾರ್ ನಡೆಸಿರುವ ಪ್ರಚಾರಸತ್ರ, ಸಮಾನಾಸಕ್ತ ಗೆಳೆಯರ ಕೂಟದಿಂದ ಹೊರಗೆ ಗೀರುಗಾಯ ಮಾಡಿದಂತೆಯೂ ಕಾಣುತ್ತಿಲ್ಲ. ಈಗಷ್ಟೇ ಕಿಶೋರರ ಇನ್ನೊಂದು ಪತ್ರ ಬಂದಿದೆ. ಪಡುಬಿದ್ರೆಯ ನಾಗಾರ್ಜುನ ವಿದ್ಯುದಾಗರದಲ್ಲಿ ಬಸಿದ ಶಕ್ತಿಯನ್ನು ಘಟ್ಟ ಹತ್ತಿಸಲು ಇಲಾಖೆ ಚಾರ್ಮಾಡಿ ಘಾಟಿ ವಲಯದಲ್ಲಿ ಹೊಸದೇ ಜಾಡು ಅನುಸರಿಸಲಿದೆಯಂತೆ. ಅದಕ್ಕೆ ಇವರು ಕೇಳಿದ್ದು ಏನು ಎಷ್ಟು ಎನ್ನುವುದಕ್ಕಿಂತ ಅರಣ್ಯ ಇಲಾಖೆ ಚಾರ್ಮಾಡಿ ವಲಯವನ್ನು ಬರಿಯ ಕಲ್ಲು, ಬಂಜರು ಭೂಮಿ ಎಂದು ಹೀಗಳೆದು, ವಹಿಸಿಕೊಡುವ ಉತ್ಸಾಹ ತೋರಿರುವುದು ಇಲಾಖೆಯ ವೃತ್ತಿನಿಷ್ಠೆಗೇ ಹಿಡಿದ ಕನ್ನಡಿಯಂತೆ ತೋರುತ್ತಿರುವುದು ಶೋಚನೀಯ. ಇಲ್ಲಿ ಗೆಳೆಯ ನಿರೇನ್ ಜೈನ್ ವನ್ಯ (ಅಲ್ಲಿನ ಮೂಲವಾಸಿ ಜನಗಳೂ ಸೇರಿದಂತೆ ಭೂಮಿ, ಹಸುರು, ಪ್ರಾಣಿಪಕ್ಷಿಗಳಾದಿ ಸಕಲ ಜೀವಾಜೀವರಾಶಿ) ಮರುವಸತಿಯ ಮಹಾಸೆಳವಿನಲ್ಲಿ ಗಟ್ಟಿ ಚುಕ್ಕಾಣಿ ಹಿಡಿದೇ ಇದ್ದಾರೆ. ಯಾವ ಕ್ಷಣಕ್ಕೆ ಕಲ್ಲಮೊಳಕೆ, ಚಕ್ರಸುಳಿ, ಝರಿಜಲಪಾತವೆಂದು ಎವೆ ಮಿಟುಕಿಸದೆ ದುಡಿಯುತ್ತಿದ್ದಾರೆ. ಕಾನೂನಿನ ಪ್ರಕಾರ ನಾಲ್ಕೇ ಮರಕ್ಕಿದ್ದ ಅನಿರ್ಬಂಧಿತ ಕಡಿಯುವ ಅವಕಾಶವನ್ನು ನೂರೆಂಟು ಮರಕ್ಕೆ ವಿಸ್ತರಿಸುವ ಮಹಾಮಸಲತ್ತು ನಡೆದಿರುವುದನ್ನು ಬೆಂಗಳೂರ ಗೆಳೆಯ ಪ್ರವೀಣ್ ಭಾರ್ಗವ್ ಕಂಡಿದ್ದಾರೆ. ವನ್ಯ ಸಂರಕ್ಷಣೆಯ ಕೆಲಸಗಳಲ್ಲಿ ಇವರ ಪ್ರಾವೀಣ್ಯ ಪುರಾಣ ಪ್ರಸಿದ್ಧ ಭಾರ್ಗವನ ಕ್ಷಾತ್ರಕ್ಕೆ ಏನೂ ಕಡಿಮೆಯದ್ದಲ್ಲ ಎನ್ನುವುದೊಂದೇ ನಮಗಿರುವ ಧೈರ್ಯ.

