ಪ್ರಿಯ ನಾರಾಯಣಾ,

ಧರ್ಮಸ್ಥಳದಲ್ಲಿ ಪ್ರತಿ ವರ್ಷವೂ ತಾಳಿ, ಸೀರೆ, ಪಂಚೆ ಕೊಟ್ಟು ಉಚಿತ ವಿವಾಹಯೋಗ ಕಲ್ಪಿಸುವುದು ಯಾರಿಗೆ ಗೊತ್ತಿಲ್ಲ. ಮತ್ತೆ ಯಾವುದೇ ನೋಂದಣಿ ಇಲಾಖೆಯಲ್ಲಿ ಧರ್ಮನಿರಪೇಕ್ಷವಾಗಿ, ಕಾನೂನು ಪ್ರಕಾರ ದಾಂಪತ್ಯ ಸಂಬಂಧ ಕುದುರಿಸುವುದು ನಮಗೆ ತಿಳಿಯದ್ದೂ ಅಲ್ಲ, ತಿರಸ್ಕಾರವೂ ಇಲ್ಲ. (ಇಂಥವೇ ಆಶಯಗಳ ಒಂದು ಪರಿಷ್ಕೃತ ರೂಪ – ಕುವೆಂಪು ಪ್ರಣೀತ ‘ಮಂತ್ರ ಮಾಂಗಲ್ಯ.’ ಇದು ಮಾತ್ರ ನನಗೆ ಇಲಾಖಾ ನೋಂದಣಿಯ ಒಣಕುಂಟೆಗೆ ಸಾಂಪ್ರದಾಯಿಕತೆಯ ಚಿಗುರು, ಹೂ ಅಂಟಿಸುವ ಪ್ರಯತ್ನದ ಹಾಗೇ ಕಂಡದ್ದರಿಂದ ಅಷ್ಟು ಒಲವು ಮೂಡಲಿಲ್ಲ.) ಆದರೆ ಮದುವೆ ಹೇಗಾಗಬೇಕೆಂಬ ಸ್ವಾತಂತ್ರ್ಯ ಗಂಡು ಹೆತ್ತವರದೊಂದೇ ಅಲ್ಲವಲ್ಲಾ. ತೋರಿಕೆಗೆ ಒಂದು ಗಂಡಿಗೆ ಒಂದು ಹೆಣ್ಣು ಅಂದರೆ ಮದುವೆ. ಸ್ವಲ್ಪ ಯೋಚಿಸಿದರೆ ನಮ್ಮಲ್ಲೊಂದು ಸಮೂಹ ಚಿಂತನೆಯಿದ್ದಷ್ಟೇ ಬಲವಾಗಿ ಹೆಣ್ಣಿನ ಹಿಂದೆಯೂ ಇರಲೇಬೇಕು. ಮದುವೆ ಎರಡರ ಸಮಪಾಕಕ್ಕೆ ಕೇವಲ ನಾಂದಿ.

ಏ ಇದೆಲ್ಲಾ ನಿನಗೆ ಹೇಳುತ್ತಿಲ್ಲ. ಸುಮಾರು ಎರಡು ವರ್ಷದ ಹಿಂದೆ ಅಭಯನ ಮದುವೆಯ ಕಾಲದಲ್ಲಿ, ಸಮಾಜ ಗಂಡಿನ ಕಡೆಯವರಿಗೆ ಎತ್ತರದ ಮಣೆ ಹಾಕಿದ್ದನ್ನು ಬಿಡಲಾಗದೇ ನಮ್ಮೊಳಗೆ ನಡೆದ ವಿಚಾರಕ್ಕೆ ಅಕ್ಷರ ರೂಪ ಕೊಡುತ್ತಿದ್ದೇನಷ್ಟೆ. ಆಗ ನಾವು ನನ್ನಪ್ಪನ ಆತ್ಮೀಯ ಗೆಳೆಯರು, ಪ್ರಾಪಂಚಿಕ ಓದು ಮತ್ತು ವೃತ್ತಿಯಲ್ಲಿ ಅಸಾಧಾರಣ ಲೋಹಶಾಸ್ತ್ರಜ್ಞರಾಗಿ ಕಾರ್ಖಾನೆಯಲ್ಲೂ ವಿದ್ಯಾ ಸಂಸ್ಥೆಗಳಲ್ಲೂ ಬೆಳಗಿದ ಪ್ರೊ| ಶ್ರೀಕಂಠಕುಮಾರಸ್ವಾಮಿಯವರು ಬರೆದು ಪ್ರಕಟಿಸಿದ ‘ಸರಳ ವಿವಾಹ’ ಪುಸ್ತಕಕ್ಕೆ ಶರಣಾದೆವು. ನಿನಗೆ ಆಶ್ಚರ್ಯವಾದೀತು, ಪ್ರೊ| ಸ್ವಾಮಿಯವರು ವೈದಿಕ ಶಾಸ್ತ್ರಗಳನ್ನು ಸಮದಂಡಿಯಾಗಿ ಅಧ್ಯಯನ ಮಾಡಿದ್ದು ಮಾತ್ರವಲ್ಲ, ಒಪ್ಪಿ ಸ್ವಂತ ಆಚಾರದಲ್ಲಿ ರೂಢಿಸಿಕೊಂಡು, ಕುರಿತು ಕೇಳಿದವರಿಗೆ ದ್ವಂದ್ವಗಳಿಲ್ಲದಂತೆ ಹೇಳುವಲ್ಲೂ ಪರಿಣತರಿದ್ದಾರೆ. ನಿನ್ನ ನೆನಪಿಗೆ ಹೇಳುತ್ತೇನೆ – ನನ್ನಪ್ಪನ ವೈಜ್ಞಾನಿಕ ನಿಲುವು ೧. ನಾನು ಗತಿಸಿದ ಮೇಲೆ ದೇಹದಾನ ಆಗಬೇಕು. ೨. ಉತ್ತರಕ್ರಿಯೆ ಹೆಸರಿನಲ್ಲಿ ಏನೂ ನಡೆಯಕೂಡದು. ಇವನ್ನು ರೂಢಿಸುವ ಹಂತದಲ್ಲಿ ನಮಗೆ ಪೂರ್ಣ ಅನುಮೋದನೆ ಕೊಟ್ಟವರು ಈ ಸ್ವಾಮಿಯಲ್ಲದ ಸ್ವಾಮಿಯವರು. ಆ ಸ್ವಾಮಿಯವರ ವಿವಾಹದ ಕುರಿತ ಪುಸ್ತಕವನ್ನು ಮನನ ಮಾಡಿ, ಹುಡುಗಿಯ ಕಡೆಯವರ ಮನನೋಯದಂತೆ, ನಾನೂ ಎರಡು ದಿಬ್ಬಣ (ಮೊದಲು ಬದ್ಧಕ್ಕೆ ಮಂಗಳೂರು – ಅಡ್ಯನಡ್ಕ, ಮತ್ತೆ ಮದುವೆಗೆ ಮಂಗಳೂರು – ಪೆರ್ಲ) ನಡೆಸಿದವನೇ ಎಂದು ನೆನಪಿಸಿಕೊಂಡೇ ನಿಮ್ಮೊಡನೆ ಸೇರಿದ್ದೆ. ಅಭಯನದ್ದಾದರೋ ಕೇವಲ ಮೂವತ್ತು ನಲವತ್ತು ಕಿಮೀ ಅಂತರದ್ದು, ಅಬ್ಬಾ ಎಂದರೂ ಒಂದೂವರೆ ಗಂಟೆಯ ದಾರಿ. ಆದರೆ ಸುಮಾರು ಅರ್ಧ ಶತಮಾನದ ಹಿಂದೆ (೧೯೬೦ರ ದಶಕ), ದಿನ ಮುಂಚಿತವಾಗಿಯೇ ತಲಪಬೇಕಾದ ಅನಿವಾರ್ಯತೆಯಲ್ಲಿ, ನಾನು (ಸುಮಾರು ಎಂಟು-ಹತ್ತರ ಪೋರ) ಅನುಭವಿಸಿದ ಇನ್ನೊಂದೇ ದಿಬ್ಬಣದಿಂದ ಇಂದಿಗೂ ಉಳಿದ ಕೆಲವು ದಟ್ಟ ಚಿತ್ರಗಳನ್ನು ಇಲ್ಲಿ ಚುಟುಕಾಗಿಯಾದರೂ ಹೇಳದುಳಿಯಲಾರೆ!

ಪುತ್ತೂರಿನ ಎ.ಪಿ. ಸುಬ್ಬಯ್ಯನವರ (ನನ್ನ ಅಮ್ಮನ ಕಡೆಯ ಅಜ್ಜ, ೧೯೦೧-೭೭) ದ್ವಿತೀಯ ಪುತ್ರ ಚಿ| ಗೋವಿಂದ (ಅಲಿಯಾಸ್ ಎ.ಪಿ. ಗೋವಿಂದ ಭಟ್) ಎಂಬ ವರನು, ಹೊನ್ನಾವರ ಕರ್ಕಿಯ ಗಣೇಶಕೃಷ್ಣಭಟ್ಟರ (ಇಂದು ದಿವಂಗತರು. ಕ್ಷಮಿಸು, ಇಸವಿಯ ವಿವರಗಳು ನನ್ನಲ್ಲಿಲ್ಲ) ಹಿರಿಯ ಮಗಳು ಸೌ| ಮೋಹಿನಿ ಎಂಬ ವಧುವನ್ನು (ಅಲಿಯಾಸ್ ಇಂದಿನ ಎ.ಪಿ ಮಾಲತಿ) ವರಿಸುವುದೆಂದು ನಿಶ್ಚಯವಾಗಿತ್ತು. ಅಂದರೆ ದಿಬ್ಬಣದ ದಾರಿ, ಪುತ್ತೂರು-ಮಂಗಳೂರು-ಹೊನ್ನಾವರ ಎಂದು ಯಾವುದೇ ಭೂಪಠ ಹೇಳುತ್ತದೆ. ಸುಮಾರು ೨೩೦ ಕಿಮೀ, ಆರಾಮವಾಗಿ ಐದಾರು ಗಂಟೆಯ ಪಯಣ. ಪುತ್ತೂರಿನಲ್ಲಿ ಕಾಫಿಯಾದರೆ ಹೊನ್ನಾವರದಲ್ಲಿ ಮಧ್ಯಾಹ್ನದ ಊಠ! ತಡಿ ತಡಿ, ನೆನಪಿಸಿಕೋ, ಇದು ಅರ್ಧ ಶತಮಾನ ಹಿಂದಿನ ಕಥೆ. ಕರಾವಳಿಯಲ್ಲಿ ಚತುಷ್ಪಥದ ಯೋಚನೆ ಬಿಟ್ಟು, ಹೆದ್ದಾರಿಯೂ ಇಲ್ಲದ ಕಾಲ. ಬರಿಯ ಮಂಗಳೂರು – ಉಡುಪಿ ಪ್ರಯಾಣಿಸಲೂ ಕೆಲವು ದೋಣಿ ಸವಾರಿಗಳನ್ನು ಪೋಣಿಸಲೇ ಬೇಕಾಗುತ್ತಿತ್ತು (ನೇಪಥ್ಯದಿಂದ ಕುಹಕಮತಿ ಬೊಬ್ಬಿಡುತ್ತಿದೆ, ಕಾಲಚಕ್ರ ತಿರುಗಿ ಅಲ್ಲಿಗೇ ಬಂದಿದೆ. ಹೆಸರು ಮಾತ್ರ ಹೆದ್ದಾರಿ, ಮಳೆಗಾಲದಲ್ಲಿ ಇಂದೂ ದೋಣಿಸವಾರಿಯೇ ಸರಿ!). ಇಂದಿನಂತೆ ಪ್ರಯಾಣಾವಧಿಯನ್ನು ಮಿನಿಟುಗಳಲ್ಲಿ ಹೆಚ್ಚು ಕಮ್ಮಿ ಎನ್ನುವಂತಿರಲಿಲ್ಲ; ಗಂಟೆಗಟ್ಟಳೆ, ಮಳೆಗಾಲದಲ್ಲಿ ದಿನಗಟ್ಟಳೆ ಆದರೂ ಆಶ್ಚರ್ಯಪಡುವವರಿರಲಿಲ್ಲ. ಹಾಗಾಗಿ ಹಿರಿಯರು ದಿನ ಮುಂಚಿತವಾಗಿಯೇ ಹೊನ್ನಾವರಕ್ಕೆ ದಿಬ್ಬಣ ಹೊರಡಿಸಿದರು. ಎಲ್ಲೋ ಒಳನಾಡುಗಳಲ್ಲಿ ಸುತ್ತಿ, ತೀರಾ ಅನಿವಾರ್ಯವಾದಲ್ಲಿ ಮಾತ್ರ ಜಲಯಾನ ಸಂಯೋಜಿಸಿ ನಕ್ಷೆ ಮಾಡಿಕೊಂಡಿದ್ದರು. ಆ ಕಾಲದ ಅತ್ಯುತ್ತಮ ವ್ಯಾನ್, ಮೂರು ಸಾಲು ಸೀಟರ್ ನಮ್ಮ ರಥ!

