(ಕುಮಾರಪರ್ವತದ ಆಸುಪಾಸು -೧೧)
ನಾಗರಹೊಳೆಯ ವನ್ಯ ಜಾನುವಾರು ಗಣತಿಯಲ್ಲಿ ಭಾಗಿಗಳಾಗಿದ್ದ ನಮ್ಮಲ್ಲಿ ಕೆಲವರನ್ನು ಒಂದು ವಿರಾಮದ ಸಮಯದಲ್ಲಿ ಉಲ್ಲಾಸ ಕಾರಂತ ತಮ್ಮ ವಾಹನಕ್ಕೇರಿಸಿಕೊಂಡು ‘ಸುಂದರಿ’ ತೋರಿಸ್ತೇನೆ ಅಂತ ಹೊರಟರು. ತೀರಾ ಅಗತ್ಯದ ಮಾತುಗಳನ್ನಷ್ಟೇ ಪಿಸುಮಾತಿನಲ್ಲಿ ಅವರು ಹೇಳಿದ್ದಿತ್ತು. ಉಳಿದಂತೆ ಕಿವಿಗೆ ಶ್ರವಣ ಸಾಧನ ಹಾಕಿಕೊಂಡು ಅದೇನೋ ಮಾಯಾದಂಡವನ್ನು (ರೇಡಿಯೋ ಪ್ರೇಷಕ) ಅತ್ತ ಇತ್ತ ಆಡಿಸುತ್ತಾ ಇದ್ದರು. ಯಾವ್ಯಾವುದೋ ಕವಲು ದಾರಿಗಳಲ್ಲಿ ಜಿಪ್ಸಿ ಸಣ್ಣದಾಗಿ ಗುರುಗುರಿಸುತ್ತ ನಿಧಾನಕ್ಕೆ ಹೋಗುತ್ತಲೇ ಇತ್ತು. ಒಂದೆರಡು ಕಡೆ ಹಾಗೊಂದು ಕವಲಿಗೆ ನುಗ್ಗಿದಂತೆ ಮಾಡಿ, ಮನಸ್ಸು ಬದಲಿಸಿ ಸುಮಾರು ರಿವರ್ಸ್ ಹೋಗಿ ಬೇರೇ ದಾರಿ ಹಿಡಿದದ್ದೂ ಇತ್ತು. ಕೊನೆಗೊಂದು ಜಾಗದಲ್ಲಿ ಒಂದು ದಪ್ಪ ಮರ ಸ್ವಲ್ಪ ನಮ್ಮ ಕಾರನ್ನು ಮರೆ ಮಾಡಿದಂತಲ್ಲೇ ಪುಸ್ಕಂತ ಇಂಜಿನ್ ಆರಿಸಿಯೇ ಬಿಟ್ಟರು. ನಾವಷ್ಟೂ ಜನ ಉಲ್ಲಾಸರ ದೃಷ್ಟಿಗೇ ನಮ್ಮದನ್ನೂ ಕೀಲಿಸಿಟ್ಟಿದ್ದೆವು. ಸಮೀಪದಲ್ಲೇ ಎಲ್ಲೋ ಬರ್ಕ ಒಂದು ಬೊಬ್ಬಿಟ್ಟಿತು. ಪೊರಕೆ ಬಾಲ ಆಡಿಸಿಕೊಂಡು ಹುಳು ಹುಡುಕುವುದು ನಿಲ್ಲಿಸಿದ ನವಿಲು ಆತಂಕನಾದ ತೆಗೆದಿತ್ತು. ಆಗ ನಮ್ಮಿಂದ ಸುಮಾರು ಮೂವತ್ತೇ ಅಡಿ ಮುಂದೆ, ಎಡಬದಿಯ ಪೊದರ ಮರೆಯಿಂದ ನಿರ್ಯೋಚನೆಯಿಂದ ಎಂಬಂತೆ ‘ಸುಂದರಿ’ ಪ್ರತ್ಯಕ್ಷಳಾದಳು.
ಒಮ್ಮೆ ಜಿಪ್ಸಿ ಕಡೆ ನೋಡಿದಳು. ಜಿರಾಫೆ ಕತ್ತು ಮಾಡಿ, ಏಡಿಗಣ್ಣಿನಲ್ಲಿ ನೋಡುತ್ತಿದ್ದ ಅಷ್ಟೂ ಜನಕ್ಕೆ ರೆಪ್ಪೆಯಲುಗಿನ ಪ್ರತಿಕ್ರಿಯೆಯನ್ನೂ ನೀಡದೆ, ಇನ್ನೊಂದು ಪಕ್ಕದ ದಾರಿಯುದ್ದಕ್ಕೆ ದಿಟ್ಟಿ ಹರಿಸಿದಳು. ಮಿನಿಟಿನ ಮೊದಲು ವಿರಾಮದಲ್ಲಿ ಚೂರು ಪಾರು ಮೇಯುತ್ತ ಹೋಗಿದ್ದ ಕಾಟಿ ಹಿಂಡನ್ನು, ಬಂದಷ್ಟೇ ಗೋಪ್ಯದಲ್ಲಿ ಹಿಂಬಾಲಿಸುವವಳಂತೆ ಬಲಬದಿಗೆ ದಾಟಿ ಮರೆಯಾದಳು. ಅಂದ ಹಾಗೇ ಈ ಸುಂದರಿ – ಉಲ್ಲಾಸರಿಂದ ರೇಡಿಯೋ ಕಾಲರ್ ಕಟ್ಟಿಸಿಕೊಂಡ ವ್ಯಾಘ್ರಿಣಿ! ನಾವೂ ವಾಪಾಸು ಶಿಬಿರಕ್ಕೆ ಹೊರಟ ಮೇಲೆ ಉಲ್ಲಾಸ್ ಉಸುರಿದರು “ಅವಳು ಉಂಡು ಆರು ದಿನ ಕಳೆದಿದೆ! ಅಪರಾಹ್ನದ ಸೆಕೆ ಕಳೆಯಲು ಇಲ್ಲೇ ಹಡ್ಲಿನಲ್ಲಿ, ಸುಮಾರು ಅರುವತ್ತು ಮೀಟರ್ ಆಚೆ ವಿರಮಿಸಿದ್ದಳು. ಇಂದು ಭರ್ಜರಿ ಕಾಟಿ ಹೊಡೆಯುವ ಅಂದಾಜು.” [ಇದರ ಮತ್ತು ಹೆಚ್ಚಿನ ವಿವರಗಳಿಗೆ ಯಾರೂ ಓದಲೇ ಬೇಕಾದ, ಸ್ವತಃ ಉಲ್ಲಾಸ್ ಅಪ್ಪಟ ಕನ್ನಡದಲ್ಲೇ ಬರೆದ, ನವಕರ್ನಾಟಕ ಪ್ರಕಟಿಸಿದ ಮುಖ್ಯ ಪುಸ್ತಕ – ಹುಲಿರಾಯನ ಆಕಾಶವಾಣಿ (ಬೆಲೆ ರೂ ಇನ್ನೂರ ಇಪ್ಪತ್ತೈದು). ಜೊತೆಗೇ ಹೆಚ್ಚಿನ ಓದಿಗೆ ಅವರದೇ ಕಾಡು ಪ್ರಾಣಿಗಳ ಜಾಡಿನಲ್ಲಿ ಕೂಡಾ ಓದುವಂತದ್ದೇ(ಮೊದಲ ಮುದ್ರಣ ನಾನೇ ಮಾಡಿದ್ದೆ. ಈಗಿನದ್ದಕ್ಕೆ ಬೆಲೆ ರೂ ೮೦]
ಸೀಳುಜಾಡಿನಲ್ಲಿ ಹೋಗುವಾಗ ಚಿಣ್ಣಪ್ಪರ ಬೀಸುನೋಟ ಬಿದ್ದಲ್ಲಿ ಅವರು ಹೇಳಿದ ಪ್ರಾಣಿ, ಹೇಳಿದ ಸಂಖ್ಯೆಯಲ್ಲಿ ಹಾಜರಾಗುತ್ತವೆ! ಕ್ಷಮಿಸಿ, ವಾಸ್ತವ ಅದಲ್ಲ. ನಮ್ಮ ಪಳಗದ ಕಣ್ಣು ಕಿವಿಗಳು ಗ್ರಹಿಸದ ವಾರ್ತೆಗಳು ಚಿಣ್ಣಪ್ಪನವರಿಗೆ ದಕ್ಕುತ್ತವೆ, ಅಷ್ಟೆ. ಅವರ ವೃತ್ತಿ ಜೀವನದ ಉತ್ತುಂಗದಲ್ಲಿ ಹುಸಿ ಸಾರ್ವಜನಿಕ ಪ್ರತಿಭಟನೆಯ ಮುಸುಕಿನಲ್ಲಿ ಅನಿರೀಕ್ಷಿತವಾಗಿ ದಾಳಿಯಿಟ್ಟ ಕಾರಾಸ್ತಾನಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಚಿಣ್ಣಪ್ಪನವರು ರಾತೋರಾತ್ರಿ ಕಾಡುಬೀಳಬೇಕಾಯ್ತು. ಒಂದು ಬೆಳಕಿನ ಮೂಲವೂ ಹಿಡಿಯದೇ ಅವರು ಕಾಡಿನೊಳಗೆ ಕರಗಿಹೋಗಲು ಈ ಅಸಾಧಾರಣ ಶಕ್ತಿಯೇ ಸಹಕರಿಸಿತ್ತು. ಎಲ್ಲ ತಿಳಿಯಾದಂದು ಶೂನ್ಯದಿಂದೆಂಬಂತೆ ಚಿಣ್ಣಪ್ಪ ಬಂದರು ಎನ್ನುತ್ತದೆ ಕತೆ. (ಕಾಡಿನೊಳಗೊಂದು ಜೀವ – ಕೆ.ಎಂ. ಚಿಣ್ಣಪ್ಪನವರ ಆತ್ಮಕಥೆ, ನಿಜ ಕತೆಗಿಂತ ರೋಚಕ. ನವಕರ್ನಾಟಕ ಪಬ್ಲಿಕೇಶನ್ಸಿನ ಪ್ರಕಟಣೆ – ಬೆಲೆ ರೂ ನೂರಾ ಅರವತ್ತು. ಇಂದೇ ಕೊಂಡೋದಿ, ಕೊಂಡಾಡಿ!)
ಬೆಳಿಗ್ಗೆ ಆರಕ್ಕೆ ಮತ್ತು ಸಂಜೆ ನಾಲ್ಕಕ್ಕೆ ಗಣತಿದಾರರು ‘ಸಕಲಾಭರಣ’ಭೂಷಿತರಾಗಿ (ದಿಕ್ಸೂಚಿ, ಮಾಪಕ ಇತ್ಯಾದಿ) ಉಲ್ಲಾಸರ ಜಿಪ್ಸಿ ವಾಹನದ ಬಳಿ ಸೇರುತ್ತಿದ್ದೆವು. ಅಲ್ಲೇ ಹಾಜರಿರುತ್ತಿದ್ದ ಕುರುಬರೊಡನೆ ಎರಡು ವಾಹನಗಳಿಗೇರಿಸಿ ಪೂರ್ವ ನಿಗದಿಯಂತೆ ವಿವಿಧ ಸೀಳು ಜಾಡುಗಳ ಆರಂಭ ಬಿಂದುವಿಗೆ ತಲಪಿಸುತ್ತಿದ್ದರು. ಅಲ್ಲಿಂದ ಏಕಕಾಲಕ್ಕೆ (ಬೆಳಿಗ್ಗೆ ಆರೂವರೆ, ಸಂಜೆ ನಾಲ್ಕೂವರೆ ಅನ್ನಿ. ಇದು ದೇಶ, ಕಾಲಗಳ ಅನುಕೂಲಕ್ಕೆ ತಕ್ಕಂತೆ ಬದಲಾಗುತ್ತದೆ) ಎಲ್ಲ ಜೋಡಿಗಳೂ ಗಣತಿ ನಡಿಗೆಗೆ ತೊಡಗುತ್ತವೆ. ಜಾನುವಾರುಗಳ ಲಭ್ಯತೆ, ದಾರಿಯ ವಿಘ್ನ ಎಲ್ಲಾ ಪರಿಗಣಿಸಿದರೂ ಎರಡೂವರೆ ಮೂರು ಗಂಟೆಯ ಅಂತರದೊಳಗೆ ಆಯ ಜಾಡಿನ ಕೊನೆ ಮುಟ್ಟಿದಾಗ ಮತ್ತಲ್ಲಿ ವಾಹನಗಳು ಮರುಸಾಗಣೆಗೆ ಕಾದಿರುತ್ತಿದ್ದವು.
