“ಪ್ರದರ್ಶನದಲ್ಲಿ ಏನಾದರೂ ಹುರುಳುಂಟೇ ಅಥವಾ ಇದು ಕೇವಲ ನನ್ನೊಬ್ಬನ ಹಳವಂಡವೋ?” ಇದು ತನ್ನ ದೀವಟಿಗೆ ಪ್ರದರ್ಶನದ ಬೆನ್ನಲ್ಲಿ ಸದಾ ರಾಘವ ನಂಬಿಯಾರರು ಕೇಳುತ್ತಿದ್ದ ಪ್ರಶ್ನೆ. ಮನೋಹರ ಉಪಾಧ್ಯರ ಸೂಚನೆಯೊಂದಿಗೆ ನಾವು ಎರಡು ದೀವಟಿಗೆ ಪ್ರಯೋಗಗಳನ್ನು ವಿಡಿಯೋ ದಾಖಲೀಕರಣಕ್ಕಾಗಿಯೇ ಆಡಿಸಿ, ಮಾಡಿಸಿದ ಮೇಲೂ ಉಳಿದದ್ದು ಅದೇ ಪ್ರಶ್ನೆ “ದಾಖಲೀಕರಣದಲ್ಲಿ (ದೀವಟಿಗೆ ಪ್ರದರ್ಶನದಲ್ಲಿ) ಏನಾದರೂ ಹುರುಳುಂಟೇ ಅಥವಾ ಕೇವಲ ನಮ್ಮ ಶ್ರೇಷ್ಠತೆಯ ವ್ಯಸನವೇ?” ಪ್ರದರ್ಶನದಂದೇ ಕಲಾವಿದ ಗೋವಿಂದ ಭಟ್ಟರು ಪರೋಕ್ಷವಾಗಿ ಇಂಥ ಪ್ರಯತ್ನಗಳನ್ನೇ ಗೇಲಿಮಾಡಿದ್ದು ವಿಡಿಯೋ ದಾಖಲೆಯಲ್ಲೇ ನೀವು ಗಮನಿಸಬಹುದು. ಅದೇ ಗೋವಿಂದ ಭಟ್ಟರು ವಿಡಿಯೋ ಪ್ರಕಟವಾದ ಕೆಲವು ವಾರಗಳ ಮೇಲೆ ಹೀಗೇ ಅಂಗಡಿಗೆ ಬಂದವರನ್ನು ನಾನು ಎರಡೂ ವಿಡಿಯೋ ನೋಡಿದಿರಾ? ಹೇಗಾಯ್ತು ಎಂದು ಕುರಿತು ವಿಚಾರಿಸಿದೆ. “ಬಡಗಿನದ್ದು ನೋಡಿದೆ, ಒಳ್ಳೇದಾಗಿದೆ. ತೆಂಕು ಇನ್ನೂ ನೋಡಿಲ್ಲ. ಪ್ರದರ್ಶನ ಕಳೆಗಟ್ಟಿರಲಾರದು. ನಮ್ಮಲ್ಲಿ (ತೆಂಕುತಿಟ್ಟಿನಲ್ಲಿ) ತಂಡವಾಗಿ ಹೊಂದಿಕೊಂಡು ಹೋಗುವುದಿಲ್ಲ, ಎಲ್ಲರೂ ಬುದ್ಧಿವಂತರೇ” ಎಂದು ಹೇಳಿ, ಅವರ ಗುಟ್ಟುಬಿಡದ ತೆಳು ನಗೆಯೊಡನೆ ಜಾರಿದರು!

ನಂಬಿಯಾರರು ದೀವಟಿಗೆ ಪ್ರದರ್ಶನ ಪೂರ್ವದಲ್ಲಿ ಆಹಾರ್ಯ ಅರ್ಥಾತ್ ಪಾತ್ರಗಳ ಬಣ್ಣ, ಬಟ್ಟೆ, ಆಭರಣಗಳ ಬಗ್ಗೆ, ರಂಗಚಲನೆ ಅರ್ಥಾತ್ ಬೆಳಕಿನ ಮೂಲವನ್ನನುಸರಿಸಿ ಪ್ರೇಕ್ಷಕನಿಗೊದಗುವ ನೆರಳು ಬೆಳಕಿನಾಟದ ಬಗ್ಗೆ, ಶ್ರವಣಸುಖದ ಬಗ್ಗೆ ವರ್ಷಗಟ್ಟಳೆ ತಾವು ಸಂಶೋಧಿಸಿ ಕಂಡುಕೊಂಡ ಸತ್ಯಗಳನ್ನು ರೂಢಿಸಲು ತುಂಬಾ ಶ್ರಮಿಸುತ್ತಿದ್ದರು. ಅಸಂಖ್ಯ ಅಭ್ಯಾಸಗಳನ್ನು ನಡೆಸಿಯೂ ಸಾರ್ವಜನಿಕ ಪ್ರದರ್ಶನದಲ್ಲಿ ಉದ್ದಕ್ಕೂ ವೀಕ್ಷಕರ ಏಕಾಗ್ರತೆಯನ್ನು ಹಾಳುಮಾಡದ ಎಚ್ಚರದೊಡನೆ (ಕೈಯಲ್ಲಿ ಬಾರುಕೋಲು ಹಿಡಿದ ಅಪ್ಪಟ ಶಾಲಾಮಾಸ್ತರನಂತೆ) ಪಾತ್ರಧಾರಿಗಳನ್ನು ಎಚ್ಚರಿಸುತ್ತಲೇ ಇರುತ್ತಾರೆ. (ರಂಗದ ನಡುವೆ ವ್ಯವಹರಿಸುವ ಪಾತ್ರಕ್ಕೆ ತನ್ನ ನೆರಳು ಬೀಳಿಸುತ್ತಿದ್ದ ಇತರ ಪಾತ್ರಗಳನ್ನು ಎಷ್ಟೋ ಬಾರಿ ಹಿಂದಿನಿಂದ ಎಳೆದೋ ನೂಕಿಯೋ ಇವರು ಸರಿಪಡಿಸುತ್ತಿದ್ದದ್ದೂ ನಾನು ಗಮನಿಸಿದ್ದೇನೆ. ಕೊಣಾಜೆಯ ಪ್ರದರ್ಶನದಲ್ಲಿ ಈ ಕೆಲಸದಲ್ಲಿ ಹಿರಿಯಡಕ ಗೋಪಾಲರಾಯರೂ ಸ್ವಯಂಪ್ರೇರಿತವಾಗಿ ತೊಡಗಿದ್ದನ್ನು ಕಂಡಿದ್ದೇನೆ!) ಈ ನಿಟ್ಟಿನಲ್ಲಿ ನಮ್ಮ ಪ್ರಯೋಗಗಳ ಯಶಸ್ಸಿಗೆ ಗುರು ಸಂಜೀವರೂ ‘ಸಂಯೋಜಕ’ ಪೃಥ್ವೀರಾಜರೂ ಸಾಕಷ್ಟು ಹೆಣಗಿದ್ದಾರೆ. ಆದರೂ…

