ರಂಗನಾಥ ವಿಜಯ – ಭಾಗ ಐದು

“ಸುರುಳಿ ಸುತ್ತಿದ ಹಗ್ಗ ಬಿಡಿಸಿ, ಒಂದು ತುದಿಯನ್ನು ತನ್ನ ಸೊಂಟಕ್ಕೆ ಬಿಗಿದುಕೊಂಡು ಅಶೋಕರು ಚಕ್ರವ್ಯೂಹ ಪ್ರವೇಶಿಸಿದ ಅಭಿಮನ್ಯುವಿನಂತೆ ಕಣ್ಮರೆಯಾದರು. ದೇವಕಿಗೆ ಅಳುಕು, ಉಪಾಧ್ಯರಿಗೆ ನರಸೆಳೆತ, ಜೊನಾಸ್ ಬುರೂಸ್! ನಾನು?” ಬೆದರಿದ ಕಣ್ಣಿನಲ್ಲಿ ಎಲ್ಲ ಗ್ರಹಿಸುತ್ತ ಗಣಪತಿ ಭಟ್ಟರ ಸ್ವಗತ ನಡೆದಿತ್ತು. “ದೇವು ಸೊಂಟಕ್ಕೆ ಗಂಟು ಕೊಟ್ಟರು. ಮೇಲಿನಿಂದ ಅಭಯ ರೈಟ್ ಅಂದ. ನಾನು ಆ ಮೂವರ ಮೊತ್ತವೇ ಇರಬೇಕೆಂದುಕೊಳ್ಳುತ್ತಾ ಬಂಡೆ ಎದುರಿಸಿದೆ. ಕೆಳಮುಖವಾಗಿ ಹಿಡಿದ ಬೊಗಸೆ ಕೈಯಂತಿದ್ದ ೨೦-೨೫ ಅಡಿ ಎತ್ತರದ ಕೊರಕಲು – ಮೊದಲ ಸವಾಲು. ಅಂಚು ತುಳಿಯಬೇಕು, ಬಿರುಕಿಗೆ ಕಾಲು ಜಾರಬಾರದು. ಜಾರಿದರೆ ಕಾಲು ತುಂಡು ಗ್ಯಾರಂಟಿ. ಅವರಿವರ ಮಾರ್ಗದರ್ಶನದಲ್ಲಿ ಧೈರ್ಯ ಒಟ್ಟುಗೂಡಿಸಿ ಏರಿಯೇ ಬಿಟ್ಟೆ.”

ದೇವಕಿ, ಜೊನಾಸರು ಶಿಬಿರ ಸ್ಥಾನದತ್ತ ಪಾದ ಬೆಳೆಸಿದ್ದನ್ನು ನಾವು ಮೇಲಿನಿಂದ ನೋಡುತ್ತಾ ಇದ್ದೆವು. ನಾವು ಇಳಿದ ದಿಕ್ಕಿಗಿಂತಲೂ ಪಶ್ಚಿಮಕ್ಕೆ, ಅಂದರೆ ಹೆಚ್ಚು ಕಡಿಮೆ ಸ್ತಂಭದ ಬುಡದಿಂದ ಶಿಬಿರಸ್ಥಾನಕ್ಕೆ ನೇರ ಹೊಸ ಜಾಡು ಮೂಡಿಸುವುದೇ ಒಳ್ಳೆಯದೆಂದು ನಮಗೆ ಕಾಣಿಸಿತು. ಆ ಪ್ರಕಾರವೇ ಅವರಿಬ್ಬರು ಸಾಕಷ್ಟು ಮೇಲೇರಿದ್ದರು. ಹೊಸ ಮುಳ್ಳುಬಲ್ಲೆಗಳೊಡನೆ ಜಟಾಪಟಿ. ಮತ್ತಷ್ಟು ಸಡಿಲ ನೆಲದೊಡನೆ ಏಗಾಟ ಎಲ್ಲ ಮುಗಿಸಿ ಇನ್ನೇನು ತೆರೆಮೈ ಬಂತು. ಹುಲ್ಲಗುತ್ತಿಗಳನ್ನು ಬಾಚಿ ಹಿಡಿದು ಏರಿಬಿಡುತ್ತಾರೆಂದು ಭಾವಿಸುವಾಗ ಎದುರಾಯ್ತು ಮಳೆಗಾಲ ರೂಪಿಸಿದ್ದ ಭಾರೀ ಕೊರಕಲು. ಅಕ್ಷರಶಃ ಮಳೆಗಾಲದಲ್ಲಿ ಅಲ್ಲಿ ಜಲಪಾತವೇ ರೂಪುಗೊಳ್ಳುವುದಿರಬೇಕು; ಅಷ್ಟೂ ಕಡಿದು. ಹಗ್ಗದ ರಕ್ಷಣೆ, ಅನುಭವೀ ಶಿಲಾರೋಹಿಗಳ ಸಲಹೆ ಇಲ್ಲದೆ ಮುಂದುವರಿಯುವುದು ಅಸಾಧ್ಯ. ಕನಿಷ್ಠ ಅಡ್ಡ ಹಾಯ್ದು, ಇಳಿಜಾಡನ್ನು ಸೇರೋಣವೆಂದರೂ ಒಡ್ಡಿಕೊಳ್ಳದ ಅಸ್ಥಿರತೆ. ನಿಜ, ಎತ್ತರದಲ್ಲಿ ಕುಳಿತ ನಮ್ಮ ಬಿಟ್ಟಿಸಲಹೆಗಳು ಅವರ ನೆಲಮಟ್ಟದ ವಾಸ್ತವಗಳು ಕಾಣಿಸದೇ ಅವರಿಬ್ಬರನ್ನು ಸೋಲಿಸಿತ್ತು. ಆದರೆ ಅವರು ತಲ್ಲಣಿಸಲಿಲ್ಲ. ಇನ್ನೊಂದೇ ದಿಕ್ಕಿನಲ್ಲಿ ಹೊಸ ಪ್ರಯತ್ನ ಬೆಳೆಸುವ ಛಲದಲ್ಲಿ ಮತ್ತೆ ಸ್ತಂಭದ ಬುಡಕ್ಕೇ ಮರಳಿದರು. ಈಗ ಉಪಾಧ್ಯ ಅವರಿಗೆ ಹೊಸ ಸದಸ್ಯನಾಗಿ ಸೇರಿಕೊಂಡರು. ಮತ್ತೆ ಕಷ್ಟವೋ ಸುಖವೋ ಯೋಚನೆ ಬಿಟ್ಟು, ಒಟ್ಟು ತಂಡ ಇಳಿದು ಬಂದ ಹಳೆಯ ಜಾಡನ್ನೇ ಅನುಸರಿಸಿದರು.

ಸ್ತಂಭದ ಕುರಿತು ಬಂದ ಅಲಂಕಾರಿಕ ಮಾತುಗಳಲ್ಲಿ ಮೂಡಿದ ‘ಉತ್ತರೀಯ’ವೇ ನಮ್ಮ ಏರು ಜಾಡಾಗಬಹುದೆಂದು ಅಂದಾಜಿಸಿದ್ದೆ. ವಾಸ್ತವ ಇಲ್ಲೂ ಕಷ್ಟ ಸಾಧ್ಯವನ್ನೇ ನಮಗೆ ತೋರಿರಬೇಕು. ಆ ಉತ್ತರೀಯದ ತುದಿಮುಟ್ಟಲು ಸುಮಾರು ನೂರೈವತ್ತು ಅಡಿ ಯಾವುದೇ ಹುಲ್ಲು, ಹಸಿರು ನಮಗೆ ಆಧಾರವಾಗಿ ಒದಗುವಂತಿರಲಿಲ್ಲ. ಗಾದೆಗೆ (ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ) ಹೆಚ್ಚಿನ ಸಮ್ಮಾನ ಮಾಡುವಂತೆ ತೋರ ನೋಟಕ್ಕೆ ಆ ವಲಯ ನುಣ್ಣಗೇ ಕಾಣಿಸಿ, ಒಮ್ಮೆಗೆ ಅಪಾಯಕಾರೀ ಸವಾಲೇ ಇರಬೇಕೆಂದು ಅನ್ನಿಸಿದ್ದೂ ಹೌದು. ಬಹುಶಃ ಮಳೆಗಾಲದ ನೀರ ಮೊತ್ತ ಅಲ್ಲಿ ಅಗಲಕ್ಕೆ ಹರಡಿಕೊಂಡು, ತೀರಾ ಬಿರುಸಾಗಿ ಹರಿಯುವುದಿರಬೇಕು. ಹಾಗಾಗಿ ಮಣ್ಣು, ಕಾಲಕ್ರಮೇಣ ಹಸಿರು ಕುದುರಲು ಅವಕಾಶವೇ ಒದಗಿರದು. ಆದರೆ ಆ ಮೈಯನ್ನು ಸಮೀಪಿಸಿದಾಗ ಅದೃಷ್ಟವಶಾತ್ ಸಹಜ ಶಿಲಾರೋಹಿಗಳಿಗೆ ಅಥವಾ ತರಬೇತಾದವರಿಗೆ ಅಲ್ಲಿ ಹತ್ತುವ ಸೌಕರ್ಯಕ್ಕೆ ಧಾರಾಳ ಒಡಕೂ ಬಿರುಕೂ ಕಾಣಿಸಿದವು. ಹಾಗೇ ಏರುಕೋನವೂ ಸಾಕಷ್ಟು ಸುಲಭವೇ ಇತ್ತು. ಹಿಂದೆ ನಾವು ಏರಲು ಬಂದಾಗ ಬಹುಶಃ ಈ ಹಂತದ ದಕ್ಷಿಣ-ಪೂರ್ವ ಮೈ ನಮಗೆ ಆರಂಭ ಬಿಂದುವಾಗಿ ಒದಗಿದ್ದಿರಬೇಕು. ಆದರೆ ಆಗ ನಮಗೆ ಇಲ್ಲಿವರೆಗೆ ಮೆಟ್ಟಿಲುಗಳಂತೇ ಒದಗಿದ್ದ ಭಾರೀ ಮರ ಈ ಬಾರಿ ಕಾಣಿಸದೇ ಹೋದದ್ದು ಪ್ರಾಕೃತಿಕ ಬದಲಾವಣೆಯ ಸೂಚಿಯೋ (ಬಿದ್ದು ಹೋಗಿದ್ದಿರಬಹುದು) ನಮ್ಮ ಭೌಗೋಳಿಕ ಜ್ಞಾನದ ತಪ್ಪೋ ನಾನು ತೀರ್ಮಾನಿಸದಾದೆ. ಏನೇ ಇರಲಿ, ಈ ಬಾರಿ ಶುದ್ಧ ಶಿಲಾರೋಹಣದಲ್ಲೇ ಆ ಹಳೆಯ ಎತ್ತರವನ್ನು ತಲಪುವಂತಾಗಿತ್ತು.

ಬಂಡೆಯ ಪೂರ್ಣ ಪೂರ್ವ ಮೈಗೆ ಬರುತ್ತಿದ್ದಂತೆ ಆಳದ ಕೊಳ್ಳದ ದೃಶ್ಯಗಳು ಒಮ್ಮೆಲೆ ತೆರೆದುಕೊಂಡವು. ಅದನ್ನು ನೇರ ನೋಡಲಾಗದವರು, ಆ ದೃಶ್ಯಕ್ಕೆ ಕಣ್ಣುಮುಚ್ಚಿ ನಡೆಯಿರೆಂದರೂ ಭಾವನಾತ್ಮಕವಾಗಿ ಭಯ ಕಳಚಿಕೊಳ್ಳಲಾಗದವರು ಹಿಂದೆ ಸರಿದಾಗಿತ್ತು. ಆ ನೋಟದಲ್ಲಿ ಉಳಿದವರಿಗೆ ಅತಿ ಜಾಗರೂಕತೆಯಿಂದ ಮುಂದುವರಿಯಲು ನೋಟೀಸೂ ಸ್ಪಷ್ಟವಿತ್ತು. ಅರ್ಜುನ ಲಕ್ಷ್ಯ ಬೇಧನದ ಕರ್ಮ – ನೂರಾನಾಲ್ಕು ಸೋದರ ಕಣ್ಣುಗಳು ಸೋತಲ್ಲಿ ಗಿಣಿ ಕಣ್ಣು ಹೊಡೆದಂತೆ, ಈ ಕಾಲಿಗೆ ಯಾವ ಚಡಿ, ಆ ಕೈಗೆ ಯಾವ ಹಿಡಿ ಎಂದಷ್ಟೇ ನೋಡಿ, ಅಡಿಯ ಮೇಲೆ ಅಡಿ, ನಡಿ ನಡಿ ನಡಿ. ದೇವು ಒಪ್ಪಿಸಿಕೊಂಡ ಮಾತು ಕೇಳಿ, “ಔನ್ನತ್ಯ ಭೀತಿಯ ಮಾನಸಿಕ ತಡೆ ಇಲ್ಲದ ನನಗೂ ಭಟ್ಟರಿಗೂ ಮುಂದುವರಿಯುವುದರಲ್ಲಿ ಯಾವುದೇ ಆತಂಕವಿರಲಿಲ್ಲ. ವರ್ಧನರು ನೀಡಿದ ಬಿಲೇಯನ್ನು ಅಲ್ಲಿ ನಾವು ಅವಲಂಬಿಸುವ ಅಗತ್ಯವೇ ಇರಲಿಲ್ಲ. ಆದರೂ ಅದು ಇರುವ ಧೈರ್ಯದಿಂದಲೇ ನನ್ನ ಅನುಭವಕ್ಕೆ ದುಸ್ಸಾಧ್ಯವಾದ ಹೆಜ್ಜೆಗಳನ್ನು ಹಿಡಿತಗಳನ್ನು ಸಾಧಿಸುತ್ತ ಏರಿದೆ. ಹಿರಿಮಂಗನ ಬಾಲಕ್ಕೆ ಜೋತು ಬಿದ್ದಾಡಲು ಬಂದ ಕಿರಿಮಂಗಗಳಂತಿದ್ದೆವು ನಾವು.” ಹೀಗೆ ಏರಿ ಬಂದ ಜಾಡು ನೇರ ನಿಂತ ಬಂಡೆಮೈಗೆ ಮುಗಿದಿತ್ತು.

ಉತ್ತರೀಯದ ‘ಹಸುರು ಕುಚ್ಚು’ ಹದಿನೈದಿಪ್ಪತ್ತಡಿ ಮೇಲೆ ಕಾಣಿಸುತ್ತಿತ್ತು. ಆದರೆ ಈ ವ್ಯತ್ಯಾಸದಲ್ಲಿ ಬಂಡೆ ತುಸುವೇ ಉಬ್ಬಿತ್ತು; ಮಹಾಕಾಯನ (ರಂಗನಾಥ) ಹೊಟ್ಟೆಯಲ್ಲೊಂದು ಸಣ್ಣ ಮಾಂಸಲ ಮಡಿಕೆ! (ಬೊಜ್ಜಿನವರಿಗೆ ‘ಟಯರು’ ಎನ್ನುತ್ತಾರಲ್ಲ ಹಾಗೆ) ದೂರದ ನೋಟಕ್ಕೆ ಇದೂ ಸಪಾಟು ಮೈಯ ಭಾಗ. ಈ ಉಬ್ಬು, ನೇರ ಬಂಡೆ ಸಂಧಿಸುವ ಉದ್ದಕ್ಕೆ ಒಂದು ಕೊರಕಲೇನೋ ಮೇಲೇರಿತ್ತು. ಅದು ನಮ್ಮ ದೇಹ ಹೊಗಿಸಲಾಗದಷ್ಟು ಸಪುರ, ಹಿಡಿತಗಳಿಗೆ ದಕ್ಕದಷ್ಟು ಅಗಲವಿತ್ತು. ಸಂದಿನೊಳಗೆ ಬೂಟಿನ ತುದಿಗಾದರೂ ಒಂದು ಚಡಿ ಸಿಕ್ಕೀತೆ ಎಂದರೆ ಒಂದು ಸುಕ್ಕೂ ದಕ್ಕದ ನುಣುಪು. ಹಾಗೆ ಎತ್ತಿದ್ದ ಎಡಗಾಲನ್ನು ಕೊರಕಲಿನೊಳಗೆ ಪೂರ್ಣ ತೂರಿ, ಪಾದವನ್ನೇ ಇರುಕಿಸಿ (jamming), ಮೊದಲ ಹೆಜ್ಜೆ ಕಂಡುಕೊಂಡೆ. ಬಲಗಾಲಿನಿಂದ ನೆಲ ಒದ್ದು, ಚಿಮ್ಮಿ ಮತ್ತೆ ಮೇಲೆ ಎಡ ಮೊಣಗೈಯನ್ನು ಪಾದದಂತೇ ಇರುಕಿಸಿದೆ. ಜೊತೆಗೆ ಬಲ ಅಂಗೈಯನ್ನು ದೂರಕ್ಕೆ ಊರಿ ಆಧರಿಸಿಕೊಳ್ಳುತ್ತಿದ್ದಂತೆ ಬಲ ತುದಿಗಾಲಿಗೊಂದು ಬಂಡೆಯ ಸಪುರ ಚಡಿ ಸಿಕ್ಕಿತು. ಇಲ್ಲಿ ಅವಸರ ಸಲ್ಲ, ಸಿದ್ಧಸೂತ್ರಗಳನ್ನು ಹೊಸದೇ ಸಮಸ್ಯೆಗಳಿಗೆ ಅಳವಡಿಸುವ ತಾಳ್ಮೆ ಮುಖ್ಯ. ಬಲಗಾಲ ಮೇಲೆ ಭಾರಹಾಕಿ, ಎರಡೂ ಅಂಗೈಗಳನ್ನು ಜೋಡಿಸಿ ಹಿಮ್ಮುಖವಾಗಿ ಬಂಡೆ ಮೇಲೆ ಒತ್ತುಸನ್ನೆ ಮಾಡಿ, ನಿಧಾನಕ್ಕೆ ಮೇಲಿನ ಭದ್ರ ನೆಲೆ ತಲಪಿದೆ.

