(ಕುಮಾರಪರ್ವತದ ಆಸುಪಾಸು ಭಾಗ ನಾಲ್ಕು)

ಜಿಟಿಜಿಟಿ ಮಳೆ, ಕಾಲೇರುವ ಜಿಗಣೆ, ಎಲ್ಲವನ್ನು ಅಮರಿಸುವಂಥ ದಟ್ಟ ಕಾಡು. ಅದೊಂದು ದಾರಿಯ ಅವಶೇಷ. ಎದುರು ಒಂದು ಸ್ಕೂಟರ್ ಮತ್ತು ಎರಡು ಬೈಕುಗಳು ಗಟ್ಟಿ ನೆಲದಲ್ಲೇನೋ ನಿಂತಿದ್ದವು. ಆದರೆ ಹಿಂದೊಂದು ಜೀಪು, ಪಕ್ಕದ ಮೋಟು ದರೆಯಿಂದ ಕೆಳಗೆ ದಾರಿಗಡ್ಡ ಬಿದ್ದ ಭಾರೀ ಮರವೊಂದರ ಅಡಿಯಲ್ಲಿ ನುಸಿಯಲು ಪ್ರಯತ್ನ ನಡೆಸಿತ್ತು. ಮರದ ರೆಂಬೆ, ಸೊಪ್ಪು, ಆವರಿಸಿಕೊಂಡ ಬೀಳಲು ಅಲ್ಲದೇ ದರೆಯೂ ಸ್ವಲ್ಪ ಕುಸಿದಿದ್ದುದರಿಂದ ಅಗಲ ಸಾಲದಾಯ್ತು. ರೆಂಬೆ, ಬೀಳಲುಗಳನ್ನು ಕೈಯಲ್ಲೇ ಮುರಿದು, ಎಳೆದು ಬಿಡಿಸಿ ಕೊಟ್ಟರೂ ಜೀಪಿನ ತಲೆ ಒರೆಸುತ್ತಿತು. ಜೀಪಿನೊಳಗಿನವರು ಹೊರಗಿಳಿದದ್ದಲ್ಲದೆ ದ್ವಿಚಕ್ರಿಗಳೂ ಸೇರಿ ನಾವು ಜನ ಹತ್ತು ಹದಿನೈದರ ಮೇಲಿದ್ದೆವು. ಕಾಡ ಕೋಲು, ಬರಿಗೈಗಳಲ್ಲಿ ದರೆಯ ಬುಡವನ್ನು ಒಕ್ಕಿ, ಕೆಸರು ಕಲ್ಲನ್ನು ಹರಡಿ ಅವಕಾಶವನ್ನೇನೋ ಸ್ವಲ್ಪ ವಿಸ್ತರಿಸಿಕೊಟ್ಟೆವು. ಸಾಲದೆಂಬಂತೆ ಗೊಸರಿನಲ್ಲಿ ಬಳಲುವುದು ಬೇಡವೆಂದು ನೂಕಲು ಕೈಕೊಟ್ಟೆವು. ಸವೆದು ಹೆಚ್ಚು ಕಡಿಮೆ ನುಣ್ಣಗಿದ್ದ ಜೀಪಿನ ಹಿಂಚಕ್ರ ಸಿರ್ರೆಂದು ಕೆಸರ ಕಾರಂಜಿ ನಮ್ಮ ಮುಖಕ್ಕೆ ಹೊಡೆದು, ನಾವು ಊಹಿಸದ ಚರಂಡಿಯ ಆಳಕ್ಕಿಳಿದು ಸಿಕ್ಕಿಕೊಂಡಿತು. ಮಹಾರಥಿ ಶರತ್‌ಗೆ (ಜೀಪಿನ ಚಾಲಕ, ಮಾಲಿಕ) ಪ್ರತ್ಯೇಕ ಸಾರಥಿಯಿರಲಿಲ್ಲವಾದರೂ ಕರ್ಣನ ಪಡಿಪಾಟಲೇನೂ ಆಗಲಿಲ್ಲ. ನಮ್ಮಲ್ಲಿ ಕೆಲವು ಧಾಂಡಿಗರು ಚಕ್ರದ ಬುಡಕ್ಕೆ ಕಲ್ಲು ಗಿಡಿದೆವು. ಮುಂದಿನ ನಡೆಗೆ ಅದೇ ಮುರಿದ ಕಾಡ ಗೆಲ್ಲೂ ಮುರಿದು ಹಾಸಿದೆವು. “ಫೋರ್ ವೀಲ್ ಹಾಕೋ ಮಂಗ” ಚಡ್ಡೀ ದೋಸ್ತ್ ಸೂರ್ಯನ ಸಲಹೆ. ನಟಭಯಂಕರ ಶರತ್ “ಸಾರಿ, ಸಾರಿ ಮಾರಾಯಾ” ಎನ್ನುತ್ತಾ ಹಾಕಿದ ನಟನೆ ಮಾಡಿದ! (ಎಲ್ಲ ಮುಗಿದ ಮೇಲೆ ಗುಟ್ಟು ಬಿಟ್ಟ, ಆ ಜೀಪಿನ ಫ಼ೋರ್ ವೀಲ್ ಡ್ರೈವ್ ನಿಷ್ಕ್ರಿಯವಾಗಿ ಹಲಕಾಲವಾಗಿತ್ತು) ಆದರೀಗ ಎತ್ತರಿಸಿದ ನೆಲದಿಂದ ಮತ್ತೆ ಮೇಲಡ್ಡಬಿದ್ದುಕೊಂಡಿದ್ದ ಮರದ ಬೊಡ್ಡೆ ಜೀಪು ಒತ್ತುತ್ತಿತ್ತು. ವಿದ್ಯಾರ್ಹತೆಯಿಂದ (ಜೀವಜಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರ) ಎಲ್ಲೋ ಅಧ್ಯಾಪಕನಾಗಬಹುದಾಗಿದ್ದ ಅರವಿಂದ ರಾವ್ ಸ್ವಂತ ಯೋಗ್ಯತೆಯಿಂದ ಸೂಕ್ಷ್ಮ ವೈಜ್ಞಾನಿಕ ಸಲಕರಣೆಗಳ ರಿಪೇರಿಯನ್ನೇ ವೃತ್ತಿಯಾಗಿಸಿಕೊಂಡು (ಕಮಲಜೀತ್ ಲ್ಯಾಬೊರೇಟರಿ ಸರ್ವಿಸಸ್) ಯಶಸ್ವಿಯಾದ್ದಕ್ಕೆ ಇಲ್ಲೂ ಸಾಕ್ಷಿ ಸಿಕ್ಕಿತು. ಸ್ವಯಂಸ್ಫೂರ್ತಿಯಿಂದ ಒಟ್ಟಾರೆ ‘ಆಪರೇಶನ್ ಜೀಪ್ ಪಾರ್ ಕರೋ’ದ ನಿರ್ದೇಶಕನಾಗಿದ್ದ ಅರವಿಂದ ಜೀಪಿನ ಜ್ಯಾಕ್ ತೆಗೆದು, ಬೊಡ್ಡೆ ನೆಲಮುಟ್ಟಿದ ಗಟ್ಟಿಸ್ಥಳವೊಂದರಲ್ಲಿ ಸ್ಥಾಪಿಸಿ, ಮರವನ್ನೇ ಎತ್ತಿಕೊಟ್ಟರು. ಮತ್ತೆ ಕೇಳಬೇಕೇ ತಂಡದವರ “ಅಲೇಲಂಬಾ ಐಸಾssss”ಗಳೊಡನೆ ಖಾಲಿ ಜೀಪೇನು ಲೋಡೆಡ್ ಲಾರಿಯಿದ್ದಿದ್ದರೂ ದಾಟಲೇ ಬೇಕಿತ್ತು, ದಾಟಿದೆವು! ಎಲ್ಲಿಯಿದು? ಯಾಕಿದು? ಅತ್ತ ಏನು ಸ್ವರ್ಗ ಸೂರೆಹೋಗಿತ್ತೇ? ಇಪ್ಪತ್ತಾರು ವರ್ಷಗಳನಂತರದಲ್ಲಿ ಹೀಗೇ ಮೂಡುವ ಪ್ರಶ್ನಾವಳಿಗೆ ಉತ್ತರಿಸಲು ಕಾಲಕೋಶಕ್ಕೆ ತೀವ್ರ ರಿವರ್ಸ್ ಗೇರ್ ಹಾಕುತ್ತೇನೆ, ಬನ್ನಿ.

