ಆಹಾಹೋsssss ಹ್ಹೋss ಹ್ಹೋಯ್!

ಐದು ತಿಂಗಳ ದೂರದಲ್ಲಿ ಕೇಳಿತೀ ಮೊದಲ ಅಟ್ಟಹಾಸ. ಡಾ| ಮನೋಹರ ಉಪಾಧ್ಯ, ಎರಡು ಯಕ್ಷಪ್ರಸಂಗಗಳ ದೀವಟಿಗೆ ಆಟ ದಾಖಲೀಕರಣದ ಯೋಜನೆಗೆ ಬಣ್ಣ ಬಳಿದು, ವೇಷ ತೊಟ್ಟು, ಗೆಜ್ಜೆ ಕಟ್ಟಿಯಾಗಿತ್ತು! ಈ (ಕೆಲಸದಲ್ಲಿ) ರಾಕ್ಷಸನಿಗೆ ಚಂಡೆ ಮದ್ದಳೆಗಳ ಹಿಮ್ಮೇಳವಷ್ಟೇ ನನ್ನದು. ನನ್ನ ಮಗ (ಸಿನಿ-ನಿರ್ದೇಶಕ) ಅಭಯಸಿಂಹನ ಪೂರ್ಣ ತಾಂತ್ರಿಕ ಜವಾಬ್ದಾರಿಯಲ್ಲಿ ದಾಖಲೀಕರಣದ ವೆಚ್ಚಗಳ ಅಂದಾಜುಪಟ್ಟಿ ಮಾಡಿಸಿದೆವು. ತಂಡ ಮತ್ತು ಪ್ರಸಂಗಗಳ ಆಯ್ಕೆಯಲ್ಲಿ ಬಡಗು ತಿಟ್ಟಿಗೆ ಅದ್ವಿತೀಯ ಗುರು ಬನ್ನಂಜೆ ಸಂಜೀವ ಸುವರ್ಣರ ನೇತೃತ್ವದ ಉಡುಪಿ ಯಕ್ಷಗಾನ ಕೇಂದ್ರ. ಕೆಲಕಾಲದಿಂದ ಯಕ್ಷಗಾನಕ್ಕೆ ಸಾಂಪ್ರದಾಯಿಕ ಚಂದ ಮರುಕಳಿಸಲು ಕ್ರಿಯಾತ್ಮಕವಾಗಿ ಹೆಣಗುತ್ತಿರುವ ಪೃಥ್ವೀ ರಾಜ್ ಕವತ್ತಾರ್‌ಗೆ ತೆಂಕು ತಿಟ್ಟಿನ ತಂಡವೊಂದರ ಸಂಯೋಜನೆ ಮತ್ತು ನಿರ್ದೇಶನವನ್ನೂ ವಹಿಸಿಕೊಟ್ಟೆವು. ಮಳೆ ಪೂರ್ಣ ನಿಂತ ಮೇಲಿನ ಒಂದು ದಿನವನ್ನು ಪ್ರದರ್ಶನಕ್ಕೆ ನಿಶ್ಚಯಿಸಿಕೊಂಡದ್ದೂ ಆಯ್ತು.

ಎರಡನೇ ಅರಬ್ಬಾಯಿ ನನ್ನ ಚಿಕ್ಕಮ್ಮನ ಮಗ ಸತ್ಯನಾರಾಯಣ ಉರುಫ್ ಸತ್ಯ ಅಲಿಯಾಸ್ ಪಾಪಣ್ಣನದು. ನನ್ನ ಒಂದೆಕ್ರೆ ವಿಸ್ತೀರ್ಣದ ಅಭಯಾರಣ್ಯವಾದರೋ ಹೆಸರಿಗೆ ಮಾತ್ರ. ವಾಸ್ತವದಲ್ಲಿ ಅದನ್ನೂ ಆವರಿಸಿದಂತಿರುವ ದೊಡ್ಡ ನೆಲ (ಸುಮಾರು ಐವತ್ತು ಎಕ್ರೆ), ಕಾರ್ಯಸಾಧ್ಯ ಸವಲತ್ತುಗಳು ಅದಕ್ಕೂ ಮುಖ್ಯವಾಗಿ ನಡೆಸುವ ಮನಸ್ಸಿರುವುದು ಸತ್ಯನಲ್ಲಿ ಮತ್ತು ಅವರ ಎಡೆಂಬಳೆ ಕೃಷಿಕ್ಷೇತ್ರದಲ್ಲಿ. ಹಿಂದೆ ನಂಬಿಯಾರರ ಪ್ರಯೋಗ ‘ನಾನು’ ನಡೆಸಿದ್ದೂ ಹಾಗೇ. ಆಗ ಡಾಮರು ದಾರಿಗೆ ನೇರ ಕಾಣುವಂತಿದ್ದ. ಸಾರ್ವಜನಿಕಕ್ಕೆ ಸುಲಭ ಗಮ್ಯವಾದ ಪದವಿನಲ್ಲಿ ನಡೆಸಿದ್ದೆವು. ಈ ಬಾರಿ ನಾಗರಿಕ ಗದ್ದಲ, ಬೆಳಕುಗಳಿಂದ ಮತ್ತಷ್ಟು ದೂರಸರಿದು, ರಬ್ಬರ್ ತೋಟದ ಮುನ್ನೆಲೆಯಲ್ಲಿ, ಹಿಂದೆಂದೋ ತಟ್ಟು ಮಾಡಿಬಿಟ್ಟಿದ್ದ ಮನೆ ನಿವೇಶನವನ್ನೇ ಕೇಂದ್ರವಾಗಿಟ್ಟುಕೊಂಡು ಸ್ಥಳ ಆಯ್ಕೆ ಮಾಡಿದ್ದೆವು. ಸತ್ಯ ಇಮ್ಮಡಿಸಿದ ಉತ್ಸಾಹದಿಂದ ಪ್ರವೇಶದ ತೆರೆಯ ಹಿಂದೆ ಒಜ್ಜೆಯ ಹೆಜ್ಜೆಗಳನ್ನು ಇಡತೊಡಗಿದ್ದ.

ನಂಬಿಯಾರರ ಕಾಲದಲ್ಲಿ ಎಣ್ಣೆ ದೀವಟಿಗೆ ಇತ್ತು. ಆದರೆ ಪ್ರದರ್ಶನದುದ್ದಕ್ಕೂ ಎಣ್ಣೆ ಹೊಯ್ಯುವವನ ಓಡಾಟ, ಬಟ್ಟೆ ಸಿಂಬೆ ಮಸಿಗಟ್ಟಿದಾಗ ಕುಟ್ಟಿ ಉದುರಿಸುವ ಮತ್ತೆ ಹೊಸತನ್ನು ಹೇರುವ ಕ್ರಿಯೆ, ಹೊಯ್ದ ಎಣ್ಣೆ ಹೆಚ್ಚಾದರೆ ಕೆಂಡದುಂಡೆಗಳಂತೆ ಸುರಿದು ಕೆಲವೊಮ್ಮೆ ನೆಲದಲ್ಲೂ ಉರಿಯುವ ನೋಟ, ಕಿಡಿಕಾರುವ ಹೊಗೆಯುಗುಳುವ ಅಗತ್ಯಕ್ಕೂ ಮೀರಿದ ಅಸ್ಪಷ್ಟತೆಯನ್ನು ಕೆಲವೊಮ್ಮೆ ಕೊಡುವ ಸಾಂಪ್ರದಾಯಿಕ ಎಣ್ಣೆದೀವಟಿಗೆಯನ್ನು ನಾವು (ಮನೋಹರ ಉಪಾಧ್ಯರನ್ನು ಸೇರಿಸಿ ‘ನಾವು’) ಮೊದಲೇ ತಿರಸ್ಕರಿಸಿದ್ದೆವು. ಉಪಾಯ್ದರು (ಕೋಟದಲ್ಲಿ ಹೀಗೇ ಸಂಬೋಧಿಸುವ ಸಂಪ್ರದಾಯವಂತೆ) ರಂಗದ ಮೂರೂ ಅಂಚಿನಲ್ಲಿ ಅಗತ್ಯ ಎತ್ತರದಲ್ಲಿ ಹರಿಯುವ ಎಣ್ಣೆಯ ಕಾಲುವೆ ಮತ್ತದರಲ್ಲಿ ಬಾಲ ಮುಳುಗಿಸಿ, ಉರಿ ಜುಟ್ಟು ಹೊತ್ತ ದಪ್ಪ ಬತ್ತಿಗಳ ಕಲ್ಪನೆಯಿಂದ ತೊಡಗಿದರು. ಕಾಡುಗುಡ್ಡೆಯ ಅಸಮ ನೆಲದಲ್ಲಿ ಇದರ ಹೊಂದಾಣಿಕೆಯ ಖಾಚಿತ್ಯ ಸರಿಯಾಗದೆಂದು ಕಲ್ಪನೆಯನ್ನೇ ಹೊಸಕಿದೆವು. ಉತ್ಸವದ ದೇವರ ಮುಂದೆ ಹಿಡಿಯುವ ಸರಪಳಿ ಬಂಧಿತ ಗುದ್ದಲಿಯಾಕಾರದ ಎಣ್ಣೆ ದೀಪ ಯೋಚಿಸಿದರು, ಎರಡು ಮಾಡಿಸಿಯೂ ಬಿಟ್ಟರು. ಸಾಲದಾದ ಜ್ವಾಲೆಯ ಗಾತ್ರ ಮತ್ತೆ ಎಣ್ಣೆ ತುಂಬುವ ಬತ್ತಿ ತೀಡುವ ಸಮಸ್ಯೆಗಳು ಎಡವಟ್ಟಾಗಿಯೇ ಕಾಣಿಸಿರಬೇಕು; ಮುಂದುವರಿಯಲಿಲ್ಲ.

