ರಂಗನಾಥ ಸ್ತಂಭ ವಿಜಯ ಭಾಗ ಮೂರು

ಚಳಿಗೆ ಕಾಲವೂ ನಡುಗುವುದು: ಶ್ರೀರಂಗನಾಥ ಸ್ವಾಮಿಯು ಆದಿಶೇಷನ ಮೇಲೆ ಒರಗಿ, ಒಂದೆಸಳು ಶ್ರೀತುಳಸಿಗೋ ಬಿಂದು ಗಂಗೋದಕಕ್ಕೋ ಭಕ್ತಾಭೀಷ್ಟವರಪ್ರದಾಯಕನಾಗಿರುವುದನ್ನು ನಾನು ಶ್ರೀರಂಗಪಟ್ಟಣದಲ್ಲಿ ಕಂಡವನಿದ್ದೇನೆ. ಕಾಲಹತಿಯಲ್ಲಿ ಆರಾಧನೆ ಆರತಿ ತಟ್ಟೆಯ ಆದಾಯವನ್ನು ಆತುಕೊಂಡಾಗ, ಮೇಲ್ವಿಚಾರಣೆ ಮೇಲ್ಸಂಪಾದನೆಯ ಮೇಲೇ ಮಲೆತುಬಿದ್ದಾಗ, ‘ದೇವಾಲಯ ಶಿಥಿಲಗೊಂಡು ಬಿರುಕುಬಿಟ್ಟ’ ವಾರ್ತೆಯನ್ನೂ ಓದುತ್ತಲಿದ್ದೇನೆ. ದೇವಬಿಂಬ ದೂಳೀ ಸ್ನಾನಕ್ಕೂ ನಿರ್ಮಾಲ್ಯ ಪೂಜನಕ್ಕೂ ಮೀಸಲಾದುದನ್ನೂ ಕಂಡವನಿದ್ದೇನೆ. ಆದರೆ ಭವಾನಿ ಕೊಳ್ಳದ ನಮ್ಮ ರಂಗನಾಥ ನಿಂತೇ ಇದ್ದರೂ ಪ್ರಕೃತಿಯ ಪೂಜೆ ಸ್ವೀಕರಿಸುತ್ತಾ ಸದಾ ಸುಖಿ, ಭಜಕರಿಗೆ ನಿತ್ಯ ನೂತನ. ಇವನಿಗೆ ಸಾಹಸವೇ ಸೇವೆ ಎಂದು ನಂಬಿದ ಕಿಂಕರರು ನಾವು. ಶಿಬಿರ ಹೂಡಿದ ಮೇಲಿನ ತಿರುಗಾಟದಲ್ಲಿ ನಾವು ಕಣ್ಣ ನೋಟಕ್ಕೆ ದಕ್ಕಿದಷ್ಟನ್ನು ಗರಿಕೆ ಸಮಿತ್ತುಗಳ ವಿವರದಲ್ಲಿ (ವೈದಿಕ ಸಂಭಾರದಂತೆ) ನೆನಪಿನ ಜೋಳಿಗೆಗೆ ಸೇರಿಸಿಕೊಂಡು ಮರಳಿದೆವು. ದೇವಾಲಯಗಳಲ್ಲಿ ದೇವಬಿಂಬಕ್ಕೆ ಖಾಸಾ ಸೇವೆಗೆ ಮುನ್ನ (ಎಷ್ಟೋ ಬಾರಿ ಜಿಡ್ಡುಹಿಡುಕಲು, ಕೊಳಕು) ತೆರೆಯೆಳೆಯುವುದನ್ನು ನೋಡಿದ್ದೇನೆ. ಆದರೆ ನಮ್ಮ ರಂಗನಾಥನಿಗೆ ದಿನಮಣಿಯೇ ಪರದೆಯವ. ಶಯನೋತ್ಸವಕ್ಕೆ ಕತ್ತಲಾವರಿಸಿತು.

ಸಮುದ್ರ ಮಟ್ಟದಿಂದ ೫೮೦೦ ಅಡಿ ಎತ್ತರ, ಅದರಲ್ಲೂ ಜನವರಿ ತಿಂಗಳು – ಉಶ್, ಚಳಿಯಪ್ಪೋ ಚಳಿ. ಇದ್ದೆಲ್ಲಾ ತೊಡುಗೆ ಅವಚಿಕೊಂಡೆವು. ಸ್ವೆಟ್ಟರ್, ಮಂಗನಟೊಪ್ಪಿ, ಶಾಲು ಸಾಕಾಗಲಿಲ್ಲ. ಕೆಲವರು ಗುಟ್ಟಿನಲ್ಲಿ ಎರಡು ಪ್ಯಾಂಟ್ ಕೂಡಾ ಏರಿಸಿದ್ದರು! ಅಡುಗೆ ಒಲೆಯನ್ನೇ ದೊಡ್ಡ ಮಾಡಿ ಸುತ್ತ ಮುಕುರಿಕೊಂಡೆವು. ಚಪಾತಿಯೇನೋ ಕಟ್ಟಿ ತಂದದ್ದಿತ್ತು. ಆದರೆ ಹೋಟೆಲಿನ ಅರೆಬೆಂದ ಚಪಾತಿ ಚಳಿಗೆ ನಾಯಿ ಚಕ್ಕಳ; ಹರಿದರು ಇಲ್ಲ, ಜಗಿಯಲು ಸಲ್ಲ. ಅದೃಷ್ಟಕ್ಕೆ ಕೂಟಕ – ಬಟಾಟೆ ಪಲ್ಯ, ಉಪಾಧ್ಯರ ಮಾಯಾಪಾತ್ರೆಯದ್ದು. ಸ್ವಲ್ಪ ಸ್ವಲ್ಪವೇ ನೆನೆಸಿ, ಹದಬರಿಸಿ, ಬಾಯಿಗೆ ರುಚಿತರಿಸಿ ಹೊಟ್ಟೆಗಿಳಿಸಿದೆವು. ಆದರೂ ಮತ್ತಷ್ಟು ಚಪಾತಿ ಉಳಿದೇ ಇತ್ತು. ಮಧ್ಯಾಹ್ನ ಹೋಟೆಲಿನಲ್ಲಿ ಕಟ್ಟಿಸುವಾಗ “ನಂಗ್ನಾಕು, ನಂಗೈದು” ಎಂದು ದೊಡ್ಡ ಬಟ್ಟಲು ಹಿಡಿದವರೆಲ್ಲ ಈಗ ನಿರ್ವಿಣ್ಣರು. ಕೈ ತೊಳೆಯುವ ಶಾಸ್ತ್ರಕ್ಕೆ ಒಲೆಯ ಮೇಲೆ ಬಿಸಿ ನೀರೇನೋ ಮಾಡಿಕೊಂಡಿದ್ದೆವು. ಆದರೆ ತೊಳೆದ ಮರುಕ್ಷಣಕ್ಕೆ ಬೆರಳುಗಳು ನೀರಪಸೆಗೆ ಕೋಟಗಟ್ಟುವ ಪರಿ ನೋಡಿ ಎಂಜಲು, ಮಡಿ ಎಲ್ಲಾ ನಾಗರಿಕತೆಯ ಭ್ರಮೆಗಳು ಎಂದು ಘೋಷಿಸಿಬಿಟ್ಟೆವು. ಮೂಲವಾದಿಗಳು “ಊಟಕ್ಕೆ ಮೊದಲೇ ಕೈತೊಳೆಯಲಿಲ್ವಂತೆ, ಇನ್ಯಾಕೆ” ಎಂದು ಪ್ಯಾಂಟಿಗೆ ಕೈ ಒರೆಸಿ ಶುದ್ಧರಾದರು. ಹಿಂದಿನ ರಾತ್ರಿಯಿಂದ ತೊಡಗಿದಂತೆ ಅನುಭವಿಸಿದ ಪ್ರಯಾಣ ಮತ್ತು ಶ್ರಮಗಳ ಲೆಕ್ಕ ಹಿಡಿದು ಬಳಸಿದ ತಟ್ಟೆ ಲೋಟಗಳನ್ನು ತೊಳೆಯುವುದು ಬಿಡಿ, ದಂತಧಾವನ, ಮುಖಮಾರ್ಜನದಂತ ಅನಿವಾರ್ಯಗಳನ್ನೂ ಆಪದ್ಧರ್ಮ ಎಂದು ತಳ್ಳಿ ಹಾಕಿದೆವು. ಇದನ್ನು ಕೇಳಿ, ‘ಅತಿಚಳಿಯಲ್ಲಿ ಪ್ಯಾಂಟಿಗೆ ಆಲುಗೆಡ್ಡೆ ಪಲ್ಯದ ಉಳಿಕೆಗಳನ್ನು ಸವರುವುದರಿಂದ ಆಗುವ ಪರಿಣಾಮ’ಗಳ ಬಗ್ಗೆ ಧೋಬೀಶಾಟ್ ವಿಶ್ವವಿದ್ಯಾನಿಲಯದ ರಜಕ ಸಂಶೋಧನಾಗಾರ ಉನ್ನತ ಮಟ್ಟದ (ಸ.ಮದಿಂದ ೫೮೦೦ ಅಡಿ!) ಅಧ್ಯಯನ ನಡೆಸಲು ಐವತ್ತು ಲಕ್ಷದ ಪ್ರಾಜೆಕ್ಟ್ ರಿಪೋರ್ಟ್ ಹಾಕಿದೆಯಂತೆ. ಮತ್ತು ಇಲ್ಲಿ ಹೀಗೆ ಹೆಚ್ಚುವರಿಯಾಗುವ ನೀರನ್ನು ಪರಿಸರ ಸ್ನೇಹೀ ಗಾರ್ಲ್ಯಾಂಡ್ ಕೆನಾಲ್‌ಗಳ ಮೂಲಕ ಬರಪೀಡಿತ ಸ್ಥಳಗಳಿಗೆ ತಿರುಗಿಸಲು ಕರ್ನಾಟಕದ ನಿವೃತ್ತ ಇಂಜಿನಿಯರ್ ಒಬ್ಬರು ಹೊಸದೇ ಕಡತವನ್ನು ಹೊಸೆಯುತ್ತಿದ್ದಾರಂತೆ!

ಚಳಿ ತಡೆಯಲು ಒಲೆಯ ಬೆಂಕಿ ಸಾಕಾಗದೆ ಶಿಬಿರಾಗ್ನಿ ಎಬ್ಬಿಸಿಯೇ ಬಿಟ್ಟೆವು. ಸುತ್ತ ದಟ್ಟವಾಗಿ ಬೆಳೆದ ನಿಂಬೆ ಪರಿಮಳದ ಹುಲ್ಲು ಕಾಣಲು ಹಸಿರಿದ್ದರೂ ಬೆಂಕಿಗೆ ಒಳ್ಳೆಯ ಗ್ರಾಸ (grassಆ?). ನಾಲ್ಕು ಮುಷ್ಠಿ ಹುಲ್ಲು, ಎರಡು ತುಂಡು ಕಡ್ಡಿಯನ್ನು ದುರ್ಬಲ ಕೆಂಡಕ್ಕೆ ಒಡ್ಡಿದರೂ ಸಾಕು. ನಾವು ಯೋಚಿಸುವ ಮುನ್ನ, ಮರುಕ್ಷಣಕ್ಕೆ ಬೀಸುಗಾಳಿ ಬರ್ರೆಂದು ಕಿಚ್ಚೆಬ್ಬಿಸಿಬಿಡುತ್ತಿತ್ತು. ಬಹುಶಃ ಆ ಬಂಡೆ ಪರಿಸರಕ್ಕೆ ಸರಿಯಾಗಿ ಹೊಂದಿಕೊಂಡ ಹುಲ್ಲು ಗಿಡ ಮರಗಳಲ್ಲಿ ನೀರಪಸೆಯೇ ಕಡಿಮೆಯೋ ಏನೋ. ನಾವು ಬೆಂಕಿಗೊಡ್ಡಿದ ಭಾರೀ ಒಣಕುಂಟೆಗಳೂ ಸಂಭ್ರಮದಲ್ಲೋ ಎಂಬಂತೆ ಕ್ಷಣಾರ್ಧದಲ್ಲಿ ಉರಿದು ಬೂದಿಯಾಗುವ ಪರಿ ನಮ್ಮನ್ನು ಜಾಗೃತಗೊಳಿಸಿತು. ಬಂಡೆ ಹಾಸಿನ ಮೇಲಿದ್ದ ನಮ್ಮ ಶಿಬಿರಾಗ್ನಿ ಅಂಚುಗಟ್ಟಿದ ಹುಲ್ಲಿಗೆ ತಪ್ಪಿಯೂ ದಾಟದ ಎಚ್ಚರವಹಿಸಿದೆವು. ಬೆಂಕಿ ಅತ್ತ ಸೋಂಕಿದ್ದೇ ಆದರೆ ನಮ್ಮ ಗುಡಾರಗಳೂ ಸೇರಿದಂತೆ ಪರಿಸರವೆಲ್ಲ ಖಾಂಡವವನವಾಗುವುದು ಖಾತ್ರಿ! ಬಹುಶಃ ಈ ಕಾಳ್ಗಿಚ್ಚಿನ ಭಯದಲ್ಲೇ ನಮಗೆ ಮಾರ್ಗದರ್ಶಿಯಾಗಿ ಒದಗಿದ್ದ ಅರಣ್ಯ ರಕ್ಷಕ ನಮ್ಮಲ್ಲಿ ಹಲವು ಬಾರಿ “ತೀ ಪೋಡ ಕೂಡಾದು” (ಬೆಂಕಿ ಹಾಕಬಾರದು) ಎಂದು ಬಡಬಡಿಸಿದ್ದ. ಸಾಲದೆಂಬಂತೆ ನಮ್ಮ ಚಾ ಮಾಡುವವರೆಗಿನ ಚಟುವಟಿಕೆಗಳನ್ನು ಗಮನಿಸಿ, ತೃಪ್ತಿಪಟ್ಟು ಮತ್ತೆ ವಿದಾಯ ಹೇಳಿದ್ದಿರಬೇಕು.

ಚಂದ್ರನ ಮಂದ್ರದಲ್ಲಿ ಹಲವು ಗುನುಗುಗಳು ತೇಲಿದವು. ಚಡಪಡಿಸುವ ಬೆಂಕಿಯೊಡನೆ ಹಲವು ವಿಚಾರಗಳೂ ಸ್ಫೋಟಿಸಿದವು. ದೂರದ ಚಾ ತೋಟದ ಒಕ್ಕಲು ಸಾಲು ಈಗ ಮಿಣಿಮಿಣಿ ಮಾಲೆ. ಅಷ್ಟೇ ಅಲ್ಲ ಎಂಬಂತೆ ಸುತ್ತೂ ಸುದೂರಗಳಲ್ಲಿ ಹಂಚಿಹೋದಂತೆ ಹಲವು ಮಿಣುಕುಗಳು ಮನುಷ್ಯ ವಾಸ್ತವ್ಯದ ಹರಹು ತೋರುತ್ತಿತ್ತು. ಆಗೊಮ್ಮೆ ಈಗೊಮ್ಮೆ ಚಲಿಸುವ ದೀಪಗಳು ವಾಹನ ಸಂಚಾರದ, ದಾರಿಯ ಸುಳಿವುಗಳನ್ನು ಬಿಚ್ಚುತ್ತಿತ್ತು. ಚಳಿ ಒತ್ತುತ್ತಿದ್ದಂತೆ ಎಲ್ಲರಿಗೂ ಗುಡಾರಗಳು ದೂರಾದವು. ಹೆಚ್ಚೇನು, ಸಮಯವೂ ನಿಧಾನಿಸಿತು! ಹಾಡಿನ ಸುರುಳಿ ಮುಗಿಯಿತೆಂದಲ್ಲ, ಕತೆಗಳಾ ಕಂತೆ ಮಡಚಿದ್ದೂ ಇಲ್ಲ. ಗಾಳಿಗೆ ಜೊತೆಗೊಟ್ಟ ಜ್ವಾಲೆಯ ನಲಿಕೆಯೊಡನೆ ನಮಗೆ ಹಿಂದೆ ಮುಂದೆ ಓಲಾಡಿ ಸಾಕಾಯಿತು. ಬೆಂಕಿಯ ಬಿಸಿಗೆ ಕೆಳಗಿನ ಬಂಡೆ ಸಶಬ್ದ ಬಿರಿಯತೊಡಗಿ ನಮ್ಮನ್ನು ಬೆದರಿಸಿತು. ತಿಂಗಳನ ಮಂದ ಬೆಳಕಿನಲ್ಲಿ ರಂಗನಾಥನೇ ಗುರುಗುಟ್ಟಿದಂತೆ, ದುರುಗುಟ್ಟಿದಂತೆ ಮತ್ತಷ್ಟು ಗಹನವಾದಂತೆಲ್ಲ ಅನ್ನಿಸಿ ಕಸಿವಿಸಿಯಾಯ್ತು. ಮರುದಿನದ ಸವಾಲೆದುರಿಸಲು ನಮಗೆ ನಿದ್ರೆ ಎಂಬ ವಿಶ್ರಾಂತಿ ತೀರಾ ಅವಶ್ಯವಿತ್ತು. ಅವೆಲ್ಲವನ್ನೂ ಒಟ್ಟುಗೂಡಿಸಿ, ಮೈಮುದ್ದೆ ಮಾಡಿಕೊಂಡೇ ಗುಡಾರ ಸೇರಿದೆವು.

