(ಕುಮಾರಪರ್ವತದ ಆಸುಪಾಸಿನಲ್ಲಿ ಹೇಳಲುಳಿದ ಎರಡು ತುಣುಕುಗಳು) ಭಾಗ ೧
ಕೊಡಗಿನ ಮಗ್ಗುಲಿನ ಕುಮಾರಪರ್ವತವೇ ಪುಷ್ಪಗಿರಿ ಎಂದೇನೋ ಹೇಳಿದ್ದು ಸರಿ. ಹಾಗೇ ಅದನ್ನು ನೋಡಲು ಒಂದು ಆದಿತ್ಯವಾರ ನಮ್ಮ ಮೋಟಾರ್ ಸೈಕಲ್ ಸೈನ್ಯ ಹೊರಡಿಸಿಯೇ ಬಿಟ್ಟೆವು. ಹಳೆಯ ನೆನಪುಗಳನ್ನು ಹೆಕ್ಕುತ್ತಾ ಹೊಸಬರಿಗೆ ಎಂಥದ್ದನ್ನೆಲ್ಲಾ ನೀವು ಕಳೆದುಕೊಂಡಿರಿ ಎಂದು ಮೃದುವಾಗಿ ಕೆಣಕಿ ಪ್ರೇರಿಸುತ್ತಾ ಅದೇ ಬಿಸಿಲೆ ಗೇಟ್ ಮುಂದುವರಿದು ಪಾಟ್ಲದವರೆಗೂ ಹೋದೆವು. ಮತ್ತೆ ಬಲ ಕವಲು ಹಿಡಿದೆವು. (ನೇರ ಹೋದರೆ ವಣಗೂರು, ಸಕಲೇಶಪುರ) ಬಿಸಿಲೆಯದು ಒಂದು ಮಾದರಿಯಾದರೆ ಇದು ಇನ್ನೊಂದೇ ಅವ್ಯವಸ್ಥೆ. ಬಿಸಿಲೆಯ ಕಾಡು, ಏರು ಇಲ್ಲಿಲ್ಲ, ಸಹಜವಾಗಿ ಕಾಡುವ ಕೊರಕಲುಗಳೂ ಇರಲಿಲ್ಲ. ಬಯಲು, ಸಮತಟ್ಟಾಗಿಯೇನೋ ಇತ್ತು. ಆದರೆ ಮಣ್ಣದಾರಿಗೆ ಡಾಮರೀಕರಣಕ್ಕೆ ಮೊದಲು ದಪ್ಪ ಜಲ್ಲಿ ಹಾಕಿದ ಇಲಾಖೆ ವರ್ಷಕ್ಕೂ ಮಿಕ್ಕು ಕಾಲ ಮರೆತಂತಿತ್ತು. ಜಲ್ಲಿ ಕಿತ್ತ ದಾರಿ, ಚುರುಗುಟ್ಟುವ ಬಿಸಿಲು ಮತ್ತು ದೂಳೀ ಸ್ನಾನವೆಲ್ಲ ಬೇರೆಯೇ ಸವಾಲು. ನಾನು, ಸುಂದರರಾಯರು ಸಪುತ್ರ-ಪತ್ನೀಕರಾಗಿ ಒಂದೊಂದು ಬೈಕಿನಲ್ಲಿದ್ದೆವು. ಒಂದೆರಡು ನೇರ ಗುಡ್ಡೆ ಏರುವ ಜಾಗಗಳಲ್ಲಿ ಜಾರಿ ಬೀಳುವುದಿದ್ದರೆ ಒಬ್ಬೊಬ್ಬರೇ ಸಾಕೆಂದು ನಾವಿಬ್ಬರು ವಹಿಸುತ್ತಿದ್ದ ಮುನ್ನೆಚ್ಚರಿಕೆ, ದೇವಕಿ ರಮಾರಿಗೆ ಅಭಯ ನೇಸರರ ಹೊರೆ ಹೊತ್ತು ಚಾರಣವನ್ನು ಕಡ್ಡಾಯ ಮಾಡಿತ್ತು.
