[ತೆರೆ ಸರಿಯುತ್ತಿರುವಂತೆ ಖಾಲೀ ಮುಖ ಹೊತ್ತ ತರುಣನೊಬ್ಬ ಪುಸ್ತಕ ವ್ಯಾಪಾರಿಯೊಬ್ಬನ ಗಲ್ಲಾದ ಎದುರು ಬಂದು ನಿಲ್ಲುತ್ತಾನೆ. ವ್ಯಾಪಾರಿ ‘ಏನ್ ಕೊಡ್ಲೀ’ ಎನ್ನುವಂತೆ ಹುಬ್ಬು ಹಾರಿಸುತ್ತಾನೆ. ತರುಣ ಏನೋ ಹುಡುಕುವವನಂತೆ ಆ ಈ ಕಿಸೆ ತಡಕಾಡುತ್ತಾ]
ತರುಣ: ಅತ್ರಿ ಬುಕ್ ಹೌಸ್!
ವ್ಯಾಪಾರಿ: ಹೂಂ, ಹೌಸ್ ಅಲ್ಲ ಸೆಂಟರ್. ಬಂದಾಯಿತಲ್ಲ, ಏನೀಗ?
ತ: ನಂಗೊಂದು ಪುಸ್ತಕದ ಬಗ್ಗೆ ಕೇಳಬೇಕಿತ್ತು
ವ್ಯಾ: ಕೇಳಿ.
ತ: ಅಯ್ಯೋ ಸಾರಿ, ಸಾರಿ [ಚರವಾಣಿ ತೆಗೆದು ಕಿರು ಸಂದೇಶದ ಗುಂಡಿ ಅದುಮಿ] ಪುಸ್ತ್ಕಾ (ಓದಲು ತಿಣುಕುತ್ತಾ) ‘ಮೇಣ, ಸೂಜೀ. . .’ ಅಲ್ಲಲ್ಲಾ ‘ಮೆಣಸೂ ಜೀರಿಗೆ. . .’
ವ್ಯಾ: ಅದೇನು ಜೀನಸು ಪಟ್ಟಿ? ಇಲ್ಲಿಲ್ಲ. ಇದು ಪುಸ್ತಕದಂಗಡಿ.

[ತರುಣ ಗಾಬರಿಯಲ್ಲಿ ಚರವಾಣಿ ಸಂದೇಶವನ್ನೇ ವ್ಯಾಪಾರಿಗೆ ತೋರಿಸಿದ – karbh kthmajri – kvp]
ವ್ಯಾ: [ಅರ್ಥವಾಗದೇ ತಲೆ ಕೊಡಹುತ್ತಾ] ಸರಿಯಾಗಿ ಒಂದು ಚೀಟಿಯಲ್ಲಿ ಬರೆದುಕೊಂಡು ಬರಬಾರ್ದಾ. ಹೋಗಲಿ, ಒಮ್ಮೆ ಸರಿಯಾಗಿ ಕೇಳಿಕೊಂಡಾದರೂ..
ತ: ಸಾರಿ ಸಾರಿ, ನಿಲ್ಲೀ [ವ್ಯಾಪಾರೀ ಕೂತೇ ಇದ್ದಂತೆ, ಆತ ಸಂದೇಶ ಕಳಿಸಿದ ಗೆಳೆಯ – ಬೃಹಸ್ಪತಿಗೇ ಕರೆ ಮಾಡಿ] ಎಂಥ ಮಾರಾಯಾ ಮೆಸೇಜ್ ಸರೀ ಕಳುಸುದಲ್ವಾ. ಹೋಗಲಿ, ಅದೆಂಥ ಪುಸ್ತಕ? ಆಂ.. ಕರ್ನಾಟ್ಕಾ ಭಾರತಾ..
ವ್ಯಾ: ಹಾಂ, ಕರ್ಣಾಟ ಭಾರತ ಕಥಾಮಂಜರಿ. ಅದೇ ಕುಮಾರ ವ್ಯಾಸನ ಭಾರತ, ಇದೆ. ಬೆಲೆ ಮೂವತ್ತು ಮಾತ್ರ.
ತ: [ಚರವಾಣಿಗದನ್ನು ಮರುಪಠಿಸಿ ಮತ್ತೆ ಬಂದ ಬೃಹಸ್ಪತಿವಾಣಿಗೆ ಈತ ಧ್ವನಿಯಾಗುತ್ತಾ] ಇಲ್ಲಾ ಕುಮಾರ ವ್ಯಾಸ ಅಲ್ಲ, ಕುವೆಂಪು ಬರ್ದಿದ್ದೇ ಕರ್ನಾಟ್ಕಾ ಭಾರತಾ ಮಂಜ್ರೀ ಬೇಕು.
ವ್ಯಾ: ಕುವೆಂಪು ಬರೆದದ್ದಲ್ಲ. ಅವರು ಮಾಸ್ತಿಯವರೊಡನೆ ಸೇರಿ ಸಂಪಾದಿಸಿದ ಕೃತಿ ಕರ್ಣಾಟ ಭಾರತ..
ತ: [ಚರವಾಣಿಗದನ್ನು ಮರುಪ್ರಸಾರ ಮಾಡುತ್ತಾ ಮಂಡೆಬೆಚ್ಚವಾಗಿ] ಛೆ, ಇವನೆಂಥ ಹೇಳ್ತಾನೆ. ಏ ಅವರಿಗೇ ಕೊಡ್ತೇನೆ. ಪ್ಲೀಸ್ ನೀವೇ ಮಾತಾಡಿ [ತನ್ನ ಬೆವರು ಹಿಡಿದ ಶರಟಿಗೆ ಚರವಾಣಿಯನ್ನು ಉಜ್ಜಿ, ವ್ಯಾಪಾರೀ ಕಿವಿಗೊಡ್ಡಲು ಮುಂದಾಗುತ್ತಾನೆ]
ವ್ಯಾ: ಇಲ್ಲ, ನಾ ಚರವಾಣಿಗೆ ಕಿವಿ ಹಚ್ಚುವುದಿಲ್ಲ, ನೀವೇ ಕೇಳಿ, ಹೇಳಿ
ತ: ಆಂ! ನಿಮ್ಮ ಹತ್ರಾ ಮೊಬೈಲ್ ಇಲ್ವಾ?
ವ್ಯಾ: ಇಲ್ಲ.
ತ: ಮತ್ತೆ ಬಿಜಿನೆಸ್ಸು?
ವ್ಯಾ: ಇಲ್ಲೇ ಇದೆಯಲ್ಲ – ಸ್ಥಿರವಾಣಿ, ಲ್ಯಾಂಡ್ ಲೈನು.
ತ: ನೀವು ಹೊರಗೆ ಹೋದಾಗ?
ವ್ಯಾ: ಯಾವುದೇ ಕಾರಣಕ್ಕೆ ನನ್ನ ಸಂಪರ್ಕ ಬೇಕಾದವರಿಗೆ ಹೆಚ್ಚು ಕಡಿಮೆ ದಿನದ ಇಪ್ಪತ್ಮೂರು ಗಂಟೆ ನಾನು ಇಲ್ಲಿ ಅಥವಾ ಮನೆಯಲ್ಲಿ ಲ್ಯಾಂಡ್ ಲೈನಿಗೆ ಸಿಕ್ಕೇ ಸಿಗ್ತೇನೆ.
