“ವಾಲೀ ಬಾ ಯುದ್ಧಕ್ಕೆ. . .” ರಣಘೋಷದೊಡನೆ ಎಷ್ಟು ಬಾರಿ ಸುಗ್ರೀವ ಏರಿ ಹೋದನೋ ಅಷ್ಟೂ ಸೋಲಾಗಿತ್ತು ಅವನಿಗೆ. ಆದರೆ ತ್ರಾಣದಲ್ಲಿ ವಾಲಿಯ ಗಜಸಹಸ್ರವೇನು ಶತಕೋಟಿಯನ್ನೂ ಮೀರುವ, ಆಯುಷ್ಯದಲ್ಲಿ ತ್ರೇತಾಯುಗದ ಕಪಿಕುಲ ಶ್ರೇಷ್ಠನನ್ನು ಯುಗ ನಾಲ್ಕರಿಂದ ಹಿಂದಿಕ್ಕಿದ ಈ ವಾಲಿಯ ಮೇಲೆ ನಾನು ಏರಿಹೋದ ಅಷ್ಟೂ ಬಾರಿ ನನಗೆ ಸೋಲಾಗಿಲ್ಲ. ಅದನ್ನು ಜಯ ಎನ್ನಲು ಸಾಧ್ಯವಾಗದಂಥ ಸ್ಥಿತಪ್ರಜ್ಞ ಈ ವಾಲಿ ಅರ್ಥಾತ್ ವಾಲಿಕುಂಜ ಅಥವಾ ಅಜಿಕುಂಜ ಎನ್ನುವ ಪರ್ವತ ಶಿಖರ (ಸಮುದ್ರ ಮಟ್ಟದಿಂದ ೩೪೦೮ ಅಡಿ). ಕಾರ್ಕಳದಿಂದ ಆಗುಂಬೆಯತ್ತ ಹೋಗುವ ದಾರಿಯಲ್ಲಿ ಮಧ್ಯಂತರದಲ್ಲಿ ಸಿಗುವ ಊರು ಅಜೆಕಾರು. ಅಲ್ಲಿನ ಪೂರ್ವ ದಿಗಂತವನ್ನು ಸ್ಪಷ್ಟವಾಗಿ ತುಂಬುವ, ನೋಡಿದವರ ದಿಟ್ಟಿಗೇ ಚುಚ್ಚಿ ನಿಲ್ಲುವ ಈ ಶುದ್ಧ ಪೀನಾಕೃತಿಯನ್ನು ಕಂಡು ಮೋಹಿಸದವರು ವಿರಳ. ದಕ್ಷಿಣ ಉತ್ತರವಾಗಿ ಹಬ್ಬಿದ ಪಶ್ಚಿಮ ಘಟ್ಟವನ್ನು ಮನಸ್ಸಿಗೆ ತಂದುಕೊಳ್ಳಿ. ವಲಯದ ಪ್ರಖ್ಯಾತ ನಾಮರಲ್ಲಿ ಕುದುರೆಮುಖ ಮತ್ತೆ ಕುರಿಯಂಗಲ್ಲು ಕಳೆದಮೇಲೆ ಶಿಖರ ಶ್ರೇಣಿ ಓರೆಯಲ್ಲೇ ಕರಾವಳಿಯತ್ತ ನುಗ್ಗುವುದನ್ನು ಕಾಣುತ್ತೇವೆ. ಧಾವಂತಕ್ಕೆ ಕೊನೆ ಹೇಳಿ ಮತ್ತೆ ಪೂರ್ವಮುಖಿಯಾಗುವ ಬಿಂದು, ಹಾಸಿದ ಭೂಪಟದಲ್ಲಿ ಅಂತರ್ಜಿಲ್ಲಾ ಗಡಿರೇಖೆಯನ್ನು ಅನುಸರಿಸಿ ನೋಡಿದರೆ ಕಾಣುವ ಚೂಪು ವಾಲಿಕುಂಜ. ಪಶ್ಚಿಮಕ್ಕೆ ಅವಿಭಜಿತ ದಕ, ಪೂರ್ವಕ್ಕೆ ಚಿಕ್ಕಮಗಳೂರು ಜಿಲ್ಲೆ. ಅಜೆಕಾರಿಗೆ ಕಾಣುವಂತೆ ದಕ್ಷಿಣದ್ದು ಬಾಗಿದ ಮೈ, ಉತ್ತರದ್ದು ಸೆಟೆದು ನಿಂತಂತೆ ಕಡಿದು. ಭಾರೀ ಧನುಸ್ಸಿನ ಬಾಗಿದ ಹೆದೆ ದಕ್ಷಿಣ ಮೈ, ಅದನ್ನೂ ಮೀರಿದ ಕೊಪ್ಪು ಶಿಖರ, ಬಿಗಿದ ಸಿಂಜಿನಿ ಉತ್ತರ ಮೈ. ಉತ್ತರಮುಖಿಯಾಗಿ ವೀರಾಸನದಲ್ಲಿ ಕುಳಿತ ಕಪಿವೀರನ ನೆಲಮುಟ್ಟಿಸಿದ ಮಂಡಿಯಲ್ಲಿ ಕರಾವಳಿಯ ಅಜೆಕಾರಿದ್ದರೆ ಚಾಚಿದ ಬಾಲದ ಉದ್ದಕ್ಕೆ ಹಸಿರು ಮುಗಿಯದ ಘಟ್ಟ ಸಾಲು.

ಕರಾವಳಿಯಲ್ಲಿ ಕಾರ್ಕಳ-ಆಗುಂಬೆಯ ಮುಖ್ಯ ದಾರಿ ವಾಲಿಕುಂಜಕ್ಕೆ ಹಳೆಯ ಅಡಿರೇಖೆಯಾದರೆ ಘಟ್ಟದ ಮೇಲೆ ಕಳಸದಿಂದ ಕುದುರೆಮುಖ ಪಟ್ಟಣದ ಮೂಲಕ ಶೃಂಗೇರಿಗೋಡುವ ದಾರಿ ವನ್ಯಕ್ಕೆ ಹೊಸ ಲಕ್ಷ್ಮಣ ರೇಖೆ. ೧೯೭೯ರ ಸುಮಾರಿಗೆ ನನ್ನ ‘ಬೆಟ್ಟದ-ಸೀಕು’ (ಕಾಯಿಲೆ, ಹುಚ್ಚು ಎನ್ನುವ ಅರ್ಥದಲ್ಲಿ) ಉತ್ತುಂಗದಲ್ಲಿದ್ದಾಗ ಪುತ್ತೂರಿನ ಹಿರಿಯ ಮಿತ್ರ, ವಕೀಲ, ಬಂದಾರ್ ಶ್ರೀಪತಿರಾಯರು ನನ್ನಂಗಡಿಗೆ ಹೀಗೇ ಬಂದಿದ್ದರು. ಗೀಟುಗಳ ಗೋಜಲು, ಬಣ್ಣಗಳಲ್ಲಿ ತೇಪೆ ತೇಪೆ ಕಾಣುವ ಒಣ ಭೂಪಟಗಳಲ್ಲಿ ಅಸದೃಶ ಗಿರಿಶಿಖರ, ಜಲಪಾತ, ವರ್ಣವೈವಿಧ್ಯವನ್ನು ಕಣ್ಣಿಗೆ ಕಟ್ಟಿಸಿಕೊಳ್ಳುವ ಮತ್ತೂ ಇತರರೊಡನೆ ಅದನ್ನು ಅಷ್ಟೇ ಸ್ವಾರಸ್ಯಕರವಾಗಿ ಹಂಚಿಕೊಳ್ಳುವುದೂ ಇವರ ಹತ್ತೆಂಟು ಹವ್ಯಾಸಗಳಲ್ಲಿ ಒಂದು. ಅಂದು ಬಂದವರೇ ನನ್ನ ಗೀಚು ಚೀಟಿ, ಪೆನ್ನು ಎಳೆದು ಸಚಿತ್ರ ವಾಲಿಕುಂಜ ದರ್ಶನ ಮಾಡಿಸಿದರು. (ಇತಿಹಾಸ ಪ್ರಜ್ಞೆಯಿಲ್ಲದ ಅಪ್ಪಟ ಭಾರತೀಯನಾದ ನಾನು, ಹೀಗೇ ಅವರು ಮಾಡಿಕೊಟ್ಟ ಎಲ್ಲಾ ಚಿತ್ರಗಳನ್ನು ಆಯಾ ಸಾಹಸಯಾತ್ರೆಯನಂತರ ಕಳೆದುಕೊಂಡಿದ್ದೇನೆ!) ಅಜೆಕಾರಿನಿಂದ ಅಂಡಾರು ವಲಯದೊಳಕ್ಕೆ ನುಗ್ಗುವ ದಾರಿ ದೂರದಲ್ಲಿ ಬಜಗೋಳಿಯನ್ನು ಸೇರುತ್ತದೆ. ಆದರೆ ಶಿಖರಗಾಮಿಗಳು ಮೊದಲಲ್ಲೇ ಎಲ್ಲಿ ಕಾಡು ನುಗ್ಗಬೇಕು ಮತ್ತೆ ಒಳಗಿನ ಜಾಡುಗಳಲ್ಲಿ ಯಾವುದನ್ನು ಅನುಸರಿಬೇಕು ಎನ್ನುವುದನ್ನು ತೋರಿಸುವ ಮಾರ್ಗದರ್ಶಿಗೆ ಯಾರು ಮಾರ್ಗದರ್ಶಿ ಎಂದು ತಲೆತುರಿಸುತ್ತಿದ್ದ ದಿನಗಳಲ್ಲಿ ಪೂರ್ವ ಪರಿಚಯದ ಗುಣಪಾಲ ಕಡಂಬ – ಮೂಡಬಿದ್ರೆಯಲ್ಲಿ ಅಧ್ಯಾಪನ ನಡೆಸಿದ್ದರೂ ಅಂಡಾರಿನಲ್ಲೇ ವಾಸವಿದ್ದ ಕೃಷಿಕ.

