[ಕೊಡಂಜೆಕಲ್ಲಿನ ಕಥಾಜಾಲ ಭಾಗ ಮೂರು]
೧೯೭೫ರಲ್ಲಿ ಮಂಗಳೂರಿನಲ್ಲಿ ನಾನು ಅಂಗಡಿ ತೆರೆದಂದಿನಿಂದ ಪರ್ವತಾರೋಹಣ ಮತ್ತು ತತ್ಸಂಬಂಧೀ ಚಟುವಟಿಕೆಗಳನ್ನು ನನ್ನ ಸಂತೋಷಕ್ಕಾಗಿ ಮಾಡುವುದರೊಡನೆ ಸಾರ್ವಜನಿಕದೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವುದರಲ್ಲೂ ತೊಡಗಿದ್ದೆ. ಈ ಹಂಚುವ ಕ್ರಿಯೆಯ ಪರಾಕಾಷ್ಠೆ ಎಂಬಂತೆ ಕೆಲವು ಗೆಳೆಯರನ್ನು ಸೇರಿಸಿಕೊಂಡು ಜಿಲ್ಲೆಯೊಳಗಿನ ಏಳು ಕಾಲೇಜುಗಳನ್ನು ಆಯ್ದು ‘ಆರೋಹಣ ಪರ್ವತಾರೋಹಿಗಳು ಸಾಹಸಿಗಳು’ ಹೆಸರಿನಲ್ಲಿ ಪರ್ವತಾರೋಹಣ ಸಪ್ತಾಹವನ್ನೇ ನಡೆಸಿದ್ದೆವು. (ವಿವರಗಳನ್ನು ಮುಂದೆಂದಾದರೂ ಹೀಗೇ ಹಂಚಿಕೊಳ್ಳುತ್ತೇನೆ) ಅದರ ಫಲವಾಗಿ ಕೆಲವು ಕಾಲೇಜುಗಳು ಸ್ವತಂತ್ರ ಪರ್ವತಾರೋಹಣ ಸಂಘಗಳನ್ನು ಕಟ್ಟಿಕೊಂಡದ್ದು, ನಾವವರಿಗೆ ಉಚಿತವಾಗಿ ಶಿಲಾರೋಹಣದ ಮತ್ತು ಇಳಿಯುವ ಮೂಲ ತರಬೇತು ನೀಡಿದ್ದು ನಡೆಯಿತು. ಇದರಲ್ಲಿ ತುಂಬಾ ಗಮನಾರ್ಹ ಸಾಧನೆ ‘ಭುವನೇಂದ್ರದ ಆರೋಹಿ’ಗಳದು.
ಕರಾಟೆಕಾ, ಲಯನ್, ಲೆಫ್ಟನೆಂಟ್ (ಇಂದು ಮೇಜರ್) ಇತ್ಯಾದಿ ಬಿರುದಾಂಕಿತ ರಾಧಾಕೃಷ್ಣ ಕಾರ್ಕಳದ ಭುವನೇಂದ್ರ ಕಾಲೇಜಿನ ವಾಣಿಜ್ಯ ಶಾಸ್ತ್ರದ ಅಧ್ಯಾಪಕ ಮತ್ತು ಯಾವುದರಲ್ಲಿ ತೊಡಗಿಕೊಂಡರೂ ಅತ್ಯತಿ ಚಟುವಟಿಕೆಯ ಕೇಂದ್ರ. (ಇಲ್ಲೇ ಹಿಂದಿನ ಲೇಖನಗಳಲ್ಲಿ ಬರುವ ನನ್ನ ನೆಲ್ಲಿತಟ್ಟು ತೀರ್ಥ ಗುಹಾಶೋಧದ ಕಥನ ನೋಡಿ) ಅಲ್ಲೇ ಇದ್ದ ಎನ್.ಸಿ.ಸಿಯ ಹಿರಿಯ ಅಧಿಕಾರಿ ಮತ್ತು ಅಧ್ಯಾಪಕ ಸಹೋದ್ಯೋಗಿ ಕ್ಯಾಪ್ಟನ್ ಮಲ್ಲಿಯವರು ರಾಧಾಕೃಷ್ಣರಿಗೆ ಸಮರ್ಥ ಉಡಾವಣಾ ಪೀಠ! ಕಾಲೇಜುಗಳಲ್ಲಿ ಕಡ್ಡಾಯ ಎನ್.ಸಿ.ಸಿ ಇದ್ದ ಕಾಲಕ್ಕೇ “ಲೆಫ್ಟ್ ರೈಟ್ ಲೆಫ್ಟ್ ರೈಟ್ ಹೆಚ್ಚಿನ ಅನುಭವಗಳಿಗೆ ಎಬೌಟ್ ಟರ್ನ್ (ಪೀಛೇ ಮೂಡ್)” ಮಾಡುತ್ತಿದ್ದವರನ್ನೂ “ಚೇಂಚ್ ಸ್ಟೆಪ್ (ಕದಂ ಬದಲ್)”ನಲ್ಲಿ ಒದ್ದು ತುಳಿದು ಚಿಮ್ಮಿದ ಬಳಗ ರಾಧಾಕೃಷ್ಣರದು. ಸಪ್ತಾಹದ ಸಂದರ್ಭದಲ್ಲಿ ನನಗೆ ಭುವನೇಂದ್ರ ಕಾಲೇಜು ಒಳಗೊಳ್ಳುವುದು ಸಾಧ್ಯವಾಗದಿದ್ದರೂ ಅನಂತರದ ದಿನಗಳಲ್ಲಿ ಪರ್ವತಾರೋಹಣದ ‘ದೀಪಧಾರಿ’ಯಾಗಿ ಬಲು ದೀರ್ಘ ಓಟ ಕೊಟ್ಟ ತಂಡ ರಾಧಾಕೃಷ್ಣರ ಭುವನೇಂದ್ರ ಆರೋಹಿಗಳದು. ನಮ್ಮ ಇವರ ಮೊದಲ ತರಬೇತಿ ಭೇಟಿಗೆ ನಿಷ್ಕರ್ಷೆಯಾದ ಸ್ಥಳ ಕೊಡಂಜೆಕಲ್ಲು. ರಾಧಾಕೃಷ್ಣ ಸಮರ್ಥ ಸಂವಹನಕಾರನೂ ಹೌದು (ಮತಪ್ರಚಾರಕ!). ತನ್ನ ಸೈನ್ಯಕ್ಕೆ ಪರ್ವತಾರೋಹಣದ ರುಚಿ ಧಾರಾಳ ತೋರಿಸಿದ್ದರು. ಈಗ ಶಿಲಾರೋಹಣ ಯಾರಿಗೆ ಬೇಕು ಎಂದದ್ದೇ ಹಾಜರಾದವರು ನೂರಕ್ಕೂ ಮಿಕ್ಕು ಮಂದಿ. ಇವರೆಷ್ಟು ವಂದರಿಯಾಡಿಸಿದರೂ ತಂಡ ಐವತ್ತೆರಡರಿಂದ ಕೆಳಗಿಳಿಯಲಿಲ್ಲ. ಕಾಲೇಜಿನ ಎನ್.ಸಿ.ಸಿ ಬಳಗ ಆ ಕಾಲಕ್ಕೇ ಶಿಸ್ತುಬದ್ಧ ಭಾರೀ ಸೈಕಲ್ವಾಲಾಗಳ ತಂಡವೂ ಹೌದು. ಇವರ ಐವತ್ತೆರಡು ಸೈಕಲ್ಗಳ ಸೈನ್ಯ ನಮ್ಮ ಒಪ್ಪಂದದ ಹಿಂದಿನ ದಿನ ಅಂದರೆ, ಅದೊಂದು ಶನಿವಾರ ಸಂಜೆ ಕಾರ್ಕಳ ಬಿಟ್ಟು ಕೊಡಂಜೆ ಕಲ್ಲಿಗೆ ಲಗ್ಗೆ ಹಾಕಿತು.
ಕೊಡಂಜೆಕಲ್ಲಿನ (ಅಥವಾ ಕೊಣಜೆಕಲ್ಲಿನ) ಗುಹೆ ನನಗೆ ಕುತೂಹಲ ಹುಟ್ಟಿಸಿದರೂ ಆಶ್ರಮ ನನ್ನ ಆಸಕ್ತಿ ಮತ್ತು ಅಧ್ಯಯನದ ಪರಿಧಿಯೊಳಗಿನದ್ದಲ್ಲವೆಂದು ದೂರ ಉಳಿದಿದ್ದೆ. ಕತ್ತೆಕಿವಿಯ ಕಲ್ಪನೆಯನ್ನು ಮುಂದುವರಿಸಿ ನೋಡಿದಾಗ ಕತ್ತೆಯ ಹೆಕ್ಕತ್ತು ಅಥವಾ ದಕ್ಷಿಣದ ದಿಬ್ಬಸಾಲನ್ನುತ್ತರಿಸಿದ ಕಾಲ್ದಾರಿ ಪೂರ್ವ ಮಗ್ಗುಲಿಗೆ ಇಳಿದು ತುಸುವೇ ಉತ್ತರಕ್ಕೆ ಸರಿದರೆ ಭಾರೀ ಬಂಡೆ ಮುಂಚಾಚಿಕೆಯ ನೆರಳು ಸೇರುತ್ತೇವೆ. ಕರಾವಳಿಗೆ ಸಹಜವಾದ ಪಶ್ಚಿಮದ ಗಾಳಿ, ಮಳೆಗಳ ನೇರ ಧಾಳಿಗೆ ದೂರವಾದ ಬಂಡೆಯ ಮುಂಚಾಚಿಕೆ ವಿಸ್ತಾರವಾಗಿದೆ. ಅದರ ಮೊದಲ ಭಾಗದಲ್ಲಿ ಮೇಲಿನ ಬಂಡೆ ಮತ್ತು ನೆಲದ ಒಂದಂಶವನ್ನು ಮೋಟುಗೋಡೆಯಿಂದ ಸಂಪರ್ಕಿಸಿ ಪುಟ್ಟ ಗುಡಿಯನ್ನೇ ಮಾಡಿದ್ದಾರೆ. ಅದರ ನೆಲಬಂಡೆಯಿಂದಾಚೆ ಬೇರೂರಿದ ಭಾರೀ ಮಾವಿನ ಮರವೊಂದು ಮುಂಚಾಚಿಕೆಯ ಬಂಡೆಗೇ ಎದೆಗೊಟ್ಟು, ಸವಾಲೊಡ್ಡುವಂತೆ ಅದರ ಎತ್ತರಕ್ಕೂ ಹಬ್ಬಿ ಸಹಜ ತಪೋವನವನ್ನು ಸೃಷ್ಟಿಸಿತ್ತು. ನೆಲಬಂಡೆಯ ಹಾಸು ಸ್ವಲ್ಪ ಉತ್ತರದಲ್ಲಿ ಸಣ್ಣ ಸಂದು ಬಿಟ್ಟು ಒಂದೇ ಮುಂಚಾಚಿಕೆಯ ಅಡಿಯಲ್ಲಿ ಬೇರೊಂದೇ ಅಂಕಣ ಮಾಡಿಕೊಟ್ಟಂತಿದೆ. ಅಲ್ಲಿ ನೆಲ, ಮಾಡು ಸಂಧಿಸುವಲ್ಲಿ ಪ್ರಾಕೃತಿಕ ಗುಹೆಯೊಂದು ರೂಪುಗೊಂಡಿರುವುದನ್ನೂ ಕಾಣಬಹುದು. ಒಟ್ಟು ಬಂಡೆಮಾಡಿನ ನೆತ್ತಿಯ ಅಂಚಿನ ಉದ್ದಕ್ಕೆ ಮೋಟುಗೋಡೆ ಕಟ್ಟಿ ಮಳೆಯ ಹರಿನೀರು ಆಶ್ರಮಕ್ಕೆ ಧಾರೆ ಬೀಳದಂತೆ ನೋಡಿಕೊಂಡಿದ್ದಾರೆ. ಮುಂದುವರಿದು, ಮಾವಿನ ಮರ ಎದೆಗೊಟ್ಟ ಎತ್ತರದಲ್ಲೂ ಬಂಡೆಯ ಉದ್ದಕ್ಕೇನೋ (ಗೋಣಿಯೋ ಹಗ್ಗವೋ) ಬೆಸೆದು ಬಂಡೆಮೈಯಲ್ಲಿ ಮಳೆನೀರು ಆಶ್ರಮದಾಳಕ್ಕಿಳಿಯದ ವ್ಯವಸ್ಥೆ ಮಾಡಿದ್ದೂ ಕಂಡಿದ್ದೇನೆ. ನೆಲದ ಎರಡೂ ಅಂಕಣಗಳನ್ನೊಳಗೊಂಡಂತೆ ವಿಸ್ತಾರ ಪೌಳಿ ಕಟ್ಟಿ, ಮಣ್ಣು ತುಂಬಿ, ಸೆಗಣಿ ಸಾರಿಸಿ ಮನುಷ್ಯ ಸೌಕರ್ಯಗಳನ್ನು ರೂಢಿಸಿದ್ದೂ ಕಾಲಾನುಕ್ರಮದಲ್ಲಿ ಹೆಚ್ಚಿಸಿದ್ದೂ ನನ್ನ ಆತಂಕವನ್ನು ಏರಿಸುತ್ತಲೇ ಇತ್ತು!
ಮುಂಬೈ ವಜ್ರೇಶ್ವರಿಯ ಸ್ವಾಮೀ ನಿತ್ಯಾನಂದರ ಶಿಷ್ಯ ಬಳಗದ್ದೇ ಕೊಡಂಜೆಕಲ್ಲಿನ ಗುಹಾಶ್ರಮದ ಪರಂಪರೆಯಂತೆ. ಮೊದಲೇ ಬಂಡೆಯ ಗುಡಿಯೊಳಗೆ ನಿತ್ಯಾನಂದರ ಚಿತ್ರದೊಡನೆ ಹಲವು ಪೂಜಾರ್ಹ ಸಂಗತಿಗಳು ಮೇಳೈಸಿರುವುದು ನನ್ನ ನೆನಪಿನಲ್ಲಿದೆ. ಹಿರಿಯ ಸ್ವಾಮಿಗಳು (ಎಷ್ಟನೇ ತಲೆಯೆಂದೆಲ್ಲಾ ನಾನು ತಿಳಿಯುವ ಗೋಜಿಗೆ ಹೋಗಲಿಲ್ಲ) ವಿವಿಧ ಆರಾಧನಾ ಕಲಾಪಗಳೊಡನೆ ಮೂಲಿಕಾ ವೈದ್ಯಕ್ಕೂ ಹೆಸರುವಾಸಿಯಾಗಿದ್ದರು. ಮುಂದೊಂದು ಕಾಲದಲ್ಲಿ ಅವರ ದೇಹಾಂತ್ಯವಾದದ್ದು, ಅಭಿವೃದ್ಧಿಯ ಸೆಳವಿನಲ್ಲಿ ಆಶ್ರಮಕ್ಕೆ ‘ಉಪದ್ರ ಕೊಡುತ್ತಿದ್ದ’ ಮಾವಿನ ಮರವನ್ನು ಕಡಿದು ಕಳೆದದ್ದು, ಆ ಜಾಗದಲ್ಲಿ ಸಂದ ಮಹಾಸ್ವಾಮಿಗಳ ನೆನಪಿಗೆ ಆಪ್ಕೋಲೈಟ್ ಬಹುವರ್ಣರಂಜಿತ ಸುಂದರ ಕಟ್ಟಡ ಎದ್ದು ನಿಂತದ್ದು ನನ್ನನಂತೂ ದೂರ, ಬಲುದೂರ ನಿಲ್ಲಿಸಿಬಿಟ್ಟಿತು. ಆದರೆ ಭುವನೇಂದ್ರದ ಎನ್.ಸಿ.ಸಿ ತಂಡ ಕೊಡಂಜೆ ಗುಹಾಶ್ರಮದ ನೆರಳು ಮತ್ತು ಅನ್ನ ದಾಸೋಹಗಳ ಔದಾರ್ಯಕ್ಕೆ ದಾಖಲಾಗಿ ರಾತ್ರಿ ಹಗಲು ಮಾಡಿದ್ದರು.