ಜೋಡುಮಾರ್ಗದ ಗೆಳೆಯ ಸುಂದರರಾವ್ ನೈಜ-ಜಲ ಸುಸ್ಥಿಗಾಗಿ ಭಗೀರಥನೇ ಆಗಿದ್ದಾರೆ. ಇಂದು ನಿಸ್ಸಂದೇಹವಾಗಿ ವಿಜ್ಞಾನ, ತಂತ್ರಜ್ಞಾನ ಮುಂದುವರಿದಿದೆ. ಆದರೇನು, ಆರೆಂಟು ದಶಕಗಳ ನಿರಂತರ ಖರ್ಚು, ಪ್ರಯೋಗಗಳ (ಮತ್ತು ನೋವು) ಮೇಲೂ ಶಿರಾಡಿಯಂತಹ ಒಂದು ಹೆದ್ದಾರಿಯನ್ನು ವರ್ಷದ ಹನ್ನೆರಡು ತಿಂಗಳು ಸುಸ್ಥಿಯಲ್ಲಿ ಉಳಿಸಿಕೊಳ್ಳಲಾಗದ ಪ್ರಯೋಗಪರಿಣತಮತಿಗಳು ನಾವು. ಅದನ್ನು ಆಡಳಿತಾತ್ಮಕ ವಿಭಾಗೀಕರಣದ ಮುಸುಕಿನಲ್ಲಿ ಮರೆತಂತೆ ಮಾಡಿ ಒಟ್ಟು ಪಶ್ಚಿಮಘಟ್ಟವನ್ನೇ ಅದೂ ಬಿರು-ಮಳೆಗಾಲದಲ್ಲಿ ಪಳಗಿಸಿ, ನೇತ್ರಾವತಿಯನ್ನೇ ತಿರುಗಿಸುವ ಹುಸಿನುಡಿಯಾಡುವವರಿಗೆ ಇಂದು ಮನ್ನಣೆ ಜಾಸ್ತಿ! ವೃತ್ತಿಜೀವನದ ಆಕಸ್ಮಿಕದಲ್ಲಿ, ಪ್ರಾಯದ ಹಿರಿತನದಲ್ಲಿ, ನೆಲೆ ತಪ್ಪಿದ ಮಾನವೀಯ ಮೌಲ್ಯದ ಹೆಸರಿನಲ್ಲಿ, ಅವಿಚಾರಕ್ಕೆ ಕೋಟ್ಯಂತರ ಸುವರ್ಣವಾಹಿನಿ ಹರಿಯುತ್ತಲೇ ಇದೆ; ಬರಬಿದ್ದ ಕಳ್ಳಬ್ಯಾಂಕ್ ಖಾತೆಗಳು ಹಸನಾಗುತ್ತಲೇ ಇವೆ. ಈ ನೇತ್ರಾವತಿ ನದಿ ತಿರುಗಿಸುವ ಯೋಜನೆಯ ರೂವಾರಿ – ಸರಕಾರೀ ನಿವೃತ್ತ ಇಂಜಿನಿಯರ್, ಪರಮಶಿವಮೂರ್ತಿಯವರನ್ನು ಮಂಗಳೂರಿನ ಚರ್ಚಾವೇದಿಕೆಗೆ ಕರೆಸುವುದರಲ್ಲಿ ಮತ್ತು ಯೋಜನೆಯ ಪೊಳ್ಳನ್ನು ಸಾರ್ವಜನಿಕ ವೇದಿಕೆಯಲ್ಲೇ ನಿರ್ವಿವಾದವಾಗಿ ಸಾಬೀತುಪಡಿಸುವಲ್ಲಿ ಮುಂದೆ ನಿಂತವರು ಈ ಸುಂದರರಾವ್.

