ಹೆಸರು ಕ್ಷೀರಸಾಗರ, ಮಜ್ಜಿಗೆಗೆ ಗತಿಯಿಲ್ಲ ಎಂಬಂತೇ ಇತ್ತು ನಮ್ಮ ‘ಅಭಯಾರಣ್ಯ’; ತುಂಡು ನೆರಳಿಲ್ಲ. ಆದರೂ ಪೂರ್ವಾಹ್ನವಿಡೀ ರಣಗುಡುವ ಬಿಸಿಲಿನಲ್ಲಿ, ಕಲ್ಲುಮುಳ್ಳುಗಳ ಪದವಿನಲ್ಲಿ ಕೊನೆಗಳಿಗೆಯ ಸಿದ್ಧತೆಗಳನ್ನು ಮಾಡಿಕೊಂಡೆವು. ದಾರಿಬದಿಗೆ ಅಭಯಾರಣ್ಯದ ಬ್ಯಾನರು ಕಟ್ಟಿದ್ದಾಗಿತ್ತು. ಅಲ್ಲೆ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಪಾರ್ಕಿಂಗ್, ನಡೆದು ಬರುತ್ತಿದ್ದಂತೆ ಮೊದಲ ಗೇಟಿನ ಬಳಿ ವಿದ್ಯುಜ್ಜನಕ, ಅಭಯಾರಣ್ಯದ ಗೇಟಿನ ಬುಡದಲ್ಲಿ ಜನರೇಟರಿನ ಮೇಲೊಂದು ಕಣ್ಣಿಟ್ಟುಕೊಂಡು, (ನನ್ನ ಪ್ರಕಟಣೆಗಳ ಮತ್ತು ಆಯ್ದ ವನ್ಯ ಸಂಬಂಧೀ) ಪುಸ್ತಕಗಳ ಸಣ್ಣ ಮಾರಾಟ ಪ್ರದರ್ಶನಕ್ಕೆ ಅಂಗಡಿಯ ನನ್ನ ಬಲಗೈ – ಶಾಂತಾರಾಮ ಸಜ್ಜುಗೊಂಡಿದ್ದ. ಅವನ ಎದುರಿಗೆ ಮೊಂಟೆಪದವಿನ ಹೋಟೆಲ್ ಬಾಬು ನಮ್ಮ ಕ್ಯಾಂಟೀನ್ ನಿರ್ವಣೆಯಲ್ಲಿ ನಿರತನಾಗಿದ್ದ. ವೈಭವ ಇಲ್ಲ, ಆದರೆ ಹೊಟ್ಟೆಗಟ್ಟಿಗೆ ಅವಲಕ್ಕಿ, ಉಪ್ಪಿಟ್ಟು, ಬನ್ನು, ಬಾಳೇಹಣ್ಣು, ಮಜ್ಜಿಗೆ, ಕಾಪಿ, ಚಾ ತಿಂದಷ್ಟೂ (ಅದನ್ನು ಕೆಲವು ಪ್ರತಿಷ್ಠಿತರು ‘ಕೇಳಿದಷ್ಟೂ’ ಎಂದು ಅವರ ಅನುಕೂಲಕ್ಕೆ ತಿದ್ದಿಕೊಂಡು ಪಂಟಿಬಿರಿಯ ತಿಂದದ್ದಲ್ಲದೆ ಬನ್ಸು ಕಟ್ಟಿಕೊಂಡು ಹೋದದ್ದನ್ನು ಹೇಳದಿರಲಾರೆ) ಉಚಿತವಾಗಿ ಕೊಡಲು “On your mark” ಆಗಿದ್ದ. ಪ್ರೇಕ್ಷಾಂಗಣದಲ್ಲಿ ದಪ್ಪ ತಾರ್ಪಾಲನ್ನು ಹರಡಿದ್ದಲ್ಲದೆ, ಪ್ರಾಯಸ್ಥರಿಗೆ ಅಥವಾ ಸೊಂಟಬಾಗದವರಿಗೆ ಒಂದು ಬದಿಯಲ್ಲಿ ಇಪ್ಪತ್ತು ಮೂವತ್ತು ಕುರ್ಚಿಗಳನ್ನೂ ಹಾಕಿದ್ದೆವು. ರಂಗ, ಚೌಕಿಗಳಲ್ಲಿ ನಮ್ಮ ಜವಾಬ್ದಾರಿಯನ್ನಷ್ಟೂ ಚೊಕ್ಕ ಮಾಡಿದೆವು. ‘ಕಾಡ್ಮನೆ’ಯೊಳಗೆ ಇರುವ, ಬರಬಹುದಾದ ಜನರ ಲೆಕ್ಕಾಚಾರದಲ್ಲಿ (ನನ್ನ ಹೆಂಡತಿ) ದೇವಕಿ, ನನ್ನಮ್ಮನ ಸಹಾಯದಲ್ಲಿ (ಸುಮಾರು ಮೂವತ್ತು ಮಂದಿಗೆ) ಅಡುಗೆ ಮಾಡಿ ಮುಗಿಸುವುದರೊಳಗೆ ನಮ್ಮ ರಾಗ ಸುರುವಾಗಿತ್ತು “ದೊಡ್ಡ ಬಟ್ಟಲಮ್ಮಾ ದೊಡ್ಡ ಬಟ್ಟಲೂ.”

ಎರಡೂವರೆ ಮೂರಕ್ಕೆ ರಾಘವ ನಂಬಿಯಾರರ ‘ಮೇಳ’ ಬಂದೇಬಿಟ್ಟಿತು. ರಂಗದ ಪಕ್ಕದಲ್ಲಿ ದೀವಟಿಗೆಗಳ ಕಾಲು ಹುಗಿದು, ವೇದಿಕೆಯ ಹಿನ್ನೆಲೆಯಲ್ಲಿ ಮಡಚಿ ತಂದಿದ್ದ ‘ಯಕ್ಷ-ರಥ’ವನ್ನು ಸ್ಥಾಪಿಸಿ ಚೌಕಿ ಸೇರಿಕೊಂಡರು. ಮೈಕಿನವರು ಚೌಕಿಯ ದೀಪಗಳನ್ನು ಜೋಡಿಸಿ ಕೊಟ್ಟು, ರಂಗದ ಕಂಬಗಳಲ್ಲಿ ಮೈಕ್ ಹುಗಿಯುವ ಕೆಲಸವನ್ನೂ ಸಕಾಲಕ್ಕೆ ಮುಗಿಸಿದ್ದರು. ನೋಡನೋಡುತ್ತಿದ್ದಂತೆಯೇ ನಡೆದು ಬಂದರು, ಬಸ್ಸಿನಿಂದಿಳಿದು ಬಂದರು, ಬೈಕು ಕಾರುಗಳೇರಿ ಬಂದರು. ಇದು ಪಾಣಾಜೆಯಿಂದ ದೇವಕಿಯ ತೌರುಮನೆಯ ತಂಡ, ಇದು ಮಡಿಕೇರಿಯಿಂದ ನನ್ನ ಚಿಕ್ಕಪ್ಪಂದಿರ ಬಳಗ, ಇದು ಬೆಳ್ತಂಗಡಿಯ ಗೋಖಲೆ ಮತ್ತು ಮಿತ್ರರು, ಇದು, ಇದು ಎನ್ನುತ್ತಿದ್ದಂತೆ ಎರಡು ಕಾರಿನಲ್ಲಿ ತೇಜಸ್ವಿ ಬಳಗವೂ ಬಂದೇ ಬಿಟ್ಟಿತು. ಇದೇನೋ ಕಾಟಾಚಾರದ ಸಭೆಯಲ್ಲ, ನಮ್ಮದೇ ಅಶಯಗಳ ಸಣ್ಣ ಅಭಿವ್ಯಕ್ತಿ ಎನ್ನುವ ಪ್ರೀತಿಯಲ್ಲಿ ಮೈಸೂರಿನಿಂದ ಶ್ರೀರಾಮ್ ದಂಪತಿಯನ್ನೂ ಕರೆಸಿಕೊಂಡು ಪತ್ನೀ ಮತ್ತು ಚಿಕ್ಕಮಗಳೂರಿನ ಬಲು ಕ್ರಿಯಾಶಾಲಿ ವನ್ಯಮಿತ್ರ ಗಿರೀಶ್ ಸಹಿತ ಪೂರ್ಣಗೊಂಡಿದ್ದರು ತೇಜಸ್ವಿ. ಮೂಡಿಗೆರೆಯಿಂದ ನೇರ ಬಂದವರು ಉಪಾಹಾರವನ್ನು ರುಚಿಸಿಕೊಂಡು, ಕಾಡ್ಮನೆ ನೋಡಿ ಸಭೆಯಲ್ಲಿ ಒಂದಾದರು.

ಚಿಣ್ಣಪ್ಪ ತಮ್ಮದೇ ವ್ಯಾನಿನಲ್ಲಿ (ಚಾಲಕನಿದ್ದ) ಮಂಗಳೂರಿಗೆ ಬಂದವರು, ಹೋಟೆಲಿನಲ್ಲಿ ರೂಮು ಹಿಡಿದು, ಬಳಲಿಕೆ ನೀಗಿ, (ಅಡ್ಡೂರು) ಸೂರ್ಯ(ನಾರಾಯಣ ರಾವ್)ನನ್ನು ಜೊತೆಮಾಡಿಕೊಂಡು ಸಕಾಲಕ್ಕೆ ಬಂದರು. ಕುರುಚಲು ಕಾಡಿನ ನಡುವಣ ರಾಜಬಿದಿರಿನಂತೆ ಯಾವ ದಿಕ್ಕಿನಿಂದ ನೋಡಿದರೂ ಚಿಣ್ಣಪ್ಪ! ನನ್ನ ತಂದೆಗೆ ಆಗಿನ್ನೂ ಎಪ್ಪತ್ತೈದರ ಹರಯ, ಆರೋಗ್ಯದ ವಿಶೇಷ ಸಮಸ್ಯೆ ಏನೂ ಇರಲಿಲ್ಲವಾಗಿ ಒಟ್ಟು ವ್ಯವಸ್ಥೆಯ ಗೌರವ ಮುಖ್ಯನಾಗಿ ಎಲ್ಲರಲ್ಲೂ ಎಲ್ಲದರಲ್ಲೂ ಉತ್ಸಾಹ ಮೂಡಿಸುತ್ತಿದ್ದರು. ಚಿಣ್ಣಪ್ಪರೊಡನೆ ಭೇಟಿ ಪ್ರಥಮವಾದರೇನು ನಂಗಡ (ನಮ್ಮ) ಕೊಡಗಿನವರೇ ಅಲ್ಲವೇ ಪಟ್ಟಾಂಗಕ್ಕೆ ಗಡಿಯಿರಲಿಲ್ಲ.