ಆದಿತ್ಯವಾರ ಬೆಳಿಗ್ಗೆ ಆರೋಹಣದ ನಾವಾರು ಮಂದಿ ನಮ್ಮದೇ ವ್ಯವಸ್ಥೆ ಮತ್ತು ವೆಚ್ಚದಲ್ಲಿ ಅವರನ್ನು ಸೇರಿಕೊಂಡೆವು. [ಅಂದು ಕಂಡ ಗುಹಾಶ್ರಮದ ಸ್ವಾಮಿಗಳ ಪ್ರಾಣಿದಯೆಯ ಕುರಿತ ನನ್ನೊಂದು ಆ ಕಾಲದ ಕಿರು ಬರಹವನ್ನು ಚಿತ್ರದಲ್ಲಿ ನೋಡಿ.] ಅವರಿಗೆ ಶಿಲಾರೋಹಣದ ಪರಿಚಯಾತ್ಮಕ ಪಾಠ ಕೇವಲ ಪ್ರದರ್ಶನ ಮಟ್ಟದ್ದು ಮಾಡಿದೆವು. ಚಿಮಣಿ ದಾರಿಯ ಪರಿಚಯ, ಶಿಲಾರೋಹಣದ ಹೆಚ್ಚಿನ ತರಬೇತಿಗಳಿಗೆ ತಂಡ ತೀರಾ ದೊಡ್ಡದಾದ್ದರಿಂದ ಸಾಮಾನ್ಯರ ಜಾಡಿನಲ್ಲಷ್ಟೇ ನಿಮಿರುಗಿವಿ ಏರಿಳಿಸಿದ್ದೇ (ಅದರಲ್ಲೂ ಕೆಲವರು ಹೆದರಿ, ಹಿಂದುಳಿದವರಾದರು!) ಅವರಿಗೆಷ್ಟೋ ನನಗೂ ಅಷ್ಟೇ ಸ್ಮರಣೀಯ. ‘ಆರೋಹಣ ಪರ್ವತಾರೋಹಿಗಳು ಸಾಹಸಿಗಳು’ ಹೆಸರು ಮಾತ್ರ. ವಾಸ್ತವವಾಗಿ ನನ್ನ ಸಮಯಾನುಕೂಲ ನೋಡಿಕೊಂಡು ಜೊತೆಗೊಡುವ ಅಥವಾ (ಉಚಿತ) ಮಾರ್ಗದರ್ಶನ ಪಡೆಯುವವರನ್ನು ಅಷ್ಟೇ ಅನೌಪಚಾರಿಕವಾಗಿ ನಾನು ಆರೋಹಣದ ಆಜನ್ಮ ಸದಸ್ಯರು ಎಂದೇ ಪರಿಗಣಿಸುತ್ತೇನೆ! ಅಂಥಾ ಕರೆಗೆ ಓಗೊಟ್ಟು ೧೯೮೦ರ ಮೇ ತಿಂಗಳಲ್ಲಿ ರೂಪುಗೊಂಡ ಒಂದು ಕೊಡಂಜೆ ತಂಡದ ಕಥೆ ಇನ್ನೊಂದೇ ಕಾರಣಕ್ಕೆ ನನ್ನ ಸ್ಮೃತಿ ಕೋಶದಲ್ಲಿ ಅಗ್ರ ಮತ್ತು ಖಾಯಂ ಸ್ಥಾನಪಡೆದದ್ದನ್ನು ಇಲ್ಲಿ ಸ್ವಲ್ಪ ವಿವರದಲ್ಲಿ ಹೇಳಲೇಬೇಕು.
ಅತ್ರಿಗೆ ಭಾರತ ದರ್ಶನ ಪ್ರಕಾಶನ ೧೯೭೮ರ ಸುಮಾರಿಗೆ ತನ್ನ ಪುಸ್ತಕಗಳನ್ನು ಒದಗಿಸಲು ಮುಂದಾಯ್ತು. ಪ್ರಕಾಶನದ (ಇಂದು ಕೀರ್ತಿಶೇಷರು) ಕೆ.ಎಸ್. ಕೌಶಿಕರ ಹಿರಿಯ ಮಗ ಯೋಗಾನರಸಿಂಹ (ಹೃಸ್ವ ರೂಪದಲ್ಲಿ – ಯೋಗ) ಆಗ ಮಂಗಳೂರಿನ ಎಂಸಿಎಫ್ ನೌಕರ (ಈಗ ಬಹ್ರೈನ್ನಲ್ಲಿ ವೃತ್ತಿನಿರತ). ನನಗೆ ಯೋಗ ಪ್ರಕಾಶನದ ಪ್ರತಿನಿಧಿಯಾಗಿ ಪರಿಚಿತರಾದರೂ ಬಲು ಬೇಗನೆ ಆತ್ಮೀಯ ಗೆಳೆಯರೇ ಆದರು. ಸಹಜವಾಗಿ ಅವರಾರು ಜನರ ತಂಡ – ಯೋಗ, ಮಂಜಪ್ಪ, ಸುಬ್ಬನ್, ಶ್ರೀನಾಥ್, ಭಟ್ಕೋಟಿ ಮತ್ತು ಹೆಗ್ಡೆ ಕೊಡಂಜೆ ಕಲ್ಲಿನ ಅನುಭವ ಬಯಸಿದರು. ಜುವಾರಿ ಗೊಬ್ಬರದ ಮಂಗಳೂರು ಪ್ರತಿನಿಧಿ – ಕಿರಣ್ ಕುಲಕರ್ಣಿ (ಮೂಲತಃ ಹೊಸಪೇಟೆಯಾತ, ಸದ್ಯ ದಿಲ್ಲಿಯಲ್ಲಿದ್ದಾರೆ) ಮತ್ತು ಆ ಕಾಲಕ್ಕೆ ನನ್ನಂಗಡಿಯ ಸಹಾಯಕನೂ ಆಗಿದ್ದ ಪ್ರಕಾಶ್ ನಾಟೇಕರ್ (ಸದ್ಯ ಮೂಡಬಿದ್ರೆಯಲ್ಲೇ ಸ್ವೋದ್ಯೋಗಿ) ಹಿಂದೆ ನನ್ನೊಡನೆ ಕೊಡಂಜೆಗೂ ಅನ್ಯ ಕೆಲವು ಶಿಲಾರೋಹಣಗಳಿಗೂ ಬಂದ ಅನುಭವಿಗಳು. ಇವರಿಬ್ಬರು ನನಗೆ ಸಹಾಯಕ್ಕೊದಗುವುದರೊಡನೆ ವಾರಾಂತ್ಯದ ಪಿಕ್ನಿಕ್ ಎಂದು ಸೇರಿಕೊಂಡರು. ಆಕಾಶವಾಣಿಯ ಬಸವರಾಜು (ಸದ್ಯ ಮೈಸೂರಿನ ವಾಕ್-ಶ್ರವಣ ಸಂಸ್ಥೆಯ ನಿರ್ದೇಶಕ) ನನಗೆ ಮೈಸೂರಿನ ವಿದ್ಯಾರ್ಥಿ ದಿನದಿಂದ ಪರಿಚಿತ ಹಿರಿಯ ಗೆಳೆಯ. ಶನಿವಾರ ನನ್ನಂಗಡಿಗೆ ಯಾವುದೋ ಪುಸ್ತಕಕ್ಕೆ ಬಂದಿದ್ದ ಅವರಿಗೆ “ನಾಳೇ (೧೧-೫-೧೯೮೦) ಒಂದು ರೋಮಾಂಚಕಾರೀ ಶಿಲಾರೋಹಣಕ್ಕೆ ಬರ್ತೀರಾ” ಎಂದು ಕೊಡಂಜೆ ಕಲ್ಲಿನ ಎರೆಯೊಡ್ಡಿದೆ. ಬಸವರಾಜು ಗಾಳ ಕಚ್ಚಿದರು; ತಂಡದ ಸಂಖ್ಯೆ ಹತ್ತಾಯ್ತು. ಹೀಗೆ ಹತ್ತು ಹತ್ತುವ ಮಂದಿ ಒಟ್ಟಾರೆ ನಾಲ್ಕು ಬೈಕ್ ಒಂದು ಸ್ಕೂಟರ್ ಏರಿ ಬೆಳಿಗ್ಗೆ ಬೇಗನೆ ಮೂಡಬಿದ್ರೆ ದಾರಿ ಹಿಡಿದೆವು. ಏಳು ಗಂಟೆಯ ಸುಮಾರಿಗೆ ಡಾಮರು ದಾರಿ ಬದಿಯ ದೈವದ ಕಲ್ಲಿನ ಆಸುಪಾಸಿನ ನೆರಳಿನಲ್ಲಿ ವಾಹನಗಳನ್ನು ಬಿಟ್ಟು ಚಾರಣಕ್ಕಿಳಿದೆವು.
ದಿಬ್ಬಸಾಲು ಹತ್ತುವಾಗಲೇ ಮೆಟ್ಟಿಲು ಕಡಿಯಲು ಜಕಣಾಚಾರಿ ತರಿಸುವ ಯೋಜನೆ ಹಾಕಿದವರಿದ್ದರು. ಪುಟ್ಟ ಕೆರೆ ನೀರು ಮುಖಕ್ಕೆ ತಳಿದು, ಹೊಟ್ಟೆಗೂ ಇಳಿಸಿ (ಈಗ ಹಾಗೆ ಮಾಡಲಾರೆ) ಮುಂದುವರಿದೆವು. ಕಾಲ್ದಾರಿ ದಾಟುವಾಗ ಆಶ್ರಮದ ಕುರಿತು ಪ್ರಾಸಂಗಿಕವಾಗಿ ಪರಿಚಯ ಹೇಳಿದೆನಾದರೂ ನಿಮಿರುಗಿವಿಯೆತ್ತರಕ್ಕೆ ಒಂದೇ ದಾರಿ ಎಂದು ನಂಬಿಸಿ, ಕಾಡು ನುಗ್ಗಿಸಿದೆ. ಹಿಂದೆ ಹೇಳಿದಂತೆ ಚಿಮಣಿ ಏರಿಕೆ ಅಭ್ಯಾಸ ಮಾಡಿದ ಗುಪ್ಪೆಗಲ್ಲುಗಳಲ್ಲೇ ಇವರಿಗೂ ವಿಶ್ರಾಂತಿ ಮತ್ತೆ ಪಾಠ. ಗವಿದಾರಿ ಹಿಡಿದು ಮೊದಲ ಚಿಮಣಿ ಬುಡ ಸೇರಿದೆವು. ಕುಲಕರ್ಣಿ ಮತ್ತು ಪ್ರಕಾಶ ಹಗ್ಗ ಹಿಡಿದುಕೊಂಡು ಮೇಲೇರಿ ಪ್ರತ್ಯೇಕವಾಗಿ ಕೀಲುಗಲ್ಲುಗಳ ಮೇಲೆ ಕುಳಿತು, ಏಕಕಾಲದಲ್ಲಿ ರಕ್ಷಣೆ ಸಹಿತ ಇಬ್ಬರನ್ನು ಏರಿಸಿಕೊಳ್ಳಲು ಅಣಿಯಾದರು. ನಾನು ಕೆಳಗಿನಿಂದ ‘ಬಲಿಪಶು’ಗಳ ಸೊಂಟಕ್ಕೆ ಹಗ್ಗ ಬಿಗಿದು, ಶುಭಾಶಯ ಹೇಳಿ ಕ್ರಮಪಾಠ ಶುರು ಮಾಡುತ್ತಿದ್ದೆ. “ಇದಕ್ಕೆ ಬೆನ್ನು, ಎಡಗಾಲು ಎದುರು ಬಂಡೆಗೆ, ಬಲಗಾಲು ಮಡಚಿ ಹಿಂದಿನ ಬಂಡೆಗೆ, ಒಂದು ಕೈ ಮುಂದೆ, ಇನ್ನೊಂದು ಹಿಂದೆ…” ಮಂಜಪ್ಪ ಮಲೆನಾಡಿಗ, ಘಟ್ಟಿಗ. ಮೊದಲಿಗನಾಗಿ ಚೆನ್ನಾಗಿಯೇ ಹತ್ತಿದರು. ಶ್ರೀನಾಥ್ ಅರ್ಧದಲ್ಲಿ ಸಿಕ್ಕಿಕೊಂಡರು. ಕುಲಕರ್ಣಿ ತನ್ನ ಸೇಲ್ಸ್ಮನ್ಶಿಪ್ ಚೆನ್ನಾಗಿಯೇ ಬಳಸುತ್ತಿದ್ದರು. “ಶ್ರೀನಾಥಾ ನನ್ನ ಮೇಲೊಂದಿಷ್ಟು ದಯಬಾರದೇ ತಂದೇ” ಎಂದು ಒಲಿಸಿ, ಸ್ವಲ್ಪ ಹಗ್ಗ ಜಗ್ಗಿ, ಹೆಣಗಿಸಿ ಶ್ರೀನಾಥ್ರನ್ನು ಮೇಲೆ ತಂದರು. ಪ್ರಕಾಶ ಒಬ್ಬರನ್ನು ಏರಿಸಿಕೊಳ್ಳುವಾಗಂತೂ ಎಲ್ಲಾ ಸೂಚನೆ, ಉತ್ತೇಜನ, ಪುಸಲಾಯಿಕೆಗಳ ಕೋಶ ಖಾಲಿ ಮಾಡಿದ್ದ. ಕೊನೆಯಲ್ಲಿ, ಕೊಡಪಾನ ಜಗ್ಗಾಟದಲ್ಲಿ (ಬಂಡೆ ಹತ್ತುವಲ್ಲಿ ಏನೇನೂ ಮನುಷ್ಯ ಪ್ರಯತ್ನ ತೋರಿಸದವರನ್ನು ನಿರ್ಜೀವ ‘ಕೊಡಪಾನ’ವೆಂದೇ ಗೇಲಿ ಮಾಡುವುದಿದೆ) ಮೇಲೆಳೆದು ಹಾಕಿದ ಮೇಲೆ ತಿಳಿಯಿತು ಅವರ ನಾಮದ ಬಲ; ಅದು ಜನ ಒಂದಲ್ಲ, ಕೋಟಿ – ಭಟ್ಕೋಟಿ! (ಯಾರನ್ನೂ ಹಿಂದುಳಿಸುವ ಪಕ್ಷ ನಮ್ಮದಲ್ಲ!). ಬಸವರಾಜರ ತಲೆತುಂಬಾ ಕುಮಾರವ್ಯಾಸ, ಭಾಮಿನಿ. ಆಕಾಶವಾಣಿಯಲ್ಲಿ ಹಳಗನ್ನಡದ ಕಾವ್ಯಗಳ ಪರಿಚಯಾತ್ಮಕ ವಾಚನ ವ್ಯಾಖ್ಯಾನವನ್ನು ಅಂದು ರಾತ್ರಿ ಮೊದಲುಗೊಂಡು ನೇರಪ್ರಸಾರದಲ್ಲಿ ಕೊಡುವ ಕಾರ್ಯಕ್ರಮ ಇವರೇ ರೂಪಿಸಿದ್ದರು. ಎಲ್ಲಾ ಕೇಂದ್ರಗಳಿಂದ ಏಕಕಾಲಕ್ಕೆ ಬಾನುಲಿಯಲಿತ್ತು “ಅರಸುಗಳಿಗಿದು ವೀರ, ದ್ವಿಜರಿಗೆ ಪರಮವೇದದ ಸಾರ…” ಛಂದೋಭಂಗ ಮಾಡಿ ನಾನು ಬುದ್ಧಿಗುಣ ಉಸುರಿದೆ, “ಎಡಪಾದವ ಗುರು ಮಾಡಿ, ಬಲಗಾಲನು ಲಘುವಾಗಿಸಿ.” ಆದರವರು ಚಿಮಣಿ ಕಾವ್ಯರಮಣಿ ಒಲಿಯದೆ ಎರಡನೇ ಚರಣದಲ್ಲೇ ಸಿಕ್ಕುಬಿದ್ದರು. ಮತ್ತೆ ಮಾತ್ರೆ ಗಣಗಳ ಗೋಜಲು ಬಿಡಿಸಿ, ಸಹಜ ಲಯಕ್ಕೆ ರೂಢಿಸಿಬಿಟ್ಟೆ. ಬಸವರಾಜ್ ಹಲ್ಲುಮುಡಿ ಕಚ್ಚಿ, ಮೊಣಕಾಲು ಕೈ ಎಲ್ಲಾ ಬಳಸಿ, ಏದುಸಿರು ಬೆವರಧಾರೆಯೊಡನೆ ಕೀಲುಗಲ್ಲು ಉತ್ತರಿಸಿ, ಗವಿಯೊಳಗೆ ಮೈಚಾಚಿದಾಗ ಹತ್ತೂ ಕಾಂಡ ಒಮ್ಮೆಗೇ ಮುಗಿಸಿದ ಕೃತಾರ್ಥತೆ!