ಕುಂದಳ್ಳಿ ಎನ್ನುವಲ್ಲಿ ದಾರಿ ಸ್ವಲ್ಪ ಉತ್ತಮ ಸ್ಥಿತಿಗೆ ಬರುವಾಗ ನಮಗೆ ಬಲದ ಕವಲು ಅನುಸರಿಸಬೇಕಾಯ್ತು. ಈ ದಾರಿ ಮತ್ತೆ ಘಟ್ಟವನ್ನುದ್ದೇಶಿಸಿ ಓಡುತ್ತಿತ್ತು. ಸಾಲದ್ದಕ್ಕೆ ಯಾವುದೇ ಸಾರ್ವಜನಿಕ ವಾಹನ ಸೌಕರ್ಯವಿಲ್ಲದ ಕುಗ್ರಾಮಗಳ ಸರಣಿ. ಎಲ್ಲೋ ಹಿಂದೆ ಕೂಪು ದಾರಿಯಿದ್ದಿರಬೇಕು, ಈಚೆಗೆ ಅಪರೂಪಕ್ಕೆ ಹಳ್ಳಿಗರ ತೀವ್ರ ಅಗತ್ಯ ಕಾಲಗಳಲ್ಲಿ ಸಾಗಣೆಗಾಗಿ ಲಾರಿ, ಜೀಪುಗಳಷ್ಟೇ ಅಲ್ಪ ಸ್ವಲ್ಪ ತಿದ್ದುಪಡಿಯೊಡನೆ ಬಳಸಿದ್ದೂ ಇರಬಹುದು. ಒಂದು ದೀರ್ಘ ಇಳಿಜಾರಿನಲ್ಲಿ ನಮ್ಮಲ್ಲಿ ಅಡ್ಡ ಮಗುಚದ ಬೈಕಿಲ್ಲ ಎಂದರೆ ಅತಿಶಯೋಕ್ತಿಯೇನೂ ಆಗದು. ಆದರೆ ಎದೆಗುಂದದೆ, ಅಪಾಯ ಗ್ರಹಿಸುವ ಎಚ್ಚರ ಕಳೆದುಕೊಳ್ಳದೆ ಇದ್ದುದರಿಂದ ಗಾಯ, ವಾಹನ ಜಖಂಗಳೇನೂ ಗಣನೀಯವಾದ್ದಾಗಲಿಲ್ಲ. ಇಷ್ಟಾಗಿಯೂ ಮುಂದುವರಿಯಲು ನಮಗೆ ನೇರ ಎದುರು ಕಾಣುತ್ತಿದ್ದ ಪುಷ್ಪಗಿರಿ ಎಂದು ಪ್ರತ್ಯೇಕ ಹೇಳಬೇಕೇ. ಬೀದಳ್ಳಿ ಎಂಬಲ್ಲಿ ಕುಮಾರಧಾರೆಯ ಆಳದ ಕೊರಕಲಿಗೆ ಅಂದು ಕೇವಲ ಪಾದಚಾರಿ ಸೇತುವೆ ಮಾತ್ರ ಇದ್ದ ನೆನಪು. ಅದರಲ್ಲಿ ಬೈಕ್ ದಾಟಿಸಲು ಆಗದಂತೆ ವ್ಯವಸ್ಥೆಯೇ ಇತ್ತು. (ಆ ಲೆಕ್ಕದಲ್ಲಿ ಇಂದು ಸುಳ್ಯದ ಭಾರದ್ವಾಜ ಕೃತ ತೂಗುಸೇತುವೆಗಳು ಹೆಚ್ಚು ಸಮರ್ಥ.) ಆದರೆ ಲಾರಿಗಳಿಗಾಗಿ ಹೊಳೆಗಿಳಿದು, ಆಚೆ ಏರುವ ದಾರಿಯಲ್ಲೂ ನಮ್ಮ ಎದ್ದುಬಿದ್ದೋಟ ಮುಂದುವರಿಸಿದೆವು. ದಾರಿ ಹೆಗಡೆಮನೆ ಎಂಬಲ್ಲಿನ ಕೊನೆಯ ಕೃಷಿಭೂಮಿ – ಕಾಫಿ ತೋಟ, ಮುಗಿದಲ್ಲಿ ನಮ್ಮ ಅಂದಿನ ಜಿದ್ದೂ ಮುಗಿದಿತ್ತು! ತಡ ಮಧ್ಯಾಹ್ನದ ಬುತ್ತಿ ಮುಗಿಸಿ, ಹಿಂದಿರುಗುವ ದಾರಿಯ ಉದ್ದ ಮತ್ತು ಕಷ್ಟ ಮರೆಯದೆ, ಪುಷ್ಪಗಿರಿ ವಿಜಯವನ್ನು ಇನ್ನೊಂದೇ ಪ್ರಯತ್ನಕ್ಕೆ ಬಾಕಿ ಉಳಿಸಿ ಮರಳಿದ್ದೆವು.
