ನೀವೀಗ ಮಂಗಳೂರಿನಿಂದ ಬೆಂಗಳೂರಿಗೆ ಬಸ್ಸೇರಿಯೋ ರೈಲೇರಿಯೋ ಶಿರಾಡಿ ಘಾಟಿಯಲ್ಲಿ ಹೋಗುತ್ತಿದ್ದೀರಿ, ಎಂದು ಭಾವಿಸಿಕೊಳ್ಳಿ. ಇಲ್ಲಿ ಬಲಬದಿಗೆ ಅಗಮ್ಯವೆಂಬಂತೆ ತೋರುವ ಪ್ರಾಕೃತಿಕ ಬೆಟ್ಟಸಾಲು ಹಬ್ಬಿದೆ. ಇದು ಪಶ್ಚಿಮ ಘಟ್ಟದ ಮುಖ್ಯ ಶ್ರೇಣಿಯದ್ದೇ ಭಾಗ, ದಕ್ಷಿಣಕ್ಕೆ ಪುಷ್ಪಗಿರಿ ವನಧಾಮ ಉತ್ತರಕ್ಕೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನಗಳ ನಡುವಣ ದೊಡ್ಡ ಅನಾಮಧೇಯ ಸೇತು. ಇದರ ಶಿಖರ ಸಾಧಿಸಿ, ಗಗನಗಾಮಿಗಳೇ ಆಗಿ. ಈಗ ಎಲ್ಲವನ್ನು ಭೂಪಟದ ಸೂತ್ರಕ್ಕೆ ಒಳಪಡಿಸಿ, ಆಕಾಶದ ಎತ್ತರದಿಂದ, ದೃಷ್ಟಿ ಕೇಂದ್ರೀಕರಿಸಿ ನೋಡಿ. ಮಲೆಯ ಪದತಳದಲ್ಲಿ ಗುಂಡ್ಯ-ಕುಳ್ಕುಂದ-ಸುಬ್ರಹ್ಮಣ್ಯ ಸುಮಾರು ಏಕರೇಖೆಯಲ್ಲಿ ಬರುತ್ತವೆ. ಶಿಖರವಲಯದಲ್ಲಿ ಎಡಮೂಲೆಯಲ್ಲಿ, ಸುದೂರದ ಸಕಲೇಶಪುರವೊಂದೇ ಪಟ್ಟಣ. ಉಳಿದಂತೆ ಬಲಬದಿಗೆ ಹರಡಿದ ಬಯಲಿನಲ್ಲಿ ಸಮೀಪದ ಬಿಸಿಲೆ ಹಳ್ಳಿಯ ಮೂಲೆಯವರೆಗೆ ಹೆಚ್ಚುಕಡಿಮೆ ಎಲ್ಲ ಚದುರಿದ ಹಳ್ಳಿಗಳು. ಹಾಸನ ಜಿಲ್ಲೆಯ ಸಕಲೇಶಪುರದಿಂದ, ಮೈಸೂರು ಜಿಲ್ಲೆಯ ಕೆ.ಆರ್ ನಗರದಿಂದ, ಕೊಡಗು ಜಿಲ್ಲೆಯ ಸೋಮವಾರಪೇಟೆಯಿಂದ ಬರುವ ದಾರಿಗಳೆಲ್ಲ ಘಟ್ಟದಂಚಿಗೆ ಬಂದು ಇಣುಕುವ ಹಳ್ಳಿ ಬಿಸಿಲೆ. ಈ ವಲಯದಲ್ಲಿ ಘಟ್ಟದ ಕೊಡಿ-ಬುಡ ಮುಟ್ಟಿಸುವ ಏಕೈಕ ಮಾರ್ಗ – ಬಿಸಿಲೇ ಘಾಟಿ.

ಬಿಸಿಲೇ ಘಾಟಿ ರಸ್ತೆಯ ಇತಿಹಾಸ ರಾಜರ ಕಾಲಕ್ಕೆ ಹೋಗುತ್ತದೆ, ಬ್ರಿಟಿಷ್ ಸಾಮ್ರಾಜ್ಯಶಾಹಿಯ ಪುಟಗಳಲ್ಲಿ ಅನಾವರಣಗೊಳ್ಳುತ್ತದೆ. ಈ ಮಾರ್ಗ ಘಟ್ಟದ ಮೇಲಿನ ಅರಸನಿಗೆ ಕುಕ್ಕೆಯೊಳಗಿನ ದೇವ – ಸುಬ್ರಹ್ಮಣ್ಯನ ದರ್ಶನ ಸುಲಭವಾಗಲು ಬ್ರಿಟಿಷರು ಮಾಡಿಸಿಕೊಟ್ಟದ್ದಂತೆ. ಇದಕ್ಕೆ ಸಾಕ್ಷಿಯಾಗಿ ಇಂದು ಊರ್ಜಿತದಲ್ಲಿರುವ ದಾರಿಗಿಂತಲೂ ಹೆಚ್ಚು ಕಾಡು ಸುತ್ತಿ ಏರುವ, ಭಾರೀ ಕಾಡುಗಲ್ಲುಗಳನ್ನು ಗಿಡಿದು ಮಾಡಿದ ಆ ಕಾಲದ ಗಾಡಿ ದಾರಿ ಕುತೂಹಲದ ಕಣ್ಣುಗಳಿಗೆ ಅಲ್ಲಲ್ಲಿ ಕಾಣ ಸಿಗುತ್ತದೆ. ಗಡಿಯ ಸುಂಕದ ಕಟ್ಟೆಯೋ ಕಾವಲುಗಾರರ ಕೊತ್ತಳವೋ ಕುಸಿದು, ಮರಸುಗಳ್ಳರ ಅಡ್ಡೆಯೂ ಆಗಿದ್ದದ್ದು ‘ಕಳ್ಳರಗಂಡಿ’ ಸ್ಥಳನಾಮ ಕೇಳಿದವರಿಗೆ ತಂತಾನೆ ಸ್ಫುರಿಸುತ್ತದೆ. ಎಲ್ಲೂ ವಿಪರೀತ ಏರು ಕಾಣಿಸದೆ, ಐದು ಸುಲಭ ಹಿಮ್ಮುರಿ ತಿರುವು, ಒಂದೇ ದೊಡ್ಡ ಸೇತುವೆಯಲ್ಲಿ ಇಲ್ಲಿ ಕರಾವಳಿ ಬಯಲು ಸೀಮೆ ವಿನಿಮಯಗೊಳ್ಳುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂತು. ಅಪ್ಪ ಅಮ್ಮರು ಹೊರಗೆ ಹೋದ ವೇಳೆಯ ಮಕ್ಕಳ ಸ್ವಚ್ಛಂದ ನಮ್ಮದು! ನಮ್ಮಲ್ಲಿ ಏನುಂಟು, ಏನಾಗಬೇಕು ಎಂದು ಗ್ರಹಿಸಿ, ಮಥಿಸಿ ನಡೆಯುವ ತಾಳ್ಮೆ ಅಂದು ಇರಲಿಲ್ಲ. ಇಂದು ಅರುವತ್ತಮೂರು ವರ್ಷ ಕಳೆದು, ಅಂದರೆ ಮನುಷ್ಯ ಮಿತಿಯಲ್ಲಿ ಹಿರಿಯ ನಾಗರಿಕನ ಪ್ರಾಯ ತುಂಬಿಯೂ ನಮ್ಮ ಬುದ್ಧಿ ಬಲಿತಿಲ್ಲ. ರಾಷ್ಟೀಯ ಹೆದ್ದಾರಿ ೪೮ ಹಾಯುವ ಶಿರಾಡಿ ಘಾಟಿಗಿಂತ ಬಲು ಹಗುರವಾಗಿ ಘಟ್ಟ ಏರುವ ಬಿಸಿಲೆಘಾಟಿ ಮೊದಲು ಮರೆವಿಗೆ ಸಂದಿತ್ತು. ಈಗ ಈ ದಾರಿ, ಇಪ್ಪತ್ತಮೂರೇ ಕಿಮೀ ಉದ್ದದ ಸರಳ ಸೌಕರ್ಯ, ಒಟ್ಟಾರೆ ಈ ವಲಯ ಹುಚ್ಚು ಯೋಜನೆಗಳ ಪ್ರಯೋಗಭೂಮಿಯಾಗಿ ನರಳುತ್ತಿದೆ.

