ಪೀಠಿಕೆ
ಪ್ರಾಕೃತಿಕ ಶೋಧನೆಗಳ ಅಲೆದಾಟದಲ್ಲಿ ನಾನು ಕೆಲವು (ಐತಿಹಾಸಿಕವೂ ಸೇರಿದಂತೆ) ಮಹತ್ವದ ರಚನೆಗಳನ್ನು ಗುರುತಿಸಿದಂತೇ ಅರಿವಿಲ್ಲದೆ ತುಳಿದು ಸಾಗಿದ್ದು ಹಲವಿರಬಹುದು. ಗುರುತಿಸಿದವನ್ನು ನನ್ನ ಸಂಪರ್ಕಕ್ಕೆ ಬಂದ ಪರಿಣತರಿಗೆ ನನ್ನದೇ ಮಿತಿಯಲ್ಲಿ ಹೇಳಿ, ಅವರು ಬಯಸಿದಲ್ಲಿ ಸಂತೋಷದಲ್ಲೇ ಅಲ್ಲಿಗೊಯ್ದು ತೋರುವ ಉತ್ಸಾಹವನ್ನೂ ಉಳಿಸಿಕೊಂಡು ಬಂದದ್ದೂ ಇದೆ. ಒಂದು ಉದಾಹರಣೆ ಹೇಳುವುದಾದರೆ…

೧೯೮೦ರ ದಶಕ, ಅಂದರೆ ನನ್ನ ಬಳಗ ಗುಹಾಲೋಕವನ್ನು ಅನಾವರಣ ಮಾಡುತ್ತಿದ್ದ ಕಾಲ. ಗೆಳೆಯ ಪುರುಷೋತ್ತಮ ಬಿಳಿಮಲೆ (ಆಗ ಸುಳ್ಯದಲ್ಲಿ ಅಧ್ಯಾಪನ ನಡೆಸಿದ್ದರು.) ಕನಕಮಜಲಿನ ಬಳಿಯೊಂದು ಮಾನವ ನಿರ್ಮಿತ ಗುಹೆಯ ಸುಳುಹನ್ನು ಪಡೆದು, ಅವರದೇ ಮಿತ್ರಬಳಗದೊಡನೆ ಸ್ಥಳ ಪರಿಶೀಲನೆ ನಡೆಸಿ, ಪ್ರಾಕೃತಿಕ ಶಕ್ತಿಗಳಲ್ಲಿ ಮರೆಯಾದಂತಿದ್ದ ರಚನೆಯನ್ನು ಉತ್ಖನನ ಮಾಡಿ, ಪತ್ರಿಕೆಯಲ್ಲಿ ‘ರೋಚಕ ತೀರ್ಮಾನ’ ಕೊಟ್ಟರು. ಕುತೂಹಲದಲ್ಲಿ ನಮ್ಮ ತಂಡವೂ ಅಲ್ಲಿಗೆ ಹೋಗಿ ಮತ್ತೆ ಪತ್ರಿಕೆಯಲ್ಲೇ ಭಿನ್ನಾಭಿಪ್ರಾಯವನ್ನು (ಪ್ರಾಯ ದೋಷದಲ್ಲಿ ಉದ್ದೇಶ ಪಡದೇ ‘ನಾನು-ಶ್ರೇಷ್ಠ’ ಭಾವ ಮೆರೆದದ್ದೂ ಇರಬಹುದು!) ದಾಖಲಿಸಿದೆವು. ಮುರಕಲ್ಲಿನ ಹಾಸಿನಲ್ಲಿ ಒಳಗೆ ಇಗ್ಲೂವಿನಂತಿದ್ದ ಆ ರಚನೆ ಕ್ರಾಂತಿಕಾರಿ ಕಲ್ಯಾಣಪ್ಪನ ಅಡಗು ತಾಣವೋ ಯಾವುದೋ ಸೈನ್ಯದ ರಕ್ಷಣಾ ವ್ಯೂಹದ ಅಂಗವೋ ಬರಗಾಲದ ದಾಸ್ತಾನು ಮಳಿಗೆಯೋ (ಹಗೇವಿನಂತೆ) ಎಂದೇನೆಲ್ಲಾ ನಮ್ಮ ಅಜ್ಞಾನದ ನೆಲೆಯಿಂದ ಹೊರಟ ಕಲ್ಪನಾಲಹರಿಗಳು ದಟ್ಟವಾಗಿ ಹರಡಿತ್ತು.

ಪುಂಡಿಕಾಯ್ ಗಣಪಯ್ಯ ಭಟ್ಟರು (ಪುರಾತತ್ವ ಪರಿಣತ, ಮೂಡಬಿದ್ರೆಯಲ್ಲಿ ಅಧ್ಯಾಪಕ, ನನಗೆ ಪೂರ್ವ ಪರಿಚಿತರು ಮತ್ತು ಆತ್ಮೀಯರು), ಅದನ್ನು ಪ್ರತ್ಯಕ್ಷ ನೋಡದಿದ್ದರೂ ಅಧ್ಯಯನದ ಶಿಸ್ತಿನಿಂದ ಸಹಜವಾಗಿ, ಪತ್ರಿಕೆಯಲ್ಲಿ ಖಚಿತ ತೀರ್ಮಾನವನ್ನೇ ಕೊಟ್ಟರು. “ಅದು ಬೃಹತ್ ಶಿಲಾಯುಗದ ರಚನೆ. ಅಂದಿನ ಕಾಲಾಚಾರಕ್ಕೆ ಸಂಬಂಧಿಸಿದಂತೆ ಮೃತರ ಬೂದಿ, ಮೂಳೆಗಳನ್ನು ಮಡಿಕೆಯಲ್ಲಿ ಸಂಗ್ರಹಿಸಿ ಒಳಗಿಟ್ಟ ಅಸಂಖ್ಯ ಸಮಾಧಿಗಳಲ್ಲಿ ಒಂದು.” ಇದು ನಮ್ಮ ಬಳಗದ ಇನ್ನೂ ಮೀಸೆ ಮೊಳೆಯದ ಚಂದ್ರನಿಗೆ ಸರಿ ಕಾಣಲಿಲ್ಲ. ಭಟ್ಟರು ‘ಪ್ರತ್ಯಕ್ಷದರ್ಶನ ಮಾಡಲಿಲ್ಲ’ ಎನ್ನುವುದಷ್ಟೇ ಆಧಾರವಾಗಿಟ್ಟುಕೊಂಡು ದುಡುಕಿ, ಪತ್ರಿಕೆಯಲ್ಲೇ ಗೇಲಿ ಮಾಡಿದ. ಆದರೆ ಇತಿಹಾಸದ ಕಡಲಿನಲ್ಲಿ ಗಣಪಯ್ಯ ಭಟ್ಟರು ವಿಸ್ತೃತ ಈಜಿನ ಅನುಭವಿ ಎಂಬ ಅರಿವು ಚಂದ್ರನಿಗೆ (ನಮಗೂ) ತಡವಾಗಿ ಮೂಡಿತು. ಕೇವಲ ಒಂದು ಚಾರಣಾನುಭವದ ಬೆವರು ಆರುವ ಮುನ್ನ, ‘ಬಲಂ ಬಲಂ ರಟ್ಟೇ ಬಲಂ’ ಎಂಬ ನಿಲುವಿನೊಡನೆ ‘ನಾವು’ ಪ್ರತಿಯಾಡಿದ್ದು ತಪ್ಪಾಯ್ತು ಎಂದು ಪುಂಡಿಕಾಯ್ ಗಣಪಯ್ಯ ಭಟ್ಟರಲ್ಲಿ (ಮಂಗಳಗಂಗೋತ್ರಿಯಲ್ಲಿ ಇಲಾಖಾ ಸಭೆಗೇನೋ ಬಂದಿದ್ದವರಲ್ಲಿ ಗೆಳೆಯ ಪಂಡಿತಾರಾಧ್ಯರ ಮೂಲಕ) ಕ್ಷಮೆ ಕೇಳಿದ್ದೂ ಆಗಿತ್ತು! (ಮತ್ತೆ ಗಣಪಯ್ಯ ಭಟ್ಟರು ಹೆಚ್ಚು ಆತ್ಮೀಯರೂ ಆದರು, ನಮ್ಮ ಯಾವ ಯೋಜನೆ ಇಲ್ಲದೇ ಸಂಬಂಧಿಕರೂ ಆಗಿದ್ದಾರೆ; ನನ್ನ ತಮ್ಮನ ಹೆಂಡತಿಯ ಭಾವ)