ಹೆಗ್ಡೆಗೆ ಹುರುಪು ಜಾಸ್ತಿ. ಎನ್.ಸಿ.ಸಿಯ ಮೊದಲ ನಡಿಗೆಗಳಲ್ಲಿ ಕೆಲವರು ಭಾರೀ ಎಚ್ಚರವಹಿಸಿ ಎಡಗೈಗೆ ಎಡಕಾಲು ಮುಂದೆ, ಬಲಗಾಲಿಗೆ ಬಲಗೈ ಮುಂದೆ ಮಾಡಿದಂತೆ ಹೆಗ್ಡೆ ಧಾವಂತದಲ್ಲಿ ಹೆಜ್ಜೆಯನ್ನೇ ಮರೆತರು. ಸುಗ್ರೀವ ಬಂಡೆಯ ಸಂದಿನಲ್ಲೇ ಬೂಟುಗಾಲು ಸಿಕ್ಕಿಸಿಕೊಂಡು ತೊಳಲಿದರು. ಮತ್ತಲ್ಲೇ ಶೂ ಕಳಚಿ, ಕೈಯಿಂದ ಕಿತ್ತು ತೆಗೆದು, ಏರುವ ಸರದಿಯಲ್ಲಿ ಹಿಂಬಿದ್ದರು. ಯೋಗನಿಗೆ ಸುಲಭ ದಿಕ್ಕು ಸೂಚಿಸಿದೆ. ಅವರ ಸುಲಭ ಏರಿಕೆಯನ್ನು ಅನುಸರಿಸಿ ಹೆಗ್ಡೆಯೂ ಚಿಮಣಿ ಪಾರುಗಾಣಿಸಿದರು. ಕೊನೆಯವನಾಗಿ ನಾನು ಎಲ್ಲರ ಬುತ್ತಿಯ ಚೀಲ ಮತ್ತು ನೀರಬಾಟಲುಗಳ ಗಂಟುಮೂಟೆಗಳನ್ನು ಹಗ್ಗದಲ್ಲಿ ಮೇಲೆ ಕಳಿಸಿ, ಮೇಲೇರಿದೆ. ಗುಹೆ ಕಳೆದು ಕಂಡಿ ಸೇರುವಲ್ಲಿ ಶ್ರೀನಾಥ್ ಮೊದಲಿಗ. ಇವರರಿವಿಗೆ ಬಾರದೆ ಅಲ್ಲೇ ಹೊರಗೊಬ್ಬ ಕಪಿರಾಯ. ಪರಸ್ಪರ ಅರಿವಿಲ್ಲದೆ ಒಮ್ಮೆಲೆ ಇಣುಕಿದ ಇವರ ತಲೆ ಕಂಡು ಅವನಿಗೆ ಗಾಬರಿ. ಸಹಜವಾಗಿ ಆತ ನಮ್ಮ ದೃಷ್ಟಿಗೆ ನಿಲುಕದ ಯಾವುದೋ ಕೆಳಗಿನ ಮರೆಗೆ ಧುಮುಕಿ ಹೋದಾಗ ಶ್ರೀನಾಥ್ ತಡಬಡಾಯಿಸಿ ಬೀಳದಿದ್ದುದು ನಮ್ಮ ಪುಣ್ಯ! ಉಳಿದಂತೆ ಎಲ್ಲ ಸರದಿ ಸಾಲಿನಲ್ಲಿ, ನಿಧಾನಕ್ಕೆ ತೆರೆಮೈಯಲ್ಲಿ ಮುಂದುವರಿದು, ಬಾಲ್ಕನಿ ಸೇರಿ ವಿಶ್ರಮಿಸಿದೆವು.
ಗುಹಾ ಓಣಿ ಕಳೆದು, ಪಾತಾಳದಾಕಳಿಕೆ ಅಂಚಿನಲ್ಲಿ ಕೇವಲ ಕೈಯಾಸರೆಯಲ್ಲೇ ಎಲ್ಲರನ್ನೂ ಗಂಟುಗದಡಿಗಳನ್ನೂ ದಾಟಿಸಿ ಎರಡನೇ ಚಿಮಣಿಯ ನೆರಳಿನಲ್ಲಿ ಸ್ಥಾಪಿಸಿದ್ದಾಯ್ತು. ಈ ಚಿಮಣಿಯ ತಳದಲ್ಲೂ ಕೆಳಗೆ ಒದಗಿದ ‘ಸುಗ್ರೀವಕಲ್ಲಿನ’ಂತೊಂದು ಕಲ್ಲು – ಮೆಟ್ಟುಗಲ್ಲು, ಇತ್ತು. ಅದರ ತುದಿಯನ್ನು ಮೆಟ್ಟಿ ಚಿಮಣಿ ಪ್ರವೇಶಿಸಿದರೆ ಬೆನ್ನಿಗೆ ಸಪಾಟು ಬಂಡೆ, ಎದುರಿಗೆ ಸುಲಭ ಅಂತರದಲ್ಲಿ ಇನ್ನೊಂದು ಬಂಡೆ. ಅಲ್ಲಿ ಮೊದಲ ಹೆಜ್ಜೆಗೆ ಮೇಲಿನ ಯಾವುದೋ ಗಿಡದ ಭಾರೀ ಬೇರುಗಟ್ಟೆ ಮೆಟ್ಟಿಲಂತೇ ಒದಗುತ್ತಿತ್ತು. ಮತ್ತೆ ಅರವತ್ತೆಪ್ಪತ್ತಡಿ ಎತ್ತರಕ್ಕೂ ಬಂಡೆಯ ಎರಡೂ ಹೋಳಿನಲ್ಲಿ ಸಾಕಷ್ಟು ಒಡಕು, ಪೊಳ್ಳುಗಳಿದ್ದವು. ಸುಲಭ ಚಿಮಣಿ ಏರಿಕೆಗೆ ಅನುಕೂಲವಾಗುವ ಅಂತರವೂ ಇತ್ತು. ನಡುವೆ ಒಂದೆರಡು ಕೀಲುಗಲ್ಲುಗಳ ನೆಲೆಯಂತೂ ಆರಂಭಿಕರಿಗೆ ವಿರಮಿಸಲು ಅವಕಾಶ ಕೊಟ್ಟು ಹೆಚ್ಚಿನ ನೂಕುಬಲ ಕೊಡುತ್ತಿತ್ತು. ಬಂಡೆ ಹೋಳುಗಳು ಒಳಮೈಯಲ್ಲೆಲ್ಲೋ ಕೂಡಿಕೊಳ್ಳುತ್ತಿದ್ದುದರಿಂದ ಮತ್ತು ಮೇಲೆ ಸರಿಯುತ್ತಾ ತುಸು ಓರೆಯಿದ್ದುದರಿಂದ ಕತ್ತಲು ಕತ್ತಲಾಗಿ ಕಾಣಿಸಿದರೂ ನಿಜದಲ್ಲಿ ಈ ಚಿಮಣಿ ಭಾರೀ ಸುಲಭದ ಸವಾಲು. ಹಿಂದಿನಂತೇ ಕುಲಕರ್ಣಿ, ಪ್ರಕಾಶರು ಮೇಲೇರಿ ಕುಳಿತು, ಹಗ್ಗ ಇಳಿಬಿಟ್ಟು ಸರದಿಯ ಸಾಲಿನಲ್ಲಿ ಉಳಿದವರನ್ನು ಏರಿಸಿಕೊಳ್ಳಲು ಸಜ್ಜಾದರು. ಇದು ಉದ್ದದ ಏರಿಕೆಯಾದ್ದರಿಂದ ಗೊಂದಲ ಏರ್ಪಡದಂತೆ, ಒಮ್ಮೆಗೆ ಒಬ್ಬನೇ ಏರುವ ವ್ಯವಸ್ಥೆ ಮಾಡಿಕೊಂಡಿದ್ದೆವು. ಮೇಲೆ ಒಬ್ಬ ರಕ್ಷಣಾ ಹಗ್ಗ ಹಿಡಿದು ಹಿಂದೆ ಕುಳಿತರೆ, ಇನ್ನೊಬ್ಬ ಆರಂಭಿಕರಿಗೆ ಸಲಹೆ ಸಹಾಯ ಕೊಡುತ್ತಿದ್ದ. ಕೆಳಗೆ ನಾನು ಮೆಟ್ಟುಗಲ್ಲಿನ ತುದಿಯಲ್ಲಿ ನಿಂತು, ಆರೋಹಿಗೆ ರಕ್ಷಣಾ ಹಗ್ಗ ಬಿಗಿದು, ನಡೆಗಳನ್ನು ಹೇಳಿ ಕಳಿಸುತ್ತಿದ್ದೆ. ಮತ್ತೆ ಏನಿದ್ದರೂ ಬಾಯುಪಚಾರ.
ಸುಬ್ಬನ್ ಈ ಬಾರಿ ಮೊದಲಿಗ. ಮೇಲಿನಿಂದ ಕುಲಕರ್ಣಿ ರೈಟ್ ಹೇಳಿದರು. ಗುಹಾ ಓಣಿಯಲ್ಲಿ ಒಳಗೆ ಶ್ರೀನಾಥ್, ಈಚೆಗೆ ಯೋಗಾ ಮೈಚಾಚಿ ಬಿದ್ದುಕೊಂಡು ಸುಬ್ಬನ ಹಬ್ಬ ನೋಡುತ್ತಿದ್ದರು. ಸುಬ್ಬನ್ ಚಿಮಣಿಯೊಳಗೆ ನುಗ್ಗಿದ್ದೇ ಯೋಗ ಹಳೇ ಪಿಟೀಲು ಕೊಯ್ಯ ತೊಡಗಿದರು “ಈ ಮಂಜಪ್ಪನ ಪಿಕಲಾಟದಲ್ಲಿ ಬೆಳಿಗ್ಗೆ ಸರಿಯಾಗಿ ತಿನ್ಲಿಲ್ಲ. ಮತ್ತೆ ಬುತ್ತೀನೂ ಗಟ್ಟಿ ತಂದಂಗಿಲ್ಲ. . . .” ಮಂಜಪ್ಪ, ಹೆಗ್ಡೆ ಸರದಿ ಸಾಲು ಹಿಡಿದು ನಿಂತವರಂತೆ ಮೆಟ್ಟುಗಲ್ಲಿನ ಮೇಲೇ ಕುಳಿತು ಸುಬ್ಬನ್ ನಡೆಯಲ್ಲಿ ತಲ್ಲೀನರಾಗಿದ್ದರು. ಉಳಿದವರು ಮೆಟ್ಟುಗಲ್ಲಿನ ಬುಡದಲ್ಲಿ, ಆಚಿನ ಸಂದಿಯಲ್ಲಿ ನೆರಳ ತುಣುಕುಗಳನ್ನು ಹುಡುಕಿಕೊಂಡು ನೆಲೆಸಿದ್ದರೂ ಆತಂಕಿತ ದೃಷ್ಟಿ ಬಿಟ್ಟೂ ಬಿಡದೆ ಓಲಾಡುತ್ತಿತ್ತು ‘ಇತ್ತ ಪಾತಾಳ ಅತ್ತ ಬೇತಾಳ!’ ಭಟ್ಕೋಟಿ ನನ್ನ ದೃಷ್ಟಿಗೆ ನಿಲುಕದ ಮೂಲೆ ಸೇರಿ ಚಟ ತೀರಿಸಲು ಮೆಲ್ಲ ಒಂದು ಸಿಗರೇಟು ಬಾಯಿಗಂಟಿಸಿ, ಕಡ್ದಿ ಕೊರೆದು, ಎರಡು ದಮ್ಮು ಎಳೆದು ಸುರುಸುರುಳಿ ಧೂಮಲೀಲೆಯಲ್ಲಿ ತೇಲಿದರು. ನನ್ನ ಪಾಠ, ಕುಲಕರ್ಣಿಯಿಂದ ಪ್ರತಿಧ್ವನಿ, ಸುಬ್ಬನ್ ಏದುಸಿರು ಎಲ್ಲ ಕ್ರಮವತ್ತಾಗಿದೆ ಎನ್ನುವಾಗ ಒಮ್ಮೆಲೇ ಯಾರೋ ಕೂಗಿದರು “ಏ ಭಟ್ಟಾ ಸೀಗ್ರೇಟ್ ಆರ್ಸೋ, ಜೇನು ಜೇನು.”
ಬೀಸುತ್ತಿದ್ದ ತಿಳಿಗಾಳಿ, ಹತ್ತದವರ ಬುರುಡೆ, ಹತ್ತಿಸುವವರ ಕ್ರಮ ಪಾಠ ಎಲ್ಲವೂ ಒಮ್ಮೆಗೆ ಮೌನ. ಅಥವಾ ಇವೆಲ್ಲವನ್ನು ಆವರಿಸಿದಂತೆ ಬಂತು ಝೇಂಕಾರ, ಕರಿಮೋಡವೇ ಮುಸುಕಿದಂತೆ ಅಪ್ಪಳಿಸಿತು ಜೇನ್ನೊಣಗಳ ಹಿಂಡು. ಸಿಗರೇಟು ಕ್ಷಣಾರ್ಧದಲ್ಲಿ ತಣ್ಣಗಾಗಿತ್ತು, ಜೀವರು ಸ್ತಬ್ಧರಾದರು. ನೊಣ ಸಣ್ಣದಲ್ಲ, ಕಲ್ಲ ಅರೆಗಳಲ್ಲಿ ನೇತಾಡುವ ಹೆಜ್ಜೇನು. ಗೆಳೆಯರ ಬಳಗ ಮಾತ್ರವಲ್ಲ, ನಾನೂ ಈ ಅನುಭವಕ್ಕೆ ಹೊಸಬ. ಒಬ್ಬೊಬ್ಬರನ್ನು ನೂರು ಸಾವಿರ ನೊಣ ಮುತ್ತುತ್ತಿದ್ದಂತೆ ಗುಲ್ಲೆದ್ದಿತು. ಮಹಾಮಾರಿಯನ್ನು ಕೆರಳಿಸದ ಎಚ್ಚರದಲ್ಲಿ ಪಿಸುಧ್ವನಿಯಿಂದ ತೊಡಗಿ, ಯೋಗನ ಕಿರುಚಾಟದವರೆಗೆ “ಊಂ, ಹಾಯ್, ಕಚ್ಚುತ್ತೇ ಸಾರ್, ಉರೀ, ಸತ್ತೇ, ಕೆಟ್ಟೇ, ಅಮ್ಮಾ, ಅಪ್ಪಾ, ದೇವ್ರೇ…” ಹುಯ್ಲೋ ಹುಯ್ಲು. ಒಂದೆಡೆ ಧಾವಿಸಲಾಗದ ಎಪ್ಪತ್ತಡಿ ಚಿಮಣಿ, ಇನ್ನೊಂದೆಡೆ ಧುಮುಕಲಾಗದ ಭಾರೀ ಕೊಳ್ಳ. ಏಳೂಜನಕ್ಕೆ ನಾನೊಬ್ಬನೇ ದಾರಿ. ಯಾರೂ ಧೃತಿಗೆಟ್ಟು ಕೊಳ್ಳಕ್ಕೆ ಹಾರಿಕೊಳ್ಳದಂತೆ, ನೊಣನಿವಾರಿಸುವ ವಿಪರೀತದಲ್ಲಿ ಜಾರಿಯೂ ಬೀಳದಂತೆ, ನನ್ನ ಧ್ವನಿ ಏರಿಸಿ, “ಶಾಂತರಾಗಿ, ನಿಶ್ಚಲರಾಗಿ” ಎಂದು ಹೇಳುತ್ತಾ ಮೆಟ್ಟುಗಲ್ಲಿನಿಂದ ಕೆಳಕ್ಕೆ ಹಾರಿದೆ. ಅದುವರೆಗೆ ಹೇಳದ ಎದುರು ಪ್ರಪಾತದಂಚಿನ ಓಣಿಯಲ್ಲಿ ಒಬ್ಬೊಬ್ಬರನ್ನಾಗಿ ಕೈಹಿಡಿದು ನಡೆಸುತ್ತಾ ನಿಮಿರುಗಿವಿಯ ತೆರೆಮೈಗೆ ದಾಟಿಸುತ್ತ ಬಂದೆ. ಬಸವರಾಜ್, ಭಟ್ಕೋಟಿ, ಮಂಜಪ್ಪ, ಹೆಗ್ಡೆ ದಾಟಿದ್ದಾಯ್ತು. ಯೋಗ ಇನ್ನೂ ಗುಹಾ ಮಾರ್ಗದಲ್ಲೇ ಅತ್ತ ಹೋಗಲಾರದೆ, ಇತ್ತ ಬರಲಾರದೆ, ಹೊಡಚಾಡುತ್ತಾ “ಅಯ್ಯೋ ಸತ್ತೇ ಸತ್ತೇ” ಎಂದು ವಿಕಾರವಾಗಿ ಒರಲುತ್ತಿದ್ದರು. ಅವರಿಗೂ ಆಚೆ ಇದ್ದ ಶ್ರೀನಾಥ್ ನಾಪತ್ತೆ. ನಾನು ಕೂಡಿತಾದಷ್ಟು ಗಟ್ಟಿ ಸ್ವರದಲ್ಲಿ ಆಶ್ವಾಸನೆ ಕೊಡುತ್ತಾ ಯೋಗನನ್ನು ಈಚೆಗೆ ತಂದುಕೊಳ್ಳಲು ಒಂದು ಕೈ ಚಾಚಿದೆ. ಇನ್ನೊಂದು ಕೈಯಲ್ಲಿ ಕಿವಿ, ಮೂಗು ಕಣ್ಣಿಗೆ ನುಗ್ಗುತ್ತಿದ್ದ ನೊಣದಕ್ಷೋಹಿಣಿಯನ್ನು ತಡೆಯುವ ನಿರಂತರ ಪ್ರಯತ್ನದಲ್ಲಿದ್ದೆ. ಈ ದ್ವಂದ್ವದಲ್ಲಿ ನನ್ನ ಕನ್ನಡಕ ಕೈ ಬೀಸಿಗೆ ಸಿಕ್ಕು ಕೊಳ್ಳಕ್ಕೆ ರಟ್ಟಿ ಹೋಯಿತು. ಕೃತಕ ದೃಷ್ಟಿರಹಿತನಾದರೂ ದರ್ಶನರಹಿತನಾಗದೇ ಯೋಗನನ್ನು ಎಳೆದೊಯ್ದೆ. ತೆರೆಮೈಯಲ್ಲಿನ ಕಲ್ಲ ಸಂದಿನಲ್ಲಿ ಈಗಾಗಲೇ ಮುಖಾಡೆ ಮಲಗಿದ್ದ ಇತರರ ಜೊತೆಗೆ ಯೋಗನನ್ನೂ ಕೆಡೆದು, ನಾನೂ ಮಗುಚಿಕೊಂಡೆ. ವಾತಾವರಣವೆಲ್ಲಾ ಜೇನ್ನೊಣ. ಬಹುಶಃ ಅವು ಜೀವಜಡಗಳನ್ನೆಲ್ಲಾ ಏಕಕಾಲದಲ್ಲಿ ಪ್ರಹರಿಸುವ ಹಠ ತೊಟ್ಟಿದ್ದವು; ಅಸಹ್ಯ ಮಧುಚುಂಬನ. (ಸಜ್ಜನರ ಸಂಗವದು ಹೆಜ್ಜೇನು ಕುಡಿದಂತೆ, ದುರ್ಜನರ ಸಂಗವದು ಹೆಜ್ಜೇನು ಕಡಿದಂತೆ!)