ಹಿಂದೆಲ್ಲ ಕೃಷಿಕರಿಗೆ ವರ್ಷಾವಧಿ ಕುಳ್ಕುಂದ (ಬಿಸಿಲೆ ದಾರಿ ಸುಬ್ರಹ್ಮಣ್ಯ ದಾರಿಯನ್ನು ಸಂಪರ್ಕಿಸುವ ಸ್ಥಳ) ಜಾನುವಾರು ಜಾತ್ರೆ ರಾಜಾಸ್ತಾನದ ಪುಷ್ಕರದ ಜಾತ್ರೆಯಷ್ಟೇ ಪ್ರಮುಖ ವಿದ್ಯಮಾನ. ನನ್ನ ಹಿರಿಯ ಸೋದರ ಮಾವ – ಎ.ಪಿ. ತಿಮ್ಮಪ್ಪಯ್ಯ, ಆ ಕಾಲದಲ್ಲೇ ವ್ಯವಸ್ಥಿತ ಜಾನುವಾರು ಸಾಕಣೆ ಮತ್ತು ಹಾಲು ಉತ್ಪಾದನೆಯಲ್ಲಿ ಪ್ರಸಿದ್ಧರಿದ್ದರು. ಅವರು ಕುಳ್ಕುಂದ ಜಾತ್ರೆಯ ಮುನ್ನಾ ದಿನವೇ ನೆಚ್ಚಿನ ಭಂಟ ಪುತ್ತಪ್ಪ ಬ್ಯಾರಿಯನ್ನು ಕಟ್ಟಿಕೊಂಡು ಅಲ್ಲಿ ಹಾಜರಿರುತ್ತಿದ್ದರು. ಅವರು ಉತ್ಸಾಹ ಮತ್ತುವ್ಯವಹಾರ ಜಾಣ್ಮೆಯಲ್ಲಿ ಜಾನುವಾರುಗಳನ್ನು ಘಟ್ಟ ಇಳಿಯುವ ಮೊದಲೇ ಸಂಧಿಸಲು ಹಲವು ಬಾರಿ ಬಿಸಿಲೆ ಘಾಟಿ ಏರಿದ್ದನ್ನು ಹೇಳಿದ್ದು ನೆನಪಿಗೆ ಬರುತ್ತದೆ. ವನ್ಯದ ಅನಿವಾರ್ಯ ಸಂಗತಿಗಳಾದ ಆನೆ, ಹುಲಿ, ಚಿರತೆಗಳ ಭಯ ಒಂದೆಡೆ, ಆಕಸ್ಮಿಕದಲ್ಲಿ ಸಂಗಾತಿಗಳಾಗಬಹುದಾದ ಗಂಟುಗಳ್ಳರ ಹಾವಳಿ ಇನ್ನೊಂದೆಡೆ. ನನಗಿಂದು ವಿವರಗಳಲ್ಲಿ ಅಸ್ಪಷ್ಟವಿದ್ದರೂ ರೋಮಾಂಚಕ ಸಾಹಸಕಥೆಯೇ ಆಗಿದೆ.

೧೯೭೪ರ ಬೇಸಿಗೆ ರಜೆಯಲ್ಲಿನಾನು ಮೊದಲ ಬಾರಿ ಈ ವಲಯ ನೋಡಿದೆ, ಕುಮಾರಪರ್ವತ ಹತ್ತಿಳಿದೆ. ಮುಂದೆ ಅನೇಕ ಬಾರಿ, ಅನೇಕ ಉದ್ದೇಶಗಳಲ್ಲಿ ಈ ಶೃಂಗಭೇಟಿ ನಡೆಸಿದ್ದುಂಟು. ಭಾರತ ಸರ್ವೇಕ್ಷಣಾ ಇಲಾಖೆಯ ಭೂಪಟದಲ್ಲಿ ಇದರ ಉತ್ತರ ಮೈಯಲ್ಲೊಂದು ಭಾರೀ ಎತ್ತರದ ಜಲಪಾತವನ್ನು ಗುರುತಿಸಿದ್ದರು. ಅದರ ಗುಂಟ ಇಳಿದು ಬರಲೆಂದೇ ೧೯೭೯ರಲ್ಲೊಂದು ತಂಡ ಕಟ್ಟಿ ಹೋಗಿದ್ದೆ. (ಅದರ ಪೂರ್ಣ ಕಥನಕ್ಕೆ ಇದು ಸಂದರ್ಭವಲ್ಲ) ಆಗ ಸಂತ್ರಸ್ತರಾಗಿ ನಾವು ಇಳಿದದ್ದು ಬಿಸಿಲೆ ದಾರಿಗೆ. ಅಂದು ನಮ್ಮ ಮಾರ್ಗದರ್ಶಿ – ಮಲೆಕುಡಿಯರ ಕುಂಡ ತೋರಿದಂತೆ ಕುಮಾರಧಾರೆ ಎಂಬ ಕಾಡು ಹೊಳೆಯನ್ನು ದಾಟಿ ನಾವು ತಲಪಿದ್ದೊಂದು ಅಪ್ಪಟ ಜನಪದೀಯ ಆರಾಧನಾ ಕೇಂದ್ರ – ದಟ್ಟ ಕಾಡಿನ ಭಾಗವಾಗಿದ್ದ ಮರವೊಂದರ ಬುಡದಲ್ಲಿದ್ದ ಎರಡೋ ನಾಲ್ಕೋ ಕಾಡುಕಲ್ಲು, ತುಕ್ಕು ಹಿಡುಕಲು ಒಂದೆರಡು ಆಯುಧ, ಕುಂಕುಮ ಊದುಬತ್ತಿ ಹಾರಾದಿಗಳ ಅವಶೇಷಗಳು – ಬೂದಿಚೌಡಿ. (ಅದನ್ನು ನಕ್ಷೆಯ ಇಂಗ್ಲಿಷ್ ನಮೂದು ಮತ್ತು ನಮ್ಮ ಶಿಷ್ಟಗ್ರಹಿಕೆಯ ತಪ್ಪಿನಲ್ಲಿ ‘ಬುಡಿ ಚಾವಡಿ,’ ‘ಬೂದಿ ಚಾವಡಿ’ ಎಂದೆಲ್ಲಾ ಕೆಲವು ಕಾಲ ಹೇಳಿದ್ದಿತ್ತು) ಈ ದಾರಿಯನ್ನೇ ಕುರಿತಂತೆ ನನ್ನ ಮೊದಲ ಭೇಟಿ ೧೯೮೫. ರಸ್ತೆ ದುಸ್ಥಿತಿಯಲ್ಲಿದ್ದರೂ ಎರಡೂವರೆ ಜನ (ನಾನು, ನನ್ನ ಹೆಂಡತಿ ಮತ್ತು ಐದರ ಪ್ರಾಯದ ಮಗ) ಹೊತ್ತ ನನ್ನ ಸಾಮಾನ್ಯ ಬೈಕ್ ಮೂರು ನಾಲ್ಕನೇ ಗೇರಿನಲ್ಲೇ ಇದನ್ನು ಹತ್ತಿದ್ದಿತ್ತು. ಆಗಿನ್ನೂ ವನ್ಯ ಪರಿಸರದ ಪಾವಿತ್ರ್ಯಕ್ಕಿಂತ ನಾಗರಿಕ ಸವಲತ್ತುಗಳ ಪ್ರಜ್ಞೆ ನನ್ನಲ್ಲಿ ಹೆಚ್ಚಿತ್ತು. ಸಹಜವಾಗಿ ನಾನು ಶಿರಾಡಿ ಘಾಟಿಯ ಅವೈಜ್ಞಾನಿಕ ಜಾಡು, ಏರು, ತಿರುವುಗಳನ್ನೆಲ್ಲ ಟೀಕಿಸಿ, ಬಿಸಿಲೆಯ ಜೀರ್ಣೋದ್ಧಾರವನ್ನು ಬಲವಾಗಿ ಶಿಫಾರಸು ಮಾಡುತ್ತಿದ್ದೆ.

