ವಿಶೇಷ ಸೂಚನೆ: ಇದು ಹೆಂಗಸರಿಗಲ್ಲ!

ಮೀಸೆ ಬರುವ ಮೊದಲು ಹೆಚ್ಚಿನ ಹುಡುಗರು ಕದ್ದುಮುಚ್ಚಿ ಅಪ್ಪನ ರೇಜರ್ ಮುಖದ ಮೇಲಾಡಿಸಿಕೊಂಡದ್ದಿರಬಹುದು. ಆದರೆ ಒಮ್ಮೆ ಬರತೊಡಗಿದ ಮೇಲೆ? ನನ್ನ ಅಜ್ಜ (ಮಾತಾಮಹ) ನಾನು ಎಳೆಮೀಸೆ ಬಿಟ್ಟಾಗ “ನಮ್ಮ ಕುಟುಂಬದಲ್ಲಿ ಯಾರೂ ಮೀಸೆ ಬಿಟ್ಟವರಲ್ಲ, ತೆಗೆದುಬಿಡು” ಎನ್ನುತ್ತಿದ್ದರು. ಇಂಗ್ಲಿಷ್ ಸ್ನಾತಕೋತ್ತರ ಪರೀಕ್ಷೆಯ ಅಂತಿಮ ವಿಧಿ `ಮುಖಾಮುಖಿ’ಯಲ್ಲಿ ನನಗೆ ಪರೀಕ್ಷೆ ಕೊಟ್ಟ ಮೂವರಲ್ಲಿ (ವಿಭಾಗ ಮುಖ್ಯಸ್ಥ ಸಿ.ಡಿ. ನರಸಿಂಹಯ್ಯ ಮತ್ತು ಎಚ್.ಎಚ್.ಅಣ್ಣೇ ಗೌಡರ ಜತೆಗೆ) ನನಗೆ ಸ್ನಾತಕ ತರಗತಿಗಳಲ್ಲೂ ಪಾಠ ಮಾಡಿದ್ದ ಸಿ.ಡಿ. ಗೋವಿಂದ ರಾವ್, ದಪ್ಪ ಚಾಳೀಸಿನ ಎಡೆಯಲ್ಲೂ ತುಂಟ ಕಣ್ಣು ಪಿಳುಕಿಸಿ “ಪೀಜೀಯಲ್ಲಿದ್ದುಕೊಂಡೂ ಹೀಗೆ ಮೀಸೆ ಉಳಿಸಿಕೊಂಡಿದ್ಯಲ್ಲಾ” ಎಂದು ಉದ್ಗರಿಸಿದ್ದರು. ನನಗೆ ಮದುವೆ ಆದ ಮೇಲೆ (ಪುಸ್ತಕೋದ್ಯಮದಲ್ಲಿ) ಪಿತೃಸಮಾನರಾದ ಡೀವೀಕೆ ಮೂರ್ತಿಯವರು “ಇನ್ನೇನು, ಮದುವೆಯಾಯ್ತಲ್ಲಾ. ಮೀಸೆ ತೆಗೆಸಿಬಿಡಿ, ಚೆನ್ನಾಗಿರಲ್ಲ” ಎಂದು ಬಹುಕಾಲ ಮಡುಗಟ್ಟಿದ್ದ ಏಕೈಕ ಅಸಮಾಧಾನದ ಕಟ್ಟೆಯೊಡೆದಿದ್ದರು.