ಅನ್ವೇಷಣೆಗಳು ಮೇಲಿನಿಂದ ರಕ್ಷಣಾ ಹಗ್ಗಯಿರುವ ಶಿಲಾರೋಹಣದ ಅಭ್ಯಾಸದ ತರಗತಿಯಲ್ಲ. ಇಲ್ಲಿ ತುಸು ಚಡಪಡಿಕೆಯಂತೇ ತೋರುವ ಕ್ಷಣಗಳು ಕಾಣುವುದೂ ತಪ್ಪಲ್ಲ. ಇಂಥವು ಮುಂದಾಳಾದವನಿಗೆ ಸ್ವಲ್ಪ ಅಪಾಯಕಾರಿಯೂ ಅಷ್ಟೇ ಅನಿವಾರ್ಯವೂ ಹೌದು! ಈ ವಿಚಾರದಲ್ಲಿ ಶುದ್ಧ ಶಿಲಾರೋಹಣದಲ್ಲಿ ಅನುಭವ ಕಡಿಮೆಯಿದ್ದ ದೇವು ಉತ್ಪ್ರೇಕ್ಷೆ ನೋಡಿ. “ತೊಂಬತ್ತು ಡಿಗ್ರಿ ಏರನ್ನು, ವರ್ಧನರು ಯಾವುದೇ ಆಧಾರವಿಲ್ಲದೇ ಏರಿದ್ದು ನೋಡಿ, ಮಾತು ಬಾರದೆ ದಂಗಾಗಿ ಬಿಟ್ಟೆ. ಅದು ಬಿಸಿಲು, ಮಳೆ, ಗಾಳಿಗೆ ಅತಿ ಹೆಚ್ಚಾಗಿ ಪಕ್ಕಾದ ಶಿಲೆಯ ಭಾಗ. ಮರದ ತೊಗಟೆಯಂತೆ ಕಲ್ಲಿನ ಚಿಕ್ಕ ಚಿಕ್ಕ ಪದರಗಳು ಕಿತ್ತು ಬರುತ್ತಿದ್ದವು. ಅವನ್ನೂ ಬಳಸಿಕೊಂಡು ಏರುವುದು, ಇತರರನ್ನು ದಾಟಿಸುವುದು ಒಬ್ಬ ಪರಿಪೂರ್ಣ ಶಿಲಾರೋಹಿಯ ಶೇಕಡಾ ನೂರು ಕೌಶಲದ, ಶೇಕಡ ನೂರು ಆತ್ಮವಿಶ್ವಾಸದ, ಶೇಕಡಾ ಇನ್ನೂರು ಧೈರ್ಯದ ಪ್ರದರ್ಶನ.” ಇಲ್ಲಿ, ಇಂಥಲ್ಲಿ ಅಪಾಯದ ಮುಂಗಾಣ್ಕೆ ಮತ್ತು ಆ ಕುರಿತು ನನ್ನ ತಿಳುವಳಿಕೆಗೆ ನಿಲುಕಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಎರಡು ಥಿಯರಿ ಬಿಟ್ಟರೆ, ‘ಬೋರು, ಇದ್ಯಾರಿಗೆ ಬೇಕು’ ಎನ್ನಲಾರಿರಿ ಎಂದು ಭಾವಿಸುತ್ತೇನೆ.

ವಿಶಿಷ್ಟ ಸನ್ನಿವೇಶಗಳಲ್ಲಿ ಹಿಂದಿನವರು ಮುಂದಾಳನ್ನು ಎಚ್ಚರದಿಂದಲೇ ಗಮನಿಸುತ್ತಿರಬೇಕು. (ಇದರ ಕೊರತೆಯೇ ಅಲ್ಲವೇ ನಮ್ಮ ಪ್ರಜಾಪ್ರಭುತ್ವದ ಬಿಕ್ಕಳಿಕೆಗೆ ಕಾರಣ!) ಆಗ ಆಕಸ್ಮಿಕಗಳಲ್ಲಿ ಹಿಂದಿನವರ ಸಮಯಪ್ರಜ್ಞೆ ಮುಂದಾಳನ್ನೂ ಒಟ್ಟಾರೆ ತಂಡವನ್ನೂ ಅಪಾಯದಿಂದ ದೂರ ಮಾಡಬಹುದು. ಉದಾಹರಣೆಗೆ ಕೆಳಗೆ ನಿಂತವರು ಕೈ ನಿಲುಕುವವರೆಗೆ ಏರುವವನ ಜಾರುಪಾದವನ್ನು ಒತ್ತಿ ಆಧರಿಸಬಹುದು (ಏರಿದವನ ಪಾದ ಒತ್ತುವ ಕೆಲಸ!). ಅದು ಸಾಲದೇ ಆತ ಜಾರಿ ಕೆಳಬರುತ್ತಿದ್ದರೆ, ಪೂರ್ಣ ಆಘಾತಕ್ಕೊಳಗಾಗದಂತೆ ಆತನನ್ನು ಬಂಡೆಗೇ ಒತ್ತಿ ನಿಲ್ಲಿಸಲೂಬಹುದು. ಆದರೆ ಇವೆಲ್ಲಾ ನಿಜದ ಸುರಕ್ಷಾ ಕ್ರಮಗಳಲ್ಲ (ಶಾಸ್ತ್ರಾಧಾರವಿಲ್ಲ). ಇಲ್ಲೆಲ್ಲ ಕೆಳಗಿನವರ ವಿವೇಚನೆ, ಸಮಯಸ್ಫೂರ್ತಿ ಸ್ಪಷ್ಟವಿಲ್ಲದಿದ್ದರೆ ಅಪಾಯ ನಿವಾರಣೆಯ ಬದಲು ಅದು ಹೆಚ್ಚಬಹುದು! ಏರುವವನ ಬೂಟು ಮತ್ತು ಬಂಡೆಗಳ ಎಡೆಯಲ್ಲಿ ಆಧಾರ ಕಲ್ಪಿಸಹೊರಟವನ ಬೆರಳುಗಳು ಘಾಸಿಗೊಳ್ಳುವುದು ಕನಿಷ್ಠ. ಮತ್ತೆ ಹೆಚ್ಚು ಮೇಲಿನಿಂದ ಬೀಳುವವನನ್ನು ಹಿಡಿದು ನಿಲ್ಲಿಸುವ ‘ಅಮಾನುಷ’ ಕ್ರಿಯೆಯಲ್ಲಿ ರಕ್ಷಕನೇ ಜಖಂಗೊಳ್ಳುವ ಅಥವಾ ನಿಂತ ನೆಲೆಯನ್ನೇ ಕಳೆದುಕೊಂಡು ಇಬ್ಬರೂ ಪ್ರಪಾತಕ್ಕೆ ಉರುಳಿಹೋಗುವ ಹೆಚ್ಚಿನ ಅಪಾಯವನ್ನು ಖಂಡಿತಾ ಮರೆಯಬಾರದು. ಈ ಸೂಚನೆಗಳನ್ನು ಮರೆತವನ ಸ್ಥಿತಿ – ದುಡಿಮೆಯ ಪ್ರೀತಿಯಿಲ್ಲದವನಿಗೆ ಬಂಡವಾಳ ಕಲ್ಪಿಸಿದವನ, ಮುಳುಗುವವನ ಕೈಗೆ ಜುಟ್ಟುಕೊಟ್ಟವನಿಂದ ಭಿನ್ನವಲ್ಲ ಕಣಾ ಅತ್ರಿಪಿತಾ!