ಕಾಲಾನುಕ್ರಮದಲ್ಲಿ ಬಿಸಿಲೆಯ ಚರಂಡಿ ನಿಗಿದು, ರಸ್ತೆ ಕೊರಕಲು ಬಿದ್ದು, ಮರ ಅಡ್ಡ ಮಲಗಿ, ಪೊದೆ ಅಮರಿಸಿತ್ತು. ನೇತ್ರಾವತಿಯ ಮೇಲಿನ ಪಾಣೆಮಂಗಳೂರು ಸೇತುವೆಯ ಹಾಗೇ ಕಲ್ಲಕುಂದಗಳ, ಕಬ್ಬಿಣದ ತೊಲೆಗಳ ರಚನೆ ಇಲ್ಲಿನ ಅಡ್ಡಹೊಳೆಯ ಮೇಲಿನ ಸೇತುವೆಯದು. ಕಾಲದ ಸುಳಿಯಲ್ಲೋ ನೀರ ಹೊಡೆತದಲ್ಲೋ ಆಲದ ಬೇರಿನ ಕೊರೆತದಲ್ಲೋ ಅದರ ಕುಂದಗಳು ಶಿಥಿಲವಾಗಿ, ಸೇತುವೆ ಇನ್ನೇನು ಬೀಳುವ ಹಂತವೂ ತಲಪಿತ್ತು. ಜೊತೆಜೊತೆಗೇ ಆ ದಾರಿಯಲ್ಲಿ ನಡೆಯುವ ದಾರಿತಪ್ಪಿದ ಕೆಲಸಗಳ ಪರಿಚಯ ನನಗಾಗುತ್ತ ಬಂತು. ಮ್ಯಾಕ್ಬೆತ್ ನಾಟಕದಲ್ಲಿ ಬರ್ನಂ ವನ ನಡೆದಾಗ ಅರಸೊತ್ತಿಗೆ ಬದಲಿತು. ಆದರೆ ಬಿಸಿಲೆಯಲ್ಲಿ ಅಕ್ಷರಶಃ ವನ ನಡೆಯತೊಡಗಿದಾಗ, ಅಂದರೆ ಪೆಂಡಿಗಟ್ಟಳೆ ಬೆತ್ತ, ಬಿದಿರುಗಳು ಸೂರೆ ಹೋದಾಗ ಏನೂ ಆಗಲಿಲ್ಲ. ನನ್ನಷ್ಟಕ್ಕೆ ಅಡ್ಡಹೊಳೆಯ ಸೇತುವೆ ಬಿದ್ದುಹೋಗಲಿ, ದಾರಿ ಮುಚ್ಚಿಹೋಗಲಿ ಎಂದು ಹಾರೈಸಿದ್ದೆ. ಎಲ್ಲೋ ಗ್ರೀನ್ ಪೀಸ್ ಕಾರ್ಯಕರ್ತರು ಪರಿಸರಕ್ಕಾಗಿ ಭಯೋತ್ಪಾದನೆ ಮಾಡುತ್ತಿದ್ದಾರೆ ಎಂದು ಕೇಳಿದಾಗಲಂತೂ ಬಿಸಿಲೆ ಸಂಕವನ್ನೂ ಹೀಗೇ ಉಡಾಯಿಸಬಾರದೇಕೆ ಎಂದೂ ಲೇಖನದಲ್ಲಿ ಬರೆದುಕೊಂಡಿದ್ದೆ. ಕಳ್ಳಬೇಟೆಯ ಜೀಪುಗಳು, ಕರ ತಪ್ಪಿಸಿ ಹುಲ್ಲಹೊರೆ ಹೊಡೆಯುವ ಲಾರಿಗಳು, ವನೋತ್ಪತ್ತಿ ಸಂಗ್ರಹದ ಖದೀಮರು ಭಕ್ತಿಯ ಸೋಗು ಹಾಕಿದರು. ಅವರದ್ದೇ ಸಾರ್ವಜನಿಕ ಮುಖವಾಡ ಹೊತ್ತ ಜನಪ್ರತಿನಿಧಿಗಳು ಕಾಲಕಾಲಕ್ಕೆ ದಾರಿಯ ಸಮಗ್ರ ಅಭಿವೃದ್ಧಿಯನ್ನು ಜಪಿಸುತ್ತಾ ತತ್ಕಾಲೀನ ಇತರ ಲಾಭಗಳನ್ನು ಮಾಡಿಕೊಳ್ಳುತ್ತಾ ಒಟ್ಟಾರೆ ದಾರಿಯನ್ನು ಅಲ್ಪ ಸ್ವಲ್ಪ ಜೀರ್ಣೋದ್ಧಾರ ಮಾಡುತ್ತಲೇ ಬಂದರು. ಇಂದು ದಾರಿ ಅಗಲವಾಗಿದೆ, ಇನ್ನಷ್ಟು ಅಗಲೀಕರಣಕ್ಕೆ ಯೋಜನೆಗಳು ಕಾರ್ಯರೂಪದ ಹಂತದಲ್ಲಿ ಬಂದು ನಿಂತಿವೆ. ಸುಬ್ರಹ್ಮಣ್ಯದಲ್ಲಿ ಮೂರು ತಲೆಮಾರುಗಳ ನಾಗದೋಷ ಪರಿಹಾರದ ಹೆಸರಿನಲ್ಲಿ ಸಂಚರಿಸುವವರ ವಾಹನಗಳ ಭರಕ್ಕೆ ನೂರು ಸಾವಿರ ಜೀವಂತ ನಾಗಗಳ ಬಲಿಗೆ ಫೇವರ್ ಫಿನಿಶ್ಶೋ ಕಾಂಕ್ರೀಟಿನದ್ದೋ ರಸ್ತೆ ಬಿಸಿಲೆಯಲ್ಲೂ ಬರಲಿದೆ. ನಾಗರಹೊಳೆ, ಬಂಡೀಪುರಗಳ ನಡುವೆ ಹಾಯ್ದುಹೋಗುವ ಹೆದ್ದಾರಿ ನಿಯಂತ್ರಣಕ್ಕೆ ಹೆಣಗುತ್ತಿರುವ ಸರಕಾರಕ್ಕೆ ಬಿಸಿಲೆಯಲ್ಲಿ ಇನ್ನು ಹೊಸತೇ ಪಾಠವಾಗಬೇಕೋ ಏನೋ!

ಘಟ್ಟದ ತಪ್ಪಲಲ್ಲಿ ಮಲೆಸುತ್ತುವ ಬೇಡರಕಣ್ಣಪ್ಪಂದಿರ ನಂಬಿಕೆಗೆ ಇಂಬಾಗಿದ್ದದ್ದು ಬೂದಿಚೌಡಿ. ದಾರಿಯೊಡನೆ ವ್ಯವಹಾರ ಕುದುರಿ, ಕಾಲಕ್ಕೆ ತಕ್ಕ ಕೋಲ ಕಟ್ಟುತ್ತ ಬಂದು, ಇಂದಲ್ಲಿ ಧರ್ಮಾಧಿಕಾರಿ ಜಾನ್ ಭಟ್ಟರ ಅಭಿವೃದ್ಧಿ ಕಾರ್ಯಗಳಲ್ಲಿ, ಕಾಂಕ್ರೀಟು ಗ್ರಿಲ್ಲುಗಳ ಬಹುವರ್ಣರಂಜಿತ ಮಂದಿರದಲ್ಲಿ, ಅವಿರತ ಗಂಟಾನಾದ, ನಂದಾದೀಪ, ವೈವಿಧ್ಯಮಯ ಸೇವಾದರಗಳಲ್ಲಿ ಪೂಜೆ ಸ್ವೀಕರಿಸುತ್ತ ವಿರಾಜಮಾನಳಾಗಿದ್ದಾರೆ ಚೌಡೇಶ್ವರಿ ಅಮ್ಮನವರು. ದುಷ್ಟಮೃಗಗಳ ಬೀಡು, ಭಯಹುಟ್ಟಿಸುವ ಬೆಟ್ಟ ಕಣಿವೆ, ಹಾಳುಬಿದ್ದ ದಾರಿಯಲ್ಲಿ ಸ್ವಾಮಿ ದರ್ಶನಕ್ಕೆ ವಾಹನವೇರಿ ಓಡಾಡುವ ಭಕ್ತಕೋಟಿಯ ಸುಖಪ್ರಯಾಣವನ್ನು ಹರಸುತ್ತಿದ್ದಾಳೆ. ಈ ಸುಪ್ರಸನ್ನತೆಗೆ ಸ್ವಲ್ಪ ಕಾಲದ ಮೊದಲು ಸಾನ್ನಿಧ್ಯದಲ್ಲೇ ತಲೆಕಳೆದುಕೊಂಡು ಕುಪ್ಪಳಿಸುತ್ತಿದ್ದ ಕೋಳಿ ಮುಂಡಗಳು ಈಗ ದಾರಿಯಂಚುಗಳಿಗೆ ಒತ್ತರಿಸಿದ್ದಾವೆ. ಇವನ್ನೆಲ್ಲ ಮೊಳಕೆಯಲ್ಲೇ ಚಿವುಟಬೇಕಾಗಿದ್ದ, ಕಾಡಿನ ಆಗುಹೋಗುಗಳ ನಿಯಂತ್ರಕ ಅರಣ್ಯ ಇಲಾಖೆ ನಾಮಕಾವಸ್ಥೆ ಗೇಟಿಟ್ಟು ತನ್ನೊಂದು ಬಿಡಾರ, ಪಂಪ್ ಹೌಸ್ ಅಲ್ಲೇ ಕಟ್ಟಿಕೊಂಡಿದೆ, ಭಕ್ತಾದಿಗಳಿಗೆ ಮೂತ್ರದೊಡ್ಡಿಯೇ ಮೊದಲಾದ ಸೌಕರ್ಯ ಕಲ್ಪಿಸುವಲ್ಲಿ ಕಟಿಬದ್ಧವಾಗಿದೆ. ಅಂಕಿತ ನಾಮವನ್ನು ‘ಅಡ್ಡಹೊಳೆ’ ಎಂದೇ ಹೊತ್ತ ಶುದ್ಧ ಮಲೆಕನ್ನಿಕೆಯ ಕಲರವ, ಪುಷ್ಪಗಿರಿಯ ಪಾದವನ್ನು ಸೋಮವಾರಪೇಟೆಯ ಸುದೂರದಿಂದ ಬಳಸಿ ಬರುವ ಕುಮಾರಧಾರೆಯ ಅಬ್ಬರದಲ್ಲಿ ಲೀನವಾಗುವ ಸಂಗಮ ಅಲ್ಲೇ ಸಮೀಪದಲ್ಲಿದೆ. ಅಲ್ಲಿಗೂ ನುಗ್ಗಿ ಪರಿಸರ ಕೆಡಿಸುವ ಸಾರ್ವಜನಿಕರನ್ನು ಅರೆಮನಸ್ಸಿನಲ್ಲಿ ನಿರ್ಬಂಧಿಸಿರುವುದೊಂದೇ ಇಲಾಖೆ ಮಾಡಿರುವ ಘನಕಾರ್ಯ.

