ವಿಶೇಷ ಸೂಚನೆ: ಇದು ಹೆಂಗಸರಿಗಲ್ಲ!
ಮೀಸೆ ಬರುವ ಮೊದಲು ಹೆಚ್ಚಿನ ಹುಡುಗರು ಕದ್ದುಮುಚ್ಚಿ ಅಪ್ಪನ ರೇಜರ್ ಮುಖದ ಮೇಲಾಡಿಸಿಕೊಂಡದ್ದಿರಬಹುದು. ಆದರೆ ಒಮ್ಮೆ ಬರತೊಡಗಿದ ಮೇಲೆ? ನನ್ನ ಅಜ್ಜ (ಮಾತಾಮಹ) ನಾನು ಎಳೆಮೀಸೆ ಬಿಟ್ಟಾಗ “ನಮ್ಮ ಕುಟುಂಬದಲ್ಲಿ ಯಾರೂ ಮೀಸೆ ಬಿಟ್ಟವರಲ್ಲ, ತೆಗೆದುಬಿಡು” ಎನ್ನುತ್ತಿದ್ದರು. ಇಂಗ್ಲಿಷ್ ಸ್ನಾತಕೋತ್ತರ ಪರೀಕ್ಷೆಯ ಅಂತಿಮ ವಿಧಿ `ಮುಖಾಮುಖಿ’ಯಲ್ಲಿ ನನಗೆ ಪರೀಕ್ಷೆ ಕೊಟ್ಟ ಮೂವರಲ್ಲಿ (ವಿಭಾಗ ಮುಖ್ಯಸ್ಥ ಸಿ.ಡಿ. ನರಸಿಂಹಯ್ಯ ಮತ್ತು ಎಚ್.ಎಚ್.ಅಣ್ಣೇ ಗೌಡರ ಜತೆಗೆ) ನನಗೆ ಸ್ನಾತಕ ತರಗತಿಗಳಲ್ಲೂ ಪಾಠ ಮಾಡಿದ್ದ ಸಿ.ಡಿ. ಗೋವಿಂದ ರಾವ್, ದಪ್ಪ ಚಾಳೀಸಿನ ಎಡೆಯಲ್ಲೂ ತುಂಟ ಕಣ್ಣು ಪಿಳುಕಿಸಿ “ಪೀಜೀಯಲ್ಲಿದ್ದುಕೊಂಡೂ ಹೀಗೆ ಮೀಸೆ ಉಳಿಸಿಕೊಂಡಿದ್ಯಲ್ಲಾ” ಎಂದು ಉದ್ಗರಿಸಿದ್ದರು. ನನಗೆ ಮದುವೆ ಆದ ಮೇಲೆ (ಪುಸ್ತಕೋದ್ಯಮದಲ್ಲಿ) ಪಿತೃಸಮಾನರಾದ ಡೀವೀಕೆ ಮೂರ್ತಿಯವರು “ಇನ್ನೇನು, ಮದುವೆಯಾಯ್ತಲ್ಲಾ. ಮೀಸೆ ತೆಗೆಸಿಬಿಡಿ, ಚೆನ್ನಾಗಿರಲ್ಲ” ಎಂದು ಬಹುಕಾಲ ಮಡುಗಟ್ಟಿದ್ದ ಏಕೈಕ ಅಸಮಾಧಾನದ ಕಟ್ಟೆಯೊಡೆದಿದ್ದರು.
ಚಿಕ್ಕಮ್ಮ ಸೀತೆ, ನಾನು ಮದುವೆಯ ಹೊಸತರಲ್ಲಿ ತೆಗೆಸಿದ ಜೋಡಿಯ ಫೋಟೋ ನೋಡಿಕೊಂಡು ಈಗಲೂ “ಪಾಪ ದೇವಕಿ” ಎಂದು ಕನಿಕರಿಸುವುದು ನನ್ನ ಮೀಸೆ ಕಾರಣಕ್ಕೇ! ಅಣ್ಣನೆನಿಸಿಕೊಳ್ಳುವ ಕಾಲಕ್ಕೇ Uncle ಆಗಿ (ಮೀಸೆಮಾಮ), ಪ್ರೌಢತನ ಗುರುತಿಸಬೇಕಾದ ಕಾಲಕ್ಕೆ ಮುದಿಯನಾಗಿ (ಮೀಸೆಯಜ್ಜ) ಬೇರೆಯವರ ಕಣ್ಣಲ್ಲಿ ಸೋತದ್ದೂ ಉಂಟು. ವಾಸ್ತವವಾಗಿ ನನಗೆ ಹುಡುಗಿ ನೋಡುತ್ತಿದ್ದ ಕಾಲಕ್ಕೆ ಕೃಷಿಕ ಕಪಿಯೊಬ್ಬರು ನನ್ನ ಮೀಸೆಯ ಬಲದಲ್ಲಿ ಪ್ರಾಯ ಹೆಚ್ಚೆಂದೇ ಗ್ರಹಿಸಿ `ಸುಳ್ಳು ಜಾತಕ ಬರೆಸಿದ’ ಆರೋಪವನ್ನೇ ಮಾಡಿದ್ದರು! ಬಹುಶಃ ಮರದ ಗಂಟು ನೋಡಿ ಪ್ರಾಯ ಅಳೆವ ಅವರ ಅನುಭವವನ್ನು ನನ್ನ ಮೀಸೆಗೆ ವಿಸ್ತರಿಸಿರಬೇಕು. ಕ್ಷೌರಕ್ಕೆ ಹೋದಲ್ಲಿ ಭಂಡಾರಿಗೆ ನನ್ನ ತುಟಿಯ ಮೇಲಿನ ಪೊದೆಯನ್ನು ಟ್ರಿಂ ಮಾಡುವ ಉತ್ಸಾಹ. ಮತ್ತೆ ಮಗನ ಮದುವೆ ಕಾಲಕ್ಕೆ ದೇಹಕ್ಕೆ ಐವತ್ತಾರಾದರೂ ಸುಮಾರು ಮೂವತ್ತರ ಹರಯದಲ್ಲಿರುವ ಮೀಸೆಗಾದರೂ ಕರಿಮೆತ್ತಲು ಪುಕ್ಕಟೆ ಸಲಹೆ ಕೊಟ್ಟವರು ಧಾರಾಳ. ಮೀಸೆಯ (-ನ್ನು ಹೊತ್ತ ನನ್ನ) ದರ್ಶನ ಮಾತ್ರದಿಂದ ಹೆದರಿ ಅಳುತ್ತಿದ್ದ, ಅಳುತ್ತಿದ್ದವು ಗಪ್ಚುಪ್ಪಾದ, ಅಪೂರ್ವಕ್ಕೆ ಕೈಹಾಕಿ ಕಿತ್ತು ಕೀಟಲೆ ಮಾಡುತ್ತಿದ್ದ ಪೋಕರಿಗಳೆಲ್ಲವನ್ನೂ ಸಮಭಾವದಲ್ಲಿ ತೆಗೆದುಕೊಂಡು ನಾನು ಮೀಸೆ ಉಳಿಸಿಕೊಂಡೇ ಇದ್ದೇನೆ!
