ನಿತ್ಯದಂತೆ ರಾತ್ರಿಯ ಟೀವೀ ವಾರ್ತೆ ಕೇಳಿ-ನೋಡುತ್ತಿದ್ದೆ. ಕೆಳ ಅಂಚಿನ ಸುದ್ದಿ ಸುರುಳಿ ಒಮ್ಮೆಗೇ ಸುದ್ಧಿ ಸ್ಫೋಟ ಹರಿಸತೊಡಗಿತು. `ಬೆಂಗಳೂರಿನಲ್ಲಿ ಹದಿನೈದು ಮಹಡಿಗಳ ಕಟ್ಟಡ ಕುಸಿತ…’ ಅಕ್ರಮ ರಚನೆ, ಅಪಘಾತ, ಕೊಲೆ ನಿತ್ಯ ಸಂಗತಿಗಳೇ ಆದ್ದರಿಂದ ನಿರ್ಲಿಪ್ತನಾಗಿಯೇ ಓದುತ್ತಿದ್ದೆ. `…ನಾಲ್ವರು ಗಾಯಾಳುಗಳು. ವೈದೇಹಿ ಆಸ್ಪತ್ರೆಗೆ…’ ಮನದ ಮೂಲೆಯಲ್ಲೆಲ್ಲೋ ಆತ್ಮೀಯ ಎಳೆಗೊಂದು ತೀವ್ರ ತುಯ್ತ. ಜಗ್ಗನೆದ್ದು ಒಳಗೆಲಸದಲ್ಲಿದ್ದ ಹೆಂಡತಿಗೆ “ಛೆ. ವೈದೇಹಿ accicidentನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರಂತೆ” ಆತಂಕ ದಾಟಿಸಿದೆ. ಅವಳಿಗೂ shock. ನಮ್ಮ ಪಕ್ಕದ ಮನೆಯ ಮಾವ ವೈದೇಹಿಗೆ ಆತ್ಮೀಯ ಕಾನೂನು ಸಲಹೆಗಾರ. ಅವರಿಗೆ ಹೋದ ಮರುಪ್ರಸಾರದಲ್ಲಿ “ಛೆ, ಕಟ್ಟಡ ಬಿತ್ತಂತೆ. ವೈದೇಹಿ ಬೆಂಗಳೂರಿಗೆ ಯಾವುದೋ ಸಭೆಗೆ ಹೋಗಿದ್ದಿರಬೇಕು, ಅಲ್ಲಿ ಸಿಕ್ಕಿಕೊಂಡಿದ್ದಾರೆ. ಈಗ ಆಸ್ಪತ್ರೆಗೆ ಹಾಕಿದ್ದಾರಂತೆ.” ಮಾವನಿಗೂ ಅವರ ಕ್ಷೇಮ ವಾರ್ತೆಯ ಕಾತರ. ಕಡತ ಕೆದರಿ ಮಣಿಪಾಲದ ಇರವಂತಿಗೆಗೆ (ವೈದೇಹಿಯವರ ಮನೆ) ಕೂಡಲೇ ದೂರವಾಣಿಸಿದರು. ಭಯದ ಬುಗ್ಗೆ ಫುಸ್ ಎನ್ನುವಂತೆ ವೈದೇಹಿಯೇ ಉತ್ತರಿಸಿದರು! ಸುದ್ಧಿ ಸುರುಳಿ ಮತೆ ಮತ್ತೆ ಹರಿಯುತ್ತಲೇ ಇತ್ತು `…ನಾಲ್ವರು ಗಾಯಾಳುಗಳು ವೈದೇಹಿ (ಎಂಬ) ಆಸ್ಪತ್ರೆಗೆ ದಾಖಲು..’ ಹಿಂದೆಯೂ ಒಮ್ಮೆ ಹೀಗೇ ಆಗಿತ್ತು..

