ಕೇಳಿ ಹೊಡೆದ್ರೀ, ಸಭಾಕ್ಲಾಸ್ ಕೊಟ್ರೀ, ನಿಜದ ದೀವಟಿಗೆ ಆಟ ಎಲ್ರೀ ಎನ್ನಬೇಡಿ. ಹಾಡು, ಭಾಷಣಗಳನ್ನಾದರೋ ನನ್ನ ಮಿತಿಯ ಲಿಖಿತ ಸಾಹಿತ್ಯದಲ್ಲಿ ಹಿಂದಿನೆರಡು ಕಥಾನಕಗಳಲ್ಲಿ ‘ಸುಧಾರಿಸಿದ್ದು’ ನಿಜ. ಅಂದ ಮಾತ್ರಕ್ಕೆ ಬಹುಮುಖೀ ಯಕ್ಷಗಾನ ಬಯಲಾಟಕ್ಕೆ ನಾನು ನೇರ ನುಗ್ಗುವುದು ಸರಿಯಾಗದು. ಹಾಗಾಗಿ ಅಂದಿನ ಪ್ರದರ್ಶನದ ಕುರಿತು ಸುಧಾ ವಾರಪತ್ರಿಕೆಯಲ್ಲಿ ನನ್ನ ಹೆಸರಿನಲ್ಲಿ ಪ್ರಕಟವಾದ (ಲಿಪಿಕಾರ ನಾ, ಕವಿ ನಂಬಿಯಾರ್) ಲೇಖನದ ಸಂಕ್ಷಿಪ್ತ ರೂಪವನ್ನು ಮೊದಲು ನಕಲಿಸುತ್ತೇನೆ.

ಚೌಕಿಪೂಜೆಯ ಆರತಿಯನ್ನು ಮೇಳವಾದನದೊಡನೆ ಮೆರೆಯಿಸಿ ತಂದ ಭಾಗವತ ರಂಗದ ಎದುರು ಇದ್ದ ಒಂದು ಬತ್ತಿಯ ಕಾಲು ದೀಪ ಮತ್ತು ಎರಡೂ ಮಗ್ಗುಲಿನ ಎರಡೆರಡು ದೀವಟಿಗೆಗಳನ್ನು ವಿಧಿಯುಕ್ತವಾಗಿ ಹೊತ್ತಿಸಿದರು. ಅನಂತರ ವೇದಿಕೆಯ ಹಿಂದಿನೆರಡು ಕಂಬಗಳ ನಡುವೆ ಮೇಳವಾದಕರೊಡನೆ ಹಂಚಿ ನಿಂತು ರಂಗದ ಹಿಂದಿನ ಪರದೆಯೇ ಆದರು. ನಿಜದ ಪರದೆ, ಹಿಮ್ಮೇಳಕ್ಕೆ ವಿರಮಿಸಲು ಭತ್ತ ಹೊಡೆಯುವ ಮಂಚ (ಪಡಿಮಂಚ)ವನ್ನು ನಿರಾಕರಿಸಿದ ಪ್ರಯೋಗ, ಸ್ವಾಭಾವಿಕ ಕತ್ತಲನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುತ್ತಿತ್ತು ಮತ್ತು ರಂಗದ ಆಳಕ್ಕೆ ಅಮಿತ ಸಾಧ್ಯತೆಗಳನ್ನೂ ಒದಗಿಸುತ್ತಿತ್ತು.

ಮೊದಲು ಪೂರ್ವರಂಗದ ಕೆಲವು ತುಣುಕುಗಳು. ಹಿರಿಯ ಮತ್ತು ಖ್ಯಾತ ಹಾಸ್ಯಗಾರ ಪೆರುವೊಡಿ ನಾರಾಯಣ ಭಟ್ಟರು ಕಟ್ಟು ಹಾಸ್ಯದ ಒಂದು ಮಾದರಿಯಾಗಿ ಮಲಯಾಳೀ ಪಂಡಿತರಾದರು. ಈ ಪಾತ್ರ ತನ್ನ ನಡೆ, ನುಡಿ ಮತ್ತು ವೇಷದೊಡನೆ ಚದುರಿದ್ದ ಪ್ರೇಕ್ಷಕ ಗಮನವನ್ನು ರಂಗಕ್ರಿಯೆಗೆ ಪೂರ್ಣ ಅನುಸಂಧಾನಗೊಳಿಸಿತು. ಮುಂದಿನ ಸರದಿ ಲಾಸ್ಯದ್ದು- ಇನ್ನೊಬ್ಬ ಹಿರಿಯ ಕಲಾವಿದ ಕೋಳ್ಯೂರು ರಾಮಚಂದ್ರರಾಯರಿಂದ ಸಾಂಪ್ರದಾಯಿಕ ಸ್ತ್ರೀವೇಷ. ಕೊನೆಗೆ ಹಾಸ್ಯಗಾರನ ಪ್ರಾತಿನಿಧ್ಯದಲ್ಲಿ ಮೇಳದ ಸ್ಥಳದ ದೇವಾದಿಗಳ ಹರಕೆ ಕೋರಿ ಕಥಾಮುಖಕ್ಕೆ ಬಂದರು. ಭಾಗವತ ಅಂದಿನ ಮೊದಲ ಮಾತುಗಾರ. ಯಕ್ಷಗಾನದ ಇತಿಹಾಸವನ್ನು ಪ್ರಯೋಗಮುಖದಲ್ಲಿ ಶೋಧಿಸುವ ಮಾತುಗಳೊಡನೆ ಪುರಾಣದ ಕಲ್ಪನಾಲೋಕಕ್ಕೆ ಸಭಿಕರನ್ನು ಒಯ್ದರು.

ಪ್ರಸಂಗ ಸೀತಾಪಹಾರ, ವಾಲಿವಧೆ. ಅಲ್ಲಿನದು ಪ್ರಖರವಲ್ಲದ ಏಕಸ್ರೋತವೂ ಅಲ್ಲದ ಬೆಳಕು. ಕತ್ತಲು ಬೆಳಕಿನ ನಡುವೆ ವೇಷಗಳು ಕಂಡೂ ಕಾಣದ ಭ್ರಮಾಲೋಕದೊಳಗಣ ಆಟ. ವೃತ್ತಿಪರ ಯಕ್ಷಕಲಾವಿದ ತಾರಾನಾಥ ವರ್ಕಾಡಿಯವರ ಉದ್ಗಾರ ಕೇಳಿ, “ವಿದ್ಯುದ್ದೀಪದ ಆಟ ನೋಡುವುದೆಂದರೆ ವೇಷಗಳನ್ನು ಬೆತ್ತಲು ಮಾಡಿದಂತೆ. ನಮ್ಮ ವೃತ್ತಿಮೇಳಗಳು ದೀವಟಿಗೆ ಪ್ರದರ್ಶನ ನೋಡಿಯಾದರೂ ಕನಿಷ್ಠ ಮಂದಬೆಳಕಿಗೆ ಪರಿವರ್ತನೆಗೊಂಡರೆ ಸಾಕಿತ್ತು.”

ವಿದ್ಯುದ್ದೀಪ ಇಲ್ಲದ ಕಾಲವೆಂದರೆ ಧ್ವನಿವರ್ಧಕವೂ ಇಲ್ಲ ಎಂದೇ ಅರ್ಥ. ಸಹಜವಾಗಿ ಭಾಗವತಾದಿ ಪಾತ್ರಧಾರಿಗಳು ಉಚ್ಚಕಂಠತ್ರಾಣಿಗಳಾಗಿರುತ್ತಿದ್ದರು. ರಂಗದ ಸುತ್ತುವರಿದ ಪ್ರೇಕ್ಷಕರಾದರೂ ನೂರಿನ್ನೂರು ಮೀರುತ್ತಿರಲಿಲ್ಲ. ಆದರೆ ಅಭಯಾರಣ್ಯದ ಸಭೆಯ ಬಾಹುಳ್ಯವನ್ನು ಅಂದಾಜಿಸಿ ಗುಪ್ತ ಧ್ವನಿವರ್ಧಕವನ್ನು ಅಳವಡಿಸಿದ್ದೆವು. ಧ್ವನಿ ಇಲ್ಲಿ ಅಖಂಡ ಮೌನದ ಅಥವಾ ನೈಜ ಪಾರಿಸರಿಕ ಧ್ವನಿಗಳ ಎತ್ತುಗಡೆಯಲ್ಲಿ ಹೊಮ್ಮುತ್ತಿತ್ತೇ ವಿನಾ ತಾನೇ ತಾನಾಗಿ ಮೆರೆದದ್ದಿಲ್ಲ; ಕರ್ಣಕಠೋರವಾಗಲೇ ಇಲ್ಲ. ದೀವಟಿಗೆ ಆಟದಲ್ಲಿ ದೀಪ ಧ್ವನಿಗಳು ಕಣ್ಣು ಕಿವಿಗಳ ಯೋಗ್ಯತೆಯನ್ನು ಸೂಕ್ಷ್ಮಗೊಳಿಸಬಲ್ಲವೇ ಹೊರತು ವ್ಯಗ್ರಗೊಳಿಸವು. ಒಂದೊಂದೂ ವೇಷಭೂಷಣ, ಹಾಡುನುಡಿ, ನಡೆನಟನೆಗಳಲ್ಲಿ ಪರಂಪರೆಯ ತತ್ತ್ವ, ನಂಬಿಯಾರರ ಅಧ್ಯಯನದ ಸ್ವತ್ವ ಹಿತವಾಗಿ ಬೆರೆತು ಪ್ರೇಕ್ಷಕರ ಸತ್ತ್ವ ಹೆಚ್ಚಿಸಿತು, ಇನ್ನೊಂದೇ ಇಂಥದ್ದು ಇನ್ನೆಂದು ಎಂಬ ಹಂಬಲಿಕೆ ಮೂಡಿಸಿತು.