ಸುಮಾರು ಹದಿನೇಳು ವರ್ಷಗಳ ಹಿಂದಿನ ನನ್ನ (ಹದಿನಾಲ್ಕು ಅವಧಿಗಳ) ನಾಗರಹೊಳೆ ಗಣತಿ-ಚಾರಣ ನೆನೆಸಿಕೊಂಡರೆ ಇಂದೂ ರೋಮಾಂಚನವಾಗುತ್ತದೆ. ಅಂದು ತಲೆಯೊಳಗಿನ ಜನಪ್ರಿಯ ಮೃಗಯಾಸಾಹಿತ್ಯದ ಓದು ಕೊಡುವ ಅತಿರಂಜಿತ ಚಿತ್ರಗಳನ್ನು ಒಮ್ಮೆಗೇ ನಿರಾಕರಿಸಿ ನಡೆಯುವುದು ಸುಲಭದ ಮಾತಾಗಿರಲಿಲ್ಲ. ಪರ್ವತಾರೋಹಣದ ಇತಿಹಾಸದುದ್ದಕ್ಕೂ ನಿರಾಧಾರವಾಗಿ ವನ್ಯ ಪ್ರಾಣಿಗಳು ನಮ್ಮನ್ನು ಹೊಂಚುಹಾಕುತ್ತಿರುತ್ತವೆ ಎಂದೇ ನಂಬಿ ನಡೆದವ ನಾನು. ದಡಬಡಾ ಸದ್ದಿನ ಮಿಲ್ಟ್ರಿಬೂಟು, ಹಿಮ್ಮಡಿ ಘಟ್ಟಿಸಿ ವೀರವತ್ತಾದ ಹೆಜ್ಜೆ ಹಾಕುವ ಸ್ವಭಾವ, ಕಲ್ಲೋ ಕೋಲೋ ಕ್ಷಣಾರ್ಧದಲ್ಲಿ ಹತ್ತಿ, ಹಾರುವ ಗತ್ತು, ಪೊದರುಗೈಗಳನ್ನು ಮುರಿದು ನುಗ್ಗಿನುರಿಮಾಡುವ ಧಾವಂತ ಎಲ್ಲಾ ಇಲ್ಲಿ ಕಳಚಿಕೊಂಡಿದ್ದೆ. ಮಿದುವಡಿಯ ಶೂವೇರಿಸಿ ಒಣ ಎಲೆಯೂ ಪುಡಿಯಾಗದ ಹಗುರ ನಡೆ. ಏರುಶ್ರುತಿಯ ಮಾತು, ಬೊಬ್ಬೆ ಬಿಟ್ಟು ಬರಿಯ ಉಸಿರಾಟವೂ ಎಲ್ಲಿ ಸದ್ದು ಮಾಡುತ್ತದೋ ಪ್ರಾಣಿಗಳನ್ನು ಓಡಿಸಿಬಿಡುತ್ತದೋ ಎಂಬ ಅಳುಕು. ಭಾರೀ ಪ್ರಾಕೃತಿಕ ಸತ್ಯಗಳನ್ನಷ್ಟೇ ಕಣ್ತುಂಬಿಕೊಳ್ಳುತ್ತಾ ಎಷ್ಟು ಬೇಗನೇ ದಾರಿ ಮುಗಿಸಿಯೇನೆಂಬ ಆತುರದ ನಡಿಗೆಗಿಲ್ಲಿ ಬಿಗುವಾದ ಕಡಿವಾಣ.
ಸೀಳು ಜಾಡಿನಲ್ಲಿ ದಾಖಲಾತಿಗೆ ದೃಷ್ಟಿ ಒಂದೇ ಪ್ರಮಾಣ. ದೂರದ ಘೀಳು ಕೇಳುತ್ತ ಪಕ್ಕದ ಪೊದೆಯ ಪಿಸಿಪಿಸಿ ಸದ್ದಿಗೆ ಕುರುಡಾಗಬಾರದು. ಅಂಥ ಸೂಚನೆಯನ್ನು ಒಮ್ಮೆ ನಾವು ಸರಿಯಾಗಿ ಗ್ರಹಿಸಿ, ತಡೆದು ನಿಂತದ್ದಕ್ಕೆ ದಢೂತಿ ಕರಡಿ ಸುಮಾರು ಇಪ್ಪತ್ತೇ ಅಡಿ ಅಂತರದಲ್ಲಿ ತನ್ನದೇ ಲಹರಿಯಲ್ಲಿ ಜಾಡನ್ನು ಅಡ್ಡ ದಾಟಿ ಹೋಗಿತ್ತು. ಕಣ್ಮರೆಯಾದದ್ದರ ಸೂಚನೆಯೋ ಎರಗಲಿರುವುದರ ಅಪಾಯವೋ ಊಹಿಸಿ ಮುಂದುವರಿಯಬೇಕು. ಪೊದರಿನಾಚಿನ ಭಾರೀ ಹುತ್ತಕ್ಕೆ ಒಮ್ಮೆಲೆ ಸೊಂಡಿಲು ಬಾಲ ಬೆಳೆದು ಆನೆಯಾಗಬಹುದು, ಮಂಗ ಗೆಲ್ಲು ಹಾರಿತೆಂದುಕೊಂಡ ಗಲಗಲ, ಬರಿಯ ಗಾಳಿಯ ವಿನೋದವಿರಬಹುದು. ಇಲ್ಲಿ ನಾವು ವಹಿಸಬೇಕಾದ ಎಚ್ಚರಿಕೆಗಳಿಗೆ ಕೊನೆಯಿಲ್ಲ. ಆದರೆ ನೆನಪಿಡಲೇಬೇಕಾದ ಸಂಗತಿ, ದಾಖಲೆಗೆ ಒಳಪಡುವುದು ಸೀಳು ಜಾಡಿನಿಂದ ಸಿಗುವ ದೃಶ್ಯ ಮಾತ್ರ. ಗಳಿಗೆಯ ಹಿಂದೆ ಇಲ್ಲಿ ಆನೆ ಹಾಯ್ದ ಲಕ್ಷಣ ಎಷ್ಟು ಸ್ಪಷ್ಟವಿದ್ದರೂ ಸದ್ಯಕ್ಕೆ ತೋರುವ ಕಪಿಸೇನೆಯ ಲೆಕ್ಕವೊಂದೇ ನಮಗೆ ಸತ್ಯ. ಜಾಡಿನ ಕುಂಬು ಮರ ಬಳಸಿ ನಡೆದರೆ ಏನೋ ಪ್ರಾಣಿ ಕಣ್ಣು ತಪ್ಪಿಸಿಕೊಳ್ಳುವ, ಹತ್ತಿ ಇಳಿದರೆ ಸದ್ದಾಗಿ ಎದುರಾಗುವ ಇನ್ನೇನೋ ಪ್ರಾಣಿ ಓಡಿಹೋಗುವ ಭಯ. ಕೆಲವೊಮ್ಮೆ ಜಿಂಕೆ, ಮಂಗಗಳು ಬಹುಸಂಖ್ಯೆಯಲ್ಲಿ ಎದುರಾಗುವುದಿತ್ತು. ಅವುಗಳ ಎಣಿಕೆ ತಪ್ಪದ ಅವಸರದಲ್ಲಿ ಜಾಡಿನಲ್ಲಿ ಉಬ್ಬೆದ್ದ ಬೇರೋ ಉದುರಿಬಿದ್ದ ಕೋಲೋ ಎಡವಿ ಸದ್ದಾಗುವುದೂ (ತಪ್ಪು) ಇರುತ್ತಿತು. ಒಟ್ಟಾರೆ ನನ್ನ ಜನ್ಮದಲ್ಲಿ ಅಷ್ಟು ನಿಧಾನ ಎಂದೂ ನಡೆದದ್ದಿರಲಿಲ್ಲ (ಮೂರು ಕಿಮೀಗೆ ಎರಡೂವರೆ ಗಂಟೆ). ಹಾಗೇ ಅಷ್ಟು ಕಿರಿದಂತರದಲ್ಲಿ ಅಷ್ಟುವನ್ಯ ಜೀವಿಗಳನ್ನು ನೋಡಿದ್ದೂ ನನ್ನ ಭಂಡ ಜನ್ಮಕ್ಕೆ ಪ್ರಥಮ ಹಾಗೂ ಧನ್ಯತೆಯ ಅನುಭವ!
ಪತ್ತೇದಾರೀ ಪುರುಷೋತ್ತಮನೇ ನಾನು, ಹಿಂಬಾಲಿಸಿದ ಕುರುಬ ಜಗಜಟ್ಟಿ ರಾಮನಾಥ! ಬಿಸಿಲ ಭ್ರಮೆಯೋ ಹೊಂಬಣ್ಣದ ಮಿಕವೋ ಎಂದು ನಾನು ದೃಶ್ಯವನ್ನು ಅಳೆಯುವುದರೊಳಗೆ ಕಾಲಿನಡಿಯ ಸಾಗುವಾನಿ ಉದುರೆಲೆ ಒಳ್ಳೇ ಕರಿದ ಹಪ್ಪಳದಂತೆ ಚರಕ್ ಎಂದು ಎಲ್ಲ ಬಯಲಾಗಿತ್ತು. ಪೊದರ ಮರೆಯ ತಟಪಟ ಸದ್ದು ಕಾಡುಕೋಳಿ ದೂರ ಓಡಿದ್ದೇ ಇರಬೇಕು. ಬೇರೇನಾದರೂ ಆಗಿದ್ದರೆ ಎಂಬ ಸಂಶಯ ಮೊಳೆಯುತ್ತಿರುವಂತೆ, ಒಮ್ಮೆಗೆ ಎದುರ ಜಾಡಿನ ನೆಲದಿಂದೆದ್ದ ಗವುಜಿಗ ಪಕ್ಷಿ, “ಕಳ್ಳಾ ಸಿಕ್ಕಾ” ಎಂಬಂತೆ ಅರಚುತ್ತ ತಗ್ಗಿನಲ್ಲೇ ಹಾರಿಹೋಯ್ತು! ಉದುರಿದ ಕೋಲು ಕಡ್ಡಿಗಳು ನಾಲ್ಕರ ಕಟ್ಟಾಗಿ ಓಡಿದಂತೆ, ಹಸಿರಚಪ್ಪರದಿಂದಿಳಿದ ಬಿಸಿಲಕೋಲುಗಳ ಅಚ್ಚುಹೊತ್ತಂತೆ ಜಿಂಕೆ ಹಿಂಡು ಅಲ್ಲಿ ಧಾರಾಳ. ಸಾಮಾನ್ಯವಾಗಿ ಆನೆಯನ್ನುಳಿದು ಸಣ್ಣ ಸಸ್ಯಾಹಾರಿಗಳು, ಮೇಯುವಲ್ಲಿ ಜಾತಿ ಬೇಧ ಮಾಡುವುದಿಲ್ಲ. (“ಪುಡಾರಿಗಳೂ ಹಾಗೇ” ಎಂದು ಹೀನೋಪಮೆ ಕೊಡಬೇಡಿ ದಮ್ಮಯ್ಯ!) ಅಪಾರ ಜಿಂಕೆ, ಕಡವೆ, ಬರ್ಕಗಳನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತ, ಎಣಿಕೆ ಮಾಡುತ್ತ, ದಾಖಲಿಸುವಲ್ಲಿ ನಾವು ಕನಿಷ್ಠ ಅಷ್ಟಾವಧಾನಿಯ ಜಾಗೃತಿಯಾದರೂ ಉಳಿಸಿಕೊಳ್ಳಬೇಕು. ಕಪಿಗಳು ತಮ್ಮ ಉನ್ನತ ಕಛೇರಿಯಲ್ಲಿ ಕುಳಿತು ಮೇಜುವಾನಿ ನಡೆಸಿದರೆ ಹಣ್ಣು, ಹೀಚು, ಚಿಗುರು, ಹೂವು ಧಾರಾಳ ಉದುರುತ್ತಿರುತ್ತವೆ. ಅವುಗಳಿಗಾಗಿ ಕೆಳಗೆ ಅಡ್ಡಾಡುವ ಜಿಂಕೆ ಕಡವೆಗಳ ಎಣಿಕೆಯಲ್ಲೇ ನಾವು ಕಳೆದುಹೋಗಬಾರದು. (ಕೋಟಿ ನುಂಗಪ್ಪನನ್ನು ಬಿಟ್ಟು ಕಾಫಿಖರ್ಚು ಕೇಳಿದವನನ್ನು ಹಿಡಿದರಂತೆ!) ಎರಡನ್ನೂ ಹೊಂಚುತ್ತಾ ಚಿರತೆ ಕುಳಿತಿರಬಹುದು. ಹಡ್ಲಿನಂಚಿನಲ್ಲಿ ಸುಳಿಯುವ ಆನೆ ಮೇಲೆ ಎಚ್ಚರಿಕೆಯ ಕಣ್ಣಿಟ್ಟದ್ದು ಹೆಚ್ಚಾಗಿ ಅಲ್ಲೇ ಕೆಳಗೆ ನೊಜೆಹುಲ್ಲ ಗೆಡ್ಡೆ ಮಗುಚುವ ಹಂದಿಗಳನ್ನು ಕಣ್ತಪ್ಪಿಸಿಕೊಳ್ಳಬಾರದು.
ಲಂಟಾನಾ ಪೊದರಿನ ಅಲುಗಾಟಕ್ಕೆ ಇನ್ನೇನು ಆನೆಯೇ ಬಂತೆನ್ನುವಾಗ ಹಳಗಾಲದ ಪೊಲಿಸನಂತೆ ಪ್ರತ್ಯಕ್ಷವಾಗುವ ಕಾಟಿಯದು ನಿಜಕ್ಕೂ ವೀರಮೋಹನ ರೂಪ. ಕರಿಮಿಂಚುವ ದಿರುಸು, ಮೊಣಕಾಲ ಮಟ್ಟದ ಬಿಳಿ ಸ್ಟಾಕಿಂಗ್, ಬಲುಶೋಕಿನ ಕೊಂಬಿನ ಹ್ಯಾಟ್ ಇಟ್ಟು ಎದೆಯುಬ್ಬಿಸಿದ ನಿಲುವಿನಲ್ಲಿ ಯಾರ ಗುಂಡಿಗೆಯೂ ತಡವರಿಸುವುದು ಖಂಡಿತ. (ಭಾಗವತರು ಇನ್ನೇನು ತಾರದಲ್ಲಿ “ಯಾರೆಲೆ ಮನುಜಾಆಆಆ” ಹಾಡಿ, ಅದಕ್ಕೆ ಕುಣಿಯಲು ಅಬ್ಬರತಾಳ ಹಾಕುತ್ತಾರೆ ಎನ್ನುವಾಗ) ಆದರೆ ಮರುಕ್ಷಣದಲ್ಲಿ ಅದು ನೆಲ ಕಿತ್ತುಹೋಗುವಂತೆ ಅಥವಾ ಭೂಮಿಯೇ ಅದುರುವಂತೆ ಓಡಿ ಹೋಗುವುದೂ ನಿಶ್ಚಯ.
ಅಡ್ಡ ಹಾಯ್ದದ್ದು ಕಡವೆ ಮರಿಯೋ ಬರ್ಕವೋ ದಾಖಲೆಯಲ್ಲಿ ಸಂಶಯಲಾಭ ಒಂದಕ್ಕೇ. ಪೊದರ ಮರೆಯಲ್ಲಿ ನಮ್ಮತ್ತ ಬರುವ ದರಬರ ಸೂಚನೆ ಜೋಡಿ ಹಂದಿಗಳದೋ ಕರಡಿಯದೋ ಕ್ಷಣಮಾತ್ರದಲ್ಲಿ ನಾವು ಅಂದಾಜಿಸಲೇಬೇಕು. ಗಾಳಿಗೆ ತಲೆಯಾರಿಸುವ ಎತ್ತೆತ್ತರದ, ಎತ್ತೆತ್ತಣ ಮರಗಳಲ್ಲಿ ಮಂಗಗಳನ್ನು ಗುರುತಿಸುವುದಕ್ಕೆ ದುರ್ಬೀನು ಇದ್ದರೂ ಸಾಕಾಗುವುದಿಲ್ಲ.
