(ತಾತಾರ್-೨)

[ವಿ.ಸೂ: ಮುಂದೆ ಹಳಗಾಲದ ನಿರೂಪಣೆಯ ಉದ್ದಕ್ಕೆ ಈ ತೆರನ [ ] ದೊಡ್ಡ ಕಂಸದೊಳಗೆ ಈ ಕಾಲದ ವಗ್ಗರಣೆ ಅಥವಾ ಟಿಪ್ಪಣಿ ಎನ್ನಿ, ಹಾಕುತ್ತಿರುತ್ತೇನೆ]

ಡಿಸೆಂಬರ್ ೧೫, ೧೯೭೧ರ ಬೆಳಿಗ್ಗೆ ನಾನು ನಾಲ್ಕು ಗಂಟೆಗೇ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ, ಅವಸರದಲ್ಲಿ ತಿಂಡಿ ಕುಡಿದು ಕಾಫಿ ತಿಂದೆ. ಪ್ಯಾಂಟು ಶರಟುಗಳೊಳಗೆ ತೂರಿದ್ದಲ್ಲದೆ ಊಟಿಯ ಚಳಿಯ ನಿರೀಕ್ಷೆಯಲ್ಲಿ ತಂದೆಯ ಹಳೆಯ ಕೋಟೊಂದನ್ನೂ ಏರಿಸಿಕೊಂಡೆ. [ಆ ಪ್ರಾಯದಲ್ಲಿ ‘ಕೊಡಗಿನವನಾದ’ ನಾನು, ಸ್ವೆಟ್ಟರ್ ಬಳಸುವುದು ಅವಮಾನಕಾರಿ ಎಂದೇ ಇತ್ತು, ನನ್ನಲ್ಲಿರಲೂ ಇಲ್ಲ!) ಮಧ್ಯಾಹ್ನದ ಊಟಕ್ಕೆ ಮಿತ್ರರೊಡನೆ ಹಂಚಿ ತಿನ್ನಲು ಕಟ್ಟಿಟ್ಟ ರೊಟ್ಟಿಗಂಟನ್ನು ದಿನಮುಂಚಿತವಾಗಿ ಇತರ ಸಾಮಾನುಗಳನ್ನು ತುಂಬಿ ಸಜ್ಜುಗೊಂಡಿದ್ದ ಸುಲಭೋಪಾಯದ ಬೆನ್ನುಚೀಲದಲ್ಲಿ ಇರುಕಿಸಿ, ಅದರ ಬಾಯಿ ಬಿಗಿದು ಬೆನ್ನಿಗೇರಿಸಿದೆ. ಬಲಗೈಯಲ್ಲಿ ಗಾಂಧೀ ಬಂಟ – ಊರುಗೋಲು. ಕಾಲಿಗೆ ಬೇಟೆಗಾರನ ಪಾದರಕ್ಷೆ ಅಥವಾ ಹಂಟರ್ ಶೂ. ನನ್ನಲ್ಲಿ ಅಷ್ಟಾಗಿ ಪ್ರಾಮುಖ್ಯ ಸಲ್ಲಬೇಕಿಲ್ಲದ ತಲೆಗೆ ಕಾಡುಟೊಪ್ಪಿ ಅಥವಾ ಜಂಗಲ್ ಹ್ಯಾಟ್.
[ಬೆನ್ನುಚೀಲದ ಬಗ್ಗೆ: ಈಗ ಪ್ರತಿ ವಿದ್ಯಾರ್ಥಿಯ ಬಳಿಯೂ ಕಾಣುವ ಸಾವಿರಾರು ನಮೂನೆಯ, ವರ್ಣದ, ಗಾತ್ರದ ಬೆನ್ನುಚೀಲಗಳು ಆ ಕಾಲದಲ್ಲಿ ಸಾಮಾನ್ಯ ಮಾರುಕಟ್ಟೆಗೆ ಪರಿಚಯವೇ ಇರಲಿಲ್ಲ. ಎನ್.ಸಿ.ಸಿಯಿಂದ ಎರವಲು ಪಡೆದ ಬ್ಯಾಕ್-ಪ್ಯಾಕ್ ಮೂರು ದಿನದ ಆವಶ್ಯಕತೆಗಳನ್ನು ತುಂಬಿಕೊಳ್ಳಲು ತುಂಬಾ ಸಣ್ಣದಾಗುತ್ತಿತ್ತು. ಆದರೆ ಎನ್.ಸಿ.ಸಿ ಯಲ್ಲಿರುತ್ತಿದ್ದ ಸೈನಿಕರ ಖಾಸಗಿ ಸೊತ್ತು ‘ಪ್ಯಾಕ್-೦-೮’ ನ ವೈಭವವನ್ನು ನಮ್ಮ ತಂಡದಲ್ಲಿ ಅನೇಕರು ಹೊಂದಿದ್ದರು. ಅದೂ ದಕ್ಕದ ನಾನು ಸಣ್ಣ ಸಕ್ಕರೆ ಗೋಣಿಯೊಂದನ್ನು ಕೈಯಾರೆ ಕತ್ತರಿಸಿ, ದಪ್ಪ ಸೂಜಿಯಲ್ಲಿ ಟ್ವೈನ್ ದಾರದಲ್ಲಿ ಹೊಲಿದು (ಎರಡು ಸೂಜಿ ಮುರಿದು, ಅಮ್ಮನಿಂದ ಬೈಸಿಕೊಂಡದ್ದು ಇಲ್ಲಿ ಹೇಳುವುದಿಲ್ಲ), ಪೇಟೆಯಲ್ಲಿ ದೊರೆಯುತ್ತಿದ್ದ ದಟ್ಟಿ (= ಬಹುಶಃ ಗೋಣಿ ನಾರಿನಿಂದ ಸುಮಾರು ಮೂರು ಬೆರಳಗಲಕ್ಕೆ ದಪ್ಪವಾಗಿ ಮತ್ತು ಬಿಗುವಾಗಿ ಹೆಣೆದು ಮಾಡಿದ ಉದ್ದದ ಬೆಲ್ಟು ಎನ್ನಿ) ಹೊಂದಿಸಿ ಮಾಡಿಕೊಂಡ ಬೆನ್ನುಚೀಲದಿಂದ ಉಳಿದವರ ಅಸೂಯಾದೃಷ್ಟಿಗೂ ಗುರಿಯಾಗಿದ್ದೆ ಎಂದರೆ ಇಂದು ನೀವೆಲ್ಲಾ ನಗುತ್ತೀರೋ ಏನೋ!]
ಐದೂಕಾಲಕ್ಕೆ ಮನೆಬಿಟ್ಟೆ. ಹತ್ತಿರದಲ್ಲೇ ಇದ್ದ ಗೆಳೆಯ ಗಿರೀಶನ ಮನೆ ಮುಂದೊಂದು ಕೂಗು. ಅವನದೇ ರೀತಿಯಲ್ಲಿ ಸಜ್ಜುಗೊಂಡ ಗಿರೀಶ ಹೆಚ್ಚಿನ ದೊಣ್ಣೆಗಳ ಕಟ್ಟೊಂದರ ಸಹಿತ ಹೊರಬಂದ. ಎಲ್ಲ ಆರೋಹಿಗಳ ಅನುಕೂಲಕ್ಕಾಗಿ ಇದನ್ನು ಸಂಗ್ರಹಿಸಿ ತರಲೊಪ್ಪಿದ್ದ ಗಿರೀಶ್ ಮೂರು ನಾಲ್ಕೆಡೆಗಳಲ್ಲಿ ಆಗ ಬಾ, ಈಗ ಬಾ, ಹೋಗಿ ಬಾ ಎನ್ನಿಸಿಕೊಂಡು, ಹೊತ್ತ ಹೊಣೆಯ ಮರ್ಯಾದೆಗಾಗಿ ಕಷ್ಟಪಟ್ಟುದರ ಫಲವಾಗಿ ಆ ಹತ್ತೇ ದೊಣ್ಣೆಗಳ ಕಟ್ಟು ಹಿಂದಿನ ರಾತ್ರಿ ಸಿಕ್ಕಿತ್ತಂತೆ. ಅವನ್ನು ಗಿರೀಶನ ಗೆಳೆಯನೊಬ್ಬ ಸೈಕಲ್ ಮೇಲೇರಿಸಿ, ನಮ್ಮೊಡನೆ ನಡೆದುಕೊಂಡು ಬಸ್ ನಿಲ್ದಾಣಕ್ಕೆ ತಂದುಕೊಟ್ಟ.

