ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ (ಕಲ್ಲುಗುಂಡಿ), ಇದು ಹಲವು ವರ್ಷಗಳಿಂದ ವರ್ಷಕ್ಕೊಮ್ಮೆ ನಡೆಸುತ್ತಿರುವ ಯಕ್ಷೋತ್ಸವ ಬಲು ದೊಡ್ಡ ಕಲಾವಿದರ ಕೂಡುವಿಕೆಯಲ್ಲೂ ಎಲ್ಲೆಲ್ಲಿಂದಲೋ ಬರುವ ಪ್ರೇಕ್ಷಕರಿಂದಲೂ ಬಹುಖ್ಯಾತವಾಗಿದೆ. ಈ ಪ್ರತಿಷ್ಠಾನದಂತೆಯೇ ಇದರ ಅಘೋಷಿತ ಸಹವ್ಯವಸ್ಥೆಗಳು ಮಂಗಳೂರು ಬಳಿಯ ಕೈರಂಗಳದಲ್ಲೂ ವರ್ಷಕ್ಕೊಮ್ಮೆ ಆಟ ಕೂಟಗಳನ್ನು ನಡೆಸುವುದುಂಟು. ಸಾಲದೆಂಬಂತೆ ಒಂದು ವೃತ್ತಿಪರ ಮೇಳವನ್ನೂ ನಡೆಸುತ್ತದೆ. ಇವುಗಳನ್ನು ನಡೆಸುವಲ್ಲಿ ಪ್ರತಿಷ್ಠಾನಕ್ಕೋ ಇತರ ಸಹಸಂಸ್ಥೆಗಳಿಗೋ ನಿರಂತರತೆಯ ಶಿಸ್ತಿದೆ, ಉದ್ದೇಶಪಟ್ಟದ್ದನ್ನು ಪರಿಷ್ಕಾರವಾಗಿ ಒಪ್ಪಿಸುವ ಛಲವಿದೆ. ಇದೇ ೧೭-೧೦-೨೦೦೯ರಂದು ಈ ವರ್ಷದ ಯಕ್ಷೋತ್ಸವ ಅಪರಾಹ್ನ ೨.೩೦ರಿಂದ ತೊಡಗಿ ಮರುದಿನ ಬೆಳಿಗ್ಗೆ ೬.೩೦ರವರೆಗೆ ನಡೆಯಬೇಕಾದದ್ದು ಲಂಬಿಸಿ ‘ಇಪ್ಪತ್ನಾಲ್ಕು ಗಂಟೆಯ’ ಕಾರ್ಯಕ್ರಮವಾದದ್ದಕ್ಕೆ ನಾನು ಆಂಶಿಕ ಸಾಕ್ಷಿ. ನನಗೆ ಸಂಘಟಕರಲ್ಲಿರುವ ವೈಯಕ್ತಿಕ ಆತ್ಮೀಯತೆಯ ಬಲದಲ್ಲಿ, ಇದು ಹಿಂದೆಂದಿಗಿಂತಲೂ ವೈಭವಪೂರ್ಣವಾಗಿ ನಡೆಯಿತು ಎನ್ನುವ ಸಂತೋಷದೊಡನೆ ಪತ್ರ ಮುಖೇನ ಹಂಚಿಕೊಂಡ ಅನಿಸಿಕೆಗಳನ್ನು ಪರಿಷ್ಕರಿಸಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.

ಪ್ರಿಯರೇ,

ಸುಮಾರು ನಾಲ್ಕೈದು ವರ್ಷಗಳ ಹಿಂದೆ ಒಮ್ಮೆ ನಿಮ್ಮ ಕಲ್ಲುಗುಂಡಿಯ ‘ವೈಭವ’ ಅರ್ಧ ರಾತ್ರಿಯವರೆಗೆ ಅನುಭವಿಸಿದ್ದೆ. ಅಂದು ನಿಮ್ಮ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಯವರನ್ನು ಅನ್ಯ ಕಾರ್ಯಾರ್ಥ ಭೇಟಿಯಾಗುವ ನನ್ನ ಆವಶ್ಯಕತೆ ಮುಖ್ಯವಿತ್ತು. ಸ್ವಾಮಿಗಳ ಭೇಟಿಯಾದ ಮೇಲೆ ಆಟಕ್ಕೆ ಕುಳಿತುಕೊಂಡೆ. ಆದರೆ ಮಧ್ಯರಾತ್ರಿಗಾಗುವಾಗಲೇ ನನ್ನ ತಾಳ್ಮೆ ತಪ್ಪಿ ಎದ್ದುಬಿಟ್ಟೆ. ದಾರಿಗೆ ಹೋಗಿ ಸಿಕ್ಕ ನಿಶಾಚರಿ ಬಸ್ಸು ಹಿಡಿದು ವಾಪಾಸು ಮನೆ ಸೇರಿಕೊಂಡೆ. ನಿಮ್ಮ ಭಾವ, ಭಕುತಿಗೆ ಅಯಾಚಿತ ಸಲಹೆ ಸೂಚನೆ ಕೊಡಲು ನಾನು ಯಾವ ಸೀಮೆ ಸರದಾರ ಎಂದು ಸುಮ್ಮನಾಗಿದ್ದೆ.

ಮೈಸೂರಿನ ಅನಂತವರ್ಧನ – ನನ್ನ ತಮ್ಮ, ಕುಕ್ಕಿಲ ಕೃಷ್ಣ ಭಟ್ಟರು ಸಂಪಾದಿಸಿದ ‘ಪಾರ್ತಿಸುಬ್ಬನ ಯಕ್ಷಗಾನಗಳು’ ಪುಸ್ತಕವನ್ನು ಈಚೆಗೆ ಸ್ವತಂತ್ರವಾಗಿ ಮರುಮುದ್ರಣಗೊಳಿಸಿ, ಪ್ರಕಟಿಸಬೇಕೆಂದು ಹೊರಟಿದ್ದ. ಅಯಾಚಿತವಾಗಿ ಕೀಲಾರು ಪ್ರತಿಷ್ಠಾನ ಅದನ್ನು ತನ್ನ ಪ್ರಕಟಣೆಯಾಗಿಯೇ ಸ್ವೀಕರಿಸಿತು ಮತ್ತು ಯಕ್ಷೋತ್ಸವದಂದು ಅನಾವರಣಗೊಳಿಸುವ ವ್ಯವಸ್ಥೆಯೂ ನಿಶ್ಚಯವಾಗಿತ್ತು. ಆ ಸಮಾರಂಭಕ್ಕಾದರೂ ನಾನು ಹಾಜರಿರಲೇಬೇಕು ಎಂಬ ಸಂತೋಷದಲ್ಲಿ ಅಂದು ದೀಪಾವಳಿಯ ನೆಪ ಸಾರಿ ಅಂಗಡಿಗೆ ರಜಾ ಘೋಷಿಸಿದ್ದೆ. ಆದರೆ ಮುದ್ರಣದ ಗೊಂದಲಗಳಿಂದ ನಿಜ ಪುಸ್ತಕ ಬರುವುದು ಕನಿಷ್ಠ ಒಂದು ತಿಂಗಳು ತಡ ಎಂದು ತಿಳಿದ ಮೇಲೆ ಮತ್ತೆ ಮನಸ್ಸು ಬದಲಿಸಿದೆ. ಮಾಮೂಲೀ ಆಟಗಳ ಮೊದಲೋ ಮಧ್ಯವೋ ಅರ್ಧ ಒಂದು ಗಂಟೆಯ ಸಭಾ ಕಾರ್ಯಕ್ರಮ ಬಂದರೂ ರಸಭಂಗ ಎಂದೇ ಗ್ರಹಿಸುವ ನನಗೆ ಅಧಿಕೃತವಾಗಿಯೇ ಮೂರು ಗಂಟೆಯುದ್ದಕ್ಕೆ (ಅಪರಾಹ್ನ ಎರಡೂವರೆಯಿಂದ ಸಂಜೆ ಐದೂವರೆಯವರೆಗೆ) ಸಭಾ ಕಾರ್ಯಕ್ರಮ ಸುಧಾರಿಸಿ ರಾತ್ರಿಯುದ್ದಕ್ಕೆ ಕನಿಷ್ಠ ಹನ್ನೆರಡು ಗಂಟೆಯವಧಿಯ ಯಕ್ಷಪ್ರದರ್ಶನವನ್ನೂ ಅನುಭವಿಸುವುದು ಅಸಾಧ್ಯ ಎಂದು ಕಂಡು ಹಿಂಜರಿದೆ. ಆದರೆ ಮಂಗಳೂರಿನಲ್ಲೇ ಪಶುವೈದ್ಯರಾಗಿರುವ ನನ್ನ ಆಪ್ತಮಿತ್ರ ಮಂಟಪ ಮನೋಹರ ಉಪಾಧ್ಯರು (‘ಭಾಮಿನಿ’ ಖ್ಯಾತಿಯ ಪ್ರಭಾಕರ ಉಪಾಧ್ಯರ ಕೊನೆಯ ತಮ್ಮ) ಸಂಜೆ ಕಾರು ಹೊರಡಿಸಿ“ಹೋಪ” ಎಂದಾಗ ಹೊರಟೇಬಿಟ್ಟೆ.

ದಾರಿಯ ಅಧ್ವಾನದಲ್ಲಿ ನಾವಲ್ಲಿಗೆ ಮುಟ್ಟುವಾಗ ಗಂಟೆ ಎಂಟಾಗಿತ್ತು. ಉತ್ಸವದ ವ್ಯವಸ್ಥೆ ಹಿಂದಿಗಿಂತಲೂ ಎಷ್ಟೋಪಾಲು ಹೆಚ್ಚು ಸೌಕರ್ಯಗಳನ್ನು ಅಳವಡಿಸಿಕೊಂಡಿತ್ತು. ಸಹಜವಾಗಿ ನಾವು ಮೊದಲು ಭರ್ಜರಿ ಊಟವನ್ನು ಸವಿದು, ಶಶಿಪ್ರಭಾ ಪರಿಣಯಕ್ಕೆ (ಉತ್ತರಾರ್ಧದ) ಸಾಕ್ಷಿಗಳಾದೆವು. ಅದು ಎಷ್ಟು ನೀರಸವಾಗಿತ್ತು ಎನ್ನುವುದಕ್ಕೆ ಓರ್ವ ಕಲಾವಿದನೇ ಹೇಳಿದ ಮಾತೊಂದೇ ಸಾಕು. “ಆಟದಲ್ಲಿ ಎಂದೂ ತೂಕಡಿಸದ ಶ್ಯಾಂಭಟ್ರಿಗೂ ಈ ಪ್ರಸಂಗದಲ್ಲಿ ಕಣ್ಣು ಕೂರಿದೆ.” ಸಮಯಪರಿಪಾಲನೆಯಲ್ಲಿ ಸಭಾಕಾರ್ಯಕ್ರಮ, ಅಲ್ಲಿನ ಪೂರ್ವರಂಗಗಳು ಭಾರೀ ಕೊರತೆ ಉಂಟುಮಾಡಿತ್ತಂತೆ. ಆದರೆ ಮೊದಲ ಪ್ರಸಂಗ ‘ಶಶಿಪ್ರಭಾ ಪರಿಣಯ’ಕ್ಕೆ ಅದನ್ನು ತುಂಬಿಕೊಡುವ ಸಾಧ್ಯತೆಗಳು ತುಂಬಾ ಇತ್ತು ಮತ್ತು ಅದನ್ನು ಕಲಾವಿದರು ಉಡಾಫೆಯಲ್ಲೇ ವ್ಯರ್ಥಗೊಳಿಸಿದಂತಿತ್ತು. ಸಣ್ಣ ಉದಾಹರಣೆಯಾಗಿ ಹೇಳುತ್ತೇನೆ, ಆ ಪ್ರಸಂಗದ ಮೊದಲ ಬಣ್ಣದ ವೇಷಕ್ಕೆ ರಂಗದಿಂದ ಕರೆ ಬಂದಾಗ ನಾನು ಚಾ ಕುಡಿಯಲು ಎದ್ದೆ. ನಾನು ವೇದಿಕೆಯ ಎಡಬದಿಯ ಸಭೆಯಲ್ಲಿದ್ದ ಕಾರಣ ಹಾಗೇ ದರೆ ಬದಿಗೆ ಹೋಗಿ, ಸಭೆಯನ್ನು ಹಿಂದಿನಿಂದ ಬಳಸಿ ನಡೆಯಬೇಕಿತ್ತು. ಆಗಲೇ ವೇಷ ದೀವಟಿಗೆಯೊಡನೆ ಅಲ್ಲಿ ಸಜ್ಜಾಗಿ ನಿಂತಿತ್ತು. ಆದರೆ ನಾನು ಚಾ ಮುಗಿಸಿ, ಮರಳಿ ಕುರ್ಚಿ ಸೇರಿದ ಮೇಲೂ ಅಂದರೆ ಸುಮಾರು ೧೫-೨೦ ಮಿನಿಟು ಕಳೆದ ಮೇಲೂ ವೇಷದ ‘ಸೇಳೆ’ ರಂಗಕ್ಕೇರಿರಲಿಲ್ಲ! ಅಷ್ಟೇ ಸಾಲದು ಎನ್ನುವಂತೆ ಮತ್ತೊಮ್ಮೆ ಆ ವೇಷ ರಾಜಕುಮಾರರನ್ನು ಅಟ್ಟಿಕೊಂಡು ಸಭೆ ಸುತ್ತುವುದನ್ನೂ ಅಳವಡಿಸಿ ಮೊದಲೇ ಕಾವಲಿ ಬಿಟ್ಟು ಏಳದ ನೀರುದೋಸೆಗೆ ಎರಡು ಮುಷ್ಟಿ ನೀರು ಹಾಕಿದಹಾಗಾಯ್ತು! ಭೀಮ ದುಶ್ಶಾಸನನನ್ನು ಬೆರೆಸಿ ಹಿಡಿದು ಬಲಿಹಾಕುವ ಭೀಭತ್ಸ, ಪುರುಷಾಮೃಗ ಭೀಮನನ್ನು ಅಟ್ಟಿ, ಕಾಲು ಹಿಡಿದಪ್ಪಳಿಸುವಂಥ ಉಸಿರು ಬಿಗಿಹಿಡಿಯುವ ನಾಟಕೀಯ ಕೊನೆಯಿಲ್ಲದ ಈ ಕ್ರಿಯೆ ಕೇವಲ ಕಾಲಹರಣ ಮಾತ್ರವಾಯ್ತು.

ಚಿಟ್ಟಾಣಿ ಅರ್ಜುನ, ಮಂಟಪ ಸುಭದ್ರೆಯರಾಗಿದ್ದ ಕೃಷ್ಣಾರ್ಜುನ ನಾನು ಈಚೆಗೆ ಇನ್ನೆಲ್ಲೋ ನೋಡಿದ್ದೆ. ಅಲ್ಲಿ ದೇವ ಮತ್ತು ಭಕ್ತನ ಸಂಘರ್ಷಕ್ಕೂ ಮಿಗಿಲಾಗಿ ಆದರ್ಶ ಮತ್ತು ನಿಶ್ಚಿತ ಸೋಲು/ಮರಣಗಳ ಗಾಢ ನೆರಳಲ್ಲಿ ಅರ್ಜುನ ಸುಭದ್ರೆಯರ ಮಾನಸಿಕ ತುಮುಲದ ಅಭಿವ್ಯಕ್ತಿ ನನ್ನನ್ನು ಹೆಚ್ಚು ತಟ್ಟಿತ್ತು. ನನ್ನ ವಿಮರ್ಶೆ ಆ ನೆನಪಿನ ಹೋಲಿಕೆಯಲ್ಲಿ ಬಳಲುತ್ತದೋ ಇಲ್ಲಿನ ಸುಭದ್ರೆ ಸಾಲದಾಯ್ತೋ ಒಟ್ಟಾರೆ ಜೋಡಿ (ಜಾತಕ ಕೂಡಿಬರುವುದು ಎಂದಂತೆ!) ಹೊಂದಲಿಲ್ಲವೋ ಚಿಟ್ಟಾಣಿ ಮತ್ತಷ್ಟು ಮುದುಕರಾದ್ದರಿಂದಲೋ ಅಂದಿನ ವೀಕ್ಷಣಾ ಪರಿಸರ ಇಲ್ಲಿ ಕಾಣದ್ದಕ್ಕೋ ಒಟ್ಟಾರೆ ಕೃಷ್ಣಾರ್ಜುನ ನನ್ನ ಮಟ್ಟಿಗೆ ಅಷ್ಟಕ್ಕಷ್ಟೆ.

