“ಉರ್ಣಿಗೆ ಹೋಗ್ತೀರಾ?” ನಿರೇನ್ ಕೇಳಿದರು. ನನ್ನ ಅಂಗಡಿಯ ‘ಲೌಕಿಕ ಬಂಧನಗಳು’ ಪೂರ್ಣ ಕಳಚದೇ ನನ್ನ ‘ಬಿಸಿಲೆಯ ವನವಾಸ’ ಸಮರ್ಪಕವಾಗದೆಂದು ಚಡಪಡಿಸುತ್ತಿದ್ದೆ. ಅಷ್ಟರಲ್ಲಿ ಮಳೆಗಾಲದ ನಿರೀಕ್ಷೆಗಳು ಸೇರಿ ಮಲೆ (ಸುತ್ತುವ) ಕಾಲಕ್ಕೆ ಇನ್ನು ಕನಿಷ್ಠ ಮೂರು ತಿಂಗಳ ವಿರಾಮ ಎನ್ನುವ ಸ್ಥಿತಿಗೆ ಮನಸ್ಸು ಮುದುಡುತ್ತಿತ್ತು. ವಾಲಿಕುಂಜದ ಪೂರ್ವ ತಪ್ಪಲು, ಮೊದಲ ಮಳೆ ಬಂದು ನೀರು ಹಸಿರು ಧಾರಾಳವಾಗಿರುವ ಕಾಲ, ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದ (ಮುಂದೆಲ್ಲಾ ಹೇಳುವಂತೆ ಕುರಾಉ) ವ್ಯಾಪ್ತಿಯೊಳಗಿನ ಒಂದು ಹಳ್ಳಿ ಈ ಉರ್ಣಿ ಎಂದೆಲ್ಲಾ ಒಂದೇ ಬೀಸಿನಲ್ಲಿ ಮನಸ್ಸಿಗೆ ಬಂತು.

ಎಸ್ಕೇ ಬಾರ್ಡರ್ (ಹಳೆಯ ದ.ಕ. ಜಿಲ್ಲೆ ಚಿಕಮಗಳೂರು ಜಿಲ್ಲೆಯನ್ನು ಸಂಧಿಸುವ ಸ್ಥಳ. ಇಂದು ಅದು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿದ್ದರೂ ಹೆಸರು ಎಸ್ಕೆಯದ್ದೇ; ಮರ ಬಿದ್ದು ಹೋದರೂ ಹೆಸರು ನೇರಳಕಟ್ಟೆ!) ಮತ್ತು ಶೃಂಗೇರಿ ನಡುವಣ ದಾರಿಯಲ್ಲಿನ ನಾಲ್ಕು ಅಂಗಡಿಗಳ ಪುಟ್ಟ ಪೇಟೆ ಕೆರೆಕಟ್ಟೆ. ಅಲ್ಲಿಂದ ಪಶ್ಚಿಮಕ್ಕೆ ಹರಡಿದ ಮುಡುಬಾ ಪಂಚಾಯತಿನ ಒಂದು ಕಗ್ಗಾಡ ಮೂಲೆ ಹಳ್ಳಿ ಉರ್ಣಿ. ಅಲ್ಲಿನ ಹಳೆಯ, ಸಾಂಪ್ರದಾಯಿಕ ಕೃಷಿಕರು ಕುರಾಉ ಒಳಗೆ ಬಂದ ಮೇಲೆ ವಿಶೇಷ ಸಾಮಾಜಿಕ ಅಭಿವೃದ್ಧಿಗಳನ್ನು ನಿರೀಕ್ಷಿಸುವಂತಿರಲಿಲ್ಲ. ಮುಂದುವರಿದು ಕೃಷಿಗೆ ಪೂರಕವಾಗಿ ಒದಗುವ ಒತ್ತಿನ ಭೂಮಿಯ ಸಹಜ ನೀರು, ಜಾನುವಾರುಗಳ ಮೇಯುವ ನೆಲ ಮತ್ತು ಎಲ್ಲದರ ರಕ್ಷಣೆಯ ಹಕ್ಕುಗಳಲ್ಲಿ ತುಂಬಾ ನಿರ್ಬಂಧಗಳನ್ನು ಅನುಭವಿಸುತ್ತಿದ್ದರು. ಬದಲಿಗೆ ಅವರು ಬಯಸಿದರೆ, ಮರುವಸತಿ ಕೊಡುವ ಯೋಜನೆ ಏನೋ ಸರಕಾರದ ಬಳಿ ಇತ್ತು. ಆದರೆ ಸರಕಾರೀ ವ್ಯವಸ್ಥೆಯಲ್ಲಿ ಅದು ಕಾಗದಗಳಿಂದ ಭೂಮಿಗೆ ಇಳಿಯುವಲ್ಲಿ ಇನ್ನಿಲ್ಲದ ಸಬೂಬುಗಳು, ಅನಿವಾರ್ಯವಾಗಿಸುವ ನ್ಯಾಯಿಕ ಹೋರಾಟಗಳು, ಸರಕಾರದ ಅಮಾನುಷ ಶಕ್ತಿ ಎದುರು ದಿನೇ ದಿನೇ ಇಳಿಮುಖವಾಗುತ್ತಾ ಹೋಗುವ ಇವರ ಆದಾಯಮೂಲ – ನೂರೆಂಟು ಕೋಟಲೆಗಳು.

ಆರೋಗ್ಯವಂತ ವನಧಾಮ ಮನುಷ್ಯ ಸಂಬಂಧವೇ ಇಲ್ಲದ ದ್ವೀಪವಾಗಲು ಸಾಧ್ಯವೇ ಇಲ್ಲ. ಹಾಗೆಂದು ಅದು ವನ್ಯೇತರ ಚಟುವಟಿಕೆಗಳ ಸಹಯೋಗದಲ್ಲಿರುವುದೂ ಅವಾಸ್ತವಿಕ. ಇಂದು ಶುದ್ಧ ವನ್ಯವನ್ನು ಸಂತೃಪ್ತ ಸಮಾಜ ಸ್ವಾಗತಿಸುವಂತಾಗಲು ಸರಕಾರದ ‘ಯಜಮಾನಿಕೆಯ’ ಗತ್ತು ಬಹಳ ದೊಡ್ಡ ಅಡ್ಡಿ. ವಿಚಾರವಂತರು ಬೇರೆ ಬೇರೆ ಮುಖಗಳಲ್ಲಿ ಸರಕಾರಕ್ಕೆ ನೀವು ‘ಒಡೆಯರಲ್ಲ, ಸೇವಕರು’ ಎಂದು ಜ್ಞಾಪಿಸುತ್ತಲೇ ಪೂರಕವಾಗಿ ನೂರಾರು ಶಾಸನಗಳನ್ನು ರೂಪಿಸುವಲ್ಲಿ ಕಾರಣವಾಗುತ್ತಲೇ ಬಂದಿದ್ದಾರೆ. ಭ್ರಷ್ಟಾಚಾರ ನಿರ್ಮೂಲನ, ಲೋಕಾಯುಕ್ತ, ಮಾಹಿತಿ ಹಕ್ಕು, ಸಕಾಲ, ಏಕಕಿಂಡಿ ಸೌಕರ್ಯ ಮುಂತಾದವು ಅದರದೇ ಫಲಗಳು. ಹಲವು ಅರೆ ಸರ್ಕಾರಿ ಮತ್ತು ನೂರಾರು ಸ್ವಯಂ ಸೇವಾ ಸಂಸ್ಥೆಗಳ ದುಡಿಮೆಯ ಉದ್ದೇಶವಾದರೂ ಇದೇ ಆಗಿದೆ. ಹಾಗೇ ಸ್ಪಷ್ಟವಾಗಿ ಕುರಾಉವನ್ನೇ ಲಕ್ಷ್ಯದಲ್ಲಿಟ್ಟುಕೊಂಡು ವನ್ಯ ಸಂರಕ್ಷಣೆಗಾಗಿ ತೊಡಗಿದ ಸ್ವಯಂಸೇವಾ ಸಂಸ್ಥೆ ಕುದುರೆಮುಖ ವೈಲ್ಡ್ ಲೈಫ್ ಫೌಂಡೇಶನ್ (ಪರ್ಯಾಯವಾಗಿ ನಿರೇನ್ ಜೈನ್ ಅಥವಾ ನಿರೇನ್ ಎಂದೇ ಮುಂದೆ ಉಲ್ಲೇಖಿಸುತ್ತೇನೆ). ಇದು ತನ್ನ ವನ್ಯ ಸಂರಕ್ಷಣೆಯ ಕಾರುಬಾರಿನಲ್ಲಿ ಸ್ಥಳೀಯ ಜನಜೀವನದ ಸ್ವಾಸ್ಥ್ಯದ ಕುರಿತು ಸದಾ ಆದ್ಯತೆಯಲ್ಲೇ ಪರಿಗಣಿಸಿದೆ.

