ಕರ್ನೂಲಿನ ನನ್ನ ಹಿರಿಯ ಗೆಳೆಯ ಶ್ರೀ ಚಂದ್ರಶೇಖರ ಕಲ್ಕೂರರ ಸ್ಥಿರ, ಚರ ಸೊತ್ತುಗಳೆಲ್ಲ ಈಚೆಗೆ ಅವರ ಮಾತಿನಲ್ಲೇ ಹೇಳುವಂತೆ ‘ಮೂವತ್ತೆರಡು ಗಂಟೆಗಳ ಕಾಲ ತುಂಗಭದ್ರಮ್ಮನ ಹೊಟ್ಟೆಯಲ್ಲಿತ್ತು.

ಚಂದ್ರಶೇಖರ ಕಲ್ಕೂರರ ಅಜ್ಜ ಊರಿನಲ್ಲಿ (ಉಡುಪಿ ಜಿಲ್ಲೆಯ ಬ್ರಹ್ಮಾವರ) ಹೊಟ್ಟೆಗೂ ಗತಿಯಿಲ್ಲದ ಕಾಲದಲ್ಲಿ ‘ಒಂದು ಸೌಟು’ ಹಿಡಿದುಕೊಂಡು ಭವಿಷ್ಯ ಅರಸಿ ಆಂಧ್ರಪ್ರದೇಶಕ್ಕೆ ವಲಸೆಹೋದವರು. ‘ಅನ್ನ ಮಾರಿ’ ಮಗ, ಮೊಮ್ಮಗನ ಕಾಲಕ್ಕೆ ಸಮೃದ್ಧಿ, ವಿದ್ಯೆ, ಸಂಸ್ಕೃತಿಗಳ ನೆಲೆ ಕಾಣಿಸಿದರು. ಸುಮಾರು ಹದಿನೈದು ವರ್ಷಗಳ ಹಿಂದೆ ನಾನು ಮೋಟಾರ್ ಸೈಕಲ್ಲಿನಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ ಕಲ್ಕೂರರ ಹೋಟೆಲ್ ಕರ್ನೂಲಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದು. ಚಂದ್ರಶೇಖರ ಕಲ್ಕೂರ ಆಂಧ್ರಪ್ರದೇಶ ಹೋಟೆಲಿಗರ ಸಂಘದ ಅಧ್ಯಕ್ಷ. ಇವರು ನೆಚ್ಚಿದ ಪಕ್ಷ ಕಾಂಗ್ರೆಸ್ಸಾದರೂ ‘ಪಕ್ಷಪಾತ’ ಇವರ ಸಾರ್ವಜನಿಕ ಸೇವೆಯಲ್ಲಿರಲಿಲ್ಲ. ಅಪಾರ ಓದು (ಆಂಧ್ರದ ವಿದ್ಯಾರ್ಥಿಯಾದರೂ ಸ್ವಂತ ಗಳಿಕೆಯಲ್ಲಿ ಬಲು ದೊಡ್ಡ ಕನ್ನಡ ಓದುಗ ಮತ್ತು ಕಾರ್ಯಕರ್ತನೂ ಹೌದು), ಲೋಕಾನುಭವ ಮತ್ತು ಅಪರಿಮಿತ ಮಿತ್ರಬಳಗದ ಚಂದ್ರಶೇಖರರು ಕಾನೂನು ಪದವೀಧರರೂ ಹೌದು. ಈಚೆಗೆ ತನ್ನ ವಾಣಿಜ್ಯ ವ್ಯವಹಾರಗಳನ್ನು ಉತ್ತರಾಧಿಕಾರಿಗಳಿಗೆ ಬಿಟ್ಟು ಹವ್ಯಾಸೀ ವಕೀಲರಾಗಿದ್ದರು. ಇವರ ಸಾಮಾಜಿಕ ಸಂಶೋಧನಾಸಕ್ತಿ ಕರ್ನೂಲಿನ ಪಕ್ಕದ ನದಿ ತುಂಗಭದ್ರೆಯ ಕುರಿತು ವಿಸ್ತಾರವಾಗಿ ಹರಿದಿತ್ತು. ದುರಂತವೆಂದರೆ ಅದೇ ತುಂಗಭದ್ರೆ ಮೊನ್ನೆ ಶುದ್ಧ ಮಾನವಕೃತ ಅವ್ಯವಸ್ಥೆಯಲ್ಲಿ ಇವರನ್ನು ಕೇವಲ ಉಟ್ಟ ಬಟ್ಟೆಯಲ್ಲಿ ದಿಕ್ಕೆಡಿಸಿ ಓಡಿಸಿತ್ತು.

