(ಚಕ್ರವರ್ತಿಗಳು ಎರಡನೆಯ ಸುತ್ತು – ಮೂಲ ಪುಸ್ತಕದಲ್ಲಿ ಮೂರುದಾರಿಗಳು ಅಧ್ಯಾಯದ ಅಂಗಭಾಗ)
‘ಆರೋಹಣ ಪರ್ವತಾರೋಹಿಗಳು ಸಾಹಸಿಗಳು, ಮಂಗಳೂರು ಇಲ್ಲಿ ಭೇಟಿಯಾಗುತ್ತಾರೆ’ ಎನ್ನುವ ಸಣ್ಣ ನಾಮಫಲಕ ನನ್ನಂಗಡಿಯ ಹೊರ ಮೂಲೆಯಲ್ಲಿ ತುಂಬಾ ವರ್ಷಗಳವರೆಗೆ ಶೋಭಿಸುತ್ತಿತ್ತು. ಅದನ್ನು ನೋಡಿಯೇ ಪರ್ವತಾರೋಹಣದ ಕುರಿತು ವಿಚಾರಿಸಿದವರು, ತಂಡದಲ್ಲಿ ಬಂದವರು ತುಂಬ ಕಡಿಮೆ. ಆದರೆ ದಿನಪೂರ್ತಿ ನಾನಂತು ಪುಸ್ತಕ ವ್ಯಾಪಾರಿ ಎಷ್ಟೋ ಆರೋಹಣದ ವಕ್ತಾರನೂ ಅಷ್ಟೇ ಆಗಿರುತ್ತಿದ್ದೆ. ಸಹಜವಾಗಿ ನಮ್ಮ ಅನೌಪಚಾರಿಕ ಕೂಟ ಹೊಸ ಹೊಳಹು ಕಾಣುತ್ತಲೇ ಇತ್ತು. ವರ್ಷದ ಮೊದಲಲ್ಲಿ ಕ್ಯಾಲೆಂಡರ್ ನೋಡಿ, ಬರಲಿರುವ ರಜಾದಿನಗಳನ್ನು ಹೊಂದಿಸಿ, ಊರಿನಿಂದ ದೂರ ಓಡಲು ನೆಪಗಳನ್ನು ನಾವು ಹುಡುಕುತ್ತಲೇ ಇದ್ದೆವು. ಹೀಗೆ ೧೯೮೫ರ ಜನವರಿ ೨೬ ಶನಿವಾರ ಬರುತ್ತದೆಂದು ಕಂಡಾಗ ಆದಿತ್ಯವಾರ ಸೇರಿಸಿ, ಎರಡು ದಿನಕ್ಕೆ ಹಾಕಿಕೊಂಡ ಯಾತ್ರೆ ವರಂಗದಿಂದ ವರಾಹಿಗೆ.
ದಿನ ನಿಶ್ಚಯಕ್ಕಿಲ್ಲದ ಗೊಂದಲ ಬೈಕ್-ಜನ ಹೊಂದಾಣಿಕೆಯಲ್ಲಿ ಮೂಡಿತು. ಚುನಾವಣೆಗೆ ಮೊದಲಿನ ಪಕ್ಷ-ವ್ಯಕ್ತಿ ಹೊಂದಾಣಿಕೆಯಷ್ಟೇ ಜಿಡುಕು. ಕಿರಣ್ ಕುಮಾರ್‌ಗೆ ತಿರುಗುವ ಹುಮ್ಮಸ್ಸು. ಆದರೆ ಸ್ವಂತ ವಾಹನದ ವಿಚಾರವಿರಲಿ, ಬಾಡಿಗೆ ಸೈಕಲ್ಲೂ ಬಿಡಲಾರದ ಕಲಿಕೆ. ಅವರಿಗೆ ಸಿಕ್ಕ ಅರವಿಂದ ರಾವ್ – ಹುಚ್ಚು ಕುದುರೆ; ಅದುವರೆಗೆ ಹುಚ್ಚರ ಸಂತೆ – ‘ಆರೋಹಣ’ದ ಪರಿಚಯವಿದೂರ ಅಷ್ಟೆ. ಅರುಣ್ ನಾಯಕ್ ಸವಾರಿಪ್ರಿಯ; ಹೊಸ ಜನ, ಜಾಗ, ದೃಶ್ಯಗಳ ಬಗ್ಗೆ ಗಮನ ಅಷ್ಟಕ್ಕಷ್ಟೆ. ಆದರೆ ತನ್ನ ಸಹವಾರನ ಬಗ್ಗೆ ಮಾತ್ರ ಏನೋ ಖಯಾಲಿ. ಆತನ ಹುಡುಕಾಟದಲ್ಲಿ ನಿತಿನ್, ಪಾರು, ರಾಮಮೋಹನ್ ಇತ್ಯಾದಿ ಪಟ್ಟಿ ಬೆಳೆದರೂ ಆ ಮಿತ್ರರಿಗೆ ಒಲಿಯದ ಸ್ಥಾನ ವಿನ್ಸಿಗೆ ದಕ್ಕಿತು. ಆದರೆ ಆತನದೊಂದೇ ಕರಾರು – ಅದಿತ್ಯವಾರ ಮಧ್ಯಾಹ್ನದ ಬ್ಯಾಂಕ್ ಪ್ರವೇಶ ಪರೀಕ್ಷೆಗೆ ಹಾಜರಾಗಲು ಅನುಕೂಲವಾಗುವಂತೆ ವಾಪಾಸಾಗಬೇಕು. ಮೊದಲೇ ಹೇಳಿದಂತೆ ಅರುಣ್ ವಿವರಗಳ ಬಗ್ಗೆ ಗಮನ ಕೊಟ್ಟದ್ದೇ ಇಲ್ಲ. ವಿನ್ಸಿಗೆ ಕಣ್ಣುಮುಚ್ಚಿ ಒಪ್ಪಿಗೆ ಕೊಟ್ಟರು. ಹೊರಡುವಂದು ಬೆಳಿಗ್ಗೆ ಇಬ್ಬರಿಗೂ ಜ್ಞಾನೋದಯವಾಯ್ತು. ಪ್ರವಾಸ ಸುಮಾರು ನಾನೂರು ಕಿಮೀ ಉದ್ದದ್ದು ಮತ್ತು ಅವಧಿ ಎರಡು ದಿನಗಳದ್ದು. ಅನಿರೀಕ್ಷಿತವಾಗಿ ವಿನ್ಸಿ ಪರೀಕ್ಷೆ ಮರೆತು ನಮ್ಮೊಡನೆಯೇ ಉಳಿದರು (ಮತ್ತೆ ಬ್ಯಾಂಕ್ ಗುಮಾಸ್ತಗಿರಿಗಿಂತ ಅನುಕೂಲದ ವಿದೇಶೀ ನೌಕರಿ ಸಿಕ್ಕು ಇಂದೂ ಅಲ್ಲೆಲ್ಲೋ ಹೆಚ್ಚು ಅನುಕೂಲದಲ್ಲಿದ್ದಾರೆ).
