(ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ – ಮುಕ್ತಾಯ)

‘ದುಡ್ಡು ಬಿಸಾಡಿದರಾಯ್ತು, ಒಂದಷ್ಟು ದಿನ ಮಜವಾಗಿ ತಿಂದುಂಡು, ಕುಶಿ ಬಂದಾಗ ಯಾವುದೇ ವಿಶೇಷ ಜವಾಬ್ದಾರಿ ಅಥವಾ ಶ್ರಮವಿಲ್ಲದೆ ಸಿಕ್ಕಿದಷ್ಟನ್ನು ನೋಡಿಕೊಂಡು ಬಂದ’ ಎನ್ನುವ ಧೋರಣೆ ಲಕ್ಷದ್ವೀಪಗಳಿಗೆ ಸಲ್ಲ ಎನ್ನುವುದನ್ನು ನಮ್ಮ ಸ್ನಾರ್ಕೆಲ್ ತಂಡ ಬಲು ದೊಡ್ಡದಾಗಿಯೇ ಸಾರಿ ಹೇಳಿತು. ಅದರಲ್ಲೂ ದೊಡ್ಡ ಉದಾರಣೆ ಬಸವರಾಜರದು. ಕಲ್ಪೆನಿ, ಮಿನಿಕಾಯಿಗಳಲ್ಲಿದ್ದಂತೇ ಅಂಗಿಯ ಮುಂಗೈ ಗುಂಡಿ ಕೂಡಾ ಕಳಚದೆ, ಪ್ಯಾಂಟಿನ ಸೊಂಟಪಟ್ಟಿಯನ್ನೂ ಸಡಿಲಿಸದೆ, ಅಂದರೆ ಪೂರ್ಣ ದಿರುಸಿನಲ್ಲೇ ಸ್ನಾರ್ಕೆಲಿಂಗ್ ಮಾಡಿದ್ದರು. ದಂಡೆಗೆ ಮರಳಿದ ಮೇಲೆ ನಮ್ಮಂತೆ ಅವರು ಪ್ರತ್ಯೇಕ ಸ್ನಾನ ಮಾಡಲಿಲ್ಲ (ಬದಲಿ ಒಣ ಬಟ್ಟೆ ಇರಲಿಲ್ಲ), ನೀಟಾಗಿ ತಲೆ ಮಾತ್ರ ಬಾಚಿ, ಪ್ಯಾಂಟಿನ ಇಸ್ತ್ರಿಯ ಗೀಟೂ ಕೊಂಕಲಿಲ್ಲವೆನ್ನುವಂತೆ ಉಳಿದುಬಿಟ್ಟರು! ಆದರೆ ಭಾವನೆಗಳ ಲೋಕದಲ್ಲಿ ಮಾತ್ರ ಲಕ್ಷದ್ವೀಪ ಅವರಿಗೆ ಅಚ್ಚಳಿಯದ ಮುದ್ರೆಯೊತ್ತಿದ್ದನ್ನು ಮತ್ತೆ ಮತ್ತೆ ಹೇಳಿದರು!

ಅನಂತನದೂ ಹೆಚ್ಚು ಕಡಿಮೆ ಅದೇ ಸ್ಥಿತಿ. ಹೀಗೆ ಪ್ರವಾಸ ಎಂದು ಬಂದಿದ್ದ. ಹಗಲಿನಲ್ಲಿ ಬಿಸಿಲಿಗೊಡ್ಡಿ ತಲೆಸಿಡಿದೀತೋ ರಾತ್ರಿ ಮಂಜು ಕೂತು ಶೀತ ಅಮರೀತೋ ಎಂಬ ದೇಹ ಪ್ರಕೃತಿ ಅವನದ್ದು. ನೀರಿನಲ್ಲಿರುವವರೆಗೆ ಅವನ ಮಂಡೆ water cooled. ಹೊರಗೆ ಬಂದ ಮೇಲೆ ಕರಾವಳಿಯ ಬಿಸಿಲಿನ ಪೆಟ್ಟು ತಪ್ಪಿಸಿಕೊಳ್ಳಲು ಕೃಶಿ ಉಪದೇಶದ ಮೇರೆಗೆ ಕರವಸ್ತ್ರವನ್ನು ಚಂಡಿ ಮಾಡಿ ತಲೆಗೆ ಮುಚ್ಚಿಕೊಳ್ಳುತ್ತಿದ್ದ. ಹಡಗಿನಲ್ಲಿ ರಾತ್ರಿ ಹೊತ್ತು, ಮಂಜು ಬೀಳುವಾಗ “ಯಾಕ್ ರಿಸ್ಕ್” ಅಂದುಕೊಂಡು ಅವನು ತಾರಸಿಗೆ ಬಂದದ್ದು ಕಡಿಮೆ. ಹಾಗೆ ಬಂದರೂ ಕನಿಷ್ಠ ಕರವಸ್ತ್ರವನ್ನಾದರೂ ತಲೆಗೆ ಮುಚ್ಚಿಕೊಂಡು ಬಂದು, ಆಗೊಮ್ಮೆ ಈಗೊಮ್ಮೆ ಅಪರಿಚಿತ ಬಾಂಧವರಿಂದ “ಅಲೈಕುಂ ಸಲಾಂ” ಪಡೀತಿದ್ದ! ಆದರೆ ಆತ ಒಮ್ಮೆ ಸಮುದ್ರದಾಳದ ಲೋಕ ನೋಡಿದ ಮೇಲೆ ಸಿಕ್ಕ ಸಿಕ್ಕವರಿಗೆಲ್ಲ ಹೇಳುತ್ತಿದ್ದಾನೆ – ನಿಮಗಾಗಿ ಕಾದಿದೆ ಲಕ್ಷದ್ವೀಪ!