ತ: ವ್ಯಾಪಾರ ಬೇಡಾಂತಿರಲಿ, ನಿಮ್ಮ ಫ್ರೆಂಡ್ಸೂ ರಿಲೇಟಿವ್ಸೂ?
ವ್ಯಾ: ನನ್ನ ಪ್ರಯಾಣದಲ್ಲಿ, ರಜಾ ದಿನಗಳಲ್ಲಿ ನಾನು ಮುಖತಃ ಸಿಗಬೇಕಾದವರಿಗೆ ಸಿಕ್ಕರೆ ಸಾಕು. ಒಂದೋ ಅವರ ಜೊತೆಗೇ ಇರ್ತೇನೆ. ಇಲ್ಲವೇ ನನ್ನ ಕಾರ್ಯಕ್ರಮ ಅಂದಾಜಿಸಿಕೊಂಡು ಮತ್ತೆ ನಾನು ಅಂಗಡಿಗೋ ಮನೆಗೋ ಬರುವವರೆಗೆ ಕಾದಿರ್ತಾರೆ. ನನ್ನತ್ರ ಕ್ಷಣ ಮಾತ್ರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದ ಯಾವ ವಹಿವಾಟೂ ಇಲ್ಲ.
ತ: [ಪೆಚ್ಚಾಗಿ, ಚರವಾಣಿಗೆ] ಇಲ್ಲಾ ಅವರು ಮೊಬೈಲ್ ತಗಳಲ್ಲಾಂತೆ. ನೀ ಹೇಳು [ಇನ್ನೆಲ್ಲ ಬೃಹಸ್ಪತಿಗೂ ವ್ಯಾಪಾರಿಗೂ ನಡುವೆ ಸಾಕಷ್ಟು ‘ಆಂ, ಹಾಂ’ ಸಹಿತ ತರುಣ ಮತ್ತು ಚರವಾಣಿ ಕಲ್ಪಿಸಿಕೊಳ್ಳಿ]
ಬೃಹಸ್ಪತಿ: ಸಾರ್, ಅದು ಕುವೆಂಪೂನೇ ಬರ್ದಿದ್ದಾಗಬೇಕು, ನನ್ನಪ್ಪಂಗೆ. ಕುಮಾರವ್ಯಾಸ, ಮಾಸ್ತಿ ಎಲ್ಲಾ ಅವರು ಹೇಳಿಲ್ಲಾ.
ವ್ಯಾ: ಸ್ವಾಮೀ ಕರ್ಣಾಟ ಭಾರತ ಕಥಾಮಂಜರಿ ಅಥವಾ ಗದುಗಿನ ಭಾರತ ಅಥವಾ ಕುಮಾರವ್ಯಾಸ ಭಾರತ ಎಂದೇ ಪ್ರಚಾರದಲ್ಲಿರುವುದೆಲ್ಲಾ ಒಂದೇ. ಮತ್ತದನ್ನು ನಾಲ್ಕೈದು ಶತಮಾನದ ಹಿಂದೆಯೇ ಕುಮಾರವ್ಯಾಸನೇ ಬರೆದದ್ದೆಂದು ನಿರ್ಧಾರವಾಗಿ ಮುಗಿದಿದೆ. ಅದು ಸದ್ಯ ಮೈವಿವಿ ನಿಲಯ ಮಾತ್ರ ಕಡಿಮೆ ಬೆಲೆಯಲ್ಲಿ ಪ್ರಕಟಿಸಿದ್ದು ಲಭ್ಯ. ಅದರಲ್ಲಿ ಕುವೆಂಪು ಮತ್ತು ಮಾಸ್ತಿ ಜಂಟಿಯಾಗಿ ಸಂಪಾದಕರ ಕೆಲಸ ಮಾಡಿದ್ದಾರೆ. ಮತ್ತೆ ಕುವೆಂಪೂನೇ ಸ್ವತಂತ್ರವಾಗಿ ಬರೆದದ್ದಾಗಬೇಕೂಂದ್ರೆ ಜನಪ್ರಿಯ ವಾಲ್ಮೀಕಿ ರಾಮಾಯಣ ಅಥವಾ ರಾಮಾಯಣ ದರ್ಶನಂ ಸಿಗುತ್ತೆ. ಇನ್ನೂ ಹೆಚ್ಚು ಹೇಳಬೇಕಾದರೆ, ನಿಮ್ಮಪ್ಪನೋ ಯಾರೋ ಹೇಳಿದರೂಂತ ಕುವೆಂಪು ಹೊಸದಾಗಿ ಬರೆಯುವ ಹಾಗಿಲ್ಲ – ಪಾಪ, ತೀರಿಹೋಗಿದ್ದಾರೆ.
ಬೃ: ಹಂಗಾದ್ರೆ ಒಂದು ಕೆಲ್ಸಾ ಮಾಡಾಣಾ. ಪೀಸ್‌ಗೆ ಅದೇನೋ ಥರ್ಟಿ ರುಪೀಸ್ ಅಂದ್ರಲ್ಲಾ ಕೊಟ್ಟಿರಿ. ಅಲ್ಲಾಂತಾದ್ರೆ ರಿಟರ್ನ್ ಮಾಡ್ಲಾ?
ವ್ಯಾ: [‘ತೊಟ್ಟ ಬಾಣವನ್ನು ಮರಳಿ ತೊಡೆನು’ ಎಂಬ ಧೀರೋದಾತ್ತ ಭಾವದಲ್ಲಿ] ಒಮ್ಮೆ ಮಾರಿದವನ್ನು ನಾವು ಹಿಂತೆಗೆಯುವುದಿಲ್ಲ.
ಬೃ: ಆಯ್ತು, ಹಣ ಬೇಡಾ, ಬೇರೇನಾದರೂ ಎಕ್ಷ್‌ಚೇಂಜೂ..
ವ್ಯಾ: [ಹತಾಶೆಯ ಶಿಖರದಲ್ಲಿ] ಎಕ್ಸ್ಚೇಂಜಿನಲ್ಲಿ ರಿಟರ್ನ್ ಸೇರಿಕೊಂಡಿಲ್ವಾ? ಇಲ್ಲ, ಬೇಕಾದರೆ ನಿಮ್ಮಪ್ಪನ್ನೇ ಇಲ್ಲಿಗೆ ಕರ್ಕೊಂಡು ಬಂದು ತೋರಿಸಿ.
ಬೃ: ಬಿಜಿನೆಸ್‌ನವ್ರು ಹೀಗೆ ಹೇಳಿದರೆ ಹೇಗೆ! ನಾವೂ ಎಜುಕೇಟೆಡ್ ಸಾರ್. ನಾವೂ ತುಂಬಾ ಬುಕ್ಸ್ ಕಲೆಕ್ಟ್ ಮಾಡಿದ್ದೀವಿ. ನಂ ಮನೇನಲ್ಲೂ..