ರಾಘವ ಆಚಾರ್ಯ (ಕಾರ್ಪೋರೇಶನ್ ಬ್ಯಾಂಕಿಗ) ನನಗೆ ಬಹಳ ಹಳೆಯ ಪರಿಚಯದ ವನ್ಯಪ್ರೇಮಿ. ಇವರು ಔಪಚಾರಿಕ ತಂಡ, ಪ್ರಚಾರಗಳ್ಯಾವುದರ ಹಂಗಿಟ್ಟುಕೊಳ್ಳದೆ ಗಾಳಿಯಲ್ಲಿ ಚಿತ್ತಾರ ಬರೆಯುವ ಕಲಾವಿದರ (ಹಕ್ಕಿಗಳು) ಬೆಂಬತ್ತುವ ಹವ್ಯಾಸಿ. ಸುಮಾರು ಹದಿನೈದು ವರ್ಷದ ಹಿಂದೆ ನಾನು ಪುಟ್ಟ ತಂಡ ಕಟ್ಟಿ ಮೋಟಾರ್ ಬೈಕೇರಿ ಭಾರತ ಪ್ರವಾಸ ಹೊರಟ ಕಾಲಕ್ಕೆ ವನಧಾಮಗಳಲ್ಲಿನ ರಿಯಾಯ್ತಿ ದರದ ವಾಸಕ್ಕೆ, ವೀಕ್ಷಣೆಗೆ ಇವರೇ ಮಿತ್ರ ಎರಿಕ್ ಡಿಕುನ್ನಾರನ್ನು ಪರಿಚಯಿಸಿದ್ದರು (ಡಿಕುನ್ನಾ ಮೂಲತಃ ಮಂಗಳೂರಿಗರೇ. ಆಸಕ್ತಿಯಿಂದ ಬೆಳೆದು ನಿಂತ ವೃತ್ತಿಪರ ವನ್ಯಜೀವಿ ತಜ್ಞ). ರಾಘವರು ವೃತ್ತಿ ನಿಮಿತ್ತ ವರ್ಗಾವಣೆಯಲ್ಲಿ ಎಲ್ಲೆಲ್ಲೋ ಸುತ್ತುತ್ತಿದ್ದವರು, ಕೆಲಕಾಲ ಕಣ್ಮರೆಯಾಗಿದ್ದವರು ಈಚೆಗೆ ಕಾಣಸಿಕ್ಕಿದರು. ಅಷ್ಟೇ ಅಲ್ಲದೆ ಕೇವಲ ಶಿಲಾರೋಹಿಯಾಗಿ ನಾನು ಕಂಡೂ ಗುರುತಿಸದಿರಬಹುದಾದ ಮನುಷ್ಯ ಇತಿಹಾಸದ ಒಂದು ಮಹತ್ವದ ಸಂಗತಿಯನ್ನು ತಿಳಿಸಿದರು. ಅದನ್ನವರು ಪತ್ರಿಕೆಗಳ ಗಮನಕ್ಕೆ ತಂದು ಸಾಮಾಜಿಕ ಜಾಗೃತಿ ಮತ್ತು ಸರಕಾರೀ ರಕ್ಷಣೆ ತರಲು ಪ್ರಯತ್ನಿಸಿದ್ದು ಯಶಸ್ಸು ಕಾಣಲಿಲ್ಲ. ರಾಘವರೇ ಸಣ್ಣ ಮಟ್ಟದಲ್ಲಿ ಅವರದೇ ಬ್ಯಾಂಕಿನ ಪತ್ರಿಕೆಯಲ್ಲಿ ಇದನ್ನು ಲೇಖನ ಮಾಡಿ ಪ್ರಕಟಿಸಿದರು. ಆದರೆ ಅದು ಇವರನ್ನೊಬ್ಬ ‘ಲೇಖಕ’ ಎಂದು ಸಾರುವುದಕ್ಕಿಂತ ಹೆಚ್ಚೇನೂ ಪರಿಣಾಮ ಬೀರಲಿಲ್ಲ. ಅದನ್ನು ಇನ್ನೂ ವಿಸ್ತೃತ ಓದುಗ ವರ್ಗಕ್ಕೆ ಮುಟ್ಟಿಸುವಂತೆ, ಏನಲ್ಲದಿದ್ದರೂ ವಿದ್ಯುನ್ಮಾನ ಮಾಧ್ಯಮದಲ್ಲಿ ಸ್ಪಷ್ಟ ದಾಖಲೆಯಾದರೂ ಇರಲಿ ಎನ್ನುವಂತೆ ನಾನು ರಾಘವ ಆಚಾರ್ಯರ ಬರಹವನ್ನು ಯಥಾವತ್ತು, ರಾಘವರೇ ಒದಗಿಸಿದ ಚಿತ್ರಗಳೊಡನೆ ಕೊಡುತ್ತಿದ್ದೇನೆ. ನಿಮ್ಮಲ್ಲಿ ಉತ್ಸಾಹಿಗಳು ಪ್ರತ್ಯಕ್ಷ ದರ್ಶನಕ್ಕೆ ಮುಂದಾಗಬಹುದು. ಪ್ರಭಾವಿಗಳು ಉಳಿದ ಇಂಥವುಗಳ ರಕ್ಷಣೆಗೆ ಕ್ರಿಯಾಶೀಲರಾಗಬಹುದು. ಏನಲ್ಲದಿದ್ದರೂ ನಿಮ್ಮ ತಿಳುವಳಿಕೆಯ, ಅನುಭವದ ತೂಕದಿಂದ ವಿಸ್ತೃತ ಪ್ರತಿಕ್ರಿಯೆಯನ್ನಾದರೂ ದಾಖಲಿಸುವಿರೆಂದು ಕಾದಿರುತ್ತೇನೆ.