ವಾರಾಂತ್ಯದಲ್ಲಿ ಅದೇನೋ ಅಂಗಡಿಗೆ ಎರಡು ದಿನ ರಜೆ ಸಿಕ್ಕಿತ್ತು. ನಾನು ಸಪತ್ನೀಕನಾಗಿ `ಅಭಯಾರಣ್ಯ’ಕ್ಕೆ (ಇಲ್ಲೇ ನಗರದ ಹೊರ ವಲಯದಲ್ಲಿರುವ ನಮ್ಮದೇ ವನ್ಯ ಪುನರುತ್ಥಾನದ ಪ್ರಯೋಗಭೂಮಿ) ಹೋಗಿದ್ದೆ. ಪುತ್ತೂರಿನ ಹಳ್ಳಿ ಮೂಲೆಯಲ್ಲಿದ್ದ ನನ್ನೊಬ್ಬ ಸೋದರಮಾವ ರೇಡಿಯೋ ವಾರ್ತೆಯಲ್ಲಿ ಕೇಳಿದರು “ಮಲೆನಾಡಿನ ಮೂಲೆಯ ಕಾಡುಹೊಳೆಯಲ್ಲಿ ಅತ್ರಿಯವರು ಸಪತ್ನೀಕರಾಗಿ ಮುಳುಗಿ ಸತ್ತರು”. ನನ್ನ ಅಂಗಡಿಯ ಪರಿಚಯಸ್ತರಿಗೆಲ್ಲ ನಾನು ಅತ್ರಿಯವನೇ. ಮತ್ತೆ ನನ್ನ ಹವ್ಯಾಸ ಪರಿಚಯವಿರುವವರಿಗೆಲ್ಲಾ ನಾನು ಮಲೆನಾಡಿನ ಕಾಡಮೂಲೆಯಲ್ಲಿದ್ದಿರಬಹುದಾದ್ದು ತೀರಾ ಸಂಭಾವ್ಯ! ನನ್ನ ನೆರೆಮನೆಯ ಮಾವನ ಮನೆಗೆ ಫೋನಿನ ಮೇಲೆ ಫೋನು. ಅವರಿಗೆ ಸ್ಪಷ್ಟವಿತ್ತು, ಆದರೆ ಸಂಶಯದ ಹುಳುವಿನ ಕಡಿತ ನಂಜಾದರೆ? `ಅಭಯಾರಣ್ಯ’ದಲ್ಲಿ ಫೋನಿಲ್ಲ. ನಾನು ಜಂಗಮವಾಣಿಯನ್ನು ಬಹಿಷ್ಕರಿಸಿದವ. ಅಭಯಾರಣ್ಯದ ಒತ್ತಿನ ಭೂಮಿಯ ನನ್ನ ಚಿಕ್ಕಮ್ಮನ ಮನೆಗೆ ಭಯದ ವರ್ಗಾವಣೆಯಾಯ್ತು. ತಮ್ಮ ಇದ್ದ ಕೆಲಸ ಬಿಟ್ಟು ನಾವಿದ್ದಲ್ಲಿಗೆ ಧಾವಿಸಿ, ನಮ್ಮನ್ನು ನೋಡಿ ನಿಟ್ಟುಸಿರು ಬಿಟ್ಟ. ನಮ್ಮ ಕ್ಷೇಮಸಮಾಚಾರದ ಹಿಂಪ್ರಸಾರ ಎಲ್ಲ ಕುತೂಹಲಿಗಳಿಗೆ ಮುಟ್ಟುವ ವೇಳೆಯಲ್ಲಿ ನಿಜದ ದುರಂತ ಸ್ಪಷ್ಟವಾಗಿತ್ತು – ಖ್ಯಾತ ಸಂಗೀತ ನಿರ್ದೇಶಕ ಜಿ.ವಿ ಅತ್ರಿ ಶಿವಮೊಗ್ಗದ ಸಮೀಪದ ತಮ್ಮ ಮಾವನ ಮನೆಯ ಬಳಿ ವಿಹಾರಕ್ಕೆ ಹೋದವರು ಸಪತ್ನೀಕರಾಗಿ ಹೊಳೆಪಾಲಾಗಿದ್ದರು.