ಪರ್ವತಾರೋಹಣದಲ್ಲಿ ಲಕ್ಷ್ಯಗಳು ಹೆಚ್ಚಾಗಿ ಒಂದು ಪ್ರಾಕೃತಿಕ ಅತಿಶಯವೇ (ಶಿಖರ, ಜಲಪಾತ ಇತ್ಯಾದಿ) ಇತುತ್ತದಾದರೂ ಮಾರ್ಗಕ್ರಮಣ (ಹೆಚ್ಚಾಗಿ ವನ ಚಾರಣ, ಇಲ್ಲಿ ಬೈಕ್ ಪೂರ್ಣ ಸವಾರಿ ಆದರೂ) ಎಂದೂ ಮರೆಯುವಂತದ್ದಲ್ಲ, ತಿರಸ್ಕೃತ ಖಂಡಿತಾ ಅಲ್ಲ. ಅಂದು ಪುಷ್ಪಗಿರಿ ಎಂಬ ಲಕ್ಷ್ಯ ಸಾಧನೆಯಾಗದ ಬೇಸರ ಕೆಲವರನ್ನಾದರೂ ಕಾಡಿದ್ದರೆ ಪೂರ್ಣ ಶಮನಗೊಳಿಸಿದ ಖ್ಯಾತಿ ಅತ್ತಿಹಳ್ಳಿ ಅಬ್ಬಿಗೇ ಸೇರುತ್ತದೆ. ನಾನು ಮೊದಲೇ ಭೂಪಟದಲ್ಲಿ ಗುರುತಿಸಿಕೊಂಡಿದ್ದ ಅನಾಮಧೇಯ ‘ಫಾಲ್ಸ್ (೬೨ ಮೀ)’ ಇದರ ಪತ್ತೆಗೆ ವಿಚಾರಣೆ ನಡೆಸಿದೆವು. ನಮ್ಮ ಉತ್ಸಾಹಕ್ಕೆ ಹಳ್ಳಿಗರ ಪ್ರತಿಸ್ಪಂದನೆಯೂ ಸಿಕ್ಕಿತು. ಹಿಂದಿರುಗುವಾಗ ಬೀದಳ್ಳಿ ಕಳೆದು ಸ್ವಲ್ಪೇ ದೂರದಲ್ಲಿ ಎಡದ ಕವಲುದಾರಿ ಹಿಡಿದೆವು. ಆದರೆ ಅದು ನೂರಡಿ ಸವಾರಿಗೂ ಒಗ್ಗದ ದುಸ್ಥಿತಿಯಲ್ಲಿದ್ದ ಕಾರಣ, ಬೈಕ್ ಬಿಟ್ಟು ನಡೆದೇ ಆ ಜಲಪಾತವನ್ನು ಪ್ರಥಮ ಬಾರಿಗೆ ಅದೂ ನೆತ್ತಿಯಿಂದ ನೋಡಿದೆವು. ನಾವು ಬೀದಳ್ಳಿ ಬಳಿ ಬೈಕ್ಗಳಲ್ಲಿ ಹಾಯ್ದ ಅದೇ ಕುಮಾರಧಾರೆ ಇಲ್ಲಿ ಅಬ್ಬಿಯಾಗಿತ್ತು. ಮತ್ತೀ ಅಬ್ಬಿಯನ್ನು ಬುಡದಿಂದ ನೋಡಿದ, ಅದರೊಡನೆ ಸುಖಿಸಿದ ಅನುಭವವನ್ನು ಈಗಾಗಲೇ ನನ್ನ ಹಿಂದಿನ ಅಧ್ಯಾಯದಲ್ಲಿ ಹೇಳಿದ್ದೇನೆ. ಆದರೆ ನೆನಪಿರಲಿ, ಪ್ರಕೃತಿಯೊಡನಾಟದಲ್ಲಿ ಪ್ರತಿ ಮುಖಾಮುಖಿಯೂ ಹೊಸತು. ಆ ಪೂರ್ಣ ಭಿನ್ನತೆಯನ್ನು, ವೈವಿಧ್ಯವನ್ನು ಇನ್ನೊಂದೇ ಕಾಲಘಟ್ಟದಲ್ಲಿದ್ದುಕೊಂಡು ಹಿಡಿಯುವ ಪ್ರಯತ್ನವಷ್ಟೇ ‘ಹಳಸ’ಬಹುದು. ಹಾಗಾಗಿ ಸದ್ಯ, “ನಾವೆಲ್ಲಾ ಸುಖವಾಗಿ ಮಂಗಳೂರಿಗೆ ಮರಳಿದೆವು” ಎಂದಷ್ಟೇ ಹೇಳುತ್ತೇನೆ.
ಪುಷ್ಪಗಿರಿಯ ಇನ್ನೊಂದೇ ಪ್ರಯತ್ನದಲ್ಲಿ ನಮ್ಮ ಬೈಕ್ ತಂಡ, ಹೆಗಡೆಮನೆಯನ್ನು ವಿಳಂಬರಹಿತವಾಗಿ ಸೇರಿತು. ಅಲ್ಲಿ ನಾವು ಹಿಂದೆ ಗಮನಿಸದ ಪ್ರಾಚೀನ ಮತ್ತು ಸಾಕಷ್ಟು ದೊಡ್ಡ ದೇವಾಲಯವನ್ನು ಕಂಡೆವು. ಅದರ ಅಂಗಳದ ಸಂಪಿಗೆ ಮರವಂತೂ ಆ ಜಾತಿಗೇ ಅಪವಾದ ಎನ್ನುವಷ್ಟು, ಆಲ ಮೊದಲಾದ ಊರ್ಧ್ವಮೂಲದ ಮರಗಳನ್ನೂ ನಾಚಿಸುವಷ್ಟು ಭಾರೀ ಸುತ್ತಳತೆಯ ಕಾಂಡವನ್ನು ಹೊಂದಿದೆ. (ನನ್ನ ನೆನಪು ಸರಿಯಿದ್ದರೆ, ನಾವು ಐದಾರು ಮಂದಿ ಕೈಜೋಡಿಸಿದರೂ ಅದನ್ನು ಸುತ್ತುವರಿಯಲಾಗಲಿಲ್ಲ!) ದೇವಾಲಯದ ವಠಾರದಲ್ಲೇ ಬೈಕ್ ಬಿಟ್ಟು, ಸ್ಥಳೀಯ ಓರ್ವ ಮಾರ್ಗದರ್ಶಿಯ ಸಹಾಯ ಪಡೆದು ಮುಂದುವರಿದೆವು.
