ಕೇದಿಗೆ ಅರವಿಂದ ರಾವ್ ಕಬ್ಬಿನಾಲೆಯ ಅಳಿಯ. ಮತ್ತು ಅವರ ಅಲ್ಲಿನ ಬಳಗ ವಾಲಿಕುಂಜ ವಲಯದ ಘಟ್ಟಶ್ರೇಣಿಯನ್ನುತ್ತರಿಸಿ ಕೆರೆಕಟ್ಟೆವರೆಗೆ ನಡೆಸಿದ ಚಾರಣವನ್ನೂ ಈ ಹಿಂದೆಯೇ ನಿಮಗೆ ತಿಳಿಸಿದ್ದೇನೆ. ಅರವಿಂದ್ ೨೬-೧-೯೧ರ ಗಣರಾಜ್ಯೋತ್ಸವದ ರಜಾದಿನಕ್ಕೆ ಹಿಂಬಾಲಿಸುವ ಆದಿತ್ಯವಾರವನ್ನು ಸೇರಿಸಿ ಅಲ್ಲಿನವರೊಡನೆ ತನ್ನ ಆರೋಹಣದ ಮಿತ್ರರನ್ನೂ ಸೇರಿಸಿ ವಾಲಿಕುಂಜ ಏರುವ ಹೊಳಹು ಹಾಕಿದರು. ಗಾಢ ಕತ್ತಲೆಯಲ್ಲೂ ನಮ್ಮನ್ನು ಒಪ್ಪಿಕೊಂಡ, ಜಲದೋಳುಗಳಲ್ಲಿ ನಮ್ಮಾಯಾಸವನ್ನು ನೀಗಿದ, ಈಗಾಗಲೇ ಎರಡು ಬಾರಿ ತಲೆಯಮೇಲೆ ಹೊತ್ತು ದಿಗಂತ ವಿಸ್ತಾರದ ಅಮೂಲ್ಯ ಕಾಣ್ಕೆಕೊಟ್ಟ ಶಿಖರ ಶ್ರೇಣಿಯ ಇನ್ನೊಂದೇ ಮೈ, ಮುಖ ನೋಡಿ, ನೆತ್ತಿ ಏರುವುದು ಮಾತ್ರವಲ್ಲ ಬಳಿಯಲ್ಲೇ ಶಿಬಿರವಾಸ? ನಾನು ಎರಡು ಯೋಚಿಸದೆ ಸೈಗುಟ್ಟಿದೆ.

ಶನಿವಾರ ರಾತ್ರಿ ಎಂದಿನಂತೆ ಎಂಟಕ್ಕೆ ಅಂಗಡಿ ಮುಚ್ಚಿದವನು ಸಜ್ಜುಗೊಳಿಸಿದ್ದನ್ನೆಲ್ಲ ಬೈಕಿಗೆ ಹೇರಿಕೊಂಡು, ಜೊತೆಗೆ ದೇವಕಿ, ಅಭಯರನ್ನೂ ಕೂರಿಸಿಕೊಂಡು ಒಂಬತ್ತೂಕಾಲಕ್ಕೆ ಉಡುಪಿ ಹೆದ್ದಾರಿಯ ಮೇಲಿದ್ದೆ. ನನ್ನ ಜತೆಗೆ ಇನ್ನೊಂದು ಬೈಕಿನಲ್ಲಿ ಅರವಿಂದ ರಾವ್ ಮತ್ತು ಪ್ರತಾಪ್, ಮತ್ತೊಂದು ಸ್ಕೂಟರಿನಲ್ಲಿ ಸಂತೋಷ್ (ರೈ?) ಹೊರಟಿದ್ದರು. ನಮ್ಮ ಲಕ್ಷ್ಯ ಕಾರ್ಕಳದಿಂದಲೂ ಆಚೆಗಾದರೂ ಆ ದಿನಗಳಲ್ಲಿ ನಾವು ಹತ್ತಿರದ ಮೂಡಬಿದ್ರೆ ಮೂಲಕ ದಾರಿಯನ್ನು ನಿರಾಕರಿಸಿ ಪಡುಬಿದ್ರೆಯ ಹೆದ್ದಾರಿಯನ್ನೇ ಅನುಸರಿಸುತ್ತಿದ್ದೆವು. ಹೆದ್ದಾರಿ ಕೆಲವು ಋತುಮಾನಗಳಲ್ಲಿ ಅದರ ಹೆಸರಿಗೆ ಅಪಮಾನಕಾರಿಯಾಗೇ ಇರುತ್ತಿತ್ತಾದರೂ ಪಡುಬಿದ್ರೆ-ಕಾರ್ಕಳ (ಮುಂದುವರಿದಂತೆ ಕುದುರೆಮುಖ ಪಟ್ಟಣ) ದಾರಿ ‘ಗ್ಯಾರಂಟೀ ಮಾಲ್.’ ಆ ಕಾಲದಲ್ಲಿ ರಾತ್ರಿ ಹೆದ್ದಾರಿ (ಇದೇ ಮುಗಿದ ಕಥೆಯ) ಗಣಿ ಅಥವಾ ಪೆಟ್ರೋ ಲಾರಿಗಳ ಹಾವಳಿ ಮುಕ್ತವಾಗಿರುತ್ತಿತ್ತು. ಅದೇ ಕಾಲದಲ್ಲಿ ಇತರ ದಾರಿಗಳು ವಾಹನ ಮುಕ್ತವಾಗುವುದೇ ಒಮ್ಮೊಮ್ಮೆ ಅಪಾಯಕಾರಿಯಾಗುತ್ತಿತ್ತು! ಬೀಡಾಡಿ ದನಗಳು ರಸ್ತೆಯ ಬಿಸುಪನ್ನು ಆನಂದಿಸುತ್ತಾ ಮಲಗಿರುತ್ತಿದ್ದದ್ದು ತೀರಾ ಸಾಮಾನ್ಯವಿತ್ತು. ಗುಂಡಿಯಾಡಿಸುತ್ತಾ ವೇಗವರ್ಧನೆಗೆ ತಕ್ಕಂತೆ ಉಜ್ವಲ ಅಥವಾ ಮಂಕಾಗುವ ಹೆದ್ದೀಪಗಳ ದ್ವಿಚಕ್ರಿಗಳು, ಅದರಲ್ಲೂ ಗಾಢವರ್ಣಗಳ ಜಾನುವಾರುಗಳು ಎದುರಾದರೆ ಮುಗಿದೇ ಹೋಯ್ತು. (ಇಂದು ಬೀಡಾಡಿ ಜಾನುವಾರುಗಳೇ ಕಾಣಸಿಗದಿರುವುದಕ್ಕೆ ಗೋ-ಭಕ್ಷಕರನ್ನು ಹೆಸರಿಸಬೇಕೋ ಗೋ-ರಕ್ಷಕರನ್ನು ಅಭಿನಂದಿಸಬೇಕೋ?) ಆದರೆ ಅಂಥ ಯಾವುದೆ ಉಲ್ಲೇಖನೀಯ ಕಥನಗಳೂ ಇಲ್ಲದೆ ಕಾರ್ಕಳ, ಅಜೆಕಾರು, ಮುದ್ರಾಡಿಗಳನ್ನೂ ಹಾಯ್ದು, ಬಚ್ಚಪ್ಪು ಎಂಬಲ್ಲಿ ಬಲದ ಮಣ್ಣದಾರಿಯನ್ನು ಹಿಡಿದು ಸುಮಾರು ಎಂಟು ಕಿಮೀ ಒಳಗಿನ ಕಬ್ಬಿನಾಲೆಯ ಸುಳುಗೋಡು ಮನೆ ಸೇರುವಾಗ ಮಧ್ಯರಾತ್ರಿ ಹನ್ನೆರಡು ಗಂಟೆ.