[ಆ ಕಾಲದಲ್ಲಿ ಅಕಾಲದಲ್ಲೂ (ಉಳಿದ ಕಾಲದಲ್ಲಿ ಸಿಟಿ ಬಸ್ಸು ಮಾತ್ರ ನಮ್ಮದು) ನಾವು ಆಟೋ ರಿಕ್ಷಾ, ಮೈಸೂರಿನ ಬಹುಜನಪ್ರಿಯ ವಾಹನ ಟಾಂಗಾ, ಟ್ಯಾಕ್ಸಿಗಳೆಲ್ಲಾ ಬಳಸಿದವರಲ್ಲ. ಒಂದೆರಡು ಬಾರಿ ನನ್ನಮ್ಮನಿಗೆ ಊರಿಗೆ ಹೋಗಲು ದಿನದ ಮೊದಲ ಬಸ್ಸು ಹಿಡಿಯುವ ಪ್ರಸಂಗ ಬಂದಾಗ ತಂದೆಯೋ ನಾನೋ ಸೈಕಲ್ಲಿನಲ್ಲಿ ಡಬ್ಬಲ್ ರೈಡ್ ಮಾಡಿಕೊಂಡೋಗಿ ಬಿಟ್ಟದ್ದು ಅಮ್ಮ ಜ್ಞಾಪಿಸಿಕೊಳ್ಳುತ್ತಿರುತ್ತಾಳೆ. ಇಂದು ನನ್ನಲ್ಲಿ ಬೈಕು ಕಾರುಗಳಿದ್ದರೂ ಇಲ್ಲದವರು ಹೊಸ್ತಿಲು ದಾಟುವಾಗಲೇ “ಆಟೋ” ಕರೆಕೊಡುವುದು ನೋಡುವಾಗ ‘ಅವರ ಆರ್ಥಿಕತೆ ತಡೆದೀತೇ’ ಎಂದು ನನಗೆ ಆತಂಕವಾಗುತ್ತದೆ]

ಸಾಹಸ ಯಾತ್ರೆಯ ಸದಸ್ಯರು, ಸಾಮಾನು ಸರಂಜಾಮುಗಳೆಲ್ಲಾ ಆರು ಗಂಟೆಯ ಬಸ್ಸಿನಂದಾಜಿಗೆ ಸರಿಯಾಗಿಯೇ ನಿಲ್ದಾಣದಲ್ಲಿ ಸೇರಿದ್ದೆವು. ನಮ್ಮ ಮುಂದಾಲೋಚನೆ ಹಿಗ್ಗಿತ್ತು – ಗುಂಡ್ಲುಪೇಟೆ, ಗುಡಲೂರು ಬಸ್ಸು ಹೊರಟದ್ದು ಒಂದು ಗಂಟೆ ತಡ. ಕೆಲವು ಸದಸ್ಯರ ಕುಟುಂಬದವರು, ಗೆಳೆಯರು ಅಷ್ಟು ಬೇಗನೇ ಬಂದು, ಕಾದು ಬೀಳ್ಕೊಡುತ್ತಿದ್ದಂತೆ ಗಡಿಯಾರ ಗೋಪುರ ಬಾರಿಸಿತು ಏಳು. ಮೈಸೂರು ಉದಕಮಂಡಲ ದಾರಿಯ ಮೇಲೆ ಪ್ರಯಾಣಾರಂಭ. ನಮ್ಮ ದೃಷ್ಟಿಯೆಲ್ಲ ಎಡಕ್ಕೆ ಕೀಲಿಸಿತ್ತು. ಸ್ವಲ್ಪದರಲ್ಲೇ ಕಣ್ಣು ತುಂಬಿದಳು ಬೆಟ್ಟ ಚಾಮುಂಡಿ, ಮೈಸೂರಿನ ಪರ್ವತಾರೋಹಿಗಳ ತಾಯಿ. ತನ್ನ ಮಡಿಲಲ್ಲಿ ಬಿಸಿಲು ಮಳೆಯೆನ್ನದೆ ಹಾರಾಡಿದ ಮಕ್ಕಳ ಮುನ್ನಡೆಯನ್ನು ಕಂಡು ಹೆಮ್ಮೆಯಿಂದ ತಲೆ ಎತ್ತಿ ನಿಂತು, ಕಲ್ಪನೆಯ ಕೈಬೀಸುತ್ತಾ ಹಿನ್ನೆಲೆಗೆ ಸರಿಯುತ್ತಿದ್ದಂತೆ ಮಂಜಿನ ಆನಂದಾಶ್ರುಗಳನ್ನು ಉದುರಿಸಿದಳು. ಭೋರ್ಗರೆವ ಬಸ್ಸು ನಿರ್ಲಿಪ್ತ.