ನನ್ನ ಬಾಲ್ಯದ ಮಡಿಕೇರಿಯಲ್ಲಿ ಹುಲಿಮೀಸೆ ಅಥವಾ ಹುರಿಮೀಸೆಯವರು ಹೆಚ್ಚು. ಐದನೇ ಕ್ಲಾಸಿನವರೆಗಷ್ಟೇ ನಾನು ಕೊಡಗಿನಲ್ಲಿದ್ದರೂ ಇಂದಿಗೂ ನಾನು ಕೊಡಗಿನವ ಎಂದುಕೊಳ್ಳುವಲ್ಲಿರುವ ಹೆಮ್ಮೆಗೆ ಲಾಂಛನ ನನ್ನ ಮೀಸೆ. ನನ್ನ ಚಿಕ್ಕಪ್ಪ ಮೂರ್ತಿ ಬ್ಯಾಂಕ್ ಸೇರಿದ ಹೊಸತು. ಅವರು ಬೆಂಗಳೂರಿನಲ್ಲಿ ವಾಸಕ್ಕಿದ್ದ ಹಾಸ್ಟೆಲ್ ಬಾಲ್ಕನಿಯಲ್ಲಿ ಸಹಜವಾಗಿ ಮೀಸೆ ಹುರಿಮಾಡುತ್ತಿದ್ದಾಗ ಊರ ಪುಡಿ ರೌಡಿಯೊಬ್ಬ ಕಂಡು, ತನಗೆಸೆದ ಸವಾಲು ಎಂದು ತಪ್ಪು ತಿಳಿದು, ಮೇಲೆ ಬೀಳಲು ಹೋಗಿ ಸೋತ ಕಥೆ ನನ್ನ ಪೌರುಷದ ಖಾತೆಯಲ್ಲಿ ಜಮೆಯಾಗಿತ್ತು. ಮತ್ತೆ ಮುಂದೆಂದೋ ಮೀಸೆ ಹುರಿಮಾಡುವ ಚಂದ್ರಶೇಖರ ಆಜಾದ್ ಚಿತ್ರ ನೋಡಿದಾಗಲೂ ನನ್ನ ಮನಃ ಪಟಲದಲ್ಲಿ ಮೂರ್ತಿ ಮೀಸೆ ತಿರುಪುವ ಚಿತ್ರವೇ ಅಚ್ಚಳಿಯದುಳಿಯಲು ಆ ಕಥೆಯ ಪ್ರಭಾವ ಕಾರಣವಿರಬೇಕು. ನಾನಿನ್ನೂ ಮಂಗಳೂರಿನಲ್ಲಿ ಪುಸ್ತಕದಂಗಡಿ ತೆರೆಯಲು ಮಳಿಗೆ ಹುಡುಕುತ್ತಾ ಕೆಲವು ಸಾಂಸ್ಥಿಕ ವ್ಯಾಪಾರ ಮಾಡುತ್ತಿದ್ದ ಕಾಲ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಕೇವಲ ನನ್ನ ಪಟ್ಟಿ ನೋಡಿ, ನಾರಾಯಣರಾಯರ ಮಗನೆಂದು ವಿಶೇಷವಾಗಿ ಗುರುತಿಸಿ ನನಗೆ ಭಾರೀ ಪುಸ್ತಕ ಆದೇಶ ಕೊಟ್ಟಿದ್ದರು. ಐದಾರು ದೊಡ್ಡ ರಟ್ಟಿನ ಪೆಟ್ಟಿಗೆಯಲ್ಲಿ ಅವನ್ನು ತುಂಬಿ, ಬಸ್ಸಿನ ಟಾಪಿಗೇರಿಸಿ ನಾನು ಧರ್ಮಸ್ಥಳಕ್ಕೆ ಹೊರಟಿದ್ದೆ. ಚಾರ್ಮಾಡಿ ಘಾಟಿಯಲ್ಲಿ ಒಮ್ಮೆಗೇ ಮಳೆಯ ಲಕ್ಷಣಗಳು ದಟ್ಟವಾಯ್ತು. `ಇಂವ ನಮ್ಮವ’ ಎಂದು ಗುರುತಿಸಿಟ್ಟುಕೊಂಡಿದ್ದ ನನಗೆ ತೀರಾ ಅಪರಿಚಿತ ಬಸ್ಚಾಲಕ, ಕೊಡವ, ಒಮ್ಮೆಗೇ ಬಸ್ಸು ನಿಲ್ಲಿಸಿದ. ನನಗೆ ಟಾಪಿಗೇರಲು ಹೇಳಿ, ತನ್ನ ಬಾಗಿಲಿನಲ್ಲಿ ಅಷ್ಟೂ ಪುಸ್ತಕದ ಕಟ್ಟುಗಳನ್ನು ಒಳಗಿಳಿಸಿಕೊಂಡದ್ದಕ್ಕೆ ಮಂಜುನಾಥ ಸ್ವಾಮಿಯ ದೊಡ್ಡ ಹೆಸರು ಹೇಳಲಾರೆ, ಯಃಕಶ್ಚಿತ್ ಮೀಸೆಯ ವಿಜಯ ಎನ್ನಲೇಬೇಕು. ಸಾಮಾನ್ಯ ಹೆಂಗಸರನ್ನು, ವಿಶಿಷ್ಟ ಚಹರೆಯಿಲ್ಲದ ಗಂಡಸರನ್ನು ಗುರುತಿಟ್ಟುಕೊಳ್ಳುವುದು ಬಲು ಕಷ್ಟ. ನನ್ನ ಮದುವೆಗೆ ಮೊದಲ ದಿನಗಳಲ್ಲಿ ಇಲ್ಲಿ ನನಗೆ ಖಾಯಂ ಜೊತೆ ಕೊಡುತ್ತಿದ್ದ ಇನ್ನಿಬ್ಬರು ಮಿತ್ರರು ಬೇರೊಂದು ರೀತಿಯಲ್ಲಿ ವಿಶಿಷ್ಟರೇ. ನಾವು ಭೇಟಿ ಕೊಡುತ್ತಿದ್ದ ರಾತ್ರಿಯೂಟದ ಹೋಟೆಲ್ (ವುಡ್ ಸೈಡ್) ಮಾಣಿಯೊಬ್ಬ ನಮ್ಮನ್ನು ಸುಲಭ ಸಂಕೇತಗಳಲ್ಲಿ ಗುರುತಿಟ್ಟದ್ದು ಈಗ ನೆನಪಾಗುತ್ತದೆ. ಶಿವರಾಮ ಕಾರಂತರ ಊರಿನವರೂ ಅವರ ಪ್ರಭಾವಕ್ಕೂ ಒಳಗಾದವರು ರಾಘವೇಂದ್ರ ಉರಾಳ. ಇವರ ಕೇಶವಿನ್ಯಾಸವೂ ಕಾರಂತರದೇ; ಮಾಣಿ ಎರಡೂ ತೆರೆದ ಹಸ್ತವನ್ನು ನೆತ್ತಿಯ ಮೇಲೆ ತಂದು ಭುಜದವರೆಗೂ ನೇವರಿಸಿ ತೋರುತ್ತಿದ್ದ. ಮೈಸೂರಿನ ಪಂಡಿತಾರಾಧ್ಯ ಎಷ್ಟರ ಮಟ್ಟಿಗೆ ಅಹಿಂಸಾವಾದಿಯೆಂದರೆ ಸ್ವಂತ ಗಡ್ಡ, ಮೀಸೆಗಳಿಗೂ ಬ್ಲೇಡು ಬಿಡಿ, ಕತ್ತರಿಯನ್ನು ಪಕ್ಷಕ್ಕೊಮ್ಮೆಯೋ ಮಾಸಕ್ಕೊಮ್ಮೆಯೋ ಮಾತ್ರ ತೋರಿಸುತ್ತಿದ್ದರು. ಇವರನ್ನು ಮಾಣಿ ಮತ್ತೆ ತೆರೆದ ಹಸ್ತಗಳಿಂದ ಎರಡು ಕಪೋಲಗಳನ್ನು ಸವರಿಸೂಚಿಸುತ್ತಿದ್ದ. ನನ್ನನ್ನು ಗುರುತಿಸುವುದು ಅತಿ ಸರಳ – ಯಾವುದೋ ಒಂದು ಕೆನ್ನೆಯ ಎದುರು ಎರಡು ಬೆರಳನ್ನು ತಿರುವಿದರೆ ಸಾಕು.
ಧಡಿಯ, ಕರಿಯ, ಕುಂಟ (ಕುಳ್ಳ ಎಂಬ ಅರ್ಥದಲ್ಲಿ) ಇತ್ಯಾದಿ ವಿಶೇಷಣಗಳೇನಿದ್ದರೂ ತೀರಾ ಆತ್ಮೀಯ ವೃತ್ತದ ಹೊರಗೆ ಯಾರೂ ಎದುರಿನಿಂದ, ಸಾರ್ವಜನಿಕವಾಗಿ ಬಳಸಲಾರರು. ಉದಯವಾಣಿಯ ಏಕೈಕ ಪುರುಷನೆಂದೇ ನಾನು ತಮಾಷೆ ಮಾಡುತ್ತಿದ್ದ ತಿಮ್ಮಪ್ಪ ಪುರುಷ, ನನಗೆ ಫೋನು ಮಾಡಿದಷ್ಟೂ ದಿನ ಸಂಬೋಧಿಸುತ್ತಿದ್ದದ್ದು “ಹಾಂ ಮೀಶೆಯವರೇ”. (ಈ ಲೇಖನ ಬರೆಯುತ್ತಿದ್ದ ಕಾಲದಲ್ಲಿ ಗಟ್ಟಿಯಾಗಿದ್ದ ತಿಮ್ಮಪ್ಪ ಪುರುಷರು ಇದು ಉದಯವಾಣಿಯಲ್ಲಿ ಪ್ರಕಟವಾಗುವ ಕಾಲಕ್ಕೆ (೧-೨-೨೦೦೯) ಓದಿ ಒಂದು ಗಟ್ಟಿ ನಗುಬೀರಲು ಉಳಿದಿಲ್ಲ ಎಂದು ವಿಷಾದಿಸುತ್ತೇನೆ.) ದಂತಚೋರ ವೀರಪ್ಪನ್ ಆಳ್ವಿಕೆಯ ಪ್ರಥಮಾರ್ಧ ಯುಗದಲ್ಲಿ ಎಲ್ಲೆಲ್ಲೋ ಗುಂಪುಗಳನ್ನು ದಾಟುವಾಗ ನನಗೆ ಅಶರೀರ ಸಂಬೋಧನೆಗಳು `ವೀರಪ್ಪನ್’ ಎಂದು ಬರುತ್ತಿದ್ದದ್ದು ಸಾಮಾನ್ಯ. ಇದು ತಿಳಿದೋ ತಿಳಿಯದೆಯೋ ವೀರಪ್ಪನ್ ಮೀಸೆ ವರಸೆ ಬದಲಾಯಿಸಿದಾಗ ನನ್ನನ್ನು ಗಮನಿಸುವವರು ಕಡಮೆಯಾದ್ದು ನಿಜಕ್ಕೂ ವಿಷಾದಕರ. ನಮ್ಮ ಮಗ – ಅಭಯನಿಗೆ ಶಾಲೆ ಕಾಲೇಜುಗಳಲ್ಲಿ ನಾಟಕದಲ್ಲಿ ಭಾಗವಹಿಸುವ ಖಯಾಲಿ ಇತ್ತು. ಉದ್ದಕ್ಕೂ ಇವನಿಗೆ ಮೇಕಪ್ ಮಾಡಿದ ಪೀವೀ ಪರಮೇಶ್ ತಪ್ಪದೇ “ನಿನ್ನಪ್ಪನದೇ ಮೀಸೆ” ಇಡುತ್ತಲೇ ಬಂದದ್ದು ನನಗೆ ಸಂದ ಸಮ್ಮಾನವೆಂದೇ ತಿಳಿದಿದ್ದೇನೆ. ಅಭಯನ ಮದುವೆಯ ಸಂದರ್ಭದಲ್ಲಿ ಅವನ ಪ್ರಥಮ ಕಥಾಚಿತ್ರದ ಪ್ರಸಾಧನ ಕಲಾವಿದ ಉಮೇಶ್ರನ್ನು ನಾನು ಮೊದಲ ಬಾರಿಗೆ ನೋಡಿದೆ. ಅವರ ಮೊದಲ ಬೇಡಿಕೆ “ಸ್ಸಾರ್, ಒಂದ್ಸಲಾ ನಾನು ಕಯ್ಯಾರೆ ನಿಮ್ಮೀಸೆನಾ ಹುರಿ ಮಾಡ್ಲಾ!” ಬಹುಶಃ ಈ ಸರಣಿಯ ಅತಿನೂತನ ಸಮ್ಮಾನ ಈ ಚಿತ್ರದ ಸನ್ನಿವೇಶ. `ರುಂಡಕ್ಕೆ ಐವತ್ತು, ಮುಂಡ ಉಚಿತ’ ಆಳ್ವಾಸ್ ನುಡಿಸಿರಿ-೨೦೦೮ರ ದ್ವಾರದಲ್ಲೇ ಕಟ್ಟಿದ್ದ ಬ್ಯಾನರ್ ಕಂಡು ಕೆಲವರಾದರೂ ಭೂಗತಲೋಕದ ಪಾತಕಿಗಳಿಗಿಷ್ಟು ಧೈರ್ಯವೇ, ಸುಪಾರೀ ಇಷ್ಟು ಅಗ್ಗವೇ ಎಂದು ಗಾಬರಿಬಿದ್ದಿರಬಹುದು. ಆದರೆ ಹಲವು ಸಮ್ಮೇಳನ, ಪ್ರದರ್ಶನಾವರಣಗಳಲ್ಲಿ ಹೀಗೇ ಬ್ಯಾನರಿನೊಟ್ಟಿಗೆ ತಾನೇ ಒಂದು ವಿಕಟಚಿತ್ರದಂತೆ ಕಣ್ಣಿಗೆ ಬೀಳುವ ಕಲಾವಿದ ಪ್ರಕಾಶ್ ಶೆಟ್ಟಿಯವರನ್ನು ಪರಿಚಯವಿರುವವರಿಗೆ ಇದು ಇನ್ನೊಂದು ನಗೆಹನಿ! ಪಾದ ಊರಲು ಜಾಗ ಸಿಕ್ಕಿದರೆ ಸಾಕು, ಬಿಳಿ ಹಾಳೆ. ಬರೆಯುವ ಸಾಧನ ಹಿಡಿದು ಯಾರನ್ನೂ ಯಾವುದನ್ನೂ ನಾಲ್ಕು ಗೆರೆಯಲ್ಲಿ ಹಿಡಿದಿಡುವ ತ್ರಿವಿಕ್ರಮ ಈ ಪ್ರಕಾಶ್. ಇಲ್ಲೆಲ್ಲಾ ಶ್ರಮ, ಆದಾಯಕ್ಕೂ ಮಿಕ್ಕು ಗಮನಿಸಬೇಕಾದ ಅಂಶ ತನ್ನ ಸಿದ್ಧಿಯನ್ನು ಜನಪ್ರಿಯಗೊಳಿಸುವ ಪ್ರಯತ್ನ. ಪ್ರಕಾಶ್ ಶೆಟ್ಟಿ ನನಗೆ ಬಹಳ ಹಳೆಯ ಪರಿಚಯ. ಇವರು ಕನ್ನಡದಲ್ಲಿ ಬೆಳೆದರೂ ಮಲಯಾಳೀ ಲೋಕಕ್ಕೆ ನುಗ್ಗಿ, ಪತ್ರಿಕೋದ್ಯಮದಲ್ಲೂ ಸಾಕಷ್ಟು ಪಳಗಿ, ಈಟೀವಿಯಲ್ಲಿ ಬೆಳಗಿ ಈಗ ಸ್ವತಂತ್ರವಾಗಿ ನೆಲೆ ನಿಂತವರು. ಅವರ ಸದ್ಯದ ಉಮೇದು ವ್ಯಂಗ್ಯ ಚಿತ್ರಕ್ಕೇ ಮೀಸಲಾದ ಮಾಸಿಕ – `ವಾರೆಕೋರೆ’ಯ ಪ್ರಕಟಣೆ. (ಅದರ ಪ್ರಥಮ ಈಗ ಮಾರುಕಟ್ಟೆಯಲ್ಲಿದೆ.) ಅದರ ತಯಾರಿ, ಮಾರಾಟ ವ್ಯವಸ್ಥೆಗಳ ಓಡಾಟದಲ್ಲಿ ಪ್ರಕಾಶ್ ನನ್ನಂಗಡಿಗೂ ಬಂದಿದ್ದರು. ಇವರ ಪತ್ರಿಕೆಯ ಪ್ರಚಾರಪತ್ರ/ ಚಂದಾಕ್ಕೆ ಅರ್ಜಿಯೂ ಒಂದು ವಿಕಟ ಶುಭಾಶಯ (೨೦೦೯ಕ್ಕೆ) ಪತ್ರ. ವ್ಯಾವಹಾರಿಕ ಮಾತುಕತೆಯ ಕೊನೆಯಲ್ಲಿ ಒಮ್ಮೆಗೇ ಪ್ರಕಾಶ್ “ಸಾರ್, ನನಗೆ ಬಹಳ ದಿನಗಳ ಆಸೆ. ನಿಮ್ಮದೊಂದು ಕ್ಯಾರಿಕೇಚರ್ ಬಿಡಿಸ್ಲಾ?” ನಾನೇನೂ ಹೇಳುವುದಿರಲಿಲ್ಲ. ನನ್ನಿಂದಲೇ ಒಂದು ಬಿಳಿ ಹಾಳೆ ಕೇಳಿ, ಅವರ ಗ್ರಹಿಕೆಗೆ ಅನುಕೂಲವಾದ ಅಂತರದಲ್ಲಿ ನಿಂತಂತೆಯೇ ಎಡಗೈಯಲ್ಲಿ ಒಂದು ಗಟ್ಟಿ ಪುಸ್ತಕದ ಆಧಾರದಲ್ಲಿ ಹಾಳೆ ಇಟ್ತುಕೊಂಡು ಎರಡೇ ಮಿನಿಟಿನಲ್ಲಿ ಮಾಡಿಕೊಟ್ಟ ಚಿತ್ರ ನೋಡುವಾಗ ಮಹಾಭಾರತ ನೆನಪಾಗದಿರದು! ಭಾರತಾಹವ ವರ್ಣಿಸುವ ದಾರ್ಶನಿಕನಿಗೆ ಅತಿರಥ, ಮಹಾರಥ, ಗಜ, ತುರಗ, ಪದಾತಿಗಳನ್ನೊಳಗೊಂಡ ಹದಿನೆಂಟು ಅಕ್ಷೋಹಿಣಿಯ ಹೋರಾಟ ಕಾಣಲಿಲ್ಲವಂತೆ. ಅಲ್ಲಿ ಮೆರೆದದ್ದು ಚಕ್ರ ಒಂದೇ ಅಂತೆ! ಹಾಗೇ ಈ ಪುಟದುದ್ದಕ್ಕೆ ನಾನು ಕೊರೆದ ಸಂಗತಿಗಳಿಗೆಲ್ಲ ಪುರಸ್ಕಾರವೆಂಬಂತೆ ಪ್ರಕಾಶರು ಮೆರೆಸಿದ್ದು ಶ್ಮಶ್ರುಕೂರ್ಚವನ್ನೇ!
ಮೀಸೆ ಪುರಾಣ ಪ್ರಕಾಶರ ಪ್ರತಿಭೆಯನ್ನು ಹೊರಗೆಳೆಯಿತಲ್ಲ ಮಾರಾಯ್ರೆ, ಅತ್ರಿ ಅಶೋಕರಿಗೆ ಮೀಸೆಯಿಲ್ಲದಿದ್ರೆ ಹೇಗಿರುತ್ತೆ ಅಂತಾನೂ ಶೆಟ್ರೇ ಹೇಳಿದರೆ ನಮಗೆಲ್ಲ ಮಜಾ ಬರುತ್ತೆ!
ಮೀಸೆ ಪುರಾಣ ಚೆನ್ನಾಗಿತ್ತು, ಅಲ್ಲಿ ಬರುವ ಮೀಸೆ ಅಂಕಲ್ ಕಲ್ಪನೆಯಲ್ಲ. ಇವತ್ತು ಬೆಳಗ್ಗೆ “ಗೌತಮ, ಅನೂಷ ಇಬ್ಬರೂ ಹೇಳಿದ್ದು ಮೀಸೆ ಮಾವನ ಲೇಖನ ಬಂದಿದೆ” ಮೀಸೆ ಬಿಟ್ಟದ್ದು ಸಾರ್ಥಕವಾಯಿತು. ಮೀಸೆಗೆಂಥ ಗೊಬ್ಬರ – ಅಷ್ಟು ಹುಲುಸಾಗಿ ಬರಲು ಎಂದು ಕೇಳಿದರೆ ಉತ್ತರ ಏನು? ನಿನ್ನ ಮೀಸೆ ಮಕ್ಕಳನ್ನು ಹೆದರಿಸಿಲ್ಲ ಎನ್ನುವುದಕ್ಕೆ ಅನನ್ಯ, ಶ್ರುತಿ, ಇಳಾ, ಅನಿರುಧ್ಧಾದಿಗಳೇ ಸಾಕ್ಷಿ, ದೊಡ್ಡವರಿಗೆ?
ನಿಮ್ಮ ಶ್ಮಶ್ರುಕೂರ್ಚಾಖ್ಯಾನ ಗಡದ್ದಾಗಿತ್ತು. ಗುಬ್ಬಚ್ಚಿಗಳು ಚಿತ್ರ ನೋಡಿದ ನಂತರ ನನ್ನ ಮಗಳಿಗೆ ಆ ಚಿತ್ರದ ನಿರ್ದೇಶಕ ಅಭಯನನ್ನು ತೋರಿಸಿ, ಆತ ಮಂಗಳೂರಿನ ಮೀಸೆ ಮಾಮನ ಮಗನೆಂದಾಗ ಅವಳು ಅದನೊಪ್ಪಿಕೊಳ್ಳಲು ತಯಾರಿರಲಿಲ್ಲ. ಮೀಸೆಯಿಲ್ಲದ ಆತ ಅಶೋಕ ಮಾಮನ ಮಗನಾಗಲಿಕ್ಕೆ ಸಾದ್ಯವಿಲ್ಲ ಎಂಬುದು ಅವಳ ವಾದ. ಹೇಗೇ ಇರಲಿ, ಗುಜ್ಜಾರರ ಕ್ಯಾರಿಕೇಚರ್ ನಲ್ಲಿ ನಿಮಗಿಂತ ವೀರಪ್ಪನ್ ಛಾಯೆ ದಟ್ಟವಾಗಿದೆ. ಹಾಗಿದೆ ನಿಮ್ಮ ಮೀಶೆ ಸಿಮಿಲ್ಲ್ಯಾರಿಟಿ!