ಯಾವುದೇ ಪ್ರದರ್ಶನಕ್ಕೆ ವೀಕ್ಷಕರು ಎಷ್ಟೋ ಕನಿಷ್ಠ ಅಷ್ಟೂ ಅಭಿಪ್ರಾಯಬೇಧಗಳು ಇದ್ದದ್ದೇ. ಇನ್ನು ಹಳೆಯದು ಶುದ್ಧ, ಪುನರುತ್ಥಾನ ಮಾಡುತ್ತೇನೆ, ಪ್ರಯೋಗ ಮಾಡುತ್ತೇನೆ ಎಂದೆಲ್ಲಾ ಹೊರಟವರಿಗೆ ತಲೆಗೆ ನಾಲ್ಕು ಟೀಕೆ, ಕಟಕಿ ಬಂದೇ ಬರುತ್ತದೆ, ಬಂತು. ಅವಕ್ಕೆ ಸಮಾಧಾನ ಕೊಡುವುದು ತೀರಾ ಸಣ್ಣ ಅಂಶ. ಇನ್ನೂ ಮುಖ್ಯವಾಗಿ ದೀವಟಿಗೆ ಪ್ರದರ್ಶನದ ಹಿಂದಿನ ಅಧ್ಯಯನ, ಚಿಂತನೆ ಮತ್ತು ಪ್ರದರ್ಶನಗಳ ಫಲಶ್ರುತಿಯಾಗಿ ಒಂದು ಪುಸ್ತಕವೇ ಬೇಕೆಂದು ನಾನು ರಾಘವ ನಂಬಿಯಾರರಿಗೆ ಒತ್ತಾಯ ತಂದೆ. ಅದನ್ನೂ ನಂಬಿಯಾರ್ ಸಮರ್ಥವಾಗಿ ನಿಭಾಯಿಸಿದರು. ಕೆಲವೇ ಸಮಯದಲ್ಲಿ ದೀವಟಿಗೆ ಪ್ರದರ್ಶನ ಮುಂದುವರಿಸುವ ಉತ್ಸಾಹಿಗಳಿಗೆ ಕೈಪಿಡಿಯೇ ಆಗುವಂತೆ ಆಯ್ದ ಛಾಯಾಚಿತ್ರ, ರೇಖಾಚಿತ್ರಗಳ ಸಹಿತ ಪುಸ್ತಕ ‘ದೀವಟಿಗೆ’ (ನಾನೇ ಅದರ ಪ್ರಕಾಶಕ, ಬೆಲೆ ಕೇವಲ ರೂ ಅರವತ್ತು) ಬೆಳಕಿಗೆ ಬಂತು.