ಅಡ್ಡಹೊಳೆಯ ಸಂಕವನ್ನು ಬಿಚ್ಚಿ ಹೊಸದಾಗಿ ಕಾಂಕ್ರಿಟಿನದ್ದಾಗಿಸಿದರು. ಅದರ ಜೊತೆಗೇ ಸಂಕಕ್ಕೆ ತಾಗಿದಂತೇ ಒಂದು ಕೋಣೆ ಕಟ್ಟಿಸಿ (ಇದು ಯಾಕೆಂದು ನನಗೆ ಇಂದಿಗೂ ಅರ್ಥವಾಗಿಲ್ಲ) ಹಾಳು ಬಿಟ್ಟರು. ಅದೇ ಸಮಯಕ್ಕೆ ಅರಣ್ಯ ಇಲಾಖೆ ಸಂಕದಿಂದ ನೇರ ಮೇಲಿನ ಗುಡ್ಡಕ್ಕೆ ಐವತ್ತರವತ್ತು ಮೆಟ್ಟಿಲ ಸಾಲು ಕಟ್ಟಿ, ಅಲ್ಲೊಂದು ತಟ್ಟು ಕಡಿದು, ಒಂದೋ ಎರಡೋ ಕೊಠಡಿಯಿರುವ ಮಹಡಿ ಕಟ್ಟಡವೊಂದನ್ನು ನಿಲ್ಲಿಸಿದ್ದಾರೆ. ಅಲ್ಲಿ ಬೆಟ್ಟದ ತೊರೆಯೊಂದಕ್ಕೆ ದಪ್ಪದ ಕೊಳವೆಹಚ್ಚಿ ನೂರಿನ್ನೂರು ಮೀಟರ್ ಇಳಿಸುವುದರೊಡನೆ ಅಡ್ಡಹೊಳೆಯ ಎದುರು ದಂಡೆಗೆ ನೀರಾವರಿ ಕಲ್ಪಿಸಿದ್ದಾರೆ. ಏನು, ದಟ್ಟ ಕಾಡಿಗೆ, ಎಲ್ಲಾ ಕಾಲದಲ್ಲೂ ತುಂಬಿ ಮೊರೆಯುವ ಅಡ್ಡಹೊಳೆ ದಂಡೆಗೇ ನೀರಾವರಿಯೇ ಎಂದು ಹುಬ್ಬೇರಿಸಬೇಡಿ. ಅಲ್ಲೂ ಒಂದಷ್ಟು ಜಾಗದಲ್ಲಿ ಕಾಡುಕಳೆದು, ತಟ್ಟು ಮಾಡಿ ‘ಸಸ್ಯಾಭಿವೃದ್ಧಿ ಕ್ಷೇತ್ರ’ ಮಾಡಿದ್ದಾರೆ. ಆ ಎಲ್ಲ ರಚನೆಗಳ ನಿಜ ಉದ್ದೇಶವನ್ನು ಸಂಶಯಿಸುವಂತೆ ಇಂದು ಮಹಡಿ ಕಟ್ಟಡ ಹಾಳುಬಿದ್ದಿದೆ, ನೀರಾವರಿಯ ಕೊಳವೆ ನಾಪತ್ತೆಯಾಗಿದೆ. ಇನ್ನೂ ಆ ತಟ್ಟಿನಲ್ಲಿ ಮಳೆಗಾಲದಲ್ಲಿ ಒಂದಷ್ಟು ತೊಟ್ಟೆಸಸಿಗಳು ಬೆಳೆಯುವುದನ್ನು ಮಾತ್ರ ಕಂಡಿದ್ದೇನೆ. ನೀರಾವರಿ ಕೇಳದ ಇಷ್ಟಕ್ಕೇ ಆದರೆ ವನವೃಕ್ಷಗಳಿಂದ ಬೀಜವೋ ಪುನರುಜ್ಜೀವನದ ಕಡ್ದಿಯೋ ಸಂಗ್ರಹಿಸಿ ಒಯ್ದರೆ ಇಲಾಖೆಯ ಯಾವುದೇ ನಗರ ಕಛೇರಿಯ ಹಾಳು ಸುರಿಯುವ ಅಂಗಳ ಸಾಕಾಗುತ್ತಿರಲಿಲ್ಲವೇ?

ಅದೊಂದು ವರ್ಷ ಅರಣ್ಯ ಇಲಾಖೆ ಬೂದಿಚೌಡಿ ಮತ್ತು ಅಡ್ಡಹೊಳೆಯ ಮಧ್ಯಂತರದಲ್ಲಿ ದಾರಿಯ ಎಡಬದಿಯಲ್ಲಿ ಬಸ್ ಸ್ಟಾಪಿನಂಥ ಕಾಂಕ್ರೀಟ್ ರಚನೆ ತಂದಿತು. ಮತ್ತೆ ಬಲ ಬದಿಯ ಕೊಳ್ಳಕ್ಕೆ ಸುಮಾರು ಇನ್ನೂರು ಮೀಟರ್ ನೇರ ಕಾಲು ದಾರಿ ಕಡಿಯಿತು. ಅಲ್ಲಿ ಶುದ್ಧ ವನಸಾಂಗತ್ಯದಲ್ಲಿದ್ದ ಅಡ್ಡಹೊಳೆ ಮೇಲೆ ಉಕ್ಕಿನ ಹಗ್ಗ ಬಿಗಿದು ಜೋಲು ಸೇತುವೆ ಕಟ್ಟಿದರು. ಆಚೆ ದಂಡೆಯಲ್ಲಿ ಅಷ್ಟು ನೆಲ ತೆರವು ಮಾಡಿ, ಅಷ್ಟು ಕಾಂಕ್ರೀಟ್ ಸುರಿದು ಶಿಬಿರ ಸ್ಥಾನ ನಿಗದಿಸಿದರು. ಇದು ಸಾರ್ವಜನಿಕರಿಗೆ ಮೀಸಲಾದ ಪ್ರಕೃತಿ ಶಿಬಿರ ಎಂದೂ ಘೋಷಿಸಿದರು. (ಸಮರ್ಪಣಾ ಸಮಾರಂಭ ಗಡದ್ದಾಗಿಯೇ ನಡೆದಿದೆಯೆಂದು ದಿಕ್ಕೆಟ್ಟು ಬಂದ ಆನೆಯೊಂದು ನನಗೆ ಎಸ್ಸೆಮ್ಮೆಸ್ ಕಳಿಸಿತ್ತು) ಆದರೆ ಹೆಚ್ಚಿನೆಲ್ಲಾ ಸಾರ್ವಜನಿಕ ಯೋಜನೆಗಳಂತೆ ಇಲ್ಲೂ ನಿರ್ವಹಣೆಯ ವ್ಯವಸ್ಥೆಯಿರಲಿಲ್ಲ. ಇಂದು ದಾರಿಬದಿಯ ಮುಕ್ತ ಮಂಟಪಕ್ಕೆ ಬಾಗಿಲು ಜೋಡಿಸಿ, ಕೈ ಕಳೆದುಹೋಗಿರುವ ಬೀಗ ಜಡಿದಿದ್ದಾರೆ. ಕಾಲುದಾರಿಯ ಪ್ರವೇಶಕ್ಕೆ ಮುಳ್ಳಬಲ್ಲೆಗಳ ಅಡ್ಡಿ ಹೇರಿದ್ದಾರೆ. ನೀವು ಛಲಬಿಡದ ತ್ರಿವಿಕ್ರಮನಂತೆ ಮುಳ್ಳಬಲ್ಲೆಗಳನ್ನು ನಿವಾರಿಸಿ ಕೊಳ್ಳಕ್ಕೆಲ್ಲಾದರೂ ಇಳಿದರೆ ತುಕ್ಕು ಹಿಡಿದ ಕಬ್ಬಿಣದ ಗೂಟಗಳನ್ನು ಕಲ್ಲು ಬೇರಗಟ್ಟೆಗಳ ಎಡೆಯಲ್ಲಿ ಎಡವಬಹುದು. ತುಂಡಾದ ಉಕ್ಕಿನ ಸರಿಗೆಗಳು ಬಳ್ಳಿ ಬೀಳಲುಗಳ ಮರೆಯಲ್ಲಿ ತಲೆಹೆಟ್ಟಬಹುದು. ಕಾಡು ವಿಷಾದದಲ್ಲೇ ಕಡ್ಡಿಸೊಪ್ಪುಗಳ ಗೋರಿ ಕಟ್ಟುತ್ತಿದ್ದರೂ ಇನ್ನೂ ಪೂರ್ಣ ಜೀರ್ಣಿಸಿಕೊಳ್ಳಲಾಗದ ಸಿಮೆಂಟು ಹಲಗೆಗಳು, ಪರಿಸರಪ್ರೇಮೀ ಶಿಬಿರವಾಸಿಗಳೆಸೆದ ತರಹೇವಾರಿ ಕಸಗಳು ಕಣ್ಣಿಗೆ ರಾಚಬಹುದು.