ಎದುರು ಸಾಲಿನಲ್ಲಿ ಚಾಲಕನಲ್ಲದೆ, ಅಜ್ಜ, ಅಜ್ಜನ ಖಾಸಾ ವೈದ್ಯ ಸುಂದರರಾವ್ ಮತ್ತು ನಮ್ಮ ಕಡೆಯ ಪುರೋಹಿತರು. ಉಳಿದಂತೆ ವ್ಯಾನೊಂದು ಉಪ್ಪಿನಕಾಯಿ ಭರಣಿ; ಅಜ್ಜಿ, ವರಮಹಾಶಯ, ವರನ ಸೋದರರು, ಅತ್ತಿಗೆ, ಸೋದರಿಯರು (ಆರು ಮಂದಿ), ಕೆಲವು ಭಾವಂದಿರು, ಮತ್ತು ನನ್ನಂಥ ಚಿಳ್ಳೆಪಿಳ್ಳೆಗಳು ಅದರೊಳಗಿನ ಜೀವವೈವಿಧ್ಯ. ಮೂರೋ ನಾಲ್ಕೋ ದಿನದ ಎಲ್ಲರ ಅಗತ್ಯದ ಮತ್ತು ಮದುವೆಯ ವಿಶೇಷ ಗಂಟುಗದಡಿಗಳನ್ನು ಸ್ಥಳ ಇದ್ದಷ್ಟು ಸೀಟುಗಳಡಿಯಲ್ಲಿ ಇರುಕಿಸಿಯೂ ಉಳಿದವನ್ನು ಎಲ್ಲರ ತೊಡೆಗೆ ಹಂಚಿಕೊಟ್ಟು, ಒತ್ತಿ ಬಾಗಿಲು ಬಡಕೊಂಡು, ಅದಕ್ಕೇ ನೇತುಬಿದ್ದೊಬ್ಬ ವ್ಯಾನ್ ಸಹಾಯಕ – ಬಹುಮುಖೀ ಉಪಯುಕ್ತ ಕೊಸರು! ದಾರಿಯೋ ಅಂಕುಡೊಂಕು ಶುನಕಬಾಲ. ಎತ್ತಿನ ಗಾಡಿಗಾಗಿ ರೂಪುಗೊಂಡ ಜಲ್ಲಿ ಮಾರ್ಗಕ್ಕೆ ದಾಸ್ತಾನು ಒದಗಿದಂತೆಲ್ಲಾ ತುಸು ತುಸು ಡಾಮರು ಕಾಣಿಸಿದ್ದರು. ಹೊಗೆ, ದೂಳು, ಸೆಕೆ, ವಾಂತಿ ಸಾರೋದ್ಧಾರ. ಏರು ಕಡಿದಾಗಿ ವ್ಯಾನ್ ಗದ್ಗದಿಸುವಾಗ ಸಹಾಯಕ ಕೈಯಲ್ಲೊಂದು ಮರದ ಕಟ್ಟೆ ಹಿಡಿದು ಹೊರ ಧುಮುಕುತ್ತಿದ್ದ. ಗೇರು ಸಹಜವಾಗಿ ಎರಡರಿಂದ ಒಂದಕ್ಕಿಳಿಯದಿದ್ದರೆ ವಿಧಿವತ್ತಾಗಿ ‘ಕಟ್ಟೆಪೂಜೆಗೆ’ ಪುರೋಹಿತ ಇವನೇ. ಮತ್ತೆ ವ್ಯಾನ್ ಹೊಸ ಹುಮ್ಮಸ್ಸಿನಲ್ಲಿ ಏರಿದರೆ ಬಚಾವ್. ಇಲ್ಲಾ ನಾಲ್ಕು ಗಂಡಸರು ಇಳಿದು (ಲೋಡ್ ಶೆಡ್ಡಿಂಗ್), ದೂಳೋ ವಾಂತಿಯೋ ಎಣಿಸದೆ ವ್ಯಾನಿಗೆ ಕೈಯೋ ತಲೆಯೋ ಕೊಟ್ಟು ಹೆಚ್ಚಿನ ಬಲ (ಪವರ್ ಡ್ರೈವ್) ಊಡುವಾಗ ಈತ ಸಮರ್ಥ ನಿರ್ದೇಶಕ, “ಲೇಲೇ ಲಂಬಾಆಆ ಐಸಾಆಆ.” ಚಾಲಕ ಕುಳ್ಳ; ಇಳಿದಾರಿಯ ಆತಂಕಕಾರಿ ಸನ್ನಿವೇಶಗಳಲ್ಲಿ ಕತ್ತು ಚಾಚಿ ದಾರಿ ನೋಡಿಕೊಳ್ಳಬೇಕು ಮತ್ತೆ ಪರಿಸ್ಥಿತಿಗನುಗುಣವಾಗಿ, ಕೆಳಜಾರಿ ಕ್ಲಚ್ಚೋ ಬ್ರೇಕೋ ತುಳಿಯಬೇಕು! ಆ ಕಾಲದಲ್ಲಿ ವೇಗವರ್ಧನೆ ಎಂಬ ಶಬ್ದವೇ ಹುಟ್ಟಿರಲಿಲ್ಲ. ಹಾಗಾಗಿ ಆಕ್ಸಿಲರೇಟರ್ ವಿಚಾರಿಸಬೇಡ. ಒಟ್ಟಾರೆ ಆ ಸವಾರಿ ಸುಖವನ್ನು ನಿರೂಪಿಸುವಲ್ಲಿ ಸಾವಿರ ನಾಲಗೆಯ ರೇಡಿಯೋ ಜಾಕಿಯೂ ಸೋಲುವುದು ಖಾತ್ರಿ ಎಂದ ಮೇಲೆ ನಾನ್ಯಾಕೆ ಮುಂದುವರಿಲಿ! (ಈ ಕಾಲದಲ್ಲೂ ಅದರ ಕಿಂಚಿತ್ ಅನುಭವಕ್ಕೆ ಹೀಗೊಂದು ವಿಡಿಯೋ ತುಣುಕು ಲಗತ್ತಿಸಿದ್ದೇನೆ, ನೋಡಬಹುದು: ‘ಬಿಸಿಲೆ ಘಾಟಿಯಲ್ಲಿ ಕೆಸರಟ್ಟಿಸಿ ಸವಾರಿ’)

