ಪ್ರೊ| ಎಂ ರಾಮಚಂದ್ರ ಕಾರ್ಕಳ, ಹಲವು ಖ್ಯಾತ ವಿದ್ವಾಂಸರುಗಳ ಪ್ರಿಯ ಶಿಷ್ಯ, ನನ್ನ ತಂದೆಯನ್ನು ಪರೋಕ್ಷವಾಗಿ ತನ್ನ ಪ್ರಮುಖ ಗುರುಗಳಲ್ಲಿ ಒಬ್ಬರೆಂದೇ ಕಂಡವರು, ವಿದ್ಯಾರ್ಥಿ ದೆಸೆಯಲ್ಲೇ ಪ್ರಕಟವಾದ ಇವರ ಸಾಹಿತ್ಯ ಪ್ರೇಮ ಕನ್ನಡ ಅಧ್ಯಾಪಕರಾಗಿ ನೆಲೆ ನಿಂತ ಮೇಲಂತೂ ವ್ರತತೊಟ್ಟ ಕನ್ನಡಸೇವೆಯೇ ಆಗಿರುವುದು ಎಲ್ಲರಿಗೂ ತಿಳಿದ ವಿಚಾರ. ನಾನು ಅಂಗಡಿ ತೆರೆದಂದಿನಿಂದ (೧೯೭೫) ಇವರ ವಿಶ್ವಾಸ ನನ್ನ ವೃತ್ತಿಗೆ ಅವರ ಮಿತಿಯ ಪ್ರೋತ್ಸಾಹ ಕೊಟ್ಟೇ ಇತ್ತು. ಹಾಗೇ ನನ್ನ ಇತರ ಚಟುವಟಿಕೆಗಳಲ್ಲಿನ ಕಾಳಜಿ, ಪ್ರಾಮಾಣಿಕತೆ ರಾಮಚಂದ್ರರಿಗೆ ಗೊತ್ತಿಲ್ಲದ್ದೇನೂ ಆಗಿರಲಿಲ್ಲ. ಎಲ್ಲಕ್ಕೂ ಮುಖ್ಯವಾಗಿ ನಾನು ಗುಹಾವಿವಾದಕ್ಕೆ ಮಂಗಳ ಹಾಡಿ, ನನ್ನ ನಿಲುವನ್ನು ಸ್ಪಷ್ಟ ಅಕ್ಷರಗಳಲ್ಲಿ ಸಾರ್ವಜನಿಕಗೊಳಿಸಿದ ಹತ್ತು ದಿನಗಳನಂತರ ‘ನಂಬಿಕೆಗಳನ್ನು ಕೆಣಕಬೇಡಿ’ ತಲೆಬರಹ ಹೊತ್ತು ರಾಮಚಂದ್ರರ ಹೆಸರಿನಲ್ಲಿ ಅರ್ಧ ಪುಟ ವಿಸ್ತಾರದ ಲೇಖನವೇ ಉದಯವಾಣಿಯಲ್ಲಿ ಪ್ರಕಟವಾಯ್ತು. ಅದರ ಮುಖ್ಯ ಲಕ್ಷ್ಯವೇ ಗುಹಾಶೋಧಗಳು. ಅದನ್ನು ಸಂಗ್ರಹಿಸುವುದೇ ಆದರೆ, ಮೊದಲ ಪ್ಯಾರಾದಲ್ಲಿ ರಾಮಚಂದ್ರರು ತನ್ನನ್ನು (ವಿನಯಪೂರ್ವಕವಾಗಿ ಅಲ್ಲ) ದೀನವಾಗಿ ಪರಿಚಯಿಸಿಕೊಂಡಿದ್ದಾರೆ. ಎರಡು ಮೂರನೇ ಪ್ಯಾರಾದಲ್ಲಿ ಗುಹಾ ಸಂಶೋಧನೆಗಳನ್ನು ತಮ್ಮ ಗ್ರಹಿಕೆಗೆ ನಿಲುಕಿದಂತೆ ಹೀಗೆ ಪರಿಚಯಿಸುತ್ತಾರೆ. (ವಿಶೇಷ ಶಬ್ದಗಳೆಲ್ಲ ಅವರವೇ, ಸಂಗ್ರಹಿಸಿ ವಾಕ್ಯಬಂಧಕ್ಕೆ ತಂದದ್ದು ಮಾತ್ರ ನಾನು) “ಪ್ರಾಚೀನವಾದ್ದು, ‘ಏನೋ ಇದೆ’ ಎಂದು ಮಮಕಾರದಿಂದ, ಪರಂಪರಾಗತ ವಿಶ್ವಾಸದಿಂದ, ಆಸ್ತಿಕ್ಯದಿಂದ ನಂಬುವವರನ್ನು ನೂತನ ವಿಚಾರ, ಭೌತಿಕ ದೃಷ್ಟಿಗಳ ‘ಬುದ್ಧಿಜೀವಿ’ ‘ವಿಚಾರವಾದಿ’ ಎಂದು ಕರೆಸಿಕೊಳ್ಳುವ ಪೊಗರುಳ್ಳ ಕೆಲವರು ‘ಏನೂ ಇಲ್ಲ’, ಬುದ್ಧಿಗೇಡಿಗಳೂ ವಿಚಾರಶೂನ್ಯರೂ ಆದ ನಿಮ್ಮನ್ನೂ ನಿಮ್ಮ ನಂಬಿಕೆಯನ್ನೂ ಮಟ್ಟ ಹಾಕುತ್ತೇವೆ ಎಂದು ಹೊರಟಿದ್ದಾರೆ.”