ಅಡ್ಡ ಹೊಳೆ ಸಂಕ ಕಳೆದ ಮೇಲೆ ಒಂದೆರಡು ಹಿಮ್ಮುರಿ ತಿರುವುಗಳಾದ ಮೇಲೆ ಒಂದೆಡೆ ದಾರಿ ನೇರ ಕುಮಾರಧಾರೆಯ ಕಣಿವೆಗೆ ತೆರೆದುಕೊಂಡಿದೆ. ಇಲ್ಲಿ ಇಲಾಖೆಯ ‘ಸೇವಾಮನೋಭಾವ’ ದಾರಿಯ ಅಂಚನ್ನೇ ಭದ್ರಪಡಿಸಿದ್ದರೆ ಅವಶ್ಯಕತೆಯೂ ಅನುಕೂಲವೂ ಸಂಗಮಿಸುತ್ತಿತ್ತು. ಇಲ್ಲ, ಅದನ್ನು ಹಾಗೇ ಅಪಾಯಕಾರಿಯಾಗಿಯೂ ಕಸದಕುಪ್ಪೆಯೂ ಆಗುವಂತೆ ಬಿಟ್ಟು ಇಲಾಖೆ ಹೊಸತೇ ಜಾಗ ಹುಡುಕಿತು. ದಾರಿಯ ಎಡದ ದರೆಗೆ ಮೆಟ್ಟಿಲ ಸಾಲು ಕಟ್ಟಿ ಏರಿ, ಅಲ್ಲೊಂದಷ್ಟು ನೆಲ ತಟ್ಟು ಮಾಡಿ, ಗೋಲಾಕಾರದಲ್ಲಿ ಬೃಹತ್ ಕಲ್ನಾರಿನ ಛತ್ರಿ ನಿಲ್ಲಿಸಿದ್ದಾರೆ. ಇವೆಲ್ಲದರ ಬಿಲ್ ಪಾವತಿಯಾದಂದಿನಿಂದ ಯಾರೂ ಇತ್ತ ತಿರುಗಿ ನೋಡಿಲ್ಲವೆನ್ನುವಂತೆ ಮೆಟ್ಟಿಲು ಜರಿದಿದೆ, ಛತ್ರಿ ಹಾಳು ಸುರಿದಿದೆ.

ಬಿಸಿಲೆ ಗೇಟಿಗೂ ಒಂದು ಕಿಮಿ ಮೊದಲೇ ಮತ್ತೆ ಅಂಥದ್ದೇ ಕಣಿವೆ ದೃಶ್ಯ ಕಾಣಿಸುವ ಇನ್ನೊಂದು ಆಯಕಟ್ಟಿನ ಜಾಗ ಇದೆ. ದಾರಿಯ ಬಲಬದಿಯಲ್ಲೇ ಪ್ರಕೃತಿ ಒದಗಿಸಿದ ಬಾಲ್ಕನಿಯಂತೆ ಸುಮಾರು ನೂರು ಮೀಟರ್ ಉದ್ದಕ್ಕೆ ಪ್ರಾಕೃತಿಕ ಕಲ್ಲ ಹಾಸು ಚಾಚಿಕೊಂಡಿತ್ತು. ಯಾರೋ ಹೇಳಿದ್ದರು “ಎಡಕಲ್ ಗುಡ್ಡದ್ಮೇಲೆ ಪಿಚ್ಚರಿನ ಕ್ಲೈಮಾಕ್ಸ್ ಇಲ್ಲೇ ಶೂಟ್ ಮಾಡಿದ್ದು.” ಹಾಗೆ ಮೊದಮೊದಲು ನಮ್ಮ ಬಾಯಲ್ಲಿ ‘ಎಡಕಲ್ಗುಡ್ಡೆ’ಯೇ ಆಗಿದ್ದ ಜಾಗ ಇಂದು ಜನಪದರಲ್ಲಿ ‘ಬೀಟೀ ಸ್ಪಾಟ್’ ಮತ್ತು ಶಾಸನದಲ್ಲಿ ‘ಸುಂದರ ತಾಣ’ವಾಗಿರುವುದಕ್ಕೆ ತುಕ್ಕು ಹಿಡಿದ ಬೋರ್ಡೇ ಸಾಕ್ಷಿ. ಇಲ್ಲಂತೂ ಅಭಿವೃದ್ಧಿಯ ಹೆದ್ದೆರೆಗಳು ಮತ್ತೆ ಮತ್ತೆ ಹೊಡೆದಿವೆ. ವಿವಿಧ ಹಂತಗಳಲ್ಲಿ ಇಲ್ಲಿ ನಡೆದ ಹರಕು ಮುರುಕು ಕಾಮಗಾರಿಗಳ ಅಂದಾಜು ನನಗಿದೆ. ಆದರೆ ಚೆಲ್ಲಿದ ಹಣದ ಲೆಕ್ಕ ಇದಕ್ಕೆ ಖಂಡಿತಾ ತಾಳೆ ಬಾರದು ಎಂದಷ್ಟೇ ನಾನು ಊಹಿಸಬಲ್ಲೆ. ಛಲವಂತರು ಮಾಹಿತಿ ಹಕ್ಕಿನ ಬಲದಲ್ಲಿ ಇದನ್ನು ಪತ್ತೆ ಮಾಡಿದರೆ ಕರದಾತನಾಗಿ ನನ್ನ ಹಣ ಎಷ್ಟು ಹಾಳಾಗಿದೆ ಎಂದು ತಿಳಿಯುವ ಕುತೂಹಲ ನನಗುಂಟು. ಸಮುದ್ರಕ್ಕುಪ್ಪು ಹೊತ್ತವರಂತೆ ಇಲ್ಲಿ ಜಲಮರುಪೂರಣ ಮತ್ತು ಹಸುರೀಕರಣದ ಕೆಲಸ ನಡೆದದ್ದು ನಾನು ಕಂಡಿದ್ದೇನೆ. ಅದು ಸಣ್ಣ ಮಟ್ಟದಲ್ಲಿ ಪ್ರಾಕೃತಿಕ ಅಸಮತೋಲನವನ್ನು ಮಾಡುವುದು ನಿಜ. ಆದರೆ ಎಚ್. ಡಿ. ರೇವಣ್ಣ ಮೊದಲನೇ ಅವಕಾಶದಲ್ಲಿ ಮಂತ್ರಿಯಾಗಿದ್ದ ಕಾಲದಲ್ಲಿ ಇಲ್ಲಿನ ಪ್ರವಾಸೋದ್ಯಮ ಆಕರ್ಷಣೆಗೆ ಹೊತ್ತಿದ್ದ ಕಳ್ಳಬಸುರೇನಾದರೂ ಕಾರ್ಯುಗತಗೊಂಡರೆ ಪರಿಸರದ ಮೇಲಾಗುವ ದುಷ್ಪರಿಣಾಮದ ವ್ಯಾಪ್ತಿ ತುಂಬ ದೊಡ್ಡದು. ಅದರ ಎರಡೇ ಮುಖ್ಯಾಂಶಗಳನ್ನು ಹೇಳುವುದಾದರೆ ೧. ‘ಸುಂದರತಾಣ’ದ ಒತ್ತಿನ ಗೊಸರ ಕಣಿವೆಯಲ್ಲಿ (ಗಜನಿ ನೆಲ, ಹಡ್ಲು, ಹಾಳುಬಿದ್ದ ಗದ್ದೆಯಂಥ ಪ್ರದೇಶ) ಅಣೆಕಟ್ಟು ಹಾಕಿ ಸರೋವರ ನಿರ್ಮಿಸುವುದು. ಮತ್ತೆ ಬೋಟಿಂಗ್, ಪಿಕ್ನಿಕ್ ಸ್ಪಾಟುಗಳು, ಡಾರ್ಮಿಟ್ರೀಸು, ಇತ್ಯಾದಿ ಇತ್ಯಾದಿ ಇದ್ದದ್ದೇ. ೨. ಎರಡು ಸಾವಿರ ಅಡಿ ಆಳದ ಕುಮಾರಧಾರಾ ಕಣಿವೆಗೆ ಇಳಿದು ಎದುರು ದಂಡೆಯಲ್ಲಿ ಎರಡರಷ್ಟು ನೇರ ಮೈ ಏರಿ ಕುಮಾರಪರ್ವತ ಅಥವಾ ಪುಷ್ಪಗಿರಿಗೇ ಲಗ್ಗೆಯಿಡುವ ಹುನ್ನಾರ! ಕಣ್ಣಳವಿಯಲ್ಲೇ ಇರುವ ಕುಮಾರ ಪರ್ವತವನ್ನು ಯಾರಿಗೂ ಸುಲಭ ಸಾಧ್ಯ ಮಾಡಲು ಅಲ್ಲಿವರೆಗೂ ತೂಗುತೊಟ್ಟಿಲು ಹಾಕುವ ಯೋಜನೆ. (ಇವಕ್ಕೆ ವ್ಯಾಖ್ಯಾನ ಕಲ್ಪಿಸುವ ಕೆಲಸ ನಿಮಗೇ ಬಿಡುತ್ತೇನೆ.)

ಕ್ಷಮಿಸಿ, ನನ್ನನ್ನು ದಾರಿಯಲ್ಲೇ ಕಳೆದುಹೋದೆ ಎಂದು ಭಾವಿಸಬೇಡಿ. ಇಂಥ ಇನ್ನಷ್ಟು ‘ಅಬಿವೃದ್ಧಿ’ ಕಾರ್ಯಗಳನ್ನು ಈ ದಾರಿಯಲ್ಲಿ ಬುದ್ಧಿಯಿದ್ದ ಯಾರೂ ಗುರುತಿಸುತ್ತಾ ಹೋಗಬಹುದು. ನಾನು ಇಲ್ಲಿ ವಿವರಿಸಲು ತೊಡಗಿದರೆ ಲೇಖನದ ಪರಿಮಿತಿಯನ್ನು ಹೆಬ್ಬೊತ್ತಿಗೆಗೆ ವಿಸ್ತರಿಸಬೇಕಾದೀತು. ಹಾಗಾಗಿ ದಾರಿಮೀರಿದ ಕೆಲವು ಅನ್ಯ ಗಂಭೀರ ವಿಚಾರಗಳ ಬಗ್ಗೆ ಗಮನಹರಿಸೋಣ.