ದೇವಸ್ಥಾನದ ಒತ್ತಿನ ದಿಬ್ಬ ಕಳೆದು ಆಚೆಗಿಳಿದರೆ ಲಿಂಗದ ಹೊಳೆಯ ವಿಸ್ತಾರ ಪಾತ್ರೆ. ಇದು ಹರಹು ಮತ್ತು ಪ್ರವಾಹದಲ್ಲಿ ಸ್ವಲ್ಪ ಮೊದಲು ನಾವು ಬೀದಳ್ಳಿಯಲ್ಲಿ ಬೈಕ್ ದಾಟಿಸಿದ ಅಥವಾ ಅತ್ತಿಹಳ್ಳಿಯಲ್ಲಿ ಅಬ್ಬಿಯಾಗಿ ಧುಮುಕುವ ಕುಮಾರಧಾರೆಗೆ ಏನೂ ಕಡಿಮೆಯಿಲ್ಲ. ಈ ಹಂತದಲ್ಲಿ ಎರಡೂ ಹೊಳೆಗಳು ಸುಮಾರಾಗಿ ಉತ್ತರಮುಖಿಗಳೇ ಆಗಿವೆ. ಇವುಗಳ ನಡುವಣ ‘ದೊಡ್ಡಬೆಟ್ಟ’ ಶಿಖರ (ಸಮುದ್ರ ಮಟ್ಟದಿಂದ ೧೧೧೨ ಮೀ) ಸಾರ್ಥಕ ಅನ್ವರ್ಥನಾಮವೇ ಸರಿ. (ಊಟಿಯ ದೊಡ್ಡಬೆಟ್ಟ ದಕ್ಷಿಣ ಭಾರತದಲ್ಲಿ ಅತ್ಯುನ್ನತವೇನೋ ಸರಿ. ಆದರೆ ಅದರ ನೆತ್ತಿಯವರೆಗೂ ಚತುಷ್ಪಥವೇ ಹರಿದಂತೆ ವಾಹನ ಸಮ್ಮರ್ದವಿರುವುದು ನೋಡುವಾಗ ಪ್ರಸ್ತುತ ದೊಡ್ಡಬೆಟ್ಟದೆದುರು ಅದನ್ನು ನಿವಾಳಿಸಿ ಎಸೆದುಬಿಡಬಹುದು!) ದೊಡ್ಡಬೆಟ್ಟದ ಬುಡವನ್ನು ಪೂರ್ವದಿಂದ ಆವರಿಸಿ, ಉತ್ತರಕ್ಕೂ ಬಳಸಿ ಪಶ್ಚಿಮಮುಖಿಯಾಗುತ್ತದೆ ಕುಮಾರಧಾರೆ. ಆ ಕೊನೆಯಲ್ಲಿ ಅದೇ ದೊಡ್ಡಬೆಟ್ಟದ ಪಶ್ಚಿಮ ಬುಡವನ್ನು ನೇರ ಆವರಿಸಿ ಕುಮಾರಧಾರೆಯಲ್ಲಿ ಒಂದಾಗುತ್ತದೆ ಲಿಂಗದಹೊಳೆ. ನಮ್ಮನ್ನು ಜಾಡು ಅರೆವಾಸಿ ದಟ್ಟ ಕಾಡಿನ ನಡುವೆ ನಿಧಾನ ಏರಿನಲ್ಲಿ ಒಯ್ಯುತ್ತದೆ. ಮತ್ತೆ ಕಾಡು ವಿರಳವಾಗುತ್ತ, ಬಂಡೆ ದರ್ಶನ ಹೆಚ್ಚುತ್ತ, ಏರು ಕಠಿಣವಾಗುತ್ತ ಅಕ್ಕಪಕ್ಕದ ಗಿಡ ಹುಲ್ಲು ಗೆಡ್ಡೆ ಕೂಡಾ ಸಹಾಯಕ್ಕೆ ಒದಗಬೇಕಾಗುತ್ತವೆ. ದಮ್ಮು ಕಟ್ಟುತ್ತಾ ಬರುವುದನ್ನು ಔನ್ನತ್ಯ ಸಂಬಂಧೀ ಕಾಯಿಲೆಗೆ ಭ್ರಮಿಸುವವರಿಗೇನೂ ಕೊರತೆಯಿರಲಿಲ್ಲ. ಎಲ್ಲರೂ ಬೆವರಹೊಳೆಯಲ್ಲಿ ಈಸುವವರೇ!