ನಾನಿನ್ನೂ ಎರಡಂಕಿ ಹರಯ ಮುಟ್ಟದ ಪೋರ. ನನ್ನ ಸೋದರಮಾವ (ಕೃಷಿಕ) ತಿಮ್ಮಪ್ಪಯ್ಯನವರಿಗೆ ಜಾನುವಾರು ಸಾಕಣೆಯ ಖಯಾಲಿಯೂ ಯೌವನವೂ ಜೋಡಿಕೊಂಡಿದ್ದ ಕಾಲ. ಅವರ ಕನಸಿನ ಸುಂದರ ಎತ್ತಿನ ಜೋಡಿ, ಒಳ್ಳೇ ಕರಾವಿನ ಸಿಂಧಿ ಹಸು, ರುಚಿಕಟ್ಟಾದ ಕಾಫಿಗೆ ಬೇಕಾದ ಮಂದ ಹಾಲಿಗೆ ಮುರ ಎಮ್ಮೆಗಳೆಲ್ಲಕ್ಕೂ ಪ್ರಶಸ್ತ ಮಾರುಕಟ್ಟೆ ಕುಳ್ಕುಂದದ ವಾರ್ಷಿಕ ಜಾನುವಾರು ಜಾತ್ರೆ. (ಸುಬ್ರಹ್ಮಣ್ಯ ಪೇಟೆಯ ಹೊರವಲಯದಲ್ಲೇ ಇರುವ ಸ್ಥಳ ಕುಳ್ಕುಂದ. ಅನುರೂಪದ ಮನುಷ್ಯ ದಂಪತಿ ನೋಡಿದರೂ ‘ಸುಬ್ರಹ್ಮಣ್ಯ ಜೋಡಿ’ ಎನ್ನುವಷ್ಟು ಪ್ರಸಿದ್ಧ ಅಲ್ಲಿನ ಜಾನುವಾರು ಜಾತ್ರೆ.) ಮಾವನ ಕೃಷಿ ಸಂಬಂಧೀ ಓಡಾಟಕ್ಕೆ ಹೆಚ್ಚಾಗಿ ಒದಗುತ್ತಿದ್ದ ಬಂಡಿಬೋವ ಪುತ್ತಪ್ಪ ಬ್ಯಾರಿ ಜಾನುವಾರು ಜಾತ್ರೆಗೆ ಒಳ್ಳೆ ತೈನಾತಿ. ಎಷ್ಟಿದ್ದರೂ ತನ್ನ ವ್ಯವಹಾರ ತಜ್ಞತೆಯಿಂದಲೇ ಹೆಸರು ಗಳಿಸಿದ ಸಮುದಾಯದ ಸದಸ್ಯನಲ್ಲವೇ ಪುತ್ತಪ್ಪ (ವ್ಯಾಪಾರ>ಬ್ಯಾರ>ಬ್ಯಾರಿ). ಆತ ಹೇಳುತ್ತಿದ್ದ, “ಘಟ್ಟದ ಮೇಲಿನ ಜಾನುವಾರು ಜಾತ್ರೆಯಂಗಳಕ್ಕಿಳಿದು, ಬೇಡಿಕೆ ನೋಡಿ, ಮಾರಾಟಗಾರ ಧಾರಣೆ ಏರಿಸುವುದೋ ಮತ್ತೆ ಗಿರಾಕಿ ಸ್ಪರ್ಧಾತ್ಮಕ ದರಕ್ಕೆ ಕುದುರುವ ಮುಜುಗರವೋ ಬಾರದಂತೆ ಬುದ್ಧಿವಂತರು ಬಿಸಿಲೆಗೇ ಹೋಗಬೇಕು.” ಮಾರ್ಗಕ್ರಮಣದ ಕುರಿತು ಆತನ ಮಾತು – ಸೂರ್ಯೋದಯಕ್ಕೂ ಮುನ್ನ ಸೂಟೆ (ಒಣ ತೆಂಗಿನಗರಿಗಳದ್ದೇ ದೀವಟಿಗೆ) ಬೀಸಿಕೊಂಡು ನುಗ್ಗಬೇಕಾಗುತ್ತಿದ್ದ ದುರ್ಗಮ ಕಾಡು, ನಸುಕಿನ ಚಳಿಯಲ್ಲೂ ಬೆವರಹೊಳೆ ಹರಿಸಬೇಕಾಗುವ ಕಟ್ಟೇರು, ಅಟಕಾಯಿಸುತ್ತಿದ್ದ ದುಷ್ಟಮೃಗಗಳ, ಹೊಂಚುವ ದರೋಡೆಕೋರರುಗಳೆಲ್ಲಾ ನನಗಂತೂ ಫ್ಯಾಂಟಮನ ಡೀಪ್ ವುಡ್ಸ್ ಆಫ್ ಡೆಂಕಲಿಯೇ ಪಶ್ಚಿಮಘಟ್ಟದ ಈ ಮೂಲೆಗೆ ಇಳಿದಷ್ಟೇ ರೋಚಕ; ಬಿಸಿಲೆ ಒಂದು ರೂಪಕ. ಆ ವಲಯದಲ್ಲಿ, ಇಂದು ನಾನು ಮತ್ತು ಕೃಷ್ಣಮೋಹನ್ ಸಂರಕ್ಷಣೆಗಾಗಿ ಕೊಂಡಿರುವ ವನ್ಯಪ್ರದೇಶದ (ಅಶೋಕವನ) ಕೆಳ ಅಂಚಿನಲ್ಲಿರುವ ‘ಕಳ್ಳರಗಂಡಿ’ ಸ್ಥಳನಾಮ, ಮತ್ತೆ ನಮ್ಮ ಲೆಕ್ಕಕ್ಕೆ ಬಿಸ್ಲೆ ಹಳ್ಳಿಯ ವಕ್ತಾರ ಕರಿಯಣ್ಣ ಉರುಫ್ ದೇವೇಗೌಡ ಕೊಡುವ ಐತಿಹ್ಯಗಳು ಈ ಜಾಡನ್ನು ಇಂದೂ ಕಡಿಮೆ ಬೆಳಕಿನಲ್ಲಿ ಕಾಣಿಸುವುದಿಲ್ಲ! ನಾನು ಮೊದಲಲ್ಲೇ ಹೇಳಿದ ಜೀಪು, ದ್ವಿಚಕ್ರಿಗಳ ನಮ್ಮ ಅನ್ವೇಷಕ ತಂಡವಾದರೂ ಇದ್ದದ್ದು ಅದೇ ಬಿಸಿಲೆ ದಾರಿಯ ಪ್ರಾಥಮಿಕ ಹಂತದಲ್ಲಿ.