೧೯೭೯ರ ಫೆಬ್ರವರಿ ಹತ್ತು, ಶನಿವಾರ ರಾತ್ರಿ (ಹೌದು, ಆಶ್ಚರ್ಯಕರವಾಗಿ ಇದು ನನ್ನ ಕಡತದಲ್ಲಿದೆ; ನೆನಪಿನಲ್ಲಲ್ಲ!) ಹತ್ತೂವರೆ ಗಂಟೆಯ ಸುಮಾರಿಗೆ ಅಂಡಾರಿನಲ್ಲಿ ಮಿತ್ರ ಕಡಂಬರ ಸಮಕ್ಷಮ ಹಾಜರಾದವರು ನಾವೈದು ಮಂದಿ ಆರೋಹಣದ ಸದಸ್ಯರು. ಮಂಗಳೂರಿನಿಂದ ಮೀನುಗಾರಿಕಾ ಕಾಲೇಜಿನ ಅಧ್ಯಾಪಕ – ಶ್ರೀಕಂಠಯ್ಯ, ಸಾಲಿಗ್ರಾಮದಿಂದ ಇಬ್ಬರು ವ್ಯಾಪಾರೀ ಮಿತ್ರರು – ಮಂಜುನಾಥ ಉಪಾಧ್ಯ ಮತ್ತು ಭಾಸ್ಕರ ಮಧ್ಯಸ್ಥ ಸಂಜೆಯೇ ಕೊನೆಯ ಬಸ್ಸು ಹಿಡಿದು ಬಂದು ಕಾದಿದ್ದರು. ನಾನು ಅಂಗಡಿಯನ್ನು ಎಂದಿನಂತೇ ರಾತ್ರಿ ಎಂಟಕ್ಕೆ ಮುಚ್ಚಿ, ಮಾವನ ಸ್ಕೂಟರ್ ಎರವಲು ಪಡೆದು, ಬೆನ್ನಿಗೆ ಪಾಲಿಟೆಕ್ನಿಕ್ಕಿನ ಅಧ್ಯಾಪಕ – ರೇವಣಪ್ಪನವರನ್ನು ಹಾಕಿಕೊಂಡು ಹೋಗಿದ್ದೆ. ಕಡಂಬರು ಗ್ರಾಮದ ಉಗ್ರಾಣಿ ಅಪ್ಪು ಎಂಬುವವರನ್ನು ನಮಗೆ ಮಾರ್ಗದರ್ಶಿಸಲು ನಿಗದಿಗೊಳಿಸಿ, ಕಳಿಸಿಕೊಟ್ಟರು. ಉಗ್ರ-ಆಣಿ ಹೆಡ್ ಲೈಟ್ ಕಟ್ಟಿ, ಬಗಲಲ್ಲಿ ಬಂದೂಕು ಹೊತ್ತು ಒಳ್ಳೆ ಬೇಟೆಗೆ ಸಜ್ಜುಗೊಂಡಿದ್ದರು. ಆದರೆ ಕಾಡು, ಜೀವ ಸಂಕುಲ, ಬೆಟ್ಟ ಇರುವ ಸ್ಥಿತಿಯಲ್ಲೇ ಅನುಭವಿಸುವುದು ನಮ್ಮ ಉದ್ದೇಶ. ಕಡಿದು, ಕೊಂದು, ಕುಟ್ಟಿ ಸಂತೋಷಿಸುವವರು ನಾವಲ್ಲ ಎಂದು ಅವರಿಗೆ ಸ್ಪಷ್ಟಪಡಿಸಿದ ಮೇಲೆ ಒಪ್ಪಿಕೊಂಡರು. ಸ್ಕೂಟರ್ ಅಲ್ಲೇ ಬಿಟ್ಟು, ಹನ್ನೊಂದೂವರೆಗೆ ಸವಕಲು ಜಾಡು ಹಿಡಿದೆವು. ಬೇಗನೆ ಬಯಲು, ಹಳ್ಳಿಯ ವಾಸನೆ ಕಳಚಿಕೊಂಡು, ಕಾಡು ಸೇರಿ, ನೇರ ಏರತೊಡಗಿದೆವು. ತಂಪು ರಾತ್ರಿಯಲ್ಲೂ ನಮಗೆ ಬೆವರಿನ ಸ್ನಾನ, ಏರುಬ್ಬಸ. ಸವಾಲಿನ ವ್ಯಾಪ್ತಿ, ಸಾಧನೆಯ ಪ್ರಮಾಣ ಕತ್ತಲ ಲೋಕದಲ್ಲಿ ಎಣಿಕೆಗೆ ಸಿಗಲಿಲ್ಲ. ಟಾರ್ಚ್ ಬೆಳಕಿನ ವಲಯದೊಳಗೆ ಕಣ್ಣು ಕೀಲಿಸಿಕೊಂಡು, ಎದುರಿನವರ ಹೆಜ್ಜೆ ಅನುಸರಿಸುವುದಷ್ಟೇ ಕೆಲಸ. (ಅದರ ಬಾಲ ಇದು, ಮತ್ತಿದರ ಬಾಲ ಅದು ಮೂಸಿ, ತಲೆತಗ್ಗಿಸಿ ನಡೆವ ಕುರಿಗಳು ಸಾರ್, ಕುರಿಗಳು!) ಸಣ್ಣ ಕಲ್ಲುಗಳನ್ನು ಎಡವಿ, ಮೇಲೆದ್ದ ಬೇರುಗಳಲ್ಲಿ ಆಗೀಗ ಮಾತಾಡಿ, ಜಾರು ನೆಲಗಳಲ್ಲಿ ಸಾವರಿಸಿ, ಮುಖ ಸವರುವ ಪೊದರುಗೈಗಳನ್ನು ಸುಧಾರಿಸಿ, ಅನುಕೂಲಕ್ಕೆ ಗಿಡ ಮರ ಕಲ್ಲೆಂದು ಬೇಧ ಮಾಡದೆ ಆಧರಿಸಿ, ಮಳೆಗಾಲದ ಕಿರುತೊರೆ ಜಾಡುಗಳನ್ನು ಅಡ್ಡ ಹಾಯ್ದು, ಅವಿರತ ಸುಮಾರು ಮೂರು ಗಂಟೆಯ ನಡಿಗೆ ಕಳೆದು ಬಯಲಾದೆವು. ತಣ್ಣನೆ ನೀರು ಹರಿಯುತ್ತಿದ್ದ ತೊರೆಯೊಂದರ ದಂಡೆಯಲ್ಲಿ ಉಳಿದ ರಾತ್ರಿಗೆಂದು ತಂಗಿದೆವು.

ಒಣ ಕಡ್ಡಿ, ಒತ್ತುಗಲ್ಲುಗಳನ್ನು ಹಗುರವಾಗಿ ಸರಿಸಿ, ತರಗೆಲೆ ಮೆದೆಯ ಮೇಲೆ ಚಾದರ ಬಿಡಿಸಿ ಮಲಗಿದವರಿಗೆ ಲೋಕ ಇಲ್ಲ! ಉದ್ದಕ್ಕು ಉಗ್ರಾಣಿಯ ಕಾಡಿನ ಕಥೆಗಳನ್ನು ಕೇಳಿ, ಕೇಳಿ ಆತ ಒಂದು ಕಣ್ಣು ತೆರೆದೇ ಮಲಗುತ್ತಾರೆ ಎಂಬ ವಿಶ್ವಾಸ ನಮ್ಮದು. ಆದರೆ ಪುಣ್ಯಾತ್ಮ, ಸಣ್ಣದಾಗಿ ಶಿಬಿರಾಗ್ನಿ ಎಬ್ಬಿಸಿ, ನಮ್ಮಷ್ಟೇ ಗಟ್ಟಿಯಾಗಿ ನಿದ್ರಿಸಿದ್ದರೆಂದು ತಿಳಿಯುವಾಗ ಏಳುವ ಸಮಯವಾಗಿತ್ತು. ಮುಖ ತೊಳೆಯುವ ಶಾಸ್ತ್ರ ಮಾಡಿ, ಚಾ ಕಾಯಿಸಿ ಕುಡಿದು, ಶಿಖರದೆಡೆಗೆ ದೌಡಾಯಿಸಿದೆವು