ಹೆಗಡೆಮನೆ ದೇವಳ ಬಿಟ್ಟು ಸುಮಾರು ಎರಡು ಗಂಟೆಯ ಚಾರಣದಲ್ಲಿ ನಾವು ಕುಮಾರಪರ್ವತದ ಅದೇ ಬಂಡೆ ಶಿಖರದ ಉತ್ತರ ಕೆಳ ಅಂಚಿನಲ್ಲಿದ್ದೆವು. ಅದುವರೆಗೆ ನಾವೇರಿದ್ದ ಮತ್ತು ಸ್ಪಷ್ಟವಾಗಿರುವ ಏಕೈಕ ಏರು ಜಾಡೆಂದು ತಪ್ಪಾಗಿ ತಿಳಿದಿದ್ದ ಪಶ್ಚಿಮಮೈಗಿಂತ ಸುಲಭ ಸಾಧ್ಯತೆಯನ್ನು ತೋರಿತು. ಅದು ಸವಕಳಿಯಲ್ಲಿ ಸಾಕಷ್ಟು ಚಕ್ಕೆ ಎದ್ದು, ಬಿರುಕು ಬಿದ್ದಿತ್ತು. ಸಾಲದ್ದಕ್ಕೆ ಯಾರೋ ‘ಜಾಣ’ರು ಕರಿಕಲ್ಲ ಉದ್ದಕ್ಕೂ ಕಲ್ಲು ಗೀರಿ, ಕೆಲವೆಡೆ ಪೈಂಟ್ ಬಳಿದು ದಿಕ್ಸೂಚಿಯನ್ನೂ ಕೊಟ್ಟಿದ್ದರು. ಮುಖ್ಯ ಜಾಡು ಸಣ್ಣ ಏಣಿನ ಮೇಲೇ ಹೋಗುತ್ತಿತ್ತು. ಆದರೆ ಎಡದ ಪುಟ್ಟ ಕಣಿವೆ, ಅದರಾಚಿನ ಮತ್ತಷ್ಟು ಹರಹುಗಳಲ್ಲೂ ಎಲ್ಲಾ ಕಾಲದಲ್ಲೂ ಆರೋಹಿಗಳು ಸ್ವಾತಂತ್ರ್ಯವಹಿಸಿ ಓಡಾಡಿದ್ದಕ್ಕೆ ಕಸ, ‘ಲೇಖನ’ ಕಾಣುತ್ತಿತ್ತು. ಮಾರ್ಗದರ್ಶಿ ಹೇಳಿದಂತೆ ಅಲ್ಲೆಲ್ಲೋ ತಗ್ಗಿನಲ್ಲಿ ಪುಟ್ಟ ಕೆರೆಯಂತೇ ನಿಲ್ಲುವ ನೀರು ಡಿಸೆಂಬರ್ – ಜನವರಿಯವರೆಗೂ ಇಲ್ಲಿಗೆ ಬರುವವರಿಗೆ ‘ಜೀವ’ ಕೊಡುವುದುಂಟಂತೆ. ಆದರೆ ನಮಗದು ದಕ್ಕುವಂತಿರಲಿಲ್ಲ (ನಾವು ಸಾಕಷ್ಟು ನೀರು ಹೊತ್ತು ಸಜ್ಜಾಗಿಯೂ ಹೋಗಿದ್ದೆವು).
ಬಂಡೆ ಮಟ್ಟಸವಾಗುತ್ತಿದ್ದಂತೆ ಮಣ್ಣು ಹುಲ್ಲಿನ ಟೊಪ್ಪಿ ಸ್ವಲ್ಪೇ ದೂರ. ಮತ್ತೆ ಶಿಖರದ ಆ ಮುಖಕ್ಕೆ ಹೆಸರು ತಂದ ಬಿಳಿ ಹೂ ಬಿಡುವ ಗುಜ್ಜಾರಿ ಮರಗಳದ್ದೇ ತೋಪು. ಆ ಎತ್ತರದ ಗಾಳಿ, ಮಳೆಗಳ ಹೊಡೆತಕ್ಕೆ ಸಹಜವಾಗಿ ಎಲ್ಲೂ ಬಾಗು ಬಳಕು ಇಲ್ಲದ ಗಟ್ಟಿ ಜೀವಗಳು; ಸುಲಭದಲ್ಲಿ ಒಂದು ಎಲೆಯೂ ಮಿಸುಕದು! ತಳದಲ್ಲಿ ಅವುಗಳಿಗೆ ಮೊದಲಲ್ಲಿ ನೆಲೆಕಾಣಿಸಿರಬಹುದಾದ ಹುಲ್ಲು ಮಣ್ಣಿನ ಟೊಪ್ಪಿಯನ್ನು ಬೇರಜಾಲದಲ್ಲಿ ಹೆಚ್ಚಿನ ದಪ್ಪಕ್ಕೂ ಬಿಗಿತಕ್ಕೂ ಒಳಪಡಿಸಿದ್ದವು. ಹಾಗೇ ಎತ್ತರ ಕಡಿಮೆಯಾದರೇನು, ಒಂದು ಬೆಳಕೋಲೂ ನೆಲ ಸೋಂಕಿ ಪಸೆಯಾರಿಸದಂತೆ, ಗಂಟು ಗಂಟಿನ ಕೊಂಬೆ ಟಿಸಿಲುಗಳ ಕೈಹರಡಿ, ಎಲೆಎಲೆಗಳ ಬೆರಳು ಬಿಡಿಸಿ ಆಕಾಶ ಕವಿಯುವ ಇವುಗಳ ಸಾಮರ್ಥ್ಯ ನೋಡಿಯೇ ಆನಂದಿಸಬೇಕು. ಮೇವರಸಿ ಬರುವ ಕಾಟಿಕಡವೆಗಳ ನುಗ್ಗುನುರಿಗಷ್ಟೇ ಬಿಟ್ಟಿರಬಹುದಾದ ಇಲ್ಲಿನ ತಗ್ಗಿನ ಸಂದನ್ನು ‘ಮನುಷ್ಯ ಪ್ರಾಣಿ’ ತನ್ನನುಕೂಲಕ್ಕೆ ಬರಿದೇ ಎತ್ತರಿಸಿಕೊಳ್ಳಲಿಲ್ಲ! ಈ ತೋಪಿನ ನಡುವೆ ಸುಮಾರು ಹತ್ತಡಿ ಅಗಲದ ದಾರಿಯನ್ನೇ ಕಡಿದು ಬಿಟ್ಟಿದ್ದಾರೆ. ಆದರೂ ಬೀಸುಗತ್ತಿಯ ಹೊಡೆತ ಮೀರಿದೆತ್ತರದಲ್ಲಿ ಕೊಂಬೆಗೈಗಳು ಮತ್ತೆ ಒಗ್ಗೂಡಿ ಕಮಾನು ರಚಿಸಿವೆ. ಕಿಂಡಿಕಿಂಡಿಗಳಲ್ಲಿ ವಿಹಂಗಮ ನೋಟ, ಕಾದ ಬಂಡೆಗಳ ಮೇಲೆ ಹಾಯ್ದರೂ ಇಲ್ಲಿ ಹಸಿರು ಸೋಸಿ ತಣಿದು, ನಮ್ಮನ್ನು ತಣಿಸುವ ಸರಭರ ಗಾಳಿ, ಚಿಗುರು ಹೂ ಹಣ್ಣುಗಳ ವರ್ಣವೈವಿಧ್ಯ ಮತ್ತು ಮೋಹಕ ಪರಿಮಳ, ಎಡೆಯಲ್ಲಾಡುವ ಖಗರತ್ನಗಳ ಮಾಟ, ಸಂಗೀತ ವಿವರಿಸಿದಷ್ಟೂ ಕಡಿಮೆಯೇ.