ದೀವಟಿಗೆ ಪುಸ್ತಕದಲ್ಲಿ ರಾಘವ ನಂಬಿಯಾರ್ ಯಕ್ಷಗಾನದ ಇತಿಹಾಸ, ಆ ಕುರಿತ ಹಿಂದಿನ ಪುಸ್ತಕಗಳ ಉಲ್ಲೇಖ, ಹಿರಿಯ ಕಲಾವಿದರ ಸಂದರ್ಶನಗಳ ಬೀಸು ನೋಟದೊಡನೆ ತಾವು ೧೯೮೭ರಲ್ಲಿ ನೋಡಿದ ದೀವಟಿಗೆ ಆಟಕ್ಕೇ ನೇರ ಬರುತ್ತಾರೆ. ಮುಂದೆ ಅಷ್ಟೇ ಸಂಗ್ರಹವಾಗಿ ರಂಗದಲ್ಲಾದ ಗುಣಾತ್ಮಕ ಪ್ರಯೋಗಗಳ ಉಲ್ಲೇಖದೊಡನೆ ಪರಿಕಲ್ಪನೆ ಪಲ್ಲವಿಸುತ್ತದೆ. ನಂಬಿಯಾರ್ ತಮ್ಮ ದೀವಟಿಗೆ ಪ್ರಯೋಗಗಳಿಗಾಗಿ ಕಟ್ಟಿಕೊಂಡ ‘ಯಕ್ಷಕೌಮುದಿ’ ಬಳಗ ಮತ್ತು ಅದರ ಸಂಘಟನಾತ್ಮಕ ವಿವರಗಳನ್ನು ಸಂಕ್ಷಿಪ್ತವಾಗಿ ದಾಖಲಿಸಿ ನೇರ ‘ರಂಗಸ್ಥಳ, ಬೆಳಕು ಮತ್ತು ಶ್ರಾವ್ಯತೆ,’ ‘ಮೈಮುಖಗಳ ಮಿರುಗು’ ಎಂಬ ಸುದೀರ್ಘ ಅಧ್ಯಾಯಗಳಲ್ಲಿ ರಂಗದ ಮತ್ತು ಕಲಾವಿದನ ಮಾಡು, ಮಾಡದಿರುಗಳ ಸ್ಪಷ್ಟಚಿತ್ರಣ ಕೊಡುತ್ತಾರೆ. ಕಾಣ್ಕೆ ತೋರ್ಕೆಗಳ, ಅಭಿವ್ಯಕ್ತಿ ಆಲಿಕೆಗಳ, ನಿಲುಮೆ ಚಲನೆಗಳ, ಹಿಮ್ಮೇಳ ಮತ್ತು ಪರಿಕರಗಳ ವಿವರಗಳೆಲ್ಲವನ್ನೂ ನಂಬಿಯಾರ್ ವಿಷದಗೊಳಿಸುತ್ತಾರೆ. ವಿಶಿಷ್ಟ ನಡೆಗಾಗಿ ಅಲ್ಲೊಂದು ಇಲ್ಲೊಂದು ಪ್ರಸಂಗದ ಉಲ್ಲೇಖ ಬಂದರೂ ಒಟ್ಟಿನಲ್ಲಿ ಬರಿಯ ಯಕ್ಷಗಾನವಲ್ಲ ಯಾವುದೇ ರಂಗ ಕಲೆಯ ಅಭಿವೃದ್ಧಿಪರ ಪ್ರಯೋಗಪಟು ಮನನ ಮಾಡಲೇಬೇಕಾದ ಪುಟಗಳಿವು. ‘ಎಲ್ಲಾದರು ಇರು, ಎಂತಾದರು ಇರು ಮಾಡಿದ್ದೆಲ್ಲವೂ ಯಕ್ಷಗಾನ’ ಎಂಬ ಬುದ್ಧಿಭ್ರಮಣೆಗೆ ಪಂ| ನಂಬಿಯಾರ್ ಇಲ್ಲಿ ಹೇಳಿಯೂ ಹೇಳದಂತೆ ಉತ್ತಮ ಮದ್ದು ಅರೆದಿದ್ದಾರೆ! ಆಟಕ್ಕೊಂದು ಕಾರ್ಯಸೂಚಿಯನ್ನೇ ಕೊಟ್ಟು, ಉಳಿಸಿಕೊಳ್ಳಿ, ಇದು ನಿಮ್ಮದು ಎಂದು ಸ್ಪಷ್ಟ ಮನವಿಯನ್ನೂ ಮಾಡಿದ್ದಾರೆ. ದೀವಟಿಗೆಯ ಪ್ರಕಾಶಕ ನಾನಾದರೂ ಪುಸ್ತಕ ಅನಾವರಣವನ್ನು ಎಲ್ಲೂರಿನ ನಂಬಿಯಾರ್ ಅಭಿಮಾನಿಗಳು ಮತ್ತೊಂದೇ ದೀವಟಿಗೆ ಆಟದೊಡನೆ ಅರ್ಥಪೂರ್ಣವಾಗಿ ನಡೆಸಿದರು. ಅನಂತರದ ದಿನಗಳಲ್ಲಿ ಒಂದೆರಡು ಹಳ್ಳಿ ಮೂಲೆಗಳಲ್ಲಿ ಅನ್ಯರ ಉತ್ಸಾಹ ಮತ್ತು ದರ್ಶನದಲ್ಲಿ ನಡೆದ ಕೆಲವು ದೀವಟಿಗೆ ಪ್ರದರ್ಶನಗಳಿಗೆ ನಾನು ಹೋದದ್ದಿದೆ. ಒಂದೆಡೆ ಅಗ್ನಿಕುಂಡದ ನಡುವೆ ಆಟ ನಡೆದಂತೆ ಕಂಡರೆ ಇನ್ನೊಂದೆಡೆ ಎಲ್ಲಾ ಆಧುನಿಕ ಅನಿಷ್ಠಗಳ ನಡುವೆ ದೀವಟಿಗೆಯೂ ಸೇರಿ ಹೆಲಿಕಾಪ್ಟರಿನಲ್ಲಿಳಿದ ಇಂದಿರಾಗಾಂಧಿಯ ಮಂಡೆಗಿಟ್ಟ ಮುಟ್ಟಾಳೆಯಂತೆ (= ಈ ವಲಯದ ಕೃಷಿ ಕಾರ್ಮಿಕರು ಬಳಸುವ ಅಡಿಕೆ ಹಾಳೆಯ ಟೊಪ್ಪಿ) ಶೋಭಿಸಿತು.