ಕುಳ್ಕುಂದ ಬಿಟ್ಟರೆ ಬಿಸಿಲೆ ಗೇಟಿನವರೆಗೆ ಈ ಕಾಯ್ದಿರಿಸಿದ ಕಾಡು ಶುದ್ಧ ಜನವಾಸವಿಲ್ಲದ ಬೀಡು. ಆನೆ ಹುಲಿಗಳಿಂದ ತೊಡಗಿ ಸಕಲ ವನ್ಯ ವೈಭವಗಳಿಗೆ ವಿಹಾರಧಾಮವಾದ ಇದನ್ನು ಸಹಜವಾಗಿ ಪುಷ್ಪಗಿರಿ ವನಧಾಮಕ್ಕೆ ಸೇರಿಸಬೇಕಿತ್ತು. ತಪ್ಪು ತಿದ್ದಿಕೊಳ್ಳುವಂತೆ ಸರಕಾರಕ್ಕೆ ಮನವಿ, ಒತ್ತಾಯಗಳ ಕಾರ್ಯಾಚರಣೆಯಲ್ಲಿ ನನ್ನ ಕೆಲವು ಗೆಳೆಯರು, ಮುಖ್ಯವಾಗಿ ನಿರೇನ್ ಜೈನ್ ತೊಡಗಿಕೊಂಡೇ ಇದ್ದಾರೆ. ಆ ಓಡಾಟಗಳಲ್ಲಿ ಅವರಿಗೆ ಇಲ್ಲಿ ದಾರಿಗೆ ಅಂಚುಗಟ್ಟಿದಂತೆ ಒಂದಷ್ಟು ಖಾಸಗಿ ನೆಲವಿರುವುದು, ಅದನ್ನು ಯಾವುದೋ ವನ್ಯ-ವಿಹಾರಧಾಮದವರು, ಅಂದರೆ ಜಂಗಲ್ ರೆಸಾರ್ಟಿನವರು ಖರೀದಿಸಿ, ನೆಲೆಸುವ ಯೋಚನೆ ನಡೆಸಿರುವುದೂ ತಿಳಿಯಿತು. ಅದನ್ನು ತಪ್ಪಿಸುವ ತುರ್ತು ಕ್ರಮದಲ್ಲಿ ನಮಗೆ ಕಾಣಿಸಿದ್ದು ಒಂದೇ ದಾರಿ. ಆ ಪ್ರಕಾರ ಪೂರ್ಣ ವೈಯಕ್ತಿಕ ತಾಕತ್ತಿನಲ್ಲಿ ನಾನು ಮತ್ತು ವೈದ್ಯ ಗೆಳೆಯ ಕೃಷ್ಣಮೋಹನ್ ಆ ನೆಲವನ್ನು ಖರೀದಿಸಿದೆವು. ಜೊತೆಗೆ ಅಲ್ಲಿ ಯಾವುದೇ ಖಾಯಂ ನಾಗರಿಕ ರಚನೆಗಳನ್ನು, ವಾಸವನ್ನು ರೂಢಿಸದಿರಲು ನಿರ್ಧರಿಸಿದೆವು. ಇಂದು ಭೂದಾಖಲೆಗಳಲ್ಲಿ ಮಾತ್ರ ಆ ನೆಲದ ಯಜಮಾನಿಕೆ ನಮ್ಮದು. ಮತ್ತೆ ನಾಗರಿಕ ವಲಯಗಳಲ್ಲಿ ಈ ಸಂಚಲನವನ್ನು ಸಾರುವ ಕಾಯಕಕ್ಕೆ ಅನುಕೂಲವಾಗುವಂತೆ ಅದನ್ನು ಅಶೋಕವನ – ವನ್ಯಕ್ಕಿಲ್ಲಿ ಶೋಕವಿಲ್ಲ ಎಂಬರ್ಥದಲ್ಲಿ, ಹೆಸರಿಸಿದ್ದೇವೆ. ಆದರೆ ಯಾರೇ ಅಲ್ಲಿಗೆ ಹೋಗಿ ನೋಡುವುದಾದರೆ ಒಂದು ಬೇಲಿ, ಒಂದು ನಾಮಫಲಕವೂ ಸಿಗದು. ಅಲ್ಲಿ ವನ್ಯವೇ ಪ್ರಥಮ – Wild life First (ಇದು ನಾಗರಹೊಳೆ ವನಧಾಮದ ರೂವಾರಿ, ಕೆ.ಎಂ ಚಿಣ್ಣಪ್ಪನವರ ನೇತೃತ್ವದ ವನ್ಯ ರಕ್ಷಕ ಬಳಗದ ಹೆಸರೂ ಹೌದು).

ಬಿಸಿಲೆ ಗೇಟಿನಿಂದ ತುಸುವೇ ಮುಂದೆ, ದಾರಿ ಬಿಟ್ಟು ಸುಮಾರು ಎರಡು ಕಿಮೀ ಒಳಗಿನ ಸಹಜ ಹುಲ್ಲಹಾಸಿನ ಬೆಟ್ಟದ ಓರೆಗೆ ಮಾತ್ರ ‘ಅಶೋಕವನ’ದ ಅದೃಷ್ಟ ಒದಗಲಿಲ್ಲ ಎನ್ನಬೇಕು. ನಾವು ಕಾಣುವ ಕಾಲಕ್ಕೇ ಯಾವುದೋ ವಿಹಾರಧಾಮದವರು ಇಲ್ಲಿ ಹತ್ತಿಪ್ಪತ್ತು ಎಕರೆ ಕಾಯ್ದಿರಿಸಿದ ಭೂಮಿಯನ್ನು ಯಾವುದೋ ವಿಹಾರಧಾಮದವರು ಎಷ್ಟೋ ವರ್ಷಕ್ಕೆ ಸರಕಾರದಿಂದ ಗಿಟ್ಟಿಸಿಕೊಂಡಾಗಿತ್ತು. ಅದಕ್ಕೆ ಮುಖ್ಯ ದಾರಿಯಿಂದ ‘ಇರುವ ಸಂಪರ್ಕ ದಾರಿ’ಯನ್ನು ಅಭಿವೃದ್ಧಿಪಡಿಸುವ ಹೆಸರಿನಲ್ಲಿ ಎರಡು ಕಿಮೀ ಉದ್ದಕ್ಕೆ, ಮೂರು ಬಸ್ಸೋಡಿಸುವ ಅಗಲಕ್ಕೆ ಬುಲ್ಡೋಜರ್ ಹೊಡೆಸಿ, ಬೋಲ್ಡರ್ ಕೂರಿಸಿಯೂ ಆಗಿತ್ತು. ಆ ಕೊನೆಯ ವಿಹಾರಧಾಮದ ನೆಲ ನೇರ ಕುಮಾರಧಾರಾ ನದಿಯ ಜಲಾನಯನ ಪ್ರದೇಶ. ನದಿಯ ಹುಟ್ಟಿನಲ್ಲೇ ಮಾಲಿನ್ಯ ಊಡಿಸುವ ಈ ಅವಕಾಶವನ್ನು ಅನುಮೋದಿಸಿದ ಸರಕಾರೀ ತಜ್ಞರಿಗೆ ಇಗ್ನೋಬಲ್ ಪ್ರಶಸ್ತಿ ಖಂಡಿತ ಕೊಡಿಸಬೇಕು. ಇಂಥದ್ದೇ ಇನ್ನೊಂದು ವಿಷಬೀಜ ಮೊಳೆಯುವ ಮೊದಲೇ ಹೊಸಕುವ ಅವಕಾಶ ನಮಗೆ ಒದಗಿದ್ದಕ್ಕೆ ನಾವು ಧನ್ಯರು. ಮತ್ತೆ ನಮಗೆ ಪ್ರಾಕೃತಿಕ ಪುರಸ್ಕಾರವೂ ವಿಶಿಷ್ಟವಾಗಿ ದಕ್ಕಿದ್ದನ್ನು ನಾನು ಸೂಕ್ಷ್ಮದಲ್ಲಾದರೂ ಇಲ್ಲಿ ಹೇಳಲೇಬೇಕು. ಬಿಸಿಲೆ ವಲಯದಲ್ಲಿ ನಾವು ಹಲವು ಶೋಧನಾತ್ಮಕ ಶಿಬಿರಗಳನ್ನು ನಡೆಸಿದ್ದುಂಟು. ಅಲ್ಲಿ ತೀರಾ ಆಕಸ್ಮಿಕವಾಗಿ ನಮ್ಮೆದುರು ಅನಾವರಣಗೊಂಡ ಜೀವಿ – ಮರನಾಯಿ. ನೀಲಗಿರಿ ಮಾರ್ಟಿನ್ ಎಂದೂ ಹೆಸರಾಂತ ಈ ಪುಟ್ಟ ಪ್ರಾಣಿ ದಕ್ಷಿಣ ಭಾರತದಲ್ಲಿ ಸದ್ಯ ಕೇರಳದ ಎರುವಿಮಲೈ ವನಧಾಮದಲ್ಲಿ ಮಾತ್ರ ಗುರುತಿಸಲ್ಪಟ್ಟಿದೆ. ಅದರ ಕುರಿತ ಗಂಭೀರ ಅಧ್ಯಯನ ಬಿಡಿ, ಅದರ ವನ್ಯ ಇರವಿನ ಸರಿಯಾದ ಒಂದು ಚಿತ್ರವೂ ವನ್ಯಪ್ರೇಮಿಗಳ ಬಳಿಯಿರಲಿಲ್ಲ. ನಮಗೆ ಮೂರು ಸದಸ್ಯರ ಮರನಾಯಿ ಕುಟುಂಬವೊಂದರ ದರ್ಶನಲಾಭವಾದದ್ದು, ಒಂದು ವಿಡಿಯೋ ದಾಖಲೀಕರಣಕ್ಕೂ ದಕ್ಕಿದ್ದು ವನ್ಯಪ್ರೇಮೀ ವಲಯದಲ್ಲಿ ಹೊಸ ಸಂಚಲನವನ್ನೇ ತಂದಿತು. (ನನ್ನ ಬ್ಲಾಗ್: www.athreebook.com ನಲ್ಲಿ ವನ್ಯ ವಿಭಾಗ ನೋಡಬಹುದು)