ಚಿಕ್ಕಮ್ಮ ಸೀತೆ, ನಾನು ಮದುವೆಯ ಹೊಸತರಲ್ಲಿ ತೆಗೆಸಿದ ಜೋಡಿಯ ಫೋಟೋ ನೋಡಿಕೊಂಡು ಈಗಲೂ “ಪಾಪ ದೇವಕಿ” ಎಂದು ಕನಿಕರಿಸುವುದು ನನ್ನ ಮೀಸೆ ಕಾರಣಕ್ಕೇ! ಅಣ್ಣನೆನಿಸಿಕೊಳ್ಳುವ ಕಾಲಕ್ಕೇ Uncle ಆಗಿ (ಮೀಸೆಮಾಮ), ಪ್ರೌಢತನ ಗುರುತಿಸಬೇಕಾದ ಕಾಲಕ್ಕೆ ಮುದಿಯನಾಗಿ (ಮೀಸೆಯಜ್ಜ) ಬೇರೆಯವರ ಕಣ್ಣಲ್ಲಿ ಸೋತದ್ದೂ ಉಂಟು. ವಾಸ್ತವವಾಗಿ ನನಗೆ ಹುಡುಗಿ ನೋಡುತ್ತಿದ್ದ ಕಾಲಕ್ಕೆ ಕೃಷಿಕ ಕಪಿಯೊಬ್ಬರು ನನ್ನ ಮೀಸೆಯ ಬಲದಲ್ಲಿ ಪ್ರಾಯ ಹೆಚ್ಚೆಂದೇ ಗ್ರಹಿಸಿ `ಸುಳ್ಳು ಜಾತಕ ಬರೆಸಿದ’ ಆರೋಪವನ್ನೇ ಮಾಡಿದ್ದರು! ಬಹುಶಃ ಮರದ ಗಂಟು ನೋಡಿ ಪ್ರಾಯ ಅಳೆವ ಅವರ ಅನುಭವವನ್ನು ನನ್ನ ಮೀಸೆಗೆ ವಿಸ್ತರಿಸಿರಬೇಕು. ಕ್ಷೌರಕ್ಕೆ ಹೋದಲ್ಲಿ ಭಂಡಾರಿಗೆ ನನ್ನ ತುಟಿಯ ಮೇಲಿನ ಪೊದೆಯನ್ನು ಟ್ರಿಂ ಮಾಡುವ ಉತ್ಸಾಹ. ಮತ್ತೆ ಮಗನ ಮದುವೆ ಕಾಲಕ್ಕೆ ದೇಹಕ್ಕೆ ಐವತ್ತಾರಾದರೂ ಸುಮಾರು ಮೂವತ್ತರ ಹರಯದಲ್ಲಿರುವ ಮೀಸೆಗಾದರೂ ಕರಿಮೆತ್ತಲು ಪುಕ್ಕಟೆ ಸಲಹೆ ಕೊಟ್ಟವರು ಧಾರಾಳ. ಮೀಸೆಯ (-ನ್ನು ಹೊತ್ತ ನನ್ನ) ದರ್ಶನ ಮಾತ್ರದಿಂದ ಹೆದರಿ ಅಳುತ್ತಿದ್ದ, ಅಳುತ್ತಿದ್ದವು ಗಪ್‌ಚುಪ್ಪಾದ, ಅಪೂರ್ವಕ್ಕೆ ಕೈಹಾಕಿ ಕಿತ್ತು ಕೀಟಲೆ ಮಾಡುತ್ತಿದ್ದ ಪೋಕರಿಗಳೆಲ್ಲವನ್ನೂ ಸಮಭಾವದಲ್ಲಿ ತೆಗೆದುಕೊಂಡು ನಾನು ಮೀಸೆ ಉಳಿಸಿಕೊಂಡೇ ಇದ್ದೇನೆ!