ರಮೇಶ ತೆಪ್ಪಕಾಡಿಗೆ ಇಪ್ಪತ್ತು ಟಿಕೆಟ್ ಕೊಂಡ. ಹಾಗೇ ಗೋವಿಂದರಾಜ್ ರಮೇಶರೊಳಗೆ ಏನೋ ಸಮಾಲೋಚನೆ, ಹಣದ ವಿನಿಮಯವೆಲ್ಲ ನಡೆಯಿತು. ಸ್ವಲ್ಪ ಹೊತ್ತಿನಲ್ಲಿ ನಮ್ಮೊಳಗಿನ ಪೂರ್ವಸಿದ್ಧತೆಗಳ ಬಿಗಿತಗಳೆಲ್ಲ ಸಡಿಲಿದವು. ಬಳಿಕ ಎಲ್ಲರೂ ಕದನ ಕುತೂಹಲಿಗಳೇ. ಮಾತು ಲೋಕಾಭಿರಾಮವಾಗಿ [ಬಾಂಗ್ಲಾ ವಿಮೋಚನೆಯ ಭಾರೀ ಯುದ್ಧ ನಡೆಯುತ್ತಿದ್ದ ಕಾಲ] ಯುದ್ಧವಾರ್ತೆಯನ್ನು ಆಡಿಸಿತು, ಪರ್ವತಾರೋಹಣಕ್ಕೆ ಸ್ವಲ್ಪೇ ಹೋಗಿ ಬಂತು, ಹಾಡು ಹಾಸ್ಯಗಳಿಗೆ ಧಾರಾಳ ಇಳಿಯಿತು. ಈ ಮಧ್ಯೆ ದಾಟಿದ ಹಳ್ಳಿ, ಊರುಗಳತ್ತ ಯಾರಿಗೂ ಗಮನವೇ ಇಲ್ಲ. ಬೇಗೂರು ದಾಟುತ್ತಿದ್ದಂತೆ ದಿಗಂತದಲ್ಲಿ ಗೋಚರಿಸಿತು ಪರ್ವತಶ್ರೇಣಿ. ಅವುಗಳ ಮುನ್ನೆಲೆಯಲ್ಲಿ ಕಲ್ಪನೆಯ ತಾತಾರ್ ತಲೆಯೆತ್ತಿ ನಿಂತಿತ್ತು. ತೇನ್‌ಸಿಂಗನ ಚೊಮೊಲುಂಗ್ಮಾ ಗರಿಕೆದರಿ ಮೂಡಿತ್ತು. ಮತ್ತೆ ದಾರಿಯುದ್ದಕ್ಕೂ ಅಂಥದ್ದೇ ಕಲ್ಪನೆ, ಸುಂದರ ಕನಸುಗಳು ಹಾಸಿದ್ದಂತೆ ಎಂಟೂಕಾಲಕ್ಕೆ ಗುಂಡ್ಲುಪೇಟೆ.

ಎಲ್ಲರೂ ಕಾಫಿ ಕುಡಿಯಲೆಂದು ಬಸ್ಸಿಳಿದು ಹೋಟೆಲಿಗೆ ಹೋದರೂ ರಮೇಶ ಬಸ್ಸಿನಲ್ಲೇ ಕಾವಲು ಕೂತಿದ್ದ. ಅವನಿಗೆ ಅಲ್ಲೆ ಕಾಫಿ ಸರಬರಾಜು ಆಯ್ತು. ಬಸ್ಸು ಹೊರಡಲು ಇನ್ನೂ ಕಾಲು ಗಂಟೆ ಸಮಯ ಉಂಟೆಂದಾಗ ಗ್ರೂಪ್ ಫೋಟೋ ಬೇಡಿಕೆ ಬಂತು. ರಮೇಶ ಫೋಟೋಗ್ರಾಫರ್ ಆದ್ದರಿಂದ ಬದಲಿ ಕಾವಲಿಗೆ ರುದ್ರಪ್ಪನನ್ನು ಕೂರಿಸಿ ಬಂದ. ಎಲ್ಲ ಬಸ್ಸಿನ ಬಲಪಾರ್ಶ್ವದಲ್ಲಿ ಸಜ್ಜಾಗುತ್ತಿದ್ದಂತೆ, ವ್ಯವಸ್ಥೆ ಗೊತ್ತಿಲ್ಲದ ನಾನು ಒಂಟಿ ಕುಳಿತ ರುದ್ರಪ್ಪನನ್ನು ಕರೆದೆ. ಆತ ಇಳಿದು ಬಂದು ಸೇರಿಕೊಂಡ. ತಂಡ ಸೂರ್ಯಾಭಿಮುಖವಾಗಿ ನಿಂತು, ವಿವಿಧ ಭಂಗಿಗಳಲ್ಲಿ, ಕ್ಯಾಮರಾಗಳಲ್ಲಿ ಫೋಟೋಗಳಾದವು. ತಿರುಗಿ ಬಸ್ಸೇರಿದೆವು. ಕಾಲ ಹಳಸಿತ್ತು, ತಂಡದ ಪರ್ಸು ಯಾರಿಗೋ ಸಂದಿತ್ತು! ಎಲ್ಲರೂ ಕೂತ, ನಿಂತ ಎಡೆಗಳನ್ನು, ಹೋಟೆಲನ್ನೂ ಶೋಧಿಸಿದೆವು; ಪ್ರಯತ್ನ ನಿಷ್ಫಲ. ಬಸ್ಸು ಪೊಲಿಸ್ ಠಾಣೆಗೆ ಹೋಯ್ತು, ಸಂಶಯಿತನೊಬ್ಬನ ಬಂಧನವೂ ಆಯ್ತು – ದುಡ್ಡಂತೂ ಸಿಕ್ಕಲಿಲ್ಲ. ಹೋದ ಹಣಕ್ಕಿಂತಲೂ ಇರುವ ಸದಸ್ಯರು ದೊಡ್ಡವರಲ್ಲವೇ? ರುದ್ರಪ್ಪ, ರಮೇಶರನ್ನು ಸಮಾಧಾನಪಡಿಸಿದೆವು. ಹೀಗೆ ಒಂದೂಕಾಲು ಗಂಟೆ ಗುಂಡ್ಲುಪೇಟೆಯಲ್ಲಿ ತಳುವಿ, ಮುಂದುವರೆಯಿತು ನಮ್ಮ ತಾತಾರ್ ಅಭಿಯಾನ. ಮನದಲ್ಲಿ ಕವಿದ ಮೋಡ ಚದುರುವಂತೆ ಮಿತ್ರರಿಂದ ಹಾಡು ಹಾಸ್ಯಗಳು ನಡೆದವು. ದಾರಿ ಬದಿಯ ಬಂಡಿಪುರದ ಆಂಜನೇಯ ಸ್ವಾಮಿಗೆ ಮೂಕ ಪ್ರಾರ್ಥನೆಯೂ ಸಂದಿತು.