ನಿದ್ರೆ ಎಂದರೇನು?: ದೇವು ಮತ್ತು ಪ್ರಸನ್ನ ಅವರೇ ಹೇಳಿಕೊಳ್ಳುವಂತೆ ನಿದ್ರೆಗಾಗಿಯೇ ಹುಟ್ಟಿದವರು. ಉಪಾಧ್ಯರಿಗೆ ಕೆಮ್ಮ, ಜೊನಾಸರಿಗೆ ಪ್ರಸನ್ನ ಗೊರಕೆಯ ಗುಮ್ಮ! ಬೀಸುಗಾಳಿಯಲ್ಲಿ ಸಡಗರಿಸುವ ಹುಲ್ಲು, ಬರಬರಿಸುವ ಗುಡಾರ ಮತ್ತು ಬದಲಾದ ಪರಿಸರದಿಂದ ಹೆಚ್ಚಿನವರಿಗೆ ನಿದ್ರೆಯ ಲೇಪ ಹತ್ತಲೇ ಇಲ್ಲ. ಹಲವರಿಗೆ ವನ್ಯ ಮೃಗಗಳ ಕುರಿತು ಸಂಶಯ, ಭಯಗಳೂ ಮರ್ಯಾದೆಯ ಕಟ್ಟಿನಲ್ಲಿ ಚಡಪಡಿಸುತ್ತಿದ್ದವು! ಆದರೆ ಎಳೆಯ ಅಭಯ, ಅಪರಾತ್ರಿಯಲ್ಲಿ ಒಮ್ಮೆಗೆ ಸಹಜವಾಗಿ ಬಡಬಡಿಸಿದ “ಅಪ್ಪಾ ಅಪ್ಪಾ! ಇಲ್ಲಿ ಹೊರಗೇನೋ ಮೇಯುತ್ತಿತ್ತು. ನಾನು ಒಳಗಿನಿಂದಲೇ ಟಾರ್ಚು ಬೆಳಗಿದಾಗ ಓಡಿ ಹೋಯ್ತು.” ಆತ ಪಕ್ಕದ ಗುಡಾರದಲ್ಲಿದ್ದ. ಅವನನ್ನು ಸಂತೈಸುವ ನೆಪದಲ್ಲಿ ನಾನು ಎರಡೆರಡು ಬಾರಿ ಮನಸ್ಸಿಲ್ಲದ ಮನಸ್ಸಿನಿಂದ ಗುಡಾರ ಬಿಟ್ಟು ತನಿಖೆ ನಡೆಸಿದೆ. ಎಲ್ಲ ಗಾಳಿಗೂಳಿಯ ಕಾರುಭಾರು. ಕಾಟಿಯೂ ಇಲ್ಲ ಲಾಟಿಯೂ ಇಲ್ಲ. ಉರುವಲು ಕೊಡುವವರಿಲ್ಲದೆ, ಮತ್ತೆ ಮತ್ತೆ ಶಿಬಿರಾಗ್ನಿ ತಣ್ಣಗಾಗುತ್ತಿತ್ತು. ಅಂದಿನ ವಾತಾವರಣದಲ್ಲಿ ಎಷ್ಟು ಸೌದೆ ತುಂಬಿದರೂ ಕಾಲರ್ಧ ಗಂಟೆಯೊಳಗೆ ಜ್ವಾಲೆ ದಿಂಗಣಿಸಿ, ಬೂದಿ ಹಾರಿಸಿ, ರಂಗದಿಂದ ನಿಷ್ಕ್ರಮಿಸಿಬಿದುತ್ತಿತ್ತು. ಮತ್ತೆ ಮತ್ತೆ ಕಿಚ್ಚೆಬ್ಬಿಸುವುದು, ಮಲಗಲು ಪ್ರಯತ್ನಿಸುವುದು ನಡೆಸಿಯೇ ರಾತ್ರಿ ಕಳೆದೆವು. ಕೊನೆಯ ಜಾಮದಲ್ಲಿ ಉಪಾಧ್ಯರು ಗಟ್ಟಿ ಚಾ ಕಾಯಿಸಿ ಕುಡಿದು ನಿರ್ವಿಘ್ನ ನಿದ್ರೆಗೆ ಶರಣಾದದ್ದು, ಅವರ ಗುಡಾರಮೇಟ್ ಗಣಪತಿ ಭಟ್ ಚಾ ಕುಡಿಯದೇ ನಿದ್ರೆ ಉಳಿಸಿಕೊಂಡದ್ದು, ಜೊನಾಸ್ ಅಖಂಡ ನಿದ್ರೆಗೆ ಒಂದು ಪುಟ್ಟ ಮಧ್ಯಂತರ ಬಿಡುವು ಕೊಟ್ಟರೂ ನಿದ್ರೆಯೇ ಬರಲಿಲ್ಲ ಎಂದು ದೂರಿದ್ದು ನಂಬಲಾಗದ ಸತ್ಯಗಳು!