ನನ್ನ ಬಾಲ್ಯದ ಮಡಿಕೇರಿಯಲ್ಲಿ ಹುಲಿಮೀಸೆ ಅಥವಾ ಹುರಿಮೀಸೆಯವರು ಹೆಚ್ಚು. ಐದನೇ ಕ್ಲಾಸಿನವರೆಗಷ್ಟೇ ನಾನು ಕೊಡಗಿನಲ್ಲಿದ್ದರೂ ಇಂದಿಗೂ ನಾನು ಕೊಡಗಿನವ ಎಂದುಕೊಳ್ಳುವಲ್ಲಿರುವ ಹೆಮ್ಮೆಗೆ ಲಾಂಛನ ನನ್ನ ಮೀಸೆ. ನನ್ನ ಚಿಕ್ಕಪ್ಪ ಮೂರ್ತಿ ಬ್ಯಾಂಕ್ ಸೇರಿದ ಹೊಸತು. ಅವರು ಬೆಂಗಳೂರಿನಲ್ಲಿ ವಾಸಕ್ಕಿದ್ದ ಹಾಸ್ಟೆಲ್ ಬಾಲ್ಕನಿಯಲ್ಲಿ ಸಹಜವಾಗಿ ಮೀಸೆ ಹುರಿಮಾಡುತ್ತಿದ್ದಾಗ ಊರ ಪುಡಿ ರೌಡಿಯೊಬ್ಬ ಕಂಡು, ತನಗೆಸೆದ ಸವಾಲು ಎಂದು ತಪ್ಪು ತಿಳಿದು, ಮೇಲೆ ಬೀಳಲು ಹೋಗಿ ಸೋತ ಕಥೆ ನನ್ನ ಪೌರುಷದ ಖಾತೆಯಲ್ಲಿ ಜಮೆಯಾಗಿತ್ತು. ಮತ್ತೆ ಮುಂದೆಂದೋ ಮೀಸೆ ಹುರಿಮಾಡುವ ಚಂದ್ರಶೇಖರ ಆಜಾದ್ ಚಿತ್ರ ನೋಡಿದಾಗಲೂ ನನ್ನ ಮನಃ ಪಟಲದಲ್ಲಿ ಮೂರ್ತಿ ಮೀಸೆ ತಿರುಪುವ ಚಿತ್ರವೇ ಅಚ್ಚಳಿಯದುಳಿಯಲು ಆ ಕಥೆಯ ಪ್ರಭಾವ ಕಾರಣವಿರಬೇಕು. ನಾನಿನ್ನೂ ಮಂಗಳೂರಿನಲ್ಲಿ ಪುಸ್ತಕದಂಗಡಿ ತೆರೆಯಲು ಮಳಿಗೆ ಹುಡುಕುತ್ತಾ ಕೆಲವು ಸಾಂಸ್ಥಿಕ ವ್ಯಾಪಾರ ಮಾಡುತ್ತಿದ್ದ ಕಾಲ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಕೇವಲ ನನ್ನ ಪಟ್ಟಿ ನೋಡಿ, ನಾರಾಯಣರಾಯರ ಮಗನೆಂದು ವಿಶೇಷವಾಗಿ ಗುರುತಿಸಿ ನನಗೆ ಭಾರೀ ಪುಸ್ತಕ ಆದೇಶ ಕೊಟ್ಟಿದ್ದರು. ಐದಾರು ದೊಡ್ಡ ರಟ್ಟಿನ ಪೆಟ್ಟಿಗೆಯಲ್ಲಿ ಅವನ್ನು ತುಂಬಿ, ಬಸ್ಸಿನ ಟಾಪಿಗೇರಿಸಿ ನಾನು ಧರ್ಮಸ್ಥಳಕ್ಕೆ ಹೊರಟಿದ್ದೆ. ಚಾರ್ಮಾಡಿ ಘಾಟಿಯಲ್ಲಿ ಒಮ್ಮೆಗೇ ಮಳೆಯ ಲಕ್ಷಣಗಳು ದಟ್ಟವಾಯ್ತು. `ಇಂವ ನಮ್ಮವ’ ಎಂದು ಗುರುತಿಸಿಟ್ಟುಕೊಂಡಿದ್ದ ನನಗೆ ತೀರಾ ಅಪರಿಚಿತ ಬಸ್‌ಚಾಲಕ, ಕೊಡವ, ಒಮ್ಮೆಗೇ ಬಸ್ಸು ನಿಲ್ಲಿಸಿದ. ನನಗೆ ಟಾಪಿಗೇರಲು ಹೇಳಿ, ತನ್ನ ಬಾಗಿಲಿನಲ್ಲಿ ಅಷ್ಟೂ ಪುಸ್ತಕದ ಕಟ್ಟುಗಳನ್ನು ಒಳಗಿಳಿಸಿಕೊಂಡದ್ದಕ್ಕೆ ಮಂಜುನಾಥ ಸ್ವಾಮಿಯ ದೊಡ್ಡ ಹೆಸರು ಹೇಳಲಾರೆ, ಯಃಕಶ್ಚಿತ್ ಮೀಸೆಯ ವಿಜಯ ಎನ್ನಲೇಬೇಕು. ಸಾಮಾನ್ಯ ಹೆಂಗಸರನ್ನು, ವಿಶಿಷ್ಟ ಚಹರೆಯಿಲ್ಲದ ಗಂಡಸರನ್ನು ಗುರುತಿಟ್ಟುಕೊಳ್ಳುವುದು ಬಲು ಕಷ್ಟ. ನನ್ನ ಮದುವೆಗೆ ಮೊದಲ ದಿನಗಳಲ್ಲಿ ಇಲ್ಲಿ ನನಗೆ ಖಾಯಂ ಜೊತೆ ಕೊಡುತ್ತಿದ್ದ ಇನ್ನಿಬ್ಬರು ಮಿತ್ರರು ಬೇರೊಂದು ರೀತಿಯಲ್ಲಿ ವಿಶಿಷ್ಟರೇ. ನಾವು ಭೇಟಿ ಕೊಡುತ್ತಿದ್ದ ರಾತ್ರಿಯೂಟದ ಹೋಟೆಲ್ (ವುಡ್ ಸೈಡ್) ಮಾಣಿಯೊಬ್ಬ ನಮ್ಮನ್ನು ಸುಲಭ ಸಂಕೇತಗಳಲ್ಲಿ ಗುರುತಿಟ್ಟದ್ದು ಈಗ ನೆನಪಾಗುತ್ತದೆ. ಶಿವರಾಮ ಕಾರಂತರ ಊರಿನವರೂ ಅವರ ಪ್ರಭಾವಕ್ಕೂ ಒಳಗಾದವರು ರಾಘವೇಂದ್ರ ಉರಾಳ. ಇವರ ಕೇಶವಿನ್ಯಾಸವೂ ಕಾರಂತರದೇ; ಮಾಣಿ ಎರಡೂ ತೆರೆದ ಹಸ್ತವನ್ನು ನೆತ್ತಿಯ ಮೇಲೆ ತಂದು ಭುಜದವರೆಗೂ ನೇವರಿಸಿ ತೋರುತ್ತಿದ್ದ. ಮೈಸೂರಿನ ಪಂಡಿತಾರಾಧ್ಯ ಎಷ್ಟರ ಮಟ್ಟಿಗೆ ಅಹಿಂಸಾವಾದಿಯೆಂದರೆ ಸ್ವಂತ ಗಡ್ಡ, ಮೀಸೆಗಳಿಗೂ ಬ್ಲೇಡು ಬಿಡಿ, ಕತ್ತರಿಯನ್ನು ಪಕ್ಷಕ್ಕೊಮ್ಮೆಯೋ ಮಾಸಕ್ಕೊಮ್ಮೆಯೋ ಮಾತ್ರ ತೋರಿಸುತ್ತಿದ್ದರು. ಇವರನ್ನು ಮಾಣಿ ಮತ್ತೆ ತೆರೆದ ಹಸ್ತಗಳಿಂದ ಎರಡು ಕಪೋಲಗಳನ್ನು ಸವರಿಸೂಚಿಸುತ್ತಿದ್ದ. ನನ್ನನ್ನು ಗುರುತಿಸುವುದು ಅತಿ ಸರಳ – ಯಾವುದೋ ಒಂದು ಕೆನ್ನೆಯ ಎದುರು ಎರಡು ಬೆರಳನ್ನು ತಿರುವಿದರೆ ಸಾಕು.