ಈ ವಲಯದ ವನ್ಯಸಂರಕ್ಷಣಾ ಕಾನನಕ್ಕೆ ಕರ್ನಾಟಕದ [ಆಗ ಇನ್ನೂ ಮೈಸೂರು ರಾಜ್ಯ] ಒಳಗೆ ಬಂಡಿಪುರ ಸೇರಿದರೆ, ರಾಜಕೀಯ ಗಡಿಯಾಚೆ, ಅಂದರೆ ತಮಿಳುನಾಡಿನಲ್ಲಿ ಮುದುಮಲೈ ಅಂಟಿಕೊಳ್ಳುತ್ತದೆ, ಅಷ್ಟೆ. ಹೀಗೆ ಗಡಿದಾಟಿದ ಸಾಹಸ ಯಾತ್ರೆ ಮತ್ತೆ ಎಂಟೇ ಮಿನಿಟಿಗೆ ಬಸ್ಸಿಳಿಯಿತು. ಅರಣ್ಯದ ನಡುವೆ ದಾರಿ ಕವಲಾದ್ದರಿಂದಲೇ ಹುಟ್ಟಿಕೊಂಡ, ಏನೂ ಅಲ್ಲದ ಹಳ್ಳಿ, ತೆಪ್ಪಕಾಡು. ದಾರಿಯ ಎಡಬದಿಗೆ ಸ್ವಲ್ಪ ಒಳಗೆ ವನ್ಯ ವಿಶ್ರಾಂತಿಧಾಮ. ಬಲಬದಿಗೆ ಚೆಕ್ ಪೋಸ್ಟಿನ ಗುಡಿಸಲು, ಸಣ್ಣ ಪೊಲಿಸ್ ಠಾಣೆ, ಒಂದೆರಡು ಗೂಡಂಗಡಿ, ಚಾ ದುಕಾನು. ಬಲಕ್ಕೆ ತಿರುಗುತ್ತ ಹೋಗುವ ಈ ದಾರಿ ಮುಂದುವರಿದು ಗುಡಲೂರಿಗಾಗಿ ಊಟಿ ಸೇರುವ ಹೆದ್ದಾರಿ. ನೇರ ಸಾಗುವ ಸಪುರದಾರಿ, ಅನುಕೂಲಕ್ಕೆ ಬೇಕಾದರೆ ಎಡ ಕವಲು ದಾರಿ ಎನ್ನಿ, ಹೊಳೆಯೊಂದನ್ನು ಇಕ್ಕಟ್ಟಿನ ಸೇತುವೆಯಲ್ಲಿ ದಾಟಿ, ಹೆಚ್ಚು ದಟ್ಟ ಕಾಡಿನ ನಡುವಿನಿಂದ ಹಾಯ್ದು ತಲಪುವುದು ಊಟಿಯನ್ನೇ. ಆದರೆ ಹೆಚ್ಚಿನ ಮಂದಿ ಇದನ್ನು ಅಲ್ಲೇ ಹತ್ತೆಂಟು ಕಿಮೀ ಅಂತರದೊಳಗಿನ ಹಳ್ಳಿಗಳ ಸಂಪರ್ಕಕ್ಕಷ್ಟೇ ಬಳಸುತ್ತಾರಂತೆ. ಮುಂದೆ ಇದರದು ಬಲು ಏರಿನ, ಅಪಾಯಕಾರೀ ಹಿಮ್ಮುರಿ ತಿರುವಿನ ಓಟವಂತೆ. ಹೆದ್ದಾರಿಗಿಂತ ಇದು ಕಡಿಮೆ ಅಂತರದಲ್ಲೇ ಊಟಿ ತೋರಿದರೂ ಬಯಸಿ ಬಳಸುವವರು ಅಪರೂಪ. ಅದರ ಮೊದಲ ಮಜಲಲ್ಲೇ (ಘಟ್ಟದ ತಪ್ಪಲಲ್ಲೇ) ದಾರಿಬದಿಯ ಪುಟ್ಟ ಪೇಟೆ ನಮ್ಮ ಮುಂದಿನ ಗುರಿ, ಮಸಣಿಗುಡಿ.

