ಓ ಮೊನ್ನೆ ಕವಿ, ಕಲಾವಿದ ಕೆ.ವಿ ರಮಣ್ ಅನಿರೀಕ್ಷಿತವಾಗಿ ನನ್ನ ಅಂಗಡಿಗೆ ಬಂದು ನನ್ನ ಒಂದು ಮಿನಿಟಿನ ಬಿಡುವು ಕೇಳಿ ಹೇಳಿದ ಮಾತಿನ ಸಾರ, “ಯಕ್ಷಗಾನ ಎಂದರೆ ವೀರರಸ, ಅಬ್ಬರ (ಒರಟು), ಪುರುಷಕಲೆ ಎನ್ನುವ ಗ್ರಹಿಕೆ ನನ್ನಲ್ಲಿ ಬೇರೂರಿತ್ತು. ಇದನ್ನು ದೀವಟಿಗೆ ಬೆಳಕಿನ ಹಿಡಿಂಬಾ ವಿವಾಹ ಡಿವಿಡಿ ವೀಕ್ಷಣೆಯಲ್ಲಿ ನಾನು ಗುಣಾತ್ಮಕವಾಗಿ ಕಳಚಿಕೊಂಡೆ. ಬಡಗು ತಿಟ್ಟು ಸ್ವಭಾವತಃ ತೆಂಕಿಗಿಂತ ಕೋಮಲವಾದದ್ದೇ. ಆದರಿದು ಇನ್ನಷ್ಟು ಸೂಕ್ಷ್ಮಗಳಲ್ಲಿ, ಸೌಮ್ಯ ಭಾವಗಳಲ್ಲಿ ನಮ್ಮನ್ನು ಆಪ್ತವಾಗಿಸಿಕೊಂಡು ಸಂವಹನಿಸಿದೆ. ಕ್ಯಾಮರಾ ಚಳಕಗಳು ಇಲ್ಲದೆ ವೀಕ್ಷಣೆಯ ಅಬಾಧಿತವಾಗಿಸಿರುವುದು ತುಂಬ ಮೆಚ್ಚಿಕೊಂಡೆ. ಕೃತಜ್ಞತೆಗಳು.”

