ಇಂಗ್ಲಿಷ್ ಮಾಧ್ಯಮ ಶಾಲೆಯೊಂದರ ಇಬ್ಬರು ಟೀಚರಮ್ಮಂದಿರು ಆರಿಸಿಟ್ಟ ಪುಸ್ತಕಗಳನ್ನು ನಾನು ಬಿಲ್ಲು ಮಾಡುತ್ತಿದ್ದೆ. ಅವರು ನನ್ನ ಮೇಜಿನ ಅಂಚುಗಟ್ಟಿ ನಿಂತ ಹಾಗೇ ಮೇಜಿನ ಕನ್ನಡಿಯಡಿಯಲ್ಲಿ ನಾನಿಟ್ಟಿದ್ದ ಎರಡು ವ್ಯಂಗ್ಯ ಚಿತ್ರಗಳನ್ನು ಗಮನಿಸಿದರು. ಮೊದಲು ಟೈಮ್ಸ್ ಆಫ್ ಇಂಡಿಯಾದ್ದು, ಕಲಾವಿದ – ಪೊನ್ನಪ್ಪ. ಅರವಿಂದ ಅಡಿಗರ ಬೂಕರ್ ವಿಜೇತ ಕೃತಿ ವೈಟ್ ಟೈಗರ್ ಯಾವುದೋ ಪುಸ್ತಕದಂಗಡಿಯ ಪ್ರದರ್ಶನ ಕಪಾಟಿನಲ್ಲಿರುವುದನ್ನು ನೋಡಿ ದಾರಿಹೋಕರು ಆಡುವ ಮಾತು “ಅದು ಭಾರತದ ಕೊಳಕುತನ, ಅವ್ಯವಹಾರಗಳ ಬಗ್ಗೆ ಆಡಿಕೊಳ್ಳುತ್ತದಂತೆ. ಕಳ್ಳಮಾಲು ಬರಲಿ, ಕೊಳ್ಳಬೇಕು.” ಟೀಚರಮ್ಮರ ಮುಖದಲ್ಲಿ ಅರ್ಥ ಹೊಳೆದ ಮಿಂಚು ಬರಲಿಲ್ಲ.

ದೃಷ್ಟಿ ಇನ್ನೊಂದಕ್ಕೆ ಹೊರಳಿತು. ಅದು ಪ್ರಜಾವಾಣಿಯದ್ದು, ಕಲಾವಿದ – ಪಿ. ಮಹಮ್ಮದ್. ಪುಸ್ತಕ ಮಳಿಗೆಯ ಗಲ್ಲಾ ಹಿಂದಿರುವವನನ್ನು ಏಕಕಾಲಕ್ಕೆ ಒಬ್ಬ ತರುಣಿ ಮತ್ತೊಬ್ಬ ಮುದುಕ “ನನಗೊಂದು… ಅಡಿಗ ಕೊಡಿ” ಎಂದು ಕೇಳುತ್ತಿದ್ದಾರೆ. ಹುಡುಗಿಯ ಮಾತಿಗೆ “ಇಂಗ್ಲಿಷ್”, ಮುದುಕನ ಮಾತಿಗೆ “ಕನ್ನಡ” ಸೇರಿಕೊಂಡಿದ್ದದ್ದು ಟೀಚರಮ್ಮರಿಗೆ ಕುತೂಹಲ ಮೂಡಿಸಿತು. ಹಿರಿಯಾಕೆ, ಹೆಸರು ಅಲ್ಪಜ್ಞಾನಿ ಎಂದಿಟ್ಟುಕೊಳ್ಳಿ “Hey! this, canara school old student aravind adigaaaaaa…” ಕಿರಿಯಾಕೆ, ಹೆಸರು ನಹಿಜ್ಞಾನಿ ಎಂದಿಟ್ಟುಕೊಳ್ಳಿ, ತನ್ನ ತಿಳಿವಿನಂಚು ವಿಸ್ತರಿಸಿದ ಕುಶಿಯಲ್ಲಿ “then what this kannadaaa adigaaa?” ಸೀನಿಯಾರಿಟಿ ಅಮೂಲ್ಯ, “translation man” ಅಲ್ಪಜ್ಞಾನಿ ಅಪ್ಪಣೆ ಕೊಟ್ಟಿತು! ಸೀಮಿತ ಜ್ಞಾನಿಯಾದ ನನಗೆ ಸಹಿಸಲಿಲ್ಲ, “(ಅಲ್ಲಾ, ಅದೂ) ಗೋಪಾಲಕೃಷ್ಣ ಅಡಿಗಾ (ಇರಬಹುದು ಅಥವಾ ಇಂಗ್ಲಿಷ್ ಕಾದಂಬರಿಕಾರನಾದರೂ ಕನ್ನಡಿಗನೆಂಬ ಅಭಿಮಾನದ ಮಾತಿರಬಹುದು)” ಎಂದು ಹೇಳಲಿದ್ದ ಅಷ್ಟನ್ನು ನುಂಗಿಕೊಂಡು ಹೆಸರನ್ನಷ್ಟೇ ಗೊಣಗಿದೆ. ಅಲ್ಪಜ್ಞಾನಿ ಸರ್ವಜ್ಞತ್ವ ಆರೋಪಿಸಿಕೊಂಡು, “ಓ! ನಮ್ಮ ಗೋಪಾಲಕೃಷ್ಣ ಅಡಿಗ translate ಮಾಡಿದ್ದಾರಾ!” ನಹಿಜ್ಞಾನಿ ಹಿಂದುಳಿಯಲಿಲ್ಲ “then easy nOO? We can also read nOO!” ಎಂದು ಮುಗಿಸಿದಾಗ ನನ್ನ ಬಿಲ್ಲಿನ ಅಕ್ಷರಗಳು ಚಿತ್ತಾಗಿ, ನೂರಂಕಿ ಕೂಡಿದರೂ ತಪ್ಪದ ಲೆಕ್ಕ ಎಡವಟ್ಟಾಗಿ ಹೋಯ್ತು.