ಕವರಟ್ಟಿಯಲ್ಲಿ ಊಟಾನಂತರ fake dance, ಕೊನೆಯ ಐಟಂ ಮತ್ಸ್ಯಾಗರ. ಐದೇ ಮಿನಿಟಿನ ದಾರಿಯಾದರೂ ನಮಗೆ ರಾಯಲ್ ಟ್ರೀಟ್‌ಮೆಂಟ್ ಕಡಿಮೆಮಾಡಲಿಲ್ಲ; ಟೆಂಪೋ ಹಿಂದೆ ಬೆಂಚಿನ ಮೇಲೆ ‘ಗೊಟ ಗೊಟ ಗೊಟಾ.’ ಸುಲಭದಲ್ಲೇ ಸಿಕ್ಕ ಒಂದಷ್ಟು ಹವಳ ಹಳಕುಗಳು, ಜಲಸಸ್ಯ ಮತ್ತು ರಾಸಾಯನಿಕದಲ್ಲಿ ಮುಳುಗಿಸಿ ಇಟ್ಟ ಜೀವ ವೈವಿಧ್ಯದ ಕೆಲವು ಮಾದರಿಗಳ ಸಂತೆ. ಸಣ್ಣ ನಾಲ್ಕೆಂಟು ಗಾಜಿನ ಗೂಡುಗಳಲ್ಲಿ ನೀರು ತುಂಬಿ ಜೀವಂತ ಮೀನು, ಒಂದು ಪುಟ್ಟ ಆಮೆಯನ್ನೂ ಬಂಧಿಸಿದ್ದರು. ಎರಡಡಿ ಕೊಳೆತ ನೀರು ನಿಂತಿದ್ದ ಒಂದು ಭಾರೀ ಭಗ್ನಾವಶೇಷಕ್ಕೆ SHARK ಎಂಬ ಬೋರ್ಡೇ ಭೂಷಣ! ಯೋಜನಾ ಬ್ರಹ್ಮ, ಉದ್ಘಾಟಿಸಿದ ಅಮೃತ ಹಸ್ತದ ಯಜಮಾನನ ನಾಮಧೇಯ, ಅಧಿಕಾರವಶಾತ್ ಆ ಕಾಲದಲ್ಲಿ ಬದುಕಿದ್ದವರ ನಾಮಧೇಯಗಳೂ ಸುಂದರ ಅಮೃತ ಶಿಲೆಯಲ್ಲಿ (ಹೌದು, ಮತ್ತೆ ದರಿದ್ರ ಹವಳದ ಗಿಟ್ಟೆ ಕೆತ್ತಲು ಒದಗುವುದುಂಟೇ?) ಉಲ್ಲೇಖಿಸಿದ್ದಷ್ಟೇ ನೋಡಿ ಧನ್ಯರಾಗಬೇಕು. ಸುತ್ತ ಯಾವುದೇ ದಿಕ್ಕಿನಲ್ಲಿ ಕೆಲವು ನೂರು ಮೀಟರು ಹೋದರೂ ಜೀವಂತ ಸಿಗುವ ಕಡಲ ವೈಭವಕ್ಕೆ ಹೀಗೊಂದು ಶವಾಗಾರ ಬೇಕೇ? ಸ್ಥಳೀಯರು ಅಲ್ಲಿ ಕಾಣುವಂತದ್ದೇನೂ ಇ, ಗಂಟೆಗಟ್ಟಳೆ ಸಮುದ್ರ ದಾಟಿ (ಸಾವಿರಗಟ್ಟಳೆ ಖರ್ಚೂ ಮಾಡಿ) ಬರುವವರಿಗೆ ಬಡಿಸಬೇಕಾದ ಊಟ ಇದು ಹೇಗಾದೀತು? ಪ್ರವಾಸಿಗಳಿಗೆ ಸರಳ ತಂಗುದಾಣ ಮತ್ತು ಕಡಲ ಶೋಧದ ಅವಕಾಶಗಳು ಹೆಚ್ಚಬೇಕು. ಇದು ಅನುಭವಾಧಾರಿತವಾಗಿ ಉಂಟುಮಾಡುವ ಪ್ರಕೃತಿಜಾಗೃತಿ, ನಡೆಸಿಕೊಡುವ ಮಟ್ಟದಲ್ಲಿ ಊರಜನಕ್ಕೆ ಒದಗುವ ಅರ್ಥಪೂರ್ಣ ಉದ್ಯೋಗಾವಕಾಶ ಇಲ್ಲಿನ ನಿಜ ಆವಶ್ಯಕತೆಗಳು.

