ನಿಡ್ಳೆ ಗೋವಿಂದ ಭಟ್ಟರ ಇಪ್ಪತ್ತೇಳು ಮಳೆಗಾಲಗಳ ಯಕ್ಷ-ತಿರುಗಾಟದ ಸಾಹಸ (ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ) ಈ ಋತುವಿನಲ್ಲೂ ನೂರಕ್ಕೂ ಮಿಕ್ಕು ವೀಳ್ಯ ಪಡೆದು ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕಲಾವಿದನಾಗುವುದು ಬೇರೆ, ಕಲಾ ಸಂಘಟನಾ ಚಾತುರ್ಯ ಬೇರೆ ಎನ್ನುವುದನ್ನು ಕಲಾಚರಿತ್ರೆ ಓದಿದವರೆಲ್ಲಾ ಹಲವು ನಿದರ್ಶನಗಳಲ್ಲಿ ಕಂಡದ್ದೇ ಇದೆ. ಅದರಲ್ಲೂ ಯಕ್ಷಗಾನ ವಲಯವನ್ನು (ಕರಾವಳಿ ಮತ್ತು ಘಟ್ಟದ ಮೇಲಿನ ಒಂದೆರಡು ಜಿಲ್ಲೆ) ಮೀರಿ ನುಗ್ಗಿ ಯಶಸ್ವಿಯಾದ ನಿಡ್ಳೆಯವರ ಸಾಧನೆ ಸಣ್ಣದಲ್ಲ. ತವರು ನೆಲ ಮತ್ತು ಅಲ್ಲಿನ ಜನಪದದಿಂದ ದೂರಾದ ಜನ ಕರೆಯುತ್ತಾರೆಂದು ಮುಂಬೈ ದಿಲ್ಲಿಗೂ ಅರಬರ ನಾಡಿಗೂ ತಂಡ ಕಟ್ಟಿ ಒಯ್ದವರಿದ್ದಾರೆ. ಯಕ್ಷಗಾನ ಮತ್ತು ಕನ್ನಡ ಭಾಷೆಗೂ ಎರವಾದ ಜನಪದಕ್ಕೆ ಇದನ್ನು ಹಿಂದಿಯಲ್ಲಿ ಮುಟ್ಟಿಸುವಲ್ಲಿ ಇನ್ನೂ ಧಿಂಗಣಿಸುತ್ತಲೇ ಇರುವ ವಿದ್ಯಾ ಕೊಳ್ಯೂರು ಸಾಧನೆ ಅಸಾಮಾನ್ಯವೇ ಸರಿ. ಇಂಗ್ಲಿಷ್ ಸಂಭಾಷಣೆ (ಪಣಂಬೂರು ವೆಂ. ಐತಾಳ), ಬರಿಯ ಇಂಗ್ಲಿಷ್ ಪೀಠಿಕೆ ಸಹಿತ ಸಾಂಪ್ರದಾಯಿಕ ಪ್ರದರ್ಶನ ಅಥವಾ ಮಾತಿಲ್ಲದ ಬ್ಯಾಲೇ ತರದ ಪ್ರಯೋಗ (ಶಿವರಾಮ ಕಾರಂತ, ಈಗ ಉಡುಪಿ ಯಕ್ಷಗಾನ ಕೇಂದ್ರ), ಏಕವ್ಯಕ್ತಿ, ಯುಗಳ (ಮಂಟಪ), ಯಕ್ಷ-ರೂಪಕ (ಉದ್ಯಾವರ ಮಾಧವಾಚಾರ್ಯ), ಮುಂತಾದವುಗಳು ವಿಶಿಷ್ಟ ವಾತಾವರಣಗಳಲ್ಲಿ, ಬಹುತೇಕ ಪ್ರಾಯೋಜನೆಗಳ ಬಲದಲ್ಲಿ ಜೀವಮಿಡಿಯುವುದು ಸಣ್ಣ ಮಾತೇನಲ್ಲ. ಆದರೆ ಇಲ್ಲಿನ ಯಥಾರೂಪವನ್ನು ಅದರದೇ ಕನ್ನಡ ಶಕ್ತಿಯನ್ನು ನೆಚ್ಚಿ, ಯಕ್ಷ-ಪ್ರೇಕ್ಷಕ ಗಡಿಯನ್ನು ವಿಸ್ತರಿಸಿ (ಬಿಳಿಗಿರಿರಂಗನ ಬೆಟ್ಟದ ಪೋಡುಗಳೆದುರು ತುಮಕೂರಿನ ಯಾವುದೋ ಹಳ್ಳಿಗರೆದುರು ಅವರು ಮತ್ತೆ ಮತ್ತೆ ಬಯಸುವ ಪ್ರದರ್ಶನಗಳನ್ನು ಕೊಟ್ಟದ್ದು), ವೃತ್ತಿಪರ ಯಶಸ್ಸು ಸಾಧಿಸಿದ್ದು ನಿಡ್ಳೆಯವರ ಹೆಚ್ಚುಗಾರಿಕೆ. ಯಾವುದೇ ಕನ್ನಡಿಗನಾದರೆ ಸಾಕು ಎಂದು ನುಗ್ಗಿ, ಪ್ರದರ್ಶನದಿಂದ ಗೆಲ್ಲುವ ಈ ತಂಡ ಪರೋಕ್ಷವಾಗಿ ಯಕ್ಷಗಾನದ ಸಹಜ ಲೋಕಪ್ರಿಯತೆಯನ್ನೂ ಸಾಬೀತುಪಡಿಸುತ್ತದೆ ಎನ್ನುವಲ್ಲಿ ನಮ್ಮ ಹೆಮ್ಮೆ ಹೆಚ್ಚುತ್ತದೆ.

ಮೈಸೂರು ವಲಯದಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಕೆಲವು ವರ್ಷಗಳಿಂದ ಕೇವಲ ಗುಣಪಕ್ಷಪಾತಿಯಾಗಿ (ಪೈಸೆ ಆದಾಯ ಬಿಟ್ಟು, ಕೈಯಿಂದ ಸಾಕಷ್ಟು ಹಣ ಹಾಕಿಯೇ) ಸಂಘಟಿಸುತ್ತಿರುವವನು ನನ್ನ ತಮ್ಮ – ಅನಂತವರ್ಧನ (ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್). ಅವನಿಗೆ ಚಾಲ್ತಿ ಪ್ರಸಂಗಗಳನ್ನು ಬಿಟ್ಟು, ಯಕ್ಷಗಾನೀಯವೇ ಆದ ಹೊಸ ಕಥೆಗಳನ್ನು ರಂಗಕ್ಕೆ ತರುವ ಉತ್ಸಾಹ ಜಾಸ್ತಿ. ಆದರೆ ಹೊರ ಊರುಗಳಲ್ಲಿ ಸಾಂಪ್ರದಾಯಿಕ ಪ್ರದರ್ಶನಗಳನ್ನೇ ಕೊಡುತ್ತ ತಿರುಗುವ (ಪೂರ್ಣ ಹೊಸ ಪ್ರೇಕ್ಷಕವರ್ಗ ನಂಬಿ ಇವರು ಯಾರೂ ಹೋದವರಲ್ಲ) ಇಡಗುಂಜಿ, ಪೂರ್ಣಚಂದ್ರ, ಬಚ್ಚಗಾರು ಮುಂತಾದ ಮೇಳಗಳು ತಮ್ಮದೇ ‘ರಂಗದಲ್ಲಿ ಕಳೆಗಟ್ಟುವ ಪ್ರಸಂಗ’ಗಳ ಪಟ್ಟಿ ಮೀರುವವರಲ್ಲ. ಅಂತಲ್ಲಿ ಅನಂತ ಸವಾಲನ್ನು ದಿಟ್ಟವಾಗಿಯೇ ಸ್ವೀಕರಿಸಿ, ಅಧ್ಯಯನ ಕಸಬುಗಾರಿಕೆಯ ಹಿತಮಿತವಾದ ಮಿಶ್ರಣದಿಂದ ಹಲವು ಯಶಸ್ವೀ ಪ್ರದರ್ಶನಗಳನ್ನು ಕೊಟ್ಟ ಖ್ಯಾತಿ ನಿಡ್ಳೆಯವರ ಮೇಳಕ್ಕೆ ಸಲ್ಲುತ್ತದೆ.

