ಗುಬ್ಬಚ್ಚಿಗಳು ದೀರ್ಘ ಹಾರಾಟದ ಹಕ್ಕಿಗಳಲ್ಲ. ಸಹಜವಾಗಿ ಅಭಯನ ಚೊಚ್ಚಲ (ನಿರ್ದೇಶನದ ಸಿನಿಮಾ) `ಗುಬ್ಬಚ್ಚಿಗಳು’ ಸಾರ್ವಜನಿಕಕ್ಕೆ ಬರುವ ಮೊದಲು ಅಲ್ಲಲ್ಲಿ ಕುಪ್ಪಳಿಕೆಗಳನ್ನು ನಡೆಸಿತು. ಲಾಸ್ ಎಂಜಲೀಸ್, ನ್ಯೂಯಾರ್ಕ್, ಟೊರೊಂಟೋ, ಕೋಲ್ಕೊತ್ತಾಗಳಲ್ಲಿ ಚೂರುಪಾರು ಕುಕ್ಕಿ, ಹೆಕ್ಕಿ ಭಾರತೀಯ ಚಿತ್ರೋತ್ಸವಕ್ಕಾಗುವಾಗ ಭಾರತೀಯ ಇಪ್ಪತ್ತೈದರಲ್ಲಿ, ಕನ್ನಡದ ಮೂರರಲ್ಲಿ ಒಂದಾಗಿ ನಿಂತಿತು. ಸುಮಾರು ಈ ಹೊತ್ತಿಗೆ ಅಭಯನಿಗೆ ರಶ್ಮಿಯೊಡನೆ ಮದುವೆಯಾಯ್ತು. ಬೆನ್ನಿಗೆ ಇವಳಿಗೆ ಪರೀಕ್ಷೆ ಕಾಟ! ಸರಿ ಅವನು ಬೆಂಗಳೂರು, ಇವಳು ಮಂಗಳೂರು. ನಿಮಗೆಲ್ಲಾ ಗೊತ್ತಿರುವಂತೆ ಈಚಿನ ವರ್ಷಗಳಲ್ಲಿ ಭಾರತದ ಅಧಿಕೃತ ಅಂತಾರಾಷ್ಟ್ರೀಯ ಉತ್ಸವಕ್ಕೆ ಖಾಯಂ ನಿವೇಶನ ಗೋವಾ. ಇದಕ್ಕೆ ಹೊಂದಿದಂತೆ ರಶ್ಮಿಯ ಸೆಮೆಸ್ಟರ್ ಪರೀಕ್ಷೆ ಮುಗಿದು ರಜೆ ಆರಂಭವಾಗುವುದೂ ಗೊತ್ತಾಯ್ತು. ಸರಿ, ನವದಂಪತಿಗೆ ಆಧುನಿಕ ಸಂಪ್ರದಾಯವೇ ಆಗಿರುವ ಮಧುಚಂದ್ರವೂ ಚಿತ್ರೋತ್ಸವವೂ ಒಟ್ಟಿಗೇ ನಡೆಯಲಿ ಎಂದೇ ನಾವೆಲ್ಲ ಹಾರೈಸಿದೆವು. ಚಿತ್ರೋತ್ಸವ ಸಮಿತಿ ನಿರ್ಮಾಪಕ (ಬಿ.ಸುರೇಶ) ಮತ್ತು ನಿರ್ದೇಶಕರಿಗೆ ಮಾತ್ರ ನಿರ್ಮಾಣ ಕೇಂದ್ರದಿಂದ ಅಂದರೆ ಬೆಂಗಳೂರಿನಿಂದ ಗೋವಾಕ್ಕೆ ಹೋಗಿಬರುವ ವಿಮಾನ ಸೌಲಭ್ಯ ಕೊಡುತ್ತಿತ್ತು. ಉಳಿದಂತೆ ಅಲ್ಲಿನ ವಸತಿ ವ್ಯವಸ್ಥೆ, ಯಾವುದೇ ಚಿತ್ರ ವೀಕ್ಷಣಾ ವ್ಯವಸ್ಥೆಗಳನ್ನು ನಾಮಾಂಕಿತರೊಡನೆ ನಾಲ್ವರು ಅತಿಥಿಗಳಿಗೆ ಸಮಿತಿ ಉಚಿತವಾಗಿ ಒದಗಿಸುತ್ತಿತ್ತು. ಹಾಗಾಗಿ ಅಭಯ ಅಲ್ಲಿಗೆ ತಲಪುವ ದಿನ ನೋಡಿಕೊಂಡು ರಶ್ಮಿಯನ್ನು ಮಂಗಳೂರಿನಿಂದ ಅಲ್ಲಿಗೊಯ್ದು ಮುಟ್ಟಿಸುವ ಜವಾಬ್ದಾರಿಯಷ್ಟೇ ನನಗೆ ಬಂತು. ಮತ್ತದಕ್ಕೂ `ಸಂಭಾವನೆ’ ರೂಪದಲ್ಲಿ ಅಭಯನಿರುವ ಉದ್ದಕ್ಕೂ ನಾನಲ್ಲಿದ್ದು ಚಿತ್ರೋತ್ಸವದ ಕಾರ್ಯಕ್ರಮಗಳಲ್ಲಿ ಭಾಗಿಯಾಗಬಹುದಿತ್ತು. ಆದರೆ ನನ್ನ ಅಂಗಡಿಯ ಕೆಲಸ ಮತ್ತೂ ಮುಖ್ಯವಾಗಿ ಅವರಿಬ್ಬರ ಏಕಾಂತತೆಯ ಅವಕಾಶ ಹಾಳು ಮಾಡದ ಎಚ್ಚರದಲ್ಲಿ ಬರಿಯ ಹೋದ ಹಗಲಿನ ಕಾರ್ಯಕ್ರಮದಲ್ಲಷ್ಟೇ ಭಾಗಿಯಾಗಿ ಮರಳುವಂತೆ ಟಿಕೇಟ್ ಮಾಡಿಕೊಂಡೇ ಹೊರಟೆ.
ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವದ ಬಾಗಿಲಲ್ಲಿನವೆಂಬರ್ ೨೨ ಚಿತ್ರೋತ್ಸವದ ಉದ್ಘಾಟನೆ. ಬಿ. ಸುರೇಶ (ಮತ್ತು ಶೈಲಜಾ ನಾಗ್) ದಂಪತಿ ಹಾಗೂ ಅಭಯ ೨೩ರ ಸಂಜೆಯಷ್ಟೆ ಪಣಜಿ ಸೇರಿದರು. ಮಂಗಳೂರು ಗೋವಾ ಒಂದೇ ಕರಾವಳಿಯ ಪಾಲುದಾರರಾದ್ದರಿಂದ ಆದ್ಯತೆಯಲ್ಲಿ ನೆನಪಿಗೆ ಬರುವ ಸೌಕರ್ಯ ಕೊಂಕಣ್ ರೈಲ್ವೆ. ಆದರೆ ರೈಲು ಮಡ್ಗಾಂವ್ ಕಳೆದ ಮೇಲೆ ಸ್ವಲ್ಪ ಒಳನಾಡಿನತ್ತ ಹರಿದುದರಿಂದ, ಪಣಜಿ ಮತ್ತೆ ಒಂದು ಗಂಟೆಯ ಬಸ್ಸಿನ ದಾರಿಯಾಗೇ ಉಳಿಯುತ್ತಿತು. ಹಾಗಾಗಿ ಒಂದೇ ಪ್ರಯಾಣದ ಅನುಕೂಲಕ್ಕಾಗಿ ನಾನು, ರಶ್ಮಿ ೨೩ರ ರಾತ್ರಿ ಬಸ್ಸು ಹಿಡಿಯುವುದು ಅನಿವಾರ್ಯವಾಯ್ತು. ನಮ್ಮ ಅಂದಾಜಿನಲ್ಲಿ ಆ ದಿನಗಳಲ್ಲಿ ಇಡಿಯ ಭಾರತದ ಪರಮ ದೃಷ್ಟಿ, ವಾಹನ ಸೌಕರ್ಯಗಳೆಲ್ಲದರ ಚರಮ ಲಕ್ಷ್ಯ ಪಣಜಿ! ಆದರೆ ಮಂಗಳೂರು