ಜಲ ಎಚ್ಚರಕ್ಕೆ ಪರ್ಯಾಯನಾಮ ಶ್ರೀಪಡ್ರೆ. ಇವರು ಜಾಗೃತ ಕೃಷಿಕ ಮತ್ತು ಅನುಭವೀ (ಲೋಕರೂಢಿಯಲ್ಲಿ ಹವ್ಯಾಸೀ ಎಂಬ ವಿಶೇಷಣೆ ಇವರಿಗೆ ಅನ್ವಯವಾದರೂ ಬಳಸುವುದು ತಪ್ಪು; ಹಿರಿಯ-) ಪತ್ರಕರ್ತ. ಅವರು ನೈಜ ಜಲ ಸಂವರ್ಧನೆ ಮತ್ತು ಬಳಕೆಯ ಮಿತವ್ಯಯಕ್ಕೆ ಲೋಕದ ಎಲ್ಲಾ ಮೂಲೆಗಳ ಅನುಭವವನ್ನು ಕ್ರೋಢೀಕರಿಸುತ್ತಾರೆ ಮತ್ತು ಜನರಿಗೆ ಮುಟ್ಟಿಸುವ ಅದ್ವಿತೀಯ ಕೆಲಸ ನಡೆಸಿದ್ದಾರೆ. ಸುಂದರರಾಯರು ರವೀಂದ್ರನಾಥ ಶ್ಯಾನುಭಾಗರ ಕಟ್ಟಾ ಆದರ್ಶದೊಡನೆ ಬಳಕೆದಾರ ವೇದಿಕೆಯ ಚಟುವಟಿಕೆ ಮತ್ತು ಅದರ ಮುಖವಾಣಿಯಾದ ಪತ್ರಿಕೆಯನ್ನೂ ನಡೆಸಿದ ಅನುಭವ ಮೇಳೈಸಿದವರು. ಸಹಜವಾಗಿ ಜಲ ಮತ್ತು ಜಲಾನಯನ ಪ್ರದೇಶದ ಸಂರಕ್ಷಣೆಯ ವ್ರತವನ್ನು ಗಂಭೀರವಾಗಿ ನಡೆಸಿದ್ದಾರೆ. ಸಭೆ, ಬೊಬ್ಬೆ ಮತ್ತು ಮಾಧ್ಯಮಗಳ ಮಿಂಚಿನಿಂದ ಬಹಳ ದೂರ ಈ ರಾಯರು. ಈಚೆಗೆ ಸ್ವಂತದ ಮುದ್ರಕ-ವೃತ್ತಿ ಜೀವನದಿಂದ ಕಳಚಿಕೊಂಡು, ಪೂರ್ಣಾವಧಿ ನೈಜ ಜಲಸಂರಕ್ಷಣೆಗೆ ಪತ್ರ ಸಮರಕ್ಕಿಳಿದಿದ್ದಾರೆ. ಸುಬ್ರಹ್ಮಣ್ಯದಲ್ಲಿ ಜ್ಯೋತಿಷ್ಯ ಸಮ್ಮೇಳನದ ಹೆಸರಿನಲ್ಲಿ ಆರು ಎಕ್ರೆ ಕಾಡು ಬೋಳಿಸಿ, ಗುಡ್ಡ ಮಟ್ಟ ಮಾಡಿದವರ ಬೆನ್ನು ಹಿಡಿದರು. ಕೊಡಲಿ, ಗರಗಸ ಹಿಡಿಯದೆ ‘ಮರನೂಕುವವರ’ ವಿರುದ್ಧ ಕಡತಗಳನ್ನು ನೂಕಿದರು. ಫೊಟೋಗ್ರಾಫರ್ ವ್ಯವಸ್ಥೆ ಮಾಡಿ, ‘ಅಪ್ಪಿಕೋ’ ಮತ್ತೆ ‘ಪತ್ರಿಕಾ ಧೋರಣೆ’ ನೋಡಿ ಪ್ರಕಟಿಸಿಕೋ ರಾಯರ ಶೈಲಿಯಲ್ಲ. ಮನೆಯಲ್ಲೇ ಕುಳಿತು ತಣ್ಣಗೆ ಆದರೆ ಖಚಿತ ಬರವಣಿಗೆಯಲ್ಲಿ ಇವರು ವಿವಿಧ ಇಲಾಖೆಗಳನ್ನು ಸರಳ ಪ್ರಶ್ನೆಗಳಲ್ಲಿ ಕಟ್ಟಿಹಾಕುತ್ತಾರೆ.

ವಿಶೇಷ ಆರ್ಥಿಕ ವಲಯದ ಹೆಸರಿನಲ್ಲಿ ಅರ್ಥಪೂರ್ಣ ಕೃಷಿ ಮತ್ತು ಸಾಮಾಜಿಕ ಸ್ಥಿತಿಯನ್ನು ಹಾಳುಗೆಡವುವರ ವಿರುದ್ಧ ಇನ್ನೋರ್ವ ಗೆಳೆಯ ನಟೇಶ್ ಉಳ್ಳಾಲ್ (ಮತ್ತು ವಿದ್ಯಾ ದಿನಕರ್) ಹೋರಾಡುತ್ತಿದ್ದಾರೆ. ಅದನ್ನು ಅಲ್ಲಗಳೆಯದೆ, “ಆಯ್ತಪ್ಪಾ ಭಾರೀ ಉದ್ದಿಮೆಗಳೇ ಬಂತೆಂದಿಟ್ಟುಕೊಂಡರೂ ನೀರಿಗೇನು ಮಾಡುತ್ತೀರಿ” ಎಂದು ಬುಡಕ್ಕೆ ಕೈ ಇಟ್ಟಿದ್ದಾರೆ ಸುಂದರರಾಯರು. ‘ನನ್ನ ತಲೆ ಓಡುವುದಿಲ್ಲ’ ಎನ್ನುತ್ತಲೇ ಸಾಮಾಜಿಕ ಹಿತೈಕ ದೃಷ್ಟಿಯಿಂದ ಹತ್ತು ತಲೆ ಸೇರಿಸುವ ಸುಂದರರಾಯರ ಕೆಲಸಕ್ಕೆ ನೀವು ಇಷ್ಟಮಿತ್ರಬಂಧುಬಾಂಧವರಸಹಿತ ಹನ್ನೊಂದರಿಂದ ಮುಂದಿನ ತಲೆಗಳಾಗಲು ಕೂಡಲೇ ಇಲ್ಲಿ ಚಿಟಿಕೆ ಹೊಡೆಯಿರಿ.