ನೈಜ ಶಿಲಾರೋಹಣ ಪಾಠದಲ್ಲಿ ಮೊದಲಿಗನೂ ಪರೋಕ್ಷವಾಗಿ ಹಗ್ಗದಿಂದ ರಕ್ಷಣೆ ಪಡೆಯುತ್ತಾನೆ. ಅಸಾಮಾನ್ಯ ತುಂಡುಗಲ್ಲುಗಳನ್ನು ಏರುವಲ್ಲಿ, ಕಲಿಕೆಗಾಗಿ ಬಂಡೆಗಳ ಕಠಿಣಮೈಯನ್ನೇ ಆಯ್ದು ಏರುವಲ್ಲಿ ಹೇಗಾದರೂ ಮುಂದಾಳಿಗೆ ಮೇಲಿನಿಂದಲೇ ರಕ್ಷಣಾಹಗ್ಗ ಒದಗುವಂತೆ ನೋಡಿಕೊಳ್ಳುವುದು ಕಡ್ಡಾಯವೇ ಇರುತ್ತದೆ. ಹಿಂದೊಮ್ಮೆ ಮೂಡಬಿದ್ರೆಯ ಕೊಡಂಗಲ್ಲು (ಮಹಾವೀರ ಕಾಲೇಜಿನ ಸಮೀಪವಿದೆ. ಸುಮಾರು ಎಂಬತ್ತಡಿ ಎತ್ತರದ, ಎಲ್ಲಾ ದಿಕ್ಕಿನಿಂದಲೂ ಕನಿಷ್ಠ ಲಂಬಕೋನದ ಏರಿಕೆಯ ಸವಾಲು) ಏರಲು ಹೋಗಿದ್ದೆವು. ಆಗ ಉದ್ದದ ಸಪುರ ಹಗ್ಗವೊಂದರ ಒಂದು ತುದಿಗೆ ಸಣ್ಣ ಕಲ್ಲು ಕಟ್ಟಿ, ಬಂಡೆಯ ನೆತ್ತಿ ಹಾದು ಆಚೆಗೆ ಬೀಳುವಂತೆ ಎಸೆದೆದಿದ್ದೆವು. ಅನಂತರ ಅದರ ಇನ್ನೊಂದು ತುದಿಗೆ ನಮ್ಮ (ಹೆಚ್ಚು ತೂಕದ) ರಕ್ಷಣಾ ಹಗ್ಗವನ್ನು ಕಟ್ಟಿ ಎಳೆದು ಮುಂದಾಳಿಗೆ ರಕ್ಷಣಾ ವ್ಯವಸ್ಥೆ ಮಾಡಿದ್ದು ಇಲ್ಲಿ ಸ್ಮರಣಾರ್ಹ (ರೇಖಾಚಿತ್ರ ನೋಡಿ). ರಂಗನಾಥ ಸ್ತಂಭದಲ್ಲಿ ನೆಲ ಬಿಡುವ ಮೊದಲ ಸುಮಾರು ಐವತ್ತಡಿಯ ಏರಿಕೆಯ ಹಂತದಲ್ಲಿ ನನಗೆ ಹಗ್ಗದ ರಕ್ಷಣೆ ಇರಲಿಲ್ಲ ನಿಜ. ಆದರೆ ಅದು ನನ್ನನುಭವಕ್ಕೆ ತೀರಾ ಸಾಮಾನ್ಯ ಏರಿಕೆಯಾದ್ದರಿಂದ ರಕ್ಷಣೆಯ ಪ್ರಶ್ನೆ ಬರಲಿಲ್ಲ. ಆದರೀಗ ನಾವು ನಿಂತ ನೆಲೆಯಿಂದ ಏರಿಕೆ ಹದಿನೈದಿಪ್ಪತ್ತಡಿಯೇ ಇದ್ದರೂ ಬೀಳು ನೂರಾರಡಿ ಆಳದ ಕೊಳ್ಳಕ್ಕೇ ಆಗಬಹುದಿತ್ತು. ಹಾಗಾಗಿ ಇಲ್ಲಿ ನನಗೂ ಹಗ್ಗದ ರಕ್ಷಣೆಯಿತ್ತು. ರಕ್ಷಕ ಕೊಳ್ಳಕ್ಕೆ ಮುಖ ಹಾಕಿ ಭದ್ರವಾಗಿ ನೆಲೆಯೂರಿ (ಸ್ಥಳಾನುಕೂಲ ನೋಡಿಕೊಂಡು ಕುಳಿತೂ ಇರಬಹುದು, ನಿಂತೂ ಇರಬಹುದು) ನಾನು ಏರಿದಂತೆ ಬರುವ ತುಸುವೇ ಜಗ್ಗಾಟಕ್ಕೆ ಹಗ್ಗ ಕೊಡುತ್ತಾ ಹೋದ. ಅಕಸ್ಮಾತ್ ನಾನು ಹತ್ತಡಿಯಿಂದ ಜಾರಿ ಉರುಳಿದ್ದರೂ ನೂರಾರಡಿ ಆಳಕ್ಕೆ ಅಪ್ಪಳಿಸುತ್ತಿರಲಿಲ್ಲ; ಖಚಿತವಾಗಿ ಇಪ್ಪತ್ತಡಿ ಅಂತರದಲ್ಲೇ ಅಂದರೆ ರಕ್ಷಕನಿಂದ ಕೇವಲ ಹತ್ತಡಿ ಕೆಳಗೇ ಸೊಂಟಕ್ಕೆ ಬಿಗಿದ ಹಗ್ಗದಲ್ಲಿ ನಿರಪಾಯವಾಗಿ ನೇಲುತ್ತಿದ್ದೆ. ಮತ್ತೆ ಹೊಸದೇ ಜಾಡನ್ನು ಅನುಸರಿಸಿ ರಕ್ಷಕನನ್ನು ಉತ್ತರಿಸಿ ಗುರಿ ಸಾಧಿಸುತ್ತಿದ್ದೆ. ಉರುಳುವಲ್ಲೂ ಮನಸ್ಸು ಸ್ಥಿರವಾಗಿಟ್ಟುಕೊಂಡವರು ಒಂದಿನಿತು ತರಚಲು ಗಾಯವೂ ಇಲ್ಲದೆ ಪಾರಾಗುವುದು ಹಿಂದೆ ನಾನು ಹಲವು ಬಾರಿ ಕಂಡದ್ದೇ ಇದೆ.

ಪ್ರಕೃತಿ ಸ್ತಂಭದ ಸಪಾಟಿಗೆ ಇಲ್ಲಿಂದ ತಿರುಪೇರು ಕೊಟ್ಟಿತ್ತು. ಸುಮಾರು ಹದಿನೈದು ಇಪ್ಪತ್ತಡಿ ಅಗಲಕ್ಕೆ ಅರುವತ್ತರಿಂದ ಎಪ್ಪತ್ತರ ಕೋನದಲ್ಲಿ ಏರಲು ಒದಗುವ ಓಣಿ. ಓಣಿಯ ಒಳ ಅಂಚಿನ ಉದ್ದಕ್ಕೆ ಶಾಖೋಪಶಾಖೆ ಹರಡಿ ಗಟ್ಟಿ ನಿಂತ ಗಿಡಗಳ (ಬೊನ್ಸಾಯ್ ಅಥವಾ ಕುಬ್ಜ ಮರಗಳ ಎನ್ನಬಹುದು) ಸಾಲೇ ಸಾಲು. ಇವೇ ಬಂಡೆಯಲ್ಲಿ ಸೀಳು ಮೂಡಿಸಿದ್ದೋ ಅಥವಾ ಪ್ರಾಕೃತಿಕ ಸೀಳಿನಲ್ಲಿ ಬೇರು ರೂಢಿಸಿದ್ದೋ ಎಂದು ತರ್ಕಿಸಲಾಗದ ಬಂಧ ಅಲ್ಲಿತ್ತು. ಆ ಅಂಚಿನಾಚೆ (ಓಣಿಯ ಎಡ ಮೂಲೆ ಎನ್ನಿ) ಗೋಡೆಮೈ, ಓಣಿಯ ಮೇಲೆ ಮುಂಚಾಚಿಕೊಂಡಿದ್ದದ್ದು ನಮ್ಮ ಅಂದಿನ ಯೋಜನೆ, ತಯಾರಿಗೆ ಕಲ್ಪಿಸಲಾಗದ ಸವಾಲು ಎನ್ನಲಡ್ಡಿಯಿಲ್ಲ. ಓಣಿಯ ಬಲ ಅಂಚು – ತೆರೆಮೈ ಆಕಾಶವೇ ಛತ್ತು, ಬಿತ್ತೋ ಭವಾನಿಪಾತ್ರೆಯೇ ಸ್ವತ್ತು! ಸಹಜವಾಗಿ ನಮಗೆ ಸ್ತಂಭದ ಪೂರ್ವಮೈಯ ಮುಕ್ಕಾಲಂಶದ ಏರು ಓಣಿಯ ಸಂದಿನ ಗುಂಟ, ಗಿಡಗಂಟಿಗಳೆಡೆಯ ವಿಹಾರವೇ ಆಯ್ತು. ಪ್ರಪಾತದಂಚಿನಲ್ಲಿ ನೇರ ಕೊಳ್ಳ ದಿಟ್ಟಿಸುತ್ತ, ಪ್ರತಿ ಹಿಡಿಕೆ ಕಳಚಿದಾಗ, ಹೆಜ್ಜೆ ಜಾರಿದಾಗ ಪತ್ರಿಕೆಗಳಲ್ಲಷ್ಟೇ ವರ್ತಮಾನವಾಗಿ, ಭೂತಕ್ಕೆ ಸಂದುಹೋಗುವ ಭಯ ಮರೆತು ಪಟ್ಟಾಂಗ ಹೊಡೆಯುತ್ತ ಏರಿದೆವು. (ರಕ್ಷಣಾಹಗ್ಗದ ಬಂಧನ ಮತ್ತು ಮೊದಲೇ ಹೇಳಿದ ಕಂಬಳಿಹುಳದ ಚಲನೆ ತಂಡಕ್ಕೆ ಉದ್ದಕ್ಕೂ ಕಡ್ಡಾಯ ಎನ್ನುವುದು ನೆನಪಿರಲಿ.)