ಅಶೋಕವರ್ಧನ

ನೆನಪಿನ ಪುಟ ಸೇರಿದ ಶಿಲಾಯುಗದ ‘ಪಾಂಡವರಕಲ್ಲು’
ಲೇಖಕ: ರಾಘವ ಆಚಾರ್ಯ, ಮಂಗಳೂರು

೧೯೯೭ರಲ್ಲಿ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದ ಇತಿಹಾಸ ವಿಭಾಗ ಒಂದು ಅಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಮೂರು ದಿನಗಳ ಕಾಲ ತುಳುನಾಡಿನ ಜನಜೀವನ, ಜನಪದ ಮತ್ತು ಇತಿಹಾಸದ ಬಗ್ಗೆ ಬೆಳಕುಚೆಲ್ಲುವ ಪ್ರಬಂಧ ಮಂಡನೆ, ಚರ್ಚೆ ಮತ್ತು ವಸ್ತುಪ್ರದರ್ಶನವನ್ನು ಹಲವಾರು ವಿದ್ವಾಂಸರ ಪಾಲ್ಗೊಳ್ಳುವಿಕೆಯ ಮೂಲಕ ಅರ್ಥಪೂರ್ಣವಾಗಿ ಏರ್ಪಡಿಸಿತ್ತು.ಈ ಕಾರ್ಯಕ್ರಮದಲ್ಲಿ ನಾನು ತುಳುನಾಡಿಗೆ ಸಂಬಂಧಿಸಿದ ಪ್ರಾಚೀನ ನಾಣ್ಯಗಳ ಪ್ರದರ್ಶನದೊಂದಿಗೆ ಪ್ರಬಂಧವೊಂದನ್ನೂ ಮಂಡಿಸಿದ್ದೆ. ಸಮಾನ ಹವ್ಯಾಸಗಳಿಂದಾಗಿ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದ ಇತಿಹಾಸದ ಪ್ರಾಧ್ಯಾಪಕ ತುಕಾರಾಮರು ನನಗೆ ಹಳೆಯ ಪರಿಚಯ. ತುಳುನಾಡಿನ ಜಾನಪದ ಮತ್ತು ಐತಿಹಾಸಿಕ ವಸ್ತುಗಳ ರಕ್ಷಣೆ ಮತ್ತು ಸಂಗ್ರಹಕ್ಕಾಗಿ ಅವರ ಕಾಳಜಿ ಶ್ಲಾಘನೀಯ. ರಾಣಿ ಅಬ್ಬಕ್ಕ ತುಳುವ ಅಧ್ಯಯನ ಕೇಂದ್ರ ಅವರ ಪ್ರಯತ್ನಗಳಿಗಿಂದು ಸಾಕ್ಷಿಯಾಗಿ ನಾಡಿನ ಮುಂದಿದೆ.

ಕಾರ್ಯಕ್ರಮದ ಕೊನೆಯ ದಿನ ತುಕಾರಾಮರು ನಮ್ಮ ಸಹಯೋಗವನ್ನು ಸ್ಮರಿಸುತ್ತಾ ಪ್ರದರ್ಶನದ ಮುಕ್ತಾಯದ ಬಳಿಕ ವಿದ್ಯಾರ್ಥಿ ಬಳಗದೊಂದಿಗೆ ಹತ್ತಿರದ ಐತಿಹಾಸಿಕ ಸ್ಮಾರಕವೊಂದನ್ನು ಪರಿಚಯಿಸುವ ಪ್ರವಾಸದಲ್ಲೂ ಭಾಗವಹಿಸಬೇಕೆಂದು ವಿನಂತಿಸಿದರು. ಮೂರುದಿನಗಳ ಒಡನಾಟವನ್ನು ವಿಸ್ತರಿಸುವಂತೆ ಬಂದ ಆಹ್ವಾನವನ್ನು ನಿರಾಕರಿಸುವ ಮನಸ್ಸಾಗಲಿಲ್ಲ.
ವಿದ್ಯಾರ್ಥಿಗಳಿಂದ ಗಿಜಿಗಿಜಿ ತುಂಬಿದ್ದ ಬಸ್ಸುಗಳು ನಿಧಾನವಾಗಿ ಬಂಟ್ವಾಳ-ಬೆಳ್ತಂಗಡಿ ರಸ್ತೆಯಲ್ಲಿ ಮುಂದುವರಿಯಿತು. ಬಸ್ಸು ಧಾವಿಸುತ್ತಿದ್ದಂತೆ ತುಕಾರಾಮರು ನಾವು ಹೋಗುತ್ತಿರುವ ಸ್ಥಳಪರಿಚಯ ಮತ್ತು ಅದರ ಮಹತ್ವದ ಬಗ್ಗೆ ಎದ್ದು ನಿಂತು ಮಾತನಾಡಲು ಆರಂಭಿಸಿದಾಗ ಬಸ್ಸಿನಲ್ಲಿದ್ದ ಗುಲ್ಲು ಗಲಾಟೆಯ ವಾತಾವರಣ ಸ್ವಲ್ಪ ತಿಳಿಗೊಂಡಿತು. ಇಂದಿನ ಪ್ರವಾಸ ಬರೇ ಹೊರಸಂಚಾರವಲ್ಲ ಏನೋ ವಿಶೇಷವಿದೆ ಎಂಬ ಕುತೂಹಲ ಎಲ್ಲರಲ್ಲಿ ಮೂಡಿತು.

ಮಡಂತ್ಯಾರ್ ಅತ್ತ ಹಳ್ಳಿಯೂ ಅಲ್ಲ ಇತ್ತ ಪಟ್ಟಣವೂ ಅಲ್ಲದ ಒಂದು ಊರು. ಬಸ್ಸು ಇಲ್ಲಿ ಮುಖ್ಯ ರಸ್ತೆಯಿಂದ ಎಡಭಾಗದ ಮಣ್ಣಿನ ಮಾರ್ಗದತ್ತ ತಿರುಗಿತು. ಸುಮಾರು ೩ ಮೈಲು ದಾಟಿದ ಮೇಲೆ ಬಸ್ಸು ನಾಲ್ಕೈದು ಮನೆಗಳಿರುವ ಬೋಳು ಗುಡ್ಡಗಾಡಿನ ಒಂದು ಹಳ್ಳಿಯನ್ನು ಪ್ರವೇಶಿಸಿತು. “ಈ ಊರಿನ ಹೆಸರು ’ಪಾಂಡವೆರೆ ಕಲ್ಲ್”, ಅಂದರೆ ಪಾಂಡವರ ಕಲ್ಲು” ಅವರವರ ಲೋಕದಲ್ಲಿ ವ್ಯಸ್ತರಾಗಿದ್ದ ವಿದ್ಯಾರ್ಥಿಗಳ ಗುಂಪಿನ ಗಮನವನ್ನು ತನ್ನೆಡೆ ಸೆಳೆದು ತುಕಾರಾಮರು ಹಳ್ಳಿಯ ಪರಿಚಯವನ್ನು ಮುಂದುವರಿಸಿದರು. ’ಪಾಂಡವರಕಲ್ಲ”-ಎಲ್ಲಿಯೋ ಕೇಳಿದ ಹೆಸರು!