ಅರ್ಧ ಚಿಮಣಿ ಏರಿದ್ದ ಸುಬ್ಬನಿಗೂ ಜೇನ್ಕಾರ ಕೇಳಿಸಿತ್ತು. ಮೇಲಿದ್ದ ಸೂತ್ರಧಾರಿ ಕುಲಕರ್ಣಿ ಒಮ್ಮೆಲೇ “ನಿನಗೆ ನೀನೇ ಗೆಳೆಯಾ ನೀನೇ” ಎಂಬಂತೆ ಹೇಳಿ ಹಗ್ಗ ಬಿಟ್ಟು ಓಡಿಹೋದದ್ದು ಅರಿವಿಗೆ ಬಂತು. ನಾಲ್ಕೆಂಟು ನೊಣ ಚಿಮಣಿಯ ಅರೆಗತ್ತಲಲ್ಲಿ ಇವರ ಬಳಿಯೂ ಸುಳಿಯಿತಂತೆ. ಆದರೆ ಹೆದರಿ ಮರವಟ್ಟ ಇವರಲ್ಲಿ ಸ್ವಾರಸ್ಯ ಕಾಣದೆ ದೂರಾದವಂತೆ. ಮಿನಿಟೆರಡು ಕಳೆಯುವಾಗ ಮೇಲಿನಿಂದ ಹೊಸದಾಗಿ ಪ್ರಕಾಶನ ಅರಚಾಟ ಕೇಳಲು ಶುರುವಾಯ್ತಂತೆ. ಸುಬ್ಬನ್ ಇದ್ದ ಧೈರ್ಯವೆಲ್ಲ ಒಟ್ಟು ಮಾಡಿ ಮೆಲ್ಲಮೆಲ್ಲಗೆ ಕೆಳಗಿಳಿದು, ಮೆಟ್ಟುಗಲ್ಲಿಗೆ ಹಾರಿ, ಸೊಂಟದ ಹಗ್ಗ ಬಿಚ್ಚಿಕೊಂಡರಂತೆ. ಆಗ ಶುರುವಾಯ್ತು, ಇವರಿಗೂ ಜೇನುಚಿಕಿತ್ಸೆ. ಕೆಳಗಿನ ಇತರರು ಮರೆಯಾದ ದಿಕ್ಕನ್ನು ಕೇವಲ ಅಂದಾಜಿಸಿ, ನುಗ್ಗಿ ಸುಬ್ಬನ್ ನನ್ನ ಪಕ್ಕಕ್ಕೇ ಬಂದು ಬಿದ್ದುಕೊಂಡರು. ಮತ್ತು ಪ್ರಕಾಶನ ಮೊರೆ ನನ್ನ ಕಿವಿಗೆ ಹಾಕಿದರು.
ನಾನು ದಿಗ್ಗನೆದ್ದೆ. ಕಚ್ಚುತ್ತಲೇ ಹಿಂಬಾಲಿಸಿದ ನೊಣ ತುಕಡಿಯ ಸೇವೆಯನ್ನು ಕೈಗೊಳ್ಳುತ್ತಾ ಪುಡಿಬಂಡೆಗಳನ್ನು ಏರಿ ಶಿಖರದತ್ತ ಓಡಿದೆ. ಶಿಖರದ ಕೊನೆಯ ಅಂಚಿನಲ್ಲಿ (ಈಚೆಗೆ ನಿಮಿರುಗಿವಿಯ ಉನ್ನತ ಕೇಂದ್ರದಿಂದ ತೆಗೆದ ವಿಡಿಯೋ ತುಣುಕು ಲಗತ್ತಿಸಿದೆ, ನೋಡಿ) ಕಳೆದ ಐದು ಮಿನಿಟಿನಿಂದಲೂ ಆ ದೆಸೆಗೇಡಿ ಪ್ರಕಾಶ ನೆಟ್ಟಗೆ ನಿಂತು, ಮುತ್ತಿ ಕಚ್ಚುವ ಸಾವಿರ ಸರದಾರರಿಗೆ ಹೋರಾಟ ಕೊಡುತ್ತಿದ್ದದ್ದು ಕಾಣಿಸಿತು. ವಾಸ್ತವದಲ್ಲಿ ಅವನ್ನು ಹೆಚ್ಚೆಚ್ಚು ರೇಗಿಸಿ ಕಚ್ಚಾಳುಗಳ ಸಂಖ್ಯೆ ಏರಿಸಿಕೊಳ್ಳುತ್ತಾ ಅಟ್ಟಾಡುವ ಪ್ರಯತ್ನದಲ್ಲಿ ತನ್ನ ಶಕ್ತಿಗುಂದಿಸಿಕೊಳ್ಳುತ್ತಾ ಇದ್ದದ್ದು ಸ್ಪಷ್ಟವಾಯ್ತು. ನನಗೆ ಆ ದೊಡ್ಡ ‘ಪ್ರಭಾವಲಯ’ಕ್ಕೆ ನುಗ್ಗಲು ಹೆದರಿಕೆ ಆಯ್ತು. ಕೂಗಿ ಕರೆದೆ, ಚಿಮಣಿ ನೆಗೆದು ಬರಲು ಒತ್ತಾಯಿಸಿದೆ. “ಅಯ್ಯೋ ಕಚ್ಚುತ್ತೆ ಸಾರ್, ಉರೀ ಉರೀ” ಬೊಬ್ಬೆ ಹಾಕುತ್ತಾ ಎರಡೂ ಕೈಗಳನ್ನು ತಲೆಯ ಸುತ್ತಾ ಬೀಸುತ್ತಲೇ ಇದ್ದವನಿಗೆ ನನ್ನ ಕರೆ ಏನೋ ದಿಕ್ಕು ಕಾಣಿಸಿರಬೇಕು. ಹೆಜ್ಜೆ ತಪ್ಪದೇ ಓಡಿ ಬಂದ. ಅಲ್ಲಿನ ಸಣ್ಣ ಬಂಡೆ ಸಂದಿನಲ್ಲಿ ಆತನನ್ನು ಮುಖಾಡೆ ಬೀಳಿಸಿದೆ. ಪ್ರಕಾಶ ಪರ್ವತಾರೋಹಣಕ್ಕೆ ಬರುವಾಗ ನಾಗರಿಕ ಬಂಧನಗಳನ್ನು ಕಳಚಿಕೊಂಡವರಂತೆ ಮತ್ತು ಈ ವಲಯದ ಸೆಕೆಗೆ ಸಾಮಾನ್ಯವಾಗಿ ಎಲ್ಲರೂ ಮಾಡುವಂತೆ ಬನಿಯನ್ನೂ ಹಾಕದೆ, ತೆಳು ಶರಟು, ಅದೂ ಮೈಗಂಟುವಂತದ್ದನ್ನೇ ಹಾಕಿದ್ದ. ನೊಣಗಳು ಶರಟಿನ ಮೇಲೆ ಕುಳಿತು, ಅಂಡೂರಿ (ಇದನ್ನೇ ಆಡುಮಾತಿನಲ್ಲಿ ಕಚ್ಚುವುದೆನ್ನುತ್ತೇವೆ), ಮರಣಾಂತಿಕ ಶಕ್ತಿಯಲ್ಲಿ ಮುಳ್ಳೂರುತ್ತಿದ್ದದ್ದು ಆತನಿಗೆ ಧಾರಾಳ ನಾಟುತ್ತಿತ್ತು. ಆದರೆ ನಾನು ಕೈಯಿರುವ ಬನಿಯನ್ನು ಹಾಕಿ, ಮೇಲೆ ಪೂರ್ಣ ತೋಳಿನ ದಪ್ಪ ಬಟ್ಟೆಯ ಶರಟು ಹಾಕಿದ್ದೆ. ಹಾಗಾಗಿ ನಾನು ಪ್ರಕಾಶನ ಮೇಲೇ ಮಲಗಿ ನೊಣಧಾಳಿ ವಿಫಲಗೊಳಿಸಲು ನೋಡಿದೆ. ಅವನ ಕೈಗಳನ್ನು ಅವನದೇ ಹೊಟ್ಟೆಯಡಿಗೆ ಸೇರಿಸಿ, ನನ್ನ ಹಸ್ತದಲ್ಲಿ ಅವನ ಮುಖವನ್ನು ಮುಚ್ಚಿ, ಗಟ್ಟಿಧ್ವನಿಯಲ್ಲಿ ಮಿಸುಕದಂತೆ, ಸಮಾಧಾನ ತಾಳುವಂತೆ ಹೇಳುತ್ತಲೇ ಇದ್ದೆ. ಆದರೆ ಎರಡೇ ಮಿನಿಟು. ನೊಣದ ಹೆದ್ದೆರೆಗಳು ಅಪ್ಪಳಿಸುತ್ತಲೇ ಇದ್ದವು. ಅಷ್ಟುದ್ದಕ್ಕೂ ಅವುಗಳ ಆಘಾತದಲ್ಲಿ ನರಳಿದ್ದವನ ಬುದ್ಧಿ ಸ್ತಿಮಿತದಲ್ಲಿರಲಿಲ್ಲ. ನನ್ನ ಒತ್ತಡದೆಡೆಯಲ್ಲೂ ಮುಲುಗಿದ, ಬಾರವನ್ನೂ ಲೆಕ್ಕಿಸದೆ ಹೊರಳಾಡ ತೊಡಗಿದ. ಹೆಚ್ಚಿದ ನೊಣಸಂಖ್ಯೆಯಲ್ಲಿ ನನ್ನ ಕಿವಿಮೂಗನ್ನು ಮುಚ್ಚಿಕೊಳ್ಳದಿರುವುದೂ ನನ್ನಿಂದಾಗಲಿಲ್ಲ. ಮುಂದುವರಿದರೆ ಇಬ್ಬರೂ ಬಳಲುವುದು ಹೆಚ್ಚಾದೀತೆಂದು ಭಯಪಟ್ಟೆ. ಹಾಗಾಗಿ ಅವನನ್ನು ಎಬ್ಬಿಸಿ, ಉಳಿದೆಲ್ಲರ ಜೊತೆಯಾಗುವಂತೆ ಗಟ್ಟಿ ಧ್ವನಿಯಲ್ಲಿ ಹೇಳುತ್ತ, ಪುಡಿಗಲ್ಲುಗಳ ಇಳಿಜಾಡು ತೋರಿಸಿದೆ. ನಾನೂ ನಿಂತಲ್ಲಿ ನಿಲ್ಲಲಾರದೆ ಕಾಲರಿನ ಸಂದಿಯಲ್ಲಿ, ಟೊಪ್ಪಿಯ ಅಂಚಿನಲ್ಲಿ ನುಗ್ಗಿದ ನೊಣಗಳನ್ನು ಹೊಸಕುತ್ತಾ ಓಡಿದೆ. ಟೊಪ್ಪಿ ಹಾರಿಹೋಯ್ತು, ಹೆಕ್ಕಲು ತಾಳ್ಮೆ ಇರಲಿಲ್ಲ. ಬಂಡೆಗುಂಡುಗಳನ್ನು ಹೆಜ್ಜೆಗೊಂದರಂತೆ ಕುಪ್ಪಳಿಸಿ, ಬಲಕ್ಕೆ ಹೊರಳಿ, ಉಳಿದವರಿದ್ದ ತುಂಡು ನೆಲ ಸೇರಿಕೊಂಡೆ.
ಕೇವಲ ಒಣ ಮುಳಿಹುಲ್ಲಿನ ಮರೆಯಲ್ಲಿ, ಮುತ್ತಿಗೆ ಸಡಿಲಗೊಳ್ಳದ ನೊಣಗಳ ಆರ್ಭಟೆಯಲ್ಲಿ ಭಾರೀ ಯೋಚನೆಗಳೇನೂ ಮೊಳೆಯಲಿಲ್ಲ. ಯಾರೋ ಹೊಗೆಯೆಬ್ಬಿಸಿ ಎಂದರು. ಕ್ಷಣಾರ್ಧದಲ್ಲಿ ಭಟ್ಕೋಟಿ ಮುಷ್ಟಿ ಹುಲ್ಲು ಹಿರಿದು, ಕಿಚ್ಚಿಕ್ಕಿದರು. ಒಮ್ಮೆಗೆ ಎದ್ದ ಹೊಗೆ, ಬೆಂಕಿ ನೊಣಗಳನ್ನು ಸ್ವಲ್ಪವೇ ದೂರಸರಿಸಿತು. ಮುಳುಗುವವ ಕಡ್ಡಿ ಹಿಡಿದಂತೆ ನಾವೆಲ್ಲ ಬೆಂಕಿಯನ್ನು ಸುತ್ತುವರಿದು, ಕೈಗೆ ಸಿಕ್ಕ ಹುಲ್ಲು, ಮುಳ್ಳು, ಒಣಕಳ್ಳೀ ತುಂಡು ಹಾಕಿ ಅಗ್ನಿಕಾರ್ಯಕ್ಕಿಳಿದೇ ಬಿಟ್ಟೆವು. ಆದರೆ ಆ ಬಂಡೆಗಾಡಿನ ಕಿಷ್ಕಿಂಧೆಯಲ್ಲಿ ಉರುವಲು (ನಮ್ಮ ಆಯುಷ್ಯವೂ?) ಮುಗಿಯುತ್ತ ಬರುತ್ತಿತ್ತು. ನೊಣಗಳ ಗಸ್ತು ಹೊಗೆವಲಯದಿಂದ ಹೊರಗೆ ಜಬರದಸ್ತಿನಿಂದ ನಡೆದೇ ಇತ್ತು. ಗುಪ್ಪೆಗಳನ್ನು ಕುಪ್ಪಳಿಸಿ ಹಿಂಬಾಲಿಸುವಲ್ಲಿ ಪ್ರಕಾಶ ತಪ್ಪಿದ್ದ, ಕಣ್ಮರೆಯಾಗಿ ಹೋದ. ಆತ ಬಹುಶಃ ಮೊಂಡುಗಿವಿಯತ್ತ ನೇರ ಇಳಿಯುವ ಕಠಿಣ ಜಾಡಿನಲ್ಲಿ ಯಾವುದೋ ಮರೆ ಸೇರಿರಬೇಕು ಎಂದುಕೊಂಡೆವು. ಇನ್ನು ಕುಲಕರ್ಣಿಯ ಲೆಕ್ಕ ಯಾರಿಗೂ ಸಿಕ್ಕಿರಲಿಲ್ಲ. ಗುಹಾ ಓಣಿಯಲ್ಲಿ ಯೋಗನಿಂದಲೂ ಹಿಂದಿದ್ದ ಶ್ರೀನಾಥ ಮಂಗಮಾಯ? ಆಸೆಯ ಎಳೆ ಹಿಡಿದು ನಾನಿನ್ನೊಮ್ಮೆ ಅತ್ತ ಮಲಗಿ, ಬಾಗಿ ಓಡಿದೆ, ವಿಫಲನಾU ಮರಳಿದೆ. ಗುಹಾ ಓಣಿಯಾಚಿನ ಶೂನ್ಯ, ಕೊರಕಲಿನಾಳ, ಚಿಮಣಿಯ ಸಂದೂ ಅಣಕಿಸಿತ್ತು ನನ್ನ ಕರೆ “ಶ್ರೀನಾಥ್, ಶ್ರೀನಾಥಾ ಎಲ್ಲಿದ್ದೀರಿ, ಓ ಹೇಳೀ, ಶ್ರೀ. . .”