ಅನಿಷ್ಠಗಳ ಎದುರೀಜಿನೊಡನೆ ನಮ್ಮ ಮಾನಸಿಕ ಸ್ಥಿಮಿತ ಉಳಿಸಿಕೊಳ್ಳಲು ಪ್ರಕೃತಿ ಅನುಸಂಧಾನಕ್ಕಿಂತ ದೊಡ್ಡ ಮದ್ದು ಇನ್ನೊಂದಿಲ್ಲ ಎಂದು ನಂಬಿದವನು ನಾನು. ಹಾಗಾಗಿ ೧೯೯೮ರಲ್ಲಿನ ಸಾಹಸಯಾತ್ರೆ ಒಂದನ್ನು ಹೆಚ್ಚುಕಡಿಮೆ ೧೯೯೯ರಲ್ಲಿ ಉದಯವಾಣಿ ಪತ್ರಿಕೆಯಲ್ಲಿ ನಾನೇ ಬರೆದ ಸಾಪ್ತಾಹಿಕ ಧಾರಾವಾಹಿಯನ್ನೇ ಕೂಡಲೇ ಕಂತುಗಳಲ್ಲಿ ನಿಮಗೆ ಒಪ್ಪಿಸುತ್ತೇನೆ.

ರಂಗನಾಥಸ್ತಂಭ ವಿಜಯ
ತೆರೆಮರೆಯ ಕುಣಿತ

ರಂಗನಾಥಸ್ತಂಭ ಏನು? ಎಲ್ಲಿ? ಕಾತರದ ಕಣ್ಣುಗಳಿಗೆ ಕಣಿವೆ ತುಂಬ ಮುಸುಕಿ ಕುಳಿತ ಮಂಜಿನಲ್ಲಿ ಉತ್ತರವಿಲ್ಲ. ನಾವು ಮಂಗಳೂರಿನಿಂದ ಬೈಕೋಡಿಸಿ ಎರಡು ದಿನದ ದಾರಿ ಸವೆಸಿದ್ದೆವು. ಚಾರಣದಲ್ಲಿ ಮತ್ತೆ ಐದು ಕಿಮೀ ಬೆವರು ಹರಿಸಿದ್ದೆವು. ಆದರೇನು ಕರುಣಿ ಮೈದಳೆಯಲಿಲ್ಲ, ಸುತ್ತುವರಿದ ಶೃಂಗ ಶ್ರೇಣಿಗಳೂ ಬಗೆಹರಿದು ತೋರಿಸಲಿಲ್ಲ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆ ರಂಗನಾಥಸ್ತಂಭವನ್ನು ಶೋಧಿಸಿ, ಜಯಿಸಿದ ಕಥೆ ನನ್ನಲ್ಲಿತ್ತು. ಸುಮಾರು ಹದಿನೈದು ವರ್ಷಗಳ ಹಿಂದೆ ನನ್ನದೇ ಪುಟ್ಟ ತಂಡ ತಂದಾಗ, ಗೆಳೆಯರಿಬ್ಬರು ಮಾತ್ರ ಹತ್ತಿ, ನಾನು ಕೆಳಗುಳಿದ ಕೊರಗೇ ನನ್ನನ್ನಿಲ್ಲಿಗೆ ಎಳೆದು ತಂದಿತ್ತು. ಪ್ರಸ್ತುತ ತಂಡದ ತಯಾರಿಯಾದರೋ ಉದಕಮಂಡಲದೊಡನೆ ಸ್ತಂಭದ ದರ್ಶನ ಭಾಗ್ಯ ಪಡೆಯುವಷ್ಟಕ್ಕೇ ಸೀಮಿತವಾದದ್ದು. ಆದರೆ ಪರಿಸ್ಥಿತಿ ನಮಗೆ ಅದಕ್ಕೂ ಸಂಚಕಾರ ತರುತ್ತದೆಯೇ ಎಂಬ ಆತಂಕ ನಮ್ಮದು.