ಕಳೆದ ಸೆಪ್ಟಂಬರ್, ಅಕ್ಟೋಬರ್ ಸುಮಾರಿಗೆ ಡಾ| ಮನೋಹರ ಉಪಾಧ್ಯ ಮತ್ತು ನನ್ನ ಯಕ್ಷದಾಖಲೀಕರಣ ಯೋಜನೆಯ ಪೂರ್ವಾಚಾರಗಳ ವಿವರ ಕಂತುಗಳಲ್ಲಿ ಕೊಟ್ಟು ನಿಮ್ಮ ಮನೋಭೂಮಿಕೆಯನ್ನು ನನಗನುಕೂಲಮಾಡಿಕೊಂಡಿದ್ದೆ. ಒಂದೋ ಎರಡೋ ವಾರ ಕಳೆದು ೨೮-೧೧-೨೦೦೯ರಂದು ನಡೆದ ದಾಖಲೀಕರಣದ ಕಥೆಯನ್ನೂ ಹೇಳಿ ವಿರಮಿಸಿದ್ದೆ. ನಾಲ್ಕು ತಿಂಗಳ ಬಳಿಕ ಈಗ “ಇಕೋ ಮುಗಿಸಿ ತಂದಿಹೆವು” ಎಂದು ಹಾಡಿ ಹೇಳುವಂತೆ ಎರಡು ಡಿವಿಡಿಗಳನ್ನು ಸಾರ್ವಜನಿಕಕ್ಕೆ ಮುಕ್ತಗೊಳಿಸಿದ್ದೇವೆ. ಎರಡು ಯಕ್ಷ-ತಿಟ್ಟುಗಳ ಪ್ರಾತಿನಿಧಿಕ ಕಲಾವಿದರ ವೃತ್ತಿಪರ ಸಹಕಾರದಲ್ಲಿ, ಇಂದಿಗೆ (೨೮-೧೧-೨೦೦೯) ಶುದ್ಧವಾದ ಸಾಂಪ್ರದಾಯಿಕ ಹಿನ್ನೆಲೆಯಲ್ಲಿ, ರಂಗಸಜ್ಜಿಕೆಯಲ್ಲಿ ಎರಡು ವಿಭಿನ್ನ ಕಥಾನಕಗಳ ದಾಖಲೀಕರಣದ ಡೀವೀಡಿಗಳು. ಬಡಗಿನ ‘ಹಿಡಿಂಬಾ ವಿವಾಹ’ ಯಕ್ಷಗಾನ ಕೇಂದ್ರದಲ್ಲೂ (ಎಂಜಿಎಂ ಕಾಲೇಜು, ಕುಂಜಿಬೆಟ್ಟು, ಉಡುಪಿ ೫೭೬೧೦೨) ತೆಂಕಿನ ‘ಕುಂಭಕರ್ಣ ಕಾಳಗ’ ಯಕ್ಷಗಾನ ಕಲಾರಂಗದಲ್ಲೂ (ಅದಮಾರು ಮಠದ ಓಣಿ, ಉಡುಪಿ ೫೭೬೧೦೧) ತಲಾ ನೂರು ರೂಪಾಯಿಯಂತೆ ಲಭ್ಯ. ನೆನಪಿರಲಿ, ಈ ಹಣದಲ್ಲಿ ಡಿವಿಡಿಯ ಕಚ್ಚಾ ವಸ್ತು, ಪ್ರತಿಮಾಡಿದ ವೆಚ್ಚ ಕಳೆದುಳಿದದ್ದೆಲ್ಲ ಆಯಾ ಸಂಸ್ಥೆಗಳ ಉದಾತ್ತ ಕಲಾಸೇವೆಗೆ ಸಲ್ಲುವ ಕಿರುಕಾಣಿಕೆ ಮಾತ್ರ. ದಾಖಲೀಕರಣದ ಮೂಲ ಯೋಚನೆ ಡಾ| ಮನೋಹರ ಉಪಾಧ್ಯರದ್ದು. ಮುಖ್ಯ ಆರ್ಥಿಕ ಪಾಲುಗಾರಿಕೆಯಲ್ಲಿ ನಾನೂ ತಾಂತ್ರಿಕ ಪಾಲುಗಾರಿಕೆಯಲ್ಲಿ ಅಭಯಸಿಂಹನೂ ಅಷ್ಟೇ ಸ್ವ-ಇಚ್ಛೆಯಿಂದ, ಪ್ರೀತಿಯಿಂದ ತೊಡಗಿಕೊಂಡೆವು. ಇದರಲ್ಲಿ ನಾವು ತೊಡಗಿಸಿದ ಶ್ರಮ, ಹಣ ಕೇವಲ ಧನ್ಯತೆಯ ರೂಪದಲ್ಲಿ ಮಾತ್ರ ನಮಗೆ ಮರಳುತ್ತದೆ. ಇಲ್ಲಿನದು ನಮ್ಮ ಮೂವರ ಮಿತಿಯ, ಯಕ್ಷ-ಹರಿವಿನ ಒಂದು ಕಾಲಘಟ್ಟದ ದಾಖಲೀಕರಣದ ಫಲ. ಇದರ ಬೆನ್ನಲ್ಲಿ ವಿಭಿನ್ನ ಕಾಲಘಟ್ಟದ ಮತ್ತು ವಿಭಿನ್ನ ಯೋಚನಾಲಹರಿ ಮತ್ತು ತಾಕತ್ತಿನ ದಾಖಲೀಕರಣಗಳು ಆಗುವುದು ಅವಶ್ಯ. ಹಾಗೆ ಅನುಸರಿಸುವವರಿಗೆ ಇಲ್ಲಿ ಪಾಲುಗೊಂಡ ಇತರ ವ್ಯಕ್ತಿ ಮತ್ತು ಕಾರ್ಯವಿವರಗಳನ್ನೂ ಸೂಚ್ಯವಾಗಿ ನನ್ನ ಹಿಂದಿನ ಬರಹಗಳಲ್ಲಿ ಕೊಟ್ಟಿದ್ದೇನೆ. ಮುಂದುವರಿದು ಸೂಕ್ಷ್ಮವಾಗಿ ತಾಂತ್ರಿಕ ಮತ್ತು ಆರ್ಥಿಕ ಮುಖವನ್ನೂ ದಾಖಲಿಸುವುದು ಅವಶ್ಯ ಎಂಬ ತಿಳುವಳಿಕೆಯೊಡನೆ ಈ ಬರಹ.