ಮುಂದೆ ತಮ್ಮ ತಪ್ಪುಗ್ರಹಿಕೆಯನ್ನೇ ವಿಸ್ತರಿಸುತ್ತಾ “ರಾಮಾಯಣ ಆಗಲೇ ಇಲ್ಲ, ಮಹಾಭಾರತ ನಡೆಯಲೇ ಇಲ್ಲ ಎನ್ನುವವರ ನೇತ್ಯಾತ್ಮಕ ದೃಷ್ಟಿ ಗುಹಾಶೋಧಕರದ್ದು. ಅದು ಬರ್ಬರತೆ.” ಮತ್ತಿನ ಎರಡು ದೀರ್ಘ ಪ್ಯಾರಾಗಳಲ್ಲಿ ‘ಪೂಜ್ಯತೆ’ಯನ್ನು ವಿಸ್ತಾರವಾಗಿ ವ್ಯಾಖ್ಯಾನಿಸಿ ‘ಜಿಜ್ಞಾಸೆ’ ಎಂಬ ಪದದ ಏಕಪಕ್ಷೀಯ ಅನ್ವಯ ನಡೆಸಿದರು. “ಶ್ರದ್ದೆ, ವಿಶ್ವಾಸ, ಆಚರಣೆಗಳನ್ನು ಕೇವಲ ಬಲಪಡಿಸುವುದಕ್ಕಷ್ಟೇ ಪ್ರಶ್ನಿಸಬೇಕು, ನಿರಾಕರಿಸುವುದಕ್ಕಲ್ಲ” ಎಂದೇ ಅಪ್ಪಣೆಕೊಡಿಸಿದರು. ಮುಂದೆ ತಮ್ಮ ವಿಸ್ತಾರ ಓದಿನ ಕಿಂಚಿದ್ ದರ್ಶನವನ್ನು ಒಂದು ಕಂಬಸಾಲಿನ (column) ಉದ್ದಕ್ಕೆ ಮಾಡಿಸುತ್ತಾರೆ. ಬಡಜನದ ದೈವಿಕ ಅವಲಂಬನೆಯನ್ನು ನಷ್ಟಮಾಡಿದ, ಯುವ ಜನಾಂಗದ ನೈತಿಕ ಅಧಃಪತನಕ್ಕೆ ಕಾರಣವಾಗುವ, ವಿಗ್ರಹ ಚೋರರಿಗೆ ಪ್ರೇರಣೆಕೊಡುವ ಆಪಾದನೆಗಳೆಲ್ಲ ಪ್ರಾಕೃತಿಕ ಗುಹೆಗಳ ವಾಸ್ತವ ದರ್ಶನ ಮಾಡಿಸಿದವರಿಗೆ ಕಟ್ಟಿಕೊಡುತ್ತಾರೆ. ಕೊನೆಯಲ್ಲಿ, ತಮ್ಮ ಆರಂಭದ ತೋರಿಕೆಯ ದೀನತೆಯನ್ನು ಸ್ಪಷ್ಟ ವ್ಯಂಗ್ಯದ ಪಾಕದಲ್ಲಿ ಅದ್ದಿ ತೆಗೆದಂತೆ “ಪ್ರಾರ್ಥಿಸುತ್ತೇನೆ. ನಾವು ನಮ್ಮ ಪಾಡಿಗೆ ಹುಲ್ಲು ತಿಂದೋ, ನೀರು ಕುಡಿದೋ ಆದರೂ ಮನುಷ್ಯರಾಗಿ ಬಾಳುತ್ತೇವೆ. ನಮ್ಮ ಭಾವನೆಗಳನ್ನು ಕೆದಕಬೇಡಿ.”

ಲೇಖನ ನನಗೆ ತೀವ್ರ ಹತಾಶೆ ಮೂಡಿಸಿದರೂ ಸಂಯಮದಲ್ಲಿ ಇಷ್ಟೇ ಬರೆದೆ: ಅಯ್ಯಾ, ವ್ಯರ್ಥ ದೈನ್ಯ, ಅನಾವಶ್ಯಕ ವ್ಯಂಗ್ಯ ಬಿಟ್ಟು ನನ್ನ ಈ ಮೊದಲು ಪ್ರಕಟವಾದ ಸ್ಪಷ್ಟೀಕರಣವನ್ನು ಇನ್ನೊಮ್ಮೆ ಓದಿ. ನಮ್ಮ ಪ್ರವೃತ್ತಿ ಯಾರ ನಂಬಿಕೆ ಹಾಳು ಮಾಡುವುದೂ ಅಲ್ಲ. ಗುಹೆಯನ್ನು ಕೀಳು ಮಾಡುವುದಂತು ಅಲ್ಲವೇ ಅಲ್ಲ. ಬದಲು ಪ್ರಕೃತಿಯ ಒಂದು ವೈಶಿಷ್ಟ್ಯವೆಂದು ಗುಹೆಯನ್ನು ಅದರ ಮುಖ ಬೆಲೆಗೇ ಅನುಭವಿಸುವುದು ನಮ್ಮ ಉದ್ದೇಶ. ಅಲ್ಲಿ ಸತ್ಯ, ನಂಬಿಕೆಗಳಿಗೆ ವಿರೋಧಿಯಾಗಿ ಕಂಡರೆ ಅದು ಅನಿವಾರ್ಯ.

ಜಾಂಬ್ರಿಯಿಂದ ತೊಡಗಿದ ಲೇಖನ, ಪ್ರತಿಕ್ರಿಯೆಗಳ ಉದ್ದಕ್ಕೆ ರಾಮಚಂದ್ರರಂತೆ ತಂತಮ್ಮ ಓದುಗಳನ್ನು, ಅರ್ಥಗಳನ್ನು ಕಟ್ಟಿಕೊಂಡಿದ್ದ ಇನ್ನೂ ಹಲವರು ರಾಮಚಂದ್ರರ ಲೇಖನದ ಕುರಿತು ನನ್ನಷ್ಟು ಸಂಯಮಿಗಳಾಗಲಿಲ್ಲ (ಆಗಬೇಕಿಲ್ಲ). ಸುಳ್ಯದಿಂದ ಪ್ರಭಾಕರ ಶಿಶಿಲ ‘ನಂಬಿಕೆಗಳನ್ನು ಕೆಣಕಿದರೆ ಅಪಾಯ’ ಎಂಬ ತಲೆಬರಹದೊಡನೆ ರಾಮಚಂದ್ರರ ಮೇಲೆ ಭಾರೀ ವ್ಯಂಗ್ಯ ಪ್ರಹಾರ ನಡೆಸಿದರು. ‘ನಂಬಿಕೆಗಳನ್ನು ಕೆಣಕಿ’ ಸಾಮಾಜಿಕ, ವೈಚಾರಿಕ, ವೈಜ್ಞಾನಿಕ ಅಭಿವೃದ್ಧಿಗಳನ್ನು ಸಾಧಿಸಿದ ಹನ್ನೊಂದು ವಿಶ್ವವಿಖ್ಯಾತರನ್ನು ಅಣಕದ ಬೆಳಕಿನಲ್ಲಿ ಹೊಳೆದು ತೋರಿಸಿದರು. ‘ಕೇವಲ ನೀರಾವಿಯಿಂದ ಭಾರೀ ಸಂಚಾರ ಸಾಧನ ಸಾಧಿಸಿದ ಸ್ಟೀವನ್ಸನ್, ಹಕ್ಕಿಗಳಿಂದ ಸವಾಲು ಸ್ವೀಕರಿಸಿ ಲೋಹದ ಹಕ್ಕಿಗಳನ್ನು ಗಗನಕ್ಕೇರಿಸಿದ ರೈಟ್ ಸೋದರರಿಂದಲ್ಲವೇ ಇಂದು ರೈಲು ಅಪಘಾತ, ವಿಮಾನ ದುರಂತ ಕೇಳುವಂತಾದದ್ದು’ ಎಂದು ಶಿಶಿಲರು ಚುಚ್ಚಿದರು. ಮುಂದುವರಿದು, ಚಂದ್ರನನ್ನು ಮೆಟ್ಟಿದ ಆರ್ಮ್ ಸ್ಟ್ರಾಂಗ್, ಶಿವಪಾರ್ವತಿಯರ ಆವಾಸಕ್ಕೆ ಲಗ್ಗೆ ಹಾಕಿದ ತೇನ್ಸಿಂಗ್‌ರನ್ನು ಶಿಶಿಲ ಸ್ಪಷ್ಟ ಮಾತುಗಳಿಂದ ‘ಧರ್ಮದ್ರೋಹಿ’ಗಳೆಂದರು. ನ್ಯೂಟನ್, ಐನ್‌ಸ್ಟೈನ್, ಗೆಲಿಲಿಯೋ, ಗಾಂಧೀಜಿಗಳೆಲ್ಲ ಸಮಾಜದ್ರೋಹಿಗಳು. ಆರ್ಯಕುಲದ ಶ್ರೇಷ್ಠತೆಯನ್ನು ಉಳಿಸಲು ಹೊರಟ ಹಿಟ್ಲರನನ್ನು ಸದೆಬಡಿದವರು ಹಾಗೇ ದೈವನಿಯಾಮಕವಾದ ಜಾತಿ ಧರ್ಮಗಳನ್ನು ಭಂಗಗೊಳಿಸಿದ ಬಸವಣ್ಣ, ಸಾಕ್ಷಾತ್ ಭಗವಂತನೇ ಆದ ಸಾಯಿಬಾಬಾರನ್ನು ಹುಸಿಮಾಡಿದ ಎಚ್. ನರಸಿಂಹಯ್ಯ ಮನುಕುಲ ವೈರಿಗಳು. ಅರಬರ ನಂಬಿಕೆ ಕೆಣಕಿದ್ದಕ್ಕೆ ಸಾದಾತ್ ಗುಂಡೇಟು ಅನುಭವಿಸಿದ, ಯಹೂದ್ಯರ ನಂಬಿಕೆ ಕೆಣಕಿದ್ದಕ್ಕೆ ಶಾಸ್ತಿಯಾಗಿ ಕ್ರಿಸ್ತ ಶಿಲುಬೆಗೇರಿದ ಎಂದಿತ್ಯಾದಿ ಶಿಶಿಲರ ಪಟ್ಟಿ ಬೆಳೆಯಿತು. “ರಾಮಚಂದ್ರರಂತಹ ಅಧ್ಯಾಪಕರಿಂದ ನಮ್ಮ ನಂಬಿಕೆಗಳು ಪ್ರಶ್ನಾತೀತವಾಗಿ ಅನೇಕ ತಲೆಮಾರುಗಳವರೆಗೆ ಉಳಿಯಲಿ” ಎಂದು ಪ್ರಭಾಕರ ಶಿಶಿಲ ತಾವು ಅಪ್ಪಳಿಸಿದ ಚಾಟಿಯ ಕುಡಿ ಎಳೆದು ತಮ್ಮ ಪತ್ರ ಮುಗಿಸಿದ್ದರು.