ನೆನಪುಂಟಲ್ಲಾ ಕಳೆದ ಲೇಖನದಲ್ಲಿ ‘ಜಲಪಾತದ ಬೆಂಬತ್ತಿ’ದವರು ಕಂಗಾಲಾದಾಗ ನೆಲೆಗಾಣಿಸಿದ ದಾರಿ ಇದೇ ಬಿಸಿಲೆ. ನನ್ನ ಕುತೂಹಲದ ಕಣ್ಣು ಮತ್ತೆ ವಿರಾಮದಲ್ಲಿ ನಕ್ಷೆ ಜಾಲಾಡಿತು. ಐತಿಹ್ಯಗಳ ಸಣ್ಣಪುಟ್ಟ ಎಳೆಗಳನ್ನೂ ಜಗ್ಗಿದೆ. ನಕ್ಷೆಯಲ್ಲಿ (ಸರ್ವೇಕ್ಷಣೆ ನಡೆಸಿದ ವರ್ಷ ೧೯೬೮-೬೯) ಕುಳ್ಕುಂದ ಬಿಟ್ಟ ದಾರಿ ಹದಿನಾರೇ ಕಿಮೀ ಅಂತರದಲ್ಲಿ ಘಟ್ಟವನ್ನುತ್ತರಿಸುತ್ತದೆ. ಮತ್ತತ್ತ ಸುಮಾರು ನಲ್ವತ್ತು ಕಿಮೀ ಅಂತರದ ಮಟ್ಟಸ ಓಟದಲ್ಲಿ (ಸಕಲೇಶಪುರದ ಹೊರವಲಯದಲ್ಲೇ ಇರುವ) ಮಂಜರಾಬಾದ್ ಕೋಟೆಯ ಬಳಿ ಶಿರಾಡಿ ಘಾಟಿಯನ್ನು ಸೇರಿಕೊಳ್ಳುವುದು ಕಾಣುತ್ತದೆ. ಅಂದ ಕಾಲತ್ತಿಲೆ ಮಂಜರಾಬಾದ್ ಕೋಟೆಯಿಂದ (ನಕ್ಷತ್ರಾಕೃತಿಯ ಕೋಟೆ ಇಂದಿಗೂ ಒಂದು ಪ್ರೇಕ್ಷಣೀಯ ರಚನೆ) ರಾಜ್ಯಭಾರ ನಡೆಸುತ್ತಿದ್ದ ಮಹಾರಾಜರಿಗೆ ಕುಕ್ಕೇ ಸುಬ್ರಹ್ಮಣ್ಯ ಬಲು ಆರಾಧ್ಯನಂತೆ. ಆತನ ತೀರ್ಥಯಾತ್ರೆಗೂ ಸಾರ್ವಜನಿಕರ ಸೌಕರ್ಯಕ್ಕೂ ದಕ್ಕುವಂತೆ ಬ್ರಿಟಿಷ್ ತಜ್ಞರಿಂದ ವೈಜ್ಞಾನಿಕವಾಗಿ ರೂಪುಗೊಂಡಿತಂತೆ ಈ ಘಾಟೀ ದಾರಿ. ನಕ್ಷೆ ಹೇಳುವ ಹದಿನಾರು ಕಿಮೀ ಇಂದು ಕಾಣಸಿಗುವ ಕಿಮೀ ಕಲ್ಲಿನ ಲೆಕ್ಕದಲ್ಲಿ, (ಮತ್ತೆ ನಮ್ಮ ಅನುಭವಕ್ಕೆ ದಕ್ಕಿದಂತೆ) ೨೪ ಕಿಮೀಗೆ ಪರಿಷ್ಕೃತಗೊಂಡಿದೆ. ತಪ್ಪಲಿನ ಕುಳ್ಕುಂದದಿಂದ (ದಕ ಜಿಲ್ಲೆ) ಮೇಲಿನ ಬಿಸಿಲೆ ಹಳ್ಳಿವರೆಗೆ (ಹಾಸನ ಜಿಲ್ಲೆ) ಅಡ್ಡಹೊಳೆಯ ಮೇಲಿನ ದೊಡ್ಡ ಸಂಕ ಮತ್ತು ಐದು ಹಿಮ್ಮುರಿ ತಿರುವುಗಳಷ್ಟೇ ವಿಶೇಷ ರಚನೆಗಳು. ಕವಲು ದಾರಿಗಳಾಗಲೀ ಜನವಸತಿಯಾಗಲೀ ಇಲ್ಲದ ದಟ್ಟ ಕಾಡು. ಕುಮಾರಧಾರಾ ನದಿಯ ಜಲಾನಯನ ಪ್ರದೇಶವೂ ಆದ ಇದರ ತುಂಬಾ ತೊರೆ, ಝರಿಗಳ ನಮೂದು ನೋಡಿದ ಮೇಲಂತೂ ಮಳೆಗಾಲದಲ್ಲೇ ಅದನ್ನು ನೋಡುವ ಬಯಕೆ ನಮ್ಮ ಮಿತ್ರಬಳಗದಲ್ಲಿ ಬಲಿಯಿತು.

ರಜಾದಿನಗಳಲ್ಲಿ ಮಾವ ಗೌರೀಶಂಕರರ ಲ್ಯಾಂಬ್ರೆಟ್ಟಾ ಸ್ಕೂಟರ್ ಕಡ ಒಯ್ದೇ ಸಾಕಷ್ಟು ಸುತ್ತಿದ್ದವನಿಗೆ ಸ್ವಂತಕ್ಕೆ ಯೆಜ್ದಿ ಬೈಕ್ ಬಂದಾಗ (೧೯೮೦) ಹುಚ್ಚು ಹೆಚ್ಚಾಗಿತ್ತು! ಆ ದಿನಗಳಲ್ಲಿ ಮಂಗಳೂರು ವಲಯದಲ್ಲಿ ಸ್ಪರ್ಧಾತ್ಮಕ ಮೋಟಾರ್ ರ‍್ಯಾಲೀ ಮತ್ತೂ ರೋಮಾಂಚಕಾರೀ ಮೋಟೋಕ್ರಾಸ್‌ಗಳು ಧಾರಾಳ ನಡೆಯುತ್ತಿದ್ದವು. ನಾನವುಗಳ ನಿಷ್ಠಾವಂತ ಪ್ರೇಕ್ಷಕನಾಗಿದ್ದೆ. ವೃತ್ತಿ ಮತ್ತು ಮನೋವೃತ್ತಿಯಲ್ಲಿ ನಾನು ಈ ಮೇಲಾಟಗಳ ನೇರ ಭಾಗಿದಾರಿಕೆಯಿಂದ ದೂರವೇ ಇದ್ದೆ. ಆದರೆ ಕಾಡು ಸುತ್ತುವ ನನ್ನ ಹವ್ಯಾಸದಲ್ಲಿ ಅವುಗಳಿಂದ ಒದಗಿದ ಪ್ರೇರಣೆ ಅಪಾರ. ಬಾಲ್ಯದಲ್ಲಿ ರೈಲ್ವೇ ಹಳಿಯಗುಂಟ ಸೈಕಲ್ ಓಡಿಸುತ್ತಿದ್ದ ನೆನಪಿನಲ್ಲಿ ನನ್ನ ಬೈಕಿಗೆ ಎಲ್ಲ ಕಾಲಕ್ಕೂ ಶುದ್ಧ ದಾರಿ ಬೇಕಾಗುತ್ತಿರಲಿಲ್ಲ. ಯಾವುದೇ ಜಾಡು ಅನುಸರಿಸಲಸಾಧ್ಯ ಎನ್ನುವುದನ್ನಂತೂ ಒಪ್ಪುವ ಮನೋಭಾವವೇ ನನಗಿರಲಿಲ್ಲ! ಬಿಸಿಲೆ ಘಾಟಿಯ ಕಾರ್ಗಾಲದ ವೈಭವ ನೋಡಲು ಮಿತ್ರವೃಂದಕ್ಕೆ ಕರೆ ಕೊಟ್ಟೆ. ಶರತ್ ಆ ಸುಮಾರಿಗೆ ಹಲವು ಕೈಬದಲಿದ ಜೀಪೊಂದನ್ನು ಖರೀದಿಸಿದ್ದ. ವನ್ಯ ಅದರಲ್ಲೂ ಹಾವುಗಳ ಬಾಲ ಹಿಡಿದ ಶರತ್ ಪಟ್ಟಿಯಲ್ಲಿ ಮೊದಲ ನಮೂದು. ಕೇವಲ ಡೀಸೆಲ್ ವೆಚ್ಚ ಎಲ್ಲ ಹಂಚಿಕೊಂಡರಾಯ್ತೆಂದು ನಿಶ್ಚಯಿಸಿದೆ. ಆದರೆ ಬಂದ ಉತ್ಸಾಹಿಗಳ ಸಂಖ್ಯೆ ಮೇರೆಮೀರಿ ಎರಡು ಬೈಕ್ ಒಂದು ಸ್ಕೂಟರ್ ಕೂಡಾ ಹೊರಟಿತ್ತು. ಆಗಸ್ಟ್ ಹದಿನೈದರ (೧೯೮೫) ಬೆಳಿಗ್ಗೆ ದೇಶವೆಲ್ಲಾ ಎಂದೋ ನಡುರಾತ್ರಿಯಲ್ಲಿ ಸಿಕ್ಕ ಸ್ವಾತಂತ್ರ್ಯದ ಸ್ಮರಣೆಗೆ ನಾಟಕ ಕಟ್ಟುವ ತಯಾರಿಯಲ್ಲಿದ್ದಾಗ ನಾವು ಇಪ್ಪತ್ತೊಂದು ಮಂದಿ ಬಿಸಿಲೆ ದಾರಿಗೆ ಲಗ್ಗೆ ಹಾಕಿದ್ದೆವು.