ಸುಳುಗೋಡು ಮನೆ ಅಥವಾ ಅರವಿಂದರ ಮಾವನ ಮನೆ ಬೆಚ್ಚಗಿನ ಆತಿಥ್ಯವನ್ನೇ ಕೊಟ್ಟಿತು. ರಾತ್ರಿ ತಡವಾದ್ದಕ್ಕೆ ಬೆಳಿಗ್ಗೆ ಆದಷ್ಟು ಬೇಗ ಎಂದು ಹೊರಬೀಳುವಾಗ ಏಳೂಕಾಲಾಗಿತ್ತು. ಪ್ಯಾಂಟಿನ ಹಳೇ ಕೊಳಿಕೆ ಕಳಚಿಕೊಳ್ಳುವಷ್ಟು ಕಡುಬು ಮುಕ್ಕಿದ್ದಲ್ಲದೆ ಮಧ್ಯಾಹ್ನಕ್ಕೆ ಬೆನ್ನ ಹೊರೆಗೂ ಸೇರಿಸಿಕೊಂಡಿದ್ದೆವು. ಗಾದೆ ಸುಳ್ಳಾಗುವುದುಂಟೇ – ಉಂಡೂ ಹೋದ, ಕೊಂಡೂ ಹೋದ. ನಾವಾರು ಜನಕ್ಕೆ ಹಳ್ಳಿಯ ಅಷ್ಟೇ ಜನ ಮತ್ತು ಒಂದು ಜಾನುವಾರು – ನಾಯಿ, ಸೇರಿಕೊಂಡಿದ್ದರು. ಅಂಕಿ ಕಣಿಯರು ವಿವಿಧ ಪಾಠಾನುಸಾರ ನಾಯಿ – ಕಾಜುವನ್ನು ಲೆಕ್ಕಕ್ಕೆ ಹಿಡಿದು ಹದಿಮೂರೆಂದರೂ ಸೈ, ಬಿಟ್ಟು ‘ಜನ ಡರ್ಟಿ ಡಜನ’ (ಹನ್ನೆರಡು) ಎಂದರೂ ಜೈ. ಗದ್ದೆ, ತೋಟ ದಾಟಿ ಕಾಡು ಸೇರುವುದರೊಡನೆ ದಿಟ್ಟ ದರೆಯೂ ಎದುರಿತ್ತು. ಬಳಕೆ ಕಡಿಮೆಯಾದ್ದರಿಂದ ಅಲ್ಲೊಮ್ಮೆ ಇಲ್ಲೊಮ್ಮೆ ಬೆತ್ತದ ಸರಿಗೆಗಳು ನಮ್ಮನ್ನೆಚ್ಚರಿಸಿದ್ದು ಬಿಟ್ಟರೆ ಸವಕಲು ಜಾಡು, ದಪ್ಪ ಕಾಡಮುಚ್ಚಿಗೆಯಡಿಯಲ್ಲಿ ಚೆನ್ನಾಗಿಯೇ ಇತ್ತು. [ಈಚಿನ ವರ್ಷಗಳಲ್ಲಿ ನಕ್ಸಲ್ ಕತೆಗಳಲ್ಲಿ ಕಬ್ಬಿನಾಲೆ ತುಂಬಾ ಪ್ರಚಲಿತ ಕೇಂದ್ರವೇ ಆಗಿರುವುದರಿಂದ ಜಾಡು ಹೆಜ್ಜಾಡು (ದಾರಿ ಹೆದ್ದಾರಿ ಆದಂತೆ) ಆಗಿರಬಹುದು. ಅಕಾಲದಲ್ಲಿ ನಕ್ಸಲರ ಓಡಾಟ, ಅವರನ್ನು ಬೆಂಬತ್ತಿಯೋ ಒಟ್ಟಾರೆ ತನಿಖೆಗಾಗಿಯೋ ಪೋಲಿಸರ ಧಾಂಧೂಂ, ಇಬ್ಬರನ್ನೂ ‘ಸಾಕುವ’ ಸ್ಥಳೀಯರ ಚಡಪಡಿಕೆ!]