ಐದು ದಿನ ಕಳೆದು ಬಂದ ಉದಯವಾಣಿಯ ಓದುಗರ ಅಂಕಣದ ಪೂರ್ತಿ ಅಂದರೆ, ನಾಲ್ಕೂ ಪತ್ರಗಳು ವಿವಿಧ ಸ್ತರಗಳ ರಾಮಚಂದ್ರ-ಖಂಡನೆ! ಮೊದಲು ‘ನಂಬಿಕೆಗಳನ್ನು ಅರಿಯಗೊಡಿ’ ಎಂದು ರವಿರಾಜ ಅಡಿಗರು ಬಲು ಸಮಚಿತ್ತದಿಂದ ಮನವಿ ಮಾಡುತ್ತಾರೆ. “ಗುಹೆಯಲ್ಲಿ ಏನೋ ಸತ್ವವಿದೆ ಎಂಬುದನ್ನು ನಂಬಿದ ಪ್ರಾಚೀನರಿದ್ದಂತೆ ಪ್ರಾಣವನ್ನೇ ಪಣವಾಗಿಟ್ಟು ಕಂಡು ಹಿಡಿದವರ ಅರ್ವಾಚೀನ ಹೇಳಿಕೆಗಳೂ ಮುಖ್ಯ”ವೆಂದು ಲೇಖಕರು ಮನಗಾಣದ್ದಕ್ಕೆ ವಿಷಾದಿಸುತ್ತಾರೆ. ದೈವತ್ವದ ಸಂಕೇತಗಳು ಕಾಲಾನುಕ್ರಮದಲ್ಲಿ ಭ್ರಷ್ಟವಾದದ್ದನ್ನು ಬಹಳ ನೋವಿನಿಂದ ನೆನಪಿಸುತ್ತಾ ‘ಬರಗಾಲ ಪೀಡಿತರು ಅನ್ನ ನೀರಿಲ್ಲದೆ ಸಾಯುತ್ತಿರುವ ಕಾಲದಲ್ಲೂ ತಿಮ್ಮಪ್ಪನಿಗೆ ಟನ್ನುಗಟ್ಟಳೆ ಬಂಗಾರ ಹೇರುವವರನ್ನು, ಗೊಮ್ಮಟನ ಚರಂಡಿಯಲ್ಲಿ ಕೊಡಗಟ್ಟಳೆ ಹಾಲು ಹರಿಸುವವರನ್ನು, ಹೋಮಕುಂಡದಲ್ಲಿ ಡಬ್ಬಿಗಟ್ಟಳೆ ತುಪ್ಪ ಸುಡುವವರನ್ನು’ ಪ್ರಶ್ನಿಸುತ್ತಾರೆ. ನಾವೂ ‘ಮಾನವರಾಗಿ ಜೀವಿಸುತ್ತೇವೆಯೇ ಹೊರತು ಪ್ರಶ್ನಿಸಬಾರದ, ಕೆಣಕಬಾರದ ನಂಬಿಕೆಗಳನ್ನು ಇಟ್ಟುಕೊಂಡು ಹುಲ್ಲು ತಿಂದು ನೀರು ಕುಡಿದುಕೊಂಡು ಸ್ವಂತಿಕೆಯಿಲ್ಲದ ಜೀವಿಗಳಾಗಲು ಬಯಸುವುದಿಲ್ಲ. ಸಂಪ್ರದಾಯ, ನಂಬಿಕೆಗಳು ನಮ್ಮ ಬದುಕಿಗೆ ಬದ್ಧವಾಗಬೇಕು. ವಿಚಾರವಾದಿ ನಮ್ಮ ಆಚರಣೆ ನಂಬಿಕೆಗಳನ್ನು ಅತ್ಯಂತ ಕಾಳಜಿಯಿಂದ ಪ್ರಶ್ನಿಸುತ್ತಾನೆಯೇ ಹೊರತು ಮಾನವ ಜೀವನವನ್ನು ಶಿಲಾಯುಗದತ್ತ ತಳ್ಳುವ ಉದ್ದೇಶ ಇರುವುದಿಲ್ಲ’ ಎಂದು ಒತ್ತುಕೊಟ್ಟು ಮುಗಿಸುತ್ತಾರೆ ಅಡಿಗರು. ‘ಮಂಡೂಕವಾದ’ ಎಂದೇ ಹೆಸರಿಸಿ ಭಂಗಿಸಿದ ಕುಸುಮಾಕರ ಶೆಟ್ಟಿ, “ಸ್ವಂತಿಕೆಯಿಲ್ಲದ ಬದುಕನ್ನು ಬದುಕಿ, ಅನ್ಯಾಯ ಅಧರ್ಮಗಳನ್ನು ಅರಿವಿದ್ದೂ ನಡೆಸಿ, ಹೊಣೆಯಾಗಿಸುವುದಕ್ಕೆ ಮಾತ್ರ ದೇವರೆಂಬ ಪ್ರತಿಕ್ರಿಯಿಸಲಾರದ ವಸ್ತುವನ್ನು ಸೃಷ್ಟಿಸಿಕೊಂಡಿದ್ದೇವೆ” ಎನ್ನುತ್ತಾರೆ. ಕುಮಾರಸ್ವಾಮಿ, ‘ಹೇಳುವುದೆಲ್ಲಾ ಹೇಳಿ ದೈನ್ಯ ಪ್ರದರ್ಶಿಸುವವರು ಸೋಗಲಾಡಿ’ಗಳೆನ್ನುತ್ತಾರೆ. “ದೇವರು (?) ಕರುಣಿಸಿದ ಸ್ವಲ್ಪ ವಿದ್ಯೆ ಬುದ್ಧಿ ಇದ್ದವರ ಸ್ಥಿತಿಯೂ ಹೀಗಾಗುತ್ತದಲ್ಲ ಎಂದು ತನ್ನ ಪತ್ರವನ್ನು ಕುಮಾರಸ್ವಾಮಿ ‘ಬೇಸರದ ಸಂಗತಿ’ ಎಂದೇ ಹೆಸರಿಸಿಬಿಟ್ಟಿದ್ದರು. ಕಾರ್ಕಡ ಶ್ರೀಕಲಾ ಉಡುಪ ರಾಮಚಂದ್ರರ ಲೇಖನದಲ್ಲಿ ‘ಅನೂಚಾನ ನಂಬಿಕೆಯ ಬಲದಲ್ಲಿ ಬಂದ ದುಗುಡ, ಕಳಕಳಿ’ ಗುರುತಿಸುತ್ತಾರೆ. ಆದರೆ ಮುಂದಿನ ಮಾತಿನಲ್ಲೇ ಪರಾಮರ್ಶೆ ಒಪ್ಪದ ನಂಬಿಕೆಗಳು ಮೌಢ್ಯವಾಗುವ ಅಪಾಯವನ್ನು ಕೆಲವು ಉದಾಹರಣೆಗಳೊಂದಿಗೆ ವಿಸ್ತರಿಸಿ ‘ವಾದ ವಿಮರ್ಶೆ ಎಷ್ಟಕ್ಕೂ ಬೇಕು’ ಎಂದೇ ಸಾರುತ್ತಾರೆ.

