ಇತಿಹಾಸದ ‘ಅಶೋಕ’ವನ್ನು ನನ್ನ ತಂದೆತಾಯಿಯರು ನನಗೆ ಕೊಟ್ಟದ್ದು ನಿಜ. ಆದರೆ ‘ಚಕ್ರವರ್ತಿ’ಯನ್ನೂ ಎಳೆದುಕೊಳ್ಳುವಂತಾದ್ದು ನನ್ನ ಹವ್ಯಾಸ ಬಲದಲ್ಲಿ. ದಕ್ಷಿಣ ಭಾರತದ ಒಂದು ಸಣ್ಣ ಅಂಶವನ್ನೂ ಸೇರಿಸಿದಂತೆ ಈ ವಲಯದ ನನ್ನ ಮೋಟಾರು ಸೈಕಲ್ ಪ್ರವಾಸ ಕಥನಗಳ ಸಂಕಲನವನ್ನು ನಾನೇ ‘ಚಕ್ರವರ್ತಿಗಳು’ ಎಂದು ಹೆಸರಿಸಿ, ಪ್ರಕಟಿಸಿದ್ದು (ಸದ್ಯ ಅದರೆಲ್ಲಾ ಪ್ರತಿಗಳು ಮಾರಿ ಮುಗಿದಿವೆ) ನಿಮಗೆ ತಿಳಿದೇ ಇರಬೇಕು. ಎಷ್ಟೋ ಬಾರಿ ನಾನು/ನನ್ನ ತಂಡ ಇನ್ನೊಂದೇ ಲಕ್ಷ್ಯಕ್ಕೆ ತಿರುಗಾಡಿದ್ದರೂ ಮಾರ್ಗಕ್ರಮಣದ ವೈಶಿಷ್ಟ್ಯ ದಾಖಲಾರ್ಹ. ಅಂಥ ಕೆಲವನ್ನು ಇಲ್ಲಿ ನೆನಪಿನಿಂದ ಹೆಕ್ಕಿ ಪೋಣಿಸುತ್ತೇನೆ.

ಕಾಳಿಂಗನ ಬೆನ್ನಹಿಡಿದು

ದಕ ಜಿಲ್ಲೆಯಲ್ಲಿ ಸಂಕವಾಳದ ‘ಮಹಿಮೆ’ ಅಪಾರ. ಜುಟ್ಟಿನ ನಾಗ, ಜುಟ್ಟಲ್ಲದಿದ್ದರೂ ಏಳು ಜಡೆ, ನಾಗಮಣಿ ಹೊತ್ತದ್ದು, ಕುರುಡು ಕಾಂಚಾಣದ ಸಂಬಳರಹಿತ ಸೆಕ್ಯುರಿಟಿ ಗಾರ್ಡ್ ಎಲ್ಲ ಕೇಳಿದ್ದೇನೆ. ಮೂರೋ ಆರೋ ಹತ್ತೋ ತಲೆಯ ಪುರಾಣ ಪುರುಷರುಗಳನ್ನು ನಂಬಿದಷ್ಟೇ ಗಂಭೀರವಾಗಿ ಒಪ್ಪಿಕೊಂಡು ಅಶೋಕವರ್ಧನೆ ಮಾಡಿಕೊಂಡಿದ್ದೇನೆ. ಹಾಗೆಂದು ಬೀದಿಬದಿಯಲ್ಲಿ ವಿಷ ಹೀರುವ ಕಲ್ಲು, ಬೇರುಗಳನ್ನು (ನಾಗನ ಹೆಸರಿನಲ್ಲಿ) ಮಾರುವವರನ್ನು, (ವಿಷರಹಿತ, ನಿರುಪದ್ರವಿ) ಇರ್ತಲೆ ಹಾವು ಹೆಂಗಸರ ಮೊಲೆಗೆ ಜೋತುಬೀಳುತ್ತದೆಂದು ಹುಡುಕಿ ಕೊಲ್ಲುವವರನ್ನು, ಹಾವಿನ ದ್ವೇಷ ಹನ್ನೆರಡು ವರ್ಷ ಎಂದು ಹಾಡುವವರನ್ನು ಯೋಚನೆಗೂ ಪುರುಸೊತ್ತು ತೆಗೆದುಕೊಳ್ಳದೆ ಗೇಲಿ ಮಾಡಿದ್ದೇನೆ.

ಉಚ್ಚು-ತಜ್ಞ (ತುಳುವಿನಲ್ಲಿ ಉಚ್ಚು = ಹಾವು) ಶರತ್ ತನ್ನ ಹಾವುಗಳ ಒಡನಾಟದ ಪ್ರಾಥಮಿಕ ಹಂತದಲ್ಲಿ (೧೯೭೦ರ ದಶದಲ್ಲಿ) ಅಂದಿನ ಮದ್ರಾಸಿನಿಂದ ರೋಮುಲಸ್ ವಿಟೇಕರ್ ಬಳಗದ ಒಬ್ಬ ತಮಿಳು ಆದಿವಾಸಿ – ಇರುಳನನ್ನು ಇಲ್ಲಿಗೆ ಕರೆಸಿದ್ದ. ಆಗ ನನ್ನ ಬಳಿಯಿದ್ದದ್ದು ಸೈಕಲ್ ಮಾತ್ರ. ಮಾವ ಗೌರಿಶಂಕರರಿಂದ ಕಡಪಡೆದ ಸ್ಕೂಟರಿನಲ್ಲಿ ಆ ಇರುಳನನ್ನು ಕಾಳಿಂಗನ ಮಾದರಿ ಸಂಗ್ರಹಿಸಲು ಆಗುಂಬೆ ತಪ್ಪಲಲ್ಲಿ ಸುತ್ತಿಸಿದ್ದೆ. ಆಗ ಜನರಲ್ಲಿದ್ದ ನಂಬಿಕೆಯನ್ನು ನಾನೂ ಅರೆಬರೆ ನಿಜವೆಂದೇ ತಿಳಿದಿದ್ದೆ. ಅದು ಗೂಡು ಕಟ್ಟಿದಲ್ಲಿ, ಮರಿಯಿದ್ದಲ್ಲಿ, ಸುಮಾರು ನೂರು ಮೀಟರ್ ಫಾಸಲೆಯಲ್ಲಿ ಯಾರು ಬಂದರೂ ಬೆನ್ನಟ್ಟಿ ಆಕ್ರಮಣ ಮಾಡುತ್ತದೆ, ವಿಷ ಸಿಡಿಸುತ್ತದೆ, ತಾಳೆಮರದೆತ್ತರಕ್ಕೆ ನಿಲ್ಲುತ್ತದೆ ಇತ್ಯಾದಿ. ತಿಂಗಳೆ ಸಮೀಪ ಒಂದು ಮುದುಕಿ ತನ್ನ ಹರಕು ಜೋಪಡಿಯಲ್ಲಿ, ವಾರದುದ್ದಕ್ಕೆ ಪ್ರಕೃತಿ ಕರೆಗೂ ಹೊರಬಾರದೆ, ಬಾಗಿಲ ಬುಡದ ಮಾಟೆಯಲ್ಲಿ ಕಾದ ಕಾಳಿಂಗನನ್ನು ಸತಾಯಿಸಿ ಬದುಕುಳಿದ ಕಥೆಯನ್ನಂತೂ ಪೂರ್ಣ ನಿಜವಿರಬೇಕೆಂದೇ ನಂಬಿದ್ದೆ.

ಕೆಲವು ವರ್ಷಗಳನಂತರ ನೆರಿಯ ಮಲೆಯಲ್ಲಿ ಅಂದರೆ, ನಾಗರಿಕತೆಯಿಂದ ಸುಮಾರು ಹತ್ತು-ಹನ್ನೆರಡು ಕಿಮೀ ದೂರದಲ್ಲಿ, ಶರತ್ ಒಂದು ‘ಕಾಳಿಂಗನ ಗೂಡು’ ಗುರುತಿಸಿ, ನಮ್ಮನ್ನೂ ಅಲ್ಲಿಗೆ ಕರೆಸಿಕೊಂಡು ತೋರಿಸಿದ್ದ. ಆಗ ಕಾಳಿಂಗನ ಮಹಿಮೆಯೆಲ್ಲ ಒಂದು ಗುಲಗಂಜಿಗುಂಡಿಗೆ ಒತ್ತಿಯಿಟ್ಟ ತೊಂಬತ್ತೊಂಬತ್ತು ಅಂಶ ಬೆಂಡು ಅಂತ ಅರ್ಥವಾಗಿತ್ತು. ನಾವು ವಾಪಾಸು ಹೊರಟಾಗ ಶರತ್ ಆತನ ಕಾಳಿಂಗ ಅಧ್ಯಯನದ ಯೋಜನೆಯಂತೆ ಹಿಂದುಳಿದ. ಕಾಡದಾರಿಯಲ್ಲಿ ಹೀರೋಹೊಂಡಾದಲ್ಲಿ (ಹಿಂದೆ ದೇವಕಿ, ಎದುರು ಮೂರೋ ನಾಲ್ಕೋ ವರ್ಷ ಪ್ರಾಯದ ಮಗ – ಅಭಯ) ಮರಳುತ್ತಿರುವಾಗ ಒಂದು ತಿರುವಿನಲ್ಲಿ ಪಕ್ಕದ ಸಣ್ಣ ದರೆಯಿಂದ ಸಾಕ್ಷಾತ್ ಕಾಳಿಂಗನೇ ತಣ್ಣಗೆ ದಾರಿಗಡ್ಡ ಇಳಿಯಬೇಕೇ! (ದಢಾರ್ ಎಂದು ಭಾರೀ ತೆಂಗಿನ ಸೋಗೆ ಬಿದ್ದಂತಲ್ಲ) ಆ ಜಾರು ದಾರಿಯಲ್ಲಿ ನನ್ನ ಬ್ರೇಕು ಎಷ್ಟು ಕೆಲಸ ಮಾಡಿದರೂ ಹಾವಿನಿಂದ ಕೇವಲ ಹತ್ತಡಿ ದೂರದಲ್ಲಿ ನಿಂತಿತು. ಹಾವಿಗೆ ಕಿವಿಯಿಲ್ಲ, ದೃಷ್ಟಿ ಮಂದ. ನನ್ನ ಬೈಕಿನ ಸದ್ದು ಅದಕ್ಕೆ ಕೇಳಲಿಲ್ಲ, ಚಕ್ರದ ಉರುಳು ಅದರ ಕಂಪನ ಗ್ರಹಿಕೆಯ ಮಿತಿಗೂ ಕಡಿಮೆಯಿದ್ದಿರಬೇಕು. ಇಂಜಿನ್ ಆರಿಸಿ (ಇಳಿಯಲು, ಓಡಲು ಪುರುಸೊತ್ತೇ ಇಲ್ಲದೆ) ಮರವಟ್ಟು ನಿಂತ ನಮ್ಮತ್ತ ಅದು ಕತ್ತೂ ಹೊರಳಿಸದೆ ಇನ್ನೊಂದು ಬದಿಯ ಕೊಲ್ಲಿಗೆ ನಿಧಾನಕ್ಕೆ ಇಳಿದು ಹೋಯ್ತು. ಮತ್ತೆ ನಾವು ಬೈಕ್ ಬಿಟ್ಟು ಅದರ ಜಾಡನ್ನು ದೃಷ್ಟಿಯಲ್ಲಿ ಅನುಸರಿಸಲು ಕೊಲ್ಲಿಯಂಚಿಗೆ ಓಡಿದರೂ ಹೆಚ್ಚಿನ ದರ್ಶನದ ಭಾಗ್ಯ ಒದಗಲಿಲ್ಲ. ಆದರೆ ಪರೋಕ್ಷ ಪ್ರಯೋಜನವಂತೂ ತುಂಬಾ ಸ್ಪಷ್ಟವಿತ್ತು – ಅದು ಇನ್ನೊಂದೇ ಜೀವವೈವಿಧ್ಯ ಮಾತ್ರ.

ಬ್ರಹ್ಮರಕೂಟ್ಲಿನಲ್ಲಿ…

ಮಳೆಗಾಲದ ಮುಂಜಾನೆಯ ಮಸುಕು ಬೆಳಕಿನಲ್ಲಿ, ಅತ್ತ ಭಾರಿಯೂ ಅಲ್ಲದ, ಇತ್ತ ಸ್ವಚ್ಚ ಬಿಡಲೂ ಒಲ್ಲದ ಮಳೆಯಲ್ಲಿ ನಾವು ಮಂಗಳೂರು ಬಿಟ್ಟಿದ್ದೆವು. ಬರೋಬ್ಬರಿ ಹನ್ನೆರಡು ದ್ವಿಚಕ್ರ ವಾಹನಗಳಲ್ಲಿ ಕನಿಷ್ಠ ಇಪ್ಪತ್ನಾಲ್ಕು ಮಂದಿ ‘ಅದರ ಬಾಲ ಇದು, ಇದರ ಬಾಲ ಅದು ಮೂಸಿ’ ಎಂಬಂತೆ ತಲೆ ತಗ್ಗಿಸಿ ಸಾಲುಗಟ್ಟಿ ಹೊರಟಿದ್ದೆವು. ಆಗ ಚತುಷ್ಪಥದ ಗೊಂದಲವೋ ಹತ್ತೆಂಟು ಸಾಲು ಚಕ್ರದ ಟ್ಯಾಂಕರುಗಳ ಬಾಧೆಯೋ ರಾಜ್ಯವನ್ನೇ ಒತ್ತೆಸೆರೆ ಇಟ್ಟ ಗಣಿಧಣಿಗಳ ಕಬ್ಬಿಣದದುರಿನ ಲಾರಿ ಸೈನ್ಯವೋ ಡಾಂಬರು ತಿನ್ನುವವರ ಹೇಳಿಕೆಯ ಭಾರೀ ಮಳೆಯೋ ದಾರಿಯನ್ನು ಇಂದಿನಂತೆ ಚಂದ್ರನಂಗಳ ಮಾಡಿರಲಿಲ್ಲ. ರಾಣಿಕೋಟು (= ರೈನ್ ಕೋಟು), ಹಳೆ ಮೆಟ್ಟೋ (=ಹೆಲ್ಮೆಟ್. ಇವೆರಡರ ಕನ್ನಡೀಕರಣದ ಕಾಪೀರೈಟು ಗೆಳೆಯ ಅರವಿಂದರದ್ದು) ಟೊಪ್ಪಿಯದೋ ಕವಚದಲ್ಲಿ ಹಾಸ್ಯ, ಮಾತುಗಳ ವಿನಿಮಯಕ್ಕೆ ಆಸ್ಪದವಿರಲಿಲ್ಲ ಎನ್ನುವುದಷ್ಟೇ ಎಲ್ಲರ ಕೊರಗು. ಎಲ್ಲ ಅವರವರ ಭಾವಕ್ಕೆ ನಿಲುಕಿದಂತೆ ಮುಂದೆ ಕೇಳಲಿದ್ದ ಅಬ್ಬಿ ಫಾಲ್ಸಿನ ಅಬ್ಬರ, ಕಾಣಲಿದ್ದ ರಾಜಾ ಸೀಟಿನ ವಿಹಂಗಮ ನೋಟ, ಅನುಭವಿಸಲಿದ್ದ ಮಡಿಕೇರಿ ಮಂಜಿನ ಶೀತ ಮನಸ್ಸಿನಲ್ಲೇ ಚಿತ್ರಿಸಿಕೊಳ್ಳುತ್ತಾ ಹದsssss ವೇಗದಲ್ಲಿ ಮಾರ್ಗಕ್ರಮಣ ನಡೆಸಿದ್ದೆವು. ಊರು ಬಿಡುತ್ತಿದ್ದ ವಾಹನಗಳ ಸಂಖ್ಯೆ ಬಲು ಕಡಿಮೆ. ಆದರೆ ನಿಶಾಚರಿ ಬಸ್ಸು, ಲಾರಿಗಳು, ನಗರಾವಶ್ಯಕತೆ ಪೂರೈಕೆಯ ವಾಹನಗಳು ನಮಗೆ ಧಾರಾಳ ಎದುರಾಗುತ್ತಿದ್ದವು. ಕಣ್ಣೂರಿನ ದರ್ಗಾದ ಹಿಂದಿನ ಕುದ್ರು, ಫರಂಗಿಪೇಟೆ ಎದುರು ದಂಡೆಯ ದೇವಂದ ಬೆಟ್ಟ, ತುಂಬೆಯ ಜಲಶುದ್ಧಾಗರಗಳೆಲ್ಲ ನನ್ನ ನೆನಪಿನ ಕೋಶದಲ್ಲಿ ನೂರೆಂಟನೇ ಬಾರಿಗೆ ನವೀಕರಣಗೊಂಡವು. ಮುಂದೆ ನೆರೆಪರಿಹಾರದ ಎತ್ತರಿಸಿದ ದಾರಿ ಇನ್ನೂ ಜಾಗೃತವಾಗಿರಲಿಲ್ಲ. ಸಹಜವಾಗಿ ಗದ್ದೆಯ ಪಕ್ಕದಲ್ಲಿ ಸುಳಿದು, ಕಳ್ಳಿಗೆ ಕವಲು ಕಳೆದು ಬ್ರಹ್ಮರ ಕೂಟ್ಲು ಸೇತುವೆ ಎದುರು ಕಾಣುತ್ತಾ ಇರುವಂತೆ…