ಇನ್ನೂ ಕಡಮಕಲ್ಲಿನ ಮುಳುಗು ಸೇತುವೆ ದಾಟಿದ್ದೆವಷ್ಟೆ, ಜೀಪು ಪಂಚರ್! (ಸೇತುವೆಯಲ್ಲೇ ಆಗಿದ್ದರೆ ಇಂದಿಗೂ ಅದೇ ಸ್ಥಿತಿಯಲ್ಲಿರುವ ಆ ಸಂಕದ ಗೋಳಿನ ಕಥೆಗೆ ನಮ್ಮವರದೊಂದಷ್ಟು ಜೀವ ಸೇರಿರುತ್ತಿತ್ತು!) ಶರತ್ ಹದಿನೈದು ಇಪ್ಪತ್ತು ಮಿನಿಟಿನಲ್ಲೇ ಬದಲಿ ಚಕ್ರ ಸಿಕ್ಕಿಸಿ ಮುಂದುವರಿದಾಗ ‘ಮತ್ತೊಮ್ಮೆ ಪಂಚರ್ ವಕ್ರಿಸಿದರೆ’ ಎಂಬ ಯೋಚನೆ ಯಾರಿಗೂ ಬೇಕಿರಲಿಲ್ಲ. ಮುಂದೆ ಕುಳ್ಕುಂದದಲ್ಲಿ ನಾವು ಬಿಸಿಲೆದಾರಿ ಕುರಿತು ಕೇಳಿದಾಗ ಹಳ್ಳಿಗರು ಎಚ್ಚರಿಸಿದರು “ಮರ ಬೂರ್ದುಂಡ್, ಪೋಯಾರಾಪುಜ್ಜಿ.” (=ಮರಬಿದ್ದಿದೆ, ಹೋಗಲಾಗುವುದಿಲ್ಲ) ಆದರೆ ನಮ್ಮ ಅನೌಪಚಾರಿಕ ಕೂಟದ ಹೆಸರಿನಲ್ಲಿ ‘ಆರೋಹಣ ಪರ್ವತಾರೋಹಿಗಳು’ ಅಲ್ಲದೇ ‘ಸಾಹಸಿಗಳು’ ಸೇರಿಸಿದ್ದು ಸುಮ್ಮನಲ್ಲವೆಂದು ಗರ್ವಿಸಿಕೊಂಡು ಮುಂದುವರಿದಿದ್ದೆವು. ಮೊದಲ ಒಂದು ಕಿಮೀಯೊಳಗೇ ನಾಗರಿಕತೆಯ ಎಲ್ಲ ಲಕ್ಷಣಗಳನ್ನು ಮರೆಸಿ ಕಾಡು ಕವಿದುಕೊಂಡಿತು. ದಾರಿ ಮಟ್ಟಸವಿದ್ದಂತೆ ಮೂರು ನಾಲ್ಕು ಕಿಮೀ ಅಂತರದಲ್ಲೇ ಮೂರು ನಾಲ್ಕು ಸೊಕ್ಕಿದ ಝರಿಗಳನ್ನು ದಾಟಬೇಕಾಯ್ತು. (ಇಂದೆಲ್ಲಾ ಮೋರಿಗಳು ಬಂದಿವೆ) ಕಾಡುಕಲ್ಲುಗಳನ್ನು ಬಿಗಿಯಾಗಿ ಜೋಡಿಸಿ, ನೀರಪಾತ್ರೆ ಕೊರೆದುಹೋಗದಂತೆ ಮಾಡಿದ್ದ ವ್ಯವಸ್ಥೆ ಚೆನ್ನಾಗಿಯೇ ಇತ್ತು. ಸಾಲದ್ದಕ್ಕೆ ಅಲ್ಲಿ ಪಾತ್ರೆಯ ಹರಹನ್ನೂ ಹೆಚ್ಚಿಸಿದ್ದರಿಂದ ನಮಗೆ ದ್ವಿಚಕ್ರಿಗಳನ್ನೂ ಎಚ್ಚರಿಕೆಯಿಂದ ದಾಟಿಸುವುದು ಕಷ್ಟವಾಗಲಿಲ್ಲ. ಆಗಲೇ ಒದಗಿದ್ದು ಈ ‘ಆಪರೇಶನ್ ಜೀಪ್ ಪಾರ್ ಕರೋ.’

ಜೀಪೇಂದ್ರ ಮೋಕ್ಷಕಾಲದಲ್ಲಿ ನಿಜ ಸಂತೋಷಿಸಿದ್ದು ನಮ್ಮ ಬಾಲಸೈನ್ಯ. ನನ್ನ ಬೈಕಿನಲ್ಲಿ ನನ್ನ ಮತ್ತು ದೇವಕಿಯ ನಡುವೆ ಇರುಕಿಕೊಂಡಿರುತ್ತಿದ್ದ ಅಭಯ (ನಾಲ್ಕು ವರ್ಷ ಪ್ರಾಯ) ಮತ್ತು ಜೀಪಿನ ಒಳಗೆ – ಕಾಂಕ್ರೀಟ್ ಮಿಕ್ಸಿನೊಳಗಿನ ಬೇಬಿ ಜಲ್ಲಿಯಂತೆ ನರಳುತ್ತಿದ್ದ ಕಿಶೋರ್ ಮತ್ತು ಅಶ್ವಿನ್ (ಶಕುಂತಲಾ ಮತ್ತು ಕೇಶವ ಉಚ್ಚಿಲರ ಮಕ್ಕಳು, ಅಭಯನಿಗಿಂತ ತುಸುವೇ ದೊಡ್ಡವರು) ಯಾತ್ರೆ ನಿಜವಾಗಿ ಅನುಭವಿಸಿದ್ದು ಇಲ್ಲೇ ಇರಬೇಕು. ಸಾಹಸ, ಪ್ರಕೃತಿ ವೀಕ್ಷಣೆ, ಜೀವವೈವಿಧ್ಯದೊಡನಾಟ ಇತ್ಯಾದಿ ‘ಉನ್ನತ ಆದರ್ಶ’ಗಳು ಇವರನ್ನು ಬಾಧಿಸುತ್ತಿರಲಿಲ್ಲ. ಮನೆಯಲ್ಲಿ ಚೀಲ ಸೇರುವುದನ್ನು ನೋಡಿದ್ದ ಚಾಕಲೇಟ್, ಬಿಸ್ಕೆಟ್ ಮುಂತಾದ ರಸಗುಳಿಗೆಗಳು ಹೊರ ಬರುವಲ್ಲಿ ಯಾಕೆ ವಿಳಂಬ, ಇವರ ಬಲು ಗಂಭೀರ ಪ್ರಶ್ನೆ. ಉಳಿದಂತೆ ಯಾವುದೋ ಹತ್ತೆಂಟು ಅಣಬೆಯಂಟಿದ ಕೋಲು, ನುಣುಪಿನ ಕಲ್ಲು, ಬಣ್ಣದ ಹೂವು, ವಿಚಿತ್ರ ಎಲೆ, ಮೊಳಕೆಯೊಡೆದ ಯಾವುದೋ ಬೀಜ ಕೈ, ಕಿಸೆ, ಕಂಕುಳಿನಲ್ಲಿ ಅವುಚಿಕೊಳ್ಳುವುದು ನಡೆಸಿಯೇ ಇದ್ದರು. ಪಿರಿಪಿರಿ ಮಳೆಯ ಶ್ರುತಿಗೆ ಅಪಸ್ವರದಂತೆ ಹಿರಿಯರ ಎಚ್ಚರವಾಕ್ಕುಗಳು ಬರುತ್ತಲೇ ಇತ್ತು. ಮೈ ಚಂಡಿಯಾಗಿ ಚಳಿಯಾದೀತೆಂದು “ರೈನ್ ಕೋಟ್ ಗುಬ್ಬಿ ಹಾಕೂ,” ಶೀತ ಕಾಡುವ ನಿರೀಕ್ಷೆಯಲ್ಲಿ “ಟೊಪ್ಪಿ ಸರಿಯಿಟ್ಟುಕೋ”, ಹರಿದಾಡುವ ಜಂತುಗಳ ಹೆದರಿಕೆಗೆ “ಬಲ್ಲೆಗೆ ಕೈ ಹಾಕಬೇಡಾ,” ಪ್ರವಾಹದಲ್ಲಿ ಕೊಚ್ಚಿಯೇಹೋಗುವ ಭಯಕ್ಕೆ “ದಾರಿ ಅಂಚಿನಲ್ಲೇನು ಸರ್ಕಸ್ಸೂ” ಇತ್ಯಾದಿ ನುಡಿಸೇವೆ ನಡೆದಿದ್ದಂತೆ ಜೀಪು ಪಾರಾಗಿತ್ತು.