ದಿನೇ ದಿನೇ ಮತ್ತಷ್ಟು ಪತ್ರಗಳು ಬರುತ್ತವೆ. ಬಿ.ಎಸ್. ಭಂಡಾರಿಯವರು ಬ್ರೆಖ್ಟ್ ಬರೆದ ‘ಗೆಲಿಲಿಯೋ’ ನಾಟಕವು ಅಸಂಖ್ಯಾತ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿದ್ದು, ಅಧ್ಯಯನ ನಡೆಯುತ್ತಿರುವ ಕಾಲಕ್ಕೇ ತನ್ನ ಕಿರಿಯ ಸಹೋದ್ಯೋಗಿ ರಾಮಚಂದ್ರರು ತನ್ನ ಲೇಖನದಲ್ಲಿ ಅದರ ಧ್ವನಿಯನ್ನು ಗ್ರಹಿಸದೆ ತಪ್ಪೇ ಉಲ್ಲೇಖಿಸಿದ್ದಕ್ಕೆ ವ್ಯಥೆಪಟ್ಟರು. ಸುದೇಶ್ ಮಹಾನ ‘ಬಾಲಿಶ ವಾದದ ಕೊಳೆತ ತೋಳುಗಳು’ ಎಂಬ ಸಾಕಷ್ಟು ಉದ್ದದ ಪತ್ರ ಬರೆದರು. ಅವರು ರಾಬರ್ಟ್ ಲೀವಿಂಗ್‌ಸ್ಟನ್ ವಾಕ್ಯವೊಂದನ್ನು ಉದ್ಧರಿಸಿ “… the half educated are a greater danger to the society than the uneducated” ಎನ್ನುತ್ತ ಪತ್ರ ಪ್ರಹಾರಕ್ಕಿಳಿದರು. ‘ಜಿಜ್ಞಾಸೆಯ ಉತ್ಕೃಷ್ಟ ಫಲವೇ ಈ ಶಾಸ್ತ್ರ ಸಂಪತ್ತು’ ಎಂಬ ರಾಮಚಂದ್ರರ ಮಾತನ್ನು “ನಾನಿಳಿದ ಸ್ಟಾಪಿನ ನಂತ್ರ ದಾರಿಯೇ ಇಲ್ಲವೆನ್ನುತ್ತೀರಾ” ಎಂದು ಗೇಲಿ ಮಾಡಿದರು. ಕೋವೂರು, ವಿವೇಕಾನಂದ, ಅವರ ಓರ್ವ ಪ್ರೊಫೆಸರ್, ಸಾರ್ತ್ರೆಯರನ್ನೆಲ್ಲಾ ಉದ್ಧರಿಸಿ ಬಲು ವಿಧದ ಖಂಡನೆ ಮಾಡಿ “ಲೇಖಕರ ಅಷ್ಟೂ ವಾದಗಳು ತಾವೇ ನಿಲ್ಲಲಾರದಷ್ಟೂ ದುರ್ಬಲವಾಗಿವೆ. ನಾಸ್ತಿಕ ವಾದದಿಂದ ಭಾರತೀಯರು ಕಲಿಯಬೇಕಾದಷ್ಟು ಬಹುಶಃ ಯಾರೂ ಕಲಿಯಬೇಕಾಗಿಲ್ಲ” ಎಂದು ಮುಗಿಸುತ್ತಾರೆ.