ಎದುರಿನಿಂದ ಭಾರಿ ಬಸ್ಸೊಂದು ಕಣ್ಣು ಕೆಕ್ಕರಿಸಿಕೊಂಡು, ಮಸಕು ಹಿನ್ನೆಲೆಯಿಂದೆದ್ದ ಮಾಯಾವಿಯಂತೆ ಪ್ರತ್ಯಕ್ಷವಾಯ್ತು. ಸೇತುವೆ ಸಂಕೋಚಗೊಳ್ಳುವಂತೆ ಇದು ಅಡ್ಡಡ್ಡ ಬೆಳೆಯಿತೋ ಮುಂದುವರಿದು ದಾರಿಯನ್ನೂ ಪೂರ್ಣ ಆವರಿಸುತ್ತ ತ್ರಿವಿಕ್ರಮತ್ವಪಡೆಯಿತೋ ಎನ್ನುವಂತೆ ಬಂದೇ ಬಂತು. ನನ್ನಿಂದ ಮುಂದೆ ಒಂದೋ ಎರಡೋ ಬೈಕ್, ಮುಂಚೂಣಿಯಲ್ಲಿ ನಮ್ಮವರದೇ ಸ್ಕೂಟರ್! ಅದೂ ಬಸ್ಸಿನ ಅಪರಾವತಾರ ನೋಡಿ ಹೆದರಿದಂತೆ ರಸ್ತೆಯ ಎಡ ಅಂಚು ಕಳೆದು, ನಂಬಲು ಯೋಗ್ಯವಲ್ಲದ, ಗರಿಕೆ ಬೆಳೆದ ಮಣ್ಣ ಹರಹಿನಲ್ಲೂ ಇನ್ನೇನು ಇನ್ನೇನು ಎನ್ನುವ ಆತಂಕದಲ್ಲೇ ತೆವಳಿದಂತಿತ್ತು. ಬಸ್ಸು ಗಕ್ಕನೆ ಬ್ರೇಕು ಕಂಡಂತೆ ತಡವರಿಸಿತು, ಆದರೆ ಅನೂಹ್ಯವಾಗಿ ಅದರ ಹಿಂಭಾಗವಷ್ಟೇ ಸ್ಕೂಟರನ್ನು ಮಟ್ಟಹಾಕುವಂತೆ ಅಡ್ಡಡ್ಡಲಾಗಿ ಜಾರಿ ಬರತೊಡಗಿತು. ಮಣ್ಣ ಅಂಚಿನಲ್ಲಿ ಮಧ್ಯ ಪ್ರತಿಷ್ಠೆಯಂತಿದ್ದ ವಿದ್ಯುತ್ ಕಂಬಕ್ಕೆ ಎಡ ಭುಜ ಸವರಿದಂತೆ ಸರಿಯಿತು ಸ್ಕೂಟರ್. ನಾವೆಲ್ಲಾ ಇನ್ನೇನು ಇನ್ನೇನು ಎನ್ನುವ ಕ್ಷಣದಲ್ಲಿ, ಬಸ್ಸಿನ ಹಿಮ್ಮೂಲೆ ಹೆಟ್ಟಿತೋ ಇವರೇ ಎಡಕ್ಕೆ ತೊಂಬತ್ತರ ಕೋನದಲ್ಲಿ ತಿರುಗಿದರೋ ಎಂದು ನಾವೆಲ್ಲ ಮರವಟ್ಟು ನೋಡುತ್ತಿರುವಂತೆ ಧಡ ಧಡ!