ಕಾರ್ಯಕ್ರಮದ ಮೂಲ ಪ್ರೇರಣೆ ಕೇಶವ ಉಚ್ಚಿಲ್. ಇವರು ಹೆಂಡತಿ ಮತ್ತೆರಡು ಮಕ್ಕಳ ಸಂಸಾರಿ. ಇವರ ಕಿರಿಯ ಮಗ ಚಿನ್ನನಿಗೆ ಜಾಂಡೀಸ್ ಬಿಟ್ಟ ಹೊಸತು. ಇವರಿಗೆ ಸಹಜವಾಗಿ ಪ್ರವಾಸ ಪ್ರಯಾಸವಾದೀತೋ ಎಂಬ ಆತಂಕ. ತಮ್ಮನ ಆರೈಕೆಗೆಂದು ತಾಯಿ ಹಿಂದುಳಿದರೆ ಅಪ್ಪನ ಹಿಂದಿನ ಸೀಟು ತನಗೆ ಗ್ಯಾರಂಟೀಂತ ದೊಡ್ಡ ಮಗ ಕಿಶೋರನ ಲೆಕ್ಕಾಚಾರ. ಇವರ ಗೋಜಲು ಬಿಡಿಸುವಂತೆ ಚಾರ್ಲ್ಸ್ ಬಂದರು. ಅವರ ಮನದನ್ನೆ (ಮೈಸೂರಿನಾಕೆ) ಮನೆಯಾಕೆಯಾಗಲು (ಮದುವೆಗೆ) ಇನ್ನೂ ಆರು ತಿಂಗಳು ಬಾಕಿಯಿತ್ತು. ಹಾಗಾಗಿ ಈಗ ಬಂದರಷ್ಟೇ ಅವಕಾಶ ಎಂದುಕೊಂಡು ಮಿತ್ರ ಶರತ್, ಸೂರ್ಯ, ಸುಬ್ಬರನ್ನು ಸರದಿಯಲ್ಲಿ ಆಹ್ವಾನಿಸಿದರಂತೆ. ಅವರಿಗೆಲ್ಲ ರಾಜ್ಯದ ಉಪಮುಖ್ಯಮಂತ್ರಿತ್ವಕ್ಕೆ ಕರೆಸಿಕೊಂಡವನ ಬಿಗುಮಾನ. ಚಾರ್ಲ್ಸ್ ಒಂಟಿಯಾದರೂ ಸೈ ಎಂದವನ ಬೆನ್ನು ಕಿಶೋರ ಹಿಡಿದ. ಉಚ್ಚಿಲ್ ಧೈರ್ಯ ಮಾಡಿ ಮಗ ಚಿನ್ನ ಹಾಗೂ ಮಡದಿ ಶಕುಂತಲರೊಡನೆ ಬೈಕ್ ಏರಿಯೇ ಬಿಟ್ಟರು. ಬಹುಶಃ ವಿವಾದರಹಿತ ಏಕೈಕ ಕೂಟ ನಮ್ಮದು – ನಾನು, ದೇವಕಿ ಮತ್ತು ಅಭಯ.
ಸಾಲುಗಟ್ಟಿ ಐದು ಬೈಕು, ಹನ್ನೆರಡು ಮಂದಿ ಬೆಳಗ್ಗಿನ ಹೂ ಬಿಸಿಲಿನಲ್ಲಿ ಮಂಗಳೂರು ಬಿಟ್ಟೆವು. ರಾಷ್ಟ್ರೀಯ ಹೆದ್ದಾರಿಯಲ್ಲಿ ಪಡುಬಿದ್ರೆಗಾಗಿ ಕಾರ್ಕಳದತ್ತ ಸಾಗಿದೆವು. ಗಣರಾಜ್ಯೋತ್ಸವದಲ್ಲಿ ಸಂಭ್ರಮಿಸಲು ಶಾಲೆಗಳಿಗೆ ಧಾವಿಸುತ್ತಿದ್ದ ಮಕ್ಕಳ ಗುಂಪು, ಹಾಲು ತುಂಬಿದ ಕ್ಯಾನಿನ ಭಾರಕ್ಕೆ ಓಲಾಡುವ ಸೈಕಲಿಗರು, ರಾತ್ರಿ ಬಿಟ್ಟು ಹೋದ ಅಸಂಗತವನ್ನು ಪಾಲು ಪಟ್ಟಿ ಮಾಡುತ್ತಿದ್ದ ಕಾಗೆನಾಯಿಗಳು, ಬೇಲಿಯಂಚಿನಲ್ಲಿ ಅಗಳಿನೀಚೆಯಲ್ಲಿ ರಾತ್ರಿ ಬೆಳಗಾಗುವುದರೊಳಗೆ ಸಸ್ಯವರ್ಗದಲ್ಲಿ ನಡೆದಿರಬಹುದಾದ ಬೆಳವಣಿಗೆಯನ್ನು ಸ್ವಂತ ಖಾತೆಗೆ ಜಮಾ ಮಾಡಲು ಧಾವಿಸುವ ಜಾನುವಾರುಗಳೇ ಮೊದಲಾದವು ಹೇಳಿದಷ್ಟು ಉಂಟು. ಅವನ್ನು ಅವಗಣಿಸಿ ದಿಟ್ಟಿ ದೂರಕ್ಕಟ್ಟಿದರೆ ಇದುವರೆಗೆ ಅಗೋಚರವಾಗಿದ್ದ ಪಶ್ಚಿಮ ಘಟ್ಟ ಕಂಗೊಳಿಸುತ್ತಿದ್ದಂತೆ ಕಾರ್ಕಳ ಬಂತು.
[ಆ ಕಾಲದಲ್ಲಿ ಜಿಲ್ಲೆಯೊಳಗಿನ ಏಕೈಕ ಮಾದರಿ ರಸ್ತೆ ಪಡುಬಿದ್ರೆಯಿಂದ ಕಾರ್ಕಳದ ಹೊರವಲಯಕ್ಕಾಗಿ ಹಾದು ಹೋಗುವ ಕುದುರೆಮುಖದ್ದು. ಮಂಗಳೂರು-ಮೂಡಬಿದ್ರೆ-ಕಾರ್ಕಳ ಮಾರ್ಗ, ಲೆಕ್ಕಕ್ಕೆ ಆರೆಂಟು ಕಿಮೀ ಹತ್ತಿರದ್ದೇ ಆದರೂ ನಾವು ಅನಿವಾರ್ಯದಲ್ಲಿ ಮಾತ್ರ ಅನುಸರಿಸುವಷ್ಟು ಸಪುರ, ಹರಕು. ಅದರ ಗುಡ್ಡಕ್ಕೇರು, ಕಣಿವೆಗೆ ಬೀಳಿನಲ್ಲೂ ದಮ್ಮು ಕಟ್ಟಿ ಧಾವಿಸುವ ಬಸ್ಸುಗಳ ಮೇಲಾಟದಲ್ಲಿ, ಅಂಕು ಡೊಂಕಿನಲ್ಲಿ ಅಷ್ಟೂ ದಾರಿ ಆಕ್ರಮಿಸಿ ಧುತ್ತನೆ ಎದುರಾಗುವ ಮುರಕಲ್ಲು ಸಾಗಿಸುವ ಲಾರಿಗಳಿಂದ ನಮಗಂತು ಆ ದಾರಿ ಬಲು ಅಪ್ರಿಯ. ಈಗ ಬದಲಾದ ಈ ದಾರಿಯ ವೃತ್ತಾಂತಕ್ಕೆ ಇಲ್ಲೇ ಹಳೆಯ ಕಡತ ‘ತೀರ್ಥಯಾತ್ರೆ’ ನೋಡಲು ಇಲ್ಲಿ ಚಿಟಿಕೆ ಹೊಡೆಯಿರಿ. ಸಹಜವಾಗಿ ನಾವು ಪಡುಬಿದ್ರೆ – ಕಾರ್ಕಳ ಬಯಸುತ್ತಿದ್ದೆವು. ಮಂಗಳೂರು – ಉಡುಪಿ ರಾಷ್ಟ್ರೀಯ ಹೆದ್ದಾರಿಯೇ ಆದ್ದರಿಂದ ಸ್ಥಿತಿ ಉತ್ತಮವಿತ್ತು. ಹೊಂಡಗಳು ಮೂಡಿದರೂ ನಮ್ಮ ಒಂದು ಸಾಲು ಚಕ್ರಕ್ಕೆ ಜಾಡು ಅರಸುವಲ್ಲಿ ವಿಸ್ತಾರ ಅವಕಾಶಗಳಿರುತ್ತಿತ್ತು. ಆಗೀಗ ಡಾಮರಲ್ಲದಿದ್ದರೂ ತೇಪೆ ಕಾಣುತ್ತಿತ್ತು. ಹುಚ್ಚುಗಟ್ಟಿ ಬರುವ ಲಾರಿ, ಬಸ್ಸುಗಳಿಗೆ ನಮ್ಮ ಜೀವದ ಹೊಣೆಯೇನೂ ಇರುತ್ತಿರಲಿಲ್ಲವಾದರೂ ನಮಗೆ ಬದುಕಬೇಕೆಂದಿದ್ದರೆ ಅದೃಷ್ಟ ನಮ್ಮ ಕಡೆಗೆ ಹೆಚ್ಚು ವಾಲುತ್ತಿತ್ತು (ಯುದ್ಧದಲ್ಲಿ ಸಾರಿ ಕೊಲ್ಲುವವನಿಗೆ ಗೌರವ ಜಾಸ್ತಿ!).]