ಉದಯವಾಣಿಗೆ ಹುಟ್ಟಿನಿಂದಲೂ ರಾಮಚಂದ್ರರು (ಕಾರ್ಕಳದ ಹಾಗೂ ಒಟ್ಟಾರೆ) ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಕ್ತಾರರಲ್ಲೊಬ್ಬರು. ಹಾಗಾಗಿಯೋ ಏನೋ ಸುಮಾರು ಮೂರುವಾರಗಳ ಏಕಮುಖ ಪತ್ರಪ್ರವಾಹದನಂತರ (ಒಂದೂ ಬೆಂಬಲಿಸಿ ಬರಲಿಲ್ಲ!) ರಾಮಚಂದ್ರರದು ಇನ್ನೊಂದೇ ದೀರ್ಘ ಲೇಖನ ಪ್ರಕಟವಾಯ್ತು. ಹಿಂದಿನದೇ ಶೀರ್ಷಿಕೆಗೆ ‘ಮರುಮಾತು’ ಎಂಬ ಸಣ್ಣ ವಿಶೇಷಣ ಸೇರಿಸಿ ಮತ್ತೆ ಅರ್ಧ ಪುಟ ಉದ್ದಕ್ಕೆ ವ್ಯಾಪಿಸಿತ್ತು. ಅದರಲ್ಲಿ, ತಮ್ಮ ಬರಹಕ್ಕೆ ಏಕಮಾತ್ರ ಪ್ರೇರಣೆ ನನ್ನ ಜಾಂಬ್ರಿ ಲೇಖನವೆಂದು ತೊಡಗಿದರು. ‘ಅಶೋಕರ ಭೌತಿಕ ಭೌಗೋಲಿಕ ಚಟುವಟಿಕೆಗಳನ್ನು ಸಾಹಸದ ನೆಲೆಯಲ್ಲಿ ಪ್ರಾಂಜಲವಾಗಿ ಮೆಚ್ಚಿಕೊಂಡಿದ್ದೇನೆ’ ಎಂದು ನಿವೇದಿಸಿಕೊಂಡರು. ‘ಆ ನಿಮಿತ್ತದಲ್ಲಿ ಜನಸಾಮಾನ್ಯರ ನಂಬಿಕೆಗಳನ್ನು ಕಾಲ್ಚೆಂಡಾಟ ಆಡಿದವರು ಮಾತ್ರ’ ರಾಮಚಂದ್ರರಿಗೆ ನಿಜವಾದ ಲಕ್ಷ್ಯವಂತೆ. ‘ಪರ್ವತಾರೋಹಣ, ಸಾಗರತರಣ, ಆಕಾಶಗಮನ, ಗುಹಾಪ್ರವೇಶಾದಿಗಳು ಜನರ ಜೀವನಶ್ರದ್ಧೆಯ ಎಳೆಗಳನ್ನು ಕಡಿಯದಿರಲಿ’ ಎಂಬುದು ಅವರ ನಿಲುಮೆ. ಗುಹೆಗಳನ್ನು ಅದರ ಮುಖಬೆಲೆಗೇ ಅನುಭವಿಸಲು ಹೊರಟ ನನಗೆ ‘ಜೀವನದ ಸರಿಯಾದ ಮುಖವನ್ನೂ ನಿಜವಾದ ಬೆಲೆಯನ್ನೂ ಜ್ಞಾಪಿಸುವುದು’ ಅವರ ಪ್ರಯತ್ನ. ಎರಡನೇ ಪ್ಯಾರಾದಲ್ಲಿ, “ಅಶೋಕವರ್ಧನರ ಪತ್ರವನ್ನು ಬಿಟ್ಟರೆ ಉಳಿದ ಯಾವುದೂ ನನ್ನಿಂದ ಗಂಭೀರವಾದ ಉತ್ತರವನ್ನು ನಿರೀಕ್ಷಿಸುವುದಿಲ್ಲ” ಎಂದೇ ಮತ್ತಿನ ಮೂರು ಕಾಲಂ ಉದ್ದದ ಬರಹಕ್ಕೆ ಪೀಠಿಕೆ ಹೊಡೆದರು. ಎಲ್ಲರೂ ತನ್ನನ್ನು (ಗಮನಿಸಿ: ಅವರ ಮಾತುಗಳ ಸುತ್ತು ಬಳಸನ್ನು ಕಳಚಿ ಸಂಗ್ರಹಿಸಿದ್ದೇನೆ) “ಹೆಡ್ಡ ದಡ್ಡ ಎಂದರೂ ತಮ್ಮನ್ನು ಸರ್ವಜ್ಞರೆಂದು ಸ್ಥಾಪಿಸಿಕೊಳ್ಳಲಿಲ್ಲ. ಜಾನಪದ ವಿನೋದ ‘ತಪ್ಪಂಗಾಯಿ’ಯಂತೆ ನನ್ನ ಲೇಖನದ ಒಡಲನ್ನು ತಪ್ಪಿಸಿಕೊಂಡು ಊಹನಾತ್ಮಕ ವಸ್ತುವಿಗೆ ಕಿತ್ತಾಟ ನಡೆಸಿದ್ದಾರೆ. ಪ್ರಭಾಕರ ಶಿಶಿಲರ ಏಕಾದಶ ದ್ರೋಹಕ್ಕೂ ನನ್ನ ಪ್ರತಿಪಾದನಕ್ಕೂ ಯಾವೂರ ಸಂಬಂಧವೂ ಇಲ್ಲ. ಕುಮಾರಸ್ವಾಮಿ ವಸ್ತುನಿಷ್ಠತೆಯನ್ನು ಉಪದೇಶಿಸುತ್ತಾ ವ್ಯಕ್ತಿನಿಂದನೆಗೆ ಇಳಿದಿದ್ದಾರೆ”. ರಾಮಚಂದ್ರ, ರವಿರಾಜ ಹೆಗ್ಡೆ ಮತ್ತು ಬಿ.ಎಸ್. ಭಂಡಾರಿಯವರಿಗೆ ತನ್ನ ಗೆಲಿಲಿಯೋ ನಾಟಕದ ಓದು ಸಮರ್ಪಕವಾಗಿದೆ ಎಂಬುದನ್ನು ಬಿಂಬಿಸುತ್ತಾರೆ. ಲೇಖನದ ಮತ್ತಿನುದ್ದಕ್ಕೂ ತನ್ನ ಹಿಂದಿನ ಅನಾವಶ್ಯಕ ದೈನ್ಯವನ್ನು ಮರುಜಪಿಸುತ್ತ (ಮುಸುಕಿನಲ್ಲಿ ಒಟ್ಟು ಬೆಳವಣಿಗೆಯ ಬಗ್ಗೆ ಅಸಹನೆಯನ್ನು ಝಳಪಿಸುತ್ತ), ಗಾಂಧಿ, ರಾಧಾಕೃಷ್ಣನ್ ಅವರನ್ನು ಸಾಲು ಸಾಲು ಉದ್ಧರಿಸುತ್ತ ಮುಗಿಸಿದ್ದರು.