ರಸ್ತೆಯನ್ನು ಕೊಳ್ಳದಾಳದಿಂದ ಸೇತುವೆಯ ಮಟ್ಟಕ್ಕೆ ಏರಿಸಲು ಅಲ್ಲಿ ಸುಮಾರು ನಲವತ್ತು ಅಡಿಗೂ ಮಿಕ್ಕು ಮಣ್ಣು ತುಂಬಿದ್ದರು. ಅದನ್ನು ಹಳೆಯ ಕ್ರಮದಂತೆ ಭದ್ರಪಡಿಸಲು ಬಿಗಿಯಾಗಿ ಸೈಜ಼ುಕಲ್ಲಿನ ಓರೆ ಹೊದಿಕೆ ಹೆಣೆದಿದ್ದರು. ನಿತ್ಯದಲ್ಲಿ, ಅದೂ ಪಾಚಿಗಟ್ಟುವ ಮಳೆಗಾಲದಲ್ಲಿ ಸಾಮಾನ್ಯರು ನಾಲ್ಗಾಲಿನಲ್ಲೂ ಏರಿಳಿಯಲು ಬಳಸಲು ಅಸಾಧ್ಯವಾದ ಸುಮಾರು ಎಪ್ಪತ್ತು- ಎಂಬತ್ತರ ಕೋನದ ರಚನೆಯದು. ಲಂಬ ಕೋನದ ಗೋಡೆಗಾದರೋ ನೆತ್ತಿಯ ಸ್ಪಷ್ಟ ಭಾರ, ಕಂಪನವನ್ನು ತಾಳಿಕೊಳ್ಳಲು ಕೊಡುವ ನಿಖರ ಕೆತ್ತನೆ, ಎಡೆ ಕಲ್ಲು, ಬಿಗಿ ಸಾರಣೆಗಳಿರುತ್ತವೆ. ಅಂಥವೇನೂ ಇಲ್ಲದ ಸಡಿಲ ಹೊದಿಕೆ ಇಲ್ಲಿನದು. ಆದರೆ ಸ್ಕೂಟರ್ ಸವಾರನಿಗೆ ಧಾವಿಸಿ ಬರುತ್ತಿದ್ದ ಭಾರೀ ಬಸ್ಸಿನ ಅಪ್ಪಳಿಕೆಗಿಂತಲೂ ಹೆಚ್ಚಿನ ವಿಶ್ವಾಸಯೋಗ್ಯತೆ ಈ ಕಲ್ಲು ಹಾಸಿನ ಮೇಲೆ ಕ್ಷಣಾರ್ಧದಲ್ಲಿ ಮೂಡಿರಬೇಕು. ದೃಢವಾಗಿ ಹ್ಯಾಂಡಲ್ ನಿಯಂತ್ರಣ ಉಳಿಸಿಕೊಂಡು, ಮುಂಬಿರಿ ಹಿಂಬಿರಿಗಳ (ಅದೇನ್ ತಲೆ ತುರ್ಸ್ತೀರಿ, ಫ್ರಂಟು ರೇರು ಬ್ರೇಕ್ ಸ್ವಾಮೀ) ಮಿತವಾದ ಬಳಕೆಯಲ್ಲಿ ಸ್ಕೂಟರನ್ನು ನೇರ ಕೊಳ್ಳಕ್ಕಿಳಿಸಿಯೇ ಬಿಟ್ಟ – ಧಡ ಧಡ ಧಡ, ಕೆಳಗಿನ ಗದ್ದೆಯ ದಡ! ವಿದ್ಯುತ್ ಕಂಬದ ಅಂಚಿನಲ್ಲಿ ಪೂರ್ಣ ನಿಲುಗಡೆಗೆ ಬಂದ ಬಸ್ಸಿನ ಚಾಲಕನಾದಿ ನಾವೆಲ್ಲರೂ ಎಲ್ಲೆಂದರಲ್ಲಿ ನಮ್ಮನಮ್ಮ ವಾಹನಗಳನ್ನು ನಿಲ್ಲಿಸಿ ಕೊಳ್ಳದಂಚಿಗೆ ಧಾವಿಸಿ ನೋಡಿದರೆ, ಎರಡೂ ಸವಾರರು ಸ್ಕೂಟರನ್ನು ಸ್ಟ್ಯಾಂಡ್ ಹಾಕಿ ನಿಲ್ಲಿಸಿ, ಪಕ್ಕದಲ್ಲೇ ನಿಂತು ಅದನ್ನೂ ಮೇಲಿನ ನಮ್ಮನ್ನೂ ಮುಖ ತುಂಬಾ ನಗೆಬೀರುತ್ತ, ಕೈಬೀಸುತ್ತ, ಜೊತೆಗೆ ಬೆವರೊರೆಸುತ್ತ ನೋಡುತ್ತಿದ್ದರು (ಮಳೆಯೊಳಗಿರ್ದೂ ಬೆಮರ್ದರ್?)! ಸ್ಕೂಟರಿಗೋ ಸವಾರರಿಗೋ ಒಂದು ಗೀಚು ಗಾಯವೂ ಇಲ್ಲ!!

[ಮತ್ತೆ ಗದ್ದೆಹುಣಿಯಲ್ಲಿ ಸಾಗಿ, ಬಳಸು ದಾರಿಯಲ್ಲಿ ಸ್ಕೂಟರ್ ಮೇಲೆ ಬಂತು. ಬಸ್ಸು ಚಾಲಕ ಮಳೆ ನೀರಿಗೆ ಸ್ಕಿಡ್ ಆದ ನೆಪವನ್ನೂ ನಾವು ಆತ ನಿದ್ರೆ ತೂಗಿದ ಆರೋಪವನ್ನೂ ಗಟ್ಟಿಯಾಗಿಯೇ ಹೇಳಿಕೊಂಡರೂ ಪೆಟ್-ಚಿಟ್ಟಾಗದೇ (ವಿವೇಚನೆ ಕಳೆದಲ್ಲಿ ಅಪಘಾತಕ್ಕಿಂತಲೂ ವಿಚಾರಣೆಯ ನಷ್ಟವೇ ಹೆಚ್ಚು) ಎಲ್ಲರೂ ಅವರವರ ದಾರಿ ಹಿಡಿದೆವು]

ಭೀಮ ಬಿದ್ದಾ..

ನನ್ನ ಹಳೆಯ ಹೀರೋ ಹೊಂಡಾ ಸಿ.ಡಿ ೧೦೦ ಬೈಕನ್ನು ಅಭಯನ ಬೆಂಗಳೂರು ಉಪಯೋಗಕ್ಕೆ ಲಾರಿಯಲ್ಲಿ ಕಳಿಸಿ ಕೊಟ್ಟಿದ್ದೆ. ನಾನಿಲ್ಲಿ ಆರೇಳು ತಿಂಗಳು ಕಾರಿನಲ್ಲೇ ಸುಧಾರಿಸಿದರೂ ಬಯಿಕಿನ ಬಯಕೆ ದೂರಾಗಲಿಲ್ಲ. ನಗರ ಸಂಚಾರದ ಅವ್ಯವಸ್ಥೆಯಲ್ಲಂತೂ ದ್ವಿಚಕ್ರಿಗಳ ಅನುಕೂಲ ಹೆಚ್ಚೆಚ್ಚು ಕಾಣುತ್ತಾ ಹೊಸ ಹೀರೋ ಸ್ಪ್ಲೆಂಡರ್ ೧೨೫, ಕೊಂಡೇ ಬಿಟ್ಟೆ. ನನಗೋ ದಿನಕ್ಕೆ ಮೂರೋ ನಾಲ್ಕೋ ಕಿಮೀಯಷ್ಟೇ ಓಟ. ಆದರೆ ಬೆಂಗಳೂರಿಗನಿಗೋ ಮೂವತ್ತು, ನಲ್ವತ್ತು ಕಿಮೀ ಓಡಿಸುವ ಅನಿವಾರ್ಯತೆ ನೆನಪಾಗದಿರಲಿಲ್ಲ. ಆದರೆ ಹೊಸ ಬೈಕಿನ ಪ್ರಾಥಮಿಕದ ಒಂದೆರಡು ಕಡ್ಡಾಯದ ಆದರೆ ಉಚಿತ ಸರ್ವೀಸ್ ಪಡೆಯುವ ಸಮಯಾನುಕೂಲ ಅವನಿಗಿರದು ಎಂದು ಕೆಲವು ಕಾಲ ಬಿಟ್ಟು ಅವನಿಗೆ ಆಹ್ವಾನ ಕೊಟ್ಟೆ. (ಧೀಪ್ಪಾವಳೀ ಧಮಾಕ್ಕಾ! ಹಳತು ಕೊಟ್ಟು ಹೊಸತು ಪಡೆ!!)