ಚಾರಣದ ಗಂಡುಗೋವಿ ದೇವು ಸಾಧನೆಯ ಸಂತೋಷದಲ್ಲೇ ಹೇಳ್ತಾರೆ, “ಮೂರ್ನಾಲ್ಕು ನೀರಿನ ಬಾಟಲುಗಳೂ ತಿಂಡಿ ಹಣ್ಣುಗಳ ಸಣ್ಣ ಕಟ್ಟೂ ನನ್ನ ‘ಬೆಂಗಾವಲಿನ’ ಚೀಲದಲ್ಲಿದ್ದವು. ಏರುವಾಗ ಅದು ಓಲಾಡುತ್ತಾ ಉಪದ್ರವ ಕೊಡುತ್ತಿತ್ತು. ಪ್ರತಿ ಕಠಿಣ ಏರಿಕೆಯ ಮುನ್ನ ನಾನು ಚೀಲ ಕಳಚಿ, ಅದನ್ನು ಪ್ರತ್ಯೇಕ ಹಗ್ಗದಲ್ಲಿ ಮೇಲಿನವರು ಎಳೆದುಕೊಳ್ಳಬೇಕಾಗುತ್ತಿತ್ತು. ಸಾಮಾನ್ಯವಾಗಿ ಇತರರು ಬಿಲೇ ತೊಡರಿಸಿಕೊಳ್ಳುವಾಗ ಕುಣಿಕೆಯನ್ನು ಅಂಗಿ ಹಾಕಿದಂತೆ ಮೇಲಿನಿಂದ ಇಳಿಸಿಕೊಂಡರೆ, ನಾನು ಲಂಗ ಧರಿಸುವಂತೆ ಕೆಳಗಿನಿಂದ ಏರಿಸಬೇಕಾಗುತ್ತಿತ್ತು. ಈ ನನ್ನ ಗಂಟಜ್ಞಾನದಿಂದ ಏರುಜಾಡಿನಲ್ಲಿ ಕುಣಿಕೆ ತಯಾರು ಮಾಡಿಕೊಡುತ್ತಿದ್ದ ಅಭಯನಿಗೆ ಕಿರಿಕಿರಿ. ಇಳಿಜಾಡಿನಲ್ಲಿ ಅವನಪ್ಪನಿಗೆ ಹಾಸ್ಯಗೋಷ್ಠಿ. ನಿರಾಕಾರವೂ (ಟೀಕು: ನಿರ್ದಿಷ್ಟವಾದ ಆಕಾರವಿಲ್ಲದ್ದು ಎಂದು ವಾಚ್ಯಾರ್ಥವನ್ನು ಮಾತ್ರ ಗ್ರಹಿಸತಕ್ಕದ್ದು) ಪರಬ್ರಹ್ಮವೂ (ಟೀಕು: ಸ್ವಂತಕ್ಕೆ ಹೊರೆ, ಇತರರಿಗೆ ಅವಶ್ಯವಾದದ್ದು ಎಂದಷ್ಟೇ ಅರ್ಥ) ಆದ ಈ ಚೀಲ ಹೇರಿಕೊಂಡೇ ನಾನೊಮ್ಮೆ ಕುರುಡು ಹಂದಿಯಂತೆ ನುಗ್ಗಿದಾಗ ಬಂಡೆ ಮತ್ತು ಕೊಂಬೆಯ ನಡುವೆ ಸಿಕ್ಕಿಬಿದ್ದೆ. ಗೋಕುಲದ ನೆನಪಿನಲ್ಲಿ ಒಮ್ಮೆಗೆ ಮರರೂಪ ತಳೆದ ರಕ್ಕಸನ ಫಿತೂರಿಯೇ ಸರಿ ಎಂದುಕೊಂಡೆ. ಆದರೆ ನಾನು ದೇವರ ದೇವನಲ್ಲ, ಬರಿಯ ಹನೆಹಳ್ಳಿ ದೇವು! ಮುಂದಿಲ್ಲ, ಹಿಂದಿಲ್ಲದ ನನ್ನನ್ನು ಅಶೋಕರು ಪಾರುಗಾಣಿಸಿದರು.”

ರಾತ್ರಿ ಇಡೀ ಬೀಸಿದ ಗಾಳಿ ಈಗ ನಿಂತಿತ್ತು. ಬಿಸಿಲಿಗೆ ಕಾವು ಕೂಡಿತ್ತು. ರಕ್ಷಣೆಯ ಹಗ್ಗದ ವಿಲೇವಾರಿ, ಏರುವವರಿಗೆ ಸೂಚನೆಗಳ ನಮ್ಮದೇ ಧ್ವನಿ ಬಿಟ್ಟರೆ, ಇಡೀ ಕಣಿವೆ ನೀರವ ನಿಶ್ಚಲವಾಗಿ ನಮ್ಮನ್ನು ನೋಡುತ್ತಿರುವಂತೆ ಅನಿಸುತ್ತಿತ್ತು. ಒಂದೊಂದು ಮಜಲು ದಾಟಿದವರಿಗೆ ಗಿಡಗಳ ನೆರಳಿನಲ್ಲಿ ತುಸು ವಿಶ್ರಾಂತಿ, ಹೊತ್ತ ನೀರಂಡೆಯ ಸಾಂತ್ವನ. ಪ್ರಸನ್ನನ ಮಾಯಾಚೀಲ ಕೊಡುತ್ತಿದ್ದ ಸಿಹಿತಿಂಡಿ ಅಯಾಚಿತ ಬೋನಸ್!

ಕೆಳಗಿನ ಲೋಕದಲ್ಲಿ ದೇವಕಿ, ಜೋನಾಸರು ವಾಪಾಸಾದದ್ದು ನೋಡಿದ್ದೆವು. ಉಪಾಧ್ಯರು ಅವರನ್ನು ಸೇರಿದ್ದು ನಾನು ಕೇವಲ ಹುಯ್ಲುಗಳಲ್ಲಿ ಕೇಳಿಸಿಕೊಂಡಿದ್ದೆ. ಅವರು ಮರಗಳ ಟೊಪ್ಪಿ ಕಳೆದು, ಹುಲ್ಲುಮೈ ಸೇರಿ, ನಮ್ಮ ಕಣ್ಣಿಗೆ ಬೀಳಲು ಭಾರೀ ಸಮಯವನ್ನೇ ತೆಗೆದುಕೊಂಡರು. ನಾನು ಬಿಡುವಾದಾಗೆಲ್ಲಾ ‘ಹಿಂದುಳಿದವರಿಗಾಗಿ’ ಬೊಬ್ಬೆ ಸೇವೆ ನಡೆಸಿದ್ದೆ. (ವಾಸ್ತವದಲ್ಲಿ ನಾವು ಶಿಖರ ತಲಪುವಷ್ಟೇ ಮುಖ್ಯ ಇತರರ ಕ್ಷೇಮಸಮಾಚಾರ ಎಂಬುದು ಆಂತರ್ಯ.) ಮಲೆಗಳಲ್ಲಿ ದಾರಿ ತಪ್ಪಿಸುವ ಬಳ್ಳಿ ಎಂದು ಒಂದು ಸಸ್ಯಕ್ಕೆ ಜನಪದರು ಮಹತ್ವವನ್ನು ಕಲ್ಪಿಸಿದ್ದಾರೆ. ಅದರ ಅರ್ಥವ್ಯಾಪ್ತಿಯನ್ನು ಹಿಂದೆ ನಾವು ಅನೇಕ ಬಾರಿ ಉಪಾಧ್ಯರಲ್ಲೂ ಗುರುತಿಸಿದ್ದು ಉಂಟು! ಹಾಗಾಗಿ ಈ ಸಲ ಉಪಾಧ್ಯರಿರುವುದರಿಂದ ಸಹಜವಾಗಿ ದಾರಿ ತಪ್ಪಿತೋ? ದೇವಕಿ ಗೊಣಗದಿದ್ದರೂ (ಎಷ್ಟಿದ್ದರೂ ದುರ್ಬಲ ವರ್ಗವಲ್ಲವೇ! – ಕವಲು ಬರೆದವರು ಒಪ್ಪದೇ ಇರಬಹುದು ಎನ್ನುವುದು ಇಲ್ಲಿ ಕಾಲಾತಿಕ್ರಮಣದೋಷ!) ಅವಳನ್ನು ಸುಧಾರಿಸುವಲ್ಲಿ ಉಳಿದವರು ನಿಧಾನಿಗಳಾದರೋ? ದುರ್ಬಲ ಹಸ್ತ ಮತ್ತು ನಡುಗುವ ಕಾಲಿನ ಜೋನಾಸ್ ಸಂಕಟ ಹೆಚ್ಚಿತೋ ಎಂಬುದಕ್ಕೆಲ್ಲ ಉನ್ನತಮಟ್ಟದ ಆಯೋಗ ಹೊರಡಿಸಬೇಕಾದೀತು. ಅದೇನೇ ಇರಲಿ, ಇವರು ಕಡೆಗೂ ಬಯಲಾದದ್ದು ಉನ್ನತಮಟ್ಟದ ವೀಕ್ಷಕರ (ನಮ್ಮದಲ್ಲ) ಸಹಾಯದಿಂದ ಎನ್ನುವುದಂತೂ ನಿಜ. ಇದೇನಪ್ಪಾಂತ ಗಾಬರಿಯಾಗಬೇಡಿ – ಬಿಸಿಲೇರುತ್ತಿದ್ದಂತೆ ನಮ್ಮ ಶಿಬಿರ ಸ್ಥಾನದ ಬಳಿ ಕೆಲವು ಹಳ್ಳಿಗರು ಬಂದು ನಮ್ಮ ಆರೋಹಣ ವೀಕ್ಷಣೆ ನಡೆಸಿದ್ದರು. ಅವರು ಕಣಿವೆಯ ಅಂಚಿನಲ್ಲಿ ನಿಂತು ನಮ್ಮ ಮೂವರಿಗೆ ಮಾತಿನ ಬಲ, ದಿಕ್ಕು ಕೊಟ್ಟು ಮೇಲೇರಿಸಿಕೊಂಡಿದ್ದರು.