ಕಾಫಿ ತಿಂಡಿಗೆಂದು (ನಮ್ಮಲ್ಲಿ ಬಳಕೆಯಲ್ಲಿರುವಂತೆ ಕಾಫಿಂಡಿ) ಎಲ್ಲ ಒಂದೆಡೆ ನಿಂತೆವು. ಸಮೂಹ ಓಟದ ಮೊದಲ ನಿಲುಗಡೆಯಾದ್ದಕ್ಕೆ ಪರಸ್ಪರ ವಿಮರ್ಶೆ ನಡೆದಿತ್ತು. ಉಚ್ಚಿಲರ ಬೈಕಿಗೆ ಹೊಗೆ ಹೆಚ್ಚು ಎಂದ ನನಗೆ ಮುಂದಿನ ಎಮ್ಮೆಯ ಬೆತ್ತಲೆಗೆ ಗಹಗಹಿಸಿದ ಎಮ್ಮೆಯ ಪಟ್ಟ ದೊರಕಿತು. ನನ್ನದು ತುಸು ಹೆಚ್ಚೇ ಧೂಮಕಾರಕವಾಗಿದ್ದಿರಬೇಕು! ಬೆನ್ನಿಗೇರಬೇಕಾದ ಒಂದು ಚೀಲವನ್ನು ಯಾರೋ ಬೈಕ್ ಕ್ಯಾರಿಯರಿನಲ್ಲಿ ಅಡ್ಡ ಕಟ್ಟಿದ್ದರು. ಅದರ ಹೂರಣ ದಾರಿಯಲ್ಲಿ ಈಡಾಡಿತ್ತು. ಅದನ್ನು ಗುರುತಿಸಿ ಹೆಕ್ಕಿದ ಹೆಮ್ಮೆ ದೇವಕಿಯದು. ಆದರೆ ಹೆಮ್ಮೆಯ ಏಕಸ್ವಾಮ್ಯಕ್ಕೆ ವಿನ್ಸಿಯ ವಿರೋಧವಿತ್ತು. ಅವರು ಶಕುಂತಲ ಬೀಳಿಸಿದ (ತಪ್ಪು ತಪ್ಪು, ಉಂಗುರ ಅಲ್ಲ) ಕರವಸ್ತ್ರ ಹೆಕ್ಕಿದ್ದರು. ಅರವಿಂದರಿಗೆ ಯಂತ್ರಗಳಲ್ಲಿ ಪ್ರೀತಿ ಹೆಚ್ಚು. ಅದರಲ್ಲೂ ಬಂಟ್ವಾಳದ ಕಾಲೇಜಿನಲ್ಲಿ ಕನ್ನಡ ಕಲಿಸಿದ ಗುರು ಉಚ್ಚಿಲರ ಬೈಕ್ ಎಂದ ಮೇಲೆ ಗುರುತರವಾದ ಒಲವು. ಹಾಗೆ ಅದನ್ನು ನೇವರಿಸಿದವರು ಪೆಟ್ರೊಲ್ ಟ್ಯಾಂಕ್ ತುಸುವೆ ಬೆಸುಗೆ ಬಿಟ್ಟು ಸೋರುತ್ತಿದ್ದುದನ್ನು ಗುರುತಿಸಿದರು. ಮತ್ತೆ ಎಲ್ಲ ಬೇಗನೆ ಕಾಫಿ ಮುಗಿಸಿ ಬೆಸುಗೆ ಅಂಗಡಿ ಹುಡುಕಿದೆವು. ಅಲ್ಲಿ ಉಚ್ಚಿಲ ದಂಪತಿಯನ್ನು ಮುಂದಿನ ದಾರಿ ಬಗ್ಗೆ ಯುಕ್ತ ಸೂಚನೆಗಳೊಡನೆ ಬಿಟ್ಟು ನಾವು ಸೋಮೇಶ್ವರ ದಾರಿ ಹಿಡಿದೆವು. ಚಿನ್ನ ಈಗ ಅರವಿಂದ ಕಿರಣರ ಸಹಯಾನಿ. ಘಟ್ಟ ಸಾಲು ನಮ್ಮ ಬಲಕ್ಕಿತ್ತು. ಅದರಲ್ಲಿ ಉತ್ತರಕ್ಕೆ ನಸು ಕೊಂಕಿದಂತೆ ತೋರುವ ಮಹಾಶಿಖರ ವಾಲಿಕುಂಜ (ಸ.ಮ. ೧೦೩೯ ಮೀ) ಮನೋಹರ. ಅದು ಮರವೆಗೆ ಸಂದು ಹೋಗುವ ಮುನ್ನ ನಮ್ಮ ಯೋಜನೆಯಂತೆ ಮೊದಲ ವೀಕ್ಷಣ ನಿಲ್ದಾಣ ಬಂತು.
