ನೆಲ್ಲಿತಟ್ಟುತೀರ್ಥ

ಘಟ್ಟ ಕೊರೆಯುವ ಆವೇಶ ಕಳಚಿದ pious-ವಿನಿ ಇಲ್ಲಿ ಆದೂರು ವಲಯದ ದಟ್ಟಾರಣ್ಯ ಪೊರೆವ ಮಂದಗಾಮಿನಿ. ಅದಕ್ಕೆ ಸಮಾನಾಂತರದಲ್ಲಿದ್ದ ಜಾಲ್ಸೂರು – ಕಾಸರಗೋಡು ರಸ್ತೆಯಲ್ಲಿ ಆ ಬೆಳಿಗ್ಗೆ (೨೪-೫-೧೯೮೧, ಆದಿತ್ಯವಾರ) ನಾನು ಯೆಜ್ದಿ ಮೋಟಾರು ಸೈಕಲ್ಲಿನಲ್ಲಿ ಭಾವ ಶಂಕರನಾರಾಯಣನನ್ನು ಬೆನ್ನಿಗೆ ಏರಿಸಿಕೊಂಡು ಧಾವಿಸಿದ್ದೆ. ಬೀಡಿ ಜೋಪಡಿಗೂ ಗತಿಯಿಲ್ಲದ ಪಡಿಯತಡ್ಕ ಎಂಬಲ್ಲಿ ಎಡದ ಮಣ್ಣ ದಾರಿಗೆ ಕವಲೊಡೆದೆವು. ಲಾರಿ ಜೀಪುಗಳು ಮಾತ್ರ ಸುಲಭದಲ್ಲಿ ಪಾರುಗಾಣಬಲ್ಲ ಹೊಳೆಪಾತ್ರೆಯನ್ನು ಹುಶಾರಾಗಿ ದಾಟಿಸಿದೆ. ಚರಳು ಕಲ್ಲಿನ, ತೀವ್ರ ಏರಿಳಿತಗಳ ಮುಂದಿನ ಸುಮಾರು ಎಂಟು ಕಿಮೀ ದಾರಿ ನಮ್ಮಿಂದ ಇನ್ನೂ ಹೆಚ್ಚಿನ ಚಾಲಾಕೀತನವನ್ನು ನಿರೀಕ್ಷಿಸಿದ್ದು ವಿವರಿಸ ಹೋದರೆ ಪ್ರತ್ಯೇಕ ಸಾಹಸಕಥನವೇ ಆದೀತು. ವಾಸ್ತವದಲ್ಲಿ ನಡೆದು ಬಂದ ನಮ್ಮದೇ ತಂಡದ ಉಳಿದೈವರು ಹೆಚ್ಚು ಸುಖಿಗಳು. ಅವರು ಕಾಸರಗೋಡು ಜಾಲ್ಸೂರು ಬಸ್ಸಿನಲ್ಲಿ ನಾರ್ಲದಿಂದ ಸ್ವಲ್ಪ ಮುಂದೆ ಇಳಿದು, ಅವರಿವರಲ್ಲಿ ವಿಚಾರಿಸಿಕೊಂಡು ಮಣ್ಣು ದಾರಿ ತುಳಿದು, ಪಯಸ್ವಿನಿ ದಾಟಿ ನಾಲ್ಕು ಕಿಮೀ ಕಾಲ್ದಾರಿ ಸವೆಸಿದ್ದರು.

ವರ್ಷದ ಹಿಂದಷ್ಟೇ (ತಂಗಿಯ ಗಂಡನಾಗಿ) ಒದಗಿದ ಭಾವನ ಅರ್ಥಾತ್ ನನ್ನ ‘ಸಾಹಸ’ದ ಕಿಂಚಿದಂಶವನ್ನು ಸ್ವಾಂಗೀಕರಿಸಿಕೊಳ್ಳುವ ಉತ್ಸಾಹ ಶಂಕರನದು. ಕರಾಟೆಕಾ, ಕ್ಯಾಪ್ಟನ್, ಲಯನ್, ಸಂವಹನಾಚತುರ, ಪ್ರೊಫೆಸರ್ (ಇನ್ನಷ್ಟೂ ಹೇಳಲಾಗದ ನನ್ನ ಅಜ್ಞಾನವನ್ನು ಕ್ಷಮಿಸಿ) ರಾಧಾಕೃಷ್ಣ ಕಾರ್ಕಳದ ಭುವನೇಂದ್ರ ಕಾಲೇಜಿನಿಂದ ಬಂದಿದ್ದರು. ಸಂತ ಏಗ್ನೆಸ್ ಕಾಲೇಜಿನ ಪ್ರೊ| ಜಯಂತ, ಮೂರ್ತಿ ಚಿಕ್ಕದಾದರೂ ಆಸಕ್ತಿ ಅಪಾರ, ಸಾಧನೆಯಲ್ಲಿ ಶ್ರದ್ಧೆ, ಶ್ರಮ ಅಪರಿಮಿತ. ಮೀನುಗಾರಿಕಾ ಕಾಲೇಜಿನ ಪ್ರೊ| ಶ್ರೀಕಂಠಯ್ಯನವರನ್ನು ಕೇವಲ ವೃತ್ತಿ ಘಟ್ಟದ ಮೇಲಿನಿಂದಿಳಿಸಿದ್ದರೂ ತುಳುವರನ್ನೂ ನಾಚಿಸುವಷ್ಟು ಸುಂದರ ತುಳು ಸಂಭಾಷಣಾಚತುರ, ಈ ನೆಲದ ಸ್ಪಂದನ ಗ್ರಹಿಸುವ ಕುತೂಹಲಿ. ಕಡ್ಡೀ ಪೈಲ್ವಾನ್ ಸೂರ್ಯ ಉರ್ಫ್ ಅಡ್ಡೂರು ಸೂರ್ಯನಾರಾಯಣ ರಾವ್ ಇನ್ನೂ ವಿದ್ಯಾರ್ಥಿ, ಮನುಷ್ಯೇತರ ಜೀವಿಗಳ ಅದರಲ್ಲೂ ಹಾವು ಕಪ್ಪೆಗಳ ಸಂಶೋಧನಾ ನಿರತ. ಪ್ರಕಾಶ್ ನಾಟೇಕರ್ ನನ್ನ ಅಂಗಡಿ ಸಹಾಯಕನಾದರೇನು ಹವ್ಯಾಸೀ ಆಸಕ್ತಿಯಲ್ಲೂ ನನ್ನೊಡನಾಡುವ ಉತ್ಸಾಹ ಬೆಳೆಸಿಕೊಂಡು ಬಂದವ. ಹೀಗೆ ಆದೂರು ಕಾಯ್ದಿಟ್ಟ ಅರಣ್ಯಾಂತರ್ಗತ ವಿಷ್ಣು ದೇವರ ಅಂಗಳದಲ್ಲಿ ಒಟ್ಟಾದ ನಮಗೆ ಮುಂದಿನ ಏಕೈಕ ಗುರಿ ನೆಲ್ಲಿತಟ್ಟು ತೀರ್ಥ ಗುಹೆ, ದಾರಿದೀಪ ಅಲ್ಲಿನ ಅರ್ಚಕ, ನಂಬೂದರಿ.