ಪ್ರದರ್ಶನದಂದು ಸುಮಾರು ಐದು ಗಂಟೆಯುದ್ದಕ್ಕೆ ಎರಡು ವಿಡಿಯೋ ಕ್ಯಾಮರಾಗಳು ಪ್ರತ್ಯೇಕ ಟೇಪುಗಳಲ್ಲಿ ದೃಶ್ಯ ಮತ್ತು ಶ್ರಾವ್ಯಗಳನ್ನು ಹಿಡಿದು ಕೊಟ್ಟವು. ಅವನ್ನು ಸಂಕಲನದ ಗಣಕಕ್ಕೆ ಇಳಿಸುವ ಹದಿನೈದು ಗಂಟೆಯ ಯಾಂತ್ರಿಕತೆಯಿಂದ ತೊಡಗುತ್ತದೆ ಉತ್ತರಕ್ರಿಯೆ. ಇದನ್ನು ಮಾಡಿಕೊಡುವ ವೃತ್ತಿಪರರನ್ನು ಅಭಯ ಬೆಂಗಳೂರಿನಲ್ಲಿ (ಅವನ ಸದ್ಯದ ಕಾರ್ಯಕ್ಷೇತ್ರ) ಬಳಸಿಕೊಂಡ. ಯೋಜನೆಯ ಒಟ್ಟು ಆಶಯಗಳೇನೇ ಇದ್ದರೂ ಎರಡು ಕ್ಯಾಮರಾ ಎಂದರೆ ಮೂರು ವಿಭಿನ್ನ ವ್ಯಕ್ತಿಗಳ ಮತ್ತು ವಿಭಿನ್ನ ದೃಷ್ಟಿಕೋನಗಳ ಫಲ. ಅವೆಲ್ಲವನ್ನು ನಮ್ಮ ಆದರ್ಶದ ಏಕಸೂತ್ರತೆಗೆ (ದೃಶ್ಯ, ಧ್ವನಿ ಮತ್ತು ಅಗತ್ಯವಿದ್ದಲ್ಲಿ ಕನ್ನಡ, ಇಂಗ್ಲಿಶ್ ಶೀರ್ಷಿಕೆಗಳು) ಉತ್ತಮವಾಗಿ ಹೊಂದಿಸಿ ಹೆಕ್ಕಿ ಜೋಡಿಸುವ ಕ್ರಿಯೆ – ಸಂಕಲನ. ಇದನ್ನು ಅಭಯನೇ ಮಾಡಿದ. ಆದರವನಿಗೆ ಅದನ್ನು ಬೇಗನೇ ಮಾಡಿಮುಗಿಸದಂತೆ ಎರಡು ಸಂತೋಷದ ಅಡ್ಡಿಗಳು (೧. ಅವನ ಮೊದಲ ಕಥಾಚಿತ್ರ ‘ಗುಬ್ಬಚ್ಚಿಗಳಿಗೆ’ (ಭಾರತೀಯ ಮಕ್ಕಳ ಕಥಾಚಿತ್ರದ ವರ್ಗದಲ್ಲಿ ಸ್ವರ್ಣ ಕಮಲ) ರಾಷ್ಟ್ರ ಪ್ರಶಸ್ತಿ ಬಂತು. ೨. ವಾರ ಕಾಲ ರಾಜಾಸ್ತಾನಕ್ಕೂ ಹತ್ತು ದಿನಗಳ ಜರ್ಮನ್ ಪ್ರವಾಸಕ್ಕೂ ಹೋಗಿ ಬರಬೇಕಾಯ್ತು.) ಒದಗಿದ್ದು ನಿಮಗೆ ಗೊತ್ತೇ ಇದೆ.

ಯಕ್ಷಗಾನದ ದಾಖಲೀಕರಣವೆಂದೇ ನಾವು ಹೊರಟಿದ್ದುದರಿಂದ ಇಲ್ಲಿ ಸಿನಿ-ಮಾಧ್ಯಮಕ್ಕೆ ಸಂದ ನ್ಯಾಯದಷ್ಟೇ ಪಾಲು ಆರಿಸಿಕೊಂಡ ಕಲೆಗೂ (ಯಕ್ಷಗಾನ) ದಕ್ಕಲೇಬೇಕು. ಹಾಗಾಗಿ ಅಭಯ ಅವನ ಲೆಕ್ಕಕ್ಕೆ ಪರಿಪೂರ್ಣ ಎನ್ನಿಸಿದ ಆವೃತ್ತಿಯನ್ನು ಡೀವೀಡಿಗಿಳಿಸಿ ನಮಗೆ ಕಳಿಸಿಕೊಟ್ಟ. ನಾವವನ್ನು ಉಡುಪಿಗೊಯ್ದು ಯಕ್ಷಗಾನ ಕೇಂದ್ರದ ಮತ್ತು ಲಭ್ಯ ಇತರ ಕಲಾವಿದರ, ಕಲಾಸಕ್ತರ ಸಮಕ್ಷಮದಲ್ಲಿ ಸಣ್ಣ ಪ್ರದರ್ಶನ ಮಾಡಿ, ಅವರ ಪೂರ್ಣ ಮನಸ್ಸಿನ ಅನುಮೋದನೆಯನ್ನು ಪಡೆದೆವು. ಅಭಯ ಅದರಲ್ಲಿ ಮೊದಲು ಸುಮಾರು ಹತ್ತು ಮಿನಿಟು ಕೆಲವು ಸಣ್ಣ ಸಂದರ್ಶನಗಳೊಡನೆ ದಾಖಲೀಕರಣದ ತಯಾರಿಗಳನ್ನೂ ವೈಚಾರಿಕ ನೆಲೆಯನ್ನೂ (ಅಭಯನದೇ ಪರಿಕಲ್ಪನೆ) ವಾರ್ತಾಚಿತ್ರದಂತೆ ಕೊಟ್ಟಿದ್ದಾನೆ. ಇದು ಒಂದೇ ಎರಡೂ ಡೀವೀಡಿಗಳಲ್ಲಿ ಪೀಠಿಕೆಯಾಗಿ ಬರುತ್ತದೆ. ಅನಂತರ ಸುಮಾರು ಎರಡೂವರೆ ಗಂಟೆಯುದ್ದಕ್ಕೆ ಆಯ್ದುಕೊಂಡ ಪ್ರಸಂಗದ ಪ್ರದರ್ಶನ. ಡೀವೀಡೀ ಮತ್ತು ಅದರ ಡಬ್ಬಿಗೊಂದು ಚಿತ್ರ ಮತ್ತು ಕಿರು ಸಾಹಿತ್ಯ ವಿನ್ಯಾಸಗಳನ್ನೂ ಅಭಯ ರೂಪಿಸಿ ಮುದ್ರಣ ಮತ್ತು ಹೆಚ್ಚಿನ ಪ್ರತಿ ಮಾಡಲು ವೃತ್ತಿಪರರಿಗೆ ವಹಿಸಿದ.