“ಈ ಹಳ್ಳಿ, ಮನುಷ್ಯನ ವಿಕಾಸದ ಹಾದಿಯಲ್ಲಿ, ತುಂಬಾ ಮಹತ್ವಪೂರ್ಣವಾದ ಸಾಕ್ಷ್ಯವನ್ನು ತನ್ನ ಮಡಿಲಲ್ಲಿ ಇರಿಸಿಕೊಂಡಿದೆ. ಶಿಲಾ ಯುಗದ ಈ ಸಾಕ್ಷ್ಯಗಳು ಇತಿಹಾಸದ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಮಾತ್ರವಲ್ಲ ನಮ್ಮ ನಾಡಿಗೆ ಕೂಡ ಬಹಳ ಮಹತ್ವದ ವಿಷಯ. ಆಧುನಿಕ ಮಾನವ ಯಾವ ಯಾವ ಯುಗಗಳನ್ನು, ಘಟ್ಟಗಳನ್ನು ಹಾದು ಬಂದಿದ್ದಾನೆ ಎನ್ನುವುದನ್ನು ನಾವು ಪಠ್ಯಪುಸ್ತಕಗಳಲ್ಲಿ ಓದಿದ್ದೇವೆ. ಬನ್ನಿ, ಇವತ್ತು ಇಂತಹ ಯುಗವೊಂದರ ತಾಣಕ್ಕೆ ಮರಳಿ ಹೊಗೋಣ”

ವಿದ್ಯಾರ್ಥಿಗಳ ಗುಂಪಿನಿಂದ ಸ್ವಲ್ಪ ಮುಂದೆ ಹೆಜ್ಜೆ ಹಾಕುತ್ತಿದ್ದ ನನಗೆ ಹಿಂಬದಿಯಿಂದ ತುಕಾರಾಮರು ವಿವರಿಸುತ್ತಿದ್ದ ವಿಷಯ ಮನವರಿಕೆಯಾಗತೊಡಗಿತು. ಹಲವು ಇತಿಹಾಸಕಾರರು ಮತ್ತು ಸಂಶೋಧಕರು ನಮ್ಮ ಜಿಲ್ಲೆಯಲ್ಲಿ ಪ್ರಾಗೈತಿಹಾಸಕ್ಕೆ ಸಂಬಂಧಿಸಿದ ಶೋಧನೆಗಳನ್ನು ದಾಖಲಿಸಿದ್ದಾರೆ. ಅಂತಹ ಕೆಲವು ಸ್ಥಾನಗಳು ಪುತ್ತೂರು ಮತ್ತು ಕುಂದಾಪುರ ತಾಲೂಕುಗಳಲ್ಲಿ ಅಸ್ತಿತ್ವದಲ್ಲಿದೆ ಎಂಬ ಬಗ್ಗೆ ಅರಿವಿತ್ತು. ಆದರೆ ನನಗೆ ಪಾಂಡವರ ಕಲ್ಲು ನವೀನ ಮಾಹಿತಿಯಾಗಿ ಎದುರಾಯಿತು.

ಹಿತ್ತಿಲ ಗಿಡ ಮದ್ದಲ್ಲ! ತುಳುವಿನಲ್ಲಿ ಪಾಂಡವೆರೆ ಕಲ್ಲ್, ಕನ್ನಡದಲ್ಲಿ ಪಾಂಡವರ ಕಲ್ಲು, ಹೆಸರು ಬಾಲ್ಯದಿಂದ ನನಗೆ ಪರಿಚಿತವಾಗಿತ್ತು. ಪಾಂಡವರಕಲ್ಲು, ಅದು ಬರೇ ಒಂದು ಊರಿನ ಹೆಸರು ಮಾತ್ರವೇ ಅಂದುಕೊಂಡಿದ್ದೆ. ಪಾಂಡವರ ಹೆಸರಿನ ಕಲ್ಲಿನಲ್ಲಿ ಏನಾದರೂ ಮಹತ್ವವಿದೆಯೇ?, ಆಗ ಗಮನಹರಿಸಿರಲಿಲ್ಲ. ಅನೇಕ ಕಡೆಗಳಲ್ಲಿ ಪುರಾಣಗಳೊಂದಿಗೆ,ಪುರಾಣಪುರುಷರ ಹೆಸರಿನೊಂದಿಗೆ ಬರೇ ನಂಬಿಕೆಗಳ ಆಧಾರದಲ್ಲಿ ಗುರುತಿಸಲ್ಪಡುವ ಹಲವು ಸ್ಥಳಗಳ ಬಗ್ಗೆ ನಾವು ಕೇಳಿದ್ದೇವೆ. ಈ ಕಲ್ಲುಗಳಿಗೆ ಪಾಂಡವರ ನಂಟು ಮತ್ತು ಊರಿನ ಹೆಸರು ಬಹುಶ: ಜನಸಾಮಾನ್ಯರ ನಂಬಿಕೆ ಅಥವಾ ಈ ರಚನೆಗಳನ್ನು ನಾಶವಾಗದಂತೆ ಉಳಿಸಲು ಬಳಸಿರಬೇಕು. ಇಲ್ಲವಾದರೆ ಪಾಂಡವರಿಗೆ ನೂರಾರು ಯೋಜನ ದೂರದ ಇಂತಹ ನಿರ್ಜನ ವನ್ಯ ಪ್ರದೇಶಕ್ಕೆ ಬರಬೇಕಾದ ಅನಿವಾರ್ಯತೆಯಾದರೂ ಏನಿದ್ದಿರಬಹುದು!

ಪಾಂಡವರ ಹೆಸರಿನಿಂದ ಗುರುತಿಸಲ್ಪಡುವ ಈ ಕಲ್ಲುಗಳು, ಮೂಡಬಿದರೆಯಲ್ಲಿರುವ ಕೊಡಿಂಜ ಕಲ್ಲಿನಂತೆ ಅಲ್ಲಲ್ಲಿ ಕಂಡುಬರುವ ಪ್ರಾಕೃತಿಕ ಬಂಡೆ ಕಲ್ಲುಗಳಂತೆ ಇದ್ದಿರಬಹುದು ಎಂದು ಎಣಿಸಿದ್ದು ನನ್ನ ತಪ್ಪು ಎಂದು ಅರಿವಾಗತೊಡಗಿತು.

ಬೆರಗುಗೊಳಿಸುವ ದೃಶ್ಯವದು. ಅಚ್ಚರಿಗೊಳಿಸುವ ಗಾತ್ರದ ಬೃಹತ್ ಶಿಲಾರಚನೆ ಕಣ್ಣಮುಂದಿತ್ತು !.

ಆಧುನಿಕ ಯುಗದಲ್ಲಿ ಕ್ರೇನ್ ಗಳಿಂದ ಮಾತ್ರ ಎತ್ತಲು ಸಾಧ್ಯವಾಗಬಹುದಾದ ಮೂರು-ನಾಲ್ಕು ಚಪ್ಪಡಿಕಲ್ಲುಗಳನ್ನು ಚೌಕಾಕಾರದಲ್ಲಿ ನೇರವಾಗಿ ಊರಿಸಿಟ್ಟು, ಮೇಲೆ ಮಾಡಿನ ರೂಪದಲ್ಲಿ ಅಷ್ಟೇ ದೊಡ್ದ ಗಾತ್ರದ ಬೃಹತ್ ಚಪ್ಪಡಿಗಲ್ಲನ್ನು ಹಾಸಿದ ರಚನೆ. ಮಳೆ, ಬಿಸಿಲು ಅಥವಾ ಕಾಡು ಮೃಗಗಳಿಂದ ರಕ್ಷಿಸಿಕೊಳ್ಳಲು, ಆದಿಮಾನವರು ನಿರ್ಮಿಸಿದ ಆವಾಸ ಸ್ಥಾನವಾಗಿರಲೂಬಹುದು.ನಾವು ಇಂತಹ ಶಿಲಾಫಲಕಗಳಿಂದ ರಚಿಸಿದ ರಚನೆಯೊಂದರ ಬಳಿ ಬಂದಿದ್ದೆವು.