ಕಾಡು ವಿರಳವಾಗುತ್ತಾ ತರಗೆಲೆ ರಾಶಿ, ನುಸುಲು ಮಣ್ಣು ತೆಳುವಾಗುತ್ತಾ ಕಲ್ಲರಾಶಿ, ಆಳೆತ್ತರದ ಹುಲ್ಲ ಮುಚ್ಚಿಗೆ ಕಾಡಿತು. ಇಲ್ಲಿ ಜಾಡಿನ ಗೌರವ ಉಳಿಯುವುದಿಲ್ಲ. ಏರಿನ ಕಾಠಿಣ್ಯಕ್ಕೆ ಎಳೆದು ಆಧರಿಸಲು ಹುಲ್ಲೇನೋ ಧಾರಾಳ ಒದಗುತ್ತದೆ. ಆದರೆ ಹೆಜ್ಜೆ ಇಡುವುದೇ ಸಮಸ್ಯೆ. ಪುರಾಣ ಪುರುಷ ತ್ರಿವಿಕ್ರಮನಾದರೋ ಭೂಮಿಯ ಮೇಲೆ ಇಟ್ಟ ಒಂದೇ ಹೆಜ್ಜೆಯನ್ನು ವಿಶ್ವವ್ಯಾಪಿಯಾಗಿ ಬೆಳೆಸಿದ. ನಮ್ಮದಾದರೋ ಬಾಟಾದಲ್ಲಿ ಹತ್ತರ ಅಳತೆ ಮೀರಿ ವಿಸ್ತರಿಸಲಾರದು. ಗರಿಕೆ ಮುಚ್ಚಿದ ಬಂಡೆಗಳ ಸಂದಿನಲ್ಲಿ ಹುಲ್ಲಗೆಡ್ಡೆ ಸಿಕ್ಕಿದರೆ ಸರಿ, ಮಾಟೆ ಇದ್ದರೆ ಇನ್ನೊಂದೇ ಹುಡುಕಬೇಕು. ಬಂಡೆಯ ಅಸ್ಥಿರತೆ, ಮಾಟೆಯಲ್ಲಿ ಅವಿತಿರಬಹುದಾದ ಜೀವಿಗಳು, ಬೆನ್ನೇರಿ ಓಲಾಡುವ ಎರಡು ದಿನಗಳ ಹೊರೆಯನ್ನೆಲ್ಲಾ ಸಂಭಾಳಿಸುತ್ತ, ಆ ವಲಯದಲ್ಲಿ ಸುಳಗೋಡು ಬರೆ ಎಂದೇ ಖ್ಯಾತವಾದ ಘಟ್ಟ ಶ್ರೇಣಿಯ ನೆತ್ತಿ ಸಾಧಿಸಿದೆವು.

ಕಾರ್ಕಳದಿಂದ ಮುದ್ರಾಡಿ ದಾರಿಯದೇ ಪುಟ್ಟ ಊರುಗಳಾದ ವರಂಗ, ಮುನಿಯಾಲುಗಳ ಹಿನ್ನೆಲೆಗೆ ಕಿರುದೆರೆ ಹಿಡಿದ ಶ್ರೇಣಿ ಪೆರ್ಲ ಗುಡ್ಡೆಯದು. ಅವೆಲ್ಲವನ್ನೂ ಕಬ್ಬಿನಾಲೆಯ ತೋಟ, ಗದ್ದೆ, ಮನೆ, ದೇವಳವೇ ಮೊದಲಾದ ವಿವರಗಳೆಲ್ಲವನ್ನೂ ವಿಹಂಗಮ ನೋಟದಲ್ಲಿ ಕಟ್ಟಿಕೊಟ್ಟಿತು ಸುಳಗೋಡು ಬರೆ. ಹಾಗೇ ಆ ಭಿನ್ನತೆಗಳೆಲ್ಲವಕ್ಕೂ ಹಸಿರು ಶಾಲಿನ ಸಾಂಗತ್ಯ ಒದಗಿಸುವ ಔನ್ನತ್ಯವೂ ಆ ಶ್ರೇಣಿಗಿತ್ತು. ಕರಾವಳಿಯುದ್ದಕ್ಕೆ ನುಲಿದು, ಮಲಗಿದ ಸಹಸ್ರಪದಿಗೆ ಸುಳಗೋಡು ಬರೆ ಒಂದು ಪಾದ. ಅದರ ಸೌಂದರ್ಯಕ್ಕೆ ಕಳೆದು ಹೋಗದಂತೆ, ಸುದೂರದಲ್ಲಿ ದಕ್ಷಿಣಾಕಾಶವನ್ನು ಕವಿದು ನಿಂತು ಕರೆದಿತ್ತು ವಾಲಿಕುಂಜ; ವಲಯಾಧಿಪತಿ.

ಭೂಪಟದಲ್ಲಿ ನೇರಾನೇರ ಗೀಟು ಹಾಕಿದರೂ ಉತ್ತರ ದಕ್ಷಿಣವಾಗಿ ಸುಮಾರು ಐದು ಕಿಮೀ ತುಸು ಏರು ನಡಿಗೆಯ ಒಂದು ಬೀಸಿನಲ್ಲಿ ನಾವು ಸ್ಪಷ್ಟ ಪಶ್ಚಿಮಘಟ್ಟಗಳ ನೆತ್ತಿ ಸೇರುವವರಿದ್ದೆವು. ಮತ್ತೆ ಬಲ ಮುರಿಯುವ (ಪಶ್ಚಿಮಕ್ಕೆ) ತೀವ್ರ ಏರಿನ ಕೊನೆಯೇ ವಾಲಿಕುಂಜ ಶಿಖರ. ಈ ಹಂತದ ನಡಿಗೆಯುದ್ದಕ್ಕೆ ಪಶ್ಚಿಮಕ್ಕೆ ಹೆಚ್ಚು ಸರಿದರೆ ಕರಾವಳಿಯ ದುರ್ಗಮ ಕೊಳ್ಳ. ಅದೇ ಪೂರ್ವಕ್ಕೆ ಸರಿದರೆ ಇಳಿಜಾರೇನೋ ನಿರಪಾಯವೇ ಇರಬಹುದು, ಕಾಡು ಮಾತ್ರ ದಟ್ಟ. ಪ್ರಾಣಿ ಜಾಡುಗಳ ಜಾಲದಲ್ಲಿ, ವಿಸ್ತರಿಸುತ್ತ ಬಳಕುವ ಝರಿತೊರೆಗಳ ಮಾಟದಲ್ಲಿ ಗುರಿಯಿಂದ ಕಳೆದು ಹೋಗಬಹುದಿತ್ತು. ಪ್ರಾಕೃತಿಕವಾಗಿ ಹುಲ್ಲುಗಾವಲೇ ಆದ ಶ್ರೇಣಿ ನೆತ್ತಿಯಲ್ಲಿ, ಆ ಯಾವ ಗೊಂದಲಗಳಿಗೂ ಸಿಲುಕದೆ, ನಿಯತ ಅಂತರಗಳಲ್ಲಿದ್ದ ಸರ್ವೇಕ್ಷಣ ಇಲಾಖೆಯ ಗಡಿರೇಖೆಯ (ಹಳೆಯ ಮದ್ರಾಸು – ಮೈಸೂರು ರಾಜ್ಯಗಳ, ಅಂದಿನ ದಕ – ಚಿಕ್ಕ ಮಗಳೂರಿನ, ಈಗಿನ ಉಡುಪಿ – ಚಿಕ್ಕಮಗಳೂರಿನ) ಸಂಕೇತಗಳಾದ ಕಲ್ಲ ಗುಪ್ಪೆಯಿಂದ ಗುಪ್ಪೆಗೆ ಮೂಡಿದ್ದ ಸವಕಲು ಜಾಡನ್ನೇ ನೆಚ್ಚಿ ನಾವು ನಡೆದೇ ನಡೆದೆವು. ಒಂದೆರಡು ಕಡೆ ಶ್ರೇಣಿ ತುಸುವೇ ತಗ್ಗಿದಂತಲ್ಲಿ ಕಾಡು ಕೊಳ್ಳದಂಚಿಗೂ ನುಗ್ಗಿದ್ದಿತ್ತು. ಆದರೆ ಇಲಾಖೆಯ ಜನ ದೃಷ್ಟಿ ರೇಖೆ ಗುಪ್ಪೆಯಿಂದ ಗುಪ್ಪೆಗೆ ಸ್ಪಷ್ಟಪಡಿಸುವ ಉದ್ದೇಶದಿಂದ ಸುಮಾರು ಹದಿನೈದು ಮೀಟರ್ ಅಗಲಕ್ಕೆ ಕುರುಚಲು, ಕೊಂಬೆಗೈಗಳನ್ನು ತೆರವಾಗಿಸಿದ್ದರಿಂದ ಜಾಡು ಅನುಸರಿಸುವಲ್ಲಿ ಅನುಮಾನ ಬರಲಿಲ್ಲ. [ಅರಣ್ಯ ಇಲಾಖೆ ದೊಡ್ಡ ಯೋಜನೆಗಳಲ್ಲಿ ಹೀಗೇ ಆಯಕಟ್ಟಿನ ಜಾಗಗಳಲ್ಲಿ ದಟ್ಟ ಕಾಡಿದ್ದರೂ ಸ್ಪಷ್ಟ ಇಬ್ಭಾಗಿಸುವುದು ಉಂಟು. ಅಲ್ಲಿ ಬರಿಯ ದೃಷ್ಟಿ ರೇಖೆಯಲ್ಲ, ಕಾಡನ್ನು ಆಕಾಶದವರೆಗೂ ಪೂರ್ತಿ ಇಬ್ಭಾಗಿಸುತ್ತಾರೆ. ಅದು ಅಗ್ನಿ ಆಕಸ್ಮಿಕ ಉಂಟಾದಾಗ ಕೆನ್ನಾಲಗೆ ಇನ್ನೊಂದು ವಲಯಕ್ಕೆ ಪಸರಿಸದಂತೆ ನೋಡಿಕೊಳ್ಳುವ ಅಗ್ನಿರೇಖೆಯಂತೆ]

ಶ್ರೇಣಿ ನೆತ್ತಿಯ ನಡಿಗೆಯಲ್ಲಿ ಒಂದು ರೀತಿಯ ಏಕತಾನತೆಯಿತ್ತು. ಆದರೆ ಅರವಿಂದರ ಭಾವ – ಪರಮೇಶ್ವರ ಯಾನೆ ಪಮ್ಮಣ್ಣ, ಹಳಗಾಲದ ನಂಬಿಕೆಯಂತೆ ದುಷ್ಟಮೃಗಗಳಿಂದ ನಮ್ಮ ರಕ್ಷಣೆಗಾಗಿಯೇ ಗನ್ ಹೊತ್ತು ಬಂದ ಮಂಜುನಾಥ ಹೆಬ್ಬಾರ್, ವನೋತ್ಪತ್ತಿಗಳಿಗಾಗಿ ಈ ವಲಯವನ್ನು ಅಂಗೈ ರೇಖೆಯಂತೇ ತಿಳಿದು ಸುತ್ತಿದ ಅನುಭವಿ ಗೋಂಟು ಮೇರ ಮತ್ತು ಕಾಜು ನಾಯಿ ನಮಗೆ ಸಾಕಷ್ಟು ಮಾಹಿತಿ, ರಂಜನೆ ಕೊಟ್ಟಿರಲೇಬೇಕು. ಅಲ್ಲದೆ ನನ್ನ ದಾಖಲೀಕರಣದ ನಕ್ಷೆಯಲ್ಲಿ ಕೇವಲ ಹೆಸರುಗಳಾಗಿರುವ ಮಂಗಳೂರಿನಿಂದಲೇ ಬಂದಿದ್ದ ಪ್ರತಾಪ್ ಮತ್ತು ಸಂತೋಷ್, ಕಬ್ಬಿನಾಲೆಯ ಬಳಗದವರಾದ ವಿದ್ಯಾವಾಚಸ್ಪತಿ ಯಾನೆ ಬಾಬು, ಹೆರಾಲ್ಡ್ ಡೇಸಾ ಮತ್ತು ಚಂದ್ರಶೇಖರ ಶೆಟ್ಟಿ ಕೂಡಾ ತಂಡದ ಆನಂದದ ರಸಾಯನಕ್ಕೆ ಸಕ್ಕರೆ ಹಾಲು ಖಂಡಿತಾ ಸೇರಿಸಿರುತ್ತಾರೆ; ಕಾಲದ ಮಸಕನ್ನು ತೆಗೆಯಲಾಗದ ನಾನು ವಿಷಾದವನ್ನಷ್ಟೇ ದಾಖಲಿಸಬಲ್ಲೆ.

