ಹೌದು, ಇಂದು ಸಂಜೆ ಏಳು ಗಂಟೆಗೆ ತೀರಿಹೋದ (ಪ್ರಾಯ ತೊಂಬತ್ತೊಂದು) ಸಂಬಂಧದಲ್ಲಿ ನನ್ನ ಚಿಕ್ಕಜ್ಜಿ (ತಂದೆಯ ಚಿಕ್ಕಪ್ಪ, ಮಡಿಕೇರಿಯ ವೈದ್ಯ ಶ್ರೀಶ್ರೀ ಜಿ.ಎನ್.ರಾಮಚಂದ್ರ ರಾಯರ ಹೆಂಡತಿ, ಶ್ರೀಮತಿ ವಿರಿಜಾಭವಾನಿ) ಭಾವನಾತ್ಮಕವಾಗಿ ನನಗೆ ಸದಾ ಅಜ್ಜಿಯಾದಷ್ಟೇ ‘ಸಾಕುತಾಯಿ’ಯ ಸ್ಥಾನದಲ್ಲೂ ಕಾಣುತ್ತಿದ್ದವರು. ನಾನಿನ್ನೂ ಆರೇಳು ತಿಂಗಳ ಶಿಶುವಾಗಿದ್ದಾಗ ನನ್ನಮ್ಮನಿಗೆ ಹಾಲು ಕಡಿಮೆಯಿತ್ತಂತೆ. ಈ ಅಜ್ಜಿ (ನನ್ನಮ್ಮನಿಗಿಂತ ಸುಮಾರು ಎಂಟು ವರ್ಷಗಳಿಗೆ ಹಿರಿಯರು) ಅದೇ ತಾನೇ ಕೊನೆಯ ಮಗ ಸದಾಶಿವನನ್ನು ಹೆತ್ತ ಹೊಸತು. ಸಹಜವಾಗಿ ಅವರು ನನಗೂ ಹಾಲೂಡಿದ್ದರಂತೆ. ನನ್ನ ತಂದೆಗೆ ಸಂಬಂಧದಲ್ಲಿ ಚಿಕ್ಕಮ್ಮನಾದರೂ ತಂದೆ ತನ್ನ ಆತ್ಮಕಥೆ – ಮುಗಿಯದ ಪಯಣದಲ್ಲಿ “ನನ್ನ ಮಟ್ಟಿಗೊಬ್ಬ ಹಿರಿಯಕ್ಕ ಮತ್ತು ನನ್ನ ಅಸಂಖ್ಯ ಪ್ರಯೋಗಗಳಿಗೊಬ್ಬ ಶ್ರೋತೃ ಮತ್ತು ವಿಮರ್ಶಕಿಯಾಗಿ ದೊರೆತದ್ದು ನನ್ನ ಭಾಗ್ಯ” ಎಂದೇ ಬರೆಯುತ್ತಾರೆ. ನನಗಾದರೂ ಇದೇ ತೆರನ ಕೌಟುಂಬಿಕ ಸಮೀಕರಣಗಳ ಸಂಬಂಧಕ್ಕಿಂತ ಭಾವಸಂಬಂಧದ ನೆನಪುಗಳೇ ಜಾಸ್ತಿಯಾಗಿ ಯಾವತ್ತೂ ಅವರಲ್ಲಿಗೆ ಹೋಗುವುದೆಂದರೆ ಏನೋ ಸಂಭ್ರಮ, ಹೇಳಲಾಗದ ಸಂತೋಷ.