ನಮ್ಮ ಕಣ್ಣನ್ನೇ ನಂಬಲಾಗದ ದೃಶ್ಯ ಎದುರಿಗಿತ್ತು. ನೂರು ಕಟ್ಟಾಳುಗಳಿಗೂ ಎತ್ತಲು ಕಷ್ಟಸಾಧ್ಯವಾಗಬಹುದಾದ ಚಪ್ಪಡಿಗಲ್ಲುಗಳನ್ನು ಬಳಸಿ ರಚಿಸಿದ ಮಾನವ ವಾಸಸ್ಥಾನದ ಮೂಲ ಸ್ವರೂಪವನ್ನು ಹೊಂದಿತ್ತು. ಪಾಂಡವೆರೆ ಕಲ್ಲ್ ವಾಸ್ತವವಾಗಿ ಪಾಂಡವರು ನಿರ್ಮಿಸಿದ ರಚನೆಗಳಲ್ಲ. ಇವು ಶಿಲಾಯುಗದ ಜನರು ಉಪಯೋಗಿಸುತ್ತಿದ್ದ ವಾಸಸ್ಥಾನಗಳು ಅಥವಾ ತರುವಾಯ ದಫನಭೂಮಿ ಅಥವಾ ಗೋರಿಗಳಾಗಿ ಉಪಯೋಗಗೊಂಡಿರುವ ಸಾಧ್ಯತೆ ಬಹಳ.

ಅದಾಗಲೇ ಈ ಪ್ರಾಚೀನ ರಚನೆಗಳು ಆಧುನಿಕ ಮಾನವನ ದಾಳಿಗೆ ಗುರಿಯಾದ ಸರ್ವಲಕ್ಷಣಗಳು ನಮ್ಮ ಎದುರಿಗಿತ್ತು. ಮಾಡಿನ ಚಪ್ಪಡಿಕಲ್ಲು ಪಕ್ಕದ ಮನೆಯವರ ಮುಳಿಹುಲ್ಲಿನ ಮೆದೆಯಾಗಿ, ಒಣಕಟ್ಟಿಗೆಗಳನ್ನು ಪೇರಿಸಿಡುವ ಜಾಗವಾಗಿ ಹೋಗಿತ್ತು. ಕಾಲ್ದಾರಿಯಲ್ಲಿ ಮುಂದುವರಿದಂತೆ ಇಂತಹದೇ ಗಾತ್ರದ ಮೂರ್ನಾಲ್ಕು ಶಿಲಾವರಣಗಳು ಉತ್ತಮ ಸ್ಥಿತಿಯಲ್ಲಿ ಕಂಡುಬಂದವು. ಕೆಲವು ರಚನೆಗಳ ಆಂತರ್ಯದಲ್ಲಿ ಸುರಂಗದಂತಹ ಬಿಲಗಳು ಕೌತುಕ ಮೂಡಿಸುವಂತಿದ್ದವು. ತಜ್ಞರಿಗೆ ಮತ್ತು ಸಂಶೋಧಕರಿಗೆ ಈ ಹಳ್ಳಿ ಶಿಲಾಯುಗದ ಜ್ಞಾನನಿಕ್ಷೇಪದಂತಿತ್ತು.

ಆ ದಿನದ ಇನ್ನೊಂದು ವಿಶೇಷ ಕಾರ್ಯಕ್ರಮವೆಂದರೆ ಊರಿನ ಸಹಕಾರದೊಂದಿಗೆ ಕಾಲೇಜಿನ ಇತಿಹಾಸ ವಿಭಾಗದವರಿಂದ ಪಾಂಡವೆರೆ ಕಲ್ಲ್ ನ ನಿರ್ಮಿತಿ, ಮಹತ್ವ ಮತ್ತು ರಕ್ಷಣೆಯ ಬಗ್ಗೆ ಉಪಯುಕ್ತ ಕಾರ್ಯಕ್ರಮವಿತ್ತು. ಪ್ರಾಧ್ಯಾಪಕ ಪುಂಡಿಕಾಯ್ ಗಣಪಯ್ಯ ಭಟ್ ರವರು ಪಾಂಡವೆರೆಕಲ್ಲ್ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಸ್ಥಿತಿಯಲ್ಲಿದ್ದ ಶಿಲಾವರಣದ ಬಳಿ ಈ ಪ್ರಾಗೈತಿಹಾಸಿಕ ಸ್ಮಾರಕಗಳ ಮಹತ್ವದ ಬಗ್ಗೆ ಸವಿಸ್ತಾರವಾಗಿ ವರ್ಣಿಸಿದ ಮಾತುಗಳು ಇಂದಿಗೂ ಕಿವಿಯಲ್ಲಿ ಗುಣುಗುಣಿಸುತ್ತಿವೆ…, ನೆನಪುಗಳಾಗಿ. ಹೌದು. ನೆನಪುಗಳ ಸೆಳೆತ ಅಂತಹದು. ಕಾಲ ಬದಲಾಗುವಂತೆ ಬದುಕು ಬದಲಾಗುತ್ತದೆ. ಬದಲಾದ ಬದುಕಿನೊಂದಿಗೆ ನೆರಳಿನಂತೆ ಗಾಡವಾಗಿ ಹಿಂಬಾಲಿಸುತ್ತವೆ ಅಚ್ಚಳಿಯದ ನೆನಪುಗಳು. ಪಾಂಡವರಕಲ್ಲಿನಂತಹ ಬೆರಗುಗೊಳಿಸುವ ಪಳೆಯುಳಿಕಗಳು !. ಪಾಂಡವೆರೆಕಲ್ಲ್ ಚಿತ್ರ ಮನಸ್ಸಿನೊಳಗೆ ಭದ್ರವಾಗಿ ಕುಳಿತಿತ್ತು. ಸರಿಸುಮಾರು ಹದಿನಾಲ್ಕು ವರ್ಷಗಳ ನಂತರ ಮತ್ತೊಂದು ದಿನ…
೧೮ನೇ ಸಪ್ತಂಬರ್ ೨೦೧೧, ನಮ್ಮ ಕನ್ನಡ ಬಳಗದ ವಾರ್ಷಿಕ ಸಂಚಿಕೆ “ಸಿರಿಗಂಧ” ದ ಮುಖಪುಟದಲ್ಲಿ ಈ ಸಲ ಯಾಕೆ ನಮ್ಮದೇ ಊರಿನ ಪಾಂಡವೆರೆಕಲ್ಲನ್ನು ವಾಚಕರಿಗೆ ಪರಿಚಯಿಸಬಾರದು ಎಂಬ ಯೋಚನೆ ಬಂದದ್ದೇ ತಡ, ಊರಿಗೆ ಬಂದಿದ್ದ ಗೆಳೆಯರಾದ ಎರಿಕ್ ಡಿ ಕುನ್ಹ (ಮಧ್ಯಪ್ರದೇಶ ಸರಕಾರದ ವೈಲ್ಡ್ ಲೈಫ್ ಪ್ರೊಟೆಕ್ಷನ್ ಬೋರ್ಡ್ ಸದಸ್ಯ) ಮತ್ತು ನವೀನರ ಜೊತೆಗೂಡಿ ಹೊರಟಿದ್ದೂ ಆಯಿತು. ಎಲ್ಲಿಗೆ? ಏಕೆ? ಎಂಬುದನ್ನು ರಹಸ್ಯವಾಗಿಟ್ಟಿದ್ದೆ.