ಹೆಚ್ಚುಕಡಿಮೆ ಶ್ರೀ ರಾಮಚಂದ್ರಾಪುರ ಮೇಳದ ಕಲಾವಿದರದೇ ಕೂಟ ‘ಶಶಿವಂಶ ವಲ್ಲರಿ’. ಕಲಾವಿದರ ಉತ್ಸಾಹ, ಪ್ರಸಂಗದ ಲವಲವಿಕೆ ಚೆನ್ನಾಗಿಯೇ ಇತ್ತು. ಆದರೆ “ಏನೋ ದಿವಾಕರ (ಮಿತ್ರ), ಒಳ್ಳೇ ಹಕ್ಕಿಯನ್ನು (ಊರ್ವಶಿ) ಹಾರಿಸಿಕೊಂಡು ಹೊರಟೆ” ಎಂಬಂಥ (ವರುಣನ) ಮಾತುಗಳು ಪರಿಣಾಮವನ್ನು ಕೀಳುಗಳೆಯುತ್ತಿತ್ತು. ಹಾಸ್ಯಗಾರನ ಲೈಸೆನ್ಸಿನಲ್ಲಿ ಪುಂಡು ವೇಷ ಸವಾರಿ ಹೊರಟದ್ದನ್ನು ‘ಆರ್.ಟೀ.ಓ’ ಮನ್ನಿಸಬಹುದೇ? ಮುಂದುವರಿದು ಐದು ಬಣ್ಣದ ವೇಷಗಳು ರಂಗದ ದೂಳೆಬ್ಬಿಸುತ್ತಿದ್ದಂತೆ (ಅದು ಮುಗಿದು ಇನ್ನೂ ಎರಡು ಪ್ರಸಂಗಗಳು – ಅಶೋಕ ಸುಂದರಿ ಮತ್ತು ಬ್ರಹ್ಮತೇಜ, ಬಾಕಿಯಿದ್ದಂತೆ) ಬೆಳಗಾದ್ದರಿಂದ ನಾವು ಜಾಗ ಖಾಲಿ ಮಾಡಿದೆವು. ಸಾಕಷ್ಟು ಮೇಳದಾಟಗಳಲ್ಲಿ, ಅಕಾಲಿಕ ಕೂಟಗಳಲ್ಲೂ ಮೊದಮೊದಲು ಮಾತು ಮಣಿತಗಳಲ್ಲಿ ಸಮಯ ಪರಿಪಾಲನೆ ನಡೆಸದಿದ್ದರೂ ಹಗಲು ಸಮೀಪಿಸುತ್ತಿದ್ದಂತೆ ‘ಕಥೆ ಓಡಿಸುವ’ ಕಹಿ ನಾನು ಅನುಭವಿಸಿದ್ದೇನೆ. ಇಲ್ಲಿ ಅದಕ್ಕವಕಾಶವಿಲ್ಲದಂತೆ ಪ್ರದರ್ಶನದ ನಡುವೆಯೇ ವ್ಯವಸ್ಥಾಪಕರು ‘ಬೆಳಗ್ಗಿನ ತಿಂಡಿ, ಆವಶ್ಯಕವಿದ್ದರೆ ಮಧ್ಯಾಹ್ನದ ಊಟವನ್ನೂ ಕೊಟ್ಟು’ ಕಲಾವಿದರಿಂದ ಪ್ರದರ್ಶನದ ಸಹಜ ವಿಕಾಸವನ್ನು ಆಶಿಸಿದ್ದು ಸರಿ. ಆದರಿದು ವೀಕ್ಷಣಾ ಅವಧಿಯನ್ನಷ್ಟೇ ಲಂಬಿಸುವ ಆಶ್ವಾಸನೆಯಂತೆ ಕಲಾವಿದರು ಬಳಸಿಕೊಂಡದ್ದು ವಿಪರೀತ. ರಾತ್ರಿಯ ಆಟವಾದರೆ ಸುಮಾರು ಎಂಟು ಗಂಟೆಯ ಉದ್ದದಲ್ಲಿ, ಸೀಮಿತ ಅವಧಿಯದ್ದಾದರೆ ನಿಗದಿಸಿದ ಮೂರು ನಾಲ್ಕು ಗಂಟೆಯ ಚೌಕಟ್ಟಿನಲ್ಲಿ ಪ್ರದರ್ಶನಗಳು ಕಳೆಗಟ್ಟುತ್ತವೆ. ಇನ್ನು ಕೂಟಗಳಂತೂ ಕಿನ್ನಿಗೋಳಿಯಲ್ಲಿ, ಕ್ಯಾಸೆಟ್ಟಿನ ಉದ್ದದಲ್ಲಿ ಮಿನಿಟುಗಳ ನಿಖರತೆಯೊಡನೆ ಚೊಕ್ಕವಾಗಿ ಮುಗಿಯುವುದು ಎಲ್ಲರಿಗೂ ಧಾರಾಳ ತಿಳಿದೇ ಇದೆ. ಶಿವಮೊಗ್ಗದಲ್ಲಿ ಎರಡು ಬಾರಿ ಇಪ್ಪತ್ನಾಲ್ಕು ಗಂಟೆಯ ಯಕ್ಷ ಪ್ರದರ್ಶನಗಳನ್ನು ನಡೆಸಿದ್ದನ್ನೂ ನಾನು ಸಂತೋಷದಿಂದ ಅನುಭವಿಸಿದ್ದೇನೆ. ಅಲ್ಲಿ ಕಾರ್ಯಕ್ರಮ ತೊಡಗುವುದು, ಪ್ರತಿ ತಂಡದ ಸಮಯಪಾಲನೆ ಮತ್ತು ಕೊನೆಗೊಳ್ಳುವುದೆಲ್ಲಾ ಪೂರ್ವ ನಿರ್ಧಾರಿತ ಕಾಲಪಟ್ಟಿಗೆ ಮಿನಿಟುಗಳಲ್ಲೂ ವ್ಯತ್ಯಯಗೊಳ್ಳುವುದಿಲ್ಲ. ಆದರೆ ಇಲ್ಲಿ ನೀವು ಘೋಷಿಸಿಕೊಂಡ ಮತ್ತು ನಾವು ಮಾನಸಿಕವಾಗಿ ಸಿದ್ಧಗೊಂಡ ಹನ್ನೆರಡು ಗಂಟೆಯ ಸಮಯ ಮಿತಿಯನ್ನು (ಸಂಜೆ ಆರರಿಂದ ಬೆಳಿಗ್ಗೆ ಆರೂವರೆ) ಅನಿರ್ದಿಷ್ಟ ಅವಧಿಗೆ ಗುರಿಪಡಿಸಿದ್ದು ಸರಿಯಲ್ಲ. ಓರ್ವ ರುಚಿಶುದ್ಧದ ಹಿರಿಯ ಕಲಾವಿದ (ನಿಮ್ಮಲ್ಲಿ ಬಣ್ಣ ಬಳಿದುಕೊಂಡು ಕುಳಿತಲ್ಲೇ) ಉದ್ಗರಿಸಿದರು, “ನಾವು ಕಮ್ಮಟ, ಗೋಷ್ಠಿಗಳಲ್ಲಿ ಯಕ್ಷಗಾನ ಶಾಸ್ತ್ರೀಯ ಕಲೆ ಎಂದು ಸ್ಥಾಪಿಸುತ್ತಿದ್ದೇವೆ. ಆದರೆ ಇಲ್ಲಿ ಅದು ಮತ್ತೆ ಜನಪದವಾಗುತ್ತಿದೆ.”

ಎಷ್ಟೋ ಆಟ ಕೂಟಗಳ ಸಂಘಟಕರಿಗೆ ಯಕ್ಷಗಾನ ಒಂದು ‘ಐಟಮ್ಮು.’ ಹತ್ತು ಪ್ರಾಯೋಜಕರು, ಇನ್ನೆಂತದೋ ದಾಕ್ಷಿಣ್ಯದ ದಾಸ್ತಾನು ತೀರುವಳಿಗೆ ‘ಖರಾವಳಿಯ ಎಮ್ಮೆಯ ಖಲೆ’ ಮುಖವಾಡ ಮಾತ್ರ. ಇನ್ನೆಷ್ಟೋ ನಿಜ ಯಕ್ಷಾಸಕ್ತರಿಗೆ ಕಲಾವಿದರ ಸಂಯೋಗವೇ ಒಂದು ಭಗೀರಥ ಪ್ರಯತ್ನ; ಇವರ ಸೀಮಿತ ಆರ್ಥಿಕ ತಾಕತ್ತೋ ಕಲಾವಿದರುಗಳ ವೃತ್ತಿಮಾತ್ಸರ್ಯದ ಬೇಕು ಬೇಡಗಳ ನಿರ್ವಹಣೆಯಲ್ಲೋ ಕೈಸೋತು ‘ಕಡೇ ಗಳಿಗೆಗೆ’ ಏನೋ ಒಂದು ನಡೆಸುವ ಅನಿವಾರ್ಯತೆ. ನನಗೆ ಸ್ಪಷ್ಟವಾಗಿ ಗೊತ್ತು, ಯಕ್ಷಗಾನ ಅದರಲ್ಲೂ ತೆಂಕು ತಿಟ್ಟಿನಲ್ಲಿ ಕೀಲಾರು ಪ್ರತಿಷ್ಠಾನದ ವಾರ್ಷಿಕ ಪ್ರದರ್ಶನದ ಕರೆಯನ್ನು ಮನ್ನಿಸದಿರುವ ಕಲಾವಿದರಿರಲಾರದು. ಹಾಗಿರುವಾಗ ನಮ್ಮ ನಿರೀಕ್ಷೆಗಳು ಮಹತ್ತರವಾದದ್ದೇ ಇರುವುದು ತಪ್ಪಲ್ಲವಲ್ಲಾ.