ಪುಟ್ಟ ಪೇಟೆಯ ಹಳ್ಳಿ ವರಂಗ. ಮೂವತ್ತು ನಲವತ್ತು ಮೀಟರ್ ಪೂರ್ವಕ್ಕೆ ನೇಮಿಶನಾಲಯ, ಜೈನಮಠ ಇವೆ. ಆಚೆಗೊಂದು ಪೌಳಿಗೋಡೆ. ಅದರಾಚೆಗೆ ಸುಂದರ ಸರೋವರ. ಸಹ್ಯಾದ್ರಿ ಘಟ್ಟ ಮಾಲೆಯ ಪೆರ್ಲಗುಡ್ಡೆ ಎಂಬ ಪುಟ್ಟ ಹೂವಿನ ಸಂಚಯಿತ ಮಧುವಿದು – ಪದ್ಮಾಂಬುಧಿ. ಒಂದೆಡೆ ಕಾಡುಬೆಟ್ಟ, ಇನ್ನೊಂದೆಡೆ ಗದ್ದೆ, ತೋಟ. ತೆಂಗಿನ ಸಾಲು ಅಂಚುಗಟ್ಟಿ, ನೀರು ಪೂರಾ ತಾವರೆಯರಳಿಸಿ ನಡುವೆ ನಿಂತಿದೆ ಸರಳ ದೇವಳ. ಮಠದಲ್ಲಿ ದೋಣಿ ಹಾಸಲು ತೆತ್ತು ಬಂದರೆ ಪುಟ್ಟ ದೋಣಿ ನಿಮ್ಮ ಸೇವೆಗೆ ಸಿದ್ಧ. ದೋಣಿ ಸಣ್ಣದಾಗಿ ಹೊರುವ ಶಕ್ತಿ ಕಡಿಮೆಯಾದರೇನು, ಅವಸರಿಸದೆ, ಆಚಿಂದೀಚೆ ಎಷ್ಟು ಸಲವಾದರೂ ಒಯ್ಯುವ ಅಂಬಿಗನಿದ್ದಾನೆ. ಆತ ಆ ನಡುವಣ ಕೆರೆದೇವಳದ ಅರ್ಚಕನೂ, ಸಹೃದಯಿ ಮಾರ್ಗದರ್ಶಿಯೂ ಹೌದು. ದೇವಾಲಯಕ್ಕೆ ನಾಲ್ಕೂ ದಿಕ್ಕುಗಳಿಂದ ಏರಿಬರಲು ವಿಸ್ತಾರ ಸೋಪಾನಗಳಿವೆ. ಮೇಲೆ ಪುಟ್ಟ ಅಂಗಳ ಮತ್ತೆ ನಾಲ್ಕು ಬಾಗಿಲುಗಳ ಗರ್ಭಗುಡಿ. ಒಳಗೆ ಪ್ರತಿ ದಿಕ್ಕಿಗೂ ಮುಖ ಮಾಡಿ ಒಂದೊಂದು ಕರಿಕಲ್ಲ ತೀರ್ಥಂಕರ ಮೂರ್ತಿ. ಪೂರ್ವದಿಕ್ಕಿಗೆ ಮುಖಮಾಡಿದಂತೆ ಅಲ್ಲಿಗೆ ಅಧಿದೇವಿ, ಸಾರ್ಥಕ ಕಲ್ಪನೆಯೂ ಆದ ಪದ್ಮಾವತಿಯ ವಿಗ್ರಹವೂ ಇದೆ. ಭಕ್ತ ಮನೋರಥ ‘ಕಾಯೋ’ ‘ಹಣ್ಣೋ’ ಎಂದು ಹೂವುದುರಿಸಿ ಕಣಿ ನುಡಿಯುವಲ್ಲಿಯೂ ಈಕೆ ಖ್ಯಾತಳಂತೆ. ನಮಗಾಗಿ ದೋಣಿ ಎರಡೆರಡು ಬಾರಿ ಆಚೀಚೆ ಓಡಾಡಿತು. ಬಹುಶಃ ಈ ದೋಣಿಮಿತಿಯೇ ಇಲ್ಲಿ ಜಂಗುಳಿ ತಡೆದು ಕೊಳಕಿಗೂ ಮಿತಿ ಹೇರಿದೆ. ಧರ್ಮ ವಾಣಿಜ್ಯೀಕರಣದ ಅಮಲು ಇಲ್ಲಿಗೆ ಬಡಿಯದಿರಲಿ. ಹೊಟ್ಟೆ ಬಟ್ಟೆಗಳ ಹೆಸರಿನಲ್ಲಿ ಪ್ರಕೃತಿಯನ್ನು ಕಂಡಾಬಟ್ಟೆ ಹಿಂಸಿಸಿದ್ದೇವೆ. ಕನಿಷ್ಠ ಇಲ್ಲಿ, ದೇವರು = ಪ್ರಕೃತಿ ಎಂಬಲ್ಲಿಯಾದರೂ ಬುದ್ಧಿವಂತರಾಗೋಣ. ಪದ್ಮಾಕರನಲ್ಲಿ (ಕೆರೆ) ದೊಡ್ಡ ದೋಣಿಯ ದಾಂಧಲೆ, ಸೇತುವೆಯ ನೆಪದಲ್ಲಿ ಉಕ್ಕು ಕಾಂಕ್ರೀಟಿನ ಸಂತೆ ಸೇರದಿರಲಿ ಎಂದು ಹಾರೈಸಿ ಹೊರಟೆವು. ಮುಖ್ಯ ದಾರಿಯ ಬದಿ ಸೇರಿ ಉಚ್ಚಿಲ ದಂಪತಿಯ ದಾರಿ ಕಾದೆವು. [ವರಂಗದ ಕುರಿತೊಂದು ಕೃತಿಚೌರ್ಯದ ಕಥೆಗೂ ‘ತೀರ್ಥಯಾತ್ರೆ’ ನೋಡಿ]
ಸುಮಾರು ಹತ್ತೇ ಮಿನಿಟಿನಲ್ಲಿ ವಿಜಯದ ನಗೆಯೊಡನೆ ಅವರು ಬಂದರು. ಆದರೆ ಅರವಿಂದರಿಗೆ ಸ್ವತಃ ತನಿಖೆ ಮಾಡದೆ ವಿಶ್ವಾಸ ಬರುವಂತಿರಲಿಲ್ಲ. ಮತ್ತೆ ನೇವರಿಸಿ, ಹಣಿಕಿ ನೋಡಿದರು. ಆಶ್ಚರ್ಯವೆಂದರೆ ಉಚ್ಚಿಲರ ಒಂದು ಗಂಟೆಯ ಕಾಲಹರಣ, ಹದಿನೈದು ರೂಪಾಯಿಯ ವೆಚ್ಚ ಮತ್ತು ವರಂಗದರ್ಶನದ ತ್ಯಾಗ ವ್ಯರ್ಥವಾಗಿದ್ದವು. ಬೆದಕಿದಾಗ ತಿಳಿಯಿತು, ಕೆಲಸದಲ್ಲಿ ಮೋಸವಾಗಿರಲಿಲ್ಲ. ಕೆಳದವಡೆಯ ನೋವಿಗೆ ಮೇಲ್ದವಡೆಯ ಹಲ್ಲು ಕಿತ್ತಂತಾಗಿತ್ತು. ಎಡಬದಿಯ ಸೋರಿಕೆಗೆ ಬಲಬದಿಗೆ ಒಳ್ಳೆಯ ಬೆಸುಗೆ ಹಾಕಿದ್ದ! ನಮ್ಮ ಮುಂದಿನ ದಾರಿಯಲ್ಲಿ ಒಳ್ಳೆಯ ರಿಪೇರಿ ಜನ ಸಿಗುವ ಭರವಸೆ ಇರಲಿಲ್ಲ. ಹಾಗಾಗಿ ರೋಗನಿದಾನ ಮಾಡಿದ್ದ ಅರವಿಂದರೇ ಇಲಾಜೂ ಹುಡುಕಿದರು. ನಮ್ಮಲ್ಲೇ ಇದ್ದ ಸಾಬೂನನ್ನು ತುಸುವೇ ನೀರಿನಲ್ಲಿ ನೆನೆಸಿ ದಪ್ಪ ಲೇಪ ಹಾಕಿದರು. ಇದರ ತಾಳಿಕೆ ಮತ್ತು ಬಾಳಿಕೆ ಕಂಡು ಮುಂದೆ ಪೇಟೆ ಮತ್ತು ಸಮಯ ಸಿಕ್ಕಲ್ಲೂ ಉಚ್ಚಿಲರು ರಿಪೇರಿ ಯೋಚನೆಯೇ ಮಾಡಲಿಲ್ಲ. ಮುಂದಿನೂರು (ಹರಹರಾ ಶ್ರೀ ಚೆನ್ನ) ಸೋಮೇಶ್ವರ, ಪ್ರಖ್ಯಾತ ಆಗುಂಬೆ ಘಾಟಿಯ ಪಾದ. ಊರಿಗೆಷ್ಟೋ ಮೊದಲು ಆ ದಾರಿ ಸಾಗಿದ ಘಟ್ಟದ ದರ್ಶನ ನಮಗಾಗುತ್ತದೆ. ಆದರೆ ಅದರ ಎದೆಯನ್ನೇ ನೇರ ಮೇಲಿನಿಂದ ಬುಡದವರೆಗೆ ಸೀಳಿದಂತೆ ತೋರುತ್ತಿತ್ತು. ಅದು ದೂರವಾಣಿ ತಂತಿಗೆ ಕಾಡಿನ ‘ಉಪಟಳ’ದಿಂದ ಅಬಾಧಿತವಾಗಿ ಉಳಿಯಲು ಇಲಾಖೆ ವಹಿಸಿದ ಅತಿ ಎಚ್ಚರ; ಯಾವುದೇ ಮರ, ಕುರುಚಲು ಸುಮಾರು ಮೂವತ್ತಡಿ ಅಗಲಕ್ಕೆ ಘಟ್ಟದ ಅಡಿಯಿಂದ ಮುಡಿಯವರೆಗೆ ತಲೆ ಎತ್ತುವಂತಿರಲಿಲ್ಲ.
[ಅಂದು ವಾಸ್ತವದಲ್ಲಿ ಘಟ್ಟದ ನೆಲ ಘಾಸಿಗೊಳ್ಳುತ್ತಿರಲಿಲ್ಲ. ಆದರೆ ಇಂದು ತೋರಿಕೆಗೆ ‘ತಂತಿ ಜಮಾನ’ ಹೋಗಿ, ಭೂಗತ ಕೇಬಲ್ ಬಂದು ಕಾಡು ತಾನೇ ತಾನು ನಲಿಯುತ್ತಿರಬಹುದೆಂದು ಭ್ರಮಿಸುವುದು ಬೇಡ. ಇಂದು ಸಂಪರ್ಕ ಮಾಧ್ಯಮ ಮುಕ್ತವಾಗಿದೆ. ಹಿಂದಿನ ಇಲಾಖೆಯ ಒಂದು ಕಂತು ತಂತಿಗಳಿಗೆ ಬದಲಿಯಾಗಿ ಇಂದು ಪ್ರತಿ ಕಂಪೆನಿಗೂ ಕೇಬಲ್ಲು ಆಗಬೇಕು. ಇವು ಅಕ್ಷರಶಃ ನೆಲ ಸೀಳಿಯೇ ಸ್ಥಾಪನೆಗೊಳ್ಳುತ್ತವೆ. ಅದೂ ಒಮ್ಮೆಗೇ ಮುಗಿಯುವುದಿಲ್ಲ. ಕಂಪೆನಿಗಳೂ ಅಸಂಖ್ಯ. ಹೊಸತು, ವಿಸ್ತರಣೆ, ರಿಪೇರಿ ಎಂದು ಮತ್ತೆ ಮತ್ತೆ ನೆಲ ಸೀಳುತ್ತಲೇ ಇರುತ್ತಾರೆ. ಇವೆ, ಬರುತ್ತಲೇ ಇರುತ್ತವೆ. ಈಗ ಕೇವಲ ಚಾಚುವ ಕೊಂಬೆ ಸವರುವುದಲ್ಲ. ಅಸಂಖ್ಯ ವರ್ಣಮಯ ಕೇಬಲ್ಲುಗಳು ಬೇರನ್ನೇ ತಡಕುತ್ತವೆ, ಘಟ್ಟದ ಮೈಯನ್ನೇ ಸಡಿಲಿಸುತ್ತವೆ!] ಕಳಶಪ್ರಾಯವಾಗಿ ಬೆಟ್ಟದ ಶಿಖರಕ್ಕೆ ಚುಚ್ಚಿದ ಮಹಾ ಭರ್ಚಿಯಂತೆ ಮೇಲೊಂದು ಮೈಕ್ರೋವೇವ್ ಟವರ್. ಇಷ್ಟಾದರೂ ಘಟ್ಟವನ್ನುತ್ತರಿಸುವಾಗ ಪ್ರಾಕೃತಿಕವಾಗಿ ಬಲು ಆಕರ್ಷಣೀಯ ದಾರಿ ಆಗುಂಬೆ ಘಾಟಿ. ಅದರ ಅಂಕುಡೊಂಕು ಅನುಸರಿಸಿ, ‘ಆನೆಬಂಡೆ’ಗೆ ತಲೆ ತಗ್ಗಿಸಿ, ವೀಕ್ಷಕ ಕಟ್ಟೆಗಳಲ್ಲಿ ಕೊಳ್ಳದಿಟ್ಟಿಸಿ, ಮೇಲ್ನಾಡು ಸೇರಿದೆವು. ರಾಜ್ಯದೊಳಗೆ ದಕ್ಷಿಣ ಕೊನೆಯ ಪಟ್ಟಿಮಲೆಯಿಂದ, ಉತ್ತರ ಕೊನೆಯ ಅಣಶಿಯವರೆಗೂ ಇರುವ ಘಾಟಿ ದಾರಿಗಳಲ್ಲಿ ಆಗುಂಬೆಯಂತೆ ಒಂದೇ ಬೆಟ್ಟ ಮೈಯಲ್ಲಿ, ಅತ್ಯಂತ ಕ್ಷಿಪ್ರವಾಗಿ ಮತ್ತು ನೇರ ಪಶ್ಚಿಮ-ಪೂರ್ವವಾಗಿ ಹರಿಯುವ ಇನ್ನೊಂದು ದಾರಿಯಿಲ್ಲ. ಹೀಗಾಗಿ ಒಂದೇ ಮೆಟ್ಟಿನಲ್ಲಿ ಸಾಗರಪರ್ಯಂತ ದೃಶ್ಯಾವಳಿಗೂ ಸುಂದರ ಸೂರ್ಯಾಸ್ತಕ್ಕೂ ಇದು ಪ್ರಶಸ್ತ ನೆಲೆಯಾಗಿ ಶೋಭಿಸುವುದು ಸಹಜವಾಗಿಯೇ ಇದೆ.
