ಎಪ್ಪತ್ತನೇ ದಶಕದ ಕೊನೆಯ ಭಾಗ ಹೀಗೇ ಒಂದು ದಿನ ಮುಚ್ಚೂರು ಬಳಿಯ ನೆಲ್ಲಿತೀರ್ಥ ಗುಹೆ ನೋಡಲು ನಾಲ್ಕು ಮಿತ್ರರು ಹೋಗಿದ್ದೆವು. ಆ ಗುಹೆಯ ಬಾಗಿಲಿನಲ್ಲಿ ಒಂದು ದೇವಸ್ಥಾನವೂ ಇತ್ತು. ಕಾಲದ ಹರಿವಿನಲ್ಲಿ ಜನಮನ ಗುಹೆಯ ಪ್ರಾಕೃತಿಕ ಸತ್ಯವನ್ನು ಕಂದಾಚಾರದ ವಿಧಿ ನಿಷೇಧಗಳಿಗೆ ಇಳಿಸಿದ್ದನ್ನು ನಾನು ವಿಷಾದದಿಂದ ಗುರುತಿಸಿದ್ದೆ ಮತ್ತು ಸಂಪರ್ಕಕ್ಕೆ ಬಂದವರಿಗೆಲ್ಲ ಗುಹೆಯ ಪ್ರಾಕೃತಿಕ ಸತ್ಯದ ಗ್ಗೆ ಹೇಳುತ್ತಲೂ ಇದ್ದೆ. ಇನ್ಯಾರೋ ದಾರಿ ಹೇಳಿದರು, ಗುಂಪೆಯ ಐದೂ ಗುಹೆಗಳನ್ನು ಮಿತ್ರ ಬಳಗ ಕಟ್ಟಿಕೊಂಡು ಹೊಕ್ಕು ಹೊರಟೆ. ವೆಂಕಟ್ರಾಮ್ ದೈತೋಟ ಮಾರ್ಗದರ್ಶಿಯಾದರು, ಸೂಳೆಪದವಿನ ಬಾವಲಿ ಮಾಟೆ ನೋಡಿ ಬಂದೆ. ಹರೇಕಳದ ಕುಖ್ಯಾತ ಗುಹೆ (ಯಾರೋ ಯಾರನ್ನೋ ಕೊಲೆ ಮಾಡಿ ಅದರೊಳಗೆ ಎಸೆದಿದ್ದರಂತೆ) ಸರಣಿಯಲ್ಲೇ ಶೋಧ ನಡೆಸಿದ್ದಾಗಿತ್ತು. ಅದೊಂದು ದಿನ ನನ್ನ ಸೋದರ ಮಾವಂದಿರು – ತಿಮ್ಮಪ್ಪಯ್ಯ ಮತ್ತು ರಾಮನಾಥ ರಾವ್ ಪಾಣಾಜೆ ಬಳಿ ಹೀಗೇ ಇನ್ನೊಂದು ಗುಹೆಯಿದೆ ಎಂದರು. ಸರಿ, ಸ್ಕೂಟರ್ ಏರಿ ಜಾಂಬ್ರಿ ಉರುಫ್ ಸ್ವಯಂಭೂ ಗುಹೆಯನ್ನು ಹುಡುಕಿಕೊಂಡು ಹೋದೆವು. ನೆಲ್ಲಿತೀರ್ಥಕ್ಕಿಂತ ತೀರಾ ಕನಿಷ್ಠವಾದ ಜಾಂಬ್ರಿ ನುಗ್ಗಿ ಬಂದೆವು. ಹನ್ನೆರಡು ವರ್ಷಕ್ಕೊಮ್ಮೆ ಅಲ್ಲಿ ನಡೆಯುವ ಭಾರೀ ಜಾತ್ರೆ ಬಗ್ಗೆ ಸ್ಥಳೀಯ (ಗಿಳಿಯಾಲಿನ) ಜಮೀನ್ದಾರರು ಹೇಳಿದರೂ ನನಗದೇನೂ ಆಕರ್ಷಣೆ ಉಳಿಸಲಿಲ್ಲ. ವಿಶೇಷ ಪ್ರಾಕೃತಿಕ ಸ್ವತ್ವವೇನೂ ಇಲ್ಲದ ಜಾಂಬ್ರಿಯನ್ನು ನಾನು ಹೆಚ್ಚುಕಡಿಮೆ ಗುಡಿಸಿ ಮನದ ಮೂಲೆಗೆ ಹಾಕಿದ್ದೆ.

೧೯೮೧ರಲ್ಲೊಂದು ದಿನ ಗೆಳೆಯ, ಉದಯವಾಣಿಯ ಈಶ್ವರ ದೈತೋಟ ಅಂಗಡಿಗೆ ಬಂದು “ಜಾಂಬ್ರಿ ಜಾತ್ರೆ ಬರ್ತಾ ಇದೆ. ನೀವದರ ಶೋಧ ನಡೆಸಿದವರು. ನಾಲ್ಕು ಸಾಲು ನಮ್ಮ ಪತ್ರಿಕೆಗೆ ಬರೆದುಕೊಡಿ” ಎಂದರು. ನನ್ನಲ್ಲಿ ಅದರ ಫೋಟೋ ಇರಲಿಲ್ಲ ಎನ್ನುವುದಕ್ಕೆ ಗೆಳೆಯ ಯಜ್ಞ ನನ್ನ ಸೂಚನೆಯಂತೆ ಒಂದು ರೇಖಾಚಿತ್ರವನ್ನೂ ಬರೆದು ಸೇರಿಸಿದರು. ಜಾತ್ರೆಯ ಮುನ್ನಾ ದಿನ ಉದಯವಾಣಿಯ ನಡುಪುಟದಲ್ಲಿ ದೊಡ್ಡದಾಗಿ ವೆಂಕಟರಾಜ ಪುಣಿಚಿತ್ತಾಯರ ‘ಹನ್ನೆರಡು ವರ್ಷಗಳ ಬಳಿಕ ಇದೇ ಮೇ ಎರಡರಂದು ನೆಟ್ಟಣಿಗೆಯ ಸ್ವಯಂಭೂ’ ಎಂಬ ಹೆಸರಿನ ಸ್ಥಳಪುರಾಣ ಪ್ರಕಟವಾಯ್ತು. ಅವರು ಒಳಗಿನ ‘ರಹಸ್ಯ ಹೇಳಬಾರದು’ ಎಂದು ಸಂಪ್ರದಾಯಕ್ಕೆ ಬಲಕೊಟ್ಟಿದ್ದರು. ಕಟು ವ್ರತ ನಿಯಮಾದಿಗಳನ್ನು ನಡೆಸಿ ಬರುವ ಮೂರು ಕಾಪಡರು ಒಂದು ಗಂಟೆ ಕಾಲ ಒಳಗೆ ಹೋಗಿ ಬಂದಮೇಲೆ ತಂತ್ರಿಗಳು ಹೋಗಿಬರುತ್ತಾರೆ. ಪೂಜೆ, ಮೃತ್ತಿಕಾ ಪ್ರಸಾದಾದಿಗಳು ನೆರೆದ ಸಾವಿರಾರು ಭಕ್ತರನ್ನು ಹೇಗೆ ತಣಿಸುತ್ತವೆ ಎಂದು ಸಾಕಷ್ಟು ವಿವರದಲ್ಲಿ ಬರೆದಿದ್ದರು. ಆ ನಾಲ್ವರೂ ಗುಹೆಯ ಒಳಗಿನ ವಿವರಗಳನ್ನು ಹೇಳುವುದು ನಿಷಿದ್ಧ. ಮತ್ತೆ ಅವರೇ ಆಗಲಿ, ಐದನೆಯವರಾಗಲಿ ಹನ್ನೆರಡು ವರ್ಷಗಳ ದೀರ್ಘ ಕಾಲದಲ್ಲೂ ಗುಹೆಯನ್ನು ಪ್ರವೇಶಿಸಿದ್ದೂ ಇಲ್ಲ ಎಂದೇ ಮುಗಿಸಿದ್ದರು. ಅವರ ಲೇಖನದ ಒಳಗೆ ಸಣ್ಣ ಒಂದು ಕಾಲಮ್ಮಿನಲ್ಲಿ ‘ಸ್ವಯಂಭೂ ಗುಹೆಯ ರಹಸ್ಯ ಹೀಗಿದೆ’ ನನ್ನ ಬರಹವೂ ಪ್ರಕಟವಾಗಿತ್ತು. ಅದರ ಪೂರ್ಣ ಪಾಠ:

ಕಥೆ: ಕಾಶಿಯಿಂದ ಶಿವಲಿಂಗ ಹೊತ್ತು ಒಬ್ಬ ರಾಕ್ಷಸ ಭೂಗರ್ಭದಲ್ಲಿ ಪ್ರಯಾಣಿಸಿದ. ಪಾಣಾಜೆಯ ಚಂಡೆತಡ್ಕದಲ್ಲಿ ಲಿಂಗ ಸ್ಥಾಪನೆಗೆ ಜಾಗ ಅರಸಿ ಪ್ರಕಟವಾದ. ಆಗ ಉಂಟಾದ ಪೊಳ್ಳು ಸ್ವಯಂಭೂ ಗುಹೆ. ಅವನು ಸ್ಥಾಪಿಸಿದ ಲಿಂಗ ನೆಟ್ಟಣಿಗೆಯ ಮಹಾಲಿಂಗೇಶ್ವರ. ಹನ್ನೆರಡು ವರ್ಷಕ್ಕೊಮ್ಮೆ ಮಹಾಲಿಂಗೇಶ್ವರನಿಗೆ ಸ್ವಯಂಭೂ ಗುಹಾ ಪ್ರವೇಶೋತ್ಸವ (ದೇವರಿಗೂ ಬಂದ ದಾರಿಯನ್ನು ನೋಡುವ ಸಂಭ್ರಮ?) ಆ ಸಂದರ್ಭದಲ್ಲಿ ಮಾತ್ರ ಶಾಸ್ತ್ರ ನಿಯೋಜಿತ ಮೂವರು ಗುಹೆ ಪ್ರವೇಶಿಸುತ್ತಾರೆ. ಉಳಿದೆಲ್ಲರಿಗೆ ಯಾವತ್ತೂ ಪ್ರವೇಶ ನಿಷಿದ್ಧ. ಅ ಗುಹೆಯ ರಹಸ್ಯ, ಪಾವಿತ್ರ್ಯವನ್ನು ಮಾತು, ಕೃತಿಗಳ ಮೂಲಕ ಕೆಡಿಸಿದವರಿಗೆ ಆದ ದುರ್ದಶೆಯ ಕುರಿತು ಹತ್ತೆಂಟು ಕಥೆಗಳೂ ಇವೆ.

ಸತ್ಯ: ಕಥೆ ನಿರ್ಲಕ್ಷಿಸಿ ನಾನು ಆರು ಜನರ ತಂಡ ಕಟ್ಟಿದೆ. ವಿಷವಾಯು ಪರೀಕ್ಷೆಗೆ ದೀಪ, ಆಪತ್ತಿನಲ್ಲಿ ಹೊರಗೆಳೆಯಲು ಹಗ್ಗ, ಕತ್ತಲು ಬಿರಿಸಲು ಟಾರ್ಚು ಹರಿವ ಜಂತುಗಳಿಂದ ರಕ್ಷಿಸಿಕೊಳ್ಳಲು ಮಣಿಗಂಟು ಮುಚ್ಚುವ ಬೂಟು, ಗಾಬರಿಯಿಂದ ಆಕ್ರಮಣ ಎಸಗಬಹುದಾದ ಪುಟ್ಟ ಪ್ರಾಣಿಗಳನ್ನು ವಿರೋಧಿಸಲು ಕತ್ತಿ ದೊಣ್ಣೆಗಳಿಂದ ಸಜ್ಜಾಗಿದ್ದೆವು. ಮುರಕಲ್ಲಿನ ಮಂಡೆಯಿರುವ ಗುಡ್ಡೆಯ ಮೇಲ್ಬದಿಯಲ್ಲಿ ಒಂದು ಸಣ್ಣ ತಗ್ಗಿನಲ್ಲಿರುವ ಹರಕು ಪೊಳ್ಳು ಸ್ವಯಂಭೂ ಗುಹೆ. ಗುಹೆಯ ಒಳಗಿನಿಂದ ಒಂದು ಗಟ್ಟಿ ಗಿಡ ಹೊರಗೆ ತಲೆ ಚಾಚಿದೆ. ಅದನ್ನು ಆಧರಿಸಿಯೋ ಗುಹೆಯ ಅಂಚಿನಲ್ಲಿ ಕೈತೊಡಗಿಸಿಯೋ ಒಳಕ್ಕೆ ದೇಹ ನೇತುಬಿಟ್ಟು ಹಾರಿದೆವು. ಸುಮಾರು ಏಳೆಂಟಡಿ ಆಳದ ಪ್ರವೇಶ. ಸುತ್ತ ಕತ್ತಲ ಮಾಟೆ. ಜಿಗುಟು ಮಣ್ಣಿನ ನೆಲ. ಮುರಕಲ್ಲಿನ ಒರಟು ಚಪ್ಪರ ನೀರು ಸತತ ನೀರು ಜಿನುಗಿಸಿ ಮುಳ್ಳು ಮುಳ್ಳಾಗಿತ್ತು. ಸ್ವಲ್ಪ ಬದಿಗೆ ಸರಿದು ಕಣ್ಣು ಕತ್ತಲಿಗೆ ಹೊಂದಿದ ಮೇಲೆ ಟಾರ್ಚು ಉರಿಸಿದೆವು. ಪ್ರವೇಶದಿಂದ ಹತ್ತಿಪ್ಪತ್ತಡಿ ಅಂತರದಲ್ಲಿ ಎಲ್ಲ ದಿಕ್ಕಿಗೂ ಗುಹೆಯ ಚಪ್ಪರ ನೆಲದೊಡನೆ ಸ್ವಾಭಾವಿಕವಾಗಿ ಸೇರಿದಂತಿತ್ತು. ಒಂದು ಮೂಲೆಯಲ್ಲಿ ಮಾತ್ರ ಸ್ವಲ್ಪ ಇಳಿಜಾರು. ಅಲ್ಲಿ ಕುಳಿತು ಅಂಡೆಳೆಯುವಷ್ಟೇ ಅವಕಾಶ. ನೀರಪಸೆ, ನುಸುಲು ಮಣ್ಣು ದಾಟಿದರೆ ಮೂಲೆಯಲ್ಲಿ ದೊಡ್ಡ (ಮುರಕಲ್ಲ)ಬಂಡೆ ಗುಂಡುಗಳ ಸಡಿಲ ಒಟ್ಟಣೆ. ಎಲ್ಲ ಅಸ್ಥಿರ, ಹುಶಾರು ತಪ್ಪಿದರೆ ಜೀವಂತ ಸಮಾಧಿ. (ಇಂದಿನ ಅರಿವಿನಲ್ಲಿ ಸೇರಿಸಬಹುದಾದ್ದು, ಹೊರಗಿನ ಲೋಕಕ್ಕೆ ಜಾಂಬ್ರಿ ಮಹಾತ್ಮ್ಯೆಗೆ ಹೊಸತೊಂದು ಸೇರ್ಪಡೆ) ಆ ಗುಂಡುಗಳ ಸಂದಿನಲ್ಲಿ ಹತ್ತಡಿ ಆಳಕ್ಕಿಳಿದರೆ ಮತ್ತೊಂದು ಹಂತದ ನೆಲ. ಅದು ಮುಂದುವರಿಯುತ್ತ ಸುಮಾರು ಏಳಡಿ ಎತ್ತರ ಎರಡಡಿ ಅಗಲದ ಓಣಿಯಂತಿತ್ತು. ಕೊನೆಯಲ್ಲಿ ಅದು ವಿಸ್ತಾರವಾಯ್ತು. ಅಲ್ಲಿ ಮತ್ತೆ ಕೆಲವು ಪುಡಿ ಬಂಡೆಗಳು, ಎಡೆಯಲ್ಲಿ ಮತ್ತೂ ಆಳಕ್ಕಿಳಿದ ಮಾಟೆ. ಕೆಳಗಿನ ನೆಲ ಮೂರಡಿ ಅಂತರದಲ್ಲೇ ಕಾಣುತ್ತದಾದರೂ ನುಗ್ಗುವುದು ಕಷ್ಟ. ಹಾಗಾಗಿ ಮಾಟೆಯ ಅಂಚಿನಲ್ಲಿ ಮೈಚಾಚಿ ತಲೆ ಒಳಕ್ಕೆ ಸರಿಸಿ ಹಣಿಕಿದೆವು. ಪುಟ್ಟ ಜಾಗ, ಮೂಲೆಯ ಗೋಡೆಯಲ್ಲಿ ತೋಳ್ದಪ್ಪದ ನೀರ ತೂಂಬು ಅಷ್ಟೆ.