ಜಾಂಬ್ರಿಗುಹೆ ವಿವಾದಗಳ ಸುಳಿಯಲ್ಲಿದ್ದಾಗಲೇ ಪತ್ರಿಕಾ ಅಂಕಣದಿಂದ ಹೊರಗೆ ಇನ್ನೆಷ್ಟೋ ಪರಿಚಯಸ್ಥರು ಕೆಲವು ಗುಹೆಗಳ ಪ್ರಸ್ತಾಪ ಮಾಡಿದ್ದರು. ಅದರಲ್ಲಿ ಭಾರೀ ಆಕರ್ಷಣೆ ಮೂಡಿಸಿದ್ದು ಈ ವಿಷ್ಣು ದೇವಾಲಯದ ಒತ್ತಿನ ನೆಲ್ಲಿತಟ್ಟು ತೀರ್ಥ ಗುಹೆ. ನಂಬೂದರಿ ಅಪ್ಪಟ ಮಲೆಯಾಳಿ. ನಾವು ವಿಚಾರಿಸಿದ್ದೆಲ್ಲ ಆತನ ತಲೆಯ ಮೇಲೆ ಹೋಯ್ತೇ ಎಂದು ರಾಧಾಕೃಷ್ಣ ಹೊಸಾ ಸಂವಹನ ತಂತ್ರವನ್ನು ಆವಿಷ್ಕರಿಸುವವರಿದ್ದರು! ಆ ಹಂತದಲ್ಲಿ ಆತ ಯಾವ ನಿರ್ಬಂಧ ಹೇರದೆ ದೇವಾಲಯ ನಿಂತ ಗುಡ್ಡೆಯ ದಕ್ಷಿಣ ತಪ್ಪಲಿನಲ್ಲಿ ಕೇವಲ ನೂರು ಮೀಟರ್ ಅಂತರದಲ್ಲಿದ್ದ ಗುಹೆಗಳ ಇರವನ್ನು ಕರೆದೊಯ್ದು ತೋರಿಸಿದ. ಯುಪಟೋರಿಯಂ ಮುಚ್ಚಿದ್ದ ಸವಕಲು ಜಾಡನ್ನು ಅನಾವರಣಗೊಳಿಸುತ್ತ ಸ್ವಲ್ಪೇ ಸ್ವಲ್ಪ ಇಳಿಯುತ್ತಿದ್ದಂತೆ ಭಾರೀ ಮರಗಳಮರೆಯ ಪುಟ್ಟ ಕಣಿವೆಯಲ್ಲಿ ಗುಹಾಮುಖ ಸ್ಪಷ್ಟವಾಯ್ತು. ಆದರೆ ನಂಬೂದರಿ ಕುತೂಹಲದ ಎಳೆಯನ್ನೇನೂ ಉಳಿಸಿಕೊಳ್ಳದೆ ನಿರ್ಗಮಿಸಿದ್ದಕ್ಕೆ ಆಗ ನಾವು ವಿಶೇಷ ಅರ್ಥವನ್ನೇನೂ ಕಟ್ಟದಿದ್ದರೂ ಮಹಾನ್ ವೃಕ್ಷಗಳ ನೆರಳು, ದಟ್ಟ ತರಗೆಲೆ ಹೊದಿಕೆ ಬೇಸಗೆಯ ದಿನಗಳಲ್ಲೂ ಆ ಜಾಗವನ್ನು ತಂಪಾಗಿರಿಸಿತ್ತು. ಅಲ್ಲಿ ಪಶ್ಚಿಮಕ್ಕೆ ತೆರೆದುಕೊಂಡ ಒಂದು ದೊಡ್ಡ, ಒಣ ಹಳ್ಳ. ಅದರ ಮೇಲ್ಮೂಲೆಯಲ್ಲೊಂದು ಕೆಳಮೂಲೆಯಲ್ಲೊಂದು ಗುಹೆ. ಅರ್ಚಕನ ಮಾತಿನಂತೆ ಮೇಲಿನದು ಅರಾಧಿಸಲ್ಪಡುವ ತೀರ್ಥ ಗುಹೆ, ವರ್ಷಕ್ಕೊಮ್ಮೆ ಭಕ್ತಾದಿಗಳು ಪ್ರವೇಶಿಸುತ್ತಾರೆ. ಕೆಳಗಿನದು ಯಾರೂ ಹೆಚ್ಚು ಗಮನಹರಿಸದ ಮಳೆಗಾಲದ ನೀರು ಹೋಗುವ ಮಾಟೆ (‘ಗುಹೆ’ಗೆ ಮಾಟೆ, ಮಾಂಟೆ, ಬಿಲ, ಪಾಂಜಾರ, ಬಾಂಜಾರ, ಗವಿ ಮುಂತಾದವು ಪ್ರಾದೇಶಿಕವಾಗಿ ಪ್ರಚಲಿತ ಪರ್ಯಾಯ ನಾಮಗಳು). ಇದಕ್ಕೆ ಇನ್ನೂ ಕೆಳಗೊಂದು ಬಾಯಿಯಿದೆಯಂತೆ, ಆದರೆ ಜನ ನುಗ್ಗಿದ್ದಿಲ್ಲವಂತೆ. ನಾವು ನೀರಮಾಟೆಯನ್ನೇ ಮೊದಲಿಗೆ ಆಯ್ದುಕೊಂಡೆವು. ಕಾಣುತ್ತಿದ್ದ ನಾಲ್ಕೆಂಟು ಬಂಡೆಗಳ ಎಡೆಯಲ್ಲಿಳಿದು, ಮರಳು ನೆಲದ ಮೇಲೆ ಮೇಲೆ ಉದ್ದಂಡ ಮಲಗಿ ಮೊದಲಿಗನಾಗಿ ನಾನು ಒಳಕ್ಕೆ ತೆವಳಿದೆ. ಎಡಗೈಯ್ಯಲ್ಲಿ ಕತ್ತಿ, ಬಲಗೈಯ್ಯಲ್ಲಿ ಟಾರ್ಚು. ಹಿಂಬಾಲಕ ಯಾವ ಕ್ಷಣಕ್ಕೂ ಯುಕ್ತ ಕ್ರಮ ಕೈಗೊಳ್ಳಲು ಅಣಿಯಾಗಿದ್ದ. ಓರೆಯಲ್ಲಿ ತುಸುವೇ ಜಾರು ನೆಲದಲ್ಲಿ ಸಾಗುವ ತಗ್ಗು ಗುಹೆ. ಉದ್ದುದ್ದ ಆದರೆ ತೆಳು ಬೇರ ಎಳೆಗಳು ನೆಲ ಸವರುತ್ತ ಅಕ್ಷರಶಃ ಪರದೆಯೇ ಹಾಕಿದಂತಿತ್ತು. ಅದನ್ನು ಸರಿಸುತ್ತಾ ಎಲ್ಲಾ ಮೂಲೆ ಮೊಡಕುಗಳತ್ತಲೂ ಬೆಳಕೋಲಿನಲ್ಲಿ ಬೆದಕುತ್ತಾ ಸುಮಾರು ಇಪ್ಪತ್ತಡಿ ಸಾಗುವಾಗ ಗುಹೆ ಒಮ್ಮೆಲೆ ಮೇಲ್ಮುಖಿಯಾಯ್ತು. ನನ್ನ ಸಣ್ಣ ಚಲನೆಗೂ ಮೇಲಿನಿಂದ ಚರಳುಗಲ್ಲು ಉದುರಿ ಬರತೊಡಗಿತು. ಗುಹೆಯ ಸ್ಥಿರತೆ ಬಗ್ಗೆ ಧೈರ್ಯ ಸಾಲದೆ ನಾನು, ಓರ್ವ ಹಿಂಬಾಲಕ ಅಲ್ಲೇ ವಿರಮಿಸಿ, ಹೊರಗಿನಿಬ್ಬರಿಗೆ ಮಾಟೆಯ ಕೆಳಬಾಯಿ ಹುಡುಕಿ, ಅಲ್ಲಿಂದ ಧ್ವನಿ ಅಥವಾ ಬೆಳಕಿನ ಸಂದೇಶ ಕಳಿಸಲು ಸೂಚಿಸಿದೆವು. ಅಂದರೆ ಸುಮಾರು ನಲವತ್ತೈವತ್ತಡಿ ಅಂತರದಲ್ಲಿ ಅದು ಸಿಗಬೇಕಿತ್ತು, ಸಿಗಲಿಲ್ಲ. ಅದನ್ನು ಒಮ್ಮೆಗೆ ಕೈಬಿಟ್ಟು ತೀರ್ಥ ಗುಹೆಯತ್ತ ತಿರುಗಿದೆವು.