ಚಂದ್ರಶೇಖರ ಕಲ್ಕೂರರು ಈಗ ಸ್ವಂತಮನೆ, ಸೊತ್ತುಗಳನ್ನು ಪುನಃ ಸ್ಥಾಪಿಸುವುದಕ್ಕಿಂತಲೂ ಹೆಚ್ಚಾಗಿ ತಮ್ಮ ಸಾಮಾಜಿಕ ಪರಿಸರವನ್ನು ಸಂಘಟಿಸುವುದರಲ್ಲಿ ತೊಡಗಿಕೊಂಡಿದ್ದಾರೆ. ಆ ಕುರಿತ ಅವರ ಮನವಿಯನ್ನೂ ಮತ್ತವರೇ ಕಳಿಸಿದ ಸಣ್ಣ ತಿದ್ದುಪಡಿಯನ್ನೂ ನನ್ನ ಬ್ಲಾಗಿನ ಮಿತ್ರ ಬಳಗಕ್ಕೆಲ್ಲ ನಾನು ತಳ್ಳಿದ್ದೆ. ಅದರ ಬೆನ್ನಿಗೇ ನನ್ನ ತಿರುಗೂಳಿ ವೃತ್ತಾಂತದ ಮೂರು ಕಥನಗಳ ಬಗ್ಗೆ ನನ್ನ ಬ್ಲಾಗ್ ಬಳಗಕ್ಕೆ ತಿಳುವಳಿಕೆ ಪತ್ರವನ್ನು ಎಂದಿನಂತೆ ರವಾನಿಸಿದ್ದೆ. ಎರಡನೇ ಪತ್ರವನ್ನು ಸ್ವಲ್ಪ ತಡವಾಗಿ ನೋಡಿ, ಅದಕ್ಕೆ ಪ್ರತಿಕ್ರಿಯೆಯಾಗಿ ಕಲ್ಕೂರರು ಕ್ಷಮಾಪೂರ್ವಕವಾಗಿ ಬರೆಯುತ್ತಾರೆ “Dear Ashokgaru, Vandemataram. I have been glancing at your mails. I am neck deep in the flood relief operations……” ಪುರುಸೊತ್ತಾದಾಗ ಅವಶ್ಯ ಓದಿ ಪ್ರತಿಕ್ರಿಯಿಸುತ್ತೇನೆ ಎಂದೇ ಅವರು ಪತ್ರ ಮುಗಿಸಿದ್ದನ್ನು ನೋಡಿ ನನಗೆ ತುಂಬಾ ಸಂಕೋಚವಾಯ್ತು. ಹಾಗಾಗಿ ನಾನು ಬರೆದ ಪತ್ರವನ್ನಷ್ಟೇ ಇಲ್ಲಿ ಸಾರ್ವಜನಿಕಗೊಳಿಸಿ ಮುಗಿಸುತ್ತೇನೆ:

ಪ್ರಿಯರೇ ಈ ಗಣಕ, ಅಂತರ್ಜಾಲದ ಸೌಕರ್ಯಗಳಲ್ಲಿ ನಾನು (ಯಾವುದೇ ವ್ಯಕ್ತಿ) ಒಬ್ಬರಿಗೆ ಬರೆದುದನ್ನು ಹತ್ತು ಜನರಿಗೋ ನೂರು ಜನರಿಗೋ ಕುರುಹು ಕೊಡದೆ ಕಳಿಸುವುದು ತುಂಬಾ ಸುಲಭ. ನನ್ನ ಆತ್ಮೀಯ ಬ್ಲಾಗಿಗರ ವಿಳಾಸ ಪಟ್ಟಿಯಲ್ಲಿ ನಿಮ್ಮ ವಿಳಾಸ ಇರುವುದರಿಂದ ಮತ್ತು ಅದನ್ನು ತೆಗೆದುಹಾಕಲು ಯಾವುದೇ ಕಾರಣಗಳಿಲ್ಲವಾದ್ದರಿಂದ ನಿಮಗೆ ನನ್ನ ಪತ್ರಗಳು, ‘ಬ್ಲಾಗ್ ನೋಡಿ’ ಮನವಿಗಳು ಬರುತ್ತಿರುತ್ತವೆ. ಆದರೆ ನೀವು ಇರುವ ಸಂತ್ರಸ್ತ ಸ್ಥಿತಿಯಲ್ಲಿ ಆದ್ಯತೆಗಳು ತೀರಾ ಭಿನ್ನ ಮತ್ತು ಮನೋಸ್ಥಿತಿ ನನ್ನ ಚಿಲ್ಲರೆ ಬರವಣಿಗೆಗಳನ್ನು ಸವಿಯುವಂತದ್ದಲ್ಲ ಎಂದು ನನಗೆ ಚೆನ್ನಾಗಿ ಅರ್ಥವಾಗುತ್ತದೆ. ನನ್ನ ಕುರಿತು ನೀವು ಏನೂ ಗಂಭೀರವಾಗಿ ಯೋಚಿಸಬೇಡಿ, ಪ್ರತಿಕ್ರಿಯೆ ಕೊಡುವ ಕಷ್ಟಪಡಬೇಡಿ.