ಮಸಣಿಗುಡಿಗೆ ತೆಪ್ಪಕಾಡು ದಾಟಿ ಬೆಳಗ್ಗೊಂದು ಸಂಜೆಗೊಂದು ಬಸ್ಸು ಮಾತ್ರ ಇತ್ತು. ನಾವು ಬೆಳಗ್ಗಿನ ಸೇವೆಗೆ ತಡವೂ ಸಂಜೆಯದ್ದಕ್ಕೆ ತುಂಬಾ ಬೇಗವೂ ಆದ್ದರಿಂದ ಅನ್ಯ ವಾಹನ ಅನುಕೂಲದ ಅದೃಷ್ಟವನ್ನು ಕಾಯುವುದು ಉಳಿಯಿತು. ಚೆಕ್ ಪೋಸ್ಟಿನ ಬುಡದಿಂದ ನಮ್ಮೆಲ್ಲ ಸಾಮಾನುಗಳನ್ನು ಇಕ್ಕಟ್ಟಿನ ಸೇತುವೆಯ ಅಂಚಿಗೆ ಸಾಗಿಸಿದೆವು. ಸುಜಾತ ಮುಂದಿನ ಕಾರ್ಯಾನುಕೂಲದ ದೃಷ್ಟಿಯಿಂದ ನಮ್ಮನ್ನು ನಾಲ್ಕು ‘ರೋಪು’ಗಳನ್ನಾಗಿ (ಪರ್ವತಾರೋಹಣದಲ್ಲಿ ಪರಸ್ಪರ ರಕ್ಷಣೆಯ ಅನುಕೂಲಕ್ಕೆ ಕನಿಷ್ಠ ಎರಡರಿಂದ ಗರಿಷ್ಠ ಐದಾರು ಆರೋಹಿಗಳನ್ನು ಒಂದೊಂದು ತುಕ್ಕಡಿಯನ್ನಾಗಿಸಿ ‘ರಕ್ಷಣಾ ಹಗ್ಗ’ ಎಂದೇ ಹೆಸರಿಸುತ್ತಾರೆ) ವಿಂಗಡಿಸಿದರು. ನಾನೂ ಸೇರಿದ ಒಂದನೇ ರೋಪಿನವರು ವಾಹನಾನುಕೂಲ ಕಾದು ಹೆಚ್ಚಿನ ಸಾಮಾನು ಮಸಣಿಗುಡಿಗೆ ತಲಪಿಸಬೇಕಿತ್ತು. ಉಳಿದ ಮೂರೂ ರೋಪುಗಳು ಅಚ್ಚ್ಯುತರಾಯರ ನೇತೃತ್ವದಲ್ಲಿ, ಗೋವಿಂದರಾಜರ ಬೆಂಗಾವಲಿನಲ್ಲಿ ತಂತಮ್ಮ ಹೊರೆಗಳೊಡನೆ ಮಸಣಿಗುಡಿಗೆ ನಡೆದರು. ಇಲಾಖೆಗಳಿಗೆ ಸಂಬಂಧಿಸಿದ ವಾಹನಗಳ ಬಗ್ಗೆ ಅರಣ್ಯ, ವಿದ್ಯುತ್, ಪೊಲಿಸ್ ಅಧಿಕಾರಿಗಳನ್ನು ವಿಚಾರಿಸಿದೆವು. ಅಲ್ಲಿದ್ದ ವಿದ್ಯುಜ್ಜೀಪು* ಅನ್ಯ ಕಾರ್ಯನಿಮಿತ್ತ ಉದಕಮಂಡಲಕ್ಕೆ ಹೋಗಲಿದ್ದುದರಿಂದ ನಮಗೊದಗಲಿಲ್ಲ.

[ಗಾಬರಿಯಾಗಬೇಡಿ, ಆ ಕಾಲದಲ್ಲೇ ಕಗ್ಗಾಡಿನಲ್ಲಿ ವಿದ್ಯುತ್ ಚಾಲಿತ ಜೀಪ್ ಎಂದು ಭಾವಿಸಬೇಡಿ, ವಿದ್ಯುತ್ ಇಲಾಖೆಯ ಜೀಪ್ ಎಂದಷ್ಟೇ ಅರ್ಥ. ಉಳಿದಂತೆ ಮಾಮೂಲೀ ಡೀಜೆಲ್ ಕುಡಿದು, ನೂಕಿದಾಗ ಢರಕ್ಕೆಂದು ಹೊರಟು, ಏರಿನಲ್ಲಿ ಗೇರು ಜಾರಿ, ಇಳುಕಲಿನಲ್ಲಿ ಬಿರಿ ಸಡಲಿ, ಡ್ಯಾಶ್ ಬೋರ್ಡ್ ಹತ್ತಿ ಕುಳಿತ Pದೇವಾನುದೇವರ ಬಲದಲ್ಲಿ, ಚಾಲಕ ಕಂ ರಿಪೇರಿಗನ ಮಾಂತ್ರಿಕ ಶಕ್ತಿಯಲ್ಲಿ ಇದುವರೆಗೆ ಸಾಯದ್ದಕ್ಕೆ ಬದುಕಿ/ ನಂಬಿದವರನ್ನು ಬದುಕಿಸಿಟ್ಟಿರುವ ವಾಹನ ಎನ್ನಬಹುದು]

ಉಳಿದವರು ಅಲ್ಲಿಲ್ಲದ ತಮ್ಮ ಇಲಾಖಾ ವಾಹನಗಳ ಕುರಿತು ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಮತ್ತೆ ಆ ಕುಗ್ರಾಮದ ಕನಿಷ್ಠಬಿಲ್ಲೆಗಳಿಗೆ ಕಷ್ಟದಲ್ಲಿ ಸಂಪರ್ಕಸಾಧನೆಯಾಗುತ್ತಿದ್ದ ದೂರವಾಣಿ ನೆಚ್ಚಿ, ಇತರೆಡೆಯಿಂದ ವಾಹನ ತರಿಸುವ ಅಧಿಕಾರ ಇರಲೇ ಇಲ್ಲ. ನಾವು ರಾಶಿ ಬಿದ್ದ ಸಾಮಾನುಗಳ ಒತ್ತಿನಲ್ಲೇ ಕೈಕಾಲು ಚಾಚಿದೆವು.