ಅನಂತನ ಮಾತುಗಳಲ್ಲಿ “ಭದ್ರಾಯು ಚರಿತ್ರೆ, ಕೇತಕೀ ಪ್ರತಾಪ, ತರಣಿ ಸೇನ ಕಾಳಗ, ಶ್ರೀ ಕೃಷ್ಣದಿನ ಅಶ್ವಮೇಧ, ಮಕರಾಕ್ಷ ಕಾಳಗ, ಬಲರಾಮನ ವಿವಾಹ ಪ್ರಸಂಗ, ಕಾಯಕಲ್ಪ, ಅಂಧಕಾಸುರ, ಧ್ರುವ ಚರಿತ್ರೆ, ಸಮಗ್ರ ಭೀಮ ಚರಿತ್ರೆ, ದ್ರೋಣ ಪರ್ವ ಇತ್ಯಾದಿ ಯಾವ ಪೌರಾಣಿಕ ಪ್ರಸಂಗ ಕೊಟ್ಟರೂ ಆಡುತ್ತೇವೆ ಎಂಬ ನಿಡ್ಳೆಯವರ ಛಲ ನಿಜಕ್ಕೂ ಮೆಚ್ಚಬೇಕಾದದ್ದೇ. ಮುನ್ನೂರು ವರ್ಷಗಳ ಹಿಂದೆ ಲಿಂಗಾಯತರ ಸುತ್ತೂರು ಸ್ವಾಮಿಗಳು ಬರೆದ ಬಸವಾಮೃತ ವಿಲಾಸವನ್ನು ಇವರು ರಂಗಕ್ಕೆ ತಂದ ಸಾಹಸವನ್ನು ಅದೇ ಮಠದ ಇಂದಿನ ಸ್ವಾಮಿಗಳು ಸ್ವತಃ ನೋಡಿ ನಿಬ್ಬೆರಗಾಗಿದ್ದರು.” ಬಹುಶಃ ಈ ಧೈರ್ಯದಲ್ಲೇ ಇವರು ಪಣಂಬೂರಿನ ದೊಂದಿ ಬೆಳಕಿನ ಆಟ ಕೈಗೆತ್ತಿಕೊಂಡದ್ದಿರಬೇಕು. ಆದರೆ ನನ್ನ ಅಭಿಪ್ರಾಯದಂತೆ ಎಡವಿದರು. ನಾನದನ್ನು ಟೀಕಿಸಿ ಇಲ್ಲೇ ‘ದೊಂದಿ ಬೆಳಕಿನಲ್ಲಿ ಬೆಂದ ಯಕ್ಷಗಾನ’ ಬರೆದದ್ದೂ ಆಯ್ತು. ಆದರೆ ಅವರ ಪ್ರಯೋಗಶೀಲತೆಯ ಛಲ ಹಿಂಗಿಲ್ಲ ಎನ್ನುವುದಕ್ಕೆ ಅಭಿನಂದನೆಗಳು. ಕಲ್ಕೂರ ಪ್ರತಿಷ್ಠಾನ ಮಂಗಳೂರು ಡಾನ್ ಬಾಸ್ಕೋ ಹಾಲಿನಲ್ಲಿ ೧-೮-೧೨ರಂದು ‘ಪಾರಂಪರಿಕ ಪೂರ್ವರಂಗ ಸಮೇತ ಹಿಡಿಂಬಾ ವಿವಾಹ ಮತ್ತು ಗರುಡ ಗರ್ವಭಂಗ’ ಪ್ರದರ್ಶನ ಕೇಳಿದ್ದರು. ಸಾಕಷ್ಟು ಚೆನ್ನಾದ ಪ್ರದರ್ಶನವನ್ನೇ ನಿಡ್ಳೆ ಮೇಳ ಕೊಟ್ಟಿತು ಎನ್ನಲು ನಾನು ಸಂತೋಷಿಸುತ್ತೇನೆ.