ನಿಮ್ಮ ಎರಡೂ ಪತ್ರಗಳನ್ನು ನನ್ನ ಬ್ಲಾಗ್ ಸಂಪರ್ಕದವರಿಗೆಲ್ಲ ಕಳಿಸಿದ್ದೇನೆ (ಯಾಂತ್ರಿಕವಾಗಿ ನಿಮಗೂ ಅವು ಬಂದಿರುತ್ತವೆ). ಇಲ್ಲಿ ನೆರೆಯ ವರದಿಗಳು ಬರ ತೊಡಗಿದಂದಿನಿಂದಲೇ ಅಧಿಕೃತ ರೂಪಿನ ಹಲವು ಬಕೆಟ್ ಮೆರವಣಿಗೆಗಳು (ಅನಧಿಕೃತ ಬಿಡಿ; ಅಣಬೆಗಳು ಸಾವಿರ) ನಡೆದಿವೆ. ಜಿಲ್ಲಾಧಿಕಾರಿ, ಉಸ್ತುವಾರಿ ಮಂತ್ರಿಯಿಂದ ತೊಡಗಿ, ರಾಜಕೀಯ ಪಕ್ಷಗಳು, ಸಿನಿಮಾ ತಾರೆಯರು, ವಿವಿಧ ಮಠಗಳು, ಕಾಲೇಜು, ಸಂಘ ಸಂಸ್ಥೆ ಮುಂತಾದವು ನೆರೆ ಪರಿಹಾರಕ್ಕಿಂತಲೂ ತಮ್ಮ ‘ಜನಪ್ರಿಯತೆಯನ್ನು’ ಒರೆದು ಪರೀಕ್ಷಿಸುವ ಪ್ರಯತ್ನಗಳನ್ನು ಸಾಕಷ್ಟು ನಡೆಸಿವೆ. ನನ್ನದು ಒಂದು ನಿಟ್ಟಿನಲ್ಲಿ ಶಿವರಾಮ ಕಾರಂತರದ್ದೇ ಧೋರಣೆ: ವಿಶ್ವ ಕನ್ನಡ ಸಮ್ಮೇಳನ (ಈ ಸಮ್ಮೇಳನಗಳದ್ದೇ ಔಚಿತ್ಯವನ್ನು ಪ್ರಶ್ನಿಸುವುದು ಬೇರೇ) ಉದ್ಘಾಟನೆಯಂದು ಅವರು ಹೇಳಿದರು “ಎಲ್ಲೋ ಬರಗಾಲ ಬಂತೆಂದು ಇಲ್ಲಿ ಮಸಾಲೆ ದೋಸೆ ಬಿಡಬೇಕಾಗಿಲ್ಲ.” ಇದು ಸಂವೇದನಾ ಶೂನ್ಯತೆ ಅಲ್ಲ, ‘ಜೀವ’ದ ನಿರಂತರತೆಯನ್ನು ಸ್ಪಷ್ಟಪಡಿಸುವ ನುಡಿ ಮಾತ್ರ.