ಮತ್ತೆ ನಮ್ಮನ್ನು ಸಾರೋಟೇರಿಸಿ ಊರಿನ ಮುಖ್ಯ ದಾರಿಯಲ್ಲಿ ಗಲ್ಲಿಗಲ್ಲಿ ಸುತ್ತಿಸಿ ಊದ್ದದ ಸವಾರಿ ಕೊಟ್ಟು ದಕ್ಕೆಗೇ ಮರಳಿಸಿದರು. ಅವರ ಘನ ಉದ್ದೇಶ ನಗರದರ್ಶನವಂತೆ! ಆದರೆ ಒಂದು ಸ್ಪಷ್ಟನೆ, ಆಯ್ದ ಜಾಗಗಳಲ್ಲಿ ನಿಲುಗಡೆ, ವಿವರಣಾ ಮಾತೂ ಕೊಡದೆ ದ್ವೀಪದ ವಿದ್ಯುದಾಗಾರ, ಜಲಯೋಜನೆ, ಶಾಲೆ ಮುಂತಾದವನ್ನು ದಾಟಿದ್ದೆವಂತೆ. [ಇದೇ ಈಗ ಕೃಶಿ ತನ್ನ ಬ್ಲಾಗಿನಲ್ಲಿ ಅಲ್ಲಿನ ಕುಡಿನೀರ ಯೋಜನೆ ಮತ್ತು ದ್ವೀಪ ಸಮೂಹದ ಪ್ರಾಚೀನತಮ ಮತ್ತು ಅತಿಸುಂದರ ಮಸೀದಿಗಳ ವಿವರವನ್ನೂ ಹಾಕಿದ್ದಾರೆ. ಅವುಗಳ ಉಲ್ಲೇಖವನ್ನೂ ನಮ್ಮ ಪ್ರವಾಸ ಸಂಯೋಜಕರು ಮಾಡಲೇ ಇಲ್ಲ] ಇದರ ಅರಿವಿಲ್ಲದೇ ಹೆಚ್ಚಿನವರಂತೆ ನಾನೂ ಒತ್ತಿ ಬಂದ ಪುಟ್ಟ ನಿದ್ದೆ ತೆಗೆದದ್ದಕ್ಕೆ ಈಗ ನನ್ನ ವರದಿಯ ಪೆನ್ ಬತ್ತಿಹೋಗಿದೆ.

ಸಂಜೆ ಮತ್ತೆ ಹಡಗಿನ ಹೊಟ್ಟೆ ಸೇರಿ, (ಪ್ರವಾಸದ) ಶೇಷಾಯುಷ್ಯವನ್ನು ಕೊಚ್ಚಿ ಮಾರ್ಗಕ್ರಮಣದಲ್ಲಿ (ಎ.ಸಿ ಕೆಟ್ಟ ಕ್ಯಾಬಿನ್ನಿನಲ್ಲಿ, ಸಾಕಷ್ಟು ನಿದ್ದೆ ಬಂದರೂ ಬರಲಿಲ್ಲವೋ ಎಂಬ ತೋರಿಕೆಯಲ್ಲಿ) ಕಳೆದೆವು. ಹೊರದೇಶದ ಭಯೋತ್ಪಾದಕರು ಸದ್ಯ ಈ ದ್ವೀಪ ಸಮೂಹಗಳ ಮೂಲಕ ಭಾರತಕ್ಕೆ ನುಸುಳುವ ಸೂಚನೆಗಳು ನಮ್ಮ ಗೂಢಚಾರರಿಗೆ ಸಿಕ್ಕಿವೆಯಂತೆ. ಹಾಗಾಗಿ ೨೧ರ ಬೆಳಿಗ್ಗೆ ಉದಯರವಿಯ ಕಿರಣ ಮಾಲಿಕೆ ನಮ್ಮನ್ನು ವರಿಸುತ್ತಿದ್ದರೂ ಹಡಗಿನ ಘೋಷಣೆಗಳಲ್ಲಿ ಅಪಸ್ವರ ಬರುತ್ತಲೇ ಇತ್ತು. “ದಂಡೆ ಸಮೀಪಿಸಿದೆ. ಆದರೆ ಬಂದರು ಪ್ರವೇಶಕ್ಕೆ, ದಕ್ಕೆಯಲ್ಲಿ ತಂಗಲು ಮತ್ತೆ ಹಡಗು