ನಾನು ಅನಿವಾರ್ಯವಾಗಿ ಅರ್ಧ ಗಂಟೆ ತಡವಾದ್ದರಿಂದ ಕೋಡಂಗಿ, ಬಾಲಗೋಪಾಲ ಮತ್ತು ಷಣ್ಮುಖ ಸುಬ್ರಾಯ ತಪ್ಪಿಸಿಕೊಂಡೆ. ಆದರೆ ಅನುಭವಿಸಿದ ಮುಖ್ಯ ಸ್ತ್ರೀ ವೇಷ, ಹೊಗಳಿಕೆ ಹಾಸ್ಯ, ಅರ್ಧ ನಾರೀಶ್ವರ, ಪೀಠಿಕಾ ಸ್ತ್ರೀವೇಷ, ಪಾಂಡವರ ಒಡ್ಡೋಲಗ, ಬಣ್ಣದ ವೇಷ ಮತ್ತು ಹೆಣ್ಣು ಬಣ್ಣದ ರಂಗ ಪ್ರವೇಶಗಳು, (ಮುಂದಿನೆರಡು ಪರಂಪರೆಯ ಭಾಗವೇನೂ ಅಲ್ಲವಾದರೂ) ದ್ವಂದ್ವ ಭಾಗವತಿಕೆ ಮತ್ತು ಚಂಡೆ ಜುಗಲ್ಬಂದಿಗಳು, ಕೊನೆಯಲ್ಲಿ ಹಿಡಿಂಬಾ ವಿವಾಹ ಕಥಾನಕ ಒಳ್ಳೇ ಕಳೆಗಟ್ಟಿದವು.

ಹನೂಮಂತನ ತೆರೆಪೊರಪ್ಪಾಟ್ ಮಾತ್ರ (ಸೂರಿಕುಮೇರು ಗೋವಿಂದ ಭಟ್ಟರು) ಪೇಲವವಾಯ್ತು. ಇದನ್ನೇ ಅವರು ಉಡುಪಿಯ ಗೋವಿಂದ ವೈಭವದಲ್ಲೂ ದಾಖಲಿಸಲು ಹೊರಟು ಕೈಚೆಲ್ಲಿದ್ದು ನೆನಪಾಯ್ತು. ಬಹಳ ಹಿಂದೆ ಪುರಭವನದಲ್ಲೂ ಇದನ್ನವರು ಹೆಚ್ಚು ಸಮರ್ಥವಾಗಿ ಕೊಟ್ಟದ್ದನ್ನೂ ಜ್ಞಾಪಿಸಿಕೊಂಡೆ. ಇವೆಲ್ಲವನ್ನೂ ನಿವಾಳಿಸುವಂತೆ ನಮ್ಮ ದೀವಟಿಗೆ ಬೆಳಕಿನ ಆಟದ ದಾಖಲೀಕರಣದಲ್ಲಿ ತರುಣ ಕಲಾವಿದ ಅಮ್ಮುಂಜೆ ಮೋಹನ ಕುಮಾರ್ ಹನೂಮಂತ ಪ್ರಸ್ತುತಿಯನ್ನೂ ನೆನೆಸಿಕೊಂಡೆ. ಮೊತ್ತವಾಗಿ ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟರಿಗೆ ಒಂದು ತೆರೆದ-ಪತ್ರ ಬರೆದು ನನ್ನ ಮಾತು ಮುಗಿಸುತ್ತೇನೆ.

ಸ್ವಾಮೀ ಗೋವಿಂದ ಭಟ್ಟರೇ ನಿಮ್ಮ ಅನುಭವ, ಕಸಬುದಾರಿಕೆಗಳ ಬಗ್ಗೆ ನಮ್ಮಂತವರಿಗೆ ಸುಮಾರು ತಿಳಿದಿದೆ ಮತ್ತು ಅಪಾರ ಮೆಚ್ಚುಗೆಯೂ ಇದೆ. ನೀವು ಅದನ್ನು ಪುರಾಣಪುರುಷ ರಾಮ ಭಕ್ತಾದಿಗಳಿಗೆ ಹೇಳಿದಂತೆ ‘ಯುಗ ಯುಗ’ಗಳಲ್ಲಿ ದರ್ಶನ ಕೊಟ್ಟು, ಸಾಬೀತು ಪಡಿಸುವುದು ಬೇಡವೇ ಬೇಡ. ಇನ್ನು ಹೊಸ ಪ್ರೇಕ್ಷಕರನ್ನು ಆಕರ್ಷಿಸುವ ಭ್ರಮೆ ಅಥವಾ ಭಕ್ತಾದಿಗಳು ‘ಏಳು ದಶಕ ಮೀರಿದ ತರುಣ’ ಎಂದ ಮಾತಿನಲಂಕಾರಕ್ಕೆ ಜೀವದುಂಬುವ ಹಠಕ್ಕೆ ಬೀಳಬೇಡಿ. ಹಾಗೆ ತೊಡಗಿಕೊಂಡು ಇಂಥ ಪ್ರದರ್ಶನ ಕೊಡುವಾಗ ನಿಮಗೆ ಅಪಾರ ಶ್ರಮವೂ ನಮಗೆ ಅಪಾರ ನೋವೂ ಆಗುವುದಕ್ಕಿಂತ ಹೆಚ್ಚಿನ ಸಾಧನೆ ಆಗುತ್ತಿಲ್ಲ.