[ಆಗುಂಬೆ ಘಾಟಿಯ ನನ್ನ ಮೊದಲ ಭೇಟಿ ನನ್ನ ಸೋದರ ಮಾವನ ದಿಬ್ಬಣಯಾನ. ಆಗ ಎದುರಾದ ಹುಲಿಸಂಸಾರವೂ ನನ್ನನುಭವಕ್ಕೊದಗಿದ ಮೊದಲ ಮತ್ತು ಬೆರಗಿನ ಮುಖ. ಮತ್ತೆ ಸಾಹಸಾಪೇಕ್ಷೆಯಲ್ಲೂ ಮಾರ್ಗಕ್ರಮಣಕ್ಕಾಗಿಯೂ ನಾನು ಈ ದಾರಿ ಸವೆಸಿದ್ದಕ್ಕೆ ಲೆಕ್ಕ ಇಲ್ಲ. ಕುಸಿದು ಬಿದ್ದ ಹಳಗಾಲದ ವೀಕ್ಷಣ ಕಟ್ಟೆ ಅಕರಾಳವಿಕರಾಳವಾಗಿ ಹೊಸರೂಪ ತಳೆದದ್ದು, ಪರಿಸರ ವೈರಿಯಾಗಿ ವಿಕಸಿಸುತ್ತಲೇ ಇರುವುದು ಹೇಳಿ ಪ್ರಯೋಜನವಿಲ್ಲ. ಪ್ರತಿ ಮಳೆಗಾಲದಲ್ಲೂ ಸಣ್ಣಪುಟ್ಟ ಭೂ ಕುಸಿತ, ದಾರಿ ಬಂದ್, ಪತ್ರಿಕೆಗಳಿಗಷ್ಟೇ ಮೀಸಲಾದ ಆಶ್ವಾಸನೆಗಳು ಮತ್ತು ಮುಗಿದ ಲಕ್ಷಾಂತರ ರೂಪಾಯಿ ಅನುದಾನಗಳ ಲೆಕ್ಕ ಹಿಡಿದವರಿಲ್ಲ. ಆದರೂ ಇಲ್ಲಿನ ನೆಲದ ದೊಡ್ಡ ದೊಡ್ಡ ಕಾಂಕ್ರೀಟು ಹಲಗೆಗಳು ಕೇವಲ ಬೈಕ್ ಓಡಿದಾಗಲೂ ದಣ ಭಣ ಎನ್ನುವುದು ವಾಸ್ತವಕ್ಕೆ ಹಿಡಿದ ಕನ್ನಡಿ. ಇವುಗಳಿಗಿಂತ ಭಿನ್ನ ಚಿತ್ರ ಕೊಟ್ಟವರು ತೀರ್ಥಳ್ಳಿಯ ಗೆಳೆಯ ಜವಳಿ. ಘಟ್ಟ ಏರಿ ಮುಗಿಯುವಲ್ಲೇ ಅರಣ್ಯ ಇಲಾಖೆಯ ಒಂದು ತನಿಖಾ ಠಾಣೆ ಇದೆ. ಅಲ್ಲಿ ನಿಲ್ಲುವ ಯಾನಿಗಳಿಗೆ ಚುರುಮುರಿಯೇ ಮೊದಲಾದ ಮೋಜಿನ ತಿನಿಸು ಕೊಡುವ ಗೂಡಂಗಡಿಯೂ ಒಂದಿದೆ. ಅದರ ಯಜಮಾನನ (ಕ್ಷಮಿಸಿ, ಅವರ ಹೆಸರು ನನಗೆ ಸದ್ಯ ನೆನಪಾಗುತ್ತಿಲ್ಲ) ಕನ್ನಡ ಓದು-ಪ್ರೀತಿ ಅಸಾಮಾನ್ಯವಂತೆ. “ಆತ ಟೈಂಪಾಸ್ ಓದುಗ ಅಲ್ಲ ಮಾರಾಯ್ರೇ. ಯಾವ ವಿಮರ್ಶಾ ಥಿಯರಿಗಳ ಹಂಗಿಲ್ಲದೇ ಎಷ್ಟು ಚೆನ್ನಾಗಿ ಅನುಭವಿಸುತ್ತಾನೆ. ಹಾಗೇ ಯಾವ ಲೋಕೋಪದೇಶದ ಗತ್ತಿಲ್ಲದೆ ಆ ಪುಸ್ತಕಗಳ ಮೇಲೆ ವ್ಯಾಖ್ಯಾನಿಸುತ್ತಾನೆ, ಕೇಳಬೇಕು.” ನನ್ನ ಓಡಾಟದಲ್ಲಿ ನಾನು ಆತನನ್ನು ಭೇಟಿಯಾಗಲು ಪ್ರಯತ್ನಿಸಿದ್ದು ಇನ್ನೂ ಫಲಕಾರಿಯಾಗಿಲ್ಲ ಎನ್ನುವುದೊಂದು ಕೊರಗಿನ ಮುಖ. ಮೊನ್ನೆ ಮೊನ್ನೆ ಸಣ್ಣ ಚಾರಣಾನಂದಕ್ಕಾಗಿ ನನ್ನ ಅಮೆರಿಕದ ತಮ್ಮ ಆನಂದ ಆಗುಂಬೆಗೆ ಹೋಗಿದ್ದ. ಆಗ ಅಲ್ಲಿದ್ದ ಪೋಲಿಸರು ಇವನ ಉತ್ಸಾಹದ ಬುಗ್ಗೆಯ ಗಾಳಿ ತೆಗೆದರಂತೆ. “ಹೋಗಿ, ಹೋಗಿ. ಕಾಡಿನಲ್ಲಿ ನಕ್ಸಲರಿದ್ದಾರೆ. ಚಾರಣ ಗೀರಣ ನಿಮಗೆ ತೊಂದರೆ, ನಮಗುಪದ್ರ.” ಇದೊಂದು ದುರಂತಮುಖ. ನನ್ನ ಹಿಂದಣ ಕಥನ – ತೀರ್ಥಯಾತ್ರೆಯಲ್ಲಿ ಹೇಳಿದಂತೆ ಇಂದೋ ನಾಳೆಯೋ ಆಗುಂಬೆ ಘಾಟಿ ವಿಸ್ತರಣ, ಸಹಜವಾಗಿ ಹೊಸದೇ ಜಾಡು ಮತ್ತು ರೂಪಕ್ಕೊಳಗಾಗಿ ಅದರ ಅನನ್ಯತೆಯನ್ನು ಕಳೆದುಕೊಳ್ಳುವುದು ನಿಶ್ಚಯ. ಅದರ ಮೊದಲು, ನನಗೆ ದಕ್ಕಿದಷ್ಟಾದರೂ ಆಗುಂಬೆ ನಿಮ್ಮದಾಗಲಿ ಎಂಬುದು ನನ್ನ ಹಾರೈಕೆ!]