ನಾನು ತಿಳಿದಂತೆ ದೇವು ವಾಸ್ತವದಲ್ಲಿ ಗುಂಡುಕಲ್ಲೇನೂ ಅಲ್ಲ ಎಂಬುದಕ್ಕೆ ಅವರು ರಾತ್ರಿ ಕಳೆದ ಕಥೆಯನ್ನು ಅವರ ಮಾತಿನಲ್ಲೇ ಕೇಳಿ. “ಉಪಾಧ್ಯರ ಮೀಟರ್ ೧೩ ಡಿಗ್ರಿ ಸೆಲ್ಶಿಯಸ್ ತೋರಿಸುತ್ತಿದ್ದರೂ ಬೀಸುತ್ತಿದ್ದ ಕುಳಿರ್ಗಾಳಿ ಅದು ೫-೬ಕ್ಕಿಂತ ಕೆಳಗಿರಬೇಕೆಂದೇ ಭ್ರಮೆ ಹುಟ್ಟಿಸುತ್ತಿತ್ತು. ತಣ್ಣೀರು ಮುಟ್ತಿದೆ, ಕೈ ಮರಗಟ್ಟಿ ಹೋಯ್ತು. ಶಿಬಿರಾಗ್ನಿಗೆ ತಾಗಿ ಕುಳಿತೆ. ಬೆಂಕಿ ಗುಡಿಯ ಹೊರಗಿತ್ತು. ಆದರೂ ಅದರ ಕಾವಿಗೆ ಗುಡಿಯೊಳಗಿನ ತ್ರಿಶೂಲಗಳು ಕರಗಿಯೇ ಹೋಗಿರಬೇಕು, ಕಾಲ ಕೆಳಗಿನ ಪಾದೆಯಂತೂ ನಿಜಕ್ಕೂ ಚಿಟಿಚಿಟಿಲೆಂದು ಬಿರಿಯುತ್ತಿತ್ತು. ಆದರೂ ನಮ್ಮ ಚಳಿ ಬಿಡಲಿಲ್ಲ. ಅನಿವಾರ್ಯವಾಗಿ ನೀರು ಮುಟ್ಟಿದರೆ ಕೈಯನ್ನೇ ಹೋಮಕ್ಕೊಡ್ಡಿ ಅವರವರಂಗೀಜೇಬರಾಗಿಬಿಡುತ್ತಿದ್ದೆವು. ಅಸಾಧ್ಯ ಚಳಿಯಲ್ಲಿ ಇನ್ನೇನು ಸತ್ತೇಹೋದೇನು ಎಂಬ ಭಯ ಕಾಡಿದರೂ ಉಪಾಧ್ಯರ ಸಾವಿರದ ಒಂದನೆಯ ಸಂಶೋಧನೆಯಾದ ಗೋಲಾಕಾರದ ಗುಡಾರ ಸೇರಿ ಮಲಗಿಬಿಟ್ಟೆ. ರಾತ್ರಿಯುದ್ದಕ್ಕೆ ಒಬ್ಬಿಬ್ಬರು ಆಗೀಗ ಎದ್ದು ಹೋಮದ ಬೊಣ್ಯವನ್ನು ಅರ್ಥಾತ್ ಪುಣ್ಯವನ್ನು ಕೈಮೈಗೆ ಹತ್ತಿಸಿಕೊಂಡು ಗುಡಾರ ಸೇರಿ ಮುರುಟುವುದು ತಿಳಿದರೂ ನಾನೇಳಲಿಲ್ಲ. ಆನೆಹುಲ್ಲು, ಮಜ್ಜಿಗೆ ಹುಲ್ಲುಗಳ ಸಂದಿಯಲ್ಲಿ ಗಾಳಿ ರುಮುರುಮು ಬೀಸುವಾಗ ಏನೇನೋ ಭ್ರಮೆಗಳು. ಆದರೂ ನಿದ್ರೆಗೇನೂ ಕೊರತೆಯಾಗದ್ದು ನಾನು ಪಡೆದು ಬಂದ ಭಾಗ್ಯವೇ ಇರಬೇಕು.”

[ಹಿಂದೆ ಆನಂದನ ತಂಡವೂ ಇಲ್ಲೆ ಶಿಬಿರ ಹೂಡಿತ್ತು. ಅವನದೇ ಭಾಷೆಯಲ್ಲಿ ಎರಡು ಮಾತು. “ನಮಗೋ ಯೌವನದ ಮದ. ನಮ್ಮ ಡೇರೆ ಎಂದರೆ ಒಂದು ಕಪ್ಪು ಜಮಖಾನ, ತಾಳಿಕೊಳ್ಳಲು ಎರಡು ಕೋಲು. ಆದರೇನು, ಬಚ್ಚುವಿಕೆ, ಮೃಷ್ಟಾನ್ನ ಭೋಜನದ ಅಮಲು ಒಳ್ಳೆ ನಿದ್ರೆಗೆ ಕಾರಣವಾಯ್ತು.”]

ನಾಂದಿ: ಒಟ್ಟಾರೆ ತಂಡಕ್ಕೆ ನಿದ್ರೆ ಅಲ್ಪಾಯು. “ಇನ್ನು ಚಳಿ ಗಿಳೀಂತ ಮಂಜು ಮಸಕೂಂತ ಬೆಳಿಗ್ಗೆ ಹತ್ತು ಗಂಟೆಯವರೆಗೆ ಹೋಯ್ಕಾತಿಲ್ಲೆ” ಉಪಾಧ್ಯರು ಘೋಷಿಸಿಯೇಬಿಟ್ಟರು. ಆದರೆ ನಾನು ಆರು ಗಂಟೆಗೇ ಸಂಗ್ರಹದ ಎಲ್ಲ ಸೌದೆ ಬೆಂಕಿಗೊಡ್ಡಿ – ಪೂರ್ಣಾಹುತಿ ಎಂದೇ ಘೋಷಿಸಿದೆ. ರಾತ್ರಿಯ ಅಂತ್ಯವನ್ನು ವಿಧಿವತ್ತುಗೊಳಿಸುವಂತೆ ಸುಪ್ರಭಾತ ಆಲಾಪಿಸಿದೆ (ಕುಹಕಿಗಳು ಅದು ‘ವಿಲಪಿಸಿದೆ’ ಎಂದಾಗಬೇಕು ಅನ್ನುವುದನ್ನು ನೀವು ನಂಬಬೇಡಿ!). ಹುಚ್ಚ ಸ್ಥಾಯಿಯ ನನ್ನ ಉದಯರೋಗವನ್ನು (ಲಬೊಲಬೋ?) ಆಕಾಶವಾಣಿಯ ದೇವು ಸಹಜವಾಗಿ ತೆಗೆದುಕೊಂಡು (with no comments!) ಹೊರಬಿದ್ದಾಗ ಒಮ್ಮೆಗೆ ಆಶ್ಚರ್ಯವಾಯ್ತು. ಆದರೆ ಅಷ್ಟೇ ಚುರುಕಾಗಿ ಅಸಾಮಿ ಚೊಂಬು ಹಿಡಿದು ಬಯಲಾದಾಗ ತಿಳಿಯಿತು, ಇದು ಹಿಂಬಾಲಿಸುವ ‘ಚಿಂತನ’ ತಪ್ಪಿಸಿಕೊಳ್ಳುವ ತರಾತುರಿ! ಸೂರ್ಯನ ಬಳಗದವರ ಕಚಿಪಿಚಿ ನಡೆದಿತ್ತು. ಸ್ವತಃ ಆತನೇ ಪೂರ್ವದ ಬಾಗಿಲು ತೆರೆಯುವ ಮುನ್ನ ನಾವು ನಿತ್ಯಕರ್ಮಗಳನ್ನು ಮುಗಿಸಿ, ಉದರಾಗ್ನಿಗೆ ಬ್ರೆಡ್ ಜ್ಯಾಂ ಮಾಡಿ, ಮೇಲಷ್ಟು ಚಾ ಹೊಯ್ದುಕೊಂಡೆವು. ಗುಡಾರ ಮಡಚಿ, ಶಿಬಿರ ಗುಡಿಸಿಟ್ಟೆವು. ನಿರಂತರ ಬೀಸುಗಾಳಿಯಿಂದ ಇಬ್ಬನಿ, ಮಂಜುಗಳ ಶೀತ ಮುಸುಕು ಇರಲಿಲ್ಲ. ಹಾಗಾಗಿ ವಿಳಂಬಿಸದೆ, ಶಿಲಾರೋಹಣದ ಕನಿಷ್ಠ ಆವಶ್ಯಕತೆಗಳನ್ನು ಮಾತ್ರ ಹಿಡಿದುಕೊಂಡು, ಉಳಿದೆಲ್ಲ ಸಾಮಾನುಗಳನ್ನು ಗುಡಿಗೋಡೆಗೆ ತಗುಲಿಸಿಟ್ಟು ಲಕ್ಷ್ಯಾನುಸಂಧಾನ ನಡೆಸಿದೆವು.