ಹಿರಿಯಡಕ ಗೋಪಾಲರಾಯರ ನಿರ್ದೇಶನದಲ್ಲಿ ನಡೆದ ದೀವಟಿಗೆ ಆಟದ ಬಗ್ಗೆ ನಂಬಿಯಾರರೇ ಉಲ್ಲೇಖಿಸುತ್ತಾರೆ. ಬನ್ನಂಜೆ ಸಂಜೀವ ಸುವರ್ಣರು ವಿಶೇಷ ಪ್ರಚಾರ ಮತ್ತು ಬಹುಜನರಿಗೆ ಮುಟ್ಟಿಸುವ ಹಂಬಲವೇನೂ ಇಟ್ಟುಕೊಳ್ಳದೆ ಕೆಲವು ವರ್ಷ ಸಣ್ಣದಾಗಿಯೇ ನಡೆಸಿದ ಪ್ರಯೋಗಗಳನ್ನೂ ಕೇಳಿದ್ದೇವೆ. ಅವರಿಬ್ಬರೂ ಬಡಗುತಿಟ್ಟಿನ ಪ್ರಯೋಗಪಟುಗಳು. ಈಚೆಗೆ ಎಲ್ಲೂ ಹೆಸರು ಹೇಳಿಸಿಕೊಳ್ಳಲಿಚ್ಛಿಸದೇ ‘ನಿರ್ದೇಶಕ’ನೆಂದು ಕಾಣಿಸಿಕೊಳ್ಳದೇ ತರುಣ ಪೃಥ್ವೀರಾಜ ಕವತ್ತಾರ್ ತಮ್ಮದೇ ಕಾರ್ಯಸೂಚಿಯೊಡನೆ ತೆಂಕುತಿಟ್ಟಿನ ವೃತ್ತಿಪರ ಯಕ್ಷಕಲಾವಿದರನ್ನು ಪರಿವರ್ತನೆಗೊಳಪಡಿಸಿ ಪ್ರದರ್ಶನಗಳನ್ನು ತರುತ್ತಿದ್ದಾರೆ. ಅವರ ಖಾತೆಯಲ್ಲೂ ದೀವಟಿಗೆ ಬೆಳಗಿದ್ದನ್ನು ನಾನು ಕಂಡಿದ್ದೇನೆ.

ಗೆಳೆಯ ಡಾ| ಮನೋಹರ ಉಪಾಧ್ಯರು ಸುಮಾರು ಐದು ತಿಂಗಳ ಹಿಂದೆ, ಉಭಯ ತಿಟ್ಟುಗಳನ್ನು ಪ್ರತಿನಿಧಿಸುವಂತೆ ‘ಸುವರ್ಣ ಕವತ್ತಾರ್ ಕಂಬೈನ್ಸ್’ ದೀವಟಿಗೆ ಪ್ರದರ್ಶನವನ್ನು ನಡೆಸಿ, ಪಕ್ಕಾ ದಾಖಲೀಕರಣ ನಡೆಸಬೇಕೆಂದು ಯೋಜಿಸಿಕೊಂಡು ನನ್ನನ್ನು ಸಂಪರ್ಕಿಸಿದರು. ನಿರ್ಮಾಪಕನ ನೆಲೆಯಲ್ಲಿ ಜೊತೆಗಾರನಾಗಿ ‘ಸೈ’ ಎಂದೆ. ವಾಸ್ತವದಲ್ಲಿ ನಮ್ಮ ಈಚಿನ ಇಂಥಾ ಸಾಹಸಗಳೆಲ್ಲವಕ್ಕೂ (ನನ್ನ ಮಗ) ಅಭಯಸಿಂಹ ಪುಣೆಯಲ್ಲಿ ಮೂರು ವರ್ಷದ ಅಧ್ಯಯನದಲ್ಲಿ ಪಕ್ಕಾ ಸಿನಿ-ನಿರ್ದೇಶಕನಾಗಿ ಬಂದದ್ದೇ ಕಾರಣ. ನಮ್ಮ ಹುಚ್ಚುಗಳಲ್ಲಿ ಅವನ ವೈಯಕ್ತಿಕ ಸೇವೆಯೇನೋ ಪೂರ್ಣ ಉಚಿತವಾದರೂ ಇತರ ವೃತ್ತಿಪರರು, ಸೇವಾ ಸೌಲಭ್ಯಗಳು, ಕಚ್ಚಾ ಸಾಮಾಗ್ರಿಗಳು ನಮ್ಮ ಹರಕೆಯ ಕುರಿಗಳಾಗಲು ಸಾಧ್ಯವಿರಲಿಲ್ಲ. ಮತ್ತೆ ವೆಚ್ಚ ಎಷ್ಟಾದರೂ ಸರಿ ಫಲಿತಾಂಶವನ್ನು ಮಾರಿಕೊಂಡು ಮರುಭರಿಸುವ ಉದ್ಯಮಶೀಲತೆಯ ಉದ್ದೇಶವೂ ನಮ್ಮದಲ್ಲವೇ ಅಲ್ಲ. ಕನಿಷ್ಠ ವೆಚ್ಚದಲ್ಲಿ ಅತ್ಯುತ್ತಮ ದಾಖಲೀಕರಣವನ್ನು ನಡೆಸಿ ಸಾರ್ವಜನಿಕಕ್ಕೆ ಮುಕ್ತಗೊಳಿಸುವುದು ನಾವು ಹಿಂದೆಲ್ಲಾ ಮಾಡಿದ್ದೆವು. ಇಲ್ಲಿ ಅಂಥವುಗಳಲ್ಲಿ ಎರಡು ಮುಖ್ಯ ಯೋಜನೆಗಳ ಸಣ್ಣ ಪರಿಚಯ ಮಾಡಿಕೊಡುವುದು ಅವಶ್ಯ ಎಂದು ಭಾವಿಸುತ್ತೇನೆ.

ಬಡಗು ತಿಟ್ಟಿನ ಪೂರ್ವರಂಗ:

ಉಡುಪಿ ಯಕ್ಷಗಾನ ಕೇಂದ್ರದ ಕಲಾವಿದರಿಂದ ಬನ್ನಂಜೆ ಸಂಜೀವ ಸುವರ್ಣರ ನೇತೃತ್ವದಲ್ಲಿ ಬಡಗು ತಿಟ್ಟಿನ ಪೂರ್ವರಂಗವನ್ನು ವಿಸ್ತಾರವಾಗಿ ಸಾರ್ವಜನಿಕರಿಗೆ ಪ್ರದರ್ಶಿಸಿದೆವು. ಜೊತೆಗೆ ಅದನ್ನು ಮೂರು ಕ್ಯಾಮರಾಗಳೊಡನೆ ಸ್ಥಳೀಯ ಸಂಕಲನದೊಡನೆ ವೀಡಿಯೋ ದಾಖಲೆಗೊಳಪಡಿಸಿ ಐದು ಸೀಡಿಗಳ ದಾಖಲೀಕರಣ ನಡೆಸಿದ್ದೆವು. ಆಟ ಆಡಿದ್ದಕ್ಕೆ ಆ ತಂಡಕ್ಕೆ (ಕನಿಷ್ಠವೇ ಇರಬಹುದು) ಸೂಕ್ತ ಗೌರವಧನವನ್ನು ಕೊಟ್ಟದ್ದಲ್ಲದೇ ಆ ಸೀಡಿಗಳನ್ನು ಬೇಕಾದಷ್ಟು ಪ್ರತಿ ಮಾಡಿಸಿಕೊಂಡು ಮಾರಿಕೊಂಡು ಕೇಂದ್ರದ ಭೋಜನ ನಿಧಿಗೆ ಹಣ ಸಂಚಯಿಸಲು ಪೂರ್ಣ ಬಿಟ್ಟುಕೊಟ್ಟೆವು. ಯಕ್ಷಗಾನ ಕೇಂದ್ರ ಆ ಐದರ ಕಂತನ್ನು (ರೂ ಐದುನೂರಕ್ಕೆ) ಸಾವಿರ ಸಂಖ್ಯೆಯಲ್ಲಿ ಹೆಮ್ಮೆಯಿಂದ ಇಂದಿಗೂ ವಿತರಿಸುತ್ತಿದೆ, ಭೋಜನ ನಿಧಿ ಅಕ್ಷಯವಾಗಿದೆ ಎಂದು ತಿಳಿಸಿ ನಮ್ಮ ಧನ್ಯತೆಗೆ ಕಾರಣವಾಗಿದೆ.