ಈ ಬಾರಿ ವಿದ್ಯಾರ್ಥಿಗಳಿರಲಿಲ್ಲ, ಪ್ರಾಧ್ಯಾಪಕರಿರಲಿಲ್ಲ. ಮನುಷ್ಯನ ವಿಕಾಸದ ಹಾದಿಯಲ್ಲಿ ನಿರ್ಮಿತವಾಗಿದ್ದ ಅಪೂರ್ವ ಶಿಲಾಯುಗ ಸ್ಮಾರಕಗಳ ದರ್ಶನದ ಸ್ವಾರಸ್ಯವನ್ನು ಈ ಬಾರಿ ಗೆಳೆಯರೊಂದಿಗೆ ಹಂಚಿಕೊಳ್ಳುವ ಕಾತರವಿತ್ತು. ಅದೇ ರಸ್ತೆ…, ಪ್ರಗತಿಯ ಚಕ್ರ ಈ ಅವಧಿಯಲ್ಲಿ ಪಾಂಡೆವೆರೆಕಲ್ಲ್ ತಲಪುವ ಮಣ್ಣಿನ ಮಾರ್ಗವನ್ನು ಡಾಮಾರ್ ರಸ್ತೆಗೆ ಪರಿವರ್ತನೆ ಗೊಳಿಸಿದ್ದರೂ ನಮ್ಮ ಇತರ ತಾರ್ ರಸ್ತೆಗಳಂತೆ ಹೊಂಡಗಳಿಂದ ತುಂಬಿಕೊಂಡಿತ್ತು.

ಪಾಂಡವರಕಲ್ಲು ತಲುಪಿದಾಗ ಬೆರಗಾದೆ…ಮೊದಲ ಭೇಟಿಯಲ್ಲಿ ಆದಂತೆ. ಆಗಿನದ್ದು ಅದ್ಭುತವೊಂದು ಕಣ್ಣೆದುರು ಬಂದಾಗ ಆದ ಬೆರಗು. ಈ ಬಾರಿಯ ಬೆರಗು ಕಣ್ಮರೆಯಾದ ಆ ಅದ್ಭುತದ ಬಗ್ಗೆ! ಎಲ್ಲಿ ನೋಡಿದರೂ ಕಂಪೌಂಡ್ ಗೋಡೆಗಳಿರುವ ಮನೆಗಳ ಅಂಗಡಿಗಳ ಸಾಲುಗಳು. ಬಹುಶ: ನಾವು ದಾರಿ ತಪ್ಪಿದೆವೋ ಅಥವಾ ಶಿಲಾಫಲಕಗಳಿರುವ ಜಾಗವನ್ನು ಮೀರಿ ಊರಿನ ವಿಸ್ತರಣೆಯಾಗಿರಬಹುದೇ ಎನ್ನುವ ದ್ವಂದ್ವದಲ್ಲಿ ಸುಮಾರು ದೂರ ಕಾರು ಚಲಾಯಿಸಿದೆವು. ಆಶ್ಚರ್ಯ…, ಊರನ್ನು ಹೊಕ್ಕ ಕೂಡಲೇ ಕಣ್ಣಿಗೆ ಬೀಳುತ್ತಿದ್ದ, ಪಾಂಡವರಕಲ್ಲು ಎಂದು ಗುರುತಿಸಲ್ಪಡುತ್ತಿದ್ದ ಚಪ್ಪಡಿ ಕಲ್ಲಿನ ಬೃಹತ್ ರಚನೆಗಳು ಕಣ್ಮರೆಯಾಗಿದ್ದವು.

“ಈ ಪಾಂಡವರ ಕಲ್ಲಿನ ರಚನೆಯಲ್ಲಿ ಬಳಸಿದ ಕಲ್ಲುಗಳನ್ನು ಮನೆ ಕಟ್ಟುವ ಮತ್ತು ಅಂಗಳ ಅಗಲಿಸುವ ನೆವನದಲ್ಲಿ ಮತ್ತು ಉಳಿದಿದ್ದ ಕೆಲವೇ ಕಲ್ಲುಗಳನ್ನು ರಸ್ತೆಗೆ ಡಾಮಾರ್ ಹಾಕುವಾಗ ಕಿತ್ತು ಹಾಕಿದ್ದಾರೆ… ಹಾಗೆ ಕಿತ್ತ ಕೆಲವು ಕಲ್ಲುಗಳನ್ನು ಗರೋಡಿಯ ಕಂಪೌಂಡ್ ನೊಳಗೆ ಇಟ್ಟಿದ್ದಾರೆ…” ಇನ್ನು ಮುಂದೆ ಹೋಗುವ ಇರಾದೆ ಇಲ್ಲದೆ ರಸ್ತೆಯ ಪಕ್ಕದಲ್ಲಿದ್ದ ಮನೆಯೊಂದರಲ್ಲಿ ವಿಚಾರಿಸಿದಾಗ ತಿಳಿದುಬಂದ ಅಂಶದಿಂದ ನನಗಂತೂ ಕಾಲಬುಡದಡಿಯ ಭೂಮಿ ಕುಸಿದಂತಾಯಿತು. ಮಿತ್ರರಿಗೆ ವಿಶೇಷವೊಂದನ್ನು ತೋರಿಸುವ ನನ್ನ ಉತ್ಸುಕತೆಯ ಬಲೂನಿಗೆ ಸೂಜಿ ಚುಚ್ಚಿದಂತಾಯಿತು. ಗರೋಡಿಯ ಮುಂಭಾಗದಲ್ಲಿ ಮೂಲೆಗುಂಪಾಗಿಸಿ ಕಿತ್ತೆಸೆದ ಕೆಲವು ಚಪ್ಪಡಿಕಲ್ಲುಗಳ ತುಣುಕುಗಳು ಅನಾಥವಾಗಿ ಬಿದ್ದಿದ್ದವು. ಗೇಟಿನ ಬಳಿ ನಮ್ಮ ವ್ಯವಸ್ಥೆಗೆ ಕನ್ನಡಿ ಹಿಡಿದಂತೆ ಒಂದು ಬೋರ್ಡ್: ಈ ಶಿಲಾಯುಗ ಸ್ಮಾರಕಗಳು ಕ್ರಿ. ಪೂ. ೪೦೦-೫೦೦ ವರ್ಷ [?] ಪುರಾತನವಾಗಿದ್ದು, ಇದರ ರಕ್ಷಣೆ ನಮ್ಮ ಕರ್ತವ್ಯ….ಇತ್ಯಾದಿ.