ದಾರಿ ಕಡಿದ ಪಾಪಿಗಳು ಮತ್ತೂ ಮಾಡಿದ ಅನಾಚಾರವನ್ನು ಸೂಕ್ಷ್ಮದಲ್ಲಾದರೂ ಇಲ್ಲಿ ಹೇಳಲೇಬೇಕು. ಈ ಮೈಯ್ಯ ಶುದ್ಧ ಶಿಖರವಲಯ ಸಾಕಷ್ಟು ಮಟ್ಟಸ ಮತ್ತು ಗಟ್ಟಿ ನೆಲವನ್ನೇ ಹೊಂದಿದೆ. (ಆಚೆ ಮೈ ಒಂದೋ ಇಳಿಜಾರು, ಇಲ್ಲವೇ ನೊಜೆಹುಲ್ಲು ಬೆಳೆದ ಜವುಗು ಪ್ರದೇಶ) ಮರದಿಂದ ಮರಕ್ಕೆ ಪ್ರಕೃತಿಯೇ ನಿಗದಿಸಿದ ಅಂತರದಲ್ಲೂ ನಮಗೆ ಸಾಕಷ್ಟು ತೆರವಿನ ನೆಲ ಸಿಗುತ್ತದೆ. ಒಮ್ಮೆಗೆ ಹತ್ತು ಹನ್ನೆರಡು ಮಂದಿ ವೃತ್ತಾಕಾರದಲ್ಲಿ (ನಡುವೆ ಅಡುಗೆ, ಶಿಬಿರಾಗ್ನಿ ಇತ್ಯಾದಿ) ವಿಶ್ರಮಿಸುತ್ತಾರೆಂದರೆ ಮೂವತ್ತು ನಲವತ್ತು ತಂಡಗಳಿಗೆ ಧಾರಾಳವಾಗಿ ಹರಡಿಕೊಳ್ಳಬಹುದು. ಉದುರಿದ ದರಗು, ಒಣಕಡ್ಡಿಗಳು ಆವಶ್ಯಕ ಬೆಂಕಿಯೋ ಬಿಸುಪೋ ಒದಗಿಸಲು ಶಕ್ತವೇ ಇವೆ. ಆದರೆ ಭಾರೀ ಒಲೆ ಹೂಡಿದವರಿಗೆ, ಮೋಜಿನ ಶಿಬಿರಾಗ್ನಿ ಆಗಸಕ್ಕೆ ಮುಟ್ಟಿಸುವವರ ಹುಚ್ಚಾಟಗಳಿಗೆ ಇಲ್ಲಿ ಸಾಕಷ್ಟು ಹಸಿ ಮರಗಳೇ ಬಲಿಯಾದ ಕುರುಹು ಖಂಡಿತಕ್ಕೂ ಆರೋಗ್ಯಕರವಲ್ಲ. ಇನ್ನು ಅಲ್ಲಿ ನಡೆದಿರಬಹುದಾದ ‘ಯಜ್ಞ’ದ ಉಳಿಕೆಗಳನ್ನು ನೀವೇ ಊಹಿಸಿಕೊಳ್ಳಿ. ಆ ಕೊಳೆ, ಕೋಟಲೆಗಳನ್ನು ಮಳೆಗಾಲದಿಂದ ಮಳೆಗಾಲಕ್ಕೆ ಪ್ರಕೃತಿ ತೊಳೆಯಲು ಕಳೆಯಲು ಪ್ರಯತ್ನಿಸಿದರೂ ಸ್ಪರ್ಧೆಯಲ್ಲಿ ಸೋಲಿನ ಕುಪ್ಪೆ ಬೆಳೆಯುತ್ತಿದ್ದುದರ ಚಿಂತೆ ಮಾತ್ರ ಹೊತ್ತುಕೊಂಡು ಅಂದು ನಾವು ಮರಳಿದ್ದೆವು.
