‘ವನೋತ್ಪತ್ತಿ’ ಎನ್ನುವುದಿಂದು ಭಾರೀ ದಾರಿ ತಪ್ಪಿಸುವ ವಿಷಯವಾಗಿದೆ. ಮೋಪು, ಬೆತ್ತ, ವಿವಿಧ ಹಕ್ಕಿ ಪ್ರಾಣಿ ವೈವಿಧ್ಯಗಳ ಸಂಗ್ರಹ ನಿಷೇಧ ಇಂದು ಹೆಚ್ಚುಕಡಿಮೆ ಎಲ್ಲರೂ ಒಪ್ಪಿದ ವಿಚಾರವೇ. ಆದರೆ ಚಿಗುರು, ಗೋಂದು, ಪತ್ರೆ, ತೊಗಟೆ, ಹೂ, ಕಾಯಿ, ಅಣಬೆ, ಬಿದ್ದ ಮರ, ಸೌದೆ ಮುಂತಾದವುಗಳ ಕುರಿತ ಜಿಜ್ಞಾಸೆ ಪೂರ್ಣ ವಿರಾಮ ಕಂಡಿಲ್ಲ. ಅವೆಲ್ಲಾ ವ್ಯರ್ಥವಾಗುತ್ತವೆ, ಅವನ್ನು ನೆಚ್ಚಿದವರ ಬದುಕು ಮೂರಾಬಟ್ಟೆಯಾಗುತ್ತಿದೆ. ಅವನ್ನು ನಂಬಿ ಬದುಕಿದವರು ವನರಕ್ಷಕರು ಅಥವಾ ವನಪೋಷಕರು ಎಂಬ ಕೋಟ್ಯಾಂತರ ರೂಪಾಯಿ ಭಾರೀ ಸುಳ್ಳು ಇಂದೂ ಊರ್ಜಿತಲ್ಲಿದೆ. ಭಾರತ ಭೂಪ್ರದೇಶದ ಅರುವತ್ತು ಶೇಕಡಾ ಶುದ್ಧ ವನ್ಯವಿದ್ದ ಕಾಲದಲ್ಲಿ ತೊಡಗಿದ ಈ ಕಥೆ, ಇಂದು ಅದೇ ವನ್ಯ ಕೇವಲ ಶೇಕಡಾ ಎರಡಕ್ಕೆ ಇಳಿದ ಮೇಲೂ ಅಷ್ಟೇ ದೊಡ್ಡಕ್ಕೆ ಪ್ರಚಾರದಲ್ಲಿರುವುದು ವನ್ಯದ್ದು ಮಾತ್ರವಲ್ಲ ಅದನ್ನು ನೆಚ್ಚಿದ ಆ ವನವಾಸಿಗಳದೂ ನಿಜವಾದ ದುರಂತ. ಮೂವತ್ತೈದು ವರ್ಷದ ಹಿಂದೆ ಬರಿಗಾಲಿನ ಮಲೆಕುಡಿಯರ ಕುಂಡನಂತವರು ದಿನಪೂರ್ತಿ ‘ವನ್ಯಪ್ರಜ್ಞೆ’ಯಾಗಿ ಮಾರ್ಗದರ್ಶಿಯಾಗಿ ಸಹಕರಿಸಿ ಗಳಿಸುತ್ತಿದ್ದ ಕೂಲಿ ಹತ್ತು ರೂಪಾಯಿ. ಇಂದೂ ಕುಂಡನ ಉತ್ತರಾಧಿಕಾರಿಗಳಂತವರು ಹರಕು ಹವಾಯಿ ಚಪ್ಪಲಿಯೊಡನೆ ಅಂಥದ್ದೇ ಕೆಲಸ ಮಾಡಿಕೊಂಡಿದ್ದಾರೆ! ಉಬ್ಬರಿಸಿದ ಜೀವನ ವೆಚ್ಚ ಸರಿದೂಗಿಸುವಲ್ಲಿ ದಿನವೊಂದಕ್ಕೆ ಕಷ್ಟದಲ್ಲಿ ನೂರಿನ್ನೂರು (ಮೂರಂಕಿ!) ಗಳಿಸುವಷ್ಟು ‘ಯಶಸ್ವಿ’ಗಳಾಗಿದ್ದಾರೆ. ಅಂದೇ ನಮ್ಮ ಜೀವನಕ್ರಮಕ್ಕೆ ಏನೇನೂ ಪ್ರಸ್ತುತವಿರದ ಒಂದು ನಾಗರಬೆತ್ತ ಸಂಗ್ರಹಿಸಲು ನಾವು ಬೇಡಿಕೆ ಇಟ್ಟಾಗ ಸಂಗ್ರಹಿಸಿ ಕೊಡುವಲ್ಲಿ ಕುಂಡ ಸೋತಿದ್ದ. ಇಂದು?

ದಾರಿ ತಪ್ಪಿದೆನೇ, ಇಲ್ಲಿಲ್ಲ. ಕುಮಾರಧಾರಾ ಪಾತ್ರೆ ಸೇರಿ ಮೊದಲ ವಿಶ್ರಾಂತಿ ಪಡೆದು ಹೊರಟವರಿಗೆ ಮೂವರು ವನೋತ್ಪತ್ತಿ ಸಂಗ್ರಾಹಕರು ಕಾಣಿಸಿದ್ದಕ್ಕೇ ಈ ಪೀಠಿಕೆ. ಅವರು ವಿಶ್ರಾಂತಿಗೇ ಕುಳಿತದ್ದಿರಬೇಕು. (ಆದರೆ ಆ ಕಾಲಕ್ಕೆ ನಮ್ಮ ಮನೋಸ್ಥಿತಿಯ ಹದ ಬೇರೇ ಇತ್ತು. ಅದು ತಪ್ಪೇ ತಪ್ಪು. ಕಾಲಾತಿಕ್ರಮಣ ಮಾಡದೇ ಮುಂದುವರಿಯುವುದಾದರೆ) ನಮ್ಮ ಬರವನ್ನು ಮುಂದಾಗಿಯೇ ಗ್ರಹಿಸಿ ವಿಶ್ರಾಂತಿಗೆ ಕುಳಿತಂತೆ ತೋರಿಸಿಕೊಳ್ಳುವ ‘ಕಳ್ಳರು’. ಹಿರಣ್ಯಾಕ್ಷನಂತೆ ಕಾಡನ್ನೇ ಚಾಪೆಸುತ್ತಿ ಕಂಕುಳಿಗೇರಿಸುವ ‘ರಕ್ಕಸರು’. ಆನೆ, ಹುಲಿ, ಕಾಟಿ, ಕಡವೆಗಳನ್ನು ಭಾರೀ ಭರ್ಚಿಗೆ ಪೋಣಿಸಿ ಹೆಗಲಿಗೇರಿಸಿ ನಡೆಯುವ ವಿರಾಧನಂತ ಅಮಾನುಷರು. ಆ ವರ್ಗಕ್ಕೆ (ಪ್ರಚಾರದಲ್ಲಿದ್ದಂತೆ) ನಾಗರಿಕ ಜೀವನಕ್ರಮವನ್ನು ತೋರಿಕೊಡುವ ಹಮ್ಮಿನಲ್ಲಿ, ಅವರ ‘ಕಾರಸ್ತಾನ’ವನ್ನು ಪತ್ತೇಮಾಡಿದ ಬಿಗುಮಾನದಲ್ಲಿ ವಿಶೇಷ ಮಾತಿನ ವಿನಿಮಯವಿಲ್ಲದೆ ಮುಂದುವರಿದೆವು. [ಆದರೆ ಇಂದಿನ ತಿಳುವಳಿಕೆ ನಮಗೆ ಕೊಡುವ ಚಿತ್ರವೇ ಬೇರೆ. ಪ್ರಜಾವಾಣಿಯ ಇಂದಿನ (೨೦-೧-೨೦೧೧) ಕರ್ನಾಟಕ ಪುರವಣಿಯಲ್ಲಿ ವನೋತ್ಪತ್ತಿ ರಾಮಪತ್ರೆಯ ಕುರಿತು ಬರೆಯುತ್ತಾ ಲೇಖಕರು ಅದರ ಮಾರುಕಟ್ಟೆ ದರ ಲಾಭದಾಯಕವಾಗಿ ಕೇಜಿಗೆ ಸುಮಾರು ನಾನೂರರವರೆಗಿರುವುದನ್ನು ಹೇಳುತ್ತಾರೆ. ಅತ್ತ ದಿನಗಟ್ಟಳೆ ಕಾಡಿನಲ್ಲಿ ಮೊಕ್ಕಾಂ ಮಾಡಿ, ಮರಮರಗಳಿಂದ ಫಸಲು ಸಂಗ್ರಹಿಸಿ, ಹಸನು ಮಾಡಿ, ಒಣಗಿಸಿ, ಊರಿಗೆ ತಲೆಹೊರೆಯಲ್ಲಿ ತಂದು ಮಾರುವವರಿಗೆ ಸಿಗುವ ದರ ಕೇಜಿಗೆ ಇನ್ನೂರರ ಆಚೆ ಈಚೆ ಮಾತ್ರ]

ಕೂಪುದಾರಿ ನಿಬಿಡಾರಣ್ಯದಲ್ಲಿ ಮರೆಯಾಗುತ್ತಾ ಬಂತು. ಮರಗಳ ಗಾತ್ರ ಎತ್ತರದಲ್ಲಿ ಇಪ್ಪತ್ತಾಳಿಗೂ ಮಿಕ್ಕು ಇದ್ದರೆ, ದಪ್ಪದಲ್ಲಿ ಹತ್ತಾಳು ತಬ್ಬಿಗೂ ಮೀರಿ ಸಿಗುತ್ತಿತ್ತು! ಕಾಲುದಾರಿಯೂ ಸಿಗದ ಸ್ಥಿತಿಯಾದಾಗ ನಾವು ಹೊಳೆಪಾತ್ರೆ ಬಯಸಿದೆವು. ಪೊದರುಗಳನ್ನು ನುಗ್ಗುನುರಿ ಮಾಡಿ, ಮುಳ್ಳು ಕಡಿದು, ಬೀಳಲುಗಳಲ್ಲಿ ನೇತಾಡಿ ಕೆಳಗೆ ಜಾರಿದೆವು. ಅಪಾರ ತರಗೆಲೆ, ಸಡಿಲಮಣ್ಣು, ಸಣ್ಣಪುಟ್ಟ ಕಲ್ಲುಕೋಲು ಮೇಳೈಸಿಕೊಂಡು ಹೊಳೆಪಾತ್ರೆ ಸೇರಿದೆವು.

ಭೂಪಟಕ್ಕೂ ವಾಸ್ತವಕ್ಕೂ ಅಂತರ ಇರುವೆ ಆನೆಯದು. ಅಲ್ಲಿನ ಚುಟುಕು, ನೆಲದ ವ್ಯಾಖ್ಯಾನದಲ್ಲಿ ದಿಕ್ಕೆಡಿಸುವ ತ್ರಿವಿಕ್ರಮಗಳು. ಕಣ್ಗಪ್ಪಡಿ ಕಟ್ಟಿದಂತೆ ಕವಿದ ಕಾಡು, ಇಣುಕು ನೋಟಗಳಲ್ಲಿ ದರ್ಶನ ಕೊಟ್ಟರೂ ಗೋಡೆಗಟ್ಟಿದಂತೆ ನಿಂತ ಬೆಟ್ಟ. ನಡುವೆ ಸುಮಾರು ಐವತ್ತರವತ್ತು ಮೀಟರ್ ಅಗಲಕ್ಕೆ ಹಾಸುಗಲ್ಲು, ಕೊರಕಲು, ಬಂಡೆಗುಂಡು, ಎಂದೋ ಎಲ್ಲಿಂದಲೋ ಕೊಚ್ಚಿಬಂದ ಭಾರೀ ಮರ, ಅಪರೂಪಕ್ಕೆ ಕುದುರಿದ ಗಟ್ಟಿ ಪೊದರುಗಳ ನಡುವೆ ನಾವು ಹುಡುಕಬೇಕಿತ್ತು ಸಾಗುವ ದಾರಿ. ಧುಮುಕುವ, ಧುಮುಗುಟ್ಟುವ, ಸುಳಿಗಟ್ಟುವ, ಆಳಕಾಣದಂತೆ ಮಡುಗಟ್ಟುವ, ಕಲಕಲಿಸುವ, ಎಣ್ಣೆಯಂತೆ ನುಣ್ಣಗೆ ಜಾರುವ ಹೊಳೆಯ ವೈಭವದಲ್ಲಿ ನಾವು ಹುಡುಕಬೇಕಿತ್ತು ಗಟ್ಟಿಕಾಲೂರುವ ನೆಲೆ. ಪುಟ್ಟ ಕಲ್ಲಿನಿಂದ ಕಲ್ಲಿಗೆ ಕುಪ್ಪಳಿಸುತ್ತ, ಭಾರೀ ಬಂಡೆಗಳಲ್ಲಿ ಚಡಿ ಸೀಳು ಹುಡುಕಿ ಏರುತ್ತಾ ನಡೆದೆವು. ನೀರು ಮುಟ್ಟದಂತೆ, ಜಾರುಗುಪ್ಪೆಗಳೇ ಆದ ಚಂಡಿ ಬಂಡೆಗಳನ್ನು ನಿವಾರಿಸಿಕೊಳ್ಳುತ್ತಾ ಹೆಜ್ಜೆ ಸೇರಿಸಿದೆವು. ಭೂಪಟದ ನ್ಯಾಯದಂತೆ ನಮಗೆ ಮುಖಾಮುಖಿಯಾಗಬೇಕಿದ್ದ ಸೂರ್ಯ (ನಾವು ಪೂರ್ವಕ್ಕೆ ನಡೆಯಬೇಕಿತ್ತು) ಕೆಲವೊಮ್ಮೆ ನಮ್ಮ ಎಡಬಲದ ಹಿಮ್ಮೂಲೆಗಳಿಂದ ಇಣುಕಿ ವಿವಂಚನೆಯುಂಟುಮಾಡುತ್ತಿದ್ದ. ಭೂಪಟ ನಗಣ್ಯವೆಂದು ಬಿಟ್ಟ ತೊರೆಗಳನ್ನು ನಾವು ತಪ್ಪಾಗಿ ಅನುಸರಿಸಿ ಬೆಟ್ಟದ ಗೋಡೆಮೈ ಬುಡದಲ್ಲಿ ಪರಡಲೂಬಾರದು, ಬಿಸಿಲೆ ಹಳ್ಳಿಯಲ್ಲಿ ಏಳಲೂ ಬಾರದು.

ನೀರಿಗೆ ಈ ಪಾತ್ರೆಯಲ್ಲಿ ವಿಶ್ರಾಂತಿಯಿಲ್ಲ. ಅದು ಸಾವಿರಾರು ವರ್ಷಗಳ ಋತುಮಾನದ ಬದಲಾವಣೆಗಳನ್ನು ಅಂಚಿನ ಬಂಡೆಗಳಲ್ಲಿ ವಿವಿಧ ವರ್ಣಛಾಯೆಗಳಲ್ಲಿ ದಾಖಲಿಸಿದೆ. ನೋಟಕರ ಭಾವಕ್ಕೆ ನೂರು ರೂಪಕೊಡುವ ಶಿಲ್ಪಗಳನ್ನು ಖಂಡರಿಸಿದೆ. ಹಾಗೆಂದು ಮುದಿತನದ ಭಾರ ಇದಕ್ಕಿಲ್ಲ; ಕಲ್ಲಂಚಿನ ಗಿಡದಲ್ಲೊಂದು ಸುಕೋಮಲ ಹೂವು ಮನಸೆಳೆಯುತ್ತದೆ. ಹಣ್ಣೆಲೆಯೊಂದು ಒಣಕಡ್ಡಿಯ ಸಖ್ಯ ಮಾಡಿ ಮುಂದಿನೂರಿಗೆ ಪ್ರಯಾಣ ಹೊರಟಿದ್ದರೆ ಯಾವ್ಯಾವುದೋ ಸುಳಿಯಲ್ಲಿ ಸುತ್ತಿಸುವ ಮಕ್ಕಳಾಟ ಈ ಧಾರೆಗೆ. ಒರಟು ಬಂಡೆಯ ಕರಿಮೈಗೆ ಹೊದೆಸಿದ ಸ್ಫಟಿಕ ಫಲಕದಂತೆ ಕಿರುಜಲಪಾತ ಒಂದೆಡೆ, ಹೊಂಡ ಕಲಕಿ ಗಾಳಿಗುಳ್ಳೆಗಳನ್ನೆಬ್ಬಿಸಿ ನೊರೆಗಟ್ಟುವ ಚಂದ ಇನ್ನೊಂದೆಡೆ. ಇವನ್ನೆಲ್ಲ ಶಿಸ್ತಿಗೊಳಪಡಿಸುವ ಪಟುಭಟನಂತೆ ಕಿಸುಗಾಲ ಜೇಡ ಅತ್ತಿಂದಿತ್ತ, ಇತ್ತಿಂದತ್ತ, ಥೈಧೋಂ ದಿತ್ತಾ. ನೀರ ಹಾಳೆಯ ಮೇಲೆ ಅದು ಎಳೆದ ವಿಧಿ ನಿಷೇಧಗಳ ಅಷ್ಟೂ ಗೆರೆಗಳನ್ನು ಅಳಿಸುತ್ತಲೇ ಸಾಗಿತ್ತು ಕುಮಾರಧಾರೆ.

ನೀರ ಆಟಗಳನ್ನು ನಮ್ಮ ಪ್ರಗತಿಗೆ ಕುಂದಿಲ್ಲದಂತೆ ನೋಡುತ್ತ ನಡೆದೆವು. ಜಾಡಿನಾಯ್ಕೆಯಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಅನುಸರಣೆ, ಸ್ವಾತಂತ್ರ್ಯ ಎರಡೂ ಸರಿ. ಗಿಡ್ಡ ಕಾಲಿನವ ಎರಡು ಬಂಡೆ ಕುಪ್ಪಳಿಸಿ, ಮರಳದಿಣ್ಣೆಯಲ್ಲಿ ಅಡ್ಡ ಹಾಯ್ದು, ನೀರಂಚಿನ ಪೊದರು ಮೆಟ್ಟಿ ಮುಂದುವರಿದರೆ, ಉದ್ದ ಕಾಲಿನವ ಎರಡೂ ಬಂಡೆಯನ್ನು ಬೀಸು ನಡೆಯಲ್ಲೇ ದಾಟಿ, ಮೂರನೆಯದಕ್ಕೆ ಹಾರಿ ಮತ್ತೊಂದನ್ನು ಏರಿ ಕಳೆದ. ಒಬ್ಬನದು ಬಳಸು ದಾರಿ ಮತ್ತೊಬ್ಬನದು ಶ್ರಮಪೂರ್ಣ ಒಳದಾರಿ. ಮುಂದುವರಿಯಲು ದಿಕ್ಕುಗಾಣದೆ, ಹಿಂದೆ ಸರಿಯಲು ತಂತ್ರ ಒದಗದೆ ಪರಡಿದ ಸನ್ನಿವೇಶಗಳು ಹಲವು. ಹಿಂದೆಂದೋ ಪ್ರವಾಹದಲ್ಲಿ ಬಂದ ಒಣ ಮರಗಳನ್ನು ಎಚ್ಚರದಲ್ಲಿ ಬಳಸಿಯೋ ನಮ್ಮಲ್ಲಿದ್ದ ರಕ್ಷಣಾ ಹಗ್ಗವನ್ನು ಕೈತಾಂಗಾಗಿ ಒದಗಿಸಿಯೋ ಯಾತ್ರೆ ಸಾಗಿತ್ತು. ಚಂಡಿಬಂಡೆಯ ಮೇಲೆ ತಪ್ಪಡಿಯಿಟ್ಟು ಕುಕ್ಕುರುಬಡಿದವರು, ಉರುಳುಗಲ್ಲ ಮೇಲೆ ದೃಢ ಹೆಜ್ಜೆಯೆಂದೂರಿ ಶೂವಿನೊಳಗೆ ನೀರು ತುಂಬಿಕೊಂಡವರು, ಗಟ್ಟಿನೆಲವೆಂದು ಗೊಸರಿಗೆ ಕಾಲು ಹಾಕಿ ಪಾದಕೀಳಲು ಸೋತವರು ಹೇಳಿದಷ್ಟೂ ಮುಗಿಯದು. ದೊಡ್ಡ ಬಂಡೆಯನ್ನು ಇನ್ನೇನು ಏರಿದೆ ಎನ್ನುವಾಗ ಹಿಡಿಕೆ ಸಿಗದೇ ಬೊಬ್ಬೆ ಹಾಕಿದವರೂ ಇಲ್ಲದಿಲ್ಲ. ಆದರೆ ಹಿಡಿಕೆಯೆಂದೇ ಆಧರಿಸಿ ಮೂರು ಬೆರಳಿನಲ್ಲಿ ಜಜ್ಜುಗಾಯ ಪಡೆದವನು ಬಾಲಣ್ಣ ಮಾತ್ರ; ಅದೃಷ್ಟಕ್ಕೆ ಬೆರಳು ಮುರಿಯಲಿಲ್ಲ.

ಸಮೀರನ ಘೋಷಣೆಗಳಲ್ಲಿ ಮೋಸುಂಬಿ, ಸೌತೆಮಿಡಿ ಬ್ರೇಕ್‌ಗಳೂ ಇತ್ತು. ಹೊಳೆ ನೀರನ್ನು ಎಲ್ಲೆಂದರಲ್ಲಿ ವಿವಿಧ ಭಂಗಿಗಳಲ್ಲಿ ಕುಡಿಯುವ ಸ್ವಾತಂತ್ರ್ಯ ಅಬಾಧಿತ. (ಮೇಲ್ದಂಡೆಯ ಅಭಿವೃದ್ಧಿ ಕಾರ್ಯಕ್ರಮಗಳ ಅಲ್ಪ ಪರಿಚಯವಾಗಿರುವ ಇಂದು ನೀರು ಅಷ್ಟು ನಿರಪಾಯಕಾರಿ ಎನ್ನಲಾರೆ.) ಮುಂದಿನ ಚುರುಕಿನವರು ಹಿಂದಿನ ನಿಧಾನಿಗಳನ್ನು ಕಾದು ಕೂರುವುದು ವಿಶ್ರಾಂತಿ ಅಲ್ಲ. ಹಾಗೇ ಹಿಂದುಳಿದವರಾದರೋ ಹೊಸ ದೃಷ್ಯಗಳ ಅನಾವರಣದಲ್ಲಿ ಕ್ಯಾಮರಾ ಕೋನಗಳ ಆಯ್ಕೆಯಲ್ಲಿ ತಳುವಿದರೇ ಹೊರತು ಸುಸ್ತಿನಿಂದ ಅಲ್ಲ! ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಊಟದ ವಿರಾಮ. ಸಮೀರ ಕೊಟ್ಟ ಎರಡನೇ ಪೊಟ್ಟಣದಿಂದ ಬೇಕಾದಷ್ಟೇ ಮಿಶ್ರಣ ಬಗ್ಗಿಸಿಕೊಂಡು ವೈಯಕ್ತಿಕ ರುಚಿಗೆ ತಕ್ಕಂತೆ ನೀರು ಬೆರೆಸಿಕೊಂಡು ತಿನ್ನುವ ‘ಸಂಭ್ರಮ.’ ಅವಲಕ್ಕಿ, ಅರಳು ಮತ್ತು ಹುರಿಗಡಲೆಗಳ ಹುಡಿ ಮುಖ್ಯ ಧಾತು. ಪರಿಮಳಕ್ಕೆ ಹಾಲಿನ ಹುಡಿ, ಜಗಿಯಲು ಸಿಗುವಂತೆ ಖರ್ಜೂರ ಮತ್ತು ಗೇರುಬೀಜದ ಚೂರುಗಳು. ಹದವಾಗಿ ಉಪ್ಪು, ಸಕ್ಕರೆಯ ಮಿಶ್ರಣವೂ ಇದ್ದು ಯಾರೂ ಬೇಡ ಎನ್ನುವಂತದ್ದೇನೂ ಇರಲಿಲ್ಲ. ಆದರೂ ಉಪ್ಪು, ಹುಳಿ, ಕಾರಗಳ ತೀವ್ರತೆಯಲ್ಲಿ, ಸಾಂಬಾರ ಪದಾರ್ಥಗಳ ಮುಸುಕಿನಲ್ಲಿ ಯಾವುದೇ ನಿಜರುಚಿಗಳನ್ನು ಹುಗಿದು ಸವಿಯುವ ನಾಗರಿಕರು ಸ್ವಾಮೀ ನಾವು. ಬೇಯಿಸಿ, ಕರಿದು, ಸುಟ್ಟು ಬಾಯಿಗಿಟ್ಟ ಏನೂ ಹಲ್ಲು ಮುಟ್ಟುವ ಮುನ್ನ ಕರಗುವಂತೆ ಮಾಡುವ ಅತಿ ಸಂಸ್ಕಾರವಂತರು ನಾವು. ಸಮೀರನ ತರ್ಕ, ಶ್ರಮ ಮೆಚ್ಚಿದರೂ ಗುಟ್ಟಿನಲ್ಲಿ – ತೌಡು, ಪ್ರಿಯವಾಗಲೇ ಇಲ್ಲ!

ಅಂದಾಜಿನಂತೆ ಅಪರಾಹ್ನ ಮೂರು ಗಂಟೆಯೊಳಗೆ ನಾವು ಹೊಳೆ ದೊಡ್ದದಾಗಿ ದಕ್ಷಿಣಕ್ಕೆ ತಿರುವು ತೆಗೆದುಕೊಳ್ಳುವಲ್ಲಿಗೆ ತಲಪಬೇಕಿತ್ತು. ಆದರೆ ಗ್ಂಟೆ ನಾಲ್ಕಾದರೂ ನಾವು ತಲಪಲಿಲ್ಲ. ಇನ್ನು ವಿಳಂಬಿಸಿದರೆ ಶಿಬಿರಸ್ಥಾನ ಹುಡುಕಲು ಸಮಯ ಉಳಿಯದು ಎಂದು ಉದ್ದುದ್ದವಾಗುತ್ತಿದ್ದ ಮರ, ಬೆಟ್ಟಗಳ ನೆರಳು ಎಚ್ಚರಿಸಿತು. ಹೊಳೆ ದಂಡೆಯಲ್ಲಿ ಕನಿಷ್ಠ ಹದಿನೈದಿಪ್ಪತ್ತಡಿ ಉದ್ದಗಲದ ಮಟ್ಟಸ ನೆಲ ಸಿಕ್ಕೀತೇ ಎಂದು ಹುಡುಕು ನೋಟ ಬೀರುತ್ತ ಮುಂದುವರಿದೆವು. ನಮ್ಮ ನಿರೀಕ್ಷೆ ಮೀರಿ ಹೊಳೆಯ ಒಂದು ನಡುಗಡ್ಡೆ ಅಥವಾ ಕುದುರು (ನದಿಯ ದ್ವೀಪ ಎನ್ನಿ) ನಮಗೊಪ್ಪಿಗೆಯಾಯ್ತು. ಎತ್ತೆತ್ತರದ ಮರ, ಮತ್ತು ಬಂಡೆಗುಂಡುಗಳ ನಡುವೆ ಒಂದು ತುಂಡು ಮಟ್ಟನೆಲ. ನಮ್ಮ ಅಗತ್ಯಗಳನ್ನು ನೆಲಕ್ಕೆ ತಕ್ಕಂತೆ ಹರಡಿದೆವು. ಒಂದಂಚಿನ ಕಲ್ಲ ಇರುಕು ಶಿಬಿರಾಗ್ನಿಗೆ. ನೀರ ಅಂಚಿನಲ್ಲೇ ಸುಮಾರು ಎರಡಾಳು ಮೈಚಾಚಬಹುದಾದ ನೆಲ ಅಡುಗೆ ಮತ್ತು ಅದರ ಹೊಣೆ ಹೊತ್ತವರ ವಿಶ್ರಾಂತಿಗೂ ಒದಗಿತು. ಇನ್ನೊಂದು ಮೂಲೆಯ ಸಣ್ಣ ಪೊದರು ಒತ್ತರಿಸಿ ಒಂದು ಗುಡಾರವೇನೋ ಬಿಡಿಸಿದೆವು. ಇದ್ದ ಇನ್ನೊಂದೇ ಗುಡಾರಕ್ಕೆ ಜಾಗ ಇರಲಿಲ್ಲ. ಹಾಗಾಗಿ ಉಳಿದವರು ನುಣ್ಣನೆ ಮರಳ ಹಾಸಿನ ಇತರ ಸಂದುಗಳನ್ನು ಆಕ್ರಮಿಸಿಕೊಂಡರು. ಸ್ವಲ್ಪ ಕಿಷ್ಕಿಂಧೆಯೇ ಆದರೂ ಚಳಿಗೆ ಒಳ್ಳೆಯದೆಂದು ತೃಪ್ತರಾದೆವು. ಚಾ, ಚೌಚೌ ಮೊದಲು. ಸೌದೆ ಮತ್ತು ಬಂದೋಬಸ್ತಿನ ವಿವರಗಳನ್ನು ಚೊಕ್ಕ ಮಾಡಿಕೊಳ್ಳುವುದರೊಳಗೆ ರಾತ್ರಿ ಊಟದ ಹೊತ್ತು ಬಂದಿತ್ತು. ತೌಡು ಮತ್ತು ಬಿಸಿಯಾಗಿ ಬೇಯಿಸಿದ ಸಿದ್ಧ ಶ್ಯಾವಿಗೆ ಹೊಟ್ಟೆಗೆ ಬೀಳುತ್ತಿದ್ದಂತೆ ಹಿಂದಿನ ರಾತ್ರಿಯ ನಿದ್ರೆಯ ಕೊರತೆ ಮತ್ತು ದಿನದ ಶ್ರಮ ಒಗ್ಗೂಡಿ ಎಲ್ಲರನ್ನೂ ನಿದ್ರೆ ಆವರಿಸಿತ್ತು! ಕಲ್ಲು ಬೇರುಗಳ ಸಂದಿಗಳಿಂದ ತಕ್ಷಕನ ಸಂಬಂಧಿಗಳು ಪ್ರತ್ಯಕ್ಷರಾದಾರು ಎನ್ನುವುದನ್ನು ನಾವು ಪ್ರಥಮಾದ್ಯತೆಯಲ್ಲಿ ಗಮನದಲ್ಲಿಟ್ಟುಕೊಂಡು ಸರದಿಯ ಕಾವಲಿನಲ್ಲಿ ನಿದ್ರೆಗೆ ಶರಣಾದೆವು. ನಮ್ಮಲ್ಲಿ ಯಾರೂ ಪರೀಕ್ಷಿತರಲ್ಲ; ನಿಶ್ಚಿಂತೆಯಿಂದ ರಾತ್ರಿ ಕಳೆದೆವು.

ನಿರಂತರ ನೀರತನನಕ್ಕೆ ಅಪರೂಪಕ್ಕೆ ಕತ್ತಲಿನ ನಿಗೂಢ ಉಲಿಗಳು ಸೇರುತ್ತಾ ರಾತ್ರಿಯೊಂದು ಸುದೀರ್ಘ ವಿಲಂಬಿತ ಗಾಯನ. ಪಕ್ಷಿಗಳ ಪಲುಕಿನೊಡನೆ ಅದು ದ್ರುತಕ್ಕೇರುತ್ತಿದ್ದಂತೆ ಬೆಳಕು ಹರಿಯಿತು. ನಳವಲಲರ ಜೋಡಿಯಂತೆ ಒದಗಿದ ಸಮೀರ ಅರವಿಂದರು ಪಹರಿಗಳಿಗೆ ಚಾ, ಬೆಳಿಗ್ಗೆ ಎದ್ದಂತೆ ಕಾಫಿ, ಪ್ರಾತರ್ವಿಧಿಗಳನ್ನು ಪೂರೈಸುತ್ತಿದ್ದಂತೆ ಅದ್ಭುತ ಬಾಜೀ ಸಜ್ಜುಗೊಳಿಸಿ ತೌಡು ತಿಂದು ಜಡ್ಡುಗಟ್ಟಿದ್ದ ನಾಲಗೆಯ ಎಲ್ಲ ರಸನೆಗಳನ್ನೂ ಪ್ರಚೋದಿಸಿ, ತಣಕಲು ಬ್ರೆಡ್ದುಗಳನ್ನು ಇನ್ನಿಲ್ಲದಂತೆ ತಿನ್ನಿಸಿಬಿಟ್ಟರು! ಬಿಸಿಲಕೋಲು ಮಂಜಿನ ಶಾಲು ಹೊದ್ದು ಹಿತವಾಗಿ ತಿವಿಯುತ್ತಿದ್ದಂತೆ ನಾವು ಶಿಬಿರ ಮುಚ್ಚಿ ಮತ್ತೆ ಕಾಲಿನ ಮೇಲಿದ್ದೆವು.

ಕುಮಾರಪರ್ವತ ವಲಯದ (ಇಂದು ಪುಷ್ಪಗಿರಿ ವನಧಾಮ) ಪ್ರಾಣಿಪಕ್ಷಿಗಳ ಪಟ್ಟಿಯೇನೋ ವೈವಿಧ್ಯಮಯ. ಆದರೆ ಉಪಲಬ್ಧಿ ತುಂಬಾ ಕಡಿಮೆ. ಪಕ್ಷಿ ಸಂಕುಲದ ಬಹುವಿಧ ಸುಪ್ರಭಾತವೇನೋ ಮನಸ್ಸು ತುಂಬುವಷ್ಟಿದ್ದರೂ ನಮಗೆ ಕಣ್ಣು ತುಂಬಿಕೊಳ್ಳಲು ಸಿಕ್ಕಿದ್ದು ಕೆಲವೇ ಕೆಲವು. ಎಲ್ಲೋ ಕಲ್ಲಿನ ಸಂದಿನಲ್ಲಿ ಬಿದ್ದಿದ್ದ ಅಸಾಧಾರಣ ಉದ್ದದ ಹಾವಿನ ಪೊರೆ ನೋಡಿದಾಗ ಹಾವೇ ದರ್ಶನ ಕೊಡದಿದ್ದದ್ದು ಒಳ್ಳೆಯದೇ ಆಯ್ತು ಅನಿಸಿರಬೇಕು. ತರಹೇವಾರಿ ಬೀಜಗಳ ಗುಪ್ಪೆಯಂತೆ, ನಾರುಸೊಪ್ಪುಗಳ ಚೂರ್ಣದಂತೆ, ಬಂಡೆಗೆ ಸುಣ್ಣ ಬಳಿದಂತೆಲ್ಲಾ ಕಾಣಿಸುತ್ತಿದ್ದ ಜೀವಿಗಳ ವಿಸರ್ಜನೆಗಳು ನಮ್ಮನ್ನು ಮತ್ತೆ ಮತ್ತೆ ಎಚ್ಚರಿಸುತ್ತಿತ್ತು. ಎಲ್ಲೋ ಹಂದಿಯ ಮುಳ್ಳ ಕಣೆ, ಇನ್ಯಾವುದೋ ಹಕ್ಕಿಯ ಗರಿ, ಯಾರದೋ ಮೇಜವಾನಿಯಲ್ಲಿ ಬಾಕಿಯಾದ ಕಡವೆ ಕೋಡು ಸರದಿ ಯಾರಿಗೂ ಬರಬಹುದು ಎನ್ನುವಂತಿತ್ತು. ಬಿಸಿಲೇರಿದಂತೆ ಆಗೀಗ ಹೊಳೆಪಾತ್ರೆಗುಂಟ ಹಲವು ಮಿನಿಟುಗಳ ಉದ್ದಕ್ಕೆ ಸಾಲು ಹಿಡಿದು ಹಾರಿ ಸಾಗುತ್ತಿದ್ದ ಅರಶಿನ ಚಿಟ್ಟೆಗಳ ಪಯಣವಂತೂ ನಮಗೆ ಊಹೆ, ವರ್ಣನೆಗೆ ಎಟುಕದ ವೈಭವ. ವನ್ಯದ ಕುರಿತ ಅಂದಿನ ನಮ್ಮ ಮನೋವಿಕಾಸದ ನಿಲುಕಿಗೆ ಇದಕ್ಕಿಂತ ಹೆಚ್ಚಿಗೆ ದಕ್ಕುವುದು ಸಾಧ್ಯವೂ ಇರಲಿಲ್ಲ. (ಅಂದೆಲ್ಲಾ ನಿಶ್ಶಬ್ದ ಎನ್ನುವುದು ನಮ್ಮ ಭದ್ರತಾ ನಿಯಮಕ್ಕೆ ವಿರುದ್ಧವಾಗಿತ್ತು. ಮಾತು, ಕತೆ, ಹಾಸ್ಯ ಎಲ್ಲ ಸಾಲದೆಂದು ಕ್ರೂರ ಮೃಗಗಳನ್ನು ದೂರವಿಡಲು ನಾವು ಕಾಲಕಾಲಕ್ಕೆ ಬೊಬ್ಬೆ ಹೊಡೆಯುವುದನ್ನು ಬಹಳ ಶಿಸ್ತಿನಿಂದ ನಡೆಸುತ್ತಿದ್ದದ್ದು ಬಹಳ ದೊಡ್ಡ ತಪ್ಪೆಂದು ಇಂದು ಅರಿವಾಗುತ್ತದೆ.)

ಶಿಬಿರ ಬಿಟ್ಟು ಐವತ್ತೇ ಹೆಜ್ಜೆಯಲ್ಲಿ ನಾವು ಹೊಳೆಯಲ್ಲಿ ನಿರೀಕ್ಷಿಸಿದ್ದ ದಕ್ಷಿಣ ತಿರುವು ಬಂತು. ಸ್ವಲ್ಪ ಮುಂದೆ ತೀರಾ ಅನೂರ್ಜಿತ ಕೂಪು ದಾರಿಯೊಂದು ಹೊಳೆ ದಾಟುತ್ತಿದ್ದಿರಬಹುದಾದ ಕುರುಹುಗಳು ಸಿಕ್ಕರೂ ನಾವು ಹೊಳೆಪಾತ್ರೆ ಬಿಡಲಿಲ್ಲ. ಮೊಸುಂಬಿ ವಿಶ್ರಾಂತಿ ಕಳೆದು ಇನ್ನೇನು ಪಾನಕದ ಸಮಯ ಎನ್ನುವಾಗ ಮೊದಲ ನಾಗರಿಕ ಕುರುಹಾಗಿ ಬೀಳಲಿನ ಸೇತುವೆಯೊಂದು ಕಾಣಿಸಿತು. ಮತ್ತೆ ನಮ್ಮ ನಡಿಗೆ ಚುರುಕಾಗುತ್ತಿದ್ದಂತೆ ಕ್ರಮವಾಗಿ ಏಲಕ್ಕಿ, ಕಾಫಿ ತೋಟಗಳೂ ಗದ್ದೆ, ಮನೆಗಳೂ ಕಾಣಿಸಿದವು. ಜೊತೆಗೆ ಹೊಳೆಪಾತ್ರೆ ವಿಸ್ತಾರವಾಗಿ, ಬಂಡೆ ಕೊರಕಲುಗಳು ವಿರಳವಾಗಿ, ನೀರ ಹರಿವು ತೆಳುವಾಗಿ ನಮ್ಮ ನಡಿಗೆಗೆ ವೇಗವೂ ಬಂದಿತ್ತು. ಒಂದೂವರೆ ದಿನದ ಸ್ಪರ್ಧಾ ಓಟದ ಕೊನೆಯ ನಿಶಾನಿಯಂತೆ ಧುತ್ತನೆ ತೆರೆದು ತೋರಿತು ಒಂದು ಜಲಪಾತ – ಹಟ್ಟಿಹಳ್ಳಿ ಅಥವಾ ಮಲ್ಲಳ್ಳಿ ಅಬ್ಬಿ ಎಂದೇ ಇದು ಖ್ಯಾತ. ಗುಡ್ಡೆಯ ಬುಡದಿಂದ ಮುಡಿಯವರೆಗೆ ಬಂಡೆ ಹಸಿರುಗಳನ್ನು ಮರೆಸುವಂತೆ ಹತ್ತಿಹಬ್ಬಿದಂತೇ ಶೋಭಿಸುತ್ತಿತ್ತು ಹಟ್ಟಿಹಳ್ಳಿ ಅಬ್ಬಿ.