ಅಭಯನಿಗೆ ಮೊದಲ ದೀರ್ಘ ಓಟಕ್ಕೆ ಬೇಕಾದ, ಬೇಡವಾದ ಸಲಹೆಗಳನ್ನು ಧಾರಾಳ ರವಾನಿಸಿದೆವು. ಸರಿ, ಓ ಮೊನ್ನೆ ಅವನು ಹೆಂಡತಿಯನ್ನು (ರಶ್ಮಿ) ಬೆನ್ನಿಗೇರಿಸಿಕೊಂಡು ಮಜಲೋಟದಲ್ಲಿ ಮೈಸೂರಿಗೆ ಬಂದು ರಾತ್ರಿ ಅಜ್ಜಿಮನೆ ಹಕ್ಕು ಚಲಾಯಿಸಿ ನಿಂತ. ಮರುದಿನ ರಶ್ಮಿಯ ತವರ್ಮನೆ -ಮಣಿಮುಂಡದಲ್ಲಿ, ಮಧ್ಯಾಹ್ನದ ಊಟೋಪಚಾರಗಳಿಗಷ್ಟೇ ಮಾವನ ಮನೆ ಹಕ್ಕು ಬಳಸಿ ಇಲ್ಲಿಗೆ ಬಂದ. ಆದಿತ್ಯವಾರ ಅವರು ವಾಪಾಸು ಹೊರಡುತ್ತಾರೆಂದಾಗ ನನ್ನ ತಿರುಗೂಳಿ ಹುಚ್ಚು ಕೆರಳಿತು. ಭಾರೀ ಹಾಳುಬಿದ್ದ ಶಿರಾಡಿಬಿಟ್ಟು, ಬಿಸಿಲೆ ದಾರಿಯಲ್ಲಿ (‘ಅಶೋಕವನ’ ನೋಡಿಕೊಂಡು) ಹೋಗಲು ಸೂಚಿಸಿದೆ. ಸಾಲದ್ದಕ್ಕೆ ನಾನು ದೇವಕಿ ಬಿಸಿಲೆವರೆಗೆ ಜೊತೆಗೊಡಲೂ ಸಜ್ಜಾದೆವು. ಬಿಸಿಲೆ ಎಂದ ಕೂಡಲೇ ಇನ್ನೆರಡು ಬೈಕುಗಳಲ್ಲಿ ಮತ್ತೆ ನಾಲ್ಕು ಮಂದಿ ಗೆಳೆಯರೂ (ಪ್ರಸನ್ನ, ಲಕ್ಷ್ಮೀನಾರಾಯಣ ರೆಡ್ಡಿ ಮತ್ತು ಅಶೋಕ್ ರಾಜಪುರೋಹಿತ್, ಸಂದೀಪ್ ಶಾ) ಸೇರಿಕೊಂಡರು. ಒಮ್ಮೆಯಾದರೂ ಹೊಸ ಬೈಕನ್ನು ದೀರ್ಘ ಓಟಕ್ಕೆ ಬಳಸುವ ಅವಕಾಶವನ್ನು ನಾನು ಬಿಸಿಲೆವರೆಗೆ ಉಳಿಸಿಕೊಂಡಿದ್ದೆ.

ಬೆಳಿಗ್ಗೆ ಏಳು ಗಂಟೆಗೆ ಮಂಗಳೂರೇನೋ ಬಿಟ್ಟೆವು. ಆದರೆ ಮಂಗಳೂರಿನ ಕಾಂಕ್ರಿಟೀಕರಣದ ಅವ್ಯವಸ್ಥೆ ಹೆದ್ದಾರಿಯ ಉದ್ದಕ್ಕೆ ಚತುಷ್ಪಥದ ಹೆಸರಿನಲ್ಲಿ ಚಾಚಿಕೊಂಡಿತ್ತು. ಪಡೀಲು ವೃತ್ತ ಕಳೆಯುತ್ತಿದ್ದಂತೆ ಬಲ ಬದಿಯ ದರೆ ಮಾರಿಹಲಗೆಯ ಪೆಟ್ಟಿಗೆ ಹಿಂದೆ ಸರಿದು ನಿಂತದ್ದು ಕಾಣುತ್ತಿತ್ತು. ನನಗೆ ಪದವಿಪೂರ್ವ ಮಟ್ಟದಲ್ಲಿ ರಸಾಯನ ಶಾಸ್ತ್ರವನ್ನು ಬೋಧಿಸಿದ್ದ ಪ್ರೊ| ಚಂದ್ರಶೇಖರಯ್ಯನವರು ನಿವೃತ್ತರಾದ ಮೇಲೆ ಇಲ್ಲೇ ಎಲ್ಲೋ ಮನೆಮಾಡಿ ನೆಲೆಸಿದ್ದು, ಗೇಟಿಗೊರಗಿ ನಿಂತಂತೆ ನನ್ನ ಕೈಬೀಸಿನ ವಂದನೆಯನ್ನು ಸವಿನಯ ಸ್ವೀಕರಿಸಿದ್ದು ನೆನಪಾಗದಿರಲಿಲ್ಲ.

ಪಡೀಲಿನ ಭಾರೀ ಎತ್ತರದ ರೈಲ್ವೇ ಸೇತುವೆಯಡಿಯಲ್ಲಿ ನುಸಿದ ದಾರಿ ಮುಂದೆ ತುಂಬಾ ದೂರದವರೆಗೆ ಹೆಚ್ಚುಕಡಿಮೆ ನೇರ ಹಾಗಾಗಿ ಅಷ್ಟೂ ಉದ್ದ ಸುಲಭ ದೃಷ್ಟಿ ಗ್ರಾಹ್ಯ. (ಸ್ವಲೂಪ ರೀವೈಂಡ್ ಬಟನ್ ಒತ್ತುತ್ತೇನೆ) ಅದು ಪುತ್ತೂರು ಮಂಗಳೂರು ನಡುವೆ ಟ್ಯಾಕ್ಸೀಸರ್ವಿಸ್ ಉತ್ಕರ್ಷದಲ್ಲಿದ್ದ ಕಾಲ. ಸಹಜವಾಗಿ ಸೀಟಿನ ಮಿತಿ ಮೀರುತ್ತಿದ್ದ ಚಾಲಕರ ಕಣ್ಣು ‘ಚಕ್ಕಿಂಗ್’ನವರ ಜೀಪು ಆ ಕೊನೆಯಲ್ಲಿದೆಯೋ ಎಂದು ಅರಸುತ್ತಿತ್ತು. ಅತ್ತಣಿಂದ ಬರುತ್ತಿದ್ದ ಟ್ಯಾಕ್ಸೀ ಚಾಲಕರೊಡನೆ ಸಂಜ್ಞಾಭಾಷೆಯಲ್ಲಿ ಖಾತ್ರಿಪಡಿಸಿಕೊಳ್ಳುತ್ತಿತ್ತು. ಆದರೂ ಒಮ್ಮೆ ಕಡೇ ಗಳಿಗೆಯಲ್ಲಿ, ಚೌತಿಯಂದು ಗಣಪತಿ ಕೂರಿಸುವ ತಿರುಗಾಸಿನ ಮುಂದೆ ಚಕ್ಕಿಂಗಿನವರು ಯಾವುದೋ ಕಾರು ತನಿಖೆ ನಡೆಸಿದ್ದುದು ಕಾಣಿಸಿತ್ತು. ನಮ್ಮ ಕಾರು ಗಕ್ಕನೆ ದಾರಿ ಬದಿಯ ಮರೆ ಸೇರಿ, ಅಷ್ಟೇ ಚುರುಕಾಗಿ ನಮ್ಮಲ್ಲೆರಡು ತರುಣರನ್ನು ಇಳಿಸಿ ಆರಾಮವಾಗಿ ಮುಂದುವರಿದಿತ್ತು. ನಾವು ಯಾವುದೋ ದಾರಿಹೋಕರಂತೆ ನಡೆದು ಚಕ್ಕಿಂಗಿನವರಿಂದಾಚಿನ ತಿರುವಿನಲ್ಲಿ ಕಾದಿದ್ದ ನಮ್ಮದೇ ಟ್ಯಾಕ್ಸಿ ಏರಿದ್ದೆವು! ಅದಕ್ಕೇ ಇರಬಹುದೇ ಇಂದು ಬರುತ್ತಿರುವುದು ತಿರುವು, ಮರೆಗಳಿಲ್ಲದ ದಾರಿ?