ಹತ್ತಡಿ ಹತ್ತಡಿ ಖಾಲಿ ರಂಗದ ಒಳಗೆ ಸ್ವರ್ಗ ಮರ್ತ್ಯ ಪಾತಾಳಗಳನ್ನು ಮೆರೆಯಿಸಬಲ್ಲ, ಹಿಮ್ಮೇಳ ಮುಮ್ಮೇಳಗಳ ಅಸಾಧಾರಣ ಸಂಯೋಜನೆಯಲ್ಲಿ ‘ಪೌರಾಣಿಕ’ ವಾತಾವರಣ ಕಟ್ಟಿಕೊಡಬಲ್ಲ, ಕಥನ ಮತ್ತು ವ್ಯಕ್ತಿತ್ವವನ್ನು ದೇಶ ಭಾಷೆಗಳ ಎಲ್ಲೆ ಮೀರಿ ಸಂವಹನಿಸಬಲ್ಲ ಕಲೆ – ಯಕ್ಷಗಾನ. ಅದಕ್ಕೆ ಪ್ರತಿಷ್ಠಾನದ ಕೊಡುಗೆ ಒಂದು ಮೈಲುಗಲ್ಲಾಗಬೇಕು. ಯಕ್ಷಗಾನದ ಜಾನಪದ ಅಂಶದ ಸ್ವಾತಂತ್ರ್ಯವನ್ನು ಅದರ ಮೌಲಿಕ ಗುಣವರ್ಧನೆಗೆ ಬಳಸಿ, ಪ್ರಕಾಶಿಸುವ ಕೆಲಸ ಸುಲಭ ಸಾಧ್ಯವಾಗಬೇಕಿತ್ತು. ಬದಲು ವೀಕ್ಷಣೆ ಬಳಲುವಂತೆ ಬ್ಯಾನರ್, ಬಣ್ಣಬಣ್ಣದ ಪ್ರಖರ ಹತ್ತೆಂಟು ದೀಪಗಳು ಇತ್ತು! ಸಭಾ ಕಾರ್ಯಕ್ರಮಕ್ಕೆ ಶೋಭೆ ತರಬಹುದಾದ ಹಿನ್ನೆಲೆಯ ಬ್ಯಾನರ್ ಕಥಾನಕದ ಆವರಣ ಭಂಗ ಮಾಡುತ್ತದೆ. ನೋಟದ ಪ್ರತಿಕ್ಷಣಕ್ಕೂ ಕೀಲಾರು, ಕಲ್ಲುಗುಂಡಿ ಎಂದಿತ್ಯಾದಿ ತೋರಿಸುವುದಕ್ಕಿಂತ ಜನಮಾನಸದ ರಂಗದಲ್ಲಿ ಒಳ್ಳೆಯ ಆಟದ ನೆನಪು ಬಂದಾಗೆಲ್ಲಾ ಅದನ್ನು ಆಗಮಾಡಿಸಿದ ಸಂಘಟನೆಯನ್ನೂ ಸ್ಥಳವನ್ನೂ ಸ್ಮರಿಸುವ ಅನಿವಾರ್ಯತೆ ಮೂಡಿಸಿದರೆ ಹೆಚ್ಚು ಚಂದ ಅಲ್ಲವೇ? ಕಿವಿ ಕೊರೆಯುವ ಧ್ವನಿವರ್ಧಕ ಮತ್ತು ರಸಪೋಷಣೆಯಲ್ಲಿ (ಚಂಡೆಗೆ ವಿಶ್ರಾಂತಿಯೇ ಇಲ್ಲವೇ?) ಸೂಕ್ಷ್ಮಗಳನ್ನು ಕಳೆದುಕೊಂಡಂತೆ ಮಾತು ಕುಣಿತಗಳನ್ನು ಮೆರೆಯಿಸುವ, ಸೂಜಿಯಿಂದಾಗುವ ಕೆಲಸಕ್ಕೆ ದಬ್ಬಣ ತಂದಂತೆ ರಂಗದ ಮೇಲೆ ವೇಷಗಳ ಸಂತೆಯನ್ನೇ ನೆರೆಯಿಸುವ ಅನೌಚಿತ್ಯ ಬೇಕಿತ್ತೇ? (ನೂರಕ್ಕೂ ಮಿಕ್ಕು ಹೆಸರುಗಳು ನಿಮ್ಮ ಕರಪತ್ರದಲ್ಲಿದೆ. ಪಾತ್ರವಿಲ್ಲದೆಯೂ ಬಂದವರು ನಿಮ್ಮಿಂದ ಪುರಸ್ಕೃತರಾಗುತ್ತಾರೆಂದೂ ಕೇಳಿದ್ದೇನೆ. ಏಕಕಾಲಕ್ಕೆ ಏಳೂ ಜನ ಸಮಸಪ್ತಕರನ್ನು ವೇದಿಕೆ ತಂದ ಮಳೆಗಾಲದ ಸರ್ಕಸ್ ಕೂಟವನ್ನು ನಾನು ನೋಡಿಲ್ಲವೆಂದಲ್ಲ. ಆ ಲೆಕ್ಕದಲ್ಲಿ ನಿಮ್ಮ ಐದು ಬಣ್ಣದ ವೇಷಗಳು ಒಮ್ಮೆಗೇ ವೇದಿಕೆಯಲ್ಲಿ ಮೆರೆಯುವುದು ದೊಡ್ಡದಲ್ಲ ಎನ್ನಲೂಬಹುದು). ಕಲಾ ಸೂಕ್ಷ್ಮಗಳನ್ನರಿಯದ ಗ್ರಾಮೀಣ ಹರಕೆದಾರರು ಬ್ಯಾಂಡು ಸೆಟ್ಟು, ಗರ್ನಾಲು ಎಂದು ವೇದಿಕೆಯ ಹೊರಗೆ ಗದ್ದಲ ಎಬ್ಬಿಸುವುದನ್ನು ನಾನು ಅನುಭವಿಸಿದ್ದೇನೆ, ಖಂಡಿಸುವವರನ್ನು ಬೆಂಬಲಿಸಿದ್ದೇನೆ. ನಿಮ್ಮ ಪ್ರದರ್ಶನಗಳೂ ಅಂಥ ‘ಹೆಚ್ಚುಗಾರಿಕೆ’ ಪ್ರದರ್ಶಿಸಲು ಹೊರಟಂತಿರುವುದು ಸರಿಯೇ? ಸೂಚ್ಯಗಳನ್ನು ವಾಚ್ಯ ಮಾಡಲು ಹೋದಷ್ಟೂ ‘ಧ್ವನಿ’, ಯಕ್ಷಗಾನದ ಸ್ವತ್ವ ದುರ್ಬಲಗೊಳ್ಳುತ್ತಾ ಹೋಗುವುದಿಲ್ಲವೇ?