ಮೊದಲು ನನ್ನದೇ ಎರಡು ಮಾತು. ಮಳೆಗಾಲ ಮುಗಿದ ಹೊಸತರಲ್ಲಿ, ಮೇಳಗಳು ತಿರುಗಾಟ ಸುರುಮಾಡುವ ಮೊದಲೇ ಇದಾಗಬೇಕೆಂದು ಉಪಾಧ್ಯರು ಮತ್ತು ನಾನು ಸಂಕಲ್ಪಿಸಿದ್ದೆವು, ಸ್ಪಷ್ಟ ಸೂಚನೆಯನ್ನೂ ಕೊಟ್ಟಿದ್ದೆವು. ಆದರೆ ದಿನ ಇನ್ನೂ ಸಾಕಷ್ಟು ಇರುವಂತೆ ಕೇಂದ್ರದ ತಂಡಕ್ಕೆ ಕೋಲ್ಕತ್ತಾದಲ್ಲಿ ಒಂದು ಅಂತಾರಾಷ್ಟ್ರೀಯ ಪ್ರದರ್ಶನ ಮೇಳದಲ್ಲಿ ಭಾಗವಹಿಸಲು ಕರೆ ಬಂತು. ಕೇಂದ್ರದ ನಿರ್ದೇಶಕ ಹೆರಂಜೆ ಕೃಷ್ಣ ಭಟ್ಟರು “ಕೊಟ್ಟ ಮಾತನು ತಪ್ಪಲಾರೆನು” ಎಂದರು. ಆದರೆ ಕೇಂದ್ರಕ್ಕೆ ಅರ್ಹತೆಯಿಂದ ಒದಗಿದ ಈ ಗೌರವ ಬಿಡಬೇಡಿ ಎಂದು ಅವರನ್ನೊಪ್ಪಿಸಿ, ನಮ್ಮ ಪ್ರದರ್ಶನವನ್ನು ತಿರುಗಾಟದ ಋತುವಿನಲ್ಲೇ ನಡೆಸುವ ಅನಿವಾರ್ಯತೆ ಬಂತು.

ಯಕ್ಷಗಾನ ಕೇಂದ್ರದ ತಂಡ (ಬಡಗುತಿಟ್ಟು) ಒಂದೇ ಮತ್ತು ನಿರಂತರ ಸಾಂಪ್ರದಾಯಿಕ ಪ್ರದರ್ಶನಗಳನ್ನು ಕೊಡುವಲ್ಲೇ ತೊಡಗಿಕೊಳ್ಳುವುದಾದ್ದರಿಂದ ‘ದೀವಟಿಗೆಗೆ ಅಭ್ಯಾಸ ಶಿಬಿರ’ ಎಂಬ ವಿಶೇಷ ವ್ಯವಸ್ಥೆ ಬೇಕಿರಲಿಲ್ಲ. ಆದರೂ ಗುರು ಸಂಜೀವರು ಹೇಳಿದಂತೆ ಇದೇ ಪ್ರಸಂಗವನ್ನಿಟ್ಟುಕೊಂಡು ಕೇಂದ್ರದಲ್ಲೇ ಕೆಲವು ಅಭ್ಯಾಸ ನಡೆಸಿಯೇ ಬಂದಿದ್ದರು. ಸಾಲದ್ದಕ್ಕೆ ನಮ್ಮ ನಿರೀಕ್ಷೆಯಂತೆ (ಸೂಚನೆ, ಆದೇಶಗಳಲ್ಲ) ಸ್ವತಃ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದಿದ್ದ ಸಂಜೀವರು ಪ್ರದರ್ಶನದಂದು ಕೇವಲ ಪೂರ್ವರಂಗದಲ್ಲಿ ಸಣ್ಣ ಕೆಲಸ ಮಾಡಿ ಉಳಿದಂತೆ ಪೂರ್ಣ ನೇಪಥ್ಯ ನಿರ್ದೇಶನಕ್ಕೆ ನಿಂತುಕೊಂಡಿದ್ದರು. ಅವರು ಸ್ಪಷ್ಟ ಮಾತಿನಲ್ಲಿ, ಉಳಿದಂತೆ ಇಡಿಯ ತಂಡ ತನ್ನ ಕೃತಿಯಲ್ಲಿ ತೋರಿದ್ದಿಷ್ಟು ‘ಕಲೆಯ ಉಳಿವು, ಉತ್ತಮಿಕೆಗಾಗಿ ನಡೆಯುತ್ತಿರುವ ಈ ಕೆಲಸಕ್ಕೆ ನಾವು (ಕಲಾವಿದರು) ಎಷ್ಟು ಕೃತಜ್ಞರಾಗಿದ್ದರೂ ಸಾಲದು.’

ತೀರಾ ವಿಷಾದಪೂರ್ವಕವಾಗಿ ದಾಖಲಿಸುತ್ತಿದ್ದೇನೆ, ತೆಂಕುತಿಟ್ಟಿನದು ಹಾಗಾಗಲಿಲ್ಲ. ವಾಸ್ತವದಲ್ಲಿ ಪ್ರದರ್ಶನದ ನಿರ್ದೇಶಕ ಪೃಥ್ವಿರಾಜ ಕವತ್ತಾರು. ಆದರೆ ಅವರ ಎಳೆಹರಯ ಅದಕ್ಕೂ ಮಿಗಿಲಾಗಿ ಸಹಜ ಸಂಕೋಚ ಮತ್ತು ವಿನಯದಿಂದ ಮೊದಲು ತನ್ನ ಕೈಯನ್ನೇ ಕಟ್ಟಿಕೊಂಡರು. ಮುಂದುವರಿದು, ಕೊರತೆಗಳೇನಿದ್ದರೂ ತನ್ನದು. ದಾಖಲೆಯಲ್ಲಿ ನಿರ್ದೇಶಕನೆಂದು ಕಾಣಿಸುವಲ್ಲಿ ಮತ್ತು ಪ್ರದರ್ಶನದ ಒಳ್ಳೆಯದಕ್ಕೆಲ್ಲ ಬಲಿಪ ಭಾಗವತರನ್ನೇ ಹೆಸರಿಸತಕ್ಕದ್ದು ಎಂದೂ ನಮ್ಮಲ್ಲಿ ಕರಾರು ಹಾಕಿಯೇ ಬಂದಿದ್ದರು! ಅವರು ಹರಿಸಿದ ಬೆವರು, ಮಾಡಿದ ಖರ್ಚು (ಗೌರವಧನ ಬಿಡಿ, ಕನಿಷ್ಠ ತನ್ನ ಖರ್ಚಿಗೂ ಒಂದು ಪೈಸೆ ತೆಗೆದುಕೊಳ್ಳಲಿಲ್ಲ!) ಎಲ್ಲಕ್ಕೂ ಮಿಗಿಲಾಗಿ ವಹಿಸಿಕೊಂಡ ಜವಾಬ್ದಾರಿಗೆ ಕಲಾವಿದರ ಸ್ಪಂದನ ತೀರಾ ಕಡಿಮೆ ಎಂದೇ ನನಗನ್ನಿಸಿತು. ಮೇಳದ ನಿಗದಿತ ಆದಾಯ ಮೀರಿ ದಕ್ಕುವ ಇನ್ನೊಂದು ಆದಾಯದ ಮಟ್ಟದಲ್ಲೇ ಪ್ರದರ್ಶನವನ್ನು ನಿರ್ವಹಿಸಿದರು. ವಿಶೇಷ ವಿಡಿಯೋ ದಾಖಲೀಕರಣದ ಅಗತ್ಯಗಳಿಗೆ ಹೊಂದಿಕೊಳ್ಳಲಾದರೂ ‘ಮಧ್ಯಾಹ್ನ ಊಟಕ್ಕೇ ನಮ್ಮಲ್ಲಿಗೆ ಬನ್ನಿ’ ಎಂದು ನಾವು ಮನವಿ ಮಾಡಿಕೊಂಡಿದ್ದೆವು. ಸಂಜೆ ಕತ್ತಲಾವರಿಸಿದ ಕೂಡಲೇ ಯಾವ ಔಪಚಾರಿಕತೆಗಳು ಇಲ್ಲದೆ ಪ್ರದರ್ಶನ ಶುರು ಎಂದೂ ನಾವು ಸ್ಪಷ್ಟಪಡಿಸಿದ್ದೆವು. ಆದರೂ ಕೆಲವು ಕಲಾವಿದರು ಅವಸರವಸರವಾಗಿ ಬಣ್ಣಕ್ಕೆ ಕೂರುವ ವೇಳೆಗಷ್ಟೇ ಬಂದರು, ಮಾಡಿದರು, ಹೋದರು!