ಘಟ್ಟಗಳ ಅವಿಭಾಜ್ಯ ಅಂಗ ಜಲಪಾತ. ಆಗುಂಬೆಯಲ್ಲೂ ಇಂಥ ನೀರ ಬೀಳುಗಳು ಹಲವಿವೆ. ನಮ್ಮ ಪಟ್ಟಿಯಲ್ಲಿ ಮೊದಲ ಸಂದರ್ಶನ – ಒನಕೆ ಅಬ್ಬಿ. ಅರಣ್ಯ ತಪಾಸಣಾ ಗೇಟು ದಾಟಿ ಒಂದು ಕಿಮೀ ಅಂತರದಲ್ಲಿ ಎಡದ ಮಣ್ಣು ದಾರಿ ಹಿಡಿದೆವು. ಅದರಲ್ಲಿ ಸುಮಾರು ಎರಡು ಕಿಮೀ ಘಟ್ಟಮಾಲೆಯ ಉನ್ನತ ಅಂಚಿನಲ್ಲೇ ಸಾಗಿರಬೇಕು. ಸಮತಟ್ಟಿನ ದಾರಿಯಾದರೂ ಕಣ್ಗಪ್ಪಡಿ ಹಾಕಿದಂತೆ ದಟ್ಟ ಕಾಡು. ದಾರಿ ಮುಗಿದಲ್ಲಿ ಬೈಕ್ ಬಿಟ್ಟು, ಸವಕಲು ಜಾಡಿನಲ್ಲಿ ಒಂದು ಕಿರು ಕಣಿವೆಗಿಳಿದೆವು. ಅಲ್ಲೊಂದು ಪುಟ್ಟ ಝರಿಣಿ. ಸ್ವಲ್ಪ ಮೇಲೆಲ್ಲೋ ಹುಟ್ಟಿ, ಇಲ್ಲಿ ಹಸುರು ಬಟ್ಟೆ ಕಳಚಿ, ಬಂಡೆಗುಂಡುಗಳ ನಡುವೆ ನಾಚಿ ನುಸಿದು, ಕೊಳ್ಳ ಹಾರುತ್ತದೆ. ಅಲ್ಲಿ ಘಟ್ಟದ ಗೋಡೆ ಲಾಳಾಕಾರದಲ್ಲಿ ತೆರೆದುಕೊಂಡಿದೆ. ಪಡುಸಮುದ್ರದಿಂದೆದ್ದು ಬಂದ ಗಾಳಿಸುಳಿಗಳು ಇಲ್ಲಿ ಪೋಲಿಪಟಾಲಮ್ಮಿನಂತೆ ಹುಯ್ಯಲಿಡುತ್ತಾ ಒಟ್ಟಾಗಿ ಮೇಲೇರಿ ಬರುತ್ತವೆ. ಕೊಳ್ಳದ ಹಚ್ಚಡ ಹೊದೆಯಲು ಆತುರಳಾದ ನೀರೆಯ ಬೀಳು ಸಹಜವಾಗಿ ತಡೆತಡೆದು ನಡೆಯುತ್ತದೆ. ಈ ತಡವರಿಕೆ, ಒನಪಿನ ತಾಡನದ ಸದ್ದು ಜನಪದರಿಗೆ ಒನಕೆ ಗುದ್ದಿನ ಸರಣಿ ನೆನಪಾದ್ದಕ್ಕೋ ಏನೋ ಈ ತಡಸಲಿಗೆ ಅಥವಾ ದಬದಬೆಗೆ ಹೆಸರು ಒನಕೆ ಅಬ್ಬಿ. ನೀರು ಸುಮಾರು ಅರವತ್ತು ಮೀಟರ್ ಕೆಳಗಿನ ಒಡಕು ಬಂಡೆಗಳಿಗೆ ಅಪ್ಪಳಿಸಿ, ನೊರೆಗಟ್ಟಿ ಉಕ್ಕಿ, ಸಣ್ಣದಾಗಿ ಉರುಳಿ ಮತ್ತೆ ಹಸುರಿನ ಆಳದಲ್ಲಿ ಮರೆಯಾಗುತ್ತದೆ. ನಾವು ಮೇಲಿದ್ದರೂ ಇಲ್ಲಿ ಗಾಳಿಯೇರಿ ಬರುವ ನೀರ ಹನಿಗಳಿಂದ ತುಂತುರು ಸ್ನಾನ ನಿರಂತರ! ಹಾಗೇ ನೀರಹುಡಿ ಸೋಸಿದ ಸೂರ್ಯರಶ್ಮಿ ಕಾಮನ ಬಿಲ್ಲಾಗುವುದು, ಆಗೀಗ ಗಾಳಿಯಲೆಗೆ ಸಿಕ್ಕ ಎಲೆ, ಕಸ ಆಗಸಕ್ಕೆ ನೆಗೆದು, ಮತ್ತೆ ತೊನೆಯುತ್ತ ಘಟ್ಟದ ಮೇಲೇ ಉದುರುವ ಚೋದ್ಯ ನೋಡಿದಷ್ಟೂ ಸಾಲದು. ದೃಷ್ಟಿ ಎತ್ತ ಹರಿದರೂ ಹಸುರಿನದೇ ಕವಾಯತು. ಇಲ್ಲಿ ಹೊರಡುವ ಪ್ರತಿ ಸ್ವರದಲ್ಲೂ ರಸ ಮಿಡಿಯುತ್ತದೆ. ಪ್ರಜ್ಞೆಯಿದ್ದವರಿಗೆ ಇದು ಪರಿಸರ ಪಾಠದ ಮುಕ್ತ ವಿಶ್ವವಿದ್ಯಾಲಯ! ರುಚಿಯಿದ್ದವರಿಗೆ ಒನಕೆ ಅಬ್ಬಿಯ ನೆತ್ತಿಯಲ್ಲಿ ನಿತ್ಯೋತ್ಸವ. ದೂಳು ಹಾರುವ ಮೈದಾನ, ಕಾಲು ಕಟ್ಟಿದ ಲೆಫ್ಟ್ ರೈಟ್, ರಸ ಬತ್ತಿದ ಭಕ್ತಿ ಗೀತೆ, ಸಂಕೇತ ಹರಿದ ಧ್ವಜ ವಂದನೆ, ಭಾಷಣಗಳ ಕೃತ್ರಿಮ ಇಲ್ಲದ ಗಣರಾಜ್ಯೋತ್ಸವ ನಮ್ಮದು. ಕೊನೆಯಲ್ಲಿ ಒನಕೆ ಅಬ್ಬಿಯ ಸಾನ್ನಿಧ್ಯದಲ್ಲೇ ಒಯ್ದಿದ್ದ ಬುತ್ತಿಯೂಟವನ್ನೇ ಉತ್ಸವದ ಪ್ರಸಾದ ಎಂಬಂತೆ ಸ್ವೀಕರಿಸಿ ಕೃತಾರ್ಥರಾದೆವು.