ಏನೋ ಅಗಾಧವಂತೆ. ಕೋತಗೇರಿಯಾಚಿನ ಕಣಿವೆಯ ಅಂಚಿನಿಂದ ತುಸು ದೂರ ಸೆಟೆದು ನಿಂತ ಕೋಡುಗಲ್ಲಂತೆ. ಸಾವಿರಾರು ಅಡಿಗಳಿಗೂ ಮಿಕ್ಕು ಎತ್ತರದ ಏಕಶಿಲಾ ಸವಾಲಂತೆ. ಅದೇನು ನಾವು ನಿಂತ ಬೆಟ್ಟದ ಬಗಲ ಮುಳ್ಳೇ ಕಣಿವೆಗೆ ಗಿಡಿದ ಗೂಟವೇ ಆಕಾಶಹೊತ್ತ ಬೋದಿಗೆಯೇ ಎಂದು ಉಳಿದವರಂತೂ ಕತ್ತು ಉದ್ದ ಮಾಡಿದ್ದೇ ಬಂತು. ನಾನು ಮತ್ತು ದೇವಕಿ ಅದನ್ನು ಒಮ್ಮೆ ನೋಡಿದ್ದೆವಾದರೂ ಅಂದು ಹಳ್ಳಿಮೂಲೆ ಸೇರುತ್ತಿದ್ದಂತೆ ನೆನಪಿನ ಜಾಡಿನ ಮೇಲೆ ಮರವೆ ಮುಸುಕಿತ್ತು. ವಿಚಾರಿಸಿದಲ್ಲೆಲ್ಲ ಒಳ್ಳೇತನದಿಂದಲೇ ದಾರಿತಪ್ಪಿಸುವ ಹತ್ತೆಂಟು ಸೂಚನೆ! ರಂಗನಾಥ ಮಲೈ ಅಥವಾ ಶೋಲೂರು ಮಠ ಎಂಬ ಹೆಚ್ಚು ಪ್ರಸಿದ್ಧ ತೀರ್ಥಕ್ಷೇತ್ರದತ್ತ ವ್ಯರ್ಥ ಆರು ಕಿಮೀ ಬೈಕ್ ಓಡಿಸಿ, ಮರಳುವಂತಾಗಿತ್ತು. ಮತ್ತೆ ಚಾರಣದಲ್ಲಿ ದಾರಿ ತಪ್ಪಿ ಕಾಡಿನಲ್ಲಿ ಅಲೆದಾಡದಂತೆ ಕಾಡು, ಸ್ತಂಭದ ಸರಿಪರಿಚಯವಿರುವವನನ್ನು ಮಾರ್ಗದರ್ಶಿಯಾಗಿ ಹಿಡಿದೇ ಬಂದಿದ್ದರೂ ಮತ್ತೆ ಸಂಶಯಿಸುವ ಸ್ಥಿತಿ. “ರಂಗನಾಥ ಪಿಲ್ಲರ್ ತಾ ವೇಣು” ಎಂದು ಬಗೆ ತರದಲ್ಲಿ ಬಿಂಬಿಸಿದರೂ ಪಾಪಾತ್ಮ ಸ್ಥಳವಲ್ಲದ ಸ್ಥಳಕ್ಕೆ ತಂದಿರಬಹುದೇ?

ನಿಸ್ಸಂಶಯವಾಗಿ ನಾವೊಂದು ಆಲವಾದ ಕಣಿವೆಯ ಕಡಿದಾದ ಅಂಚಿನಲ್ಲಿ ನಿಂತಿದ್ದೆವು. ನಮ್ಮಿಬ್ಬರ ನೆನಪಿನಕೋಶದ ಭಾಗವಾದ ಸ್ತಂಭ ಉಳಿದವರಿಗೆ ಕೇವಲ ರಂಜಿತ ವಿವರಣೆಗಳ ಕಾಲ್ಪನಿಕ ರೂಪ. ಎರಡು ಸಾವಿರ ಅಡಿಗಳ ಆ ಚಿತ್ರ ನಮ್ಮಿಂದ ಮೇಲೆ ಮಲೆತೀತೇ? ಕೆಳಗೆ ಮೆರೆದೀತೇ? ಎಡದ ಏರುಮೈಯ ಕೊಳ್ಳದ ಮೂಲೆಯಲ್ಲೇ ಬಲಕ್ಕೆ ವಿಸ್ತರಿಸುವ ಬಯಲಿನ ದ್ವಾರದಲ್ಲೇ? ತೆರೆ ನಸುವೇ ಎತ್ತಿ ಶ್ರೀಪಾದದ ದರ್ಶನ ಮೊದಲೋ ಮುಸುಕು ಜಗ್ಗಿ ಸಿರಿಮೊಗದ ದರ್ಶನ ಮೊದಲೋ? ಒಮ್ಮೆಗೆ ಎಲ್ಲ ಕಳಚಿ ಗತ್ತುಗಾರಿಕೆಯ ನಡೆ ತೋರಿಸುತ್ತಾ ದಿಗ್ಭಿತ್ತಿ ಬಿರಿಯುವ ಅರಬ್ಬಾಯಿ ತೆಗೆಯುತ್ತಾ ಬರುವ ಬಣ್ಣದ ವೇಷದ ರಂಗಪ್ರವೇಶ ಕಾಯುವ ಬಾಲರಂತಾಗಿದ್ದೆವು ನಾವು.