ವ್ಯಾವಸಾಯಿಕ ಮೇಳಗಳಿಗೆ ರೂಢಿಯಲ್ಲಿ ವಿಭಿನ್ನ ಶೈಲಿಗಳಿವೆ, ಶೈಥಿಲ್ಯಗಳೂ ನುಸುಳಿರುತ್ತವೆ. ನಮ್ಮ ಪ್ರಯೋಗಕ್ಕಾಗುವಾಗ ವಿವಿಧ ಮೇಳಗಳಿಂದ ಆರಿಸಿ ಬಂದವರಿಗೆ ಕನಿಷ್ಠ ಎರಡೂ ಮೂರಾದರೂ ಅಭ್ಯಾಸ ಶಿಬಿರ ನಡೆಯಬೇಕಿತ್ತು. ಹಿಂದಿನ ರಾತ್ರಿಯ ನಿದ್ರೆ ಮುಗಿಸಿ, ವಿವಿಧ ದೂರಗಳಿಂದ ಬಂದು ಕಿನ್ನಿಗೋಳಿಯಲ್ಲಿ ಒಂದು ಅಭ್ಯಾಸವನ್ನಷ್ಟೇ ನಡೆಸಲು ಸಾಧ್ಯವಾದದ್ದು ಕೊರತೆಯೇ. ಅದನ್ನೂ ಮೀರಿದ ಕೊರತೆ – ಒಟ್ಟು ಕಲಾಪದ ಮೌಲ್ಯವನ್ನು, ಉದಾತ್ತತೆಯನ್ನು ಅರ್ಥಮಾಡಿಕೊಂಡು ಒಂದು ಉತ್ತಮ ಸಾಂಘಿಕ ಪ್ರದರ್ಶನ ಕೊಡಲಿಲ್ಲ.

ತೆಂಕಿನ ಆಯ್ದ ಕಲಾವಿದರನ್ನು ತಂಡಕ್ಕೆ ಛಾಯಾಚಿತ್ರಗ್ರಾಹಿ, ಸಣ್ಣಮಟ್ಟದ ವೇಷ ಹಾಗೂ ಅರ್ಥದಾರಿ ಎಲ್ಲಕ್ಕೂ ಮುಖ್ಯವಾಗಿ ಯಕ್ಷಗಾನದ ವೈಚಾರಿಕ ಬೆಳವಣಿಗೆಯನ್ನು ಗೀಳಾಗಿಸಿಕೊಂಡ ಮನೋಹರ ಕುಂದರ್ ಹಿಂದಿನ ನಮ್ಮ ಎಲ್ಲಾ ಪ್ರಯೋಗಗಳಿಗೂ ಬಂದಂತೆ ದಾಖಲೀಕರಣದಂದು ಹಾಜರಿದ್ದರು. ಅವರಿಗೆ ಬಹಳ ನೋವು ತಂದ ಅಂಶ ದೀವಟಿಗೆಯ ಮಂದ ಬೆಳಕಿನ ಪ್ರದರ್ಶನವೆಂದು ಗೊತ್ತಿದ್ದೂ ರಾಮ ಪಾತ್ರಧಾರಿ ಪ್ರಖರ ಬೆಳಕಿಗೊಪ್ಪುವ ನೀಲವರ್ಣನಾದದ್ದು. ಪ್ರದರ್ಶನದಂದು ಅನ್ಯಕಾರ್ಯನಿಮಿತ್ತ ಬರಲಾಗದ ನಂಬಿಯಾರ್ ಅಂತೂ ವಿಡಿಯೋ ನೋಡಿ ಕೋಪಾವಿಷ್ಟರಾಗಿ “ನನ್ನ ಪ್ರದರ್ಶನವಾಗಿದ್ದರೆ ನಾನು ಆ ವೇಷಕ್ಕೆ ರಂಗಪ್ರವೇಶ ಕೊಡುತ್ತಲೇ ಇರಲಿಲ್ಲ” ಎಂದರು! ಶ್ರೀರಾಮನ ಒಡ್ಡೋಲಗ ನಡೆಯಬೇಕಾದಲ್ಲಿ ಲಕ್ಷ್ಮಣನ ಕ್ರಿಯೆ ರಂಗ ತುಂಬಿದ್ದನ್ನು ಅನೇಕರು ಆಕ್ಷೇಪಿಸಿದರು. ಇಲ್ಲಿ ಸಾಂಪ್ರದಾಯಿಕತೆಯನ್ನೇ ದಾಖಲೀಕರಣಕ್ಕೆ ಒಳಪಡಿಸುತ್ತಿರುವುದು ಎಂಬ ಪೂರ್ಣ ಅರಿವಿದ್ದೂ ವಿಕ್ಷಿಪ್ತ ಪ್ರಯೋಗವಷ್ಟೇ ಆಗಬಹುದಾದ್ದನ್ನು ಬಲಿಪರಾದರೂ ಹೇಗೆ ಒಪ್ಪಿಕೊಂಡರೆಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದರು.

ಹಾಸ್ಯಕ್ಕಿದ್ದ ಒಳ್ಳೆಯ ಒಂದೇ ಅವಕಾಶ – ಕುಂಭಕರ್ಣನನ್ನು ನಿದ್ದೆಯಿಂದೆಬ್ಬಿಸುವ ಸನ್ನಿವೇಶ. ಇದನ್ನು ಸಂದಶಕ್ತಿಗೆ (spent force) ವಹಿಸಿದ್ದು ತೀರಾ ನಿರಾಶಾದಾಯಕವಾಯ್ತು ಎಂದು ಅನೇಕ ಗೊಣಗುಗಳು ಕೇಳಿದ್ದೇನೆ. ಉಳಿದಿರುವ (ಎಲ್ಲ ಎಪ್ಪತ್ತರ ಮೇಲಿನ ಪ್ರಾಯದವರು) ಕರ್ಕಿಶೈಲಿಯ ದಾಖಲೀಕರಣ, ಇಂದಿನ ಮಹಾಬಲ ಹೆಗಡೆ ಎಂದೆಲ್ಲಾ ವ್ಯಕ್ತಿ ಕೇಂದ್ರಿತ ದಾಖಲೀಕರಣಗಳನ್ನು ನಾವು ನೋಡಿದ್ದೇವೆ. ಹಾಗೆ ಇದು ವ್ಯಕ್ತಿ ಕೇಂದ್ರಿತ ಅಲ್ಲ- ಕಲಾಕೇಂದ್ರಿತ. ಹಾಸ್ಯ ಕಲಾವಿದನ ಆಯ್ಕೆ ಪ್ರದರ್ಶನದ ಉತ್ತಮಿಕೆಗೆ ಪೂರಕವಾಗಿರಬೇಕಿತ್ತು. ಸರಳ ರಂಗಚಲನೆಯೂ ಅಸಾಧ್ಯವಾದ ಪ್ರಾಯದ ಕಲಾವಿದನ ನಿರ್ವಹಣೆ ಕರುಣಾಜನಕವಾಗಿತ್ತು. ಯಾರೂ ತಪ್ಪು ತಿಳಿಯಬಾರದು ಎಂದು ಒಂದು ಸ್ಪಷ್ಟನೆ. ಈ ಪ್ರದರ್ಶನ ಅವರ ಗತವೈಭವಕ್ಕೋ ಹಿರಿತನಕ್ಕೋ ಗೌರವ ಕೊಡುವ ಉದ್ದೇಶದ್ದಲ್ಲ ಎಂದಷ್ಟೇ ಅರ್ಥ.