ಕೋಡಂಗಿ ವೇಷದಿಂದ ಯಕ್ಷಗಾನದಲ್ಲಿ ತೊಡಗುವ ಬಾಲಕನೊಬ್ಬ ಅನುಭವ ಮತ್ತು ಪ್ರಾಯಕ್ಕೆ ಸಹಜವಾಗಿ ಎರಡನೇ ವೇಷದವರೆಗೆ ಬೆಳೆದು ನಿಲ್ಲುವ ಪರಿ ನಮಗಿಂತ ಚೆನ್ನಾಗಿ ನಿಮಗೆ ತಿಳಿದದ್ದೇ ಇದೆ. ಮತ್ತೆ ನಿಮ್ಮ ಪ್ರಾಯದ ಹಿರಿತನದ ಬಗ್ಗೆ ತಿಳಿಯದ ಯಕ್ಷ-ಪ್ರೇಕ್ಷಕರಿಲ್ಲ. ಆದರೆ ನೀವೇ ಅವೆಲ್ಲಾ ಮರೆತವರಂತೆ ಇಂಥಾ ದೀರ್ಘ ದೇಹಶ್ರಮದ ಪಾತ್ರ ವಹಿಸಿಕೊಳ್ಳುವುದು ತಪ್ಪೇ ತಪ್ಪು. ಖಾಸಗಿ ಅಭ್ಯಾಸ ಪಾಠಗಳಲ್ಲಿ ಬಾಯ್ದೆರೆ ಹೇಳಿ, ಕೂಡಿತಾದಷ್ಟು ತೋರಿಸಿ. ಪ್ರದರ್ಶನಗಳಲ್ಲಿ ಅವನ್ನು ರೂಢಿಸಿಕೊಂಡ ಸಮರ್ಥ ಶಿಷ್ಯರು (ನಿಮ್ಮ ಪಾತ್ರಕ್ಕೆ) ತಮ್ಮ ಶಕ್ತಿ ಖಂಡಿತಾ ಊಡುತ್ತಾರೆ. ಕೊನೆಯ ದಿನಗಳಲ್ಲಿ ವಯೋವೃದ್ಧ ಶಂಭುಹೆಗಡೆ ನಿರ್ಯಾಣದ ರಾಮನಂತಹ ಪಾತ್ರ ಆರಿಸಿಕೊಂಡು ತನ್ನ ನವಿರಾದ ಅಭಿನಯ ಮತ್ತು ವಚೋವಿಲಾಸದಲ್ಲಿ (ವಾಚಿಕಾಭಿನಯ) ಜನಮಾನಸ ವಿರಾಜಮಾನರಾದದ್ದು ನಿಮಗೆ ತಿಳಿಯದ್ದೇನಲ್ಲ. ಅದು ನಿಮಗೆ ಅನುಕರಣೀಯವಾಗಬೇಕಿತ್ತು.

ಹೆಚ್ಚು ಕಡಿಮೆ ನಿಮ್ಮ ಸಮಪ್ರಾಯದ ಚಿಟ್ಟಾಣಿಯವರಿಗಾದರೋ ಕೀಚಕ, ಭಸ್ಮಾಸುರರನ್ನು ಕಳಚಿಕೊಂಡು ಪಾತ್ರ ಪೋಷಣೆ ಮಾಡುವುದು (ಬಹುತೇಕ ಅತಿರೇಕದ ಅಭಿನಯಕ್ಕೆ ಮೀಸಲು) ತಿಳಿದಂತೇ ಇಲ್ಲ, ಪಾಪ (ಇವರ ಬಗ್ಗೆ ನನಗೆ ಕಡಿಮೆ ಗೌರವವೇನೂ ಇಲ್ಲ). ಹಾಗೇ ಪುತ್ತೂರು ಶ್ರೀಧರ ಭಂಡಾರಿಯಂತವರಿಗೆ (ಮತ್ತೆ ಪೂರ್ಣ ಗೌರವದೊಡನೇ ಹೇಳುತ್ತಿದ್ದೇನೆ) ಪ್ರಾಯ ಅರವತ್ತರ ತಪ್ಪು ಮಗ್ಗುಲಿಗೆ ಬಂದರೂ ಅಭಿಮನ್ಯು, ವೃಷಸೇನ, ಬಾಲಲೀಲೆಯ ಕೃಷ್ಣದಂತಹ ಪಾತ್ರಗಳು ಅನಿವಾರ್ಯವಾಗಿ ದೇಹ ಜಖಂ ಆಗಿ ಹೋಯ್ತು.