ಏಳುಮುಕ್ಕಾಲಕ್ಕೆ ಗುಡಿಗೆ ವಿದಾಯ. ದೇವು ಅಂದಾಜಿಸಿದಂತೆ “ಶಿಬಿರ ಸ್ಥಾನಕ್ಕೂ ಶಿಖರ ತುದಿಗೂ ಹಕ್ಕಿಯ ಬೀಸುರೆಕ್ಕೆಯ ದಾರಿಯಲ್ಲಿ ಅಂತರ ಕೇವಲ ನೂರಿನ್ನೂರು ಮೀಟರ್. ಆದರೆ ನಡುವೆ ಮಹಾ ಕಂದರ, ಇಳಿಯಲಾಗದ ಕಡಿದು.” ಆ ಪ್ರಪಾತದಂಚನ್ನು ನಿವಾರಿಸುವಂತೆ ಪೂರ್ವ ದಿಕ್ಕಿನ ‘ಮಂಗಕಲ್ಲಿನತ್ತ’ ಇಳಿಯತೊಡಗಿದೆವು. ಭಟ್ಟರಿಗೆ ಯುದ್ಧೋತ್ಸಾಹ, “ಹೊಡೆವವರು ಬನ್ನಿರೋ ತಡೆವವರು ಬನ್ನಿರೋ! ‘ಅಶೋಕ’ ನಮ್ಮ ಮುಂದಾಳು. ಹುಲ್ಲು, ಮುಳ್ಳು, ಉರುಳುಗಲ್ಲು ನಮ್ಮ ಹೆಜ್ಜೆಹೆಜ್ಜೆಯ ಧನ್ಯತೆ. ಹರಿವ ಬೆವರು, ತರಚುಗಾಯ ವೀರ ಸ್ಮರಣಿಕೆಗಳು.” ದೇವು ಭಾವ ತದ್ವಿರುದ್ಧ. “ಆಶ್ಚರ್ಯವೆಂದರೆ ಹಿಂದಿನ ಸಂಜೆ ರಂಗನಾಥನ ಎದುರು ನಿಂತಾಗ ಉಂಟಾದ ಅಧೈರ್ಯ, ಬೆಳಿಗ್ಗೆ ಆರೋಹಣಕ್ಕೆ ಹೊರಟಾಗ ಇರಲಿಲ್ಲ. ರಂಗನಾಥನ ಮೇಲೆ ಯುದ್ಧಕ್ಕೆ ಬಂದವರಲ್ಲ ನಾವು. ಸಾಧನೆಯ ಆನಂದಕ್ಕಾಗಿ ಮುಂದುವರಿದಿದ್ದೆವು, ಅಹಂಕಾರದ ಸ್ಥಾಪನೆಗಲ್ಲ. ಕೇವಲ ಖುಷಿ ಎಂದರೆ ಅದನ್ನೇರಿ ಪಡೆಯಬಹುದಾದಷ್ಟೇ ಮಟ್ಟದಲ್ಲಿ ಕೆಳಗೆ ನಿಂತು ಬರಿದೇ ದೃಷ್ಟಿಸಿಯೂ ಪಡೆಯಬಹುದಿತ್ತು. ಪರ್ವತಾರೋಹಣದಲ್ಲಿ ಮುಗಿದ ಒಂದು ಹಂತ ಸದಾ ಮುಂದಿನ ಹಂತಕ್ಕೆ ನಮಗೆ ತಿಳಿಯದಂತೇ ತಳಹದಿ ಕಲ್ಪಿಸುತ್ತದೆ, ಭರವಸೆ ನೀಡುತ್ತದೆ, ಭೀತಿಯಳಿಸಿ ಕುತೂಹಲ ಉಳಿಸುತ್ತದೆ.”