ವ್ಯಾ: [ನೋಡಿ ಸ್ವಾಮೀ ನಾವಿರೋದು ಹೀಗೆ]
ತ: ಹೋಗ್ಲಿ ಬಿಡಿ, ಅಪ್ಪಂಗೇ ಕಾಲ್ ಮಾಡಕ್ಕೆ ಹೇಳ್ತೇನೆ.
[ಮಿನಿಟು ಬಿಟ್ಟು, ಅಲ್ಲೇ ಠಳಾಯಿಸಿಕೊಂಡಿದ್ದ ತರುಣನದ್ದೇ ಚರವಾಣಿ ಮೂಲಕ ಬೃಹಸ್ಪತಿಯ ಅಪ್ಪನ ಪ್ರವೇಶ]
ಅಪ್ಪ: ಸ್ವಾಮೀ ಗುರ್ತು ಸಿಕ್ತಾ? ಹೋದವರ್ಷಾ ಕೋಳಿಕ್ಕೆಮಲೆಯಿಂದ ಬಂದಿದ್ದೆ. ಗೋಥಾ ಪ್ರೆಸ್, ಗೀರಕ್ ಪುರದ್ದು ದೊಡ್ಡ ಭಗವದ್ಗೀತೇ, ಎರಡು ಸಂಪುಟದ್ದು ಕೊಂಡ್ಕೊಂಡಿದ್ದೆ, ನೆನಪಾಯ್ತಾ? ಈ ಸಲಾ ದೊಡ್ಡ ಕಥೆಯನ್ನೇ ಕೊಳ್ಳಣಾಂತ. ಅದ್ಕೇ ಕುವೆಂಪೂನೇ ಬರೆದ ಕರ್ನಾಟ್ಕಾ ಭಾರತಾ..
ವ್ಯಾ: [ಯಥಾವಕಾಶ ‘ಅಂದಾಜಾಗುತ್ತೆ, ಹೂಂ, ಹೇಳೀ’ ಸೇರಿಸಿಕೊಳ್ಳುತ್ತಾ ಬಂದು, ಕೊನೆಯಲ್ಲಿ ಹಿಂದೆ ಬೃಹಸ್ಪತಿಗೆ ಮಾಡಿದ ‘ಪಾಠ’ವನ್ನೇ ಸ್ವಲ್ಪ ಎತ್ತರಿಸಿದ ಧ್ವನಿಯಲ್ಲಿ – ‘..ಕರ್ನಾಟ ಭಾರತ ಕಥಾಮಂಜರಿ ಅಥವಾ ಗದುಗಿನ ಭಾರತ ಅಥ..,’ ಮುಂದುವರಿಯುತ್ತಾ] ಸ್ವಾಮೀ ಹಿಂದಿನವರು ತಾಳೆಗರಿಯ ಮೇಲೆ ಬರೆದದ್ದನ್ನು ಕಾಲಾನುಕ್ರಮದಲ್ಲಿ ಹಲವರು ಪ್ರತಿ ಮಾಡಿಕೊಳ್ಳುತ್ತಾ ಬಂದರು. ಅವುಗಳಲ್ಲಿ ಕೆಲವು ಈ ಮುದ್ರಣದ ಕಾಲದವರೆಗೂ ಉಳಿದು ಬಂದಿವೆ. ಪ್ರತಿಕಾರರ ಓದಿನ ದೋಷ, ಬರವಣಿಗೆಯ ತಪ್ಪು ಮತ್ತು ಸ್ವಂತ ಪ್ರತಿಭೆಯ ಸೇರ್ಪಡೆಗಳು ಈ ಪ್ರತಿಗಳಲ್ಲಿ ಧಾರಾಳವಿರುತ್ತವೆ. ಸಂಪಾದಕರಾದವರು ಲಭ್ಯ ಪ್ರತಿಗಳೆಲ್ಲವನ್ನು ಒಟ್ಟು ಮಾಡಿ, ಪದಪದವನ್ನು ವೈಜ್ಞಾನಿಕವಾಗಿ ಹಿಂಜಿ, ಮೂಲಕ್ಕೆ ಅತ್ಯಂತ ಹತ್ತಿರದ ಪ್ರತಿಯೊಂದನ್ನು ನಿಷ್ಕರ್ಷಿಸಿ, ಮುದ್ರಣಕ್ಕೆ ಶಿಫಾರಸು ಮಾಡುತ್ತಾರೆ. ಹೀಗೆ ಕುಮಾರವ್ಯಾಸನನ್ನು ಈ ಕಾಲಕ್ಕೆ ಶುದ್ಧಮಾಡಿದವರು ಕುವೆಂಪು ಮತ್ತು ಮಾಸ್ತಿ. ಅವರು ಬೇರೆ ಸುಮಾರು ಬರೆದವರೇ ಆದರೂ ಕರ್ಣಾಟ ಭಾರತ ಕಥಾಮಂಜರಿ ಬರೆದವರಲ್ಲ.
ಅ: ಅಯ್ಯೋ ಅಯ್ಯೋ ಕ್ಷಮಿಸಿ, ಇದೆಲ್ಲಾ ನನಗ್ಯಾಕೆ ಹೇಳ್ತೀರಾ! ನಿಜಾ ಹೇಳಬೇಕಂದ್ರೇ ಹೋದವರ್ಷ ಭಗವದ್ಗೀತೇನೂ ಈ ಸಲ ಈ ಕರ್ನಾಟ್ಕಾ ಭಾರತಾ ಅಲ್ಲಲ್ಲ ಕರ್ಣಾಟ ಭಾರತಾನೂ ನಂಗಲ್ಲಾ. ಇವೆಲ್ಲಾ ನನಗೆಲ್ಲಿ ಅರ್ಥಾ ಆಗುತ್ತೆ ಬಿಡಿ. ನನ್ನಪ್ಪನ ತಿಥಿಗೆ ಭಟ್ಟ್ರಿಗೆ ದಾನ ಕೊಡಬೇಕಲ್ಲಾ ಅದ್ಕೆ. ಈಗ ಒಂದು ಕೆಲ್ಸಾ ಮಾಡಾಣಾ. ನಿಮ್ಮ ಮೊಬೈಲ್ ನಂಬರ್ ಕೊಟ್ಟಿರಿ..