ಅಷ್ಟೆಲ್ಲಾ ಸಾಲದೆಂಬಂತೆ ಅಂದು ನಮ್ಮ ವ್ಯಾನ್ ದಾರಿ ತಪ್ಪಿತ್ತಂತೆ. ಮಧ್ಯಾಹ್ನದ ಊಟಕ್ಕೆ ತೀರಾ ತಡವಾಗಿ ತೀರ್ಥಳ್ಳಿಗೆ ನುಗ್ಗಿದ್ದೂ ಅಲ್ಲಿ ಬ್ರಾಹ್ಮಣರ ಹೊಟೆಲ್ (ವಿಷಮಕಾಲದಲ್ಲಿ ಮಹಾಬ್ರಾಹ್ಮಣ ವಿಶ್ವಾಮಿತ್ರ ಏನೇ ತಿಂದಿರಲಿ, ಅಂದು ನಮ್ಮ ತಂಡ ತದ್ವಿರುದ್ಧವಾದ ಮಿಲಿಟರಿ ಹೊಟೆಲ್ ಯೋಚಿಸುವುದೂ ಅಸಾಧ್ಯವಿತ್ತು) ಹುಡುಕಿದ್ದೂ ಅಲ್ಲಿ ಬಿಸಿ ಮಂತ್ರಾಕ್ಷತೆಯಂಥ ಅನ್ನಕ್ಕೆ ಒಂದು ಗಂಟೆ ಕಾದದ್ದೂ ಕೊನೆಗೆ ಊಟ ಬಡಿಸಲಿದ್ದಾಗ ಸಹ್ಯವಿದ್ದ ಲಡಕಾಸಿ ಮೇಜನ್ನು ತೆಗೆಸಿ, ಪುರೋಹಿತರ ಮಡಿಗಾಗಿ ಕಪ್ಪುಕೊಳೆತ ನೆಲದಮೇಲೆ ಕೂರುವಂತಾದದ್ದೂ ನನ್ನ ಜೀರ್ಣಗೊಂಡ ನೆನಪಿನ ಭಿತ್ತಿಯಲ್ಲಿ ಚಿರಸ್ಥಾಯಿ! ರಾತ್ರಿಯಲ್ಲಿ ಆಗುಂಬೆ ಘಾಟಿ ಇಳಿಯುವಾಗ ಮರಿಯೊಂದಿಗೆ ತಾಯಿ ಹುಲಿಯೊಂದು ನಮ್ಮ ವ್ಯಾನ್ ಬೆಳಕಿಗೆ ಕಣ್ಣು ಕೊಟ್ಟು ದಾರಿ ದಾಟಿದಾಗ ದಕ್ಕಿದ ರೋಮಾಂಚನ, ಯಾವ್ಯಾವುದೋ ನದಿ ಕಡವಿನಲ್ಲಿ ಖಾಲಿ ವ್ಯಾನನ್ನು ಜೋಡುದೋಣಿಗಳ ಮೇಲಿನ ಹಲಿಗೆಗೇರಿಸಿ ನಾವು – ಪ್ರಯಾಣಿಕರೆಲ್ಲಾ ಸುತ್ತುವರಿದು ನಿಂತಾಗ ಗಳು ಹಿಡಿದು ದೋಣಿ ನೂಕುವವರು “ಓ ಬಾಲೇ” ಹಾಕಿದ್ದು, ಹೊಳೆಗಂಚುಗಟ್ಟಿದ ಗಿಡಮರಗಳ ಕರಿಛಾಯೆ ತಲೆದೂಗಿದ್ದು, ನೀರಿಗೆ ಉಕ್ಕು ತರಿಸಿದ (ಭರತ) ಚಂದ್ರಹಾಸ ದ್ವಿಪಾತ್ರದಲ್ಲಿ (-ಬಾನಲ್ಲೂ ಹೊಳೆಯಲ್ಲೂ) ಎಲ್ಲ ಬೆಳಗಿದ್ದೂ ವಿವರಿಸುತ್ತಾ ಕುಳಿತರೆ ನಾನಲ್ಲ, ಭಾಷೆಯೇ ಸೋಲುತ್ತದೆ. ಅಲ್ಲದೇ ನನ್ನ ಇಂದಿನ ದಿಕ್ಚ್ಯುತಿಯೂ ವಿಪರೀತವಾದೀತು. ಹಾಂ, ಎಲ್ಲಿ ಬಿಟ್ಟಿದ್ದೇ, ಕುಶಾಲನಗರ. ಮತ್ತೆ ಬಂತು ಬೈಲುಕುಪ್ಪೆ – ಟಿಬೆಟಿಯನ್ನರ ಕಾಲೊನಿ. ಇಲ್ಲ, ಅದರ ವಿವರಗಳಿಗೂ ಮನದ ಕದ ಹಾಕಿ ಜಪಿಸುತ್ತೇನೆ. . . . “ಆಹಾ ರಾಮೂಗೆ ಮದ್ವೆಯಂತೇ ಹುಡ್ಗೀ ಬೆಳ್ಗಾವಿಯಂತೇ”

ಬೈಲುಕುಪ್ಪೆಯಿಂದ ಮುಂದಿನ ದಾರಿ ಅಂದರೆ ವಾಹನಗಳ ಸಂಭ್ರಮ; ನೇರ, ನುಣ್ಣಗೆ ಮತ್ತು ವಿಸ್ತಾರ. ಕಾಲಧರ್ಮಕ್ಕೆ ಸರಿಯಾದ ಈ ಪರಿಷ್ಕಾರ ಅನಿವಾರ್ಯ. ಹಿಂದಿನ ಕಾಲದಲ್ಲಾದರೋ ನಡಿಗೆ, ಎತ್ತಿನ ಗಾಡಿ, ಸೈಕಲ್ ಸವಾರಿಗಳ ಕೊನೆಯಲ್ಲಿ ಬರುತ್ತಿದ್ದ ಮೋಟಾರು ಗಾಡಿಗಳ ತಾಕತ್ತಿಗೆ ಅನುಗುಣವಾಗಿಯೇ ಮಾರ್ಗಗಳು ರೂಪುಗೊಳ್ಳುತ್ತಿದ್ದವು. ಏರು ಕಡಿಮೆ ಮಾಡಲು ಅಂಕಾಡೊಂಕು, ನೆರಳು ಕೊಡಲು ಸಾಲುಮರ ಬೇಕೇಬೇಕು. ಕ್ಷಣಾರ್ಧದಲ್ಲಿ ಗುಡ್ಡೆ ಕದಲಿಸಿ, ಕಣಿವೆ ಹುಗಿಯುವ ರಕ್ಕಸ-ಯಂತ್ರಗಳಿರಲಿಲ್ಲ. ವುಡುವೊತ್ತು ಮೊಟ್ಟೆಯ (ಜ್ಯೋತಿ ಎಸ್ಟೇಟಿನ ದಾರಿಯ ಒಂದು ಘಾಟಿ) ಮಳೆಗಾಲದ ಸಣ್ಣ ಭೂ ಕುಸಿತಕ್ಕೂ ಹತ್ತಿಪ್ಪತ್ತು ಮಂದಿಯ ಸೈನ್ಯ ಬಿಲ ತೋಡುವ ಇರುವೆಗಳಂತೇ ದಿನಗಟ್ಟಳೆ ದುಡಿದದ್ದನ್ನು ನೀನೇ ಎಷ್ಟು ಕಂಡಿದ್ದಿಯೋ ಏನೋ! ಇಂಥಲ್ಲಿ ಕೇವಲ ಕೆಲವು ಸವಾರರು ಹುಚ್ಚುಗಟ್ಟುವ ಕಥೆಗಳು, ಅಪಘಾತಗಳು ಮರಣಾಂತಿಕವೇ ಆಗುವುದು ಸುಳ್ಳಲ್ಲ. “ಇಕೋ ಇದೇ ಮರಕ್ಕೆ ಅವತ್ತು ರಾತ್ರಿ ನಾವು ರೋಟರಿ ಮೀಟಿಂಗ್ ಮುಗಿಸಿ ಬರುತ್ತಿದ್ದಾಗ ಒಂದು ಕಾರು ಢಿಕ್ಕಿ ಹೊಡೆದು, ಪ್ರಯಾಣಿಕರು ಚಿಂತಾಜನಕವಾಗಿ ಸಿಕ್ಕಿಬಿದ್ದದ್ದು ಕಂಡದ್ದು. . . .” ಎಂದು ಬೇರೇ ಸದಾಶಿವ ಸ್ಮರಿಸಿಕೊಂಡ. ಆದರೆ ತತ್ಪೂರ್ವಕಾಲದಲ್ಲಿ ಹೊಂಡ ತಪ್ಪಿಸಲು ಹೋಗಿ ಪರಸ್ಪರ ಕುಟ್ಟಿಕೊಂಡವರು, ಜಲ್ಲಿಕಿತ್ತ ದಾರಿಯಲ್ಲಿ ಜಾರಿ ಜಖಂಗೊಂಡವರು, ಕಿಷ್ಕಿಂಧೆ ಹಾರಹೋಗಿ ಮರಣಕ್ಕೇ ಸಂದವರ ಲೆಕ್ಕ ಮರೆತು ಬಿಡಬಾರದು. ವಿವೇಚನೆ ಉಳಿಸಿಕೊಂಡೇ ಪ್ರಯಾಣಿಸುವ ಬಹುಸಂಖ್ಯಾತರ ಆರೋಗ್ಯಕ್ಕಾಗಿ, ವಾಹನಗಳ ಸುಸ್ಥಿತಿಗಾಗಿ ಇಂಥ ದಾರಿಗಳು ಅವಶ್ಯವೇ ಸರಿ. ಇದರ ಮೇಲೆ ಜನಪ್ರಿಯತೆಯ ತಪ್ಪು ನಡೆಯಾಗಿ ಅಶಿಕ್ಷಿತ ಕೂಲಿಯ ವಿವೇಚನೆಯಂತೆ ಹೆಜ್ಜೆಗೆ ನಾಲ್ಕು ದಿಬ್ಬ ಮೊಳೆಯಿಸುವುದೋ (humps, rumblers) ಅತ್ಯಾಧುನಿಕ ಇಂಜಿನಿನ ಗಂಟಲು ಕಟ್ಟುವುದೋ (speed governers) ಆಗಬಾರದು. ಎಲ್ಲೋ ಸಂತ್ರಸ್ತ ಹಳ್ಳಿಗರು ಇಂಥಾ ದಾರಿಯನ್ನು ಅಗೆದು ಹಾಕಿದ್ದನ್ನಾಗಲಿ, ವೃತ್ತಿಪರ ಆಟದಲ್ಲಿ ಮತ್ತು ಕೌಟುಂಬಿಕವಾಗಿ ಆದರ್ಶಗಳನ್ನೇನೂ ಉಳಿಸಿಕೊಡದ ಮಾಜೀ ಕಿರಿಕೆಟ್ಟು ಕ್ಯಾಟ್ ಪ್ಯಾನ್ ಅಜರುದ್ದೀನ್ ಅಂತವರು ಮಗನನ್ನು ಕಳೆದುಕೊಂಡ ನೋವಿನಲ್ಲಿ “ಸೂಪರ್ ಬೈಕ್‌ಗಳನ್ನೇ ಬ್ಯಾನ್ ಮಾಡಬೇಕು” ಎಂಬ ಆಂದೋಳನಕ್ಕೆ ಧುಮುಕುವುದನ್ನಾಗಲಿ ಕೇವಲ ಕನಿಕರಿಸಬಹುದು, ಅನುಮೋದಿಸಲಾಗದು.

ಪೆಲತಡ್ಕ ಶಿವ (-ಸುಬ್ರಹ್ಮಣ್ಯ, ನನ್ನ ಸೋದರತ್ತೆಯ ಮಗ) ಮತ್ತು ರವಿ ಸುಮಾರು ಚರವಾಣಿ ಸರ್ಕಸ್ ವಿನಿಮಯ ಮಾಡಿಕೊಂಡರು. ಬಿಡುವಿನ ಸಮಯದಲ್ಲಿ ಶಿವ ಅದ್ಯಾವುದೋ ಮುದ್ರಾವಿಜ್ಞಾನದ ಭಂಗಿಯಲ್ಲಿ ಬೆರಳು ಗಂಟು ಹಾಕಿಕೊಂಡು ನನ್ನ ತಮಾಷೆಗೆ ಸಿಕ್ಕಿಕೊಳ್ತಿದ್ದ. ನನ್ನಂಗಡಿಯಲ್ಲಿ ಇರುವ ಮತ್ತು ಬರುವ ನೂರೊಂದು ಪರ್ಯಾಯ ಚಿಕಿತ್ಸೆ, ಮತ್ತವುಗಳ ಅನುಯಾಯಿಗಳನ್ನು ಕಂಡು, ಕೇಳಿ ಹುಟ್ಟಿದ ರೇಜಿಗೆಯ ಫಲವಿರಬೇಕು. ನನ್ನ ಪ್ರಾಯದ ಹಿರಿತನಕ್ಕೆ ಅವನು ಗೌರವ ಕೊಟ್ಟದ್ದಕ್ಕೆ ಅಲ್ಲಿ ‘ಮತೀಯ ಗಲಭೆ’ ಏನೂ ಆಗಲಿಲ್ಲ! ವಾಸ್ತವದಲ್ಲಿ ಪ್ರತಿ ವ್ಯಕ್ತಿಯೂ (ಜೀವಿಯೂ) ಎಷ್ಟೇ ಸಂಬಂಧಿಕ, ಆತ್ಮೀಯ ಹಾಗೇ ಹೀಗೇ ಅಂತ ಹೇಳಿದರೂ ಹಲವು ವಿಚಾರಗಳಲ್ಲಿ ಒಳಗಿಂದೊಳಗೆ ಅನ್ಯಮತ ಅಸಹಿಷ್ಣುವೇ ಇರುತ್ತಾನೆ. ಬಹಿರಂಗಪಡಿಸುವಲ್ಲಿ ದೇಶ, ಕಾಲ ಮತ್ತು ಸ್ವಂತದ ರಕ್ಷಣೆಗೆ ಒಗ್ಗುವ ಗುಂಪುಗಳನ್ನು ಆರಿಸಿಕೊಳ್ಳುವುದರಲ್ಲಿ ಸಮಾಜಜೀವಿಯಾಗಿ ಮುಂದುವರಿದಿರುತ್ತಾನೆ! ಇಲ್ಲವಾದರೆ ನಾನು ಶಿವನ ಮುದ್ರಾಪ್ರೀತಿಯನ್ನು ಗೇಲಿ ಮಾಡುವುದೂ ಹಿಂದೂವಾದಿಗಳು ಮುಸ್ಲಿಂ ಮಹಿಳೆಯರು ಗೋಷಾ ಹಾಕಿದ್ದನ್ನು ಕೆಟ್ಟದಾಗಿ ಹೆಸರಿಸುವುದೂ ಒಂದೇ.