ಗುಡ್ಡೆಯ ಇಳಿಮೈ ತುಸುವೇ ತುಟಿ ಬಿರಿದು ನಕ್ಕಂತೆ ಪ್ರವೇಶ. ಅಗಲ ಸಾಕಷ್ಟಿದ್ದುದರಿಂದ, ನೆಲ ನೋಡಿಕೊಂಡು ಕುಕ್ಕರಗಾಲಿನಲ್ಲಿ ಎಲ್ಲರೂ ಒಳ ಸರಿದೆವು. ಹರಹು, ಚಪ್ಪರದೆತ್ತರ ಹೆಚ್ಚುತ್ತ ಹೋಗಿ ಸುಮಾರು ಮೂವತ್ತಡಿ ಅಂತರದಲ್ಲಿ ಎಲ್ಲರೂ ನೇರ ನಡೆದೇ ಹೋಗುವಷ್ಟಾಯಿತು. ಬೆಳಕಿಗೆ ಬೆದರಿ ಕಿಚಿಗುಟ್ಟುವ ಬಾವಲಿಗಳ ಆಂದೋಲನ, ಅಪರೂಪಕ್ಕೆ ಒರಲುವ ಕತ್ತಲ ತವಸಿಗ ಕೆಂಗಪ್ಪೆಗಳನ್ನು ಗಮನಿಸುತ್ತ ನಿಧಾನಕ್ಕೆ ಹೆಜ್ಜೆಗೆ ಹೆಜ್ಜೆ ಸೇರಿಸಿದೆವು. ಗುಹೆಯ ಬಲ ಅಂಚಿನಲ್ಲಿ ಒಂದು ಪುಟ್ಟ ತೊರೆ ಒಳಗಿನಿಂದ ಹರಿದು ಬರುತ್ತಿತ್ತು. ಆದರದು ಮುಂದೆ ಒಳಗೇ ಎಲ್ಲೋ ಭೂಗತವಾಗುತ್ತಿದ್ದುದಕ್ಕೇ ಇರಬೇಕು ಹೊರಗಿನ ಗುಡ್ಡದ ತೊರೆ ಒಣಭಣ. ಗುಹೆಯ ಗೋಡೆ ಪೂರಾ ಪೊಳ್ಳು ಮಾಟೆಗಳು – ಎಡೆ ಎಡೆಯ ಸೇಡಿ ಮಣ್ಣು ತೊಳೆದುಹೋಗಿ ಗಟ್ಟಿಕಲ್ಲಿನಂಶ ಉಳಿದು ತೋರುವ ಅವು ಒಟ್ಟಾರೆ ಗುಹಾ ರಚನೆಯ ಕಿರಿಯರೂಪವೇ ಇತ್ತು. ಮುಂದುವರಿದಂತೆ ಎಡ ಅಂಚಿನಲ್ಲಿ ಕಳಚಿಬಿದ್ದಂತಿದ್ದ ಒಂದೆರಡು ದೊಡ್ಡ ಬಂಡೆಗಳು. ಅದರ ಎತ್ತರದಿಂದ ತೊಡಗಿದಂತೆ ನೆಲ ಬೇರೇ ಸ್ತರದಲ್ಲಿದ್ದರೂ ಹತ್ತಿ ಮುಂದುವರಿದ ನಮಗೆ ಇಪ್ಪತ್ತಡಿ ಮುಂದೆ ದಾರಿ ಇಲ್ಲವಾಯ್ತು, ಅಂದರೆ ಗುಹೆ ಮುಗಿದಿತ್ತು.

ಮುಖ್ಯ ಗುಹೆ ಪ್ರವೇಶದಿಂದ ಸುಮಾರು ನೂರಡಿಯ ನಂತರ ಅಗಲ, ಎತ್ತರ ಕಿರಿದಾದ ಓಣಿಯೇ ಆಗುತ್ತದೆ. ಪಾದ ತೊಯ್ಯುವ ಹರಿನೀರ ಎದುರು ಮೂವತ್ತು ಹೆಜ್ಜೆ ಹಾಕುವಾಗ ಸಣ್ಣ ಕೊಠಡಿ ಸೇರಿದ ಅನುಭವ. ಓಣಿಯಿಂದ ಕೊಠಡಿ ಪ್ರತ್ಯೇಕಿಸುವಂತೆ, ಒಂದು ಥರಾ ಹೊಸ್ತಿಲ ರೇಖೆಯಂತೆ ಹರಿದಿದ್ದ ಕರಿಕಲ್ಲ ಸೆಲೆಯೊಂದು ಆಕರ್ಷಕವಾಗಿತ್ತು. ನೆಲ ಪುಟ್ಟ ಪಳ್ಳ. ಸುತ್ತಣ ಗೋಡೆ ಸೇಡಿಮಣ್ಣಿನ ಅಥವಾ ಮರಳುಗಲ್ಲಿನ ನೀರು ಜಿನುಗು ಮಾಸದ ಅಸ್ಥಿರ ರಚನೆಗಳು. ಎದುರು ಮೂಲೆಯಲ್ಲಿ ತೊರೆ ಸುಮಾರು ನಾಲ್ಕಡಿ ಎತ್ತರದಿಂದ ಪುಟ್ಟ ಜಲಪಾತವಾಗಿ ಮೊರೆಯುತ್ತಿತ್ತು. ಬಹುಶಃ ಭಕ್ತಾದಿಗಳ ತೀರ್ಥ ಸ್ನಾನದ ಸ್ಥಳ ಅದುವೇ ಇರಬೇಕು. ನಮ್ಮ ಚಲನವಲನಗಳು ವಿಪರೀತವಾದರೆ ಗುಹೆಯ ಕುಸಿತದ ಭಯವಿತ್ತು. ಬಲು ಎಚ್ಚರದಿಂದ ಜಲಪಾತದ ದಿಣ್ಣೆಯನ್ನೂ ಏರಿದಾಗ ಮತ್ತೆ ಓಣಿ. ಪಾದ ಮುಳುಗಿಸುವ ತೊರೆ, ಕೆಸರಿನಲ್ಲಿ ನಡೆಯುತ್ತಿದ್ದೆವು. ಎತ್ತರ ಸಾಲದ್ದಕ್ಕೆ ಸೊಂಟ ಡೊಂಕಿಸಿ, ಅಗಲ ಸಾಲದ್ದಕ್ಕೆ ಅಡ್ಡಡ್ಡ ಮತ್ತೆ ನಾಲ್ಕೆಂಟು ಅಡಿ ಹೋದಾಗ ಮತ್ತೊಂದು ಕಿರಿಕೋಣೆ. ಅಲ್ಲಿಂದಾಚಿನ ಸುಮಾರು ಹತ್ತಡಿಯಂತೂ ತೀರ ಕಿಷ್ಕಿಂದೆ. ನಮಗೋ ಗುಹೆಯ ತಾರ್ಕಿಕ ಕೊನೆ ಮುಟ್ಟಿಬಿಡಬೇಕೆಂಬ ಹುಮ್ಮಸ್ಸು ಆದರೆ ಉದ್ದಕ್ಕೂ ನಮ್ಮ ಬೆಳಕೋಲುಗಳಿಗೆ ಬೆದರಿ ಒಳ ಸೇರಿದ್ದ ಬಾವಲಿ ಸಂದೋಹಕ್ಕೆ ಹಿಂದಿಲ್ಲ ಮುಂದಿಲ್ಲದ ಗಲಿಬಿಲಿ. ಒಂದೆರಡು ಆಕಸ್ಮಿಕವೆಂಬಂತೆ ನಮ್ಮನ್ನು ಸವರಿದ್ದೂ ಉಂಟು. ಆದರೆ ನಮ್ಮ ವಲಯಗಳಲ್ಲಿ ಆಕ್ರಮಣ ಮಾಡುವ, ರಕ್ತಪಿಪಾಸು ಬಾವಲಿ ಜಾತಿಯಿಲ್ಲ ಎಂಬ ತಿಳುವಳಿಕೆಯ ಧೈರ್ಯದ ಮೇಲೆ ಮುಂದುವರಿದು ಕೊನೆ ತಲಪಿದೆವು. ಅದು ಮತ್ತೊಂದು ಪುಟ್ಟ ಕೋಣೆ, ಗೋಡೆಯಲ್ಲಿ ಹತ್ತೆಂಟು ನೀರೊಸರುವ ಪೊಳ್ಳು – ಅಷ್ಟೆ.