Dear Ashoka VardhanaIts a beautifulpiece of humorous essay on your mustache. This writing also anautobiographical piece on yourself in a very humerous and thoughtprovoking way. It gives a complete picture about you and yourmustache.What I liked about the article is that you have made fun ofyourself, ie something unique. The language written is extremely nice.You have very good command over the language. I rarely find peoplewith knowledge, language and humour combined in writing. I hadobserved this characteristic writing in Tejaswi. I personally feel youhave terrific sense of humour and writing skills. I wonder whether youhave brought these kind of articles and your experiences of your lifein a book format. In case you have not written I urge you to writeone.Regards
ಮೀಸೆ ಮಾಮನ ಪರಿಚಯ ಯಾರಿಗಿಲ್ಲ ಹೇಳಿ? ಅಡ್ಡಹೆಸರಿಟ್ಟರೂ ಬೇಸರಿಸದೇ ಅದನ್ನೇ ಒಂದು ವಿನೋದವಾಗಿಸಿ ಇತರರನ್ನು ನಗಿಸಿದ ಸಾವಿರ ಮಡಿ ಪುಣ್ಯ ನಿಮ್ಮದೇ! ನುಡಿಚಿತ್ರಕ್ಕೆ ತಕ್ಕ ರೇಖಾಚಿತ್ರ! ವಂಡರ್ ಫುಲ್!
Dear Mister Meese ,You have projected me as you projected your meese ! Thanks. Krishna Mohanara commentu chennagide Alvey?
ಪ್ರಿಯ ಅಶೋಕ ನಿಮ್ಮ ಮೀಸೆ ಬರಹ ಮತ್ತು ಬ್ಲೋಗಿನ ಹೊಸ ರೂಪ ಎರಡೂ ಚೆನ್ನಾಗಿದೆ. ಗೋವಾ ಚಿತ್ರೋತ್ಸವದ ಎಲ್ಲ ಬಾಗಗಳೂ ಈಗ ಸರಿಯಾಗಿದೆ.
ಮೀಸೆಗಿಂತಲೂ ತಲೆಬರಹವೇ ಇನ್ನೂ ದೊಡ್ಡ ಊದ್ದವಾಯಿತಲ್ಲ!-
ಹಿಹಿಹಿ, ಮೀಸೆಯಷ್ಟೇ ಚಂದ ಉಂಟು
ಆತ್ಮೀಯರಾದ ಶ್ರೀ ಅಶೋಕವರ್ಧನ ಅವರಿಗೆ ನಮಸ್ಕಾರ.ನಿಮ್ಮ ಲೇಖನ ಚೆನ್ನಾಗಿದೆ. ಇಂತಹ ಅನೇಕ ಪ್ರಸಂಗಗಳನ್ನು ನೀವು ಬರೆಯಬಹುದು. ವಿಶೇಷವೆಂದರೆ ಪತ್ರ ಬರೆಯಲಿ,ಲೇಖನ ಬರೆಯಲಿ, ಪುಸ್ತಕೋದ್ಯಮ ಕುರಿತ ಚಿಂತನೆ ನಡೆಸಲಿ ಎಲ್ಲದರಲ್ಲೂ ನಿಮ್ಮ ಭಾಷೆ ತೀವ್ರ ಹರಿತ (ಮಚ್ಚು, ಲಾಂಗುಗಳಷ್ಟೇ), ನೇರ, ಜತೆಗೆ ಎಷ್ಟು ಬೇಕೋ ಅಷ್ಟೇ. ವೃಥಾ ಕಾಗದದ ಹರಣ ಮಾಡುವ ಅನೇಕರಿಗೆ ನಿಮ್ಮಿಂದ ತರಬೇತಿ ಕೊಡಿಸಬೇಜಿದೆ! ಹಿಂದಿನವರು ಮಾತು ಬೆಳ್ಳಿ ಮೌನ ಬಂಗಾರ ಎನ್ನುತ್ತಿದ್ದರು. ಈಚಿನ ದಿನಗಳಲ್ಲಿ ಮಾತು ಕಬ್ಬಿಣಕ್ಕಿಂತಲೂ ಕಡೆಯಾಗಿದೆಯೇ ಕವಡೆಗೂ ಕಿಮ್ಮತ್ತು ಬಂದಿದೆ ಎಂದು ನಗಾಡುತ್ತೀರೇನೋ! ಅಂದರೆ ಭಾಷೆಯನ್ನು ಹಿತ್ಮಿತವಾಗಿ ಬಳಸಬೇಕೆಂಬ ಸೂಕ್ಷ್ಮತೆಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆಯೇ.ಪ್ರೀತಿ ಗೌರವದೊಂದಿಗೆ
ಪ್ರಿಯ ಅಶೋಕರಿಗೆ, ನಿಮ್ಮ ಮೀಸೆ ಮಲಾಮತ್ತು ಮುದ-ಮಜಾ ರಖಂ ವಿತರಿಸಿತು. ವಿನೋದ ವಿಡಂಬನೆ ಹೀಗೆ ಸೇರಿದರೆ ಆ ಜತಿಯ ಸಾಹಿತ್ಯ ಸ್ವಧರ್ಮ ಪಾಲಿಸುತ್ತದೆ. `ಸುಳ್ಳು ಜಾತಕ ಬರೆಸಿದ ಆರೋಪ', `ಮರದ ಗಂಟು ನೋಡಿ ಪ್ರಾಯ ಅಳೆಯುವ……..', `ಹೆಮ್ಮೆಗೆ ಲಾಂಛನ', `ಪೌರುಷದ ಖಾತೆ', `ಚಂದ್ರಸೇಖರ ಆಜಾದ್ …… ಮೂರ್ತಿ ಮೀಸೆ', ಮಂ.ಸ್ವಾ.ದೊಡ್ಡ ಹೆಸರು ಹೇಳಲಾರೆ' ಇತ್ಯಾದಿ ಶಬ್ದಪರಿಕರಗಳ ಸಾಹಚರ್ಯದಿಂದ ಹರಟೆಯ ಸಂತಾನಕ್ಕೆ ಉತ್ತೀರ್ಣತೆ ಈಗಲೂ ಇದೆ ಅಂತ ಅನಿಸಿತು. ಧ್ವನಿಪೂರಣದಿಂದ ಬರಹ ಮಿಗಿಲಾಯ್ತು.