ಬೆಳಗ್ಗಿನ ಚಳಿ ಹರಿದು, ಪುಂಡು ಮೋಡಗಳು ಬೇಗನೆ ಕಾಡ ಕೊಟ್ಟಿಗೆಯಿಂದೆದ್ದು ಹೋದವು. ಆಮೇಲೆ ಉದ್ದಕ್ಕೂ ಬಿಸಿಲು ನಮ್ಮ ತಲೆಕಾಯಿಸಿದರೆ ಗಾಳಿ ದೇಹ ತಣಿಸುತ್ತಿತ್ತು. ಅಸಂಖ್ಯ ಮಳೆನೀರ ತೊರೆಜಾಡುಗಳು, ಅಲ್ಲಿಲ್ಲಿ ಮಳೆಗಾಲ ಕಳೆದ ಹೊಸದರಲ್ಲಿ ಕಾಟಿಗಳು ಮೈಯಾಡಿಸಿದ ಪಳ್ಳಗಳ ಅವಶೇಷಗಳು ಸಿಕ್ಕಿದ್ದವು. ಆದರೆ ಸ್ಪಷ್ಟ ನೀರ ಹರಿವು ಸಿಕ್ಕದಿದ್ದುದರಿಂದ ಹನ್ನೆರಡೂವರೆ ಗಂಟೆಯ ಸುಮಾರಿಗೆ, ನಾವು ಹೊತ್ತಿದ್ದ ನೀರ ಅಂಡೆಗಳೆಲ್ಲ ಬರಿದಾಗಿ, ಬದಲಿ ಹುಡುಕುವಂತಾಯ್ತು. ನಿಮಗೆಲ್ಲಾ ಗೊತ್ತೇ ಇದೆ, ಪಶ್ಚಿಮ ಘಟ್ಟಗಳು ಶೋಲಾ ಕಾಡುಗಳೆಂದೇ ಪ್ರಸಿದ್ಧ. ಇವುಗಳ ರಚನೆಯಲ್ಲಿ ಬೆಟ್ಟದ ಉನ್ನತ ವಲಯಗಳಲ್ಲಿ ಹುಲ್ಲು, ತಗ್ಗುಗಳಲ್ಲಿ ದಟ್ಟ ಮರಗಿಡಗಳು ಮತ್ತು ಕಣಿವೆಗಳಲ್ಲಿ ಸಹಜವಾಗಿ ನೀರೂ ಇರುತ್ತದೆ. ಅದುವರೆಗೆ ಕಾಣದಿದ್ದರೂ ಪರಿಸರದ ಶ್ರುತಿಯಲ್ಲಿ ಒಂದಾಗಿ ಕಿವಿ ತುಂಬುತ್ತಿದ್ದ, ನಮ್ಮರಿವಿನಂತೆ ಎಲ್ಲೂ ತುಸು ಕಾಡು ನುಗ್ಗಿದರೆ ಸಿಗಲೇಬೇಕಿದ್ದ ತೊರೆ ಒಂದನ್ನು ಪ್ರತ್ಯಕ್ಷೀಕರಿಸಿಕೊಂಡೆವು. ಸಾಕಷ್ಟು ನೀರು ಕುಡಿದು, ಅಂಡೆಗಳಿಗೆ ತುಂಬಿಕೊಂಡದ್ದಲ್ಲದೆ ಬೆನ್ನ ಮೇಲಿದ್ದ ಬುತ್ತಿಯ ಹೊರೆಯನ್ನು ಹೊಟ್ಟೆಗೆ ಇಳಿಸುವ ಕೆಲಸವನ್ನೂ ಪೂರೈಸಿಬಿಟ್ಟೆವು.

ವಾಲಿಕುಂಜ ಸಮೀಪಿಸುತ್ತಿದ್ದಂತೆ ದೃಶ್ಯ ವಿವರಗಳು ಸ್ಫುಟಗೊಂಡವು. ಪಶ್ಚಿಮ ಹಾಗೂ ಉತ್ತರದ ಈ ಮೈಯಲ್ಲಿ ಅಂಡಾರಿನ ಕಾಡು ತೀರಾ ಕುಬ್ಜ ಮರಗಳ ಮೊತ್ತವಾಗಿ, ಸಿದ್ಧಿ ಜನಾಂಗದವರ ತಲೆಗೆ ಅಂಟಿದಂತೆ ತೋರುವ ಗುಂಗುರು ಕೂದಲಿನ ಹಾಗೆ, ಹೆಚ್ಚು ಕಡಿಮೆ ಶಿಖರದ ಮೇಲಂಚಿನವರೆಗೂ ಹಬ್ಬಿಕೊಂಡಿತ್ತು. ಆ ಕಡಿದಾದ ಮೈಯಲ್ಲಿ ಹೊರ ಚಾಚಿರಬಹುದಾದ ಕಲ್ಲು, ದರೆ ಎಲ್ಲವನ್ನು ಹಸಿರಿನ ಮಿದು ಮಕ್ಮಲ್ಲಿನಲ್ಲಿ ಆವರಿಸಿ, ಪೂರ್ವ ಹಾಗೂ ದಕ್ಷಿಣ ಮೈಯ ಸ್ವಲ್ಪೇ ಸ್ವಲ್ಪ ಬೋಳು ಶಿಖರದ ಹೊಂಬಣ್ಣ ಅಂದರೆ, ಒಣ ಹುಲ್ಲನ್ನು ಕಾಣಿಸಿತ್ತು. ಯಾವುದೋ ನರೆಗೂದಲ ಅಜ್ಜಿ ಅರೆ-ತಲೆಗೆ ಸೆರಗೆಳೆದು ಓರೆಯಲ್ಲಿ ನಮ್ಮತ್ತ ನೋಡುತ್ತಿದ್ದಂತೆ ಕಾಣಿಸಿದಾಗಲೇ ಶಿಖರದ ಪರ್ಯಾಯ ನಾಮ – ಅಜ್ಜಿಕುಂಜ, ಎಷ್ಟು ಅನ್ವರ್ಥ ಅನಿಸಿಬಿಟ್ಟಿತು. ಗಂಟೆ ಮೂರರ ಸುಮಾರಿಗೆ ನಾವು ಶಿಖರದ ನೇರ ಪೂರ್ವ ತಪ್ಪಲಿನಲ್ಲಿದ್ದೆವು. ಅಲ್ಲಿನ ತೆಳು ಕಾಡನ್ನುತ್ತರಿಸಿದರೆ ಶಿಖರ ಒಂದು ನೇರ ಏರಿನ ದಿಬ್ಬ ಮಾತ್ರ.