ಕಾಶಿದರ್ಶನಕ್ಕೆ ಸುಲಭ ರಹದಾರಿ, ದೈವ ಸಾಕ್ಷಾತ್ಕಾರಕ್ಕೆ ಪರಮಮಾರ್ಗ ಎಂದೇನೂ ಭ್ರಮೆ ಕಟ್ಟಿಕೊಳ್ಳದ ನಮಗೆ ಲಕ್ಷ್ಯ ಸಾಧನೆಯ ಸಂಭ್ರಮ. ಸುಮಾರು ಒಂದೂಕಾಲು ಗಂಟೆಯ ಅವಿರತ ಶ್ರಮದಲ್ಲಿ ವಾತಾವರಣದ ತೇವಾಂಶಯುಕ್ತ ಬಿಸಿಗೆ ಬೆವೆತು, ತೊರೆನೀರಿನಲ್ಲಿ ತೊಯ್ದು, ಮಣ್ಣು ಬಾವಲಿಮೂರಿ ಮೈಗಂಧಕ್ಕೆ ಬೆರೆತು ಹೋದರೂ ಸಾಂಕೇತಿಕ ಆಚರಣೆ ಮರೆಯಲಿಲ್ಲ! ಚೀಲದಲ್ಲಿ ಒಯ್ದ ಬಾಳೆ ಹಣ್ಣು ಬಿಸಿಗೆ ಕಪ್ಪಾಗಿ, ಸಿಪ್ಪೆ ಗುಳ ಕಟ್ಟಿದ್ದ ಕಾಗದದೊಡನೆ ವಿಪರೀತ ಮೈತ್ರಿ ಸಾಧಿಸಿದ್ದರೂ ಬಿಡಿಸಿ ತಿಂದು, ಕಸವನ್ನಷ್ಟೂ ಮತ್ತೆ ಚೀಲಕ್ಕೆ ಸೇರಿಸಿದೆವು. ನುಗ್ಗುವಾಗಿದ್ದ ಎಚ್ಚರವನ್ನು ಒಂದಿಷ್ಟೂ ಹಗುರಮಾಡದೆ, ಮತ್ತಷ್ಟು ಸುತ್ತಣ ರಚನೆಗಳನ್ನು ಮನಸ್ಸಿಗಿಳಿಸಿಕೊಳ್ಳುತ್ತ ಮರಳಿದೆವು. ‘ತೀರ್ಥಸ್ನಾನ’ದ ನವೋಲ್ಲಾಸದಲ್ಲಿ ನೀರಮಾಟೆಯ ಪುನಃಶೋಧಕ್ಕಿಳಿದೆವು.

ಒಣಕಣಿವೆಯಲ್ಲಿ ನಾವು ಸ್ವಲ್ಪ ಚದುರಿಕೊಂಡು ನೀರಮಾಟೆಯ ಕೆಳಬಾಯಿಗೆ ಹುಡುಕು ನೋಟವನ್ನು ತೀವ್ರಗೊಳಿಸಿ ನಡೆದೆವು. ಪ್ರಯತ್ನ ವಿಫಲವಾಗಲಿಲ್ಲ, ಮೊದಲ ನಿರೀಕ್ಷೆ ಐವತ್ತಡಿಯೊಳಗಿದ್ದದ್ದು ತಪ್ಪೆನ್ನುವಂತೆ ಸುಮಾರು ಆರ್ನೂರು ಅಡಿ ಅಂತರದಲ್ಲಿ ಸಿಕ್ಕಿಯೇ ಸಿಕ್ಕಿತು. ಭಾರೀ ಕಾಡುಬಾದಾಮಿ ಮರವೊಂದರ ಎತ್ತೆತ್ತರದ ಬೇರುಗಟ್ಟೆಯ ಸಂದಿನಲ್ಲಿ ತರಗೆಲೆ ಮುಚ್ಚಿದಂತಿದ್ದ, ನೇರ ನೆಲದಾಳಕ್ಕಿಳಿದ ಗುಹಾ ಬಾಯಿಯನ್ನು ಎಚ್ಚರದಲ್ಲಿ ಅನಾವರಣಗೊಳಿಸಿದೆವು. ಸುಮಾರು ನಾಲ್ಕಡಿ ಆಳದ, ಸುಲಭವಾಗಿ ಒಂದಾಳು ನುಗ್ಗಬಹುದಾದ ಮಾಟೆ. ಆದರೆ ತಳದಲ್ಲಿ ರಾಶಿ ಬಿದ್ದ ಇನ್ನಷ್ಟು ತರಗೆಲೆಯಲ್ಲದೆ ಗುಹೆ ಹೆಚ್ಚು ಕಡಮೆ ಲಂಬಕೋನದಲ್ಲಿ ಗುಡ್ಡೆಯ ಶಿಖರದೆಡೆಗೆ ಹೊರಳಿಕೊಂಡಂತಿತ್ತು. ಕಾಲು ಮುಂದಾಗಿ ಇಳಿದರೆ ಕುರುಡಾಗಿ ಅಪರಿಚಿತ ಆಯಾಮಕ್ಕೆ ತೆರೆದುಕೊಳ್ಳುವ ಅಪಾಯವಿತ್ತು. ಅನಿವಾರ್ಯವಾಗಿ ಸನ್ನಿವೇಶಕ್ಕೆ ತಕ್ಕ ವಿಚಿತ್ರ ತಂತ್ರ ಅಳವಡಿಸಿಕೊಂಡೆವು. ಸಣ್ಣಾಳು ಜಯಂತರ ಕೈಯಲ್ಲಿ ಟಾರ್ಚು, ಕತ್ತಿ ಕೊಟ್ಟು ನಾನವರ ಎರಡೂ ಕಾಲು ಹಿಡಿದು ತಲೆಕೆಳಗಾಗಿ ಗುಹೆಗೆ ಇಳಿಸಿದೆ! ಹಗ್ಗದ ರಕ್ಷಣೆ (= ಬಿಲೇ, ಗಡಾಯಿ ಕಲ್ಲಿನ ನೇರಮೈ ಆರೋಹಣ ನೆನಪಿಸಿಕೊಳ್ಳಿ) ಪ್ರತ್ಯೇಕವಿತ್ತು. ತರಗೆಲೆ ರಾಶಿಯಿಂದ ಚಿಮ್ಮಬಹುದಾದ ಯಾವುದೇ ಹಾವಿನಿಂದ ತೊಡಗಿ ಕತ್ತಲಗರ್ಭದಿಂದ ಹೊರಧಾವಿಸಬಹುದಾದ ಕಣೆಹಂದಿಯವರೆಗೆ ಮಾನಸಿಕವಾಗಿ ಸಜ್ಜುಗೊಂಡ ಜಯಂತ್ ಏನೂ ಆಗದೆ ತಳಸ್ಪರ್ಷಿಸಿ ಆರಾಮಾದರು. ಗುಹೆಯಾಳದ ಭದ್ರತೆ ಸ್ವಲ್ಪ ಮಟ್ಟಿಗೆ ಖಚಿತವಾದ್ದರಿಂದ ಸರದಿಯ ಮೇಲೆ ಎಲ್ಲರೂ ಕಾಲು ಮುಂದಾಗಿಯೇ ಇಳಿದು ಗುಹೆಯೊಳಗೆ ಹರಡಿಕೊಂಡೆವು.