ಕತ್ತಲು ಹರಿದಿರಲಿಲ್ಲ. ನಮ್ಮ ಸಾಕ್ಷಿಯಿಲ್ಲದೆ ಅಂದು ಸೂರ್ಯೋದಯವಾಗದು ಎಂದೇ ನಾವು ಭಾವಿಸಿ ನಡೆದೆವು. ಕಾಡು ಕಳೆದು ಹುಲ್ಲು ಮುಚ್ಚಿದ ಮೈಯಲ್ಲಿ ಪಾದ ಬೆಳೆಸಿದಷ್ಟೂ ಮುಗಿಯಲಿಲ್ಲ. ಆಕಾಶರಾಯನ ಜವಾಹಿರಿ ಪೆಟ್ಟಿಗೆಯಲ್ಲಿನ ಮುತ್ತು ರತ್ನಗಳು ಕಳೆದು, ಚಿನ್ನದ ರೇಕುಗಳು ಮೂಡತೊಡಗಿದವು. ನಾವು ಶಿಖರ ಸೇರುವಾಗ ಅರುಣ ಹೋಗಿ ರವಿ ಬಂದಿದ್ದ. ಸಾವಿರಾರು ಅಡಿ ಸೆಟೆದು ನಿಂತ ಮಹಾಕಾಯ ಆರುಗೇಣುದ್ದದ ದೇಹದಡಿಗೆ ತಣ್ಣಗೆ ಮಲಗುವ ಕ್ಷಣ, ಪೇಟೆ ಪರಿಸರದಲ್ಲಿ ಸದಾ ಬಳಲುವ ದಿಟ್ಟಿ ಅಂಚುಕಾಣದಂತಟ್ಟಿ ಸೋಲುವ ಗಳಿಗೆ – ಶಿಖರ ಬಂದಿತ್ತು. ದೊಡ್ಡಸ್ತಿಕೆ, ಅಹಂಕಾರವಿಲ್ಲದೆ ಹೇಳುತ್ತೇನೆ, ನಮಗೆ ಇನ್ನೊಂದು ತೂಕದ ಹೆಜ್ಜೆ ಇಡಲು ನೆಲವಿಲ್ಲದಾಗುವ ತಾಣ ತಲಪಿದ್ದೆವು. ಪಶ್ಚಿಮ ಕೊಳ್ಳದಲ್ಲಿ ಅಂಡಾರಿನ ಕಾಡು, ತೋಟ, ಗದ್ದೆ, ಬಯಲು, ಮನೆ, ಮಂದಿರಗಳ ಚಿತ್ತಾರ, ಬೊಟ್ಟುಗಳು. ಸಾಗರಪರ್ಯಂತ ನೋಟ ಹರಿದಂತೆ ವಿವರಗಳು ಮಸಕುತ್ತಾ ನೆಲವೆಲ್ಲಾ ಕಡು ಹಸುರಿನ ಹಚ್ಚಡ, ಬಾನೆಲ್ಲ ತೆಳು ಮಂಜಿನ ಹೊದಿಕೆ. ಇವುಗಳನ್ನೆಲ್ಲ ಕಳೆದು ಸೂರ್ಯ ಸ್ನಾನಕ್ಕೆ ಹೋಗುವ ಚಂದ ಮಾತ್ರ ಅಂದು ನಮಗೆ ಕಲ್ಪನೆಯಲ್ಲಿ! ಉತ್ತರಕ್ಕೆ ತಿರುಗಿದರೆ ವಿಸ್ತಾರ ಕಣಿವೆಯಲ್ಲಿ ಪುಂಡು ಮೋಡಗಳು ಮೈಮುರಿದೇಳುತ್ತಿದ್ದವು. ಘಟ್ಟ ಸಾಲು ತುಸು ಬಲಕ್ಕೆ ಹೊರಳಿ ಮತ್ತುತ್ತರಕ್ಕೂ ಇತ್ತ ದಕ್ಷಿಣಕ್ಕೂ ಚಾಚಿತ್ತು. ಅದರ ಉನ್ನತ ಅಂಚು ಎದ್ದು, ಬಿದ್ದು, ಕಾಡಿನಲ್ಲಿ ಅವಿತು, ಹುಲ್ಲುಗಾವಲಿನಲ್ಲಿ ಮೆರೆದು ಅಖಂಡ ಕರಾವಳಿಯ ಮಹಾಗೋಡೆ ಅಭಿದಾನಕ್ಕೆ ನ್ಯಾಯ ಸಲ್ಲಿಸುವಂತಿತ್ತು. ಕೋಟೆಯ ಆಯಕಟ್ಟಿನ ಜಾಗ – ವಾಲಿಕುಂಜವೆಂಬ ಬುರುಜು, ಇತರ ಮಂಡಲಗಳನ್ನು ಕಾಣಿಸುತ್ತಿದ್ದರೂ ಗುರುತಿಸುವ ಬಲ ಅಂದು ನಮ್ಮಲ್ಲಿರಲಿಲ್ಲ. ನಾವು ಶಿಖರ ಸಮೀಪಿಸುತ್ತಿದ್ದಂತೆ ಹರಿದೋಡಿದ ಕಡವೆ ಜೋಡಿ ಮತ್ತೆ ದರ್ಶನ ಕೊಡದಿದ್ದರೂ ಆಚಿನ ಹುಲ್ಲುಗಾವಲಿನ ಹೊಂಬಣ್ಣಕ್ಕೆ ಮಿರುಗುಟ್ಟುವ ಕರಿಬೊಟ್ಟು ಇಟ್ಟಂತಹ ಕಾಟಿಗಳು ಮೇಯುತ್ತಿದ್ದ ದೃಶ್ಯ ಮನೋಹರ. ಆ ಪರಿಸರದ ಇನ್ನಷ್ಟು ನಿಜ-ಒಡೆಯರ ವಿಹಾರಕ್ಕನುವು ಮಾಡಿಕೊಡುವಂತೆ ನಾವು ಶಿಖರ ಬಿಟ್ಟೆವು.

ಉಗ್ರಾಣಿ ಇಳಿದಾರಿಯನ್ನು ಸುಲಭ ಮಾಡಲು ಹೆಚ್ಚು ದಕ್ಷಿಣಕ್ಕೆ ಹೋಗುವ ಸವಕಲು ಜಾಡಿನಲ್ಲಿ ನಡೆಸಿದರು. ಅದು ಕಾಡಿನೊಳಗೆ ನಮಗೆ ನಿರೀಕ್ಷೆ ಇಲ್ಲದೇ ಪಕ್ಕಾ ಮಣ್ಣಿನ ದಾರಿಯೇ ಆಯ್ತು. ಉಗ್ರಾಣಿಯೇ ಪರಿಚಯಿಸಿದಂತೆ, ಕೇಂದ್ರ ಪರಮಾಣು ಶಕ್ತಿ ಇಲಾಖೆಯ ಶಾಖೆಯೊಂದು ಆ ವಲಯಗಳಲ್ಲಿ ಕೆಲವು ಕಾಲದಿಂದ ಮಣ್ಣ ದಾರಿಗಳನ್ನು ಮಾಡುತ್ತಾ ಭಾರದ ಯಂತ್ರ ಸಾಮಗ್ರಿಗಳನ್ನು ಅಲ್ಲಿ ಇಲ್ಲಿ ಹೂಡಿ, ಆಳದ ತೂತು ಭಾವಿಗಳನ್ನು ಕೊರೆದು ಯುರೇನಿಯಂ ಲಭ್ಯತೆಯ ಪರೀಕ್ಷೆ ನಡೆಸಿದ್ದರು. ಆಗ ‘ಪರಿಸರ,’ ಅದರಲ್ಲೂ ‘ವನ್ಯ’ ಇನ್ನೂ ಸಾಮಾನ್ಯರ ಮಟ್ಟದಲ್ಲಿ ಜಾಗೃತಗೊಂಡೇ ಇರಲಿಲ್ಲ. ನಾನು ಕೇವಲ ಪರ್ವತಾರೋಹಿಯ ದೃಷ್ಟಿಯಲ್ಲಿ, “ಯುರೇನಿಯಂ ಸಮೃದ್ಧಿ ಶ್ರುತವಾದರೆ, (ಆಗ ಇನ್ನೂ ಆರಂಭಿಕ ಸ್ಥಿತಿಯಲ್ಲಿದ್ದ) ಕಬ್ಬಿಣಕ್ಕೆ ಹೋದ ಕುದುರೆಮುಖದಂತೆ, ಇನ್ನೊಂದು ಒಳ್ಳೇ ಶಿಖರ ಪ್ರಕೃತಿಪ್ರಿಯರಿಗೆ ಕಳೆದು ಹೋಗುತ್ತದಲ್ಲಾ” ಎಂಬ ಕೊರಗಿನೊಡನೆ ಉಗ್ರಾಣಿ ಹಿಂದೆ ಕಾಲೆಳೆದೆ. ರಣಬಿಸಿಲು, ರಾತ್ರಿ ಹಗಲಿನ ಶ್ರಮದಾಯಕ ನಡಿಗೆಯ ಬೆವರು, ಶಿಬಿರವಾಸದಲ್ಲಿ ಹತ್ತಿಕೊಂಡ ಹೊಗೆವಾಸನೆಗೆ ದಾರಿಯ ದೂಳೂ ಸೇರಿ ದೇಹ ಜುಗುಪ್ಸೆಯಾಗುವ ಕಾಲಕ್ಕೆ ಉಗ್ರಾಣಿ ಮತ್ತೆ ದಾರಿ ಬಿಟ್ಟು ಜಾಡು ಹಿಡಿಸಿದರು. ಅದು ನೂರೆಂಟು ಹೆಜ್ಜೆಯಲ್ಲೇ ನಮ್ಮನ್ನು ಸುಂದರ, ಪುಟ್ಟ (ಸುಮಾರು ಅರವತ್ತಡಿ ಎತ್ತರ) ಜಲಪಾತಕ್ಕೊಯ್ಯಿತು. ಅದರ ಶೀತಲ ಬೀಳಿನಡಿಯಲ್ಲಿ ಕೊಳೆ ತೊಳೆದದ್ದು ಮಾತ್ರವಲ್ಲ, ಅಂಗಮರ್ದನದ ಸುಖವನ್ನೂ ಅನುಭವಿಸಿ ನವಚೇತನರಾದೆವು. ಸಾಲದ್ದಕ್ಕೆ ಮೂರು ಕಲ್ಲು ಹೂಡಿ, ಕಾಡು ಸೌದೆ ಉರಿಸಿ, ಗಂಜಿ ಕಾಯಿಸಿ, ಹಸಿ ಪಚ್ಚಡಿ, ಉಪ್ಪಿನಕಾಯಿಯೊಡನೆ ಉಂಡಾಗಂತೂ ಪಂಚಭಕ್ಷ ಪರಮಾನ್ನಕ್ಕೂ ಧಿಕ್, ಧಿಕ್, ಧಿಕ್!! ಮತ್ತೆ ಮಣ್ಣದಾರಿಗೆ ಮರಳಿ, ಶಿರ್ಲಾಲ್ ಎಂಬಲ್ಲಿ ಡಾಮರು ದಾರಿ ಸೇರಿ, ಅವರವರ ವ್ಯವಸ್ಥೆಯಲ್ಲಿ ಮನೆ ಸೇರಿದ್ದು ವಿವರಿಸಿದರೆ ನೀರಸ ಗದ್ಯ. ಆದರೆ ಎಲ್ಲ ಚದರುವ ಸಮಯದಲ್ಲಿ (ದಾರಿಬದಿ, ಕಡಂಬರೇನೂ ಇರಲಿಲ್ಲ) ಉಗ್ರಾಣಿ ಮಾರ್ಗದರ್ಶಿಸಿದ್ದಕ್ಕೆ ನಮ್ಮಿಂದ ಹಣ ತೆಗೆದುಕೊಳ್ಳಲೇ ಇಲ್ಲ. ಸಣ್ಣ ಒಂದು ಕಡವೆಯನ್ನಾದರೂ ಈಡು ಮಾಡುವ ಉತ್ಸಾಹದಲ್ಲಿ (ಯಾರಿಗ್ಗೊತ್ತು, ಇನ್ನು ಮನೆಯಲ್ಲಿ ಮಸಾಲೆ ಕೂಡಾ ಕಡೆದಿಡಲು ಹೇಳಿ ಬಂದಿದ್ದರೋ ಏನೋ) ಹೊರಟವರಿಗೆ ಕೇವಲ ನಮ್ಮ ವಿಚಾರ, ನಡವಳಿಕೆ ಪ್ರಭಾವ ಬೀರಿತ್ತಂತೆ! (ಮೊದಲೇ ಹೇಳುತ್ತೇನೆ, ಉತ್ಪ್ರೇಕ್ಷೆಗೆ ಕ್ಷಮೆಯಿರಲಿ) ಬಲು ತೋಳಬಲಕ್ಕಿಂತಲೂ ನೂರು ಶಾಸ್ತ್ರಾಚಾರ್ಯರಿಗಿಂತಲೂ ಒಬ್ಬ ಬುದ್ಧ ಅಂಗುಲೀಮಾಲನನ್ನು ‘ಮತಾಂತರ’ಗೊಳಿಸಿದ್ದು ಸುಳ್ಳಲ್ಲ!