ಉಲ್ಲಾಸ ಕಾರಂತ ಮತ್ತು ಅವರಿಂದ ಈ ವಲಯಗಳಲ್ಲಿ ಖ್ಯಾತವಾದ ವೈಲ್ಡ್ ಲೈಫ್ ಕನ್ಸರ್ವೇಶನ್ ಸೊಸಾಯಿಟಿ (ಡಬ್ಲ್ಯು.ಸಿ.ಎಸ್., ನ್ಯೂಯಾರ್ಕ್) ಬಲು ದೊಡ್ಡ ಪ್ರೇರಣಾ ಶಕ್ತಿ. ಕೆ.ಎಂ. ಚಿಣ್ಣಪ್ಪ ಮತ್ತು ಅವರ ನೇತೃತ್ವದ ವೈಲ್ಡ್ ಲೈಫ್ ಫಸ್ಟ್!, ಈ ರಾಜ್ಯದಲ್ಲಿ ಸ್ಪಷ್ಟ ವನ್ಯಸಂರಕ್ಷಣೆಯ ಚಟುವಟಿಕೆಯ ಕೇಂದ್ರ. ಇದು ಪ್ರಾದೇಶಿಕವಾಗಿ ಉತ್ಸಾಹದ ಬಂಡವಾಳದಲ್ಲಿ ನಡೆಯುತ್ತಿರುವ ಹಲವು ಪ್ರಕೃತಿಪರ ಚಟುವಟಿಕೆಗಳಿಗೆ ಕಾರಣರಾದ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಪ್ರಭಾವಿಸಿ, ಹೆಚ್ಚಿನ ಕಾರ್ಯತತ್ಪರವಾಗಿಸುವಲ್ಲಿ ಯಶಸ್ವಿಯಾಗಿದೆ. ನಾಗರಹೊಳೆ ವ್ಯಾಘ್ರಧಾಮದೊಳಗೆ ತಮ್ಮ ಇರವಿಗೆ ಸ್ಪಷ್ಟ ಕಾರಣಗಳು ಇಲ್ಲದ, ಕನಿಷ್ಠ ಭೂ ದಾಖಲೆಗಳೂ ಇಲ್ಲದ ಅಸಂಖ್ಯರಿದ್ದರು. ಅವರಿಗೆ ವನ್ಯದ ಪರಿಧಿಯ ಹೊರಗೆ ಗೌರವಯುತವಾದ ನೆಲ, ವಸತಿ, ವೃತ್ತಿಯನುಕೂಲಗಳನ್ನು ಸರಕಾರದಿಂದಲೇ ಕಾರ್ಯಗತ ಮಾಡಿಸಿದ್ದು ಇದೇ ಬಳಗ. ಮುತ್ತೋಡಿ ಕೇಂದ್ರವಾದ ಭದ್ರಾ ವನಧಾಮ (ಬಂಡೀಪುರ, ನಾಗರಹೊಳೆಗಳಿಗೆ ಹೋಲಿಸಿದರೆ) ಈಚಿನ ಘೋಷಣೆ. ಅಲ್ಲಂತೂ ವೈಲ್ಡ್ ಕ್ಯಾಟ್ ಸಿ ಗೆಳೆಯರು ದಾಖಲೆಯ ಮಟ್ಟದ ಭಾರೀ ಕೆಲಸ ಮಾಡಿದರು. ಸರಕಾರದಿಂದಲೇ ಗೌರವಪೂರ್ಣ ಮರುವಸತಿ ಯೋಜನೆ, ಹಣಕಾಸಿನ ವ್ಯವಸ್ಥೆ ರೂಪಿಸಿದರು ಮತ್ತು ನೆಲದಲ್ಲಿ ಸಂಪೂರ್ಣ ಜ್ಯಾರಿಗೊಳ್ಳುವಂತೆ ನೋಡಿಕೊಂಡರು. ಹದಿನಾಲ್ಕಕ್ಕೂ ಮಿಕ್ಕು ಹಳ್ಳಿ, ಅಂದರೆ ಸುಮಾರು ನಾನೂರಕ್ಕೂ ಮಿಕ್ಕು ಕುಟುಂಬಗಳನ್ನು ವನಧಾಮದ ಹೊರಗೆ ದೃಢ ಮರುವಸತಿ ಮತ್ತು ವೃತ್ತಿಜೀವನದಲ್ಲಿ ನೆಲೆಸುವಂತೆ ಆದದ್ದು ಕುರುಡು ಅಭಿವೃದ್ಧಿ ಮಂತ್ರ ಜಪಿಸುವವರೆಲ್ಲರಿಗೂ ಅನುಸರಣೀಯ ಆದರ್ಶವಾಗಬೇಕು. ಇಂದಿಗೂ ವನಧಾಮದ ಹೊರಗಿನ ಎಷ್ಟೋ ಇತರ ಹಳ್ಳಿಗರು ಹಿಂದಿನ ಮುತ್ತೋಡಿಯವರನ್ನು ನೋಡಿಕೊಂಡು ತಮಗೆ ‘ವನಧಾಮ ಸಂತ್ರಸ್ತರಾಗುವ ಭಾಗ್ಯ’ ಬರದಿರುವುದಕ್ಕೆ ಕೊರಗುತ್ತಾರಂತೆ!

ನಾಗರಹೊಳೆ, ಮುತ್ತೋಡಿಗಳಲ್ಲಿ ಬಯಲು ಸೀಮೆಯ ಸಾಮಾಜಿಕ ವ್ಯವಸ್ಥೆ. ಕೃಷಿ ಭೂಮಿ ಎಲ್ಲೇ ಇರಲಿ, ಕೃಷಿಕರ ವಸತಿ ಗೃಹಗಳು ಹೆಚ್ಚುಕಡಿಮೆ ಒಂದೇ ವಠಾರದಲ್ಲಿರುತ್ತವೆ. ಮರುವಸತಿ ಕಾಣಿಸುವಲ್ಲಿ ಯಾವುದೇ ವ್ಯವಸ್ಥೆಯನ್ನು ಸಾಮೂಹಿಕ ನೆಲೆಯಲ್ಲಿ ರೂಪಿಸುವುದು ಸಾಧ್ಯ. ಆದರೆ ಕರಾವಳಿ, ಮಲೆನಾಡು ಪ್ರಭಾವದ ಕುರಾಉ ವಲಯದಲ್ಲಿ ಎಲ್ಲವೂ ವಿಕೇಂದ್ರಿತ. ಸಾಲದ್ದಕ್ಕೆ ದಕ, ಉಡುಪಿ ಮತ್ತು ಚಿಕ್ಕಮಗಳೂರು ಎಂಬ ಮೂರು ಜಿಲ್ಲೆಗಳ ಅರ್ಥಾತ್ ವಿಭಿನ್ನ ಆಡಳಿತ ವಲಯಗಳಲ್ಲಿ ಹಂಚಿಹೋಗಿವೆ. ಸಂಪರ್ಕ, ಓಡಾಟ, ಪ್ರಾದೇಶಿಕ ಪ್ರಭಾವಗಳೂ ಅಷ್ಟೇ ವಿಭಿನ್ನ. ಸಂಸೆಯಾಚಿನ ಹಳ್ಳಿ ಕುತ್ಲೂರು ಮತ್ತೆ ಕುದುರೆಮುಖ ಪಟ್ಟಣದ ಒತ್ತಿನ ಹಳ್ಳಿ ಸಿಂಗ್ಸರಗಳ ಮರುವಸತಿಯ ಕಾಲಕ್ಕೆ ನಾನೂ ನಿರೇನರ ಒಂದೆರಡು ಓಡಾಟಕ್ಕೆ ಜೊತೆಗೊಟ್ಟಿದ್ದೆ. (ಆ ವಿವರಗಳನ್ನು ನಿರೇನ್ನೇ ದಾಖಲಿಸುವಂತಾದರೆ ಸಾಮಾಜಿಕ ಅಧ್ಯಯನ ವಿಷಯದಲ್ಲಿ ಅಪೂರ್ವ ಕೊಡುಗೆಯಾಗುತ್ತದೆ) ಸುಮಾರು ಅರವತ್ತು ವರ್ಷಗಳ ಹಿಂದೆ, ಕಾರ್ಕಳ ಸಮೀಪದ ಕುಗ್ರಾಮದಿಂದ ಕಳಸ ಸಮೀಪದ ಇನ್ನೊಂದೇ ಕುಗ್ರಾಮದ ತೋಟಕ್ಕೆ ಕೇವಲ ಹೊಟ್ಟೆಪಾಡಿಗಾಗಿ ಅಪ್ರಾಯಸ್ಥ, ಅನಕ್ಷರಸ್ಥ ಹುಡುಗನೊಬ್ಬ ಬಂದ. ಅಲ್ಲಿ ಕೂಲಿಯಾಗಿ ಗಳಿಸಿದ ಪುಡಿಗಾಸು ಮತ್ತು ಅಪಾರ ಶ್ರಮದೊಡನೆ ಮತ್ತೂ ಹತ್ತು ಹನ್ನೆರಡು ಕಿಮೀ ಕಗ್ಗಾಡಿನ ಒಳಗೆ ಈತ ತನ್ನ ಜೀವನ ಕಟ್ಟಿದ. ಇಂದು ಆರೆಂಟು ಎಕ್ರೆಯ ಸುವ್ಯವಸ್ಥಿತ, ಸುಫಲ ಭೂಮಿ, ಮನೆ, ಕುಟುಂಬ ಸಾಧಿಸಿದ ಒಂದೇ ಕಥೆ ಸಾಕು. ಅಂಥ ಒಂದೊಂದೂ ವ್ಯಕ್ತಿ, ಭಾವನೆಗಳು ಎಷ್ಟೇ ನವಿರಾದ ಕಾನೂನನ್ನೂ ನಿರುತ್ತರವಾಗಿಸುವುದರಲ್ಲಿ ಸಂಶಯವೇ ಇಲ್ಲ. ಆದರೂ ದೊಡ್ಡ ಆಶಯವೊಂದರಲ್ಲಿ ಅಂಥವರನ್ನು ಪ್ರಥಮತಃ ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿಯೂ ಒಳಗೊಳ್ಳುವ ಕೆಲಸವನ್ನು ನಿರೇನ್ ಮಾಡುತ್ತಲೇ ಬಂದಿದ್ದಾರೆ. ಅದರಲ್ಲಿ ಹೊಸ ಅಧ್ಯಾಯ ಪ್ರಸ್ತುತ ಉರ್ಣಿ.

ಕೆರೆಕಟ್ಟೆ ವಲಯದಲ್ಲಿ ಕುರಾಉ ವಿರುದ್ಧ ಕೆಲವು ‘ಜನಪ್ರಿಯ’ ಚಳವಳಿಗಳು ಪ್ರಚಾರಪಡೆದದ್ದು ಇವೆ. ವೃತ್ತಿ ವಾಸ್ತು-ತಂತ್ರಜ್ಞನಾದ ನಿರೇನ್‌ಗೆ ವನ್ಯ ಸಂರಕ್ಷಣೆ ಯಾವ ಮುಖದಲ್ಲೂ ಜೀವನಯಾಪನೆಯ ತುರ್ತು ಅಲ್ಲ. ಆದರೆ ಅಂತಃಬೋಧನೆಯ ಸಂಕಲ್ಪವಂತೂ ಹೌದೇ ಆದ್ದರಿಂದ ಕುರಾಉ ವಲಯದ ಎಲ್ಲ ಕಡೆಗಳಂತೆ ಇಲ್ಲೂ ತನ್ನ ಚಟುವಟಿಕೆಯನ್ನಷ್ಟೇ ಪ್ರಚುರಿಸಿಬಿಟ್ಟಿದ್ದರು. ಚಳವಳಿಗಳ ಮುಖ ವಿಕಾರವಾಗುತ್ತಿದ್ದಂತೆ, ಸರಕಾರಿ (ಮುಖ್ಯವಾಗಿ ನಿಧಾನ) ದ್ರೋಹ ಜೀವಮಾನದುದ್ದಕ್ಕೂ ಕಾಡುವುದು ಮನಗಾಣುತ್ತಿದ್ದಂತೆ ಉರ್ಣಿ ವಲಯದ ಹಲವು ಕುಟುಂಬಗಳು ನಿರೇನ್ ಸಂಪರ್ಕ ಬೆಳೆಸಿದವು. ಘಟ್ಟ ಹತ್ತಿ ಸುಮಾರು ತೊಂಬತ್ತು ಕಿಮೀ ಅಂತರದ ಉರ್ಣಿಗೆ ದೈನಂದಿನ ಓಡಾಟ, ಚರ್ಚೆ, ದಾಖಲೆಗಳ ತನಿಖೆ ಮುಂತಾದವು ನಿರೇನ್‌ಗೆ ಸುಲಭ ಸಾಧ್ಯವಾಗಿರಲಿಲ್ಲ. ಆಗ ಆ ವಲಯದ ಆಪ್ತ ಸಹಾಯಕನಾಗಿ ಒದಗಿದ ಯುವ ಮಿತ್ರ – ಆಕರ್ಷ್.

ಆಕರ್ಷ್ ಚಿಕ್ಕಮಗಳೂರು ಸಮೀಪದ ಕೃಷಿಕರ ಮಗ. ಆಸಕ್ತಿ ಮತ್ತು ಬುದ್ಧಿವಂತಿಕೆ ಇವರನ್ನು ಕೃಷಿ ಅರ್ಥಶಾಸ್ತ್ರ ಹಾಗೂ ಗ್ರಾಮೀಣ ಅಭಿವೃದ್ಧಿಗಳಲ್ಲಿ ಮೂರು ವಿದೇಶೀ ವಿವಿ (ಜರ್ಮನಿ, ಬೆಲ್ಜಿಯಂ ಮತ್ತು ಇಟಲಿ) ಸೇರಿದಂತೆ ಉನ್ನತವ್ಯಾಸಂಗಕ್ಕೂ ಕೊನೆಯಲ್ಲಿ ಬೆಂಗಳೂರಿನ ಕೃಷಿ ವಿವಿಯಲ್ಲಿ ಉನ್ನತ ಹುದ್ದೆಗೂ ಸಹಜವಾಗಿ ಸೆಳೆದಿತ್ತು. ಆದರೆ ಬಾಲ್ಯದಲ್ಲೆ ಕೃಷಿ ಹಿನ್ನೆಲೆಯೊಡನೆ ಸುಲಭವಾಗಿ ಒದಗುತ್ತಿದ್ದ ಪ್ರಾಕೃತಿಕ ಸತ್ಯಕ್ಕೆ ಆಕರ್ಷಿತನಾದ ಆಕರ್ಷ್. ಮತ್ತೆ ಡಿವಿ ಗಿರೀಶರ ಪ್ರಭಾವಕ್ಕೊಳಗಾಗಿ ವೈಲ್ಡ್ ಕ್ಯಾಟ್ ಸಿಯ ಸದಸ್ಯನಾಗಿ ಸಾಕಷ್ಟು ವನ್ಯ ಸಂರಕ್ಷಣಾ ಚಟುವಟಿಕೆಗಳಲ್ಲೂ ಪಾಲುದಾರನಾಗಿದ್ದರು. ಕಾಲದ ಸಂಚಿನಲ್ಲಿ ಆಕರ್ಷರ ತಂದೆ ಅಕಾಲದಲ್ಲಿ ಗತಿಸಿದಾಗ, ತಾಯಿಯ ಜೊತೆಗೆ ತೋಟದ ಉಸ್ತುವಾರಿಗೆ ಸ್ವತಃ ಆಕರ್ಷ್ ನಗರದ ಹುದ್ದೆ ತೊರೆದು ಬಂದರು. ಅಲ್ಲಿ ಕಲಿಕೆಯ ಬಲದ ಅನ್ಯ ಉದ್ಯೋಗಾಸಕ್ತಿಗಳನ್ನು ನಿರಾಕರಿಸಿ, ಮನಸ್ಸಿನ ಕರೆಗೆ ಓಗೊಟ್ಟದ್ದು ವನ್ಯ ಸಂರಕ್ಷಣೆಗೆ ಬಲ ತಂದಿತು. ಉರ್ಣಿಯಲ್ಲಿನ ಎಲ್ಲ ಕುಟುಂಬಗಳೂ ಇಂದು ಕುರಾಉ ಹೊರಗೆ ಸಂತೃಪ್ತ ಮರುವಸತಿ ಕಾಣುವಲ್ಲಿ ಸ್ವತಃ ನಿರೇನೇ ಹೇಳಿದಂತೆ ಆಕರ್ಷ್ ಪಾತ್ರ ಬಹಳ ದೊಡ್ಡದು.

“ಹತ್ತು ದಿನಗಳ ಹಿಂದೆ ಸುಮಾರು ಹನ್ನೆರಡು ಕುಟುಂಬ ಹೊರಗೆ ಹೋದವು. ಇನ್ನು ಎರಡೋ ಮೂರೋ ದಿನದಲ್ಲಿ ಕೊನೆಯ ನಾಲ್ಕು ಕುಟುಂಬಗಳು ಮನೆ ಖಾಲಿ ಮಾಡಿ, ಸ್ವತಃ ತೋಟ ಧ್ವಂಸ ಮಾಡಿ ಉರ್ಣಿ ತೊರೆಯುತ್ತಿವೆ. ನೋಡಲು ಹೋಗ್ತೀರಾ” ಎಂದೇ ನಿರೇನ್ ನನ್ನನ್ನು ಕೇಳಿದ್ದರು. ನನಗೆ ಅನ್ಯ ಒತ್ತಡಗಳಲ್ಲಿ ಹೋಗಲಾಗಲಿಲ್ಲ. ಆದರೇನು, ಹಿಂಬಾಲಿಸಿದ ಆದಿತ್ಯವಾರದಂದೇ ನಮ್ಮ ಬಳಗ ಉರ್ಣಿ ನೋಡುವುದರೊಡನೆ ವಾಲಿಕುಂಜಕ್ಕೂ ಹೋಗಿ ಬಂದದ್ದು ಸಣ್ಣ ಅನುಭವವೇನೂ ಅಲ್ಲ. ನಮ್ಮ ಈಚಿನ ಬಿಸಿಲೆ, ಪಾಂಡರಮಕ್ಕಿ ಮೊದಲಾದ ವನ್ಯ ಪರ ಚಾರಣಗಳಲ್ಲಿ (ಕಾಡಿನಲ್ಲಿ ಗಮ್ಮತ್ತು/ ಮಝಾ ಅಲ್ಲ) ಭಾರೀ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವ ಸಾಫ್ಟ್‌ವೇರ್ ಜಗತ್ತಿನ ಹಾರ್ಡ್‌ಕೋರ್ ವನ್ಯಪ್ರೇಮಿಗಳು ಏಳು ಮಂದಿ. ಉಳಿದಂತೆ ನಿರೇನ್, ಅವರ ಒಬ್ಬ ವೃತ್ತಿ ಸಹಾಯಕ, ಸುಂದರರಾವ್ ಮತ್ತು ನಾನೂ ಸೇರಿ ಮಂಗಳೂರು ತಂಡದ ಸದಸ್ಯರು ಹನ್ನೊಂದು. ಅತ್ತ ಚಿಕಮಗಳೂರಿನಿಂದ ಗಿರೀಶ್ ಮತ್ತು ಆಕರ್ಷ್ ಒಟ್ಟು ಹದಿನಾಲ್ಕು ಮಂದಿಯ ತಂಡ ಹೊರಡಿಸಿದ್ದರು. ಎಲ್ಲ ಬೆಳಿಗ್ಗೆ ಒಂಬತ್ತು ಗಂಟೆಯ ಸುಮಾರಿಗೆ ಕೆರೆಕಟ್ಟೆಯಲ್ಲಿ ಸಂಗಮಿಸಿದೆವು.

ನಿರೇನ್ ವನ್ಯ ಚಟುವಟಿಕೆಗಳಿಗೆ ಸಮರ್ಥ ವೃತ್ತಿ ಸಹಾಯಕರಾಗಿಯೇ ಬೇರೆ ಬೇರೆ ವಲಯಗಳಲ್ಲಿ ದುಡಿಯುತ್ತಿರುವವರು ರಾಮಚಂದ್ರ ಭಟ್ ಮತ್ತು ಧರ್ಣಪ್ಪ. ಚಳಿ, ಮಳೆ, ತಲೆ ಸುಡುವ ಬಿಸಿಲು, ಮನೆ/ಪೇಟೆ ದೂರವಾದ ರಾತ್ರಿಯೆಂದು ಯಾವ ಬೇಧ ಮಾಡದೇ ನಿತ್ಯ ಜನ ಸಂಪರ್ಕದಲ್ಲಿರುವವರು ಇವರು. ಎಲ್ಲ ಕಡೆಗೆ, ಎಲ್ಲ ಋತುಗಳಲ್ಲಿ ಬೈಕ್ ಓಡಾಡಿಸುವ ಅನುಕೂಲ ಇರುವುದಿಲ್ಲ. ಆದರೆ ಕೆಲಸವಾಗಬೇಕಾದರೆ ಒಬ್ಬೊಬ್ಬರೇ ಕಿಮೀಗಟ್ಟಳೆ ನಡೆದು, ಅವರಿವರನ್ನು ಕರೆದೊಯ್ಯುವ ಅನಿವಾರ್ಯತೆ ಬಂದಾಗ ಜೀಪ್ ಮಾಡಿಯಾದರೂ ಇವರು ಹೋಗಲೇ ಬೇಕು. ಯಾವುದೇ ಸ್ಥಳವನ್ನು, ವ್ಯಕ್ತಿಯನ್ನು ಇವರು ಹತ್ತು, ನೂರು ಸಲವಾದರೂ ಸಬಹುದೆಂದು ಕಗ್ಗಾಡಮೂಲೆಯ ಹಳ್ಳಿಗರಾದರೂ ಸರಿ, ಭೂ ದಾಖಲೆಗಳಿಗಾಗಿ ಕಛೇರಿಗಳಾದರೂ ಸೈ, ಕೊನೆಗೆ ಎರಡರ ನಡುವಿನ ಕೊಂಡಿ ವಕೀಲರುಗಳ ಬಳಿಯೂ ಇವರೇ. “ಯಾವುದೇ ಠಕ್ಕು ಮಾತಿಲ್ಲದೆ ಹಳ್ಳಿಗರ ಕಷ್ಟ ಸುಖ ನೋಡಿ, ಕೇಳಿ, ಪರಿಹಾರಕ್ಕೆ ಹಗಲೆಲ್ಲಾ ಓಡಾಡಿ ದಣಿದಿರುತ್ತಾರೆ. ಆದರೂ ಒಮ್ಮೊಮ್ಮೆ ಸಂಜೆ ಅದೇ ಹಳ್ಳಿಗನಿಂದ ವಾಚಾಮಗೋಚರ ಬೈಸಿಕೊಳ್ಳುವ ಭಾಗ್ಯ ಇವರದು. ಮದಿರಾದೇವಿ – ಹೌದು ಕಾರಣ ಅದೇ, ಇಳಿದ ಮೇಲೆ, (ಹೆಚ್ಚಾಗಿ ಮರುದಿನ ಬೆಳಿಗ್ಗೆ,) ಮೊದಲಿಗಿಂತಲೂ ಅವರ ಹೆಚ್ಚಿನ ಪ್ರೀತಿಯೂ ಇವರಿಗೇ” ಎಂದು ನಿರೇನ್ ಹೇಳುತ್ತಿರುತ್ತಾರೆ!