“ದೀವಟಿಗೆ ಪ್ರದರ್ಶನದ ಚೌಕಿಗೂ ದೀವಟಿಗೆಯನ್ನೇ ಒದಗಿಸಬೇಕಿತ್ತು” ಎಂದರೊಬ್ಬರು. ಏರು ತಗ್ಗಿನ ಸೀಮಿತ ಹರಹಿನಲ್ಲಿ, ಮಳೆಗಾಳಿ ಕಾಡುವ ನಿರೀಕ್ಷೆಯಲ್ಲಿ ಚೌಕಿಗೆ ನಾವು ಪೂರ್ತಿ ಜ಼ಿಂಕ್ ಶೀಟಿನ ಮಾಡು ಕಟ್ಟಿಸಿದ್ದೆವು. ಅದರೊಳಗೆ ಎರಡು ತಿಟ್ಟುಗಳ ಸಾಮಾನು ಸರಂಜಾಮು ಹರಡಿಕೊಂಡು ಪ್ರದರ್ಶನಕ್ಕೆ ಸಜ್ಜಾಗುವ ಸನ್ನಿವೇಶದಲ್ಲಿ ಮತ್ತು ಪೂರ್ಣ ತತ್ಕಾಲೀನ ವ್ಯವಸ್ಥೆಯಲ್ಲಿ ಎಣ್ಣೆ ದೀಪಗಳನ್ನು ಒದಗಿಸುವುದು ನಮಗೆ ಅಪ್ರಾಯೋಗಿಕವಾಗಿಯೇ ಕಂಡಿತು. ಮತ್ತದರ ಮೇಲೆ ಒದಗಿಸಿದ ವಿದ್ಯುತ್ ದೀಪವಾದರೂ ಮಾಮೂಲೀ ಚೌಕಿಗಳಂತೆ ಐನೂರೋ ಸಾವಿರ ವಾಟಿನದಾಗಿರಲಿಲ್ಲ- ಮಂದಪ್ರಕಾಶವನ್ನಷ್ಟೇ ಕೊಡುತ್ತಿದ್ದ ಅರವತ್ತು ವಾಟಿನದು ಎಂಬುದನ್ನು ಸಹೃದಯರು ಗಮನಿಸಬೇಕು.

ರಂಗಸಜ್ಜಿಕೆಯಿಂದ ಹಿಡಿದು ಪ್ರಕಟಗೊಂಡ ಡೀವೀಡೀಯನ್ನು ವೀಕ್ಷಿಸುವವರೆಗೆ ನಮಗೆ ಜೊತೆಗೊಟ್ಟ ಆತ್ಮೀಯ ಸದಾಶಿವ ಮಾಷ್ಟ್ರು (ಔಪಚಾರಿಕವಾಗಿ ಕುಂಬಳೆ ಸದಾಶಿವರು) ಸ್ವಪ್ರೇರಣೆಯಿಂದ ಪತ್ರಿಕಾ ಪ್ರಕಟಣೆಗೊಂದು ಲೇಖನವನ್ನೇ ಬರೆದಿದ್ದರು. ಅದು ಪ್ರಕಟವಾಗಬಹುದಾದ ದಿನಗಳು ಮುಗಿದಂತನ್ನಿಸಿ ಈಗ ನಮಗೇ ಕಳಿಸಿಕೊಟ್ಟಿದ್ದಾರೆ. ನಿಮ್ಮ ಒಳ್ಳೆಯ ಓದಿಗೆ, ಇನ್ನೂ ಆ ಡೀವೀಡಿಗಳನ್ನು ಕೊಂಡು ನೋಡಿರದಿದ್ದರೆ ಪ್ರೇರಣೆಗೆ, ಕೊನೆಯಲ್ಲಿ ನೋಡಿಯೂ ಇದುವರೆಗೆ ನಿಮ್ಮಭಿಪ್ರಾಯವನ್ನು ಹಂಚಿಕೊಳ್ಳದ ‘ಅಪರಾಧ ಪರಿಮಾರ್ಜನೆಗೆ’ ದಾರಿಯಾಗಲಿ ಎಂಬ ಹಾರೈಕೆಯೊಡನೆ…

