ಚಿಕ್ಕಾಸಿನ ಕೂಲಿಗೆ ಯಾರ್ಯಾರದೋ ಕಾರು ತೊಳೆಯುತ್ತಿದ್ದ ಹುಡುಗನಿಗೆ ಸಮೀಪದ ದೇವಾಲಯದ ವಠಾರದಿಂದ ‘ಯಕ್ಷ ಸಂಗೀತ’ಕೇಳಿದ್ದು, ಆಕರ್ಷಿತನಾದ್ದು ಆಶ್ಚರ್ಯವಲ್ಲ. ಹುಡುಗನ ಕುತೂಹಲ ಕಮರದಂತೆ ಕಲಿಸಿಕೊಟ್ಟ ಗುರು, ಕಿವಿಗೆ ಬಿದ್ದದ್ದು ಮನಸ್ಸು ದೇಹವನ್ನೇ ಏನು ಇಂದು ‘ಬೆಳೆದು ನಿಂತ ಹುಡುಗನ’ ಬದುಕನ್ನೇ ಆವರಿಸಿದ್ದು ಆಶ್ಚರ್ಯ. ಅಂಥವರು ರೂಢಿಯ ಜಾಡಿನಲ್ಲಿ ಮಾತಿನ ಗಾಡಿ ಹೊಡೆಯುವುದಾಗಲೀ ದೇಹದಂಡನೆಯಲ್ಲಿ ನಿರ್ವಂಚನೆಯ ಕಸುಬುಗಾರಿಕೆ ತೋರುವುದಾಗಲೀ ಇದು ಮೊದಲಲ್ಲ. ಆದರೆ ಆ ಅಭಿವ್ಯಕ್ತಿಯ ಶಿಲ್ಪಕ್ಕೆ ಕುಂದು ಬಾರದಂತೆ ಮರೆತುಹೋದ ಕುಸುರಿಯನ್ನು ಹುಡುಕಿ ತಂದು ಸೇರಿಸಿ, ಇವರಂತೆ ಭೂರಿ ಸಮಾರಾಧನೆ ನಡೆಸಿದವರು ಹಿಂದಿಲ್ಲ (ಮುಂದೆ ಇರಲಾರದು!) ಬಾಲ್ಯದಲ್ಲಿ ಅಕ್ಷರಜ್ಞಾನ ಅರ್ಥಾತ್ ಕಲಿಕೆಯ ಔಪಚಾರಿಕ ದ್ವಾರವನ್ನು ಅಷ್ಟಾಗಿ ಹಾದುಹೋಗಲಾಗದವರೂ ಲೋಕ ಶಿಕ್ಷಣದಲ್ಲಿ, ಕಾಲಪ್ರವಾಹದ ಸವಕಳಿಯಲ್ಲಿ ಗುರುವಾಗಿ ಸಂಪನ್ಮೂಲ ವ್ಯಕ್ತಿಯಾಗಿ ತೋರುವುದು ವಿಶೇಷವಲ್ಲ.

ಇಂದೂ ಹೊಟ್ಟೆಪಾಡು ಮುಖ್ಯವಾಗಿ ಯಕ್ಷಶಿಕ್ಷಣಕ್ಕೆ ಬಂದು, ಅಕ್ಷರಕ್ಕೆರವಾಗುವ ಎಳೆಜೀವಗಳಿಗೆ ಸಂಜೀವವಾಗುವ, ಯಕ್ಷಶಿಕ್ಷಣದೊಡನೆ ಔಪಚಾರಿಕ ವಿದ್ಯೆಯನ್ನೂ ಒದಗಿಸುವ ಮಹಾಗುರುತನ ಗುರುತರವಾದದ್ದು, ಸದ್ಯ ಭಾರತದ ಸಂದರ್ಭದಲ್ಲಿ ಹೀಗೊಂದು ಸಾಧನೆಯನ್ನು ಕಾಣಿಸುತ್ತಿರುವ ಎರಡನೆಯ ಸಂಸ್ಥೆ – ಉಡುಪಿಯ ಎಂ.ಜಿ.ಎಂ ಕಾಲೇಜಿನಾಶ್ರಯದ ಯಕ್ಷಗಾನ ಕೇಂದ್ರ (ವರ್ತಮಾನದ ಸಮರ್ಥ ನಿರ್ದೇಶಕ ಪ್ರೊ| ಹೆರಂಜೆ ಕೃಷ್ಣ ಭಟ್). ಕೇಂದ್ರದ ಒಡನಾಡಿದ ವ್ಯಕ್ತಿಶಕ್ತಿಗಳು ಬಹುವರ್ಣಮಯ. ಅದರ ಹುಟ್ಟು ಆಕಸ್ಮಿಕವೇ ಆದರೂ ವಿಕಾಸದಲ್ಲಿ ಇಂದು ಮುಟ್ಟಿದೆ ಸ್ವರ್ಣಪಥ. ಅದರ ಇತಿಹಾಸಕ್ಕೆ ಕೂರುವ ದೂಳು ತೊಳೆಯುತ್ತ, ಕಿಲುಬು ಕಳೆಯುತ್ತ, ‘ಗುರು’ತು ಮರೆತರೂ ಗುರುತು ಉಳಿಯುವ ಕೆಲಸ ಮಾಡುತ್ತಿರುವವರೇ (‘ಕಾರು ತೊಳೆದ ಹುಡುಗ’) ಬನ್ನಂಜೆ ಸಂಜೀವ ಸುವರ್ಣ. ಕೌಟುಂಬಿಕ ಹಿನ್ನೆಲೆ, ಸಂಸ್ಕಾರ ಯಕ್ಷಗಾನ ಕೇಂದ್ರದ ಪ್ರಾಂಶುಪಾಲ ಸಂಜೀವರಿಗೆ ನೂಕು ಬಲ ಕೊಟ್ಟಿಲ್ಲ. ಸಾಮಾಜಿಕ ವರ್ಗ ವಿಭಜನೆಗಳು ಸುವರ್ಣರಿಗೆ ಇಂದಿಗೂ ಅನುಕೂಲವಾಗಿರುವುದು ಸಂಶಯಾಸ್ಪದವೇ (ಅವರು ಎಲ್ಲೂ ಹೇಳಿಕೊಳ್ಳರು.). ಆದರೆ ಬೆಸ್ತರವಳ ಮಗ ‘ವೇದ’ಗ್ರಹಣ ಮಾಡಿದಂತೆ, ಕಾಡಬೇಡ ಮಹಾಕವಿಯಾದಂತೆ ಯಕ್ಷಲೋಕದಲ್ಲಿಂದು ಅದ್ವಿತೀಯ (ನಿರ್ವಿವಾದಿತ) ಮಹಾಗುರುವೆಂದರೆ ಬನ್ನಂಜೆ ಸಂಜೀವ ಸುವರ್ಣ. ಗೆಳೆಯ ಮಹಾಲಿಂಗ ಭಟ್ಟರು ಸಂತ ಅಲೋಶಿಯಸ್ ಸಂಜೆ ಕಾಲೇಜಿನ ಕನ್ನಡ ಅಧ್ಯಾಪಕ, ಕಾಸರಗೋಡುವಲಯದ ಸಣ್ಣ ಕತೆಗಳ ಬಗ್ಗೆ ಪ್ರಾಮಾಣಿಕ ಸಂಶೋಧನೆ ನಡೆಸಿದ ಪದವೀಧರ (ಲೋಕರೂಢಿಯಂತೆ ನಾನು ಅವರ ಹೆಸರಿನ ಮುಂದೆ ಡಾ| ಹಚ್ಚಬೇಕಿತ್ತು! ನನ್ನ ಲೆಕ್ಕಕ್ಕೆ ಗೆಳೆತನ ದೊಡ್ಡದು), ಹೊಸದಿಗಂತದಲ್ಲಿ ಸಂಗೀತದ ಇತಿಹಾಸ ಕುರಿತಂತೆ ವಿಶಿಷ್ಟ ಅಂಕಣವನ್ನೂ ನಡೆಸುವುದರೊಡನೆ ತನ್ನ ಪ್ರಜಾವಾಣಿಯ ಕರಾವಳಿ ವಲಯಕ್ಕಷ್ಟೇ ಸೀಮಿತ ಅಂಕಣದಲ್ಲಿ ಮೊನ್ನೆ ಈ ವಿಶ್ವವ್ಯಾಪೀ ಬನ್ನಂಜೆ ಸಂಜೀವ ಸುವರ್ಣರ ಹೊಸ ಸಾಹಸವನ್ನು ಹಾಡಿಹೊಗಳಿದ್ದಾರೆ. (ಸಹಜವಾಗಿ ಮತ್ತೆ ನನ್ನ ಆಕ್ರೋಶವರ್ಧನೆಯಾಗಿದೆ. ಉಪಶಮನಕ್ಕೆ) ಅವರ ಅನುಮತಿ ಮತ್ತು ಪ್ರಜಾವಾಣಿಯ ಕೃಪೆಯೊಡನೆ ಅದನ್ನು ಮತ್ತೆ ನನ್ನ ಬ್ಲಾಗ್ ಮಿತಿಯಲ್ಲಾದರೂ ಪ್ರಚುರಿಸಲು ಹೆಮ್ಮೆ ಪಡುತ್ತೇನೆ. ಪ್ರಜಾವಾಣಿಯ ಸ್ಥಳಾವಕಾಶಕ್ಕೆ ಹೊಂದಿಕೊಳ್ಳುವಂತೆ ಗಿಡಿದ ಚಿತ್ರಗಳನ್ನು ಹೆಚ್ಚಿನ ಚಿತ್ರಗಳನ್ನು ನಿಮ್ಮ ಹೆಚ್ಚಿನ ಸಂತೋಷಕ್ಕಾಗಿ ಪ್ರತ್ಯೇಕ ಕೊಟ್ಟಿದ್ದೇನೆ. ಎಂದಿನಂತೆ ನಿಮ್ಮ ಬರಹದ ಮೆಚ್ಚುಗೆಗಳಿಗೆ ಕೆಳಗೆ ಅಂಕಣವಿದೆ. ಮಾತಿನ ಮೆಚ್ಚುಗೆಗೆ, ಹೆಚ್ಚಿನ ವಿವರಗಳಿಗೆ ಮತ್ತು ಉತ್ಸಾಹವಿದ್ದರೆ ಪಾಲುಗೊಳ್ಳಲು ಸಂಜೀವರ ಚರವಾಣಿ: 9845843603, ವಿಳಾಸ: ಪ್ರಾಂಶುಪಾಲರು, ಯಕ್ಷಗಾನ ಕೇಂದ್ರ, ಎಂ.ಜಿ.ಎಂ ಕಾಲೇಜು, ಉಡುಪಿ ೫೭೬೧೦೨