ಬಿಟ್ಟಿಳಿಯುವಲ್ಲಿ ಕಸ್ಟಮ್ಸ್ ಜೊತೆಗೆ ಕರಾವಳಿ ಕಾವಲುಪಡೆಯ ತನಿಖೆಯೂ ಇದೆ. ವಿಳಂಬ ಅನಿವಾರ್ಯ. ಸಹಕಾರ ಕೋರುತ್ತೇವೆ.” ಇದು ತೀರಾ ಹೊಸದೇನಲ್ಲ. ಆದರೂ ವ್ಯವಸ್ಥಿತ ಮತ್ತು ಚುರುಕಿನ ನಿರ್ವಹಣೆಯಲ್ಲಿ ಹಡಗಿನ ಸಿಬ್ಬಂದಿ ಸೋತದ್ದು ಮಾತ್ರ ಅಸಹನೀಯವಾಗಿತ್ತು. “ಹೊರೆಗಳನ್ನು ನಿಂನಿಮ್ಮ ಕೋಣೆಗಳಲ್ಲಿ ಬಿಡಿ, ಕೂಲಿಕಾರರು ತನಿಖೆಗೊಡ್ಡಿಸಿ ದಕ್ಕೆಯಲ್ಲಿ ಕೊಡುತ್ತಾರೆ. ಪ್ರವಾಸಿಗಳೆಲ್ಲ ಟೀವೀ ಕೋಣೆ ಸೇರಿಕೊಳ್ಳಿ. ಸೂಚನೆ ಬಂದಮೇಲೇ ಇಳಿಯಲು ಬರಬೇಕು” ಎಂಬುದನ್ನು ಹಲವು ರೂಪಗಳಲ್ಲಿ, ಗೊಂದಲಗಳಲ್ಲಿ ರವಾನಿಸಿದರು. ಕೊನೆಗೂ ನಮ್ಮ ಚೀಲಗಳನ್ನು ನಾವೇ ಹೊತ್ತುಕೊಂಡು, ಕೇವಲ ಕಣ್ಕಟ್ಟಿನ ಇಲಾಖಾ ತನಿಖೆಯೊಡನೆ ಧಕ್ಕೆಗೆ ಇಳಿದಾಗ ಗಂಟೆ ಹನ್ನೊಂದೂವರೆ. ನೆನಪಿರಲಿ, ನಾವು ಬೆಳಿಗ್ಗೆ ಎದ್ದಲ್ಲಿಂದ (ಬೆಳಿಗ್ಗೆ ಐದು ಗಂಟೆ) ಉರಿಸೆಕೆಯೊಡನೆ ಸುಮಾರು ಆರೂವರೆ ಗಂಟೆ ಸತಾವಣೆ ಕಂಡಿದ್ದೆವು! ನಮ್ಮಲ್ಲಿ ಅರ್ಧವಾಸೀ ಜನರಿಗೆ ಮರಳಿ ಮಂಗಳೂರು ಸೇರಲು ಸ್ಥಳ ಕಾದಿರಿಸಿದ್ದ ರೈಲು ಒಂದು ಗಂಟೆಗೆ ಐದು ಮಿನಿಟಿಗೆ ಎರ್ನಾಕುಲಂ ನಿಲ್ದಾಣ ಬಿಡಲಿತ್ತು. ಆದರೆ ಪ್ರಸನ್ನನ ವ್ಯವಸ್ಥೆ ಪಕ್ಕಾ ಇದ್ದುದರಿಂದ ಹಿಂದೆ ನಮ್ಮನ್ನು ಕಳಿಸಿಕೊಟ್ಟ ವ್ಯಾನು ಅಲ್ಲೇ ದಕ್ಕೆಯಲ್ಲಿ ಕಾದಿತ್ತು. ಮತ್ತದೇ ಹಿಂದಿನ ಹೋಟೆಲಿಗೆ ಧಾವಿಸಿ, ಊಟದ ಶಾಸ್ತ್ರ ಮುಗಿಸಿ, ನಗರದ ವಾಹನ ಸಂದಣಿಯಲ್ಲಿ ಸಿಕ್ಕಿಬೀಳದಂತೆ ಗಲ್ಲಿ ರಸ್ತೆಗಳಲ್ಲಿ ಹೊಕ್ಕು ಹೊರಟು ರೈಲ್ವೇ ನಿಲ್ದಾಣ ಸೇರುವಾಗ ಗಂಟೆ ಒಂದು!