ರಾಮಚಂದ್ರ ಭಟ್ಟರು (ಬೆಳ್ತಂಗಡಿಯಿಂದ) ಬೈಕಿನಲ್ಲಿ ಮುಂದಾಗಿ ಬಂದು ಇಪ್ಪತ್ತೈದರ ತಂಡಕ್ಕೆ ಕುರಾಉ ಪ್ರವೇಶಿಸಲು ಸೂಕ್ತ ಹಣ ತುಂಬಿ, ಬೇಕಾದ ಅನುಮತಿ ಪತ್ರ ಮತ್ತು ಗಾರ್ಡ್/ಮಾರ್ಗದರ್ಶಿ – ರವೀಂದ್ರನನ್ನು ಸಜ್ಜುಗೊಳಿಸಿ ಕಾದಿದ್ದರು. ನಮ್ಮೆರಡು ಕಾರುಗಳನ್ನು ಅಲ್ಲೇ ಇಲಾಖೆಯ ಕಛೇರಿ ಎದುರು ಬಿಟ್ಟು ಎಲ್ಲ ಚಿಕಮಗಳೂರಿನವರ ಒಂದು ಜಿಪ್ಸಿ, ಎರಡು ಜೀಪುಗಳಿಗೆ ತುಂಬಿಕೊಂಡೆವು. ಯುರೇನಿಯಮ್ ಪರೀಕ್ಷೆಯವರು ರೂಪಿಸಿದ ಮಣ್ಣದಾರಿಗಿಳಿದೆವು. ಹಿಂದೆ ಬಿಸಿಲಿನ ದಿನಗಳಲ್ಲಿ ವಿನಯ್ ಬೋಸ್‌ನ ‘ದ ಪಬ್ಲಿಕ್’ ಕಟ್ಟಿಕೊಂಡು ಬಂದಾಗ ನಾವು ಅನುಸರಿಸಿದ್ದ ದಾರಿಯೇ ಇರಬೇಕು. ಮಳೆಗಾಲಕ್ಕೆ ಸರಿಯಾಗಿ ದಾರಿ ಒಂದೆರಡು ಕಡೆ ‘ಕೆಸರ ಗದ್ದೆ.’ ಆದರೆ ತೀವ್ರ ಏರಿಳಿತಗಳಿಲ್ಲದೆ ಮೊದಮೊದಲ ಓಟವಂತು ನಿರ್ವಿಘ್ನವಾಗಿತ್ತು. ಎಂದಿನಂತೆ ಪ್ರಧಾನಮಂತ್ರಿಯ ಗ್ರಾಮ ರಸ್ತೆ (ಸಡಕ್) ಎಂಬ ವಿಚಿತ್ರ ಯೋಜನೆ ಇಲ್ಲೂ ಮಧ್ಯದಲ್ಲೆಲ್ಲೋ ತುಣುಕು ನೆಲದಲ್ಲಿ ಶೋಭಿಸುತ್ತಿತ್ತು. ನೆಲ ಸರಿ ಮಾಡುವ, ಅಂಚು ಕಟ್ಟುವ, ಚರಂಡಿ ಬಿಡಿಸುವ ಕಾಮಗಾರಿಗಳೇನೂ ಮಾಡದೆ ಒಂದಷ್ಟು ಉದ್ದಕ್ಕೆ ಡಾಮರಲ್ಲ, ಕಾಂಕ್ರಿಟನ್ನೇ ಸುರಿದು ಬಿಟ್ಟಿದ್ದರು. ಏರು ಪೇರು ಹೊಂಡಬಿದ್ದು ಕೆಲಸದ ಗುಣಮಟ್ಟವನ್ನು ಸಾರುವುದರೊಡನೆ, ಇದಕ್ಕಿಂತ ಬರಿಯ ಮಣ್ಣದಾರಿ ಸಾಕಿತ್ತು ಅನಿಸಿಬಿಟ್ಟಿತು. ಭಾರೀ ಕಾಡೇನೂ ಇರಲಿಲ್ಲವಾದರೂ ಬೀಸುಗಾಳಿಗೆ ಕಳಚಿ ಬಿದ್ದ ಕುಂಬು ಮರಕ್ಕೆ ಪ್ರಧಾನ ಮಂತ್ರಿಯವರ ಯೋಜನೆಯ ಮರ್ಯಾದೆಯೂ ಕಾಣಲಿಲ್ಲ, ಕರೆಗೆ ನೂಕಿ ಬಳಸುವ ಜನವೂ ಇರಲಿಲ್ಲ! ಸಣ್ಣಪುಟ್ಟವೇ ಕೊಂಬೆ, ಮರಗಳಾದ್ದರಿಂದ (ಕಾಡುದಾರಿಗೆ ಸಜ್ಜುಗೊಂಡ ಆಕರ್ಷ್ ಜೀಪಿನಿಂದ ಕತ್ತಿ ತೆಗೆಯುವ ಮೊದಲು) ಎಳೆದು ಕರೆಗೆ ಹಾಕಿ ಮುಂದುವರಿದೆವು. ಪುಣ್ಯಕ್ಕೆ ಪುಟ್ಟ ಪುಟ್ಟ ಸೇತುವೆಗಳು ಯುರೇನಿಯಮ್ ಪರೀಕ್ಷೆಯ ಲಾರಿಗಳಿಗಳಿಗಾಗಿಯೇ ರಚನೆಯಾದ್ದಕ್ಕೋ ಏನೋ ಯಾವವೂ ಬಾಯಿ ಬಿಟ್ಟಿರಲಿಲ್ಲ. ಸುಮಾರು ಏಳು ಕಿಮೀ ಪಯಣಿಸಿ, ಸಹಜ ಕಾಡು ಆರಂಭವಾದಲ್ಲೇ ಭಾರೀ ಮರ ಬಿದ್ದಲ್ಲಿಗೇ ಜೀಪು ಬಿಟ್ಟು, ಚಾರಣಕ್ಕಿಳಿದೆವು.

ಸುಲಭ ಅರಣ್ಯೀಕರಣಕ್ಕೋ ‘ವ್ಯರ್ಥ’ ಹುಲ್ಲ ಹಾಸನ್ನು ‘ಅರ್ಥ’ಪೂರ್ಣ ಕಾಡು ಮಾಡುವ ಯೋಜನೆಯಲ್ಲೋ ಚದುರಿದ ಅಕೇಸಿಯಾ ವನಗಳು ದಾರಿಯ ಎಡ ಪಕ್ಕದ ಬಾಣೆಗಳಲ್ಲಿ ಹರಡಿದ್ದವು. ಆದರೆ ಈಚಿನ ಬೆಂಕಿ ಪ್ರಕರಣದಲ್ಲಿ ಎಲ್ಲ ಸುಟ್ಟು ಕರಿಕಂಬಗಳಾಗಿ ನಿಂತದ್ದಕ್ಕೆ ಅಳಬೇಕೋ ಪ್ರಾಕೃತಿಕ ನ್ಯಾಯ ಎನ್ನಬೇಕೋ ಹೇಳುವುದು ಕಷ್ಟ. ದಾರಿಗೆ ಅಡ್ಡಬಿದ್ದ ಮರವನ್ನು ಸಣ್ಣದಾಗಿ ಬಳಸಿ ನಡೆದೆವು. ಮುಂದೆ ಸ್ವಲ್ಪದರಲ್ಲೇ ನಮ್ಮೆದುರು ಹುಲ್ಲು ಮೈಯ ಸಣ್ಣ ಏರಿನ ಕೊನೆಯಲ್ಲೇ ಬೆಟ್ಟ ಸಾಲಿನ ಉನ್ನತ ರೇಖೆ ಕಾಣಿಸಿತು. ದಾರಿ ಉತ್ತರಕ್ಕೆ ಹೊರಳಿ ಬಹುಶಃ ಶ್ರೇಣಿಯ ಪೂರ್ವ ತಪ್ಪಲಲ್ಲೇ ಎಲ್ಲೋ ಪರಮಾಣು ಇಲಾಖೆಯ ಹಳೆಯ ಶಿಬಿರತಾಣಕ್ಕೋ ಯುರೇನಿಯಂ ಪರೀಕ್ಷಾ ತೂತುಬಾವಿಗೋ ಹೋಗುವಂತಿತ್ತು. ನಾವು ಶಿಖರಸಾಲನ್ನು ಸೇರಿದೆವು.

ಮೋಡ ಸಂಚಾರ ಅಷ್ಟೇನೂ ದಟ್ಟವಿರಲಿಲ್ಲ. ಆದರೆ ನಾವು ತಲಪಿದ ಎತ್ತರದ ಪಶ್ಚಿಮ ಅಂಚನ್ನೂ ಆಚಿನ ಕರಾವಳಿಯ ಕೊಳ್ಳವನ್ನೂ ಮರೆಮಾಡುವಷ್ಟು ಇತ್ತು. ನಾವು ಅವಸರ ಮಾಡದೆ ಗಡಿರೇಖೆಯನ್ನು ಸ್ಪಷ್ಟಪಡಿಸುವ ಕಲ್ಲಗುಪ್ಪೆಗಳಿಂದ ಗುಪ್ಪೆಗೆ ಹೋಗುವ ಸ್ಪಷ್ಟ ಸವಕಲು ಜಾಡಿನೊಡನೇ ಉತ್ತರಮುಖಿಗಳಾದೆವು. ಕೆರೆಕಟ್ಟೆ ವಲಯದಲ್ಲಿ ಮಳೆ ಒಂದೋ ಎರಡೋ ದಿನದ ಹಿಂದಷ್ಟೇ ಬಂದಿರಬೇಕು. ಹಾಗಾಗಿ ಪೂರ್ವ ತಪ್ಪಲಲ್ಲಿ ಇದ್ದಷ್ಟು ಹೊತ್ತು ತುಸು ಸೆಕೆ ಎನಿಸಿತ್ತು. ಆದರೆ ಒಮ್ಮೆ ಆ ‘ಗೋಡೆ’ ಕಳಚಿದ್ದೇ (ಶಿಖರ ಸಾಲು ಸೇರಿದ್ದೇ) ಎಲ್ಲ ತಂಪಾಯ್ತು. ಮೋಡದ ಛತ್ರಿ ಬಿಡಿಸಿ, ಚಿನ್ನಾಟವಾಡುವ ಎಳೆಗಾಳಿ ಜೊತೆಗಿಟ್ಟುಕೊಂಡು, ಹಸುರಿನ ವಿಸ್ತಾರ ಹುಲ್ಲುಗಾವಲಿನಲ್ಲಿ ವಿಹಾರ ಹೊರಟ ಭಾವ ನಮ್ಮದು. ಯಾವ ಕ್ಷಣದಲ್ಲೂ ಯಾವ ದಿಕ್ಕಿನಲ್ಲೂ ನಮಗೆ ಕಾಟಿ, ಕಡವೆಯಾದಿ ವನ್ಯಜೀವಿಗಳ ದರ್ಶನ ಸಾಧ್ಯತೆ ಇತ್ತು. ಅದಲ್ಲದಿದ್ದರೆ, ಚಿತ್ರ ಗೀತೆಗೆ ಕಳಪೆ ಮೈಕ್ ಇಟ್ಟ ಹಾಗೆ ಕೆಲವರಾದರೂ ಖಂಡಿತಾ ಒದರುತ್ತಿದ್ದರು – ನಮ್ದುಕೆ ಪ್ಯಾರ್‌ಗೇ ಆಗ್ಬುಟ್ಟೈತೇ!