ಒಡ್ಡೋಲಗ

ಶನಿವಾರ ರಾತ್ರಿ ಬಸ್ಸೇರಿ ಮೈಸೂರು. ಅಲ್ಲಿಂದ ಬೆಳಿಗ್ಗೆ ಟಾಟಾ ಸುಮೋ ಹಿಡಿದು ಊಟಿ. ಮುಂದುವರಿದು ಮಧ್ಯಾಹ್ನದ ಊಟಕ್ಕೆ ಕೋತಗೇರಿ. ಮತ್ತರ್ಧ ಗಂಟೆಯಲ್ಲಿ ಹಳ್ಳಿಮೂಲೆಯ ಕೀಳ್-ಕೋತಗೇರಿ. ಅಲ್ಲಿಂದ ನಡಿಗೆ ಸುರು. ಮೊದಲು ಸಿಕ್ಕಿದ ಚಾ ತೋಟದ ಕೂಲಿ, ಪರಸುರಾಮನ್ ನಮ್ಮ ಮಾರ್ಗದರ್ಶಿ. ಅಯಾಚಿತವಾಗಿ ಅರಣ್ಯ ರಕ್ಷಕ ಗೋವಿಂದನ್ ಮತ್ತು ಕನಕಸಭೈ ಜೊತೆಗೂಡಿದರು. ದೇನಾಡಿನ ಚಾ ಗುಡ್ಡೆ ಕಳೆದದ್ದೇ ಕಾಡು. ಅದು ಶಿಖರವಲಯದ ಭೂಮಿಯಾದ್ದರಿಂದ (ಬಾಣೆ, ಪದವು) ಹೆಚ್ಚು ಏರಿಳಿತಗಳಿರದ, ಸೌದೆ ತರುವ ಹಳ್ಳಿಗರ ಸ್ಪಷ್ಟ ಜಾಡನ್ನು ಅನುಸರಿಸುತ್ತಿದ್ದೆವು. ಮೊದಲು ಪಾಶ್ಚಾತ್ಯರತ್ತ ಸರಿಯುತ್ತಿದ್ದ ಸೂರ್ಯ ಕೊನೆಕೊನೆಗೆ ನಮ್ಮ ಬೆಂಬಲಕ್ಕೇ ನಿಂತ. ಅಲ್ಲಲ್ಲ, ನಾವು ಮೊದಲು ಉತ್ತರಮುಖಿಗಳಾಗಿ ನಡಿಗೆಗಿಳಿದರೂ ಕೊನೆಯಲ್ಲಿ ಪೂರ್ವಕ್ಕೆ ತಿರುಗಿಕೊಂಡೆವು. ಗುಡ್ಡದ ಓರೆಯಲ್ಲಿ ಹುಲ್ಲು, ಕಣಿವೆಯಲ್ಲಿ ಪೊದರುಮರಗಳ ಬೀಡು – ಇದು ಶೋಲಾ ಕಾಡು; ಪಶ್ಚಿಮ ಘಟ್ಟದ್ದೇ ವೈಶಿಷ್ಟ್ಯ. ದೇನಾಡಿನ ಬೋಗುಣಿಯಂಚು ಕಳೆದ ಮೇಲೆ ಉದ್ದಕ್ಕೂ ಹಗುರಾಗಿ ಇಳಿಯುತ್ತಲೇ ಸಾಗಿತ್ತು ಜಾಡು.