ಧಡಿಯ, ಕರಿಯ, ಕುಂಟ (ಕುಳ್ಳ ಎಂಬ ಅರ್ಥದಲ್ಲಿ) ಇತ್ಯಾದಿ ವಿಶೇಷಣಗಳೇನಿದ್ದರೂ ತೀರಾ ಆತ್ಮೀಯ ವೃತ್ತದ ಹೊರಗೆ ಯಾರೂ ಎದುರಿನಿಂದ, ಸಾರ್ವಜನಿಕವಾಗಿ ಬಳಸಲಾರರು. ಉದಯವಾಣಿಯ ಏಕೈಕ ಪುರುಷನೆಂದೇ ನಾನು ತಮಾಷೆ ಮಾಡುತ್ತಿದ್ದ ತಿಮ್ಮಪ್ಪ ಪುರುಷ, ನನಗೆ ಫೋನು ಮಾಡಿದಷ್ಟೂ ದಿನ ಸಂಬೋಧಿಸುತ್ತಿದ್ದದ್ದು “ಹಾಂ ಮೀಶೆಯವರೇ”. (ಈ ಲೇಖನ ಬರೆಯುತ್ತಿದ್ದ ಕಾಲದಲ್ಲಿ ಗಟ್ಟಿಯಾಗಿದ್ದ ತಿಮ್ಮಪ್ಪ ಪುರುಷರು ಇದು ಉದಯವಾಣಿಯಲ್ಲಿ ಪ್ರಕಟವಾಗುವ ಕಾಲಕ್ಕೆ (೧-೨-೨೦೦೯) ಓದಿ ಒಂದು ಗಟ್ಟಿ ನಗುಬೀರಲು ಉಳಿದಿಲ್ಲ ಎಂದು ವಿಷಾದಿಸುತ್ತೇನೆ.) ದಂತಚೋರ ವೀರಪ್ಪನ್ ಆಳ್ವಿಕೆಯ ಪ್ರಥಮಾರ್ಧ ಯುಗದಲ್ಲಿ ಎಲ್ಲೆಲ್ಲೋ ಗುಂಪುಗಳನ್ನು ದಾಟುವಾಗ ನನಗೆ ಅಶರೀರ ಸಂಬೋಧನೆಗಳು `ವೀರಪ್ಪನ್’ ಎಂದು ಬರುತ್ತಿದ್ದದ್ದು ಸಾಮಾನ್ಯ. ಇದು ತಿಳಿದೋ ತಿಳಿಯದೆಯೋ ವೀರಪ್ಪನ್ ಮೀಸೆ ವರಸೆ ಬದಲಾಯಿಸಿದಾಗ ನನ್ನನ್ನು ಗಮನಿಸುವವರು ಕಡಮೆಯಾದ್ದು ನಿಜಕ್ಕೂ ವಿಷಾದಕರ. ನಮ್ಮ ಮಗ – ಅಭಯನಿಗೆ ಶಾಲೆ ಕಾಲೇಜುಗಳಲ್ಲಿ ನಾಟಕದಲ್ಲಿ ಭಾಗವಹಿಸುವ ಖಯಾಲಿ ಇತ್ತು. ಉದ್ದಕ್ಕೂ ಇವನಿಗೆ ಮೇಕಪ್ ಮಾಡಿದ ಪೀವೀ ಪರಮೇಶ್ ತಪ್ಪದೇ “ನಿನ್ನಪ್ಪನದೇ ಮೀಸೆ” ಇಡುತ್ತಲೇ ಬಂದದ್ದು ನನಗೆ ಸಂದ ಸಮ್ಮಾನವೆಂದೇ ತಿಳಿದಿದ್ದೇನೆ. ಅಭಯನ ಮದುವೆಯ ಸಂದರ್ಭದಲ್ಲಿ ಅವನ ಪ್ರಥಮ ಕಥಾಚಿತ್ರದ ಪ್ರಸಾಧನ ಕಲಾವಿದ ಉಮೇಶ್‌ರನ್ನು ನಾನು ಮೊದಲ ಬಾರಿಗೆ ನೋಡಿದೆ. ಅವರ ಮೊದಲ ಬೇಡಿಕೆ “ಸ್ಸಾರ್, ಒಂದ್ಸಲಾ ನಾನು ಕಯ್ಯಾರೆ ನಿಮ್ಮೀಸೆನಾ ಹುರಿ ಮಾಡ್ಲಾ!” ಬಹುಶಃ ಈ ಸರಣಿಯ ಅತಿನೂತನ ಸಮ್ಮಾನ ಈ ಚಿತ್ರದ ಸನ್ನಿವೇಶ. `ರುಂಡಕ್ಕೆ ಐವತ್ತು, ಮುಂಡ ಉಚಿತ’ ಆಳ್ವಾಸ್ ನುಡಿಸಿರಿ-೨೦೦೮ರ ದ್ವಾರದಲ್ಲೇ ಕಟ್ಟಿದ್ದ ಬ್ಯಾನರ್ ಕಂಡು ಕೆಲವರಾದರೂ ಭೂಗತಲೋಕದ ಪಾತಕಿಗಳಿಗಿಷ್ಟು ಧೈರ್ಯವೇ, ಸುಪಾರೀ ಇಷ್ಟು ಅಗ್ಗವೇ ಎಂದು ಗಾಬರಿಬಿದ್ದಿರಬಹುದು. ಆದರೆ ಹಲವು ಸಮ್ಮೇಳನ, ಪ್ರದರ್ಶನಾವರಣಗಳಲ್ಲಿ ಹೀಗೇ ಬ್ಯಾನರಿನೊಟ್ಟಿಗೆ ತಾನೇ ಒಂದು ವಿಕಟಚಿತ್ರದಂತೆ ಕಣ್ಣಿಗೆ ಬೀಳುವ ಕಲಾವಿದ ಪ್ರಕಾಶ್ ಶೆಟ್ಟಿಯವರನ್ನು ಪರಿಚಯವಿರುವವರಿಗೆ ಇದು ಇನ್ನೊಂದು ನಗೆಹನಿ! ಪಾದ ಊರಲು ಜಾಗ ಸಿಕ್ಕಿದರೆ ಸಾಕು, ಬಿಳಿ ಹಾಳೆ. ಬರೆಯುವ ಸಾಧನ ಹಿಡಿದು ಯಾರನ್ನೂ ಯಾವುದನ್ನೂ ನಾಲ್ಕು ಗೆರೆಯಲ್ಲಿ ಹಿಡಿದಿಡುವ ತ್ರಿವಿಕ್ರಮ ಈ ಪ್ರಕಾಶ್. ಇಲ್ಲೆಲ್ಲಾ ಶ್ರಮ, ಆದಾಯಕ್ಕೂ ಮಿಕ್ಕು ಗಮನಿಸಬೇಕಾದ ಅಂಶ ತನ್ನ ಸಿದ್ಧಿಯನ್ನು ಜನಪ್ರಿಯಗೊಳಿಸುವ ಪ್ರಯತ್ನ. ಪ್ರಕಾಶ್ ಶೆಟ್ಟಿ ನನಗೆ ಬಹಳ ಹಳೆಯ ಪರಿಚಯ. ಇವರು ಕನ್ನಡದಲ್ಲಿ ಬೆಳೆದರೂ ಮಲಯಾಳೀ ಲೋಕಕ್ಕೆ ನುಗ್ಗಿ, ಪತ್ರಿಕೋದ್ಯಮದಲ್ಲೂ ಸಾಕಷ್ಟು