“ಸೆಗಣಿ ಕಾಟಿಯದ್ದಾದರೆ ರಾಶಿ ದೊಡ್ಡದು. ಕಡವೆಯದ್ದಾದರೆ ಹೀಗೆ, ಮೂರಿಂಚು ಪೈಪಲ್ಲಿ ಬಂದ ದಪ್ಪ ಬಿಲ್ಲೆಗಳ ಕಂತುಗಳು.” “ಇದು ನಿರ್ವಿವಾದವಾಗಿ ಮಾಂಸಾಹಾರಿಯ ಮಲ – ಜೀರ್ಣವಾಗದ ರೋಮ ನೋಡಿ. ಕೈಯಲ್ಲಿ ಮುಟ್ಟಬೇಡಿ, ಬಿದ್ದಿರೋ ಕಾಡಕಡ್ಡಿಯಲ್ಲಿ ಕೆದಕಿ. ಕಂದು ಬಣ್ಣದ ರೋಮದ ಗಾತ್ರ ನೋಡಿದರೆ ಕಡವೆಯೇ ಆಹಾರವಾಗಿರಬೇಕು. ಅಂದರೆ ಹುಲಿ, ಚಿರತೆಗಿಂತ ಸಣ್ಣ ಮಾಂಸಾಹಾರಿಗೆ ಅಸಾಧ್ಯ ಕೆಲಸ.” “ಅಯ್ಯೋ ಈ ಹುಲ್ಲು, ಕಲ್ಲು ಜಾಡಿನಲ್ಲಿ ಅಷ್ಟು ಹಳೇ ಮಲದ ಆಧಾರದಲ್ಲಿ ಹೆಜ್ಜೆ ಗುರುತು ಏನು ಹುಡುಕ್ತೀರಿ, ಬಿಡಿ.” “ಇಲ್ಲಿ ವೃತ್ತಾಕಾರದಲ್ಲಿ ಹುಲ್ಲು ಮಲಗಿದೇ ಎಂದರೆ ಸ್ವಲ್ಪ ಮುಂಚೆ ಇಲ್ಲಿ ಕಾಟೀನೋ ಕಡವೇನೋ ಮಲಗಿತ್ತೂಂತ್ಲೇ ಅರ್ಥ. ಲೋ ಬಡ್ಡೀಮಗ್ನೇ ನೀ ವಟಗುಟ್ಟೋದ್ ಕಡ್ಮೇ ಮಾಡಿದ್ರೆ ಕಾಟಿನೇ ನೋಡ್ಬೌದಿತ್ತು . .” ಪಿಸು ಮಾತುಗಳ ವಿನಿಮಯ ನಡಿಗೆಯುದ್ದಕ್ಕೂ ನಡೆದೇ ಇತ್ತು. ಒಂಟಿ ಮರವೊಂದು ಎಲೆ ಕಳಚಿ, ನೂರಾರು ಕಡ್ಡಿ ಕೈಗಳನ್ನು ಆಕಾಶಕ್ಕೆ ಚಾಚಿ ಮಳೆ ಪ್ರಾರ್ಥನೆ ನಡೆಸಿದ ಹಾಗಿತ್ತು. ಮಂಜು, ಮೋಡಗಳ ಚಳಿಗದು ದಪ್ಪ ಒಣ ಪಾಚಿಯನ್ನೇ ಕಂಬಳಿ ಕೋಟಿನಂತೆ ಧರಿಸಿತ್ತು. ‘ಇಲ್ಲೇನು ನಡೆದಿದೆ’ ಎಂದು ಹಣಿಕಿದಂತೆ ಮಾಡಿ, ಮತ್ತೆ ಮೋಡದಲ್ಲಿ ಕರಗಿದ ಒಂದು ಜೋಡಿ ಗಿಡುಗ ಬಿಟ್ಟರೆ ನಾವು ಗುರುತಿಸಬಹುದಾದ ಜೀವ ಸಂಚಾರ…

“ಅಜ್ಜಿ ಪುಣ್ಯ! ಈ ಹಿಕ್ಕೇಲಿ ತುಂಬಾನೇ ನಾರೀರೋದ್ ಕೆದಕಾಣಾಂತ ಒಣಕೋಲು ಹಿಡಿಯಕ್ಕೆ ಕೈ ತೆಗೆದಿದ್ದೆ, ಕೋಲಲ್ಲ – ಹಾವೂ. .” ಸ್ವಲ್ಪ ದೊಡ್ಡ ಧ್ವನಿಯಲ್ಲೇ ಕೇಳಿದ್ದಕ್ಕೆ ಎಲ್ಲ ಧಾವಿಸಿದೆವು. ಕಾಡಕೋಳೊಂದರಲ್ಲಿ ನೋವಾಗದಂತೆ ಯಾರೋ ಎತ್ತಿ ಹಿಡಿದಿದ್ದರು – ಗೂನು ಮೂಗಿನ ಗುಳಿಮಂಡಲ ಹಾವು. ಇಂಗ್ಲಿಶಿನಲ್ಲಿ ಸಾಮಾನ್ಯರು ಹೇಳುವಂತೆ ಹಂಪ್ ನೋಸ್ಡ್ ಪಿಟ್ ವೈಪರ್, ವಿಷದ್ದೇ ಹಾವು. (ವಿವರಗಳಿಗೆ ಗುರುರಾಜ ಸನಿಲರ ‘ಹಾವು ನಾವು ಪುಸ್ತಕ’ ಮತ್ತು ಇಲ್ಲೇ ಲಗತ್ತಿಸಿರುವ ಅವರದೇ ೨೨-೬-೧೨ರ ಪ್ರಜಾವಾಣಿ ಲೇಖನವನ್ನೂ ನೋಡಬಹುದು) ಮಣಿಗಂಟಿನವರೆಗೆ ಬೂಟು, ಮೇಲೇರಿದಂತೆ ಪ್ಯಾಂಟನ್ನು ಒಳಗೆ ಸೇರಿಸಿ ಸುತ್ತಿಕೊಂಡ ಜಿಗಣೆ ಕವಚ ಕಟ್ಟಿದ ನಾವು ಗಮನಿಸದೇ ಹೋಗಿದ್ದರೆ ನಮಗೆ ಏನೂ ಆಗುತ್ತಿರಲಿಲ್ಲ. ಆದರೆ ನಮ್ಮ ತುಳಿತಕ್ಕೆ ಸಿಕ್ಕಿ, ಪಾಪ, ಅದರ ಆಯುಷ್ಯ ಮುಗಿದು ಹೋಗುತ್ತಿತ್ತು. ಸರೀಸೃಪಗಳೇ ಶೀತಲ ರಕ್ತದವು. ಮೇಲೆ ವಾತಾವರಣದ ಶೀತ, ಸ್ವಭಾವತಃ ನಿಶಾಚರಿ ಎಂದೆಲ್ಲಾ ಆಗಿ ಅದು ನಿಧಾನಿಯಾಗಿಯೇ ಇತ್ತು. ಅದನ್ನು ಹಾಗೇ ಆಚೆಗೆ ಬಿಟ್ಟೆವು. ನಾವು ಜಾಡು ಹೋದಂತೆ ಪ್ರಪಾತದಂಚಿಗೆ ಸರಿದೆವು.

ಆಳದ ಭಯವನ್ನು ಮೋಡದ ಪದರಗಳು, ದಟ್ಟ ಹಸಿರಿನ ಹಾಸುಗೆಯೂ ಕಡಿಮೆ ಮಾಡುವಂತಿತ್ತು ದೃಶ್ಯ. ತೀರಾ ಸಮೀಪದ ಕೊಳ್ಳದಿಂದಾಚೆ, ಅಂದರೆ ಅಂಡಾರಿನ ತೋಟ ಗದ್ದೆಗಳನ್ನೂ ನಮಗೆ ಕಾಣಲು ಆಗಲಿಲ್ಲ. ಮೋಡದ ವಿವಿಧ ಸಾಂದ್ರತೆಯ ಅಲೆಯಲೆಗಳ ಒಯ್ಲಿನಲ್ಲಿ, ಗಿಡುಗ ಜೋಡಿಯೊಂದರ ಅವಿರತ ತೇಲಾಟ (ಗಮನಿಸಿ, ರೆಕ್ಕೆ ಬಡಿವ ಹಾರಾಟ ಅಲ್ಲ), ಧುಮುಕು, ಇಲ್ಲಿ ಮರೆಯಾಗಿ ಅಲ್ಲಿ ಪ್ರಕಟವಾಗುವ ಸರಣಿಯನ್ನು ದಿಟ್ಟಿಸೋಲುವವರೆಗೆ ನೋಡುತ್ತ ನಾನು ಒಂದು ಗಳಿಗೆ ಕಳೆದೇ ಹೋದೆ. ನನ್ನೊಳಗಿನ ‘ಹಾರುವಯ್ಯ’ನಿಗೆ (ಹ್ಯಾಂಗ್ ಗ್ಲೈಡಿಂಗ್ ಆಸೆ ಅನ್ನಿ) ಅದರ ರೆಕ್ಕೆಯ ಸೂಕ್ಷ್ಮ ಸ್ಪಂದನ, ಕತ್ತಿನ ಗತ್ತು, ಬಾಲದ ನವಿರಾದ ತಿರುಚುಗಳು ಅಸಂಖ್ಯ ಅನುಸರಣೀಯ ಪಾಠ. ಅನ್ಯ ದೃಷ್ಟಿಕೋನದಲ್ಲಿ ಗೆಣೆವಕ್ಕಿಗಳ ನಿರಂತರ ಪ್ರೇಮದಾಟ ಕಾಣುವುದೂ ಸಾಧ್ಯ. ಜೀವ-ವಾಸ್ತವದಲ್ಲಿ ಅವಕ್ಕೆ ಹೊಟ್ಟೆಪಾಡಿನ ಹುಡುಕಾಟ ಮತ್ತು ಕೊಳ್ಳೆಜೀವಿಗಳಿಗೆ ಸಾಕ್ಷಾತ್ ಬಲಿಪೀಠ. (ಕವಿಯೊಬ್ಬ ಮುಂಜಾನೆಯ ಮನೋಹರ ರಂಗಿನಲ್ಲಿ, ಜೀವಜಗತ್ತಿನ ತುರುಸಿನ ಓಡಾಟ, ವಿವಿಧ ಉಲಿಗಳ ಆಧಾರದಲ್ಲಿ “ರಸಮಯ” ಎಂದನಂತೆ. ವಾಸ್ತವವಾದಿ ಹೇಳಿದ, “ಹೊಸ ಹಗಲಿನೊಡನೆ ಜಾಗೃತವಾಗುವ ಹಸಿವಿಂಗಿಸುವ ಹಪಹಪಿ, ಬಲಿಪಶುಗಳ ಆತಂಕ, ಆಕ್ರಂದನ; ರಕ್ತಮಯ.”)

