ಕುಮಾರ ಪರ್ವತದ ಸುತ್ತ ಮುತ್ತ (ಭಾಗ ೨)

[ಮಡೆಸ್ನಾನ, ಉರುಳುಸೇವೆ ಸುದ್ದಿಗಳ ಕೊಂಡಿ ಬಳಸಿ ಸೈಕಲ್ ಅಭಿಯಾನದ ಕಥನಕ್ಕೆ ನುಗ್ಗಿದವ ನಿಜದ ಸುಬ್ರಹ್ಮಣ್ಯ, ಕುಮಾರಪರ್ವತದಿಂದ ಹಳಿತಪ್ಪಿದನೇ ಎಂದು ಭಾವಿಸಬೇಡಿ. ಮಡಿಕೇರಿ-ಸುಬ್ರಹ್ಮಣ್ಯದ ಗಾಳಿಬೀಡು, ಕಡಮಕಲ್ಲಿನ ಮೂಲಕದ ಒಳದಾರಿಯಲ್ಲಿ ಬೇಸ್ತುಬಿದ್ದು ಅಂತೂ ಸುಬ್ರಹ್ಮಣ್ಯ ತಲಪಿದ…]

ಕಥನಕ್ಕೊಂದು ಬಾಲಂಗೋಚಿ: ಮನುಷ್ಯ ದೇಹದಲ್ಲಿ ಬಿಡಿ ಮೂಳೆಗಳೆಷ್ಟು, ಅವುಗಳ ಜೋಡಣೆ ಹೇಗೆ ಎಂದಿತ್ಯಾದಿ ಪ್ರಶ್ನೆಗಳಿಗೆ ವೈದ್ಯಮಿತ್ರರು ಪರಮಾದ್ಭುತ ಅಂಕಿಸಂಕಿ, ಕಥೆ ಎಲ್ಲಾ ಹೇಳುವುದು ನಿಶ್ಚಿತ. ಅವರ ಅಧ್ಯಯನ, ಪ್ರಯೋಗ ಪರಿಣತಿಗಳನ್ನೆಲ್ಲಾ ಒಪ್ಪಿಕೊಳ್ಳುತ್ತೇನೆ. ಅವು ಯಾವುದರ ಸೋಂಕೂ ಇಲ್ಲದೆ ಕೇವಲ ಅರಿವಿನಿಂದ ಪ್ರಕಟಿಸುವುದೇ ಆದರೆ ೧೯೭೪ರ ಡಿಸೆಂಬರ್ ತಿಂಗಳ ಆ ಒಂದು ರಾತ್ರಿ ಹದಿನಾಲ್ಕು ಉದ್ಧರಿಗಳು ಸುಬ್ರಹ್ಮಣ್ಯ ಛತ್ರದಲ್ಲಿ ಸಿಗುತ್ತಿದ್ದರು! ಹೌದು, ಕುಮಾರಾದ್ರಿಯನ್ನು ಗುರಿಯಾಗಿಟ್ಟುಕೊಂಡು ಮಡಿಕೇರಿಯಿಂದ ಚಾರಣ ಬಂದವರ ಆ ರಾತ್ರಿ ಅಷ್ಟೂ ಯಾತನಾಮಯ. ಶೂ ಉಜ್ಜಿ ಬೆರಳುಗಳ ಉಗುರು ಸುಲಿದಂಥಾ ನೋವು, ತುದಿಗಳಲ್ಲಿ ನೀರ ಗುಳ್ಳೆಗಳಿಂದ ಹಿಡಿದು ದೇಹದ ಪ್ರತಿ ಗಂಟು ಗಂಟೂ ಇಂಚು ಇಂಚೂ ಹೇಗೆ ಮಲಗಿದರೂ ಎತ್ತ ಹೊರಳಿದರೂ ಹೇಳುತ್ತಿತ್ತು ನೋವೂ ನೋವು. ಮಡಿಕೇರಿಯ ಚಳಿ ಬಾಧೆ ಇರಲಿಲ್ಲ ಎಂದೊಂದು ಬಿಟ್ಟರೆ ಎಲ್ಲರಿಗೂ ಛತ್ರದ ಚಾಪೆ, ಮೇಲೆ ಪೇರಿಸಿದ ನಮ್ಮದೇ ಜಮಖಾನವೋ ಇತರ ಬಟ್ಟೆಗಳ ಅಟ್ಟಿ ಏನಿದ್ದರೂ ಬಿಟ್ಟರೂ ಅನುಭವಿಸಿದ್ದು ಶರಶಯ್ಯೆ. ಸಾಧನೆಯ ತೃಪ್ತಿ, ಮುಂದಿನ ದಿನಗಳಲ್ಲಿ ಸಿಗುವ ಸ್ಮರಣೆಯ ಸುಖಗಳ ಯಾವ ಭಾವುಕ, ಭ್ರಾಮಕ ಭಾವಗಳೂ ಉಳಿಯದಂತೆ ಅಂದು ನಡೆಸಿದ ಚಿರಂತನ ಹೊಣಕಾಟ, ಇಂದು ಹೇಗೆ ವಿವರಿಸಿದರೂ ಶಬ್ದಾಡಂಬರದಂತೆ ಕಾಣಬಹುದು!

ಮಲೆಕುಡಿಯರ ಕುಂಡ ಬಂದ. “ಶನಿಹಿಡಿದವ, ಯಾಕಾದರೂ ಬಂದನೋ” ನಮ್ಮೆಲ್ಲರ ಮನಸ್ಸಿನಲ್ಲಿ ಅಕ್ಷರ ಸಿಗದೆ ಮೂಡಿದ ಭಾವ! ಹೆಲ್ಮುಟ್ ಅಜ್ಜ ಸೇರಿದಂತೆ ಮೂರುನಾಲ್ಕು ಮಂದಿ ಹಿಂದಿನ ರಾತ್ರಿಯೇ ತಮ್ಮ ನಿವೃತ್ತಿ ಘೋಷಿಸಿಬಿಟ್ಟಿದ್ದರು. ಅವರನ್ನುಳಿದ ಛಲವಂತರು, ನಿಧಾsssssನಕ್ಕೆ ಶಿಬಿರೋಪಯೋಗೀ ಸಾಮಗ್ರಿಗಳನ್ನು ಆದಷ್ಟು ಕಡಿಮೆ ಮಾಡಿ, ಬೆನ್ನಿಗೇರಿಸಿ, “ಕುಮಾರಾದ್ರಿ ಚಲೋ” ಎಂದುಬಿಟ್ಟೆವು. ಭುಜಕ್ಕೋ ಹಿಂದಿನ ದಿನದ ಹೊರೆಯದ್ದೇ ನೆನಪು. ಶೂವಿನೊಳಗೆ ಎಷ್ಟು ಹತ್ತಿ ತುರುಕಿದರೂ ಪಾದ ಊಹೂಂ ಎನ್ನುತ್ತಿತ್ತು. ಬರಿಗಾಲು? ಬೆರಳ ತುದಿಗಳಲ್ಲಿದ್ದ ಉರಿಗುಳ್ಳೆಗಳ ಸಾಲಿಗೆ ಮರಳ ಕಣವೂ ಕುಪ್ಪಿ ಚೂರು, ಒಣಗರಿಕೆಯೂ ಭಯಂಕರ ಮುಳ್ಳು! ಕುಳಿತಲ್ಲಿಂದ ಏಳುವುದು, ಎದ್ದಲ್ಲಿಂದ ನಡೆಯುವುದು, ನಡೆಯುವಾಗ ಹೆಜ್ಜೆ ಹೆಜ್ಜೆಗೂ ಅಜ್ಜನ ಮನೆಯ ಹೊಗೆ ಅಟ್ಟದ ಎಣ್ಣೆಕಾಣದ ಬಿಜಾಗರಿಯಿಂದ ಕಿರ್ರೋಂ ಶಬ್ದ ಕೇಳಿದಂತೇ ಭಾಸವಾಗುತ್ತಿತ್ತು. ಎಲ್ಲಾ ಆರಂಭದ ಜಡ. ಮುಂದುವರಿದಂತೆ ಸಡಿಲೀತು ಎಂದು ತನುವ ಸಂತೈಸಿಕೊಳ್ಳುತ್ತ ಸುಮಾರು ಒಂದು ಗಂಟೆ, ಅಂದರೆ ನೇರ ತಪ್ಪಲಿನ ಝರಿಯೊಂದರನ್ನು ಸೇರುವವರೆಗೂ ಪಾದ ಬೆಳೆಸಿದೆವು. ಮೊದಲ ಭೇಟಿಯಲ್ಲಿ ಜಿಗಿಜಿಂಕೆಯಂತೆ ಹಿಂಬಾಲಿಸಿದವರ ತಂಡವೇ ಇದು, ಹತ್ತೆಂಟು ಬಾರಿ ನಿಂತು ನಿಂತು ಮುಂದುವರಿದ ಕುಂಡನ ಕಣ್ಣಲ್ಲಿ ಆಶ್ಚರ್ಯ ಮಡುಗಟ್ಟಿತ್ತು. ಹೆಚ್ಚುಕಡಿಮೆ ಮಟ್ಟಸ ನಡಿಗೆಯಲ್ಲೇ ಬಂದವರಿಗೆ ಮುಂದಿನ ಏರು ನಡಿಗೆ ಅಸಾಧ್ಯವೆಂದೇ ಕಂಡಿತು. ಝರಿ ನೀರು ಮುಖಕ್ಕಾಯ್ತು, ಹೊಟ್ಟೆಗೂ ಸೇರಿತು, ಸ್ನಾನಕ್ಕೂ ಇಳಿಸಿತು. ಬ್ರೆಡ್, ಜ್ಯಾಂ, ಮೋಸುಂಬಿ ಸಮಾರಾಧನೆಯೂ ಸಾಂಗವಾಗಿ ಪೂರ್ಣಗೊಳ್ಳುವಾಗ ಎಲ್ಲರ ಮನಸ್ಸೂ ಸ್ತಿಮಿತಕ್ಕೆ ಬಂದಿತ್ತು. (ಗೆಲುವು ಸಂಭ್ರಮಿಸುತ್ತದೆ, ಸೋಲು ತರ್ಕದ ಮೊರೆಹೊಗುತ್ತದೆ!) ಅಂದು ಅಲ್ಲಿಗೇ ಕಾರ್ಯಕ್ರಮ ಮುಗಿಸಿ ಹಿಂದಿರುಗಿದೆವು.