ವನದೊಳಗೆ ಆನೆಯದೊಂದೇ ವಿಭಿನ್ನ ನಡೆ. ಇವು ಇತರ ಪ್ರಾಣಿಗಳಂತೆ ಮನುಷ್ಯನೆದುರು ಜಾಗ ಖಾಲಿ ಮಾಡಲು ಅವಸರಿಸುವುದಿಲ್ಲ. ಅವುಗಳ ಶ್ರವಣ ಮತು ಘ್ರಾಣಶಕ್ತಿ ಅಸಾಧಾರಣವಾದ್ದರಿಂದ ಎಷ್ಟೋ ಬಾರಿ ನಮ್ಮಿಂದ ಮರೆಯಲ್ಲಿದ್ದರೂ ಅವು ನಮ್ಮ ಬರೋಣದ ಸೂಚನೆ ಗ್ರಹಿಸಿದ ಕೂಡಲೇ ಮರವಟ್ಟು ನಿಂತು, ಹೆಚ್ಚಿನ ಮಾಹಿತಿಗೆ ಹೊಂಚುತ್ತವೆ. ಮುಖಾಮುಖಿ ಸಾಕಷ್ಟು ಅಂತರದ್ದಾದರೆ ಅದು ಬರಿದೇ ಬೆದರಿಸಬಹುದು, ಅಪರೂಪಕ್ಕೆ ಏರಿ ಬರಲೂ ಬಹುದು. ನನಗೆ ಮೊದಮೊದಲು ಸೀಳು ಜಾಡಿನಲ್ಲಿ ಆನೆಗಳನ್ನು ಎದುರಿಸುವ ಕುತೂಹಲಕ್ಕಿಂತ ಭಯವೇ ಹೆಚ್ಚಿತ್ತು. ಪೊದರುಗಳ ನಡುವೆ, ಬಿದಿರ ಮೆಳೆಗಳನ್ನು ಬಳಸಿ ನಡೆಯುವಾಗ ಮೈಯೆಲ್ಲಾ ಕಿವಿಯಾಗುತ್ತಿತ್ತು. ಬಿದಿರು ಹಿಂಡಿನ ನಟಿಕೆ ಚಟಿಕೆ, ಅಸ್ಪಷ್ಟ ತೋರುವ ಹುತ್ತ, ಮರದ ಬೊಡ್ಡೆಗಳೆಲ್ಲ ಬೆಚ್ಚುವಂತೆ ಮಾಡುತ್ತಿತ್ತು. ಕೆಲವೆಡೆಗಳಲ್ಲಂತೂ ನನ್ನ ನಿರೀಕ್ಷೆ ಹೆಚ್ಚಿ, ರಕ್ತಪರಿಚಲನೆ ಏರಿ, ಕಿವಿತಮ್ಮಟೆಯೊಳಗೇ ಗುರುಗುಟ್ಟಿದಂತೇ ಭಾಸವಾಗುತ್ತಿದ್ದದ್ದು ಅದೇ ಮೊದಲು ಅದೇ ಕೊನೆ! ಆದರೆ ಇವೆಲ್ಲ ವ್ಯರ್ಥವಾದಂತೆ ನನಗೆ ಮೊದಲ ಆರೂ ಜಾಡಿನಲ್ಲಿ ಆನೆ ಸಿಗಲೇ ಇಲ್ಲ.
ನಮ್ಮ ತಂಡದಲ್ಲಿ ಒಬ್ಬನಿಗೆ ರಾತ್ರಿ ನಿದ್ರೆಯಲ್ಲಿ ಆನೆ ದಾಳಿ ನಡೆಸಿದ್ದು, ಆತ ಅಮ್ಮನನ್ನು ಕರೆದದ್ದು, ಬೆಳಿಗೆ ಎಲ್ಲ ಚಾ ಕುಡಿಯುವಾಗ ನಂಚಿಕೊಳ್ಳಲು ಒಳ್ಳೆಯ ಹಾಸ್ಯವಾದರೂ ಆನೆಯ ಪ್ರಭಾವ ನಿರಾಕರಿಸುವಂತದ್ದಲ್ಲ. ಒಂದು ಗಣತಿ ಜೋಡಿಗೆ ಹಡ್ಲಿನಲ್ಲಿ ಪುಟ್ಟ ಹಿಂಡೊಂದು ಸಿಕ್ಕಿ ಒಂದು ಗಂಟೆ ಸತಾಯಿಸಿತ್ತು. ಮತ್ತೊಮ್ಮೆ ಯಾವುದೋ ಸೀಳುಜಾಡಿನ ಸ್ವಾಮ್ಯವನ್ನೇ ತನ್ನಲ್ಲಿಟ್ಟುಕೊಂಡ ಒಂದು ಸಲಗ ನಮ್ಮ ಇನ್ನೊಂದು ಜೋಡಿಗೆ ಭಾರೀ ಸುತ್ತು ದಾರಿ ತೋರಿತು. ಮಗುದೊಬ್ಬರದು ಇಪ್ಪತ್ತೇ ಮೀಟರ್ ಅಂತರದಲ್ಲಿ ಆನೆಯನ್ನೇ ವಂಚಿಸಿ ಬಂದ ಸಾಹಸ. ಸೀಳು ಜಾಡಿಗೆ ಇಳಿಯುವ ಮುನ್ನ, ಗಣತಿ ಮುಗಿಸಿ ಶಿಬಿರಕ್ಕೆ ಮರಳುವಾಗ ಹೀಗೇ ಅಲ್ಲಿ ಇಲ್ಲಿ, ನೀರಾಶ್ರಯದಲ್ಲಿ ಸಲಗದ ಗತ್ತು, ಹಿಂಡಿನ ಜಲಕೇಳಿಯ ವೈಭವ, ಮರಿಯಾನೆಗಳ ಉರುಡು ಎಂದು ಎಷ್ಟೂ ಆನೆ ಕಲಾಪಗಳನ್ನು ನೋಡಿ ಭಯ ಕಳಚಿಕೊಂಡು, ಸಂತೋಷಿಸಿದ್ದೇನೆ.