ಆರೋಹಣಕ್ಕೆ ಹಾರೋಣದ ಹುಚ್ಚು ಸೇರಿಕೊಂಡಿತ್ತು. (ವಿವರಗಳಿಗೆ ಇಲ್ಲೇ ೩೦-೧೦-೧೧ರ ಹಾರೋಣ ಬಾ ಮತ್ತು ೮-೧೧-೧೧ರ ಅರಳಿದ ಗರಿ ಮುದುಡಿತು ನೋಡಿ) ಹ್ಯಾಂಗ್ ಗ್ಲೈಡರ್ (ನೇತು ತೇಲುವ ರೆಕ್ಕೆ) ಕಟ್ಟಿಕೊಂಡು ಕ| ಸೈರಸ್ ದಲಾಲ್, ಅಂದು ಎನ್.ಸಿ.ಸಿಯ ಈ ವಲಯಾಧಿಕಾರಿ, ಜಮಾಲಾಬಾದ್ ಎತ್ತರದಿಂದ ಕೊಳ್ಳಕ್ಕೆ ಹಾರಿ ಆಸಕ್ತರಿಗಾಗಿ ಪ್ರದರ್ಶನ ಕೊಟ್ಟಿದ್ದರು. ಆ ಮೇಲೆ ನನಗೆ ನೆನಪಿನ ಎತ್ತರಗಳೆಲ್ಲಕ್ಕೂ ರೆಕ್ಕೆ ಒಯ್ದು, ಕೊಳ್ಳ ಹಾರಿ, ಜಿಲ್ಲೆಯ ಉದ್ದಗಲಕ್ಕೆ ‘ಹಕ್ಕಿನೋಟ’ ಹಾಕುವ ಉಮೇದು. ಕಾರ್ಕಳದ ಭುವನೇಂದ್ರ ಕಾಲೇಜಿನ ಎನ್.ಸಿ.ಸಿ ಉತ್ಸಾಹಿಗಳನ್ನು ಅಲ್ಲೇ ಸಮೀಪದ ನಕ್ರೆಕಲ್ಲಿನಲ್ಲಿ ನನ್ನ ಬಳಗ ಶಿಲಾರೋಹಣದಲ್ಲಿ ತರಬೇತಿಗೊಳಪಡಿಸಿಕೊಂಡಿದ್ದ ಒಂದು ಆದಿತ್ಯವಾರ. ಎನ್.ಸಿ.ಸಿ ಚಟುವಟಿಕೆ ನೋಡುವ ನೆಪದಲ್ಲಿ ಸ್ವತಃ ಜೀಪ್ ಹಿಡಿದುಕೊಂಡು ಬಂದ ದಲಾಲ ಹದ್ದಿನ ಕಣ್ಣು ಸನಿಹದಲ್ಲೇ ಕಣ್ಣು ತುಂಬುತ್ತಿದ್ದ ವಾಲಿಕುಂಜದ ಮೇಲೆ ಸಹಜವಾಗಿ ಹರಿದಿತ್ತು. ಕುತ್ತಿಗೆಯವರೆಗೆ ದಟ್ಟ ಕಾಡಿದ್ದರೇನು, ವಾಹನಯೋಗ್ಯ ದಾರಿಯಿದೆ. ಹೆಚ್ಚುಕಡಿಮೆ ಮೂರೂ ದಿಕ್ಕಿಗೆ ಬೋಳುಮಂಡೆಯ ವಾಲಿಕುಂಜದೆತ್ತರಕ್ಕೆ ರೆಕ್ಕೆ ಒಯ್ದರೆ, ಕನಿಷ್ಠ ಮೂರು ಸಾವಿರ ಅಡಿಯ ತೇಲುವ ಅವಕಾಶ, ಸ್ಪಷ್ಟ ಪಶ್ಚಿಮದ ಗಾಳಿ, ಇಳಿಯುವುದಿದ್ದರೆ ಎಲ್ಲೆಂದರಲ್ಲಿ ಗದ್ದೆ, ಸುವಿಸ್ತಾರ ಶಾಲೆ ಕಾಲೇಜುಗಳ ಮೈದಾನ. ಇವೆಲ್ಲ ದಲಾಲ್‌ರಿಗೆ ನಾನು ಹಿಂದೇ ಹೇಳಿದ್ದು ನೆನಪಿತ್ತು. ಎನ್.ಸಿ.ಸಿ ಹುಡುಗರು ಪ್ರಾಥಮಿಕ ಪಾಠ ನೋಡಿ, ಕೇಳಿ ನನ್ನ ಇತರ ಗೆಳೆಯರ ಸಹಾಯದಲ್ಲಿ ಅಭ್ಯಾಸಕ್ಕಿಳಿದ ಮೇಲೆ ಕರ್ನಲ್ “ವಾಲಿಕುಂಜ ಚಲೋ” ಆದೇಶ ಕೊಟ್ಟರು. ನಾನು, ಅರುಣ್ ನಾಯಕ್, ಪ್ರಕಾಶ ಮತ್ತು ವಿನಯ್ ಅವರ ಜೀಪೇರಿದೆವು.