ಎರಡು ಅತ್ಯುತ್ತಮ ಯಕ್ಷಗಾನ ಡಿವಿಡಿಗಳು
ಲೇಖಕ: ಸದಾಶಿವ ಕುಂಬಳೆ

ನೂರಾರು ವರ್ಷಗಳ ಹಿಂದೆ ಯಕ್ಷಗಾನ ಬಯಲಾಟಗಳು ದೀವಟಿಗೆ ಬೆಳಕಿನಲ್ಲಿ ಪ್ರದರ್ಶಿಸಲ್ಪಡುತ್ತಿದ್ದುವು. ಆ ಬಳಿಕ ಗ್ಯಾಸ್ ಲೈಟ್ ಬಂತು; ಮತ್ತೆ ವಿದ್ಯುದ್ದೀಪಗಳು ಬಂದ ಬಳಿಕ ಸೌಲಭ್ಯದ ಕಾರಣದಿಂದ ಅವೇ ಈಗ ಮುಂದುವರಿಯುತ್ತಿವೆ. ಡಾ. ರಾಘವ ನಂಬಿಯಾರ್ ಮತ್ತು ಇನ್ನು ಕೆಲವರು ಯಕ್ಷಗಾನ ಪ್ರದರ್ಶನದಲ್ಲಿ ದೀವಟಿಗೆ ಬೆಳಕಿನ ಮಹತ್ವವನ್ನು ಮನಗಂಡು, ದೀವಟಿಗೆ ಬೆಳಕಿನಲ್ಲೇ ಯಕ್ಷಗಾನ ಬಯಲಾಟಗಳನ್ನು ಆಡಿಸುವ ಹಲವು ಪ್ರಯೋಗಗಳನ್ನು ನಡೆಸಿದರು. ದೀವಟಿಗೆಗಳ ಕಾಲದಲ್ಲಿ ರೂಪುಗೊಂಡ ಯಕ್ಷಗಾನ, ದೀವಟಿಗೆಗಳ ಮಂದ ಬೆಳಕಿನಲ್ಲಿ ತೋರುವ ಸೊಗಸನ್ನು ಆಧುನಿಕ ವಿದ್ಯುತ್ ಬೆಳಕಿನ ಅತಿಪ್ರಕಾಶದಲ್ಲಿ ಪ್ರಕಟಗೊಳಿಸಲು ಸಾಧ್ಯವೇ ಇಲ್ಲ, ಎಂಬ ಅಂಶವೇ ದೀವಟಿಗೆ ಬೆಳಕಿನ ಆಟಗಳ ಬಗ್ಗೆ ಇಂದು ಯೋಚಿಸುವಂತಾಗಲು ಕಾರಣ. ಹಾಗೆಂದು ದೀವಟಿಗೆ ಬೆಳಕಿನ ಆಟಗಳನ್ನು ಸಂಯೋಜಿಸುವುದು, ಈ ಕಾಲದಲ್ಲಿ ಕಷ್ಟಸಾಧ್ಯವೇ. ಅಲ್ಲಲ್ಲಿ ಕೆಲವರು ಪ್ರಯೋಗದೃಷ್ಟಿಯಿಂದ ದೀವಟಿಗೆ ಆಟಗಳನ್ನು ಏರ್ಪಡಿಸಿದರೂ, ಬೇಕೆಂದಾಗ ಅವು ಎಲ್ಲಾ ಕಡೆ ನೋಡ ಸಿಗುವುದಿಲ್ಲ. ಇದೀಗ ದೀವಟಿಗೆ ಬೆಳಕಿನ ಆಟದ ಒಂದು ಉತ್ತಮ ಡಿವಿಡಿ ನಿರ್ಮಾಣಗೊಂಡು, ಯಕ್ಷಗಾನ ಕಲಾರಸಿಕರಿಗೆ ಲಭ್ಯವಾಗಿರುವುದು ಒಂದು ಮಹತ್ವದ ವಿಷಯವಾಗಿದೆ. ಈ ಡಿವಿಡಿ ಯನ್ನು ಅತ್ಯಂತ ಎಚ್ಚರಿಕೆಯಿಂದ ಗುಣಮಟ್ಟಕ್ಕೆ ಕೊರತೆಯಾಗದಂತೆ, ಸಾಕಷ್ಟು ಸಿದ್ಧತೆ ಹಾಗೂ ಪರಿಶ್ರಮಗಳಿಂದ ತಯಾರಿಸಲಾಗಿದೆ. ವಾಸ್ತವದಲ್ಲಿ ಇಲ್ಲಿ ದೀವಟಿಗೆ ಆಟದ ಎರಡು ಡಿವಿಡಿಗಳಿದ್ದು ಒಂದು ಬಡಗು ತಿಟ್ಟಿನದು ಮತ್ತೊಂದು ತೆಂಕು ತಿಟ್ಟಿನದು. ದೀವಟಿಗೆ ಆಟಗಳ ಕಾಲದಲ್ಲಿ ಯಕ್ಷಗಾನ ಹೇಗಿದ್ದಿರಬಹುದು, ಅದರ ಸೊಗಸು ಯಾವ ರೀತಿಯದ್ದು ಎಂದು ತಿಳಿದುಕೊಳ್ಳಲು, ಈ ಡಿವಿಡಿಗಳು ಒಂದು ಅಪೂರ್ವ ದಾಖಲೆಯೇ ಸರಿ.

ತೆಂಕು, ಬಡಗು ಎರಡೂ ಪ್ರಕಾರಗಳಲ್ಲಿ ಪ್ರಸಂಗ ಪ್ರಾರಂಭಕ್ಕೆ ಮೊದಲು ಪೂರ್ವರಂಗದ ಸ್ವಲ್ಪ ಭಾಗವನ್ನು ಇದರಲ್ಲಿ ಅಳವಡಿಸಲಾಗಿದೆ. ಭಾಗವತರೂ, ಹಿಮ್ಮೇಳದವರೂ ದೀಪ ಸಹಿತ ರಂಗಸ್ಥಳಕ್ಕೆ ಬರುವ ದೃಶ್ಯ; ಆಟ ಮುಕ್ತಾಯಗೊಂಡ ಬಳಿಕ ‘ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೋ…’ ಪದ್ಯದ ಹಾಡುವಿಕೆಯೊಂದಿಗೆ ನಿರ್ಗಮಿಸುವ ದೃಶ್ಯಗಳು ಅತ್ಯಂತ ಮನೋಹರವಾಗಿ ಕಾಣಿಸುತ್ತವೆ. ಬಡಗು ತಿಟ್ಟಿನ ‘ಹಿಡಿಂಬಾ ವಿವಾಹ’ (ಅರಗಿನ ಮನೆ) ಪ್ರಸಂಗದಲ್ಲಿ ಪಾಂಡವರ ಒಡ್ಡೋಲಗದ ದೃಶ್ಯ, ಕುಂತಿ ಸಹಿತ ಪಾಂಡವರು ವಾರಣಾವತಕ್ಕೆ ಹೋಗುವ ಪ್ರಯಾಣ ಕುಣಿತಗಳು ಅತ್ಯಂತ ಸೊಗಸಾಗಿವೆ. ರಂಗಸ್ಥಳದ ಹಿಂಭಾಗದಲ್ಲಿ ಒಂದು ಪಕ್ಕಕ್ಕೆ ವ್ಯವಸ್ಥೆಗೊಳಿಸಿದ್ದ ಅರಗಿನ ಮನೆಗೆ ಬೆಂಕಿ ಹಿಡಿದಾಗ, ಅದರೊಳಗಿಂದ ಪಾಂಡವರು ಓಡಿ ಪಾರಾಗುವ ದೃಶ್ಯ ರಮ್ಯಾದ್ಭುತವಾಗಿ ಚಿತ್ರಣಗೊಂದಿದೆ.

ಸಾಮಾನ್ಯವಾಗಿ ಯಕ್ಷಗಾನ ಬಯಲಾಟಗಳಲ್ಲಿ ಅರಮನೆ, ಕಾಡು, ದೇವಲೋಕ, ಕೈಲಾಸ, ಯುದ್ಧರಂಗ ಮುಂತಾದ ದೃಶ್ಯಗಳನ್ನು ರಂಗಸ್ಥಳದಲ್ಲಿ ಸಾಂಕೇತಿಕವಾಗಿ ನಿರೂಪಿಸುವುದು ಕ್ರಮ. ಆದರೆ ಬೆಂಕಿಯ ಬಳಕೆ ಇರುವ ಸಂದರ್ಭಗಳಲ್ಲಿ ಅದನ್ನು ವಾಸ್ತವ ರೂಪದಲ್ಲೇ ತೋರಿಸುವುದೇಕೆಂದು ಈ ದೃಶ್ಯ ನೋಡಿದಾಗ ಅರಿವಾಗುತ್ತದೆ. ಲಂಕಾದಹನ ಪ್ರಸಂಗದಲ್ಲೂ ಬೆಂಕಿಯಿಂದ ಮನೆಗಳನ್ನು ಸುಡುವ ದೃಶ್ಯವನ್ನು ತೋರಿಸಲಾಗುತ್ತದೆ. ಕಗ್ಗತ್ತಲ ಹಿನ್ನೆಲೆಯಲ್ಲಿ, ಬೆಂಕಿ ಹಿಡಿದು ಉರಿಯುತ್ತಿರುವ ಮನೆಯಿಂದ ಓಡುವ ಪಾಂಡವರನ್ನು (ಯಕ್ಷಗಾನದ ವೇಷಗಳನ್ನು) ನೋಡುವಾಗ, ಅರಗಿನ ಮನೆ ಕಥೆಯ ಇಡೀ ಚಿತ್ರ ಕಣ್ಣಿಗೆ ಕಟ್ಟುತ್ತದೆ.