ಓಲಂಪಿಕ್ ಜ್ಯೋತಿ ಬಿಡಿ, ನಮ್ಮ ಚರ್ಮುರಿ ಮೈದಾನದ ನೂರಿಪ್ಪತ್ತೆಂಟನೇ ಚಡುಗುಡು ಸ್ಪರ್ಧಾಕೂಟವೂ ಗ್ಯಾಸ್ ದೀವಟಿಗೆಗಳನ್ನು ಬಳಸುತ್ತಿರುವುದು ನಾವೆಲ್ಲಾ ತಿಳಿದವರೇ. ಅದನ್ನೇ ಯಕ್ಷಗಾನಕ್ಕೆ ಒಲಿಸುವ ಕುರಿತು ನಾನು ಒಬ್ಬ ಗ್ಯಾಸ್ ಸ್ಟೌ ರಿಪೇರಿಯವನ ಬಳಿ ವಿಚಾರಿಸಿದೆ. ಆತ ಭಾರೀ ಉತ್ಸಾಹವೇನೋ ತೋರಿಸಿದ ಆದರದು ಕೆಲಸಕ್ಕಿಳಿಯಲೇ ಇಲ್ಲ. ಆತನ ಅಣ್ಣ, ಇನ್ನೊಂದೇ ಗ್ಯಾಸ್ ಡೀಲರ್, ಅಷ್ಟೇ ಆಕಸ್ಮಿಕವಾಗಿ ಪರಿಚಯವಾಗಿ, ಸತಾವಣೆಯಲ್ಲಿ ಅಳಿಲಸೇವೆ ಸಲ್ಲಿಸಿದರೂ ಪ್ರದರ್ಶನಕ್ಕೆ ಇನ್ನು ಹತ್ತೇ ದಿನ ಎನ್ನುವಾಗ ನಾಲ್ಕೂ ದೀವಟಿಗೆಗಳನ್ನು ಕೊಟ್ಟ. ಅದರ ತಾಂತ್ರಿಕ ವಿವರಗಳು, ಕೊರತೆಗಳು ಇಲ್ಲಿ ಬೇಡ. ಆದರೆ ಅವು ಸುಲಭವಾಗಿ ಸುಧಾರಿಸಬಹುದಾದ ತಿದ್ದುಪಡಿಗಳೆಂದು ಕಂಡು ನಾವು ಪರ್ಯಾಯ ವ್ಯವಸ್ಥೆಯನ್ನು ಯೋಚಿಸದೆ ಮುಂದುವರಿದೆವು. ವಾಸ್ತವವಾಗಿ ಅಂತಿಮ ಅಟ್ಟಹಾಸ ಕೊಟ್ಟು ನಾವು ರಂಗಕ್ಕೇ ಧುಮುಕಿದ್ದು ಗ್ಯಾಸ್ ದೀವಟಿಗೆಯ ರೂಪಣೆಯೊಡನೆ.

ಒಂದು ಜೊತೆ ದೀವಟಿಗೆ ಹಿಡಿದು ಮನೋಹರರೊಡನೆ ಅಭಯಾರಣ್ಯಕ್ಕೆ ಹೋಗಿದ್ದೆವು. ಸತ್ಯನಿಗೆ ನಮ್ಮ ಅಗತ್ಯಗಳನ್ನು ನೆಲದ ಮೇಲೇ ಸ್ಪಷ್ಟಪಡಿಸಿ, ದೀವಟಿಗೆಯನ್ನು ಹಗಲಲ್ಲೆ ಉರಿಸಿ ನೋಡಿ ಸಂತೋಷಿಸಿದೆವು. ಮಂಗಳೂರಿಗೆ ಮರಳಿದ ಮೇಲೆ ಮನೋಹರರಿಗೆ ಅದರ ಚಂದವನ್ನು ಕತ್ತಲಲ್ಲೇ ನೋಡಬೇಕೆಂದು ಆಸೆ ಬಲಿತದ್ದಕ್ಕೆ ರಾತ್ರಿ ನನ್ನ ಮನೆಗೇ ಬಂದು ಅಂಗಳದಲ್ಲಿ ಹಚ್ಚಿ ನೋಡಿದ್ದೂ ಆಯ್ತು. ಅದರ ಮಾರುದ್ದ ಜ್ವಾಲೆಯ ಕೆಂಪು ಹಳದಿ ವರ್ಣಗಳ ಒಲೆತವನ್ನು ಬಳಿಯಲ್ಲಿ ನಿಂತ ನನ್ನ ಬಿಳಿ ಬಟ್ಟೆಗಳ ಮೇಲೆ, ತುಸು ದೂರದ ಮನೆಯ ಗೋಡೆಯ ಮೇಲೆ ಮತ್ತೂ ಆಚಿನ ಗಿಡಮರಗಳ ಮೇಲಿನದ್ದೆಲ್ಲಾ ಫೋಟೋ ದಾಖಲೆಗೊಳಪಡಿಸಿ ಆನಂದಿಸಿದರು ಉಪಾಯ್ದರು. ಆ ಚಿತ್ರಗಳನ್ನು ಬೆಂಗಳೂರಿನಲ್ಲಿದ್ದ ಅಭಯನಿಗೂ ಎರಡು ಪ್ರದರ್ಶನಗಳ ನಿರ್ದೇಶಕರಿಗೂ ಮತ್ತೊಂದಷ್ಟು ಸಮಾನ ಮನಸ್ಕರಿಗೂ ಕಳಿಸಿ ಸಂತೋಷವನ್ನು ಸಾಂಕ್ರಾಮಿಕವಾಗಿಸಿದರು ಈ ವೈದ್ಯ!