ಎರಡನೇ ಖಂಡ: ಕುಮಾರಾದ್ರಿಗೆ ನಡೆ

ಮೈಸೂರು ತಂಡದ ಸೋಲಿನಲ್ಲಿ ಮಂಗಳೂರು ತಂಡದ ವಿಜಯದ ಬೀಜ ಹುಗಿದಿದ್ದಿರಬೇಕು. ೧೯೭೬ರ ಸುಮಾರಿಗೆ ನಾನು ವೃತ್ತಿಪರ ವ್ಯಾಪಾರಿಯಾಗಿ ಮಂಗಳೂರಿನಲ್ಲಿ ನೆಲೆಸಿ ವರ್ಷವೊಂದೇ ಕಳೆದಿತ್ತು. ಕೆಲಸದ ಬದಲಾವಣೆಯೇ ವಿಶ್ರಾಂತಿ ಎನ್ನುವ ಪೈಕಿ ನಾನು. ಆದರೆ ವಾರದ ಆರೂ ದಿನ ಕುಳಿತಿದ್ದವನಿಗೆ ಒಂದು ರಜಾ ದಿನದಲ್ಲಿ ಏನೆಲ್ಲಾ ಮಾಡಲು ಸಾಧ್ಯ! ಹಾಗಾಗಿ ದೀಪಾವಳಿಯ ನೆಪ ವಾರದ ರಜಾದಿನಕ್ಕೆ ಒತ್ತಿ ಬರುತ್ತದೆಂದು ಕಂಡಾಗ ಮತ್ತೆ ಕುಮಾರಾದ್ರಿಯಲ್ಲಿ ಬಾಕಿಯುಳಿದ ಲೆಕ್ಕ ಮುಗಿಸುವ ಯೋಜನೆ ಹಾಕಿದೆ! ೧೯೭೫ರ ಅಕ್ಟೋಬರಿನಂದು ನನ್ನಂಗಡಿ ಮೊದಲ್ಗೊಂಡಾಗಿನಿಂದಲೆ ನನಗೆ ಕೆಲವು ಹೆಚ್ಚುಕಡಿಮೆ ಸಮಪ್ರಾಯದ ಕಾಲೇಜು ಅಧ್ಯಾಪಕರುಗಳ, ವಿದ್ಯಾರ್ಥಿಗಳ ಪರಿಚಯವಾಗಿತ್ತು. ಬಿಡುವಿನ ಮಾತುಗಳಲ್ಲೆಲ್ಲಾ ನಾನವರ ಸಾಹಿತ್ಯಾಸಕ್ತಿ, ಪುಸ್ತಕ ಪ್ರೀತಿಗಳನ್ನು ನೀಗುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಪರ್ವತಾರೋಹಣ ಮತ್ತು ಸಾಹಸ ಕ್ರೀಡೆಗಳ ಒಲವನ್ನಂತೂ ಧಾರಾಳ ಹೇರುತ್ತಿದ್ದೆ. ಸಹಜವಾಗಿ ಪಂಡಿತಾರಾಧ್ಯರು – ಮಂಗಳಗಂಗೋತ್ರಿಯಲ್ಲಿ ಕನ್ನಡ ಅಧ್ಯಾಪಕರು (ನನಗಿಂತ ಎರಡು ವರ್ಷ ವಿದ್ಯಾಹಿರಿಯರು, ಪೂರ್ವಾಶ್ರಮದಿಂದಲೇ ಅರ್ಥಾತ್ ಮೈಸೂರಿನ ವಿದ್ಯಾರ್ಥಿದೆಸೆಯಿಂದಲೇ ಪರಿಚಿತರು) ಮತ್ತು ಕೆ.ಎಲ್ ರೆಡ್ಡಿ – ರೋಶನಿ ನಿಲಯದ ಹಿಂದಿ ಅಧ್ಯಾಪಕರು ದಾಖಲಾದರು. ಆರಾಧ್ಯರು ಚಾಮುಂಡಿ ಬೆಟ್ಟದ (ಮೈಸೂರಿನ ನೆಲಮಟ್ಟದಿಂದ ಸುಮಾರು ಎಂಟನೂರು ಅಡಿ ಎತ್ತರವಿರಬಹುದು) ಹಳೇಹುಲಿ! “ಕುಮಾರ ಇದ್ದರೆ ಚಾಮುಂಡಿ ಮೇಲ್ಚಾಮುಂಡಿ ಇಟ್ಟಷ್ಟಿರಬಹುದು” ಎಂಬ ಭಂಡ ಧೈರ್ಯ! ರೆಡ್ಡಿ ಹಾಗಲ್ಲ, ಶ್ರದ್ಧಾಳು. ಮೈಸೂರಿನಲ್ಲೇ ಎಂಎ ಮಾಡಿದ್ದಾದರೂ ಚಾಮುಂಡಿ ಕಂಡವರೇ ಆದರೂ ಅಪ್ಪಟ ಬಯಲು – ದಾವಣಗೆರೆಯಿಂದ ಬಂದವರು. ಪೂರ್ವ ತಯಾರಿಯಾಗಿ ಮಂಗಳೂರು ದಾರಿ ಸಾಕಷ್ಟು ದಮ್ಮಾಸ್ ಹಾಕಿ ಗಟ್ಟಿಯಾದರೂ “ಲಗ್ಗೇಜ್ ಹೊರೋದ್ ಹ್ಯಾಗ್ರೀ” ಇವರ ಸಮಸ್ಯೆ.

ಆ ಕಾಲಕ್ಕೆ ಭಾರೀ ಹೊರೆಗಳನ್ನು ಬೆನ್ನಲ್ಲಿ ಹೊರುವ ಚೀಲ ಅರ್ಥಾತ್ ರಕ್ ಸ್ಯಾಕ್ ಎಲ್ಲೋ ಹಿಮಾಲಯದ ತಪ್ಪಲಿನಲ್ಲಿ, ವಿದೇಶಗಳಲ್ಲಿ ಮಾತ್ರ ಸಿಗುವ ಅದ್ಭುತಗಳಾಗಿದ್ದವು. [ಇಂದು ಬಿಡಿ, ಅವುಗಳ ತರಹೇವಾರಿ ಅಪಭ್ರಂಶಗಳನ್ನೂ ಹೆಚ್ಚುಕಡಿಮೆ ಪ್ರತಿ ಶಾಲೆ ಕಾಲೇಜು ವಿದ್ಯಾರ್ಥಿಗಳಲ್ಲಿ ಕಾಣುತ್ತೇವೆ. ಆದರೆ ತಮಾಷೆ ಎಂದರೆ, ಬಹುತೇಕ ಮಂದೆ ಆ ಚೀಲಗಳ ಕೈಯನ್ನು ತೀರಾ ಸಡಿಲವಿಟ್ಟು, ಬೆನ್ನ ಮೇಲಿರಬೇಕಾದ ಹೊರೆಯನ್ನು ಅಂಡಿನಡಿಗೆ ನೇಲಬಿಟ್ಟು, ಪ್ರತಿ ಹೆಜ್ಜೆಗೂ ಮುಗ್ಗರಿಸಿದಂತೆ ನಡೆಯುತ್ತಿರುತ್ತಾರೆ. ಯಾರಿಗ್ಗೊತ್ತು, ಹರಕು ದಾರಿಯಲ್ಲೂ ಆರಿಂಚು ಗೂಟದ ಹಿಮ್ಮಡಿ-ಮೆಟ್ಟು ಮೆಟ್ಟಿ ಕಾಲುನೋವು ತಂದುಕೊಳ್ಳುವ ಮುಗುದೆಯರಿಗೆ ಇದು ಜೊತೆಗೊಡುವ ಪಡ್ಡೆಗಳ ಸಾಂಕೇತಿಕ ಸಂತಾಪಕ್ರಿಯೆಯೋ ಏನೋ!] ಆದರೆ ಎನ್.ಸಿ.ಸಿ ಹಿನ್ನೆಲೆಯ ನನಗೆ FSMO Kit (field service marching order) ಭಾರೀ ಪ್ರಿಯ ಹೆಸರು. ಎನ್.ಸಿ.ಸಿಯಲ್ಲಿ ಮಾಮೂಲೀ ಕವಾಯತು ಬಿಟ್ಟು ಹೆಚ್ಚಿನ ಕಾರ್ಯಕ್ರಮಗಳಿಗೆ ತೊಡಗುವುದೇ ಆದರೆ ನಮ್ಮ ಬಟ್ಟೆಬರೆ, ತಟ್ಟೆಲೋಟಗಳಿಗೊಂದು ಅರ್ಧ ಬೆನ್ನುಚೀಲ, ಅದರ ಕೆಳಗೆ ನೇಲಿಕೊಂಡು ಸುಮಾರು ಒಂದು ಲೀಟರ್ ನೀರು ಹಿಡಿಯುವ ಲೋಹದ ಅಂಡೆ, ಯುದ್ಧಕಾಲದ ಸೈನಿಕರಿಗೆ ಕೂಡಲೇ ಕೈಗೆ ನಿಲುಕುವಂತೆ ದಿಕ್ಸೂಚಿ, ಭೂಪಟ, ಮದ್ದುಗುಂಡುಗಳಾದಿ ತುಂಬಿಟ್ಟುಕೊಳ್ಳಲು ಎದುರು ಎರಡು ದೊಡ್ಡ ಜೇಬಿನಂಥ ಚೀಲಗಳ ಒಟ್ಟು ವ್ಯವಸ್ಥೆಯೇ ಎಫೆಸ್ಸೆಮ್ಮೋ. ನಾನು ಸ್ಥಳೀಯ ಎನ್ಸಿಸಿ ಕಛೇರಿಗೆ ನುಗ್ಗಿ, ಮುಖ್ಯಾಧಿಕಾರಿಯನ್ನು ಮಾತಾಡಿಸಿ, ನನ್ನ ಮಿತ್ರರಿಗೆಲ್ಲಾ ಎಫೆಸ್ಸೆಮ್ಮೋ ಎರವಲು ಕೊಡಿಸಿದೆ. ಮಾಮೂಲೀ ಕವಾಯತು, ವಾರ್ಷಿಕ ಶಿಬಿರ, ಬೀ ಮತ್ತು ಸೀ ಅರ್ಹತಾಪತ್ರಗಳ ಪರೀಕ್ಷೆ ಇತ್ಯಾದಿಗಳಲ್ಲಿ ಸಂತೃಪ್ತರಾಗಿದ್ದ ಅಧಿಕಾರಿ ನಮ್ಮ ಉತ್ಸಾಹ ನೋಡಿ ಒಮ್ಮೆಲೇ ಜಾಗೃತನಾದ. ಫಲವಾಗಿ ಓರ್ವ ಎನ್ಸಿಸಿ ಅಧಿಕಾರಿ ಸಹಿತ ಎರಡೋ ಮೂರೋ ಕ್ಯಾಡೆಟ್ಸ್ (ಎನ್ಸಿಸಿಯ ವಿದ್ಯಾರ್ಥಿ ಸದಸ್ಯರು) ನಮ್ಮ ತಂಡಕ್ಕೆ ಇಲಾಖೆಯಿಂದ ಪ್ರಾಯೋಜಿತರಾದರು.