ಕಣ್ಣೂರು ಚೆಕ್ ಪೋಶ್ಟು, ಒಂದು ಕಾಲದ ವಾಣಿಜ್ಯಕರ ಇಲಾಖೆಯ ತನಿಖಾ ಗೇಟು, ವ್ಯಾಟು ಬಂದ ಮೇಲೆ ವಾಟು (what) ಎನ್ನುವಷ್ಟು ನಿರ್ಜೀವವಾಗಿದೆ. ಆದರೆ ಮುಂದಿನ ಪಳ್ಳಿಯ ‘ಆದಾಯಕರ’ ವಿಭಾಗ (ದಾರಿ ಬದಿಯ ಹುಂಡಿ) ಇಂಥಾ ಲೌಕಿಕ ಧೋರಣೆಗಳಿಂದ ಅಬಾಧಿತವಾಗಿಯೇ ನಡೆದಿದೆ. ಪಳ್ಳಿಯ ಎದುರಿನ ವಿಸ್ತಾರ ಗದ್ದೆಗಳು ನನ್ನ ನೆನಪಿನ ರಂಗದಲ್ಲಿ ನೇಪಥ್ಯ ಭಿತ್ತಿ. ಗದ್ದೆಯ ಮಣ್ಣು ಇಟ್ಟಿಗೆಗಳಾಗಿ ಪೆಟ್ಟಿಗೆ ಕಟ್ಟುತ್ತಿದ್ದಾಗ ವಿಷಾದವೆನಿಸಿದರೂ ಬಹುಬೇಗನೆ ತುಂಬಿಕೊಂಡ ನೀರು ಅರಳಿದ ಕೋಮಳೆ, ಆಗೀಗ ವಿಹರಿಸುವ ಬಾತು ಕೊಕ್ಕರೆ, ಅಂಚುಕಟ್ಟಿದ ಕರಡ ಮತ್ತೊಂದು ರಮಣೀಯ ಅಂಕ. ಆದರೀಗ ಮೂರನೆಯ ದೃಶ್ಯಕ್ಕೆ ರಂಗ ಸಜ್ಜುಗೊಳ್ಳುತ್ತಿದೆ. ನಗರದ ಹಾಳು ಮೂಳು (ಮಾರ್ಗದ, ಹಳೆಯ ಕಟ್ಟಡದ ಕಿತ್ತ, ಒಡೆದ ಅವಶೇಷಗಳು ಎಲ್ಲೋ ಗುಡ್ಡೆ ಬಯಲಾದ ಪರಿಣಾಮಗಳು) ತುಂಬಿ ಭಾರೀ ವಿಸ್ತಾರದಲ್ಲಿ ವಸತಿ ಸಂಕೀರ್ಣಕ್ಕೆ ಸಿದ್ಧತೆ ನಡೆದಿದೆ. ಭತ್ತ ಆಮದು ಮಾಡಿದವರಿಗೆ, ಎಂದೂ ನೀರು ಕೇಳದ ಪ್ಲ್ಯಾಸ್ಟಿಕ್ ತಾವರೆ, ಬೆದರಿ ಚದುರದ ಕಾಂಕ್ರೀಟ್ ಕೊಕ್ಕರೆ ಸಂಗ್ರಹಿಸುವುದು ಕಷ್ಟವಾಗದು ಬಿಡಿ.

ದೇವದೈವಗಳ ಜಾಹೀರು ಕಮಾನುಗಳು, ಹುಂಡಿಗಳು, ಹಳ್ಳಿಮನೆಯಂಥ ಹೋಟೆಲ್, ಹೋಟೆಲಿನಂಥ ಭಾರೀ ವಿದ್ಯಾಸಂಸ್ಥೆಗಳು ಹೀಗೆ ಒಂದನ್ನೊಂದು ಮೀರಿಸುವ ದೃಶ್ಯಗಳಿಗೆ ಟೀಕು ಬರೆದು ನಿಮ್ಮ ತಲೆ ತಿನ್ನುವುದು ಬಿಟ್ಟು ನನ್ನನುಭವದ ಪರಿಧಿಗೆ ಸೀಮಿತಗೊಳ್ಳುತ್ತೇನೆ. ನನಗೆ ರಸ್ತೆ, ಕಟ್ಟಡಗಳ ಭಾರೀ ಕಾಮಗಾರಿ ನೋಡುವುದು ಕುಶಿ ಕೊಡುವ ಹಳೆಯ ಹವ್ಯಾಸ. (ಇಂದು ಮಂಗಳೂರಿನಲ್ಲಿರುವ ಗೋಲ್ಡ್‌ಫಿಂಚ್ ಹೋಟೆಲ್ ಕಟ್ಟಡ ಮೇಳೇಳುತ್ತಿದ್ದಾಗ ಅತ್ತಿತ್ತ ಓಡಾಡುವ ನೆಪದಲ್ಲಿ ನಾನು ಅಲ್ಲಿ ನಿಂತು ನೋಡುತ್ತಿದ್ದನ್ನು ಗಮನಿಸಿದ ಎಷ್ಟೋ ಮಂದಿ ನನ್ನನ್ನು ಅದರ ‘ವಾನರ’ (Owner) ಎಂದಲ್ಲದಿದ್ದರೂ ಅತ್ರಿ ಅಲ್ಲಿಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯನ್ನು ಗಟ್ಟಿಯಾಗಿ ನಂಬಿದ್ದರು!) ಶಿರಾಡಿಯಲ್ಲಿ ಮೀಟರ್ ಗೇಜ್ ಹಾಕುತ್ತಿದ್ದದ್ದಕ್ಕೆ, ಕುದುರೆಮುಖ ಗಣಿಗಾರಿಕೆ ವಲಯಕ್ಕೆ ಸಂಪರ್ಕ ಸಾಧಿಸುವ ಭಗವತೀ ಘಾಟೀದಾರಿ ಮತ್ತು ಅದಿರು ಪರಿಷ್ಕರಣಾ ಕಾರ್ಖಾನೆಯ ರಚನೆಗೆ, ಎಂ.ಆರ್.ಪೀಯೆಲ್ ವಠಾರ, ಕೊಂಕಣರೈಲುಗಳ ಸೇತುವೆ ಸರಣಿಗಳಿಗೆಲ್ಲ ಯಾರೂ ಕರೆಯದೇ ಸಾಕ್ಷಿಯಾದವನು ನಾನು. ಸಿಕ್ಕ ಎರಡೋ ಎಂಟೋ ಜನರ ತಂಡ ಕಟ್ಟಿ, ಸೈಕಲ್ಲೋ ಸ್ಕೂಟರ್ರೋ ಬೈಕೋ ಕಾರೋ ಏನಿಲ್ಲದಿದ್ದರೂ ನಡೆದೋ ಅಲ್ಲಿ ಹಾಜರಿ ಹಾಕಿದ್ದೇನೆ. ಅಲ್ಲೆಲ್ಲಾ ಋತುಮಾನ, ಮಾರ್ಗದ ಅವ್ಯವಸ್ಥೆಗಳು ಹೆಚ್ಚಿದಷ್ಟೂ ನನಗೆ ಸಾಹಸದ ಕೃತಾರ್ಥತೆ ಹೆಚ್ಚಿ ಸಂಭ್ರಮಿಸುತ್ತಿದ್ದೆ. ಬಹುಶಃ ಅಲ್ಲೆಲ್ಲ ಸುಪ್ತವಾಗಿ ‘ಇವೆಲ್ಲ ಮುಂದೆ ಬರಲಿರುವ ಅದ್ಭುತಕ್ಕೆ ಅನಿವಾರ್ಯ’ ಎಂಬ ಭಾವ ನನ್ನಲ್ಲಿದ್ದಿರಬೇಕು. ಪ್ರಕೃತಿ ಒಂದು ದೀರ್ಘ ಕಾಲೀನ ಸಮತೋಲನದ ಸ್ಥಿತಿ. ಅದನ್ನು ಅರ್ಥೈಸಿಕೊಳ್ಳುತ್ತಾ ಅನುಸರಿಸುವಲ್ಲಿ ಮನುಷ್ಯನ ಹೆಚ್ಚಿನ ಹಿತ ಇದೆ ಎನ್ನುವುದನ್ನು ಅಂದು ಕಡಿಮೆ ತಿಳಿದುಕೊಂಡಿದ್ದೆ. ‘ಏರಿದ ಬಂಡೆ, ಏರದ ಬಂಡೆ ಇರಬಹುದು. ಏರಲಾಗದ ಬಂಡೆ ಇಲ್ಲ’ ಎಂದು ತಂದೆ ಸಮಷ್ಠಿಗೆ ಕೊಟ್ಟ ಪ್ರೇರಣೋಕ್ತಿಯನ್ನು ನಾನು ತಪ್ಪಿ ವ್ಯಕ್ತಿ ಕೇಂದ್ರಿತವಾಗಿ ಗ್ರಹಿಸಿದ್ದೆನೋ ಏನೋ!