ಡೀವೀಡೀಗಳ ಮೊದಲ ಮುದ್ರಣದಲ್ಲಿ ತಲಾ ನೂರು ಪ್ರತಿಗಳನ್ನು ಉಪಾಧ್ಯ ಮತ್ತು ನಾನು ಉಳಿಸಿಕೊಂಡಿದ್ದೇವೆ. ಇವುಗಳನ್ನು ನಮ್ಮ ತಿಳುವಳಿಕೆ ಮತ್ತು ಸಂಪರ್ಕಕ್ಕೆ ಬಂದ (ಬರಬಹುದಾದ) ಯಕ್ಷಗಾನದ ಸಂಪನ್ಮೂಲ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಗೌರವ ಪ್ರತಿಗಳಾಗಿ ಕೊಡುತ್ತಿದ್ದೇವೆ. ಉಳಿದಂತೆ ಕೇಂದ್ರ (ಬಡಗಿನದ್ದನ್ನು) ಐದುನೂರು ಪ್ರತಿ ಮತ್ತು ಕಲಾರಂಗ (ತೆಂಕಿನದ್ದನ್ನು) ನಾನೂರು ಪ್ರತಿಗಳನ್ನು ಅವರ ಖರ್ಚಿನಲ್ಲೇ ಮಾಡಿಸಿಕೊಂಡಿವೆ. ಅವರು ಅವನ್ನು ತಲಾ ರೂ ನೂರರಂತೆ ಮಾರಲು ನಿರ್ಧರಿಸಿದ್ದಾರೆ. ಮುಂದೆ ಅವರು ನೇರ ಎಲ್ಲಿ ಬೇಕಾದರೂ ಎಷ್ಟು ಬೇಕಾದರೂ ಪ್ರತಿ ಮಾಡಿಸಿಕೊಂಡು ವಿತರಣೆ ನಡೆಸಲು, ಪ್ರದರ್ಶನ ಆಯೋಜಿಸಲು ಸ್ವತಂತ್ರರಿರುತ್ತಾರೆ. ಅವುಗಳ ಉದಾತ್ತ ಕೆಲಸಗಳಿಗೆ ಇದರಿಂದ ಅಲ್ಪ ನಿಧಿಸಂಚಯವಾದೀತೆನ್ನುವುದು ನಮ್ಮ ಆಶಯ.

ಹಿಡಿಂಬಾ ವಿವಾಹ ಅಥವಾ ಅರಗಿನ ಮನೆ

ಪ್ರಸ್ತುತಿ: ಯಕ್ಷಗಾನ ಕೇಂದ್ರ, ಎಂಜಿಎಂ ಕಾಲೇಜು (ಬಡಗು ತಿಟ್ಟು).
ಕಥಾ ಸಾರಾಂಶ: (ಯಕ್ಷಗಾನ ಕೇಂದ್ರ ಕೊಟ್ಟಂತೆ)

ಪಾಂಡು ಚಕ್ರವರ್ತಿಯ ಮರಣಾನಂತರ ಹಸ್ತಿನಾವತಿಯ ಗುರು-ಹಿರಿಯರ ನಿರ್ಣಯದಂತೆ ಪಾಂಡವರು ತಾಯಿ ಕುಂತಿಯೊಂದಿಗೆ ವಾರಣಾವತಕ್ಕೆ ಬರುತ್ತಾರೆ. ದುಷ್ಠ ದುರ್ಯೋಧನನ ತಂತ್ರೋಪಾಯದಿಂದ ವಾರಣಾವತದ ಅರಗಿನ ಮನೆಯಲ್ಲಿ ನೆಲೆಸಿರುವ ಪಾಂಡವರನ್ನು ಜೀವಂತ ದಹಿಸುವುದಕ್ಕೆ ಪುರೋಚನ ಬರುತ್ತಾನೆ.

ಅರಗಿನ ಮನೆಯ ಸಂಗತಿಯನ್ನು ವಿದುರನಿಂದ ಅರಿತ ಪಾಂಡವರು ಅರಮನೆಗೆ ಅಗ್ನಿ ಸ್ಪರ್ಶವಾದೊಡನೆಯೇ ಭೀಮಸೇನನ ಮುಂದಾಳುತನದಲ್ಲಿ ಸುರಂಗಮಾರ್ಗದ ಮೂಲಕ ತಪ್ಪಿಸಿಕೊಂಡು ಹಿಡಿಂಬಾ ವನವನ್ನು ಬಂದು ಸೇರುತ್ತಾರೆ. ಅಲ್ಲಿನ ರಾಕ್ಷಸದೊರೆ ಹಿಡಿಂಬಾಸುರ ವನಕ್ಕೆ ಬಂದ ಮಾನವರನ್ನು (ಪಾಂಡವರನ್ನು) ಹಿಡಿದುಕೊಂಡು ಬರುವುದಕ್ಕೆ ತಂಗಿ ಹಿಡಿಂಬೆಯನ್ನು ಕಳುಹಿಸಿಕೊಡುತ್ತಾನೆ. ಘೋರ ಹಿಡಿಂಬೆ ನಾಲ್ವರು ಪಾಂಡವರು ಹಾಗೂ ತಾಯಿ ಕುಂತಿದೇವಿಯ ರಕ್ಷಣೆಗೆ ಕುಳಿತಿದ್ದ ಭೀಮಸೇನನನ್ನು ನೋಡುತ್ತಾಳೆ. ರಾಕ್ಷಸಿಯ ಮನದಲ್ಲಿ ಅನುರಾಗ ಆವಿರ್ಭವಿಸುತ್ತದೆ. ಭೀಮಸೇನನನ್ನು ತನ್ನವನನ್ನಾಗಿಸಿಕೊಳ್ಳಬೇಕೆಂಬ ಉತ್ಕಟ ಹಂಬಲದಿಂದ, ಸ್ಪುರದ್ರೂಪಿ ‘ಮಾಯಾ ಹಿಡಿಂಬೆ’ಯಾಗಿ ಭೀಮಸೇನನಿದಿರು ಪ್ರಕಟವಾಗಿ ತನ್ನನ್ನು ಒಡಗೂಡುವಂತೆ ಕೇಳಿಕೊಳ್ಳುತ್ತಾಳೆ. ಭೀಮ ನಿರಾಕರಿಸುತ್ತಾನೆ. ತಂಗಿಯನ್ನು ಅರಸುತ್ತ ಬಂದ ಹಿಡಿಂಬಾಸುರ ಭೀಮನೊಂದಿಗಿರುವ ಹಿಡಿಂಬೆಯನ್ನು ಕಂಡು ಕ್ರುದ್ಧನಾಗುತ್ತಾನೆ. ಭೀಮನೊಂದಿಗೆ ಕಾಳಗಕೊಟ್ಟು ಮರಣ ಹೊಂದುತ್ತಾನೆ. ವನದಲ್ಲಿ ವೇದವ್ಯಾಸರ ದರ್ಶನ ಮತ್ತು ನಿರೂಪಣೆಯಂತೆ – ಭೀಮ ಹಿಡಿಂಬೆಯರ ಕಲ್ಯಾಣವಾಗುತ್ತದೆ.

ಹಿಮ್ಮೇಳ: ಭಾಗವತರು – ಸತೀಶ ಕೆದ್ಲಾಯ, ಮದ್ದಳೆ – ದೇವದಾಸ ರಾವ್, ಚಂಡೆ – ಕೃಷ್ಣ ಮೂರ್ತಿ ಭಟ್, ಶ್ರುತಿ – ವಿಠಲ ಆಚಾರ್.
ಮುಮ್ಮೇಳ: ದೀಪಧಾರಿ ಮತ್ತು ಪೀಠಿಕಾ ಹಾಸ್ಯ – ಬನ್ನಂಜೆ ಸಂಜೀವ ಸುವರ್ಣ. ಕೋಡಂಗಿಗಳು – ಕೃಷ್ಣಮೂರ್ತಿ ಬೇಡ್ಕಣಿ, ಸುಬ್ರಹ್ಮಣ್ಯ, ಪ್ರದೀಪ. ಬಾಲ ಗೋಪಾಲರು – ರವಿ ಮತ್ತು ಶೈಲೇಶ್. ಪೀಠಿಕಾ ಸ್ತ್ರೀವೇಷ – ಮಿಥುನ್ ಮತ್ತು ಕಾರ್ತಿಕ್. ಧರ್ಮರಾಯ – ಮಂಜುನಾಥ ಕುಲಾಲ, ಭೀಮ – ಮುಗ್ವಾ ಗಣೇಶ ನಾಯ್ಕ್, ಅರ್ಜುನ – ಚೇರ್ಕಾಡಿ ಗಣೇಶ ನಾಯ್ಕ್, ನಕುಲ – ಕೃಷ್ಣ ಮೂರ್ತಿ, ಸಹದೇವ – ಮಹಾಬಲೇಶ್ವರ, ಕುಂತಿ – ಪ್ರಸಾದ ಕುಮಾರ್, ಪುರೋಚನ – ರವೀಂದ್ರ ಹಿರಿಯಡ್ಕ, ಹಿಡಿಂಬಾಸುರ – ಉಮೇಶ ಪೂಜಾರಿ, ಘೋರ ಹಿಡಿಂಬೆ – ಕೃಷ್ಣ ಮೂರ್ತಿ ಉರಾಳ, ಮಾಯಾ ಹಿಡಿಂಬೆ – ಪ್ರತೀಶ್ ಕುಮಾರ್, ವೇದವ್ಯಾಸ – ಮಿಥುನ್ ಬಿ.
ಯಕ್ಷಗಾನದ ನಿರ್ದೇಶನ – ಗುರು ಬನ್ನಂಜೆ ಸಂಜೀವ ಸುವರ್ಣ.