ಕಾಸರಗೋಡು ತೇಜಸ್ವಿ ಶ್ರೀಹರಿಯ (ಪರ್ಯಾಯವಾಗಿ ರಾಮು ಬಂದಾಗ ಅವನ) ಕಿವಿಕಚ್ಚಿಕೊಂಡಿದ್ದ. ಮಹಿಳಾಮಣಿಗಳು ಉದ್ದಕ್ಕೂ ಶಿಸ್ತಾಗಿ ಬಲಪಂಥದ ಮೂರು ಸಾಲು ಸೀಟನ್ನಷ್ಟೇ ಬಿಸಿಮಾಡಿದರು. ಕೋಟೆ ಶಿವ ಮೌನದ ಕೋಟೆ ಹರಿಯಲೇ ಇಲ್ಲ. ಎಲ್ಲರೂ ಪರಿಚಿತರೇ ಆದರೂ ಇಂದಿನ ಜೀವನ ಕ್ರಮಕ್ಕನುಸಾರವಾಗಿ ಈ ಸನ್ನಿವೇಶಕ್ಕೆ ಮಾತ್ರ ಒಟ್ಟು ಸೇರಿದ್ದರಿಂದಲೋ ಏನೋ ಹೆಚ್ಚು ಸಮೂಹ-ಲಹರಿಗಳು ತೇಲಲಿಲ್ಲ. ಕಿಸ್ಬಾಯಿ ಕಿವಿಮುಟ್ಟುವ ಹಾಸ್ಯ ಚಟಾಕಿಗಳು ಸಿಡಿಯಲಿಲ್ಲ, ಬಸ್ಸಿನ ಸೂರು ಹಾರಿಹೋಗುವ ನಗೆಬಾಂಬುಗಳು ಸ್ಫೋಟಿಸಲಿಲ್ಲ. ‘ಅನಿಸುತಿದೆ’ಯಿಂದ ತೊಡಗಿ ‘ತೇರೇ ಅಂಗನೆ’ಯವರೆಗಿನ ಸಿನಿ-ಜ್ಞಾನ ಪರೀಕ್ಷೆ ಮಾಡುವ ಪದಬಂಡಿಗಳು ಹೊರಡಲೇ ಇಲ್ಲ. ಬಸ್ಸಿನ ಬಯಲು ಸೀಮೆಯ ಏಕತಾನತೆಯ ಓಟ ನನಗೆ ಶ್ರುತಿ ಕೊಟ್ಟಂತೆ ಆಗಿ ಅಯಾಚಿತವಾಗಿ ಸಿಳ್ಳೆಯಲ್ಲಿ ‘ವಿರಹಾಆಆ ನೂರು ನೂರು ತರಹಾಆಆ’ ತೇಲಿತು. ನನ್ನ ಮೀಸೆಯ ಬಿಗುನೋಡಿ ಮೌನವಾಗಿದ್ದವರು ಯಾರೋ ‘ಅಶೋಕಣ್ಣಂಗೆ ದೇವಕಿಯಕ್ಕನ ನೆನಪೂ’ಂತ ಕಾಲೆಳೆದರು. ನನ್ನ ರಾಗಮಾಲಿಕೆ ‘ಕಥನಕುತೂಹಲ’ದ ಘಾಟೀ ದಾರಿಗೋಡಿತು, ಪುರಾನೀ ಗೀತ್ಮಾಲಾದಲ್ಲಿ ವಿಹರಿಸಿತು, ಅಶ್ವತ್ಥರ ಧಾಟಿಯಲ್ಲಿ ಭಟ್ಟರ ‘ಎಂಥಾ ಮರುಳು’ ಸಾರಿತು. ಆಗೀಗ ನನ್ನ ಲಹರಿ ಹಿಡಿದವರಿದ್ದರು, ಸಣ್ಣಪುಟ್ಟ ಶಭಾಸ್ ಹೇಳಿದವರೂ ಇದ್ದರು. ಪುಣ್ಯಕ್ಕೆ ಅವರು ಯಾರಿಗೂ ಗೊತ್ತಿದ್ದಂತಿರಲಿಲ್ಲ – ನನ್ನ ಹಾಡುಗಳ ಸ್ಟಾಕೆಲ್ಲಾ ಗುಜರಿ ಮಾಲುಗಳು! ಆದರೂ ‘ದಾರಿ ಕಾಣದಾಗಿದೆ ರಾಘವೇಂದ್ರನೇ’ ಬರುವಾಗ ದಾರಿ ಬದಿಯಲ್ಲಿ ಜಿಟಿ ರಾಘವೇಂದ್ರನೇ ಕಾರಿಳಿದು ನಿಂತದ್ದು ನಿಜಕ್ಕೂ ತಮಾಷೆಯಾಗಿತ್ತು. ಅಲ್ಲೇ ನಮ್ಮ ಬಸ್ಸೂ ನಿಲುಗಡೆಗೆ ಬಂತು. ಹೀಗೆ ಪಿರಿಯಾಪಟ್ಟಣ, ಹುಣಸೂರು, ಬಿಳಿಕೆರೆಗಾಗಿ ಬಂದವರು ಎಡದ ಕವಲು ಹಿಡಿದು ಹೊಳೇನರಸಿಪುರದ ದಾರಿಯಲ್ಲಿ ಎಲ್ಲೂ ಅಲ್ಲದ ಒಂದು ತಾಣದಲ್ಲಿ ಬೆಳಗ್ಗಿನ ತಿಂಡಿಗೆ ನಿಲ್ಲುವಾಗ ಗಂಟೆ ಹತ್ತಾಗಿತ್ತು.

ಕಾರಿನ ಡಿಕ್ಕಿ ಮೊಬೈಲ್ ಕ್ಯಾಂಟೀನಿನಂತೇ ತೆರೆದುಕೊಂಡಿತು. ಒಂದೇ ವ್ಯತ್ಯಾಸ – ಬಿಲ್ ಯಾರು ಕೊಡುವುದೆಂಬ ಸಂಕಟವಿಲ್ಲ! ಬಿರಿಯಾನಿ ಸಲಾಡ್ ಭರ್ಜರಿಯಿತ್ತು. ಬಿಸಿಯಂಡೆಯಿಂದ ಜಗತ್ಪ್ರಸಿದ್ಧ ಜ್ಯೋತಿ ಕಾಫಿಯ ಹೊಳೆ ಹರಿದಿತ್ತು. ಆರೋಗ್ಯ ಪಂಥದವರಿಗೆ ರುಚಿಕಟ್ಟಾದ ಮಸಾಲೆ ಮಜ್ಜಿಗೆ, ಅದೂ ಬೇಡ ಎನ್ನುವವರಿಗೆ ಐವತ್ತು ಲೀಟರ್ ನೀರಿನ ಡ್ರಂ ಮುಕ್ತವಿತ್ತು. (ಈಶ್ವರ ಇದ್ದಿದ್ದರೆ ನಾಲಿಗೆ ಚಪಲಕ್ಕೆ ಕಾಫಿ ಚಪ್ಪರಿಸಿ, ದೇಹ ಪುಷ್ಟಿಗಾಗಿ ಎರಡು ಗೊಟ್ಟ ಮಜ್ಜಿಗೆ ಗಂಟಲಿಗೆರೆದು, ಮತ್ತೂ ಕೊರತೆಬಿದ್ದಲ್ಲಿಗೆ ನೀರು ತುಂಬಿಕೊಳ್ತಿದ್ದ!) ಮುಂದಿನ ಅಜೆಂಡಾ ಬಾಳೆ ಹಣ್ಣು, ತೆಂಗಿನಕಾಯಿ ಬರ್ಫಿ. ಸ್ವಂತ ಸಂಬಳ, ಭತ್ತೆಗಳ ಬಡ್ತಿ ಎಷ್ಟೇ ಅತಾರ್ಕಿಕವಾಗಿ ಮಂಡನೆಯಾದರೂ ಚರ್ಚೆಯಿಲ್ಲದೆ ಪಾಸು ಮಾಡುವ ನಮ್ಮ ಗೌರವಾನ್ವಿತ (ಬೇರೆ ಶಬ್ದ ಬಳಸಿದರೆ ನಾಳೆ ವಿಧಾನಸೌಧಕ್ಕೆ ಕರೆಸಿ ಸಮ್ಮಾನ ಮಾಡಿಯಾರು!) ಜನಪ್ರತಿನಿಧಿಗಳಂತೆ ನಾವು ಉಸುರಿಗಷ್ಟೇ ಜಾಗ ಉಳಿಸಿಕೊಂಡು ಎಲ್ಲವನ್ನೂ ಅನುಮೋದಿಸಿದೆವು. (ಯಥಾ ರಾಜ ತಥ್ ಈ ಪ್ರಜೆ) ಶ್ರೀಹರಿ ಎಲ್ಲರೂ ಬಳಸಿದ ಹಾಳೆ ಬಟ್ಟಲು ಮತ್ತು ಕಾಗದದ ಲೋಟಗಳನ್ನು ಒಟ್ಟು ಮಾಡಿ ದಾರಿಯಾಚಿನ ಪೊದರ ಸಂದಿಗೆ ಗಿಡಿದದ್ದು, ಪ್ಲ್ಯಾಸ್ಟಿಕ್ ಚಮಚಗಳನ್ನು ಪ್ರತ್ಯೇಕಿಸಿ ನಗರಕ್ಕೆ ಮರಳಿಸಲು ಇಟ್ಟುಕೊಂಡದ್ದು ಪ್ರಕೃತಿಪಾಠದ ಒಳ್ಳೆಯ ಅನುಷ್ಠಾನ. ಇಲ್ಲದಿದ್ದರೂ ಪುರಾಣೋಕ್ತ ಶ್ರೀಹರಿ (ಕೃಷ್ಣ) ಪರಿಸರಪ್ರಿಯನೇ. ಪುರಾಣಿಕರು ಆತನನ್ನು ಸುಮ್ಮನೇ ಗೋವರ್ಧಗಿರಿಧಾರಿ ಮತ್ತು ಕಾಳಿಂಗಮರ್ದನ (ಗಮನಿಸು ವಧೆಯಲ್ಲ) ಎನ್ನಲಿಲ್ಲ!