ಬಡಾಬಡಗಿನ ಕರ್ಕಿಶೈಲಿ:

ಈ ಯಕ್ಷಗಾನ ಶೈಲಿ ಇಂದು ಕೊನೆಯುಸಿರು ಎಳೆಯುತ್ತಿದೆ. ಅದರ ಹಿರಿ ತಲೆಗಳನ್ನು (ಮುಮ್ಮೇಳದಲ್ಲಿ ಮುಖ್ಯವಾಗಿ ಮೂವರು – ನಾರಾಯಣ ಹಾಸ್ಯಗಾರ, ಸತ್ಯ ಹಾಸ್ಯಗಾರ ಮತ್ತು ಕೃಷ್ಣ ಹಾಸ್ಯಗಾರ) ಸೇರಿಸಿ, ಕಥಾನಕವೊಂದನ್ನು ನಡೆಸಲು ಸಾಧ್ಯವಿಲ್ಲದಿದ್ದರೂ ಸಿಕ್ಕ ತುಣುಕುಗಳನ್ನು ಎರಡು ಡೀವೀಡಿಯಲ್ಲಿ ಸಿದ್ಧಗೊಳಿಸಿದೆವು. ಇದಕ್ಕಾಗಿ ಅವರೂರಿಗೇ ಸಲಕರಣೆ, ತಂತ್ರಜ್ಞರೆಲ್ಲರನ್ನು ಒಯ್ದು, ಕರಿಕಾನಮ್ಮ ಎಂಬ ಕಾಡಮೂಲೆಯ ಪರಿಸರದಲ್ಲಿ ಎರಡು ರಾತ್ರಿ ದಾಖಲೀಕರಣ ನಡೆಸಿದ್ದೆವು. ನಮ್ಮ ಉದ್ದೇಶದ ಉದಾತ್ತತೆಯನ್ನು ಗುರುತಿಸಿ ಹಿರಿಯಡಕ ಗೋಪಾಲ ರಾವ್, ಬನ್ನಂಜೆ ಸಂಜೀವ ಸುವರ್ಣ, ರಾಘವ ನಂಬಿಯಾರ್, ಜಿ.ಎಲ್ ಹೆಗಡೆ, ಜಿ.ಎಸ್. ಹೆಗಡೆ, ದೇವು ಹನೆಹಳ್ಳಿ, ಮಹಾಲಿಂಗ ಭಟ್ ಮುಂತಾದವರು ಯಾವುದೇ ಫಲಾಪೇಕ್ಷೆಯಿಲ್ಲದೆ (ನಾವು ಕೊಡಲೂ ಇಲ್ಲ ಎನ್ನಲು ನಾಚಿಕೆಯಾಗುತ್ತದೆ) ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಲಾವಿದರು ಅಗತ್ಯಕ್ಕಿಂತಲೂ ಹೆಚ್ಚಿಗೇ ಗೌರವಧನವನ್ನು ಕೇಳಿ ಪಡೆದುಕೊಂಡರೂ ಯಾವುದೇ ಹಂತದಲ್ಲಿ ನಮ್ಮನ್ನು ನಂಬಲಿಲ್ಲ. ಅವರ ದೈಹಿಕ ಕೊರತೆಗಳನ್ನು ಒಪ್ಪಿಕೊಂಡೂ ತಮ್ಮ ಉತ್ತಮವನ್ನು ಪ್ರದರ್ಶಿಸಲೂ ಇಲ್ಲ ಎನ್ನುವುದನ್ನು ಇಲ್ಲಿ ತೀರಾ ನೋವಿನಿಂದ ನಾನು ಹೇಳಲೇಬೇಕಾಗುತ್ತದೆ. ನಾವು ಯೋಜನೆಯಂತೇ ಫಲಿತಾಂಶವನ್ನು ಹಾಸ್ಯಗಾರ ಮನೆತನಕ್ಕೇ ಕೊಟ್ಟು, ಪ್ರತಿ ಮಾಡಿ, ಮಾರಿಕೊಂಡು ಕರ್ಕಿಮೇಳದ ಪುನರುತ್ಥಾನಕ್ಕೆ ಕಿಂಚಿತ್ ನಿಧಿ ಸಂಚಯಿಸಲು ಬಿಟ್ಟೆವು. ಅದನ್ನೂ ಅವರು ಮಾಡಿಕೊಳ್ಳದಿರುವುದು ನೋಡಿದರೆ ಕೋಪಿಸಬೇಕೋ ಕನಿಕರಿಸಬೇಕೋ ಅರ್ಥವಾಗುವುದಿಲ್ಲ!