ನಮ್ಮದರ ಬಗ್ಗೆ ಅವಜ್ಞೆ, ಹಣಕ್ಕಾಗಿ ಅದರಲ್ಲೂ ಅಪಾರವಾಗಿ ಹರಿಯುವ ವಿದೇಶೀ ನಿಧಿಗಾಗಿ ಏನೂ ಹೊಸೆಯುವ ನಮ್ಮ ‘ಬುದ್ಧಿವಂತಿಕೆಗೆ’ ಇಲ್ಲೊಂದು ಕುರುಹು ಕಾಣಿಸಿತು. ಚಾತೋಟದಿಂದ ಹೊರಗಿನ ಈ ಸರಕಾರೀ ಕಾಡುಗಳಲ್ಲಿ ಮನುಷ್ಯ ಹಸ್ತಕ್ಷೇಪದಿಂದಾದ ಪರಿಸರ ಸಮಸ್ಯೆಗಳೇನೂ ಇದ್ದಂತಿರಲಿಲ್ಲ. ಆದರೂ ಪ್ರಾಕೃತಿಕ ಸಮತೋಲನವನ್ನು ತಪ್ಪಿಸಿ, ಪುಟ್ಟಪುಟ್ಟ ಕಣಿವೆಗಳಲ್ಲಿ ಕಾಡುಕಲ್ಲುಗಳನ್ನು ಗೆಬರಾಡಿ ‘ನೀರಿಂಗಿಸುವ ಮತ್ತು ಸವಕಳಿ ತಡೆಯುವ’ ಕಾಮಗಾರಿ ಅನುಷ್ಠಾನಿಸಿದ್ದು ಕಂಡೆವು. ಹೊರಬಂದರೆ ‘ವ್ಯರ್ಥ’ ಹುಲ್ಲುಗಾವಲನ್ನು ‘ಕಾಡು’ ಮಾಡುವ ಉತ್ಸಾಹದಲ್ಲಿ ಕಣ್ಣೆಟಕುವಷ್ಟೂ ದೂರಕ್ಕೆ ನಿಯತಾಂತರದಲ್ಲಿ ಚಂದ್ರಗುಂಡಿ ಮಾಡಿದ್ದರು. ಮುಂದುವರಿದು ವಿವಿಧ ಸಸಿಗಳನ್ನು ನೆಟ್ಟದ್ದಲ್ಲದೆ ಗುರುತಕ್ಕೆ ನಿಶಾನಿಯನ್ನೂ ಹಾರಿಸಿದ್ದರು! ಯಾಕಾಗಿ ನಿಶಾನಿ? ಎಂಥದ್ದರ ನಿಶಾನಿ?! ನಾಟಿ ಸಸಿಗಳು ಬಂದ ಪ್ಲ್ಯಾಸ್ಟಿಕ್ ತೊಟ್ಟೆಯನ್ನೇ ಅಗಲಕ್ಕೆ ಹರಿದು, ಸಮೀಪದ ಕರಡ ಹುಲ್ಲಿನ ನಾಲ್ನಾಲ್ಕು ತುದಿ ಸೇರಿಸಿ ಕಟ್ಟಿಬಿಟ್ಟಿದ್ದರು. ವಿಮಾನದಲ್ಲೋ ರಸ್ತೆ ಸಂಪರ್ಕವಿರುವ ಬೆಟ್ಟದ ನೆತ್ತಿಗೆ ಮೋಟಾರಿನಲ್ಲಿ ಹೋಗಿಯೋ (ಕುಡಿದ ನೀರು ಕುಲುಕದಂತೆ) ತನಿಖಾ ಸಮೀಕ್ಷೆ ಮಾಡುವ ಮೇಲಧಿಕಾರಿಗಳಿಗೆ (ಸಸಿಗಳು ಬದುಕಿದರೆಷ್ಟು, ಸತ್ತರೆಷ್ಟು) ಈ ನಿಶಾನಿಗಳು ತುಂಬಾ ಮುಖ್ಯ. ಅವರ ಅಂಕಿಸಂಕಿಗಳ ಬಲದಲ್ಲಿ ಅಧಿಕಾರಸ್ಥ ಪುಡಾರಿಗಳ ಪರಿಸರ ಹುಚ್ಚು ಹೆಚ್ಚಾಗುವುದೂ ನಿಶ್ಚಯ! ಸಸಿಯ ಅದೃಷ್ಟ ಗಟ್ಟಿಯಿದ್ದು ವಿಕಸಿಸಿತು ಎಂದರೂ ಅಷ್ಟು ಪ್ಲ್ಯಾಸ್ಟಿಕ್ ಕಸದ ಹೇರಿಕೆ ಸರಿಯೇ?