ಹತ್ತೆಂಟು ಹೆಸರಿನ (ಲಕ್ಷಾಂತರ ಮೌಲ್ಯದ) ಉದಾರ ಸಹಾಯವನ್ನು ಪ್ರತಿಷ್ಠಾನ ಈ ವೇದಿಕೆಯಲ್ಲಿ ಮಾಡುತ್ತಾ ಬಂದಿದೆ. ಪ್ರೇಕ್ಷಕರಿಗಂತೂ ಭರ್ಜರಿ ಸೌಕರ್ಯಗಳನ್ನು (ದಾರಿ ಬದಿಯ ‘ಜಾತ್ರೆ ಅಂಗಡಿಗಳು’ ಈ ವರ್ಷ ದಿವಾಳಿಯಾಗಿದ್ದರೆ ಆಶ್ಚರ್ಯವಿಲ್ಲ) ಕಲ್ಪಿಸುತ್ತೀರಿ – ನಿಸ್ಸಂದೇಹವಾಗಿ ದೊಡ್ಡ ಕೆಲಸ. ‘ಅಂದ ಕಾಲತ್ತಿಲೆ’ ಶೇಣಿಯವರ ಬಗ್ಗೆ (ಬಹುಶಃ ಪ್ರಥಮ) ಪುಸ್ತಕ ತಂದಲ್ಲಿಂದ ಕಳೆದ ವರ್ಷ ಗೋವಿಂದ ಭಟ್ಟರ ಆತ್ಮಕಥೆ, ಈ ವರ್ಷ (ಕುಕ್ಕಿಲ ಕೃಷ್ಣ ಭಟ್ಟರ) ಪಾರ್ತಿಸುಬ್ಬನ ಕೃತಿವರೆಗೆ ಸಾಹಿತ್ಯಕ್ಕೂ ನಿಮ್ಮ ಕೊಡುಗೆ ಸಣ್ಣದಲ್ಲ. ಕಲಾವಿದರ ವೈಯಕ್ತಿಕ ಕಷ್ಟ ನಷ್ಟಗಳಿಗೆ ಒದಗಿದ್ದೀರಿ, ವೃತ್ತಿಪರ ಮೇಳವನ್ನು ಯಾವುದೇ ಸಾಂಪ್ರದಾಯಿಕ ಒತ್ತಡಗಳಿಲ್ಲದೆ (ದೇವಸ್ಥಾನವೆಂದೋ ಆದಾಯ ತರುವ ವೃತ್ತಿಯೆಂದೋ ಇತ್ಯಾದಿ), ಆರ್ಥಿಕ ಫಲಾಪೇಕ್ಷೆಯಿಲ್ಲದೆ ಆಧರಿಸಿದ್ದೀರಿ – ಖಂಡಿತವಾಗಿಯೂ ಚರಿತ್ರಾರ್ಹ ದಾಖಲೆ. ಅರ್ಥಾರ್ಥ ಸಂಬಂಧವಿಲ್ಲದಿದ್ದರೂ ವೇದಿಕೆಯ ಮೇಲೆ ಮೆರೆಯುವ, ದಿನ ಬೆಳಗಾದರೆ ಮಾಧ್ಯಮಗಳಲ್ಲೆಲ್ಲಾ ಬೆಳಗುವ ‘ಜನಪ್ರೀಯತೆಯ’ ಹುಚ್ಚೂ ನಿಮ್ಮ ಪದಾಧಿಕಾರಿಗಳಿಗೆ ಇಲ್ಲ. ಪ್ರತಿಷ್ಠಾನ ಏನು ಮಾಡಿದರೂ ಬಿಟ್ಟರೂ ಯಾರೂ ಪ್ರಶ್ನಿಸಲಾಗದ ಸಾಧನೆ ನಿಮ್ಮದು.