ಮತ್ತೆ ಒಂದೋ ಎರಡೋ ಕಿಮೀಯೊಳಗೆ ಹಿಂದೆ ‘ಜಲಪಾತದ ಬೆಂಬತ್ತಿ’ದವರು, ಸಂಜೆಗತ್ತಲಿನಲ್ಲಿ ದಾರಿ ಸೇರಿದ ಸ್ಥಳ ಕಳೆದಿರಬೇಕು; ಗುರುತು ಸಿಗಲಿಲ್ಲ. ಆದರೆ ಆಗ ಸ್ಥಳನಾಮವಾಗಿ ಮಾತ್ರ ಕೇಳಿದ್ದ ‘ಬೂದಿಚೌಡಿ’ ಈ ಬಾರಿ ನಮಗೆ ದಾರಿಯ ಎಡಬದಿಯಲ್ಲಿ ಸ್ಪಷ್ಟ ಆರಾಧನಾ ಕೇಂದ್ರವಾಗಿ ಕಾಣಿಸಿತು. ಭಾರೀ ಮರಗಳ ಮಟ್ಟಸ ನೆಲ. ಒತ್ತಿನಲ್ಲೊಂದು ಸಮೃದ್ಧ ಝರಿ. ಶತಶತಮಾನಗಳಿಂದ ಬಂಡೆಗುಂಡುಗಳ ಒರಟು ಕಳೆಯುವಂತೆ ಸ್ನಾನ ಮಾಡಿಸುತ್ತಲೇ ಇದ್ದರೂ ಅದಕ್ಕೆ ಹಿಂಗದ ಸಂಭ್ರಮ. ಅಲ್ಲಿ ಗುಳುಗುಳು, ಇಲ್ಲಿ ನೊರೆನೊರೆ, ಮತ್ಯಾವುದೋ ಸಂದಿನಲ್ಲಿ ಮಂದ ಎಣ್ಣೆಯದೇ ಹರಿವು. ಚಳಿ ಹಿಡಿಸುವ ಮಳೆಗಾಲವಲ್ಲದಿದ್ದರೆ ನಾವೂ ನೀರಿಗಿಳಿದು ತಲೆಕೊಡುವ ರಮ್ಯ ಸನ್ನಿವೇಶ. ತೊರೆಯ ಒತ್ತಿನಲ್ಲಿ ನಾಲ್ಕು ಕಾಂಕ್ರೀಟ್ ಕುಂದ, ಮೇಲೊಂದು ತಾರಸಿ, ಒಟ್ಟಾರೆ ಪಾಚಿಗಟ್ಟಿದ ಮಂಟಪ. ಒಳಗೆ ಒಂದೆರಡು ಕಾಡುಕಲ್ಲು, ತ್ರಿಶೂಲ, ಚಿತ್ರಪಟಗಳ ಸಂತೆ ಕೆಲಕಾಲದ ಹಿಂದೆ ಔಪಚಾರಿಕ ಪೂಜೆಗೊಳಗಾದಂತೆ ಹೂ, ಕುಂಕುಮ, ಊದುಕಡ್ಡಿಯ ಕಸ ಧಾರಾಳವಿತ್ತು. ದೀಪದೆಣ್ಣೆ ಮುಗಿದು ಬತ್ತಿ ಕರಟಿತ್ತು. ಛತ್ತಿಗೆ ಸರಪಳಿಯಲ್ಲಿ ನೇತುಬಿದ್ದ ಗಂಟೆ ಪರಿಸರದ ಗಾಯನಕ್ಕೆ ಬೆರಗಾಗಿ ಮೌನ ತಳೆದಿತ್ತು. ಆ ಕಾಲದಲ್ಲೇ ಪ್ರಾಕೃತಿಕ ಮತ್ತು ಸಹಜ ಸೌಂದರ್ಯಕ್ಕೆ ಅನಪೇಕ್ಷಿತ ಸಾಕ್ಷಿಯಂತೆ, ತಗುಲಿದ ಅರ್ಬುದ ವೃಣದಂತೆ ಬೆದರಿಸಿತು ಬೂದಿಚೌಡಿ! [ಹೆಚ್ಚಿನ ಟಿಪ್ಪಣಿಯನ್ನು ಮುಂದಿನೊಂದು ಕಥಾನಕಕ್ಕೆ ಮೀಸಲಿಡುತ್ತೇನೆ]

ಬೂದಿ ಚೌಡಿಯಿಂದ ದಾರಿ ಸೌಮ್ಯವಾಗಿ ಘಟ್ಟ ಏರಲು ತೊಡಗಿತ್ತು. ಇಪ್ಪತ್ತೈದು ವರ್ಷ ಕಳೆದ ಮೇಲೂ ಆ ಮುಂದಿನ ಸುಮಾರು ಆರೇಳು ಕಿಮೀ ನಮಗೊಂದು ಉತ್ಸವ ಯಾತ್ರೆಯಾಗಿಯೇ ನೆನಪಿನಲ್ಲಿದೆ. ದಟ್ಟಹಸುರಿನ ಮರೆಯ ಬಲಕೊಳ್ಳದಲ್ಲಿ ‘ಅಡ್ಡಹೊಳೆ’ ಹರಿಯುತ್ತಿದ್ದುದು ನಮ್ಮ ಅರಿವಿನಲ್ಲಿತ್ತು. ಅದನ್ನು ಸೇರಿಕೊಳ್ಳುವ ತವಕದಲ್ಲಿದ್ದ ನೂರೆಂಟು ಝರಿಗಳ ಅಲಂಕಾರ, ವೈಯ್ಯಾರ ನಮ್ಮನ್ನು ಮತ್ತೆ ಮತ್ತೆ ತಡೆದು ನಿಲ್ಲಿಸುತ್ತಿತ್ತು. ಜೀಪಿನೊಳಗೆ ‘ಬಂಧಿತ’ರು ಅತ್ತ ಇತ್ತ ತೊನೆದಾಡಿ, ಪರಸ್ಪರ ಮೈಗುದ್ದಾಡಿ, ಆಗೀಗ ಅಂಚಿನ ಸರಳಿಗೋ ಪಟ್ಟಿಗೋ ತಲೆ ಹೆಟ್ಟಿಕೊಂಡದ್ದೆಲ್ಲ ಸಿಕ್ಕ ಇಣುಕುನೋಟಗಳಲ್ಲಿ ಮರೆಯುತ್ತಿದ್ದರು. ಆದರೆ ದ್ವಿಚಕ್ರಿಯ ಮೇಲಿದ್ದ, ಸಾಲದ್ದಕ್ಕೆ ಕ್ಯಾಮರವನ್ನೂ ಹೊತ್ತಿದ್ದ ಅರವಿಂದರನ್ನು ತಡೆಯುವವರು ಯಾರು! ಪ್ರತಿ ಝರಿಯ ಬಳಿ ನೀರಧಾರೆಯ ಒನಪು, ಬಳ್ಳಿಹೂಗಳ ಸೊಂಪು (ಮೂಗಿಗೆ ಕಂಪು, ಕಣ್ಣಿಗೆ ತಂಪು, ಕಿವಿಗೆ ಇಂಪು, ಸ್ವರ್ಗಕ್ಕೆ ಜಂಪು, ನೈಜ ಸಿರಿಖಜಾನೆಗೆ ಬಂಪು . . . . . ಇನ್ನೂ ಹೆಚ್ಚು ಹೇಳಬಹುದಿತ್ತು, ಆದರೆ ನಿಮ್ಮ ಓದುತ್ಸಾಹಕ್ಕೆ ಹತ್ತಿ ಜೋಂಪು ಮತ್ತೆ ಒಟ್ಟಾರೆ ಬರಹವನ್ನು ನೀವೆಲ್ಲಿ ಮಾಡುತ್ತೀರೋ ಕಬು ಒಳಗೆ ಡಂಪು ಎಂದು ಅರವಿಂದರ ಕಲಾಪಕ್ಕೆ ಮರಳುತ್ತೇನೆ.) ಎಲ್ಲವನ್ನು ವಿವಿಧ ಕೋನ, ಚೌಕಟ್ಟು, ಅಂತರ, ಕವಾಟವೇಗಗಳಲ್ಲಿ (ಆಗೀಗ ಮಿಂಚುಬೆಳಕಲ್ಲೂ) ಕೈಮರದೊಳಗೆ (ಕ್ಯಾಮರಾಕ್ಕೆ ಅರವಿಂದರ ವಿಶಿಷ್ಟ ಪ್ರಯೋಗ!) ಸೆರೆ ಹಿಡಿಯದೆ, ಇವರು ‘ಕಟ್ಟೆಪೂಜೆ’ ನಡೆಸದೇ ಮುಂದುವರಿದದ್ದೇ ಇಲ್ಲ. [ಪ್ರಕೃತಿ ವೀಕ್ಷಣೆಗೆ ಹೋಗಿ, ನೆನಪಿಟ್ಟುಕೊಳ್ಳಬೇಕಾದ್ದನ್ನೆಲ್ಲ ಹಿನ್ನೆಲೆಗೆ ತಳ್ಳಿ ಅಸಂಖ್ಯ ನಂನಮ್ಮ ಮುಸುಡುಗಳನ್ನೇ ವಿಕಾರಗಳನ್ನೇ ಕ್ಯಾಮರಾ ತುಂಬಿ ತರುವವರಿಗೆ ಅರವಿಂದರಲ್ಲಿ ಒಳ್ಳೇ ಮದ್ದಿತ್ತು. “ಏ ಅರವಿಂದ್, ನಂದೊಂದು, ಹೀಗೊಂದು” ಎಂದೆಲ್ಲಾ ‘ಫೋಟೋ’ಕ್ಕೆ ಕರೆ ಕೊಡುವವರಿಗೆಲ್ಲಾ ಅರವಿಂದರ ಸ್ಟಾಕ್ ಜೋಕ್ “ಅಂಬದ್ ಚಕುಪುಕು, ಒರ್ ಫೋಟೋ” (ಯಾರೋ ಮಲೆಯಾಳೀ ಹೇಳಿಕೊಟ್ಟ ಟ್ರಿಕ್ಕಂತೆ – ಒಂಬತ್ತು ಖಾಲೀ ಫ್ಲ್ಯಾಶ್, ಯೋಗ್ಯತೆ ಇದ್ದರೆ ಒಂದೊಂದು ನಿಜಚಿತ್ರ)]