ವರ್ಷದಾದಿಯಲ್ಲಿ ಕ್ಯಾಲೆಂಡರ್ ಬಂದಾಗಲೇ ವಾರಕ್ಕೊಂದು ಬಂಡೆ, ಗುಹೆ, ಜಲಪಾತ, ರಜೆಗಳ ಜೋಡಿಯನ್ನು ಗುರುತಿಸಿಟ್ಟು ದೀರ್ಘ ಚಾರಣ, ಶಿಬಿರವಾಸಗಳನ್ನು ನಡೆಸುವ ಬಗ್ಗೆ ಯೋಜನೆ ಹಾಕುತ್ತಿದ್ದವ ನಾನು. ಹಾಗೆ ಗಳಿಸಿದ ಅನುಭವವನ್ನು ಮಾತಿನಲ್ಲಿ, ಅನುಸರಿಸಲು ಬಯಸುವವರಿಗೆ ಸದಾ ಉಚಿತ ಖಚಿತ ಮಾಹಿತಿಗಳಲ್ಲಿ, ಪತ್ರಿಕಾ ಲೇಖನಗಳಲ್ಲಿ ಹೊರಹಾಕುತ್ತಿದ್ದೆ. ಅಂಗಡಿಯ ಮೇಜಿನ ಕನ್ನಡಿಯ ಅಡಿಯಲ್ಲಿ ಆಯಾ ಕಾರ್ಯಕ್ರಮದ ಛಾಯಾಚಿತ್ರಗಳನ್ನು ಎಲ್ಲ ವಿವರ ಸೂಚಿಸುವ ನಕ್ಷೆಯನ್ನು ಆಕರ್ಷಕವಾಗಿ ಜೋಡಿಸಿ ಯಾವ್ಯಾವುದೋ ಪುಸ್ತಕ ಮಾತ್ರಕ್ಕೆ ಬಂದವರನ್ನು ಪರಿಸರದ ಬಗ್ಗೆ ಹರಟುವಂತಾಗಿಸುತ್ತಿದ್ದೆ (ಮೂಕರಾಗುತ್ತಿದ್ದರು ವಾಚಾಳಿಗಳು!), ದಮ್ಮೋ ಬಿಮ್ಮೋ ಮುಂದೊಂದು ರಜಾದಿನ ಕಾಡೋ ಬೆಟ್ಟದಲ್ಲೋ ಕನಿಷ್ಠ ಒಮ್ಮೆಯಾದರೂ ಕಾಲೆಳೆಯುವಂತೆಯೂ ಪ್ರೇರಿಸುತ್ತಿದ್ದೆ (ಪಂಗುಂ ಲಂಘಯತೇ ಗಿರಿಂ!!). ಆಳ ಕಾಣದ ಕಂದರದಂಚಿನಲ್ಲಿ ನಿಂತರೂ ಗುಲಗಂಜಿ ತೂಕದಷ್ಟೂ ಅಳುಕದ ನನಗೆ ಮೈಕು, ಒಂದಷ್ಟು ಸಭೆ ಎದುರಾದರೆ ಮಾತ್ರ ಅದೇನೋ ನಡುಕ. ಆದರೂ ಕ್ವಚಿತ್ತಾಗಿ ಆಕಾಶವಾಣಿಯೇ ಮೊದಲಾದೆಡೆಗಳಲ್ಲಿ ಭಾಷಣ, ಸಂವಾದಗಳನ್ನೂ ನಡೆಸಿದ್ದಿದೆ. ಎಲ್ಲದರಲ್ಲೂ ನನ್ನ ಲಕ್ಷ್ಯ ಸ್ಪಷ್ಟವಾಗಿ ಒಂದೇ – ಸಾರ್ವಜನಿಕದಲ್ಲಿ ಪ್ರಕೃತಿ ಪ್ರೇಮವನ್ನು (ಈಚೆಗೆ ಸಂರಕ್ಷಣೆಯ ಬದ್ಧತೆಯನ್ನೂ) ಸಾಂಕ್ರಾಮಿಕವಾಗಿಸಬೇಕು. ಸಾಧನೆಗಳೆಲ್ಲಾ ಆರೋಹಣ ಪರ್ವತಾರೋಹಿಗಳು ಸಾಹಸಿಗಳು ಸಂಸ್ಥೆಯದ್ದು; ನಾನು ಅಧಿಕೃತ ವಕ್ತಾರನಾಗಿ ಮಾತ್ರ ಪ್ರಕಟವಾದವ. (ವೈಯಕ್ತಿಕವಾಗಿ ನಾನು ಯಾವುದೇ ಸಮ್ಮಾನ, ಪ್ರಶಸ್ತಿ, ಪುರಸ್ಕಾರ, ಪದಾಧಿಕಾರ ಪಡೆಯದಿರುವ ದೃಢ ನಿರ್ಧಾರ ಅಂದೇ ತಳೆದಿದ್ದೆ; ಬದಲಾಗಿಲ್ಲ ಇಂದೂ.) ಈ ಎಲ್ಲ ವಿವರಗಳಲ್ಲಲ್ಲದಿದ್ದರೂ ಇಷ್ಟು, ಇದಕ್ಕೂ ಮಿಕ್ಕು ನನ್ನ ಹಿನ್ನೆಲೆ ಮತ್ತು ವೃತ್ತಿಯ ವಿವರಗಳನ್ನು ಸಾಕಷ್ಟು ತಿಳಿದಿದ್ದ ರಾಮಚಂದ್ರರು ತೀರಾ ಅನಿರೀಕ್ಷಿತವಾಗಿ ನನ್ನೊಂದು ಆರಿಂಚುದ್ದದ ಟಿಪ್ಪಣಿಗೆ ನಾಲ್ಕು ಕಾಲಂ ಉದ್ದದ ಮೊದಲ ಲೇಖನ ಬರೆದಾಗಲೇ ಮನಸ್ಸು ರೋಸಿ ಹೋಗಿತ್ತು. ಆದರೂ ಅವರ ಹಿರಿತನ, ಸ್ಥಾನಗೌರವಗಳನ್ನು ಗಣಿಸಿ ಸಂಯಮಿಯಾಗಿದ್ದೆ. ಮರುಮಾತಿನಲ್ಲಿ ಅವರು ಏನು ಸಮಜಾಯಿಷಿ ಕೊಟ್ಟರೂ ನನ್ನ ಸಹನೆ ಕಟ್ಟೆಯೊಡೆದು ಕೇವಲ ಒಂದೇ ವಾಕ್ಯ ಪತ್ರಿಕೆಗೆ ಕಳಿಸಿದೆ:

ಕೃತಜ್ಞ-ತೆಗಳು
‘ನಂಬಿಕೆ’ಯನ್ನು ವ್ಯಾಖ್ಯಾನಿಸದೆ ಉಪದ್ವ್ಯಾಪ ನಡೆಸುವ,
ಒಂದನ್ನು ಎರಡರವರೆಗೆ ಮಾತ್ರ ಕೂಡಲು ಬರುವ,
ಉದ್ಧರಣೆಗಳ ತಪ್ಪು ಅನ್ವಯವನ್ನು ಸಿದ್ಧಿಸಿದ,
ಸೂತ್ರಕ್ಕೆ ‘ಮಾದರಿ ಲೇಖನ’ ಬರೆಯುವ,
ಇಬ್ಬರಿಲ್ಲದಲ್ಲಿ ಸಮನ್ವಯಕಾರರಾಗಬಯಸುವ ಪ್ರೊ| ರಾಮಚಂದ್ರರು ನನ್ನನ್ನು ಮಾತ್ರ ಗಂಭೀರವಾಗಿ ಪರಿಗಣಿಸಿದ್ದು ನನಗೆ ಗೌರವವೇ?
ಅವರ ಉದಯವಾಣಿ ಪ್ರಕಟಿಸಲಿಲ್ಲ. ಕೆಲವು ದಿನ ಬಿಟ್ಟು ನೆನಪಿನೋಲೆ ಕಳಿಸಿದೆ, ಪ್ರಯೋಜನವಾಗಲಿಲ್ಲ.