ವ್ಯಾಪಾರಿ: ನನ್ನತ್ರ ಚರವಾಣಿ ಇಲ್ಲ. [ಮುಂದೆ, ಮೊದಲು ಬೃಹಸ್ಪತಿಯ ಪ್ರಶ್ನೆ ‘ನಿಮ್ಮತ್ರ ಮೊಬೈಲ್ ಇಲ್ವಾ’ಗೆ ಹೇಳಿದ್ದನ್ನೇ ಹೇಳಿ….] ಈಗ ನಾನು ಒಂದು ಕೆಲ್ಸಾ ಹೇಳ್ತೀನಿ, ಮಾಡಿ. ನನ್ನಲ್ಲಿ ‘ಗಿಫ್ಟ್ ಕೂಪನ್’ ಅಂದರೆ ಪುಸ್ತಕ ಉಡುಗೊರೆ ಚೀಟಿ ಇದೆ. ನೀವು ದಾನ ಕೊಡಲು ಸಿದ್ಧವಿರುವಷ್ಟು ಹಣ ಕೊಟ್ಟು ಅದನ್ನು ಖರೀದಿಸಿ ಭಟ್ಟರಿಗೆ ಕೊಟ್ಟುಬಿಡಿ. ಮತ್ತವರು ಇತ್ತ ಬಂದಾಗ ಎಲ್ಲಾ ಪುಸ್ತಕ ನೋಡಿ ಬೇಕಾದ್ದನ್ನೇ ಚೀಟಿ ವಿನಿಮಯಕ್ಕೆ ಪಡೆದುಕೊಳ್ಳಬಹುದು. ಅವರು ಬೇಕಾದರೆ ಹೆಚ್ಚಿನ ಮೌಲ್ಯದ ಪುಸ್ತಕವನ್ನು ಕೇವಲ ವ್ಯತ್ಯಾಸ ಮಾತ್ರ ಕೊಟ್ಟೂ ಕೊಳ್ಳಬಹುದು. ಈ ಚೀಟಿಗೆ ಕಾಲದ ನಿರ್ಬಂಧವೇನೂ ಇಲ್ಲ. ಅಂಗಡಿ ಇರುವವರೆಗೆ ಯಾವತ್ತೂ ಪುಸ್ತಕಕ್ಕೆ ವಿನಿಮಯಿಸಿಕೊಳ್ಳಬಹುದು. ಹಣ ಮಾತ್ರ ವಾಪಾಸು ಕೊಡೋದಿಲ್ಲ.
ಅಪ್ಪ: ಏ ಅದೆಲ್ಲಿ ಆಗ್ತದೆ. ದಾನ ಕೊಡುವಾಗ ಬರೀ ಚೀಟಿ ಕೊಡುವುದು ಸರಿಯಾಗುದಿಲ್ಲ. ಮತ್ತದನ್ನವರು ಕಳಕೊಂಡ್ರೆ?
ವ್ಯಾಪಾರಿ: ಈ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲೂ ಚಿನ್ನ, ಬೆಳ್ಳಿ ಚಲಾವಣೆಯಲ್ಲಿ ಇಲ್ಲ. ಆದ್ರೂ ಒಂದು ಮೊಳೆ, ಒಂದು ಬ್ಲೇಡಿನ ಉಪಯೋಗಕ್ಕೂ ಬಾರದ ಲೋಹದ ತುಂಡು ನಾಣ್ಯಾಂತ, ಮತ್ತೆ ನಾಲ್ಕು ಅಕ್ಷರ ಬರೆಯುವುದಕ್ಕೂ ದಕ್ಕದ ಕಾಗದ ಹರಕು ನೋಟೂಂತ ‘ಸುವರ್ಣ ದಾನಂ’ ಹೆಸರಿನಲ್ಲಿ ಮಾನ್ಯವಾಗುತ್ತಿಲ್ಲವಾ? ನಮ್ಮ ಚೀಟಿಯೂ ನೀವು ಕೊಟ್ಟ ಮೌಲ್ಯದ ಒಂದು ನೋಟಿದ್ದ ಹಾಗೇ – ಅದನ್ಯಾಕೆ ಕಳೆದುಕೊಳ್ಳಬೇಕು?!
ಅಪ್ಪ: ದಕ್ಷಿಣೆ ಬೇರೆ, ದಾನ ಬೇರೆ. ದಾನ ಕೊಡುವಾಗ ಎಲ್ಲರೂ ಗಾತ್ರ ನೋಡ್ತಾರೆ. ಬರೀ ಚೀಟಿ ಕೊಡುವುದು ಹ್ಯಾಗೆ?
ವ್ಯಾಪಾರಿ: ಬೇಡ, ಚೀಟಿಯನ್ನೇ ದೊಡ್ಡ ಡಬ್ಬಿಯೊಳಗೆ ಪ್ಯಾಕ್ ಮಾಡಿ ಕೊಡಿ. ಬೇಕಾದ್ರೆ ಭಟ್ಟರ ಕಿವಿಯಲ್ಲಿ ಒಂದು ಮಾತು ಹೇಳಿಯೇ ಕೊಡಿ.
ಅಪ್ಪ: ಛೆ, ನಿಮ್ಮತ್ರ ಮಾತು ಭಾಳ ಕಷ್ಟ. [ಮುಂದೆ ತರುಣನಿಗೆ ಸೂಚನೆ ಕೊಟ್ಟಿರಬೇಕು]
ತ: ನಿಮ್ಮ ವಿಸಿಟಿಂಗ್ ಕಾರ್ಡ್ ಕೊಟ್ಟಿರಿ. ಅವರು ಭಟ್ಟ್ರಿಗೇ ಫೋನ್ ಮಾಡಕ್ಕೆ ಹೇಳ್ತಾರಂತೆ.
ವ್ಯಾ: ನಂದು ಕಾರ್ಡಿಲ್ಲ. ಫೋನ್ ನಂಬರ್ ಬೇಕಾದರೆ ಬರೆದುಕೊಳ್ಳಿ.
ತ: ಅರೆ, ಮತ್ತೆ ಯಾರಿಗಾದರೂ ಇಲ್ಲಿನ ಅಡ್ರೆಸ್, ಫೋನೂ ತಿಳೀ ಬೇಕಾದ್ರೇ..
ವ್ಯಾ: ಪುಸ್ತಕ ಕೊಂಡವರಿಗೆ ಹೇಗೂ ಬಿಲ್ ಕೊಡ್ತೇನೆ, ಅದರಲ್ಲಿ ಎಲ್ಲಾ ಇದೆ. ಮತ್ತೆ ಹೆಚ್ಚಾಗಿ ಪ್ರತೀ ಪುಸ್ತಕಕ್ಕೆ ನಮ್ಮ ಸೀಲ್ ಹಾಕ್ತೇವೆ – ಅದರಲ್ಲೂ ಹೆಸರು, ದೂರ್ವಾಣಿ ಇದೆ. ಏನೂ ಇಲ್ದೇ ಬೇಕೆಂದವರಿಗೆ ಚೀಟಿಯಲ್ಲಿ ಬರೆದು ಕೊಡಬಲ್ಲೆ.
ತರುಣ: [ಆತ ಚರವಾಣಿಗೆ ಸಂಖ್ಯೆ ತುಂಬಿಕೊಳ್ಳಲು ಸಜ್ಜುಗೊಳಿಸುತ್ತಾ] ಆಯ್ತಾಯ್ತು. ಚೀಟಿ ಬೇಡ, ನಂಬರ್ ಹೇಳಿ.
ವ್ಯಾಪಾರಿ: ೨೪೨೫೧೬೧
ತರುಣ: ಟೂ ಫ಼ೋರ್ ಟೂ?