ಮತ್ತೊಂದೇ ಕಾಲದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ತೀರ್ಥ ಸ್ವಾಮಿಗಳು ಇದೇ ಜಾಡಿನಲ್ಲಿ ಶಿಖರವೇರಲಿದ್ದಾರೆ ಎಂದು ನನಗೆ ತಿಳಿಯಿತು. ವೈಯಕ್ತಿಕವಾಗಿ ಯಾವುದೇ ಮತಾಚಾರಗಳಿಗೆ ನಾನು ದೂರನಾದರೂ ಮಠ ಮತ್ತು ಸ್ವಾಮಿಗಳ ಜನಪ್ರಿಯತೆಯನ್ನೂ ಪ್ರಭಾವವನ್ನೂ ನಿರಾಕರಿಸಿದವನಲ್ಲ. ಹಿಂದೆ ಶ್ರೀ ವಿದ್ಯಾಭೂಷಣರೊಂದಿಗೆ ಶ್ರೀ ರಾಮಕೃಷ್ಣಾಶ್ರಮದಲ್ಲಿ ಸಾಮಾನ್ಯವಾಗಿ ಸಂಪರ್ಕಕ್ಕೆ ಬಂದ ಎಲ್ಲಾ ಸ್ವಾಮಿ, ಬ್ರಹ್ಮಚಾರಿಗಳೊಂದಿಗೆ ನನ್ನ ಪರಿಸರ ಮಾತುಗಳು ಗಳಿಸಿದ ಗೌರವ ಮರೆಯದೆ ನಾನು ರಾಘವೇಶ್ವರರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ನನ್ನ ಪತ್ರ ಸಾರಾಂಶ:
ಯಾವುದೇ ಮಠೀಯ ಮಹತ್ವಾಕಾಂಕ್ಷೆಯಿಲ್ಲದೆ ಭಕ್ತಾದಿಗಳ ಕೂಟದಲ್ಲಿ ನೀವು ಕುಮಾರಪರ್ವತವನ್ನೇರುವ ವಿಚಾರ ಕೇಳಿ ಸಂತೋಷವಾಯ್ತು. ಆಗ ಕೇವಲ ಪರಿಸರಪ್ರಿಯರಾಗಿ ನಾನು ಮತ್ತು ಗೆಳೆಯ ನಿರೇನ್ ಜೈನ್ ನಿಮಗೆ ಜೊತೆಗೊಟ್ಟು, ಆ ಶಿಖರವಲಯದ ಪ್ರಾಕೃತಿಕ ಸ್ಥಿತಿಗೆ ಬರುತ್ತಿರುವ ಅಪಾಯಗಳ ಬಗ್ಗೆ ಪ್ರತ್ಯಕ್ಷ ದರ್ಶನ ಮಾಡಿಸಬಹುದೇ? ಗೀತಾಚಾರ್ಯ ಕೃಷ್ಣನೇ “ದೇವತೆಗಳ ಚಿಂತೆ ಬಿಡಿ, (ಗೋವರ್ಧನ) ಗಿರಿಯನ್ನು ಪೂಜಿಸಿ” ಎಂದಲ್ಲಿರುವ ಪರಿಸರ ಪಾಠವನ್ನು ಪರೋಕ್ಷವಾಗಿ ಪುರಸ್ಕರಿಸುತ್ತಿರುವ ನಿಮ್ಮ ಅಭಿಯಾನಕ್ಕೆ ಇದರಿಂದ ಹೆಚ್ಚಿನ ಆಯಾಮ ಒದಗಬಹುದು.
ನಮಗೆ ಮಠ ಅಥವಾ ಸ್ಥಳೀಯ ‘ಆರೋಹಣ ಸಮಿತಿ’ಯ ವಕ್ತಾರರಿಂದ ಯಾವ ರೀತಿಯ ಪ್ರತಿಕ್ರಿಯೆಯೂ ಬರಲಿಲ್ಲ. ಕೆಲವು ವಾರಗಳ ಮೇಲೆ ಸಂಬಂಧಿಕರಲ್ಲಿ ಅದರ ವಿಡಿಯೋ ಚಿತ್ರ ನೋಡಿದೆ. ನೂರುಗಟ್ಟಳೆ ಜನ ದಿಗ್ಭಿತ್ತಿ ಹರಿಯುವಂತೆ ಜಯಘೋಷ ಹಾಕುತ್ತಾ ಹೋಗಿ ಬಂದದ್ದೂ ಸ್ವಾಮಿಗಳು ಭಾಗಿಯಾದದ್ದೂ ಕಾಣಿಸಿತು. ಕೊನೆಯ ಬಂಡೆಮೈಗೆ ಅಷ್ಟೂ ಉದ್ದಕ್ಕೆ ಬಲವಾದ ಹಗ್ಗ ನೇತುಬಿಟ್ಟು ಸೌಕರ್ಯ ಮಾಡಿಕೊಟ್ಟದ್ದೂ ತಿಳಿಯಿತು. ಅಂದೂ ಮುಂದೆಯೂ ಸ್ವಾಮಿಗಳ ವಲಯದಲ್ಲಿ ಮತ್ತೆ ಕುಮಾರಪರ್ವತ ಚರ್ಚೆಗೆ ಬಂದದ್ದು ನನಗೆ ತಿಳಿದಿಲ್ಲ.