ಮೋಡ ಸಂಚಾರ ತೆಳುವಾದಾಗೆಲ್ಲಾ ನಮಗೆ ತುಸು ದೂರ ನೋಟಗಳು ಸಿಗುತ್ತಿದ್ದವು. ಒಂದೆರಡು ಪುಟ್ಟ ಕಣಿವೆಗಳಲ್ಲಿ ಮಾತ್ರ ಮರಗಿಡಗಳ ಸೈನ್ಯ ಹುಲ್ಲುಗಾವಲನ್ನೂ ಅಡ್ಡಗಟ್ಟಿ ಪ್ರಪಾತದಾಚೆಗಿಳಿದದ್ದು ಇತ್ತು. ಉಳಿದಂತೆ ಶಿಖರ ಸಾಲಿನುದ್ದವೂ ಗಡಿ ಗುರುತಿಸುವ ಪುಟ್ಟ ಕಲ್ಲ ಗುಪ್ಪೆಗಳ ಸಾಲಿನಂತೇ ಒಂದನ್ನೊಂದು ಮೀರಿಸುವ ಹಸಿರು ಹುಲ್ಲು ಹೊದ್ದ ಬೋಳು ದಿಬ್ಬಗಳು. ಎಲ್ಲೋ ಒಂದೆರಡು ಬಾರಿ ಮಾತ್ರ ಎಲ್ಲ ಮೀರಿದಂತೆ, ಮುಗಿಲಸಾಗರದಲ್ಲೊಂದು ತೇಲು ದ್ವೀಪದಂತೆ ವಾಲಿಕುಂಜ ಶಿಖರವೂ ದರ್ಶನ ಕೊಟ್ಟಿತ್ತು. ಅನಿವಾರ್ಯ ಹೊಕ್ಕು ಹೊರಡಬೇಕಾದ ಕಾಡುಗಳು ಕತ್ತಲ ಗವಿಗಳು. ಮಳೆ ಕಡಿಮೆಯಾಗಿ ಹುಲ್ಲ ಹಾಸಿನಲ್ಲೂ ವಿರಳ ವ್ಯವಹಾರ ನಡೆಸುವ ಜಿಗಣೆಗಳೆಲ್ಲಾ ಇಲ್ಲಿ ಸಂತೆ ಸೇರಿ ನಮ್ಮ ಕಾಲಿಗೆ ಅಂಟಲು, ಮೇಲೇರಲು ಮೇಲಾಟ ನಡೆಸಿದ್ದವು. (ನನಗಂತೂ ಬಿಡುಪೇಟೆ ಬಿಟ್ಟು ಸಿಟಿಸೆಂಟರಿನ ಸ್ಪಾರ್ ನುಗ್ಗಿದ ಹಾಗಾಗಿತ್ತು!) ಕೆರೆಕಟ್ಟೆಯಲ್ಲಿ ಕಾರು ಜೀಪು ಇಳಿಯುವಾಗಲೇ ನಮ್ಮಲ್ಲಿ ಅಷ್ಟಾಗಿ ಸಜ್ಜಾಗದವರು, ಹೊಸಬರು ಜಿಗಣೆ ಪ್ರತಿ-ಮಂತ್ರದ ಪಾಠವನ್ನು ಮನನ ಮಾಡುವುದು ನೋಡಿದ್ದೆ. ಸುಣ್ಣ, ಉಪ್ಪು, ಹೊಗೆಸೊಪ್ಪು, ಬೇವಿನೆಣ್ಣೆ, ಡೆಟ್ಟಾಲ್ ಎಂದಿತ್ಯಾದಿ ಜಿಗಣೆ-ನಿರೋಧಕಗಳ ಪಟ್ಟಿ ತಪಾಸಣೆ ಮಾಡಿ ಬುದ್ಧಿವಂತರೊಬ್ಬರು ತಿಂಗಳ ಅಡುಗೆಗಾಗುವಷ್ಟು ಉಪ್ಪಿನ ಪೊಟ್ಟಣ ಕೊಂಡದ್ದು, ಕೆಲವರು ಮುಷ್ಠಿಯಲ್ಲಿ ಪಾಲು ಪಡೆದದ್ದೂ ಕಂಡಿದ್ದೆ.

ಅವರೆಲ್ಲ ಮೊದಲಲ್ಲೇ ಕಾಲಿಗೆ ಸವರಿದ ಉಪ್ಪೆಲ್ಲ ಬೆವರಿನಲ್ಲಿ ಕರಗಿ ಇಳಿದಿರಬೇಕು, ಹುಲ್ಲು ಸವರಿ ಉದುರಿರಬೇಕು. ಮತ್ತೆ ಬಹುಶಃ ಅವರೆಲ್ಲ ಪ್ರತಿ ಜಿಗಣೆ ಮೂತಿಗೆ ಚಿಟಿಕೆ ಉಪ್ಪು ತಿವಿಯುವ ಸಾಹಸದಲ್ಲಿ ಸೋತು, ರಾತ್ರಿ ಮನೆಯಲ್ಲಿ ತೆಂಗಿನ ಬುಡಕ್ಕೆ ಉಪ್ಪು ಮುಟ್ಟಿಸಿ, ಮನೆಯವರಿಂದ ‘ಕೃಷಿ ತಜ್ಞ’ ಪ್ರಶಸ್ತಿ ಪಡೆದಿರಬೇಕು. ದಂತವೈದ್ಯ ಗಣೇಶ ಭಟ್ಟರು ನನ್ನ ಜಿಗಣೆ ನಿರೋಧೀ ಕಾಲ್ಚೀಲದ ವಿವರಣೆ ಹಿಡಿದು, ಹಿಂದಿನ ದಿನವೇ ಮಾರುಕಟ್ಟೆ ತಲಾಷ್ ನಡೆಸಿದ್ದರು. ಕೆರೆಕಟ್ಟೆಯಲ್ಲಿ ಅವರು ಕಾರಿಳಿಯುವಾಗ ಮೊಣಕಾಲ್ಮಟ್ಟದ ದಪ್ಪ ಹಳದಿ ಕಾಲ್ಚೀಲ ಹಾಕಿ ಮರಡೋನಾ ಗೆಟ್ಟಪ್ಪಿನಲ್ಲಿದ್ದರು. ಜಿಗಣೆಗೇನು ಗೊತ್ತು, ಎಂದಿನಂತೆ ಅವರ ಕಾಲಿನಲ್ಲೂ ಆಯಕಟ್ಟಿನ ಜಾಗಗಳಿಗೇರಿ, ಚೀಲದ ಹೆಣಿಗೆ ಸಂದಿನಲ್ಲೆಲ್ಲ ದುಂಡು ತೂರಿಸಿ, ಊದಿಕೊಳ್ಳುತ್ತಲೇ ಇದ್ದವು. (ಸಂಜೆ ಮತ್ತೆ ಕಾರೇರುವಾಗ ಭಟ್ಟರ ಚಂದದ ಹಳದಿಗೆ ಅಂದದ ಕೆಂಪು ಬೊಟ್ಟುಗಳು ಶೋಭಿಸುತ್ತಿದ್ದವು!)

ವಿಹಾರದ ದಿಬ್ಬಗಳೆಲ್ಲ ಮುಗಿದು ನೇರ ಶಿಖರದ ತಪ್ಪಲಿನಲ್ಲಿದ್ದೆವು. ಮುಗಿದ ನೀರ ದಾಸ್ತಾನು ಅಲ್ಲಿನ ಕಾಡ ತೊರೆಯಲ್ಲಿ ತುಂಬಿಕೊಂಡಿದ್ದೆವು. ಹಾಂ, ಇನ್ನೊಂದು ದಿಬ್ಬ ಎಂದುಕೊಂಡವರೆಲ್ಲ ಎಲ್ಲೆಲ್ಲಿನವರೊಡನೆ ಶಿಖರದಲ್ಲಿ ಊಟಕ್ಕೂ ಟೈಮ್ ಸೆಟ್ ಮಾಡಿದ್ದರು! ಹೌದು, ನನ್ನ ಹಿಂದಿನ ವಾಲಿಕುಂಜ ಭೇಟಿ ಕಾಲದಲ್ಲಿ ಯಾರಲ್ಲೂ ಇಲ್ಲದ ಚರವಾಣಿಗಳು ಇಂದು ಎಲ್ಲರಲ್ಲೂ ಇತ್ತು. ಮತ್ತು ಶಿಖರ ಶ್ರೇಣಿಗೆ ಬಂದದ್ದೇ ಕರಾವಳಿಯ ನೂರೆಂಟು ಸ್ತಂಭಗಳು ಕಿಣಿಕಿಣಿಸಿ ಸ್ವಾಗತಿಸಿದ ಮೇಲೆ, ‘ಇರದುದರೆಡೆಗೆ ತುಡಿಯುವ’ವರೇ ಎಲ್ಲ! ನಾನೂ ಕಡಿಮೆ ಆಗಬಾರದಲ್ಲಾಂತ, ಪಾಣಾಜೆಗೆ (ತವರ್ಮನೆ) ಹೋಗಿದ್ದ ದೇವಕಿಗೂ ಬೆಂಗಳೂರಲ್ಲಿದ್ದ (ಸೊಸೆ) ರಶ್ಮಿಗೂ ಸಂದೇಶ ಕುಟ್ಟಿ ಒಗೆದಿದ್ದೆ – ‘adbhuta! Innardha ganteli valikunja’. (ಮಾಯಾಚಾಪೆಯೇರಿ ಈಚೆಗೆ ನನ್ನನ್ನು ಬಹಳ ಅನುಸರಿಸುವ ಪೆಜತ್ತಾಯರಿಗೆ ಮಾತ್ರ ನನ್ನ ಸಂದೇಶ ಯಾಕೋ ರವಾನೆಯೇ ಆಗಲಿಲ್ಲ)