ಅಕ್ಷರಶಃ ಶತಾವಧಾನಿ, ಮೂರು ಭಾಷೆಗಳಲ್ಲಿ ಅಸಂಖ್ಯ ಅಷ್ಟಾವಧಾನ ನಡೆಸಿದ ಗಣೇಶ್ ಔಪಚಾರಿಕ ವಿದ್ಯಾರ್ಹತೆಯಾಗಿ ಗಳಿಸಿದ್ದು ತಂತ್ರವಿದ್ಯೆಯಲ್ಲಿ ಸ್ನಾತಕೋತ್ತರ ಪದವಿ (PG in Metallurgy)! ಸಾಮಾನ್ಯರಲ್ಲಿ ಸಾಮಾನ್ಯನಂತೆ ಕಾಣುವ ಮತ್ತು ಇರುವ, ಕೇಳುವ, ಕೇಳಿಸಿಕೊಳ್ಳುವ ಗಣೇಶರು ಅಮೆರಿಕಾದ ಅಕ್ಕ ಸಮ್ಮೇಳನಕ್ಕೆ ಹೋದದ್ದು ‘ಕೇಳಿ’ ಹೊಡೆಯುವಾಗಲೇ ಹೇಳಿದ್ದೆ. ಅಲ್ಲಿ ಗಣೇಶರ ವಿದ್ವತ್ತಿಗೆ, ಮಾತಿಗೆ, ಎಲ್ಲಕ್ಕೂ ಮುಖ್ಯವಾಗಿ ವ್ಯಕ್ತಿತ್ವಕ್ಕೆ ಜನ ಮರುಳಾದ್ದರಿಂದ ಪ್ರಾಯೋಜಿಸಿದ ಕರ್ನಾಟಕ ಸರಕಾರದ ಸಂಸ್ಕೃತಿ ಇಲಾಖೆ ಇವರನ್ನು ಅಕ್ಷರಶಃ ಊರೂರು ತಿರುಗಿಸ ತೊಡಗಿತು. ಆದರೆ ಕೇವಲ ನಮ್ಮೊಳಗಿನ ಆತ್ಮೀಯತೆಯ ಬಂಧ ಇವರನ್ನು ನವೆಂಬರ್ ಮೂರಕ್ಕೆ ಬೆಂಗಳೂರಿಗೆ ತಂದು ಐದರ ಬೆಳಿಗ್ಗೆ ಮಂಗಳೂರಿಗೆ ಮುಟ್ಟಿಸಿತ್ತು. ಆಗಿನ್ನೂ ನನಗೆ ಪರಿಚಯದ ಪ್ರಾಥಮಿಕ ಹಂತದಲ್ಲಿದ್ದ ಡಾ| ಮನೋಹರ ಉಪಾಧ್ಯರು ಗಣೇಶರ ಆ ಬಾರಿಯ ಮಂಗಳೂರು ಓಡಾಟದ ಪೂರ್ಣ ಜವಾಬ್ದಾರಿಯನ್ನು ಅಯಾಚಿತವಾಗಿ, ಒತ್ತಾಯಪೂರ್ವಕವಾಗಿ ನನ್ನಿಂದ ವಹಿಸಿಕೊಂಡಿದ್ದರು. ಅಮೆರಿಕಾ ಪ್ರಯಾಣಾಯಾಸ ಮುಗಿಯುವ ಮುನ್ನ ಮಂಗಳೂರು ರಾತ್ರಿಯಾತ್ರೆ. ಆದರೂ ಸಕಾಲಕ್ಕೆ ಸಹಜವಾಗಿ ಗಣೇಶ್ ಅಭಯಾರಣ್ಯದಲ್ಲಿದ್ದರು.

ಸಂಜೆ ನಾಲ್ಕಕ್ಕೆ ಹಿಮ್ಮೇಳದವರು ಡಾಮರು ದಾರಿಯ ಪಕ್ಕಕ್ಕೆ ಹೋಗಿ ‘ಕೇಳಿ’ ಹೊಡೆದರು. ನಾಲ್ಕೂವರೆಗೆ ರಂಗದ ಮೇಲೆ ಮಂಗ, ಕ್ಷಮಿಸಿ, ನಾನು. ಲೆಕ್ಕ ಹಾಕಿ ಎರಡೇ ಮಾತು – ನಮಸ್ಕಾರ, ಸ್ವಾಗತ. ಆಶಯ ಗೀತೆ – ರಚನೆ ಶತಾವಧಾನಿ ರಾ ಗಣೇಶ. ಶಿಷ್ಯೆಗಾಗಿ ರಾಗಬದ್ಧಗೊಳಿಸಿದವರು ವಿದ್ವಾನ್ ಶ್ರೀನಾಥ್ ಮರಾಠೆ. ಪ್ರಸ್ತುತಿ ಮೇಘಾ. ಮೊದಲು ಒಟ್ಟು ಸಭೆಯ ಆಶಯವನ್ನು ಮೇಘಾ ತನ್ನ ಮಧುರ ಕಂಠದಲ್ಲಿ ಗಮಕದ ಮೂಲಕ ಬಿಡಿಬಿಡಿಯಾಗಿ ಕೊಟ್ಟಳು:

ಉಂಡು ಬಿಸುಡುವ ಎಂಜಲೆಲೆಯಲ್ಲವೀ ಪ್ರಕೃತಿ ಕೊಂಡು ಕಾಪಿಡುವ ಹೊಂದಳಿಗೆ ದಿಟದಿ. ಹಿರಿಯರುಳಿಸಿದ ಸಿರಿಯ ಕಿರಿಯರಿಗೆ ಸರಿಯಾಗಿ ದೊರಕಿಪುದೇ ನಮಗಿರ್ಪ ಸುಕೃತಿ ಜಗದಿ. ಸಂಜೆ ಸೂರ್ಯ ಗುಡ್ಡದ ಕಚ್ಚಾ ಆದರೆ ಸ್ವಚ್ಚ ನೆಲದಲ್ಲಿ ಹರಡಿ ಕುಳಿತ ಸಭಾಸದರ ಬೆನ್ನು ಕಾಯಿಸುತ್ತಿದ್ದಂತೆ ಕಲಾವಿದೆಯನ್ನು ಬೆಳಗುತ್ತಿತ್ತು. ಪಶ್ಚಿಮದ ಗಾಳಿ ಸುಳಿಯುತ್ತಿರುವಾಗ, ಹಿನ್ನೆಲೆಯೇನು ಒಟ್ಟು ಪರಿಸರವೇ ನೈಜ ಹಸುರಿನಲ್ಲಿ ನಲಿಯುತ್ತಿತ್ತು. ಸಹಜವಾಗಿ ಆಶಯದ ಸಾಲುಗಳು ಶ್ರೋತೃಗಳನ್ನು ಅರ್ಥದ ಹೊಸ ಮಜಲಿಗೆ ಏರಿಸಿತ್ತು. ಅದು ಹುಸಿಯಾಗದಂತೆ ಪಲ್ಲವಿ ಹಿಂಬಾಲಿಸಿತು, ವಿವಿಧ ಅರ್ಥಛಾಯೆಗಳಲ್ಲಿ, ಭಾವ ಉದ್ದೀಪನಗಳಲ್ಲಿ ಕಾಡಿತು:

ಪರಿಸರ-ಪರ-ವಾದ ಮಾನವ
ಪರಮ-ಪೂಜ್ಯ-ವೇದ
ವಸುಮತಿ-ಸಂವಾದ
ರಸಗತಿಗನುವಾದ ||ಪ||

ಚರಣಗಳಾದರೋ ಶ್ರವಣ ಸುಖಧಾರೆಗಳಾಗಿ ಕೇಳುಗರನ್ನು ಧನ್ಯತೆಯಲ್ಲಿ ತೊಯ್ಯಿಸಿತು, ಮುಂದಿನ ಕಲಾಪಗಳಿಗೆ ವಿನೀತರನ್ನಾಗಿಸಿತು:

ನೆಲ-ಮುಗಿಲುಗಳಿಗೆ ಜಲಾನಿಲಗಳಿಗೆ
ತರುಲತೆ-ಖಗಮೃಗ ಸಂಕುಲಕೆ
ಜೀವ-ಸಂತುಲನ-ಭಾವ ಸಂಚಲನ
ತೀವಲೆಂದು ನಾವೆಂದೆಂದು ||೧||

ಬದುಕಿ-ಬದುಕಿಸುವ ಉಳಿಸಿ-ಬೆಳೆಯಿಸುವ
ಹದವನು ಕಾಣುವ ನವೋದಯ
ಜೀವಮಣಿಗಳನು ವಿಶ್ವಸೂತ್ರದಲಿ
ಹೆಣೆಯುವ ಸಂಸ್ಕೃತಿ ಶುಭೋದಯ ||೨||

ಬೆಟ್ಟದ ಬುಡದಲಿ ಹುಲ್ಲಾಗಿ
ಕಡಲ ಕರೆಯಲ್ಲಿ ಕಲ್ಲಾಗಿ
ಜೇಡರ ಬಲೆಯಲಿ ಹಿಮಮಣಿಯಾಗಿ
ತರುತಲದಲಿ ತರಗೆಲೆಯಾಗಿ
ನದಿಯ ಮರಳಾಗಿ ಮುಗಿಲ ಮಿಂಚಾಗಿ
ಜಗವನುಳಿಸೆ ನಾವ್ ನಮಗಾಗಿ ||೩||

ಮಾತು ಮೂಕವಾಗುವ ಸನ್ನಿವೇಶ. ಸಹಜವಾಗಿ ತೇಜಸ್ವಿ ಅಲಂಕಾರದ ಮಾತುಗಳಿಂದ ದೂರ ನಿಂತು ಪರಿಸರ ವಿನಾಶದ ಇಂದಿನ ಪರಿಸ್ಥಿತಿಗೆ ಗಾಢ ವಿಷಾದವನ್ನು ವ್ಯಕ್ತಪಡಿಸಿದರು. ಈ ದುರವಸ್ಥೆಯ ಒಂದು ಭಾಗ ನಮ್ಮೊಳಗೇ ಇದೆಯೇನೋ ಎಂದನ್ನಿಸುತ್ತದೆ ಎಂದ ಅವರು ಒಂದೆಡೆ ಪ್ರಶಸ್ತಿ ಕೊಡುತ್ತಾ ಇನ್ನೊಂದೆಡೆ ಅವರಿಗೇನು ತಿಳಿದಿದೆ ಎಂದು ಪ್ರಶ್ನಿಸುವ ಸರಕಾರದ ಧೋರಣೆಯನ್ನು (ಶಿವರಾಮ ಕಾರಂತರ ಪ್ರಸಂಗವನ್ನು ಉದಾಹರಿಸಿದರು) ಗೇಲಿ ಮಾಡಿದರು. ಎಲ್ಲ ಊರುಗಳು ಇಂದು ಹಾಳಾಗುತ್ತಿರುವ ಪರಿಯನ್ನು ಅವರದೇ ಶೈಲಿಯಲ್ಲಿ “ಒಂದು ಕಾಲದಲ್ಲಿ ಮಲೆನಾಡಿನ ಮಡಿಲಲ್ಲಿ ಸುಂದರ ಊರಾಗಿದ್ದ ಮೂಡಿಗೆರೆ ಈಗ ಇಡಿಯಾಗಿ ಒಂದು ಗುಜರಿಯಾಗಿದೆ. ಮುರಿದ ಕಾರುಗಳು, ಹರಕು ಕಟ್ಟಡಗಳು, ಕಸ ಕುಪ್ಪೆ…” ಎಂದು ಹೇಳಿದಾಗ ಸಭೆ ಒಮ್ಮೆ ನಕ್ಕರೂ ತಂತಮ್ಮ ಊರುಗಳು, ಬಾಲ್ಯದ ಮಧುರ ನೆನಪುಗಳೂ ಅಂಥದ್ದೇ ಭಗ್ನ ಕುಪ್ಪೆಗಳಾಗಿರುವುದನ್ನು ನೆನೆಸಿಕೊಂಡು ಗಂಭೀರವಾಯ್ತು.