ಕೃಷ್ಣರಾಜ ನಗರ ದಾಟುವಾಗ ನಾನು ಕಾಲೇಜಿನಲ್ಲಿದ್ದಾಗ ಇಲ್ಲಿ ಭಾಗವಹಿಸಿದ ಹತ್ತು ದಿನಗಳ ವಾರ್ಷಿಕ ಎನ್ಸಿಸಿ ಶಿಬಿರ ನೆನಪಿಗೆ ಬಂತು. ಭೇರ್ಯ ಕಳೆದು ಹೊಳೆನರಸೀಪುರ ದಾಟುವಾಗ ದೇಶಕ್ಕೆ ಕರ್ನಾಟಕ ಕೊಟ್ಟ ಏಕೈಕ ಪ್ರಧಾನಿಯ ಸ್ಮರಣೆ ಬಾರದಿರಲಿಲ್ಲ. ಅದು ದೇವರೋ ದೆವ್ವವೋ ಅಥವಾ ಒಟ್ಟು ನಮ್ಮನ್ನು ನಾವೇ ಆಳಿಕೊಳ್ಳುವ ವ್ಯವಸ್ಥೆಯ ಅಸಾಮರ್ಥ್ಯದ ಪ್ರತಿನಿಧಿಯೋ ಯೋಚಿಸಿದರೆ ವೃಥಾ ಮಂಡೆಬೆಚ್ಚ. ಅಲ್ಲಿ ಊರಿನಾಚೆಯ ಗುಡ್ಡೆ, ಮೇಲಕ್ಕೂ ಹರಿದ ದಾರಿ ಸಣ್ಣ ಕುತೂಹಲ ಮೂಡಿಸಿತು. ಮುಂದೆ ಅರಸೀಕೆರೆಯಲ್ಲಿ ಇದನ್ನೂ ಮೀರಿಸಿದ ಇನ್ನೊಂದೇ ಗುಡ್ಡೆ, ಗುಡಿ ಎಲ್ಲಾ ಕಾಣಿಸಿ ಈ ಗುಡ್ಡೇ ಹಿತ್ತಲಿನವನ ಗುಡ್ಡೆ ಏರುವ ಪ್ರಜ್ಞೆಯೇ ತಪ್ಪಿಹೋಯ್ತು. ಇಂಥದ್ದೇ ಬೆಟ್ಟದಪುರದ ಬೆಟ್ಟ (ಸ್ವಲ್ಪ ಆಚೆ, ರಾಮನಾಥಪುರದ ದಾರಿಯಲ್ಲಿದೆ) ಕೆಲವು ವರ್ಷಗಳ ಹಿಂದೆ ನಾನೂ ದೇವಕಿಯೂ ಹತ್ತಿದ್ದೆವು. ನಗರಗಳ ಹಿತ್ತಿಲಿನಂತೇ ಇರುವ ಈ ಪ್ರಾಕೃತಿಕ ತಾಣಗಳು ಗಾದೆ ಮಾತಿನಂತೆ ದೂರಕ್ಕಷ್ಟೇ (ನುಣ್ಣಗೆ ಮತ್ತು) ಆಕರ್ಷಕ. ಅಲ್ಲಿಗೆ ಹೋದರೆ ಅವುಗಳ ಮೇಲಾದ ನಾಗರಿಕ ಅವಹೇಳನವೇ ನಮ್ಮ ಗಮನ ಸೆಳೆದು ಸೋಲಿಸಿಬಿಡುತ್ತವೆ. [ಇದೇ ಅರಸೀಕೆರೆ ಸದಾಶಿವನಿಗೆ ಮೋಟಾರ್ ಸೈಕಲ್ ಕಲಿಕೆ ಕೇಂದ್ರವಾಗಿತ್ತು. ಆ ಕಥೆಯನ್ನು ಅವನ ಬಾಯಲ್ಲೇ ದಿಬ್ಬಣದ ಮೊದಲ ಹೆಜ್ಜೆಯೊಡನೆ ಲಗತ್ತಿಸಿದ ವಿಡಿಯೋದಲ್ಲಿ ಪೇಟೆಯ ದೃಶ್ಯದೊಡನೆ ಕೇಳಬಹುದು]

‘ಗಂಡಸಿ’ (ಊರಿನ ಹೆಸರು) ಇದ್ದಂತೆ ಹೆಂಗಸಿ ಇರಬಹುದೇ ಎನ್ನುವ ಜಿಜ್ಞಾಸೆ, ವರದರಾಜ ‘ಬಾಣಾವರ’ (ಊರಿನ ಹೆಸರು) ಹೋಗಿ ವಾರದ ರಜಾ ಭಾನುವಾರ ಆದ ಕಥೆ, ತರೀಕೆರೆ ಏರಿಮೇಲೆ ಹೋಗುತ್ತಿದ್ದಂತೆ ಬಸ್ಸಿನೊಳಗೆದ್ದ ಕಂಯ್ ಕುಂಯ್ (ಮೂರು-ಕರಿ-ಕುರಿ-ಮರಿ) ಹಾಡು, ಯಾರದೋ ಮಾಯಾಚೀಲದಿಂದ ಬಸ್ಸಿನೊಳಗೆ ವಿತರಣೆಗೊಂಡ ಹುಣಸೇಹಣ್ಣಿನ ಮಿಠಾಯಿಯಂತೆ “ಸಾಕು, ಬೇಡ” ಎನ್ನುತ್ತಲೇ ಮತ್ತೆ ಮತ್ತೆ ಚಪ್ಪರಿಸಿದೆವು!

ಕಡೂರು ವಲಯದಲ್ಲಿ ಸಾಗುವಾಗ ಎಡಕ್ಕೆ ಕಾಣಿಸಿದ ಬಾಬಾ ಬುಡನ್ ಗಿರಿ ಬೆಟ್ಟ ಸಾಲಿನ ನೆತ್ತಿಯುದ್ದಕ್ಕೆ ಗಾಳಿಗಿರಣಿಗಳು ನಿಯತ ಅಂತರದಲ್ಲಿ ಸಾಲುಗಟ್ಟಿದ್ದವು. ಅವುಗಳ ಒಂದು ಸುಂದರನೋಟವನ್ನು ನನ್ನ ಪುಟ್ಟ ಕ್ಯಾಮರಾದಲ್ಲಿ ಹಿಡಿಯೋಣವೆಂದರೆ ಬಸ್ಸಿನೋಟದ ದಡಬಡ, ಮಾರ್ಗದ ಬದಿಯ ಮರ ವಿದ್ಯುತ್ ಸಂಪರ್ಕಗಳು ಮತ್ತು ಕಟ್ಟಡಗಳ ಮರೆ, ಕೆಟ್ಟ ಬೆಳಕು ಮತ್ತು ಚೌಕಟ್ಟು. ಅನಿವಾರ್ಯವಾಗಿ ಒಂದೇ ಒಂದು ಮಿನಿಟು ಬಸ್ಸನ್ನು ನಿಲ್ಲಿಸಿ ಒಂದು ದೃಶ್ಯವನ್ನೇನೋ ಹಿಡಿದುಕೊಂಡೆ. ಆದರೆ ಸ್ವಲ್ಪವೇ ಮುಂದೆ ಕುರುಚಲು ಕಾಡಿನ ಪ್ರದೇಶವನ್ನೇ ಸಪಾಯಿ ಮಾಡಿತ್ತು. ಅಲ್ಲಿ ಹತ್ತೆಂಟು ಗಾಳಿಗಿರಣಿಯ ಭಾರೀ ಕಂಬಗಳ ದಾಸ್ತಾನೂ ಅವನ್ನು ಸೂಕ್ತ ನೆಲೆಗಳಿಗೆ ಸಾಗಿಸಲು ಸಹಸ್ರಪದಿಯಂಥ ಒಂದೆರಡು ಲಾರಿಗಳೂ ನಿಂತಿದ್ದವು. ಆ ವಠಾರವನ್ನು ಕಳೆದು ನಾವು ಮುಂದುವರಿದಂತೆ, ಬೆಟ್ಟ ಸಾಲಿನ ಹಿಮ್ಮೈ ಉದ್ದಕ್ಕೂ ಈ ಕಂಬ ಸಾಗಣೆಗೆ ಹೊಸದಾಗಿ ಕಡಿದ ಮಣ್ಣ ದಾರಿ ಕಂಡು ನನ್ನ ಹೃದಯ ತಲ್ಲಣಿಸಿತು. ಒಂದೊಂದು ‘ಪರಿಸರ ಸ್ನೇಹೀ’ ಕಂಬ ನಿಲ್ಲ ಬೇಕಾದರೂ ಮುಂದೆ ಎಲ್ಲ ಋತುಮಾನಗಳ ಪ್ರಾಕೃತಿಕ ಆಘಾತಗಳ ನಡುವೆ ಊರ್ಜಿತದಲ್ಲಿರಬೇಕಾದರೂ ಈ ವ್ಯವಸ್ಥೆ ಉಳಿದೇ ಉಳಿಯಬೇಕು. (ನೆನಪಿರಲಿ, ಇಲ್ಲಿ ತಯಾರಾದ ವಿದ್ಯುಚ್ಛಕ್ತಿ ಸಾಗಿಸುವ ವ್ಯವಸ್ಥೆ ಬೇರೆಯೇ ಮತ್ತು ಇನ್ನಷ್ಟು ಸಮರ್ಥವಿರಲೇ ಬೇಕು) ಅಂದರೆ ಅಷ್ಟೂ ವಲಯದ ಪ್ರಾಕೃತಿಕ ಹುಲ್ಲುಗಾವಲಿನಲ್ಲಿ ಆಳ ಗಾಯ, ಕಣಿವೆಯ ಝರಿ, ತೊರೆಗಳಲ್ಲಿ ಹೂಳು ಒಂದು ಕಾಲಕ್ಕಷ್ಟೇ ಇದ್ದು ಹೋಗುವ ಸಂಗತಿಯಲ್ಲ. ಇನ್ನು ಇಲ್ಲಿ ವನ್ಯ ಜೀವಿಗಳ ನೈಜ ಊಟ, ಕೂಟಗಳಿಗಾಗುವ ನಷ್ಟ, ಭಂಗ, ದೈತ್ಯ ಗಿರಿಗಿಟಿಗಳಿಗೆ ಬಡಿದು ಸಾಯುವ ಬಾನಾಡಿಗಳ ಲೆಕ್ಕ ಹಿಡಿದವರುಂಟೇ? ಮೀಟರ್ ಓಡಿದ್ದಕ್ಕೆ ಪ್ರಾಮಾಣಿಕ ದುಡ್ಡು ಕೊಡುವ ತಾಕತ್ತು ಉಂಟೆಂದು ಇಂದು ನೈಜ ಗಾಳಿಬೆಳಕಿಗೆ ತತ್ವಾರವಿಲ್ಲದ ಹಳ್ಳಿಮೂಲೆಯಲ್ಲೂ ಕತ್ತಲಕೊತ್ತಲಗಳನ್ನು ಕಟ್ಟಿ, ಸೂರ್ಯನನ್ನು ನಾಚಿಸುವ ದೀಪ, ಹಿಮಾಲಯದ ತುಣುಕು ತಂದಿಟ್ಟಂತೆ ಹವಾನಿಯಂತ್ರಣ ಹೆಚ್ಚಿಸುತ್ತಿರುವ ನಮ್ಮ ನಗರ ಸಂಸ್ಕೃತಿ ನಾಗರಿಕತೆಯೇ ಇರಬಹುದೇ? [ಇದಕ್ಕೆ ಉತ್ತರ ತಿಳಿದೂ ಹೇಳದಿದ್ದರೆ ಅನಂತಪದ್ಮನಾಭನ ಬಿ ಕೊಠಡಿಯ ಬಾಗಿಲು ತೆರೆದವನ ಪಾಪ, ಜನಾರ್ದನ ರೆಡ್ಡಿಯ ಗುಪ್ತ ಕೋಠಿಗಳ (/ಕೋಟಿಗಳ) ಲೆಕ್ಕ ಹಿಡಿಯಲು ಹೊರಟವನ ಸಂಕಟ ನಿನ್ನನ್ನು ಅಡರಲಿ]