ಈ ಪ್ರಸಂಗದಲ್ಲಿ ಬರುವ ಹಿಡಿಂಬ, ಹಿಡಿಂಬೆ ಎರಡೂ ಬಣ್ಣದ ವೇಷಗಳು – ದೀವಟಿಗೆ ಬೆಳಕಿನಲ್ಲಿ ಮೆರೆಯುವುದನ್ನು ನೋಡಬೇಕಾದ್ದೆ. ಆ ಪಾತ್ರಗಳ ವೇಷಭೂಷಣ, ಮುಖವರ್ಣಿಕೆಗಳು ದೀವಟಿಗೆಯ ಮಂದ ಬೆಳಕಿನಲ್ಲಿ ಬೀರುವ ಪರಿಣಾಮವೇ ಅತ್ಯಂತ ಬೆರಗಿನದ್ದು. ಯಕ್ಷಗಾನದ ಬಣ್ಣಗಾರಿಕೆ, ವೇಷಭೂಷಣಗಳೆಲ್ಲಾ ದೀವಟಿಗೆ ಬೆಳಕಿನ ಪ್ರಮಾಣಕ್ಕೇ ವಿನ್ಯಾಸಗೊಂಡಿರುವುದನ್ನು ಈ ಡಿವಿಡಿ ನೋಡಿದಾಗ ಗುರುತಿಸಬಹುದಾಗಿದೆ. ಈ ಪ್ರಸಂಗದಲ್ಲಿ ಕಲಾವಿದರೆಲ್ಲರೂ ಉತ್ತಮ ರೀತಿಯಲ್ಲಿ ತಮ್ಮ ಪಾತ್ರಗಳನ್ನು ನಿರ್ವಹಿಸಿ ಪ್ರಸಂಗವನ್ನು ಯಶಸ್ವಿಗೊಳಿಸಿದ್ದಾರೆ.

ತೆಂಕು ತಿಟ್ಟಿನ ಡಿವಿಡಿಯಲ್ಲಿ ‘ಕುಂಭಕರ್ಣಕಾಳಗ’ ಪ್ರಸಂಗದ ಪ್ರದರ್ಶನವಿದ್ದು, ಬಲಿಪ ನಾರಾಯಣ ಭಾಗವತರ ನೇತೃತ್ವದಲ್ಲಿ ಹಿರಿಯ ಮತ್ತು ನುರಿತ ಕಲಾವಿದರು ಇದರಲ್ಲಿ ಪಾತ್ರ ವಹಿಸಿ ಪ್ರಸಂಗವನ್ನು ಯಶಸ್ವಿಗೊಳಿಸಿದ್ದಾರೆ. ಪೂರ್ವರಂಗದ ಭಾಗವನ್ನು ಅಗತ್ಯಕ್ಕೆ ತಕ್ಕಂತೆ ಮೊಟಕುಗೊಳಿಸಲಾಗಿದ್ದರೂ, ಇನ್ನೂ ಉತ್ತಮಪಡಿಸಲು ಅವಕಾಶವಿತ್ತು. ರಾಮಲಕ್ಷ್ಮಣರ ಒಡ್ಡೋಲಗದ ದೃಶ್ಯ, ಹನುಮಂತನ ತೆರೆಪರ್ಪಾಟ, ರಾವಣನ ಶಿವಪೂಜೆ, ಕುಂಭಕರ್ಣನ ನಿದ್ರೆ, ಬಾರಣೆಯಂತಹ ಒಳ್ಳೆಯ ದೃಶ್ಯಗಳು ಈ ಭಾಗದಲ್ಲಿವೆ. ಹೆಣ್ಣುಬಣ್ಣವಾಗಿ ಶೂರ್ಪನಖೆಯ ಪಾತ್ರವೂ ಈ ಪ್ರಸಂಗದಲ್ಲಿದ್ದು, ಎಲ್ಲಾ ವೇಷಗಳು ರಂಗಸ್ಥಳವನ್ನು ತುಂಬಿಕೊಳ್ಳುವ ರೀತಿಯೇ ಭವ್ಯವಾಗಿ ಕಾಣಿಸುತ್ತದೆ. ರಾವಣ, ಕುಂಭಕರ್ಣ, ಶೂರ್ಪನಖೆ, ಹನುಮಂತ, ಸುಗ್ರೀವ, ಜಾಂಬವ ಮುಂತಾದ ವೇಷಗಳು, ಅವುಗಳ ಮುಖವರ್ಣಿಕೆ – ದೀವಟಿಗೆ ಬೆಳಕಿನಲ್ಲಿ ನೀಡುವ ಪರಿಣಾಮ ನಿಜಕ್ಕೂ ಅದ್ಭುತ.

ದೀವಟಿಗೆ ಬೆಳಕಿನ ಈ ಎರಡೂ ಆಟಗಳಲ್ಲಿ ರಂಗಸ್ಥಳದ ಬಗ್ಗೆ ಹೇಳಲೇ ಬೇಕು. ಅತ್ಯಂತ ಸರಳವಾಗಿ ನಾಲ್ಕು ಬಿದಿರ ಕಂಬಗಳನ್ನು ನೆಟ್ಟು, ಮೇಲೆ ಮಾವಿನ ಸೊಪ್ಪಿನ ತೋರಣ ಕಟ್ಟಿ ಸಿದ್ಧಗೊಂಡ ಈ ರಂಗಸ್ಥಳಕ್ಕೆ ದೀವಟಿಗೆ ಬೆಳಕನ್ನು ಮಾತ್ರ, ಸಂಪ್ರದಾಯದಂತೆ ಎಣ್ಣೆ ಬಳಸಿ ಉರಿಸುವ ಬದಲು, ಪೆಟ್ರೋಲಿಯಂ ಅನಿಲ ಬಳಸಿ ಉರಿಸಲಾಗಿತ್ತು. ಎಣ್ಣೆ ದೀವಟಿಗೆಗಳಿಂದ ಹೊರಹೊಮ್ಮುವ ಕರಿಹೊಗೆಯ ಕಾಟವಾಗಲೀ, ಎಣ್ಣೆ ಹೊಯ್ಯುವವರ ಅಲೆದಾಟವಾಗಲೀ ಇಲ್ಲಿ ಇಲ್ಲದೆ ಇರುವುದು, ಅನಿಲ ದೀವಟಿಗೆಯ ಅತ್ಯಂತ ಧನಾತ್ಮಕ ಅಂಶ. ಇವು ಅನಿಲ ದೀವಟಿಗೆಗಳೆಂದು ಭಾಸವಾಗದಂತೆ ಅವನ್ನು ರಂಗಸ್ಥಳದ ಪಾರ್ಶ್ವಗಳಲ್ಲಿ ಅಳವಡಿಸಿದ ರೀತಿ ಮತ್ತು ಅವು ಪ್ರಸಂಗದುದ್ದಕ್ಕೂ ಒಂದೇ ರೀತಿ ಉರಿಯುತ್ತಾ ಏಕಪ್ರಕಾರದ ಬೆಳಕಿನ ಪರಿಣಾಮವನ್ನು ಕಾಯ್ದುಕೊಂಡದ್ದು ಈ ವ್ಯವಸ್ಥೆಯ ಗಮನಾರ್ಹ ಅಂಶ.