ಘಟ್ಟ ಏರುವಲ್ಲಿ ಸುಮಾರು ಅರ್ಧದಾರಿಗೆ ಸಿಗುವ ಏಕೈಕ ಮಹಾ ಪ್ರವಾಹ ಅಡ್ಡಹೊಳೆಯದ್ದು. ದಾರಿಯ ಹರಿವಿಗೆ ಅಡ್ಡ ಬಂತೆಂದು ಇದಕ್ಕೀ ಹೆಸರೋ ಬೂದಿಚೌಡಿಯ ಬಳಿ ಇದು ಕುಮಾರಧಾರಾಕ್ಕೆ ಅಡ್ಡವಾಗಿ ಸಂಗಮಿಸುವುದನ್ನು ಗುರುತಿಸಿದವರಿಂದ ಇದಕ್ಕೆ ‘ಅಡ್ಡ’ ಅನ್ವರ್ಥವಾಯ್ತೋ ಸ್ಥಳನಾಮತಜ್ಞರು ಹೇಳಬೇಕು. (ಹಾಗೆ ಸಂಶೋಧನೆ ನಡೆಸುವುದೇ ಆದರೆ ಶಿರಾಡಿ ಘಾಟಿಯಲ್ಲೂ ಇರುವ ಬೇರೇ ಒಂದು ‘ಅಡ್ಡಹೊಳೆ’ಯನ್ನು ಅವಶ್ಯ ಗಮನಿಸಿಕೊಳ್ಳಿ.) ಭಾರೀ ಬಂಡೆ ಹಾಸು, ಗುಂಡುಗಳ ಹಾಸಿನ ನಡುವೆ ಕನಿಷ್ಠ ನಲ್ವತ್ತಡಿ ಹರಹಿನಲ್ಲಿ ಭೋರ್ಗರೆಯುತ್ತಿದ್ದ ಆ ನೀರ ಮೊತ್ತ ನೆಲ ನಡುಗಿಸುತ್ತಿತ್ತು. ಬ್ರಿಟಿಷರ ಕಾಲದ (ವಿದೇಶೀ) ಕಬ್ಬಿಣದ ತೊಲೆಗಳನ್ನು ಬಳಸಿ ಎತ್ತರಕ್ಕೊಂದು ಮಹಾಸಂಕವೇನೋ ಇತ್ತು. ಅದಕ್ಕೆ ಹಿಂದೆಂದೋ ಲಾರಿ ಗುದ್ದಿದ್ದಿರಬೇಕು, ಬಲಬದಿಯ ಮೇಲಿನ ಕುಂದ ಪಕ್ಕದ ಬೇಲಿ ಎಲ್ಲಾ ಜಖಂ ಆಗಿ ತುಸುವೇ ಜಗ್ಗಿದಂತಿತ್ತು. ಸುಲಭದಲ್ಲಿ ಕಳಚಬಹುದಾದ ಸಣ್ಣಪುಟ್ಟ ಸರಳು, ಕೊಳವೆ, ದಪ್ಪನ್ನ ಬೋಲ್ಟು ಎಲ್ಲಾ ಮಾಯವಾಗಿತ್ತು. ಮತ್ತೆ ಕಾಲಕಾಲಕ್ಕೆ ನೋಡುವವರಿಲ್ಲದೆ ತುಕ್ಕು ಹಿಡಿದು, ಹುಲ್ಲು ಬಲ್ಲೆ ಬೆಳೆದು ನಮ್ಮ ಮುದಿ ಜೀಪನ್ನೇ ಆದರೂ ತಾಳೀತೋ ಇಲ್ಲವೋ ಎಂಬ ಸಂದೇಹದಲ್ಲೇ ದಾಟಿಸಿಕೊಂಡೆವು. (ಹೋದರೆ ಶರತ್ ಒಬ್ಬನೇ ಎಂಬ ಜಾಣತನದಲ್ಲಿ, ಎಲ್ಲಾ ಆಚೀಚೆ ದಂಡೆಯ ಗಟ್ಟಿ ನೆಲದಲ್ಲಿ ನಿಂತು ಧಾರಾಳ ನುಡಿಸೇವೆ ಕೊಟ್ಟಿದ್ದೇವೆ!)