ಉಲ್ಲಾಸರ ಕೃಪೆಯಲ್ಲಿ ಎಲ್ಲರೂ ಹುಲಿ ನೋಡಿದ್ದೆವಾದರೂ ಜಾಡಿನಲ್ಲೇ ದಾಖಲಾತಿಗೆ ನಡೆದಾಗ ದೊಡ್ಡ ಮಾಂಸಾಹಾರಿ ಮೃಗಗಳನ್ನು ಹತ್ತಿರದಿಂದ ನೋಡುವ ಅದೃಷ್ಟ ನಮ್ಮ ಬಳಗದಲ್ಲಿ ಎರಡು ಜೋಡಿಗೆ ಮಾತ್ರ ಸಿಕ್ಕಿತು. ಒಂದು ಹೀಗೇ ವಿರಮಿಸಿದ್ದ ಚಿರತೆಗೆ ಇವರ ಅನಿರೀಕ್ಷಿತ ನಡೆ, ದರ್ಶನ ಅಳುಕು ಮೂಡಿಸಿರಬೇಕು. ಇವರಷ್ಟೇ ಕಳ್ಳಹೆಜ್ಜೆ ಇಟ್ಟು ಮರೆಯಾಯ್ತು. ಆದರೆ ಇನ್ನೊಂದು ಜೋಡಿಗೆ ಭಾರೀ ನಾಟಕೀಯವಾಗಿ ಮೃಗರಾಜನ ದೌಲತ್ತೇ ನೋಡ ಸಿಕ್ಕಿದ್ದು ಅವಿಸ್ಮರಣೀಯವೇ ಸರಿ. ನಮ್ಮವರು ಸಣ್ಣ ಪೊದರಿನಂಚಿನ ಮರದ ಮೇಲೆ ಕೆಲವು ಮಂಗಗಳ ಕಚಪಿಚ ಗುರುತಿಸಿದರು. ಇವರು ನಿಂತು, ಸಮಯ ದಿಕ್ಕು ಅಂತರಗಳ ದಾಖಲೆ ಮಾಡಿ, ಕತ್ತುದ್ದ ಮಾಡಿ ಎಣಿಕೆಗಿಳಿಯುವಾಗ ಮಂಗವೊಂದು ತಪ್ಪಿ ನೆಲಕ್ಕೇ ಧುಮುಕಿತೋ ಬಿತ್ತೋ ಗೊತ್ತಿಲ್ಲ. ಮರುಕ್ಷಣಕ್ಕೆ ನೆಲವೇ ಎದ್ದು ಒದ್ದಂತೆ ಮಂಗನನ್ನು ಕಚ್ಚಿ ಎಸೆಯಿತೊಂದು ಹುಲಿ; ನಮ್ಮವರು ಮರಗಟ್ಟುವಂತೆ ಹಿಂಬಾಲಿಸಿದ ಅಸಹನೆಯ ಗರ್ಜನೆ. ಇವರಿಂದ ಹದಿನೈದೇ ಮೀಟರ್ ಅಂತರದಲ್ಲಿದ್ದ ಹುಲಿಗೂ (ಬಹುಶಃ ಅಲ್ಲದು ವಿಶ್ರಮಿಸಿದ್ದಿರಬೇಕು) ಇವರಷ್ಟೇ ಅನಿರೀಕ್ಷಿತ ಮನುಷ್ಯ ಸಾಮೀಪ್ಯ. ಕತೆ, ಪುರಾಣಗಳಲ್ಲೆಲ್ಲ ಬರುವ ‘ದುಷ್ಟಮೃಗ’, ಖ್ಯಾತಿಗೆ ತಕ್ಕುದಲ್ಲದ ರೀತಿಯಲ್ಲಿ ಪಕ್ಕದ ಪೊದರಿನಾಚೆಗೆ ನೆಗೆದು, ಓಡಿ ಹೋಯ್ತು! ಆಹಾರ, ರಕ್ಷಣೆಗಳ ಪರಿಸರ ಸಮರ್ಪಕವಿದ್ದರೆ ಯಾವುದೇ ವನ್ಯಮೃಗವೂ ಮನುಷ್ಯನ (ಈ ಜೀವ ಖಂಡಿತ ತಮ್ಮ ತುತ್ತಲ್ಲ ಎಂಬ ಪ್ರಜ್ಞೆಯಲ್ಲಿ) ಮುಖಾಮುಖಿಯನ್ನು ಬಯಸುವುದಿಲ್ಲ ಎನ್ನುವ ವೈಜ್ಞಾನಿಕ ಸತ್ಯ ಅನಾವರಣವಾಗಿತ್ತು.
ಹದಿನೇಳು ವರ್ಷಗಳ ಹಿಂದೆ ನಾಗರಹೊಳೆಯ ಮೂಲೆಮೂಲೆಗಳಿಂದ ವಿವಿಧ ತರಂಗಾಂತರಗಳಲ್ಲಿ (ಹುಲಿಗಳ ಕಾಲರಿನಿಂದ) ಪ್ರಸಾರವಾಗುತ್ತಿದ್ದ ಬೀಪ್ ಬೀಪ್ ಸಂಕೇತಗಳು ಉಲ್ಲಾಸರ ಕಿವಿಗಷ್ಟೇ ಆಪ್ತ ನುಡಿಗಳನ್ನು ಆಡಿದ್ದಿರಬಹುದು. ಆದರೆ ಅವು ನಾಗರಹೊಳೆಯ ನಿಜ ನಾಡಿಮಿಡಿತ. ಅದರ ಆಧಾರದಲ್ಲಿ ಹುಲ್ಲಿನಿಂದ ಹುಲಿಯವರೆಗಿನ ಒಂದು ಸ್ವತಂತ್ರ ಜೈವಿಕ ಪರಿಸರದ, ಒಂದು ನೈಜ ಆಹಾರ ಸರಪಳಿಯ, ಒಂದು ಸಂಖ್ಯಾತ್ಮಕ ಪಿರಮಿಡ್ಡಿನ ದೃಢದರ್ಶನದ ಭಾಷ್ಯ ಉಲ್ಲಾಸ ಕಾರಂತರು ಬರೆದಿದ್ದಾರೆ. ಮುಂದುವರಿದು ಆ ಪರಿಸರದ ವಿಸ್ತರಣೆ, ಆ ಸರಪಳಿಯನ್ನು ಲಂಬಿಸುವ, ಆ ಪಿರಮಿಡ್ಡನ್ನು ಹಿರಿದುಗೊಳಿಸುವ ಕೆಲಸವನ್ನೇ ನಡೆಸುತ್ತ ಬಂದಿದ್ದಾರೆ. ವನಧಾಮವನ್ನು ಆಪ್ತವಾಗಿ ನಡೆದು ನೋಡುವ ಉತ್ಸಾಹವಷ್ಟೇ ತುಂಬಿಕೊಂಡು ಹೋಗಿದ್ದವರು ನಾವು (ಕೃಶಿ ಮತ್ತು ನಾನು). ಆದರೆ ಏಳು ದಿನಗಳ ಕೊನೆಯಲ್ಲಿ ಉಲ್ಲಾಸ್ Tiger Crisis ಎಂಬ ಹೆಸರಿನಲ್ಲಿ ನ್ಯಾಷನಲ್ ಜಿಯಾಗ್ರಫಿಕ್ಕಿನವರು ತಯಾರಿಸಿದ್ದ ವಿಡಿಯೋ ಕ್ಯಾಸೆಟ್ ಒಂದನ್ನು ಕೊಟ್ಟು ವನ್ಯ ರಕ್ಷಣೆಯ ಆ ವಿಸ್ತೃತ ಕಾರ್ಯಕ್ರಮದಲ್ಲಿ ನಮಗೂ ಒಂದು ಪಾತ್ರ ಯಾಕಿರಬಾರದೆಂದು ತೋರಿಸಿದರು. ಯಾವ ಅಬ್ಬರದ ಸಮಾರಂಭ, ಅನುಷ್ಠಾನಕ್ಕೆ ಬಾರದ ಪ್ರತಿಜ್ಞಾವಿಧಿಗಳ ಹಂಗಿಲ್ಲದೆ ನಮ್ಮನ್ನೂ ವನ್ಯ ರಕ್ಷಣಾ ದೀಕ್ಷೆಗೆ ಬದ್ಧಗೊಳಿಸಿದರು.