ಪ್ರವೇಶದ ಬಳಿ ನೆಲದಲ್ಲಿ ಹೊರಗಿನಿಂದ ಭಕ್ತಾದಿಗಳು ಎಸೆದ ಚಿಲ್ಲರೆ ಕಾಸು ಬಿದ್ದಿದ್ದವು. ಎರಡನೇ ಹಂತದಲ್ಲಿ ಕೆಲವು ಹಣತೆಗಳು ಇದ್ದವು. ಎಲ್ಲ ಹಂತಗಳ ಮೂಲೆಗಳಲ್ಲೂ ಮಳೆಗಾಲದ ನೀರು ತಂದು ಪೇರಿಸಿದ ಕಸ ಕಡ್ಡಿ, ಪ್ರಾಣಿ ಅವಶೇಷ ಯಥೇಚ್ಛ. ಇಷ್ಟು ನೋಡಿ ಬರಲು ನಿಧಾನದಲ್ಲೂ ಮುಕ್ಕಾಲು ಗಂಟೆ ಸಾಕಾಯ್ತು. ನೇರ ಆಳದಲ್ಲಿ ಸುಮಾರು ನಲ್ವತ್ತಡಿ ಮಾತ್ರ ಸ್ವಯಂಭೂ. ಆದರೆ ಕಥೆ ಊರಿಗೆ ಬಂತು, ಸತ್ಯ ಗುಂಡಿಗೆ ಬಿತ್ತು.

ಉದಯವಾಣಿ ಜಾಂಬ್ರಿ ಜಾತ್ರೆಯ ವರದಿ ಮಾಡುತ್ತಾ ‘ಹಿಂದಿನ ದಿನ ಉದಯವಾಣಿಯಲ್ಲಿ ಪ್ರಕಟವಾದ ಲೇಖನ ಇಲ್ಲಿ ಕೊಂಚ ವಾದವಿವಾದಕ್ಕೆಡೆ ಮಾಡಿಕೊಟ್ಟಿದ್ದು, ಈ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಕೇಳಿ ಬಂದವು. ಈ ವಿವಾದವೇ ಈ ಬಾರಿ ಹೆಚ್ಚು ಯಾತ್ರಿಕರನ್ನು ಆಕರ್ಷಿಸಿತು ಎಂದು ಕೆಲವರ ಅನಿಸಿಕೆ.’ ವರದಿಯ ಮೂರನೇ ದಿನ ಪಡ್ರೆಯ ಶ್ರೀಹರಿಭಟ್ಟ ‘ಶ್ರದ್ಧಾ ಹೀನರಿಗೆ ಎಲ್ಲವೂ ಸುಳ್ಳೇ’ ಎಂದೂ ನಾಲ್ಕನೇ ದಿನ ‘ಪಾಣಾಜೆಯ ಪ್ರಾಯಸ್ಥ’ ಎಂಬ ಹೆಸರಿನಲ್ಲಿ (ಮುಂದೊಂದು ದಿನ ಅವರೇ ನನ್ನಲ್ಲಿ ಹೇಳಿದ್ದರಿಂದ) ಕೆದಂಬಾಡಿ ಜತ್ತಪ್ಪ ರೈ ‘ಸತ್ಯವು ತಲೆ ಎತ್ತಿ ನಿಂತಿತು’ ಎಂದೂ ಜನತಾವಾಣಿಯಲ್ಲಿ ಉದ್ದುದ್ದ ಬರೆದರು. ಭಟ್ಟರು ‘…ಕಾಪಡರು, ಪುರೋಹಿತರುಗಳಿಗೆ ಒಂದು ಗಂಟೆಗಿಂತಲೂ ಅಧಿಕ ವೇಳೆ ತಗಲುತ್ತದೆ. ನಿಧಾನದಲ್ಲೂ ಮುಕ್ಕಾಲು ಗಂಟೆ ಸಾಕು ಎನ್ನುವ ಅಶೋಕವರ್ಧನರ ತಂಡಕ್ಕೆ ನಿಲುಕದ ರಹಸ್ಯ ಗುಹೆಯೊಳಗಿರಲೇಬೇಕು… ಮುಂದೆ ಹೀಗೆ ಧರ್ಮ ಭೀರುಗಳ ಮನಸ್ಸನ್ನು ತಲ್ಲಣಗೊಳಿಸುವ ಸಂಶೋಧನೆಗಿಳಿಯುವ ಮೊದಲು ಯಾರೇ ಆದರೂ ವಿವೇಚಿಸುವುದೊಳಿತು.’ ಪ್ರಾಯಸ್ಥ ರೈಗಳು ಮೂರು ಜಾಂಬ್ರಿ ನೋಡಿದ ಬಲದಲ್ಲಿ ‘…ನನ್ನ ಅರುವತ್ತೈದು ವರ್ಷಗಳ ಅನುಭವದಲ್ಲಿ ಜಾಂಬ್ರಿ ಕುರಿತು ಯಾವ ಕಟ್ಟು ಕತೆಗಳನ್ನೂ ಕೇಳಿಲ್ಲ. ಸ್ವಯಂಭೂ ಗುಹೆಯ ಸತ್ಯಚರಿತ್ರೆಯನ್ನು ಪುಣಿಚಿತ್ತಾಯರು ಅತ್ಯಂತ ಸತ್ಯಸ್ಯ ಸತ್ಯವಾಗಿ ನಿರೂಪಿಸಿದ್ದಾರೆ… ಗುಹೆಯ ಬಳಿ ಗಳಿಗೆಗೊಂದು ರೀತಿಯ ಪರಿಮಳ ಬರುತ್ತದೆ… ಕಾಣುವುದು ಮಾತ್ರ ಸತ್ಯ, ಉಳಿದುವೆಲ್ಲವೂ ಮಿಥ್ಯವೆಂಬುದು ನಾಸ್ತಿಕವಾದ… ಈ ಸಲ ನೆರೆದ ಜನಸಂಖ್ಯೆ ಸುಮಾರು ಏಳು ಸಾವಿರ. ಹತ್ತು ಜನರು ಕೂಡಿದಲ್ಲಿ ಸತ್ಯವಿದೆ ಎಂಬುದು ಹಿರಿಯರ ಮಾತು. ಜಾಂಬಿರಿಯ ಸತ್ಯತೆಯು ನಿನ್ನೆ ಇಲ್ಲಿ ತಲೆ ಎತ್ತಿ ನಿಂತು ನಿರೀಶ್ವರ ವಾದವನ್ನು ನಿರಾಕರಿಸಿಬಿಟ್ಟಿತು.’

‘ನಿರಾಧಾರ ಸತ್ಯ? ಮೌಢ್ಯ ಶ್ರದ್ಧೆಯಲ್ಲ’ ಎಂಬ ಶೀರ್ಷಿಕೆಯೊಡನೆ ನಾನು ಇಬ್ಬರಿಗೂ ಪತ್ರಿಕೆಯಲ್ಲಿ ಉತ್ತರಿಸಿದೆ. ಅದರ ಪೂರ್ಣ ಪಾಠ: ಪಾಣಾಜೆ ಪ್ರಾಯಸ್ಥರ ಪತ್ರ. ೧. ಒತ್ತು ಹೆಚ್ಚಿದರೆ ಸುಳ್ಳು ಸತ್ಯವಾಗದು. ಆಧಾರವಿಲ್ಲದ ಸತ್ಯ ಸುಳ್ಳಿಗೂ ಬೇಡ. ೨. ನಾನು ಕೇಳಿದ ನಾಲ್ಕು ಕಥೆಗಳು * ಬ್ರಿಟಿಷ್ ಅಧಿಕಾರಿಯೊಬ್ಬ ಬೊಂಡ ಕುಡಿದು ಗುಹೆಗೆಸೆದನಂತೆ. ಆಗ ಕಂಡ ಉತ್ಪಾತಕ್ಕೆ ಹೆದರಿ ಆಸುಪಾಸಿನ ಕಾಡಿನ ಹಕ್ಕನ್ನು ದೇವರಿಗೇ ಬಿಟ್ಟನಂತೆ ** ನಾಸ್ತಿಕರು ಯಾರೋ ಗುಹಾ ಪ್ರವೇಶಕ್ಕೆ ಹೊರಟು ಸಂಕವಾಳ (=ಕಾಳಿಂಗ ಸರ್ಪ. ಇದಕ್ಕೆ ಆಸ್ತಿಕ ಮನಸ್ಸು ಪ್ರಾಣಿ ಶಾಸ್ತ್ರಜ್ಞರು ಹೇಳುವ ವಿವರಗಳಿಗಿಂತ ಎಷ್ಟೊ ಹೆಚ್ಚನ್ನು ಆರೋಪಿಸುತ್ತದೆ!) ದರ್ಶನದಿಂದ ಉಚ್ಚಾಟಿತನಾದನಂತೆ. *** ಗುಹೆಯ ಒಳಗೆ ಶಿವಪಾರ್ವತಿಯರು ಉಯ್ಯಾಲೆ ಆಡುವ ಕಥೆ **** ಒಮ್ಮೆ ಪೂಜಿಸಿ ಮರಳುವವರು ಮರೆತು ಹೋದ ಪೂಜಾ ಪಾತ್ರೆ ತರಲು ತಿರುಗಿ ಹೋಗಿ, ಬರುವಾಗ ಹನ್ನೆರಡು ವರ್ಷ ಕಳೆದು ಇನ್ನೊಂದೇ ಜಾತ್ರೆ ಕಾಲ ಬಂದಿತ್ತಂತೆ. ೩. ಅವೈಜ್ಞಾನಿಕ ವಿಧಿಗಳಲ್ಲಿ ನನಗೆ ಆಸಕ್ತಿಯಿಲ್ಲ. ಅದರ ಬಗ್ಗೆ ವಿವರಣೆ ಅಪ್ರಸ್ತುತ. ೪. ಕಾಲದ ಪ್ರಭಾವದಲ್ಲಿ ಎಷ್ಟೋ ಗೌರವಾನ್ವಿತರು ತಳೆದ ನಿಲುವನ್ನು ಮುಂದೆ ಪ್ರಶ್ನಿಸಿದರೆ ಅದು ಕ್ರಮ, ಹಿರಿಯರಿಗೆ ತೋರುವ ಗೌರವ. ಅಪ್ಪ ನೆಟ್ಟ ಆಲದ ಕಥೆ ಗೊತ್ತಲ್ಲ? ೫. ಸ್ಥಳ, ನಂಬಿಕೆಗನುಗುಣವಾಗಿ ಯಾವುದೇ ಮೂರಿ ಪರಿಮಳಿಸಬಹುದು. ಅದನ್ನು ಅಲ್ಲ ಎನ್ನದೆ ನಾನು ಅನುಭವಿಸಿದೆ, ಬರೆದೆ. ೬. ಜನ ಸೇರಿದಲ್ಲಿ ಸತ್ಯವಿದೆ ಎಂಬ ಮಾತು ಹುರುಳಿಲ್ಲದ್ದು. ಮತ್ತೆ ಬಂದವರೆಲ್ಲ ದಿವ್ಯತೆಗೆ ಸಾಕ್ಷಿಯೋ ನನ್ನ ಲೇಖನದ ಪ್ರಭಾವಕ್ಕೆ ಸಾಕ್ಷಿಯೋ ಎಂಬುದಕ್ಕೆ ಉದಯವಾಣಿಯ ಸಚಿತ್ರ ವರದಿಯೇ ಸಾಕು.

ಹರಿಭಟ್ಟರ ಪತ್ರ. ನಿಖರವಾಗಿ ನೋಡಿ ವರದಿಸಿದ ನನ್ನ ಮಾತುಗಳಿಗಿಂತ ಏನೂ ನುಡಿಯದ ಕಾಪಡರಿಂದ ಏನೇನೋ ಊಹಿಸಿ, ನಂಬುವ ಭಟ್ಟರ ಬಗ್ಗೆ ನನಗೆ ಅನುಕಂಪವಿದೆ. ಸತ್ಯವನ್ನು ದೂರೀಕರಿಸುವ ನಂಬಿಕೆ ಆಸ್ತಿಕತೆಯಲ್ಲ, ಮೌಢ್ಯ. ಪ್ರಯೋಗ ಸಫಲವಾದವುಗಳಿಂದ ಮನುಷ್ಯ ಬೆಳೆದ. ವಿಫಲವಾದವುಗಳಿಂದ ದೂರ ಸರಿದ, ಅದಕ್ಕೆ ಅರ್ಥವನ್ನು ತನ್ನದೇ ಮಿತಿಯಲ್ಲಿ ಕಟ್ಟಿದ. ಯಾವುದೇ ವ್ಯಾಖ್ಯೆ ಸಾರ್ವಕಾಲಿಕವಲ್ಲ ಎಂಬ ಅರಿವು ಬಂದಿರುವ ಈ ಕಾಲದಲ್ಲೂ ಹಳೆಯ ಅರ್ಥವನ್ನು ನಂಬಿ ಕೂರುವುದು ಸರಿಯಲ್ಲ. ಒಂದು ಕಾಲದ ವೈಜ್ಞಾನಿಕ ಸತ್ಯಗಳೇ ಕಾಲ ಪರೀಕ್ಷೆಯಲ್ಲಿ ಅಸಂಗತವೆನ್ನಿಸಿ ಕಳಚಿ ಬೀಳುತ್ತಿರುವಾಗ ಕೇವಲ ಒಂದು ಮುರಕಲ್ಲಿನ ಪೊಳ್ಳು ಹೊರತಾಗುವುದು ಹೇಗೆ ಸಾಧ್ಯ? ಈ ಗುಹೆಯನ್ನು ಸಲ್ಲದ ನಂಬಿಕೆ, ಪೂಜೆಗೆ ಈಡು ಮಾಡಿದವರೇ ವಿವೇಚನೆ ಬೆಳೆಸಿಕೊಳ್ಳಬೇಕು.