ಒಂದು ರಾತ್ರಿಯನ್ನು ಶಿಖರ ಸಾಮೀಪ್ಯದಲ್ಲಿ ಕಳೆಯ ಹೊರಟವರಿಗೆ ಆ ಹಂತದಲ್ಲಿ ಆದ್ಯತೆಗಳು ಬದಲಿದವು. ಮೊದಲು ಶಿಬಿರ ಸ್ಥಾನದ ನಿಷ್ಕರ್ಶೆ. ಅಲ್ಲಿ ಅನಾವಶ್ಯಕ ಹೊರೆಗಳನ್ನು ಉಳಿಸಿ, ಸೂರ್ಯಾಸ್ತಕ್ಕೆ ಅತ್ಯುನ್ನತಿ ಮುಟ್ಟುವುದೆಂದಾಯ್ತು. ಸ್ವಲ್ಪ ದಕ್ಷಿಣಕ್ಕೆ ಸರಿದೆವು. ಅಲ್ಲಿ ನಾಲ್ಕೆಂಟು ಹಳ್ಳಿಗರ ತಂಡವೊಂದು ವನೋತ್ಪತ್ತಿ ಸಂಗ್ರಹಿಕೊಂಡು ಠಿಕಾಣಿ ಹೂಡಿತ್ತು. ಒಂದಿಬ್ಬರು ಪಕ್ಕದ ತೆರೆಮೈಯಲ್ಲಿ ರಾಮಪತ್ರೆಯನ್ನು ಬಿಸಿಲಿಗೆ ಹರಡುತ್ತಿದ್ದರೆ ಮತ್ತಿಬ್ಬರು ಬೆತ್ತವನ್ನು ಕೀಸಿ, ಕಟ್ಟು ಮಾಡುತ್ತಿದ್ದರು. ತಾಂಬೂಲದ ಉಂಡೆ ಅವರ ಕೆನ್ನೆಯ ಹೊಳಪಿನಲ್ಲಿ ಕಂಡರೂ ರಾಗರಂಜಿತ ತುಟಿಗಳು ಸ್ವಾಗತದ ನಗೆಗೇನೂ ಕೊರತೆ ಮಾಡಲಿಲ್ಲ. ಹರಿದು ಮುಕ್ಕುವ ಉತ್ಸಾಹದಲ್ಲಿ ತೊಡಗಿದ ಅವರ ನಾಯಿಗಳು ಕಾಜು ಸೇರಿದಂತೆ ನಮ್ಮನ್ನು ನಾಲ್ಕೇ ವಿನಿಮಯದಲ್ಲಿ ಎಂಬಂತೆ ಒಪ್ಪಿಕೊಂಡವು. ಅಲ್ಲೇ ಕಾಡಿನ ತೆಕ್ಕೆ ತಪ್ಪಿಸಿ ಓಡುತ್ತಿದ್ದ ತೊರೆಯ ಜುಳುಜುಳು ಲಹರಿಗೆ, ಪಕ್ಕದಲ್ಲೇ ಕಲ್ಲೊಡ್ಡಿ ಹೂಡಿದ್ದ ಒಲೆ ಹಗುರಕ್ಕೆ ಚಟಪಟಗುಟ್ಟಿ ತೆಳು ಹೊಗೆಯಾಡಿಸುತ್ತಿತ್ತು. ಅದರ ಮೇಲೆ ತಟ್ಟೆ ಮುಚ್ಚಿ ಕೂತ ಅಲ್ಯೂಮಿನಿಯಂ ಪಾತ್ರೆ ಆಗೀಗ ಸಂಕೋಚದಲ್ಲೇ ಗುಸುಗುಟ್ಟಿ ಹಬೆಗೈಗಳನ್ನು ಹೊಗೆಸುಳಿಯಲ್ಲಿ ಬೆಸೆಯುತ್ತಿತ್ತು. ನಾವು ಇನ್ನೊಂದು ಯೋಚಿಸದೆ ಅಲ್ಲೇ ಸ್ವಲ್ಪ ಮೇಲಿನ ದಂಡೆಯ ತಟ್ಟಿನಲ್ಲಿ ಹೊರೆ ಇಳಿಸಿಯೇ ಬಿಟ್ಟೆವು. ನಮ್ಮದೇ ಒಲೆ ಹೂಡಿ, ಚಾ ಕಾಯಿಸಿ, ಕುರುಕಲು ತಿಂಡಿಯಷ್ಟು ಧ್ವಂಸ ಮಾಡಿ ಪುನಶ್ಚೇತನಗೊಂಡೆವು.

ಶಿಬಿರದಾಚಿನ ಸಪುರ ಕಾಡು ಶಿಖರದ ಮಹೋದರ ಆವರಿಸಿದ ಸೊಂಟಪಟ್ಟಿಯೆಂದೇ ನಗೆ ಮಾಡುತ್ತ ದಾಟಿ, ನೇರ ಏರು ಜಾಡು ಹಿಡಿದೆವು. ಎರಡು ಹೆಜ್ಜೆಗಿಂತ ಹೆಚ್ಚು ಬೆಳೆಸಲಾಗದ ತೀವ್ರತೆ. ಸಹಜವಾಗಿ ತುಸು ಬಲಕ್ಕೂ ಮತ್ತೆ ಎಡಕ್ಕೂ ಓರೆ ಜಾಡುಗಳನ್ನು ಹಿಡಿಯುತ್ತ ಬೇಗನೆ ನನ್ನ ಮೊದಲ ಪ್ರಯತ್ನದ ಸ್ಪಷ್ಟ ದಕ್ಷಿಣ ಜಾಡನ್ನೇ ಹಿಡಿದದ್ದಾಗಿತ್ತು. ಒಣ ಲೆಕ್ಕ ಪತ್ರದ ಕಲಮುಗಳಾಗಿದ್ದರೆ, ನನ್ನ ಮೊದಲ ಕಥನದ ಅಡಿಯಲ್ಲಿ ಇದನ್ನು ತಂದು, ‘ಯಥಾವತ್ತು’ ಎಂಬ ಸಂಕೇತ (“) ಹಾಕಿಬಿಡಬಹುದಿತ್ತು. ಪ್ರತಿ ತಿನಿಸಿನ ಹೊತ್ತಿಗೂ ಪ್ರತಿ ತುತ್ತಿಗೂ ಹಸಿವು ತೃಪ್ತಿಗಳ, ರುಚಿ ಅರುಚಿಗಳ ಭಾವ ಬದಲುವಂತೆ ವಾಲಿಕುಂಜದ ಶಿಖರಾರೋಹಣ ಮತ್ತೆ ಹೊಸದೇ ಸಂತೋಷದಲ್ಲಿ ನಮ್ಮನ್ನು ಬಳಲಿಸಿತು! ಯಾರೋ ಎಂದೋ ನೆತ್ತಿಯ ಕಲ್ಲಗುಪ್ಪೆಯಲ್ಲಿ ಊರಿದ್ದ ಕಂಬ ಶಿಥಿಲವಾದರೂ ದೃಢವಾಗಿ ನಿಂತಿತ್ತು. ಅದರೆತ್ತರದ ಯಾವುದೋ ವರ್ಣದ ಧ್ವಜ ಎಲ್ಲ ಕಳಚಿಕೊಂಡು ನಿರ್ವರ್ಣವಾಗಿಯೂ ಪಟಪಟಾಯಿಸುತ್ತಿದ್ದದ್ದು ನಮಗಂತೂ ಅರ್ಥಪೂರ್ಣ ಗಣರಾಜ್ಯೋತ್ಸವದ ಆಚರಣೆಯೇ ಆಯ್ತು. ಜೋಡಿ ಪಾದದಚ್ಚು ತುಂಡು ಕಗ್ಗಲ್ಲಿನ ಮೇಲೆ ಕೆತ್ತಿದ್ದು ಯಾರು ಬಿಟ್ಟರೋ ಯಾಕೆ ಬಿಟ್ಟರೋ. ಅದು ಕುಶಾಲಿನ ಕಥನದಲ್ಲಿ, ನನಗಂತೂ ಸುಗ್ರೀವನ ಅಕಾಲಿಕ ಯುದ್ಧದ ಕರೆ ಕೇಳಿ, ಕೋಪದಲ್ಲಿ ಅವುಡುಗಚ್ಚಿ ಎರಡೂ ಕಾಲೆತ್ತಿ ನೆಗೆದು ನೆಲ ಒದ್ದ ವಾಲಿಯ ಚಿತ್ರವೇ ಕಣ್ಣಿಗೆ ಕಟ್ಟುತ್ತಿತ್ತು. ಉಳಿದಂತೆ ಯಾರೋ ಶಿಬಿರ ಹೂಡಿ ಉಳಿಸಿದ ಒಲೆಯ ಕರಿಕು, ಬೇಜವಾಬ್ದಾರಿಯಿಂದ ಬಿಸಾಡಿದ ಕಸ, ‘ಅಜ್ಜಿ’ಯ ತಲೆ ಸುತ್ತಿದ ಸೆರಗಿನ ಅಂಚು ಎಲ್ಲಾ ಮೋಜಣಿ ಮಾಡಿದೆವು.

ರಾತ್ರಿ ಉಸ್ತುವಾರಿಯ ಚಂದ್ರನಿಗೂ ಅಂದು ಯಾಕೋ ಅವಸರ. ದಿನ ಬಿಟ್ಟು ತೆರಳಬೇಕಾದ ಸೂರ್ಯನಿಗ್ಯಾಕೋ ಉದಾಸೀನ. ಆದರೆ ಆತನ ಸೆಜ್ಜೆಮನೆ, ಪಡುಗಡಲು ರಂಗಾರಂಗೋಲಿ ಎಳೆದು, ಬಣ್ಣ ಕಳೆದುಕೊಂಡ ಮೋಡಗಳಿಗೆಲ್ಲ ಅಷ್ಟಿಷ್ಟು ಕುಂಕುಮ ಅರಶಿನ ಹಂಚಿ ಸಂಭ್ರಮಿಸಿತ್ತು. ಆತ ಕಿರಣ-ಕರವನ್ನು ಒಂದೊಂದಾಗಿ ಸಾಗರದ ನೀರಿಗಿಳಿಬಿಟ್ಟು ಬಿಸಿ-ಸ್ನಾನಕ್ಕೆ ಮುನ್ನ ಹದವನ್ನು ಪರೀಕ್ಷಿಸುತ್ತಿದ್ದಂತೆ, ಇತ್ತ ಪೂರ್ವಮೈಯಲ್ಲಿ ಕಾಡೊಳಡಗಿದ ಕತ್ತಲು ಶಿಖರದ ಮರೆಯಲ್ಲಿ ಮೆಲ್ಲನೆ ನಮ್ಮ ಶಿಬಿರತಾಣವನ್ನು ಮುಟ್ಟತೊಡಗಿತ್ತು. ಕ್ಷಣಕ್ಷಣವನ್ನೂ ಅನುಭವಿಸುವ ಎಲ್ಲಕ್ಕೂ ಕಣ್ಣಾಗುವ ಉತ್ಸಾಹ ನಮ್ಮದು. ಆದರೆ ಪೂರ್ಣ ಕತ್ತಲಲ್ಲಿ ಬಳಲಿದ ಕಾಲಿನಲ್ಲಿ ಆ ತೀವ್ರ ಇಳುಕಲು ಉತ್ತರಿಸಲು ಧೈರ್ಯ ಬರಲಿಲ್ಲ. ಪೂರ್ವ ತಪ್ಪಲಿನ ಶಿಖರದ ನೆರಳು ಗಾಢವಾಗುತ್ತಿದ್ದಂತೆ ನಾವೆಲ್ಲ ಶಿಬಿರ ಸೇರಿದೆವು.

ನಮ್ಮ ಶಿಬಿರಾಗ್ನಿ, ಅಡುಗೆ, ಬೆಳದಿಂಗಳ ರಾತ್ರಿ ಕಳೆದ ಪರಿ ನಿಜಕ್ಕೂ ಮನೋಹರವಾಗಿದ್ದಿರಬೇಕು. ಮರುದಿನದ ಶುಭೋದಯವನ್ನು ನಾವು ಮತ್ತೆ ಶಿಖರದೆತ್ತರದಲ್ಲೇ ಸ್ವಾಗತಿಸಿರಬೇಕು. ಮತ್ತೆ ಕಾಲಕಾಲಕ್ಕೆ ತಿಂಡಿತೀರ್ಥಗಳಲ್ಲೇನೂ ಕೊರತೆ ಮಾಡಿಕೊಳ್ಳದೆ ಹಿಂದಿರುಗುವಲ್ಲಿ ದಿನದುದ್ದಕ್ಕೆ ಶ್ರೇಣಿ ನೆತ್ತಿಯ ಜಾಡನ್ನು ಸವೆಸಿದ್ದೇವೆ. ಆದರೆ ಪೂರ್ತಿ ಅದೇ ಜಾಡಲ್ಲ. ಸುಳುಗೋಡು ಬರೆಯ ಜಾಡಿಗಿಂತ ತುಸು ಬಳಸಂಬಟ್ಟೆಯಾದರೂ ಹೆಚ್ಚು ಬಳಕೆಯಲ್ಲಿರುವ ಇನ್ನೊಂದನ್ನೇ ಹಿಡಿದು, ಸರಾಗ ನಡೆದು ಸಂಜೆ ಐದು ಗಂಟೆಗೆ ಸುಳುಗೋಡು ಮನೆ ಸೇರಿಕೊಂಡೆವು. ಅವರ ಒತ್ತಾಯದ ಆತಿಥ್ಯಕ್ಕೆ ಮಣಿದು ಇನ್ನೊಂದೇ ರಾತ್ರಿ ಕಳೆಯುವ ಮನಸ್ಸಿದ್ದರೂ ಸಮಯವಿಲ್ಲದ ವಿಷಾದದಲ್ಲಿ ಮಂಗಳೂರಿಸಿದ್ದೆವು.