ನನ್ನ ತಂದೆಯ ಶವವನ್ನು ದೇಜಗೌ ಮುಂತಾದ ಹಿರಿಯರ ಒತ್ತಾಯದ ಮೇರೆಗೆ ನಮ್ಮ ಮನೆಯಲ್ಲಿ ಕೆಲವು ಗಂಟೆಗಳ ಕಾಲ ಸಾರ್ವಜನಿಕ ಪ್ರದರ್ಶನಕ್ಕೆ ಇಡಲೇಬೇಕಾಯ್ತು (ತಂದೆ ಇದೂ ಕೂಡದು ಎಂದು ಸ್ಪಷ್ಟ ಹೇಳಿದ್ದರು). ಅಲ್ಲಿ ಸಹಜವಾಗಿ ಮಧ್ಯಾಹ್ನ ಬಂತು. ತಾಯಿ ಮೊದಲೇ ಗಂಟುವಾತದ ನಿಶ್ಶಕ್ತಿಯಿಂದ ಬಳಲುತ್ತಿದ್ದರು, ಒಬ್ಬ ಚಿಕ್ಕಪ್ಪ ಮಧುಮೇಹದ ಗಿರಾಕಿ….. ಹೀಗೆ ಹಲವು ನಿತ್ಯದ ಸಮಸ್ಯೆಗಳು ಎಲ್ಲರಿಗೂ ಬೇರೆ ಬೇರೆ ಇತ್ತು, ಹಲವರಿಗೆ ಅದು ತಿಳಿದೂ ಇತ್ತು. ಸಹಜವಾಗಿ ಕೆಲವು ಬಂಧುಗಳು ಅವರ ಮನೆಯಲ್ಲಿ ಅವಸರದ ಅಡುಗೆ ಮಾಡಿ ಒಬ್ಬೊಬ್ಬರನ್ನೇ ಅಲ್ಲಿಗೆ ಕರೆದು ಬಾಯಾರಿಕೆ, ಊಟ ನೀಗಿಸಿದರು. ನಮ್ಮ ಮನೆಗೇ ಡಬ್ಬಿಯಲ್ಲಿ ತಿನಿಸು ತಂದು, ತಾಯಿಯನ್ನೂ ಒತ್ತಾಯ ಮಾಡಿ, ಒಳಗೆ ಕೂರಿಸಿ ಊಟ ಮಾಡಿಸಿದರು. ಹಾಗೇ ನಿಮ್ಮ (ನೆರೆಹಾವಳಿಗೆ ಒಳಗಾದವರ) ಎಲ್ಲಾ ಕಷ್ಟದ ಕತೆಗಳನ್ನು ಕೇಳುತ್ತಾ ಮಿತಿಯಲ್ಲಿ ಸ್ಪಂದಿಸುತ್ತಲೂ ಇರುವುದರೊಂದಿಗೆ ನಮ್ಮ ನಿತ್ಯದ ಅಗತ್ಯಗಳನ್ನೂ ಪೂರೈಸಿಕೊಳ್ಳುತ್ತಿದ್ದೇವೆ ಎಂದರೆ ನೀವು ಬೇಸರಿಸಲಾರಿರಿ ಎಂದು ನಂಬುತ್ತೇನೆ.

ಹೋಲಿಕೆಯ ಚಂದಕ್ಕೆ ಯಾರೋ ಎಲ್ಲೋ ಶುರು ಮಾಡಿದರು – ಅಂದು ರಾಜರ ಆಶ್ರಯದಲ್ಲಿ ಸಾಹಿತ್ಯ ಕಲೆಗಳು ಅರಳಿದವು, ಧರ್ಮ ವಿಜೃಂಭಿಸಿತು ಇತ್ಯಾದಿ. ಇದನ್ನು ಸ್ವಾರ್ಥ ರಾಜಕಾರಣ ಧಾರಾಳವಾಗಿ, ನಿರ್ಲಜ್ಜವಾಗಿ ಬಳಸಿಕೊಂಡು ಇಂದು (ಪ್ರಜಾಸತ್ತಾ) ಸರಕಾರಗಳು ರಾಜಸತ್ತೆಗಳೇ ಆಗಿವೆ! ಕಣ್ಣೆದುರಿನ ಖಾಲಿಪೋಲಿಗಳು ಸನ್ಮಾನ್ಯ ಸಚಿವ, ಬಹುಮಾನ್ಯ ರಾಜ್ಯಪಾಲನೋ ಅತಿವಂದ್ಯ ರಾಷ್ಠ್ರಪತಿಯೋ ಆಗುವುದು ನಡೆದಿದೆ. ಸರಕಾರಗಳು ಕೇವಲ ಆಡಳಿತ ವ್ಯವಸ್ಥೆಗಳು ಎನ್ನುವುದನ್ನು ಬಿಟ್ಟು ಬಟವಾಡೆ ಸಂಸ್ಥೆಗಳೇ ಆಗಿವೆ. ಗದಗದ ಬಳಿ ನೆರೆ ಸಂತ್ರಸ್ತರ ಮರುವಸತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಚಿತ್ರ ಪತ್ರಿಕೆಯಲ್ಲಿ ನೋಡಿ ನನಗೆ ವಾಕರಿಕೆ ಬಂತು. ಆಳೆತ್ತರದ ಪಾಲಿಶ್ಡ್ ಕಪ್ಪು ಕಲ್ಲಿನ ಮೇಲೆ ಎಲ್ಲಾ ಆಡಳಿತದಾರರ ಹೆಸರು ಕೆತ್ತಿಸಿ, ಅದನ್ನು ತಳಿರು ತೋರಣಗಳಿಂದ ಅಲಂಕರಿಸಿ, ಶಾಮಿಯಾನ ಇತ್ಯಾದಿ ಭರ್ಜರಿ ವ್ಯವಸ್ಥೆಯಡಿ, ಯಡ್ಡಿಯಿಂದ ಹಿಡಿದು ಎಲ್ಲಾ ಚಡ್ಡಿಗಳವರೆಗೂ ಹಲ್ಲು ಕಿರಿದು ಪೋಸು ಕೊಟ್ಟಿದ್ದಾರೆ. ಕಾಲಂ ತುಂಬಾ (ಅಲ್ಲಿ ಗಂಟೆಗಟ್ಟಳೆ) ಕಾಳಜಿಯನ್ನು ಕೊರೆದಿದ್ದಾರೆ. ಇಂಥವು ಇಲ್ಲದ ದಿನವೇ ಇಲ್ಲ. ಇಂಥ ಒಂದೊಂದು ಸಭೆಯ, ಸಮಾರಂಭದ ವ್ಯವಸ್ಥೆಯ ಖರ್ಚಿನಲ್ಲಿ ಕನಿಷ್ಠ ಒಂದೊಂದು ಸಂತ್ರಸ್ತ ಕುಟುಂಬವಾದರೂ ಪುನರ್ವಸಿತವಾಗುತ್ತಿರಲಿಲ್ಲವೇ ಎನ್ನುವ ಸಾಮಾನ್ಯರ ಕೊರಗಿಗೆ ಅಭಿವ್ಯಕ್ತಿ ಕೊಡುವ ಒಂದೂ ಮಾಧ್ಯಮವಿಲ್ಲ. ಮಳೆ ಸುರಿಯುವಂತೆ, ಹೂ ಅರಳುವಂತೆ ಧಾರಾಳವಾಗಿ, ಸಹಜವಾಗಿ, ಸೂಕ್ಷ್ಮವಾಗಿ ನಡೆಯಬೇಕಾದ ಕ್ರಿಯೆಗಳು ಆಡಳಿತ ವರ್ಗದಲ್ಲಿ ಇಲ್ಲವೇ ಇಲ್ಲ. ಹಾಗಾಗಿ ಹಲವು ಸಾರ್ವಜನಿಕ ವ್ಯವಸ್ಥೆಗಳು, ಉದಾರ ವ್ಯಕ್ತಿಗಳು ಇಂಥವುಗಳಿಂದ ರೋಸಿಹೋಗಿ ಸ್ವತಂತ್ರವಾಗಿ ಪರಿಹಾರ ಕ್ರಿಯೆಗಳಲ್ಲಿ ತೊಡಗಿಕೊಳ್ಳುತ್ತಿವೆ. ಸುತ್ತೂರಿನ ಶಿವರಾತ್ರೀಶ್ವರ ಸ್ವಾಮಿಗಳು (ಇನ್ನೂ ಹಲವರೂ ಹೇಳಿರಬೇಕು) “ನಾವು ಎತ್ತಿದ ಭಿಕ್ಷೆಯನ್ನು ನಾವೇ ಪರಿಹಾರ ಕ್ರಿಯೆಯಲ್ಲಿ ತೊಡಗಿಸುತ್ತೇವೆ, ಸರಕಾರದ ಜೋಳಿಗೆಗೆ ಹಾಕುವುದಿಲ್ಲ” ಎಂದದ್ದು ನೂರಕ್ಕೆ ನೂರು ಸರಿಯಾದ ಮಾತು.