ಅಗಲ ಸಾಕಷ್ಟಿದ್ದರೂ ಮೂರಡಿ ಎತ್ತರ ಮೀರದ ಆ ಮಾಟೆಯಲ್ಲಿ ಏರುಮುಖರಾಗಿ ನಾಲ್ಗಾಲರಾಗುವುದೋ ತೆವಳುವುದೋ ಎನ್ನುವುದಷ್ಟೇ ನಮಗಿದ್ದ ಸ್ವಾತಂತ್ರ್ಯ. ಸಣ್ಣದಾಗಿ ಏರಿಳಿಯುತ್ತಾ ಪುಟ್ಟ ಕವಲುಗಳನ್ನು ತೋರಿದರೂ ನಮ್ಮ ಗಾತ್ರಕ್ಕೆ ಮುಖ್ಯ ‘ವಾಹಿನಿ’ಯಲ್ಲಷ್ಟೇ ಅವಕಾಶ ಒದಗಿಸಿತ್ತು ಗುಹೆ. ಒಂದೆಡೆಯಂತೂ ಸ್ವಲ್ಪ ದೊಡ್ಡ (ದಡ್ಡ?) ಮಂಡೆಯ ನನಗೆ ಸಿಕ್ಕಿ ಹಾಕಿಕೊಂಡ ಅನುಭವವಾಗಿ, ಹಿಂದೆ ಸರಿದು ಕತ್ತಿಯ ಮೊನೆಯಲ್ಲಿ ಹುಶಾರಾಗಿ ಸ್ವಲ್ಪ ನೆಲ (ಗಮನಿಸಿ – ಮಾಡಲ್ಲ) ಕೆತ್ತಿ ಮುಂದುವರಿಯಬೇಕಾಯ್ತು. ಪ್ರವೇಶದ ಕಸ ಬಿಟ್ಟರೆ ಒಳಗೆ ಉದ್ದಕ್ಕೂ ಮಳೆಗಾಲದ ನೀರ ಹರಿವಿನ ಸಾಕ್ಷಿಯಾಗಿ ಒಂದೋ ತೆಳು ಮರಳು ಅಥವಾ ಸಣ್ಣ ಚರಳುಕಲ್ಲ ಹಾಸು ಇದ್ದ ಒರಟು ಮುರಕಲ್ಲ ನೆಲವೇ ಗತಿ. ಎಷ್ಟು ಜಾಗ್ರತೆ ವಹಿಸಿದರೂ ಮೊಣಕಾಲು, ಅಂಗೈ ತರಚಲು ಗಾಯಗಳಾಗದವರೇ ಇಲ್ಲ. ಧಾರಾಳವಾಗಿ ಹಾರಾಡುತ್ತಿದ್ದ ಬಾವಲಿಗಳಷ್ಟೇ ನಮಗೆ ಮುಂದುವರಿಯಲು ಹಸಿರು ಕಂದೀಲು ತೋರುತ್ತಿತ್ತು. ಇತರ ಮಿತ್ರರ ಮನಸ್ಸಿನ ಒಳತೋಟಿ ನಾನಂದು (ಎಂದೂ!) ಕೇಳಿದವನಲ್ಲ. ಆದರೆ ನನ್ನ ಭಾವಯ್ಯನಿಗೆ ಮಾತ್ರ ಬಂದು ಕೆಟ್ಟೆ ಎಂದನ್ನಿಸಿದ್ದು ನಿಜ. ಎಲ್ಲ ಮುಗಿದು ಮನೆಯ ರಕ್ಷಣೆಯಲ್ಲಿ ಇದ್ದಾಗ “ನನಗಲ್ಲಿ ಒಮ್ಮೆ ನಿಜಕ್ಕೂ ನಾವಿನ್ನು ಬದುಕಿ ಬರುವುದಿಲ್ಲ” ಎಂದು ಅನಿಸಿದ್ದನ್ನು ಯಾವ ಬಿಗುಮಾನಗಳಿಲ್ಲದೆ ಹೇಳಿಕೊಂಡಿದ್ದ. ಅನುಸರಿಸಲು ಅವ್ಯಕ್ತ ಭಯ, ಒಬ್ಬನೇ ಹಿಂದೆ ಹೋಗುವುದು ಊಹೆಗೂ ಮೀರಿದ್ದು!

ಸುಮಾರು ಎರಡು ಗಂಟೆಯ ಯಮ ಪ್ರಯತ್ನದ ಕೊನೆಯಲ್ಲಿ ಒಮ್ಮೆಗೇ ಎಲ್ಲರಿಗೂ ತಲೆ ಎತ್ತಿ ಕುಳಿತು ವಿರಮಿಸಲು ಅವಕಾಶ ಕೊಡುವಂಥ ಕೋಣೆಯಂಥ ಜಾಗ ಸಿಕ್ಕಿತ್ತು. ಅದರ ನೆಲ ನಡುವಿನಲ್ಲಿ ದಿಣ್ಣೆಯ ಹಾಗೆ ತುಸು ಉಬ್ಬಿದ್ದು ಅದುವೇ ಮುಕ್ತಾಯವೋ ಎಂಬ ಭಾವನೆ ಹುಟ್ಟಿಸುತ್ತಿತ್ತು. ಆದರೆ ತಾಳ್ಮೆಯಲ್ಲಿ ಎಲ್ಲ ಅಂಚುಗಳನ್ನು ತಡಕುವಾಗ ನಿರೀಕ್ಷೆಯ ದಿಕ್ಕಿನಲ್ಲೇ ಸ್ವಲ್ಪ ಕಲ್ಲ ಹರಳುಗಳು ಅಂಚುಗಟ್ಟಿದಂತಿದ್ದ, ಬೇರ ಪರದೆ ಮರೆಮಾಡಿದಂತಿದ್ದ ಹೊಸತೇ ಮಾಟೆ ಕಾಣಿಸಿತು. ಅನಾಥ ದ್ವೀಪದಲ್ಲಿ ತಿಂಗಳಾನುಗಟ್ಟಳೆ ಸಿಕ್ಕಿಬಿದ್ದ ನಾವಿಕರು ದಿಗಂತದಲ್ಲೆಲ್ಲೋ ಚುಕ್ಕಿ ಹೊಳೆದರೂ “ಒಹ್ಹೋ! ಹಡಗೂ” ಎಂದು ಸಂಭ್ರಮಿಸಿದ ಭಾವತೀವ್ರತೆ ನಮ್ಮೆಲ್ಲರಿಗೂ ಬಂತು. ನೀರಮಾಟೆಯ ಮೇಲ್ಬಾಯಿ ಕಂಡ ನೆನಪಿನಲ್ಲಿ “ಇದೇ ಇದೇ ಅದು” ಎಂದು ಎಲ್ಲರ ಮನ ನುಡಿಯಿತು. ಆದರೆ ಪರಿಸರದ ಮರ್ಯಾದೆಗೆ ಒಂದಿಷ್ಟೂ ಕುಂದು ಬಾರದಂತೆ ತೆರೆ ಸರಿಸುತ್ತ, ಚರಳುಕಲ್ಲುಗಳ ಹೆಚ್ಚಿನ ಘಾಸಿ ಏನೂ ಅಲ್ಲವೆಂಬಂತೆ ತೆವಳಿದೆವು. ಮಸಕು ಬೆಳಕು, ಪಿಸು ಮಾತುಗಳು ಮತ್ತೆ ಹರ್ಷೋದ್ಗಾರಗಳಾಗುತ್ತಿದ್ದಂತೆ ನಾವು ಮೇಲ್ಬಾಯಿಯಿಂದ ಹೊರಲೋಕಕ್ಕೆ ಬಂದಿದ್ದೆವು. ನಂಬೂದರಿ ಹೋದವನು ಆ ಕಗ್ಗಾಡಮೂಲೆಯಲ್ಲೂ ಸುದ್ದಿ ಹಬ್ಬಿಸಿ ಹತ್ತಿಪ್ಪತ್ತು ಕುತೂಹಲದ ಕಣ್ಣುಗಳು ನಮ್ಮ ಬರೋಣವನ್ನು ಕಾದಿದ್ದವು. ಅವರು ಹೊತ್ತು ತಂದಿದ್ದ ಬೊಂಡಗಳನ್ನು ಕೆತ್ತಿ ನಮಗೆ ಕೊಟ್ಟು ಮೆಚ್ಚುಗೆ ಸೂಚಿಸಿದ್ದು ನಮಗೆ ಧನ್ಯತೆ ಮೂಡಿಸಿತು. ವಾಸ್ತವದಲ್ಲಿ ಸಾಹಸಕ್ರೀಡೆಗಳಿಗೆ ಪ್ರೇಕ್ಷಕರಿಲ್ಲ ಎನ್ನುವ ನನ್ನ ಮಾತು ಅಪಮೌಲ್ಯಗೊಳ್ಳುವಂತೆ ಅವರು ಸುಮಾರು ಒಂದೂವರೆ ಗಂಟೆಯಿಂದಲೂ ಕಾದಿದ್ದರಂತೆ. ನೀರಮಾಟೆಯ ಆ ಕೊನೆಯಲ್ಲಿ ನಾವು ಹಿಂದುಳಿಸಿದ್ದ ಕೆಲವು ಸಾಮಾನುಗಳನ್ನು ನೋಡಿ ಈ ಕೊನೆ ಆ ಕೊನೆ ಎಂದು ಕಾದೇ ಇದ್ದು ನಮ್ಮ ಸಾಹಸಕ್ಕೆ ಗಟ್ಟಿ ಸಾಕ್ಷಿಗಳೇ ಆದರು. ಹೆಚ್ಚಿನ ಉತ್ಸಾಹದಲ್ಲಿ ಅಲ್ಲೇ ಹತ್ತಿರದಲ್ಲಿದ್ದ ಇನ್ನೊಂದೆರಡು (ಕೇವಲ) ಪೊಳ್ಳುಗಳನ್ನೂ ನಮಗೆ ಗುಹೆಗಳಿರಬಹುದೇ ಎಂಬ ಅನುಮಾನದಲ್ಲಿ ತೋರಿಸಿ, ನಿಗೂಢವಾಗಿ ಅಲ್ಲಿಂದಲೇ ಬೀಳ್ಕೊಂಡರು.

ಸೂರ್ಯನಿಗೆ ಹತ್ತಿದ್ದ ಮಣ್ಣು, ಬೆವರು ತೊಳೆದುಕೊಳ್ಳುವ ಆತುರ. ಬರಬರನೆ ಗುಡ್ಡ ಏರಿದವನೇ ಯಾರುಂಟು ಯಾರಿಲ್ಲ ಎಂದು ಗಮನಿಸದೇ ಶೂ, ಚೀಲಗಳನ್ನು ಅಲ್ಲೇ ಅಂಗಳದಲ್ಲಿ ಎಸೆದು ದೇವಾಲಯದ ಒಳಗಿದ್ದ ಬಾವಿ ಬಳಿಗೆ ಧಾವಿಸಿದ. ಬಾಗಿಲಿನಲ್ಲಿ ಬಲವಾದ ದೊಣ್ಣೆ ಹಿಡಿದ ಎರಡು ಕಟ್ಟಾಳುಗಳು ಒಮ್ಮೆಗೆ ಇವನನ್ನು ತಡೆದರು. ದೇವಾಲಯದೊಳಗಿಂದ ಪ್ರಾಯಸ್ಥರೊಬ್ಬರು ಹುಬ್ಬು ಗಂಟಿಕ್ಕಿಕೊಂಡು ಬಂದು ಮಲಯಾಳದಲ್ಲಿ “ಯಾರು ನೀನು” ಎಂದು ವಿಚಾರಿಸಿದರು. ಇವನ ಅಸಹನೆಯ ಉತ್ತರ ಅವರ ಸಿಟ್ಟು ಹೆಚ್ಚಿಸಿತು. ಅಷ್ಟರಲ್ಲಿ ನಾವೆಲ್ಲ ಅಲ್ಲಿಗೆ ತಲಪಿಕೊಂಡಿದ್ದೆವು. ನಮಗೆ ಗುಹೆಯ ಮಾರ್ಗ ದರ್ಶಿಸಿದ್ದ ನಂಬೂದರಿ ಬಾಗಿಲ ಮರೆಯಲ್ಲಿ ಹೆದರಿ ನಿಂತಂತಿತ್ತು. ಪ್ರಾಯಸ್ಥರ ಉರಿನೋಟ ಮತ್ತು ಖಡಕ್ ಪ್ರಶ್ನೆಗೆ ವೈಚಾರಿಕತೆಯನ್ನು ಹೇರುವ ಉತ್ಸಾಹದಲ್ಲಿ ಕುದಿಯುತ್ತಿದ್ದ ಸೂರ್ಯ, ಶ್ರೀಕಂಠಯ್ಯನವರನ್ನು ಮೊದಲು ಬಲವಂತವಾಗಿ ಬಾಯ್ಮುಚ್ಚಿಸಿದೆವು. ಅನಂತರ ರಾಧಾಕೃಷ್ಣ ಮತ್ತು ನಾನು ಸಮಾಧಾನದಲ್ಲಿ, ನಾವು ಮಂಗಳೂರಿನಿಂದ ಬಂದವರೆಂದೂ ಗುಹೆಯ ಪ್ರಾಕೃತಿಕ ವೈಶಿಷ್ಟ್ಯ ಇದುವರೆಗೆ ಬರಿದೇ ಕೇಳಿದ್ದನ್ನು ಕಣ್ಣಾರೆ ಕಂಡು ಸಂತೋಷಿಸಿದೆವೆಂದೂ ಭಾಷೆಯ ತೊಡಕಿನಲ್ಲೂ ಅವರಿಗೆ ತಿಳಿಯಪಡಿಸಿದೆವು. ಅವರು (ಗುಹೆಯೂ ಸೇರಿದಂತೆ) ದೇವಾಲಯದ ಮುಖ್ಯಸ್ಥ – ಕುಞಿಕಣ್ಣ ಮಣಿಯಾಣಿಯೆಂದು ತಿಳಿಯಿತು. (ಅನಂತರ ತಿಳಿದು ಬಂದಂತೆ ಇವರ ಮೇಲಿನ ಪೋಲಿಸ್ ದಾಖಲೆಗಳು ನಮಗೆ ಮೊದಲೇ ತಿಳಿದಿದ್ದರೆ ಹೆಚ್ಚಿನ ಅಧೈರ್ಯ ಸೇರಿಕೊಳ್ತಿತ್ತೋ ಏನೋ!) ನಮ್ಮನ್ನು ‘ಹಿಂದೂ ಪವಿತ್ರ ಕ್ಷೇತ್ರವನ್ನು’ ಮಲಿನಗೊಳಿಸುವ ಅನ್ಯ ಮತೀಯರೆಂದು ಸಂಶಯಿಸಿದರು. ಇಲ್ಲಿ ನನ್ನ ಭಾವನ ಜನಿವಾರ, ಶ್ರೀಕಂಠಯ್ಯನವರ ಮಣಿಗಂಟಿನ ಕಾಶೀದಾರ, ಇನ್ಯಾರದೋ ಮಂತ್ರಾಲಯದ ಮಹಾತ್ಮರ ತಾಯಿತಿಗಳು ನಿಜವಾದ ರಕ್ಷೆ ಕೊಟ್ಟವು. ನಮ್ಮ ಪ್ರತಿಯೊಂದೂ ಸಲಕರಣೆಗಳನ್ನು (ಬೂಟು, ಕತ್ತಿ, ನೈಲಾನ್ ಹಗ್ಗ, ಟಾರ್ಚು ಇತ್ಯಾದಿ) ಗುಹೆಯ ಪಾವಿತ್ರ್ಯ ಕೆಡಿಸುವ ಹೂಟವೆಂದರು. ನಾವು ಸಮಾಧಾನ ಕಳೆದುಕೊಳ್ಳದೆ ಹೇಗೆ ಪ್ರತಿಯೊಂದೂ ನಮ್ಮ ರಕ್ಷಣೆಗೂ ಪ್ರಾಕೃತಿಕ ಸೌಂದರ್ಯದ ಅನಾವರಣಕ್ಕೂ ಸಹಕಾರಿ ಮಾತ್ರ ಎಂದು ವಿವರಿಸಿದೆವು. ಮಣಿಯಾಣಿ ಕೊನೆಯ ಅಸ್ತ್ರವಾಗಿ, ಗುಹೆ ಶಾಸ್ತ್ರೋಕ್ತ ಪವಿತ್ರ ದಿನದಂದು, ಸೂಕ್ತ ವೈದಿಕ ವಿಧಿಗಳೊಡನೆ, ಸಾರ್ವಜನಿಕ ನಿಬಂಧನೆಗಳೊಡನೆ ಪ್ರವೇಶಿಸಬೇಕಾದ್ದನ್ನು ಅಕಾಲಿಕವಾಗಿ, ಅನುಮತಿರಹಿತವಾಗಿ ಪ್ರವೇಶಿಸಿದ ಅಪರಾಧವನ್ನು ನಮ್ಮ ಮೇಲೆ ಹೊರಿಸಿದರು. ಈ ಕಟ್ಟುಪಾಡುಗಳ ಅರಿವು ನಿಜಕ್ಕೂ ನಮಗಿಲ್ಲದಿದ್ದದ್ದು ಮತ್ತೆ ಅನುಮತಿ ಏನು ಕರೆದೊಯ್ದು ತೋರಿದ್ದೂ ಸಾಕ್ಷಾತ್ ದೇವಾಲಯದ ಅರ್ಚಕನೇ ಎಂದಾಗ ಸ್ಫುರಿಸುತ್ತಿದ್ದ ಕಟ್ಟಾಳುಗಳ ತೋಳ ಖಂಡಗಳು ತಣ್ಣಗಾದವು. ಮಣಿಯಾಣಿ ಅಂದು ನಂಬೂದರಿಗೆ ಮಾಡಿದ ‘ಆಶೀರ್ವಚನ’ಗಳನ್ನು ಭಾಷಾ ಕೊರತೆಯಿಂದ ನಾನು ಅರ್ಥೈಸಿಕೊಳ್ಳುವಲ್ಲೂ ಇಂದು ಉದ್ಧರಿಸುವಲ್ಲೂ ಸೋತಿದ್ದೇನೆ. ನಾವು ಧಾರಾಳ ನೀರು ಕುಡಿದು, ಕೈಕಾಲು ಮುಖಗಳ ಕೆಸರು ಬೆವರುಗಳನ್ನು ತೊಳೆಯುತ್ತಿದ್ದಂತೆ ಮಣಿಯಾಣಿ ಸಂಗಾತಿಗಳೊಡನೆ ಜೀಪೇರಿ ನಿರ್ಗಮಿಸಿದರು. ಆಗ ಅದುವರೆಗೆ ಮರೆಯಲ್ಲಿದ್ದ ಇತರ ಹಳ್ಳಿಗರು ಪ್ರಕಟವಾದದ್ದೂ ಮೊದಲು ನಂಬೂದರಿ ನಮಗೆ ಗುಹೆ ತೋರಲು ಹಿಂಜರಿದದ್ದೂ ಯಾಕೆಂದು ಸ್ಪಷ್ಟವಾಯ್ತು.

ಬಸ್ಸಿನವರನ್ನು ಅವರ ಪಾಡಿಗೆ ಬಿಟ್ಟು ನಾವಿಬ್ಬರು ಮತ್ತೆ ಬೈಕೇರಿ ಇನ್ನೇನು ‘ಕಥೆ ಕಾಡಿಗೆ ಹೋಯ್ತು, ನಾವು ಊರಿಗೆ ಬಂದೆವು’ ಎಂದುಕೊಳ್ಳುವಾಗ ಕಾಡಿನ ಮಧ್ಯೆ ದಾರಿಗಡ್ಡಲಾಗಿ ಜೀಪು ನಿಲ್ಲಿಸಿ ಮಣಿಯಾಣಿ ಕಾದಿದ್ದರು! (ನನ್ನ ಭಾವ ಜೀವ ಎರಡನೇ ಸಲ ಹೋಯ್ತೆಂದುಕೊಂಡದ್ದು ಇಲ್ಲೇ ಅಂತೆ!) ಇಲ್ಲಿ ಮಣಿಯಾಣಿಯ ಪ್ರಶ್ನೆಯ ವರಿಸೆಯೇ ಬೇರೆ. ಅವರಿಗೆ ಕನ್ನಡ ಓದು, ಬರಹವಿಲ್ಲದಿದ್ದರೂ ಸುದ್ದಿಯಲ್ಲಿದ್ದ ಜಾಂಬ್ರಿಯ ಸಾಕಷ್ಟು ವಿಚಾರಗಳು ತಿಳಿದಿತ್ತು. ಅದನ್ನು ತಡವಾಗಿ ನಮ್ಮೊಡನೆ ಗುರುತಿಸಿದ್ದರು. ಸಾಲದ್ದಕ್ಕೆ ಜಾಂಬ್ರಿ ಪ್ರವೇಶಿಸುವ ಕಾಪಡರು ಮಣಿಯಾಣಿಗೆ ಮತೀಯ ಬಂಧುಗಳೂ ಆಗಿದ್ದುದರಿಂದ ಈಗ ನಮ್ಮನ್ನು ಸಮಗ್ರವಾಗಿ ‘ವಿಚಾರಿಸಿಕೊಳ್ಳಲು’ ಸಜ್ಜಾಗಿದ್ದರು. ನಾನು ಏನೂ ಉದ್ವಿಘ್ನನಾಗದೇ ಪ್ರಶ್ನೆಗಳು ಬಂದಂತೆ ಜಾಂಬ್ರೀ ಕಥೆಯ ನಿಜವನ್ನೇ ಹೇಳಿದೆ. ನಾನು ಸಂದರ್ಭ ಒತ್ತಾಯಿಸಿದ್ದರಿಂದ ವಾಸ್ತವವನ್ನು ಮಾತ್ರ ಸಾರ್ವಜನಿಕಗೊಳಿಸಿದೆ. ಅಪಾರ್ಥ ಕಟ್ಟಿದವರು ನಾಸ್ತಿಕತೆಯನ್ನು ಗುರುತಿಸಿದರೂ ನಮ್ಮದು ಎಂದೂ ಪ್ರಕೃತಿ ವೈಶಿಷ್ಟ್ಯವನ್ನು ಕುತೂಹಲ ಮತ್ತು ಪ್ರೀತಿಯ ಕಣ್ಣಿಂದಲೇ ಕಂಡದ್ದನ್ನು ಬಿಡಿಸಿ ಹೇಳಿದೆ. ಪ್ರದರ್ಶನ ಚಟವಲ್ಲದ ಯಾವುದೇ ಮನುಷ್ಯ ಭಾವನೆಗಳ ಬಗ್ಗೆ ನಮಗಿರುವ ಗೌರವವನ್ನು ಅವರಿಗರ್ಥವಾಯ್ತೋ ಬಿಟ್ಟಿತೋ ವಿವರವಾಗಿ ಹೇಳಿದೆ. ನಮ್ಮ ಅದೃಷ್ಟಕ್ಕೆ ಮೊದಲೇ ದೇವಸ್ಥಾನದಲ್ಲಿ ಮಾತುಗಳು ಬೆಳೆದಾಗ ಈ ವಲಯದಿಂದ ಬಂದ ಪ್ರಭಾವೀ ರಾಜಕಾರಣಿ ಬಿ.