ವ್ಯಾ: ಫ಼ೈವ್ ಒನ್ ಸಿಕ್ಸ್ ಒನ್.
ತ: ಫೈವ್ ಒನ್ನ್?
ವ್ಯಾ: ಸಿಕ್ಸ್ ಒನ್.
ತ: ಕೋಡೂ?
ವ್ಯಾಪಾರಿ: ೦೮೨೪
ತರುಣ: ವರ್ಕಿಂಗ್ ಅವರ್ಸೂ?
ವ್ಯಾಪಾರಿ: ಎಂಟೂವರೆಯಿಂದ ಒಂದು. ಎರಡೂವರೆಯಿಂದ ಎಂಟು.
ತ: ಸಂಡೇ?
ವ್ಯಾ: ಪೂರ್ತಿ ರಜೆ.
ತರುಣ: ಹೂಂ, ಒನ್ ತರ್ಟೀ ಟು ಟೂ ಲಂಚ್ ಬ್ರೇಕ್, ಸಂಡೇ ಹಾಲಿಡೇ..
ವ್ಯಾಪಾರಿ: ಅಲ್ಲ, ಮಧ್ಯಾಹ್ನ ಬಿಡುವು ಒಂದರಿಂದ ಎರಡೂವರೆ
ತರುಣ: ಹಾಂ, ಸರಿಸರಿ ಒನ್ ಟು ಟೂ ತರ್ಟೀ.
[ಎಗ್ಸಿಟ್, ದಿ ಎಂಡ್. ಅಲ್ಲಲ್ಲ ನಿರ್ಗಮಿಸುತ್ತಾನೆ, ಮುಗಿಯಿತು!]

ದೃಶ್ಯ ಎರಡು:

ಮೈಸೂರಿಗೆ ಹೋಗುತ್ತಿದ್ದ ನಿಶಾಚರಿ ಬಸ್ಸಿನಲ್ಲಿ ಎಲ್ಲರೂ ಗಾಢ ಮಂಪರೋ ಅರೆಬರೆ ನಿದ್ರೆಯಲ್ಲೋ ಇದ್ದಂತೆ ಒಂದು ಸಣ್ಣ ಕಿಣಿಕಿಣಿ. ಹಿಂಬಾಲಿಸಿದಂತೆ, ಮೆಲುದನಿಯಲ್ಲೇ ಆದರೂ ಆಚೀಚಿನ ನಾಲ್ಕು ಮಂದಿಗೆ ಕೇಳದಿರಲು ಸಾಧ್ಯವಿಲ್ಲದಂತೆ..
“ಹಲೋ ಹಲೋ. ಯಾರು, ರಾಜೂನಾ. ಹಾಂ ಬರ್ತಾ ಇದ್ದೀನೀ. ಇದು ಎಲ್ಲಪ್ಪಾ, ತಡೀ ಹೊರ್ಗೆಲ್ಲಾ ಬಾರೀ ಕತ್ಲೇ ಕಣೋ. ಇಲ್ಲಾ ಹುಣ್ಸೂರು ಕಳೆದು ತುಂಬಾ ಹೊತ್ತಾಯ್ತು. ದೂರದೂರದಲ್ಲಿ ಮಿಣುಕು ದೀಪಾನೇನೋ ಕಾಣ್ಸುತ್ತೆ ಆದ್ರೆ ಹತ್ತಿರದ ದೀಪ, ಬೋರ್ಡೂ ದಾಟೋವಾಗ ಓದಕ್ಕಾಗ್ತಾ ಇಲ್ಲ. ಅದಿರ್ಲೀ ಏನಾರಾ ಕಂಡ್ರೆ ತಿಳಿಸ್ತೀನಿ. ಇನ್ನೇನ್ ಸಮಾಚಾರ? ಏ ಈ ಸತ್ಯಾ ಏನ್ಮಾಡ್ತಾ ಇದ್ದಾನೀಗ? ಇಲ್ಲ, ಅವನಲ್ಲ, ಒಂಟಿಕೊಪ್ಪಲ್ ಕಡೇಂದ ಬರ್ತಾ ಇದ್ದ ನೋಡು, ಕುಳ್ಳಕ್ಕೆ, ಲ್ಯಾಂಗ್ವೇಜ್ ಕ್ಲಾಸಲ್ಲಿ ಸುಳ್ಳು ಹೇಳಿ ಜೀಎಸ್ಸೆಮ್ ಕೈಲೀ ‘ಸತ್ಯಾ ಈಸ್ ಶಾರ್ಟ್ ಬಟ್ ನಾಟ್ ಟ್ರೂ’ ಅಂತಾ ಉಗುಸ್ಕೊಂಡಿದ್ದಾ ನೋಡು. ಹೂಂ ಅವ್ನೇ. ಓ ಪರ್ವಾಗಿಲ್ಲ್ವೇ. ಅವನ ಬಕ್ರೀ ಏನಾದ್ಲೂ. ಹೂಂ ಇವನ್ ಒನ್ವೇ ಲವ್ವೂ ಅವಳ್ಗೇನ್ ಗೊತ್ತಾಗ್ಬೇಕು. ಅರೆ ಇದೇನಪ್ಪಾ ಇಲ್ವಲಾಂತ ಬೋರ್ಡ್ ಓದ್ದಂಗಾಯ್ತು. ನಾನೆಲ್ಲೋ ಮೈಸೂರೇ ಬಂತೇನೋಂತ ಗಾಬ್ರಿಪಟ್ನೋ. ಸಿಟಿ ಇಷ್ಟೊಂದು ಬೆಳೆದ್ಬಿಟ್ಟಿದ್ಯೇನೋ..”