ಹೆಜ್ಜೆ ನಾಲ್ಕು ಏರಿಸುವಷ್ಟರಲ್ಲೇ ಎಲ್ಲರಿಗು ಅಷ್ಟುದ್ದಕ್ಕೂ ಇಲ್ಲದ ಏದುಸಿರು ಶುರುವಾಯ್ತು. ಹಾಗೂ ಹೀಗೂ ಕಾಲೆಸೆದು ದೂರ ಕಳೆದವರೆಲ್ಲ ಸಾಲಿಗೆ ಬಂದು, ಮುಂದಿನವರ ಅಡಿಯಲ್ಲಿ ಕಣ್ಣಿಟ್ಟು ಅನುಸರಿಸಿದರೆ ಲಾಭ ಎಂದು ಭಾವಿಸತೊಡಗಿದರು. ಗರಿಕೆಯ ಜುಟ್ಟು ಹಿಡಿದು ಜಗ್ಗುವುದು, ಸೊಂಟಕ್ಕೆ ಕೈ ಕೊಟ್ಟು ನಿಲ್ಲುವುದು ಹೆಚ್ಚಾಗತೊಡಗಿತು. ಹಿಂದುಳಿದವರ ಬಗ್ಗೆ ಕಾಳಜಿ ತೋರುವ ನೆಪದಲ್ಲಿ ತಮ್ಮ ನಡೆಗೆ ಉಸಿರು ಕೂಡಿಸತೊಡಗಿದರು. ಕಿತ್ತಳೆ ಪೆಪ್ಪರ್ಮಿಂಟು, ಚಾಕಲೇಟು, ಮತ್ತೊಂದು, ಆಗ ತಾನೇ ತುಂಬಿದ ತೊರೆಯ ತಣ್ಣನೆ ನೀರು ನಿರೀಕ್ಷೆಯ ಹೊಸ ಶಕ್ತಿಯ ಸ್ಫೋಟವೇನೂ ಮಾಡಲಿಲ್ಲ. ಬರಬಹುದಾದ ಮಳೆ ಲೆಕ್ಕದಲ್ಲಿ ಹಾಕಿದ್ದ ಪ್ಯಾಂಟು ಕೋಟು, ಬರಿಯ ಮಧ್ಯಾಹ್ನದ ಬುತ್ತಿ ತುಂಬಿಕೊಂಡ ಬೆನ್ನು ಚೀಲ ಇನ್ನೂ ಹಗುರ ಇರಬಾರದಿತ್ತೇ! ಟಿಪ್ಪೂ ಸುಲ್ತಾನನ ತೋಪುಗಳಂತೋ ಗಜರಾಯನ ಭಾರೀ ಸೊಂಡಿಲಿನಂತೋ ಕ್ಯಾಮರಾ ಹೊತ್ತವರ ಕತೆ – ಅಲ್ಲಿಗೆ ಹೊರಲಾರೆ, ಇಲ್ಲೇ ಬಿಟ್ಟಿರಲಾರೆ. ಉದ್ದಕ್ಕೂ ಐದಡಿ ಉದ್ದದ ಮುಗ್ಗಾಲಿ ಬಿಡಿಸಿಯೇ ಹಿಡಿದಿದ್ದ ನಿರೇನ್, ಕ್ಯಾಮರಾವನ್ನು ಚೀಲಕ್ಕೆ ಸೇರಿಸಿ ಮೂರು ಕಾಲನ್ನು ಒಂದು ಮಾಡಿ ಊರೇಗೋಲು ಮಾಡಿಕೊಂಡಿದ್ದರು. ಮುಗ್ಗಾಲಿ ತಯಾರಕರು ಇದನ್ನು ಕಂಡಿದ್ದರೆ ಅದರ ಮುಂದಿನ ಪ್ರಚಾರಪತ್ರದಲ್ಲಿ ನಿರೇನ್ ಫೋಟೋ ಖಂಡಿತ ಹಾಕಿಕೊಳ್ತಿದ್ದರು! ಎಲ್ಲಿ ನನ್ನ ಹಳೇಹುಲಿ ಎಂಬ ಬಿದಿರು ಕುಟ್ಟೇ ಸುರಿಯುತ್ತದೋ ಎಂಬ ಹೆದರಿಕೆಯಲ್ಲಿ ನಾನು, ಮೀಸೆ ಜೋಲು ಬಿಟ್ಟು (ವ್ಯಂಗ್ಯ ಚಿತ್ರಕಾರರು ಹಾಗಲ್ಲವೇ ಮೀಸೆವಂತರನ್ನು ಸೋಲಿಸುವುದು!) ಮೊಣಕಾಲಿಗೆ ಕೈ ಕೊಟ್ಟು ಪ್ರತಿ ಮೇಲಿನ ಹೆಜ್ಜೆಯನ್ನು ಕೊನೆಯದಾಗಲಿ ಎಂದು ಹಾರೈಸುತ್ತಿದ್ದೆ. “ರವೀಂದ್ರ (ಮಾರ್ಗದರ್ಶಿ) ತುಂಬಾ ನೇರ ಏರ್ತಾ ಇದ್ದಾನೆ” ಎಂದು ಗೊಣಗಿಕೊಂಡವರು, ಅಸ್ಪಷ್ಟ ವಾರೆಕೋರೆ ಜಾಡು ಅನುಸರಿಸಲು ಹೊರಟದ್ದಿತ್ತು. ಆದರೆ ಎರಡೇ ಹೆಜ್ಜೆಯಲ್ಲಿ ಅಡಿ ತಪ್ಪಿ ಉರುಳಿ ಹೋಗುವ ಭಯಕ್ಕೆ ಮತ್ತೆ ‘ಮರ್ಯಾದೆಯಲ್ಲಿ’ ಸಾಲು ಸೇರಿಕೊಳ್ಳುತ್ತಿದ್ದರು.

ಮೇಘಾವಳಿ ಮಾತ್ರ ಎಲ್ಲರ ಬೆವರಿಗೂ ತಣ್ಣನೆಯ ನೇವರಿಕೆ ಕೊಟ್ಟು, ಕಳೆದ ಆಳವನ್ನೂ (ಈ ಬಾರಿ ಆಳ ನೋಡಿ ಹೆದರುವವರು ತಂಡದಲ್ಲಿದ್ದಂತಿರಲಿಲ್ಲ) ಉಳಿದ ಎತ್ತರವನ್ನೂ ಮರೆಸಿ ಪ್ರೋತ್ಸಾಹಿಸುತ್ತಲೇ ಇತ್ತು. ಮೊದಲಿನಿಂದಲೂ ತಂಡದ ಕೊನೆಯನ್ನು ಕಾಪಾಡುವ ಜವಾಬ್ದಾರಿ ಹೊತ್ತವರು ಗಿರೀಶ್. ಹಿಂದಿಂದೆ ಸರಿದು ಉಳಿಯಲು ಹೊರಟವರನ್ನು ಅವರು ‘ಆತ್ಮೀಯ ಶೈಲಿ’ಯಲ್ಲಿ ಒತ್ತಾಯಿಸುತ್ತಿದ್ದ, ಛೇಡಿಸುತ್ತಿದ್ದ ಮಾತುಗಳು (ಮೋಡದ ಮುಸುಕಿನಾಚೆ ಕಾಣುತ್ತಿರಲಿಲ್ಲ) ನವ್ಯ ಜನಪದಕ್ಕೆ ಉತ್ತಮ ಕೊಡುಗೆಗಳೇ ಇರಬೇಕು. ಗಿರೀಶ್ ಚತುರೋಪಾಯಗಳಲ್ಲಿ ಪ್ರಯೋಗಿಸಲು ಇನ್ನೇನು ‘ದಂಡ’ ಒಂದೇ ಬಾಕಿ ಎನ್ನುವ ಮಟ್ಟದಲ್ಲಿ ತಂಡ ಶಿಖರ ತಲಪಿತ್ತು!

ಶಿಖರದಲ್ಲಿ ಈಚಿನ ವರ್ಷಗಳಲ್ಲೆಲ್ಲೋ ಅರಣ್ಯ ಇಲಾಖೆ ವೀಕ್ಷಣಾ ಗೋಪುರ ಕಟ್ಟಿದ್ದರ ಅವಶೇಷಗಳು ಚದುರಿ ಬಿದ್ದಿದ್ದವು. ಇವೆಲ್ಲಾ ಬೇಕಿತ್ತೇ ಎನ್ನುವ ಬದಲು, ಈಗ ಉಳಿದ ಕಸವನ್ನಾದರೂ ನಾಗರಿಕತೆಗೆ ಮರಳಿಸುವವರು ಯಾರು ಎಂದು ಕೇಳುವ ಸ್ಥಿತಿ ಅಲ್ಲಿತ್ತು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಯಾರು ಯಾರೋ ಯಥಾನುಶಕ್ತಿ ಅಲ್ಲಿ ಬೀರ್ ಬಾಟಲ್ ಮತ್ತು ಕೋಕಾಕೋಲಾ ಕ್ಯಾನುಗಳನ್ನು ಬಿಸಾಡಿ ಹೋಗಿದ್ದರು. ಅವನ್ನು ಒಟ್ಟು ಮಾಡಿ ಹೊತ್ತು ತಂದದ್ದು ನಮ್ಮ ಸಾಧನೆಯಲ್ಲ, ನಾಗರಿಕತೆಯ ಪರವಾಗಿ ನಾವು ಮಾಡಿಕೊಂಡ ಪ್ರಾಯಶ್ಚಿತ್ತ!

“ಅದೆಲ್ಲಾ ಸರಿ, ಶಿಖರ ತಲಪಿದ್ದೇ ನನಗೆ ಚರವಾಣಿಯಲ್ಲಿ ವಿಜಯವಾರ್ತೆ ಬಿತ್ತರಿಸಿದ್ದು, ಇತರರಿಗಾದ ಆನಂದಾನುಭೂತಿ ಬರಿಲೇ ಇಲ್ಲ. ಬದಲು ‘ಇಲಾಖೆ ಮಾಡಿದ್ದು ಸರಿಯಿಲ್ಲ’, ‘ಹಿಂದೆ ಬಂದವರು ಸರಿಯಿಲ್ಲ’ ಇತ್ಯಾದಿ ನಿಮ್ಮ ಮಾಮೂಲೀ ಗೋಳೇ ಜಾಸ್ತಿಯಾಯ್ತಲ್ಲ” ಅರೆಬರೆ ಓದಿ ದೇವಕಿ ಚುಚ್ಚಿದಳು. ಈ ದಿನಗಳಲ್ಲಿ ವಿಚಾರವಂತಿಕೆ ಮತ್ತು ಸಿನಿಕತೆ ಸಯಾಮೀ ಅವಳಿಗಳು. ವಾಸ್ತವದಲ್ಲಿ ಅಂದು ಮೋಡದೊಳಗೇ ಇದ್ದ ನಮಗೆ ಅಲ್ಲಿ ದೃಶ್ಯ ನಾಸ್ತಿ. ತಂಡದ ಕೊನೇ ಸದಸ್ಯನೂ ಶಿಖರ ಮುಟ್ಟುವಾಗ ನಮ್ಮ ಅಂದಾಜಿಗಿಂತ ಅರ್ಧ ಗಂಟೆಯಷ್ಟು ನಾವು ತಡವಾಗಿದ್ದೆವು (ಅಪರಾಹ್ನ ಎರಡು ಗಂಟೆ). ಮೊದಲು ಹಸಿವು, ಬಾಯಾರಿಕೆಗಳ ಕೆಲಸ ಮುಗಿಸಿದೆವು. ನನ್ನ ನೆನಪಿನಲ್ಲಿದ್ದ ದೃಶ್ಯಾವಳಿಯ ಬಲದಲ್ಲಿ ಆನಂದ ಹೆಚ್ಚಿ, ದೂರವಾಣಿಸಿದ್ದೂ ನಿಜ. ಉಳಿದೆಲ್ಲರಿಗೆ ‘ವಾಲಿಕುಂಜ ಶಿಖರದ ಪ್ರಥಮ ಭೇಟಿ’ ಎಂಬ ಶ್ರಮದಿಂದಾಚೆ ಏನೂ ದಕ್ಕಲಿಲ್ಲ. ಸಹಜವಾಗಿ ಬುತ್ತಿ ಮುಗಿದದ್ದೇ ಇಳಿದಾರಿ ಹಿಡಿದದ್ದೊಂದೇ ಒಳ್ಳೇ ಸುದ್ದಿ.