ಕಾದ ಬಂಡೆ, ಉರಿವ ಸೂರ್ಯನಿದ್ದರೂ ಡಿಸೆಂಬರ್ ನಡುರಾತ್ರಿಯ ಮಲೆನಾಡಿನ ಚಳಿಕಾಯಿಸುವವರಂತೆ ಬೆಂಕಿಗೆ ಮುತ್ತಿಕೊಂಡಿದ್ದೆವು. ಪರಸ್ಪರ ಮುಖ ಕೈ ಒಡ್ದಿ ಸಾಧ್ಯವಾದಷ್ಟು ಜೇನುಮುಳ್ಳುಗಳನ್ನು ಕಿತ್ತುಕೊಂಡೆವು. (ಪರಸ್ಪರ ಹೇನು ಹೆಕ್ಕುವ ಮಂಗಗಳಂತೆ?) ಹುಲ್ಲು ಮುಗಿದು ಬೆಂಕಿ ಇಳಿಯುತ್ತಲ್ಲಾಂತ ಆತಂಕದಲ್ಲಿ ಮಣ್ಣು ಕೆದರಿ ಬೇರು ಶೋಧಿಸಿ ಬೆಂಕಿಗೊಡ್ದಿದ್ದೂ ಆಯ್ತು, ಬಸವರಾಜ್ ತನ್ನ ಕರವಸ್ತ್ರವನ್ನೂ ಹಾಕಿದ್ದಾಯ್ತು. ಆದರೂ ಸಣ್ಣಗಾಗುತ್ತಿದ್ದ ಬೆಂಕಿವಲಯ, ಗಸ್ತುಬಿಡದ ಮತ್ತು ಅವಕಾಶ ಸಿಕ್ಕಲ್ಲಿ ಕುಟುಕುತ್ತಲೇ ಇದ್ದ ನೊಣಸೈನ್ಯ ನಮ್ಮನ್ನು ಇನ್ನಷ್ಟು ಮತ್ತಷ್ಟು ಹತ್ತಿರ ತಂದಿತು. ಮುಂದೇನು ಎಂಬುದರೊಡನೆ ಕಾಣೆಯಾದ ಮೂವರ ಚಿಂತೆ, ತಾಪ-ತ್ರಯ ಮುಪ್ಪುರಿಗೊಂಡು ವಾಸ್ತವವಾಗಿಯೇ ನನ್ನ ಕಾಲಗುಂಟ ಏರಿದಂತಾಯ್ತು! ಬಗ್ಗಿ ನೋಡುತ್ತೇನೆ, ನಿಜ ಬೆಂಕಿ ನನ್ನ ಪ್ಯಾಂಟಿಗೇ ಹಿಡಿದುಕೊಂಡಿತ್ತು! ಪ್ಯಾಂಟಿನ ಬಲಗಾಲು ಎದುರು ಸುಮಾರು ಆರಿಂಚುದ್ದಕ್ಕೆ ಕರಟಿಹೋಗಿ ಇನ್ನೂ ಮೇಲಕ್ಕೆ ಜೋರಾಗಿಯೇ ಹೊಗೆಯಾಡುತ್ತಿತ್ತು. ಕೈಯಲ್ಲಿ ಹೊಸಕಿದ್ದು ಸಾಲಲಿಲ್ಲ. ಇಷ್ಟುದ್ದಕ್ಕೂ ನನ್ನ ಭುಜದಲ್ಲೇ ನೇತು ಬಿದ್ದಿದ್ದ ನೀರ ಬಾಟಲಿ ಉಪಯೋಗಕ್ಕೆ ಬಂತು. ನೀರನ್ನೇ ಸಿಂಪಡಿಸಿ ಬಚಾವಾದೆ. ಈ ನೆಪದಲ್ಲಿ ಎಲ್ಲರಿಗೂ ನೀರಿನ ಬಯಕೆ ಬಲಿಯಿತು. ಆಗ ಉಳಿದೆಲ್ಲ ಚೀಲ, ನೀರ ಬಾಟಲಿಗಳೂ ಮೆಟ್ಟುಗಲ್ಲಿನಡಿಯಲ್ಲೇ ಬಿಟ್ಟದ್ದು ನೆನಪಾಯ್ತು. ಆದರೆ ತರುವ ಧೈರ್ಯ ಮಾತ್ರ ಯಾರಲ್ಲೂ ಉಳಿದಿರಲಿಲ್ಲ. ಒಮ್ಮೆಗೆ ನನ್ನ ಬಾಟಲಿಯನ್ನೇ ರೇಶನ್ ಮಾಡಿ ಸುಧಾರಿಸಿಕೊಂಡರೂ ಪೂರ್ಣ ಖಾಲಿ ಮಾಡದ ಎಚ್ಚರ ತೋರಿದೆವು. ತಲೆಗೆ ಹತ್ತಿದ ಉಳಿದ ಮೂವರ ಯೋಚನೆಯ ಕಿಡಿ ಮಾತ್ರ ವ್ಯಾಪಿಸುತ್ತಲೇ ಇತ್ತು.
[ಮೇ ಅಂತ್ಯ ಅಂದರೆ ಮಳೆಗಾಲ ಪ್ರವೇಶಿಸುವ ಕಾಲ. ಬಹುಶಃ ಹಿಂದಿನ ರಾತ್ರಿಯಷ್ಟೇ ಯಾರೋ ನುರಿತ ಹಳ್ಳಿಗರು ವರ್ಷಂಪ್ರತಿಯಂತೆ ಕೊಡಂಜೆ ಕಲ್ಲಿನ ಮುಂಚಾಚಿಕೆಗಳಲ್ಲಿ ನೇತಾಡುತ್ತಿದ್ದ ಜೇನಿನ ಹುಟ್ಟುಗಳನ್ನು ಕೊಯ್ದು ಸಾಗಿಸಿದ್ದರು. ಹೀಗಾಗಿ ನಮ್ಮರಿವಿಗೆ ಬಾರದಂತೆ ಅಂದು ಅಲ್ಲಿ ನೇತಾಡುತ್ತಿದ್ದ ಕನಿಷ್ಠ ಆರೆಂಟು ಜೇನ ಹಿಂಡಿನಲ್ಲಿ ತೀವ್ರ ಸಂತ್ರಸ್ತ ಸ್ಥಿತಿ ನೆಲೆಸಿದ್ದಿರಬೇಕು. ಓಣಿ, ಚಿಮಣಿಗಳಲ್ಲಿ ಬರುವಾಗ ನಮ್ಮ ಬಾಯಬಡಿವಾರವೇನಿದ್ದರೂ ಅವಕ್ಕೆ ತಲಪಿರಲಿಲ್ಲ. ಮತ್ತೆ ನಮ್ಮ ನಡೆಯೂ ಪರಿಸರದ ದೃಷ್ಟಿಯಿಂದ ಬಲು ಸೌಮ್ಯವಾದ್ದರಿಂದ ಆಗಲೂ ಜೇನ್ನೊಣಗಳ ಗಮನ ಸೆಳೆದಂತಿರಲಿಲ್ಲ. ತಪ್ಪಾದದ್ದು ಒಂದೇ – ಭಟ್ಕೋಟಿಯ ಧೂಮ ಸಂದೇಶ! ಜೇನ್ನೊಣ ಕುಟುಕುವುದು ತನ್ನ ದೇಹದ ಒಂದು ಪ್ರಮುಖ ಅಂಗವನ್ನೇ. ಅಂದರೆ ಒಂದು ಕುಟುಕಿಗೆ ಒಂದು ನೊಣ ಸತ್ತಂತೇ ಸರಿ. ಸಹಜವಾಗಿ ನೊಣದ ಅಂಗ ಸೂಸುವ ನೋವಿನ ವಾಸನೆ ಇತರ ನೊಣಗಳ ನೈಜ ಪ್ರವೃತ್ತಿಗೆ ಪ್ರೇರಕ ಅರ್ಥಾತ್ ‘ವೈರಿ ಇದ್ದಾನೆ, ಕುಟುಕು’ ಎಂಬ ಯುದ್ಧ ಕರೆಯೇ ಆಗುತ್ತದೆ. ಜೀವ ವಿಕಾಸದಲ್ಲಿ ನಮ್ಮಿಂದ ತೀರಾ ಕೆಳ ಮೆಟ್ಟಿಲುಗಳಲ್ಲಿರುವ ಆ ನಿಷ್ಪಾಪಿ ನೊಣಗಳಿಗೆ ನಮ್ಮ ಆಕ್ರಂದನ, ಪ್ರಾರ್ಥನೆ ಮುಟ್ಟುವುದೂ ಇಲ್ಲ, ವಿವೇಚನೆ, ವಿರಾಮಕ್ಕೆ ಅರ್ಥವೂ ಇಲ್ಲ]
ಹೊತ್ತು ಸರಿದದ್ದೇ ತಿಳಿದಿರಲಿಲ್ಲ. ಹನ್ನೊಂದೂವರೆ ಗಂಟೆಯ ಸುಮಾರಿಗೆ ಕಥೆ ಸುರುವಾಗಿತ್ತು. ಅಪರಾಹ್ನ ಒಂದೂವರೆ ಗಂಟೆಯ ಸುಮಾರಿಗೆ ಒಮ್ಮೆಲೆ ಶಿಖರದತ್ತಣಿಂದ ಕುಲಕರ್ಣಿ ಬೂಟುಗಾಲಿನಲ್ಲಿ ಧಡಧಡನೆ ಬಂಡೆ ಇಳಿದು, ಸುಲಭ ಇಳಿದಾರಿಯ ದಿಕ್ಕಲ್ಲೇ ಓಡಿದ್ದು ಕಾಣಿಸಿತು. ನಮಗೋ ಒಮ್ಮೆ ಸಿಕ್ಕರಲ್ಲ ಎಂಬ ಸಮಾಧಾನ, ಮತ್ತೆ ಓಡುವಲ್ಲಿ ಎಡವಿ ಉರುಳಿದರೆ ಮೂಳೆಯೂ ಸಿಕ್ಕದಲ್ಲಾ ಎಂಬ ಆತಂಕ. ನಮ್ಮ ‘ರಕ್ಷಣಾನೆಲೆ’ಗೆ ಕೂಗಿ ಕರೆದದ್ದೂ ಆಯ್ತು. ಆದರೆ ಅವರು ನೊಣ ತಪ್ಪಿಸಲು ಕರವಸ್ತ್ರವನ್ನು ಹರಿದು ಕಿವಿ ತುಂಬಿಕೊಂಡಿದ್ದುದರಿಂದ ಕೇಳದೇ ಸೀದಾ ಐವತ್ತರವತ್ತಡಿ ಓಡಿ, ಒಂದು ತಗ್ಗಿನಲ್ಲಿ ಮುಖಾಡೆ ಬಿದ್ದುಕೊಂಡರು. ಅವರ ಖಾಸಾ ನೊಣಪರಿವಾರ ಆತ್ಮೀಯವಾಗಿ ವಿಚಾರಿಸಿಕೊಳ್ಳುತ್ತಲೇ ಇತ್ತು. ಸ್ವಲ್ಪ ಹೊತ್ತು ಬಿಟ್ಟು ಅವರು ಮತ್ತಷ್ಟು ಕೆಳಗೋಡಿ ಕಣ್ಮರೆಯಾದರು. ಇಲ್ಲಿ ನಮ್ಮ ನಿಶ್ಚೇಷ್ಟಿತ ಸ್ಥಿತಿಗನುಗುಣವಾಗಿ ಕುಟುಕು ಕಾರ್ಯಚರಣೆ ಕಡಿಮೆಯಾಗಿದ್ದರೂ ಮಕ್ಷಿಸಂದೋಹದ ಗಸ್ತಿಗೇನೂ ಸುಸ್ತು ಬಂದಂತಿರಲಿಲ್ಲ. ಆದರೆ ಹೀಗೇ ಎಷ್ಟು ಹೊತ್ತು? ಕುಲಕರ್ಣಿಯನ್ನು ಅನುಸರಿಸಿದರೆ ಹೇಗೆ ಎನ್ನುವ ಯೋಚನೆ ನಮ್ಮಲ್ಲಿ ಬೆಳೆಯಿತು. ಮಂಜಪ್ಪ ಮೊದಲಿಗ. ಕುಕ್ಕುರುಗಾಲಿನಲ್ಲಿ ಓಡಿದರು. ಇಳುಕಲು ಉಪೇಕ್ಷಿಸುವಂತದ್ದಲ್ಲ, ತೆವಳಿದರು, ಮರೆಯಾದರು. ಭಟ್ಕೋಟಿ ಹಿಂಬಾಲಿಸಿದರು. ಕಿರಿದಂತರಗಳಲ್ಲಿ ಹೆಗ್ಡೆ, ಸುಬ್ಬನ್, ಬಸವರಾಜ್ ಹೀಗೇ ಅಂತರ್ಧಾನರಾದರು. ನನ್ನೆಲ್ಲಾ ಒತ್ತಾಯದಿಂದ ಕೊನೆಯವರಾಗಿ ಯೋಗನೂ ಓಡಿದರು. ಆದರೆ ಐದೇ ಮಿನಿಟಿನಲ್ಲಿ ಅವರು ಹಿಂದೋಡಿ ಬಂದು ಬಿದ್ದುಕೊಂಡು, “ನೊಣ ಬಿಡಲ್ಲಾ. ಸತ್ತೋಗ್ತೀನೀ, ಧರ್ಮಸ್ಥಳದ ಮಂಜುನಾಥಾ…” ಎಂದೆಲ್ಲಾ ಮುಲುಗತೊಡಗಿದರು. ನೀರು ಕೊಟ್ತು ಸಮಾಧಾನಿಸಿದೆ. ಸ್ವಲ್ಪ ಹೊತ್ತಿನಲ್ಲಿ ಸುಬ್ಬನ್ ಬೇರೇ ಕಾರಣಕ್ಕೆ ಮರಳಿದರು. “ಕುಲಕರ್ಣಿ ದಾಹದಲ್ಲಿ ಚಡಪಡಿಸುತ್ತಿದ್ದಾರೆ…” ಎಂದು ನನ್ನ ಬಾಟಲು ಕೇಳಿಕೊಂಡು ಬಂದಂತೇ ತಗ್ಗೀ ಬಗ್ಗೀ ಹೋದರು.
ಗಂಟೆ ಮೂರು, ಬೆಂಕಿ ಅವಶೇಷವಾಗಿತ್ತು. ನೊಣದ ಮೋಡ ತಿಳಿಯಾಗಿತ್ತಾದರೂ ಬಿಡುಗಡೆ ಬಂದಿರಲಿಲ್ಲ. ಯೋಗನನ್ನು ಹೇಗೋ ನೂಕಿಕೊಂಡು ನಾನೂ ಸುಲಭ ದಾರಿಯಲ್ಲೇ ಹೊರಡಬಹುದಿತ್ತಾದರೂ ಶ್ರೀನಾಥ್ ಪ್ರಕಾಶರ ಒಗಟು ಉಳಿಸಿ ಹೋಗಲು ಮನಸ್ಸಾಗಲಿಲ್ಲ. ಇನ್ನೊಮ್ಮೆ ಹುಡುಕುವ ಯತ್ನದಲ್ಲಿ ಗುಹೆಯತ್ತ ಓಡಿ ಮೆಟ್ಟುಗಲ್ಲ ಸಂದಿನಲ್ಲಿ ಸೇರಿಕೊಂಡೆ. ಹತ್ತೆಂಟು ನೊಣ ರೊಂಯ್ಯನೆ ಹಿಂಬಾಲಿಸಿದರೂ ಬೆಳಕಿದ್ದಲ್ಲೇ ಸುಳಿದು ನಿರಾಶೆಯಿಂದ ಮರಳಿದವು! ಸಂತೋಷದಿಂದ ಯೋಗನನ್ನು ಕೂಗಿ ಕರೆದೆ. ಆಗ ಅನಿರೀಕ್ಷಿತವಾಗಿ ಮೊದಲ ಚಿಮಣಿಯ ಆಳದಿಂದ ಶ್ರೀನಾಥರ ಕ್ಷೇಮವಾರ್ತೆಯೂ ಕೇಳಿ ಬಂತು. ಆ ಪುಣ್ಯಾತ್ಮ ನೊಣಗಳು ಬೆನ್ನಟ್ಟುತ್ತಿದ್ದಂತೇ ಗುಹೆಯಲ್ಲಿ ಹಿಂದೆ ತೆವಳಿ, ತೆರೆಮೈಯಲ್ಲಿ ಧಾವಿಸಿ, ಚಿಮಣಿಗುಹೆ ಸೇರಿ ಮತ್ತೆ ಇಳಿಯಲಾಗದ ಸಂಕಟಕ್ಕೆ ಮೂಲೆಯಲ್ಲಿ ಮುದುಡಿಕೊಂಡಿದ್ದರಂತೆ. ಮೇಲಿನಿಂದ ನಮ್ಮ ಕರೆ, ಬೊಬ್ಬೆ ಎಲ್ಲಾ ಕೇಳಿತಾದರೂ ಓಗೊಡಲು ನೊಣದ ಭಯ ಕಾಡಿ ತುಟಿ ಬಿರಿಯಲೇ ಇಲ್ಲವಂತೆ!