ಬಸ್ಸಿಗೆ ಸೈಡ್ ಕೊಡ್ದೇ ಎದುರು ಗುರಗುಡುತ್ತಿದ್ದ ಅಜ್ಜಲಾರಿಯನ್ನು ಕಿವಿ ಕತ್ತರಿಸುವ ಹಾರನ್ನ್ ಬಲದಲ್ಲೇ ಕರೆಗೊತ್ತಿ ಸಾಗುವಾಗ ಒಂದು ಹಂಪ್ ಬೇರೇ ಸಿಕ್ಕಿ, ಸಣ್ಣ ದಢಲ್. ಮುಂದುವರಿಯಿತು ಅಜ್ಞಾತವಾಣಿಯಿಂದ ಅಶರೀರವಾಣಿಗೆ ವಾಕ್ಸರಣಿ “ಥೂ! ಈ ಡ್ರೈವರ್ಸ್ಗ್ಯಾಕಿಷ್ಟು ಆತ್ರಾ. ನೋಡು, ಹೊರಡೋ ಹೊತ್ಗೇ ಕಾಲರ್ಧ ಗಂಟೆ ಲೇಟು. ಮಡ್ಕೇರಿ ಘಾಟಿ ಹತ್ಬೇಕಾದ್ರೇ ಅದ್ಯಾರೋ ಪ್ರಾಯಸ್ಥರು ಮೂತ್ರಾ ಮಾಡ್ಬೇಕು ಸ್ವಲ್ಪ ನಿಲ್ಸಪ್ಪಾಂದ್ರೆ ಇವನಪ್ಪನ್ ಗಂಟು ಹೋದಾಗ್ ಮಾಡ್ದಾ. ಹೂಂ, ನಿಲ್ಲ್ಸಿದ್ದಾ ಏನೋ ದುರ್ದಾನಾ ತೊಗೊಂಡೋನ್ ಹಾಗೆ. ಆದ್ರೆ ಕುಶಾಲ್ನಗರದ ಪೇಟೆ ಮಧ್ಯದಲ್ಲಿ ಅದೇನೋ ಡಬ್ಬಾ ಹೋಟ್ಲೆದ್ರು ಅವಂದೇ ಆಯ್ಕೇಲಿ ಅರ್ಧ ಗಂಟೆ ನಿಲ್ಸಿದ್ದ. ಡ್ರೈವರ್ಗೆ ಫ್ರೆಶ್ ಆಗ್ಬೇಕಂತೇ. ಹೂಂ, ಇವರುಗಳೆಲ್ಲಾ ನೈಟ್ ಡ್ಯೂಟೀ ಇದ್ರೂನೂ ಡೇ ಟೈಮೆಲ್ಲಾ ಏನೇನೋ ಕಾಸ್ಮಾಡ್ಕೊಂಡೂ ಇಲ್ಲ್ ಹಾಬೀ ಹಾಗೆ ಬಂದು ನಿದ್ರೇಂತಾರೆ. ಏನಂದೀ? ಹೌದಾ? ಖಾಲಿ ಕಂಡಕ್ಟರ್ ಒಬ್ನೇ ಅಷ್ಟೊಂದು ಮಾಡ್ಕೊಂಡಿದ್ನಾ? ಲೋಕಾಯುಕ್ತ ಇರೋ ಹೊತ್ಗೆ ಅಷ್ಟಾದ್ರೂ ತಿಳೀತು ಬಿಡು. ಆ ಕುಶಾಲ್ನಗ್ರದಲ್ಲಿ ರೀಸೆಸ್ಗೆ ಹೋಗೋಣಾಂದ್ರೂ ಸೈಡ್ಗೆಲ್ಲೂ ಕಾಲಿಡಂಗಿಲ್ಲ, ಥೂ ಅಸಯ್ಯಾ! ಹೂಂ ಗೊತ್ತಲ್ಲಾ ಬಸ್ನೋರೆಲ್ಲಾ ಅಲ್ಲಿನ ಪ್ರೇತ ಸಂಗೀತಾ ಕೇಳಸ್ಕೊಂಡು ಅದೇನ್ ಚಾನೋ ಸಕ್ರೇ ನೀರೋ ವ್ಯಾಪಾರಾ ಮಾಡ್ದ್ರೆ, ಡ್ರೈವರ್ ಕಂಡಕ್ಟರ್ ಸಾಲಿಡ್ಡಾಗಿ ಇಡ್ಲಿ ಸಾಂಬಾರ್ ಕತ್ತರ್ಸ್ತಾ ಇದ್ರು. ಹೂಂ ಎಲ್ಲಾ ಓಸೀನೇ ಮತ್ತೆ, ಡ್ರೈವರೂ ಕಟ್ಟಿಸ್ಬೇಡ್ವಾ ಕೋಟ್ಯಂತರ್ ರೂಪಾಯಿ ಬಂಗ್ಲೆ..”

ಕತ್ತಲ ಮುಸುಕಿನಲ್ಲಿದ್ದ ಬಸ್ಸು ಒಮ್ಮೆಲೆ ಬೆಳಗಿತು. ಕಂಡಕ್ಟರ್ “ಯಾರ್ರೀ ಬಸಪ್ಪಾ, ಬೀಎಮ್ಮೆಚ್ಚ್ ಇಳ್ಕೊಳ್ರೀ. . . . . ಹೂಂ, ಬಸಪ್ಪಾ ಮೆಮೊರಿಯಲ್ ಆಸ್ಪಿಟಲ್ಲೇ. ಪ್ರೀಮಿಯರ್ ಸ್ಟುಡಿಯೋನಾ? ಆಗ್ಲೇ ಹೇಳ್ಬೇಡ್ವೇನ್ರೀ? ನೀವಾಗ್ಲೇ ಮೊಬಾಯಿಲ್ಲಲ್ಲಿ ಯಾವ್ನೋ ಕಂಡಕ್ಟರ್ ಬಂಗ್ಲೆ ಕಟ್ಟಿಸಿದ್ ಊರು ಸುದ್ದೀನೆಲ್ಲಾ ಮಾತಾಡ್ತಾ ಇದ್ರೀ – ಗೊತ್ತಿರತ್ತೇಂತ ನಾನು ಸುಮ್ನಾದೆ. ಗಂಗೋತ್ರಿ ಯೂನ್ವರ್ಸಿಟೀಗಾದ್ರೆ ಮುಂದೇನೂ ಇಳೀಬೌದು ಬನ್ನಿ. ಇಲ್ಲಾ ಇಲ್ಲೇ ಇಳ್ಕಳೀ ರಿಕ್ಷಾ ಸಿಗತ್ತೆ.” ಅಜ್ಞಾತವಾಣಿ ದಡಬಡ ಚೀಲ, ಶಾಲೂ ಎಳ್ಕೊಂಡು, ತಲೆ ತಗ್ಗಿಸಿಕೊಂಡು ಇಳಿದುಹೋಯ್ತು.