ಈ ವಲಯದಲ್ಲಿ ನಾನು ತಂಡ ಕಟ್ಟಿ ನುಗ್ಗಿ ನೋಡಿದ ಮುರಕಲ್ಲಿನ ಗುಹೆಗಳಲ್ಲಿ ನೆಲ್ಲಿತೀರ್ಥದ್ದು ಬಲು ಉದ್ದ. ಗುಂಪೆಯ ಪಾಂಡವರ ಗುಹೆ ಬಲು ಆಳ, ಹಲವು ಸ್ತರಗಳೂ ಉಳ್ಳದ್ದು. ಸೂಳೆ ಪದವಿನದ್ದು ವಿಶಾಲವಾಗಿದ್ದು, ಬಾವಲಿ ಬೇಟೆಗೆ ಹೆಸರಾದದ್ದು. ಹರೇಕಳದ ಗುಹೆ, ಸುಬ್ರಹ್ಮಣ್ಯದ ಬಿಲದ್ವಾರ (ಆಗ ಇದು ಪ್ರಾಕೃತಿಕವಾಗಿಯೇ ಸಾರ್ವಜನಿಕರಿಗೆ ಮುಕ್ತವಾಗಿ ಇತ್ತು. ಇಂದು ಭೀಕರ ಸಿಮೆಂಟ್ ಶಿಲ್ಪದಲ್ಲಿ ಸಾಕ್ಷಾತ್ ನಾಗರಾಜನೇ ಬಂದು ವಂತಿಗೆ ಕೇಳುತ್ತಿದ್ದಾನೆ!), ಗುಂಪೆಯ ತೀರ್ಥ ವಿಭೂತಿ ಗುಹೆಗಳು ಸ್ವಯಂಭೂವಿನಂತೆ ಧಾರ್ಮಿಕ ಕಟ್ಟಳೆಗೆ ಒಳಗಾದವೇ ಆದರೂ ಪ್ರಾಕೃತಿಕವಾಗಿ ಜಾಂಬ್ರಿಗಿಂತ ಹೆಚ್ಚು ಆಕರ್ಷಣೀಯ. ಸ್ವಯಂಭೂವಿಗೆ ಪುರಾಣದ್ದೇ ಬಲ. ಅದನ್ನು ಕಥೆಯ ಚಂದಕ್ಕಷ್ಟೇ ಉಳಿಸಿಕೊಳ್ಳೋಣ, ಅದರ ಪ್ರಾಕೃತಿಕ ಸತ್ಯಗಳಿಂದ ದೂರಾಗದಿರೋಣ. ಆಲೀಬಾಬನ ಸೂಸಮ್ಮ ಮಂತ್ರ ಕಾಪಡರ ಬಾಯಿಗೆ ಹಾಕಿ ನೂತನ ಪುರಾಣಿಕರಾಗದಿರೋಣ.

ನನ್ನೀ ಪತ್ರ ಬಂದ ಸಂಚಿಕೆಯಲ್ಲೇ ಮತ್ತೆ ಮೂರು ಪತ್ರಗಳಿದ್ದವು. ಪಂಡಿತಾರಾಧ್ಯರು ‘ಆಸ್ತಿಕತೆಯ ಹೆಸರಿನಲ್ಲಿ ಆತ್ಮ ವಂಚನೆ’ ಎಂದೇ ಬರೆದು ನನ್ನನ್ನು ಬೆಂಬಲಿಸಿದರು. ಮತ್ತೊಂದು ಪತ್ರದಲ್ಲಿ, ನನ್ನ ತಂದೆ, ಜಿಟಿ ನಾರಾಯಣ ರಾವ್ ಮಗನ ಮೇಲಿನ ಕಾಳಜಿಯಲ್ಲಿ ‘ಶ್ರದ್ಧಾಹೀನನಾದ ಸಾಕ್ರೆಟಿಸನನ್ನು ವಿಷವಿಕ್ಕಿ ಕೊಂದರು, ಬ್ರೂನೋನನ್ನು ಜೀವಂತ ದಹಿಸಿದರು, ಗೆಲಿಲಿಯೋಗೆ ಸೆರೆವಾಸ ವಿಧಿಸಿದರು, ಐನ್ಸ್‌ಟೈನನ್ನು ಅನಾರ್ಯನೆಂದು ಗಡಿಪಾರು ಮಾಡಿದರು. ಆದ್ದರಿಂದ ಅಪ್ರಿಯ ಸತ್ಯವನ್ನು ನೇರವಾಗಿ ಹೇಳಬಯಸುವವರು ಇತಿಹಾಸದ ಉದ್ದಕ್ಕೂ ಮರುಕಳಿಸುತ್ತಿರುವ ಧರ್ಮ(?) – ವಿಜ್ಞಾನ ಸಮರಗಳಿಂದ ಪಾಠ ಕಲಿತು ವಿವೇಕಯುತವಾಗಿ ವರ್ತಿಸುವುದು ಅಪೇಕ್ಷಣೀಯ. ಲೋಕದ ಡೊಂಕ ನೀವೇಕೆ ತಿದ್ದುವಿರಿ? ನೆರೆಮನೆಯ ದುಃಖಕ್ಕೆ ಅಳಬೇಡಿ’ ಎಂದೇ ಬರೆದರು. ಮೂರನೇ ಪತ್ರದಲ್ಲಿ ಬಿ. ಬಾಲಕೃಷ್ಣ ಎನ್ನುವವರು ‘ಶ್ರದ್ಧೆ ಯಾವುದರಲ್ಲಿ?’ ಎನ್ನುವ ಶೀರ್ಷಿಕೆಯಲ್ಲಿ ‘… ದೇವರಲ್ಲಿ ಭಕ್ತಿ ಮತ್ತು ಶ್ರದ್ಧೆ ಬಹಳ ಸರಳ ಮತ್ತು ಅದರಲ್ಲಿ ಯಾವ ರಹಸ್ಯವೂ ಅಡಗಬೇಕಿಲ್ಲ… ರಹಸ್ಯಗಳ ಪ್ರಪಂಚವನ್ನು ಪುರಾತನ ಕಾಲದಿಂದಲೂ ನಾವು ನಿರ್ಮಿಸಿಕೊಂಡು ಬಂದದ್ದೇ ನಮ್ಮ ದೇಶದ ಮುಂದುವರಿಕೆಗೆ ಉಂಟಾದ ತೊಡರುಗಳಲ್ಲೊಂದು… ಸತ್ಯಶೋಧನೆಗಳು ನಡೆಯುತ್ತಾ ಇರಲಿ.’ ನನ್ನೊಡನೆ ನೆಲ್ಲಿತೀರ್ಥದ ಮುಂದುವರಿದ ಶೋಧನೆ ಹಾಗೂ ಗುಂಪೆಗುಡ್ಡೆಯ ಗುಹಾಶೋಧಗಳಿಗೆ ಜೊತೆಗೊಟ್ಟ ಗೆಳೆಯ ಜಯಂತರು ಹರಿಭಟ್ಟರ ಎದುರೊಂದು ಪತ್ರ ಬರೆದಿದ್ದರು, ಆದರೆ ಯಾಕೋ ಉದಯವಾಣಿ ಪ್ರಕಟಿಸಲಿಲ್ಲ.