ತಿಂಗಳೊಂದು ಕಳೆಯುವುದರೊಳಗೆ ‘ಸುಧಾ’ ವಾರ ಪತ್ರಿಕೆಯಲ್ಲಿ (೨೪ ಜನವರಿ ೧೯೮೨ರ ಸಂಚಿಕೆ) ಎನ್.ಕೆ. ಚೆನ್ನಕೇಶವ ಎಂಬುವವರು ಸಣ್ಣ ಕತೆ ಪ್ರಕಟಿಸಿದರು, ಹೆಸರು ‘ಜಾಂಬ್ರಿ.’ ಕತೆ, ಧಾರಾವಾಹಿಗಳನ್ನು ಅಷ್ಟಾಗಿ ಗಮನಿಸದ ನಾನು ಹೆಸರಿನ ಆಕರ್ಷಣೆಯಿಂದ ಓದುತ್ತೇನೆ, ಖಳನಾಯಕ ನಾನೇ! ಕಥೆಯ ಹೂರಣದಲ್ಲಿ, ಜಾಂಬ್ರಿ ಮತ್ತು ನೆಟ್ಟಣಿಗೆಯ ಮಹಾಲಿಂಗೇಶ್ವರ ದೇವಸ್ಥಾನದ ಸ್ಥಳ ಪುರಾಣ, ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ಸ್ವಲ್ಪ ವಿವರಗಳು, ಒಂದೆರಡು ಐತಿಹ್ಯಗಳಿಗೆ ಮೂಳೆ ಮಾಂಸ ಕೊಟ್ಟಿದ್ದರು. ಇವೆಲ್ಲ ಎರಡು ಪುಟ ಮತ್ತು ಅರ್ಧ ಕಾಲಂ ತುಂಬಿದ ಹಿನ್ನೆಲೆ ಸರಕು. ಮತ್ತಿನ ಕೇವಲ ಒಂದೂವರೆ ಕಾಲಂ ಕಥಾಹೃದಯ ಎನ್ನಬಹುದು. ನೆಟ್ಟಣಿಗೆ ದೇವಳದ ಪ್ರಧಾನ ಅರ್ಚಕರ ಮಗ, ಸುರತ್ಕಲ್ಲಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗೆ, ತನ್ನ ಕಾಲೇಜಿಗೆ ಬಂದು ಪರ್ವತಾರೋಹಣ ಪ್ರದರ್ಶನವಿತ್ತ ಮಂಗಳೂರಿನ ಪರ್ವತಾರೋಹಿ ಸಂಸ್ಥೆಯ ಮುಖ್ಯಸ್ಥನ ಪರಿಚಯವಾಗುತ್ತದೆ. ಮತ್ತಾತ ಅವರಿಂದ ತನಗೆ ಹುಟ್ಟಾ ಜಾಂಬ್ರಿ ಗುಹೆ ಬಗ್ಗೆ ಇದ್ದ ಕುತೂಹಲಕ್ಕೆ ವೈಚಾರಿಕತೆ ಮತ್ತು ಸಾಂಘಿಕ ಶಕ್ತಿಯನ್ನು ಪಡೆದು ಅಕಾಲದಲ್ಲಿ, ಅಸಾಂಪ್ರದಾಯಿಕವಾಗಿ ಗುಹಾ ಪ್ರವೇಶ ಮಾಡುತ್ತಾನೆ. ಪರಿಣಾಮದಲ್ಲಿ ಆತ ಮಾರಣೇ ದಿನದಿಂದಲೇ ಬೀದಿ ಹುಚ್ಚನಾಗುತ್ತಾನೆ. “ಇಂದಿಗೂ ಪುತ್ತೂರಿನ ಬೀದಿಗಳಲ್ಲಿ ‘ಜಾಂಬ್ರಿ ಭಟ್ಟರೇ’ ಎಂದು ಕರೆಸಿಕೊಂಡು ತಿರುಗುತ್ತಿದ್ದಾನೆ” ಎನ್ನುವಲ್ಲಿಗೆ ಕತೆ ಮುಗಿದಿತ್ತು.

ವಾಸ್ತವದಲ್ಲಿ ಆ ಸಮಯದಲ್ಲಿ ಪುತ್ತೂರಿನ ಬೀದಿಗಳಲ್ಲಿ ಒಬ್ಬ ಹುಚ್ಚನಿದ್ದದ್ದೂ ನಿಜ (ವಿವರಗಳಲ್ಲಿ ಪ್ರಸ್ತುತ ಕಥಾನಾಯಕನಿಗೂ ಆತನಿಗೂ ಯಾವ ಹೋಲಿಕೆಯೂ ಇರಲಿಲ್ಲ). ಸುಧಾ ಓದುಗರ ಓಲೆಗಳಿಗೆ ತೀರಾ ಸಣ್ಣ ಜಾಗವನ್ನು ಮೀಸಲಿಟ್ಟಿರುವುದು ಮತ್ತು ಅಲ್ಲಿ ಸಂವಾದಗಳನ್ನು ಹೆಚ್ಚು ಪುರಸ್ಕರಿಸದಿರುವುದು ತಿಳಿದಿದ್ದುದರಿಂದ ನಾನು ಚುಟುಕಾಗಿಯೇ ಬರೆದೆ. ಆದರೂ ಅದು ಸಣ್ಣ ಕತ್ತರಿ ಪ್ರಯೋಗದೊಡನೆ ಪ್ರಕಟವಾಯ್ತು. ನನ್ನ ಪತ್ರದ ಪೂರ್ಣ ಪಾಠ: ಜಾಂಬ್ರಿ – ಹೇಡಿ ಕಥನ : ಎನ್.ಕೆ ಚೆನ್ನಕೇಶವರ ಜಾಂಬ್ರಿಯಲ್ಲಿ ಬರುವ ‘ಮಂಗಳೂರಿನ ಒಂದು ಪರ್ವತಾರೋಹಿ ಗುಂಪಿನ (ಹೆಸರಿಸದ) ಮುಖಂಡ’ ನಾನೇ. ಈ ವಲಯಗಳಲ್ಲಿ ಕಳೆದ ಐದು ವರ್ಷದಲ್ಲಿ ಪ್ರಕೃತಿಯ ವೈಚಿತ್ರ್ಯಗಳನ್ನು ಅದರ ಮುಖಬೆಲೆಗೇ ಅನುಭವಿಸಲು ನಾನು ತಂಡ ಕಟ್ಟಿ ಮಾಡಿದ ಹಲವು ಕೆಲಸಗಳಲ್ಲಿ ಜಾಂಬ್ರಿ ಗುಹಾ ಪ್ರವೇಶವೂ ಒಂದು. ಆ ಕುರಿತ ಅನುಭವ ಕಥನ ಸಚಿತ್ರವಾಗಿ ದೈನಿಕ ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಗುಹೆಯ ರಹಸ್ಯ ಸ್ಫೋಟವನ್ನು ವಸ್ತುನಿಷ್ಠವಾಗಿ ಗ್ರಹಿಸಲು ಸಿಧ್ಧವಿಲ್ಲದ ಕೆಲವರು ಓದುಗರ ಓಲೆಯ ರೂಪದಲ್ಲಿ ಕೆಲಕಾಲ ಪ್ರತಿಕ್ರಿಯೆ, ಚರ್ಚೆ ನಡೆಸಿದರು. ಅವರ ವಾದಗಳ ಟೊಳ್ಳನ್ನು ಬಯಲಿಗೆಳೆಯುವಲ್ಲಿ ನಮ್ಮ ತಂಡ ಮತ್ತಷ್ಟು ಶೋಧಗಳನ್ನು