ಒಂದೆರಡು ಕಾಡುಹೊಕ್ಕು, ಬಯಲು ಹಾಯ್ದು ಸುಮಾರು ಐದು ಕಿಮೀ, ಅಂದರೆ ಸುಮಾರು ಒಂದೂವರೆ ಗಂಟೆ ನಡಿಗೆಯ ಕೊನೆಯಲ್ಲಿ ಸಿಕ್ಕಿತು ರಂಗನಾಥ ಸ್ತಂಭ ದರ್ಶನ. ಇದು ನಮ್ಮಲ್ಲಿ ಹೆಚ್ಚಿನವರಿಗೆ ಒದಗಿದ ಪ್ರದರ್ಶನದ ಎರಡನೇ ಅಂಕ; ಒಡ್ಡೋಲಗ. ಸುತ್ತುವರಿದ ಬೆಟ್ಟಗಳೇ ರಂಗಮಂಚದ ಅಚ್ಚುಕಟ್ಟು. ಹಸಿರುಗಿಡಿದ ಕಣಿವೆ ಹಿನ್ನೆಲೆಗೆ, ಸಾಕ್ಷಾತ್ ಸೂರ್ಯನೇ ದೀವಟಿಗೆ. ಕೆಲಬಲಗಳಲ್ಲಿನ ಕಿರುಕಲ್ಲ ಮೊಳಕೆಗಳು ಪಟುಭಟರೇ ಸರಿ. ನಮ್ಮಂಚಿನ ಬೆಟ್ಟಕ್ಕೆಲ್ಲ ಹೊಂಬಣ್ಣದ (ಹುಲ್ಲಿನ) ರೋಮಾಂಚನ. ನಮ್ಮವರಿಗೂ ಅಷ್ಟೇ. ಹೊತ್ತ ಹೊರೆ ಇಳಿಸುವುದೂ ಮರೆತು, ಕಣಿವೆಯ ಅಂಚಿಗೆ ಧಾವಿಸಿ ಮರವಟ್ಟು ನಿಂತರು. ಮಳೆ ನೀರು ಇಳಿದು ಮೂಡಿದ ಕಪ್ಪು ಬಿಳಿಯ ಧಾರೆಗಳು ಮುಖವರ್ಣಿಕೆ. ಅಲ್ಲಲ್ಲಿ ಕಲ್ಲ ಪದರು ಕಿತ್ತು ಎದ್ದು ತೋರುತ್ತಿದ್ದ ಕಂದು, ಹಳದಿ, ಗುಲಾಬಿ ವರ್ಣವೈಭವಗಳೇ ದಿರುಸು. ಕೆಳಗಿನಿಂದ ಸುತ್ತಿ, ಎಡ ಹೆಗಲನೇರಿದ ಉತ್ತರೀಯದಂತೆ ಒಂದು ಕೊರಕಲು. ಅದಕ್ಕೆ ಕಲಾಪತ್ತಿನ ಮೆರುಗು ಕೊಟ್ಟಂತೆ ಹಬ್ಬಿತ್ತು ಹಸಿರು. ಮುಂಚಾಚಿದ ಬಂಡೆ ಮುಂದೊತ್ತಿದ ಗದ್ದ. ಮೇಲಿತ್ತು ದೊಡ್ಡ ಗೊಂಡೆ ಮೂಗು, ಬಿಗಿದ ತೋರ ಹುಬ್ಬು. ಶಿರೋಭೂಷಣ ಒಂದಿಲ್ಲ. ಬಕ್ಕ ತಲೆ, ಅಂಚುಗಟ್ಟಿದ ನರೆಗೂದಲ ಎಡೆಯಲ್ಲಿ ಇಣುಕುವ ಎರಡೇ ಎರಡು ಹಸಿರು – ಕಿವಿಗಿಟ್ಟ ತುಳಸಿ. ಕಣಿವೆಯಾಳದ ಅಗೋಚರೆ – ಭವಾನಿಯ (ನದಿ) ಏಕನಾದಕ್ಕೆ ಸುಯ್ಯಲು ಗಾಳಿಯದೇ ಪಲುಕು. ಎದೆಯುಬ್ಬಿಸಿ, ಪೂರ್ವ ದಿಗಂತ ದಿಟ್ಟಿಸಿ “ಶಂಭೋಓಓಓಓಓ” ಎಂದಂತಿತ್ತು ದೈತ್ಯರಾಯ. ಆ ಮಹಾಸ್ತಂಭದ ಅಲಂಕಾರಿಕ ವಿವರಗಳನ್ನು ಉಪೇಕ್ಷಿಸಿಯೂ ಕನಿಷ್ಠ ಎಂಟನೂರು ಅಡಿ ಹತ್ತಲೇಬೇಕಾದ ಸವಾಲು ಅನ್ನಿಸಿತು. ಈ ಬಾರಿ ಏರುವ ಉದ್ದೇಶದಿಂದಲೇ ಬಂದವರು ನಾವು ಎಂಬ ಪ್ರಜ್ಞೆಯೇ ಅಳಿಸಿ ಎಲ್ಲರಿಗೂ ಮೂಡಿದ ಪ್ರಥಮ ಭಾವ ಅಬ್ಬಾಆಆಆಆಆ!

(ಮುಂದುವರಿಯಲಿದೆ)