ಮತ್ತೊಂದು ದಿನ ನನಗೆ ಬೆಂಬಲಿಸಿ ಪ್ರಭಾಕರ ಜೋಶಿಯವರು ’…ಸಾವಿರಾರು ಜನ ನಂಬಿದ ಮಾತ್ರಕ್ಕೆ ಸುಳ್ಳು ಸತ್ಯವಾಗಲಾರದು. ವಿಚಾರದ ಬೆಳವಣಿಗೆಯ ಬಗ್ಗೆ ಆತಂಕ ಭೀತಿ ಇರುವವರು ಮಾತ್ರ ಇಂತಹ ಕ್ಷುಲ್ಲಕ ವಾದವನ್ನು ಮುಂದಿಡಲು ಸಾಧ್ಯ. ಕಾರಣಿಕಗಳನ್ನು ನಂಬಿದರೆ ಧಾರ್ಮಿಕತೆ, ಅದನ್ನು ಪ್ರಶ್ನಿಸಿದರೆ ಧರ್ಮದ್ರೋಹ – ಹೀಗೆ ವಾದಿಸುವುದೇ ಅಧಾರ್ಮಿಕ, ಅನೈತಿಕ. ಸತ್ಯಕ್ಕಾಗಿ ಸತತ ಯತ್ನವೇ ನಿಜವಾದ ಧಾರ್ಮಿಕತೆ…’ ಅದೇ ಸಂಚಿಕೆಯಲ್ಲಿ, ನನ್ನೊಡನೆ ಜಾಂಬ್ರಿ ಪ್ರವೇಶಿಸಿದ್ದ ಅನುಭವದ ಬಲದಲ್ಲಿ ಎ.ಪಿ. ಚಂದ್ರಶೇಖರ ಮತ್ತೆರಡು ಐತಿಹ್ಯಗಳನ್ನು ಉಲ್ಲೇಖಿಸಿ ಪತ್ರಿಸಿದ. * ಒಮ್ಮೆ ಮೈಲಿಗೆಯಲ್ಲಿ ಗುಹಾ ಪ್ರವೇಶಿಸಿದ ಕಾಪಡರು ಹೊರಗೆ ಬರಲೇ ಇಲ್ಲವಂತೆ. ಹೊರಗೆ ನೆರೆದ ಜನ ಭಯದೊಳಗೆ ಚದರಿದರು. ಮತ್ತೆ ಹನ್ನೆರಡು ವರ್ಷ ಕಳೆದು ಇನ್ನೊಂದು ಜಾತ್ರೆ ಬಂದಾಗ ಒಳಗೆ ಹೋದ ಕಾಪಡರು ಇಬ್ಬರಾದರೆ ಹೊರಗೆ ಬಂದವರು ನಾಲ್ವರು! ** ಒಬ್ಬ ಈ ಗುಹೆಗೆ ಸಂಬಂಧಿಸಿದ ಸಿದ್ಧನೊಬ್ಬನನ್ನು ಕೆಣಕಿ ನೂರುಗಟ್ಟಲೆ ದೋಸೆ ಕೊಟ್ಟೂ ತೃಪ್ತಿಪಡಿಸಲಾಗಲಿಲ್ಲವಂತೆ. ಮತ್ತೆ ಆತ ಗುಹೆಯ ಶೋಧಕ್ಕಿಳಿದು ಸತ್ತನೋ ಭೂತ ಹಿಡಿದು ಮತಿಭ್ರಾಂತನಾದನೋ…

ಎಂ ಗಂಗಾಧರ ಎಂಬುವವರು ‘ಇನ್ನೂ ಇದೆ ರಹಸ್ಯ’ ಎಂದೊಂದು ಪತ್ರ ಬರೆದರು. ಭಾವನಾತ್ಮಕತೆಯನ್ನು ಧರ್ಮಶ್ರದ್ಧೆಯೆಂದೇ ಭ್ರಮಿಸಿ ಬರೆದರು. ಮತ್ತು ‘…ವರ್ಧನರಿಗೆ ರಹಸ್ಯವನ್ನು ಬೇಧಿಸಬೇಕು ಎಂಬ ತವಕವಿದ್ದರೆ ನಮ್ಮೂರಲ್ಲಿ ಕೌಂಡಿಕಾನವೆಂಬ ಕಾಡು ಇದೆ. ಅದರ ಮಧ್ಯದಲ್ಲಿ ಒಂದು ಸಂಕ ಇದೆಯಂತೆ. ಮುನ್ನೂರು ವರ್ಷಗಳಿಂದ ಈಚೆಗೆ ಯಾರೂ ಅಲ್ಲಿಗೆ ಹೋಗಲಿಲ್ಲವಂತೆ…’ ಎಂದು ಮುಂಗಡ ಶುಭಾಶಯಗಳೊಂದಿಗೆ ಸವಾಲೆಸದರು. ಎರಡೇ ದಿನದಲ್ಲಿ ಬಿ. ಬಾಲಕೃಷ್ಣರು ಸತ್ಯಶೋಧನೆಯಿಂದ ಹಿಂದೂ ಧರ್ಮಕ್ಕೆ ಏನೂ ತೊಡಕಿಲ್ಲ ಎಂದು ಪತ್ರಿಕೆಯಲ್ಲೇ ವಿಚಾರಲಹರಿ ಹರಿಸಿದರು. ಮತ್ತು ಕೊನೆಯಲ್ಲಿ ‘ಕೌಂಡಿಕಾನ ಕಾಡಿನ ರಹಸ್ಯವು ಭಯಾನಕವೆಂದು ಅನಿಸುತ್ತದೆ. ಅನ್ವೇಷಣಕಾರರಿಗೆ ಸುಸಂದರ್ಭ. ರಹಸ್ಯ ಅಲ್ಪ ಸಮಯದಲ್ಲಿ ಬಯಲಾದೀತೆಂದು ಹಾರೈಸೋಣ.’ ಗಂಗಾಧರರಿಗೆ ಉತ್ತರಿಸುತ್ತ ನಾನು ಬರೆದೆ ‘ನನ್ನದು ಪವಾಡ ತನಿಖಾ ಸಮಿತಿಯಲ್ಲ, ನಂಬಿಕೆಗಳನ್ನು ಅರ್ಥೈಸುವ ಪ್ರಯತ್ನವೂ ಅಲ್ಲ. ಪ್ರಾಕೃತಿಕ ವೈಶಿಷ್ಟ್ಯಗಳನ್ನು ಪ್ರಕಟವಾಗಿಯೇ ಅನುಭವಿಸಿ ಸಂತೋಷಪಡುವ ತಂಡ ನಮ್ಮದು. ಬೇರೆಲ್ಲಾ ನಂಬಿಕೆಗಳಲ್ಲೂ ನಮ್ಮ ತಂಡದ ಸದಸ್ಯರು ಸ್ವತಂತ್ರರು. ಹಾಗಾಗಿ ಧಾರ್ಮಿಕ ವಿಚಾರಗಳು ಇಲ್ಲಿ ಅಪ್ರಸ್ತುತ. ಕೌಂಡಿಕಾನದ ಅಂತೆಗಳು ನಮ್ಮ ಮಟ್ಟಿಗೆ ಖಚಿತವಾದಾಗಲೂ ಅದರಲ್ಲಿ ಸ್ವಾರಸ್ಯ ಉಳಿದಿದ್ದರೆ ನಮಗೆ ನೋಡುವ ಕುತೂಹಲವುಂಟು.’

ಡಾ| ಎನ್.ಎಸ್. ಭಟ್ ‘ಜಾಂಬಿರಿ ಗುಹೆ ಮತ್ತು ಆಸ್ತಿಕತೆ’ ಎಂಬ ಹೆಸರಿನಲ್ಲಿ ಬಲು ದೀರ್ಘವಾಗಿ ಜನತಾವಾಣಿಗೆ ಬರೆದುಕೊಂಡರು. ಧರ್ಮವೂ ಉದಾತ್ತವಾಗಿ ನಮ್ಮ ಶೋಧಗಳನ್ನು ಬೆಂಬಲಿಸುತ್ತದೆ ಎಂದು ಪ್ರತಿಪಾದಿಸಿದರು. ಮುಂದೆ ಎರಡು ಕೆಣಕು ಪತ್ರಗಳು ಬಂದವು. ‘ಉವಾಭ’ ಎಂದೇ ಪರಿಚಯಿಸಿಕೊಂಡವರು ಕಾನಕ್ಕೋಡಿಯ ಭೂಗತ ಜಲಧಾರೆಯೊಂದರ ಅನಾವರಣವನ್ನು ನನ್ನಿಂದ ಬಯಸಿದರು. ಕೆ.ವಿ ಶಂಕರನಾರಾಯಣ ಎನ್ನುವವರು ವ್ಯಂಗ್ಯಕ್ಕೆ ಹೆಚ್ಚು ಅವಕಾಶಕೊಟ್ಟು ‘…ಕೌಂಡಿಕಾನದ ‘ಅಂತೆ’ ಖಚಿತಪಡಿಸಿ ಎಂದಿದ್ದಾರೆ. ಆದರೆ ಅಲ್ಲಿ ಇಂತಹುದೇ ಇದೆ ಎಂದು ತಿಳಿದರೆ ಇವರನ್ನು ಆಹ್ವಾನಿಸುತ್ತಿದ್ದರೇ… ಜಾರಿಕೊಳ್ಳುವ ಪ್ರವೃತ್ತಿ ಬೇಡ’ ಎಂದೇ ಮುಗಿಸಿದ್ದರು.