ತನ್ನ ಅಸ್ತಿತ್ವದಿಂದಾಗಿಯೇ ಊರಿಗೊಂದು ಹೆಸರು ಮತ್ತು ಪ್ರಸಿದ್ಧಿಯನ್ನು ತಂದುಕೊಟ್ಟ, ಚಪ್ಪಡಿಕಲ್ಲುಗಳ ಪ್ರಾಚೀನ ಅವಶೇಷಗಳು ಜನರ,ಊರಿನ ಅನಾಸ್ಥೆಗೆ ಸಿಲುಕಿ ಮಣ್ಣಿನಡಿಗೆ ನೇರ ಸೇರಿದ್ದವು. ಪ್ರಗತಿಯ ಚಕ್ರದಡಿ ಸಿಲುಕಿ ನೆಲಸಮವಾಗಿದ್ದವು. ನಮ್ಮ ನಾಡಿನ ಎಂತಹ ಅಪೂರ್ವಸಾಕ್ಷ್ಯವೊಂದನ್ನು ಕಳೆದುಕೊಂಡೆವು ಎಂಬ ಮರುಕ ಉಮ್ಮಳಿಸಿ ಬಂತು.

ಘೋರ ನಿರಾಶೆಯ ಮಧ್ಯೆ, ಕಣ್ತಪ್ಪಿ ಇಂತಹ ಅವಶೇಷಗಳು ಬೇರೆ ಎಲ್ಲಿಯಾದರೂ ಊಳಿದಿರಬಹುದೇ ? ಇರಲಿಕ್ಕಿಲ್ಲ ಎಂದು ನಮ್ಮ ಎಣಿಕೆಯಾದರೂ ನಮ್ಮ ಶ್ರಮ, ಸಮಯ ಮತ್ತು ಕುತೂಹಲವನ್ನು ತಣಿಸಲು ಹಲವಾರು ಹಳ್ಳಿಗರನ್ನು ಸಂಪರ್ಕಿಸಿದೆವು. ನಮ್ಮ ಊಹೆ ನಿಜವಾಯಿತು. ಓರ್ವ ಅಡಿಕೆಬೆಳೆಗಾರರ ತೋಟದಲ್ಲಿ ಇಂತಹ ಒಂದು ಸಣ್ಣ ಅವಶೇಷ ಉಳಿದಿದೆ ಎಂದು ತಿಳಿದು ಬಂತು. ವಿನ್ಯಾಸ, ರಚನೆ ಅದೇ. ಆದರೆ ಗಾತ್ರದಲ್ಲಿ ಕಿರಿದಾಗಿತ್ತು. ಪ್ರಸಕ್ತ ಉಳಿದಿರುವ ಒಂದೇ ಒಂದು ಅವಶೇಷ ಗೆಳೆಯರ ನಡುವೆ ನನ್ನ ಮರ್ಯಾದೆಯ ಜೊತೆಗೆ ಊರಿನ ಗೌರವವನ್ನು ಉಳಿಸುವಂತೆ ಅಡಿಕೆ ತೋಟದ ಅಂಚಿನಲ್ಲಿ ಶಿಲಾಯುಗದ ಕೊನೆಯ ಮೂಕಸಾಕ್ಷಿಯಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತ್ತು. ಮೂಲಸ್ವರೂಪದಲ್ಲಿ ಹೆಚ್ಚೇನು ವ್ಯತ್ಯಾಸಗಳು ಕಂಡುಬಾರದಿದ್ದರೂ ಈ ರಚನೆಯ ಸುತ್ತ ಚಪ್ಪಡಿಕಲ್ಲುಗಳ ವೇದಿಕೆಯ ಸುತ್ತುಪೌಳಿಗಳು ಗಮನಸೆಳೆದವು-ಮನೆಯ ಸುತ್ತ ನಾವು ಕಟ್ಟಿಸುವ ಕಂಪೌಂಡ್ ದಂಡೆಯಂತೆ,

ರಾಷ್ಟ್ರೀಯ ಸ್ಮಾರಕವಾಗಿ ಮಾನ್ಯತೆಗಳಿಸಲು ಯೋಗ್ಯವಾಗಿದ್ದ ತಾಣದ ದುರಂತಮಯ ಕಥೆಯನ್ನು ನೆನೆಪಿಸುವಂತೆ ಉಳಿದುಕೊಂಡ ಅಳಿದುಳಿದ ಈ ಕೊನೆಯ ಅವಶೇಷದ ಬಗ್ಗೆ ಮಾಹಿತಿ ನೀಡಿ, ತ್ರೇತಾಯುಗಕ್ಕೂ ಪುರಾತನ ಈ ಶಿಲಾರಚನೆಯನ್ನು ಯಾವುದೇ ಕಾರಣಕ್ಕೂ ನಾಶಮಾಡಬಾರದೆಂದು ಜಾಗದ ಮಾಲಿಕರಿಗೆ ಮನವರಿಕೆ ಮಾಡಿಕೊಟ್ಟೆವು. ಇನ್ನೊಂದು ಇಂತಹದೇ ಸ್ಥಾನ ಪಕ್ಕದ ಮನೆಯಲ್ಲೂ ಗೋಚರವಾಯಿತು. ಆದರೆ ಕಲ್ಲುಗಳು ಮೂಲ ರೂಪದಲ್ಲಿರಲಿಲ್ಲ ಮಾತ್ರವಲ್ಲ ಅದರ ಸುತ್ತಲೂ ಸಿಮೆಂಟ್ ಕಟ್ಟೆ ಕಟ್ಟಿ ಆಲಂಕರಿಕ ಗಿಡಗಳನ್ನು ನೆಟ್ಟಿದ್ದರು. ಮತ್ತೊಮ್ಮೆ ಈ ರಚನೆಗಳ ಮಹತ್ವದ ಬಗ್ಗೆ ಮನೆಯ ಸದಸ್ಯರಿಗೆ ವಿವರಿಸುತ್ತಿರುವಾಗ, ಊರಿನ ರಸ್ತೆ ನಿರ್ಮಾಣ ಹಂತದಲ್ಲಿ ಭೂಮಿಯಡಿಯಲ್ಲಿ ದೊರೆತ ಬೃಹತ್ ಗಾತ್ರದ ಮಡಿಕೆಯ ಬಗ್ಗೆ ಮಾಹಿತಿಯೂ ದೊರೆಯಿತು. ಆದರೆ ಅದನ್ನು ಯಾರು ಒಯ್ದರು, ಎಲ್ಲಿಗೆ ಒಯ್ದರು, ಎಂಬುದು ಯಾರಿಗೂ ಗೊತ್ತಿಲ್ಲ!

ಮನೆಯವರೊಂದಿಗೆ ನಮ್ಮ ಮಾತುಕತೆಯ ಮಧ್ಯೆ ಈ ವರ್ಷ ತಾನೆ ಎಮ್.ಸಿ. ಎ. ಪದವಿ ಮುಗಿಸಿ, ವಿಪ್ರೊದಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಮನೆಹುಡುಗ ಸನತ್, ಏನನ್ನೋ ನೆನಪಿಸಿಕೊಂಡು ಸುರಿವ ಮಳೆಯ ಮಧ್ಯೆ ಮನೆಯ ಅಂಚಿನಲ್ಲಿರುವ ಅಂಗಳದಲ್ಲಿ ಏನನ್ನೋ ಅರಸಲಾರಂಭಿಸಿದ. “ಕಳೆದ ವರ್ಷ ಮನೆಯ ಅಂಗಳವನ್ನು ಸಮಮಾಡುವಾಗ ಅಂತಹದ್ದೇ ಮಡಿಕೆಯ ಮೇಲ್ಭಾಗವನ್ನು ನಾನು ನೋಡಿದ್ದೆ. ಬಹುಶ: ಇಲ್ಲಿಯೇ ಇರಬೇಕು” ಸನತ್ ಕುತೂಹಲಭರಿತ ಉತ್ಸಾಹದಿಂದ ಮಳೆಯಿಂದ ತೋಯ್ದ ಮಣ್ಣಿನ ಮೇಲ್ಪದರವನ್ನು ಕಬ್ಬಿಣದ ಸರಳಿನಿಂದ ಕೆದಕಲಾರಂಭಿಸಿದ. ಮನೆಯ ಸದಸ್ಯರೂ ಸೇರಿದಂತೆ ನಾವೆಲ್ಲ ಈ ಹೊಸ ಬೆಳವಣಿಗೆಯನ್ನು ವೀಕ್ಷಿಸಿಸುತ್ತಾ ಸುತ್ತ ನೆರೆದೆವು.