ಕಾರ್ಕಳ, ಅಜೆಕಾರು, ಅಂಡಾರು ಕಳೆದು ನೇರ ಶಿರ್ಲಾಲಿಗೇ ಹೋಗಿ ‘ಯುರೇನಿಯಂ ದಾರಿ’ಗಿಳಿದೆವು. ನಾಲ್ಕು ವರ್ಷದ ಅಂತರದಲ್ಲಿ ಪರಮಾಣು ಇಲಾಖೆ ಅಲ್ಲಿಗೊಬ್ಬ ದೊಣ್ಣೆನಾಯಕನನ್ನು ನೇಮಿಸಿತ್ತು ಮತ್ತು ಆತ ಸಹಜವಾಗಿ ಅಪಸ್ವರ ತೆಗೆಯುವವನಿದ್ದ. ಮಿಲಿಟರಿ ಸಮವಸ್ತ್ರದ, ಹುರಿಮೀಸೆಯ ಕರ್ನಲ್ ಸಾಹೇಬರನ್ನು ನೋಡಿ ಎಂಜಲು ನುಂಗಿಕೊಂಡ. ದಾರಿಯನ್ನು ಭಾರೀ ಯಂತ್ರಸಾಮಗ್ರಿ ಸಾಗಿಸುವ ಲಾರಿಗೂ ಅನುಕೂಲವಾಗುವಂತೆ ರಚಿಸಿದ್ದರು. ಹಾಗಾಗಿ ಅಲ್ಲಲ್ಲಿ ವಿಸ್ತಾರ ಹಿಮ್ಮುರಿ ತಿರುವುಗಳಿದ್ದರೂ ಏರಿಕೆ ತೀರಾ ಕಡಿದಾಗಿರಲಿಲ್ಲ. ಇನ್ನೇನು ಶ್ರೇಣಿಯ ನೆತ್ತಿ ಸಮೀಪಿಸಿತು, ಕಾಡಿನ ಮುಸುಕು ಕಳೆಯುತ್ತಿದೆ ಎನ್ನುವಲ್ಲಿ ಇನ್ನೊಂದು ಕಾವಲುಕಟ್ಟೆ. ಇಲ್ಲಿ ಗೇಟು, ದೂರವಾಣಿ ಸಂಪರ್ಕ ಎಲ್ಲಾ ಇದ್ದು ಕಾವಲುಗಾರನೂ ಹೆಚ್ಚು ಬಿಗಿಯಿದ್ದ. ನಮ್ಮ ಉದ್ದೇಶ ಹೇಳಿತು, ಮೇಲಿನವರ ಸಂಪರ್ಕ ಕೊಟ್ಟರೆ ಅನುಮತಿ ಕೇಳುವ ಮಾತೂ ಆಯ್ತು. ರಜಾ ದಿನವಾದ್ದರಿಂದ ದೂರವಾಣಿಗೆ ಅತ್ತ ಮೇಲಿನವರು ಸಿಗಲಿಲ್ಲ, ಕಾವಲುಗಾರ ವಿವೇಚನೆ ಬಳಸಲಿಲ್ಲ. ಸರಳ, ಸ್ನೇಹಮಯಿ ದಲಾಲರೊಳಗಿನ ಯೋಧ ಒಮ್ಮೆಗೆ ಜಾಗೃತನಾದ. “ಮಿಲಿಟರಿ, ಅಂದರೆ ದೇಶವನ್ನೇ ರಕ್ಷಣೆ ಮಾಡುವವನು ನಾನು. ನಮಗೆ ಎಲ್ಲೆಡೆಗೂ ಮುಕ್ತಪ್ರವೇಶ ಇರಲೇಬೇಕು. ಬಿಡದಿದ್ದರೆ ನಿನ್ನ ಸುಟ್ಟು ಹಾಕ್ತೇನೆ…” ಎಂದು ಕೆರಳಿ ಮುಕ್ತಾಫಲಗಳನ್ನು ಸಿಡಿಸಲು ಹೊರಟದ್ದೇ ಗೇಟು ಹಾರುಹೊಡೆಯಿತು. ಮತ್ತೊಂದೆರಡು ಹಿಮ್ಮುರಿ ತಿರುವಿನಾಚೆ, ಕೊಳ್ಳದ ಬದಿಗೆ ಕಾಡು ತೆರವಾದದ್ದೂ, ಶಿಖರದ ಪಶ್ಚಿಮ ಮುಖದರ್ಶನವೂ ಸಿಕ್ಕಿತು. ದಲಾಲ್ ಇದು ಆರಂಭಿಕ ಹಾರಾಟಗಳಿಗೆ ತುಂಬಾ ದೊಡ್ಡ ಸವಾಲು. ಮತ್ತೆ ಈ ಇಲಾಖೆಗಳ ಕಿರಿಕಿರಿ ನಿವಾರಣೆಗೆಲ್ಲ ಇಷ್ಟು ಬೇಗ ತೊಡಗುವ ಅವಶ್ಯಕತೆಯೂ ಇಲ್ಲ ಎಂದು ಅಭಿಪ್ರಾಯಪಟ್ಟರು. ಮತ್ತಲ್ಲಿಂದಲೇ ಹಿಂದೆರಳಿದೆವು. ಹತ್ತುವಾಗ ಕುಲುಕಾಟಕ್ಕೆ ಬರಿಯ ಮೈ ಗುದ್ದಿಸಿಕೊಂಡಿದ್ದರೆ, ಇಳಿದಾರಿಯಲ್ಲಿ ತಲೆ ಕುಟ್ಟಿಕೊಂಡು, ಹೊಂಡಗಳಲ್ಲಿ ಕುಕ್ಕಿಸಿಕೊಂಡು ಶಿರ್ಲಾಲ್ ತಲಪುವಾಗ ಸರ್ವಾಂಗ ಮರ್ದನ ಸಂಪೂರ್ಣಗೊಂಡಿತ್ತು. ಅಂದು ಪ್ರಯಾಣ ಜೀಪಿನದ್ದೇ ಆದರೂ ಲಕ್ಷ್ಯ ಹಾರಾಟದ್ದಿತ್ತು. ಹಾಗಾಗಿ ಇಳಿದಾರಿಯಲ್ಲಿ ಹಲವು ಬಾರಿ ಹಾರಿದ್ದೇ ಅನುಭವ ಆಗಿತ್ತು. ಆದರೆ ಪ್ರತಿ ಬಾರಿಯೂ ಲ್ಯಾಂಡಿಂಗ್ ಕ್ರ್ಯಾಷ್!

೧೯೮೦-೯೦ರ ದಶಕಗಳಲ್ಲಿ ನಮ್ಮ ಬಳಗ – ಆರೋಹಣ ಪರ್ವತಾರೋಹಿಗಳು ಸಾಹಸಿಗಳು, ಬೈಕೇರಿ ಯಾವುದೇ ಕಗ್ಗಾಡು ಹೊಕ್ಕು ಹೊರಡುವ ಹುಮ್ಮಸ್ಸು ವಿಪರೀತವಿದ್ದ ದಿನಗಳು. ೧೯೮೮-೮೯ರ ಸುಮಾರಿಗೆ, ವಾಲಿಕುಂಜದಲ್ಲಿ ಯುರೇನಿಯಂ ಪತ್ತೆ ಆಶಾದಾಯಕವಾಗಿಲ್ಲ ಎಂದು ಇಲಾಖೆ ಯೋಜನೆಯ ಕೈಚೆಲ್ಲಿದ್ದು ಕೇಳಿಬಂತು. ಅಜೆಕಾರಿಗೆ ಬಹಳ ದೂರದ್ದೇನೂ ಅಲ್ಲದ ಕಬ್ಬಿನಾಲೆ, ಗೆಳೆಯ ಅರವಿಂದರಾವ್ ಅವರ ಮಾವನ ಮನೆ. ಇದೇ ಸುಮಾರಿಗೆ ಮಾವನ ಮನೆಗೆ ಹೋಗಿದ್ದ ಅರವಿಂದ, ಭಾವ ಪರಮೇಶ್ವರ ಮತ್ತು ನಾಲ್ಕೈದು ಮಿತ್ರರನ್ನು ಕೂಡಿಕೊಂಡು ವಾಲಿಕುಂಜ ಶ್ರೇಣಿ ಏರಿ, ಯುರೇನಿಯಂ ವಲಯ ನೋಡಿಕೊಂಡು, ಆಚಿನ ಕೆರೆಕಟ್ಟೆ ಸೇರಿದ ಸುದ್ದಿಯೂ ಸಿಕ್ಕಿತು. ಇದು, ನನ್ನ ತಲೆಗೆ ಹುಳ ಹತ್ತಿಸಿತು. ನಾವ್ಯಾಕೆ ಬೈಕೇರಿ ಶಿರ್ಲಾಲ್‌ನಿಂದ ತೊಡಗಿ, ಘಟ್ಟ ಪಾರುಮಾಡಿ, (ಎಡೆಯಲ್ಲಿ ಮತ್ತೊಮ್ಮೆ ವಾಲಿಕುಂಜ ಶಿಖರ ಏರುವ ಸಂತೋಷ ಅನುಭವಿಸಿ,) ಕೆರೆಕಟ್ಟೆಗಾಗಿ ಮರಳಬಾರದು?