[ಈಚಿನ ದಿನಗಳಲ್ಲಿ ಅಲ್ಲಿ, ಅಂಥಲ್ಲಿ ನಮ್ಮಂಥವರ ಅವ್ಯವಸ್ಥೆ ನಿರಾಕರಿಸುವಷ್ಟು ಪ್ರವಾಸೋದ್ಯಮ ಬೆಳೆದಿದೆ ಎನ್ನಲು ಹರ್ಷಿಸುತ್ತೇನೆ. ಹುಟ್ಟಿನಿಂದಲೇ ಕಾಲಮಾನದಲ್ಲಿ ಬಲುದೊಡ್ಡ ಹಿಂಭಡ್ತಿ ಪಡೆಯುವ ತಂಗುದಾಣಗಳು, ತೊಂಡಲೆವ ಜಾನುವಾರು ನಾಯಿಗಳು, ನೀರೆಂದೂ ಹರಿಯದ ಮುರುಕು ನಲ್ಲಿಗಳು ಹರಕು ಚರಂಡಿಗಳು, ಹರದಾರಿ ದೂರದಿಂದಲೇ ಮೂಗು ಸತ್ತವನಿಗೂ ತಮ್ಮಿರವನ್ನು ಸಾರುವ ಮೂತ್ರದೊಡ್ದಿಗಳು, ಗಾಳಿಗುದರಿಯನ್ನೇರಿ ವಿಹರಿಸುವ ಪ್ಲ್ಯಾಸ್ಟಿಕ್ ರದ್ದಿಗಳು, ಸತ್ಯಹರಿಶ್ಚಂದ್ರ ಚಿತ್ರದ ಶ್ಮಶಾನ ವೈಭವವನ್ನು ನಾಚಿಸುವ ನಾರುವ ಅರೆಬೆಂದ ಕಸಕುಪ್ಪೆಗಳು . . . ಓ, ಕ್ಷಮಿಸಿ]

ಶುದ್ಧ ವನ್ಯ ಪರಿಸರದಲ್ಲಿ, ಯಾವುದೇ ತುರ್ತುಗಳಿಲ್ಲದೆ ಬಿದ್ದುಕೊಳ್ಳುವುದೂ ಒಂದು ಸ್ಮರಣೀಯ ಅನುಭವ! ನಮ್ಮಿಂದ ಕೆಳಗೊಂದು ಸಣ್ಣ ತೊರೆ ದಟ್ಟ ಪೊದೆಗಳ ಮುಚ್ಚಿಗೆಯಲ್ಲಿ ಹರಿಯುತ್ತಿತ್ತು. ಆ ಆಳದಿಂದ ಎದ್ದು, ಅಲ್ಲಿ ಪೊದೆಗಳನ್ನು ಹೆಣೆದು ಬದಿಯ ದರೆಗಳ ಮೇಲೂ ಹಬ್ಬಿತ್ತೊಂದು ಬಳ್ಳಿ. ಅದರಲ್ಲಿ ನಿಂಬೆಹಣ್ಣು ಗಾತ್ರದ, ಹಸುರು, ಸಣ್ಣ ಮುಳ್ಳು ಸೌತೇಕಾಯಿಗಳಂಥದ್ದೇ ಕಾಯಿಗಳು. ಮಲೆನಾಡಿನವನಾದ ನನಗವು ಚಿರಪರಿಚಿತ. ತಮಾಷೆಗೆಂದು ಗೆಳೆಯರಿಬ್ಬರಿಗೆ ನಾನವನ್ನು ಕೊಯ್ದು ಕೊಡುವಾಗ “ಯ್ಯೋ, ಉಪ್ಪಿಲ್ಲ, ಖಾರ ಇಲ್ಲ” ಎಂದು ಕೊರಗುತ್ತಲೇ ಬಾಯಿ ಸೇರಿಸಿದರು. ಆದರೆ ಒಂದೇ ಗಳಿಗೆಯೊಳಗೆ ಅವರ ನಾಲಗೆಯೇ ಕಳಚಿ ಬೀಳುವ ವೇಗದಲ್ಲಿ ಜಗಿದಷ್ಟನ್ನೂ ಹೊರಗುಗುಳಿದರು. ವಾಸ್ತವದಲ್ಲಿ ಅದು ಕಡುಕಹಿಯ (ನಿರ್ವಿಷ) ಕೌಟೇಕಾಯಿ, ಮುಳ್ಳು ಸೌತೆಯಲ್ಲ! ಮೊತ್ತೊಂದು ಗಂಟೆಯಿಡೀ ಅವರು ನಾಲಗೆ ಶುದ್ದಿ ನಡೆಸಿಯೇ ಇದ್ದರು.