[ಮುಂದಿನವಾರ: ಕಾಡುಬೆಟ್ಟ, ಯುರೇನಿಯಂ ನಿಕ್ಷೇಪ, ನಕ್ಸಲ್ ಆವಾಸಗಳೆಲ್ಲವಕ್ಕಿಂತಲೂ ಹೆಚ್ಚು ಅಪ್ಯಾಯಮಾನವಾದ ಹೊಸ ಅಂತಸ್ತು ಇಂದಿನ ವಾಲಿಕುಂಜಕ್ಕೆ ಇದೆ. ೧೦-೬-೧೨ರ ಚಾರಣದ ಬಿಸಿ ಆರುವ ಮೊದಲು ಬರೆದ ಕಥನಕ್ಕೆ ನೀವಿಗ ಏಳೇ ದಿನಗಳ ಅಂತರದಲ್ಲಿದ್ದೀರಿ!]

[ಒಂದು ಸ್ಪಷ್ಟೀಕರಣ: ಇದುವರೆಗಿನ ಅನುಭವ ಕಥನವನ್ನು ಇನ್ನೂ ಸೂಕ್ಷ್ಮದಲ್ಲಿ ಆದರೆ ಸಮರ್ಪಕ ಮುಕ್ತಾಯದೊಡನೆ ೧೯೯೧ರ ಮಾರ್ಚ್ ಸುಮಾರಿಗೆ ಉದಯವಾಣಿಗೆ ಕಳಿಸಿದ್ದೆ. ಕೆಲವೇ ದಿನಗಳಲ್ಲಿ ಪತ್ರಿಕಾ ಮಿತ್ರರಿಂದ “ಲೇಖನ ಕೂಡಲೇ ಪ್ರಕಟಿಸುವವರಿದ್ದೇವೆ. ಅದಕ್ಕೆ ಅಜೆಕಾರಿನತ್ತಣ ಒಂದು ಭವ್ಯ ಚಿತ್ರ ಇದ್ದಿದ್ದರೆ. . .” ಮಾತು ಬಂತು. ಆ ಸಂಜೆಯೇ ನಾನು, ಅರವಿಂದರೂ ಕ್ಯಾಮರಾ ಸಹಿತ ಒಂದು ಬೈಕೇರಿ ಅಜೆಕಾರಿಗೆ ಹೋಗಿ ಒಳ್ಳೇ ಚಿತ್ರಗಳನ್ನು ಮಾಡಿಸಿ ಕೊಟ್ಟೆವು. ಅದನ್ನೇನೋ ಪತ್ರಿಕೆ ಬಳಸಿತು (೨೧-೪-೧೯೯೧) ಆದರೆ ಲೇಖನದ ಉತ್ತರಾರ್ಧವನ್ನೇ ಪೂರ್ಣ ಕತ್ತರಿಸಿಬಿಟ್ಟಿತು. ನೆನಪಿರಲಿ, ಅವು ಗಣಕದ ದಿನಗಳಲ್ಲ ಮತ್ತು ನನ್ನಲ್ಲಿ ಕೈ ಬರಹದ ಇನ್ನೊಂದು ಪ್ರತಿ ಇರಲಿಲ್ಲ. ನನ್ನ ಅನುಭವಗಳ ಶಾಶ್ವತೀಕರಣದ ಮೋಹವೇನೂ ಇರಲಿಲ್ಲವಾದ್ದರಿಂದ ಅಂದು ಉದಾಸೀನನಾದೆ. ಇಂದು ಅವನ್ನು ಅದ್ವಿತೀಯ ಸಾಧನೆಗಳೆಂದು ಖಂಡಿತ ಅಲ್ಲ, ಮುಂದಿನವರಿಗೆ ಪ್ರೇರಣೆಗಾಗಿ ಇಲ್ಲಿ ದಾಖಲೀಕರಿಸಲು ಇಳಿದೆ. ಆದರೆ ಹೊಸ ಅನುಭವಗಳ ಭಾರದಲ್ಲಿ ಹಳೆ ನೆನಪು ಪೂರ್ಣ ಮಾಸಿ ಹೋಗಿ, ಅಂದು ಪ್ರಾತಿನಿಧಿಕವಾಗಿ ಮಾಡಿಟ್ಟ ನಕ್ಷೆಯಷ್ಟೇ ಒದಗಿದ್ದಕ್ಕೆ ಹೀಗೆ ನೀರಸ ಮುಕ್ತಾಯ ಹಾಡುವುದು ಅನಿವಾರ್ಯವಾಗಿದೆ, ಕ್ಷಮೆಯಿರಲಿ. ಇಂಥವೇ ಹಲವು ಪತ್ರಿಕಾ ಅನುಭವಗಳಿಂದ ರೋಸಿ ಹೋಗಿ, ನನ್ನ ಹಂಚಿಕೊಳ್ಳುವ ಉತ್ಸಾಹವೇ ಕುಂದಿಹೋಗಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ಈ ಜಾಲತಾಣ ಒದಗಿಸಿದ ಅವಕಾಶ ಮತ್ತು ನೀವೆಲ್ಲಾ ಕೊಟ್ಟ ಕುಮ್ಮಕ್ಕು ಬಿಡು ಸಮಯವನ್ನೆಲ್ಲ ಬರಹಕ್ಕೆ ಬಳಸುತ್ತಿವೆ. ಈಗ ಇನ್ನೂ ಹೆಚ್ಚಿನ ಬರಹಕ್ಕೆ ಬರಲಿ ನಿಮ್ಮ ಹೊಸ ಸ್ವಾನುಭವಾಧಾರಿತ ಪ್ರತಿಕ್ರಿಯೆ.]