ಇಂದು ನಮ್ಮಲ್ಲಿ ಅಪಾರ ಜಲವಿದ್ಯುದಾಗರಗಳಿವೆ. ನೆಪ ಏನೇ ಇರಲಿ, ಹೆಚ್ಚುಕಡಿಮೆ ಅಷ್ಟೂ ಪೂರ್ಣ ಕ್ಷಮತೆಯಲ್ಲಿ ದುಡಿಯುತ್ತಿಲ್ಲ. ಆದರೆ ನಮ್ಮ ಯಾವುದೇ ಯೋಜನಾ ಸೋಲನ್ನು ಹೊಸ ಯೋಜನೆಗಳ ಸಂಖ್ಯಾ ಬಾಹುಳ್ಯದಲ್ಲಿ, ಅಂಕಿಸಂಕಿಗಳ ಡೊಂಬರಾಟದಲ್ಲಿ ಸಾರ್ವಜನಿಕ ನೆನಪಿನಿಂದ ಮರೆಸುವುದು, ಹೊಸಭ್ರಮೆ ಮೂಡಿಸುವುದು ಆಡಳಿತ ವರ್ಗಕ್ಕೆ ರೂಢಿಯಾಗಿದೆ. ಜನಪ್ರತಿನಿಧಿಗಳಾದರೋ ಖಾಸಗಿಯಲ್ಲಿ ತಜ್ಞರ ಕೈಗೊಂಬೆಗಳು ತಾವೆಂಬ ಅಸಹಾಯಕತೆಯನ್ನೂ ಸಾರ್ವಜನಿಕ ವೇದಿಕೆಗಳಲ್ಲಿ ಸರ್ವಶಕ್ತರು ತಾವೆಂಬ ಬೂಟಾಟಿಕೆಯನ್ನು ಬಿಟ್ಟದ್ದಿಲ್ಲ. ಖಾಸಗಿಯಲ್ಲಿ ಪರಿಸರಪ್ರೇಮವನ್ನು ಗುಣವೆನ್ನುವ, ತಮ್ಮದೇ ಎನ್ನುವ, ಸಾಮಾಜಿಕ ಕಳಕಳಿ ಮತ್ತು ಪ್ರಾಮಾಣಿಕತೆಗಳಲ್ಲಿ ಅದ್ವಿತೀಯರಾಗಿ ತೋರುವ ಇದೇ ಜನಪ್ರತಿನಿಧಿಗಳು ವೃತ್ತಿ ಭೂಮಿಕೆಯಲ್ಲಿ (ಗಮನಿಸಿ, ಇಂದು ರಾಜಕಾರಣ ಅತ್ಯುನ್ನತ ಸಂಬಳ ಸವಲತ್ತು ಇರುವ ಒಂದು ವೃತ್ತಿ. ಇನ್ನೂ ಹೆಚ್ಚಿನ ಸತ್ಯವನ್ನು ನೀವೆಲ್ಲಾ ತಿಳಿದವರೇ) ನಿರ್ಲಜ್ಜವಾಗಿ ತಮ್ಮನ್ನು ಸಮಾಜದಿಂದ ಪ್ರತ್ಯೇಕಿಸಿಕೊಳ್ಳುತ್ತಾರೆ. ಔಚಿತ್ಯ, ವಿವೇಚನೆಗಳ ಸುಳುವು, ಸಲಹೆಗಳನ್ನು ಅಧಿಕಾರದ ತಪ್ಪು ವ್ಯಾಖ್ಯೆಯಲ್ಲಿ ಹೊಸಕುತ್ತಾರೆ. ಇನ್ನು ವಿಸ್ತೃತ ಪೀಠಿಕೆ ಹೊಡೆಯದೆ, ಈ ವಿಪರೀತಗಳಿಗೂ ಒಂದು ಉದಾಹರಣೆಯನ್ನು ನಮ್ಮ ಬಿಸಿಲೆವಲಯದಿಂದ ಹೇಳುತ್ತೇನೆ.

ಬಿಸಿಲೆ ಹಳ್ಳಿಯಿಂದಲೂ ಸ್ವಲ್ಪ ಮೇಲಿನ ಹಳ್ಳಿ ಹೊಂಗಡಳ್ಳ. ಕೆಪಿಸಿಎಲ್ ಅರ್ಥಾತ್ ಕರ್ನಾಟಕದೊಳಗೆ ವಿದುಚ್ಛಕ್ತಿಯನ್ನು ತಯಾರಿಸುವ ಬಹುಮುಖ್ಯ ಸಂಸ್ಥೆ, ಇಲ್ಲಿಗೆ ಪ್ರಥಮ ಹಂತದಲ್ಲಿ ೨೦೦ ಮೆಗಾವಾಟ್ಸ್‌ನ ಜಲವಿದ್ಯುತ್ ಯೋಜನೆ ರೂಪಿಸಿದೆ. ಯೋಜನೆಯ ಕೆಳಪಾದ ಗುಂಡ್ಯದಲ್ಲೇ ಇರುವುದರಿಂದ ಇದಕ್ಕೂ ಗುಂಡ್ಯದ್ದೇ ಹೆಸರು. ಇಲ್ಲೂ ಅಭಿವೃದ್ಧಿ ಎಂಬ ಅಸ್ತ್ರ ಸಹಜ ಮತ್ತು ಪ್ರಾಕೃತಿಕ ಸತ್ಯಗಳಿಗೆ ವಿರೋಧಿಯಾಗಿ ಮುಂದುವರಿದಿರುವುದು ದೊಡ್ಡ ದುರಂತ. ವಾಸ್ತವದಲ್ಲಿ ಪ್ರಧಾನ ಉತ್ಪನ್ನವಾದ ವಿದ್ಯುಚ್ಛಕ್ತಿಗಿಂತ ಉಪೋತ್ಪನ್ನಗಳಾದ ಸಾಲಸೌಲಭ್ಯ, ಸಬ್ಸಿಡಿ, ಮರ, ಕಲ್ಲು, ನಿರ್ಮಾಣ ಕಂತ್ರಾಟು ಇತ್ಯಾದಿ ಬಲು ಮುಖ್ಯ ಎನ್ನುವುದು ಅಘೋಷಿತ ಸತ್ಯ. ಯಾವುದೇ ಸಾರ್ವಜನಿಕ ಕಾಮಗಾರಿ ನಡೆಸುವಾಗ ಮನೆ, ಕೃಷಿ, ನಾಗರಿಕತೆಗಳಿಗೆ ಮರುವಸತಿಯೋ ಪರಿಹಾರವೋ ಭಾರೀ ಜಟಿಲ ಸಮಸ್ಯೆಯೇ ಸರಿ. ಆದರೆ ಅದಕ್ಕೂ ಮಿಗಿಲಾದ ಪರಿಸರಕ್ಕೆ ಪ್ರಾತಿನಿಧ್ಯವೇ ಇರುವುದಿಲ್ಲ ಎಂಬುದನ್ನು ಮನಗಂಡೇ ಸಂದ ಮಹಾತ್ಮರು ಸ್ಪಷ್ಟ ಕಾನೂನು ನಿರ್ಬಂಧಗಳನ್ನು ಹೇರಿದ್ದಾರೆ. ತಜ್ಞರ ಪರಿಸರ ಅಧ್ಯಯನ ವರದಿ ಮತ್ತು ಜನಾಭಿಪ್ರಾಯ ಸಂಗ್ರಹ ಆಗಬೇಕು. ಅವುಗಳ ಆಧಾರದಲ್ಲಿ ರೂಪುಗೊಳ್ಳುವ ಪರಿಸರ ಇಲಾಖೆಯ ಅನುಮೋದನೆ ಯಾವುದೇ ಯೋಜನೆಗೆ ಪ್ರಾಥಮಿಕ ಆವಶ್ಯಕತೆ. ಆದರೆ ‘ತಜ್ಞತೆ’ ಮಾರಾಟಕ್ಕಿರುವುದು, ‘ಜನಾಭಿಪ್ರಾಯ’ ಪ್ರಾಮಾಣಿಕತೆ ಕಳಚಿದ ಅಂಕಿಸಂಕಿಗಳಾಗುವುದು ನಮ್ಮ ಬೌದ್ಧಿಕ ದಾರಿದ್ರ್ಯವನ್ನು ಬಿಂಬಿಸುವುದರೊಡನೆ ಪ್ರಜಾಸತ್ತೆಯ ಅತಿ ದೊಡ್ಡ ದುರಂತವೂ ಆಗಿದೆ.