ಮಡಿಕೇರಿಯ ತೋಟಗಳಲ್ಲಿ ಮಂಗಗಳ ಹಾವಳಿ ತಪ್ಪಿಸಲು ದಿನಪೂರ್ತಿ ಒಬ್ಬ ಕೆಲಸದವನನ್ನು ಇಟ್ಟುಕೊಳ್ಳುವುದು ನನಗ್ಗೊತ್ತಿತ್ತು. ಈ ಕಪಿಪಾರದವನು ಇಡೀ ದಿನ ವಿರಾಮದಲ್ಲಿ ತೋಟದ ಮೂಲೆ ಮೂಲೆಗಳನ್ನು ಸುತ್ತುತ್ತಾ ಬಿಟ್ಟುಬಿಟ್ಟು ಬೊಬ್ಬೆ ಹೊಡೆಯುತ್ತಿರಬೇಕು. ಜೊತೆಗೆ ಅವನ ಸಂಗಾತಿ ನಾಯಿಗಳ ಬೊಗಳು, ಕಪಿ ತೀರಾ ಹೆಚ್ಚಿಕೊಂಡಲ್ಲಿ ಪಟಾಕಿಯ ಢಮಾರ್, ಕೊನೆಯ ಅಸ್ತ್ರವಾಗಿ ಕೋವಿ ಹಿಡಿದು, ಮರಸು ಕೂತು, ಒಂದೆರಡು ಕಪಿಯನ್ನೇ ಈಡು ಮಾಡುವುದು ಧಾರಾಳ ನಡೆಯುತ್ತಿತ್ತು. ಚಾರಣದ ಈ ಹಂತದಲ್ಲಿ ನನಗದು ಅಮೂಲ್ಯ ನೆನನಪು. ಕಾಡಿನಲ್ಲಿ ಎದುರಾಗಬಹುದಾದ ಆನೆ ಸೇರಿ ಎಲ್ಲಾ ‘ದುಷ್ಟಮೃಗ’ಗಳನ್ನು ಹೆದರಿಸಲು ಪಟಾಕಿಗಳೂ ನಮ್ಮ ಖರೀದಿ ಪಟ್ಟಿಯಲ್ಲಿರುತ್ತಿದ್ದದ್ದು ನೆನಪಾಗುವಾಗ ಇಂದು ನಗೆಬರುತ್ತದೆ! (ಪುಣ್ಯಕ್ಕೆ ಆಗ ಇಂದಿನಂತೆ ದಟ್ಟಕಾಡಿನ ನಡುವೆ ಎಕೆ-೪೭ ಸಿಗುತ್ತಿರಲಿಲ್ಲ! ಇಲ್ಲವಾದರೆ ನಾವೂ ಒಂದನ್ನು ‘ಆತ್ಮರಕ್ಷಣೆಗಾಗಿ’ ಒಯ್ಯುತ್ತಿದ್ದೆವೋ ಏನೋ!) ಉಳಿದಂತೆ ಪಾತ್ರೆಪರಡಿ, ಅಡುಗೆ ಸಾಮಾನು ಎಲ್ಲಾ ಸಂಗ್ರಹಿಸಿ, ಹಂಚಿ ದೀಪಾವಳಿಯ ಎಣ್ಣೆ ಸ್ನಾನದಂದು ಬೆವರ ಸ್ನಾನಕ್ಕೆ ಹೊರಟ ನಮ್ಮ ತಂಡ ಹೇಳಿತು “ಕುಮಾರಾದ್ರಿಗೆ ಜೈ!”

ಸುಬ್ರಹ್ಮಣ್ಯ ಅಂದರೆ ರಥಬೀದಿ ಎಂಬಂತಿದ್ದ ಕಾಲವದು. ಆ ಬೀದಿಯ ಹಿತ್ತಿಲಲ್ಲೇ ಹಳ್ಳಿಗಾಡಿನ ತೋಡು (ಸ್ಥಳಪುರಾಣ ಹೇಳುವ ದರ್ಪಣ ತೀರ್ಥ ಇರಬೇಕು) ನಮಗ್ಯಾವಾಗಲೂ ಮೊದಲ ಪಾದ್ಯ. ಶೂವಿನೊಳಗೆ ನೀರು ಸೇರಿಕೊಂಡರೆ ನಡಿಗೆ ಕಷ್ಟ. ಸಹಜವಾಗಿ ನೀರಿಗಿಳಿದೇ ದಾಟಬೇಕಾದ ಪ್ರತಿ ತೊರೆ ದಂಡೆಯಲ್ಲೂ ನಾವು ಕೂತು, ಶೂ ಬಿಚ್ಚಿ, ದಾಟಿ, ಅತ್ತ ಕಾಲೊಣಗಿಸಿ ಮತ್ತೆ ಬಿಗಿಯುವಾಗ ಕನಿಷ್ಠ ಅರ್ಧ ಗಂಟೆ ವ್ಯರ್ಥವಾಗುತ್ತದೆ. ಹಾಗಾಗಿ ಆ ಬೆಳಿಗ್ಗೆ ಕುಮಾರಕೃಪಾ (ನಮಗಾಗಿ ಬೆಳಿಗ್ಗೆ ಬೇಗ ಸಜ್ಜಾಗಿದ್ದರು!) ತಿಂಡಿ, ಬುತ್ತಿಯೂಟ ಕೊಡುವುದನ್ನೂ ಸೇರಿಸಿ. ಮೊದಲ ತೊರೆ ದಾಟುವವರೆಗೆ ನಮ್ಮೆಲ್ಲರಿಗೂ ಶೂಗಳು ಕಂಠಾಭರಣ! ತೊರೆ ದಾಟಿದ ಮೇಲಿನ ಸುಮಾರು ಹದಿನೈದಿಪ್ಪತ್ತು ಮಿನಿಟು ಮಟ್ಟಸ ನೆಲದ ನಡಿಗೆ ಚಳಿ ಹರಿಯುವಂತೆಯೂ ಮುಂದಕ್ಕೆ ಸಮಯ ಧಾರಾಳ ಉಳಿಯುವಂತೆಯೂ ನೋಡಿಕೊಳ್ಳಲು ಅವಶ್ಯವಿತ್ತು. ಮಣ್ಣದಾರಿ ಕಳೆದು, ಪೊದರುಗಳ ಕ್ಷುದ್ರತೆಯನ್ನೂ ಕ್ಷಣಮಾತ್ರದಲ್ಲಿ ಹಾಯ್ದು ಮಹಾನ್ ವೃಕ್ಷಗಳ ನಡುವೆ ವಿಜೃಂಭಿಸಿದೆವು! ಉದಯರವಿಯ ಎಳೆ ಕಿರಣಗಳಿಗೆ ನಮ್ಮನ್ನು ಇಣುಕಿನೋಡುವ ಹಂಬಲ, ಎಲೆ ಬಲೆಯ ಮೇಲಿನ ಮಂಜುಮಣಿಗಳಿಗೆ ಫಳಫಳಿಸುವ ನಗೆ. ಮಳೆಗಾಲದ ಸವಕಳಿಗಲ್ಲಲ್ಲಿ ಅಡ್ಡಗಟ್ಟೆ ಹಾಕಿದ ಮರದ ಬೇರು, ಹಿನ್ನೆಲೆಯಲ್ಲಿ ಪ್ರಾಕೃತಿಕವಾಗಿಯೇ ಬಿಗಿದು ತುಂಬಿದ ಕಲ್ಲು ಮಣ್ಣಿನ ರಚನೆಗಳಂತೂ ಸುಂದರ ಸೋಪಾನಗಳು. ಎಲ್ಲೋ ಕಣಿವೆಯ ಅಡಿಕೆ ತೋಟದಿಂದ “ಜೋಕುಳು ಪೋಪೋ” ಕುಕಿಲು. ಮತ್ಯಾವುದೋ ಮಲೆಯ ಆಳದಿಂದ ಒಂಟಿ ಹಾಡುಗಾರ ಹಕ್ಕಿಯ ಸಿಳ್ಳು. ಹೆಚ್ಚು ಕಾಡು ಸುತ್ತದ ನನ್ನ ತಮ್ಮ, ಅನಂತ, ಒಮ್ಮೆ ಕಾಡಿಗೆ ಬಂದಾಗ ಸಂತೋಷ ತಡೆಯಲಾಗದೇ “ಓವರ್ ಡೋಸ್ ಆಫ್ ಆಕ್ಸಿಜನ್ನೂ” ಎಂದದ್ದಕ್ಕೆ ಒಟ್ಟಾರೆ ಅಪ್ಯಾಯಮಾನವಾಗಿ ಹೊಂದುವಂತಹ ಸನ್ನಿವೇಶ; ಬರಿದೆ ಸವಕಲು ಜಾಡಲ್ಲವದು, ಸಿರಿಸಗ್ಗ ವಿಹಾರ.