“ಈಗ ಪ್ರದರ್ಶನದ ಜ್ವರ ನಮ್ಮನ್ನೂ ಹಿಡಿಯಿತು,” ನವೆಂಬರ್ ಆರರಂದು ಸ್ಥಳ ಪರಿಶೀಲನೆಗೆ ಬಂದ ಎರಡೂ ನಿರ್ದೇಶಕರು (ಸುವರ್ಣ, ಕವತ್ತಾರ್) ಉದ್ಗರಿಸಿದರು. ಮೊದಲು, ಕಣಿವೆಗಿಳಿದಲ್ಲೇ ತೋಟದೊಳಗಿನ ಎರಡು ದಾರಿ ಸಂಗಮದಲ್ಲೇ ಊಟ ತಿಂಡಿಯ ವಿತರಣೆಗೆ ಸ್ಥಳ ಆರಿಸಿದೆವು (ಊಟದಲಿ ಮುಂದು!). ದಾರಿಯ ಬಲ ಕವಲಿನಲ್ಲಿ ಚೌಕಿ, ಮುಂದುವರಿದರೆ ವೇಷಗಳಿಗೆ ಹಿಂದಿನಿಂದ ರಂಗಕ್ಕೇರಲು ದಾರಿ. ತುಸುವೇ ಗುಡ್ಡೆ ಏರುವ ಮುಖ್ಯ ದಾರಿಯ ಎಡಬಲಗಳು, ಬಲಕ್ಕೊದಗುವ ಮನೆ ನಿವೇಶನದ ಹಿಂದಿನಂಚನ್ನು ರಂಗಕ್ಕೆ ಮೀಸಲಿಟ್ಟು ಉಳಿದಷ್ಟೂ ಜಾಗ ಪ್ರೇಕ್ಷಾಂಗಣ. ವೇದಿಕೆಯ ಆಯ ಅಳತೆ, ಕಂಬ ತೋರಣ, ಪ್ರೇಕ್ಷಾಂಗಣದ ವ್ಯಾಪ್ತಿ, ದೀವಟಿಗೆಯ ಸ್ಥಾನ ನಿರ್ದೇಶನ, ಗ್ಯಾಸ್ ಅಂಡೆಗಳ ಮರಸು ಇತ್ಯಾದಿ ಹಲವು ತಲೆ ಸೇರಿತು. ವಾರ ಕಳೆಯುವುದರೊಳಗೆ ಅಭಯನೂ ಬಂದು ಕ್ಯಾಮರಾ ‘ದೃಷ್ಟಿ’ಯ ಅಗತ್ಯಗಳನ್ನೂ ನಿಷ್ಕರ್ಷಿಸಿ ಹೋದ.

ಸತ್ಯ ಸತ್ಯಸ್ಯ ಅಸಾಧ್ಯ! ಮೂರೇ ದಿನದೊಳಗೆ ಮಾರಿಹಲಗೆ (ಗಾಬರಿ ಆಯ್ತೇ earth mover ಸ್ವಾಮೀ) ತರಿಸಿ ದಾರಿ, ನೆಲ ಒಪ್ಪಗೊಳಿಸಿಕೊಂಡ. ವೇದಿಕೆಯ ಕಲ್ಲ ಹರಳು ಹೆಕ್ಕುವುದರಿಂದ ಪ್ರೇಕ್ಷಾಂಗಣದ ಕಾಡಗಿಡದ ಕುತ್ತಿ ಒಕ್ಕುವವರೆಗೆ, ರಂಗಕ್ಕೊದಗುವ ಬಿದಿರ ಡೊಂಕು ಮತ್ತದರ ಹಸಿರುತನದ ನಿಷ್ಕರ್ಶೆವರೆಗೆ, ಇನ್ನೂರು ಮೀಟರ್ ಆಚಿನ ಬೋರ್ವೆಲ್ಲಿನ ನೀರು ಪ್ರದರ್ಶನ ವಲಯಕ್ಕೆ ಒದಗುವಂತೆ ಮಾಡುವಲ್ಲಿ ಹೇಗೆಹೇಗೆ (ಸಾರ್ವಜನಿಕರಿಗೆ, ಕಲಾವಿದರಿಗೆ ಮತ್ತು ಅಗ್ನಿ ಆಕಸ್ಮಿಕಗಳಿಗೆ) ಎನ್ನುವ ಸೂಕ್ಷ್ಮದವರೆಗೂ ಸತ್ಯ ಯೋಚಿಸುತ್ತಿದ್ದ, ಕೆಲಸ ನಡೆಸುತ್ತಿದ್ದ. ತೋಟಗೆಲಸದ ಹೆಣ್ಣಾಳುಗಳಿಂದ ಹುಲ್ಲು, ಬಲ್ಲೆ ತೆಗೆಸಿ ಗಂಡಾಳುಗಳಿಂದ (ಮಳೆಯ ನಿರೀಕ್ಷೆಯಲ್ಲಿ) ಕಟ್ಟೆ, ಚರಂಡಿಗಳನ್ನು ನೇರ್ಪುಗೊಳಿಸಿ, ಕಡಿದು ಕಳೆದ ಸೌದೆ, ಸೊಪ್ಪು, ಮಣ್ಣು ಕಲ್ಲುಗಳ ವಿಲೇವಾರಿಯಿಂದ ತೊಡಗಿ ಮನೆಯಿಂದ ಬರಬೇಕಾದ ಕಂಬ, ಡ್ರಂಗಳವರೆಗೆ ಬಾಡಿಗೆ ಟೆಂಪೋ ಓಡಿಸಿದ. ಚೌಕಿಯ ಬೆಳಕು ರಂಗದತ್ತ ನುಸುಳದಂತೆ ಮರೆ, ಮಾಡಿಗೆ (ಮಳೆಯ ಹೆದರಿಕೆ ಇದ್ದುದರಿಂದ) ಶೀಟು, ವೇದಿಕೆಗೆ ದಮ್ಮಾಸಿನ ಗುದ್ದು, ಸಗಣಿಯ ಒಪ್ಪ, ಮಳೆ ಜಡಿದರೆ ತತ್ಕಾಲೀನ ರಕ್ಷಣೆಗೆ ಪ್ಲ್ಯಾಸ್ಟಿಕ್ ಹೊದಿಕೆ, ಗ್ಯಾಸ್ ಅಂಡೆ ಕೂರಲು ತಗ್ಗು, ಪೈಪ್ ಮರೆಸಲು ಚರಂಡಿ ಇತ್ಯಾದಿ ನಡೆಸಿದ ಕೆಲಸಗಳು ನೂರೆಂಟು. ದಿನಕ್ಕೆ ಹತ್ತೇನು ನೂರು ಬಾರಿಯಾದರೂ ಬೈಕಿನಲ್ಲಿ ತೋಟಕ್ಕೋ ಪೇಟೆಗೋ ಗುಡುಗುಡಿಸಿ ಸತ್ಯ ಕೆಲಸ ಮಾಡಿದ್ದೇ ಮಾಡಿದ್ದು. ಮತ್ತೆ ವಿಚಾರ ಶುದ್ಧಿ, ತರ್ಕಶುದ್ಧಿಗೆ ಕೊರತೆ ಬಾರದಂತೆ ದಿನದ ಯಾವ ಹೊತ್ತು, ಗೊತ್ತೂ ನೋಡದೆ ದೂರವಾಣಿ ಸಂಪರ್ಕವಂತೂ ಇದ್ದೇ ಇದೆ ಎಂದು ಬೇರೆ ಹೇಳಬೇಕೇ!