ಈ ಎಲ್ಲಾ ಬಲದಲ್ಲಿ ನೀವು ಇನ್ನೂ ಯಾಕೆ ತೆಂಕುತಿಟ್ಟಿನ ಯಕ್ಷಗಾನಕ್ಕೊಂದು ಗಟ್ಟಿ ಶಾಸ್ತ್ರ ಮತ್ತು ಕಲಿಕೆಯ ಕೇಂದ್ರವನ್ನು ಸ್ಥಾಪಿಸುವ, ನಡೆಸುವ ಮನಸ್ಸು ಮಾಡಿಲ್ಲವೆಂದು ನನ್ನ ಬಹುಕಾಲದ ಕೊರಗು ಉಳಿದೇ ಇದೆ. ಕರ್ಗಲ್ಲು ವಿಶ್ವೇಶ್ವರ ಭಟ್ಟ, ರಾಘವ ನಂಬಿಯಾರ್, ಪ್ರಭಾಕರ ಜೋಶಿ, ಅಮೃತ ಸೋಮೇಶ್ವರರೇ ಮೊದಲಾದ ಸ್ಪಷ್ಟ ತೆಂಕು ತಿಟ್ಟಿನ ಅಸಾಧಾರಣ ಸಂಪನ್ಮೂಲ ವ್ಯಕ್ತಿಗಳಿದ್ದಾರೆ. ಶತಾವಧಾನಿ ರಾ. ಗಣೇಶ, ಅದ್ವಿತೀಯ ನಾಟ್ಯವಿದುಷಿ ಪದ್ಮಾ ಸುಬ್ರಹ್ಮಣ್ಯಂ ಮೊದಲಾದ ಅಂತಾರಾಷ್ಟ್ರೀಯ ವಿದ್ವಾಂಸರು ಒಟ್ಟು ಯಕ್ಷಗಾನವನ್ನೇ ನಾಟ್ಯ ಶಾಸ್ತ್ರದ ಅದ್ವಿತೀಯ ಪ್ರತಿನಿಧಿ ಎಂದೇ ಕೊಂಡಾಡಿದ್ದಾರೆ, ಅಂಧಾಭಿಮಾನದ ಸೋಂಕೂ ಬಾರದಂತೆ ಬೆಂಬಲಿಸುತ್ತಾರೆ. ಒಮ್ಮೆ ಹುಚ್ಚುಚ್ಚು ಮೆರೆದು ಭೂಗತರಾಗುವವರಂತಲ್ಲದೆ ವರ್ಷಂಪ್ರತಿ (ವಿಶೇಷ ಸಂದರ್ಭಗಳನ್ನೂ ಬಿಡದೆ) ಕೈರಂಗಳ, ಕಲ್ಲುಗುಂಡಿಗಳಲ್ಲಿನ ನಿಮ್ಮ ವ್ಯವಸ್ಥಾಪನಾ ಯಶಸ್ಸಿನ ಹಿಂದೆ ನಿಮ್ಮ ಅಪಾರ ಸಂಘಟನಾ ಕೌಶಲವೂ ಜನನಿರ್ವಹಣೆಯ ತಾಕತ್ತೂ ನಿಚ್ಚಳವಾಗುತ್ತದೆ. ನಾನು ಹಿಂದಿನ ಹಲವು ಪತ್ರಗಳಲ್ಲಿ ಕೇಳಿಕೊಂಡಂತೆ ಮತ್ತೆ ಮನವಿ ಮಾಡುತ್ತೇನೆ – ತೆಂಕು ತಿಟ್ಟಿಗೊಂದು ಬಹುವ್ಯಾಪ್ತಿಯ ಗುರುಕುಲ ನಡೆಸಿ. ತೆಂಕು ಶೈಲಿಯ ಸಂಶೋಧನೆ, ಶಿಕ್ಷಣ, ಪುನಾರಚನೆಗಳ ಬಲದಲ್ಲಿ ಪ್ರದರ್ಶನಗಳು ಬರುವಂತಾಗಲಿ.

ಬಡಗು ತಿಟ್ಟಿನ ಹಳತರಲ್ಲಿ ಕರ್ಕಿ, ಇಡಗುಂಜಿ ಹೆಸರುಗಳು ವರ್ತಮಾನದಲ್ಲಿ ಸಾಲಿಗ್ರಾಮ ಮಕ್ಕಳ ಮೇಳ, ಯಕ್ಷರಂಗ ಮುಂತಾದವು ಒಂದು ಗಟ್ಟಿ ಪರಂಪರೆಯನ್ನು ವಿಸ್ತೃತ ಭವಿಷ್ಯದ ಭರವಸೆಯನ್ನೂ ಮೂಡಿಸುತ್ತವೆ. ಅದೇ ತೆಂಕು ತಿಟ್ಟಿನಲ್ಲಿ ಕೇಳಿಬರುವುದು ‘ಬಲಿಪರ ಶೈಲಿ, ವಿ.ಶಾಸ್ತ್ರಿಗಳ ಅಭಿನಯ, ಅಳಿಕೆಯವರ ನಾಟ್ಯ, ಶೇಣಿಯವರ ಮಾತು, ಶ್ರೀ.ಭಂಡಾರಿಯ ಗಿರ್ಕಿ’ ಇತ್ಯಾದಿ ಇಲ್ಲದ್ದರ ಹಳಹಳಿಕೆ, ಕೇವಲ ವೈಯಕ್ತಿಕ ಸಾಧನೆಗಳ ವೈಭವೀಕರಣ ಮಾತ್ರ. ಹೆಸರು ಎಡನೀರೋ ರಾಮಚಂದ್ರಾಪುರವೋ ಆದರೂ ಮೇಳದ ಸಾಧನೆ ಚಾಲ್ತಿ ಇತರ ಮೇಳಗಳಿಂದ ಏನೂ ವಿಭಿನ್ನವಲ್ಲ. ಕಲೆಯ ಬಗ್ಗೆ ಕಾಳಜಿ ಮತ್ತು ನಿಮ್ಮ ಸಂಸ್ಥೆಯೊಡನಿರುವ ಆತ್ಮೀಯತೆಯಲ್ಲಿ ಮತ್ತೆ ಕೇಳಿಕೊಳ್ಳುತ್ತೇನೆ, ನಿಮ್ಮ ಶಕ್ತಿಯನ್ನು ದಂಡೆಕೊಚ್ಚುವ ಪ್ರವಾಹವನ್ನಾಗಿ ಬಿಡಬೇಡಿ, ತೆಂಕಣ ಬಯಲನ್ನು ಸಮೃದ್ಧವಾಗಿಸುವ ಗಟ್ಟಿ ಕಾಲುವೆಯಲ್ಲಿ ಹರಿಸಿ.