ಚಿಣ್ಣಪ್ಪ ವೇದಿಕೆಗೆ ಬಂದರೆ (ಕಾರ್ಯರಂಗದಲ್ಲೂ) ಉಗ್ರ ‘ಮಿಶನರಿ.’ ಅವರು ಕೇಳಲು ಕುಳಿತವರನ್ನೂ ಕೃತಕ ಪ್ರಗತಿಪರತೆಯ ಭಾವದೊಳಗೆ ಕಳೆದುಹೋಗಲು ಬಿಡದೆ ಬಾರಿಸುತ್ತಾರೆ. ಗಾಳಿ, ನೀರು ನಮ್ಮ ಆಜನ್ಮ ಹಕ್ಕು. ನೀರಿಗೆ ಹಣ ಕೊಡುವ ಸ್ಥಿತಿಗೆ ನಾವೀಗಾಗಲೇ ಬಂದಿದ್ದೇವೆ. ಕಾಡು, ಪರಿಸರಗಳನ್ನು ರಕ್ಷಿಸಿಕೊಳ್ಳದಿದ್ದರೆ ಗಾಳಿಗೂ ಹಣ ಕೊಡಬೇಕಾಗುತ್ತದೆ. ಸಕಲ ಜೀವರಾಶಿಗಳ ಕೊನೆಯಲ್ಲಿ ಬಂದವನು ಮನುಷ್ಯ. ಬಹು ಹಿಂದೆಯೇ ಇದ್ದು, ಇಂದಿಗೂ ಚೆನ್ನಾಗಿದೆ ಎನ್ನುವ ನೆಲ, ಜಲ, ಕಾಡಿನ ಪರಿಸರಕ್ಕೆ ಬಾಯಿಯಾಗಿ ಮೂಡಿದವನು ಈತ. ಸಾಂಪ್ರದಾಯಿಕ, ವೈದಿಕ ಕ್ರಮಗಳು ಪ್ರಕೃತಿ ಆರಾಧನೆಯನ್ನು ಬಿಟ್ಟು ಇಲ್ಲ. ಆದರೆ ಇಂದು ಒಂದೆಡೆ ಗಣಪತಿಗಾಗಿ ಗುಡಿಕಟ್ಟುತ್ತಾ ಇನ್ನೊಂದೆಡೆ ಆನೆಗಳ ಕಗ್ಗೊಲೆಯಾಗುತ್ತಿರುವುದನ್ನು ಕಾಣುತ್ತೇವೆ. ಗಂಗೆಯ ನೀರು ಕುಡಿಯುವುದಿರಲಿ ಮುಟ್ಟಲೂ ಬಾರದಷ್ಟು ಹೊಲಸಾಗಿದೆ. ಜೀವರಾಶಿಯಿರುವ ಗ್ರಹ ಇದೊಂದೇ. ಈ ವೈವಿಧ್ಯವನ್ನು ಸಂಕೇತಿಸುವ ಕಾಡು ಕಳೆದರೆ ಎಲ್ಲಾ ಕಳೆಯಿತು. ವಿನಾಶಕಾರಿಯಾದ ಮನುಷ್ಯನ ಸೃಷ್ಟಿಯಾಗದಿದ್ದರೇ ಉತ್ತಮವಿತ್ತು ಎಂದು ಗಟ್ಟಿಸಿ ಹೇಳಿದರು ಚಿಣ್ಣಪ್ಪ. ಕರೆ ಕೊಡುವ, ಉಪದೇಶ ಮಾಡುವ, ಆತ್ಮರತಿಯಲ್ಲಿ ಕಳೆದುಹೋಗುವ (When I was in Nagarahole…) ಪುಡಾರಿಗಿರಿ ಮಾತುಗಳು ಬರಲೇ ಇಲ್ಲ! ‘ನಾನು ಶ್ರೇಷ್ಟ’ತನವನ್ನು ಎಲ್ಲೂ ಮೆರೆಸದೆ ಚಿಣ್ಣಪ್ಪ ಮಾತು ಮುಗಿಸಿದಾಗ ಒಮ್ಮೆಗಾದರೂ ಎಲ್ಲರೂ ಪ್ರಾಮಾಣಿಕವಾಗಿ ಪರಿಸರ ಸಂರಕ್ಷಣೆಯ ಸಂಕಲ್ಪ ಮನಸ್ಸಿನಲ್ಲೇ ತೊಟ್ಟಿದ್ದರೆ ಆಶ್ಚರ್ಯವಿಲ್ಲ.