ಆರಾಧ್ಯ ಮತ್ತು ರೆಡ್ಡಿ ಮೇಶ್ಟ್ರು ನಾನಾಗಲೇ ಹೇಳಿದಂತೆ, ಏನು ಮಹಾ ಇಮ್ಮಡಿ ಚಾಮುಂಡಿ ಅಬ್ಬಾ ಅಂದರೆ ಮುಮ್ಮಡಿ ಚಾಮುಂಡಿ ಎಂದು ತರ್ಕಿಸುತ್ತಲೇ ಹೆಜ್ಜೆ ಹಾಕಿದ್ದರು. ತದ್ವಿರುದ್ಧದವರು – ಲೋಕೇಶ್, ರಾಜಶೇಖರ್; ಒಂದು ರೀತಿಯಲ್ಲಿ ಹೇಳುವುದಾದರೆ ಈ ಯಾತ್ರೆಯ ಮುಖ್ಯ ಪ್ರೇರಕರು. ಇವರು ಬಯಲು ಸೀಮೆಯವರಾದ್ದರಿಂದ ಹಿಮಾಲಯವನ್ನೇರುವ ಗಾಂಭೀರ್ಯದಲ್ಲೇ ನಡೆದಿದ್ದರು. ಬಿದ್ದು ಸಿಕ್ಕ ಕಾಡಬಡಿಗೆ ಹಿಮಗೊಡಲಿ, ಇಟ್ಟು ಕೀಳುವ ಪ್ರತಿ ಹೆಜ್ಜೆಯನ್ನು ಶ್ವಾಸೋಛ್ವಾಸಕ್ಕೆ ಹೊಂದಿಸುವ ಪರಿಯಂತೂ ಶುದ್ಧ ಪಾಠದ ಪುಟಗಳೇ. ಬೆಟ್ಟ ಹತ್ತಿದ ಅನುಭವ ನನ್ನದಲ್ಲದಿದ್ದರೂ ಜನ್ಮಕ್ಕಂಟಿದ ಗೂರಲು ಪೀಡಿಸದಿದ್ದರೆ ಇದ್ಯಾವ ಲೆಕ್ಕ ಎಂಬಂತಿತ್ತು ಕೃಷ್ಣಭಟ್ಟರ ಕ್ರಮ. ಆದರೆ ಪ್ರಾಯೋಜಕತೆಯ ದುಷ್ಪರಿಣಾಮಗಳನ್ನು ಆ ಕಾಲಕ್ಕೇ ಸಾರುವಂತಿತ್ತು ಎನ್ಸಿಸಿ ತಂಡ. ಕ್ಯಾಪ್ಟನ್ ರೈ ಮತ್ತವರ ಬಳಗ ಪ್ರಕೃತಿ ಸೌಂದರ್ಯಕ್ಕೆ ತೆರೆದುಕೊಳ್ಳಲೇ ಇಲ್ಲ. ಅವರ ಲಕ್ಷ್ಯವಿದ್ದದ್ದು ಮರಳಿದ ಮೇಲೆ ದಕ್ಕುವ Special adeventure course certificate! ಕಾಳಜಿ, ಖರ್ಚುಗಳನ್ನು ಎನ್ಸಿಸಿ ವಹಿಸಿಕೊಂಡಿದ್ದುದರಿಂದ ಪರಿಸರಕ್ಕೆ ಮೈಮನಗಳನ್ನು ಒಡ್ಡುವುದು ಬಿಟ್ಟು ಯಾಂತ್ರಿಕ ನಡಿಗೆಯೊಡನೆ ಕಾಡು ಹರಟೆ ನಡೆಸಿದ್ದರು. ಇವೆಲ್ಲಕ್ಕೆ ಅಪವಾದ ಮಲೆಕುಡಿಯರ ಕುಂಡ – ಮಾತಿಲ್ಲ, ಕತೆಯಿಲ್ಲ; ಯಾವುದಕ್ಕೂ ಬಾಯಿ ತುಂಬಿದ ತಾಂಬೂಲದುಂಡೆ, ಕೆಂಪುಗೀಟಿಕ್ಕಿ ಬಿಗಿದ ತುಟಿಯಲ್ಲಿ ನಸುನಗೆಯ ಮಿನುಗು. ಸಾಲು ಸೋತರೆ ಈತ ನಿಧಾನಿ, ನೂಕಿ ಬಂದರೆ ಪ್ರಧಾನಿ. ಬರಿಗಾಲು ಬೀಸಿ, ಆಗೀಗ ‘ಉಂಬ್ರು’ (= ಇಂಬುಳ, ಜಿಗಣೆ) ಕಿತ್ತು ಹಾಕುತ್ತ ಬೀಸಬೀಸ ನಡೆದಿದ್ದ.

ಜಿಗಣೆ ಎಂದೊಡನೆ ಒಬ್ಬೊಬ್ಬರೆ ಪ್ಯಾಂಟಿನ ಕಾಲೆಳೆದು, ಶೂವಿನ ಸಂದು ಬಿಡಿಬಿಡಿಸಿ ನೋಡಿಕೊಳ್ಳತೊಡಗಿದರು. ಮಳೆಗಾಲದ ಹಸಿ ಆರದ ಕಾಡಿನಲ್ಲಿ ಉಳಿದಿದ್ದ ಜಿಗಣೆಗಳು ಎಲ್ಲರ ಕಾಲಿಗೊಂದು ಎರಡರಂತೆ ಹತ್ತಿದ್ದವು. ಹೆಚ್ಚಿನವರಿಗೆ ಇದು ಕಂಡು (ಕೆಲವರಿಗೆ ಕೇಳಿಯೂ) ಗೊತ್ತಿರದ ‘ಭಯಂಕರ ರಕ್ತಪಿಪಾಸು.’ ಹೊಗೆಸೊಪ್ಪು ರಾಮಬಾಣ ಎಂದವರು ಕುಂಡನ ತಾಂಬೂಲ ಚೀಲಕ್ಕೆ ಸಾಲಗಾರರಾದರು. ಸಿಗರೇಟು ಹರಿದು ಪುಡಿ ಉಜ್ಜುವ ಧಾರಾಳಿಗಳೂ ಇದ್ದರು. ಉಪ್ಪಂತೆ, ಸುಣ್ಣವಂತೆ, ಡೆಟ್ಟಾಲಿನ ವಾಸನೆಯೂ ಸಾಕಂತೆ – ಜನಪದ ವೈದ್ಯದ ಪಟ್ಟಿ ಬಿಡಿಸುವವರು ಒಂದು ಕಡೆ. ಇನ್ನು ಕತೆಗಳು – ಊರು ಸೇರಿದ ಮರುದಿನವೂ ಬನಿಯನ್ನು ರಕ್ತರಂಜಿತವಾದದ್ದು, ಮೂಗಿನಲ್ಲಿ ಠಿಕಾಣಿ ಹೂಡಿ ಶ್ವಾಸ ಬಂದಾದದ್ದು (ಸತ್ತ್ ಗಿತ್ತ್ ಹೋಗ್ಲಿಲ್ಲ, ವೈದ್ಯರು ಪತ್ತೆ ಮಾಡುವವರೆಗೆ ಬಾಯಲ್ಲಿ ಉಸಿರಾಡಿ ಬದುಕಿದ್ದ ಬಿಡಿ), ತೊರೆ ನೀರು ಕುಡಿಯುವಾಗ ಮಾಯಾವಿ ಗಂಟಲಿನಲ್ಲಿ ಕೂತು ಮೂರು ದಿನ ಸತಾಯಿಸಿದ್ದು, ಮಾಣಿ ಕಾಲಿನಲ್ಲೇ ಏರಿ, ಮೇಲಿನ ಸಂದಿನಲ್ಲಿ ಠಿಕಾಣಿ ಹೂಡಿ ‘ಒಂದ’ಕ್ಕೊಂದು ಗೊಂದಲವಾಗುವವರೆಗೂ ಬೆಳೆದದ್ದು! ಬೆಳೆಯುತ್ತಲೇ ಇತ್ತು ಜಿಗಣೆ – ಕತೆಗಳಾ ಮಾರಾಣಿ, ಕೆಂಪಾದವೋ ಎಲ್ಲ ಸೊಂಪಾದವೋ! ತಡೆಯೇನು ಒಡ್ಡಿದರೂ ಯಾವ ಮಾಯೆಯಲ್ಲೋ ಸೇರಿಕೊಂಡ ಇಂಬುಳಗಳ ಕೊಯ್ಲು ನಡೆಸುವುದು ಹೆಚ್ಚಾಯ್ತು, ಸಾಲು ಕುಂಟುವುದು ಅನಿವಾರ್ಯವಾಯ್ತು.

[ವೈಯಕ್ತಿಕವಾಗಿ ಹೇಳುವುದಾದರೆ ನಾನೆಂದೂ ಜಿಗಣೆಯನ್ನು ಒಂದು ತೀವ್ರ ಸಮಸ್ಯೆಯಾಗಿ ಕಂಡವನೇ ಅಲ್ಲ. ಪುರುಸೊತ್ತಿದ್ದಾಗ ಅವನ್ನು ಬೆರಳಿನಲ್ಲೇ ಕಿತ್ತು ತೆಗೆದು, ಉಂಡೆಗಟ್ಟಿ ದೂರ ಎಸೆಯುತ್ತೇನೆ. ಅದರ ಪರಿಣಾಮದಿಂದ ರಕ್ತ ಜಿನುಗುವ ಗಾಯವನ್ನು ಜಿಗಣೆ ವಲಯದಲ್ಲಿರುವವರೆಗೆ ಏನೂ ಮಾಡುವುದಿಲ್ಲ! (ಹರಕು ಕಾಗದ ಅಂಟಿಸುವುದು, ಸಿಕ್ಕಸಿಕ್ಕ ಎಣ್ಣೆ ಮದ್ದು ಬಳಿಯುವುದೆಲ್ಲಾ ಗಾಯದ ಉಪಶಮನಕ್ಕಿಂತಲೂ ಹೆಚ್ಚಿಗೆ ಅದನ್ನು ಸೋಂಕಿಗೆ ಒಳಪಡಿಸುವ ಕ್ರಮಗಳೇ ಆಗುತ್ತವೆ!) ಸೊಳ್ಳೆಗಳಂತೆ ಜಿಗಣೆ ಮಲೇರಿಯಾ, ಡೆಂಗಿಯಂಥ ಯಾವುದೇ ಭೀಕರ ಕಾಯಿಲೆಗಳ ರೋಗಾಣು ವಾಹಕಗಳಲ್ಲ. ಜಿಗಣೆ ಹೀರುವ ಅಥವಾ ಅದರ ಗಾಯದಿಂದ ಭಯಹುಟ್ಟಿಸುವಂತೆ ಜಿನುಗುವ ರಕ್ತ ಒಂದು ಆರೋಗ್ಯವಂತ ದೇಹ ಬುದ್ಧಿಪೂರ್ವಕವಾಗಿ ಮಾಡಬಹುದಾದ ರಕ್ತದಾನದ ಮಿತಿಯ ಹತ್ತಿರಕ್ಕೂ ಬರುವುದಿಲ್ಲ! ಜಿಗಣೆ ವಲಯದಿಂದ ಹೊರ ಬಂದ ಮೇಲೆ ಗಾಯವನ್ನು ಶುದ್ಧ ನೀರಿನಿಂದ ಹಗುರಕ್ಕೆ ತೊಳೆಯುವುದು ಉತ್ತಮ. ಬಿರುಸಿನಿಂದ ತೊಳೆದರೆ ಗಾಯವನ್ನು ಕೆದರಿದಂತಾಗಿ ರಕ್ತ ಒಸರುವುದು ಹೆಚ್ಚಾಗುವ ಅಪಾಯವಿದೆ. ತೊಳೆದ ಮೇಲೆ ಮತ್ತೆ ಸಣ್ಣ ರಕ್ತದ ಜಿನುಗು ಕಾಣಿಸಿದ್ದೇ ಆದರೆ ರೋಗಾಣುಮುಕ್ತ ಹತ್ತಿ ಅಂಟಿಸಬಹುದು. ಜಿಗಣೆ ಕಚ್ಚಿದ್ದಕ್ಕೆ ಸಾಮಾನ್ಯ ವ್ಯಕ್ತಿಗೆ ಗೃಹವೈದ್ಯವೂ ಸೇರಿದಂತೆ ಯಾವುದೇ ಔಷಧದ ಆವಶ್ಯಕತೆ ಇಲ್ಲ. ಒಂದೆರಡು ದಿನದ ಅವಧಿಯಲ್ಲಿ ಗಾಯ ಮಾಯುವ ಹಂತದಲ್ಲಿ ಕಾಣಿಸಬಹುದಾದ ಹಿತವಾದ ತುರಿಕೆಗೆ ಮನಸೋತರೆ, ಅಂದರೆ ತುರಿಸಿದರೆ, ಸೋಂಕು ಉಂಟಾಗಿ ನಿಜ ವೈದ್ಯಕೀಯ ಶುಶ್ರೂಶೆ ಬೇಕಾದೀತು!]