[ಸಶರೀರಿಗಳೆಲ್ಲಾ ನಿಟ್ಟುಸಿರು ಬಿಟ್ಟು, ಸೀಟ್ ನೆಟ್ಟಗೆ ಮಾಡಿ ‘ಮೆಟ್ರೋಪೋಲ್, ರಾಮ್ಸಾಮೀ..’ ಕಾಯ್ತಾ ಕೂತರು. ಮುಗೀತು]

ನಿಮಗೆ ಗೊತ್ತಿರುವ ಕಥೆ:
ಹೊಳೆ ಬದಿಯ ನೇರಳೆ ಮರದ ಮೇಲೆ ಮಂಗ, ನದಿಯಲ್ಲಿ ಮೊಸಳೆ. ಮಂಗ ರುಚಿರುಚಿಯಾದ ಹಣ್ಣುಗಳನ್ನು ತಾನು ತಿನ್ನುವುದಲ್ಲದೇ ಮೊಸಳೆಗೂ ಉದುರಿಸುತ್ತಾ ಗೆಳೆತನ ಬೆಳೆಸಿತ್ತು. ಮೊಸಳೆ ಕೆಲವೊಂದು ಹಣ್ಣನ್ನು ತನ್ನ ಮನೆಗೂ ಮನದನ್ನೆಗೂ ಮುಟ್ಟಿಸಿತ್ತು. ಇಷ್ಟು ರುಚಿಯನ್ನು ಸದಾ ಸವಿಯುವ ಮಂಗನ ಹೃದಯ ಇನ್ನೆಷ್ಟು ರುಚಿಯಿರಲಾರದೆಂದು ಹೆಂಡತಿ ಮೊಸಳೆಯ ತರ್ಕಲಹರಿ ಬೆಳೆಯಿತು. ಆಕೆ ಗಂಡನಿಗೆ ದುಂಬಾಲು ಬಿದ್ದು, ಮೋಸದಲ್ಲಿ ಮಂಗನನ್ನು ಮನೆಗೆ ತರಲು ಒಲಿಸಿದಳು. ಫಿತೂರಿಯ ವಾಸನೆ ತಿಳಿಯದೇ ಮಂಗ ಗೆಳೆಯನ ಬೆನ್ನೇರಿ ಮೊಸಳೆಯಮ್ಮನ ಆತಿಥ್ಯ ಸವಿಯಲು ಹೊರಟದ್ದೂ ಆಯ್ತು. ಆದರೆ ಹೊಳೆ ಮಧ್ಯದಲ್ಲಿ ಬೋದಾಳ ಗಂಡು ತನ್ನ ಹೆಣ್ಣಿನ ನಿಜಬಯಕೆಯನ್ನು ತಿಳಿಸಿಬಿಟ್ಟಿತು. ತಲೆ ಚುರುಕಿನ ಮಂಗ ಕೂಡಲೇ ತೀವ್ರ ವಿಷಾದದ ಠಕ್ಕು ಮಾಡಿ “ಛೆ, ನೀನು ಮೊದಲೇ ಹೇಳಬಾರದಾ ಮೊಸಳೆಯಣ್ಣ? ನಾನು ಹೃದಯವನ್ನು ಅಲ್ಲೇ ನೇರಳೆ ಮರದ ಮೇಲೆ ಬಿಟ್ಟು ಬಂದುಬಿಟ್ಟೆ. ನನ್ನ ಏಕಮಾತ್ರ ಗೆಳೆಯನ ಹೆಂಡತಿಯ ಬಯಕೆಗೆ ನಾನು ಅಷ್ಟೂ ಕೊಡದಿರುವುದು ಹೇಗೆ? ನಡಿ, ವಾಪಾಸು ಹೋಗಿ ತಂದುಬಿಡೋಣ” ಎಂದಿತಂತೆ. ಮೊಸಳೆ ಇದಪ್ಪಾ “ಸಚ್ಚೀಪ್ರೇಮ್” ಎಂದು ಕನವರಿಸುತ್ತಾ ಮತ್ತೆ ದಂಡೆ ಸಮೀಪಿಸಿದಾಗ ಮಂಗ ಠಣ್ಣೆಂದು ಮರಕ್ಕೆ ಹಾರಿ ಬಚಾವಾಯ್ತು.

ವ್ಯತಿರಿಕ್ತ ನೀತಿ: ಇಂದು ಮನುಷ್ಯಲೋಕದಲ್ಲಿ ಬಹುತೇಕ ಮಂದಿಗೆ ಸ್ವಂತ ಮಿದುಳೇ ಅಂಗೈಯಲ್ಲಿ ಮೂರ್ತೀಭವಿಸಿದಂತೆ ಚರವಾಣಿ ಕಂಗೊಳಿಸುತ್ತದೆ. ಮೊಸಳೆಗಳ ಜಾಲದಿಂದ ಬಚಾವಾಗಲು ಕಳಚಿಕೊಳ್ಳಲು ಗೊತ್ತಾಗದೇ ಸಂದುಹೋಗುವ ಭಯ ಹೆಚ್ಚಿದೆ!

*** ***
‘ಮಾತಾಡು ಇಂಡಿಯಾ ಮಾತಾಡು’ ಶೀರ್ಷಿಕೆಯ ಈ ಮಾತು ಇಂದು ಬರಿಯ ಜಂಗಮವಾಣೀ ಸಂಸ್ಥೆಯೊಂದರ ಜಾಹೀರಾತು ಕರೆಯಾಗಿ ಉಳಿದಿಲ್ಲ. ನಮ್ಮ ನಿತ್ಯ ಬಳಕೆಯ ದಾರಿ ಮತ್ತು ಪುಟ್ಟಪಥಗಳು ಅಗಲೀಕರಣ, ಕಾಂಕ್ರಿಟೀಕರಣ ಹಾಗೂ ಅಂತರ್ಲಾಕೀಕೃತಗೊಳ್ಳುವ ಹಿಂಸೆಗಳನ್ನೆಲ್ಲ ವರ್ಷಾನುಗಟ್ಟಳೆ ಕೊಡುತ್ತಾ ಏನೋ ಒಂದು ನ್ಯಾಯ ದಕ್ಕಿತು ಎನ್ನುವಾಗ ‘ಪುನರಪಿ ಅಗೆತಂ ಪುನರಪಿ ಹುಗಿತಂ’ ಜಪಿಸುತ್ತ ಇನ್ನಷ್ಟು ಮತ್ತಷ್ಟು ಕೇಬಲ್ಲುಗಳು ಭೂಗತವಾಗುತ್ತಿರುವುದು, ಕಗ್ಗಾಡ ಮೂಲೆಯ ದಿಣ್ಣೆ ನೆತ್ತಿಯಲ್ಲೂ ಬೋಗುಣಿ ಎತ್ತಿ ಹಿಡಿಯುವ ಸ್ತಂಭಗಳು ಮೊಳೆಯುತ್ತಿರುವುದು ಈ ಕರ್ಣಪಿಶಾಚಿಗೇ. ಅಭಿವೃದ್ಧಿಯ ಚಿರಂತನತೆ ಎಂದರೆ ಸದಾ ಹಾಳು ಸುರಿಯುವುದೇ ಇರಬೇಕು ಎಂಬ ಸಂಶಯ ಕಾಡುತ್ತಿದೆ. ಆದರೆ ಮೇಲಿನ ನಿದರ್ಶನಗಳ ಬೆಳಕಿನಲ್ಲಿ ನೋಡುವಾಗ ಮನಸ್ಸು ಹಾಳು ಸುರಿಯುವ ಅಪಾಯ ಇನ್ನೂ ಢಾಳಾಗಿ ಕಾಣುತ್ತಿದೆ.