ಗಣೇಶರದ್ದು ಸುಮಾರು ಒಂದೂವರೆ ಗಂಟೆಯ ಅಖಂಡ ವಿಷಯ ಮತ್ತು ಮನೋಹರ ಮಾತಿನ ಮಾಲೆ. ವಿಷಯ – ಭಾರತೀಯ ಪುರಾಣಗಳಲ್ಲಿ ಜೀವಿ ವೈವಿಧ್ಯ, ವನ್ಯ ಮತ್ತು ಪರಿಸರ ಪರಿಕಲ್ಪನೆಗಳು. ಅದನ್ನು (ಹಿಂಬಾಲಿಸಲಿದ್ದ ಯಕ್ಷಗಾನಕ್ಕಾಗಿ) ನನ್ನ ಸಂಘಟನಾ ಓಡಾಟಗಳ ಅನಿವಾರ್ಯತೆಯಲ್ಲಿ ಗಟ್ಟಿ ಕುಳಿತು (ಅವ)ಧರಿಸಲು ಸಾಧ್ಯವಾಗಲಿಲ್ಲ. ಆದರೇನು ಪತ್ರಕರ್ತತನಕ್ಕಿಂತಲೂ ನಿಸ್ವಾರ್ಥ ವೈಯಕ್ತಿಕ ಸ್ನೇಹಾಚಾರಗಳಲ್ಲಿ ಬಲು ಪ್ರಿಯರಾದ ಮಂಜುನಾಥ ಭಟ್ಟರು ಸಭೆಯಲ್ಲಿದ್ದರು. ಅವರು ಗಣೇಶರ ಮಾತುಗಳನ್ನು ಸುಂದರವಾಗಿ ಸಂಗ್ರಹಿಸಿ, ಉದಯವಾಣಿಯಲ್ಲಿ ವರದಿಮಾಡಿದ್ದು ಇಂದಿಗೂ ನನಗೊಂದು ಅಮೂಲ್ಯ ದಾಖಲೆ. ಅದರ ಔಪಚಾರಿಕ ತಲೆಬಾಲಗಳನ್ನು ಕಳಚಿ, ಕೇವಲ ಆಣಿಮುತ್ತಿನ ಮಾಲೆಯನ್ನಷ್ಟೇ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.