ಗದ್ದೆಯಂಚಿನ ಒಂದಿಬ್ಬರು ರೈತರನ್ನು ಮಾತಾಡಿಸಿ, ಅಬ್ಬಿ ಬುಡಕ್ಕೆ ಹೋದೆವು. ಹೊರೆ ಇಳಿಸಿ, ಕುರುಕಲು, ಪಾನಕ ಸೇವೆ, ಕೊನೆಯಲ್ಲಿ ಜಲಕೇಳಿ. ಭೂಪಟ ಜಲಪಾತದ ಎತ್ತರವನ್ನು ಅರುವತ್ತಾರು ಮೀಟರ್ ಎಂದು ಉಲ್ಲೇಖಿಸಿದರೂ ಅಷ್ಟೂ ಒಂದೇ ಬೀಳಲ್ಲ. ಶುದ್ಧ ಕಗ್ಗಲ್ಲ ನದಿ ಪಾತ್ರೆ ಮೇಲಂಚಿನಿಂದ ಒಮ್ಮೆಗೇ ಸುಮಾರು ಇಪ್ಪತ್ತು ಮೀಟರ್ ಜಗ್ಗಿದಂತಿದೆ. ಮುಂದೆ ಒಟ್ಟಾರೆ ಸುಮಾರು ನೂರು ಮೀಟರ್ ಅಂತರದಲ್ಲಿ ಹಲವು ಧಾರೆಗಳಲ್ಲಿ ವೈವಿಧ್ಯಮಯ ಬೀಳು ತೋರುತ್ತಿತ್ತು. ಕೆಳ ಮಟ್ಟಿನ ಒಂದೆರಡು ಕೊಳ ಮತ್ತು ಜಾರುಗಳನ್ನು ದಾಟಿ ವಿಸ್ತಾರ ಮಡುವೊಂದನ್ನು ಆಯ್ದುಕೊಂಡೆವು. ಪಮ್ಮಣ್ಣ ಜನಪದ ಕುಶಲ ಈಜುಗಾರ. ಆತ ಆ ಕೊಳದ ಆಳ ಹರಹುಗಳನ್ನು ಪರೀಕ್ಷಿಸಿ ‘ಅತ್ಯುತ್ತಮ ಈಜುಗೊಳ’ ಪ್ರಶಸ್ತಿ ಕೊಟ್ಟಮೇಲೆ ನನ್ನಂಥ ‘ನಾಯಿ ಈಜು’ ಪ್ರವೀಣರೂ ಶುದ್ಧರಾಗುವ ಮನಸ್ಸು ಮಾಡಿದೆವು. ಕೊಳವನ್ನು ನಾವು ಈಜಿ ಕಲಕಿದ್ದಕ್ಕಿಂತಲೂ ಅದರ ಶೈತ್ಯಕ್ಕೆ ನಡುಗಿ ಕಲಕಿದ್ದೇ ಹೆಚ್ಚು ಎನ್ನಬೇಕು! ಕೊಳದ ಏರುದಂಡೆಯಲ್ಲೊಂದು ಜಾರು ಬಂಡೆ. ಅದರ ನಾಲಕೈದು ಮೀಟರ್ ಉದ್ದಗಲಕ್ಕೂ ನೀರ ತೆಳು ಹಾಳೆ ಕಲಕಲಿಸಿ ಇಳಿಯುತ್ತಿತ್ತು. ಅದಕ್ಕೆ ತಲೆ, ಬೆನ್ನು ಕೊಟ್ಟರೆ ಆಹ್, ಎಂಥಾ ಒತ್ತು ಸೇವೆ! ಪಮ್ಮಣ್ಣನ ಡೈವಿಂಗ್ ಬೋರ್ಡ್ ಸಾಮಾನ್ಯರಿಗಲ್ಲ. ಕೊಳಕ್ಕಿಳಿಯುತ್ತಿದ್ದ ಮುಖ್ಯ ಧಾರೆಯಂತೂ ಭಯಂಕರ ಶವರ್ ಬಾತ್. ಕ್ಷಣಮಾತ್ರ ತಲೆಕೊಟ್ಟು ದೂರ ಸರಿಯದಿದ್ದರೆ ಒಳಗೆ ಮಿದುಳು ಗೊಟಾಯಿಸಿ ಹೋದೀತು. ಇನ್ನೂ ಹೆಚ್ಚಿನ ಆಟಗಳನ್ನು ಸಮಯದ ಕೊರತೆಯಿಂದ ಕೈಬಿಟ್ಟು ಕಾರ್ಯಕ್ರಮ ಪಟ್ಟಿಯಂತೆ ಕೊನೆಯದಾಗಿ ತೌಡು ಮುಕ್ಕಲು ಕುಳಿತೆವು. ಮೋಸುಂಬಿ, ಉಪ ತಿನಿಸುಗಳು ಖಾಲಿಯಾದರೂ ಹೆಚ್ಚಿನವರ ತೌಡಿನ ಚೀಲ ಅಕ್ಷಯವಾಗಿತ್ತು!

ಅಬ್ಬಿಯಿಂದ ಸುಮಾರು ಎಂಟು ಕಿಮೀ ಪೂರ್ವಕ್ಕೆ ಬಹ್ವಂಶ ಮಣ್ಣದಾರಿಯಲ್ಲಿ ನಡೆದರೆ ಕೊಡಗಿನ ಕುಂದಳ್ಳಿ ಮತ್ತು ಸುಮಾರು ಮೂರು ಕಿಮೀ ಉತ್ತರಕ್ಕೆ ಕಾಲ್ದಾರಿ ಅನುಸರಿಸಿದರೆ ಹಾಸನದ ಪಾಟ್ಲ ವಾಹನ ಸೌಕರ್ಯಗಳನ್ನು ಕೊಡುವುದಿತ್ತು. ನಾವು ಪಾಟ್ಲದಿಂದ ದಿನದ ಕೊನೆಯ ಸುಬ್ರಹ್ಮಣ್ಯ ಬಸ್ಸು ಹಿಡಿಯುವ ಯೋಜನೆಯವರೇ ಆದ್ದರಿಂದ ಆರಾಮವಾಗಿಯೇ ಪಾದ ಬೆಳೆಸಿದೆವು. ಗದ್ದೆ, ತೋಟ ಸುತ್ತಿ ಕೊನೆಯಲ್ಲಿ ಕಡಿದಾದ ಬೋಳುಗುಡ್ಡೆಯಲ್ಲಿ ಬಸವಳಿದರೂ ಸುಮಾರು ನಾಲ್ಕು ಗಂಟೆಯ ಬಸ್ಸಿಗೆ ಅರ್ಧ ಗಂಟೆ ಮೊದಲೇ ದಾರಿ ಬದಿ ಸೇರಿಕೊಂಡೆವು. ಅಲ್ಲಿಂದ ಬಿಸೆಲೆ ಹಳ್ಳಿ ಒಂಬತ್ತು ಕಿಮೀ. ಬೋಳು ಮೈದಾನದಲ್ಲಿ ಉರಿಬಿಸಿಲು ನಿವಾರಿಸುವಂತೆ ಅತ್ತ ನಿಧಾನಕ್ಕೆ ನಡೆಯುತ್ತ ಬಸ್ಸಿನ ದಾರಿ ನೋಡುತ್ತಿದ್ದೆವು. ಮುಂದೊಂದು ಹಳ್ಳಿಯ ಬಸ್ ನಿಲ್ದಾಣದ ನೆರಳಲ್ಲಿ ಕುಳಿತು ಕಾದೆವು. ತೌಡಿನ ಪೊಟ್ಟಣ ಮತ್ತೂ ಕಳಚಿಕೊಳ್ಳಬಹುದಾದ ಹಲವು ಹೊರೆಗಳನ್ನು ಹಳ್ಳಿಗರಿಗೆ ‘ದಾನ’ ಮಾಡಿ, ದಾರಿಯಲ್ಲೇ ಮುಂದುವರಿದೆವು. ಬಿಸಿಲೆ ಸಮೀಪಿಸಿದಷ್ಟೂ ಟಿಕೆಟ್ಟಿನ ಖರ್ಚು ಕಡಿಮೆಯಾಗುತ್ತೆಂದು ಆತಂಕ ಅಡಗಿಸಿ ನಗುತ್ತಾ ನಡೆದೆವು. ಬಸ್ಸು ಬರಲೇ ಇಲ್ಲ. ಉಳಿದ ದಿನದ ಕೊನೆಯ ಬಿಸಲೇ ಬಸ್ಸು ಏಳೂವರೆ ಗಂಟೆಗೆ ಬರುವಾಗ ನಮ್ಮ ಯೋಜನೆಯನ್ನು ಬಿಸಲೆ ಹಳ್ಳಿಯಂಗಳದ ಶಿಬಿರ ವಾಸಕ್ಕೆ ಪರಿಷ್ಕರಿಸಿಕೊಳ್ಳುವುದು ಅನಿವಾರ್ಯವಾಯ್ತು. ಇಪ್ಪತ್ನಾಲ್ಕು ಕಿಮೀ ರಾತ್ರಿ ನಡಿಗೆಗೆ ಯಾರಲ್ಲೂ ದಮ್ಮಿರಲಿಲ್ಲ!