ಮೀಸೆ ಪುರಾಣ ಚೆನ್ನಾಗಿದೆ! 😉 ಮೊನ್ನೆ ರವಿವಾರದ ಉದಯವಾಣಿಯಲ್ಲಿ ಓದಿದ್ದೆ…..
ashokannaneevu hasya baraha kke olleya lekakara saalige seri bittiralla.vaarekore ge nimma contribution amulya.purushothama bilimale avara prathikriye sogasaagide..nanna blog…harinigallery.blogspot.com nalli nimmannu serisiddene.
ಪ್ರಿಯ ಅಶೊಕವರ್ಧನನಿಮ್ಮ ಮೀಸೆ ಪುರಾಣ ಓದಿದೆ. ಚೆನ್ನಾಗಿದೆ. ಮೀಸೆಯೇ ಪುರುಷಂಗೆ ಭೂಷಣ. ಆದರೆ ನಮ್ಮ ನಾಟಕಗಳಲ್ಲಿ ಕೃಷ್ಣ ಮೀಸೆಯನ್ನು ನುಣ್ಣಗೆ ಬೋಳಿಸಿರುತ್ತಾನೆ. ಬೇಸರಿಸಬೇಕಾಗಿಲ್ಲ. ಕುಮಾರವ್ಯಾಸ ಚಿತ್ರಿಸಿರುವಂತೆ ಕೃಷ್ಣನಿಗೆ ಮೀಸೆಗಳಿವೆ! ನಾನೂ ಕೃಷ್ಣಪಕ್ಷದವನೇ ಎಂದು ನೀವು ಹೆಮ್ಮೆಪಡಬಹುದು ಈಗ!
ಸನ್ಮಿತ್ರರೇ,ಸ್ವಾರಸ್ಯವಾಗಿದೆ. ಶೀರ್ಷಿಕೆಯೆ `ಭಯಂಕರ'! ನಿಮ್ಮ ಶ್ಮಶ್ರುಗರ್ಭಿತ ಹಾಸ್ಯಪ್ರಜ್ಞೆ ಪ್ರಶಂಸನೀಯ. ಇಂಥ ಮಾರ್ಮಿಕ ಬರಹಗಳು ನಿಮ್ಮ ಲಿಕ್ಕಣಿಕೆಯಿಂದ ಹಳಷ್ಟು ಮೂಡಿಬರಲಿ.
mangalooru meesege jai ho…jai ho…jai ho…
ಸ್ವಾಮೀ ಮೀಸೆ ವರ್ಧನರೇ!ನಿಮ್ಮ ಬ್ಲಾಗ್ ಇಂದು ಓದಿದೆ. ಇಲ್ಲದಿದ್ದರೆ ಜನ್ಮ ಜಾಲಾಡಿದ್ದರೂ ತಮ್ಮ ಮೀಸೆಯ ಲಿಂಕ್ ಈ ಗಮಾರನಿಗೆ ಸಿಗುತ್ತಾ ಇರಲಿಲ್ಲ!ಜನ ಸಂಪರ್ಕದಲ್ಲಿ ಮಂಗಳೂರಲ್ಲಿ ಮೆರೆಯುತ್ತಿರುವ ತಮಗೆ ಈ ಕಾಡಿನ ಕೇಸರಿಯ ಅಭಿನಂದನೆಗಳು.ತಮ್ಮ ಮೀಸೆಗೇ ಜಯ ಡಿಕ್ಲೇರ್ ಮಾಡಿದ್ದೇನೆ.ತಮ್ಮ ಪಟ ಎಂದಾರರೂ ಕಳಿಸಿ ಪರವಾಗಿಲ್ಲ. ಅದು ವರೆಗೆ …. ಶೆಟ್ಟರು ಬರೆದ ಚಿತ್ರವೇ ಸಾಕು!ಸೆಲ್ ಫೋನಿನಿಂದ ಗಣಕಕ್ಕೆ ಪಟ ಸಾಗ ಹಾಕಲು ತಿಳಿಯದ ಗಮಾರ ನಾನು. ನನ್ನ ಸ್ವ- ಪಟವನ್ನು ನನ್ನ ಇಮೈಲ್ ವಿಳಾಸಕ್ಕೆ ಎಮ್ ಎಮ್ ಎಸ್ ಮಾಡಿ. ಅಲ್ಲಿಂದ ಅದನ್ನು ತಮಗೆ ರವಾನೆ ಮಾಡಿದೆ.ನೀಡ್ ಇಸ್ ದ ಮದರ್ ಆಫ್ ಇನ್ವೆನ್ಶನ್!ಬೇರೆ ಚಿತ್ರ ರವಾನಾ ವಿಧಾನಗಳಿಗೆ, ನನ್ನ ಮಗಳು ರಚನಾಳು ಸಹಾಯ ಮಾಡಿದರೆ ಮಾತ್ರ ನಾನು ಸರದಾರ.ಸರೋಜಮ್ಮ ಬಹು ಚಿಕ್ಕ ಮಗು ಆಗಿದ್ದಾಗ ನನ್ನ ಗಂಡ “ದೊಡ್ಡ ಮೀಸೆಯ” ಮನುಷ್ಯ ಅಂತ ಜಂಬ ಕೊಚ್ಚುತ್ತಿದ್ದಳಂತೆ! ಹಾಗೆಯೇ ದೊಡ್ಡ ಮೀಸೆಯವನನ್ನು ನೋಡಿ ಮದುವೆ ಆದಳು! ಅವಳಿಗೆ ನನ್ನ ಮುಖ ಗಮನಕ್ಕೇ ಬರಲೇ ಇಲ್ಲ! ಹಾಗಾಗಿ, ನನ್ನ ಮೀಸೆಗೆ ಮುಂದಕ್ಕೂ ಆಕೆ ಜೀವದಾನ ಇತ್ತಳು.