‘ಜ್ಯೋತಿ’ ಮನೆಯ ಭಾಗ್ಯ ದೇವತೆಯಂತೇ ಇದ್ದ ಇವರು ಸಂಪರ್ಕಕ್ಕೆ ಬಂದವರಿಗೆಲ್ಲ ಚಿತ್ತಭಿತ್ತಿಯಿಂದ ಅಳಿಸಲಾಗದ ‘ಚಿತ್ತಿ’ (ಚಿಕ್ಕಮ್ಮ) ಆಗಿಯೋ ‘ಭಾಂತೆಮ್ಮ’ (ಭವಾನಿ+ಅತ್ತೆಮ್ಮ) ಆಗಿಯೋ ಚಿರಂಜೀವಿ. ನನ್ನ ಬಾಲ್ಯದಲ್ಲೊಮ್ಮೆ ಮಡಿಕೇರಿಯಲ್ಲಿ ಭಾರೀ ಭೂಕಂಪವಾಗಿ ಮಂಗಳೂರು ದಾರಿ ಹಲವೆಡೆ ಜಗ್ಗಿದ, ಕುಸಿದದ್ದನ್ನು ಪ್ರತ್ಯಕ್ಷ ದರ್ಶಿಸಲು ಈ ಅಜ್ಜ ಅಜ್ಜಿಯರೊಡನೆ ಅವರ ಕಾರಿನಲ್ಲಿ ಹೋದ ನೆನಪು. ಅವರ ಅಪ್ಪಂಗಳದ ತೋಟಕ್ಕೆ ಮತ್ತವರದೇ ಜೊತೆ ಇನ್ಯಾವತ್ತೋ ಕಾರಿನಲ್ಲಿ ಹೋಗಿ, ಸದಾಶಿವನೊಡನೆ ಸಾಕಷ್ಟು ಸೊಕ್ಕಿ ಮರಳಿದ ನೆನಪು. ನನ್ನ ಹಾಲು ಹಲ್ಲು ಉದುರದೆ, ಹಿಂದೆ ಗಟ್ಟಿ ಹಲ್ಲು ನೂಕಿಕೊಂಡು ಬಂದಿತ್ತು. ಅಜ್ಜ ಕಣ್ಕಟ್ಟು ಮಾಡಿ, ಕಟಿಂಗ್ ಪ್ಲೇಯರಿನಲ್ಲಿ ಗೊಗ್ಗೆ ಹಲ್ಲು ಕಿತ್ತಾಗ ಈ ಅಜ್ಜಿ ಸಮಾಧಾನಿಸಿದ ನೆನಪು. ಭೀಕರ ಅಂಟು ಜಾಡ್ಯ ಸಿಡುಬು ಅಜ್ಜನನ್ನೂ (ಪುಂಡರೀಕನೆಂಬ) ದೊಡ್ಡ ಚಿಕ್ಕಪ್ಪನನ್ನೂ ಬಲಿತೆಗೆದುಕೊಂಡಾಗ ಅಳು ನಗುಗಳ ಸ್ಪಷ್ಟತೆ ಇಲ್ಲದ ನಾನು (ಪ್ರಾಯ ಐದಾರು ವರ್ಷವಿದ್ದಿರಬೇಕು) ಈ ಅಜ್ಜಿಯ ಬೊಚ್ಚು ಬಾಯಿಯನ್ನು ಕಂಡು ಪಟ್ಟ ಆಶ್ಚರ್ಯ. ಕಾಲೇಜು ಸಮೀಪವಿದ್ದ ನಮ್ಮನೆಗೆ ದೂರದ ಸರಕಾರೀ ಶಾಲೆಗೆ ಐದನೇ ತರಗತಿಗೆ ಸೇರಿದಾಗ ಎಷ್ಟೋ ಸಮಯ ಮಧ್ಯಾಹ್ನದ ಊಟಕ್ಕೆ ಸದಾಶಿವನೊಡನೆ ಜ್ಯೋತಿಗೆ ಓಡಿದಾಗ ಸಿಕ್ಕುತ್ತಿದ್ದ ಮಧುರ ಆತಿಥ್ಯ… ಯೋಚನಾ ಪರದೆಯ ಮೇಲೆ ಓಡುವ ಅಸಂಖ್ಯ ಸುಖಾಂತ ಚಿತ್ರಗಳಿಗೆ ದುಃಖಾಂತ ತರುವಂತೆ ಇನ್ನು ಆ ಅಜ್ಜಿ ಇಲ್ಲ. ಈ ಹಿಂದೆ ನನ್ನೊಬ್ಬ ಚಿಕ್ಕಪ್ಪನ ಸ್ಮರಣೆಯಲ್ಲಿ ನಾನು ಹೀಗೇ ನೆನಪು ಹಂಚಿಕೊಳ್ಳುವಾಗ ಹೇಳಿದ್ದಂತೆ  ಈ ಅಜ್ಜಿಯನ್ನು ಎಂದೂ ಎದುರಿನಲ್ಲಿ ನಾನೇನೂ ಸಂಬೋಧಿಸಿರಲಿಲ್ಲ. (ನನ್ನ ಖಾಸಾ ಪಿತಾಮಹಿ ಅಥವಾ ಮಾತಾಮಹಿ ಅಜ್ಜಿಯಂದಿರನ್ನು ನಾನು ಸ್ಪಷ್ಟವಾಗಿ “ಅಜ್ಜೀ” ಎಂದು ಕರೆದವನೇ) ಈಗ ಇದ್ದಿದ್ದರೆ “ಹೀಗೊಂದು ಲೇಖನದ ಸಂದರ್ಭದಲ್ಲಾದರೂ ನನ್ನನ್ನು ‘ಅಜ್ಜಿ’ ಎಂದು ಕಂಡ್ಯಲ್ಲ ಅಪ್ಪನೇ” ಎಂದು ನನ್ನ ಪ್ರಾಯದ ಹಿರಿತನವನ್ನೂ ಮರೆಯುವಂತೆ ಪ್ರೀತಿಯಿಂದ ಉದ್ಗರಿಸುತ್ತಿದ್ದರು ಖಂಡಿತ.