ಸುರತ್ಕಲ್ – ಬಂಟ್ವಾಳ ಜೋಡುಮಾರ್ಗವಾಗಿ ಅಭಿವೃದ್ಧಿಗೊಳ್ಳುತ್ತಿರುವುದು ನಿಮಗೆಲ್ಲ ಗೊತ್ತಿದೆ ಎಂದೇ ಭಾವಿಸುತ್ತೇನೆ. ನಮ್ಮೆಲ್ಲ ಸಾರ್ವಜನಿಕ ಕಾಮಗಾರಿಗಳಂತೆ ಇದೂ ಯಾವ ತರ್ಕಕ್ಕು ಸಿಗದೆ ನಿಧಾನದ್ರೋಹಕ್ಕೂ ಅಪರಿಪೂರ್ಣ ಬಳಕೆಗೂ ಒಡ್ಡಿಕೊಂಡೇ ನಡೆದಿದೆ. ಹೊಂಡಕ್ಕಿಳಿ, ಕಿತ್ತಜಲ್ಲಿಗಳ ನಡುವೆ ಜಾಡುಹಿಡಿ, ಕೆನ್ನೀರ ಮಡು ಬಳಸಿ, ಮರಳು ಕೆಸರಿನ ಕಂಪ ತಪ್ಪಿಸಿ, ದೂಳುಗದ್ದಲಗಳಿಗಂಜದೆ ಮುಂದುವರಿದರೆ ಒಂದಷ್ಟು ಹೇಮಮಾಲಿನಿಯ ಕದಪು ಮತ್ತೊಂದಷ್ಟು ಓಂಪುರಿಯ ಗದ್ದ. ಓಡೋ ಮೀಟರ್ ಮುಳ್ಳು ನೂರು ಹೆಟ್ಟಿತು ಎನ್ನುವಾಗ ಹಳೆಹರಕಿಗೆ ಇಳಿಸುವ ಚಡಿ. ‘ದಾರಿ ಕಳೆದು ಬಯಲಾಯಿತಲ್ಲೋ ಹರಿಯೇ’ ಎನ್ನುವಾಗ ಬಲ ಓಣಿಯಷ್ಟೇ ಇಮ್ಮುಖ ಸಂಚಾರಕ್ಕೆ ಆಹ್ವಾನಿಸುತ್ತದೆ. ಸುಖ ಶಾಶ್ವತವಲ್ಲ, ಆರ್ಯೋಕ್ತಿಗೆ ಜೀವ ಕೊಡುವಂತೆ

ಅಡ್ಡಲಾಗೊಂದು ಕಂದರ
ಬರಬೇಕದಕೊಂದು ಸೇತು ಸುಂದರ
ಸದ್ಯಕ್ಕೇನು ಅಂದರಾ?
ಓಣಿ ಬದಲಿಸಿ ಚಲಿಸಿ, ವಿಠ್ಠಲದ ದಾರಿ ಪೂರಾ ರಂಧ್ರಾ.

ಹೌದು, ಓಣಿ ಬದಲಿಸಿದ್ದಷ್ಟೇ ಗೊತ್ತು, ನನ್ನ ಬೈಕ್ ಬಲಕ್ಕೆ ವಾಲಿಕೊಂಡು ಬಿತ್ತು. ಅಡ್ಡ ಚಡಿಗಳನ್ನು ಹೆಟ್ಟಿ ಹಾರಿ ಮುಂದುವರಿವ ಚಕ್ರಕ್ಕಿಲ್ಲಿ ನೀಟ ಚಡಿ ಸಿಕ್ಕಿತ್ತು. ನನಗೆ ಬಹು ಬಳಕೆಯಲ್ಲಿದ್ದ ಹಳೇ ಬೈಕಿಗಾದರೋ ಅಗ ತಳದ ಮತ್ತು ಅಡ್ಡ ಅಟ್ಟೆಯ ಟಯರುಗಳಿದ್ದವು. ತುಸುವೇ ತಿಣುಕಿದರೂ ನಿಭಾಯಿಸುತ್ತಿತ್ತೋ ಏನೋ. ಆದರೆ ಹೊಸ ಬೈಕಿನ ಟಯರು ಸಪುರ ಮತ್ತು ಅಡ್ಡ ಅಟ್ಟೆಗಳು ಇರಲೇ ಇಲ್ಲ. ಅದರ ನೇರ ಧಾರೆಗಳು ನುಣುಪಿನ ಹೆದ್ದಾರಿ ಓಟಕ್ಕೆ ಮಾತ್ರ ಅನುಕೂಲ. ಹಳೆಹೆದ್ದಾರಿಯಂಚಿನ ಡಾಮರು ಪದರಗಳೆರಡರ ವ್ಯತ್ಯಾಸವನ್ನು ನಾನು ಅಂದಾಜಿಸದ ತಪ್ಪಿಗೋ ದಾರಿ ಹಾಳಿದೆ ಎಂದು ವಿಪರೀತ ಎಚ್ಚರವಹಿಸಿ ಚಕ್ರ ಪುಟಿದೇರಲು ಸಾಕಷ್ಟು ಬಲಕೊಡದ ತಪ್ಪಿಗೋ ಚಕ್ರ ಜಾರಿರಬೇಕು. ನಾವಿಬ್ಬರೂ ಬಲಬದಿಗೆ ಬಿದ್ದೆವು. (ಫಲುಗುಣಾದಿಗಳು ಕೇಳಿ, ಭೀಮ ಬಿದ್ದಾ)