ಬಡಗು ತಿಟ್ಟಿನ ತಂಡ ಯಕ್ಷಗಾನ ಕೇಂದ್ರದ್ದೇ ಅರ್ಥಾತ್ ವ್ಯವಸಾಯೀ ಮೇಳದ ತಿರುಗಾಟ ಇಲ್ಲದ್ದು. ಹಾಗಾಗಿ ಅವರಿಗೆ ಯಾವ ದಿನ ಯಾವ ಹೊತ್ತು ಎಂದರೂ ಆಕ್ಷೇಪವಿರಲಿಲ್ಲ. ತೆಂಕು ತಿಟ್ಟಿನ ತಂಡವನ್ನು ಪೃಥ್ವೀ ವಿವಿಧ ವ್ಯಾವಸಾಯಿಕ ಮೇಳಗಳಿಂದ ಆಯ್ದ ಕಲಾವಿದರಿಂದ ಕಟ್ಟಬೇಕಾಗಿತ್ತು. ಅಂದರೆ ಮಳೆ ಮುಗಿದು ಮೇಳಗಳು ತಿರುಗಾಟಕ್ಕಿಳಿಯುವ ಮೊದಲು ನಮ್ಮ ಪ್ರದರ್ಶನ ನಡೆಯಬೇಕಿತ್ತು. ಆದರೆ ಈ ಬಾರಿ ಅಕಾಲಕ್ಕೆ ಮುಂದುವರಿದ ಮಳೆ, ಯಕ್ಷಗಾನ ಕೇಂದ್ರಕ್ಕೆ ಅಂತಾರಾಷ್ಟ್ರೀಯ ಮೇಳ ಒಂದರಲ್ಲಿ ಭಾಗಿಯಾಗಬೇಕಾದ ಅವಕಾಶ ತಪ್ಪಿಹೋಗದಂತೆ ಹೊಂದಾಣಿಕೆ ಎಲ್ಲಾ ಸೇರಿ ನವೆಂಬರ್ ಇಪ್ಪತ್ತೆಂಟು ಅಂತಿಮಗೊಳಿಸಬೇಕಾಯ್ತು. ತೆಂಕು ತಿಟ್ಟಿನ ಪ್ರದರ್ಶನವನ್ನು (ಕತ್ತಲಾದ ಕೂಡಲೇ) ಮೊದಲಿಗಿಟ್ಟುಕೊಂಡು, ಮುಗಿದ ಕೂಡಲೇ (ಸುಮಾರು ರಾತ್ರಿ ಹತ್ತು ಗಂಟೆಗೆ) ಕಲಾವಿದರನ್ನು ಅವರವರ ಮೇಳಕ್ಕೆ ತಲಪಿಸುವ ವ್ಯವಸ್ಥೆ ಮಾಡಿಕೊಂಡೆವು. ಆದರೂ ಆದರೂ ಬಂಗಾಳದಲ್ಲಿ ನಿಮ್ನ ಒತ್ತಡ, ಅರಬ್ಬಿಯಲ್ಲಿ ಚಂಡಮಾರುತದ ವರದಿಗಳು ನಮ್ಮನ್ನು ಕೊನೆಯ ಗಳಿಗೆಯವರೆಗೂ ಕಾಡುತ್ತಲೇ ಇತ್ತು!

ಯಕ್ಷಗಾನ ಕೇಂದ್ರಕ್ಕೆ ತಿರುಗಾಟದ ಹಂಗಿಲ್ಲ. ಮತ್ತದು ದಿನದ ಇಪ್ಪತ್ನಾಲ್ಕು ಗಂಟೆಯೂ ಯೋಜಿತ ಏಕ ಲಕ್ಷ್ಯಕ್ಕೇ ದುಡಿಯುವುದರಿಂದ ಅವರಾರಿಸಿಕೊಂಡ ಪ್ರಸಂಗ – ಅರಗಿನ ಮನೆಯ ಕಥಾ ಸಾರಾಂಶದಿಂದ ತೊಡಗಿ ಹಿಮ್ಮೇಳ ಮುಮ್ಮೇಳಗಳ ಪಟ್ಟಿ ಸಕಾಲಕ್ಕೆ ನಮಗೂ ತಿಳಿದಿತ್ತು. ಅವರ ತಯಾರಿ, ತರಬೇತಿಗಳ ಬಗ್ಗೆಯೂ ನಮಗೆ ಅಪಾರ ಭರವಸೆಯಿತ್ತು. ಆದರೆ ವಿವಿಧ ಪರಿಣತಿಯ (ಮತ್ತು ವಿವಿಧ ಮೇಳಗಳ) ಹಿರಿಯ ಕಲಾವಿದರನ್ನು ಪೃಥ್ವಿ ತನ್ನ ಪ್ರಾಯದ ಕಿರಿತನದ ತೊಡಕಿನೊಡನೆ ಒಲಿಸಿ, ಒಪ್ಪಿಸಿ, ದಿನಮುಂಚಿತವಾಗಿ ಒಂದು ಅಭ್ಯಾಸ ಕೂಟಕ್ಕೂ ಕರೆಸಿ ಪ್ರದರ್ಶನ ಕಳೆಗಟ್ಟಿಸುವ ಛಲ ಸಾಮಾನ್ಯದ್ದಲ್ಲ. ಉಪಾಯ್ದರ ಮತ್ತು ನನ್ನ ಅಲ್ಪಸ್ವಲ್ಪ ಯಕ್ಷ ಚಟುವಟಿಕೆಯ ‘ನಾಮದ ಬಲ’ ಬಳಸಿಕೊಳ್ಳಲು ಪೃಥ್ವೀಗೆ ನಾವು ಸ್ವಾತಂತ್ರ್ಯವನ್ನಷ್ಟು ಕೊಡುವುದು ಬಿಟ್ಟು ಬೇರೇನು ನಮ್ಮಿಂದ ಆಗುವಂತದ್ದಿರಲಿಲ್ಲ.

ಬಡಗಿನಲ್ಲಿ ಸಂಜೀವರಿದ್ದಂತೆ ತೆಂಕಿನಲ್ಲಿ ಸಮತೂಕಕ್ಕೆ ಒದಗುವವರು ಕರ್ಗಲ್ಲು ವಿಶ್ವೇಶ್ವರ ಭಟ್ಟರು. ಪೃಥ್ವಿ ಮುಖ್ಯ ಪಾತ್ರದಲ್ಲಿ ಅವರ ಹೆಸರು ಅಂದಾಜಿಸಿಯೇ ‘ಕುಂಭಕರ್ಣ ಕಾಳಗ’ ಪ್ರಸಂಗ ಘೋಷಿಸಿಕೊಂಡರು. ಆದರೆ ಕಲಾವಿದರ ಪಟ್ಟಿ ಗಟ್ಟಿ ಮಾಡುವ ಕಾಲಕ್ಕೆ ಕರ್ಗಲ್ಲು ಭಾಗಿಯಾಗಲು ಒಪ್ಪಲೇ ಇಲ್ಲ. ನಾನು ವಿಶ್ವೇಶ್ವರ ಭಟ್ಟರನ್ನು ಪರಿಚಯ ಹಿಡಿದು ಕಂಡವನಲ್ಲ, ಮಾತಾಡಿಸಿದ್ದೂ ಇಲ್ಲ. ಆದರೂ ಎಲ್ಲಿಂದಲೋ ಅವರ ಚರವಾಣಿ ಸಂಖ್ಯೆ ಸಂಗ್ರಹಿಸಿ ಸಂಪರ್ಕಿಸಿದೆ. ಸೂಕ್ಷ್ಮದಲ್ಲಿ ನನ್ನ ಪ್ರವರ ಹೇಳಿಕೊಂಡು ಮಾತಿಗಿಳಿಯುವುದರೊಳಗೆ ‘ತಾನು ಪ್ರಯಾಣದಲ್ಲಿದ್ದೇನೆ. ಗಂಟೆ ಬಿಟ್ಟು ಮಾಡಿ’ ಎಂಬ ಸೂಚನೆ ಅವ್ರಿಂದ ಬಂತು. ಮತ್ತೆ ಒಂದೂವರೆ ದಿನ ಅವರ ಚರವಾಣಿ ‘ಸ್ವಿಚ್ ಆಫ್!’ ಅಸಂಖ್ಯ ಪ್ರಯತ್ನಗಳ ಒಂದು ಹಂತದಲ್ಲಿ ಅವರು ಮತ್ತೆ ಸಂಪರ್ಕಕ್ಕೆ ಸಿಕ್ಕರೂ ಅವರಲ್ಲಿದ್ದ ಕಲಾವಿದ ಯಕ್ಷಗಾನದ ಮುಖ್ಯವಾಹಿನಿಗೆ ಸ್ವಿಚ್ ಆಫ್ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳುವುದಷ್ಟೇ ಆಯ್ತು. “ಯಕ್ಷ ಪರಿಸರ ಮಾಲಿನ್ಯದಲ್ಲಿ ನನಗಾಗುವ ವೇಷಭೂಷಣಗಳು, ಸಹಕಲಾವಿದರು, ಯೋಗ್ಯ ಹಿಮ್ಮೇಳ, ಕೊನೆಗೆ ಗ್ರಹಿಸುವ ಸಹೃದಯರೂ ಇಲ್ಲ. (ಆ ಲೆಕ್ಕದಲ್ಲಿ) ನನಗೆ ಯಕ್ಷಗಾನ ಗೊತ್ತಿಲ್ಲ. ನನ್ನನ್ನು ಬಿಟ್ಟುಬಿಡಿ” ಎನ್ನುವ ಮನವಿಯನ್ನು ತೀರಾ ವಿಷಾದದಿಂದ ಎನ್ನುವಂತೆ ನನ್ನಲ್ಲಿ ಹೇಳಿಕೊಂಡರು. ನಾನು ಕೆದಕಿ ಕೇಳಿದಾಗ ಈ ನಿಲುವಿನ ಹಿಂದಿನ ಅವರ ಒಂದೆರಡು ಕಹಿ ಅನುಭವಗಳ ಪರಿಚಯವೇನೋ ನನಗಾಯ್ತು ಆದರೆ ಅದನ್ನು ಮೀರಿ ಅವರನ್ನೊಪ್ಪಿಸುವ ದಾರಿ ನನಗೆ ಕಾಣದಾಯ್ತು. ಮುಂದುವರಿದು ಅವರದೇ ಸಂಶೋಧನೆ, ಸಾಧನೆ ಮತ್ತು ಯೋಜನೆಗಳ ಸೂಕ್ಷ್ಮ ನನ್ನಲ್ಲಿ ಹೇಳಿಕೊಂಡರೂ ನನಗವಮಾನವಾಗದಂತೆ ನಮ್ಮ ಪ್ರದರ್ಶನದ ವೀಳ್ಯವನ್ನು ತಿರಸ್ಕರಿಸಿದರು.

ಹಿಂದೆ ನಂಬಿಯಾರರೂ ಹೇಳಿದ್ದರು (ಮತ್ತೂ ಕರೆಸಿದ್ದರು), ಈಗ ಪೃಥ್ವಿಯೂ ಹೇಳಿದರು, “ಇಂದು ಸಾಂಪ್ರದಾಯಿಕ ಭಾಗವತಿಕೆಗೆ ಬಲಿಪರೊಬ್ಬರೇ.” ನಮಗೇನೂ ವಿರೋಧವಿರಲಿಲ್ಲ. ಆದರೆ ಇನ್ನೊಂದೇ ಸುದ್ಧಿ ಬಂತು, ಬಲಿಪರ ಹೆಸರು ಇಪ್ಪತ್ತೆಂಟರಂದೇ ಕೊಡಮಾಡುವ ಯಾವುದೋ ಒಂದು ಮಹತ್ತರ ಪ್ರಶಸ್ತಿಗೆ ಆಯ್ಕೆಯಾಗಿದೆ. ಆದರೆ ಘೋಷಣೆ ಮಾತ್ರ ತಡವಾಗಿ ಆಗಲಿದೆ. ಬಲಿಪರು ಇದಕ್ಕೂ ಮೊದಲೇ ಪೃಥ್ವಿಗೆ ಒಪ್ಪಿಗೆ ಸೂಚಿಸಿ ಆಗಿತ್ತು. ಆದರೆ “ಪ್ರಶಸ್ತಿ ತಿರಸ್ಕರಿಸಿ ನಮ್ಮಲ್ಲಿಗೇ ಬರುತ್ತೀರಾ ಎಂದು ಬಲಿಪರನ್ನು ಯಾವ ಬಾಯಿಯಲ್ಲಿ ಕೇಳಲಿ” ಪೃಥ್ವಿಗೆ ಸಂಕೋಚ. “ಅಧಿಕೃತವಾಗಿ ಪ್ರಶಸ್ತಿ ಇನ್ನೂ ಘೋಷಿಸದ ಸಂಘಟನೆಯನ್ನು ಕೇಳಹೋದರೆ ಎಲ್ಲಿ ಬಲಿಪರಿಗೆ ಅವಮಾನಕಾರಿಯಾಗಿ ತಿರುಗುತ್ತದೋ” ಪೃಥ್ವಿಗೆ ದ್ವಂದ್ವ! ಅನಿವಾರ್ಯವಾಗಿ ನಾನು ಪರಿಚಯದ ಬಲದಲ್ಲಿ ಸಂಘಟಕರನ್ನು ನೇರ ವಿಚಾರಿಸಿದಾಗ ಹೆಸರಿನ ಗುಟ್ಟು ರಟ್ಟಾಗದಿದ್ದರೂ ದಿನ ಅದಲ್ಲ ಎಂದು ಖಾತ್ರಿಯಾಗಿ, ಅಷ್ಟರ ಮಟ್ಟಿಗೆ ಮನಸ್ಸು ನಿಶ್ಚಿಂತವಾಯ್ತು. ಹೀಗೇ ಕುಂಭಕರ್ಣ ಪಾತ್ರಕ್ಕೆಂದು ನಿಶ್ಚಯವಾಗಿದ್ದ ಜಗದಭಿರಾಮರಿಗೆ ದಿಲ್ಲಿಯಿಂದ ವಿದ್ಯಾ ಕೋಳ್ಯೂರು ಅವರಿಂದ ವಿಮಾನಯಾನದ ಸೌಕರ್ಯದೊಡನೆ ತುರ್ತು ಬುಲಾವ್! ಇಲ್ಲ, ಇವರು ನಿಷ್ಠೆ ಬದಲಾಯಿಸುವ ಪುಡಾರಿಗಿರಿ ಮಾಡಲಿಲ್ಲ. ಇದು ನಮ್ಮ ಉದ್ದೇಶದ ಉದಾತ್ತತೆಗೆ ಸಂದ ಗೌರವವೂ ಹೌದು.

ಕಾಡಮೂಲೆಯಲ್ಲಿ, ಕತ್ತಲಮೊತ್ತದಲ್ಲಿ, ಕೇವಲ ದೀವಟಿಗೆ ಯೋಜಿತ ದಾಖಲೀಕರಣಕ್ಕೆ ಸರಿ. ಆದರೆ ಚೌಕಿಗೆ ದೀಪ ಬೇಕಲ್ಲಾ. ಪ್ರದರ್ಶನಕ್ಕೆ ಸಾರ್ವಜನಿಕರ ಪ್ರವೇಶವನ್ನು ತೀರಾ ಕಡಿತಗೊಳಿಸಿದ್ದೆವು. ಆಮಂತ್ರಣ ಪತ್ರ ಬಿಡಿ, ಸ್ಪಷ್ಟ ಬಾಯ್ದೆರೆ ಕರೆಯನ್ನೂ ನಾವು ಯಾರಿಗೂ ಕೊಡಲಿಲ್ಲ. ಆದರೆ ಯಕ್ಷ-ಸಂಶೋಧಕರು, ಕಷ್ಟಪಟ್ಟಾದರೂ ಗುಣಶುದ್ಧವಾದ್ದನ್ನು ಕಾಣುವ ಗೀಳು (ನಂಬಿಯಾರ್ ಮತ್ತೆ ಮತ್ತೆ ಬಳಸುವ ಶಬ್ದ) ಹತ್ತಿಸಿಕೊಂಡವರನ್ನಂತೂ ನಾವು ದೂರಮಾಡುವಂತಿರಲಿಲ್ಲ. ಈ ಜನ, ಆವಶ್ಯಕ ಓಡಾಟ, ಹೊಟ್ಟೆಪಾಡು, ಅಪರಾತ್ರಿಯಲ್ಲಿ ಪ್ರದರ್ಶನ ಮುಗಿದಮೇಲೆ ವಿಶ್ರಾಂತಿಗಳಿಗೆಲ್ಲ ವ್ಯವಸ್ಥೆಬೇಡವೇ? ನನ್ನ ಅಂಗಡಿ ನವೀಕರಣದಲ್ಲಿ ಕಿತ್ತು ಗುಡ್ಡೆ ಹಾಕಿದ ಒಂದಷ್ಟು ವಯರು ಮನೆಯಲ್ಲಿತ್ತು. ಅದಕ್ಕೊಂದಷ್ಟು ಟೇಪು, ಹೋಲ್ಡರು, ಬಲ್ಬು ಜೋಡಿಸಿ ಚೌಕಿಗೂ ಕಾಡ್ಮನೆಗೂ ತತ್ಕಾಲೀನ ವಯರಿಂಗ್ ಮಾಡಿದೆ. ನನ್ನಂಗಡಿಯ ಮತ್ತು ನೆರೆಯಂಗಡಿಯ ಮಹಮ್ಮದರ (ಔದಾರ್ಯದ) ಜನರೇಟರ್ ಸಂಪರ್ಕದಲ್ಲಿ ಅವನ್ನು ಝಿಗ್ಗಗೊಳಿಸಿದ್ದಾಯ್ತು! ಆಯಕಟ್ಟಿನ ಜಾಗಗಳಿಗೆ ಕೆಲವು ಮಿತ್ರರ ಎಮರ್ಜೆನ್ಸಿ ದೀಪಗಳು, ಉಸ್ತುವಾರಿಯವರಿಗೆ ಸತ್ಯನ ರಬ್ಬರ್ ಕೊಯ್ಕರ ತಲೆದೀಪಗಳೂ ತಯಾರಿದ್ದವು.

ಸಾಮಾನು, ಸರಂಜಾಮು ಒಟ್ಟು ಮಾಡಿ ರಂಗದಿಂದೊಂದಷ್ಟು ದೂರದಲ್ಲೋ ಕಾಡ್ಮನೆಯಲ್ಲೋ ಎಡೆಂಬಳೆ ಮನೆಯಲ್ಲೋ ದೊಡ್ಡ ಒಲೆಹೂಡಿ, ಎರಡು ಅಡಿಗೆಯವರನ್ನು ತರಿಸುವ ಯೋಚನೆಯೂ ಬಂತು. ಉಪಾಯ್ದರು ಅದನ್ನು ನಿರಾಕರಿಸಿ ಗೃಹಿಣಿಯರ ಹೊರೆ ಇಳಿಸಿದರು. ಅವರ ಪರಿಚಯ ಬಲದಲ್ಲಿ ಹೊತ್ತು ಹೊತ್ತಿಗೆ ಬಿಸಿಬಿಸಿ ಸಿದ್ಧ ಆಹಾರವನ್ನಷ್ಟೇ ಮಂಗಳೂರಿನಿಂದ ಸಾಗಿಸಿ ತಂದು ಸಮರ್ಥವಾಗಿ ವಿತರಿಸುವ ಜನ ನಿಷ್ಕರ್ಷಿಸಿಬಿಟ್ಟರು. ಆದರೂ ಮನೆ ಎಂದ ಮೇಲೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದಿರುವುದು ಹೇಗೆ?

೧೯೯೯ರಲ್ಲಿ ಅಭಯಾರಣ್ಯದ ನೆಲ ನನ್ನ ಹೆಸರಿಗೆ ಬಂದರೂ ‘ಕಾಡ್ಮನೆ’ಯೊಂದಿಗೆ ರೂಪ ನಿಶ್ಚಯವಾದದ್ದು ೨೦೦೦ದಲ್ಲಿ. ಯಾವುದೇ ಮರಗಿಡವಿರಲಿ, ಪೊದರನ್ನೂ ಕಳೆಯದೆ, ಭಾರೀ ಅಡಿಪಾಯ, ವಿಷಗಿಷ ಬಳಸದೆ ಕಾಡ್ಮನೆಯನ್ನು ಕಟ್ಟಿಸಿದ್ದೆವು. ರಚನೆಗಳೆಲ್ಲ ಖಾಯಂಸ್ವರೂಪದ್ದೇ ಆದರೂ ನಯಗಾರಿಕೆಗೆ ಅಥವಾ ಅವುಗಳ ಆಯುಷ್ಯ ವೃದ್ಧಿಗೇ ಬೇಕಾದ ಸುಣ್ಣ ಬಣ್ಣಕ್ಕೂ ಹೆಚ್ಚು ಗಮನ ಕೊಟ್ಟಿರಲಿಲ್ಲ. ಸಂದ ಹತ್ತು ವರ್ಷದಲ್ಲಿ ತುಕ್ಕು ಹಿಡಿದ ಗೇಟು, (ಕಬ್ಬಿಣದ) ಬಾಗಿಲು, ಸಾರಣೆ ಕಾಣದ ಹೊರಗೋಡೆಯಲ್ಲಿನ ಪಾಚಿ, ಒಳಗೋಡೆಯಲ್ಲಿನ ಗೆದ್ದಲ ‘ಬಳ್ಳಿಗಳು’, ಮುಪ್ಪಡರಿದ ಕಿಟಕಿ ಚೌಕ, ದಾರಂದಗಳೆಲ್ಲಕ್ಕೂ (ಕಾಂಕ್-ವುಡ್ಡಿನವು) ನಾಗರಿಕ ಚಿಕಿತ್ಸೆ ಕೊಡಿಸಲೇ ಬೇಕಾಯ್ತು. ಅದರ ಮುಗಿತಾಯದೊಡನೆ ಅಲ್ಲಿನ ನಮ್ಮ ಕನಿಷ್ಠ ಆವಶ್ಯಕತೆಯ ಎರಡು ಪಾತ್ರೆ, ನಾಲ್ಕು ಬಟ್ಟೆಗಳಿಗೆ ವ್ಯವಸ್ಥಿತ ಬಲ ಕೊಟ್ಟು ಬೆಚ್ಚನ್ನ ಮನೆಯಾಗಿಸುವ ಕೆಲಸದಲ್ಲಿ ದೇವಕಿ ಏಕಾಂಗಿ! (ನನ್ನ ವಿರೋಧವುಂಟೆಂದು ನೀವು ತಪ್ಪು ತಿಳಿಯಬಾರದು, ಸಹಕಾರ ಕಡಿಮೆಯಾದ್ದು ಮಾತ್ರ ನಿಜ) ಊಟ ಕಾಫಿ ಎಷ್ಟು ಬಂದರೂ ಎಲ್ಲಾ ಪೂರ್ವ ನಿಶ್ಚಿತ. ಅಲ್ಲೇನಾದರೂ ಕೊರತೆ ಬಂದರೆ? “ಹೆಸರು ಏನಾದರೂ ಇಟ್ಟುಕೊಳ್ಳಿ. ಆಕಸ್ಮಿಕಗಳಿಗೆ, ಅನಿವಾರ್ಯಗಳಿಗೆ ಒದಗದಿರುವ ಮನೆ ಮನೆಯೇ? ನಡೆಸುವಾಕೆ ಗೃಹಿಣಿಯೇ” ಎಂಬ ಪ್ರಶ್ನೆಗಂತೂ ದೇವಕಿಯೇ ಉತ್ತರಿಸಬೇಕಾಗುತ್ತಿತ್ತು. ಸಹಜವಾಗಿ ಅಂದು ಅಕ್ಕಿ, ಮೇಣ, ಸೂಜಿ, ರಿಗೆಯಿಂದ ಹೆಚ್ಚುವರಿ ಹಾಲು ಮೊಸರಿನವರೆಗೆ ಕಾಡ್ಮನೆ ‘ಮದುವೆಮನೆ’ಯೇ ಆಗಿತ್ತು!