ನನ್ನ ಬೊಬ್ಬೆ ಸೇವೆ ಕುರಿತು ದೇವು ಪಡ್ಡೆತನ ಬರೆದದ್ದೇ ಬೇರೆ. “ಮಧುಮಲೆಗೆ ಮಧುಚಂದ್ರಕ್ಕೆ ಬಂದವರಂತೆ ವರ್ಧನ್ ಆಗಾಗ ಪ್ರೀತಿಪೂರ್ವಕವಾಗಿ, ಕೋಮಲವಾಗಿ ‘ದೇವಕೀಈಈಈಈಈ’ ಎಂದು ಅಬ್ಬರಿಸುತ್ತಿದ್ದದ್ದು ಗುಡುಗುಡಿಸಿ, ರಂಗನಾಥನನ್ನು ಅಲುಗಾಡಿಸಿ, ಗಿರಿಕಾನನಗಳಲ್ಲಿ ತುಂಬಿ, ತುಳುಕಿ, ಹರಿದು ಭವಾನಿ ಸಾಗರವನ್ನೇ ಸೇರುತ್ತಿತ್ತು. ಶಿಬಿರ ಸ್ಥಾನದಲ್ಲಿ ಸೇರಿದ್ದ ಕುತೂಹಲಿಗಳನ್ನೂ ಉಪಾಧ್ಯ ಜೋನಾಸರನ್ನುದ್ದೇಶಿಸಿ ನಾವೂ ಸಾಕಷ್ಟು ಬೊಬ್ಬೆ ಮಾತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಅಧ್ಯಾಪಕರಾದ ಗ್ರಹಚಾರಕ್ಕೆ ಭಟ್ಟರು ಮಾತ್ರ ಇಲ್ಲಿ ಕಿರುಚದೆ (ಕ್ಷಮಿಸಿ, ಇವರ ಶಾಲಾ ಕಿರುಚು ಅಥವಾ ಅಕಿರುಚುಗಳ ಬಗ್ಗೆ ನಾನು ಅಜ್ಞಾನಿ), ಗಂಭೀರವಾಗಿ ಮುಂದುವರಿದಿದ್ದರು.”

ಎರಡು ಉಪಕಥೆಗಳು: ನಮ್ಮ ಕಥಾನಕದ ಉಲ್ಟಾಚಿತ್ರ ನನ್ನ ತಮ್ಮ ಆನಂದನ ಅನುಭವ. ಅವರ ತಂಡ ಮೂವರದು – ಆನಂದ, ಪ್ರದೀಪ್ ಆರೋಹಿಗಳು. ಹತ್ತದ ನಾಯಕ ಗೋವಿಂದರಾಜ್. ಆನಂದ ಬರೆಯುತ್ತಾನೆ, “ನಾವು ಹತ್ತುವ ಒಂದೆರಡು ತಿಂಗಳ ಹಿಂದೆ ಯಾರೋ ಹುಚ್ಚ, ಒಂಟಿಯಾಗಿ ಪಿಲ್ಲರ್ ಹತ್ತಿದ್ದನಂತೆ. ಆತ ಕೊಡಿ ತಲಪಿ, ಒಂದು ಬಾವುಟ ಹಾರಿಸಿ, ಕಡೆಗೆ ಕೊಳ್ಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನಂತೆ. ಆ ಬಾವುಟ ಪಟಪಟ ಎಂದು ಸೊಡರ ಕುಡಿಯಂತೆ (ನಾನು ಬೀಯೇ ಪರೀಕ್ಷೆಗೆ ಓದುತ್ತಿದ್ದಾಗ ‘ಚಪಲೆ ಸೊಡರಕುಡಿಯಂ ಪೋಲ್ವಳ್’ ಎಂದು ಗಟ್ಟಿ ಮಾಡುತ್ತಿದ್ದದ್ದು ಇವನು ಕೇಳಿಸಿಕೊಂಡ ಪರಿಣಾಮ ಅಷ್ಟೇ – ಅಶೋಕ) ನಾವು ಹತ್ತುವಂದೂ ತೊನೆದಾಡುತ್ತಿತ್ತು. ಬೆಳಿಗ್ಗೆ ಮೊದಲು ನಾವು ಮೂವರೂ ಕಣಿವೆಯ ಬಲ ಪಾರ್ಶ್ವದೆಡೆಗೆ ಇಳಿದು ಹೋದೆವು. ಕಾಡು ಕಡಿದು ಕಡಿದು ಬಂಡೆಯ ಬುಡ ತಲಪಿದೆವು. ಮುಂದೆ ಮೆಗಾಫೋನ್ ಹಿಡಿದು ಗೋವಿಂದರಾಜರು ಕೊಡುತ್ತಿದ್ದ ನಿರ್ದೇಶನದಂತೆ ನಾವಿಬ್ಬರು ಪಿಲ್ಲರ್ ಏರಲು ತೊಡಗಿದೆವು.

“ಮೊದಲ ಐವತ್ತಡಿ ಮಣ್ಣು, ಬಂಡೆ, ಗಿಡ ಅಂತ ಏರಿದೆವು. ನಂತರ ಒಂದು ಸಣ್ಣ ಚಿಮಣಿ. ನಾವು ಮೇಲೆ ಮೇಲೆ ಹೋದಂತೆ ಅತ್ತ ಗೋವಿಂದರಾಜ್ ಇಳಿದ ದಾರಿಯಲ್ಲೇ ವಾಪಾಸು ಹೋಗುತ್ತಾ ದುರ್ಬೀನಿನಲ್ಲಿ ನೋಡಿ ನಮಗೆ ಸೂಚನೆಗಳನ್ನು ಕೊಡುತ್ತಾ ಇದ್ದರು. ಅರ್ಧ ಏರಿದ ಮೇಲೆ ದಾರಿ ಸಿಗದೆ ನಾವು ಕಂಬದ ಆಚೆಗೆ ಹೋಗಬೇಕಾಯ್ತು. ಗುರುಗಳ ಸಾನ್ನಿಧ್ಯವಿಲ್ಲದೇ ತಬ್ಬಲಿಗಳಂತಾದ ನಾವು ಪ್ರಪಾತದಂಚಿನಲ್ಲಿ ತೆವಳೀ ತೆವಳೀ…”