[ಇಲ್ಲೇ ಒಂದು ಅಪಕಥೆ ಪೋಣಿಸಿಬಿಡುತ್ತೇನೆ: ಅದೇ ಸುಮಾರಿಗೆ ಗೆಳೆಯ ಡಾ| ಕೃಷ್ಣಮೋಹನ್ ಪ್ರಭು ಯಾನೆ ಕೃಶಿ ಇನ್ನೂ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು. ಇವರ ಮೂಲಕ ವಾಲಿಕುಂಜದ ಕಥೆ ಕೇಳಿದ ಅವರದೇ ಕಾಲೇಜಿನ ಒಂದು ವೈದ್ಯವಿದ್ಯಾರ್ಥಿ ದಂಡೇ (ದ ಪಬ್ಲಿಕ್ – ಒಂದು ಅನೌಪಚಾರಿಕ ಬಳಗ, ವಿನಯ್ ಬೋಸ್ ಅದರ ಅನಭಿಷಿಕ್ತ, ವಾಚಾಳಿ ನಾಯಕ) ಕೆರೆಕಟ್ಟೆ ಬದಿಯಿಂದ ವಾಲಿಕುಂಜ ದರ್ಶನ ಮಾಡಿಸಲು ನನಗೆ ದುಂಬಾಲು ಬಿತ್ತು. ದಕ ಬದಿಯ ಬೈಕ್ ಯಾನ ಕಳೆದು ಒಂದೇ ತಿಂಗಳೊಳಗೆ (೨೩-೪-೮೯), ಚಿಕ್ಕಮಗಳೂರು ಬದಿಯ ಆಕ್ರಮಣಕ್ಕೆ ನಮ್ಮ ಸೈನ್ಯದ ಬಲ – ಮೂರು ಬೈಕ್, ಒಂದು ಕಾರು ಮತ್ತು ಒಟ್ಟು ಜನ ಹದಿನಾರು! ಕಾರ್ಕಳ, ಭಗವತಿ ಘಾಟಿ, ದಕಗಡಿ (ಎಸ್ಕೇ ಬಾರ್ಡರ್ ಎಂದೇ ಖ್ಯಾತ), ಕೆರೆಕಟ್ಟೆವರೆಗೆ ಓಟಕ್ಕೇನೂ ತೊಂದರೆಯಾಗಲಿಲ್ಲ. ಮುಂದೆ ಮಣ್ಣ ದಾರಿಯಲ್ಲಿ ಬೋಸನ (ಸಣ್ಣ) ಫಿಯೆಟ್ ಕಾರಿಗೆ ‘ಒಂಬತ್ತು ಮಂದಿ ಸಣ್ಣ ಹೊರೆಯಲ್ಲ’ ಎಂದರಿವಿಗೆ ಬಂತು! ಅದೃಷ್ಟಕ್ಕೆ ಆ ಕೊನೆಯಲ್ಲಿ ಸಿಕ್ಕ ಯಾವುದೋ ವ್ಯಾನ್ ‘ಥೋಡಾಸಾ ಲಿಫ್ಟ್’ ಕೊಟ್ಟರೂ ಮುಂದೆ ದಾರಿಯೇ ಉಳಿದಿರಲಿಲ್ಲ. ಅದುವರೆಗೆ ಜನ ಸಿಕ್ಕಲ್ಲಿ ಅವರಿವರನ್ನು ಕೇಳಿ ಬಂದಿದ್ದೆವು. ಮುಂದೆ ನಿರ್ಜನ ದಟ್ಟ ಕಾಡು, ವಿರಳ ಸವಕಲು ಜಾಡು, ಶೋಧಿಸಿ ಮುಂದುವರಿಯುವುದೊಂದೇ ದಾರಿ. ಎಲ್ಲಕ್ಕೂ ಮಿಗಿಲಾಗಿ ದ ಪಬ್ಲಿಕ್‌ಗೆ (ಐದು ಹುಡುಗರು, ಎಂಟು ಹುಡುಗಿಯರು) ಚಾರಣ ಎನ್ನುವುದು ಕಾವ್ಯದಲ್ಲಷ್ಟೇ ರಮ್ಯವಾಗಿ ಕಾಣುವ ಮನೋಸ್ಥಿತಿ ಎನ್ನುವುದು ನನ್ನ ಅರಿವಿಗೆ ಬಂತು. ಅಲ್ಲಿಂದಲೇ ಹಿಮ್ಮುಖರಾದೆವು. ಬೋಸನ ಐಲುಗಳಿಗೆ ಹನುಮನಗುಂಡಿ ತೋರಿಸಿ, ಮುಗಿಸಿದೆ.]

ಕಾಡುದಾರಿಗಳಲ್ಲಿ ಬೈಕ್ ನುಗ್ಗಿಸಿ, ಗುರಿಸಾಧಿಸುವಸುವಲ್ಲಿ ಆ ವೇಳೆಗೆ ನಾವು ಸುಮಾರು ಪಳಗಿದ್ದೆವು. ರಣ ವೀಳ್ಯ ಕೊಟ್ಟೆ. ಏನೇನೋ ಹೊಂದಾಣಿಕೆ, ಅನಾನುಕೂಲಗಳಲ್ಲಿ ೨೬-೩-೧೯೮೯ರ ಆದಿತ್ಯವಾರ ಹೊರಟದ್ದು ಎರಡೇ ಬೈಕ್‌ಗಳ ತಂಡ. ನನ್ನ ಬೆನ್ನಿಗೆ ಕಾರ್ಕಳದ ಅಧ್ಯಾಪಕ ಮಿತ್ರ ರಾಧಾಕೃಷ್ಣ, ಪಕ್ಕದಂಗಡಿಯ ಮಿತ್ರ ಅರವಿಂದ ಶೆಣೈ ಬೆನ್ನಿಗೆ ಆತನ ಅಂಗಡಿ ಸಹಾಯಕ ಶಶಿಧರ. ಅಜೆಕಾರು – ಅಂಡಾರು – ಶಿರ್ಲಾಲ್ ಮಾರ್ಗವಾಗಿ ವಾಲಿಕುಂಜಕ್ಕೆ ಲಗ್ಗೆ ಹಾಕಿದೆವು. ರಾಧಾಕೃಷ್ಣ ಸ್ವತಂತ್ರವಾಗಿ ಎನ್.ಸಿ.ಸಿ., ಕರಾಟೆ ಮುಂತಾದ ಹಲವು ಸಾಹಸಗಳ ಕಲಿಯಾದ್ದರಿಂದ ನಮ್ಮ ಜೋಡಿ ಭಾರೀ ಗಟ್ಟಿ. ಆದರೆ ಶೆಣೈ ಆರಡಿ ಲಂಬೂ ಶಶಿಧರ ನಾಲ್ಕಡಿ ಚೋಟು. ಶೆಣೈಗೆ ಕೆಲವು ಮೋಟಾರ್ ರ‍್ಯಾಲೀ ಅನುಭವವೇನೋ ಇತ್ತು, ಆದರೆ ಎಲ್ಲ ಸಹವಾರತನವಾಗಿ (ಸಹ-ಸವಾರ>ಸಹವಾರ) ಈ ಜಾಡು ಹೆಚ್ಚು ಕಷ್ಟವಾಗಿರಬೇಕು. ಇಲ್ಲಿ ಸ್ವಂತ ಸವಾರಿಯಲ್ಲಿ ಕಾಡು ದಾರಿ ಅವರ ಅಳವಿ ಮೀರಿದ್ದಾಗಿತ್ತು. ಶಿರ್ಲಾಲ್ ಪ್ರವೇಶದಲ್ಲಿ ನಮ್ಮನ್ನು ಕೇಳುವವರಿರಲಿಲ್ಲ. ಆದರೆ ದಾರಿಯ ಸ್ಥಿತಿಯೂ ಹಾಗೇ ಇತ್ತು. ಏರುವ ಕೋನ, ನೆಲದ ಅಸಮತೆ ಇಬ್ಬರ ಸವಾರಿಗೆ ಅವಕಾಶ ಕೊಟ್ಟದ್ದು ತುಂಬ ಕಡಿಮೆ. ಮಳೆಗಾಲ ಕೊರೆದ ಚರಂಡಿಗಳು, ಅಂಚಿನಿಂದ ಜರಿದುಬಿದ್ದ ಮಣ್ಣ ದಿಬ್ಬಗಳು, ಮಣ್ಣು ತೊಳೆದು ಹೋಗಿ ಉದ್ಭವಿಸಿದ ಕಲ್ಲಗುಂಡುಗಳು, ಎಲ್ಲ ಮರೆಮಾಡುತ್ತಲೂ ಚಕ್ರಕ್ಕೆ ನೆಲಕಚ್ಚಿ ಮುಂದೊತ್ತಲು ವಂಚಿಸುತ್ತಲೂ ಇದ್ದ ಕುರುಚಲು, ಉದುರುಕಡ್ಡಿ, ತರಗೆಲೆಗಳ ರಾಶಿ ಮತ್ತೆ ಮತ್ತೆ ನಮ್ಮನ್ನು ಸತಾಯಿಸುತ್ತಿದ್ದವು. ನಾವು ಸಹವಾರರನ್ನು ಇಳಿಸಿದ್ದಕ್ಕಿಂತ ಉರುಳಿಸಿದ್ದೇ ಹೆಚ್ಚಿರಬಹುದು!

ಗಾಬರಿಯಾಗಬೇಡಿ, ಇದೆಲ್ಲಾ ಸಿನಿಮಾ ಸ್ಟಂಟುಗಳ ಮಾದರಿಯ ತೀವ್ರತೆಯದ್ದಲ್ಲ. ಕಲ್ಲು ತಪ್ಪಿಸಲು ಹಾವಾಡುವಾಗ ತರಗೆಲೆ ರಾಶಿಯಲ್ಲಿ ಜಾರಿ ವಾರೆ ಮಲಗುತ್ತಿದ್ದದ್ದುಂಟು. ಪುಟ್ಟ ಕೊರಕಲುಗಳು ಚಕ್ರ ಕಚ್ಚುವುದು, ಹುಡಿಮಣ್ಣ ದಿಬ್ಬಗಳು ಪ್ರಗತಿ ಹೂಳುವುದು ಇದ್ದದ್ದೇ. ನಾನು ಕಷ್ಟ ಕಂಡಲ್ಲೆಲ್ಲ ನಿರ್ದಾಕ್ಷಿಣ್ಯವಾಗಿ ಸಹವಾರನನ್ನು ಇಳಿಸಿಬಿಡುತ್ತಿದ್ದೆ. ಮತ್ತೆ ಸೀಟಿನ ಮುಂತುದಿಯಲ್ಲಿ ಕುಳಿತು, ಊದ್ದ ಕಾಲಿನಲ್ಲಿ ಆಗೀಗ ನೆಲ ಒದ್ದು, ಮೊದಲನೇ ಗೇರೂ ಸಾಲದೇ ಬಂದ ತೀರ ಕೆಲವೆಡೆಯಲ್ಲಿ ಕ್ಲಚ್ ಆಪರೇಶನ್ನಿಂದಾದರೂ ಹೆಚ್ಚಿನ ನುಗ್ಗುಪಡೆದು ದಾಟುತ್ತಾ ಬೈಕ್ ಮೇಲೇರಿಸಿದೆ. ಶಶಿಧರ ಮೂರ್ತಿ ಚಿಕ್ಕದಾದರೂ ತಾಕತ್ತು ದೊಡ್ಡದೇ. ಜೋಡಿ ಸವಾರಿ ಕಷ್ಟವಾದಲ್ಲೆಲ್ಲ ಧುಮುಕಿ ಆಧರಿಸುವುದೋ ನೂಕುವುದೋ ಚೆನ್ನಾಗಿಯೇ ಮಾಡುತ್ತಿದ್ದ.