ಶಿಖರವನ್ನು ನಾಲ್ಗಾಲಲ್ಲಿ ಏರಿದವರು, ಬಲವಂತದ ಜಾರುಬಂಡೆಯಂತೆ ಇಳಿದರು. ಮುಂದೆ ಸ್ವಲ್ಪ ಹಳೆಯ ಜಾಡನ್ನೇ ಅನುಸರಿಸಿ, ಕಾಡು ಕಳೆದಮೇಲೆ ಪೂರ್ವ ತಪ್ಪಲಿನ ಬಯಲಿನತ್ತ ಹೊಸ ಜಾಡು ಹಿಡಿದೆವು. ಸರ್ವೇಕ್ಷಣ ಭೂಪಟ ಈ ಜಾಡಿನಲ್ಲಿ ಮೊದಲ ಮನುಷ್ಯ ವಸತಿಗಳನ್ನು ಮುಂಡಸರ (ತುಸು ಉತ್ತರಕ್ಕೆ) ಮತ್ತು ಉರಣಿ (ದಕ್ಷಿಣಕ್ಕೆ) ಎಂದೇ ತೋರಿಸಿದರೂ ಇನ್ನೂ ಮೊದಲೆ ‘ಕುರುಬರ ಕೋಟೆ’ ಎಂಬ ನಮೂದನ್ನೂ ಹೊಂದಿದೆ. ನಮ್ಮ ಕುತೂಹಲ ಪರಿಹರಿಸುವಂತೆ ರವೀಂದ್ರ ಅದರ ಬುಡದಲ್ಲೇ ಕರೆದೊಯ್ದರು. ಜಾಡಿನ ಉತ್ತರಕ್ಕೆ ಸುಮಾರು ಇನ್ನೂರು ಅಡಿ ದೂರದಲ್ಲಿ, ಪುಟ್ಟ ದಿಬ್ಬದ ಎತ್ತರದಲ್ಲಿ ಹತ್ತಿಪ್ಪತ್ತಡಿ ಎತ್ತರದ ಭಾರೀ ಬಂಡೆಗಳ (ಬಹುಶಃ) ಪ್ರಾಕೃತಿಕ ಗುಪ್ಪೆ ಇತ್ತು. ನಾವು ಹತ್ತೆಂಟು ಜನ ಅದನ್ನು ಹತ್ತಿಳಿದು ಬಂದದ್ದೂ ಆಯ್ತು. ಕಷ್ಟದಲ್ಲಿ ಅದನ್ನೊಂದು ಕೋಟೆಯಂತಹ ಆವರಣ ಎಂದೇ ಗ್ರಹಿಸಿದರೂ ಹತ್ತಿಪ್ಪತ್ತು ಮಂದಿಗಿಂತ ಹೆಚ್ಚು ಜನರಿಗೆ ನಿಲ್ಲುವ ಅವಕಾಶ ಅಲ್ಲಿರಲಿಲ್ಲ. ಈ ವಲಯಗಳಲ್ಲಿ ಗೋವಳಿಗರು ಸರಿ, ಕುರುಬರು ಅಥವಾ ಕುರಿಗಳು ಎಲ್ಲಿಂದ? ಮತ್ತವರಿಗೆ ಇಂಥ ಕಿಷ್ಕಿಂದೆ ಕೋಟೆಯಾಗಿ ಒದಗಿದ್ದು ಹೇಗೆ ಎಂಬ ಐತಿಹಾಸಿಕ ವಿವರಗಳನ್ನು ಚರ್ಚಿಸಲು ಈ ಮೂಲಕ ನಿಮಗೆ ಬಿಟ್ಟು ನಾನು ಸವಕಲು ಜಾಡಿನಲ್ಲಿ ಮುಂದುವರಿಯುತ್ತೇನೆ.

ವಿಸ್ತಾರ ಗೋಚರಾವಿನ ನೆಲ, ಒತ್ತಿನಲ್ಲೇ ಹಡಿಲುಬಿದ್ದ ಗದ್ದೆ. ಇದು ಈಚೆಗೆ ವನ್ಯಕ್ಕಾಗಿ ಮುಕ್ತಗೊಂಡ ಉರ್ಣಿಯ ಹಿಡುವಳಿಗಳಲ್ಲಿ ಒಂದು. ಆಗಲೇ ಗದ್ದೆಯಲ್ಲಿ ನಿಯತ ಅಂತರದ ಗುಂಡಿಗಳನ್ನು ತೋಡಿದ್ದು ಕಾಣುತ್ತಿತ್ತು. ಕೆಲವೇ ದಿನಗಳಲ್ಲಿ ಈ ವಲಯದ್ದೇ ಮರವಾಗುವ ಸಸ್ಯ ವೈವಿಧ್ಯವನ್ನು (ಏಕ ಜಾತಿಯವಲ್ಲ) ಸ್ವತಃ ವನ್ಯ ಇಲಾಖೆಯೇ ನೆಟ್ಟು, ನೆಲವನ್ನು ವನ್ಯಕ್ಕೆ ಮರಳಿಸುವ ಕ್ರಿಯೆಗೆ ಕೇವಲ ಪ್ರಾಥಮಿಕ ಸಹಕಾರ ಕೊಡುವ ವ್ಯವಸ್ಥೆಯೂ ಆಗಿತ್ತು. ಬಯಲಿನ ಹುಲ್ಲ ಹಾಸಿನಲ್ಲಿ ತುಸು ಮೈಚಾಚಿದೆವು. ನೇರ ಮಲೆಬಿಟ್ಟಿಳಿವ ವಿಮಲ, ಮುಂದುವರಿದು ಮುಂಡಸರ ಎಂಬ ಹೊಳೆಗಳ ವಿಸ್ತಾರ ಹಸಿರು ಆವರಣ. ಅಲ್ಲಿ ಪುನರವತರಣಗೊಳ್ಳುವ ಕಾಟಿ ಕಡವೆಗಳ ಹಿಂಡು, ಅವನ್ನು ಹೊಂಚುವ ಹುಲಿ ಚಿರತೆಗಳ ಸರಣಿಯನ್ನೆಲ್ಲ ಕಲ್ಪಿಸಿಕೊಳ್ಳುವ ನಮ್ಮ ಸಂತೋಷಕ್ಕೆ ಇಡೀ ದಿನ ಇಲ್ಲದ ಚಿರಿಪಿರಿ ಮಳೆ ಅಡ್ಡಿಯಾಯ್ತು.

ಸರಿಯಾದ ಮಳೆಗಾಲವಿದ್ದಿದ್ದರೆ ಪಾರುಗಾಣಲು ನಾವು ಪರದಾಡಬೇಕಿದ್ದ ಹೊಳೆಗಳಿಗೆ ಆರಾಮವಾಗಿ ಇಳಿದೇ ದಾಟಿದೆವು. ನಮ್ಮ ಮೀನಖಂಡ ಮುಳುಗಿಸಲಾಗದ ಹರಿವಿಗೆ ನೇರ ಬಾಯಿಹಚ್ಚಿ ಹೊಟ್ಟೆ ತುಂಬ ಕುಡಿದೆವು. ಬೆವರು ಮತ್ತು ಜಿಗಣೆಯ ಒಸರುಗಳನ್ನೂ ದಿನದ ಶ್ರಮವನ್ನೂ ಒಟ್ಟಿಗೇ ತೊಳೆದು ಕಳೆದೆವು. ಅಲ್ಲೇ ಇನ್ನೊಂದು ಪಕ್ಕದಲ್ಲಿ ವಾರದ ಹಿಂದಷ್ಟೇ ಕುರಾಉ ಹೊರಗೆ ಮರುವಸತಿ ಪಡೆದು ಹೋದವರೊಬ್ಬರ ಕಳಚಿ, ಬೀಳಿಸಿದ್ದ ಮನೆ ಕೊಟ್ಟಿಗೆಗಳ ನಿರುಪಯುಕ್ತ ಅವಶೇಷ ಕಂಡೆವು. (ಉಪಯುಕ್ತವೆಲ್ಲವನ್ನೂ ಅವರಿಗೆ ಒಯ್ಯುವ ಸ್ವಾತಂತ್ರ್ಯ ಮತ್ತು ಸೌಕರ್ಯ ಕಲ್ಪಿಸಿ ಕೊಟ್ಟಿದ್ದರು.) ಅತ್ತ ಕೆಳಗದ್ದೆಯಲ್ಲಿ ಸಹಜ ಕಾಡಿಗೆ ಜಾಗ ತೆರವುಗೊಳಿಸುವಂತೆ ಹೊಸದಾಗಿ ಕಡಿದುರುಳಿದ್ದ ಅಸಂಖ್ಯ ಅಡಿಕೆ ಮರಗಳನ್ನೂ ನೋಡಿದೆವು. ವಾಲಿಕುಂಜದ ನೆರಳಿನಲ್ಲಿ ಮತ್ತೆ ನನಗೆ ರಾಮಯಣದ್ದೇ ಸ್ಮರಣೆ. ತಮ್ಮ ಸುಗ್ರೀವನ ಸಹಜ ನ್ಯಾಯವನ್ನು ನಿರಾಕರಿಸಿದ್ದಕ್ಕಲ್ಲವೇ ವಾಲಿ ರಾಮಬಾಣಕ್ಕೆ ಕಡಿದುರುಳಿದ್ದು. ವನ್ಯ ಪ್ರವರ್ಧನೆಯ ಮತ್ತು ಸಂರಕ್ಷಣೆಯ ದಾರಿಯಲ್ಲಿ ಇನ್ನೆಷ್ಟು ನ್ಯಾಯಗಳಾಗಬೇಕೋ ತ್ಯಾಗಗಳಾಗಬೇಕೋ ಎಂಬ ಭಾವ ಭಾರದಲ್ಲಿ ಮತ್ತೆ ವಾಹನಗಳನ್ನೇರಿ ಊರಿಗೆ ಹೊರಟೆವು.