ಆಳೆತ್ತರದ ದಟ್ಟ ಹುಲ್ಲು ಎಲ್ಲ ಮುಚ್ಚಿದ್ದರೂ ನಮಗೆ ಅನುಕೂಲ ಜಾಡಿನ ಹೊಳಹು ಕೊಡುತ್ತಿತ್ತು. (ಹುಲ್ಲೇ ಇಲ್ಲದಲ್ಲಿ ಪ್ರಪಾತ ನಿಶ್ಚಿತ) ನಿಧಾನಕ್ಕೆ ಅದರ ನಡುವೆ ಜಾಡು ಮೂಡಿಸುತ್ತಾ ಅವನ್ನೇ ಆಧಾರಕ್ಕೂ ಜಗ್ಗಿ ಹಿಡಿಯುತ್ತಾ ಓರೆಯಲ್ಲಿ ಇಳಿದೆವು. ಸಣ್ಣ ಕಲ್ಲುಗುಂಡು, ಕೊರಕಲು, ಅಪರೂಪದ ಮುಳ್ಳ ಕಂಟಿ ನಮ್ಮನ್ನು ಪ್ರತ್ಯೇಕ ಪ್ರತ್ಯೇಕವಾಗಿ ಪರೀಕ್ಷಿಸಿ ಬಿಡುತ್ತಿದ್ದವು. ಹಿಂದಿನವನ ಪಾದಮೂಲದಲ್ಲಿ ಎದುರಿನವನ ತಲೆಯಿರುವಷ್ಟು ತೀವ್ರ ಇಳುಕಲು. ಆದರೆ ನೇರ ಕೊಳ್ಳದ ದೃಶ್ಯ ನಮ್ಮನ್ನು ಹೆದರಿಸದಂತೆ ಹುಲ್ಲು ಪರದೆಯ ಕೆಲಸವನ್ನೂ ಮಾಡಿತ್ತು. ‘ಮಂಗ’ ತಡವಿ, ಕೊನೆಯ ಬಾರಿಗೆ ಎಂಬಂತೆ ಉದಯರವಿ ಕಿರಣದಲ್ಲಿ ಪೂರ್ಣ ತೊಳಗುತ್ತಿದ್ದ ರಂಗನಾಥನನ್ನು ಕಣ್ಣು ತುಂಬಿಕೊಂಡೆವು. ಜೊತೆಗೆ ಆರೋಹಣಾರಂಭದ ಸ್ಥಳ ಹಾಗೂ ಬಂಡೆಯ ಮೇಲೇರಿದಂತೆ ಅನುಸರಿಸಬೇಕಾಗಬಹುದಾದ ಜಾಡನ್ನು ಮತ್ತಷ್ಟು ಸ್ಪಷ್ಟಪಡಿಸಿಕೊಂಡೆವು.

ಮಂಗಬಂಡೆ ಸಮೂಹವನ್ನು ಅದರ ಬುಡದಲ್ಲೇ ಬಳಸಿ, ಪಶ್ಚಿಮದ ಪೊದರ ಕೋಟೆಗೆ ಕನ್ನ ಹಾಕಿದೆವು. ಮೇಲಿನಿಂದ ಜರಿದ, ಜಾರಿದ ಕಲ್ಲು ಮಣ್ಣು ತರಗೆಲೆ ರಾಶಿಯ ಆಖಾಡದಲ್ಲಿ ಮುಳ್ಳಮಲ್ಲರು ಭಾರೀ ವ್ಯೂಹರಚನೆ ಮಾಡಿದ್ದರು. ದೇವು ಅನುಭವದಲ್ಲಿ, “ಅಷ್ಟು ಅಭದ್ರವಾದ debris zoneಅನ್ನು ನಾನು ಬೇರೆಲ್ಲೂ ಕಂಡಿಲ್ಲ. ಪ್ರತಿ ಹೆಜ್ಜೆಯನ್ನು ಇಡುವಲ್ಲೂ ಎತ್ತುವಲ್ಲೂ ಬಹು ಜಾಗ್ರತೆ ಬೇಕಿತ್ತು. ಕಾಲು ಮುಟ್ಟಿಸಿಕೊಂಡ ಪುಡಿಗಲ್ಲುಗಳು ಉರುಳಿ ಧುಮುಕುತ್ತಿದ್ದುದರಿಂದ ಮುಂದಿನವರು ಹಿಂದಿನವರ ಭಯದ ನೆರಳಿನಲ್ಲಿಯೇ ಸಾಗಬೇಕಿತ್ತು.” ನಾವು ಕತ್ತಿ ಹಿಡಿದವರಲ್ಲ. ಅತ್ತಿತ್ತ ಹಣುಕಿ, ದುರ್ಬಲ ಸಂದಿನ ಒಂದೆರಡು ಬಲ್ಲೆಗೈಗಳನ್ನು ಸರಿಸಿ, ಎತ್ತಿ, ತೀರಾ ಅನಿವಾರ್ಯವಾದಲ್ಲಿ ಬೂಟುಗಾಲಿನಲ್ಲಿ ತುಳಿದು ಮುರಿದು ಒಳ ನುಗ್ಗಿಯೇ ಬಿಟ್ಟೆವು. ಗೀರು ಗಾಯಗಳು, ಸಣ್ಣ ಪುಟ್ಟ ಬಟ್ಟೆ ಹರಿದುಕೊಳ್ಳುವುದು, ಹಾಯ್ ಹೂಯ್ ಉದ್ಗಾರಗಳು ನಡೆದೇ ಇತ್ತು. ಇನ್ನೊಬ್ಬರ ಬಟ್ಟೆಯಿಂದ ಕೊಕ್ಕೆ ಮುಳ್ಳು ಬಿಡಿಸಹೋಗಿ ತಮ್ಮ ಕೈಗೆ ಚುಚ್ಚಿಸಿಕೊಂಡವರು, ಹೆಜ್ಜೆ ಅನುಸರಣೆಯ ನಿಷ್ಠೆಯಲ್ಲಿ ಒಬ್ಬ ದಡಬಡಿಸಿದ ಜಾಗದಲ್ಲೇ ಮತ್ತೊಬ್ಬ ಕುಸಿದು ಕೂರುವುದು, ಮುಂದಿನವನು ಸರಿಸಿಬಿಟ್ಟ ಗೆಲ್ಲಿನ ಪೆಟ್ಟು ಹಿಂದಿನವ ತಿನ್ನುವುದು ಎಲ್ಲ ಮಾಮೂಲೀ ಸಂಗತಿಗಳು.