(ಮುಂದಿನವಾರ ‘ಹುಲಿ! ಹುಲಿ!!’ – ಕುಮಾರಪರ್ವತದ ಆಸುಪಾಸಿನ ಮಾಲಿಕೆಯಲ್ಲಿ ಸದ್ಯಕ್ಕೆ ಕೊನೆಯ ಕಂತು)
ಎಂದೂ ಮರೆಯಲಾರದ ಆ ನಾಗರಹೊಳೆಯ ವನ್ಯ ಜಾನುವಾರು ಗಣತಿ ದಿನಗಳನ್ನು ಮತ್ತೆ ನೆನಪಿಸಿದ ನಿಮ್ಮ ಲೇಖನಕ್ಕೆ ಧನ್ಯವಾದ. – ಕೃಶಿ
ತಮ್ಮೊಂದಿಗೇ ಕಳ್ಳ ಹೆಜ್ಜೆ ಹಾಕಿದ ಅನುಭವ!ಪ್ರೀತಿಯಿಂದಪೆಜತ್ತಾಯ
ಹಿಂದೊಮ್ಮೆ ಬಂಡೀಪುರದಲ್ಲಿ ನಾನು ಸಂಘಟಿಸಿದ್ದ ಪರಿಸರ ಅಧ್ಯಯನ ಶಿಬಿರದಲ್ಲಿ ಶಿಬಿರಾರ್ಥಿಗಳೊಂದಿಗೆ ಡಾ ಮೇವಾ ಸಿಂಗ್ (ಮೈಸೂರು ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನ ವಿಭಾಗದವರು)ನೇತ್ರತ್ವದಲ್ಲಿ ಅಧಯ್ಯನ ನಡಿಗೆಯಲ್ಲಿ ಹೋಗುತ್ತಿದ್ದಾಗ ಕಾಡುನಾಯಿಗಳು ಚಿರತೆಯೊಂದನ್ನು ಹಿಡಿಯಲು ನಡೆಸಿದ ವಿಫಲ ಯತ್ನ ನೋಡಿದ್ದನ್ನು ಪುನಃ ಮೆಲುಕು ಹಾಕುವಂತೆ ಮಾಡಿತು
Thanks Ashok-
ಕಣ್ಣಿಗೆ ಕಟ್ಟುವಂತೆ ಕಾಡಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದೀರಿ. ಈ ಕಂತನ್ನು ಓದಿ ಮುಗಿಸುವಷ್ಟು ಹೊತ್ತು ನಾನೂ ಅರಣ್ಯದೊಳಗೆ ಹೆಜ್ಜೆ ಹಾಕುತ್ತಿದ್ದೇನೋ ಎಂದು ಭಾಸವಾಗುತ್ತಿತ್ತು….
ವಿಸೂ: ಸೀಳು ಜಾದಿನ ವನ್ಯ ಜಾನುವಾರು ಗಣತಿ ಅಥವಾ ವನ್ಯ ಸಂರ್ಕ್ಷಣೆಯ ಕೆಲಸಗಳಲ್ಲಿ ಸ್ವಯಂಸೇವಕರಾಗುವ ಆಸಕ್ತರು ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್ (CWS) ಬೆಂಗಳೂರು ಕಛೇರಿಯ ದೂರವಾಣಿ 080 26715255 ನ್ನು ಸಂಪರ್ಕಿಸಬಹುದು. ಅಥವಾ ಅವರ ಜಾಲತಾಣಕ್ಕೆ -http://www.wcsindia.org/contribute.html ಶೋಧಿಸಬಹುದು
ಮಾರ್ಚಿನಲ್ಲಿ ಜಿಮ್ ಕೋರ್ಬೆಟ್ಗೆ ಹೋಗಿದ್ದೆ, ಅಲ್ಲಿ ಜೀಪ್ ಸಫಾರಿ ತೆಗೆದುಕೊಂಡಿದ್ದೆವು, ಆದರೆ ಹುಲಿ ಕಾಣಸಿಗಲಿಲ್ಲ, ಈಗ ನಿಮ್ಮ ಲೇಖನದ ಮೂಲಕ ಹುಲಿಯನ್ನು ಕಂಡೆ 🙂 ನಿಮ್ಮ ಅದ್ಭುತ ಹಾಗೂ ರೋಚಕ ಅನುಭವಗಳನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
As a graduate student, I was introduced to these camps by Mr. Rohith Rao. I have participated in 5 camps till jow. These camps have been so enthralling – always. Thank you for a beautiful article.