ಸ್ವಲ್ಪವೇ ಮುಂದಿದ್ದ ಅಭಯ, ಹಿಂಬಾಲಿಸಿದ್ದ ಅಶೋಕ್ ಬೈಕ್ ನಿಲ್ಲಿಸಿ ಓಡಿಬಂದರು. ‘ಪರಚಿಂತೆ ಎಮಗೆ ಏಕೆ ಅಯ್ಯಾ’ ಎನ್ನದೆ ಯಾವುದೋ ಕಾರಿನವರೂ ಧಾವಿಸಿದರು. ಇಲ್ಲ ಇಲ್ಲ, ಅಂಥ ಮಹಾ ಏನೂ ಆಗಿರಲಿಲ್ಲ. ನೆಲದ ಸಂಪರ್ಕದಲ್ಲಿ ನನ್ನ ಬಲ ಅಂಗೈ, ಮೊಣಕೈ ಮತ್ತು ಮೊಣಕಾಲು ಸಣ್ಣ ತರಚಲು ಗಾಯಗಳನ್ನಷ್ಟೇ ಪಡೆದಿದ್ದವು. ಬೈಕಿದ್ದ ತಗ್ಗಿಗೂ ನಾವು ಬಿದ್ದ ಎತ್ತರಕ್ಕೂ ನಡುವೆ ದೇವಕಿಯ ಒಂದು ಪಾದ ಸಿಕ್ಕಿಕೊಂಡಿತ್ತು. ಮುರಿದು ಹೋಗಿರಬಹುದೇ ಎಂಬ ನನ್ನ ಆತಂಕ ಕ್ಷಣಿಕ. ಬೈಕೆತ್ತಿದಾಗ ಅವಳಿಗೆ ನನಗಿಂತಲೂ ಕಡಿಮೆ ತರಚಲು ಗಾಯ ಮಾತ್ರ ಆಗಿತ್ತು. ಬೈಕಿನ ಕೂದಲೂ ಕೊಂಕಿರಲಿಲ್ಲ! ನಮ್ಮ ಬಟ್ಟೆ ಹರಿದಿರಲಿಲ್ಲ, ಮಣ್ಣುಮಾಸಿನ ಕೊಳಕೂ ಅಂಟಿರಲಿಲ್ಲ. ‘ಜಾರಿತು, ತಡವರಿಸಿತು, ಇನ್ನೇನು ಬೀಳುತ್ತೇವೆ, ಬಿದ್ದೆವು’ ಎನ್ನುವ ಆತಂಕದ ಕ್ಷಣಗಳನ್ನು ಕಟ್ಟಿಕೊಳ್ಳಲೂ ಅವಕಾಶ ಒದಗದಷ್ಟು ಚುರುಕಾಗಿ ಬಿದ್ದೆದ್ದುದರಿಂದ ನಮಗಿಬ್ಬರಿಗೂ ಮುಂದೆ ಹೇಗೋ ಏನೋ ಎಂಬ ಭಯವೂ ಕಾಣಲಿಲ್ಲ! ಶುದ್ಧ ನೀರಿನಲ್ಲಿ ಗಾಯಗಳನ್ನು ಹಗುರಕ್ಕೆ ತೊಳೆದು, ಅಶೋಕ್ ತಂದಿದ್ದ ಮುಲಾಮು ಸವರಿ ಸಾಹಸ ಯಾನ ಮುಂದುವರಿಸಿದೆವು. ನಾವು ಬಿದ್ದ ಜಾಗ ತುಂಬೆ. ನಿರ್ಯೋಚನೆಯಿಂದ ಜೋಡುಮಾರ್ಗ, ಕಲ್ಲಡ್ಕ, ಮಾಣಿ ಕಳೆದು ಉಪ್ಪಿನಂಗಡಿಯವರೆಗೂ ಯೋಜನೆಯಂತೇ ಸಾಗಿ ತಿಂಡಿಗೆ ನಿಂತೆವು. ಅಷ್ಟರಲ್ಲಿ ನನ್ನ ಎಡಕೈಯ ಮಣಿಗಂಟಿನ ಬಳಿ ಸಣ್ಣ ನೋವು, ಸ್ವಲ್ಪ ಸೆಡವು ಸ್ಪಷ್ಟಗೊಂಡಿತ್ತು. ಭಾರೀ ಅಲ್ಲ, ಊತವೂ ಇಲ್ಲವಾದರೂ ಉಳುಕಿರಬೇಕು, ವಿಶ್ರಾಂತಿ ಕೊಡುವುದು ಯೋಗ್ಯ ಎಂದು ನನಗೆ ಅನಿಸಿತು. ಹಾಗಾಗಿ ತಿಂಡಿಯಾದ ಮೇಲೆ ತಂಡವನ್ನು ಯೋಜನೆಯಂತೇ ಮುಂದುವರಿಯಲು ಬೀಳ್ಕೊಂಡು ನಾವಿಬ್ಬರು ಮಂಗಳೂರಿಗೆ ಬೈಕ್ ಬಿಟ್ಟುಕೊಂಡೇ ಮರಳಿದೆವು. ದಾರಿಯಲ್ಲಿ ಗಾಯಗಳಿಗೆ ಪ್ರಥಮ ಚಿಕಿತ್ಸೆ ಮತ್ತು ನಮಗೆ ಆಂಟಿಟಿಟನಸ್ ಚುಚ್ಚು ಮದ್ದು ಕೊಟ್ಟ ವೈದ್ಯರ ಸಲಹೆಯಂತೆ ಮರುದಿನ ಮೂಳೆ ತಜ್ಞರಿಗೆ ಕೈ ತೋರಿಸಿದೆ; ನನ್ನ ಅವಲಕ್ಷಣ ಹೇಳಿದರು. ಎಡಹಸ್ತದಲ್ಲಿ ಹೆಬ್ಬೆರಳು ತೋರು ಬೆರಳಿನ ಸಂಧಿಕ್ಷೇತ್ರದಲ್ಲಿರುವ ಪುಟ್ಟ ಆದರೆ ಬಲು ಚಟುಲತೆಯ ಮೂಳೆ – ಸ್ಕಫೋಲ್ಡಿ, ಬಿರುಕು ಬಿಟ್ಟಿತ್ತು. (ಅದರ ಕ್ಷೇತ್ರ, ಗಾತ್ರ ಗಮನಿಸಿ ವೈದ್ಯರು ನನಗೀಗ ಎರಡು ತಿಂಗಳಿಗೆ ಕವಚ ಪ್ರದಾನಿಸಿದ್ದಾರೆ. ಅಭಿವೃದ್ಧಿಯ ಸಂವೇದನಾರಾಹಿತ್ಯಕ್ಕೆ ಸಿಕ್ಕಿ ಅಂಗಾಂಗ ಊನವಿರಲಿ ಪ್ರಾಣಗಳನ್ನೇ ಕೊಟ್ಟ ಅಸಂಖ್ಯ ಅನಾಮಧೇಯರನ್ನು ಸ್ಮರಿಸುತ್ತಾ ವೈದ್ಯರಿಗೆ ಹೇಳಿದ್ದೇನೆ “ಧನ್ಯೋಸ್ಮಿ.”