ವಿ. ಕಕ್ಕಿಲ್ಲಾಯರು (ಸೂರ್ಯನಿಗೆ ಖಾಸಾ ಚಿಕ್ಕಮ್ಮನ ಗಂಡ) ನಮಗೆ ಆಪ್ತರು ಎಂಬ ಉಲ್ಲೇಖ ಬಂದಿತ್ತು. ಇನ್ನೂ ಹೆಚ್ಚಿನ ಅದೃಷ್ಟದ ಮಾತು ಮಣಿಯಾಣಿ ಮಾಮೂಲೀ ಸ್ವಭಾವದಂತೆ ಮೊದಲು ಪೆಟ್ಟು ಮಾಡದೇ ಮಾತಿಗಿಳಿದು ಭಾಷೆ ಮತ್ತೆ ವಿಚಾರಗಳಲ್ಲಿ ಎಡವುತ್ತಲೇ ಇದ್ದರು. ಸೋಲುತ್ತಿದ್ದ ಸಮರದಲ್ಲಿ ಕೊನೆಯ ಪಟ್ಟು ಹಾಕಿದರು “ಈಗ ನೆಲ್ಲಿತಟ್ಟು ತೀರ್ಥದಲ್ಲಿ ಇಷ್ಟೇ ಎಂದು ಪತ್ರಿಕೆಗಳಿಗೆ ಬರಿಲಿಕ್ಕುಂಟಾ?” ನನಗೆ ನೆಲ್ಲಿತಟ್ಟುತೀರ್ಥ ‘ಇಷ್ಟೇ’ ಎಂಬ ಕೀಳ್ಗಳೆಯುವ ಯೋಚನೆ ಖಂಡಿತಾ ಇರಲಿಲ್ಲ. ಆದರೆ ಅನುಭವಿಸಿದ ಪ್ರಕೃತಿ ವೈಭವವನ್ನು ಬರೆಯದಿರುವುದೂ ಸಾಧ್ಯವಿರಲಿಲ್ಲ. ಸನ್ನಿವೇಶದ ಗಾಂಭೀರ್ಯಕ್ಕೆ ಕುಂದು ಬಾರದಂತೆ ತೇಲಿಸಿ ಉತ್ತರಿಸಿ ‘ಬಿಡುಗಡೆ’ ಪಡೆದೆವು.

ಬೇನಾಮೀ ಹೆಸರಿನಲ್ಲಿ ಕುಮ್ಮಕ್ಕು ಪಡೆದಂತೆ ನಾನು ಬರೆದ ಲೇಖನದಲ್ಲಿ ಮೇಲಿನೆರಡು ಪ್ಯಾರಾಗಳು ಇರದಿದ್ದರೂ ಕೊನೆಗೊಳಿಸುತ್ತ ಇಷ್ಟು ಬರೆದೇ ಬರೆದೆ. ಬರವಣಿಗೆ ಖಚಿತತೆಗೆ ಒಳ್ಳೆಯದೆಂಬ ಮಾತಿದೆ. ಆದರೆ ಸ್ವಯಂಭೂ ಬರವಣಿಗೆಯೇ ತೆಗೆದುಕೊಂಡ ತಿರುವಿನಲ್ಲಿ ವಿಷಯಾಂತರವಾಗಿ ಆಸ್ತಿಕರು ನಾಸ್ತಿಕರು ತಲೆ ಘಟ್ಟಿಸಿಕೊಳ್ಳುತ್ತಿದ್ದಾರೆ. ವಿದೇಶಗಳಲ್ಲಿ ಗುಹೆಗಳೇ ‘ಆರಾಧನೀಯ’ವಾಗಿ ಹೆಚ್ಚೆಚ್ಚು ತೆರೆದುಕೊಳ್ಳುತ್ತಿರುವಾಗ ನಮ್ಮಲ್ಲಿ ಇದ್ದದ್ದನ್ನೂ ಮುಚ್ಚಿಕೊಳ್ಳಲು ನೋಡುತ್ತೇವೆ; ತೆರೆದು ಹೇಳುವವರ ಬಾಯಿ ಕಟ್ಟಲು ಪ್ರಯತ್ನಗಳಾಗುತ್ತವೆ. ಇದು ಹೆಚ್ಚಿಕೊಳ್ಳದಂತೆ, ನಮ್ಮ ಅನುಭವದ ಸತ್ಯತೆ ಪರೀಕ್ಷಿಸಲು ಅಲ್ಲದಿದ್ದರೂ ಆ ಪ್ರಾಕೃತಿಕ ವೈಭವವನ್ನು ಮನದುಂಬಿಕೊಳ್ಳಲು ಆಸಕ್ತರು ಸ್ಥಳೀಯ ಸಂಪ್ರದಾಯಾನುಸಾರವಾಗಿಯಾದರೂ ನೆಲ್ಲಿತಟ್ಟು ತೀರ್ಥ ನೋಡುವುದು ಅಪೇಕ್ಷಣೀಯ.

ನಿಜ ಸಾಹಸದ ನೆಲ್ಲಿ ತಟ್ಟು ತೀರ್ಥದ ಲೇಖನವನ್ನು ಜನ ಸ್ವೀಕರಿಸಿದರೇ? ಗುಹಾಶೋಧದ ಹಸಿಬಿಸಿ ಯತ್ನದಲ್ಲಿ ಎಲ್ಲಾದರೂ ಜೀವಹಾನಿಯೋ ಮನಃಕಷಾಯದ ವಿಪರೀತ ಪಾಕಗಳೋ ಘಟಿಸಿದ್ದುಂಟೇ? ಭೂಗರ್ಭದಲ್ಲಿ ಹೊಟ್ಟೆ ಎಳೆದದ್ದು ನನಗೆ ಅಯಾಚಿತವಾಗಿ ಪತ್ರಿಕಾ ಪ್ರಚಾರ ಒದಗಿಸಿದ್ದರೂ ನನಗದನ್ನು ಉಳಿಸಿ ಬೆಳೆಸಿಕೊಳ್ಳುವ ಕೀರ್ತಿಶನಿ ಕಳಚಿದ್ದು ಹೇಗೆ ಎನ್ನುವುದಕ್ಕೆ ಸುಮಾರು ಇನ್ನೊಂದು ವಾರ ಕಾಯ್ತೀರಲ್ಲಾ? ಏತನ್ಮಧ್ಯ ನಿಮ್ಮ ಜೀವನಾನುಭವ ನೆಲ್ಲಿತಟ್ಟು ತೀರ್ಥಕ್ಕೆ ಏನಾದರೂ ಕಾಣಿಕೆ ಕೊಡಬೇಡವೇ? ಮರೆಯದೆ ಕೆಳಗಿನ Comments ಹುಂಡಿ ತುಂಬಿ ನನ್ನ ‘ಅಬಿವೃದ್ಧಿ’ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿಸುತ್ತೀರಿ ಎಂದು ನಂಬಿದ್ದೇನೆ.