[ಎರಡು ವಾಕ್ಯ ಖಂಡಗಳ ಹಿಂದೆ ಗಿರಿಶಿಖರಗಳಲ್ಲಿನ ಮಳೆಗಾಲದ ತೊಳೆಯುವ ಶಕ್ತಿ ಬಗ್ಗೆ ಒಂದು ಮಾತು ಸೇರಿಸಿದ್ದೆ. ಒಳ್ಳೇ ಕಾಲವೆಂದು ಯೋಜಿಸಿ ಹೋಗಿಯೂ ನಮ್ಮ ಬಳಗ ಹಲವು ಚಾರಣಗಳಲ್ಲಿ ಮಳೆಗಾಳಿಗಳಿಗೆ ಸಿಕ್ಕಿಕೊಂಡ ಅನುಭವವಿದೆ. ಆದರೆ ನಿಜ ಮಳೆಗಾಲದ ವೈಭವವನ್ನು ನೋಡಲೆಂದೇ ಯೋಜಿಸಿದ ಕಾರ್ಯಕ್ರಮಗಳಲ್ಲಿ ಪುಷ್ಪಗಿರಿಯ ಭೇಟಿ ಮರೆಯಲು ಸಾಧ್ಯವೇ ಇಲ್ಲ. ಈ ವಾರದ ದರ್ಶನಕ್ಕೆ, ಆಶಯಕ್ಕೆ ನಿಮ್ಮ ಕಾಣಿಕೆ ಕೊಟ್ಟು, ಮುಂದಿನ ವಾರದ ನನ್ನ ನೆನಪಿನ ಬಂಡಿ – ಪುಷ್ಪಗಿರಿಯ ಕಾರ್ಗಾಲ ವೈಭವ, ಕಾದಿರ್ತೀರಲ್ಲಾ?]
ರಾಮ ಚಂದ್ರಾ ಪುರದ ಸ್ವಾಮಿ ರಾಯರು ಪುಷ್ಪಗಿರಿ ಏರಿದ ವಾರ್ತೆ ಮತ್ತು ಪರಿ ತಿಳಿದು ಸಂಸವಾಯಿತು.
ನನ್ನ ನೆನಪುಗಳು ಕಲಸು ಮೇಲೋಗರವಾಗಿವೆ. ಇರಲಿ. ನಿಮ್ಮೊಂದಿಗೆ ನಾನು ಮಾಡಿದ ಹಳೆಯ ಚಾರಣಗಳಲ್ಲಿ ಒಡೆದ ಬಾಟಲಿ ಚೂರುಗಳು, ಒಡೆಯದಿದ್ದರೂ ದಿಕ್ಕಾಪಾಲಾಗಿ ಬಿದ್ದ ಬಾಟಲಿಗಳನ್ನು ನಾನು ಅಷ್ಟಾಗಿ ಕಂಡ ನೆನಪಿಲ್ಲ. ಆದರೆ ಇತ್ತೀಚೆಗೆ ಎಲ್ಲಿ ಯಾವ ಗುಡ್ಡದ ನೆತ್ತಿಗೆ ಹೋದರೂ ಕಿಂಗ್ ಫಿಶರೋ ಮತ್ತೊಂದೋ ಬಾಟಲಿಯ ಚೂರುಗಳು, ಯಾರ ಕಾಲಿಗೆ ಚುಚ್ಚಿಕೊಳ್ಳಲಿ ಎಂದು ಕಾಯುತ್ತ ಕೂತಿರುತ್ತವೆ. ಕುಡಿತ, ಕುಣಿತ, ಸೂಳೆಗಾರಿಕೆ ಇವೆಲ್ಲ ಪ್ರವಾಸೋದ್ಯಮದ – ಇತ್ತೀಚೆಗೆ ಕೃಷಿಕರ ನಡುವೆಯೂ ಬೆಳೆಯುತ್ತಿರುವ ರೆಸಾರ್ಟ್ ಪ್ರವಾಸೋದ್ಯಮವೂ ಸೇರಿದಂತೆ ಅದು ಯಾವ ಪ್ರವಾಸೋದ್ಯಮವೇ ಇರಲಿ – ಅವಿನಾಭಾಗವೆಂದು ನನ್ನ ಖಚಿತ ನಂಬಿಕೆ. ಅದೆಲ್ಲ ಅವರವರ ಸ್ವಾತಂತ್ರ್ಯ ಎಂದುಕೊಂಡರೂ, ಬೆಟ್ಟದ ನೆತ್ತಿಯ ಮೇಲೆ ಕೂತು ಕುಡಿದು ಬಾಟಲಿಗಳನ್ನು ಒಡೆದು ಸುತ್ತ ಬೇಕಾಬಿಟ್ಟಿ ಬಿಸಾಡುವವರ ಮನಸ್ಸು ಮಾತ್ರ ನನಗೆ ಅರ್ಥವಾಗುವುದಿಲ್ಲ.
ನಿಮ್ಮ ಪತ್ರಕ್ಕೆ ಮಠ ಅಥವಾ ಸ್ಥಳೀಯ ‘ಆರೋಹಣ ಸಮಿತಿ’ಯ ವಕ್ತಾರರು ಪ್ರತ್ಯುತ್ತರ ನೀಡಬಹುದಿತ್ತು. ಅ೦ತೂ ಬಂಡೆಗಲ್ಲಿನ ಮೈಗೆ ಅಷ್ಟೂ ಉದ್ದಕ್ಕೆ ಬಲವಾದ ಹಗ್ಗ ನೇತುಬಿಟ್ಟು ಸೌಕರ್ಯ ಮಾಡಿಕೊಟ್ಟ ನ೦ತರನವೇ ಸ್ವಾಮಿ ಸಮೇತ ಭಕ್ತಾದಿ ವ್ರ೦ದ ಕುಮಾರಪರ್ವತವನ್ನು ಏರಿದರೆನ್ನಿ!