ಯಕ್ಷಗಾನ ಪ್ರದರ್ಶನಕ್ಕೆ ಆಯ್ದುಕೊಂಡ ಜಾಗ ಕೂಡ ಇಲ್ಲಿ ಬಹಳ ಮುಖ್ಯ. ಅದು ರಸ್ತೆಯಿಂದ, ಊರಿನಿಂದ ಸಾಕಷ್ಟು ದೂರದಲ್ಲಿ ಇದ್ದು, ಮರಗಳಿಂದ ಸುತ್ತುವರಿದಿರುವ ಅರಣ್ಯದಂತಹ ಪ್ರದೇಶವಾಗಿತ್ತು. ಅಲ್ಲದೆ ಯಾವುದೇ ರೀತಿಯ ಬೆಳಕು ರಂಗಸ್ಥಳದ ಆಸುಪಾಸಿನಲ್ಲಿ ಇರದಂತೆ ನೋಡಿಕೊಳ್ಳಲಾಗಿತ್ತು. ಇದರಿಂದಾಗಿ ಸದಾ ಹೆಚ್ಚಿನ ಬೆಳಕಿಗೇ ರೂಢಿಗೊಂಡಿದ್ದ ಪ್ರೇಕ್ಷಕರ ಕಣ್ಣುಗಳು ಇಲ್ಲಿನ ಕಡಿಮೆ ಬೆಳಕಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವೂ ಆಗಿರಲಿಕ್ಕಿಲ್ಲ.

ರಂಗಸ್ಥಳದ ದೀವಟಿಗೆಯ ಮಂದಪ್ರಕಾಶದಲ್ಲಿ ಯಕ್ಷಗಾನದ ವೇಷಗಳು ಅತ್ಯಂತ ಮನೋಹರವಾಗಿ ಕಾಣಿಸಿಕೊಳ್ಳುವ ರೀತಿಯೇ ಈ ಡಿವಿಡಿಗಳಲ್ಲಿರುವ ವೈಶಿಷ್ಟ್ಯ. ಸುತ್ತಲಿನ ಕಗ್ಗತ್ತಲ ಹಿನ್ನೆಲೆಯಲ್ಲಿ ದೀವಟಿಗೆಯ ಹಳದಿ ಹಾಗೂ ಮಂದವಾದ ಬೆಳಕಿನಲ್ಲಿ ಯಕ್ಷಗಾನದ ವೇಷಗಳು ಸೊಗಯಿಸುವುದನ್ನು ಕಾಣುವಾಗ, ಈಗಿನ ವಿದ್ಯುದ್ದೀಪಗಳ ಬೆಳಕಿನಲ್ಲಿ ನಡೆಯುವ ಆಟಗಳು ಪೇಲವವಾಗಿ ಕಾಣಿಸುತ್ತವೆ. ಈಗಿನ ಆಟಗಳಲ್ಲಿ ರಂಗಸ್ಥಳಕ್ಕೆ ಗರಿಷ್ಠ ಪ್ರಮಾಣದ ಬೆಳಕು, ಗರಿಷ್ಠ ಧ್ವನಿವ್ಯವಸ್ಥೆ, ಗರಿಷ್ಠ ಅಲಂಕಾರಗಳನ್ನು ಮಾಡುವ ಗೀಳಿನಿಂದಾಗಿ, ಬಯಲಾಟಗಳು ಅದೆಷ್ಟು ಸೊರಗಿವೆ ಎಂಬುದನ್ನು ಈ ಡಿವಿಡಿಗಳನ್ನು ನೋಡಿದಾಗ ಅನಿಸುತ್ತದೆ. ಯಕ್ಷಗಾನ ರಸಿಕರಿಗೆ ಒಳ್ಳೆಯ ಯಕ್ಷಗಾನವನ್ನು ತೋರಿಸುವ ಬದಲು, ಬೆಳಕು, ಧ್ವನಿ, ಅಲಂಕಾರಗಳ ಅತಿರೇಕದಲ್ಲಿ ಅವುಗಳನ್ನು ಕೆಡಿಸಿ ತೋರಿಸುವ ಪರಿಪಾಠವೇ ಎಲ್ಲೆಡೆ ನಡೆಯುತ್ತಿದೆ. ಹಾಗೆಂದು ದೀವಟಿಗೆ ಬೆಳಕಿನ ಆಟಗಳನ್ನೇ ಆಡಬೇಕೆಂಬುದು ಅಭಿಪ್ರಾಯವಲ್ಲ. ಅನಿಲ ದೀವಟಿಗೆ ಬೆಳಕನ್ನು ನಿತ್ಯದ ಆಟಗಳಲ್ಲಿ ವ್ಯವಸ್ಥೆಗೊಳಿಸುವುದೂ ತ್ರಾಸದಾಯಕವೇ. ಆದರೆ ಈ ದೀವಟಿಗೆಗಳು ಎಷ್ಟು ಪ್ರಮಾಣದ ಮತ್ತು ಯಾವ ಬಣ್ಣದ ಬೆಳಕನ್ನು ನೀಡುತ್ತವೋ, ಅಷ್ಟನ್ನು ಈಗಿನ ವಿದ್ಯುದ್ದೀಪಗಳನ್ನು ಬಳಸಿ ನೀಡಲು ಸಾಧ್ಯ. ಯಕ್ಷಗಾನ ಕಲೆ ತನ್ನ ನಿಜವಾದ ಸೊಗಸಿನೊಂದಿಗೆ ಪ್ರಕಟವಾಗಬೇಕಾದರೆ, ಈ ದಾರಿಯಲ್ಲಿ ಮುಂದುವರಿಯಲೇಬೇಕು. ತೆಂಕು ಬಡಗಿನ ಈ ಎರಡೂ ಡಿವಿಡಿಗಳು ಈ ದಿಸೆಯಲ್ಲಿ ಮಾರ್ಗದರ್ಶಕವಾಗಬಲ್ಲುದು.

ಈ ಡಿವಿಡಿಗಳ ನಿರ್ಮಾಣಕ್ಕೆ ಕಾರಣರಾದವರನ್ನು ಉಲ್ಲೇಖಿಸಲೇಬೇಕು. ಬಡಗು ತಿಟ್ಟಿನ ಆಟದ ಹೊಣೆಯನ್ನು ಉಡುಪಿಯ ಯಕ್ಷಗಾನ ಕೇಂದ್ರದ ಗುರು ಶ್ರೀ ಬನ್ನಂಜೆ ಸಂಜೀವ ಸುವರ್ಣರು ವಹಿಸಿದ್ದರೆ, ತೆಂಕುತಿಟ್ತಿಗೆ ಸಂಬಂಧಪಟ್ಟಂತೆ ಶ್ರೀ ಪೃಥ್ವೀರಾಜ ಕವತ್ತಾರು ಇವರು ವಹಿಸಿದ್ದರು. ರಾಷ್ಟ್ರಪ್ರಶಸ್ತಿ ವಿಜೇತ ಸಿನೆಮಾ ನಿರ್ದೇಶಕ ಶ್ರೀ ಅಭಯಸಿಂಹ ಇವರು ಬಯಲಾಟಗಳ ದಾಖಲೀಕರಣ ನಡೆಸಿದ್ದಾರೆ. ಸಾಮಾನ್ಯವಾಗಿ ಮೂರು ಕಡೆಗಳಲ್ಲಿ ಕ್ಯಾಮರಾಗಳನ್ನಿಟ್ಟು ಚಿತ್ರೀಕರಿಸುವ ರೀತಿಯನ್ನು ಬಿಟ್ಟು, ಎರಡು ಕ್ಯಾಮರಾಗಳನ್ನು ರಂಗಸ್ಥಳದ ಮುಂಭಾಗದಲ್ಲಿಟ್ಟು, ರಂಗಸ್ಥಳವು ಸಂಪೂರ್ಣವಾಗಿ ದೃಶ್ಯದಲ್ಲಿ ತುಂಬಿಕೊಳ್ಳುವಂತೆ ಅಳವಡಿಸಿದ್ದಾರೆ. ದೃಶ್ಯಗಳನ್ನು ಸಮೀಪ ಯಾ ದೂರದಲ್ಲಿ ತೋರಿಸುವಾಗಲೂ ಅಷ್ಟೆ, ಅತ್ಯಂತ ಸಂಯಮದಿಂದ ದೃಶ್ಯಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ. ಈ ಡಿವಿಡಿಗಳ ಮಾರಾಟದ ಹೊಣೆ ಮತ್ತು ಆದಾಯದ ಫಲಾನುಭವಿಗಳು ಉಡುಪಿಯ ಎರಡು ಪ್ರಮುಖ ಯಕ್ಷಗಾನ ಸಂಸ್ಥೆಗಳಾದ ಎಂಜಿಎಂ ಕಾಲೇಜಿನ ‘ಯಕ್ಷಗಾನ ಕೇಂದ’ ಮತ್ತು ‘ಯಕ್ಷಗಾನ ಕಲಾರಂಗ (ರಿ)’. (ಎರಡೂವರೆ ಗಂಟೆಯ ಡೀವೀಡೀಯೊಂದಕ್ಕೆ ರೂ ಒಂದು ನೂರು ಮಾತ್ರ)