ಬಸ್ಸು ನಿಲ್ದಾಣದಲ್ಲೇ ಇದು ಕೇವಲ ನಮ್ಮ ಭ್ರಮೆ ಎಂದು ಮತ್ತೆ ಮತ್ತೆ ಶ್ರುತಪಟ್ಟಿತು. ಅತ್ಯಂತ ಸುಸಜ್ಜಿತ ಬಸ್ಸುಗಳ ಸಮೂಹವೇ ಗೋವಾದೆಡೆಗೆ ಹೋಗುತ್ತಿರಬೇಕು ಎಂದುಕೊಂಡವನಿಗೆ ಇರುವುದೊಂದೇ ಬಸ್ಸು. ಅದೂ ವೈಭೋಗಕ್ಕೆ ಪರ್ಯಾಯ ಹೆಸರಾದ ವಾಲ್ವೋ ಅಲ್ಲ, ಹವಾನಿಯಂತ್ರಿತ, ಶಯನಾಸನ ಸಜ್ಜಿತಗಳ್ಯಾವವೂ ಅಲ್ಲದೆ ಕೇವಲ ರಾಜಹಂಸ ಅದರಲ್ಲೂ ಹಳತು, ಲೊಡ್ಡು; ರಾಜಹಿಂಸೆ! ಹೀಗ್ಯಾಕೆ ಎಂದು ನಾನು ಕೇಳದಂತೆ ಅದೂ ತುಂಬುವ ಪ್ರಯಾಣಿಕರು ಇರಲಿಲ್ಲ. ಉದ್ದಕ್ಕೂ ಸಿಗುವ ಹಲವು ಪಟ್ಟಣಗಳಲ್ಲಿ ಹತ್ತಿಳಿಯುವ ಅಸಂಖ್ಯರಿಗೆ ಪರಮ ಲಕ್ಷ್ಯವೂ ಪಣಜಿ ಆಗಿರಲಿಲ್ಲ. ದಾರಿಯ ಬಗ್ಗೆ ನಾನು ಬರೆಯದಿರುವುದೇ ವಾಸಿ. ಹಾಗೇ ಪ್ರಯಾಣವೆಂಬ ಪ್ರಯಾಸ (೩೫೭ ಕಿಮೀ) ಹತ್ತು ಗಂಟೆ ಲಂಬಿಸಿದ್ದನ್ನೂ ವಿವರಿಸದಿರುವುದೇ ಉಚಿತ.
ಗೋವಾ ವಿಶ್ವಖ್ಯಾತ ಕರಾವಳಿ ಪ್ರವಾಸೀತಾಣ. ಸಹಜವಾಗಿ ಇಲ್ಲಿನ ವಸತಿ ಸೌಕರ್ಯಗಳು ಸಾಗರಸೂಚೀ ಹೆಸರುಗಳನ್ನು ಸೂರೆಗೊಳ್ಳುವುದು ಇದ್ದದ್ದೇ. ಹಿಂದಿನ ರಾತ್ರಿ ಅಭಯ ದೂರವಾಣಿಸಿ ಹೋಟೆಲ್ ಹೆಸರು ಹೇಳಿದ್ದಲ್ಲದೆ “ಮರೆತುಹೋದೀತು, ಬರೆದಿಟ್ಟುಕೊಳ್ಳಿ” ಎಂದಿದ್ದ. ನಮ್ಮ ನೆನಪಿನಕೋಶದ ಗಟ್ಟಿತನದ ಬಗ್ಗೆ ಅತಿ ವಿಶ್ವಾಸದಲ್ಲಿ ಹಾಗೆ ಮಾಡದೇ ಇದ್ದ ನಮಗೆ ಪಣಜಿ ಬಸ್ ನಿಲ್ದಾಣದಲ್ಲಿ ನಿದ್ದೆಗಣ್ಣಲ್ಲಿ, ಪಯಣಗೇಡಿತನದಲ್ಲಿ ಇಳಿದಾಗ ಬಂದದ್ದು ಗೊಂದಲವಲ್ಲ, ಸೃಜನಶೀಲತೆಯ ಸಮೃದ್ಧಿ! Sun & Sea? Spice & Salt? Sea & Sand? Salt & Pepper??? ಎಷ್ಟಾದರೂ ಪಂಚತಾರಾ ಶ್ರೇಣಿಯವು ಹೆಚ್ಚಿರಲಾರವು ಎಂಬ ಇನ್ನೊಂದು ಭಂಡತನದಲ್ಲಿ ಆಟೋ ರಿಕ್ಷಾದವನ ಮೇಲೆ ಈ sample & search ಪ್ರಯೋಗ ನಡೆಸಿದೆವು, ಹೆಚ್ಚಿನ ಗೊಂದಲವಷ್ಟೆ ಆಯ್ತು. ಮಂಗಳೂರಿನಂತಹ ಚಿಲ್ಲರೆ ವಾಣಿಜ್ಯ ನಗರಕ್ಕೆ ಒಂದು ಪಂಚತಾರಾ ಯೋಗ್ಯತೆಯೂ ಇಲ್ಲದಿದ್ದರೇನು ಗೋವೆಯಲ್ಲಿ ಅವೂ ಅಸಂಖ್ಯವೇ ಇರಬೇಕು. ಕೊನೇಏಏಗೆ ನನ್ನ ಅಲರ್ಜಿ – ರಶ್ಮಿಯ ಜಂಗಮವಾಣಿ ಅಭಯನನ್ನು ಸಂಪರ್ಕಿಸಿತು, ರಿಕ್ಷಾದವನ ಒಂದಕ್ಕೆರಡು ದರದಲ್ಲಿ Sun & Sandಗೆ (ಸೂರ್ಯನ ಮರಳು?) ಮುಖಮಾಡಿದೆವು. ನದಿಯೊಂದನ್ನು ಹಾಯ್ದು, ಮೇಲ್ಸೇತುವೆಯೊಂದರಡಿಯಲ್ಲಿ ನುಸಿದಾಗ ಅನತಿದೂರದ ಪುಟ್ಟ ಗುಡ್ಡೆಯೊಂದರ ನೆತ್ತಿಯಲ್ಲಿ ನಸುಕಿನ ಮಂದದಲ್ಲೂ ನೀಲಿ ಬೆಳಕಾಗಿ ತೋರುತ್ತಿದ್ದ Sun & Sandಅನ್ನು ಊರ ಗಲ್ಲಿಯೊಂದರಲ್ಲಿ ತೂರಿ ಸಾಧಿಸಿದೆವು. ಲಾಠಿಗೂ ಗತಿಯಿಲ್ಲದಂತಿದ್ದ ಕಾವಲ ಭಂಟ, ಆಚೀಚೆ ಎರಡು ಲಿಫ್ಟ್ ಪ್ರಧಾನ ದ್ವಾರ. ಒಂದರಿಂದ ಅಭಯ ಇಳಿದು ನಮ್ಮನ್ನು ಮೇಲೊಯ್ದ. ಈಗ ಗುಡ್ಡದ ದರೆಯೊಂದನ್ನುತ್ತರಿಸಿ ಹೋಟೆಲಿನ ನಿಜ ಅಂಗಳದಲ್ಲಿದ್ದೆವು. ಸ್ವಾಗತಕಾರ ಕೇವಲ ರಶ್ಮಿಯ (ಆಕೆ ಅಲ್ಲುಳಿಯಲಿದ್ದವಳು. ನಾನು ರಾತ್ರಿಯೇ ಮರಳಲಿದ್ದವನು) ಸಂಬಂಧ ಖಾತ್ರಿಪಡಿಸಿಕೊಂಡು, ಫೋಟೋ ಸಂಗ್ರಹಿಸಿಕೊಂಡ. ನನ್ನನ್ನು ಕೇವಲ guest ಎಂಬ ಮೌಖಿಕ ಪರಿಚಯದಲ್ಲೇ ಒಳಗೆ ಸೇರಿಸಿಬಿಟ್ಟ. ಈಚಿನ ಮುಂಬೈ ದುರಂತದ ಬೆಳಕಿನಲ್ಲಿ ಇದೆಷ್ಟು ಅಪಾಯಕಾರಿ ಎಂದು ನಮಗೀಗ ಕಾಣುತ್ತದೆ. ನಮ್ಮೊಡನಿದ್ದ ಒಂದು ದೊಡ್ಡ ಸೂಟ್ ಕೇಸ್, ಎರಡು ಚೀಲಗಳಲ್ಲಿ ವಿಧ್ವಂಸಕಾರೀ ಏನೆಲ್ಲಾ ಒಯ್ಯಬಹುದಿತ್ತು. ಕು-ತಾರ್ಕಿಕ ಬೆಳವಣಿಗೆಯಲ್ಲಿ, ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವಕ್ಕೆ ಆ ಪಂಚತಾರಾ ಹೋಟೇಲಿನಲ್ಲಿ ಬಂದು ಸೇರಿದ್ದ ಅಷ್ಟೂ ಖ್ಯಾತನಾಮರನ್ನು ನಾವು ಉಡಾಯಿಸಬಹುದಿತ್ತು!
ಪಂಚತಾರೆಯ ಸಂಗದಲ್ಲಿ ಜನ್ಮದಲ್ಲಿ ಮೊದಲಬಾರಿಗೆ (ನಾನು ಇಷ್ಟಪಟ್ಟು ಹೋಗುವುದಿದ್ದರೆ ಕೊನೆಯಬಾರಿ ಎಂದೂ ಹೇಳಬಲ್ಲೆ!) `ಪಂಚತಾರೆ’ಯ ಕಿಂಚಿತ್ `ಸುಖ’ ಅನುಭವಿಸಿದೆ. ದಿನದ ಬಾಡಿಗೆ ಎಂಟೋ ಹತ್ತೋ ಸಾವಿರವಂತೆ. ಮೂರನೆಯ ಮಹಡಿಯ ಒಂದು ಹವಾನಿಯಂತ್ರಿತ ಗೂಡಿಗೆ `ಚಿಪ್’ ನಿಯಂತ್ರಿತ ಬೀಗ ತೆರೆದು ಪ್ರವೇಶ. ಕಾಫಿ, ಚಾ ಎಕ್ಸ್ಪ್ರೆಸ್ಸೋ, ಪುಟ್ಟ ಶೀಥಲೀಕರಣ ಯಂತ್ರ ಸಹಿತ ಮದ್ಯಾವಳಿ ಸ್ವಾಗತಿಸುತ್ತದೆ. ಕೋಣೆಯ ಯಾವ ಮೂಲೆಗೂ ಹೊಂದಿಸಿಕೊಳ್ಳಬಹುದಾದ, ಬೇಕಾದ `ಬೇಡ’ವಾದ ಎಲ್ಲಾ ಚಾನೆಲ್ಲುಗಳ ಸೌಲಭ್ಯ ಸಹಿತ ಭಾರೀ ಟೀವಿ. ಸಸ್ಯಾಲಂಕೃತ, ಬೆತ್ತದ ಆರಾಮಕುರ್ಚಿ ಸಹಿತ ಸಜ್ಜಿತ ಬಾಲ್ಕನಿಯಿಂದ ಮಾಂಡೋವಿ ನದಿ ಸೇರಿದಂತೆ ಊರ ಹಕ್ಕಿಗಣ್ಣಿನ ನೋಟ ಉಚಿತ. ಕುಳಿತರೆ ಹುಗಿಯುವ ಸೋಫಾ, ಮಲಗಿದರೆ ಕವಿಕಲ್ಪನೆಯ ಹಂಸತೂಲಿಕಾತಲ್ಪವನ್ನು ನಿಜಗೊಳಿಸುವ ಮಂಚ ಹಾಸಿಗೆ ಇತ್ಯಾದಿ ಹೆಚ್ಚು ವಿವರಿಸುವಷ್ಟು ನಾನು ಅಲ್ಲಿದ್ದು ಅನುಭವಿಸಲಿಲ್ಲ. ದೀರ್ಘ ಪ್ರಯಾಣ ಮತ್ತೆ ದಿನಪೂರ್ತಿ ಅವಿರತ ಕಲಾಪಗಳ ಯೋಜನೆಯಿದ್ದದ್ದರಿಂದ ನನಗೆ ಹೆಚ್ಚು ಹಿಡಿಸಿದ್ದು ಬಚ್ಚಲು (ಕಕ್ಕೂಸಿನ ಸಂಗಮ). ಇದರ ವಿವರಗಳಿಗೆ ಹೋದರೆ ನೀವೆಲ್ಲಿ ನನ್ನನ್ನು ಲಂಡನ್ನಿಗೆ ಹೋದ ಗಾಂಪರೊಡೆಯನ ಜೊತೆ ಸಮೀಕರಿಸುವಿರೋ ಎಂಬ ಭಯದಿಂದ ಸಂಯಮಿಸುತ್ತೇನೆ. ನಮ್ಮೂವರ ಪ್ರಾತರ್ವಿಧಿಗಳು ಮುಗಿಯುತ್ತಿದ್ದಂತೆ ಬೇರೇ ಕೋಣೆಯಲ್ಲಿದ್ದ ಬಿ.ಸುರೇಶ ದಂಪತಿ ಸಜ್ಜಾಗಿ ಬಂದು ನಮ್ಮನ್ನು ಸೇರಿಕೊಂಡರು. ಹೋಟೆಲ್ ತನ್ನತಿಥಿಗಳಿಗೆ ಬೆಳಗಿನ ಉಪಾಹಾರವನ್ನು ಉಚಿತವಾಗಿ ಕೊಡುತ್ತಿತ್ತು. ಅಳಿಯನೊಂದಿಗೆ ಗಿಳಿಯನಂತೆ ಅದನ್ನೂ ನಾವನುಭವಿಸಿದೆವು. ಈಜುಕೊಳದ ಕಿನಾರೆಯ ಹವಾನಿಯಂತ್ರಿತ ಪೂರ್ಣಗಾಜಿನ ಹಜಾರದಲ್ಲಿ ಬಗೆತರದ ತಿನಿಸು, ಪಾನೀಯಗಳನ್ನು ಅಮಿತವಾಗಿ ಒದಗಿಸಿದರು. ವಿವಿಧ ಹಣ್ಣು, ಹಣ್ಣಿನ ರಸಗಳು, ಬ್ರೆಡ್ಡು ಸ್ಯಾಂಡ್ವಿಚ್ಗಳು, ಇಡ್ಲಿ, ಒಡೆಯಾದಿ ಸಸ್ಯಾಹಾರೀ ಮಾಂಸಾಹಾರೀ ತಿನಿಸುಗಳನ್ನು ಆವಶ್ಯಕತೆಗನುಗುಣವಾಗಿ ಮಾಡಿಟ್ಟದ್ದೂ ಇತ್ತು, ಬಿಸಿಬಿಸಿಯಾಗಿ ಮಾಡಿಕೊಡುವವರೂ ಇದ್ದರು. ಮತ್ತೆ ಚಾ ಕಾಫಿ ಬಿಡಿ, ಸರ್ವ ಪಾನೀಯಗಳೂ ಲಭ್ಯವಿತ್ತೆಂದು ನಾನು ಪ್ರತ್ಯೇಕ ಬರೆಯಬೇಕೇ!
ಪ್ರಿಯ ಅಶೋಕರೇಎರಡೂ ಕಂತುಗಳು ಚೆನ್ನಾಗಿದ್ದವು. ಆದರೆ ಮೊದಲನೇಯ ಕಂತು ನೋಡಿದಾಗಲೇ ಅನ್ನಿಸಿತು – ಬರೇ ಮಾವ ಸೊಸೆ ಫೊಟೊ ಹಾಕಿದ್ದೀರಿ ಅಂತ. ಎರಡನೇಯ ಕಂತಲ್ಲೂ ಮುಂದುವರಿದ ಕಾರಣ ಕೇಳುತ್ತಿದ್ದೇನೆ – ಗುಬ್ಬಚ್ಚಿ ನಿರ್ದೇಶಕರು ಮೂರನೇಯ ಅಂಕದಲ್ಲಿ ರಂಗ ಪ್ರವೇಶ ಮಾಡುವರೋ ??