ಸಕಲ ಮಾರಾಟದ ಹಕ್ಕುಗಳು: ಯಕ್ಷಗಾನ ಕೇಂದ್ರ. ಎಂಜಿಎಂ ಕಾಲೇಜು, ಉಡುಪಿ ೫೭೬೧೦೨. ದೂರವಾಣಿ: ೦೮೨೫-೨೫೨೧೧೫೯, ಮಿಂಚಂಚೆ: mgmcollegeudupi@dataone.in

ಕುಂಭಕರ್ಣ ಕಾಳಗ
ಪ್ರಸ್ತುತಿ: ಪೃಥ್ವೀರಾಜ ಕವತ್ತಾರು ಸಂಯೋಜಿತ ವಿವಿಧ ವೃತ್ತಿಪರ ಮೇಳಗಳ ಕಲಾವಿದರು. (ತೆಂಕು ತಿಟ್ಟು)
ಕಥಾ ಸಾರಾಂಶ: (ಪೃಥ್ವೀರಾಜ್ ಕೊಟ್ಟಂತೆ) ತನ್ನ ಮಡದಿಯಾದ ಸೀತೆಯನ್ನು ರಾವಣನು ಕದ್ದೊಯ್ದ ಕಾರಣ ಶ್ರೀ ರಾಮನು ಸುಗ್ರೀವ ಸಹಿತ ವಾನರವೀರರ ಸೇನೆಯೊಂದಿಗೆ ರಾವಣನ ರಾಕ್ಷಸ ಸಂಕುಲದ ವಿರುದ್ಧ ಯುದ್ಧ ಸಾರುತ್ತಾನೆ. ಒಂದು ಹಂತದಲ್ಲಿ ರಾವಣ ಚಿಂತಿತನಾಗಿ ವಾನರರನ್ನು ಸದೆಬಡಿಯಲು ತಮ್ಮನಾದ ಕುಂಭಕರ್ಣನನ್ನು ಎಬ್ಬಿಸುವಂತೆ ಚಾರರಿಗೆ ಸೂಚಿಸುತ್ತಾನೆ. ಕುಂಭಕರ್ಣನಿಗೆ ಆರು ತಿಂಗಳ ಕಾಲ ನಿದ್ರೆಯ ವರಬಲದಿಂದ ಎಬ್ಬಿಸುವುದು ಅಸಾಧ್ಯವಾದಾಗ, ನಿದ್ರೆಯನ್ನು ಕೊಟ್ಟ ಬ್ರಹ್ಮನನ್ನೇ ಕರೆಸಿ ಕುಂಭಕರ್ಣನನ್ನು ಎಬ್ಬಿಸುತ್ತಾನೆ. ಮುಂದೆ ಕುಂಭಕರ್ಣ ಯುದ್ಧಕ್ಕೆ ಹೋಗಿ, ಸುಗ್ರೀವನನ್ನು ಸೆರೆಹಿಡಿದರೂ ಅವನನ್ನು ಲಂಕೆಗೆ ಎಳೆದು ತರಲು ಸಾಧ್ಯವಾಗುವುದಿಲ್ಲ. ಚಾಣಾಕ್ಷಮತಿಯಿಂದ ತಪ್ಪಿಸಿದ ಸುಗ್ರೀವ ಕುಂಭಕರ್ಣನನ್ನು ಮುಖಭಂಗಗೊಳಿಸುತ್ತಾನೆ. ಶೂರ್ಪನಖೆಯೂ ಕುಂಭಕರ್ಣನ ಕಿವಿಮೂಗು ನಷ್ಟವಾದ ಬಗ್ಗೆ ವ್ಯಂಗ್ಯವಾಡುತ್ತಾಳೆ. ಕುಂಭಕರ್ಣ ಕೆರಳಿ ಮತ್ತೆ ರಣರಂಗಕ್ಕೆ ಬರುತ್ತಾನೆ. ರಾಮ ಬಾಣದಲ್ಲಿ ಅಸುನೀಗುತ್ತಾನೆ.