ನಾನೂ, ರುದ್ರಪ್ಪನೂ ಸೇತುವೆಯಿಂದಾಚೆ ಸಣ್ಣದಾಗಿ ತಿರುಗಾಡಿಕೊಂಡುಹೊರಟೆವು. ದಾರಿಯ ಬಲಬದಿಯ ದಿಣ್ಣೆಯ ಮೇಲೆ ಒಂದಾನೆ ನಿರಾತಂಕವಾಗಿ ಸೊಪ್ಪು ಮೇಯುತ್ತಿದ್ದುದು ನಮ್ಮತ್ತ ತಿರುಗಿತು. ನಾವು ಇನ್ನೇನು ಕಾಲಿಗೆ ಬುದ್ದಿ ಹೇಳುವುದರಲ್ಲಿದ್ದೆವು. ಅಷ್ಟರಲ್ಲಿ ಬಂದೊಬ್ಬ ದಾರಿಹೋಕ ಸಮಾಧಾನಿಸಿ, ಅದು ಅಲ್ಲೇ ಮೇಲಿದ್ದ ಆನೆ ತರಬೇತಿ ಕೇಂದ್ರದ ಸಾಕಾನೆ ಎಂದಾಗ ಗಾಬರಿ ಕುತೂಹಲಕ್ಕೆ ತಿರುಗಿಕೊಂಡಿತು. ಅದು ಸೇತುವೆ ಬದಿಯಿಂದ ಕೂಗಳತೆಯ ದೂರದಲ್ಲೇ ಇದ್ದುದರಿಂದ ಉಳಿದವರಿಗೆ ಹೇಳಿ ನಾವಿಬ್ಬರು ಆನೆ ಕೇಂದ್ರಕ್ಕೊಂದು ಸುತ್ತು ಹಾಕಿದೆವು. ಅಲ್ಲಿ ಮುಖ್ಯವಾಗಿ ಎರಡು ಹಜಾರಗಳಿದ್ದವು. ಒಂದು ತಗ್ಗು ಮಹಡಿನದು, ಸುತ್ತಲೂ ಕಟ್ಟೆ ಮಾತ್ರ ಇರುವಂಥದ್ದು – ಆನೆಗಳ ಪಾಕಶಾಲೆ. ಅಲ್ಲಿ ಭಾರೀ ಬಡ್ಡು ಮೇಜಿನ ಮೇಲೆ ದೊಡ್ಡಾನೆಗಳಿಗೆ ಬಿಸಿಬಿಸಿ ರಾಗಿ ಇಟ್ಟಿಗೆಗಳು ತಯಾರಾಗಿ ಕುಳಿತಿದ್ದರೆ, ಇನ್ನೊಂದು ಮೂಲೆಯಲ್ಲಿ ಮರಿಯಾನೆಗಳಿಗೆ ಅನ್ನದುಂಡೆಗಳನ್ನು ಉರುಡುತ್ತಿದ್ದರು. ಎರಡನೇ ಹಜಾರದಲ್ಲಿ ತೋರ ಬೋದಿಗೆ ನಿಲ್ಲಿಸಿ, ಪಕಾಸುಗಳ ಅಡ್ಡ ಕಟ್ಟಿ, ಅಲ್ಲಲ್ಲಿ ಇಡೀ ಬಿದಿರಿನ ಹೆಣಿಗೆಯ ಗೋಡೆಯೂ ಮಾಡಿದ ಎರಡು ಆನೆ ಪಂಜರಗಳಿದ್ದವು. ಒಂದರಲ್ಲಿ ಸುಮಾರು ಒಂದು ವರ್ಷ ಪ್ರಾಯದ ಮರಿ, ಇನ್ನೊಂದರಲ್ಲಿ ಎರಡು ಮೂರು ತಿಂಗಳ ಹಸುಗೂಸು (ತೂಕ ಮಾತ್ರ ಕ್ವಿಂಟಲ್‌ನಲ್ಲಿ!). ಬಯಲಿನ ಸವಕಲು ಜಾಡಿನಲ್ಲಿ ದೊಡ್ಡ ಹೆಣ್ಣಾನೆಯೊಂದು ತನ್ನ ಬಾಯಲ್ಲಿ ಕಚ್ಚಿದ್ದ ದಪ್ಪ ಹಗ್ಗದ ಕೊನೆಗೆ ಕಟ್ಟಿದ್ದ ದೊಡ್ಡ ಮರದಬೊಡ್ಡೆಯನ್ನು ಎಳೆದು ತರುತ್ತಿತ್ತು. ಅದರ ಸ್ವಲ್ಪ ಬೆಳೆದ ಮರಿ ಜೊತೆಗೇ ಅರ್ಧ ಆಟದಲ್ಲಿ ಕಾಲೆಳೆದುಕೊಂಡು ಬರುತ್ತಿದ್ದದ್ದು, ನಮ್ಮನ್ನು ಕಂಡದ್ದೇ ಹೂಂಕರಿಸಿತು. ಊರಿನಲ್ಲಿ ನಾಯಿ ಬೆಕ್ಕುಗಳ ಮರಿಗಳನ್ನೋ ಎಳೆಗರುಗಳನ್ನೋ ಮುದ್ದಾಡಿದ ನೆನಪಿನಲ್ಲಿ ಹತ್ತಿರಹೋಗಲಿದ್ದ ನಮಗೆ ಮಾಹುತ ಅಪಾಯದ ಎಚ್ಚರಿಕೆ ಕೊಟ್ಟದ್ದರಿಂದ ನಾವು ಹಿಂದುಳಿದೆವು, ತೆಪ್ಪಕಾಡಿನ ಸೇತುವೆಯಾಶ್ರಯಕ್ಕೆ ಮರಳಿದೆವು.

ಗಂಟೆ ಎರಡಾದರೂ ಯಾವ ವಾಹನವೂ ನಮಗೆ ದಕ್ಕಲಿಲ್ಲ. ಉಳಿದ ಮಿತ್ರರೂ ಆನೆ ಶಿಬಿರವನ್ನು ಇನ್ನಷ್ಟು ವಿರಾಮದಲ್ಲಿ ನೋಡಿ ಬಂದರು. ಉದಕಮಂಡಲದ ಹೆಸರನ್ನೇ ನಡನಡುಗಿ ಉಚ್ಛರಿಸುವ ನಮಗೆ ಕಲ್ಪನೆ ಸುಳ್ಳೋ ಎಂಬಂತೆ ಸೂರ್ಯ ಚುರುಕಾಯಿಸುವಾಗ ಒಂದು ಜಮಖಾನೆಯನ್ನು ಅಲ್ಲೆ ಗಿಡ ಮರಗಳಿಗೆ ಕಟ್ಟಿ ಮರೆಮಾಡಿಕೊಂಡೆವು. ಮುಖ್ಯ ದಾರಿಯಲ್ಲಿ ಅಪರೂಪಕ್ಕೆ ಒಂದೊಂದು ವಾಹನ ಬರುತ್ತಿತ್ತು, ಗೇಟಿನ ಔಪಚಾರಿಕತೆ ಮುಗಿಸಿಕೊಂಡು ಮೆಲ್ಲಾನೆ ಮುಂದುವರಿಯುತ್ತಿತ್ತು. ಆಗೀಗ ಒಬ್ಬರಿಬ್ಬರು ಇಳಿದರೆ ಅಲ್ಲಿನ ನಾಲ್ಕು ಗೂಡಂಗಡಿಗೆ ಜೀವ. ಉಳಿದಂತೆ ಪೋಲಿಸ್ ಬಿಡಿಸಿ ಎಸೆದ ನೆಲಗಡ್ಲೆ ಸಿಪ್ಪೆಯಲ್ಲಿ ಗಟ್ಟಿಕಾಳು ತನಿಖೆ ಮಾಡುವ ವಾನರ ಸೈನ್ಯ, ಅವುಗಳಲ್ಲಿನ ಸ್ಪರ್ಧಾ ಕೊಸರಾಟಗಳು, ಹೇನುಹೆಕ್ಕುವ ಸ್ನೇಹಾಚಾರಗಳು, ಕಡ್ಲೆ ಪಾಲು ಕೇಳಲು ನುಗ್ಗಿದ ಒಬ್ಬ ಡೊಂಕುಬಾಲದ ನಾಯಕ, ಆತನ ದಾರ್ಷ್ಟ್ಯಕ್ಕೆ ಸೊಪ್ಪು ಹಾಕದೆ ಭೀಕರ ಶಬ್ದದೊಡನೆ ಹಲ್ಲು ಕಿಸಿದು ಆತನ ಕಿವಿಯನ್ನೇ ಹಿಡಿದೆಳೆದ ಗಡವಕೋತಿ, ಅನ್ನ ದೇವರ ಮುಂದೆ ಇನ್ನು ವೈರಗಳು ಉಂಟೇ ಎಂದು ನಾಯಿ ನಿರ್ವಿಕಾರಚಿತ್ತದಿಂದ ಕಡ್ಲೆಧ್ಯಾನದಲ್ಲಿ ಮುಂದುವರಿದದ್ದು, ಅಲ್ಲಿ ದಕ್ಕದ್ದು ಇಲ್ಲೇನಾದರೂ ಇದ್ದೀತೇ ಎಂದು ಕಪಿ ಸೇನೆ ನಮ್ಮ ಜೋಪಡಿಗೆ ಲಗ್ಗೆಹಾಕಿದ್ದು ಹೇಳುತ್ತಾ ಹೋದರೆ ಹತ್ತರಿಂದ ಹತ್ತಕ್ಕೆ ನಿದ್ದೆ ತೆಗೆದವನಿಗೂ ಬಂದೀತು ಅಸಾಧ್ಯ ಆಕಳಿಕೆ.