ಬಿಸಲೆ ಹಳ್ಳಿಯ ಅರಣ್ಯ ಗೇಟಿಗೆ ಯಾರೂಂತ ಕೇಳಿದ್ದೀರಿ? ‘ಬರುವ ಕಳ್ಳ ನಾಟಾ ಲಾರಿ, ಬೇಟೇ ಮಂದಿಗಳನ್ನೆಲ್ಲ ಮುರುಕು ಬಡಿಗೆ ಮಾತ್ರದಿಂದ (ನೈತಿಕ ಬೆಂಬಲಕ್ಕೆ ಇಡಿಯ ಕರ್ನಾಟಕ ಸರಕಾರವೇ ಇದೆ ಬಿಡಿ) ನಿಯಂತ್ರಿಸುವ (ಸುಧಾರಿಸುವ ಆಗಬೇಕು, ಇರಲಿ) ಬೆಟ್ಟೇ ಗೌಡ,’ ಹಾಗೆಂದುಕೊಳ್ಳಬಹುದು! ಒಂದು ಭೂತ ಬಂಗ್ಲೆಯಂಥಾ ಕ್ವಾಟ್ರಸೂ (Quarters) ಮೂರು ಮಿಣುಕು ದೀಪದ ಜೋಪಡಿ ಮನೆಗಳಷ್ಟೇ ಅಂದಿನ ಬಿಸಿಲೆ ಹಳ್ಳಿ. ನಮ್ಮ ಬಯಲ ಶಿಬಿರದ ಮಾತು ಕೇಳಿ ಬೆಟ್ಟೇ ಗೌಡರು ತನ್ನ ಎರಡೋ ಮೂರೋ ಕೋಣೆಯ ಕ್ವಾಟ್ರಸಿನಲ್ಲೇ ಒತ್ತಾಯದಿಂದ ಅನುಕೂ ಮಾಡಿಕೊಟ್ಟರು (ಪಾಪ ಪೇಟೇ ಹುಡುಗರಿಗೆ ಚಳಿಯಲ್ಲೇಕೆ ಕಷ್ಟಾಂತ). ನಡುವೆ ಏನಾದರೂ ವಾಹನ ಬಂದರೆ ಕಳಿಸಿಕೊಡಲು ವ್ಯವಸ್ಥೆ ಮಾಡುವುದಾಗಿಯೂ ಧೈರ್ಯ ಕೊಟ್ಟರು. ಇಂದು ಎರಡು ಹೋಟೆಲ್ ಒಂದು ಗೂಡಂಗಡಿ ಇರುವ ಬಿಸಿಲೆಯಲ್ಲಿ ಆ ಕಾಲಕ್ಕೆ ಸಾರ್ವಜನಿಕರಿಗೆ ಒಂದು ಗಂಜಿ ಹುಟ್ಟುವುದೂ ಕಷ್ಟವಿತ್ತು. ಆದರೆ ಇಲಾಖೆಯವರಿಗೆ ಊಟ ಕಾಫಿಗೊದಗುತ್ತಿದ್ದ ಅಲ್ಲೇ ನೂರಡಿಯಾಚೆ ಇದ್ದ ಲಿಂಗೇ ಗೌಡರ ಮನೆಯಲ್ಲಿ ನಮಗೂ ಬಿಸಿಯೂಟದ ವ್ಯವಸ್ಥೆ ಮಾಡಿಸಿಕೊಟ್ಟರು. (ತೌಡು ತಿಂದ ನಾಲಗೆಗೆ ಸರಳ ಅನ್ನ, ಖಾರದ ಸಾರು ಕೊಟ್ಟ ಅದ್ಭುತ ರುಚಿಯನ್ನು ಇಂದು ಹೇಗೆ ಹೇಳಿದರೂ ನೀವು ತಳ್ಳಿ ಹಾಕ್ತೀರೀಂತಾದ್ದರಿಂದ ನಾನು ಹೇಳುವುದಿಲ್ಲ!). ಎಲ್ಲ ನಿಶ್ಚಿಂತೆಯಿಂದ ಮಲಗಲು ಸಜ್ಜಾಗುತ್ತಿದ್ದಾಗ ಆ ಜೀಪು, ಹೌದು, ಈ ಕಥಾನಕದ ಮೊದಲಲ್ಲಿ ಹೇಳಿದ ಸೋಮವಾರಪೇಟೆಯ ಜೀಪೇ ಬಂತು.

ಜೀಪೊಳಗೆ ಮೂರೇ ಮಂದಿ. ಘೋಷಿಸಿಕೊಂಡ ಉದ್ದೇಶ ಸುಬ್ರಹ್ಮಣ್ಯದಾಚೆಯಿರುವ ಸಂಬಂಧಿಕರ ತುರ್ತು ಅನಾರೋಗ್ಯದ ವಿಚಾರಣೆ. ಬೆಟ್ಟೇಗೌಡರು ಒಂದು ಕಂಡೀಸನ್ ಮೇಲೆ ಉದಾರಿಗಳಾದರು – “ಡೌನ್ ರೋಡ್ನಲ್ಲಿ ಜೀಪಿಗೇನೂ ಹೊರೆಯಾಗಲ್ಲ. ಇವ್ರ್ನ ಸುಬ್ರಣ್ಯಕ್ಕೆ ಎತ್ತಿಸಿ.” ಚಾಲಕ ಹಾಗೇ ಹೀಗೇ ಕೊಸರಾಡಿದ, ಪ್ಲೇಟ್ ವೀಕಂದ, ಟಯರ್ ತಡಿಯಲ್ಲಾಂದ. ಬೆಟ್ಟೇ ಗೌಡ್ರ ಪಟ್ಟು ಸಡಿಲುವ ಅಂದಾಜು ಕಾಣದಾಗ “ಇಬ್ರನ್ನ ಕುಳ್ಕುಂದ ಮುಟ್ಟುಸ್ತೀವಿ. ಅವರ್ ಬ್ಯಾರೇ ಬಾಡ್ಗೀ ಜೀಪ್ ತಂದ್ ಉಳ್ದೋರ್ನ..” ಆತ ವಾಕ್ಯ ಪೂರ್ತಿ ಮಾಡುವ ಮೊದಲೇ ನಾನು ಮತ್ತು ಅರವಿಂದ ಸಿಕ್ಕಿದ್ದೇ ಛಾನ್ಸೂಂತ ಬೆಟ್ಟೇ ಗೌಡ್ರನ್ನ ಸಮಾಧಾನಿಸಿ ಜೀಪೇರಿಕೊಂಡಿದ್ದೆವು. ಮತ್ತೆ ನಿಮಗೆ ಗೊತ್ತೇ ಇದೆ. ಮೂರೇ ಕಿಮಿ ಅಂತರದಲ್ಲಿ ಜೀಪು ಜಖಂ, ಸವಾರಿ ಖತಂ, ಚಾರಣ ಖಾಯಂ!

ಹತ್ತೂ ಜನ ಕೈಕೊಟ್ಟು ಜೀಪನ್ನು ಆದಷ್ಟು ರಸ್ತೆ ಬದಿಗೆ ಸರಿಸಿದ್ದಾಯ್ತು. (ಇನ್ಯಾವುದಾದರೂ ವಾಹನ ಬಂದರೆ ತಡೆಯಾಗಬಾರದಲ್ಲಾಂತ.) ಇಬ್ಬರು ಜೀಪಿನಲ್ಲೇ ಮಲಗಿದರು ಮತ್ತಿಬ್ಬರು ಸಹಾಯ ತರಲು ಸೋಮವಾರಪೇಟೆ ಕಡೆಗೆ ನಡೆಯತೊಡಗಿದರು. ಉಳಿದ ನಾಲ್ವರು ತಮ್ಮ ಬೇಟೆ ಚಟ ತೀರಿಸಿಕೊಳ್ಳುವುದರೊಡನೆ ನಮ್ಮನ್ನು ಕುಳ್ಕುಂದ ತಲಪಿಸುವುದಕ್ಕೆ ಸಜ್ಜಾದರು. ನಮ್ಮ ಆಂತರ್ಯದಲ್ಲಿ ಬೇಟೆಗಾರರನ್ನು ತಿರಸ್ಕರಿಸಿ ನಡೆಯುವ ರೊಚ್ಚಿತ್ತು. ಆದರೆ ದೇಹದಲ್ಲಿ ತಾಕತ್ತು ಮತ್ತು ವನ್ಯ ಅನುಭವ ಕಡಿಮೆಯಿದ್ದುದರಿಂದ ಜಾಣಮೌನ ತಳೆದು ಅವರನ್ನು ಹಿಂಬಾಲಿಸಿ ನಡೆಯಲು ಒಪ್ಪಿದೆವು. ನಲ್ವತ್ತೈವತ್ತು ವರ್ಷದ ಹಿರಿಯ ಹೆಡ್ ಲೈಟ್ ಕಟ್ಟಿ, ಕೋವಿ ಹಿಡಿದು ಮುಂದಾಳು. ಎರಡನೆ ಕೋವಿ ಹಿಡಿದವ ಆತನ ಎಡಗೈ ಬಲಗೈಗೆ ಸಿಗುವಷ್ಟು ಹಿಂದೆಯೇ ಅನುಸಾರಿ. ನಾವೂ ಸೇರಿದಂತೆ ಉಳಿದವರು ಹತ್ತಿಪ್ಪತ್ತು ಹೆಜ್ಜೆ ಹಿಂದೆ, ಪಿಸು ನುಡಿಯದೆ, ಕಲ್ಲು ಕಡ್ಡಿಯ ಮೇಲೆ ಕಾಲು ಕುಸುಕದೆ ಹಿಂಬಾಲಿಸಿತು. ಹಿರಿಯನ ತಲೆ ಚೆನ್ನಪಟ್ನದ ಗೊಂಬೆಯಂತೆ ಎಡಬಲ, ಮೇಲೆಕೆಳಗೆ ಆಡುತ್ತಿತ್ತು. ಅದಕ್ಕೆ ಸರಿಯಾಗಿ ಆತನ ದೀಪದ ಬೆಳಕೋಲು ದಾರಿಯ ಉದ್ದಕ್ಕೂ ಪೊದರು ಮರಗಳ ಮರೆಗೂ ದರೆ ಕೊಂಬೆಗಳ ಎತ್ತರಕ್ಕೂ ಹರಿದು ವಿಚಾರಿಸುತ್ತಿತ್ತು – ಕಣ್ಣ ಕೊಟ್ಟೀರಾ? ಕಣ್ಣ ಕೊಟ್ಟೀರಾ! ತುಸುವೇ ತರಗೆಲೆ ಸದ್ದು, ಮಿಂಚಿದ ಭ್ರಮೆ ಬಂದರೆ ಆತ ನಿಂತು ಹೆಚ್ಚಿನ ಮುತುವರ್ಜಿಯಲ್ಲಿ ದಿಟ್ಟಿಸಿಯಾನು. ನಿಶಾಚರಿ ಜೀವಗಳು ಕಣ್ಣು ಕೋರೈಸುವ ಬೆಳಕೋಲು ಬಿದ್ದದ್ದೇ ದಿಕ್ಕೆಟ್ಟು ಒಮ್ಮೆಗೇ ಸ್ತಬ್ದವಾಗಿಬಿಡುತ್ತವಂತೆ. ಮರುಕ್ಷಣದಲ್ಲಿ ಬೇಟೆಗಾರನ ಕೋವಿ ಈಡಾಗುವುದೂ ಆ ಕೇಂದ್ರಕ್ಕೇ. ಹಿರಿಯನ ತಲೆ ಹೊಣಕಾಟಕ್ಕೆ ಕಿರಿಯನ ತಲೆಯೂ ಜೊತೆಗೊಡುವುದು ನೋಡಿ (ಹುಲಿವೇಷದ ಹಿಂದೆ ಬಾಲ ಹಿಡಿದು ಕುಣಿಯುವವನಂತೆ) ನಮಗೆ ನಗು ಬರುತ್ತಿತ್ತು. ತೀರಾ ಕ್ವಚಿತ್ತಾಗಿ ಬರುತ್ತಿದ್ದ ಅವರ ಪ್ರತಿ ಪಿಸುಮಾತೂ ನಮಗೇನೋ ಅನಿಷ್ಟದ ಮುನ್ನುದಿಯಂತೆ ಕೇಳುತ್ತಿತ್ತು (“ಏನೋ ಕಣ್ ಕೊಟ್ಟಂಗಾತೋ,” “ಕಡಾ ಓಡ್ದಂಗಾಯ್ತೋ” ಇತ್ಯಾದಿ) ಅವರು ಎರಡೇ ಮಿನಿಟು ನಿಂತರೂ ನಮ್ಮ ಎರಡು ದಿನದ ನಿದ್ರೆ, ಸುಸ್ತು ಒತ್ತರಿಸಿ ಬಂದು ಇದ್ದಲ್ಲೇ ಕೂತು ತೂಕಡಿಸುತ್ತಿದ್ದೆವು.