ಹಿಮ್ಮೇಳ: ಭಾಗವತರು – ಬಲಿಪ ನಾರಾಯಣ ಭಾಗವತ ಮತ್ತು ಲೀಲಾವತಿ ಬೈಪಡಿತ್ತಾಯ, ಮದ್ದಳೆ – ಹರಿನಾರಾಯಣ ಬೈಪಡಿತ್ತಾಯ, ಚೆಂಡೆ – ಪೆರುವಾಯಿ ನಾರಾಯಣ ಭಟ್, ಚಕ್ರತಾಳ – ವಾಸುದೇವ ಭಟ್, ತೆರೆಮರೆಯ ಸಹಕಾರ – ಗಂಗಾಧರ ಗೋಳಿಜೋರ, ವೇಷಭೂಷಣ – ಮೋಹಿನಿ ಕಲಾ ಸಂಪದ, ಕಿನ್ನಿಗೋಳಿ.
ಮುಮ್ಮೇಳ: ಬಾಲಗೋಪಾಲರು – ಮೋಹನ ಬೆಳ್ಳಿಪ್ಪಾಡಿ ಮತ್ತು ಶಿವುಕುಮಾರ ಮೂಡುಬಿದ್ರಿ, ಶ್ರೀರಾಮ – ಕೆ ಗೋವಿಂದ ಭಟ್ಟ, ಲಕ್ಷ್ಮಣ – ತಾರನಾಥ ವರ್ಕಾಡಿ, ವಿಭೀಷಣ – ಪ್ರಸಾದ್ ಚೇರ್ಕಾಡಿ, ಸುಗ್ರೀವ – ಶಂಭಯ್ಯ ಕಂಜರ್ಪಣೆ, ಹನುಮಂತ – ಮೋಹನಕುಮಾರ ಅಮ್ಮುಂಜೆ, ಜಾಂಬವ- ಶಂಭುಕುಮಾರ ಕೊಡೆತ್ತೂರು, ನೀಲ – ಶಶಿಧರ ಕನ್ಯಾನ, ಸುಷೇಣ – ಪವನ್ ಕುಮಾರ್, ರಾವಣ – ಹರಿನಾರಾಯಣ ಎಡನೀರು, ಕುಂಭಕರ್ಣ – ಜಗದಭಿರಾಮ ಪಡುಬಿದ್ರಿ, ಶೂರ್ಪನಖೆ – ಸುಬ್ರಾಯ ಸಂಪಾಜೆ, ಶುಕ್ರಾಚಾರ್ಯ – ಶಂಭುಕುಮಾರ್, ಬ್ರಹ್ಮ ದೇವ – ಮೋಹನ ಬೆಳ್ಳಿಪ್ಪಾಡಿ, ರಾವಣನ ಚಾರಕ – ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ, ಆನೆ, ಕುದುರೆ, ಕಪಿಗಳು ಇತ್ಯಾದಿ – ಶಿವುಕುಮಾರ್ ಮೂಡುಬಿದ್ರಿ ಮತ್ತು ಪವನ್ ಕುಮಾರ್.
ಯಕ್ಷಗಾನದ ನಿರ್ದೇಶಕ – ಬಲಿಪ ನಾರಾಯಣ ಭಾಗವತ.
ಸಕಲ ಮಾರಾಟ ಹಕ್ಕುಗಳು – ಯಕ್ಷಗಾನ ಕಲಾರಂಗ (ರಿ), ಅದಮಾರು ಮಠದ ಓಣಿ, ಉಡುಪಿ ೫೭೬೧೦೧ Email: yakshaganakalaranga@rediffmail.com

ಎರಡೂ ಪ್ರದರ್ಶನಗಳ ದೀವಟಿಗೆ ಬೆಳಕಿನ ನಿಜ ಪ್ರದರ್ಶನದ (೨೮-೧೧-೨೦೦೯) ವಿಡಿಯೋ ದಾಖಲೀಕರಣ + ನಿರ್ಮಾಣದ ಕಥೆ ೨೦೧೦ ಮತ್ತು ಡಿವಿಡಿ ಪ್ರಸ್ತುತಿ – ಅಭಯಸಿಂಹ. ಯೋಜನೆ ಮತ್ತು ನಿರ್ಮಾಣ – ಡಾ| ಮನೋಹರ ಉಪಾಧ್ಯ ಮತ್ತು ಅಶೋಕ ವರ್ಧನ. ರಂಗ ಸಜ್ಜಿಕೆ: ಎಸ್. ಸತ್ಯನಾರಾಯಣ. ಸ್ಥಳ: ಅಭಯಾರಣ್ಯ, ದ.ಕ