ನಾನು ಮೊದಲಾಳು. ಪ್ರಸನ್ನ, ದೇವಕಿ, ಭಟ್, ಅಭಯ, ಉಪಾಧ್ಯ, ಜೋನಾಸ್ ಮತ್ತು ದೇವು ಕ್ರಮದಲ್ಲಿ ಹಿಂಬಾಲಿಸಿದರು. ವಿಶೇಷವೇನೂ ಇಲ್ಲ ಎಂದುಕೊಳ್ಳುತ್ತಿದ್ದಂತೇ ಅಭಯ ಅರಿವಿಲ್ಲದೆ ದೊಡ್ಡ ಬಂಡೆಯೊಂದನ್ನು ಒಮ್ಮೆಗೆ ಅಡಿ ತಪ್ಪಿಸಿ “ಹ್ಹೋ” ಎಂದು ಬೊಬ್ಬಿಟ್ಟ. ಭಟ್ಟರು ಮಿಂಚಿನಂತೆ ಬದಿಗೆ ಸರಿದರು. ಅವರು ಅದುವರೆಗೆ ಆಧರಿಸಿಕೊಂಡಿದ್ದ ಗಟ್ಟಿ ಗಿಡವೊಂಡಕ್ಕೆ ಬಂಡೆ ಢೀ ಹೊಡೆದು, ನಿಧಾನವಾಗಿ ಹೊರಳಿ ಕೆಳಗಿನ ಕೊರಕಲಿಗೆ ಧುಮುಕಿತು. ದೇವಕಿ ಬಲಮೂಲೆಯಲ್ಲಿ ಮುಳ್ಳಕೈ ಒಂದನ್ನು ಸುಧಾರಿಸುವುದರಲ್ಲಿದ್ದಳು. ಪ್ರಸನ್ನ ಎಡಕ್ಕೆ ಸರಿಯುತ್ತಿದ್ದ. ಭೀಮ-ಬಂಡೆಯ ಬೀಳಿನ ನೇರ ಕೊಳ್ಳದಲ್ಲಿ ಇದ್ದವ ನಾನೊಬ್ಬನೇ! ಬೆದರಿ ಮರಗಟ್ಟಿದ ದೇವು ಲೆಕ್ಕದಲ್ಲಿ ಕನಿಷ್ಠ ಎರಡು ಜೀವ ಮುಕ್ತಿ ಪಥದಲ್ಲಿದ್ದವು. ದೇವಕಿಯ ‘ಅಶೋಕ್’ ಗಂಟಲಲ್ಲೇ ಹುಗಿದು ಹೋಗಿತ್ತು. ಪ್ರಸನ್ನನಿಗೆ ದೂಳು ಕಸದ ಸ್ನಾನದಲ್ಲಿ ಕಣ್ಣು ಕತ್ತಲಿಟ್ಟಿತ್ತು. ಕ್ಷಣಮೊದಲು ತನ್ನ ಕೈ ಆಧರಿಸಿದ್ದ ಗಿಡಕ್ಕಾದ ಜಜ್ಜು ಗಾಯದ ಭೀಕರತೆಯಿಂದ ಭಟ್ಟರು ಇನ್ನೂ ಹೊರಗೆ ಬಂದಿರಲಿಲ್ಲ. ಬಂಡೆ, ಜೊತೆಗೊಟ್ಟ ಕುಂಬು ಮರ, ಮಣ್ಣು, ಕಸ ಸೇರಿ ಭಾರೀ ಸದ್ದಿನೊಡನೆ ಬಿತ್ತೋ ಬಿತ್ತು!

[ನಾನು ಸಾಯಲಿಲ್ಲ ನಿಶ್ಚಯ. ಆದರೆ ಬಂಡೆಯ ಪರಿಣಾಮ? ಕಥೆ ದೈನಿಕವಿರಲಿ, ಸಾಪ್ತಾಹಿಕವಿರಲಿ ಕುತೂಹಲದ ಕಟ್ಟೆ ಕಟ್ಟುವವರು ಕೃಷಿಯ ಹಾಗೆ ಅಕಾಲದಲ್ಲೂ ಒಳ್ಳೆಯ ಬೆಳೆ ತೆಗೆಯುತ್ತಾರಂತೆ. ಮೂವತ್ತು ವರ್ಷಗಳ ಹಿಂದೆ, ರಂಗನಾಥಸ್ತಂಭ ಆರೋಹಣದ ಯಶಸ್ಸು ತಮ್ಮನಿಗೆ ಒಲಿದಾಗ, ‘ಅದೃಷ್ಟ’ ನನ್ನತ್ತ ದೃಷ್ಟಿಯೂ ಹರಿಸಿರಲಿಲ್ಲ. ಎಷ್ಟೋ ವರ್ಷ ಕಳೆದು, ಸ್ವಯಾರ್ಜಿತ ಪ್ರಥಮ ಪ್ರಯತ್ನ ನಡೆಸಿದೆ. ಅರವಿಂದ ಬಾಲಕೃಷ್ಣರಿಗೊಲಿದ ‘ಅದೃಷ್ಟ’ ನನಗಷ್ಟೇ ಕೈಕೊಟ್ಟಿತ್ತು. ಮೂರನೇ ಪ್ರಯತ್ನವಾದರೋ ಸಂಕಲ್ಪದಲ್ಲೇ ಆಸೆಕಂಗಳ ನೋಟಕ್ಕೇ ಮೀಸಲಾಗಿತ್ತು. ಇದು ಹಾಗಲ್ಲ ಎಂದೇ ಹೊರಟಿದ್ದರೂ ನಾಲ್ಕನೆಯದು ಐದನೆಯದಕ್ಕೆ ಮೆಟ್ಟುಗಲ್ಲೇ? ಅದೃಷ್ಟದಾಟದ ಹೊಸ್ತಿಲಲ್ಲಿ ಈ ಬಾರಿ ನಾನೇ ಎಡವಿದೆನೇ? ತಿಳಿಯಲು ಮುಂದಿನವಾರದವರೆಗೆ ನನ್ನ ದಾರಿ ಕಾಯ್ತೀರಲ್ಲಾ? ಬ್ಲಾಗಿನ ಪ್ರಧಾನ ಅರ್ಚಕ ನಾನೇ ಇರಬಹುದು. ಆದರೆ ಮರೆಯಬೇಡಿ, ನಿಮ್ಮ ಕುಶಿ, ಅಸಹನೆಗಳ ಮಂತ್ರ, ಸಮಿತ್ತುಗಳಿಂದಲೇ ಈ ಯಜ್ಞ ಸಂಪನ್ನವಾಗುತ್ತದೆ. ಮುಕ್ತವಾಗಿ ಮನಸ್ಸಿಗೆ ಕಂಡದ್ದು ಕೆಳಗೆ ತುಂಬಿ ಹೇಳ್ತೀರಾ “ಸ್ವಾಹಾ”?]

(ಮುಂದುವರಿಯುತ್ತದೆ)