ಹಿಂದಿನ ರಾತ್ರಿಯ ಬೀದಿನಾಯಿಗಳ ಊಳಾಟದಲ್ಲಿ ರೆಡ್ಡಿಯವರ ನಿದ್ದೆಗಾಗಿತ್ತು ಅಡ್ಡಿ. ಮತ್ತೆ ಅಕಾಲದಲ್ಲಿ ನನ್ನ ಸುಪ್ರಭಾತದ ಹಿಂಸೆ. ಹೋಟೆಲಿನಲ್ಲಿ ನನ್ನ ಮಾತು, ‘ಹೊಟ್ಟೆ ಘಟ್ಟಿಯಿರಬೇಕು, ಘಟ್ಟ ಎದುರಿಸಬೇಕನ್ನು’ ರೆಡ್ಡಿ ತುಸು ಹೆಚ್ಚಾಗಿಯೇ ಅನ್ವಯಿಸಿಕೊಂಡಿದ್ದರು. ಅವಲಕ್ಕಿ ಮತ್ತು ಕಡಲೆ ಉಸ್ಲಿ ತುಸು ಹೆಚ್ಚೇ ಜಡಿದದ್ದು, ಗಂಟಲಿನಿಂದ ಪೂರ್ತಿ ಕೆಳಗಿಳಿದು, ತೃಪ್ತಿಯ ರಸೀದಿ ಬರುವ ಮುನ್ನ ಬಿರು ನಡಿಗೆಗೆ ಇಳಿದದ್ದಾಗಿತ್ತು. ಮತ್ತುಂಟಲ್ಲಾ ಹೊಟ್ಟೆಗೆ ಬಿಗಿದ ಎನ್ಸಿಸಿ ವೆಬ್ ಬೆಲ್ಟು, ಹಿಂದೆಳೆಯುವ ಹ್ಯಾವರ್ ಸ್ಯಾಕ್ ಮುಂದೆ ಬಾಗಲು ಬಿಡದ ಎದುರಿನ ಎರಡು ಭರ್ತಿ ಪೌಚ್, ಹೆಜ್ಜೆಹೆಜ್ಜೆಗೂ ಅಂಡುತಟ್ಟಿ ‘ನಡೆ ಮುಂದೆ, ನಡೆ ಮುಂದೆ’ ಜಪಿಸುವ ವಾಟರ್ ಬಾಟಲ್. ಹೀಗೆಲ್ಲ ಎಂದೂ ಅನುಭವಿಸದ ಜೀವಕ್ಕೀಗ ಬೆಟ್ಟದ ಏರು, ಇಂಬುಳದ ಇರುಕು. “ರೆಡ್ಡಿ ಬಿದ್ದರು ಅಯ್ಯೋ ರೆಡ್ದಿ ಬಿದ್ದರು!” ರೆಡ್ಡಿಯ ಆರೈಕೆಗೆ ಎಲ್ಲರು ನಾ ಮುಂದು ತಾಮುಂದು. ಬಾರು ಬೆಲ್ಟುಗಳ ಬಿಗಿತಗಳನ್ನೆಲ್ಲ ಸಡಿಲಿಸಿ, ತುಸುವೇ ನೀರು ಕುಡಿಸಿದೆವು. ಹತ್ತು ಮಿನಿಟು ವಿರಮಿಸಿದ ಮೇಲೆ ಚೇತರಿಸಿಕೊಂಡ ರೆಡ್ಡಿ, ಯಾರೂ ನಿರಾಕರಿಸಲಾಗದ ದೃಢತೆಯಲ್ಲಿ ಸ್ವಯಂ ನಿವೃತ್ತಿ ಘೋಷಿಸಿದರು. ಅವರ ಗಂಟು ಗದಡಿ ಹೊರೆಹೊತ್ತ ಕುಂಡ ಅಷ್ಟೇ ಮುಗುಂ ಆಗಿ ರೆಡ್ಡಿಯವರನ್ನು ಸುಬ್ರಹ್ಮಣ್ಯಕ್ಕೆ ಮರಳಿಸಿ ಬಂದ.

ಕುಂಡ ಮರಳಿ ಬರುವುದನ್ನು ತಂಡ ಕಾಯಬೇಕಿರಲಿಲ್ಲ. ಆದರೆ ಸ್ವಲ್ಪೇ ಮುಂದೆ ಸಿಕ್ಕ ಕವಲು, ಏಕೈಕ ಅನುಭವಿಯಾದ ನನ್ನ ನೆನಪಿನ ಕೋಶದಲ್ಲಿರಲಿಲ್ಲ. ತಪ್ಪಿ ಮುಂದುವರಿದರೆ ಇನ್ನೊಮ್ಮೆ ಕಡಮಕಲ್ಲು ಘಾಟಿಯ ಅನುಭವ ಮರುಗಳಿಸಿದಂತಾದೀತು! ಸುಮಾರು ಅರ್ಧ ಗಂಟೆ ವಿರಾಮ ಅನಿವಾರ್ಯವಾಯ್ತು. ‘ಲೆಂಕಿರಿ’ ಕಳೆದು ತೆರೆದ ಹುಲ್ಲುಗುಡ್ಡದ ಮೇಲೆ ಗುಡ್ಡದ ಜಾಡು ತೊಡಗಿತು; ಮಡಿಮಡಿಕೆಯ ಬೆಟ್ಟದ ಕಡತ ನಮ್ಮೆದುರು ಅನಂತವಾಗಿ ತೋರಿತು. ಅದನ್ನು ನೋಡುತ್ತಿದ್ದಂತೆ ಅದುವರೆಗೆ ನಾವು ಏರಿದ್ದು ಏನೂ ಅಲ್ಲ, ಮುಂದೆ ಗುರಿ ಮುಟ್ಟುವುದೂ ನಿಜವಲ್ಲ ಎಂದು ಕೆಲವರಿಗಾದರೂ ಅನ್ನಿಸಿದ್ದರೆ ಆಶ್ಚರ್ಯವಿಲ್ಲ. ಆಳೆತ್ತರದ ಹುಲ್ಲಹಾಸಿನಲ್ಲಿ ಓರೆ ಬೈತಲೆ ತೆಗೆದಂತೆ ಸವಕಲು ಜಾಡು ಸಾಗಿತ್ತು. ಏಣುಗಳ ಪುಟ ನಿಧಾನಕ್ಕೆ ಮಗುಚುತ್ತಾ ಬಿದ್ದ ಉಸಿರು ಹೆಕ್ಕುತ್ತಾ ಏರಿದೆವು. ‘ಗಂಟೆಗೊಮ್ಮೆ ಮಾತ್ರ ಐದು ಮಿನಿಟಿನ ವಿಶ್ರಾಂತಿ’ ಎನ್ನುವ ನನ್ನ ಫರ್ಮಾನು ಅಮಾನವೀಯ ಎನ್ನುವ ತರ್ಕ ಹಲವರಲ್ಲಿ ಬೆಳೆದಿದ್ದರೂ ಹೇಳಲಾಗದ ಸಂಕೋಚ. ಅನ್ಯರ ತಡವರಿಕೆಗೆ ಉಪಕಾರಿಗಳಾಗುವ ನೆಪದಲ್ಲಿ ಚದುರಿದ ಚೈತನ್ಯ ಕಟ್ಟುತ್ತ, ದಿಢೀರ್ ಚೈತನ್ಯದಾಯೀ (ಭ್ರಮೆ) ಗ್ಲೂಕೋಸ್ ಮುಕ್ಕಿ, ನೀರು ಮುಕ್ಕುಳಿಸಿ, ಮೋಸುಂಬಿ ಚಪ್ಪರಿಸಿ ನಡೆದೇ ನಡೆದೆವು. (ಆ ದಿನಗಳಲ್ಲಿ ಇಂದಿನ ಹೊಲಸು ಚ್ಯೂಯಿಂಗ್ ಗಮ್, ವ್ಯಾಧಿಯೇ ಆದ ಗುಟ್ಕಾ ವ್ಯಾಪಕವಾಗಿರಲಿಲ್ಲ.) ಕೆಳಗೆ ಕಾಡಿನಲ್ಲಿ ಹಾದು ಬರುವಾಗ ಅಜ್ಞಾತ ಮರೆಯಲ್ಲಿ ಹೊಂಚುತ್ತಿದ್ದ ದುಷ್ಟಮೃಗ ನಿವಾರಣಾ ಕ್ರಮವಾಗಿ ನಾವು ಸಾಕಷ್ಟು ಬೊಬ್ಬೆ, ಒಂದೆರಡು ಗರ್ನಾಲು ಸಿಡಿಸಿದ್ದಾಗಿತ್ತು. [ಕ್ಷಮಿಸಿ, ನಾನು ಆ ಕಾಲದ ನಮ್ಮ ಮೌಢ್ಯವನ್ನು ಹೇಳುತ್ತಿದ್ದೇನೆ. ಇಂದು ಸ್ಪಷ್ಟ ಗೊತ್ತಿದೆ – ಯಾವುದೇ ವನ್ಯ ಪ್ರಾಣಿ ದುಷ್ಟವಲ್ಲ. ಮುಖಾಮುಖಿ ಆಕಸ್ಮಿಕವಾದಾಗ ಅವುಗಳ ‘ಮನುಷ್ಯ ಭಯ’ ನಿವಾರಣೆಗಾಗಿ ನಮ್ಮ ಮೇಲೆ ಹಲ್ಲೆ ಮಾಡಬಹುದು. ಅದು ಮಾಂಸಾಹಾರಿಯಾಗಿದ್ದು ತೀರಾ ಅನಿವಾರ್ಯತೆ ಮೂಡಿದಾಗ ಕೇವಲ ‘ಆಹಾರ’ ಸಂಪಾದನೆಗಾಗಿ ಆಕ್ರಮಿಸುವ ಸಾಧ್ಯತೆಯಿದೆ. ಇಬ್ಬಿಬ್ಬರೇ ನಿಧಾನಗತಿಯಲ್ಲಿ ನಡೆಯುತ್ತಾ ಪ್ರಾಣಿಗಣತಿ ಮಾಡುವ ಕಾಲಕ್ಕೆ ನಾಗರಹೊಳೆಯಂಥಾ ವನಧಾಮಗಳಲ್ಲಿ ಹುಲಿಗಳು ಎಂಟು-ಹತ್ತು ಮೀಟರ್ ಅಂತರದಲ್ಲೇ ನಮ್ಮವರನ್ನು ಕಂಡು, ಉಪೇಕ್ಷಿಸಿ ದೂರಕ್ಕೆ ನಡೆದುಹೋದ ಉದಾಹರಣೆ ಎಷ್ಟೂ ಉಂಟು!] ಇಲ್ಲಿ ಹುಲ್ಲುಗಾವಲಿನಲ್ಲಿ ನಮ್ಮ ಭಯ ಬಯಲಾಗಿ, ಹುಲ್ಲ ಮರಸಿನಲ್ಲಿ ಅವಿತು ಹೆಜ್ಜೆಗೆಡಿಸುವ ಕಲ್ಲುಗುಂಡುಗಳನ್ನಷ್ಟೇ ಗಮನಿಸಿ ನಡೆದಿದ್ದೆವು. ಹಾಗೊಂದು ದಿಬ್ಬ ಕಳೆಯುವಾಗ ಒಮ್ಮೆಗೆ ಸುದೂರದಲ್ಲಿ ಕಾಣಿಸಿತೊಂದು ‘ಕಾಟಿ’ ಹಿಂಡು. ಕುಂಡ ಬಾಯಿಬಿಡುವ ಮೊದಲು ನಾವು ಕಾಟಿ ಓಡಿಸಲು ಹುಯ್ಲು ಹಾಕಿದ್ದಾಗಿತ್ತು! ನಮ್ಮಾಶ್ಚರ್ಯಕ್ಕೆ ಆ ಹಿಂಡು ಓಡಲಿಲ್ಲ. ಬದಲು ಅವುಗಳ ನಡುವಿನಿಂದ ಓರ್ವ ಪ್ರಾಯಸ್ಥರು ನಮ್ಮತ್ತ ನಡೆದು ಬಂದರು. ಅವರ ಮಾಸದ ನಗೆಯಲ್ಲಿ ಕಾಟಿಗಳು ಮರೆಯಾಗಿ ಅವರ ಸಾಕು ಎಮ್ಮೆಗಳು ಕಾಣಿಸಿದವು. ನನ್ನ ಮೊದಲ ಯಾತ್ರೆಯಲ್ಲಿ ಕಾಣಿಸಿದ್ದ ಹಡಿಲುಬಿಟ್ಟ ಗಿರಿಗದ್ದೆಯಲ್ಲಿ ಈಗ ಈ ಭಟ್ಟರ ಕುಟುಂಬ ಒಕ್ಕಲಾಗಿತ್ತು. ಕಾಡು ಪ್ರಾಣಿಗಳ ಸಹಯೋಗದಲ್ಲಿ ಅವರದೇ ಮಿತಿಯ ಕೃಷಿ ಮತ್ತೆ ಧಾರಾಳವಿರುವ ಹುಲ್ಲು, ನೀರಿನ ಸೌಕರ್ಯದೊಡನೆ ಹೈನುಗಾರಿಕೆ ಮಾಡಿಕೊಂಡು ನೆಲೆಸಿದ್ದು ನಿಜಕ್ಕೂ ಸಾಹಸವೇ. ದಿನಕ್ಕೆರಡು ಬಾರಿ ಹಾಲು ಕೊಟ್ಟು ಬರಲಾದರೂ ಸುಬ್ರಹ್ಮಣ್ಯಕ್ಕೆ ನಡೆದೇ ಹೋಗಿ ಬರಬೇಕಾದ ಇವರ ಜೀವನ ನಿರ್ವಹಣೆ ರಮ್ಯಾದ್ಭುತವೇ ಇರಬೇಕು. [ಇಂದು ಗಿರಿಗದ್ದೆ ಭಟ್ಟರ ಮನೆ ಬಹುತೇಕ ಚಾರಣಿಗರಿಗೆ ಅನಿವಾರ್ಯ ಹೋಂ ಸ್ಟೇ!] ಆದರೆ ಅದನ್ನು ಕೇಳಿ ಕೂರಲು ನಮ್ಮಲ್ಲಿ ಸಮಯವಿಲ್ಲದ್ದರಿಂದ ಬೇಸರದಲ್ಲೇ ಮುಂದುವರಿದೆವು. ಮುಂದೆ ಬಾರತೊಪ್ಪೆ (ಭತ್ತದ ರಾಶಿ), ಪ್ರತಿ ಹೆಜ್ಜೆಯಲ್ಲೂ ನಾವು ಕುಸಿದೆವೋ ರಾಶಿ ಬೆಳೆಯಿತೋ ನಡಿಗೆಯಂತೂ ಮುಗಿಯುವ ಹಾಗೇ ಕಾಣದ ಸ್ಥಿತಿ. ಆರಾಧ್ಯರು ಹಿಂದೆ ಬೀಳುತ್ತಿದ್ದರು. ಕೃಷ್ಣ ಭಟ್ಟರಂತೂ ಪ್ರತಿ ಹೆಜ್ಜೆಗೆ ಮೂರು ಬಾರಿ ಉಸಿರು ತೆಗೆದುಕೊಳ್ಳುವಷ್ಟು ಕಂಗಾಲು. ಇನ್ನೇನು ತಂಡ ಇತ್ತಂಡವಾಗುವುದೆನ್ನುವ ಹೊತ್ತಿಗೆ ‘ಊಟಕ್ಕೇಳಿ’ ಎನ್ನುವಂತೆ ಕ ಚಪ್ಪರ, ಶೀತಲ ತೊರೆ ಸಿಕ್ಕಿದವು.