[ನೊಣಗಳು ನಿಶಾಚರಿಗಳಲ್ಲ. ಅವುಗಳಿಗಿರುವುದು ಸಂಯುಕ್ತ ನೇತ್ರ, ದೃಷ್ಟಿ ಮಂದ. ಈ ಶಾಲಾ ಪಾಠದ ಸಣ್ಣ ಪ್ರಾಯೋಗಿಕ ಅನುಭವಗಳು ನಮಗೆ ಸುಬ್ಬನ್ ಚಿಮಣಿಯೊಳಗಿದ್ದಾಗ, ಶ್ರೀನಾಥ್ ಗುಹೆಯೊಳಗೆ ಜಾರಿದಾಗ, ಅಲ್ಲಲ್ಲಿ ನಾವು ಕಲ್ಲ ಮರೆಗಳಲ್ಲಿ ಮುದುಡಿಕೊಂಡಾಗ ಆಗಿತ್ತು. ಆದರದನ್ನು ವಿಶ್ಲೇಷಿಸಿ ಕಡಿಮೆ ಕುಟುಕಿನೊಡನೆ ಬಚಾವಾಗುವ ಬದಲು, ಆತಂಕದ ಕೈಗೆ ಬುದ್ಧಿಕೊಟ್ಟು, ಸ್ಪಷ್ಟ ಬೆಳಕಿನ ತೆರೆಮೈಗೆ ಹೋಗಿ ಕುಟುಕಿಸಿಕೊಂಡದ್ದು ನೆನೆಸಿದರೆ ಇಂದು ‘ನಗೆಯೂ ಬರುತಿದೆ ನನಗೆ, ನಮ್ಮೊಳಗಿರುವ ಮೂಢನ ನೆನೆದು ನಗೆಯೂ ಬರುತಿದೆ’]
ಯೋಗನಿಗೆ ಶ್ರೀನಾಥರ ಕ್ಷೇಮ ಸಮಾಚಾರ ಮುಟ್ಟಿಸಿದೆ. ಅವರು ಬಿದ್ದುಕೊಂಡಿದ್ದ ತೆರೆಮೈಗಿಂತ ಮೆಟ್ಟುಗಲ್ಲಿನ ಮರೆಮೈ ಹೆಚ್ಚು ನೊಣಮುಕ್ತವೆಂದು ಒತ್ತಾಯಿಸಿ ಕರೆಸಿಕೊಂಡೆ. ಶ್ರೀನಾಥ್ ಧೈರ್ಯ ಮಾಡಿ ಮೇಲೆ ಬಂದು ನಮ್ಮನ್ನು ಸೇರಿಕೊಂಡರು. ಎಲ್ಲರ ಕಷ್ಟಸುಖದ ವಿಚಾರಣೆ ಮೊದಲ ಮಾತು. ಹೇಗೂ ಎಲ್ಲರ ಚೀಲ, ನೀರು ನಮ್ಮದೇ ಸೊತ್ತು. ಧಾರಾಳ ನೀರು ಕುಡಿದು, ತುಸು ತಿಂಡಿ ತುರುಕಿ, ಹಿಂದೆಯೇ ಮೊಸುಂಬಿ ಕಳಿಸಿದೆವು. ನನ್ನೊಳಗೇನೋ ತಳಮಳ. ಮತ್ತೆ ಯಾವ ಸೂಚನೆಯಿಲ್ಲದೆ ಒಮ್ಮೆಗೆ ಮಹಾಪೂರವಾಗಿ ಬಂತು ಅರಿಶಿನ ವಾಂತಿ.
ಆಗಷ್ಟೇ ತಿಂದ ತಿಂಡಿ, ಮೋಸುಂಬಿಯಿಂದ ತೊಡಗಿ ಬೆಳಗ್ಗೇ ತಿಂದ ಇಡ್ಲಿವರೆಗೆ ಎಲ್ಲವೂ ಎರಡು ಸುತ್ತಿನ ವಾಂತಿಯಲ್ಲಿ ಖಾಲಿಯಾದಮೇಲೇ ಶಾಂತಿ. ನಾಲ್ನಾಲ್ಕು ಸಲ ಚಿಮಣಿ ಸರಣಿ ಸಹಜವಾಗಿ ಹತ್ತಿಳಿಯುತ್ತಿದ್ದ ನನಗೆ ಈಗ ತೀವ್ರ ದೈಹಿಕ ಬಳಲಿಕೆ, ಮುಖಬೀಗಿ ವಿವರಿಸಲಾಗದ ನಿರಂತರ ಉರಿ, ಗಂಟುಗಂಟು ಹಿಂಡುವ ನೋವು. ಉಳಿದಿಬ್ಬರ ಸ್ಥಿತಿ ಉತ್ತಮವಾಗಿತ್ತು – ಹೊಟ್ಟೆಗಿಳಿಸಿದ್ದನ್ನು ದಕ್ಕಿಸಿಕೊಂಡಂತಿತ್ತು. ಈ ಸ್ಥಿತಿಯಲ್ಲಿ ಮತ್ತೆ ನೊಣ ಕಾಡಬಹುದಾದ ಸುಲಭ ದಾರಿ ಬಿಟ್ಟು ಚಿಮಣಿಯಲ್ಲೇ ಅವಸರಿಸಿ ಕಾಲ್ದಾರಿ ಸೇರಲು ನಾವು ನಿರ್ಧರಿಸಿದೆವು. ಅತ್ತ ಪ್ರಕಾಶ, ಕುಲಕರ್ಣಿ ಪತ್ತೆಯಾದದ್ದು ಮತ್ತು ಮಂಜಪ್ಪ ಸುಬ್ಬನ್ ಆದಿಯಾಗಿ ಕೆಲವರು ಸಹಾಯಕ್ಕೆ ಒದಗುವಂತೆ ತೊಡಗಿದ್ದೂ ನನಗೆ ಹೆಚ್ಚಿನ ಧೈರ್ಯವನ್ನೂ ಕೊಟ್ಟಿತು.
ಚಿಮಣಿಯೊಳಗೆ ಸುಬ್ಬನ್ ಬಿಚ್ಚಿ ಬಿಟ್ಟ, ಮೇಲಿನಿಂದ ಕುಲಕರ್ಣಿ ಕೈ ಚೆಲ್ಲಿದ ಬಿಲೇ ಹಗ್ಗವನ್ನು ಎಚ್ಚರಿಕೆಯಿಂದ ಎಳೆದುಕೊಂಡೆವು, (ಮತ್ತೆ ಅದು ಎಲ್ಲಿಯಾದರೂ ಹೆಜ್ಜೇನ ಹುಟ್ಟು ತಟ್ಟಿ ನಮ್ಮ ಹುಟ್ಟಡಗಿಸಿಬಿಟ್ಟೀತೋ ಎನ್ನುವ ಭಯ) ನಿರಾತಂಕವಾಗಿ ಬಂತು. ಯೋಗ ಶ್ರೀನಾಥರು ಎಲ್ಲ ಚೀಲಗಳನ್ನು ಕೆಳಗಿನ ಗುಹೆಯವರೆಗೆ ಹಾಗೂ ಹೀಗೂ ಸಾಗಿಸಿದರು. ನಾನು ಹೆಚ್ಚುಕಮ್ಮಿ ತೆವಳುತ್ತಲೇ ಹಿಂಬಾಲಿಸಿದೆ. ಗಟ್ಟಿ ಪಟ್ಟು ಹಿಡಿದು ಕುಳಿತು ಮೊದಲು ಮಿತ್ರರನ್ನು ಪೂರ್ಣ ಹಗ್ಗದ ಬಲದಲ್ಲೇ ಕೆಳಗಿಳಿಸಿದೆ. ಮತ್ತೆ ಚೀಲದ ಕಟ್ಟನ್ನೂ ಗಂಟು ಹಾಕಿ ಕೆಳಕ್ಕೆ ರವಾನಿಸಿದೆ. ಕಾಲಿನ ಮಾಂಸಖಂಡಗಳು ಸೆಟೆದುಕೊಳ್ಳುವ ಹೆದರಿಕೆಯಲ್ಲಿ ನಾನು ಚಿಮಣಿ ತಂತ್ರ ಬಿಟ್ಟು ಹಗ್ಗವನ್ನೇ ನೆಚ್ಚಿದೆ. ಅದನ್ನು ಕೀಲುಗಲ್ಲಿಗೆ ಸುತ್ತು ಹಾಕಿ ಕೆಳಕ್ಕೆ ಚಾಚಿಕೊಂಡ ಎರಡೂ ಎಳೆಗಳನ್ನು ಸೇರಿಸಿ ಹಿಡಿದುಕೊಂಡು ಬಾವಿ ಇಳಿಯುವವನಂತೆ ಚುರುಕಾಗಿ ನೆಲ ತಲಪಿದೆ. (ತೋಳಿಗೂ ಸ್ನಾಯುಸೆಳೆತ ಬರಬಾರದೆಂದಿಲ್ಲವಲ್ಲಾ) ಮತ್ತೆ ನೀರು ಕುಡಿದೆ, ಉಳಿದವರಿಗೂ ಕುಡಿಸಿದೆ. ಹಗ್ಗ, ಸಾಮಾನುಗಳೆಲ್ಲವನ್ನೂ ಮೂವರು ಹಂಚಿಕೊಂಡು ಹೊತ್ತು ನಿಧಾನಕ್ಕೆ ಓಣಿ ತುಳಿದು, ಕಾಡು ಸೇರಿದೆವು. ಆಗ ಮೇಲಿನ ಚಿಮಣಿ ಅಂಚಿನಿಂದ ಮಂಜಪ್ಪ ಕೂಗಿ ಕೊಟ್ಟರು ಕ್ಷೇಮ ಸಮಾಚಾರ. ಪ್ರಕಾಶ, ಕುಲಕರ್ಣಿಯರೂ ಸೇರಿದಂತೆ ಏಳೂ ಜನ ಮೊಂಡುಗಿವಿ ಬಂಡೆಯ ನೀರಗವಿಯ ಆಶ್ರಯದಲ್ಲಿ ಕ್ಷೇಮಿಗಳು. ನೊಣಮುತ್ತರೀಗ ನೊಣಮುಕ್ತರು!
ನಾವು ಹೆಚ್ಚಿನ ನಿಶ್ಚಿಂತೆಯಿಂದ ಪುಟ್ಟ ಪಥ ತಲಪಿದೆವು. ಅತ್ತ ಗುಹಾಶ್ರಮದಿಂದ ಸಹಾಯಹಸ್ತ ಹೋಗಿದೆ ಎಂಬ ಸುದ್ದಿ ತಿಳಿದ ಮೇಲೆ ಮತ್ತಷ್ಟು ನಿರಾಳವಾಗಿ, ಅಲ್ಲೇ ನೆಲದಲ್ಲಿ ಮೈಚಾಚಿದೆವು. ಈಗ ಯೋಗನಿಗೆ ವಾಂತಿಯ ಸರದಿ. ಶ್ರೀನಾಥ ಕಡಿಮೆ ವಾಂತಿ ಮಾಡಲಿಲ್ಲ. ಸಂಕಟ ಮುಂದುವರಿದು ಒಬ್ಬೊಬ್ಬರಿಗೇ ಇನ್ನೊಂದು ಕೊನೆಯ ಬೂಚೂ ರಟ್ಟತೊಡಗಿತು; ಬೇದಿ. ಅದೃಷ್ಟಕ್ಕೆ ನಮಗೆ ತೊಳೆಯಲೋ ಕುಡಿಯಲೋ ನೀರಿಗೇನೂ ಕೊರತೆಯಾಗಲಿಲ್ಲ. ವಾಂತಿಬೇದಿಗಳಿಂದ ನಿರ್ಜಲತೆ ಕಾಡದ ಎಚ್ಚರವಹಿಸಿಕೊಂಡು, ಉಳಿದವರ ದಾರಿಕಾದೆವು.
ಅತ್ತ ಬಹುಜನ ಪಕ್ಷದ ಸ್ಥಿತಿ ಉತ್ತಮವೇನೂ ಇರಲಿಲ್ಲ. ನೊಣದಂಡಿನ ಪ್ರಥಮ ಮತ್ತು ಭಾರೀ ಆಘಾತಕ್ಕೆ ಕುಲಕರ್ಣಿ ಹಗ್ಗ ಮತ್ತು ಸುಬ್ಬನ್ ಯೋಚನೆ ಬಿಟ್ಟು ನಾಲ್ಕೇ ಹೆಜ್ಜೆಗೆ ಸಿಕ್ಕ ಕಲ್ಲ ಸಂದೊಂದರಲ್ಲಿ ಮುಖಾಡೆ ನಿಶ್ಚಲವಾಗಿ ಬಿದ್ದುಕೊಂಡರಂತೆ. ಕರವಸ್ತ್ರ ಹರಿದು ಎರಡೂ ಕಿವಿಗೆ ತುರುಕಿ, ಹಸ್ತದಲ್ಲಿ ಮುಖಮುಚ್ಚಿ ಮಲಗಿದವರಿಗೆ ಸಮಯದ ಪರಿವೆಯೇ ಉಳಿದಿರಲಿಲ್ಲವಂತೆ. ಎಲ್ಲೋ ಕತೆ ಸಿನಿಮಾಗಳಲ್ಲಷ್ಟೇ ಕಲ್ಪಿಸಿಕೊಂಡಿದ್ದ ಹತ್ತು ನೂರರ ಸಂಖ್ಯೆಯ ಬಾಂಬರ್ ಯುದ್ಧ ವಿಮಾನಗಳೇ ಮೂರ್ತಿವತ್ತಾಗಿ ತನ್ನ ಮೇಲೆ ಭೋರಿಡುತ್ತಿವೆ. ತಲೆಗೂದಲೆಡೆಯಲ್ಲಿ, ಬಿಗಿದ ಕಾಲರಿನಂಚಿನವರೆಗೂ ಮೊದಮೊದಲು ಹುಳಗಳ ಮುತ್ತಿಗೆ, ಚುಚ್ಚಿಗೆ ಅಸಹ್ಯವಾಗುತ್ತಿತ್ತು. ಎಷ್ಟೋ ಹೊತ್ತಿನ ಮೇಲೆ ಜಡತ್ವ ಬಂತೋ ಧಾಳಿಕೋರರೇ ಕಡಿಮೆಯಾದರೋ ಎಂದನ್ನಿಸಿದಾಗ ಒಮ್ಮೆಲೇ ಎದ್ದು ಇಳಿದಾರಿ ಕಡೆ ಧಾವಿಸಿದ್ದರು. ಆಗಲೇ ನಮಗವರು ಕಾಣಿಸಿದ್ದು. ತಾನಿದ್ದರೆ ಮೂರು ಲೋಕ ಉಂಟು ಎಂಬ ಒಂದೇ ಹಠದಲ್ಲಿ ಹತ್ತು ಇಪ್ಪತ್ತಡಿಗೊಮ್ಮೆ ಓಡೋಡಿ ಮತ್ತೆ ಮತ್ತೆ ಮುದುರಿ ಮಲಗುವ ತಂತ್ರ ನಡೆಸಿದರು. ಇದರಿಂದ ನೊಣಗಳೂ ಕೊಳ್ಳೆ ಗುರುತಿಸಲಾಗದೆ ವಿರಳವಾಗುವುದನ್ನು ಮಂಜಪ್ಪ, ಸುಬ್ಬನ್ ಕೂಡಾ ಕಂಡುಕೊಂಡು ನಿರಪಾಯದ ಅಂತರ ಉಳಿಸಿಕೊಂಡು ಕುಲಕರ್ಣಿಯ ಬೆನ್ನು ಹಿಡಿದರು. ಒಮ್ಮೆ ಕುಲಕರ್ಣಿ ವಾಂತಿ ಮಾಡಿಕೊಂಡು ನೀರುನೀರೆಂದು ಮುಲುಗಿದ್ದು ಕೇಳುವಾಗ ಸುಬ್ಬನ್ನಿಗೆ ತಡೆಯಲಿಲ್ಲ. ಮೊದಲೇ ಹೇಳಿದಂತೆ ಕಚ್ಚುಸೈನ್ಯವನ್ನು ಅತ್ಯಂತ ಜಾಗೃತ ಸ್ಥಿತಿಯಲ್ಲಿಟ್ಟ ನಮ್ಮಲ್ಲಿಗೆ ಮರು ಓಟ ಹಾಕಿ ಕುಲಕರ್ಣಿಗೆ ನೀರೂಡಿದರು. ಮತ್ತೆ ಎಲ್ಲ ದೇಶದ ಮುಂಚೂಣಿಯ ವೀರಯೋಧರಂತೆ ಅಲ್ಲೊಬ್ಬ ಇಲ್ಲೊಬ್ಬ ತುಸುವೇ ತಲೆ ಎತ್ತಿ, ನೆಲಕ್ಕಿದ್ದ ಆಳದಿಂದ ವಿಚಲಿತರಾಗದೆ, ಹಿಡಿಕೆಗಳ ಕೊರತೆಯ ಪರಿವೆಯಿಲ್ಲದೆ ಮುಂದೆ ಮುಂದೆ ಜಾರಿ ಕತ್ತೆಯ ಮಂಡೆ ಸೇರಿ, ಕಲ್ಲ ಸಂದು ಪೊದರ ಮರೆಗಳಲ್ಲಿ ನೊಣಮುಕ್ತರಾಗಿ ಮೈಚಾಚಿದರು.