  1. ಅಥರ್ವ ವೇದ, ಒಂದು ಗಿಡವನ್ನು ಕೀಳುವ (ಮರವನ್ನು ಕಡಿಯುವ) ಮುನ್ನ ಏಳು ಗಿಡಗಳನ್ನು ನೆಡಬೇಕು ಎನ್ನುತ್ತದೆ.
  2. ಕಲ್ಪಸೂತ್ರದ ಧರ್ಮಸೂತ್ರ ಸಮುದ್ರಯಾನದ ನಿಷೇಧಕ್ಕೆ ಮುಖ್ಯ ಕಾರಣವಾಗಿ ಉಗುಳು, ಮಲ, ಮೂತ್ರಾದಿಗಳನ್ನು ಸಮುದ್ರಕ್ಕೆ ಬಿಡುವ ಅನಿವಾರ್ಯತೆಯನ್ನು ಉಲ್ಲೇಖಿಸುತ್ತದೆ,
  3. ಮನುಸ್ಮೃತಿ, ಹೊಲತೋಟಗಳಲ್ಲಿ ಕಲ್ಲು ಮುಳ್ಳುಗಳನ್ನು (ಮುಂದುವರಿದು ಕೂದಲು ಎಲುಬುಗಳನ್ನೂ) ಎಸೆಯುವುದರ ಕುರಿತು ವಿರೋಧ ದಾಖಲಿಸುತ್ತದೆ.
  4. ಮರಕ್ಕೆ ಹಿಂಸೆಯುಂಟುಮಾಡುವುದು, ಕೆರೆಬಾವಿಗಳನ್ನು ನಾಶಪಡಿಸುವುದು ಧರ್ಮಶಾಸ್ತ್ರದ ಪ್ರಕಾರ ಉಪಪಾತಕಗಳು.
  5. ಭೂಗರ್ಭದ ಖನಿಜಗಳನ್ನು ತೆಗೆದು ಬರಿದು ಮಾಡುವುದು, ಮಹಾಯಂತ್ರ ಪ್ರವರ್ತನಗಳು (ಉದಾ: ಅಣೆಕಟ್ಟು, ಸ್ಥಾವರಗಳು) ಅನಾಹುತಕಾರಿಗಳೆನ್ನುತ್ತದೆ ಮನುಸ್ಮೃತಿ.
  6. ವನ ಎನ್ನುವಲ್ಲಿನ ವಿವರಗಳು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿದೆ. ಸ್ಥಳೀಯ ಪರಿಸರಕ್ಕೆ ವಿಜಾತೀಯ ಸಸ್ಯ ಹಾನಿಕಾರಕ ಎಂಬ ಅರಿವು ಆ ಕಾಲದಲ್ಲೇ ಇತ್ತು.
  7. ರಾಜಮಾನಸೋಲ್ಲಾಸದಲ್ಲಿ ಮೀನುಕೋಳಿಗಳ ಸಾಕಣೆಯ ವಿವರಗಳಿವೆ. ಅದರ ನಿಬಂಧವೂ ಹದಿನೆಂಟನೇ ಶತಮಾನದವರೆಗೂ ಇದ್ದದ್ದು ಸಾಕ್ಷರರಾದ ರಾಕ್ಷಸರಿಂದ ಹಾಳಾಯಿತು ಎಂಬ ವಿವರಣೆಯೂ ಅಲ್ಲಿದೆ.
  8. ಭಾಗವತ ಪುರಾಣಗಳ ರಾಜ; ಅದೊಂದು ವಿಶ್ವಕೋಶ. ಅದರಲ್ಲಿ ಮರ ದೊಡ್ಡದಾಗಿ ಬೆಳೆದು ನಮಗೆ ರಕ್ಷಣೆ ಕೊಡುವಂತೆ ಮನುಷ್ಯ ಬಾಳಬೇಕು ಎನ್ನುವ ಮಾತು ಕೄಷ್ಣನಿಂದಲೇ ಬರುತ್ತದೆ. ಭಾಂಡೀರ ವೃಕ್ಷದ (ವಟವೃಕ್ಷ) ವಿವರಗಳು ಅದರಲ್ಲಿ ಅನೇಕವಿವೆ. ಪುತಿನ ಅದನ್ನು ಗಂಭೀರವಾಗಿ ಗಮನಿಸಿ ತಮ್ಮ ಶ್ರೀಹರಿಚರಿತ್ರೆಯಲ್ಲಿ ವಿಸ್ತಾರವಾಗಿ ಬಳಸಿದ್ದಾರೆ.
  9. ಕೃಷ್ಣನ ಗೋವರ್ಧನೋದ್ಧರಣ ಪರಿಸರಕ್ಕೆ ಸಂಬಂಧಿಸಿ ಮಹತ್ವದ್ದು. (ನೋಡಿ: ಹರಿವಂಶ) ಬೆಟ್ಟ ಗುಡ್ಡ, ಮರ ಹುಲ್ಲುಗಳ ಸಂಬಂಧ, ಮಹತ್ವ, ಶಕ್ತಿಯ ಪಿರಮಿಡ್ ಎನ್ನುವ ಕಲ್ಪನೆ ತುಂಬಾ ಸುಂದರವಾಗಿ ಚಿತ್ರಿತವಾಗಿದೆ.
  10. ಶರದೃತುವಿನಲ್ಲಿ ಮಾತ್ರ ಬೇಟೆಯಾಡಬಹುದೆಂಬುದು ನಿಯಮ. ಅಲ್ಲೂ ನಿರ್ಬಂಧದ ಪಟ್ಟಿ ದೊಡ್ಡದಿದೆ.
  11. ಮಹಾಭಾರತದ ಖಾಂಡವ ದಹನ ವಿವೇಕ-ಅವಿವೇಕಗಳ ಮಿಶ್ರಣ. ಊರು ಮಾಡಲು ಕಾಡು ಸುಡುವುದು, ಕಾಡಿಲ್ಲದೆ ಸರ್ಪ ಊರು ಸೇರುವುದು ಇಂದೂ ನಾವನುಭವಿಸುತ್ತಿದ್ದೇವೆ.
  12. ದುರ್ಯೋಧನ ಜನಪ್ರಿಯತೆಗಾಗಿ ಮಳೆ ನೀರಾಶ್ರಿತ ಭೂಮಿಗೆ ನೀರಾವರಿ ಕಲ್ಪಿಸಿ, ತೋಟಗದ್ದೆಗಳನ್ನು ವಸತಿ ನೆಲಗಳನ್ನಾಗಿಸಿ, ಕಾಡನ್ನು ಕೃಷಿಭೂಮಿಯಾಗಿಸಿ ಪರಿಸರ ಅಸಮತೋಲನ ಉಂಟು ಮಾಡಿದ ವಿವರ ಮಹಾಭಾರತದಲ್ಲಿದೆ.
  13. ಸಸ್ಯ ಹಾಗೂ ಪ್ರಾಣಿಗಳು ಹಿಂದೂ ಆಚರಣೆಗಳ, ಜೀವನಕ್ರಮದ ಅವಿಭಾಜ್ಯ ಅಂಗಗಳು. ಧರ್ಮಶಾಸ್ತ್ರದಲ್ಲಿ ಏಳ್ನೂರಕ್ಕೂ ಮಿಕ್ಕು ವ್ರತಗಳಿದ್ದು, ಅವುಗಳಲ್ಲಿ ಶೇಕಡಾ ಅರವತ್ತಕ್ಕು ಮಿಕ್ಕವು ಸಸ್ಯ, ಪ್ರಾಣಿ ಸಂಬಂಧಗಳನ್ನು ಹೊಂದಿವೆ.

ಒಂದು ಟಿಪ್ಪಣಿ. ಒಂದು ತಡವರಿಕೆಯಿಲ್ಲದ ಸುಮಾರು ಒಂದೂವರೆ ಗಂಟೆಯ ಜ್ಞಾನಸಲಿಲದಲ್ಲಿ ಎಲ್ಲರೂ ಮಿಂದೇಳುವಾಗ ಸುತ್ತಲೂ ಕತ್ತಲು, ರಂಗದ ಮೇಲೆ ದೀಪ ಬಂದಿತ್ತು. ವಿಷಯದ ಕುರಿತಂತೆ ಅಲ್ಲೂ ಅನಂತರದ ದಿನಗಳಲ್ಲೂ ನನಗೆ ಅನೇಕ ಪ್ರಶ್ನೆಗಳು ಪರಿಸರ ಕಾಳಜಿಯವರಿಂದ ಬಂದಿವೆ. ಅವನ್ನೆಲ್ಲ ಸಂಕಲಿಸಿ ಗಣೇಶರಿಗೆ ಮುಟ್ಟಿಸಿದ್ದೂ ಆಗಿದೆ. ಆದರೆ ಅವರ ಕಾರ್ಯ ಬಾಹುಳ್ಯದಲ್ಲಿ ಎಲ್ಲ ಸೇರಿ ಪರಿಷ್ಕಾರಗೊಂಡ ಪುಸ್ತಕ ಮೂಡಲು ಇನ್ನೂ (ಒಂಬತ್ತು ವರ್ಷಗಳನಂತರವೂ) ಕಾಲಕೂಡಿ ಬಂದಿಲ್ಲ!