ಮಧ್ಯಾಹ್ನ ಒಂದೂ ಮುಕ್ಕಾಲಕ್ಕೆ ಭದ್ರಾವತಿ. ಹೆದ್ದಾರಿ ಬರಲಿದೆ, ಮಧ್ಯಾಹ್ನದ ಊಟಕ್ಕಲ್ಲದಿದ್ದರೂ ಸಂಜೆಯ ಕಾಫಿಗೆ ಬೆಳಗಾವಿ ಗ್ಯಾರಂಟಿ ಎನ್ನುವ ನಮ್ಮ ಆಶಯ ನೆಲಕಚ್ಚಿತ್ತು. ಬೆಳಿಗ್ಗೆ ಬಿರಿಯಾನಿ ಜಡಿದ ಹೊಸತರಲ್ಲಿ ಪೆಲತಡ್ಕ ಶಿವ “ಶಿವಪ್ಪಾ ಕಾಯೋ ತಂದೇ . . .” ಹಾಡಲು ತೊಡಗಿ ಇತರರ ತಮಾಷೆಗೆರವಾಗಿದ್ದ. ಆದರೀಗ ಅದರದೇ ಚರಣವನ್ನು ಕುಕವಿ ಪರಿಷ್ಕರಣದಲ್ಲಿ “ಗಂಟೆ ಕಳೀತು ಒಂದೂ ಎರಡೂ ಹೆದ್ದಾರಿ ಬರಲಿಲ್ಲಾಆಆಆ ಹಸಿವೆಯನ್ನು ತಾಳಲಾರೆ, ಶಿವನೇ ಕಾಡುಪಾಪಯ್ಯಾ” ಅಂತ ಎಲ್ಲರೂ ಹಾಡುವುದು ಬಾಕಿ. ಎರಡೂ ಕಾಲಕ್ಕೆ ನಮ್ಮನ್ನು ಕಾಪಾಡಿದ್ದು ಶಿವಮೊಗ್ಗದ ಹೋಟೆಲ್! ಕೂಳುಧ್ವಂಸ ಮುಗಿಯುತ್ತಿದ್ದಂತೆ ಹೊರಗೆ ಭರ್ಜರಿ ಮಳೆ. ಯಡ್ಯೂರಪ್ಪನ ಖಾಸಾ ಕ್ಷೇತ್ರವಿದು. ಮತ್ತೆ ತೋರಿಕೆಗೆ ‘ನಮ್ಮದೇ ಪಕ್ಷದ’ ಅಧ್ಯಕ್ಷ ಈಶ್ವರಪ್ಪನಿಗೂ ಶಿವಮೊಗ್ಗವೇ ತವರುನೆಲ. ವರ್ಷದ ಹಿಂದೊಮ್ಮೆ ಇಲ್ಲಿಗೆ ಭೇಟಿ ಕೊಟ್ಟು ದಿನವೆರಡು ಕಳೆದ ನೆನಪೂ ಸೇರಿಸಿಕೊಂಡು ಹೇಳುತ್ತೇನೆ (ಇಲ್ಲೇ ಹಳೆ ಕಡತ – ತೀರ್ಥಯಾತ್ರೆ ನೋಡಬಹುದು) ಇಲ್ಲಿ ಅಭಿವೃದ್ಧಿಯ ಅಲೆ ಸುನಾಮಿ ಗಾತ್ರದಲ್ಲೇ ಅಪ್ಪಳಿಸಿದೆ. ದೇಶಪ್ರೀತಿ, ದೇವಭಕ್ತಿ, ಗುರುವೃಂದದ ಗೌರವ, ಭಾಷಾಭಿಮಾನ, ಸಂಸ್ಕೃತಿ ರಕ್ಷಣೆ ಮತ್ತು ಪೋಷಣೆ, ಪ್ರಾಮಾಣಿಕತೆ, ಪಾರದರ್ಶಕತೆ ಇತ್ಯಾದಿ ಇತ್ಯಾದಿ ಅತ್ಯುನ್ನತ ಮೌಲ್ಯಗಳ ಸಾಂಗತ್ಯದಲ್ಲಿ ಇಬ್ಬರೂ ಶಿವಮೊಗ್ಗವನ್ನು ‘ನಮ್ಮದರಂತೆಯೇ ತಿಳಿಯುವುದು’ ಬಿಟ್ಟು ತಮ್ಮದನ್ನೇ ಆಗಿಸಿಕೊಳ್ಳುವುದರಲ್ಲಿ ಅರೆದು ಚೂರ್ಣ ಮಾಡಿದ್ದಾರೆ. ಬಸ್ ನಿಲ್ದಾಣವೆಂಬ ಕೊಳಚೆ ಕೇಂದ್ರದ ಹೊರ ಅಂಚಿನಲ್ಲೇ ಇದ್ದ ನಮ್ಮ ಬಸ್ಸ್ ಏರಬೇಕಾದರೆ ನಾವು ವಿಭಿನ್ನ ಬಣ್ಣ ಮತ್ತು ವಾಸನೆಗಳ ಕೆರೆ ತೊರೆಗಳನ್ನು ಉತ್ತರಿಸಬೇಕಾಯ್ತು.

ಸ್ವಾತಂತ್ರ್ಯಪೂರ್ವದಲ್ಲಿ ಜನರನ್ನು ಒಗ್ಗೂಡಿಸಲು ನಾಯಕ ಶಿಖಾಮಣಿಗಳು ವಿನಾಯಕನ ಉತ್ಸವವನ್ನು ನೆಪ ಮಾಡಿಕೊಂಡರೆಂದು ಕೇಳಿದ್ದೇವೆ. ಆದರಿಂದು ಅದೇ ಉತ್ಸವ ಬಿರಡೆ ಕಳಚಿದ ಬಾಟಲಿ ಭೂತದಂತೆ ಊರೂರಿನಲ್ಲಿ ನಮ್ಮೊಳಗಿನ ಅಪನಂಬಿಕೆಯನ್ನು ಬೆಳೆಸುತ್ತಿರುವುದನ್ನು ನಾನೇನು ಹೊಸದಾಗಿ ಹೇಳಬೇಕಾಗಿಲ್ಲ. ನಮ್ಮ ಗ್ರಹಾಚಾರಕ್ಕೆ ಅಂದು ಸಂಜೆ ಶಿವಮೊಗ್ಗದಲ್ಲಿ ಎಲ್ಲೋ ವಿನಾಯಕ ವಿಸರ್ಜನೆ ನಡೆಯುವುದಿತ್ತು. ನಾವು ಆತಂಕದಲ್ಲೇ ಹೊಟೆಲಿನಲ್ಲೂ (ಚರವಾಣಿ ಸಂಪರ್ಕದಿಂದ ದಿಬ್ಬಣದ ಬರವನ್ನು ತಿಳಿದು ಶಿವಮೊಗ್ಗದಲ್ಲಿ ಎದುರುಗೊಂಡ) ನಿನ್ನ ಆತ್ಮೀಯರಲ್ಲೂ ವಿಚಾರಿಸಿಕೊಂಡೇ ಮುಂದುವರಿದೆವು. ಆದರೂ ಪೊಲಿಸ್ ಬಂದೋಬಸ್ತು, ಮಾರ್ಗ ತಡೆಗಳು ಮತ್ತು ನಿರ್ಬಂಧಗಳನ್ನೆಲ್ಲ ಕಳಚಿಕೊಂಡು ಊರ ಹೊರಬಿದ್ದಾಗ ತಪ್ಪುದಾರಿಯಲ್ಲಿ ನಾಲ್ಕೈದು ಕಿಮೀ ಓಡಿಯಾಗಿತ್ತು! ಹೊನ್ನಾಳಿಗೆ ಸುಮಾರು ನಲ್ವತ್ತು ಕಿಮೀ ಅಂತರದ ಸರ್ಕಾರೀ (ಬಸ್ಸಿನ) ಒಳ್ಳೆಯ ದಾರಿ ಬಿಟ್ಟು ನಾವು ಸುಮಾರು ಐವತ್ತು ಕಿಮೀ ಬಳಸಿನ ಜಲ್ಲಿಕಿತ್ತು, ದೂಳಿ ಸ್ನಾನ ಮಾಡಿಸುವ ಸಾವ್ಕಾರೀ ಬಸ್ಸಿನ ದಾರಿ ಹಿಡಿದಿದ್ದೆವು. ಹಿಂದೋಡಿ, ಹೊಸದಾರಿಗೆ ಪರಡುವ ಯೋಚನೆ ಬಿಟ್ಟು ಹಾಗೇ ಮುಂದುವರಿದೆವು. ಆದರೆ ಪುರಂದರ ದಾಸರೇ, ಆದದ್ದೆಲ್ಲಾ ಒಳಿತೇ ಆಗಲಿಲ್ಲ!