ಪ್ರಕಾಶ ಮೊಂಡುಗಿವಿಯತ್ತ ಇಳಿಯುವ ನೇರ ಮೈಗೆ ಬಂದು, ಆಳ ಕಂಡು ಅಸಹಾಯಕತೆಯಲ್ಲೇ ಕವುಚಿ ಬಿದ್ದುಕೊಂಡ. ಬಳಲಿಕೆಯೋ ನೊಣಚಿಕಿತ್ಸೆಯೋ ತನ್ನರಿವು ತಪ್ಪಿಸದ ಎಚ್ಚರ ಉಳಿಸಿಕೊಂಡು ಆಳಕ್ಕೆ ಬೆನ್ನು ಮಾಡಿದ. ಭದ್ರ ಹಿಡಿಕೆಗಳ ಹುಡುಕಾಟವೋ ತರಚಲು ಗಾಯಗಳ ಲೆಕ್ಕವೋ ಇಡದೆ ನಿಧನಿಧಾನಕ್ಕೆ ಜಾರುತ್ತ ಇಳಿದೇ ಇಳಿದ. ಮುಂದಾಗಿಯೇ ತಳ ತಲಪಿದ್ದ ಮಂಜಪ್ಪಾದಿಗಳು ಇವನಿಗೆ ನಿರ್ದೇಶನ ಕೊಡಲು ನೋಡಿದರು. ಆದರೆ ಆತ ಭ್ರಮರಗಾನ ಲೋಲುಪನಾಗಿ ಹೊರಲೋಕಕ್ಕೆ ಕಿವುಡನಂತೆ ತನ್ನದೇ ಜಾಡಿನಲ್ಲಿ ಮುಂದುವರಿದ. ಕೆಳಗಿನವರಿಗೆ ಅವನಲ್ಲಿಗೆ ಏರಿ ಸಹಾಯ ಮಾಡುವಷ್ಟು ಧೈರ್ಯವೂ ಅನುಭವವೂ ಇರಲಿಲ್ಲ. (ಹೌದು, ಅವನ ಖಾಸಾ ನೊಣ ಪರಿವಾರ ಪೂರ್ಣ ನಿವೃತ್ತಿ ತೆಗೆದುಕೊಂಡಿರಲಿಲ್ಲ.) ಆತ ಎಲ್ಲೋ ಸಣ್ಣ ತಗ್ಗು ಸಿಕ್ಕಲ್ಲಿ ತುಸು ವಿರಮಿಸಿದಾಗ ನೀರಿಗಾಗಿ ತಹತಹಿಸಿದ್ದು ಕೇಳಿತಂತೆ. ಮಿತ್ರರಲ್ಲಿ ಯಾರೋ ಅವನ ಎತ್ತರಕ್ಕೆ ಸ್ವಲ್ಪ ಏರಿ ಕೋಲೊಂದರ ತುದಿಗೆ ನೀರಕ್ಯಾನ್ ಸಿಕ್ಕಿಸಿ ಒದಗಿಸಿದರು. ಆತ ಪೂರ್ತಿ ಕುಡಿದು ಕ್ಯಾನ್ ಎಸೆದ. ಜೊತೆಗೆ ಆತನಿಗೆ ಒಮ್ಮೆಲೇ ಮಂಪರು ಹರಿದು ತನ್ನ ಸ್ಥಿತಿ ಅರಿವಾದಂತೆ ಕಂಡಿತು. ಕೆಳಗಿದ್ದವರು ಪ್ರಕಾಶ ಜಾರಿದ, ಬೀಳ್ತಾ ಇದ್ದಾನೆ ಎಂದೆಲ್ಲಾ ಆತಂಕಿತರಾಗಿ ಬಂಡೆಯ ಬುಡಕ್ಕೆ ಧಾವಿಸುವುದರೊಳಗೆ ಆತ ಕ್ಷೇಮವಾಗಿ ನೆಲ ತಲಪಿಬಿಟ್ಟ. ಈ ಧಾವಂತದಲ್ಲಿ ಆತ ಉಳಿದ ಗಸ್ತಿನೊಣಗಳಿಂದಲೂ ಮುಕ್ತಿ ಪಡೆದಿದ್ದ.
ಸಂಜೆ ಸುಮಾರು ಆರು ಗಂಟೆಯ ಹೊತ್ತಿಗೆ ಇತ್ತ ಏಳು ಜನ ಕತ್ತೆಯ ಮಂಡೆ ತಲಪಿದಾಗಲೇ ಅತ್ತ ನಾವು ಮೂವರು ಹೆಕ್ಕತ್ತು ತಲಪಿದ್ದೆವು. ಕುಲಕರ್ಣಿ, ಪ್ರಕಾಶ ಸರದಿಯ ಮೇಲೆ ವಾಂತಿ, ಬೇದಿಗೆ ತೊಡಗಿದ್ದರು. ಜೊತೆಗಿದ್ದವರು ಪೂರ್ಣ ಸ್ವಸ್ತರಲ್ಲದಿದ್ದರೂ ಕಾಲಕಾಲಕ್ಕೆ ಇದ್ದ ಒಂದು ನೀರ ಕ್ಯಾನು ಹಿಡಿದುಕೊಂಡು ಮೊಂಡುಗಿವಿಯ ಗುಹೆಯ ಎತ್ತರಕ್ಕೆ ಹತ್ತಿ. ಇಳಿದು ನೀರು ಒದಗಿಸಿ ಆರೈಕೆ ಮಾಡುವುದರಲ್ಲಿ ಕೊರತೆ ಮಾಡಲಿಲ್ಲ. ಅಷ್ಟು ಸಾಲದೆಂಬಂತೆ ಮೇಲೇ ಉಳಿದಿರಬಹುದಾದ ನಮ್ಮ ಮೂವರ ಕ್ಷೇಮ ವಾರ್ತೆ ಸ್ಪಷ್ಟಪಡಿಸಿಕೊಳ್ಳುವ ಒತ್ತಡಕ್ಕೆ ಮಣಿದು ಮಂಜಪ್ಪ ಜೇನ್ನೊಣಗಳ ಭಯ ಹತ್ತಿಕ್ಕಿ ಮತ್ತೆ ನಿಮಿರುಗಿವಿ ಹತ್ತಿದ್ದೂ ಆಗಿತ್ತು. ಇನ್ನೊಂದು ಮುಖದಲ್ಲಿ ಕೆಲವರಿಗೆ ನಾನು ಮೊದಲೇ ‘ಬೆಟ್ಟದ ಇನ್ನೊಂದು ಮೈಯಲ್ಲಿ ಗುಹಾಶ್ರಮವಿದೆ’ ಎಂದದ್ದು ನೆನಪಿಗೆ ಬಂತು. ಹೆಗ್ಡೆ ಮತ್ತು ಭಟ್ಕೋಟಿ ಕುರುಚಲು ಕಾಡಿನ ಸವಕಲು ಜಾಡಿನಲ್ಲೇ ಅದನ್ನು ಹುಡುಕಿಕೊಂಡು ಹೋದರು. ಅದೃಷ್ಟಕ್ಕೆ ಅವರು ಆಶ್ರಮವನ್ನು ಸರಿಯಾಗೇ ತಲಪಿದ್ದಲ್ಲದೆ ಸ್ವಾಮಿಗಳ ಅಂತಃಕರಣವನ್ನೂ ತಟ್ಟಿದರು.
ಕೊಣಜೆಕಲ್ಲಿನ ಗುಹಾಶ್ರಮದ ಸ್ವಾಮಿಗಳು ಮತ್ತವರ ಭಕ್ತಾದಿಗಳು ಅಪಾರ ಜೀವದಯೆಯಲ್ಲಿ ಬಂದವರಿಗೆ ಊಟ ಮತ್ತು ಪ್ರಥಮ ಚಿಕಿತ್ಸೆಯ ವ್ಯವಸ್ಥೆ ಮಾಡಿದರು. ಒಬ್ಬ ಪ್ರತಿನಿಧಿಯನ್ನು ಹೆಕ್ಕತ್ತಿನೆಡೆಗೆ ಕಳಿಸಿ ನಮ್ಮ ಮೂವರನ್ನು ಆಶ್ರಮಕ್ಕೆ ಕರೆಸಿಕೊಳ್ಳಲು ವ್ಯವಸ್ಥೆ ಮಾಡಿದರು. ಮತ್ತೆ ಅವಸರದಲ್ಲೇ ನಾಟೀ ಔಷಧಿ, ಒಂದಷ್ಟು ತಿನಿಸು, ಬಕೆಟ್ ತುಂಬಾ ಮಜ್ಜಿಗೆ ನೀರು ಸಜ್ಜುಗೊಳಿಸಿ, ಹೊರಿಸಿಕೊಂಡು ಸ್ವತಃ ಸ್ವಾಮಿಗಳೇ ಕತ್ತೆಯ ಮಂಡೆಯೆಡೆಗೆ ಧಾವಿಸಿದರು. ಮುಖ್ಯವಾಗಿ ಪ್ರಕಾಶ ಮತ್ತು ಕುಲಕರ್ಣಿಯ ಮೈಯಿಂದ ಕೂಡಿತಾದಷ್ಟು ಜೇನಮುಳ್ಳುಗಳನ್ನು ಕಿತ್ತು, ಎಲ್ಲರಿಗೂ ಔಷಧ ಸವರಿ, ಹೊಟ್ಟೆಗಷ್ಟು ಆಹಾರ, ಧಾರಾಳ ಮಜ್ಜಿಗೆನೀರು ಒತ್ತಾಯದಿಂದ ಸೇರಿಸಿ, ಆಶ್ರಮದೆಡೆಗೆ ನಡೆಸಿದರು. ಆ ಹಂತದಲ್ಲಿ ಕುಲಕರ್ಣಿಯಾದರೋ ಕೇವಲ ಕಣ್ಣಾಸರೆಯಲ್ಲೇ ಸ್ವತಂತ್ರವಾಗಿ ನಡೆದರು. ಪ್ರಕಾಶ ಮಾತ್ರ ಮತ್ತೊಬ್ಬರ ಭುಜದಾಸರೆ ಪಡೆದದ್ದಲ್ಲದೆ ಪ್ರತಿ ಹೆಜ್ಜೆಗೂ ನೋವಿನಿಂದ ಮುಖ ಕಿವಿಚುತ್ತಲೇ ಮುಂದುವರಿದ. ಆಶ್ರಮದಲ್ಲಿ ಇಡಿ ತಂಡದ ಪುನರ್ಮಿಲನವಾಗಿತ್ತು ಆದರೆ ಸಂಭ್ರಮಿಸುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಅವಸರವಸರದಲ್ಲಿ ಕೊರತೆ ಬಿದ್ದ ಪ್ರಥಮ ಚಿಕಿತ್ಸೆ ಮತ್ತು ಊಟ ಮುಗಿಸುವಾಗ ಪೂರ್ಣ ಕತ್ತಲಾವರಿಸಿತ್ತು. ಏನೂ ವಿಳಂಬಿಸದೆ ಸ್ವಾಮಿಗಳು ಎಲ್ಲರನ್ನೂ ಟಾರ್ಚ್ ಬೆಳಕಿನಲ್ಲಿ ಡಾಮರು ದಾರಿಗೆ ನಡೆಸಿದರು. ಈಗ ಆಶ್ರಮದ ಭಕ್ತರ ಹೆಚ್ಚುವರಿ ಭುಜದಾಸರೆ ನಮ್ಮಲ್ಲಿ ಇನ್ನೂ ಕೆಲವರಿಗೆ ಬೇಕಾಯ್ತು. ದಾರಿ ಬದಿಯಲ್ಲಿ ಸ್ವಾಮಿಗಳು ಹೇಳಿಕಳಿಸಿದ್ದ ಬಾಡಿಗೆ ಕಾರು ಕಾದಿತ್ತು. ಅರ್ಧವಾಸೀ ಜನ ಕಾರೇರಿ ಕೂಡಲೇ ರವಾನೆಯಾದರೆ ನಾವೊಂದು ಐದು ಜನ ಮತ್ತೆ ನಂನಮ್ಮ ದ್ವಿಚಕ್ರ ಚಲಾಯಿಸಿ ಹಿಂಬಾಲಿಸುವ ಹಠ ಸಾಧಿಸಿದೆವು. (ಮತ್ತೂ ಹಿಂದುಳಿದ ದ್ವಿಚಕ್ರ ವಾಹನಗಳನ್ನು ಮಾರಣೇ ದಿನ ಎಂಸಿಎಫ್ನ ಅನ್ಯ ಮಿತ್ರರು ಹೋಗಿ ತಂದರೆನ್ನಿ.) ರಾತ್ರಿ ಹತ್ತೂವರೆಯ ಸುಮಾರಿಗೆ ಎಲ್ಲರೂ ಬೇರೇನೂ ‘ಸಾಹಸ’ ಮಾಡಿಕೊಳ್ಳದೆ ಮಂಗಳೂರಿನ ಫಾದರ್ ಮುಲ್ಲರ್ ಅಸ್ಪತ್ರೆಯ ಚಿಕಿತ್ಸೆಗೆ ಒಳಗಾಗಿದ್ದೆವು.
ಜೇನಿನ ನಂಜು ಪಿತ್ಥಕೋಶ ಮತ್ತು ಮೂತ್ರಪಿಂಡಗಳನ್ನು ಮೊದಲು ಅಟಕಾಯಿಸುತ್ತದಂತೆ. ಹಿಂಬಾಲಿಸಿದಂತೆ ಹೃದಯ ಸ್ತಂಭನವಂತೆ. ಹಾಗಾಗಿ ತೀವ್ರ ಆಘಾತ ಅನುಭವಿಸಿದವರಿಗೆಲ್ಲ ಮೊದಲು ಇಂಜೆಕ್ಷನ್. ಮತ್ತೆ ಚಿಮ್ಮುಟ ಹಿಡಿದ ದಾದಿಯರು ಎಲ್ಲರ ಮೈಯಿಂದಲೂ ಮುಖ್ಯವಾಗಿ ತಲೆಗೂದಲೆಡೆಗಳಿಂದ ಕಿತ್ತು ತೆಗೆದ ಜೇನುಮುಳ್ಳುಗಳಿಗೆ ಲೆಕ್ಕ ಹಿಡಿಯುವುದು ಕಷ್ಟ. ಕೊಡಂಜೆಯಲ್ಲಿ ಕಾರು ಸೇರುವಾಗಲೇ ಸ್ವಯ ತಪ್ಪಿದ್ದ ಪ್ರಕಾಶ ಪೂರ್ಣ ಎಚ್ಚರಕ್ಕೆ ಬರಲು ಇಪ್ಪತ್ನಾಲ್ಕು ಗಂಟೆಗಳೇ ಬೇಕಾಯ್ತು. ಮತ್ತೆ ವಾರ ಕಾಲ ಆಸ್ಪತ್ರೆ, ತಿಂಗಳೊಂದರ ಮನೆ ವಿಶ್ರಾಂತಿ. ಅವನ ಜೊತೆಗೆ ಕುಲಕರ್ಣಿ, ಯೋಗ, ಮತ್ತೊಬ್ಬನನ್ನು (ಜನ ಯಾರೆಂದು ಮರೆತಿದ್ದೇನೆ) ಆಸ್ಪತ್ರೆಯವರು ತುರ್ತು ನಿಗಾ ಘಟಕಕ್ಕೇ ದಾಖಲು ಮಾಡಿದ್ದರು. ಮೂರು ನಾಲ್ಕು ದಿನಗಳ ಆಸ್ಪತ್ರೆವಾಸ ಅವರಿಗೂ ಬೇಕಾಯ್ತು. ಉಳಿದವರಿಗೆ ಯುಕ್ತ ಚಿಕಿತ್ಸೆ ನೀಡಿ ಹೊರರೋಗಿಗಳನ್ನಾಗಿ ಬಿಡುಗಡೆ ಮಾಡಿದರು.