ಅರ್ಧ ಗಂಟೆ ಕಳೆದರೂ ಏನೂ ಸಿಗಲಿಲ್ಲ. ಹಿಮ್ಮುರಿ ತಿರುವುಗಳು ಇರುವ ಭಾಗದಲ್ಲಿ ಮುಂದಿನಿಬ್ಬರು ಒಳದಾರಿ ಹಿಡಿದರು. ನಾವು (ಟಾರ್ಚಿದ್ದರೂ ಬೆಳಗಿಸಿಬಾರದೆಂಬ ಸೂಚನೆಯಿದ್ದುದರಿಂದ) ಸೋರುತ್ತಿದ್ದ ತಿಂಗಳ ಬೆಳಕಿನ ಮಬ್ಬಿನಲ್ಲೇ ದಾರಿ ಅನುಸರಿಸಿ ದಾಪುಗಾಲಿಟ್ಟೆವು. ಹತ್ತು ಹೆಜ್ಜೆ ಕಳೆದಿರಲಿಲ್ಲ, ಬದಿಯ ದರೆಯಲ್ಲೇನೋ ದಡಬಡಿಸಿದಂತಾಯ್ತು. ಕೂಡಲೇ ಅತ್ತ ನಮ್ಮ ಟಾರ್ಚ್ ಬೆಳಗಿದೆವು. ಒಂಟಿ ಕಡವೆ! ದರೆಯೇರಲು ಸೋತು, ಚರಂಡಿಯಲ್ಲಿ ನಮ್ಮತ್ತ ಒಮ್ಮೆ ಬರಲು ತಿಣುಕಿ, ತಿರುಗಿ ದಾರಿ ಏರಿ ಕೊಳ್ಳದ ಬದಿಗೆ ಧಾವಿಸಿ ಮರೆಯಾಯ್ತು. ಅದರ (ಮತ್ತು ನಮ್ಮ) ಅದೃಷ್ಟಕ್ಕೆ ನಮ್ಮ ಬಳಿ ಕೋವಿ ಇರಲಿಲ್ಲ.

ಅಡ್ಡಹೊಳೆ ಸಂಕ ಬಂತು. ನಮ್ಮ ಮೊದಲ ಯಾನದಲ್ಲಿ ಮುಚ್ಚಿಹೋಗಿದ್ದ ದಾರಿ ಅನಂತರದ ದಿನಗಳಲ್ಲಿ ಜೀರ್ಣೋದ್ಧಾರ ಕಂಡಿತ್ತು. ಮತ್ತೆ ಕೆಲವು ಸಮಯದಲ್ಲಿ ಕಳ್ಳ ಲಾರಿಗಳ ಭಾರೀ ಹೊರೆ ತಡೆಯದೇ ಸಂಕ ಸೊಂಟ ಮುರಿದುಕೊಂಡದ್ದೂ ಆಯ್ತು. ಆ ಕಾಲದ (ದಿವ್ಯ ಅಜ್ಞಾನದಲ್ಲಿ) ನನ್ನ ಪತ್ರಿಕಾ ಹಲುಬಾಟ ನೋಡಿ: (ಮೊದಲು ಪತ್ರಿಕಾ ಲೇಖನವಾಗಿ ಬಂದದ್ದು ನನ್ನದೇ ಪುಸ್ತಕ ‘ಚಕ್ರವರ್ತಿಗಳು’ ಇದರಲ್ಲೂ ಸೇರಿದೆ) “ಸುಂದರ ದಾರಿಯ ಚರಂಡಿಯ ಹೂಳು ತೆಗೆದು ದಾರಿ ಕೊರೆತ ತಪ್ಪಿಸಿದವರಿಲ್ಲ. ಝರಿಯಬ್ಬರಕೆ ಕುಂದ ನಲುಗಿ, ತೊಲೆ ಕುಸಿದು, ಸೇತುಭಂಗವಾಗುವುದನ್ನು ತಡೆಯಬಂದವರಿಲ್ಲ. ಮರಬಿದ್ದು ಬಸ್ಸಿನೋಡಾಟ ರದ್ದಾದರೆ ದದ್ದು ಹಿಡಿದು ಮಾಡಿಸುವವರಿಲ್ಲ. ಕಳ್ಳಬೆತ್ತದ ಹೊರೆ ತಲೆಯೇರಿ ಹಾಡೇಹಗಲು ನಡೆದುಹೋಗುವುದನ್ನು ನೋಡುವವರಿಲ್ಲ. ಮರಗಳ್ಳರು ಎಬ್ಬಿಸಿದ ಕಾಳ್ಗಿಚ್ಚಿನಲ್ಲಿ ಹಸುರಳಿಯುವುದನ್ನು ಉಳಿಸುವವರಿಲ್ಲ. ಸಂದ ತಪ್ಪುಗಳ ಇಂದಿನ ಕೂಸು ನಾವು. ಗತ ಮೌಲ್ಯಗಳನ್ನು ಉಪೇಕ್ಷಿಸುವ ಅತಿರೇಕಕ್ಕಿಂತ ವರ್ತಮಾನದ ವಿವೇಚನೆಗೊಳಪಡಿಸಿ, ಉಳಿಸಿಕೊಳ್ಳುವುದು ಚಂದ. ಬಿಸಿಲೇ ಘಾಟಿ ಉಳಿಯುವುದೇ ಚಂದ.”

ಕಾಲನ ಕಡತದ ಈಚಿನ ಪುಟಗಳಲ್ಲಿ ಪಕ್ಕಾ ಕಾಂಕ್ರೀಟ್ ಸೇತುವೆ ಬಂದದ್ದು, ಅದುವರೆಗೆ ಇಲ್ಲದ ಸರಕಾರೀ ಬಸ್ ಸಂಚಾರ ಶುರುವಾದದ್ದೂ ನನ್ನ ತಿಳಿವಿನಲ್ಲಿತ್ತು. ಮುಂದೊಂದು ದಿನ ತಲೆಹೊರೆಯಲ್ಲಿ ಹೋಗುತ್ತಿದ್ದ ಬೆತ್ತದ ಕಟ್ಟು ಹುಲ್ಲಿನ ಲಾರಿಗಳ ಮರಸಿನಲ್ಲಿ ಸಾಗುವುದು, ಕಳ್ಳಬೇಟೆಗಳ ದಾಂಧಲೆ ಇತ್ಯಾದಿ ತಿಳಿದಾಗ ಮತ್ತೆ ನಾನೇ ಬರೆದಿದ್ದೆ (ಕ್ಷಮಿಸಿ, ಆ ಕಾಲದ ಪತ್ರಿಕಾ ಕತ್ತರಿಕೆ ಎಲ್ಲೋ ಕಳೆದು ಹೋಗಿರುವುದರಿಂದ ಸಾರಾಂಶ ಮಾತ್ರ ಕೊಡುತ್ತಿದ್ದೇನೆ) ‘ಗ್ರೀನ್ ಪೀಸ್ (ವಿಶ್ವಖ್ಯಾತ ಪರಿಸರ ಹೋರಾಟಗಾರರ ಬಳಗ. ಇವರು ಒಳ್ಳೆಯ ಪರಿಸರಕ್ಕಾಗಿ ಭಯೋತ್ಪಾದನೆಯನ್ನೂ ನಿರಾಕರಿಸಿದವರಲ್ಲ!) ಕ್ರಾಂತಿಯಂತೆ ಅಡ್ಡಹೊಳೆ ಸಂಕವನ್ನು ಯಾರಾದರೂ ಉಡಾಯಿಸಬಾರದೇ.’ ಉಗ್ರ ಕನವರಿಕೆಯಲ್ಲೇ ಮುಂದುವರಿದೆವು. ಕನಸು ವಾಸ್ತವಕ್ಕಿಳಿಯಿತೋ ಎನ್ನುವಂತೆ ‘ಧಡಂ’ ಎಂದಿತು ಕಳ್ಳಕೋವಿ. ಬಲಬದಿಯ ದರೆಯ ಅಂಚಿನಲ್ಲಿ ಕಡವೆ ಕಣ್ಣುಕೊಟ್ಟಿತ್ತಂತೆ. ಹಿರಿಯ ಈಡು ಮಾಡಿದ್ದ. ಆದರೆ ನಿರೀಕ್ಷೆಯ ಆರ್ತನಾದ, ಹೊರಳಾಟ ಏನೂ ಹಿಂಬಾಲಿಸದೆ ತಂಡ (ಠಂಡ) ತಣ್ಣಗಾಯ್ತು. ಮುಂದೆಯೂ ಹೀಗೇ ಇನ್ನೊಂದೆರಡು ಕಡೆ ಅವನೂ ಇವನೂಂತ ಹೆಡ್ ಲೈಟ್ ಬದಲಿಸಿಕೊಂಡು ಗುಂಡೇನೋ ಹೊಡೆದೇ ಹೊಡೆದರು. ಇವರ ಪ್ರಾವೀಣ್ಯವೋ ಭ್ರಮೆಯೋ ಕೊನೆಗೆ ಪ್ರಾಣಿಗಳ ಅದೃಷ್ಟವೋ ನಮ್ಮ ಕಣ್ಣಿಗೆ ರಕ್ತಪಾತ ಸಿಗಲಿಲ್ಲ.