ಗುಂಡ್ಯ ಯೋಜನೆಯ ಪರಿಸರ ಅಧ್ಯಯನ ವರದಿ ವೈಜ್ಞಾನಿಕ ವಿಶ್ಲೇಷಣೆಯ ಬಲು ದೊಡ್ಡ ಅಣಕ. ಇಲ್ಲಿ ವನ್ಯಜೀವೀ ಪಟ್ಟಿಯಲ್ಲಿ ಕ್ಷುದ್ರ ಜಿಗಣೆಯನ್ನು ಉರಗದ ಸ್ಥಾನಕ್ಕೆ ಏರಿಸಿದ್ದಾರೆ. ಇಲಿಗಳನ್ನು ಗಣ್ಯ ವನ್ಯಜೀವಿಗಳಾಗಿ ಗುರುತಿಸಿದ್ದಾರೆ. ಜಾಣತನದಲ್ಲಿ ಇಲ್ಲಿ ಸಹಜವಾಗಿರುವ ಆನೆ ಹುಲಿಗಳ ಉಲ್ಲೇಖವೇ ಇಲ್ಲ. ಕಣ್ಣಳವಿಯಲ್ಲೇ ಇರುವ, ಅಂದರೆ ಹಕ್ಕಿ ಹಾರಿದಂತೆ ನಾಲ್ಕೈದು ಕಿಮೀ ದೂರದಲ್ಲೇ ಇರುವ ಪುಷ್ಪಗಿರಿ ವನಧಾಮವನ್ನು ಕೊಂಕಣ ಸುತ್ತುವ ಯಾವುದೋ ಮಾರ್ಗದ ಉದ್ದಕ್ಕೆ ಅಳೆದು ಕಾನೂನಿನ ಮಿತಿಯಿಂದ ಬಲು ದೂರ ಇರಿಸಿದ್ದಾರೆ. ಇನ್ನು ಯೋಜನೆ ಅನುಷ್ಠಾನದ ಪರಿಸರದಲ್ಲೇ ಜನಾಭಿಪ್ರಾಯದ ಕ್ರೋಢೀಕರಣದ ಮುಖ್ಯ ಸಭೆ ಹೊಂಗಡಳ್ಳದಲ್ಲಿ, ಹಾಸನ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲೇ ನಡೆಯಿತು. ಆದರೆ ಅದು ಪರಿಸರ ಬಿಟ್ಟು, ನಿರ್ವಸಿತರಾಗುವವರ ಪರಿಹಾರ ಚೌಕಾಸಿಯ ಅಡ್ಡೆಯಾಗಿತ್ತು. ಈ ಹೂಟಗಳನ್ನೆಲ್ಲ ಅರೆಬರೆ ತಿಳಿದೂ ನಿರಾಕರಿಸಬೇಕಾದವರು ದಿನ ನಿತ್ಯದ ಗಂಜಿ, ಬೀಡಿಗಳಿಗೆ ಪರದಾಡುವ ಜನಗಳು. ಆ ಸಭೆಯಲ್ಲಿ ವಕೀಲ ಕಿಶೋರ್ ಕುಮಾರ್, ವನ್ಯ ಕಾರ್ಯಕರ್ತ ನಿರೇನ್ ಜೈನ್, ಪರಿಸರ ಅಧ್ಯಯನ ಸಂಸ್ಥೆಯೊಂದರ ವಿಜ್ಞಾನಿ ಕೃಷ್ಣಮೂರ್ತಿಯಂಥವರು ಅಧ್ಯಯನ ಮತ್ತು ಅನುಭವಗಳನ್ನು ಕೂಡಿಸಿ ಖಚಿತ ಮತ್ತು ಲಿಖಿತ ಅಭಿಪ್ರಾಯಗಳನ್ನು ಕೊಟ್ಟಿದ್ದರು. ಆದರೆ ಅಂತಿಮ ವರದಿ ಕೇವಲ ತಲೆಲೆಕ್ಕದ, ಗಮನಿಸಿ ವಿಷಯದ ಗಹನತೆಯ ಆಧಾರದಲ್ಲಲ್ಲ, ಕೇವಲ ತಲೆ ಲೆಕ್ಕದ ಆಟದಲ್ಲಿ ಮುಗಿದಿತ್ತು. ಅಷ್ಟಾಗಿಯೂ ಕೇಂದ್ರದ ಪರಿಸರ ಇಲಾಖೆ ವಿದ್ಯುತ್ ಯೋಜನೆಗೆ ಅನುಮೋದನೆಯನ್ನು ಕೊಡಲಿಲ್ಲ. ಆದರೆ ನಮ್ಮ ಮುಖ್ಯಮಂತ್ರಿಗಳು ಪರಿಸರ ಇಲಾಖೆಯನ್ನು ‘ಜನಪರತೆಯ’ ಹೆಸರಿನಲ್ಲಿ ಧಿಕ್ಕರಿಸಿ, ಸ್ಥಳೀಯ ಜನರ ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ‘ಅಭಿವೃದ್ಧಿ ವಿರೋಧಿಗಳ’ ಹೆಸರಿನಲ್ಲಿ ಪೋಲಿಸ್ ಬಲದಿಂದ ಮೆಟ್ಟಿ ಯೋಜನೆಗೆ ಭೂಮಿಪೂಜೆ ಮಾಡಿದ್ದಾಗಿದೆ ಎಂದ ಮೇಲೆ ನಾನು ಹೇಳುವುದು ಏನೂ ಉಳಿದಿಲ್ಲ.

ಅಭಿವೃದ್ಧಿ ಮತ್ತು ಪರಿಸರ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ – ೨೦೧೦ರ ಗೋಷ್ಠಿಯೊಂದರಲ್ಲಿ ನಾನು ಮಂಡಿಸಬೇಕಾಗಿದ್ದ ವಿಷಯ. ಆ ಕುರಿತ ತಾತ್ತ್ವಿಕ ಚರ್ಚೆ ತೆಹ್ರಿಯಿಂದ ಸೈಲೆಂಟ್ ವ್ಯಾಲಿಯವರೆಗೆ, ಮೇಧಾ ಪಾಟ್ಕರ್ರಿಂದ ಕುಸುಮ ಸೊರಬರವರೆಗೆ ಸಾಕಷ್ಟು ನಡೆದಿದೆ ಮತ್ತು ನಡೆಯುತ್ತಲೇ ಇದೆ. ದಕ ಜಿಲ್ಲೆಯ ಒಳಗೇ ಎಮ್ಮಾರ್ಪೀಯೆಲ್, ನಂದಿಕೂರು, ಎಸ್ಸೀ ಮತ್ತು ಎಮ್ಮೆಸ್ಸೀಜೆಡ್ಡುಗಳು, ಮಿನಿಜಲವಿದ್ಯುದಾಗರಗಳು, ರಾಷ್ಟ್ರೀಯ ಉದ್ಯಾನವನಗಳು, ಗಣಿಗಾರಿಕೆ ಮುಂತಾದ ವಿಚಾರಗಳ ಮೇಲೂ ಚರ್ಚೆ ನಡೆದೇ ಇರುವಂತೆ ಯೋಜನೆಗಳು ಕಾರ್ಯಗತವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಹಾಗಾಗಿ ನಾನು ತಾತ್ತ್ವಿಕ ಶಬ್ದಾಡಂಬರದಲ್ಲಿ ನೂರು ಮಾತಿನಲ್ಲಿ ಹೇಳುವುದನ್ನು ಬಿಟ್ಟು ಬಿಸಿಲೆಘಾಟಿ ಎಂಬ ಒಂದೇ ಪರಿಸರದ ಬಹುಮುಖೀ ಅಭಿವೃದ್ಧಿಯ ಕಲಾಪಗಳನ್ನೇ ಸಂಕ್ಷಿಪ್ತವಾಗಿ ಬಿಡಿಸಿಟ್ಟಿದ್ದೇನೆ. ಜಾತ್ರೆಯಂಗಳದಲ್ಲಿ ಸೂತಕ ವಾರ್ತೆ ಬಿತ್ತರಿಸಿದ ಕೆಲಸ ನನ್ನದು. ನನಗೆ ತಿಳಿದಿತ್ತು, ಅದನ್ನು ಕೇಳಲೇಬೇಕಾದವರು ಅಲ್ಲಿರುವುದಿಲ್ಲ. ಆದರೆ ಅಳಲಿಗೆ ಕಿವಿಯಾಗಬಲ್ಲ ಸಾಕಷ್ಟು ಮಂದಿಯ ನಿರೀಕ್ಷೆಯಿತ್ತು, ಹಾಗೇ ಆಯ್ತು. ಮುಂದುವರಿದು ಆ ನೆಪದಲ್ಲಿ ಇಷ್ಟು ವಿಚಾರಮಂಥನಕ್ಕೆ ಅಂತರ್ಜಾಲದ ಮೂಲಕ ವಿಶ್ವವ್ಯಾಪ್ತಿಯನ್ನು ಗಳಿಸುವುದೂ ನನ್ನುದ್ದೇಶವಾಗಿದ್ದುದರಿಂದ ಇಷ್ಟುದ್ದ ಕೊರೆದಿದ್ದೇನೆ. ನಿಜವಾದ ಜನಾಭಿಪ್ರಾಯ ರೂಪಿಸುವಲ್ಲಿ ಇವು ನಿಮ್ಮನ್ನು ಕ್ರಿಯಾತ್ಮಕವಾಗಿ ಪ್ರಭಾವಿಸಿದರೆ ನಾ ಧನ್ಯ.