ಜಂಗಮವಾಣಿ, ಚರವಾಣಿ, ಸಂಚಾರವಾಣಿ, ಮೊಬೈಲ್ ಎಂದಿತ್ಯಾದಿ ಹೆಸರಾಂತ, ವರ್ತಮಾನ ಕಾಲದ ಮಾನಸಿಕ ಸಂಪರ್ಕದ ಹೆದ್ದಾರಿಯನ್ನು ಪ್ರತಿ ವ್ಯಕ್ತಿಗೆ ‘ಕರಾಗ್ರೇ ವಸತೇ’ ಮಾಡಿಸಲು ಸಾಂಪ್ರದಾಯಿಕ ಭಾರತೀಯ ಸಂಚಾರ ನಿಗಮದಿಂದ (ಬೀಎಸ್ಸೆನ್ನೆಲ್) ತೊಡಗಿ ಎಷ್ಟೊಂದು ಸಂಸ್ಥೆಗಳು! ಅವುಗಳ ಮೇಲಾಟದಲ್ಲಿ ಎಷ್ಟೊಂದು ಸೌಲಭ್ಯಗಳು – ಆಯ್ದ ಸಂಖ್ಯೆಗಳೊಳಗೆ ಅನಿಯಮಿತ ಮಾತು, ಅಂತಾರಾಜ್ಯ ಗಡಿಮುಕ್ತಿ, ಮಾತಾಡಿದಷ್ಟೇ ಬಿಲ್ಲು, ಮುಂಪಾವತಿ, ಜೀವಾವಧಿ, ಸಂದೇಶ ಉಚಿತ ಇತ್ಯಾದಿ. ಇನ್ನು ಕರಸ್ತಲ ಯಂತ್ರ ಮಹಿಮೆಯೋ ಅಕ್ಷರಶಃ ಬಣ್ಣಿಸಲಸದಳ! ಆದರೆ ಇವೆಲ್ಲಾ ಇನ್ನೂ ಹೆಚ್ಚಿನದೆಲ್ಲಾ ಸೇರಿ, ಸೇರಿ ಮನುಷ್ಯ ಬೌದ್ಧಿಕ ವಿಕಾಸವನ್ನೇ ಸಪುರಗೊಳ್ಳುತ್ತಿರುವ ಕುರುಡುಗಲ್ಲಿಗೆ ಕೊಂಡೊಯ್ಯುತ್ತಿರುವುದಂತೂ ನಿಶ್ಚಯ. ಅವುಗಳ ಕಾರ್ಯ ವೈವಿಧ್ಯತೆ ಏರಿದಷ್ಟೂ ಅದರ ಬಳಕೆದಾರರ ಅವಲಂಬನ ಶೃಂಗಾರ ಏರುತ್ತಿದೆ, ನೈಸರ್ಗಿಕ ಶಕ್ತಿ ತೀವ್ರವಾಗಿ ಅವಗಣನೆಗೆ ಈಡಾಗುತ್ತಿದೆ. ನೆನಪು (ಹಾಗೇ ಮರೆವೂ), ಮುಂದಾಲೋಚನೆ (ಸೋಂಭೇರಿತನವೂ), ಲೆಕ್ಕಾಚಾರ (ಉಡಾಫೆಯೂ), ನೋಡುವ – ಹುಡುಕುವ ಸಂತೋಷಗಳು (ಕಳೆದು ಹೋಗುವ ರೋಮಾಂಚನ), ಬರವಣಿಗೆಯ ನವಿರು (ಅನಕ್ಷರತೆಯ ಮುಕ್ತತೆ), ಮುಖತಃ ಹೇಳಲು ನಾಲ್ಕು ಮಾತಿನಷ್ಟು ಗುಟ್ಟು (ಸಣ್ಣ ಸ್ವಾರ್ಥಗಳೂ), ಓಡಾಟ (ಮೈಗಳ್ಳತನ) ಹೀಗೆ ನೂರೆಂಟು ಏರುಮಗ್ಗುಲ ಸಂಭ್ರಮವೂ ಇಳಿದಾರಿಯ ಅನುಭವವೂ ಅರಿವಿಲ್ಲದೇ ಕಳೆದುಕೊಳ್ಳುತ್ತಿದ್ದೇವೆ.

ಪಕ್ಕದಲ್ಲೇ ಹೆಜ್ಜೆ ಹಾಕುವ ಮಿತ್ರ ಊರಾಚಿನ ಇನ್ನೊಬ್ಬನ ಬಳಿ ಹರಟುತ್ತಿರುತ್ತಾನೆ. ಕತ್ತೆತ್ತಿ ನೋಡಿದರೆ ದಾರಿ ಎದುರು ಬದಿಯಲ್ಲೇ ಬಸ್ಸಿನಿಂದ ಕೈ ಬೀಸುತ್ತಿರುವ ಹೆಂಡತಿಯನ್ನು “ಎಲ್ಲಿ ಹಾಳಾಗಿಹೋಗಿದ್ದೀಯಾ”ಅಂತ ಪುರುಷಪುಂಗವ ಮೇಘ ಸಂದೇಶ ಕಳಿಸಿ ಬಸ್ ತಪ್ಪಿಸ್ಕೊಳ್ತಾನೆ. ಪ್ರವಾಸದಲ್ಲಿ ಕಿಟಕಿಯಾಚೆ ಅದ್ಭುತ ದೃಶ್ಯಗಳು ಮಿಂಚಿ ಮರೆಯಾಗುತ್ತಿರುವಾಗ ಅಂಗೈ ಬ್ರಹ್ಮಾಂಡದಲ್ಲಿ ಫಾರ್ವರ್ಡೆಡ್ ಜೋಕ್‌ಗೆ ಮುಸಿ ನಗೆಯಲ್ಲಿ ಮುಳುಗಿರುತ್ತಾರೆ. ಹಿರಿಮರುದುಪ್ಪೆ (ಕುದುರೆಮುಖ ಶ್ರೇಣಿಯ ಒಂದು ಪ್ರಧಾನ ಶಿಖರ) ಕಣ್ಣು ತಿವಿಯುತ್ತಿರಬೇಕಾದರೆ “ಧರ್ಮಸ್ಥಳಾ ರೇಂಜ್ ಇಲ್ಲಿದೆ” ಎಂಬ ಬೆರಗಿನಲ್ಲಿರುತ್ತಾರೆ! ಅಭಯ ಹೊಸ ತಲೆಮಾರಿನ ‘ಕರ ಕರೆ’ಯನ್ನು ನನಗಾಗಿ ಎರಡೂ ಕೈ ಎತ್ತಿ ಕೊಡಬಂದಾಗ (ಮೇನಕೆಯ ಎದುರು) ವಿಶ್ವಾಮಿತ್ರ ಪೋಜ್ ಕೊಟ್ಟು, “ರಶ್ಮಿ ಬೆಂಗಳೂರು ತಲ್ಪಿದ್ಳಾಂತ ದೇವಕಿಗೆ ಮೆಸೇಜ್ ನೋಡಲು ಕರ್ಕರೆ ಮಾಡುವವನೇ ನಾನು! ರಂಗಾಯಣದ ಹ್ಯಾಂಲೆಟ್ ಟು ಬೀ ಆರ್ ನಾಟ್ ಟು ಬೀ ಬಿಕ್ಕಳಿಸುತ್ತಿರುವಾಗ ಅಂಡ್ರಾಯಿಡ್ ಮೂಲಕ ಮೇಲ್ ಬಾಕ್ಸಿನಲ್ಲಿ ಬಿದ್ದು ಕಾಣುತ್ತಿರುವ ‘ಮಾತಾಡು ಇಂಡಿಯಾ ಮಾತಾಡು’ ಉಳುಸ್ಕೊಳ್ಳೋದೇ ಕಿತ್ ಬಿಸಾಡೋದೇ ಯೋಚ್ನೇ ಮಾಡ್ತಾ ಇರ್ಲಿಲ್ವಲ್ಲಾ ನೀವು?