ಆದರೆ ನೀವು ನಡೆದು ಬಂದ ದಾರಿ ಅಷ್ಟು ಸಪುರ ಓಣಿಯಲ್ಲ, ಹೆದ್ದಾರಿ, ವೈವಿಧ್ಯದ್ದು. (ಇದೇನು ಅಭಿನಂದನ ಪತ್ರವಲ್ಲವಾದ್ದರಿಂದ ಪಟ್ಟಿ ಕೊಡುತ್ತಿಲ್ಲ.) ಹಾಗಿರುವಾಗ ಕನಿಷ್ಠ ಕಾಲರ್ಧ ಗಂಟೆಯ ಕೆಲಸವಿರುವ ಹನೂಮಂತನ ತೆರೆಪೊರಪ್ಪಾಟ್ (ಕಾರ್ತವೀರ್ಯ, ಶಪಥದ ಪರಶುರಾಮ ಇತ್ಯಾದಿ) ಮತ್ತೆ ಮತ್ತೆ ವಹಿಸಿಕೊಳ್ಳಬೇಕು ಯಾಕೆ? ಪ್ರಾಮಾಣಿಕವಾಗಿ ಹೇಳುತ್ತೇನೆ, ನೀವು ಕೆಲಸ ಮಾಡುವಾಗ ನಿಮಗಾಗುವ ಶ್ರಮಕ್ಕಿಂತಲೂ ಹೆಚ್ಚಿಗೆ ನಿಮಗೆ ಏನಾದರೂ ಹೆಚ್ಚುಕಮ್ಮಿಯಾದೀತೇ ಎನ್ನುವ ನಮ್ಮ ಆತಂಕ ದೊಡ್ಡದಾಗುತ್ತದೆ. ನಿಡ್ಳೆ ಮೇಳದ ಮೊನ್ನೆಯ ಪ್ರದರ್ಶನದ ಮಧ್ಯಂತರದಲ್ಲಿ ನಾನು ಚೌಕಿಗೆ ಹಣಿಕಿದಾಗ (ನಿಡ್ಳೆಯವರಿಗೆ ದೊಂದಿ ಬೆಳಕಿನಾಟದ ನನ್ನ ವಿಮರ್ಶೆ ಕೊಡಲು) ನೀವು ಇನ್ನೇನೋ ಪಾತ್ರಕ್ಕೆ ಸಜ್ಜಾಗುತ್ತಿದ್ದದ್ದು ಕಂಡೆ. ಮೊದಲ ಪ್ರಸಂಗ ಮುಗಿದ ಮೇಲೂ ನಿಮ್ಮನ್ನು ವೇದಿಕೆಯಲ್ಲಿ ಕಾಣದಾಗ ಆ ಪಾತ್ರ ಗರ್ವಭಂಗದ ಗರುಡನೇ ಇರಬಹುದು ಎಂದನ್ನಿಸಿತು. ನನ್ನ ಮನಸ್ಸಿನ ಅಭಿಮಾನದ ಮೂರುತಿಯನ್ನು ಇನ್ನೊಮ್ಮೆ ಕೆಡಿಸಿಕೊಳ್ಳಲಿಚ್ಛಿಸದೆ ನಾನು ಸಭಾತ್ಯಾಗ ಮಾಡಿದೆ!

[ವಿ.ಸೂ: ನನ್ನ ಪುಟ್ಟ ನಿಶ್ಚಲ ಕ್ಯಾಮರಾದ ಕೆಲವು ಅಪರಿಪೂರ್ಣ ಚಲ-ಚಿತ್ರ ತುಣುಕುಗಳನ್ನು ಕೇವಲ ಉದಾಹರಣೆಯಾಗಿ ಧಾರಾಳ ಲಗತ್ತಿಸಿದ್ದೇನೆ. ವಿಡಿಯೋ ಗುಣಮಟ್ಟಕ್ಕೆ ಕ್ಷಮೆ ಇರಲಿ]