ಪೊದರ ತಣ್ಣೆಳಲು, ತೊರೆಯ ಅಮೃತದೊಡನೆ ಬುತ್ತಿಯಲ್ಲಿದ್ದದ್ದೆಲ್ಲಾ ರಸಪಾಕವೇ ಆಯ್ತು. ಭರ್ತಿ ಅರ್ಧ ಗಂಟೆಯ ವಿಶ್ರಾಂತಿ ಎಲ್ಲರನ್ನೂ ಹೊಸ ಮನುಷ್ಯರನ್ನಾಗಿಸಿತು. ಪೂರ್ವಾಹ್ನದ ಅನುಭವಗಳನ್ನು ಅಪರಾಹ್ನದ ನಿಬಂಧನೆಗಳನ್ನಾಗಿಸಿಕೊಂಡೆವು. ನಿಧಾನಿಗಳನ್ನೇ ಸಾಲಿನ ಮುಂದಿಟ್ಟು overtaking prohibited ಆಚರಿಸಿದೆವು. ಸೂರ್ಯನ ಮೇಲೆ ಕಣ್ಣಿಟ್ಟುಕೊಂಡು, ವಿಶ್ರಾಂತಿಗಳ ಅಂತರ ಕಡಿಮೆ ಮಾಡಿದರೂ ಅವಧಿ ಹೆಚ್ಚಿಸಿ, ಚಾರಣ ಶಿಕ್ಷೆಯಾಗದಂತೆ ಪ್ರಗತಿ ಕಾಯ್ದುಕೊಂಡೆವು. ‘ಕಡೇಗೆ’ ಎನ್ನುವಂತೆ ನಾವು ‘ಬಾರತೊಪ್ಪೆ’ಯನ್ನು ಅಳೆದು ಸುರಿದು, ಶೇಷ ಸಿದ್ಧರ (ಪರ್ವತಗಳ) ತಲೆಯನ್ನು ಮೆಟ್ಟಿ ನಿಂತೆವು. ಅವುಗಳ ಹಿಮ್ಮೈ ಅಂದರೆ ಅದುವರೆಗೆ ನಮಗೆ ಕಾಣದಿದ್ದ ನೇರ ಪಾತಾಳದಿಂದೆದ್ದಂತೆ ಕಾಣುವ ಕಡಿದಾದ ಕಲ್ಲಿನ ಮೈ. ಅದು ನೇರ ಪಶ್ಚಿಮಕ್ಕೆ ಅರ್ಧ ಚಂದ್ರಾಕಾರದಲ್ಲಿ ತೆರೆದುಕೊಂಡಂತಿತ್ತು. ಪಡುವಣ ಕಡಲ ಗಾಳಿ ಸಿಕ್ಕ ಮೋಡಗಳ ಹಿಂಡನ್ನು ತರುಬಿಕೊಂಡು ತಂದು ಆ ಎತ್ತರದಲ್ಲಿ ವಿಹಾರಕ್ಕೆ ಬಿಟ್ಟಿತ್ತು. ಮೋಡ ಮೋಡಗಳ ಎಡೆಯಲ್ಲಿ ಸಿಕ್ಕಿಕೊಂಡ ಬಿಸಿಲ ಕೋಲುಗಳು ಕಣಿವೆಯಾಳದಿಂದ ಶಿಖರಕ್ಕೆ ಏರುತ್ತ ಬರುವ ದೃಶ್ಯ ಅವಿಸ್ಮರಣೀಯ, ನೋಡಿದಷ್ಟೂ ಸಾಲದು. ಆದರೆ ಈ ಕಣಿವೆಯಾಚಿನ ಅಂಚಿನಲ್ಲಿ ಮೋಡದ ಮುಸುಕೆಳೆದು ಕುಳಿತ ಕುಮಾರನನ್ನು ಒಲಿಸಿಕೊಳ್ಳಲು ತಡವಾದೀತೆಂಬ ಭಯದಲ್ಲೇ ಕಣಿವೆಯ ಮೇಲಂಚಿನಲ್ಲೇ ಹಾಯ್ದು ಮತ್ತೆ ಕಾಡಬಸಿರನ್ನು ಸೇರಿಕೊಂಡೆವು.