ಅಭಯ ಬೆಂಗಳೂರಿನಲ್ಲಿ ಅವನ ವೃತ್ತಿಪರ ಸಂಪರ್ಕದಲ್ಲಿ ಕ್ಯಾಮರಾ ಮತ್ತು ಧ್ವನಿ ತಂತ್ರಜ್ಞರನ್ನು ಮುಂಗಡ ಕೊಟ್ಟು ಸಜ್ಜುಗೊಳಿಸಿದ್ದ. ಯಕ್ಷಗಾನ ದಾಖಲೀಕರಣದ ಮಾಡು, ಮಾಣ್‌ಗಳ (ಅಪ್ಪಟ ಕನ್ನಡಿಗರಿಗಾಗಿ: do s & don’ts) ವಿವರಗಳನ್ನು ಅವನೇ ತನ್ನ ಬ್ಲಾಗಿನಲ್ಲಿ ಈಗಾಗಲೇ ಸಾಕಷ್ಟು ಚರ್ಚಿಸಿರುವುದರಿಂದ ನಾನು ಲಂಬಿಸುವುದಿಲ್ಲ (ಕತ್ತೆ ಮೇದಲ್ಲಿ ಇನ್ನು ಮೇವುಂಟೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ). ಅವನ ಇತರ ಕೆಲಸಗಳು, (ಅವನ ಹೆಂಡತಿ) ರಶ್ಮಿಯ ಬಿಡುವುಗಳು (ಟೀವೀ ಧಾರಾವಾಹಿಗಳ ಲೋಕದಲ್ಲಿ ಮೊದಲ ಹೆಜ್ಜೆಗಳನ್ನಿಡುತ್ತಿದ್ದಾಳೆ) ಪರಿಹರಿಸಿಕೊಳ್ಳುತ್ತಿದ್ದಂತೆ ದಿನಗಳ ಓಟವ್ಯಾಕೋ ಚುರುಕಾದಂತೆ ಅನ್ನಿಸಿತು! ಎರಡು ದಿನವಿರುವಂತೆಯೇ ಅಭಯ ಸ್ವಂತ ಕ್ಯಾಮರಾ ಹೊತ್ತುಕೊಂಡೇ ಬಂದ. ಉಡುಪಿಗೆ ಹೋಗಿ ಪೂರ್ವ ತಯಾರಿಯ ದೃಶ್ಯಗಳನ್ನಷ್ಟು ಹಿಡಿದು ತಂದ. ಪ್ರದರ್ಶನದ ಮುನ್ನಾ ದಿನ ಕಿನ್ನಿಗೋಳಿಯಲ್ಲಿ ತೆಂಕುತಿಟ್ಟಿನ ಕಲಾವಿದರೆಲ್ಲ ಸೇರಿ ಅಭ್ಯಾಸ ನಡೆಸಿದರು. ಅಭಯ ಇದಕ್ಕೂ ಹೋಗಬೇಕಿತ್ತು. ಉಡುಪಿಗೆ ಹೋಗಿಬಂದವನಿಗೆ ಹಿಡಿದ ಶೀತ ಹೆದರಿಸಿತು. ಮರುದಿನವಂತೂ ಗಟ್ಟಿಯಿರಬೇಕಲ್ಲಾಂತ ವಿಶ್ರಾಂತಿಗೆ ಶರಣಾದ.

ಇಪ್ಪತ್ತೇಳರ ಕತ್ತಲಾವರಿಸುತ್ತಿದ್ದಂತೆ ಅಭಯನ ಬೆಂಗಳೂರಿನ ಚರವಾಣಿ ಸಂಪರ್ಕ ಹೆಚ್ಚಿತು. ಕ್ಯಾಮರಾಮ್ಯಾನ್ ಧರ್ಮೇಂದ್ರ ಅಲ್ಲಿನ ಏಕ ಸೂತ್ರಧಾರಿ. ‘ವ್ಯಾನ್ ಬಂತು’, ‘ಎರಡು ಕ್ಯಾಮರಾ, ಜೊತೆಗೆರಡು ಕ್ಯಾಮರಾ ಸಹಾಯಕರೂ ಸೇರಿಕೊಂಡರು’, ‘ಆಕಸ್ಮಿಕಗಳಿಗೊದಗುವಂತೆ ಕೆಲವು ವಿದ್ಯುದ್ದೀಪ ಜೊತೆಗೊಬ್ಬ ಎಲೆಕ್ಟ್ರೀಷಿಯನ್’, ‘ಧ್ವನಿ ತಜ್ಞ, ಚಾಲಕ ಪ್ರತ್ಯೇಕ’ ಎಂದಿತ್ಯಾದಿ ಅಭಯನಿಂದ ವರದಿ ಬರುತ್ತಲೇ ಇತ್ತು. ಮೈಸೂರು ದಾರಿಯಲ್ಲಿ ಬರುವ ತಂಡ ಮೊದಲು ಮಂಗಳೂರಿಗೆ ಬಂದು, ನಮ್ಮನೆಯಲ್ಲಿ ಪ್ರಾತರ್ವಿಧಿಗಳನ್ನು ಮುಗಿಸಿ ಅಭಯಾರಣ್ಯಕ್ಕೆ ಹೋಗುವುದೆಂದು ನಿಶ್ಚೈಸಿದ್ದೆವು. ಹಾಗಾಗಿ ಎಡೆ ಎಡೆಯಲ್ಲಿ ಉಪಾಯ್ದರ, ಸತ್ಯನ ಮತ್ತೆ ಮರುದಿನ ಪ್ರೇಕ್ಷಕರಾಗಿ ಬರುವ ಅಸಂಖ್ಯರ ಕಿಣಿಕಿಣಿಯೋ ಕಿಂಕಿಣಿ!

ನಾನು ಸರಕಾರೀ ಬಕ್ರೀದ್ ರಜೆಯನ್ನು ಸದುಪಯೋಗಪಡಿಸುವಂತೆ ಮೂರ್ನಾಲ್ಕು ದಿನ ಮೊದಲೇ ಅಂಗಡಿಯಲ್ಲಿ ಪ್ರದರ್ಶನಕ್ಕಿಟ್ಟು ರಾತ್ರಿ ಬಾಗಿಲ ಮೇಲೆ ‘೨೮ ಶನಿವಾರ ಅತ್ರಿಗೆ ವಿಶೇಷ ರಜೆ’ ಪ್ರಕಟಣೆ ಅಂಟಿಸಿ ಬಂದಿದ್ದೆ. (ಮೊದಲೇ ದೂರವಾಣಿಸಿ ಕೇಳಿದ ಕೆಲವರಿಗೆ ‘ಬಕ್ರೀದ್ ರಜೆ’ ಎಂದೇ ಹೇಳಿ ಕಾಲೆಳೆದಿದ್ದೆ!) ಮನೆಯ ವಠಾರದಲ್ಲೇ ಚಿಕಿತ್ಸಾಲಯವೂ ಇದ್ದ ಉಪಾಯ್ದರ ಕೆಲಸ ಇಷ್ಟು ಸುಲಭದ್ದಲ್ಲ. ಕೆಲಸದ ವೇಳೆ ಎಂಟರಿಂದ ಎಂದು ಫಲಕ ಹಾಕಿದ್ದರೂ ಏಳೂವರೆಗೇ ಬೊಗಳುವವರು, ಪರಚುವವರು ಅಂಗಳದಲ್ಲಿ ಸಂತೆ ಸೇರುತ್ತಾರೆ! ಓ ಕ್ಷಮಿಸಿ, ನಿಮಗೆ ಗೊತ್ತಿರಲಾರದು, ಉಪಾಯ್ದರು ಪಶುವೈದ್ಯರು. ನಾ ಹೇಳಿದ್ದು ಸರಪಳಿಯ ಕೊನೆಯಲ್ಲಿರುವ ನಾಯಿ, ಮುದ್ದಿನ ಅಪ್ಪುಗೆಯಲ್ಲಿರುವ ಬೆಕ್ಕುಗಳ ಸಮಾಜಾರ. ಅದೇನೇ ಇರಲಿ ಅವರು ರಜೆಯನುಭವಿಸಬೇಕೆಂದಿದ್ದರೆ ಏಳೂವರೆಯೊಳಗೇ ಮನೆಬಿಡಲೇ ಬೇಕಿತ್ತು. ಹಾಗೆಂದು ಅಂದು ಮಡದಿ ಮಗನನ್ನು ಹೊರಡಿಸುವಂತೆಯೂ ಇರಲಿಲ್ಲ. (ಮಗ – ಸುಧನ್ವನಿಗೆ ಶಾಲೆ, ಮಡದಿ ದಂತವೈದ್ಯೆ ವಿದ್ಯಾರಿಗೆ ಮಗನ ಮತ್ತು ವೃತ್ತಿ ಜವಾಬ್ದಾರಿ.) ಹಾಗಾಗಿ ಒಂದು ಜನರೇಟರ್ ಅವರ ಕಾರಿಗೆ ದಿನ ಮುಂಚಿತವಾಗಿಯೇ ಏರಿಸಿದ್ದರೂ ನಮ್ಮ ಮನೆಯಿಂದ ಹೋಗುವ ಹೆಚ್ಚುವರಿ ಸಾಮಾನು ತುಂಬಿಸಿಕೊಳ್ಳುವ ನೆಪ ಮಾಡಿ ಅವರೂ ನಮ್ಮನೆಗೇ ಬೇಗ ಬರುವುದಿತ್ತು.