ಈ ಯೋಚನೆ ಮತ್ತು ಪ್ರಭಾವಗಳೊಡನೆ ನಾನೆಲ್ಲಿ ಸ್ವಾರ್ಥದ ರಕ್ಷಣೆಗೆ ತರ್ಕ ಹೊಸೆಯುತ್ತಿದ್ದೇನೋ ಜಿಪುಣನಾಗುತ್ತಿದ್ದೇನೋ ಎಂಬ ಭಾವವೂ ಕಾಡುವ ಮೊದಲು ವೈಯಕ್ತಿಕ ದೇಣಿಗೆಯನ್ನು ಪ್ರಜಾವಾಣಿಯ ಮೂಲಕ (ರಸೀತಿ ಸಹಿತ ಇವರು ಸಾರ್ವಜನಿಕ ಲೆಕ್ಕ ಒಪ್ಪಿಸಿ, ಸರಕಾರಕ್ಕೆ ಕೊಡುತ್ತಾರೆ) ಕೊಟ್ಟಿದ್ದೇನೆ. ಇದು ಕೇವಲ ನನ್ನ ಅಪರಾಧೀ ಪ್ರಜ್ಞೆ ತಣಿಸುವುದಕ್ಕೆ ಮಾತ್ರ, ವಾಸ್ತವದ ಕೊರತೆಯ ಗಾತ್ರಕ್ಕೆ ಏನೂ ಅಲ್ಲ. ಹಾಗೆಯೇ ನಾನು ಮತ್ತು ಡಾ| (ಮಂಟಪ) ಮನೋಹರ ಉಪಾದ್ಯ ಆರು ತಿಂಗಳ ಹಿಂದೆಯೇ ಯೋಜಿಸಿದಂತೇ ಯಕ್ಷಗಾನದ (ಉಳಿವಿಗಾಗಿ) ವಿಡಿಯೋ ದಾಖಲೀಕರಣದ ಕಾರ್ಯಕ್ರಮವನ್ನು ನಡೆಸಲಿದ್ದೇವೆ. ಇಲ್ಲಿ ನಿರ್ಮಾಣಕ್ಕೆ ತೊಡಗುವ ಹಣ ಪೂರ್ತಿ ನಮ್ಮದೇ ಆದಾಯದ ಭಾಗ. ಸರಕಾರದ ಯಾವುದೇ ಇಲಾಖೆ, ಸಾರ್ವಜನಿಕ ಉದಾರಿಗಳ್ಯಾರಿಂದಲೂ ಕೇಳುವುದೂ ಇಲ್ಲ, ಅವರಾಗಿಯೇ ಕೊಡಲು ಬಂದರೆ ಸ್ವೀಕರಿಸುವುದೂ ಇಲ್ಲ. (ಇದಕ್ಕೆ ಪ್ರಾಯೋಜಕರು, ಜಾಹೀರಾತುದಾರರು, ಬ್ಯಾನರ್ ಕೊಡುವವರು ಇಲ್ಲವೇ ಇಲ್ಲ) ಭಾಗವಹಿಸುವ ಕಲಾವಿದ, ತಂತ್ರಜ್ಞರುಗಳ ವೃತ್ತಿ ಧರ್ಮಕ್ಕೆ ತಕ್ಕ ಆರ್ಥಿಕ ಗೌರವವನ್ನೂ ಕೊಟ್ಟೇ ‘ನಮ್ಮ ಸೇವೆ’ಯನ್ನು ಸಾರ್ಥಕಗೊಳಿಸುತ್ತೇವೆ. ಎಲ್ಲಾ ಹೊರೆಗಳನ್ನು ನಾವಿಬ್ಬರೇ ತುಂಬಲಿದ್ದೇವೆ. ಆದರೆ ಫಲಿತಾಂಶದ ವಾಣಿಜ್ಯ ಉಪಯುಕ್ತತೆಯನ್ನು ಶೋಧಿಸಲು ಮತ್ತು ಮಾಡಿಕೊಳ್ಳಲು ಎರಡು ಘನ ಸಂಸ್ಥೆಗಳಿಗೆ ದಾನನೀಡುತ್ತಿದ್ದೇವೆ. ಹೆಚ್ಚಿನ ವಿವರಗಳನ್ನು ಮುಂದೆ ಯಥಾನುಕೂಲದಲ್ಲಿ ಸಾರ್ವಜನಿಕಗೊಳಿಸಿದಂತೇ ನಿಮಗೂ ತಿಳಿಸುತ್ತೇನೆ.

  • ಇಂತು ವಿಶ್ವಾಸಿ
    ಅಶೋಕವರ್ಧನ