ಐದು ದಿನದ ಮಧುರ ಅನುಭವಗಳಿಗೆ ಹಡಗಿಳಿಯುವಲ್ಲಿ ಸಿಕ್ಕ ನಿರಾಶಾ ಕಲಾಪಗಳು ರೈಲಿಗೂ ವ್ಯಾಪಿಸಿದ್ದು ನಮ್ಮ ಗ್ರಹಚಾರ! ಸೂಕ್ಷ್ಮದಲ್ಲಿ ಹೇಳುತ್ತೇನೆ. ಹಿಂದಿನ ದಿನ ಮಂಗಳೂರ ದಾರಿಯಲ್ಲಿ ಯಾವುದೋ ಸರಕು ಸಾಗಣೆ ರೈಲು ಹಳಿತಪ್ಪಿದ್ದರಿಂದಾದ ಅವ್ಯವಸ್ಥೆ ಇನ್ನೂ ಮುಂದುವರಿದಿತ್ತು. ನಿಲ್ದಾಣಕ್ಕೆ ರೈಲು ಬಂದಿರಲಿಲ್ಲ. ನಿಲ್ದಾಣದ ಉತ್ತರಮೂಲೆಯಲ್ಲಿ ಸೂರ್ಯಸ್ನಾನದ ಪರೋಕ್ಷ ಸೌಕರ್ಯದೊಡನೆ ದಕ್ಕಿದ ಬೆಂಚುಗಳಿಗೆ ನಾವು ಎರಡೂವರೆ ಗಂಟೆಯ ಹೊರೆಯಾದೆವು. ಮೂರೂವರೆ ಗಂಟೆಗೆ ರೈಲು ಬಂದರೂ ಮತ್ತೆ ಅದು ಹೊರಡುವ ಹಸಿರು ಕಂದೀಲಿಗೆ ನಾಲ್ಕೂವರೆ ಗಂಟೆಯ ವಿಳಂಬ. ರಾತ್ರಿ ಎಂಟು ಗಂಟೆಗೆ ಎರ್ನಾಕುಲಂ ಕಳಚಿಕೊಂಡರೂ ಮುಂದಿನ ಪ್ರತಿ ಚಿಲ್ಲರೆ ಪಲ್ಲರೆ ನಿಲ್ದಾಣದಲ್ಲೂ ಕಟ್ಟೆ ಪೂಜೆ ಮುಗಿಸಿಕೊಂಡು ಮಂಗಳೂರು ಕಾಣುವಾಗ ಮರುದಿನ ಹಗಲು ಒಂಬತ್ತೂವರೆ ಗಂಟೆಯೇ ಆಗಿತ್ತು. (ಹನ್ನೆರಡೇ ಗಂಟೆ ತಡ) ಪ್ರಸನ್ನನ ಕುಟುಂಬ ಕೊಚ್ಚಿಯ ಸಂಬಂಧಿಕರನ್ನು ಮತ್ತು ಊರನ್ನು ನೋಡುವ ಕಾರ್ಯಕ್ರಮವನ್ನು ಮೊದಲೇ ಹಾಕಿಕೊಂಡಂತೆ ಅನುಭವಿಸಿ, ಮಾರನೇ ದಿನ ಬಂದರು. ಅವರ ಅದೃಷ್ಟಕ್ಕೆ ಹಳಿ ಸರಿಯಾಗಿ, ರೈಲು ಸಮಯಕ್ಕೆ ಸರಿಯಾಗಿ ಬಂತಂತೆ.

ಏಪ್ರಿಲ್ ೨೨, ನಾವು ಲಕ್ಷದ್ವೀಪ ಪ್ರವಾಸ ಮುಗಿಸಿ ಬಂದಂದಿನಿಂದ ಮನೆಯಲ್ಲಿ ಪುರುಸೊತ್ತು ಸಿಕ್ಕಿದಾಗೆಲ್ಲಾ ಪ್ರವಾಸದ ನೆನಪುಗಳನ್ನು ಕಾಲಾನುಕ್ರಮದಲ್ಲಿ ಸಂಗ್ರಹಿಸುವುದರೊಡನೆ ವಿಷಯಾನುಕ್ರಮದಲ್ಲಿ ಮರುಕಳಿಕೆಯನ್ನು ಕತ್ತರಿಸಿ, ಸಾಮಾಜಿಕ ಜವಾಬ್ದಾರಿಯನ್ನು ಎತ್ತರಿಸಿ, ಭಾಷೆಯ ಬಂಧಕ್ಕೆ ಇಳಿಸುತ್ತ ಬಂದೆ. ಸುಮಾರು ಇಪ್ಪತ್ತರ ಗಾತ್ರದ ಅಕ್ಷರಗಳಲ್ಲಿ ಹತ್ತುಪುಟ ಮೀರುವವರೆಗೆ ಲಹರಿ ಹರಿಸುತ್ತಿದ್ದೆ. ಮತ್ತೆ ಅಲ್ಲೊಂದು ತಾರ್ಕಿಕ ಕೊನೆ ತೋರಿಸಿ, ಬ್ಲಾಗಿಗೇರಿಸಲು ಅಭಯನಿಗೆ ಬಿಡುತ್ತಿದ್ದೆ. ನಿಮ್ಮಲ್ಲಿ (ಬ್ಲಾಗ್ ಓದುಗರು) ಹೆಚ್ಚಿನವರು ಉತ್ತರಭೂಪರಾಗದಿದ್ದರೂ (ಪ್ರತಿಕ್ರಿಯಿಸದಿದ್ದರೂ) ನಾವು ಕಂಡ ಲಕ್ಷದ್ವೀಪವನ್ನು ಅನುಭವಿಸಲು ಸಜ್ಜಾಗುತ್ತಿರುವುದಂತೂ ನಿಜ. ಲಕ್ಷದ್ವೀಪ ಭಾರತದ್ದೇ ಭಾಗವಾದರೂ ವಿಶೇಷ ಸ್ಥಾನಮಾನದ ಕೇಂದ್ರಾಡಳಿತ ಪ್ರದೇಶ. ಹಾಗಾಗಿ ಇಲ್ಲಿಗಿರುವ ಕೆಲವೇ ಕೆಲವು ಪ್ರವಾಸೀ ಸಾಧ್ಯತೆಗಳನ್ನು ನೀವು ಅಂತರ್ಜಾಲದಲ್ಲಿ ಈ ವಿಳಾಸಕ್ಕೆ ಹೋಗಿ www.lakshadweep.nic.in ನಿಷ್ಕರ್ಷಿಸಿಕೊಳ್ಳಬಹುದು. ಇದಕ್ಕೆ ದೊಡ್ಡ ಊರುಗಳಲ್ಲೆಲ್ಲಾ ಹಲವು ಪ್ರವಾಸೀ ಮಧ್ಯವರ್ತಿಗಳು ಇರುತ್ತಾರೆ. ಪ್ರಸನ್ನ ಹಾಗೇ ಅಂತರ್ಜಾಲ ಮುಖೇನ ನಮ್ಮ ಪ್ರವಾಸಕ್ಕೆ ಬಳಸಿಕೊಂಡದ್ದು ಬೆಂಗಳೂರಿನ Comforts holidays pvt. Ltd.