ಹಾರನಹಳ್ಳಿ ಹಾರಿ, ಸವಳಂಗ ಕಳಚಿಕೊಂಡ ಮೇಲೆ ಕಾರಿನ ಅಡಿಯಲ್ಲೇನೋ ಕಳಚಿಕೊಂಡದ್ದು ರಾಮೂಗೆ ಅರಿವಾಯ್ತು. ಹಣಿಕಿ, ತಗ್ಗಿ ನೋಡುವಾಗ ಸಾಧಾರಣ ತಗಡೊಂದು ಅರ್ಧ ಕಳಚಿಕೊಂಡು, ದಾರಿಗುಜ್ಜುತ್ತಿರುವುದು ಕಾಣಿಸಿತು. ನನ್ನ ಆರೋಹಣದ ಸಾಹಸಯಾತ್ರೆಗಳಲ್ಲಿ ಇಂಥ ಪ್ರಸಂಗಗಳು ಬಂದಾಗೆಲ್ಲ ಮೊದಲು ನಾವೇನು ಮಾಡಬಹುದು ಎಂಬುದನ್ನೇ ಯೋಚಿಸುತ್ತೇವೆ, ಕಾರ್ಯಗತಗೊಳಿಸುತ್ತಿದ್ದೆವು. ತೋಟ ಮತ್ತು ಗೃಹಕೃತ್ಯದ ಯಾವುದೇ ದೈಹಿಕ ಕೆಲಸವನ್ನು ಮಾಡದೇ ಬಿಟ್ಟವನು ನೀನಲ್ಲ. ನನ್ನ ಪರಿಚಿತ ಮರಿಕೆ ವಲಯದಲ್ಲಿ ಸರ್ವಶಕ್ತ ಅಣ್ಣನಿದ್ದಂತೇ (ನನ್ನ ಹಿರಿಯ ಸೋದರಮಾವ – ಎ.ಪಿ.ತಿಮ್ಮಪ್ಪಯ್ಯ) ಮಡಿಕೇರಿ ವಲಯದಲ್ಲಿ ನೀನೇ ಘಟ್ಟಿಗ! ಆ ಮನೋ-ದೈಹಿಕ ಸ್ಥಿತಿಯಲ್ಲಿ, ಎಂದಿನಂತಾಗಿದ್ದರೆ (ಅಂದರೆ ಈಚಿನ ನಿನ್ನ ಹೃದಯ ಚಿಕಿತ್ಸೆಯಲ್ಲದಿದ್ದರೆ), ದಿಬ್ಬಣದ ಹಿರಿಯ ಎಂಬ ಆರೋಪಿತ ಗೌರವವನ್ನು ಬದಿಗೆ ನೂಕಿ ನೀನೇ ಜ್ಯಾಕ್ ಇಟ್ಟು, ಸ್ಪ್ಯಾನರ್ ತಿರುವಿದ್ದರೆ ಯಾರೂ ಆಶ್ಚರ್ಯಪಡುತ್ತಿರಲಿಲ್ಲ. ಇನ್ನು ಸ್ವತಃ ರಾಮುವೋ ಶ್ರೀಹರಿಯೋ ಕಾರಡಿಗೆ ನುಸುಳಬೇಕಿತ್ತು ಎಂದು ನನ್ನ ಯೋಚನೆಯಲ್ಲ. ನಮ್ಮ ಬಸ್ಸಿನ ಹುಡುಗನನ್ನೋ ಚಾಲಾಕಿಯ ಚಾಲಕನನ್ನೋ ಕೇಳಬಹುದಿತ್ತು. ಆದರೆ ಕರದೊಳಗಿನ ಅದ್ಭುತ (ಚರವಾಣಿ) ಮತ್ತು ‘ಇಪ್ಪತ್ತ್ನಾಲ್ಕು ಗಂಟೆ, ಹನ್ನೆರಡು ತಿಂಗಳು, ಕರೆದಲ್ಲಿ ಸೇವೆಗೆ ಸಿದ್ಧ’ ಎಂಬ ಕಾರಿನ ತಯಾರಕರ ಹೇಳಿಕೆಯನ್ನು ಒರೆಗೆ ಹಚ್ಚುವ ಹೊಸ ತಲೆಮಾರಿನವರ ಉತ್ಸಾಹದೆದುರು ಅಯಾಚಿತ ಟಿಪ್ಪಣಿ ಹಾಕುವುದು ನನ್ನಿಂದಾಗಲಿಲ್ಲ! Toll free ಕರೆಗೆ ಕಂಪೆನಿ ಸರಿಯಾಗಿಯೇ ಸ್ಪಂದಿಸಿ, ಪರಿಣತರಿಬ್ಬರು ದಾವಣಗೆರೆಯ ದೂರದಿಂದ (ಸುಮಾರು ಐವತ್ತು ಕಿಮೀ) ಕಾರಿನಲ್ಲಿ ಧಾವಿಸಿ ಬಂದರು, ಪರಿಹಾರ ಕೊಟ್ಟರು. (ಆ ತಗಡನ್ನು ಕಳಚಿಕೊಟ್ಟು, “ವಿರಾಮದಲ್ಲಿ ನಿಮ್ಮೂರಿನಲ್ಲಿ ಬದಲಿ ಹಾಕಿಸಿಕೊಳ್ಳಿ. ಪ್ರಯಾಣಕ್ಕೇನೂ ಆತಂಕವಿಲ್ಲ” ಎಂಬ ಭರವಸೆ) ಆದರೆ ನಮ್ಮ ಅಮೂಲ್ಯ ಎರಡೂವರೆ ಗಂಟೆ ವ್ಯರ್ಥ ಕಳೆದೇ ಹೋಯ್ತು!

ದ್ವಾರಕದ ರವಿ, ಕರಿಕೋಟು ಕೊಡಹಿ, ಬಿಳಿ ಕಾಲರ್ ನೇವರಿಸಿ, ದಿಢೀರನೆದ್ದು “I object, your honour” ಎಂದು ಹೇಳಿದರೂ ಹೇಳಿದನೇ. ಮತ್ತೆ ಪ್ರಧಾನ ಸಾಕ್ಷಿಗೆ ಪೆಲತಡ್ಕದ ರವಿಯನ್ನೇ ಮುಂದೂಡುವುದರಲ್ಲೂ ಸಂಶಯವಿಲ್ಲ. ಅವರ ಲೆಕ್ಕಕ್ಕೆ ಆ ಎರಡೂವರೆ ಗಂಟೆ ಹೊಸ ಅನುಭವ ಗಳಿಕೆಗೆ ಅಯಾಚಿತ ಅವಕಾಶವೇ ಆಯ್ತು. ಬಯಲು ಸೀಮೆಯ ಆ ಕಚ್ಚಾ ಮಾರ್ಗದ ಎರಡೂ ಬದಿಯಲ್ಲಿ ಕಣ್ಣೆಟಕುವವರೆಗೂ ಜೋಳದ ಹೊಲಗಳು ಹಾಸಿದ್ದವು. ನಮ್ಮ ಸಮೀಪದಲ್ಲೇ ಸಿದ್ಧೇಶನೆಂಬ ತರುಣ (ಹೊಲದೊಡೆಯ) ಒಂದಷ್ಟು ಖಾಲೀ ನೆಲವನ್ನು ಹುರುಳಿ ಬಿತ್ತನೆಗೆ ಉತ್ತು, ಹಸನು ಮಾಡುತ್ತಿದ್ದ. ಆತನೊಡನೆ ಶಿವ, ರವಿಯರು ಶುರುಮಾಡಿದ ಉಭಯ ಕುಶಲೋಪರಿ ಬೆಳೆ, ಜಾನುವಾರು, ಮಾರ್ಕೇಟೂ, ರಾಜಕಾರಣ ಎಂದಿತ್ಯಾದಿ ಲಂಬಿಸುತ್ತಲೇ ಹೋಯ್ತು. ಆತ ಪಕ್ಕದ ಮಡಿಯಿಂದ ಹಾಲುಗಟ್ಟಿದ ಮುಸುಕಿನ ಜೋಳ ಧಾರಾಳ ಮುರಿದು ಕೊಟ್ಟು ನಮ್ಮನ್ನು ಉಪಚರಿಸಿದ. ಮತ್ತಾತ ಉಳುಮೆ ಮುಗಿಸಿ, ಎತ್ತುಗಳನ್ನು ಗಾಡಿಗೆ ಕಟ್ಟಿ ಹಳ್ಳಿಗೆ ಹೊರಟಾಗ ಅಕ್ಷರಶಃ ಶಿವ ಮತ್ತು ರವಿ ಅವನ ಗಾಡಿಯೇರಿ ಹೊರಟೇ ಬಿಟ್ಟಿದ್ದರು. ಆಗ ಸಂಜೆಯಾಗಿತ್ತು ಮತ್ತು ಕಾರು ರಿಪೇರಿಯಾಗುವುದರಲ್ಲಿದ್ದುದರಿಂದ ಸಿದ್ಧೇಶನ ಮನೆಯ ಜ್ವಾಳದ್ರೊಟ್ಟಿ ಉಚ್ಚೆಳ್ ಚಟ್ನಿ ಅತಿಥಿ ಸತ್ಕಾರಕ್ಕೆ ವಿನಿಯೋಗವಾಗುವುದು ಉಳಿಯಿತು. ಉಳಿದ ನಾವೆಲ್ಲ ಯಥಾನುಶಕ್ತಿ ಡಿಕ್ಕಿ-ಕ್ಯಾಂಟೀನಿನ ಸ್ಟಾಕ್ ಕ್ಲಿಯರೆನ್ಸ್ ಮಾಡುವುದರಲ್ಲೂ (ಅಂಥದ್ದರಲ್ಲೂ ಮಾರಣೇದಿನ ಬೆಳಿಗ್ಗೆ ಚೆಲ್ಲಲು ಕೆಲವು ತಿನಿಸು ಉಳಿದಿತ್ತು ಎನ್ನುವಾಗ ಶ್ರೀದೇವಿಯ ಧಾರಾಳತನವನ್ನು ಹೊಗಳಲೇಬೇಕು) ಪ್ರಯಾಣದ ದಡಬಡದಲ್ಲಿ ಅಸ್ಪಷ್ಟವಾಗಿಯೇ ಬಾಕಿಯಾಗಿದ್ದ ‘ಪರನಿಂದೆ, ಆತ್ಮಶ್ಲಾಘನೆ’ಗಳನ್ನು ಪೂರೈಸಿಕೊಳ್ಳುವುದರಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದೆವು!