ಯಕ್ಷಗಾನ ಕೇಂದ್ರ, ಎಂಜಿಎಂ ಕಾಲೇಜು ಮತ್ತದರ ನಿರ್ದೇಶಕ – ಹೆರಂಜೆ ಕೃಷ್ಣ ಭಟ್ ಹಾಗೂ ಗುರು ಸಂಜೀವ ಸುವರ್ಣರು ಈ ಕಲೆಗೆ ಸಂಬಂಧಪಟ್ಟಂತೆ ನಮ್ಮ ಯಾವುದೇ ಯೋಜನೆಗೂ ಮೂಲಪ್ರೇರಕರು ಮತ್ತು ಮುಕ್ತವಾಗಿ ಪೂರ್ಣ ಲಭ್ಯರು. ಅತ್ತ ಸಾಂಸ್ಥಿಕ ಬಲ ಅಥವಾ (ಆರ್ಥಿಕ ಲಾಭ ಎನ್ನಲಾರೆ) ಕನಿಷ್ಠ ಖರ್ಚು ಹುಟ್ಟಿಸುವ ಆದಾಯ ತರುವ ವ್ಯವಸ್ಥೆ ಅಥವಾ ಕೊನೆಯಲ್ಲಿ ‘ನನ್ನದು’ ಎಂದುಕೊಳ್ಳುವ ಹೆಸರಿನ ಮೋಹವನ್ನೂ ಇಟ್ಟುಕೊಳ್ಳದ, ನಿರಾಕರಿಸಿದ ಪೃಥ್ವೀರಾಜ್‌ಗೆ ಏನು ಹೇಳಿದರೂ ಕಡಿಮೆಯೇ. ಯೋಜನೆಯ ಹೊಳಹು ಕೇಳಿದಂದೇ ಭಾಗೀದಾರಿಕೆಯ ಒಲವು ತೋರಿದ, ಕೊನೆಗೆ ದಾಖಲಾತಿಯಂದು ಸ್ವತಃ ಹಾಜರಿದ್ದು ಪ್ರೋತ್ಸಾಹ ಕೊಟ್ಟ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷ ಕುಂಬಳೆ ಸುಂದರ ರಾವ್ ಮತ್ತು ಸದಸ್ಯ ಮುರಳೀ ಕಡೇಕಾರ್ ಅವರು ಖಂಡಿತಕ್ಕೂ ಸ್ಮರಣಾರ್ಹರು. ಅಸಂಖ್ಯ ಮಿತ್ರರು, ಬಂಧುಗಳು ಒದಗಿಸಿದ ಶ್ರಮ ಮತ್ತು ಸಮಯಗಳ ಲೆಕ್ಕ ತೆಗೆದರೆ ಅನಂತಕ್ಕೆ ಹೋಗುತ್ತದೆ, ಕೃತಜ್ಞತೆ ಸಲ್ಲಿಸಲು ಹೊರಟರೆ ಶಬ್ದಭಂಡಾರ ಖಾಲಿಯಾಗುತ್ತದೆ!

ನೀವು ಡೀವೀಡೀ ಕೊಂಡಿರೇ? ನೋಡಿದಿರೇ? ಪ್ರದರ್ಶನದ ಮತ್ತು ದಾಖಲಾತಿಯ ಗುಣಾವಗುಣಗಳ ಬಗ್ಗೆ ಕನಿಷ್ಠ ನಾಲ್ಕು ಮಾತು ಬರೆಯುವಿರಾ? ದಯವಿಟ್ಟು ನೆನಪಿಡಿ – ಪ್ರದರ್ಶನದ ಮತ್ತು ದಾಖಲಾತಿಯ ಗುಣಾವಗುಣಗಳ ಬಗ್ಗೆ ಎಷ್ಟುದ್ದಕ್ಕೆ ಬರೆದರೂ ಸಂತೋಷ; ನಮ್ಮ ಬಗ್ಗೆ ಅಲ್ಲ.

ವಿಶೇಷ ಸೂಚನೆ:
ಸಂಚಿ ಪ್ರತಿಷ್ಠಾನದ ಕೃಪೆಯಿಂದ ಈಗ ಎರಡೂ ದಾಖಲೀಕರಣಗಳು ಈಗ ಸಾರ್ವಜನಿಕರ ಮುಕ್ತ ವೀಕ್ಷಣೆಗೆ ಯೂ ಟ್ಯೂಬಿನಲ್ಲಿ ಲಭ್ಯ: ತೆಂಕು ತಿಟ್ಟಿನ ಕುಂಭಕರ್ಣ ಕಾಳಗಕ್ಕೆ ಇಲ್ಲಿ ಚಿಟಿಕೆ ಹೊಡೆಯಿರಿ: https://www.youtube.com/watch?v=o8ansDzKxRs
ಬಡಗು ತಿಟ್ಟಿನ ಅರಗಿನ ಮನೆಗೆ ಇಲ್ಲಿ ಚಿಟಿಕೆ ಹೊಡೆಯಿರಿ: https://www.youtube.com/watch?v=EAGm1BWpwIc&t=46s