ಸಣ್ಣಗೆ ಸುರಿಯುತ್ತಿದ್ದ ಮಳೆಯ ರಭಸ ಜೋರಾದರೂ ನಮ್ಮ ಉತ್ಸಾಹಕ್ಕೆ ಧಕ್ಕೆಯಾಗಲಿಲ್ಲ. ಗೆಳೆಯ ಎರಿಕ್ ಕೊಡೆ ಬಿಡಿಸಿ ಹಿಡಿದು ಉತ್ಖನನ ಕಾರ್ಯ ನಿರಾತಂಕವಾಗಿ ಮುಂದುವರಿಯಲು ಸಹಕರಿಸಿದರು. ಮಳೆನೀರಿನಿಂದ ತೋಯ್ದು ಹೋದ ದೊಡ್ಡ ಮಣ್ಣಿನ ಮಡಿಕೆಯೊಂದರ ಕತ್ತಿನ ಭಾಗವು ಸ್ವಲ್ಪ ಪ್ರಕಟಗೊಂಡಿತು. ಗುದ್ದಲಿಯ ನೆರವಿನಿಂದ ಅದರ ಸುತ್ತಲಿನ ಭಾಗದ ಮಣ್ಣು ನಿಧಾನವಾಗಿ ಸರಿಸಲಾರಂಭಿಸಿತು. ತಾಳ್ಮೆಯೇ ಮೂರ್ತಿವೆತ್ತಂತೆ, ಕಂಪ್ಯೂಟರ್ ಪದವೀಧರ, ಪ್ರಾಕ್ತನ ಸಂಶೋಧಕನಂತೆ, ಮಡಿಕೆಯ ಹೊರಭಾಗವನ್ನು ಮಣ್ಣಿನಿಂದ ಬೇರ್ಪಡಿಸುತ್ತಾ ಹೋದಾಗ ದೊಡ್ಡ ಮಡಿಕೆಯ ಪಕ್ಕದಲ್ಲಿ ಇನ್ನೆರಡು ಸಣ್ಣ ಮಡಿಕೆಗಳು ಪತ್ತೆಯಾದವು. ಸುತ್ತ ನೆರೆದಿದ್ದ ಮೌನ ವೀಕ್ಷಕರ ಮುಖದಲ್ಲಿ ಆಶ್ಚರ್ಯ ಎದ್ದುಕಾಣುವಂತಿತ್ತು.

ಸುಮಾರು ಎರಡು ಗಂಟೆಗಳಿಗೂ ಮೀರಿದ ಈ ಉತ್ಖನನವನ್ನು ಒಬ್ಬಂಟಿಯಾಗಿ ನಿರ್ವಹಿಸಿದ ಸನತ್, ಪೂರ್ತಿ ಮಣ್ಣಿನಿಂದ ತುಂಬಿಕೊಂಡಿದ್ದ ಮಡಿಕೆಗಳನ್ನು ದೊಡ್ಡ ಕುಳಿಯಿಂದ ಎತ್ತಿ ಹೊರತೆಗೆಯಲು ತನ್ನ ತಮ್ಮನ ಸಹಾಯ ಪಡೆಯಬೇಕಾಯಿತು. ಅಗಣಿತ ವರ್ಷಗಳ ಕಾಲ ಕಾಲಗರ್ಭದಲ್ಲಿ ಮರೆಯಾಗಿದ್ದ ಶಿಲಾಯುಗದ ಮಡಿಕೆಗಳು ಶಿಥಿಲ ಗೊಂಡಿದ್ದರೂ ತನ್ನ ಮೂಲರೂಪದಲ್ಲಿ ಸುರಕ್ಷಿತವಾಗಿದ್ದವು.

“ಇಲ್ಲಿ ಸಿಗುತ್ತಿರುವ ಇಂತಹ ಮಣ್ಣಿನ ಪಾತ್ರೆಗಳಲ್ಲಿ ಬೂದಿಯಂತಹ ವಸ್ತುಗಳು ಸಿಕ್ಕಿದ್ದನ್ನು ನೋಡಿದ್ದೇವೆ” ಸನತ್ ನ ತಂದೆ ಅವರಿಗೆ ಗೊತ್ತಿದ್ದ ಮಾಹಿತಿಯನ್ನು ಹಂಚಿಕೊಂಡರು. ಆದರೆ ನಮಗೆ ಸಿಕ್ಕ ಮಡಿಕೆಗಳನ್ನು ಮಣ್ಣಿಂದ ಬೇರ್ಪಡಿಸಿ ಪರೀಕ್ಷಿಸಲು ಸಮಯವಿರಲಿಲ್ಲ ಮತ್ತು ನೀರಿನಿಂದ ಸಂಪೂರ್ಣ ತೋಯ್ದುಹೋಗಿದ್ದ ಮಡಿಕೆಗಳು ಒಡೆದು ಚೂರಾಗುವ ಭಯವಿತ್ತು. ಮಡಿಕೆಯ ಒಡೆದ ಕೆಲವು ಚೂರುಗಳನ್ನು ಕಾರ್ಬನ್ ಡೇಟಿಂಗ್ ಮೂಲಕ ಅವುಗಳ ಕಾಲವನ್ನು ಗುರುತಿಸುವ ಸಲುವಾಗಿ ನಮ್ಮ ಬಳಿ ಇರಿಸಿಕೊಂಡೆವು.

ಪಾಂಡೆವೆರೆಕಲ್ಲ್ ನ ಹುಡುಕಾಟದಲ್ಲಿ ಅಯಾಚಿತವಾಗಿ ಬಂದೊದಗಿದ ಈ ಅನ್ವೇಷಣೆಯ ಖುಷಿ, ನಾಡು ಕಳೆದುಕೊಂಡ ಮಹತ್ವಪೂರ್ಣ ಶಿಲಾಸಾಕ್ಷ್ಯಗಳ ನಾಶದ ದು:ಖದ ಎದುರಲ್ಲಿ ಏನೇನು ಅಲ್ಲ.

ನಾವು ಯಾವುದರ ಪುನರ್ನಿರ್ಮಾಣಮಾಡಲಾರೆವೋ ಅದನ್ನು ನಾಶಮಾಡಲು ನಮಗೆ ಯಾವುದೇ ಹಕ್ಕಿಲ್ಲ. “ಪಾಂಡವರಕಲ್ಲ” ಈಗ ಬರೇ ನೆನಪು ಮಾತ್ರ.