ಪಳಗಿ, ಈಟೀವಿಯಲ್ಲಿ ಬೆಳಗಿ ಈಗ ಸ್ವತಂತ್ರವಾಗಿ ನೆಲೆ ನಿಂತವರು. ಅವರ ಸದ್ಯದ ಉಮೇದು ವ್ಯಂಗ್ಯ ಚಿತ್ರಕ್ಕೇ ಮೀಸಲಾದ ಮಾಸಿಕ – `ವಾರೆಕೋರೆ’ಯ ಪ್ರಕಟಣೆ. (ಅದರ ಪ್ರಥಮ ಈಗ ಮಾರುಕಟ್ಟೆಯಲ್ಲಿದೆ.) ಅದರ ತಯಾರಿ, ಮಾರಾಟ ವ್ಯವಸ್ಥೆಗಳ ಓಡಾಟದಲ್ಲಿ ಪ್ರಕಾಶ್ ನನ್ನಂಗಡಿಗೂ ಬಂದಿದ್ದರು. ಇವರ ಪತ್ರಿಕೆಯ ಪ್ರಚಾರಪತ್ರ/ ಚಂದಾಕ್ಕೆ ಅರ್ಜಿಯೂ ಒಂದು ವಿಕಟ ಶುಭಾಶಯ (೨೦೦೯ಕ್ಕೆ) ಪತ್ರ. ವ್ಯಾವಹಾರಿಕ ಮಾತುಕತೆಯ ಕೊನೆಯಲ್ಲಿ ಒಮ್ಮೆಗೇ ಪ್ರಕಾಶ್ “ಸಾರ್, ನನಗೆ ಬಹಳ ದಿನಗಳ ಆಸೆ. ನಿಮ್ಮದೊಂದು ಕ್ಯಾರಿಕೇಚರ್ ಬಿಡಿಸ್ಲಾ?” ನಾನೇನೂ ಹೇಳುವುದಿರಲಿಲ್ಲ. ನನ್ನಿಂದಲೇ ಒಂದು ಬಿಳಿ ಹಾಳೆ ಕೇಳಿ, ಅವರ ಗ್ರಹಿಕೆಗೆ ಅನುಕೂಲವಾದ ಅಂತರದಲ್ಲಿ ನಿಂತಂತೆಯೇ ಎಡಗೈಯಲ್ಲಿ ಒಂದು ಗಟ್ಟಿ ಪುಸ್ತಕದ ಆಧಾರದಲ್ಲಿ ಹಾಳೆ ಇಟ್ತುಕೊಂಡು ಎರಡೇ ಮಿನಿಟಿನಲ್ಲಿ ಮಾಡಿಕೊಟ್ಟ ಚಿತ್ರ ನೋಡುವಾಗ ಮಹಾಭಾರತ ನೆನಪಾಗದಿರದು! ಭಾರತಾಹವ ವರ್ಣಿಸುವ ದಾರ್ಶನಿಕನಿಗೆ ಅತಿರಥ, ಮಹಾರಥ, ಗಜ, ತುರಗ, ಪದಾತಿಗಳನ್ನೊಳಗೊಂಡ ಹದಿನೆಂಟು ಅಕ್ಷೋಹಿಣಿಯ ಹೋರಾಟ ಕಾಣಲಿಲ್ಲವಂತೆ. ಅಲ್ಲಿ ಮೆರೆದದ್ದು ಚಕ್ರ ಒಂದೇ ಅಂತೆ! ಹಾಗೇ ಈ ಪುಟದುದ್ದಕ್ಕೆ ನಾನು ಕೊರೆದ ಸಂಗತಿಗಳಿಗೆಲ್ಲ ಪುರಸ್ಕಾರವೆಂಬಂತೆ ಪ್ರಕಾಶರು ಮೆರೆಸಿದ್ದು ಶ್ಮಶ್ರುಕೂರ್ಚವನ್ನೇ!