ಸುಮಾರು ಮೂರು ಕಿಮೀ ಕೊನೆಯಲ್ಲೊಂದು ಝರಿ, ಬಲ ಕವಲೊಡೆಯುವ ಅನೂರ್ಜಿತ ದಾರಿಯೂ ಕಾಣಿಸಿತು. ಆಚೆಗೆ ಹಳೆಯ ಕಾವಲುಮನೆಯೇ ಮುಂತಾದ ರಚನೆಗಳು ಬಾಗಿಲು ಹಾರುಹೊಡೆದು, ಕಿಟಕಿ ಗೋಡೆ ಮುಕ್ಕಾಗಿ ಹಾಳು ಸುರಿದಿದ್ದವು. ಇಲಾಖೆಯವರಿಗೆ ಕಾಡು ಕಡಿದು, ನೆಲ ತಟ್ಟು ಮಾಡಿ ಜಾಗ ಪಡೆದ ನೆನಪಿದ್ದಿದ್ದರೆ, ಬಿಟ್ಟು ಹೋಗುವಾಗ ಕನಿಷ್ಠ ಮಾಡು ಗೋಡೆ ಬಿಚ್ಚಿ, ನೆಲಗಟ್ಟು ಹುಡಿಮಾಡುವ ಸೌಜನ್ಯ ಇರುತ್ತಿತ್ತು. ನಮ್ಮ ಅನುಕೂಲಕ್ಕೆ ಪ್ರಕೃತಿ ಬಳಸುವುದು ಇದ್ದದ್ದೇ. ಮುಗಿದ ಮೇಲೆ ವನಮಹೋತ್ಸವ ಮಾಡುವುದು ಬೇಡ, ವಿಕೃತಿಯನ್ನು ಹಗುರಗೊಳಿಸುವ ಜಾಗೃತಿಯಾದರೂ ಬೇಡವೇ? ಅಲ್ಲಿ ಕಾಡು ತೆರವಾದಲ್ಲೆಲ್ಲ ಕಮ್ಯುನಿಸ್ಟ್ ಕಳೆ ಎಂದೇ ಖ್ಯಾತವಾದ ಯುಪಟೋರಿಯಂ ಧಾರಾಳ ಹಬ್ಬಿಕೊಂಡಿತ್ತು. ಅದಕ್ಕೂ ಹಿಂದೆ ಯಾರೋ ಅಗ್ನಿ ಸ್ಪರ್ಶ ಮಾಡಿದ್ದು, ಅರೆಬರೆ ಬೆಂದವುಗಳ ಮೇಲೆ ಮಂಜು ಬಿಸಿಲಿನ ಸೈಕಲ್ ಓಡಿದ್ದೂ ಎಲ್ಲ ಸೇರಿ ಅಲ್ಲಿ ವಿಶಿಷ್ಟ ವಾಸನೆ ಹರಡಿತ್ತು. ಈ ವಿಚಿತ್ರ ಪಾಕದ ಆಕರ್ಷಣೆಗೋ ಸಹಜವಾಗಿಯೋ ಅಲ್ಲಿ ಹಳದಿ ಬಣ್ಣದ ಸಾವಿರಾರು ಚಿಟ್ಟೆಗಳು ರಿಂಗಣಿಸುತ್ತಿದ್ದದ್ದು ನಮಗೆ ಅಪೂರ್ವ ಆಶ್ಚರ್ಯ ಮತ್ತು ಆನಂದವನ್ನೂ ತಂದಿತು. ಕಾಡಿನ ಗೋರಿಗೆ ಯುಪಟೋರಿಯಮ್ಮಿನ ಚಾದರ. ಚಾದರದ ಮುಕ್ಕಿಗೆ ಹಳದಿ ಸಾವಿರದ ತಲ್ಲಣ; ಹೊಸ ಜೀವ ಮಿಡಿತದ ಸಾಂತ್ವನ.

ಧಾರಾಳ ನೀರಿನುಪಚಾರ ಮತ್ತು ಐದು ಮಿನಿಟು ವಿಶ್ರಾಂತಿ ಪಡೆದೆವು. ಮುಂದೆ ಸುಮಾರು ಒಂದು ಕಿಮೀ ಸವಾರಿಯಲ್ಲಿ ಶ್ರೇಣಿಯ ನೆತ್ತಿ ಸೇರಿದೆವು. ಅಲ್ಲಿ ಕವಲು ದಾರಿಗಳ ಗೊಂದಲ. ಕೆಲವೆಡೆ ಗಟ್ಟಿ ಮಟ್ಟಸ ಕಟ್ಟೆ ಕಟ್ಟಿದ್ದು ಬಹುಶಃ ನೆಲ ಕೊರೆಯುವ ಯಂತ್ರದ ನೆಲೆಯಿದ್ದಿರಬೇಕು. ಸಾಕ್ಷಿಯಾಗಿ ಬದಿಯಲ್ಲಿ ಅಳತೆ, ಅಂಕಿ ನಮೂದಿಸಿ ಜೋಡಿಸಿಟ್ಟ ಅಸಂಖ್ಯ ಕಲ್ಲ-ಕೊರೆಕಂಬಗಳೂ ಪೇರಿದ್ದರು. ಇನ್ನೇನು, ಎತ್ತ ಎಂಬ ನಮ್ಮ ಚರ್ಚೆಗೆ ರೂಪ ಕೊಡುವಂತೆ ಅಲ್ಲಿನ ಸಣ್ಣ ಕಣಿವೆಯಿಂದ ನಾಯಿಯ ಬೊಗಳಿನ ಜತೆಗೇ ನಾಲ್ಕು ಹಳ್ಳಿಗರು ಪ್ರತ್ಯಕ್ಷರಾದರು. ಅಜೆಕಾರಿನಿಂದ ಒಳದಾರಿಯಲ್ಲಿ ಕೆರೆಕಟ್ಟೆಗೆ ಹೋಗುತ್ತಿದ್ದವರು. ನಮಗೆ ಮುಂದೆ ವಾಹನಯೋಗ್ಯ ದಾರಿ ಇಲ್ಲವೆಂದೂ ಶಿಖರಕ್ಕೇರಲು ಜಾಡು ಯಾವುದೆಂದೂ ತೋರಿ ನಡೆದರು. ಅದು ಶಿಖರಕ್ಕೆ ನಾನು ಮೊದಲ ಸಾಧನೆಯಲ್ಲಿ ಇಳಿಯಲು ಬಳಸಿದ್ದ ಜಾಡೇ ಆಗಿತ್ತು. ಮತ್ತೆ ವೇಳೆಗಳೆಯದೆ ಬೈಕ್ ಅಲ್ಲೇ ಬಿಟ್ಟು, ಚಾರಣಕ್ಕಿಳಿದೆವು.