ವಾಸ್ತವದಲ್ಲಿ ಮಂಗಳೂರಿನ ಬಾವುಟಗುಡ್ಡೆಯ ಪೆಸ್ಟ್ ಕಂಟ್ರೋಲ್ ಕಾರ್ಪೋರೇಷನ್ನಿನ ರಶೀದ್ ಬೋಳಾರ್ ಎನ್ನುವವರು ಹತ್ತಿಪ್ಪತ್ತು ವರ್ಷಗಳ ಹಿಂದೆಯೇ ನನ್ನ ಪ್ರಕೃತಿ ಅನ್ವೇಷಣೆಯ ಹವ್ಯಾಸ ತಿಳಿದು ತನ್ನ ಏಜನ್ಸಿಯನ್ನು ಬಳಸಿಕೊಂಡು ಲಕ್ಷದ್ವೀಪಕ್ಕೆ ಹೋಗಿ ಬರಲು ಒತ್ತಾಯಿಸುತ್ತಲೇ ಇದ್ದರು. (ಇವರು ಜಾಲಲೋಕಕ್ಕೆ ಬೀಳದಿರುವುದರಿಂದ ಪ್ರಸನ್ನನ ಕಣ್ಣು ತಪ್ಪಿಸಿಕೊಂಡರು) ಮಂಗಳೂರಿನ ಹಳೆ ಬಂದರಿನಿಂದ ಸರಕು ಸಾಗಣೆಯ ಮಂಜಿಗಳು (ಹಡಗು ಎನ್ನಿ) ಲಕ್ಷದ್ವೀಪಕ್ಕೆ ಬಹಳ ಹಿಂದಿನಿಂದಲೂ ಹೋಗುತ್ತಿರುತ್ತವೆ. ದ್ವೀಪದ ಆಡಳಿತದ ಪರವಾಗಿ ಸಾಮಾನು ಸರಂಜಾಮುಗಳ ಖರೀದಿ, ಮಾರಾಟ ಮತ್ತು ಸಾಗಣೆ ನಿರ್ವಹಣೆಗಾಗಿ ಬಂದರಿನಲ್ಲಿ ಗುದಾಮು ಹಾಗೂ ನಗರದಲ್ಲಿ ಕಛೇರಿ ಇರುವುದೂ ನನಗೆ ತಿಳಿದಿತ್ತು. ಈಗ ಇಲ್ಲಿಂದ ಪ್ರವಾಸೀ ಹಡಗುಗಳ ವ್ಯವಸ್ಥೆಯೂ ಆಗಬೇಕು ಎನ್ನುವುದು ರಶೀದರ ಬಲು ದೊಡ್ಡ ಮತ್ತು ಅರ್ಥಪೂರ್ಣ ಬೇಡಿಕೆ. ಈ ನಿಟ್ಟಿನಲ್ಲಿ ಅವರು ಜಿಲ್ಲಾಧಿಕಾರಿ ಮೂಲಕ ಕಾರ್ಯನಿರತರೂ ಆಗಿದ್ದಾರೆ. ಎರ್ನಾಕುಲಂಗೆ ವಿಮಾನ ಸಂಪರ್ಕವಿಲ್ಲ, ಮಂಗಳೂರಿಗಿರುವಷ್ಟು ಅನ್ಯ ಪ್ರವಾಸೀ ಆಕರ್ಷಣೆಗಳೂ ಇಲ್ಲ. ಕಡಲಯಾನದ ದೃಷ್ಟಿಯಲ್ಲಿ ದ್ವೀಪಗಳಿಗೆ ಮಂಗಳೂರು ಕೊಚ್ಚಿ ಸಮಾನ ದೂರದವು. ಕರ್ನಾಟಕದ ಪ್ರವಾಸಿಗಳಿಗೂ ಕೊಂಕಣ ರೈಲು ಬಂದ ಮೇಲೆ ಉತ್ತರ ಭಾರತೀಯರಿಗೂ ಮಂಗಳೂರಿನ ಬಂದರು ಕನಿಷ್ಠ ಒಂದು ದಿನದ ಅನಾವಶ್ಯಕ ರೈಲುಯಾನ ಉಳಿಸುವುದನ್ನೂ ಗಮನಿಸಿ ಸದ್ಯದಲ್ಲೇ ಮಂಗಳೂರು ಸಜ್ಜುಗೊಳ್ಳುವುದನ್ನು ನಿರೀಕ್ಷಿಸಬಹುದು. ಅಕ್ಟೋಬರಿನಿಂದ ಮೇ ತಿಂಗಳವರೆಗೆ ಅಂದರೆ ಮಳೆಗಾಲ ದೂರದ ದಿನಗಳು ಇಲ್ಲಿಗೆ ಪ್ರಶಸ್ತ.