ಅವರಿಬ್ಬರಿಗೂ ನನ್ನ ಕಾರ್ಯಶೀಲತೆಯನ್ನು ಪತ್ರಿಕೆಯಲ್ಲೇ ಹೇಳಬೇಕಾಯ್ತು. ‘ನನ್ನ ಹಾರಿಕೆಯ ಉತ್ತರದ ಹಿಂದೆ: *ಒಂದು ಇಂಚು=ಒಂದು ಮೈಲು ವಿವರದ ಭೂಪಟದಲ್ಲಿ ಅಡೂರಿನಿಂದ ಹಕ್ಕಿ ಹಾರುವ ನೇರ ಏಳೆಂಟು ಕಿಮೀ ಫಾಸಲೆಯಲ್ಲಿ ಕೌಂಡಿಕಾನ ಅಥವಾ ತತ್ಸಮಾನ ಜಾಗ ಗುರುತಿಸಿಲ್ಲ. ** ವೈಯಕ್ತಿಕ ಪರಿಚಯಸ್ಥರಲ್ಲಿ ವಿವರ ಸಂಗ್ರಹಿಸುತ್ತಿದ್ದೇನೆ. ಕೌಂಡಿಕಾನ, ಕಯನಿಕಾನ, ಕುಂಡಿಕಾನ, ಕೌಡಿಂಕಾನ ಮುಂತಾದ ಹತ್ತು ಹಲವಲ್ಲಿ ಇರುವ ಇರಬಹುದಾದ ಲೋಕೋಪಯೋಗೀ ಪಾರಲೌಕಿಕ ಸಂಕಗಳಲ್ಲಿ ವಿವಾದಾಸ್ಪದವಾದದ್ದು ಯಾವುದೆಂದು ಖಚಿತವಾದಾಗಲೂ (ಇಂಥ ಊರಿಂದ ಈ ದಾರಿಯಲ್ಲಿ ಇಷ್ಟು ದೂರದಲ್ಲಿದೇಂತ) ಸ್ವಾರಸ್ಯ ಉಳಿದಿದ್ದರೆ (ಉದಾಹರಣೆಗೆ ಕೊಡಂಜೆಯ ಮಂಡೆ, ಬಂಡಾಜೆಯ ಗುಂಡಿ, ಪಾಣಾಜೆಯ ಪ್ರಾಯಸ್ಥ, ಅಗಲ್ಪಾಡಿಯ ಉವಾಭ ರಹಸ್ಯವಲ್ಲ. ಆದರೂ ಏನೆಂದು ನೋಡಲು ಯಾರೆಂದು ತಿಳಿಯುವಲ್ಲಿ ಸ್ವಾರಸ್ಯ ಇರುವಂತೆ) ನಾನು ನೋಡುತ್ತೇನೆ. ಶಂಕರನಾರಾಯಣರು ನನ್ನ ಪತ್ರವನ್ನು ತಪ್ಪಾಗಿ ಉದ್ಧರಿಸಿದ್ದಾರೆ. ನನ್ನ ಅನುಭವ ಕಥೆಗೆ, ನಂಬಿಕೆಗೆ ವಿರೋಧಿಯಾಗಿದೆ. ಅನುಭವ, ಅಭಿಪ್ರಾಯಗಳ ವ್ಯತ್ಯಾಸ ತಿಳಿಯದವರ ಬಗ್ಗೆ ನನಗೆ ಕನಿಕರವಿದೆ. ಇತರರ ಕುತೂಹಲಕ್ಕೆ ನಾನು ಪ್ರಯೋಗಪಟುವಲ್ಲ. ನನ್ನ ಕುತೂಹಲಕ್ಕೆ ಸೂಕ್ತವಾಗಿ ಕೌಂಡಿಕಾನವೂ ಕಾನಕ್ಕೋಡಿಯೂ ಒಡ್ಡಿಕೊಳ್ಳಬಹುದು.’

ಇಷ್ಟೆಲ್ಲಾ ನಡೆಯುತ್ತಿರುವಂತೆ ಮೂಲ ಲೇಖನ ಪ್ರಕಟವಾಗಿ ತಿಂಗಳು ಎರಡು ಕಳೆದಿತ್ತು. ಈಶ್ವರ ದೈತೋಟ “ನಿಮ್ಮ ಅನ್ವೇಷಣೆ, ಬರಹ ಮುಂದುವರಿಯಲಿ. ಉದಯವಾಣಿ ನಿರಂತರ ನಿಮ್ಮೊಂದಿಗಿದೆ” ಎಂದು ಹುರಿದುಂಬಿಸಿದರು. ಕವಿಹೃದಯಿ ಚಿದಂಬರ ಬೈಕಂಪಾಡಿ ‘ಸಾಹಸಿಗಳಿಗೆ ಹೊರೆಯಾಗಬೇಡಿ’ ಎಂದು ಪತ್ರ ಮುಖೇನ ಸಾರ್ವಜನಿಕ ಮನವಿ ಮಾಡಿಕೊಂಡರು. ಪಂಥಾಹ್ವಾನ ಒಡ್ಡುವವರು ಸ್ವತಃ ಅಶೋಕವರ್ಧನರ ತಂಡದಲ್ಲಿ ಸೇರಿಕೊಂಡು ಆ ಸತ್ಯವನ್ನು ಕಂಡು ಲೋಕಕ್ಕೆ ಯಾಕೆ ಪ್ರಸರಿಸಬಾರದು ಎಂದೂ ಚುಚ್ಚಿದರು. ಆಗ ಇನ್ನೂ ಸುಳ್ಯದ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಪುರುಷೋತ್ತಮ ಬಿಳಿಮಲೆ ಎಲ್ಲಕ್ಕೂ ‘ಅಶೋಕವರ್ಧನರೇ ಏಕೆ’ ಎಂದು ನನ್ನ ಆಶಯವನ್ನು ಶಕ್ತಿಯುತವಾಗಿ ಬೆಂಬಲಿಸಿದರು. ’…ಎಲ್ಲರೂ ಅವರಿಗೇ ಸವಾಲು ಹಾಕುತ್ತಿರುವುದು ಮಾತ್ರ ಆಶ್ಚರ್ಯ. ಅವರು ಒಂದೆರಡು ಮಾಡಿದ್ದನ್ನು ಇತರ ಕಡೆಗಳಲ್ಲಿ ಬೇರೆ ಯುವಕರು ಮುಂದುವರಿಸಲಿ. ಆಗ ವರ್ಧನರು ಮಾಡಿದ ಕೆಲಸ ಸಾರ್ಥಕವಾಗುತ್ತದೆ. ಗುಹೆಗಳು ಮಾತ್ರವಲ್ಲ, ನಮ್ಮಲ್ಲಿ ಇತರ ಅನೇಕ ವಿಚಾರಗಳೂ ಬಯಲಾಗಬೇಕಿವೆ. ವೈಚಾರಿಕ ಹಿನ್ನೆಲೆಯಲ್ಲಿ ಪ್ರವರ್ತಿಸಬೇಕಾದ ಯುವಕರೆಲ್ಲ ಇಂಥ ಕೆಲಸ ಮಾಡಬೇಕು…’ Evidence ಎಂಬ ಹೈದ್ರಾಬಾದಿನ ಇಂಗ್ಲಿಷ್ ಪತ್ರಿಕೆಯೊಂದಕ್ಕೆ ವರದಿ ಮಾಡುತ್ತಾ ಶ್ರೀಪಡ್ರೆ ‘…ಈ ಸಲ ಹಿಂದಿನ ದಿನ ಜನಪ್ರಿಯ ಸ್ಥಳೀಯ ಪತ್ರಿಕೆಯಲ್ಲಿ ಬಂದೊಂದು ವೈಚಾರಿಕ ಲೇಖನದಿಂದ ಜನ ಹೆಚ್ಚು ಸೇರಿದ್ದರು… ಉತ್ಸವ ಮುಗಿದ ಮೇಲೆ ಕೆಲವು ಸ್ಥಳೀಯ ಯುವಕರೂ ತಂಡ ಕಟ್ಟಿ ಜಾಂಬ್ರಿ ನುಗ್ಗಿ ಆ ಲೇಖನದ ವಿವರಗಳನ್ನು ಪುಷ್ಟೀಕರಿಸಿದರು…’