ಇದ್ದಕ್ಕಿದ್ದಂತೆ ಒಂದು ತಿರುವಿನಲ್ಲಿ ಎದುರಿನಿಂದ ಒಂದು ಟಾರ್ಚು ಬೆಳಗಿತು. ಕೂಡಲೇ ನಮ್ಮವರ ಹೆಡ್ ಲೈಟುಗಳು ಚೀಲ ಸೇರಿದವು, ಕೋವಿಗಳು ಬಹಳ ಶಿಸ್ತಿನಿಂದ ಬಗಲಲ್ಲಿ ನೇತುಬಿದ್ದವು. ಪಕ್ಕಾ ಸಭ್ಯ ದಾರಿಹೋಕರಂತೆ ದಾರಿಯ ಬಲ ಅಂಚಿನಲ್ಲಿ ಸಾಲು ಹಿಡಿದು ನಡೆದೆವು. ಆದರೆ ಎದುರು ಸಿಕ್ಕಿದ್ದು ಇನ್ನೊಂದೇ ಕಳ್ಳಬೇಟೆ ತಂಡ. ಅವರೂ ನಮ್ಮ ಹಾಗೇ ರಸ್ತೆಯ ಇನ್ನೊಂದು ಬದಿಯಲ್ಲಿ ನಿಷ್ಪಾಪಿಗಳಂತೆ, ಹುಳ್ಳಗೆ ದಾಟಿ ಹೋದರು. ಐದು ಮಿನಿಟು ನಡೆದ ಮೇಲೆ ಹಿರಿಯ ಮತ್ತೆ ಹೆಡ್ ಲೈಟ್ ಬಿಗಿಯುತ್ತಾ ಪಿಸುನುಡಿದ “ನಮ್ಗೇ ಅವರ್ ಫಾರೆಶ್ಟ್ನೋರೋಂತ. ಅವರ್ಗೆ ನಾವೋಂತ. ಹ್ಹೆ, ಹ್ಹೆ ಇಬ್ರೂ ಕಳ್ರೇ.”

ಬೂದಿಚೌಡಿಯಲ್ಲಿ ಐದು ಮಿನಿಟು ವಿಶ್ರಾಂತಿ. ಸಹಚರರು ಚೀಲದಿಂದ ಏನೇನೋ ತೆಗೆದು ಚೌಡಿಗೆ ಪೂಜೆ ಮಾಡಿದರು. ಕಳ್ಳರ ದೇವಿಗೆ ಕತ್ತಲ ಪೂಜೆಯೇ ಪ್ರೀತಿ. ನೇತುಬಿದ್ದ ಗಂಟೆ ಮುಟ್ಟಲಿಲ್ಲ, ಮಂತ್ರ ತಂತ್ರದ ಪಿಟಿಪಿಟಿಯಿಲ್ಲ, ದೀಪ ಆರತಿಗಳ ಬೆಳಕೂ ಇಲ್ಲ. ಹೂವಿನಲಂಕಾರ, ಹಣ್ಣು ಕಾಯಿಗಳ ನೈವೇದ್ಯವೂ ಇಲ್ಲ. ಬರಿಯ ಒಂದು ಊದುಕಡ್ದಿ, ಚಿಟಿಕೆ ಕುಂಕುಮದೊಡನೆ ಒಳ್ಳೇ ಮಿಕಕ್ಕೆ ಪ್ರಾರ್ಥನೆ ಸಂದಿರಬೇಕು. (ಬೇಟೆಯಾದರೆ ಹೇಗೂ ದೇವಿಗೆ ‘ತೋರಿಸದೆ’ ತಿನ್ನುವುದುಂಟೇ! ಆದರೆ ನಿಜದ ಪಾಲು ಕೇಳುವ ದೇವಿ ಬಂದರೆ ಕೊಡುವ ಭಕ್ತನುಂಟೇ?) ಇಷ್ಟಾಗಿಯೂ ಮುಂದಿನ ಐದಾರು ಕಿಮೀಗಳಲ್ಲಿ ಮಾಡಿದ ಇನ್ನಷ್ಟು ಈಡುಗಳೂ ಹುಸಿಯೇ ಆದದ್ದು ನಮ್ಮಿಬ್ಬರ ಪುಣ್ಯವೆನ್ನಬೇಕು. ಮತ್ತೆ ಕುಳ್ಕುಂದ ಸಮೀಪಿಸಿದ್ದರಿಂದ ಇವರ ಯುದ್ಧೋತ್ಸಾಹ ಕಡಿಮೆಯಾಗಿ ನಿದ್ರೆಗೆ ನಿಂತರು. ಒಬ್ಬ ಮಾತ್ರ ನಮಗೆ ಸುಬ್ರಹ್ಮಣ್ಯದವರೆಗೂ ಜೊತೆಯಾಗುವಂತೆ ಬಂದ.

ಕುಳ್ಕುಂದ ತಲಪಿದಾಗ ಬೆಳಗಿನ ನಾಲ್ಕು ಗಂಟೆ. ಅದೃಷ್ಟಕ್ಕೆ ಬೆಂಗಳೂರಿನಿಂದ ಬರುತ್ತಿದ್ದೊಂದು ಪ್ರವಾಸಿ ಕಾರು ನನಗೊಬ್ಬನಿಗೆ ಜಾಗ ಕೊಟ್ಟಿತು. ಉಳಿದಿಬ್ಬರನ್ನು ಅಲ್ಲೇ ದಾರಿಬದಿಯಲ್ಲಿ ಮಲಗಿರಲು ಹೇಳಿ ನಾನು ಸುಬ್ರಹ್ಮಣ್ಯ ಸೇರಿದ್ದೇ ಬಾಡಿಗೆ ಜೀಪು ಮಾಡುವುದೆಂದಿದ್ದೆ. ಆದರೆ ಮೊದಲೇ ಹೇಳಿದ ಹಾಗೆ ಆಗ ಸುಬ್ರಹ್ಮಣ್ಯ ಇಂದಿನ ‘ಎಚ್ಚರ’ ಪಡೆದಿರಲಿಲ್ಲ. ಬೈಕಿಟ್ಟುಕೊಂಡ ಮಿತ್ರರ ನಿದ್ರೆ ಹಾಳುಮಾಡದಂತೆ ಬೈಕ್ ತೆಗೆದು ಜೀಪು ಹುಡುಕಿ ಹೊರಡಬೇಕೆನ್ನುವಾಗ ಕಂಡೆ ಬೈಕ್ ಪಂಚರ್. ಅನಿವಾರ್ಯವಾಗಿ ಮಿತ್ರರ ಬೈಕ್ ಸಾಲಪಡೆದು, ಎಲ್ಲೋ ಮೂಲೆಯಲ್ಲಿದ್ದ ಜೀಪ್ ಹಿಡಿದು ಮತ್ತೆ ಬಿಸಿಲೆಯತ್ತ ಹೊರಡುವಾಗ ಗಂಟೆ ಆರು. ಮೊದಲು ಕುಳ್ಕುಂದದಲ್ಲಿ ಮಲಗಿದ್ದವರನ್ನು ಮತ್ತೆ ದಾರಿಯಲ್ಲಿದ್ದ ಇತರ ‘ಆಪತ್‌ಬಾಂಧವರನ್ನು’ ಕೂಡಿಕೊಂಡು ಜೀಪು ಮುರಿದು ಬಿದ್ದಲ್ಲಿ ಕೆಲವರನ್ನೂ ಒಳದಾರಿ ಬಾಗಿಲಿಗೆ ಕೋವಿ ಪೂರೈಕೆದಾರರನ್ನೂ ಇಳಿಸಿ ಗೇಟು ತಲಪಿದೆವು. ಆ ಉದ್ದಕ್ಕೂ ದಾರಿಯ ದಡಬಡದಲ್ಲಿ ನಾನೂ ಅರವಿಂದನೂ ಭಯಂಕರ ನಿದ್ರೆಯ ಹೊಡೆತದಲ್ಲಿ ಹೊರಗೆ ಬೀಳದೇ ಉಳಿದದ್ದು ವಿವರಿಸಿದರೆ ಇನ್ನೊಂದೇ ವಾರ (ಕೊ/)ಗೊರೆಯಬೇಕಾದೀತು! ಸುಖನಿದ್ರೆ ಮುಗಿಸಿದ ಮಿತ್ರರೆಲ್ಲರನ್ನೂ ಕೂಡಿಕೊಂಡು, ಬೆಟ್ಟಯ್ಯನವರಿಗೆ ಹೃದಯ ತುಂಬಿದ ಕೃತಜ್ಞತೆ ಹೇಳಿ ಮರಳಿ ಸುಬ್ರಹ್ಮಣ್ಯ ಸೇರುವಾಗ ಗಂಟೆ ಒಂಬತ್ತು. ಮತ್ತೆ ಕಾಫಿಂಡಿ, ಅಲ್ಲೂ ಮತ್ತೆ ಹಿಂಬಾಲಿಸಿ ಬಂದ ಇನ್ನೊಂದಕ್ಕೆ ಉಪ್ಪಿನಂಗಡಿಯಲ್ಲೂ ‘ಪಂಚೇರ್ ರಿಪೇರಿ’ ಮಾಡಿಸಿಕೊಂಡು ಮಂಗಳೂರು ಸೇರುವಾಗ ಮಧ್ಯಾಹ್ನ ಒಂದು ಗಂಟೆಯೇ ಆಗಿತ್ತು.

ಚರವಾಣಿ ಬಿಡಿ, ದೂರವಾಣಿಯೂ ಸರಿಯಾಗಿ ಸಿಗದ ಕಾಲದಲ್ಲಿ ತಂಡಕ್ಕೆ ತಂಡ ಅರ್ಧ ದಿನವೇ ಸುದ್ದಿಯ ಎಳೆಯೂ ಇಲ್ಲದಂತೆ ನಾಪತ್ತೆಯಾದ್ದಕ್ಕೆ ಹಿಂದುಳಿದವರ ಬಿಗಿದ ನರಗಳೇನೋ ಶಾಂತವಾದವು. ಆದರೆ ಕುಮಾರಧಾರೆಯ ‘ವೀರಪ್ಪನ್’ಗಳ ಸಮಸ್ಯೆ?

(ಸದ್ಯಕ್ಕೆ ಮುಗಿಯಿತು)

ಚಿತ್ರ ಕೃಪೆ: ಕೆ. ಅರವಿಂದ ರಾವ್
[ಕತೆಗಳಾ ಮಾರಾಣಿ ಕುಮಾರಧಾರೆ ಮುಂದೇನೇ ತರಲಿ, ಇಂದಿನದ್ದಕ್ಕಿಲ್ಲವೇ ನಿಮ್ಮ ಸಮ್ಮಾನ?]