ಅರವಿಂದ ಶೆಣೈ ಅರೆಮನಸ್ಸಿನಲ್ಲೇ ಸ್ವಲ್ಪ ದೂರ ನಮ್ಮನ್ನನುಸರಿಸಿದರು. ಗುಡ್ಡೆಗೆ ಗುಡ್ಡೆ ಅಡ್ಡ ಎಂಬ ಗಾದೆಯ ಸತ್ಯ ಅವರಿಗೆ ಬೇಗನೆ ಅರಿವಿಗೆ ಬಂತು. ನೂರಡಿಯಾಚಿನ ದಿಬ್ಬವೇ ಕೊನೆ ಎಂದು ಕಾಲೆಳೆದರೆ ಮತ್ತಾಚೆ ಅಂಥದ್ದೇ ಇನ್ನೊಂದು ದಿಬ್ಬ. ಮೋಟು ಮರವೊಂದು ಬಂದಲ್ಲಿ ಇನ್ನು ಸಾಧ್ಯವಿಲ್ಲವೆಂದು ನಿವೃತ್ತಿ ಘೋಷಿಸಿಬಿಟ್ಟರು. ಅವರನ್ನು ಅಲ್ಲೇ ನೆರಳಿನಲ್ಲಿ ವಿಶ್ರಮಿಸಲು ಬಿಟ್ಟು ಮೂವರೇ ಮುಂದುವರಿದೆವು. ಸುಡು-ಸೂರ್ಯ, ಸುಟ್ಟ ನೆಲ, ಇಟ್ಟ ಪ್ರತಿ ಹೆಜ್ಜೆ ಜಾರಿಸಲು ಸಡಿಲ ಕಲ್ಲು, ಗಾರುಹೊಡೆದ ನೆಲವೆಲ್ಲಾ ಕೂಡಿ ನಮ್ಮನ್ನು ಪಾತಾಳ ಮುಟ್ಟಿಸಲು ಫಿತೂರಿ ಮಾಡಿದಂತೇ ಇತ್ತು. ಪ್ರತಿ ಹೆಜ್ಜೆಗೂ ಶಿಖರ ತಲಪುವ ನಿರ್ಧಾರವನ್ನು ಹೊಸದಾಗಿ ಅನುಸಂಧಾನ ಮಾಡಿಕೊಳ್ಳುತ್ತಾ ಎರಡು ಮಿನಿಟಿಗೊಮ್ಮೆ ಸೊಂಟಕ್ಕೆ ಕೈಕೊಟ್ಟು ನಿಂತರೂ ಸೃಷ್ಟಿ ಸೊಬಗನ್ನು ವೀಕ್ಷಿಸುವ ಭಂಗಿಯಲ್ಲಿ ಕಳೆದು ಹೋದ ಉಸಿರನ್ನು ಹೆಕ್ಕುತ್ತಾ ಕುಟುಕು ಹೆಜ್ಜೆಯಾದರೇನು ಓಟದ ಸ್ಪರ್ಧೆಯಲ್ಲಿ ಆಮೆ (ಮೊಲದ ಮೇಲೆ) ಗೆದ್ದಿಲ್ಲವೇ ಅಂದುಕೊಳ್ಳುತ್ತಾ ಪ್ರಚಂಡ ರಾವಣನನ್ನೇ ಕಂಕುಳಲ್ಲಿ ಅವುಚಿಕೊಂಡು ಏಳು ಸಾಗರ ನೀರು ಕುಡಿಸಿದ ಅಪ್ರತಿಮ ವಾಲಿಯ ಕುಂಜವನ್ನು ಮಟಮಟ ಮಧ್ಯಾಹ್ನ ಹನ್ನೆರಡು ಗಂಟೆಗೆ ಸರಿಯಾಗಿ ಮೆಟ್ಟಿ ನಿಂತೆವು; ಶಿಖರವನ್ನು ಜಯಿಸಿದ್ದೆವು. ಉಕ್ತಿ ಸೌಂದರ್ಯಕ್ಕೆ ‘ರಣವೀಳ್ಯ’, ‘ಮೆಟ್ಟಿ ನಿಲ್ಲುವುದು’, ‘ಜಯ’ ಇತ್ಯಾದಿ ನೂರು ಹೇಳಿದರೂ ಅಂಥ ಎತ್ತರದ ಯಾವುದೇ ಸಾಧನೆಗೆ, ಒದಗುವ ಧನ್ಯತೆಗೆ ವಾಸ್ತವದಲ್ಲಿ ನನ್ನಲ್ಲಿ ಪರಿಪೂರ್ಣ ಶಬ್ದಗಳೇ ಇಲ್ಲ!

ಸೂರ್ಯ ಅಗ್ನಿಗೋಳ. ಬೈಕ್ ಬಿಟ್ಟಲ್ಲಿ ಅದುವರೆಗಿನ ಸೆಕೆ, ಶ್ರಮದಿಂದ ತೊರೆಗೆ ಬಾಯೊಡ್ದಿದಾಗ ನಾವು ನೀರಿನ ಡ್ರಂಗಳೇ ಆಗಿದ್ದು ಇಲ್ಲಿ ನೆನಪು ಮಾತ್ರ. ಹಸಿವೂ ಚುರುಗುಟ್ಟುತ್ತಿತ್ತು. ಹೆಚ್ಚು ವೇಳೆಗಳೆಯದೆ ಹಿಮ್ಮುಖರಾದೆವು. ಋತುಮಾನದ ಬೆಂಕಿ ಬಿದ್ದು (ವಾಸ್ತವದಲ್ಲಿ ಮನುಷ್ಯನೇ ಹಾಕುವುದು) ವಾಲಿಕುಂಜದ ಬಟಮಂಡೆಯ ಹುಲ್ಲು ಬಹುತೇಕ ಸುಟ್ಟಿತ್ತು. ಆದರೂ ಉಳಿದ ಅಲ್ಲೇ ಯಾವುದೋ ನೆಲದ ಮರಸಿನಲ್ಲಿ ಗೂಡು ಕಟ್ಟಿ, ಮೊಟ್ಟೆಯೋ ಮರಿಯನ್ನೋ ಬೆಳೆಸಿ ಕಾದಿದ್ದ ಹಕ್ಕಿ ಜೋಡಿಯೊಂದು ಶಿಖರ ಇಳಿಯಲು ದಡಬಡ ಹೊರಟ ನಮ್ಮೆದುರು ಅವಕ್ಕೆ ತಿಳಿದ ಕಪಟ ನಾಟಕ ಮಾಡಿತು. ಇನ್ನೇನು ನಮ್ಮ ಕೈಗೆ ಸಿಕ್ಕಿತು ಎನ್ನುವಷ್ಟು ಹತ್ತಿರ, ತನಗೇನೋ ಹಾರಲಾಗದ ಸಂಕಟ ಬಂದಿದೆ ಎಂಬ ರೀತಿಯಲ್ಲಿ ಒಂದು ಹಕ್ಕಿ ಚಡಪಡಿಸಿತು. ನಾವು ಯಾವುದೇ ಉದ್ದೇಶದಲ್ಲಿ ಅದನ್ನು ಕೈಗೆತ್ತಿಕೊಳ್ಳಲು ನುಗ್ಗಿದರೂ ಮೊದಲನೆಯದಾಗಿ ಅದು ನಮಗೆ ಸಿಗುತ್ತಿರಲಿಲ್ಲ. ಅಷ್ಟೇ ಸಾಲದೆಂದು ಮತ್ತೆ ಮತ್ತೆ ಈ ನಾಟಕ ಮುಂದುವರಿಸಿ ನಮ್ಮನ್ನು ಸ್ಪಷ್ಟವಾಗಿ ಅದರ ಗೂಡಿನಿಂದ ಇನ್ನಷ್ಟು ಮತ್ತಷ್ಟು ದೂರಕ್ಕೊಯ್ಯಲು ಪ್ರಯತ್ನಿಸುತ್ತಿತ್ತು ಖಂಡಿತ! ಇದರ ಅರಿವಿದ್ದ ನಾವು ಪರೋಕ್ಷ ಸೂಚನೆಯನ್ನಷ್ಟೇ ಗ್ರಹಿಸಿ, ನಮ್ಮ ಇಳಿಯುವ ಧಾವಂತದಲ್ಲಿ ಆಕಸ್ಮಿಕವಾಗಿಯೂ ಅದರ ಬಿಡಾರ ಹಾಳಾಗದ ಎಚ್ಚರವಹಿಸಿದೆವು. ಏರಿದ್ದಕ್ಕಿಂತಲೂ ಕಷ್ಟದಲ್ಲಿ, ನಿಧಾನವಾಗಿ ಇಳಿದು, ದಾರಿ ಸೇರಿದೆವು.

ಅರವಿಂದ ಶೆಣೈನ್ನೂ ಕೂಡಿಕೊಂಡು ಮತ್ತೆ ಇಳಿದಾರಿ ಬೈಕ್ ಸವಾರಿ. ಝರಿಯ ಬಳಿ ಬುತ್ತಿಯೂಟ. ಚಾರಣದಂತೇ ಬೈಕ್ ಸವಾರಿಯೂ ಆ ಇಳಿದಾರಿಯಲ್ಲಿ ಹೆಚ್ಚು ಅಪಾಯಕಾರಿಯಾಗಿಯೇ ಕಾಣಿಸಿತು. ಹತ್ತುದಾರಿಯಲ್ಲಿ ಇಂಜಿನ್ ಶಕ್ತಿ ಸಾಲದಿದ್ದರೆ ಅಲ್ಲಲ್ಲೆ ಅಡ್ಡ ಬೀಳುತ್ತಿದ್ದೆವು. ಈಗ ಗುರುತ್ವಾಕರ್ಷಣಾ ಸೇರಿ ಎಲ್ಲಿ ಕೊಳ್ಳಕ್ಕೆ ಹಾರುತ್ತದೋ ಎಂಬ ಭಯ ಕಾಡಿ, ಸಹವಾರರು ಮತ್ತೆ ಚಾರಣವನ್ನೇ ನೆಚ್ಚುವಂತಾಯ್ತು. ಆ ಯೋಚನೆಯೊಡನೆಯೇ ಅಂಡಾರಿನತ್ತ ಹೋಗುತ್ತಿದ್ದ ಒಂದು ಸವಕಲು ಜಾಡು ಕಾಣಿಸಿತು. ಸಹಜವಾಗಿ ಅವರಿಬ್ಬರನ್ನು ಅದಕ್ಕಿಳಿಸಿ, ನಾವಿಬ್ಬರು ತೂರಾಡಿಕೊಂಡು ಒಂಟಿ ಸವಾರಿಯಲ್ಲಿ ಇಳಿದೆವು. ತಮಾಷೆ ಎಂದರೆ ಅಂಡಾರನ್ನು ಎರಡೂ ತಂಡ ಒಂದೇ ವೇಳೆಗೆ ತಲಪಿದ್ದೆವು – ಮೂರೂವರೆ ಗಂಟೆ. ಕತ್ತಲೆಗೆ ಇನ್ನೂ ಉಳಿದ ಸಮಯ ಲೆಕ್ಕ ಹಾಕಿ, ಹಾಗೇ ಕಾರ್ಕಳದಿಂದ ಭಗವತಿ ಘಾಟಿಯಲ್ಲಿ ಮೇಲೇರಿ ಹನುಮನ ಗುಂಡಿಯ ಅಬ್ಬಿಯಲ್ಲಿ ಸ್ನಾನ ಮಾಡಿದ್ದು ಬಲು ದೊಡ್ಡ ಬೋನಸ್ಸು.

(ಮುಂದಿನವಾರ: ವಾಲಿಕುಂಜದ ಅಜ್ಜಿಯ ಮುಖ ಅನಾವರಣ)