ಎರಡೂ ಡಿವಿಡಿಗಳಲ್ಲಿ ಪ್ರಸಂಗ ಮತ್ತು ಪೂರ್ವರಂಗ ಪ್ರಾರಂಭವಾಗುವ ಮೊದಲು ಡಿವಿಡಿ ನಿರ್ಮಾಣದ ಉದ್ದೇಶ, ಹಿನ್ನೆಲೆ, ಸಿದ್ಧತೆಗಳ ಬಗ್ಗೆ ಸ್ವಲ್ಪ ಮಾಹಿತಿ ನೀಡುವ ದೃಶ್ಯಗಳನ್ನು ಅಳವಡಿಸಲಾಗಿದ್ದು, ಹಿರಿಯ ಕಲಾವಿದರ, ವಿದ್ವಾಂಸರ ಸಂದರ್ಶನದ ತುಣುಕುಗಳೂ ಈ ಡಿವಿಡಿಗಳಲ್ಲಿವೆ. ಪ್ರತಿಯೊಂದು ಡಿವಿಡಿಯೂ ಸುಮಾರು ಎರಡೂವರೆ ಗಂಟೆಯಷ್ಟು ದೀರ್ಘವಾಗಿರುವುದನ್ನು ಸಹಿಸಬಹುದಾದರೆ, ಈ ಡಿವಿಡಿಗಳು ಒಂದು ಅತ್ಯುತ್ತಮ ಕಲಾನುಭವವನ್ನು ನೀಡುವುದರಲ್ಲಿ ಸಂಶಯವೇ ಇಲ್ಲ.

ಬಡಗುತಿಟ್ಟಿನ ಪೂರ್ವರಂಗದ ಬಗ್ಗೆ ಪ್ರತ್ಯೇಕವಾಗಿ ಉಲ್ಲೇಖಿಸಬೇಕು. ಇದರಲ್ಲಿ ಕೋಡಂಗಿವೇಷ, ಬಾಲಗೋಪಾಲ, ಪೀಠಿಕೆ ಸ್ತ್ರೀ ವೇಷಗಳಲ್ಲದೆ ಸಂಜೀವ ಸುವರ್ಣರ ಪೀಠಿಕಾ ಹಾಸ್ಯವೇಷವೂ ಇದೆ. ಸಭಾವಂದನೆಯ ದೃಶ್ಯ ಮತ್ತು ಈ ಭಾಗದ ಒಟ್ಟು ಪ್ರದರ್ಶನ – ನಮ್ಮನ್ನು ಸುಮಾರು ನೂರು ವರ್ಷ ಹಿಂದಕ್ಕೊಯ್ಯುವ ರೀತಿಯಲ್ಲಿ ನಿರೂಪಿತವಾಗಿವೆ. ಇಂತಹ ದೃಶ್ಯಗಳು ನೋಡಸಿಗುವುದೇ ಅಪರೂಪ. ಯಕ್ಷಗಾನ ಕಲಾರಸಿಕರ ಸಂಗ್ರಹದಲ್ಲಿ ಇರಲೇಬೇಕಾದ ಎರಡು ಡಿವಿಡಿಗಳಿವು.

(ಕುಂಬಳೆ ಸದಾಶಿವರ ಲೇಖನ ಮುಗಿದುದು)

ಪೂರಕ ಓದಿಗೆ ಇಲ್ಲೇ ಯಕ್ಷಗಾನ ವರ್ಗೀಕರಣಕ್ಕೆ ಹೋದರೆ ಕ್ರಮವಾಗಿ – ದೀವಟಿಗೆಯ ಆಟಕ್ಕೆ ಕೇಳಿಹೊಡೆಯುತ್ತಾ, ದೀವಟಿಗೆಯಲ್ಲಿ ಸಭಾಕ್ಲಾಸ್, ದೀವಟಿಗೆ ಆಟವನು ಬಣ್ಣಿಪೆನು ಪೊಡಮಡುತ, ತೆರೆಮರೆಯ ಕುಣಿತ ಮತ್ತು ಯಕ್ಷದಾಖಲೀಕರಣದ ಫಲಶ್ರುತಿಗಳನ್ನು ಅವಶ್ಯ ಓದಬಹುದು. ಮತ್ತೆ ಈ ಮೊದಲೇ ಹೇಳಿದಂತೆ – ನೀವು ಇನ್ನೂ ಆ ಡೀವೀಡಿಗಳನ್ನು ಕೊಂಡು ನೋಡಿರದಿದ್ದರೆ ಬಡಗು ತಿಟ್ಟಿನದ್ದಕ್ಕೆ – ನಿರ್ದೇಶಕರು, ಯಕ್ಷಗಾನ ಕೇಂದ್ರ, ಎಂಜಿಎಂ ಕಾಲೇಜು, ಕುಂಜಿಬೆಟ್ಟು, ಉಡುಪಿ ೫೭೬೧೦೨ (email: mgmcollegeudupi@dataone.in) ಮತ್ತು ತೆಂಕು ತಿಟ್ಟಿನದ್ದಕ್ಕೆ ಯಕ್ಷಗಾನ ಕಲಾರಂಗ, ಅದಮಾರು ಮಠದ ಓಣಿ, ಉಡುಪಿ ೫೭೬೧೦೧ (email: yakshaganakalaranga@rediffmail.com) ಸಂಪರ್ಕಿಸಿ. ಮತ್ತೆ ಕೊಂಡು ನೋಡಿಯೂ ಇದುವರೆಗೆ ನಿಮ್ಮಭಿಪ್ರಾಯವನ್ನು ಹಂಚಿಕೊಳ್ಳದಿದ್ದರೆ ಇನ್ನಾದರೂ ‘ಅಪರಾಧ ಪರಿಮಾರ್ಜನೆಗೆ’ ಕೆಳಗಿನ ಪ್ರತಿಕ್ರಿಯಾ ಅಂಕಣವನ್ನು ಧಾರಾಳ ಬಳಸಿಕೊಳ್ಳಿ.