ತಂಡದಲ್ಲಿ ನೊಣ ಕಡಿತದ ತೀವ್ರತೆಯ ಲೆಕ್ಕ ಹಿಡಿದಿದ್ದರೆ ಬಹುಶಃ ಪ್ರಕಾಶ ಮತ್ತು ಕುಲಕರ್ಣಿಯಾದ ಮೇಲೆ ನಾನೇ ಬರುತ್ತಿದ್ದಿರಬೇಕು. ಒಂದಿಬ್ಬರ ಸೌಮ್ಯ ಸೂಚನೆಗಳನ್ನು ಧಿಕ್ಕರಿಸಿ, ಮಾನಸಿಕವಾಗಿ ನನ್ನ ದೃಢತೆ ಒರೆಗೆ ಹಚ್ಚುವ ಗರ್ವದಲ್ಲಿ ನಾನು ಕಾರಿಗೇರದೆ, ಬೈಕಿನಲ್ಲೇ ಮಂಗಳೂರಿಗೆ ಹೊರಟೆ. ಆದರೆ ಉಳಿದ ನಾಲ್ಕು ಸವಾರರು ಹೆಚ್ಚು ಸ್ವಸ್ಥರಿದ್ದುದರಿಂದ ಒಂದೆರಡು ಬಾರಿ ದಾರಿಯಲ್ಲಿ ನಾನು ನಿಂತು ವಾಂತಿ ಮಾಡಿದಾಗ, ಸೇತುವೆ ಕಟ್ಟೆಗಳ ಮೇಲೆ ಒರಗಿ ವಿಶ್ರಮಿಸಿದಾಗ ನೀರು ಕೊಟ್ಟು, ಆಧರಿಸಿ ಹೆಚ್ಚಿನ ವಿಶ್ವಾಸ ತುಂಬಿದ್ದರು. ಆಸ್ಪತ್ರೆಯವರೂ ನಾನು ಒಳರೋಗಿಯಾಗುವುದು ಕ್ಷೇಮಕರವೆಂದು ಸೂಚಿಸಿದ್ದರು. ಆದರೆ ಪ್ರಕಾಶನ ಮನೆಯವರಿಗೆ (ಇನ್ನೂ ಅವಿವಾಹಿತನಾಗಿದ್ದ ಆತ ಮಂಗಳೂರಿನಲ್ಲಿ ಅಕ್ಕನ ಮನೆಯಲ್ಲಿದ್ದ) ತಿಳಿಸುವ ನೆಪ ಹಿಡಿದು ಮತ್ತೆ ಬೈಕ್ ಚಲಾಯಿಸಿಕೊಂಡೇ ಉರ್ವಕ್ಕೆ ಹೋದೆ. ಅಲ್ಲಿಗೆ ಬರಿಯ ಸುದ್ದಿ ಮುಟ್ಟಿಸಿದ್ದಲ್ಲ, ಅವರ ಅಂಗಳದಲ್ಲೇ ಮತ್ತೊಮ್ಮೆ ವಾಂತಿ ಮಾಡಿ ಸಾಕಷ್ಟು ಗಾಬರಿಯನ್ನೂ ಮುಟ್ಟಿಸಿದ್ದೆ! (ಆಗ ನಾನೂ ಅವಿವಾಹಿತ ಮತ್ತು ಸ್ವತಂತ್ರವಾಗಿ ಒಂದು ಬಾಡಿಗೆ ಕೋಣೆಯಲ್ಲಿ ವಾಸಿಸಿದ್ದೆ.) ಇಷ್ಟಾದ ಮೇಲೆ ನನ್ನ ಗರ್ವ ಬಿರಿದು, ಒಬ್ಬನೇ ರಾತ್ರಿ ಕಳೆಯಲು ಧೈರ್ಯ ಬಾರದೆ ಸೋದರ ಮಾವನ (ಎ.ಪಿ. ಗೌರಿಶಂಕರ) ಮನೆ ಸೇರಿಕೊಂಡೆ. ಮತ್ತೆ ಒಂದೋ ಎರಡೋ ದಿನ ಅಂಗಡಿ ರಜೆ ಮಾಡಿ, ಮನೆಯಲ್ಲೇ ಮಲಗಿ ಚೇತರಿಸಿಕೊಂಡೆ. (ಇದಾಗಿ ನಲವತ್ತೆರಡು ದಿನಗಳನಂತರ ನಡೆದ ನನ್ನ ಮದುವೆಯಂದೂ ಕಾಲಿನಲ್ಲಿ ಪ್ಯಾಂಟು ಸುಟ್ಟ ಗಾಯ ಎಲ್ಲರೂ ವಿಚಾರಿಸಿಕೊಳ್ಳುವಂತಿತ್ತು!)
ಮಧು ಮಧುರ, ಮಧುಪ ಚುಂಬನ ?
[ಅಂದು ನಮ್ಮ ತಂಡ ಗುಹಾಶ್ರಮ ಸೇರುತ್ತಿದ್ದಂತೆ ಕರ್ತವ್ಯಪ್ರಜ್ಞೆ ವಿಪರೀತ ಕಾಡಿ ಬಸವರಾಜು ಮುಂದಾಗಿಯೇ ಭಟ್ಕೋಟಿಯನ್ನು ಹೊರಡಿಸಿಕೊಂಡು ಮಂಗಳೂರಿಗೆ ಧಾವಿಸಿದ್ದರು. ಮತ್ತೆ ನಾನು ಇಲ್ಲೇ ಮೊದಲ ಭಾಗದಲ್ಲಿ ಹೇಳಿದಂತೆ ಆ ರಾತ್ರಿ ಎಂಟು ಗಂಟೆಯ ಸುಮಾರಿಗೆ ಆಕಾಶವಾಣಿಯಲ್ಲಿ ನೇರ ಪ್ರಸಾರವಾಗಲಿದ್ದ ಕುಮಾರವ್ಯಾಸ ಭಾರತ ವಾಚನ/ವ್ಯಾಖ್ಯಾನವನ್ನೂ ಯಶಸ್ವಿಗೊಳಿಸಿದ್ದರಂತೆ. ಮುಂದೆ ನಾನವರಿಗೆ ಈ ಜೇನ್ನೊಣದ ಕಥನವನ್ನು ಸಾರ್ವಜನಿಕ ಪಾಠವಾಗಿ ರೂಪಿಸಿ ಪ್ರಸರಿಸಲು ಕೇಳಿಕೊಂಡಿದ್ದೆ – ಏನು ಮಾಡಿದರೋ ನೆನಪಿಲ್ಲ. ಆದರೆ ವರ್ಷ ಕಳೆಯುವುದರೊಳಗೆ ಅದೇ ನನ್ನ ಮಾವ ಗೌರೀಶಂಕರರ ಮಗ – ಸುಬ್ರಹ್ಮಣ್ಯನ, ಎಳೆಯರ ತಂಡವೊಂದು (ಪಿಯುಸಿ ವಿದ್ಯಾರ್ಥಿಗಳು) ಕುದುರೆಮುಖ ಶಿಖರಕ್ಕೆಂದು ಹೊರಟವರು ನಾವೂರಿನ ಕಾಡಿನಲ್ಲೇ ಜೇನ ಹಿಂಡಿಗೆ ಸಿಕ್ಕಿ ನರಳಿದ ಕಥೆ, ಸಂತ ಮೇರಿ ದ್ವೀಪದಲ್ಲಿ ಪಿಕ್ನಿಕ್ ನಡೆಸುತ್ತಿದ್ದವರು ತೆಂಗಿನ ಮರದಲ್ಲೆಲ್ಲೋ ಯಾರ ಗಮನಕ್ಕೂ ಬಾರದಂತೆ ನೇತಾಡುತ್ತಿದ್ದ ಹೆಜ್ಜೇನ ಮೂಟೆ ಕಳಚಿಬಿದ್ದಾಗ ಅತಿಮರ್ಯಾದಸ್ಥರೂ ಸಚೇಲ ಸಮುದ್ರ ಸ್ನಾನ ಮಾಡಿದ ಕಥೆ, ಬಂಗಾರಡ್ಕದ ಚಿಕ್ಕಪ್ಪ (ಮಹಾಬಲ ಭಟ್) – ಜೇನು ಸಂಗ್ರಹದಲ್ಲಿ ಹಳೆಯ ಹುಲಿ, ಒಮ್ಮೆ ಪೆರಿಯನ (ಹೆಜ್ಜೇನಿಗೆ ಸ್ಥಳೀಯ ಹೆಸರು) ಕುಯ್ಲಿಗೆ ಹೋಗಿ ಆಯ ತಪ್ಪಿ, ಹಿಗ್ಗಮುಗ್ಗಾ ಹೊಡೆಸಿಕೊಂಡ ಘಟನೆ, ಮೈಸೂರು ಬೆಂಗಳೂರಿನಂಥಾ ನಗರಗಳಲ್ಲಿ ಗಗನಚುಂಬೀ ಕಟ್ಟಡಗಳಲ್ಲಿ ಶಾಂತವಾಗಿ ಜೋತುಬಿದ್ದಂತೆ ಕಂಡರೂ ಗಿಡುಗನ ಹೊಡೆತಕ್ಕೋ ಬೀದಿಬದಿಯ ಕಸ ಸುಟ್ಟೆದ್ದ ಹೊಗೆಯ ಘಾಟಿಗೋ ಕೆರಳಿ ಅಮಾಯಕರನ್ನು ಅಟ್ಟಿ ಕುಟ್ಟಿದ ವರದಿಗಳೂ ಬರುತ್ತಲೇ ಇವೆ. ಇಂಗ್ಲಿಶಿನ ಸ್ವಾರ್ಮ್ ಎನ್ನುವ ಚಿತ್ರವಂತೂ ಭಾರೀ ಭಯಾವಹ ಜನಪ್ರಿಯತೆಯನ್ನೂ ಗಳಿಸಿತು. ಸೆಪ್ಟೆಂಬರ್ ೧೯೮೦ರ ಕಸ್ತೂರಿಯಲ್ಲಿ ಮಧುಚುಂಬನದ ಹೆಸರಿನಲ್ಲೇ ನಾನೊಂದು ಲೇಖನವನ್ನೂ ಪ್ರಕಟಿಸಿದೆ. ಆದರೆ ಸ್ಪಷ್ಟ ಅನುಭವದ ಪಾಠ, ಪ್ರಚಾರದ ಮೂಲಕ ಜನಜಾಗೃತಿಯಾದದ್ದು ಮಾತ್ರ ಸಾಲದೆಂಬ ವಿಷಾದ ನನಗುಳಿದೇ ಇದೆ.]
ಹೆಜ್ಜೇನಿನಿಂದ ಕಡಿಸಿಕೊಂಡು ಬದುಕಿ ಬಂದವರಿಗೆ ಮಾತ್ರ ಗೊತ್ತು ಈ ಪಾಡು! ನನ್ನ ಸಂಗ್ರಹದಲ್ಲಿ ಇದ್ದ ಒಂದುಗಾದೆ ಹೀಗೆ ಮಾರ್ಪಾಡಾಗಿದೆ! ” ಕಾಡು ಗುಡ್ಡ ಸುತ್ತುವ ಸಜ್ಜನರ ಸಂಗವದು ಹೆಜ್ಜೇನು ಕಡಿದಂತೆ! “ನಾನೀಗ ಹೆಜ್ಜೇನಿನ ಹೆಸರು ಕೇಳಿದರೆ ….ಬಲಿಪು!!
ಅದ್ಭುತ ಅನುಭವ.ನಾನು ಆ ಕಸ್ತೂರಿಯನ್ನು ಓದಿಲ್ಲ.ಈಗ ತಿಳಿಯಿತು.ಇನ್ನೂ ಹಳೆಯ ಅನುಭವವನ್ನು ಬರೆಯಿರಿ.
ಅನುಭವ ಕಥನಗಳು ಮುಂದುವರಿಯಲಿ. ಇವನ್ನು ಬಲು ಖುಷಿಯಿಂದ ಓದುವವರಲ್ಲಿ ನಾನೂ ಒಬ್ಬ.
ಹೆಜ್ಜೇನಿನ ಕಡಿತದ ಅನುಭವ ಚೆನ್ನಾಗಿ ವರ್ಣಿಸಿರುವಿರಿ. ನನ್ನ ತ೦ದೆಯವರು ಖಾಧಿಗ್ರಾಮೋದ್ಯೋಗದ ಜೇನು ಖಾತೆಯಲ್ಲಿ ಸೇವೆ ಸಲ್ಲಿಸಿದವರು. ೬೦ ರ ದಶಕದಲ್ಲಿ ನನ್ನ ಬಾಲ್ಯದ ಕೆಲವು ವರುಷ ಧಾರವಾಡದಲ್ಲಿ ಕಳೆದಿರುವಾಗ ನಮ್ಮ ಮನೆಯ ಮು೦ದಿನ ತೋಟದಲ್ಲಿ ತ೦ದೆಯವರು ಅನೇಕ ಜೇನು ಗೂಡುಗಳನ್ನು ಇಟ್ಟಿದ್ದರು. ಆಗ ಆಗಾಗ ಜೇನು ಕಡಿಸಿಕೊ೦ಡ ಅನುಭವ ಅಲ್ಲದೆ ಜೇನು ಸವಿದ ನೆನಪು ಈಗಲೂ ಅಚ್ಹಳಿಯದೆ ಉಳಿದಿದೆ. ನಿಮ್ಮ ’ಮಧು ಚು೦ಬನ’ ಲೇಖನ ಓದುವಾಗ ನನ್ನ ಬಾಲ್ಯವನ್ನು ನೆನಪಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
ನಿಮ್ಮ ಕ್ಷಣ ಕ್ಷಣದ ವರ್ಣನೆ ಓದುವಾಗ ಸ್ವತಹ ಹೆಜ್ಜೇನಿನಿಂದ ಕಡಿಸಿಕೊಂಡ ಅನುಭವಾಯಿತು. ಬಹುಶ ನೀವು ಮತ್ತು ನಿಮ್ಮ ಬಳಗ ಅಂದು ಪಟ್ಟ ಪಾಡು ಯಾವ ಶತ್ರುವಿಗೂ ಬೇಡ!
ಸಜ್ಜನರ ಸಂಘವದು ಹೆಜ್ಜೇನು 'ಸವಿದಂತೆ' ಎನ್ನುವದನ್ನು ಕಹಿ ಅನುಭವಗಳಿಂದ ಬೇಸತ್ತ ಹಿರಿಯರೊಬ್ಬರು ಹೆಜ್ಜೇನು 'ಕಡಿದಂತೆ' ಎಂದು ಬದಲಿಸಿದ್ದರು.ನಿಮ್ಮ ಅನುಭವದಿಂದ ಅಂಥ ಬದಲಾವಣೆಯಲ್ಲಿ ಕಹಿ ಏನೂ ಇಲ್ಲ!( ತೇನೇ ಕಹಿಯೆ!) ಎಂದು ಸಮಾಧಾನವಾಯಿತು!
my memories went back to those days! i have become thirty years younger!thanks. vb
Swami, NamaskaaraThaavu kaluhisuttiruva kanthu galannu ooduthhiddene…kelavomme, nidhaana…haagagi, nanna uttara nidhaana….Kshamisi.Konajeya parichaya thumba santasada suddi.Namma jotheyalli, Manjappa, Hegde, Bhatkoti, Subban, Srinath, Thhavu, Praksh, Kulkarni Basavaraju Naanu….10 mandi, 6 bykinalli hoodaddu.Namagella uttama anubhava; jeenina chumbana vaaguvavige, attyuttama anubhava…Nanthara, thaavugalu seri, benki hullige benkihaakiddu, jeenu nonugala jhenkara, avugalannu thappisida nanthara, kelavarigi Vaanthi, LM shuruvaagi, naati aushadavannu padedavu alli ondu guhayalli.Sanjege, FM Aspatrege Daakhalu…Naanu eradu dina ward nallidde. haagiye, srinath haagu mattobbaru iddaru..Eee anubhava nammagalannu, munde kathina sandarbhagalli thaayaragalu prerepisithu…Naanu kelavu chitragalannu thegedidde; eega nannallilla.Kashatadinda, kannadadalli barediddene…NamaskaaragaluYoga
nice artilces on arohana chaarana, recalled old article in my collection by you published in thushara may be 20 years ago, nice now again on chaarana articles regardsramesh kainthaje
ಅನುಭವ ತುಂಬಾ ಚೆನ್ನಾಗಿದೆ.ನಾನು ಈ ಸ್ಥಳದ ಬಗ್ಗೆ ಬರೆದ ಲೇಖನವನ್ನು http://www.pradakshine.com/index.php?option=com_content&view=article&id=209:2012-01-24-12-26-10-&catid=40:2011-10-04-14-36-33&Itemid=60 ಚಿಟಿಕೆ ಹೊಡೆದು ನೋಡಬಹುದುಃ ಅಥವಾ http://www.pradakshine.com ಕ್ಲಿಕ್ ಮಾಡಿ ನೋಡಬಹುದು.