ಮುಗಿದುದು.

ಈ ಪ್ರವಾಸಕಥನದುದ್ದವನ್ನು ಅನುಸರಿಸಿದ ನಿಮಗೂ ಅನುಸರಿಸಲಿರುವ ಅಸಂಖ್ಯಾತರಿಗೂ ತಿದ್ದುಪಡಿ ಸೂಚಿಸಿ ಸರಿದಾರಿ ತೋರಿದವರಿಗೂ (ಡಾ| ರಾಮರಾಜ ಪಿ.ಎನ್: ಮಿನಿಕಾಯಿಗೆ ಸಮೀಪದ್ದು ಮಲ್ದೀವ್ಸ್ ದ್ವೀಪ ದೇಶ, ಮೌರಿಷಸ್ ಅಲ್ಲ) ಪ್ರತಿಕ್ರಿಯಿಸಿ ಉತ್ತೇಜಿಸಿದವರಿಗೂ ಖಾಸಗಿಯಾಗಿ ಸಿಕ್ಕಾಗ ಶಭಾಸ್ ಕೊಟ್ಟವರಿಗೂ ಆಯುರಾರೋಗ್ಯೈಶ್ವರ್ಯ ಹೆಚ್ಚಿ ಶೀಘ್ರ ಲಕ್ಷದ್ವೀಪ ಪ್ರವಾಸ ಪ್ರಾಪ್ತಿರಸ್ತು ಎಂದು ಹಾರೈಸುತ್ತೇನೆ. ನಿಮಗೆ ಸುಖಪ್ರಯಾಣವಾಗಲಿ, ಹೆಚ್ಚಲ್ಲದ್ದಿದ್ದರೂ ನಮಗೆ ದಕ್ಕಿದಷ್ಟು ಸಂತೋಷ ನಿಮ್ಮದೂ ಆಗಲಿ.

ಜಿಪಿ ಬಸವರಾಜು ವೃತ್ತಿ ಪ್ರವೃತ್ತಿಗಳಲ್ಲೂ ಬರಹಗಾರರು. ಆದರೆ ಹಿಂದೆ ತೇಜಸ್ವಿಯವರೊಡನೆ ಅಂಡಮಾನಿಗೆ ಹೋದಾಗ ಟಿಪ್ಪಣಿಸಿಕೊಂಡ ನೆನಪುಗಳ ಜೊತೆಗೆ ಇವನ್ನೂ ಕಟ್ಟಿ ಕಂತೆ ಮಾಡಿ ಅಟ್ಟಕ್ಕೆಸೆದಿದ್ದಾರೆ! ಪ್ರಸನ್ನನಿಗೋ ಹತ್ತೆಂಟು ವ್ಯವಾಹಾರ. ಅವುಗಳಿಗೆ ಸಂಬಂಧಪಟ್ಟಂತೆಯೂ ಇಲ್ಲದೆಯೂ ನಿನ್ನೆ ಭಟ್ಕಳ, ಇಂದು ಥಾಯ್ಲೇಂಡ್ ನಾಳೆ ಯಾವುದೋ ಹರಕೆ ಸಂದಾಯಕ್ಕೊಂದು ಪುಣ್ಯಕ್ಷೇತ್ರ ಭೇಟಿ, ನಾಡಿದ್ದು ಬಂಧುಗಳ ಭೇಟಿಗೆ ಕಾಕಿನಾಡ ಎಂದು ಒಂದು ಗಳಿಗೆ ಕೂರದ ಅಸಾಮಿ. ಆದರೂ ನಮ್ಮ ದ್ವೀಪಯಾನದ ಸಂತಸದ ಕ್ಷಣಗಳನ್ನು ಟಿಪ್ಪಣಿಸಿ ಸಾರ್ವಜನಿಕದಲ್ಲಿ ಹಂಚಿಕೊಳ್ಳುವ ಉಮೇದು ಕಡಿಮೆಯಾಗಲಿಲ್ಲ. ಈಚೆಗೆ ಎರಡನೇ ಕಂತು ಚಿತ್ರಗಳನ್ನು ಹಾಕಿದ್ದಾನೆ  ರುಕ್ಮಿಣಿ ಅಥವಾ ರುಕ್ಮಿಣಿಮಾಲಾ (ನನ್ನ ತಮ್ಮನ ಹೆಂಡತಿ, ಗೃಹಿಣಿ) ತನ್ನ ಮಾಲಾಲಹರಿ ಬ್ಲಾಗಿನಲ್ಲಿ ಸ್ವಯಂ ಘೋಷಿಸಿಕೊಂಡಂತೆ ಮಾತನ್ನೆಲ್ಲಾ ಮಗಳಿಗೆ ಬಿಟ್ಟು, ಅನುಭವವೆಲ್ಲವನ್ನೂ ಕೇವಲ ಸ್ವಾಂತಸುಖಾಯ ಎಂದುಕೊಂಡಿದ್ದವಳು ಆಶ್ಚರ್ಯಕರವಾಗಿ ಎಲ್ಲರಿಗೂ ಮೊದಲಾಗಿ ತನ್ನ ಅನುಭವ ಕಥನ ಕೊಟ್ಟಿದ್ದಾಳೆ. ಕೃಶಿ ಉರುಫ್ ಡಾ| ಕೃಷ್ಣಮೋಹನ್ ಇಪ್ಪತ್ನಾಲ್ಕು ಗಂಟೆಯ ಡ್ಯೂಟಿಯವರು; ಸ್ವಂತ ಆಸ್ಪತ್ರೆ ನಡೆಸುವುದರೊಡನೆ ಪರಿಣತ ಶಸ್ತ್ರವೈದ್ಯ. ಇವರ ಅಸಾಮಾನ್ಯ ಓದು ಮತ್ತು ವಿಷಯ ಸಂಗ್ರಹ ಅವರದೇ ಬ್ಲಾಗಿನಲ್ಲಿ ನಾಲ್ಕು ಚಿತ್ರ ಪ್ರಕಟಿಸುವುದರಲ್ಲಿ ಮುಗಿಯುತ್ತಿದ್ದದ್ದನ್ನು ನಾನು ಇನ್ನಿಲ್ಲದಂತೆ ಟೀಕಿಸುತ್ತಿದ್ದೆ. ಆ ಪ್ರಚೋದನೆಯ ಎಳೆ ಗಟ್ಟಿಯಾಗಿ ಹಿಡಿದು ಈ ಬಾರಿ ನನ್ನ ಜೊತೆಜೊತೆಗೇ ಅವರು ಸುಂದರ ಚಿತ್ರಗಳ ಜಾತ್ರೆ ನಡೆಸುವುದರೊಡನೆ ಮಾಹಿತಿಗಳ ಮಂಡಿಯನ್ನೂ ತೆರೆದಿದ್ದಾರೆ. (ನಾಲ್ಕನೆಯ ಕಂತಿಗೆ ಇಲ್ಲಿ ಚಿಟಿಕೆ ಹೊಡೆಯಿರಿ. ಅವರ ಉಳಿದ ಮೂರಕ್ಕೆ ಸಂಪರ್ಕ ಸೇತುಗಳನ್ನು ಆಯಾ ಕಾಲದಲ್ಲೇ ನಾನು ನನ್ನ ಲೇಖನಗಳ ಜೊತೆಗೆ ಕೊಟ್ಟದ್ದನ್ನು ನೀವು ಗಮನಿಸಿ, ಹೋಗಿ ಬಂದಿದ್ದೀರಿ ಎಂದು ಭಾವಿಸುತ್ತೇನೆ. ಇಲ್ಲವಾದರೆ ಅವಶ್ಯ ಇನ್ನಾದರೂ ಹೋಗಿ ಬನ್ನಿ. (ಮುಂದೆಯೂ ನೀವು ಸ್ವತಂತ್ರವಾಗಿ ಹೋಗಲು ನೆಚ್ಚಬಹುದಾದ ಬ್ಲಾಗ್ ಅದು.) ಪ್ರವಾಸದಲ್ಲಿ ನಮ್ಮದು ಇಪ್ಪತ್ತೊಂದರ ಒಂದು ತಂಡ. ಆದರೆ ಆನಂದಾನುಭವದಲ್ಲಿ ನಮ್ಮ ವೈವಿಧ್ಯ ಇಪ್ಪತ್ತೊಂದು. ಹಾಗಾಗಿ ನನ್ನ ಪಾಲಿಗೆ ನೀವು ಕೊಡುವುದೇನಿದ್ದರೂ ಪ್ರತ್ಯೇಕವಿರಲೇಬೇಕು – ಬರಲಿ. ಈ ಕಂತಿಗಾದರೂ ನಿಮ್ಮ ಚಿಂತನೆ ಒದಗಿ ಬರಲಿ. ಸರಣಿ ಮುಗಿದಮೇಲೆ ಒಟ್ಟಿಗೆ ಕೊಡುತ್ತೇನೆಂದವರದ್ದೂ ಬರಲಿ. ಬರಡ್ ಬರಡ್ ಬರಡ್!