ಶಿಖರವಲಯಕ್ಕೆ ಸಹಜವಾಗಿ ಅದು ಕುರುಚಲು ಕಾಡೇ ಆದರೂ ಚಪ್ಪರದ ಹೆಣಿಗೆ ಮಾತ್ರ ದಟ್ಟವಾಗಿತ್ತು. ಕಣಿವೆ ಏರಿ ಬಂದ ಮೋಡ ಮರಗಳೆಡೆಯಲ್ಲಿ ಮಂಜಾಗಿ ಪಸರಿಸಿ ನೆರಳ ಪರಿಣಾಮವನ್ನು ಇನ್ನಷ್ಟು ದಟ್ಟವಾಗಿಸಿತ್ತು. ಚಾರಣಿಗರೋ ಭಕ್ತರೋ ಕಾಟಿಕಡವೆಯಂಥಾ ವನ್ಯಜೀವಿಗಳದ್ದೋ ನಿರಂತರ ಬಳಕೆಯಿಂದ ಪೊದರಕಾಡಿನ ನಡುವಣ ಜಾಡು ನಮ್ಮನ್ನು ನಿಗೂಢಲೋಕಕ್ಕೇ ಒಯ್ಯುವ ಮಾಯಾಮಾರ್ಗ! ಸುಮಾರು ಹತ್ತೇ ಮಿನಿಟಿನಲ್ಲಿ ನಾವು ಕುಮಾರಧಾರಾ ಉಗಮಸ್ಥಾನ ಎಂದು ಭಾವಿಸುವ ತೊರೆಯ ಪಾತ್ರವನ್ನು ಸೇರಿದ್ದೆವು. [ಒಂದು ನೀರ ಸೆಲೆ ಅಥವಾ ಒಂದು ತೊರೆ ಯಾವುದೇ ನದಿಯ ಮೂಲ ಎಂದು ಸ್ಥಾಪಿಸುವುದು ತಪ್ಪಾಗುತ್ತದೆ. ಇಂಚಿಂಚು ನಡೆದು, ಮೋಜಣಿ ಮಾಡಿ ತಯಾರಿಸಿದ ಸರ್ವೇ ಆಫ್ ಇಂಡಿಯಾದ ಭೂಪಟ ನೋಡಿದರೆ ಕುಮಾರಧಾರಾ ಜಲಾನಯನ ಪ್ರದೇಶದ ಅಸಂಖ್ಯ ತೊರೆಗಳಲ್ಲಿ ಇದು ಒಂದು ಚಿಕ್ಕಾನುಚಿಕ್ಕ ಸದಸ್ಯ. ಕುಮಾರಧಾರೆ ಎಂದು ಎದ್ದು ತೋರುವ ದಪ್ಪ ರೇಖೆ ಈ ಶೃಂಗ ಶ್ರೇಣಿಯ ಬಲು ಆಚಿನ ಸೋಮವಾರಪೇಟೆಯ ಆಸುಪಾಸಿನಲ್ಲೆಲ್ಲೋ ತೊಡಗುತ್ತದೆ. ಅದರ ಕಥೆ ಮುಂದೆ ಹೇಳಲಿದ್ದೇನೆ, ಜಾಗ್ರತೆ!]

ಮಳೆಗಾಲ ದೂರವಾದ್ದರಿಂದ ತೊರೆ ಸೊರಗಿತ್ತು. ಆದರೂ ಅದು ಆ ವಲಯದ ಏಕೈಕ ನೀರಿನ ನೆಲೆ ಎನ್ನುವುದನ್ನು ಮರೆಯದೆ, ಶಿಬಿರ ಸ್ಥಾನ ಗುರುತಿಸಿ ಹೊರೆ ಇಳಿಸಿದೆವು. ಮುಂದೆ ಅವರವರ ವಿಶ್ವಾಸ ಎನ್ನುವ ತೋರಮಾತು ಆಡುವುದು ಬಿಟ್ಟು, ದೇಸೀ ಪ್ರಜ್ಞೆಯಾದ ಕುಂಡನನ್ನು ಅನುಸರಿಸಿ ಎಲ್ಲರೂ ಪಾದರಕ್ಷೆಗಳನ್ನೂ ಅಲ್ಲೇ ಕಳಚಿಟ್ಟು, ತೊರೆಯಗುಂಟ ಶಿಖರದತ್ತ ಪಾದ ಬೆಳೆಸಿದೆವು. ತೊರೆ ಪುಡಿಗಲ್ಲುಗಳ ನಡುವೆ ಅಲ್ಲಲ್ಲಿ ಕಣ್ಣಾಮುಚ್ಚಾಲೆ ಆಡಿದರೂ ಎದುರಾದ ಶಿಖರದ ಅಖಂಡ ಬಂಡೆ ಗೋಡೆಯ ಮೇಲೆ ಹಂಚಿ ಹರಿಯುವ ಝರಿಯಾಗಿ ಶೋಭಿಸಿತು. ಬಂಡೆಯನ್ನು ಎಪ್ಪತ್ತು ಎಂಬತ್ತರ ಕೋನದಲ್ಲಿ ಹತ್ತಬೇಕಿದ್ದರೂ ನಿರಪಾಯಕಾರಿಯಾಗಿ ಏರಲು ಬೇಕಾದಷ್ಟು ಕೊರಕಲುಗಳಿದ್ದವು. ಸಣ್ಣಪುಟ್ಟ ತಗ್ಗು ಮಾಟೆಗಳಲ್ಲಿ ನೊಜೆಹುಲ್ಲು ಬೇರು ಬಿಟ್ಟು, ಆರೋಹಿಗಳಿಗೆ ಹೆಚ್ಚಿನ ಧೈರ್ಯ ಕೊಡುತ್ತಿತ್ತು. ಅಲ್ಲಲ್ಲಿ ಜಿನುಗಿ, ಕೆಲವೆಡೆಗಳಲ್ಲಿ ಕಲಕಲಿಸುವ ನೀರು ಮತ್ತು ಪಾಚಿಗಟ್ಟಿ ಹೂವರಳಿಸಿದ ಜಾಡು ನೋಡುವ ಸಂತೋಷದೊಡನೇ ನದೀಮೂಲ ನೋಡಬೇಡಿ ಎಂದವ ಗಾವಿಲನೇ ಸೈ ಎಂದುಕೊಂಡೆವು! [ಋಷಿ ಮೂಲದ ಒಂದು ಪಾಠಕ್ಕೆ ‘ಕೆಂಡಸಂಪಿಗೆ’ಯಲ್ಲಿ ಬರುತ್ತಿರುವ ವಿದ್ಯಾಭೂಷಣರ ಆತ್ಮಕಥೆ ಅವಶ್ಯ ಓದಿ] ಈ ಹಸುರುಭಿತ್ತಿಯ ಎಡೆ ಎಡೆಯಲ್ಲಿದ್ದ ಒಣ ಜಾಡನ್ನೇ ಆಯ್ದುಕೊಂಡು ನಾವು ಸುಲಭವಾಗಿಯೇ ಶಿಖರ ಸಾಧಿಸಿದೆವು. (ಸಮುದ್ರ ಮಟ್ಟದಿಂದ ೧೭೧೨ ಮೀ)

ಬಂಡೆಮಂಡೆಗೆ ಗೊಸರು ಮತ್ತು ದಟ್ಟ ನೊಜೆಹುಲ್ಲಿನ ಟೊಪ್ಪಿ ಹಾಕಿದಂತಿತ್ತು ಶಿಖರವಲಯ. (ಇಲ್ಲೇ ಅಂತರ್ಜಾಲದಲ್ಲಿ ನನ್ನ ಹಳೆಯ ಕಡತದಲ್ಲಿ ಜಮಾಲಾಬಾದ್ ಸರಣಿಯಲ್ಲಿ ನಾನು ಅಂದಾಜಿಸಿದಂತೆ) ಶತಶತಮಾನಗಳಿಂದ ಈ ಬಂಡೆಮಂಡೆಯಲ್ಲಿ ವಿಕಸಿಸಿರಬಹುದಾದ ಈ ಹುಲ್ಲಿನಗಡ್ಡೆಗಳು ಚಿರಂಜೀವಿಗಳೇ ಇರಬೇಕು. ಋತುಮಾನಕ್ಕೆ ತಕ್ಕಂತೆ ಹೊಸಚಿಗುರು ಕೊಟ್ಟು ಮತ್ತೆ ತನ್ನಲ್ಲೇ ಜೀರ್ಣಿಸಿಕೊಳ್ಳುವ ಇವು ಬರಿಯ ಹುಲ್ಲಲ್ಲ, ವ್ಯರ್ಥ ಗುಡ್ಡೆಬಿದ್ದ ಮಣ್ಣಲ್ಲ, ಮಾಯಕದ ನೀರಭಾಂಡವಲ್ಲ, (ಸ್ಪಷ್ಟ ನೋಡಲು ಸಿಗಬಹುದಾದ ಗೊರಸಿನ ಪ್ರಾಣಿಗಳಿಂದ ತೊಡಗಿ ಜಿಗಣೆ ಬಸವನಹುಳುಗಳವರೆಗಿನ) ಜೀವವೈವಿಧ್ಯದ ಹೂಟವಲ್ಲ ಆದರೆ ಎಲ್ಲವೂ ಹೌದು! ಒಟ್ಟಾರೆ ಪಶ್ಚಿಮಘಟ್ಟದ ಹುಲ್ಲುಗಳ ಬಗ್ಗೆಯೂ ಸಾಕಷ್ಟು ಅಧ್ಯಯನ ಮಾಡಿ ವಿದ್ವತ್ಪೂರ್ಣ ಪುಸ್ತಕವನ್ನೂ ಪ್ರಕಟಿಸಿರುವ ಡಾ| ಕೆ. ಗೋಪಾಲಕೃಷ್ಣ ಭಟ್ಟರು (ಉಡುಪಿಯಲ್ಲಿದ್ದೂ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಸಸ್ಯ ವಿಜ್ಞಾನಿ) ನನ್ನ ಈ ಬರಹಗಳನ್ನು ಸದಾ ಓದಿನಲ್ಲಿ ಅನುಸರಿಸುವ ಕುತೂಹಲಿ. ಅವರು ಕೃಪೆ ಮಾಡಿ, ಇಲ್ಲೇ ಕೆಳಗಿನ ಪ್ರತಿಕ್ರಿಯಾ ಅಂಕಣದಲ್ಲಿ ಸಾಮಾನ್ಯರಿಗೆ ನಿಲುಕುವಷ್ಟು ವಿವರಣಾ ಟಿಪ್ಪಣಿಯನ್ನು ಬರೆಯುವುದಾಗಿ ಒಪ್ಪಿರುವುದರಿಂದ (ಅವರಿಗೆ ಅನಂತ ವಂದನೆಗಳು) ನಾನು ಚಾರಣಕ್ಕೆ ಮರಳುತ್ತೇನೆ.

ಎಳೆಗರಿಕೆಯ ಮೇವಿಗೆ ಸಾಕಷ್ಟು ಕಾಟಿಕಡವೆಗಳು ಓಡಾಡಿದ ಲಕ್ಷಣಗಳನ್ನು ಗುರುತಿಸುತ್ತಾ ನೊಜೆಗಡ್ಡೆಗಳನ್ನೇ ಪಾದ ಊರಲು ಭದ್ರ ನೆಲೆಗಳನ್ನಾಗಿ ಆಯ್ದುಕೊಳ್ಳುತ್ತಾ ಸಾಗಿ ಮತ್ತೆ ಒಣನೆಲವೇ ಆದ ಶಿಖರದ ಕೇಂದ್ರವನ್ನು ಸೇರಿದೆವು. ಇಲ್ಲಿ ಭಕ್ತಾದಿಗಳು ಕಾಡ ಕಲ್ಲುಗಳನ್ನೇ ಅಪ್ಪಟ ಜನಪದ ಶೈಲಿಯಲ್ಲಿ ಒಟ್ಟು ಮಾಡಿ ಗುಡಿಯ ರೂಪಕೊಟ್ಟಿದ್ದರು. ಇಲ್ಲಿ ಕೊಡಗಿನ ವಲಯದವರು ‘ಪುಷ್ಪಗಿರಿ’ ಎಂದೂ ದ.ಕವಲಯದವರು ಕುಮಾರಪರ್ವತವೆಂದೂ ತೋರಿದ ಭಕ್ತಿ, ಸಲ್ಲಿಸಿದ ಪೂಜೆಗಳ ಕುರುಹುಗಳಿಗೆ ನಮ್ಮವರದೂ ಕೆಲವನ್ನು ಸೇರಿಸಿದೆವು. ದೃಶ್ಯ ವೀಕ್ಷಣೆಗೆ ಏನೇನೂ ಅವಕಾಶ ಒದಗದಂತೆ ಅಖಂಡ ಮೋಡ ಆವರಿಸಿತ್ತು. ದಿನದ ಮುಕ್ಕಾಲು ಭಾಗ ನಮ್ಮನ್ನು ಹುರಿದಿಕ್ಕಿದ ಬೆಂಗದಿರನ ಅಟಾಟೋಪಕ್ಕೆ ಇಲ್ಲಿ ಶೀತಲ ಅವಗುಂಠನ! ಸಹಜವಾಗಿ ನಾವು ಶಿಬಿರ ಸ್ಥಾನಕ್ಕೆ ಮರಳಿದೆವು.