ಸಂಭ್ರಮವೋ ಆತಂಕವೋ ನಮಗೆ ಮಲಗಿದ್ದು ಮಲಗಿದಂತಾಗಲಿಲ್ಲ. ನಾಳೆ ಇಡೀ ದಿನ ಬಿಸಿಲಲ್ಲಿ, ಗುಡ್ಡೆ ಕಾಡಿನಲ್ಲಿ ಓಡಾಡಿ, ಕೆಲಸ ಮಾಡಿ ರಾತ್ರಿಯೂ ನಿದ್ದೆಗೆಡಬೇಕಾಗುತ್ತದೆ ಎಂಬರಿವಿದ್ದರೂ ರೆಪ್ಪೆಗಳ ಮಸಲತ್ತಿನ ಆಳದಲ್ಲಿ ನಿದ್ರೆ ಮಾತ್ರ ನಾಸ್ತಿ. ರಾತ್ರಿ ಎಂಟೊಂಬತ್ತು ಗಂಟೆಗೇ ಬೆಂಗಳೂರು ಬಿಡುವ ವ್ಯಾನಿಗೆ ಬಸ್ಸುಗಳಂತೆ ವೇಗಮಿತಿ ಏನೂ ಇರುವುದಿಲ್ಲ. ಮತ್ತೆ ಬೇಗ ಗುರಿ ಸೇರಿದರೆ ಹೆಚ್ಚಿನ ವಿಶ್ರಾಂತಿಯ ಅವಕಾಶವೂ ಇರುತ್ತದೆ. ಅಂದರೆ ಬೆಳಗ್ಗಿನ ಮೂರು-ನಾಲ್ಕು ಗಂಟೆಗೇ ಬಂದರೆ? ಮಲಗಲೂ ವ್ಯವಸ್ಥೆಯಾಗಬೇಕು. ಒಮ್ಮೆಗೇ ನಾವು ನಾಲ್ವರಲ್ಲದೆ ಅವರು ಆರ್ವರಿಗೂ ಸ್ನಾನೇತ್ಯಾದಿಗಳಿಗೆ ಮಾಮೂಲೀ ಸಣ್ಣ ಕಡಾಯದ ನೀರು ಸಾಕೇ? ಮೇಲಿನ ಬಚ್ಚಲಲ್ಲಿ ಮೂಲೆಗೆ ಬಿದ್ದ ಬಾಯ್ಲರ್ ಸಜ್ಜುಗೊಳಿಸಬೇಕು. ನಾಳೆ ಯೋಜನೆಯಂತೆ ಆಟ ಮುಗಿಯುವಾಗ ಹನ್ನೊಂದೂವರೆ ಹನ್ನೆರಡಾದರೆ ಹಲವರು ಕಾಡ್ಮನೆಯಲ್ಲಿ ಉಳಿದಾರು. ಅಂದರೆ ಮರುದಿನ ಬೆಳಿಗ್ಗೆ ಅವರಿಗೆ ಕನಿಷ್ಠ ಚಾ ಅವಲಕ್ಕಿಯಾದರೂ ನಾವು ಕೊಡಬೇಕಲ್ಲವೇ? ಹಾಲೇನು ಮಾಡುವುದು? ಎಡೆಂಬಳೆ ಮನೆಯ ಫ್ರಿಜ್ಜಿನಲ್ಲಿಟ್ಟು ಬೆಳಕು ಹರಿಯುವ ಮುನ್ನ ಅಲ್ಲಿಗೆ ಹೋಗಿ ತರಬೇಕು. ಅಂದಹಾಗೆ ದೀವಟಿಗೆಯ ಒಂದು ಜೊತೆಗೆ ಐದೂ ಗಂಟೆಗೆ ಒಂದೇ ಗ್ಯಾಸ್ ಅಂಡೆ ಸಾಕೇ? ನಮ್ಮನೆಯ ಎರಡಕ್ಕೆ ಎಡೆಂಬಳೆ ಮನೆಯ ಎರಡು ಬೆಂಬಲಕ್ಕೇನೋ ಸಜ್ಜುಗೊಳಿಸಿದ್ದೆವು. ದೀವಟಿಗೆಯ ಬರ್ನರ‍್ಗಳಾದರೋ ಮನೆಯ ಸ್ಟೌನದ್ದಕ್ಕಿಂತ ದೊಡ್ಡವು. ಎಲ್ಲಾದರೂ ಎರಡು ಜೊತೆ ದೀವಟಿಗೆಗಳು ನಾಲ್ಕೂ ಅಂಡೆ ಮುಗಿಸಿಬಿಟ್ಟರೆ? ಪ್ರೇಕ್ಷಕರಿಗೆ ಹತ್ತು ಮಿನಿಟು ವಿರಾಮ ಕೊಟ್ಟು ಮೋಂಟುಗೋಳಿಯ ಬಾಬು ಹೋಟೆಲಿಗೋ ಅಂಗಡಿಗೋ ಅವೇಳೆಯ ಯಾಚಕರಾಗಲೇಬೇಕು! ಒಟ್ಟಾರೆ ಮನೆಯಲ್ಲಿದ್ದೂ ಕೃಷ್ಣನ ಮುಖಾಮುಖಿಗೂ ಮೊದಲ ರಾತ್ರಿಯಲ್ಲಿ ರಂಗ ತುಂಬಾ ಹೊರಳುವ ಕಂಸನ ಸ್ಥಿತಿ ನನ್ನದು! ಯಕ್ಷೋಪಮೆಯ ಹುಡುಕಾಟದಲ್ಲಿ ನಿಮಗೆ ಸಾಯುವ ಅಥವಾ ಕೊಲ್ಲುವ ಚಿತ್ರ ಕೊಟ್ಟದ್ದಕ್ಕೆ ಕ್ಷಮೆಯಿರಲಿ. ೨೮ರ ಬೆಳಿಗ್ಗೆ ನಾನಂತೂ ಐದು ಗಂಟೆಯ ಗುರಿಯತ್ತ ದೌಡಾಯಿಸುತ್ತಿದ್ದ ಅಲಾರಾಂ ಗಡಿಯಾರವನ್ನು ಎರಡು ಗಂಟೆಗೂ ಮೊದಲೇ ಸೋಲಿಸಿದ್ದಂತೂ ನಿಜ!

ಮತ್ತೇನಾಯ್ತೂ?

ಇಷ್ಟುದ್ದಕ್ಕೆ ಬೋರಿದವನ ಬಳಿ ನಿಮಗಿನ್ನೂ ಕುತೂಹಲವುಳಿದಿದೆಯೇ?! ಖಂಡಿತಾ ಮುಂದಿನವಾರ ತಿಳಿಸುತ್ತೇನೆ. ದಯವಿಟ್ಟು ಅಲ್ಲಿಯವರೆಗೆ ಕಾಯುತ್ತೀರಲ್ಲಾ? ದಾರಿಖರ್ಚಿಗೆ ನಮ್ಮ ಪ್ರದರ್ಶನದ ಹಲವು ಸ್ಥಿರಚಿತ್ರಗಳನ್ನು ಈಗಾಗಲೇ ಗೆಳೆಯರಾದ ಡಾ|ಕೃಷ್ಣಮೋಹನ್ ಮತ್ತು ಪ್ರಸನ್ನ ಅವರವರ ಬ್ಲಾಗಿಗೇರಿಸಿದ್ದರ ಸೇತು ಕೊಟ್ಟಿದ್ದೇನೆ. ನೋಡಿ ಸಂತೋಷಿಸಿ. ಆದರೆ ನನ್ನ ‘ದೀವಟಿಗೆ’ ನಂದಾದೀಪವಾಗುವಂತೆ ಕೆಳಗಿರುವ ಪ್ರತಿಕ್ರಿಯೆಯ ಒಳಲೆಗೆ ನಿಮ್ಮುತ್ಸಾಹದ ಎಣ್ಣೆ ಹೊಯ್ಯುವುದನ್ನು ಮರೆಯಬೇಡಿ. (ನೋಡಿ: ಡಾ| ಕ್ರಿಷಿಯ ಚಿತ್ರ ಕೃಷಿ ಮತ್ತು ಪ್ರಸನ್ನ ಚಿತ್ರಣಗಳು)