ಮುಂದೆ ಪೂರ್ಣ ಕತ್ತಲಾವರಿಸುತ್ತಿದ್ದಂತೆ ನಾವು ಬೆಂಗಳೂರು-ಹುಬ್ಬಳ್ಳಿ ಹೆದ್ದಾರಿಯನ್ನು ಸೇರಿಕೊಂಡೆವು. ಅದುವರೆಗಿದ್ದ ಊರು ನೋಡುವ ಅವಕಾಶ ತಪ್ಪಿತ್ತು. ಅಲ್ಲದೆ ನಮ್ಮೊಳಗಿನ ಮಾತು, ಹಾಡು, ಹುಡಿ ಎಲ್ಲಾ ಲವಲವಿಕೆ ಕಳೆದುಕೊಂಡದ್ದಕ್ಕೋ ಏನೋ ಶ್ರೀಹರಿ ಬಸ್ಸಿನೊಳಗಿನ ವಿಡಿಯೋಕ್ಕೆ ಎರಡು ಸಿನಿಮಾ – ಜುರಾಸಿಕ್ ಪಾರ್ಕ್ ಮತ್ತು ಲಾಸ್ಟ್ ವರ್ಲ್ಡ್, ಹಾಕಿದ. ಭೋರಿಡುವ ಜಲಪಾತ, ಹೆಗ್ಗೌಳಿಗಳ ದಾಪುಗಾಲು, ವಿಭಿನ್ನ ಯುಗಗಳೆರಡರ ಸಿನಿಮೀಯ ಮುಖಾಮುಖಿ ಅನಾವರಣಗೊಳ್ಳುತ್ತಿದ್ದಂತೆ ನಮ್ಮ ವಾಹನಗಳು ರಾಣೆಬೆನ್ನೂರಿನಿಂದ ತೊಡಗಿ ಹಾವೇರಿ, ಹುಬ್ಳಿಗಾಗಿ ಬೆಳಗಾವಿಯತ್ತ ಏಕ ಓಟವನ್ನು ನಡೆಸಿದ್ದವು. ಎರಡೋ ಮೂರೋ ಸುಂಕದ ಕಟ್ಟೆಗಳಲ್ಲಿ ಮತ್ತು ಚಾಲಕದ್ವಯರಿಗೆ ಏಕತಾನತೆ ಕಡಿಯುವ ನೆಪದಲ್ಲಿ ಎಲ್ಲೂ ಅಲ್ಲದಲ್ಲಿ ಒಮ್ಮೆ ನಿಂತದ್ದು ಬಿಟ್ಟರೆ ನಮ್ಮದು ಅಸಾಮಾನ್ಯ ಓಟವೇ.

ನಾನು ಮೊದಲು ಹೇಳಿದ ಅರ್ಧ ಶತಮಾನದ ಹಿಂದಿನ – ಗೋವಿಂದನ ದಿಬ್ಬಣದ ಸ್ಥಿತಿ ಇನ್ನಷ್ಟು ಹೀನಾಯವಿತ್ತೆಂಬುದನ್ನು ಇಲ್ಲಿ ನೆನೆಸಿಕೊಳ್ಳಲೇಬೇಕು. ಮೊದಲೇ ಮಾತಾಡಿಕೊಂಡಂತೆ ಆ ದಿಬ್ಬಣವೂ ಸಂಜೆಗೆ ಮೊದಲು ಕರ್ಕಿ ತಲಪಬೇಕಿತ್ತು. ಆದರೆ ‘ಗಂಡಿನ ಕಡೆಯವರು’ ರಾತ್ರಿ ಹತ್ತು ಗಂಟೆಯಾದರೂ ಬರಲಿಲ್ಲ ಎನ್ನುವಾಗ ಹೆಣ್ಣು ಹೆತ್ತವರ ಆತಂಕಗಳ ಕರ್ಮೋಡ ದಿಕ್ಕೆಡಿಸುವಂತೆ ದಟ್ಟವಾಗುತ್ತಾ ಹೋಯ್ತಂತೆ. ಪ್ರಯಾಣದ ವಿಳಂಬ, ಆಕಸ್ಮಿಕಗಳನ್ನೆಲ್ಲಾ ಅಳೆದೂ ಸುರಿದೂ ತೀರ್ಮಾನ ನಿಲ್ಲುತ್ತಿದ್ದದ್ದು, ಗಂಡಿನವರು ಅವಮಾನಕಾರಿಯಾಗಿ ಕೈಕೊಟ್ಟರು! ಅಪರಾತ್ರಿ ಎರಡು ಗಂಟೆಗೆ ದಿಬ್ಬಣ ನಿಜಕ್ಕೂ ಹಾಜರಾದಾಗ ಹುಡುಗಿಯ ತಾಯಿಗೆ ದುಃಖ ಬಿರಿದದ್ದೋ ಹರ್ಷ ಉಕ್ಕಿದ್ದೋ ಅರಿವಾಗದೇ ಕಣ್ಣು ಕತ್ತಲಾಗಿ ಬಿದ್ದೇಬಿಟ್ಟರಂತೆ!

ಆ ಲೆಕ್ಕದಲ್ಲಿ ನಮ್ಮ ಕಾಲ ಒಳ್ಳೆಯದು. ಹೆಚ್ಚುಕಡಿಮೆ ಎಲ್ಲರಲ್ಲೂ ಚರವಾಣಿಯಿತ್ತು. “ರಾಮಣ್ಣಾ ತಿರುಗಾಸಿಗೆ ಮೊದಲು ನಿಲ್ಲೋಂದ್ರೆ, ಮಂಗ, ಮುಂದೋಗಿದಿಯಾ” ಅಂತ ಶ್ರೀಹರಿ ಭಾತೃ ವಾತ್ಸಲ್ಯದಿಂದ ಕುಟುಕುವವರೆಗೆ ನಮ್ಮೆರಡು ವಾಹನಗಳ ನಡುವೆ ಸಂವಹನ ನಿರಂತರವಿತ್ತು. ಮತ್ತೆ ಹಿಂದಿನಿಂದ ನಮ್ಮನ್ನು ಕಳಿಸಿಕೊಟ್ಟವರಿಗೆ ಸುದ್ದಿಯನ್ನೂ ಮುಂದಿನೂರಿನ ಆತಿಥೇಯರಿಗೆ ಪ್ರಯಾಣದ ಪ್ರಗತಿಯನ್ನೂ ಕಾಲಕಾಲಕ್ಕೆ ಕೊಡುತ್ತಲೇ ಇದ್ದುದರಿಂದ ಯಾರೂ ಆತಂಕಗೊಳ್ಳುವ ಪ್ರಮೇಯ ಬರಲೇ ಇಲ್ಲ. ರಾಮು ಬಸ್ಸಿನಲ್ಲಿ ವಿರಾಮದಲ್ಲಿದ್ದಾಗ ಎಲ್ಲ ಒತ್ತಾಯಿಸಿ ‘ಉಡ್ಬೀ ವೈಫಿಗೆ’ ಕರೆ ಮಾಡಿಸಿದ ತಮಾಷೆ ಎಲ್ಲಿವರೆಗೆ ಬೇಳೀತಂದ್ರೆ, ಅತ್ತ ನಮಿತಾ (ವಧುವಾಗಲಿದ್ದವಳ ಹೆಸರು) “ರಾಮಯ್ಯಾ ವಸ್ತಾವಯ್ಯಾ, ಮೈನೇ ದಿಲ್ ತುಜ್ಕೊ ದಿಯಾ” ಎಂದು ಹಾಡಿರಬಹುದೇ ಎನ್ನುವವರಿಗೆ ಕೊರತೆಯಿರಲಿಲ್ಲ! ಆದರೆ ಆತಿಥೇಯ ಗಣೇಶಭಟ್ಟರು ನಮ್ಮ ನೆಪದಲ್ಲಿಟ್ಟುಕೊಂಡ ಪೂಜೆಯ ಸಮಾಪನ, ಪ್ರಸಾದ ಭೋಜನ ಎಲ್ಲವನ್ನೂ ಕಾದು ಕಾದು, ತಡವಾಗಿಯೇ ಅವರ ಮನೆಯವರ ಲೆಕ್ಕದಲ್ಲೇ ಪೂರೈಸಬೇಕಾಗಿ ಬಂದದ್ದು ಅನುಕಂಪನೀಯ. ಸಾಲದ್ದಕ್ಕೆ ಅವೇಳೆಯಲ್ಲಿ (ನಾವು ಬೆಳಗಾವಿ ಹೊರವಲಯ ತಲಪುವಾಗ ನಡುರಾತ್ರಿ ಹನ್ನೆರಡೂವರೆ ಗಂಟೆ) ಸ್ವತಃ ಗಣೇಶ ಭಟ್ಟರು ಹೆದ್ದಾರಿ ಪಕ್ಕಕ್ಕೆ ಬಂದು ನಮಗೆ ಮಾರ್ಗದರ್ಶನ ಮಾಡಬೇಕಾಯ್ತು. ಅವರ ಮನೆ ತಲಪಿದ್ದೇ ಮೊದಲು ಪೂಜೆಯ ತೀರ್ಥ ಪ್ರಸಾದ. ಅನಂತರ ಊಟ, ಕೊನೆಯಲ್ಲಿ ಪ್ರಯಾಣದ ಕೊಳೆ ನಿರ್ನಾಮ. ಈ ಹಿಂದೆ ಮುಂದಾದ ಕ್ರಿಯೆಗಳಿಗೆ ಸರಿಯಾಗಿ ಮಲಗುವಾಗ ಗಂಟೆ ಒಂದೂವರೆ; ಇದು ಕಳೆದ ರಾತ್ರಿಯೋ ಹೊಸಹಗಲೋ? ಖ್ಯಾತ ನಾಟಕಕಾರನೊಬ್ಬನ ಪಾತ್ರ ಹೇಳುತ್ತದೆ “ತಡವಾಗಿ ಮಲಗುವುದೆಂದರೆ ಬೇಗ ಮಲಗುವುದೆಂದೇ ಅರ್ಥ!

ನನ್ನನ್ನು ದಿಬ್ಬಣದುದ್ದಕ್ಕೆ ಸಹಿಸಿದ್ದಲ್ಲದೇ ಪತ್ರದುದ್ದಕ್ಕೂ ಅನುಸರಿಸಿದ್ದಕ್ಕೆ ಕೃತಜ್ಞತೆಗಳು. ಬದ್ಧದ ಕಲಾಪ, ಮರುಪಯಣದ ಸ್ವಾರಸ್ಯ, ಮತ್ತೂ ಮುಂದೆ ಬರಲಿರುವ (ಡಿಸೆಂಬರ್ ಒಂದು ಪುತ್ತೂರಿನಲ್ಲಿ ಮದುವೆ, ಎರಡರಂದು ಮಡಿಕೇರಿಯಲ್ಲಿ ವಧೂ ಗೃಹಪ್ರವೇಶ) ಸಕಲ ಮಂಗಳ ಕಾರ್ಯಗಳ ನಿರೂಪಣೆಗೆ ಅನ್ಯರಿಗೆ ಅವಕಾಶ ಬಿಟ್ಟುಕೊಡುತ್ತಾ (ಕತ್ತೆ ಮೇಯ್ದಲ್ಲಿ ಇನ್ನು ಮೇವಿಲ್ಲ ಎಂದು ಯಾರೂ ಹೊಗಳಬೇಡಿ) ವಿರಮಿಸುತ್ತೇನೆ.

ಇಂತು ವಿಶ್ವಾಸಿ
ಅಶೋಕ