ವಿಪರೀತ ಹವಾಮಾನಕ್ಕೆ ವಿಶಿಷ್ಟ ಶಿಬಿರ ಸಾಮಗ್ರಿಗಳಾಗಲೀ (ಗುಡಾರ, ಹಗುರ ಆದರೆ ಬೆಚ್ಚನೆ ಉಡುಪುಗಳು, ನಿದ್ರಾಚೀಲ ಇತ್ಯಾದಿ) ಸಿದ್ಧ ತಿನಿಸುಗಳ ಒಳದಾರಿಯಾಗಲೀ ನಮ್ಮನ್ನು ತಲಪದ ದಿನಗಳವು. (ಗಮನಿಸಿ, ಇರದ ದಿನಗಳಲ್ಲ, ನಮ್ಮನ್ನು ತಲಪಿರಲಿಲ್ಲ). ಹಾಗಾಗಿ ಅಡುಗೆಗೆ ಮತ್ತು ಶಿಬಿರಾಗ್ನಿ ಎಂಬ ಆವಶ್ಯಕತೆಗೆ ಸೌದೆ ಸಂಗ್ರಹಿಸುವುದು (ತಾರಾ ಹೋಟೆಲುಗಳಲ್ಲಿ ಶಿಬಿರಾಗ್ನಿ ಒಂದು ರಮ್ಯ ಐಶಾರಾಮ, ವಾಸ್ತವದ ವ್ಯಂಗ್ಯ!), ನೀರ ಸಂಗ್ರಹ ಮತ್ತು ಬಳಕೆಯ ವಿಧಿ ನಿಷೇಧಗಳನ್ನು ಸ್ಪಷ್ಟಪಡಿಸಿಕೊಳ್ಳುವುದು, ಮಲಗು ಜಾಗಗಳನ್ನು ಹಸನುಮಾಡಿಕೊಳ್ಳುವುದು ಮತ್ತು ಎಲ್ಲಕ್ಕೂ ಮುಖ್ಯವಾಗಿ ಸಂಜೆಯ ಕಾಫಿ ಶಾಸ್ತ್ರದಿಂದ ರಾತ್ರಿಯ ಊಟದವರೆಗೆ ಅಡುಗೆಯ ಕೆಲಸಕ್ಕಿಳಿಯುವುದು ನಡೆಯಿತು. ಬಿಡಿ ವಿವರಗಳ ಚಿತ್ರಣದಲ್ಲಿ ನಿಮ್ಮ ತಲೆ ತಿನ್ನುವುದಿಲ್ಲ. ಆದರೆ ಅಂದು ಬಂದ ಎನ್.ಸಿ.ಸಿ ಅಧಿಕಾರಿ ಮತ್ತು ಅವರ ಶಿಷ್ಯರ ಬೇಜವಾಬ್ದಾರಿಯ ಕುರಿತು ಎರಡು ಮಾತು ಹೇಳದಿರಲಾರೆ. ರಾತ್ರಿ ಹಗಲಾಯ್ತು. ಬೆಟ್ಟ ಇಳಿದದ್ದೂ ಮಂಗಳೂರಿಗೆ ಮರಳಿದ್ದೂ ಆಗಿ ವರ್ಷಗಳು ಮೂವತ್ತೇ ಮಿಕ್ಕಿತು. ಆದರೂ ಅಂದು ತಂಡದ ಸದಸ್ಯರಾಗಿ ಮಾತ್ರ ಬಂದವರು ಎನ್.ಸಿ.ಸಿ ಎಂಬ ವಿಶಿಷ್ಟವರ್ಗದ ಗಣ್ಯ ಅತಿಥಿಗಳಂತೇ ಯಾವ ಕೆಲಸದಲ್ಲೂ ಭಾಗಿಗಳಾಗದೇ ಉಳಿದದ್ದು, ಸುಲಭವಾಗಿ ಉರಿಯದ ಒಲೆಯೊಡನೆ ಏಗಾಡಿ ಮಾಡಿದ ಅಡುಗೆಯನ್ನು ಅನುಭವಿಸುವ ಮಾನಸಿಕ ಹದ ತೋರದೆ ದುರ್ವರ್ತನೆ ತೋರಿದ್ದು ಎಂದೂ ಮರೆಯಲಾರೆ. ಅನಂತರದ ಇಷ್ಟೂ ವರ್ಷಗಳಲ್ಲಿ ಎಷ್ಟೂ ಜನಗಳೊಡನೆ ನಾನು ವೈವಿಧ್ಯಮಯ ಪ್ರಾಕೃತಿಕ ಸಂದರ್ಶನಗಳನ್ನು ಮಾಡಿದ್ದೇನೆ. ಅಲ್ಲೆಲ್ಲಾ ಅಂದು ಕುಮಾರಪರ್ವತದಲ್ಲಿ ಸಿಕ್ಕ ‘ಪಾಠದ’ ಬಲದಲ್ಲಿ, ನಾನು ಒಟ್ಟಾರೆ ಶಿಬಿರವನ್ನು ಹರ್ಷದಾಯಕವಾಗಿ ಮುಗಿಸುವಂಥಾ ಕಠಿಣ ನಿಲುಗಿಗೆ ಬರಲು ಸಾಧ್ಯವಾದದ್ದಕ್ಕೆ ಪರೋಕ್ಷವಾಗಿ ‘ಪ್ರಾಯೋಜಿತ ಎನ್ಸಿಸಿ’ ತಂಡಕ್ಕೆ ಕೃತಜ್ಞನೂ ಹೌದು.

(ಮುಂದುವರಿಯುವುದು)

[ನಾನು ಚಾರಣಗಳ ಸಮರ್ಥ ನಿರ್ವಹಣೆಗಾಗಿ, ಎರಡು ವರ್ಷ ಹೆಣಗಿ, ದಕ ಜಿಲ್ಲಾ ವಲಯದ ಸರ್ವೇಕ್ಷಣಾ ಇಲಾಖೆಯ ಸವಿವರ ನಕ್ಷೆಗಳನ್ನು ಸಂಪಾದಿಸಿದ್ದೆ. (ಒಂದಿಂಚು=ಒಂದು ಮೈಲು ಅಳತೆಯಲ್ಲಿ, ಉತ್ತರದಲ್ಲಿ ಶಿರೂರಿನಿಂದ ತೊಡಗಿ ದಕ್ಷಿಣದಲ್ಲಿ ಕಾಸರಗೋಡಿನವರೆಗೆ ಹರಡಿದ ಅಂದಿನ ದಕ ಜಿಲ್ಲೆ ಎರಡಡಿ ಗುಣಿಸು ಎರಡೂವರೆ ಅಡಿ ವಿಸ್ತಾರದ ಇಪ್ಪತ್ತಾರು ಹಾಳೆಗಳಲ್ಲಿ ದಾಖಲಾಗಿದೆ. ಭೂಮಿಯ ಪ್ರತಿ ಐವತ್ತಡಿ ಅಂತರದಲ್ಲಿ ಕಾಣುವ ಎತ್ತರ ತಗ್ಗುಗಳಿಂದ ತೊಡಗಿ, ನೀರು, ಹಸಿರು ಮುಂತಾದ ಪ್ರಾಕೃತಿಕ ವೈವಿಧ್ಯಗಳೊಡನೆ ಮನುಷ್ಯ ಅಗತ್ಯಗಳಾದ ಕಾಡು ಗುಡ್ಡಗಳಲ್ಲಿನ ಜಾಡು, ತೊರೆ ನದಿಗಳ ಕಡವು, ಭೂಮೇಲ್ಮೈಯಲ್ಲಿ ಕಾಣುವಂತೆ ಮನುಷ್ಯ ರಚನೆಗಳ ಎಲ್ಲಾ ವಿವರಗಳನ್ನೂ ಈ ನಕ್ಷೆಗಳು ದಾಖಲಿಸುತ್ತವೆ) ವಿರಾಮದಲ್ಲೊಮ್ಮೆ ಕುಮಾರಪರ್ವತದ ವಲಯದ ನಕ್ಷೆ ‘ಓದುತ್ತಿರುವಾಗ’ ಶಿಖರದ ದಕ್ಷಿಣ ಮೈಯಲ್ಲಿ ಸುಮಾರು ಎಂಟ್ನೂರು ಅಡಿಗೂ ಮಿಕ್ಕ ಎತ್ತರದ ಜಲಪಾತವೊಂದರ ಉಲ್ಲೇಖ ನೋಡಿ ತೀವ್ರ ಕುತೂಹಲಿಯಾದೆ. ಈ ಗಂಗಾವತರಣದ ದರ್ಶನಕ್ಕೆ ಸಗರ ವಂಶಸ್ಥರಂತೆ ನಾನು ಮೂರು ತಲೆಮಾರೇನೂ ಹೆಣಗಲಿಲ್ಲ. ಆದರೆ ಸಾಧನೆಯ ತಪಸ್ಸು ಶಬ್ದಗಳ ಮಿತಿಯಲ್ಲಿ ಮೂಡಿ ಬರುವ ಮುಂದಿನ ದಿನದವರೆಗೆ ಈ ಕಥನದ ನಿಮ್ಮ ‘ಪಾರಾಯಣ ಫಲ’, ಮುಂದಿನ ಕಥನಕ್ಕೆ ‘ಉದ್ದೀಪನದ ತಪ’ನನಗೆ ಕಾಣಿಸಲು ನಿಮಗಿರುವ ಏಕೈಕ ಮಾರ್ಗ ಕೆಳಗಿನ ಪ್ರತಿಕ್ರಿಯಾ ಅಂಕಣವನ್ನು ನಿಮ್ಮ ಸಮಾನ ಅನುಭವದಿಂದ ಧಾರಾಳ ತುಂಬುವುದು ಎನ್ನುವುದನ್ನು ಮರೆಯಬೇಡಿ.]