ಅದೇ ನನ್ನ ಮೊದಲ ಪ್ರಯತ್ನದ ತಂಡದ ಸದಸ್ಯ ಬಾಲಕೃಷ್ಣ ಅನಾಥಪ್ರಜ್ಞೆ ವಿದೂರ. ನಾವು ನಾಲ್ಕು ಜನ ಎರಡು ಬೈಕುಗಳಲ್ಲಿ ದಕ್ಷಿಣ ಭಾರತ ಸುತ್ತುತ್ತಾ ಕೋತಗೇರಿ ತಲಪಿದ್ದು ಮತ್ತೆ ಈಗಾಗಲೇ ದೇವಕಿ ಹೇಳಿದಂತೆ ಸ್ತಂಭ ನಾವೆಲ್ಲ ಮುಟ್ಟಿದ್ದು ನಿಮಗೆ ಗೊತ್ತೇ ಇದೆ. ಆದರೆ ಹತ್ತುವ ಪ್ರಯತ್ನದಲ್ಲಿ ನನಗೆ ಸ್ವಲ್ಪ ‘ಪಾಠಬೇಧ’ ಉಂಟು! ಅಂದು ನಾವು ಕೀಲುಕೋತಗೇರಿಯಿಂದ ಹಿಡಿದ ಮಾರ್ಗದರ್ಶಿ ಮಹಾಕುಡುಕ. ಸಹಜವಾಗಿ ಹಿಂದುಳಿಯ ಬಯಸಿದ ದೇವಕಿಯನ್ನು ಅವನ ಜೊತೆ ಬಿಟ್ಟು ಹೋಗಲಾಗದ ದ್ವಂದ್ವದಲ್ಲಿ ನಾನೂ ಹಿಂದುಳಿದೆ. ಅರವಿಂದರಾವ್, ಬಾಲಕೃಷ್ಣ ಮೊದಲು ಮರ ಮತ್ತೆ ತೋರಬಳ್ಳಿ ತುಳಿದು, ಚಕ್ಕೆ ಎದ್ದ ಬಂಡೆಯಂಚುಗಳನ್ನು ಹಿಡಿದು ಸ್ತಂಭದ ಮೈ ತಲಪಿದ್ದರು. ಎಡಕ್ಕೆ ಸರಿಯೋಣವೆಂದರೆ ಸ್ವಲ್ಪದರಲ್ಲೇ ಆ ಕೊರಕಲ ಸರಣಿ ಸ್ತಂಭದ ಪಶ್ಚಿಮ ಮೈಯ ಪ್ರಪಾತದಂಚಿನಲ್ಲಿ ಮುಗಿದಿತ್ತು. ಹತ್ತು ಹೆಜ್ಜೆ ಹಿಂದೆ ಬಂದು, ಬಲಕ್ಕೆ ನೇರ ಮೇಲೇರುವ (ಮಳೆಗಾಲದ) ನೀರಜಾಡು ಅನುಸರಿಸಿದರು. ಸುಮಾರು ನೂರೆಂಬತ್ತು ಮೀಟರ್ ಕಳೆದ ಮೇಲೆ (ಬಾಲಣ್ಣ ಒಯ್ದ ರಕ್ಷಣಾ ಹಗ್ಗದ ಅಳತೆಯಿಟ್ಟಿದ್ದ) ಸ್ವಲ್ಪ ಮಟ್ಟಸ ನೆಲ. ಆಚೆ ಸುಮಾರು ಹತ್ತಿಪ್ಪತ್ತಡಿ ಎತ್ತರದ ಅಪ್ಪಟ ಗೋಡೆಯಂಥಾ ಬಂಡೆ. ಅವರು ಪರಸ್ಪರ ಕೈಕೊಟ್ಟು ಎತ್ತಿ, ಎಳೆದು ಅದನ್ನುತ್ತರಿಸಿದರು. ಮತ್ತಿನ ವಿವರಗಳನ್ನು ದಾಖಲಿಸುವಲ್ಲಿ ಬಾಲಣ್ಣ ಯಾಕೋ ಅವಸರ ಮಾಡಿದಂತನ್ನಿಸುತ್ತದೆ. ಆತನ ನೆನಪಿನ ಲಹರಿ ಹೇಳುತ್ತದೆ, “ನಂತ್ರ ನಾವು ಬಹಳ ಸಲೀಸಾಗಿ ಮೇಲೆ ಹೋಗಿದ್ದೆವು. ಶಿಖರದಲ್ಲಿ ಹದಿನೈದು ಇಪ್ಪತ್ತು ಮಿನಿಟಿನ ವಿಶ್ರಾಂತಿ. ಹತ್ತಲು ಸುಮಾರು ಒಂದೂವರೆ ಗಂಟೆ ಬಳಸಿದ್ದರೆ ಇಳಿಯಲು ಕೇವಲ ಇಪ್ಪತ್ತರಿಂದ ಇಪ್ಪತ್ತೈದು ಮಿನಿಟು ಮಾತ್ರ” ಎಂದು ಬಾಲಣ್ಣ ಮುಗಿಸುತ್ತಾರೆ.

ದೈತ್ಯರಾಯನ ಹಸಿರು ಕಲಾಪತ್ತು: ಕಲ್ಲಿನೆಡೆಯ ಗಿಡಗಳು ಒಂದು ರೀತಿಯಲ್ಲಿ ಕುಬ್ಜ ವೃಕ್ಷಗಳೇ (ಪ್ರಾಕೃತಿಕವಾಗಿಯೇ ಬೊನ್ಸಾಯ್) ಆಗಿದ್ದವು. ಕಠಿಣ ಪರಿಸರದಲ್ಲಿ ನೆಲ ನೀರು ಹಿಡಿಯುವ ಹಠದಲ್ಲಿ ಗಾತ್ರಮಹತ್ತು ಗಳಿಸದಿದ್ದರೂ ಕಸುವಿನಲ್ಲಿ ಅಸಾಮಾನ್ಯವಿದ್ದವು. ಎಲ್ಲೂ ಮುರಿ, ಕಡಿ ಸಂಸ್ಕೃತಿ ನಮ್ಮದಲ್ಲ. ಆದರೆ ಅನಿವಾರ್ಯ ಎಂದು ಕಾಣಿಸಿದಲ್ಲೂ ಈ ಗಿಡದಂತಿರುವ ಮರಗಳು ಮುರಿಯುವುದಿರಲಿ, ಬಗ್ಗಲೂ ಇಲ್ಲ! (ನಾವು ಕತ್ತಿ ಒಯ್ದೇ ಇರಲಿಲ್ಲ) ನಾವು ಅವುಗಳ ಎಡೆಯಲ್ಲಿ ತೂರಿ, ಒಮ್ಮೊಮ್ಮೆ ಕೊಂಬೆ ಏರಿ ಮುಂದುವರಿದೆವು. ಇದರಿಂದ ಕೆಲವೊಮ್ಮೆ ನಾವು ಪರಸ್ಪರ ಬಂಧಿಸಿಕೊಂಡಿದ್ದ ಹಗ್ಗ ದೊಡ್ಡಾಳನ್ನು ಸಣ್ಣ ಸಂದಿನಲ್ಲಿ ನುಗ್ಗುವಂತೆಯೂ ಗಿಡ್ಡಾಳಿಗೆ ಎತ್ತರದ ಕೊಂಬೆ ಹತ್ತಿಳಿಯುವಂತೆಯೂ ಶಿಕ್ಷೆ ಕೊಟ್ಟದ್ದಿದೆ. ತೀರಾ ಫಜೀತಿಗಿಟ್ಟುಕೊಂಡಲ್ಲಿ ಕೆಲವರು ಹಗ್ಗದಿಂದ ತಮ್ಮನ್ನು ಬೇರ್ಪಡಿಸಿಕೊಂಡು, ಹುಶಾರಾಗಿ ಎದುರಾದ ಅಡ್ಡಿಯನ್ನುತ್ತರಿಸಿ, ಮತ್ತೆ ಹಗ್ಗಕ್ಕೆ ಸೇರಿ ಮುಂದುವರಿದದ್ದೂ ಇದೆ. ಹೆಚ್ಚುಕಡಿಮೆ ಮುಕ್ಕಾಲು ಸ್ತಂಭ ಏರಿ ಮುಗಿಯಿತೆನ್ನುವಲ್ಲಿಗೆ (ಹಸಿರು ಕಲಾಪತ್ತಿನ ಶಲ್ಯ ದೈತ್ಯನ ಭುಜಕ್ಕೇ ಮುಗಿದಂತೆ) ತಿರುಪೇರಿನ ಕೊನೆ ಬಂತು. ಜೊತೆಗೆ ಮುಂದೆ ನೈಜ ಏರಿಕೆ ಅಸಾಧ್ಯವೆನ್ನುವಂತೆ ಬಂಡೆ ಎದ್ದು ನಿಂತಿತ್ತು! ಓಣಿಯ ಒಳ ಅಂಚಿಗೆ ನೇರವಾಗಿ ಬಂಡೆ ಗೋಡೆಯಲ್ಲಿ ಆಳವಾದೊಂದು ಬಿರುಕು ಮಾತ್ರ ಉಳಿದಿತ್ತು. ಸುಮಾರು ನೂರಡಿ ಮೇಲೆ, ಆ ಗೋಡೆ ಮುಗಿದಂತೆ ತೋರುವಲ್ಲಿಂದ ಹಸಿರು ಇಣುಕಿ ನಮ್ಮನ್ನಣಕಿಸಿತು. ಅದನ್ನೇರುವ ಅಂದಾಜೂ ಅಂದು ನಾವು ಮಾಡುವಂತಿರಲಿಲ್ಲ. ಮಿತಿಯ ಅರಿವಿನೊಡನೆ ಶಿಖರ ಸಾಧನೆ (ಇಲ್ಲವೇ ಆರೋಗ್ಯಪೂರ್ಣ ವಾಪಾಸಾತಿ) ನಮ್ಮ ಗುರಿ. ಪ್ರಾಣವನ್ನೇ ಪಣವಾಗಿಟ್ಟು ಏರಲು ಹೊರಟು ಇನ್ನೊಂದೇ ಹೆಚ್ಚಿನ ಸಿದ್ಧತೆಯ ಆರೋಹಣಾವಕಾಶವನ್ನು (ಜೊತೆಗೆ ಜೀವವನ್ನೂ!) ಕಳೆದುಕೊಳ್ಳುವುದು ವಿವೇಚನಾಶಾಲಿಯಾದ ಪರ್ವತಾರೋಹಿಗೆ ಹೇಳಿದ್ದಲ್ಲ. ಸರಿ, ಕತ್ತಿನವರೆಗೆ ಬಂದವರನ್ನು ನೆತ್ತಿಗೇರಿಸಿಕೊಳ್ಳದ ರಂಗನಾಥನನ್ನು ಇನ್ನೊಂದೇ ಸಾಹಸಯಾನದಲ್ಲಿ ಒಲಿಸಿಕೊಳ್ಳುವುದಾಯ್ತು ಎಂದು ಹೇಳಿಕೊಂಡೆವು. ಆನಂದನದ್ದೆಲ್ಲೋ ಸರಬುರುಡೆ ಇರಬೇಕು, ಬಾಲಣ್ಣ ಹೇಳಿದ ನೆತ್ತಿ ರಂಗನಾಥ ಸ್ತಂಭದ್ದಲ್ಲ, ಅರವಿಂದರದ್ದಿರಬೇಕು ಎಂದೆಲ್ಲಾ ಸಮಾಧಾನಿಸಿಕೊಂಡೆವು. ಅವರೋಹಣಪರ್ವಕ್ಕೂ ಮೊದಲು ಕೇವಲ ಕುತೂಹಲದಲ್ಲಿ ಓಣಿಯೂ ಗೋಡೆಯೂ ಸೇರಿದ ಸಂದಿನಲ್ಲಿದ್ದ ಹಸಿರಿನ ಆಧಾರದಲ್ಲೇ ಓಣಿಯ ಬಲ ಅಂಚಿಗೆ ಅಂದರೆ ಪ್ರಪಾತದಂಚಿಗೆ ಮೆಲ್ಲನೆ ಸರಿದೆವು. ಆ ಜಾಗ ದೂರ ನೋಟಕ್ಕೂ ಸ್ಪಷ್ಟವಾಗಿ ದೈತ್ಯರಾಯನ ಭುಜದ ಕೊನೆಯಂತೇ ತೋರುವ ಪ್ರದೇಶ. ಅಂದರೆ ದಕ್ಷಿಣ ಅಂಚಿನಲ್ಲಿ ಏರಿಕೆಗೆ ತೊಡಗಿದ್ದ ನಾವು, ಪೂರ್ಣ ಪೂರ್ವ ಮೈಯನ್ನು ಬಳಸಿ, ಬಂಡೆಯ ಉತ್ತರ ಅಂಚನ್ನು ಸೇರಿದ್ದಾಗಿತ್ತು.