ಮತ್ತೆ ಏನೂ ನನ್ನ ಮೀಸೆಗೆ ಹೆಗ್ಗಳಿಕೆ ಇಲ್ಲ. ನನ್ನನ್ನು ಬಹಳ ಜನ ಕೂರ್ಗಿ ಪ್ಲಾಂಟರ್ ಅಂತ ತಿಳಿದಿದ್ದಾರೆ! ಈ ಹೆಸರಿನ ಎರಡನೇ ಭಾಗ ಮಾತ್ರ ಸತ್ಯ.ನಾನು ಈಗ ಒಂದು ಡಜನ್ ಮಕ್ಕಳಿಗೆ ಮೀಸೆ ಅಜ್ಜ ಆಗಿದ್ದೇನೆ. ನಾನು ನಮ್ಮಲ್ಲಿಯ ಕಡೆಕಂಜಿ ಆದ್ದರಿಂದ ಇದು ಸಾಧ್ಯ ಆಗಿದೆ.ಮಗಳು ರಾಧಿಕಾ ಇನ್ನೂ ನನಗೆ ಮೊಮ್ಮಗು ತೋರಿಸುವ ಹುನ್ನಾರದಲ್ಲಿ ಇಲ್ಲ!ಏನೇ ಆಗಲಿ ಮೀಸೆ ನನ್ನ ಟ್ರೆಡ್ ಮಾರ್ಕ್.ನನ್ನ ತಾಯಿ ಸತ್ತಾಗ ಒಮ್ಮೆ ಮೀಸೆ ಬೋಳಿಸಿದ್ದೆ. ನನ್ನ ಹೆಂಡತಿ ” ಥೂ ನಿಮ್ಮ ಮುಖ ನೋಡಲು ಆಗುತ್ತಾ ಇಲ್ಲ ” ಅಂತ ಸತ್ಯವನ್ನೇ ನುಡಿದಿದ್ದಳು! ತೋಟದ ಸದೆಯ ತರಹ ಪುನಹಾ ಮೀಸೆ ಬೆಳೆದು ಬಂತು! ಆ ಮೇಲೆ ಅದು ಮುಖದ ಮೇಲೆ “ಕಳೆ” ಆಗಿ ಉಳಿದಿದೆ.ಇಂತೀ ಹುಲಿ ಮೀಸೆ ಕೇಸರಿ
ಮೀಸೆ ನನಗಿಷ್ಟವಲ್ಲದಿದ್ದರೂ ಮೀಸೆ ಪುರಾಣ ರಂಜಿಸಿತು. ಪ್ರತಿಕ್ರಿಯೆಗಳೂ ಕೂಡಾ . ನನ್ನ ತುಷಾರ್,ಗೆ ಒಂಬತ್ತನೇ ತರಗತಿಯಲ್ಲೇ ಗಡ್ಡ ಮೀಸೆ ಬೆಳೆದು , ಟೀಚರ್ ಒಬ್ಬರು, ಹದಿಮೂರೆಂದು ಸುಳ್ಳು ಹೇಳುತ್ತಿರುವೆ, ಹದಿನೈದಾದರೂ ಆಗಿರ ಬೇಕು , ಅಂದಿದ್ದರು . ಬೆಳೆದಂತೆ ಅವನು ಐನ್ ಸ್ಟೀನ್ , ಡಾರ್ವಿನ್ ನೇ ಆದ. ನೋಡಲೂ , ನಿಜವಾಗಿಯೂ ಬುದ್ಧಿಜೀವಿ . ಎಂದಾದರೂ ಗಡ್ಡ ಶೇವ್ ಮಾಡಿದಾಗ ತುಂಬಾ ಚಂದ ಕಾಣುತ್ತಾನೆಂದು ರಿಮಾರ್ಕ್ ಆದ ಮೇಲೆ ಮತ್ತೆಂದೂ ಬೋಳಿಸ ಹೋಗಲಿಲ್ಲ.
navu keluva modale meese story thilisiddakke kushi,samadhana,manaranjane ella sikkide….meese nimma trade mark…
Meeseya hirime helidiri samasye galu irabekalla !?
ನಿಮ್ಮ ಲೇಖನಕ್ಕೆ ಇನ್ನೊಂದಿಷ್ಟು ಹಾಳೆ ಕೊಟ್ಟು ಹರಿಯ ಬಿಟ್ಟರೆ ಕನ್ನಡಿಗ ಓದುಗರಿಗೆ ಭೂರಿ ಭೋಜನವಾದೀತು. ಬಿಸ್ಲೆ ಘಾಟಿನ ಕಪ್ಪೆ, ಕುದುರೆಮುಖದ ಸೈಕಲ್ ಸವಾರಿ, ಈಗಿನ ಮೀಸೆ ಪುರಾಣ- ನಿಮ್ಮ ಬತ್ತಳಿಕೆಯಲ್ಲಿನ ಬಹಳಷ್ಟು ವಿಶಿಷ್ಟ ವಿಚಾರಗಳು ಬೇರೆಯವರಿಂದ ಬರೆಯಲಾದು.
ನಿಮ್ಮ ಸೊಗಸಾದ ಲೇಖನವನ್ನೋದಿ ನನ್ನ ಕಂಬಳಿ ಮೀಸೆಯೊಳಗೇ ಮನಸಾರೆ ನಕ್ಕು ಬಿಟ್ಟೆ!!