ಮಂಗಳೂರು ವಿಶ್ವವಿದ್ಯಾನಿಲಯದ ಅಂದಿನ ಕುಲಪತಿ ಡಾ| ಗೋಪಾಲ್ ಆದಿಯಾಗಿ ಲೆಕ್ಕ ಹಿಡಿಯಲಾರದಷ್ಟು ಮಂದಿ ಗಣ್ಯಾತಿಗಣ್ಯರು ಯಾವುದೇ ಸ್ವಾಗತಕಾರನ ಚುಂಗು ಹಿಡಿಯದೆ, ಮುಂದಿನ ಸಾಲಿನ ಜಾಗ ಖಾಲಿಮಾಡಿಸದೆ ತಣ್ಣಗೆ ಬಂದು ಎಡೆ ಸಿಕ್ಕಲ್ಲಿ ತಾರ್ಪಾಲೋ ಬರಿಯ ನೆಲವೋ ಹಿಡಿದು ಎಲ್ಲ ಕಣ್ಣುಕಿವಿಯಾಗಿ ಕುಳಿತಿದ್ದದ್ದು ಕಲಾಪಗಳ ಸಾರ್ಥಕತೆಗೆ ಸಾಕ್ಷಿ. ಆತಿಥೇಯನ ನೆಲೆಯಲ್ಲಿ ನನ್ನ ಹೆಸರಿದ್ದರೂ ಎಲ್ಲ ರೀತಿಯಲ್ಲೂ ಅಂದಿಗೆ ನನ್ನ ತಂದೆ ಆಕರ್ಷಣೆಯ ಕೇಂದ್ರವಾಗಿದ್ದರು. ಮೇಘಾಳಿಗೆ ಮಾತಿನ ಶಹಭಾಸ್, ತೇಜಸ್ವಿ ಚಿಣ್ಣಪ್ಪ ಮತ್ತು ಗಣೇಶರ ಆಶಯಗಳಿಗೆ ಸ್ವಂತ ಅನುಭವದ ಬೆನ್ನುಮಾತು ಮತ್ತು ಅಭಿನಂದನೆಗಳ ನುಡಿಯನ್ನು ಕಾಲಕಾಲಕ್ಕೆ ತಂದೆ ವೇದಿಕೆಗೆ ಬಂದು, ಸ್ಮರಣಿಕೆ (ಯೋಗ್ಯತಾನುಸಾರ ಆಯ್ದ ಪುಸ್ತಕ ಮತ್ತು ದೊಡ್ಡ ನೇಂದ್ರ ಬಾಳೆಹಣ್ಣು!) ಸಹಿತ ಕೊಟ್ಟರು. ಅರರೆ, ರಂಗದ ಎಡಬಲದ ದೀವಟಿಗೆಗಳು ಉರಿಯತೊಡಗಿವೆ, ನೇಪಥ್ಯದ ಕತ್ತಲ ಪರದೆಯಲ್ಲಿ ಹಿಮ್ಮೇಳದ ಅಸ್ಪಷ್ಟ ಸಂಚಲನಗಳು ಕಾಣುತ್ತಿವೆ, ಚಂಡೆ ಹುರಿಗೊಳ್ಳುತ್ತಿದೆ, ಮದ್ದಳೆ ಗೋಟಿನ ಪೆಟ್ಟಿಗೆ ಸಮಶ್ರುತಿಗೊಳ್ಳುತ್ತಿದೆ, ಇನ್ನೇನು ಭಾಗವತರ ‘ಗಜಮುಖ…’ ಇಲ್ಲ, ಇಲ್ಲ, ನಿಲ್ಲಿ! ಆಟಕ್ಕೆ ಮುನ್ನ ಕೊಟ್ಟ ಈ ಸಭಾಕ್ಲಾಸ್ ನಿಮಗೆ ಹಿಡಿಸಿತೇ? ಅಥವಾ ಸಾರ್ವಜನಿಕಕ್ಕೆ ಉಚಿತ ಆಟ ಕೊಡುವ ಆವುಟದಲ್ಲಿ ಮೂರುಮೂರು ಪ್ರಾಯೋಜಕರನ್ನು ಹಿಂಡಿ, ಸಮ್ಮಾನದ ತಗಡೋ ಕೊರಡೋ ತೋರಿಸಿ ಕಲಾವಿದರನ್ನು ಮಂಕು ಮಾಡಿ, ಕಥಾನಕದ ನಡುವೆ File build ಮಾಡುವ, ಕೆಲವೇ ಮಿನಿಟೆಂದು ಎಂಬತ್ತರವರೆಗೂ ಲಂಬಿಸಿಯೂ ಕಲಾರಸಿಕರನ್ನು ಮತ್ತದದೇ ಕೃತಕ ಕ್ಷಮಾಯಾಚನೆಯಲ್ಲಿ ಸಮಾಧಾನಪಡಿಸುವ ಪುರಭವನದ ಸಭಾ ಕಾರ್ಯಕ್ರಮವೇ ಸರಿಯೇ? ನಿಮ್ಮ ಎಂದೋ ಎಲ್ಲೋ ಕಟ್ಟೆ ಕಟ್ಟಿಟ್ಟ ಅಸಹನೆಗಳಿಗಿದು ‘ದೂರುಪೆಟ್ಟಿಗೆ’ ಎಂದು ಗ್ರಹಿಸಿದರೂ ಸರಿ ಪ್ರತಿಕ್ರಿಯೆ ಬರೆದು ತುಂಬುವುದು ಮರೆಯಬೇಡಿ.