ಈ ಸುಮಾರಿಗೆ ನನಗೆ ಸಿಕ್ಕ ಹಲವು ಸ್ಪಷ್ಟ ಸೂಚನೆಗಳನ್ನನುಸರಿಸಿ ಆದೂರು ಸಮೀಪವೇ ಇದ್ದ ನೆಲ್ಲಿತಟ್ಟು ತೀರ್ಥಕ್ಕೆ ತಂಡ ಒಯ್ದು ಶೋಧಿಸಿ ಬಂದೆ. ಆದರೆ ಅಲ್ಲಿ ನನ್ನ ಪತ್ರಿಕಾ ಬರಹಗಳ ವಿಪರೀತ ಪ್ರಭಾವದಲ್ಲಿ ಸ್ಥಳೀಯರಿಂದ ಪೆಟ್ಟು ತಿನ್ನದೇ ಬರಬೇಕಾದರೆ ಸಾಕುಸಾಕಾಯ್ತು. ಮತ್ತೆ ಅಲ್ಲಿನ ಅನುಭವವನ್ನು ಯಥಾವತ್ತು ಬರೆದರೆ ಆ ‘ಸ್ಥಳೀಯರು’ ಮಂಗಳೂರಿಗೂ ತಮ್ಮ ಹಿಂಸಾಕರಗಳನ್ನು ಚಾಚಬಹುದೆಂದು ತಿಳಿದು ನಾನೇ ಉದಯವಾಣಿಯಲ್ಲಿ ಮೊದಲೊಂದು ಪತ್ರ ಬರೆದೆ.

ನೆಲ್ಲಿತಟ್ಟು ಜಾಂಬ್ರಿ ಅಲ್ಲ! ರಜೆಯಲ್ಲಿ ಊರಿಗೆ ಬಂದಾಗ ಸ್ನೇಹಿತರೊಬ್ಬರೊಡನೆ ಮಾತನಾಡುತ್ತಾ ಜಾಂಬ್ರಿ ಗುಹಾ ಪ್ರವೇಶ ಮಾಡಿದ ಯುವಕರ ಸಾಹಸದ ಪ್ರಸ್ತಾಪ ಬಂತು. ಆದರೆ ಸ್ನೇಹಿತನಿಗೆ ಅದು ಸಮಧಾನ ಆಗಲಿಲ್ಲ. ಅವರ ಅಭಿಪ್ರಾಯದಲ್ಲಿ ಅದು ಸಾಹಸವೇ ಅಲ್ಲ. ಸಾಹಸ ಎನ್ನಬೇಕಾದರೆ ನೆಲ್ಲಿತಟ್ಟು ತೀರ್ಥಕ್ಕೆ ಹೋಗಿಬರಲಿ ಎಂದರು. ನಾನು ಮಿತ್ರರಿಂದ ವಿವರ ಬಯಸಿದೆ. ಆ ಪ್ರಕಾರ, ಅದು ಮಹರ್ಷಿ ಕಣ್ವರ ನಿರ್ಮಿತಿ. ವೃಶ್ಚಿಕ ಮಾಸದ ಪುಣ್ಯ ದಿನದಂದು ಗಣಪತಿ ಪೂಜೆ ಮಾಡಿ ಭಕ್ತಿ ಭಾವದಿಂದ ನೈಯಾರತಿ ಹಿಡಿದು ಆ ಗುಹೆಯನ್ನು ಪ್ರವೇಶಿಸಿದವರಿಗೆ ತೀರ್ಥ ಸ್ನಾನದ ದಿವ್ಯ ಅವಕಾಶ ಒದಗುತ್ತದೆ. ಅನ್ಯ ಆವೇಶಭರದಲ್ಲಿ ಬೆವರು, ಹಿಂಗದ ದಾಹ ಮಾತ್ರ ದಕ್ಕೀತು. ಸಾಹಸದ ಅಮಲಿನಲ್ಲಿ ಈ ಹಿಂದೆ ನುಗ್ಗಿದ ಹಲವರಂತೆ ಜಾಂಬ್ರಿ ತಂಡವೂ ಬಂದು ಸೋತು ಮರಳಿದೆ! ಹೌದೆ? ನೆಲ್ಲಿತಟ್ಟು ಜಾಂಬ್ರಿ ಅಲ್ಲವೇ? – ಜನಾರ್ದನ ಆಲಂತಡ್ಕ.

ಆಗ ಮಣಿಪಾಲದಲ್ಲಿದ್ದ ಬೊಳುವಾರು ಮಹಮ್ಮದ್ ಕುಞ್ಞಿ ಸಹಜವಾಗಿ ಪ್ರತಿಕ್ರಿಯಿಸಿದರು: ನೆಲ್ಲಿತಟ್ಟು ಜಾಂಬ್ರಿ ಅಲ್ಲ ಓದಿದಾಗ ನೆನಪಾದ್ದು – ೧೯೬೯ರಲ್ಲಿ ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನಲ್ಲಿಳಿದು ಮಣ್ಣು ತಂದ ಸುದ್ದಿ ಪತ್ರಿಕೆಯಲ್ಲಿ ಬಂದಾಗ ನಮ್ಮೂರಿನ ಗುರುಗಳೊಬ್ಬರು ಉದ್ಗರಿಸಿದ್ದು “ಹೇ ಹೇ ಅವನು ಹೋದ ಚಂದ್ರನೇ ಬೇರೆ ನಾವು ಮೇಲೆ ಕಾಣುವ ಚಂದ್ರನೇ ಬೇರೆ. ಆಕಾಶದಲ್ಲಿರುವ ಚಂದ್ರನಲ್ಲಿಗೆ ಹೋಗಿದ್ದಾರೆಂದು ಹೇಳಿದರೆ ತಲೆ ಇದ್ದವರು ನಂಬಲಿಕ್ಕಿಲ್ಲ”. ಆ ಗುರುಗಳು ಈಗ ಬದುಕಿಲ್ಲ.

‘ನೆಲ್ಲಿತಟ್ಟು ಜಾಂಬ್ರಿ ಅಲ್ಲ, ಅದಕ್ಕಿಂತಲೂ ಸುಂದರ’ ಅನುಭವ ಕಥನಕ್ಕೆ ಇನ್ನೊಂದೇಳು ದಿನ ಕಾಯ್ತೀರಲ್ಲಾ? ಅಷ್ಟರೊಳಗೆ ನನ್ನ ಇದುವರೆಗಿನ ಕಥನಕ್ಕೆ ನಿಮ್ಮ ಮಾತಿನ ಬೆನ್ನುಡಿ ಬರೀತೀರಲ್ಲಾ?