ಮಸಣಿಗುಡಿಯಲ್ಲಿ ಯಾವುದೋ ತಮಿಳು ಚಲನಚಿತ್ರದ ಶೂಟಿಂಗ್ ನಡೆದಿತ್ತು. ಹಾಗಾಗಿ ಅತ್ತ ಹೋದ ಒಂದೆರಡು ಜೀಪು ಕಾರುಗಳಲ್ಲಿ ಚಾಲಕನೇ ಕಾಣದಷ್ಟು ಜನ. ಮುಖ್ಯ ದಾರಿಯ ಬಸ್ಸುಗಳಲ್ಲಿ ಬಂದ ಹಲವರು ಮಸಣಿಗುಡಿಯೆಡೆಗೆ ನಡೆದು ಹೊರಟದ್ದಿದ್ದರೆ ಅವರ ಗುರಿಯೂ ಮೋಹಕ ನಟೀಮಣಿ – ಜಯಲಲಿತಳ ದರ್ಶನ! [No Comments!] ನಾವು ನಿಶ್ಚಿಂತೆಯಿಂದ ಬುತ್ತಿ ಬಿಚ್ಚಿದೆವು. ಒಬ್ಬರದಿನ್ನೊಬ್ಬರಿಗೆ, ಎತ್ತಣ ರೊಟ್ಟಿ ಎತ್ತಣ ಬಾಜೀ, ಗಿರೀಶನ ಬ್ರೆಡ್ಡಿಗೆ ಜಶವಂತನ ಪಲ್ಯ – ಒಟ್ಟಾರೆ ಭರ್ಜರಿ ನಮ್ಮ ಊಟ. ತುಣುಕಾದರೂ ಗಿಟ್ಟೀತು ಎಂದು ಹೊಂಚಿದ ಮಂಗಗಳು “ಥೂ ಮಂಗಗಳು, ಒಂದು ನೀರುಳ್ಳಿ ಎಸಳೂ ಬಿಡಲಿಲ್ಲ” ಎಂದು ಬಯ್ದುಕೊಂಡು ಹೋದವು. ರಮೇಶ್ ಜಶವಂತ್ ಗೂಡಂಗಡಿ ಚಾ ಕಾಫಿ ತರಿಸಿದರೆ ನಾನು ರುದ್ರಪ್ಪ, ಬಾಳೆ ಕಿತ್ತಳೆ ಸರಬರಾಜು ನೋಡಿಕೊಂಡೆವು.

ಗುಂಡ್ಲುಪೇಟೆ ಕಡೆಯಿಂದ ಬರುತ್ತಿದ್ದ ಬಸ್ಸುಗಳ ಬಗ್ಗೆ ರುದ್ರಪ್ಪನಿಗೆ ಒಂದು ಕಣ್ಣಿತ್ತು. ಮೂರು ಗಂಟೆಯ ಸುಮಾರಿಗೆ ಬಂದ ಒಂದರಲ್ಲಿ ನಾವು ಕಳ್ಳನೆಂದು ಸಂಶಯಿಸಿದಾತನೇ ಬಿಡುಗಡೆಹೊಂದಿ ಹೋಗುತ್ತಿದ್ದ. ರುದ್ರಪ್ಪ ವಿಚಾರಿಸಿದಾಗ ಉರುರಿ ಕೋಪದಲ್ಲಿ “ನಾನು ನಿಮಗೆ ಸಹಾಯ ಮಾಡಲು ಹೊರಟರೆ ನನ್ನನ್ನೇ ಸಿಕ್ಕಿಸಿಹಾಕಿದಿರಿ. ನಾನು ನಿಮಗೆ ಪಾಠ ಕಲಿಸುತ್ತೇನೆ.” ಪೋಲಿಸರಿಗೆ ಮುಚ್ಚಳಿಕೆ ಹೇಗೋ ಮಾಡಿಕೊಟ್ಟು ಬಂದಿದ್ದನಂತೆ. ನಿರುಮ್ಮಳವಾಗಿ ಬಸ್ಸು ಹೋಯ್ತು, ಕಾಲವೂ ಹೋಗುತ್ತಲೇ ಇತ್ತು.

[ಕಾಲನ ಠಾಣೆಯಲ್ಲಿ ಗೇಟಿಲ್ಲ, ದೇಶ ವಿದೇಶವೂ ಇಲ್ಲ; ತಪಾಸಣೆ ನಿರಂತರ. ಹಾಗಾಗಿ ಮೂರು ದಶಕದ ಹಿಂದಿನ ಕಥೆಗೆ ಎಲ್ಲೆಲ್ಲಿನ ನೀವೆಲ್ಲ, ಇಂದಿನ ವಾರದವರೆಗೆ ಕಾದವರಿಗೆ ಉಳಿದ ಭಾಗಕ್ಕೆ ಮುಂದಿನ ವಾರ ದೂರವಲ್ಲ! ಇಲ್ಲಿವರೆಗಿನ ಓದಿಗೆ ಸುಂಕ ಕಟ್ಟಲು (ಕೆಳಗಿದೆಯಲ್ಲಾ DROP BOX) ಮಾತ್ರ ಮರೆಯಬೇಡಿ.]