ನಡೆಸಿತು, ಹಲವು ಅಪರಿಚಿತರು ಪತ್ರಿಕಾ ಟಿಪ್ಪಣಿಗಳೊಡನೆ ಬೆಂಬಲಿಸಿದ್ದೂ ಆಯ್ತು. ಆ ವಿವರಗಳಿಲ್ಲಿ ಅಪ್ರಸ್ತುತವಾದರೂ ಸುಧಾ ಓದುಗರ ಹಿತ ದೃಷ್ಟಿಯಿಂದ ಕೆಲವು ಸ್ಪಷ್ಟೀಕರಣ ಸೇರಿಸುವುದು ಅನಿವಾರ್ಯವಾಗಿದೆ. ೧. ನನ್ನ ಜಾಂಬ್ರಿ ತಂಡದ ಎಲ್ಲಾ ಸದಸ್ಯರೂ ಇತರ ಅನ್ವೇಷಣಾ ಕಾರ್ಯಗಳಲ್ಲಿ ಪಾಲ್ಗೊಂಡ ಮಿತ್ರರೂ ಸ್ವಸ್ಥಜೀವನ ನಡೆಸುತ್ತಿದ್ದಾರೆ. ೨. ಜಾಂಬ್ರಿ ಪ್ರವೇಶದ ಸುಮಾರು ಎರಡು ವರ್ಷಗಳನಂತರವಷ್ಟೇ ನಾವು ಸುರತ್ಕಲ್ಲಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪರ್ವತಾರೋಹಣ ಪ್ರದರ್ಶನ ನಡೆಸಿದ್ದು. ೩. ಇದು ವಾಸ್ತವದ ಸ್ಪಷ್ಟ ನಿರ್ದೇಶನಗಳೊಡನೆ ಲೇಖಕನ ಮೌಢ್ಯದ ಕಲ್ಪನೆ ಬೆರೆತ ಕಥನ. ಜನಮನಕ್ಕೆ ಜೀವನಾಸಕ್ತಿ, ವೈಚಾರಿಕತೆ ಬೆಳೆಸದ ಇಂಥ ಸಾಹಿತ್ಯ ವರ್ಜ್ಯ. ೪. ಹೆಚ್ಚು ಕಡಿಮೆ ಒಂದು ವರ್ಷದುದ್ದಕ್ಕೆ ಉದಯವಾಣಿಯಲ್ಲಿ ಗುಹಾವಿವಾದ ಬೆಳೆಯಿತು. ಅಲ್ಲಿ ಮುಖಕೊಟ್ಟು ನಿಲ್ಲಲಾರದವರು ವೇದಿಕೆ ಬದಲಿಸಿದ್ದು, ಕಥೆಯ ಮುಸುಕಿನಲ್ಲಿ ವಾಸ್ತವದ ಅವಹೇಳನ ಮಾಡಿದ್ದು ಹೇಡಿತನ. ೫. ಸುಧಾ ಬಯಸಿದಲ್ಲಿ ಗುಹಾಪ್ರಕರಣದ ಸಚಿತ್ರ ಲೇಖನ ಕೊಡಲು ನಾನು ಸಿದ್ಧ.

ನೆಲ್ಲಿತಟ್ಟು ತೀರ್ಥ ಗುಹಾ ಪ್ರವೇಶಕ್ಕೆ ನನಗೆ ಜೊತೆಗೊಟ್ಟಿದ್ದ ರಾಧಾಕೃಷ್ಣರದೂ (ಎಷ್ಟು ಕತ್ತರಿಗೊಳಪಟ್ಟಿತ್ತೋ ನನಗೆ ತಿಳಿದಿಲ್ಲ) ಎರಡು ಸಾಲಿನ ಪ್ರತಿಕ್ರಿಯೆ ಇಲ್ಲಿ ನನಗೆ ಜೊತೆಗೊಟ್ಟಿತ್ತು: ಮೂಢ ನಂಬಿಕೆಗಳನ್ನು ಭದ್ರ ಪಡಿಸುವಂತೆ ಕಾಣುವ ‘ಜಾಂಬ್ರಿ’ ಕಥೆಯನ್ನು ಸುಧಾದಲ್ಲಿ ಕಂಡು ಬೇಸರವಾಯ್ತು. ಸತ್ಯಾಸತ್ಯತೆಯನ್ನು ಪರಾಮರ್ಶಿಸುವ ದೃಷ್ಟಿ ನಮ್ಮಲ್ಲಿ ಬೆಳೆಯಬೇಕು. ಹೀಗೆ ಮೂಢ ನಂಬಿಕೆಗಳನ್ನು ಉಳಿಸಿ, ಬೆಳೆಸುವ ಪ್ರವೃತ್ತಿ ಜ್ಞಾನವಿಕಾಸಕ್ಕೆ ಮಾರಕವಾಗುತ್ತದೆ.

ಇಂದಿನ ಅನುಭವದ ಬೆಳಕಿನಲ್ಲಿ, ಅಂದು ಪತ್ರಿಕೆಗಳು ಪೂರ್ಣ ನನ್ನೊಂದಿಗಿರಲಿಲ್ಲ ಎಂಬ ಭಾವ ಮೂಡುತ್ತದೆ. ಆದರೆ ಯಾವುದೇ (ಇಲ್ಲಿ ಕೊನೆಯ ಮಾತು ನನ್ನದಾಗದ) ‘ಸೋಲನ್ನು’ ನೆನೆದು ಮುಂದಕ್ಕೆತ್ತಿದ ಹೆಜ್ಜೆಯನ್ನು ಹಗುರ ಮಾಡುವುದು ನನ್ನ ಜಾಯಮಾನದಲ್ಲಿಲ್ಲ. ಜಾಂಬ್ರಿ ಚರ್ಚೆಯಲ್ಲಿ ಕಾಣಿಸಿಕೊಂಡು, ಪತ್ರಿಕಾ ಓದುಗರ ಮಟ್ಟಿಗೆ ಕೊನೆ ಮುಟ್ಟದ ಸವಾಲಾಗಿ ಉಳಿದಿತ್ತು ಕೌಂಡಿಕಾನ. ವಾಸ್ತವವಾಗಿ ನಮ್ಮ ತಂಡ ಅದನ್ನು ೨೭-೧೨-೧೯೮೧ರಂದೇ ಪೂರೈಸಿದ್ದರೂ ೧೯೮೨ರ ಫೆಬ್ರುವರಿಯಲ್ಲಿ ಮತ್ತೆ ಉದಯವಾಣಿಯಲ್ಲೇ ನನ್ನ ‘ಸವಾಲಿನ ಬೆಂಬತ್ತಿ – ಕೌಂಡಿಕಾನ’ ಪ್ರಕಟವಾಯಿತು. ಅದರ ಸ್ವಾರಸ್ಯಕ್ಕೆ ಮುಂದಿನವಾರದವರೆಗೆ ಕಾಯ್ತೀರಲ್ಲಾ? ಏತನ್ಮಧ್ಯೆ ಹಳೆತಲೆಮಾರಿನ ನೆನಪುಗಳ ಕಡತದ ಧೂಳು ಹೊಡೆಯಬಲ್ಲವರು ಮತ್ತು ಜಾಗತೀಕರಣ, ‘ಜಾಗೃತೀಕರಣ’ದ ಎರಡು ಗುಂಡುಗಳನ್ನು ವೃತ್ತಿ ದಂಡದ ಎರಡು ಕೊನೆಗಳಿಗೆ ಬೆಸೆದು ಜೀವನಯಾಪನೆಯ ಬಿಗಿಸರಿಗೆ ನಡೆಯಲೇಬೇಕಾಗಿರುವ ಹೊಸತಲೆಮಾರಿನವರು ಈ ಬರಹದ ಬಗ್ಗೆ ಹೊಸ ತೀರ್ಪನ್ನೇ ಬರೆಯುವ ಸಮಯ ಸಮನಿಸಿದೆ. ನಾನು ವಿರಮಿಸುತ್ತೇನೆ, ನೀವುಂಟು, ಕಾಮೆಂಟ್ಸ್ ಅಂಕಣ ಉಂಟು!