ಯಾವುದೇ ಕಾಡುಬಂಡೆಯ ನೆತ್ತಿಯಲ್ಲಿ ಭದ್ರ ಆಧಾರಕ್ಕೆ ಬಿಗಿದು, ಕೊಳ್ಳದಾಳದ ನೆಲ ಮುಟ್ಟುವಂತೆ ಬಿಟ್ಟ ಸ್ಥಿರ ಹಗ್ಗವನ್ನು ವಿವಿಧ ಕ್ರಮಗಳಲ್ಲಿ ಬಳಸಿಕೊಂಡು ಇಳಿಯುವುದು (ಈ ತಂತ್ರವನ್ನು ರ್ಯಾಪೆಲಿಂಗ್ ಎನ್ನುತ್ತೇವೆ) ನಿಜಕ್ಕೂ ರೋಮಾಂಚಕಾರಿ ಅನುಭವ. ನನ್ನ ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆಯ ದಿನಗಳಲ್ಲಿ ಪಾಂಡವಪುರದ ಕುಂತಿಬೆಟ್ಟ ನಮಗೆ ಇಂಥಾ ಶಿಲಾವರೋಹಣ ತಂತ್ರಾಭ್ಯಾಸಕ್ಕೆ ಅತ್ಯಂತ ಎತ್ತರದ ಅವಕಾಶವನ್ನು (ಸುಮಾರು ಮುನ್ನೂರಡಿ) ಒದಗಿಸುತ್ತಿತ್ತು. ಅಲ್ಲೂ ಕೊಳ್ಳವನ್ನು ನೇರ ದೃಷ್ಟಿಸುತ್ತ, ದೇಹವನ್ನು ಸೆಟೆಸಿ ಬಂಡೆ ಮೈಗೆ ಲಂಬವಾಗಿಟ್ಟುಕೊಂಡು ಕೊಳ್ಳದಾಳಕ್ಕೆ ಒಂದೊಂದೇ ಹೆಜ್ಜೆ ಹಾಕುವ ಸ್ಟೊಮಕ್ ರ್ಯಾಪ್ಲಿಂಗ್ ಮಾಡುತ್ತಿದ್ದ ಕೆಲವೇ ಗಟ್ಟಿ ಎದೆಗಳಲ್ಲಿ ನನ್ನದೂ ಒಂದು. ಅಂಥವನಿಗೂ ಇಲ್ಲಿ, ರಂಗನಾಥ ಸ್ತಂಭದ ಕನಿಷ್ಠ ಎಂಟನೂರು ಅಡಿ ಆಳವನ್ನು ನೇರ ನೋಡುವ ‘ಭುಜ’ದ ಅಂಚಿಗೆ ಬಂದಾಗ ಒಮ್ಮೆ ಎದೆಬಡಿತದ ಲಯತಪ್ಪುವುದು ಎನ್ನುತ್ತಾರಲ್ಲ ಅಂತ ಅನುಭವ! ಭವಾನಿಕೊಳ್ಳದಾಕಳಿಕೆ ಎಲ್ಲಿ ನಮ್ಮನ್ನು ಸೆಳೆದುಬಿಡುತ್ತದೋ ಎನ್ನುವ ಭಯ. ಮಂಗಬಂಡೆ ಕುರಿತು ಹುಡುಕಿದರೆ ನೆಲದಲ್ಲೊಂದು ಬೊಟ್ಟು. ನಮ್ಮ ಶಿಬಿರಸ್ಥಾನ ಹೆಚ್ಚುಕಡಿಮೆ ಮರೆಯಾಗಿತ್ತು. ಉಪಾಧ್ಯ ಮತ್ತು ದೇವಕಿ ರಕ್ಕಸ ಕಕ್ಕಸಿನತ್ತ ನಡೆದು ಹೋಗಿದ್ದುದರಿಂದ ನಮಗೆ ಅಸ್ಪಷ್ಟ ಕ್ಷುದ್ರ ಜೀವಿಗಳಂತೆ ತೋರಿದರು. ಬೊಬ್ಬೆ ವಿನಿಮಯದಲ್ಲಿ ನಮ್ಮ ನಿರಾಶೆಯನ್ನು ಹುಗಿದಿಟ್ಟರೂ ಸವೆದ ಜಾಡನ್ನು ಮರಳಿ ಸವೆಸಲು ತಿರುಗಿದೆವು.

(ಮುಂದುವರಿಯುವುದು)

[ಮೂರಕ್ಕೆ ಮುಕ್ತಾಯ ಎನ್ನುವ ಆಡುನುಡಿ ಹುಸಿಯಾಯ್ತೇ? ಇಷ್ಟು ಹತ್ತಿರ ಆದರೂ ಅಷ್ಟು ದೂರ ಎನ್ನುವಂಥಾ ಸ್ಥಿತಿ ನಮ್ಮದು.ತಾದ್ದಕ್ಕೆ ಇನ್ನೊಂದೇ ಸಾಹಸಯಾತ್ರೆ ಮುಂದಿನ ಕಂತೇ? ಇವೇ ಮುಂತಾದ ಪ್ರಶ್ನೆಗಳು ಆರನೆಯ ಕಂತಿನವರೆಗೆ ನಿಮ್ಮನ್ನು ಕಂತಿರಲಿ. ಪರಿಣಾಮದಲ್ಲಿ ಏಳುವ ನಿಮ್ಮ ‘ಹಾಹಾಕಾರ’ಕ್ಕೆ ಅರ್ಥಪೂರ್ಣ ಶಬ್ದಗಳ ಜೋಡಣೆ ಮಾಡಿ, ಕೆಳಗೆ ದಾಖಲಿಸುತ್ತೀರಾಗಿ ನಂಬಿದ್ದೇನೆ.]