ಅಡ್ಡ ಹೊಳೆಯ ಸಂಕದ ಬಳಿ ಬುತ್ತಿಯೂಟ ಮುಗಿಸಿಕೊಂಡೆವು. ಮುಂದಿನ ಐದಾರು ಕಿಮೀ ಓಟ ರಮ್ಯ ವಿಹಾರದಂತೇ ಇತ್ತು. ತುಂಬ ಸುಲಭ ಸಾಧ್ಯವಾದ ಐದು ಹಿಮ್ಮುರಿ ತಿರುವು (ಎರಡೂವರೆ ಜನ ಹೊತ್ತ ನನ್ನ ಬೈಕೂ ಆರಾಮವಾಗಿ ಮೂರು-ನಾಲ್ಕನೇ ಗೇರುಗಳಲ್ಲೇ ಓಡುತ್ತಿತ್ತು), ಆಗೀಗ ಮರಗಳು ವಿರಳವಾಗಿ ಬೆಟ್ಟದ ತೆರೆಮೈ (ಬಾಳೆಕಲ್ಲು, ಕನ್ನಡಿಕಲ್ಲು ಅಗೋಚರವಾಗಿದ್ದವು), ಒಂದೆರಡು ಕಡೆ ಕೇವಲ ಶಬ್ದ ಮಾತ್ರದಿಂದ ಗುರುತಿಸಿಕೊಳ್ಳಬಹುದಾಗಿದ್ದ ಭಾರೀ ಕಣಿವೆಯಂಚುಗಳಲ್ಲಿ (ಕುಮಾರಧಾರೆಯದ್ದೇ. ಮತ್ತಾಚೆ ಕುಮಾರಪರ್ವತದಲ್ಲಿ ನಾವು ಬೆಂಬತ್ತಿದ್ದ ಜಲಪಾತದ ಮೈಯೂ ಇತ್ತು) ಹಾದು ಹೋದೆವು. ಅಲ್ಲೆಲ್ಲ ನಿಧಾನಿಸಿದರೂ ನಿಂತರೂ ಅಬ್ಬರದ ಗಾಳಿ, ಅಪ್ಪಳಿಸುವ ಮಳೆ, ಎಡೆಯಿಲ್ಲದಂತೆ ಮುಸುಕಿದ ಮೋಡಗಳ ಜೊತೆ ಅದ್ಭುತ ದೃಶ್ಯಗಳಿಗಾಗಿ ನಾವೇನೂ ಚೌಕಾಸಿ ನಡೆಸುವಂತಿರಲಿಲ್ಲ. ಹೆಚ್ಚು ಕಡಿಮೆ ಘಟ್ಟ ಮುಗಿಯಿತು, ಇನ್ನೇನು ಬಿಸಿಲೆ ಹಳ್ಳಿ ಸಿಗಬೇಕು ಎಂದೆಲ್ಲಾ ನಾವು ಎಣಿಸುತ್ತಿರುವಾಗಲೇ ಜೀಪಿನ ಇನ್ನೊಂದು ಚಕ್ರ ನಿಟ್ಟುಸಿರುಬಿಟ್ಟಿತು. ಹೆಚ್ಚುವರಿ ಚಕ್ರದ ಬಳಕೆ ಆಗಲೇ ಆಗಿದ್ದುದರಿಂದ ಟಯರ್ ರಿಪೇರಿಯೂ ಇರುವ ಪೇಟೆಯನ್ನೇ ಹುಡುಕುವ ಸ್ಥಿತಿ ನಮ್ಮದು. ಅರವಿಂದ ಜೋಡಿ ಮುಂದೋಡಿ ಅರ್ಧ ಗಂಟೆಯೊಳಗೇ ನಿರಾಶಾದಾಯಕ ಸುದ್ದಿ ಕೊಟ್ಟಿತು. “ಅನತಿ ದೂರದಲ್ಲಿ ವಿರಳ ಜನವಸತಿಯೇನೋ ಇದೆ ಆದರೆ ಚಕ್ರ ರಿಪೇರಿಗೆ ನಲ್ವತ್ತೈವತ್ತು ಕಿಮೀ ದೂರದ ಸಕಲೇಶಪುರವೇ ಗತಿ.” ಮತ್ತೆ ಜೀಪನ್ನು ಜ್ಯಾಕಿನ ಮೇಲೆ ನಿಲ್ಲಿಸಿ ಚಕ್ರ ಕಳಚಿದ್ದಾಯ್ತು. ಯಾವುದಕ್ಕೂ ಸೈ ಎನ್ನುವ ಅರವಿಂದ, ತೆಕ್ಕೆಯಲ್ಲಿ ಜೀಪಿನ ಚಕ್ರ ಒತ್ತಿಹಿಡಿದ ಶರತ್ತನ್ನೇರಿಸಿಕೊಂಡು ಸಕಲ-ಕ್ಲೇಶಪುರದತ್ತ ಪರಿಹಾರಕ್ಕಾಗಿ ಧಾವಿಸಿದರು.

ಜ್ಯಾಕ್ ಮಗುಚದಂತೆ ಕೆಲವು ಕಾಡುಕಲ್ಲುಗಳ ಹೆಚ್ಚುವರಿ ರಕ್ಷಣೆಯನ್ನೂ ಒದಗಿಸಿದ ಜೀಪು, ಒತ್ತಿನ ಮೋರಿ ಕಟ್ಟೆ ನಮ್ಮ ತಂಗುದಾಣ. ಬಂಟ್ವಾಳ ಕಾಲೇಜಿನ ಕನ್ನಡ ಅಧ್ಯಾಪಕ ಕೇಶವ ಉಚ್ಚಿಲರಿಗೆ ಕಾವ್ಯ ಸೌಂದರ್ಯದಷ್ಟೇ ಪ್ರಕೃತಿ ಸೌಂದರ್ಯದ ಆಸಕ್ತಿ ಇತ್ತು. ಅವರ ಪತ್ನಿ – ಶಕುಂತಲಾ ಬ್ಯಾಂಕ್ ಅಧಿಕಾರಿಣಿ. ಅವರಲ್ಲೊಂದು ಪ್ರಕೃತಿಪ್ರೇಮದ ಸುಪ್ತ ಖಾತೆ ಇತ್ತು. ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷಾ ಓದುವಣಿಗೆಯಲ್ಲಷ್ಟೇ ಅದನ್ನು ಚಾಲ್ತಿಯಲ್ಲಿಟ್ಟಿದ್ದರೂ ವಜಾ ಲೆಕ್ಕವೇ ಎಲ್ಲ. ಆದರೆ ಈ ಯಾತ್ರೆಯಲ್ಲಿ ಅವರ ಎಲ್ಲ ನಮೂದುಗಳೂ ಜಮೆಯದ್ದು ಮಾತ್ರ! ಎಷ್ಟೋ ವರ್ಷಗಳ ಓವರ್ ಡ್ರಾದಿಂದ ಬಳಲಿದ್ದ ಖಾತೆ ದಿನದ ಕೊನೆಯಲ್ಲಿ ಅದ್ಭುತವಾಗಿ ಬ್ಯಾಲೆನ್ಸ್ ಆಗಿರಲೇಬೇಕು! ಯಾವುದೋ ಜರೀಗಿಡ, ಇನ್ಯಾವುದೋ ಗೆಡ್ಡೆಮೂಲದ ಹೂವಿನ ಬಳ್ಳಿ ಅರಸಿಕೊಂಡು ಇವರೂ ಮತ್ತು ಕೆಲವರೂ ಆಚೀಚಿನ ಕುರುಚಲು ಕಾಡು ನುಗ್ಗಿದ್ದೂ ಆಯ್ತು, ಬೇಗ ಮರಳಿದ್ದೂ ಆಯ್ತು. ಇನ್ನೂ ಕೆಲವರು ಕಾಲೆಳೆದುಕೊಂಡು ದಾರಿಯ ಹಿಂದು ಮುಂದಿನ ಉದ್ದ ಸ್ವಲ್ಪ ನೋಡಿ ಮರಳಿದರು. ಆ ಎತ್ತರದಲ್ಲಿ ಮಳೆಯೇನೋ ವಿರಳವಾಗಿಯೇ ಇತ್ತು. ಆದರೆ ಮೋಡವೋ ಮಂಜೋ ಒಟ್ಟಾರೆ ವಾತಾವರಣದ ಶೀತ, ಗಾಳಿಯ ಅಬ್ಬರ ಹೆಚ್ಚಿನವರನ್ನು ಜೀಪಿನ ಒಳಹೊರಗೇ ಆಸುಪಾಸಿನಲ್ಲೇ ಇರುವಂತೆ ನೋಡಿಕೊಂಡಿತು. ದೃಶ್ಯ ಆಗೀಗ ಸ್ವಲ್ಪ ತೆರವಾದಾಗ ಒಂದು ಸಣ್ಣ ಗುಡ್ಡ ಸಾಲಲ್ಲದೆ (ಕರ್ಣಕಲ್ಲು ಆಥವಾ ಕನ್ನಡಿಕಲ್ಲು ಶಿಖರದ ಹಿಮ್ಮೈ ಎಂದು ಆಮೇಲೆ ತಿಳಿಯಿತು) ಬೇರೇನೂ ಪ್ರಾಕೃತಿಕ ವೈಶಿಷ್ಟ್ಯ ಕಾಣಿಸಲೂ ಇಲ್ಲ. ಕಟ್ಟೆಪುರಾಣ, ಜೀಪಿನ ಬೆಚ್ಚಗಿನ ಒಡಲೊಳಗೆ ಹಳೆಯ ಸಾಹಸಗಳು, ಅಜ್ಜೀ ಕತೆಗಳು, ಮನೆವಾರ್ತೆಗಳು ಬಿಚ್ಚುತ್ತಲೇ ಹೋಯ್ತು; ಕಾಲ ಪುರುಷಂಗೆ ಗುಣಮಣಮಿಲ್ಲಂ ಗಡ!