ಇರಲಿ, ಈ ಬಾರಿ ಮತ್ತೆ ದೀವಟಿಗೆ ಆಟ. ಎರಡೂ ತಿಟ್ಟುಗಳಿಗೆ ಪ್ರತ್ಯೇಕ ಪ್ರತ್ಯೇಕ ಸಿಮಿತ ಅವಧಿಯ ಕಥಾನಕ. ಬಡಗಿನಲ್ಲಿ ಯಕ್ಷಗಾನ ಕೇಂದ್ರ, ಉಡುಪಿ ಬಳಗ ಬನ್ನಂಜೆ ಸಂಜೀವ ಸುವರ್ಣರ ನೇತೃತ್ವದಲ್ಲಿ ‘ಅರಗಿನ ಮನೆ’ ಪ್ರದರ್ಶಿಸಿದರೆ ತೆಂಕಿನಲ್ಲಿ ವಿವಿಧ ಮೇಳಗಳ ಆಯ್ದ ಕಲಾವಿದರನ್ನು ಪೃಥ್ವೀರಾಜ ಕವತ್ತಾರು ಸಂಯೋಜಿಸಿ, ನಿರ್ದೇಶಿಸಿ ‘ಕುಂಭಕರ್ಣ ಕಾಳಗ’ ಕೊಡುತ್ತಿದ್ದಾರೆ. ಇದರ ವಿಡಿಯೋ ದಾಖಲೀಕರಣದ ಸೂಕ್ಷ್ಮಗಳನ್ನು ಅಭಯ ತನ್ನ ಬ್ಲಾಗಿನಲ್ಲಿ (ಕ್ಯಾಮರಾ ಕಣ್ಣು ಹಾಗೂ ಪ್ರೇಕ್ಷಕನ ಕುರ್ಚಿ / ವೇದಿಕೆಯಿಂದಾಚೆ ಚೆಲ್ಲಿದ ಬೆಳಕು) ಈಗಾಗಲೇ ಚರ್ಚೆಗೆ ತೆರೆದಿಟ್ಟಿದ್ದಾನೆ. ಎರಡು ಈ ಶುದ್ಧ ದಾಖಲೀಕರಣವನ್ನು ಪ್ರಯೋಗಶಾಲೆಯ ವಾತಾವರಣದಲ್ಲಿ ನಡೆಸುತ್ತಿರುವುದರಿಂದ ಸಾರ್ವಜನಿಕರಿಗೆ ಸ್ಥಳ, ದಿನಾಂಕ ಮತ್ತು ಆಮಂತ್ರಣವನ್ನೂ ಕೊಡುತ್ತಿಲ್ಲ. ತಲಾ ಸುಮಾರು ಎರಡೂವರೆ ಗಂಟೆ ಅವಧಿಯ ಡೀವೀಡಿಗಳಲ್ಲಿ ತೆಂಕು ತಿಟ್ಟಿನದ್ದನ್ನು ಯಕ್ಷಗಾನ ಕಲಾರಂಗ, ಉಡುಪಿಗೂ ಬಡಗು ತಿಟ್ಟಿನದ್ದನ್ನು ಯಕ್ಷಗಾನ ಕೇಂದ್ರ, ಉಡುಪಿಗೂ ತಂತಮ್ಮ ನಿಧಿಸಂಚಯನಕ್ಕೆ ಅನುಕೂಲವಾಗುವಂತೆ ಸಾರ್ವಜನಿಕ ವಿತರಣೆ ನಡೆಸಲು ದಾನ ಕೊಡುತ್ತಿದ್ದೇವೆ.

ದಾಖಲೀಕರಣದ ರಂಗದ ಹಿಂದಿನ ಕಥೆಯನ್ನು ನಾನು ಹೊತ್ತು ತರುವವರೆಗೆ ದೇವರ್ಕಳು ಆಗಸದಲ್ಲಿ ನೆರೆದು ಮಹಾನ್ ಘಟನೆಗಳಿಗೆ ಉಘೇ ಹಾಕಿದಂತೆ (ಉಗಿದು ಹಾಕಿದಂತೆಯೂ?) ನಿಮ್ಮ ಪ್ರತಿಕ್ರಿಯೆಗಳನ್ನು ಕೆಳಗಿನಂಕಣಕ್ಕೆ ತುಂಬುವಲ್ಲಿ ಅಕ್ಷರ ಜಿಪುಣರಾಗುವುದಿಲ್ಲ ಎಂದು ನಂಬಿದ್ದೇನೆ.