ಮುಸ್ಸಂಜೆಯ ಸುಮಾರಿಗೆ, ಅಂದರೆ ಸುಮಾರು ನಾಲ್ಕು ಗಂಟೆಯ ಅಂತರದಲ್ಲಿ ಅರವಿಂದರ ಸಾಹಸೀ ಸವಾರಿ ಮರಳಿತು. ಹಳ್ಳಿಗಾಡಿನ ದಾರಿ ಮತ್ತು ಮಳೆಗಾಲದ ಒತ್ತಡಗಳೊಡನೆ ಜೀಪಿನ ಟಯರಿನ ಹೊರೆ ಸಹಿತ ಹೊರಟ ಇವರಿಗೆ ಚಿಕ್ಕಪುಟ್ಟ ಪೇಟೆಗಳೇನೋ ಸಿಕ್ಕವಂತೆ. ಆದರೆ ಟಯರ್ ರಿಪೇರಿಗೆ ಸಕಲೇಶಪುರಕ್ಕೇ ಹೋಗಿ ಬರಬೇಕಾಯ್ತು. ಅವರು ಕಂಡಂತೆ ನಾವು ನಿಂತಲ್ಲಿಂದ ಎರಡೋ ಮೂರೋ ಕಿಮೀ ಅಂತರದಲ್ಲಿ ಬಿಸ್ಲೆ ಹಳ್ಳಿಯೇನೋ ಇತ್ತಾದರೂ ಅಲ್ಲಿ ಮುರುಕು ಜೋಪಡಿಗಳಿಂದಾಚೆ ಜೀವಸ್ಪಂದನವಿರಲಿಲ್ಲವಂತೆ. ಮುಂದುವರಿದು ಹತ್ತು ಕಿಮೀ ಆಚಿನ ವಣಗೂರಿನಲ್ಲೊಂದು ಗೂಡು ಹೋಟೆಲ್ ಇವರು ಗುರುತಿಸಿದ್ದರು. ಆತನಿಗೆ ರಾತ್ರಿಗೆ ಏನಾದರೂ ಮಾಡಿ ನಮ್ಮ ತಂಡಕ್ಕೆ ಹಾಕಲು ಇವರು ಸೂಚಿಸಿಯೇ ಬಂದಿದ್ದರು. ಕತ್ತಲಲ್ಲಿ ಟಯರು ಸಿಕ್ಕಿಸಿ, ಬಹು ನಿರೀಕ್ಷೆಯಲ್ಲೇ ವಣಗೂರು ಸೇರಿದೆವು. ಆದರೆ ಆ ಕಾಲದ ಆ ವಲಯದ ‘ಮಾರ್ಕೆಟಿ’ಗನುಗುಣವಾಗಿ ಸಜ್ಜಾಗಿದ್ದ ಬಡ ಹೋಟೆಲಿಗ (ಒನ್ ಮ್ಯಾನ್ ಆರ್ಮಿ!) ಇದ್ದಷ್ಟೂ ರವೆ ಉಪಯೋಗಿಸಿ ಮಾಡಿದ್ದ ಉಪ್ಪಿಟ್ಟು ನಮ್ಮಲ್ಲಿ ಒಬ್ಬೊಬ್ಬರಿಗೆ ಮೂರು ತುತ್ತಿಗೆ ಬರಲಿಲ್ಲ. ಮತ್ತೆ ಕಾಫಿ ಚಾ ಹೆಸರೆಲ್ಲಾ ಕೇಳದೆ, ಏನೋ ಬಿಸಿನೀರು ಕೊಟ್ಟದ್ದನ್ನೇ ಹೀರಿ ಮುಂದುವರಿದೆವು.

ರಾತ್ರಿಯಲ್ಲೂ ಮಳೆಚಳಿಗೆ ಬೈಕಿನಲ್ಲಿ ಸಣ್ಣ ಹುಡುಗ ಅಭಯನನ್ನು ಒಡ್ಡುವುದು ಸರಿಯಲ್ಲ ಎಂದು ಇತರರು ಒತ್ತಾಯಿಸಿದ್ದರಿಂದ ದೇವಕಿ ಅಭಯರನ್ನು ಜೀಪಿಗೆ ತುಂಬಿ ನನ್ನ ಸಹವಾರತ್ವಕ್ಕೆ (ಸಹ-ಸವಾರ>ಸಹವಾರ) ಸೂರ್ಯ ಬಂದ. ಗಣೇಶ ಇಲಿಯ ಮೇಲೆ ಸವಾರಿ ಹೊರಟಂತೇ ಮಹಾಕಾಯ ರಾಮಮೋಹನ್ ಬಜಾಜ್ ಸ್ಕೂಟರ್ ಸವಾರ. ಆದರೆ ಆತನ ಸವಾರಿ ತಾಕತ್ತು ಯಾವ ರ‍್ಯಾಲೀ ಪಟುವಿಗೂ ಕಡಿಮೆಯದ್ದಲ್ಲ. ಹಾಗೇ ಇಡೀ ಹಗಲಿನ ಶ್ರಮದ ಮೇಲೆ ನೂರಕ್ಕೂ ಮಿಕ್ಕು ಹೆಚ್ಚುವರಿ ಬೈಕೋಡಿಸಿದ್ದಿದ್ದರೂ ಅರವಿಂದರ ತಾಕತ್ತೂ ಜಗ್ಗಿರಲಿಲ್ಲ. ಉಳಿದದ್ದೊಂದೇ ಆತಂಕ – ಲಟಾರಿ ಜೀಪ್! ಇದರ ಪೂರ್ಣ ಅರಿವಿನೊಡನೆ ಶರತ್ ಬಲು ಎಚ್ಚರದಿಂದಲೇ ಚಲಾಯಿಸಿದ್ದಕ್ಕೆ ನಾವು ಮತ್ತೇನೂ ಆಕಸ್ಮಿಕಗಳನ್ನು ಎದುರಿಸದೆ, ಶಿರಾಡಿ ಘಾಟಿಯಾಗಿ ಪಯಣಿಸಿದೆವು. ಸ್ವಾತಂತ್ರ್ಯೋತ್ಸವದ ನಡುರಾತ್ರಿಗೆ ನಾವು ಏಳದಿದ್ದರೂ ದಿನಾಚರಣೆಯ ಕೊನೆಯಲ್ಲಿ ಅದನ್ನು ಕಳೆದು ಎರಡೂವರೆ ಗಂಟೆ ತಡವಾಗಿ ಮಂಗಳೂರು ಸೇರಿಕೊಂಡೆವು.

*******

[ಕುಮಾರಪರ್ವತದ ಆಸುಪಾಸಿನ ಹೆಚ್ಚಿನ ರೋಚಕ ನೆನಪುಗಳಿಗೆ ನೀವು ಇನ್ನೊಂದು ವಾರವೋ ಹತ್ತು ದಿನವೋ ಕಾಯಲೇ ಬೇಕು. ಆದರೆ ನಾನು ಕಥಿಸಿದ ಬಿಸಿಲೆಯ ನೆನಪಿಗೆ ನಿಮ್ಮದೊಂದಷ್ಟು ಕಡತ ಇರಲೇಬೇಕಲ್ಲಾ? ಅದನ್ನು (ಮಹಾಕವಿ ಕುಮಾರವ್ಯಾಸನ ಕ್ಷಮೆ ಕೋರಿ) ಉಲುಹುಗೆಡದೊಂದಗ್ಗಳಿಕೆಯಲ್ಲಿ ಓದಿನ ಚಂಡಿ ಆರುವ ಮುನ್ನ ಇಲ್ಲೇ ಕೆಳಗೆ ತುಂಬಿ, ತುಂಬಿ!]