[ಉಪಕಥೆಗಳು: ಮೊದಲೂ ಅನಂತರವೂ ನಾನು ಒನಕೆ ಅಬ್ಬಿಗೆ ಒಯ್ದ ತಂಡಗಳು ಇಷ್ಟೇ ಎಂದಿಲ್ಲ. ಅವುಗಳಲ್ಲಿ ಸ್ಮರಣೀಯವಾದ ಮೂರನ್ನು ಮಾತ್ರ ಸದ್ಯ ಇಲ್ಲಿ ಸೂಕ್ಷ್ಮವಾಗಿ ಹೇಳಿ ವಾರ ಮುಗಿಸುತ್ತೇನೆ:
೧. ಜಿಗಣಿಸುಬ್ಬ ಗೆಳೆಯ ಡಾ| ರಾಘವೇಂದ್ರ ಉರಾಳರಿಗೆ ಅಸ್ತಮಾ ಜೀವನದ ಇನ್ನೊಂದೇ ಸಂಗಾತಿ! ಆದರೆ ಹೊಸತನ್ನು ತಾನು ಅನುಭವಿಸುವ, ತನ್ನ ಸಂಪರ್ಕಕ್ಕೆ ಬಂದವರಿಗೆಲ್ಲಾ ಕರೆಕರೆದು ಹಂಚುವ ಅವರ ಉತ್ಸಾಹ ಮಾತ್ರ ಎಂದೂ ಕಡಿಮೆಯಾದದ್ದಿಲ್ಲ. ನನ್ನ ಕಾಡು, ಬೆಟ್ಟ, ಜಲಪಾತಗಳ ಕತೆ ಕೇಳಿ ಕಷ್ಟವಾದರೂ ಸೈ ಎಂದು ಕೆಲವು ಬಾರಿ ಅವರ ಕಾರಿನಲ್ಲೇ ಪುಟ್ಟ ತಂಡ ಮಾಡಿಕೊಂಡು ಹೊರಟು, ನನ್ನನ್ನು ಮುಂದೆ ಮಾಡಿದ್ದಿತ್ತು. ಕುದುರೆಮುಖ ಗಣಿಯ ಪ್ರಾರಂಭಿಕ ಚಟುವಟಿಕೆಗಳ ಕಾಲದಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿದ್ದ ದಾರಿಯಲ್ಲಿ ಅವರ ಎರಡು ಬಾಗಿಲಿನ ಸ್ಟ್ಯಾಂಡರ್ಡ್ ಕಾರಿನಲ್ಲಿ ನಾವು ಆರು ಜನ ದಾಂಡಿಗರು ಹೋದದ್ದು, ಚಾರ್ಮಾಡಿ ಘಾಟಿಯ ಅಸಾಧಾರಣ ಶಿಖರ ಏರಿಕಲ್ಲನ್ನೇರಿದ್ದು, ಜಮಾಲಾಬಾದನ್ನು ಹುಣ್ಣಿಮೆ ರಾತ್ರಿಯಲ್ಲಿ ಸಾಧಿಸಿದ್ದು, ಸುಳ್ಯದ ಬಳಿಯ ಪೂಮಲೆಯ ವನಮೋಹಿನಿಗೆ ಚಳ್ಳೇಹಣ್ಣು ತಿನ್ನಿಸಿದ್ದು ಮೊದಲಾದವು ಸದಾ ಸ್ಮರಣೀಯ. ಒಮ್ಮೆ (೧೯೭೮) ಅವರಿಗೆ ತನ್ನ ಹೆಂಡತಿ ಮತ್ತು ಎಳೆಯ ಮೂರು ಮಕ್ಕಳಿಗೆ ಇಂಥಾ ಒಂದು ಅನುಭವ ಕೊಡಬೇಕಲ್ಲಾ ಅನಿಸಿತು. ಅವರ ಕಾರಿನಲ್ಲೇ ಆಗುಂಬೆ ಏನೋ ಏರಿದೆವು. ಆದರೆ ಒನಕೆ ಅಬ್ಬಿಯ ದಾರಿ ಮಾತ್ರ ಮಳೆಗಾಲದ ಉತ್ತರಾರ್ಧದಲ್ಲಿ ಅಡ್ಡಕ್ಕೆ ಮರಬೀಳಿಸಿ, ಸಾಕಷ್ಟು ಹುಲ್ಲು, ಪೊದರು ಬೆಳೆಸಿ ಕಾಡು ಸೇರುತ್ತಾ ಇತ್ತು. ಮಟ್ಟಸ ಜಾಡಿನ ಇದಕ್ಕೆ ಕಾರು ಯಾಕೆಂದು ನಾವೆಲ್ಲ ಆರಾಮವಾಗಿ ಆ ಒಂದು-ಒಂದೂವರೆ ಕಿಮೀ ನಡೆದೇ ಹೊರಟೆವು. ಎಲ್ಲ ಸರಿ, ಆದರೆ ಜಿಗಣೆ ಮರೆತದ್ದು ತಪ್ಪು. ಸ್ವಲ್ಪ ದೊಡ್ಡವರಾದ ಮಗಳಂದಿರಿಬ್ಬರ ಅಹವಾಲನ್ನು ಉರಾಳರು ಮತ್ತವರ ಹೆಂಡತಿ ಉಷಾ ಹೇಗೋ ಸುಧಾರಿಸಿದರು. ಆದರೆ ಕೊನೆಯವನಾದ ಸುಬ್ರಹ್ಮಣ್ಯ (ಆಗಿನ್ನೂ ಮೂರೋ ನಾಲ್ಕೋ ವರ್ಷವಿದ್ದಿರಬಹುದು), ನಡುದಾರಿಯಲ್ಲಿ ಬೊಬ್ಬೆ ಹಠಹೂಡಿ, ಇನ್ನು ನೆಲಕ್ಕೆ ಕಾಲಿಡುವುದಿಲ್ಲವೆಂದು ಸಾಧಿಸಿಯೇ ಬಿಟ್ಟ. ಅಪ್ಪನಿಗೆ ದಮ್ಮು, ಅಮ್ಮನಿಗೆ ಎರಡೆರಡು ಅಕ್ಕಂದಿರೊಡನೆ ತನ್ನನ್ನೇ ಸಂಭಾಳಿಸಿಕೊಳ್ಳುವ ಕಷ್ಟ. ನಾನೋ ಮಗುವಿನ ಕಣ್ಣಿಗೆ ಅಪರಿಚಿತ, ಹಾಗಾಗಿ ವೈರಿ! ಅನಿವಾರ್ಯತೆಯಲ್ಲಿ ಸುಬ್ಬನನ್ನು ಬಲವಂತವಾಗಿ ನಾನು ಭುಜಕ್ಕೇರಿಸಿಕೊಂಡು ಅಬ್ಬಿಗೆ ಓಡಿದ್ದು ಒಂದು ಕತೆ. ಅಲ್ಲಿ ಬಂಡೆಗಳ ಮೇಲೆ ಕುಳಿತು ಜಿಗಣೆ ದೂರವಾಯ್ತೆಂದು ನಿಟ್ಟುಸಿರು ಬಿಡುವುದರೊಳಗೆ ಕುಂಭದ್ರೋಣ ಮಳೆ. ಮತ್ತೆ ಕಾರಿಗೆ ಸುಬ್ಬನ ವಾಲಗ ಸೇವೆಯೊಡನೆ ನಾನೇ ಹೊತ್ತು ಓಡಿದ್ದು ಸುಲಭದಲ್ಲಿ ಮರೆಯುವಂತದ್ದಲ್ಲ! (ಇಂದಿನ ಸುಬ್ಬನ ಬಗ್ಗೆ ಇಲ್ಲಿ ಅಪ್ರಸ್ತುತವಾದ ವಿವರಗಳಿಗೆ ಇಲ್ಲಿ ಇಲಿಬಾಲ ಚಿವುಟಿರಿ)]
೨. ಯಾವುದೇ ಜಲಪಾತವನ್ನೂ ಕಂಡಷ್ಟಕ್ಕೇ ಮುಗಿಸುವುದಲ್ಲ. ತಳ-ತಲೆಯವರೆಗೂ ಶೋಧಿಸಬೇಕು. ಸಾಧ್ಯವಾದರೆ ದಬದಬೆಗೆ ಮೈ ಒಡ್ಡಿ ಧನ್ಯರಾಗಬೇಕು. ನಿರಪಾಯಕಾರಿ ಆದರೆ ಸ್ಫಟಿಕ ನಿರ್ಮಲ ಮಡುಗಳು ಕಾಣಿಸಿದರೆ ಮುಳುಗು ಹಾಕಿ ಕಲಕುವ ಸಂಭ್ರಮ ಹೇಳಿ ಪೂರೈಸದು, ಅನುಭವಿಸಬೇಕು. ಹಾಗೇ ಸಾಮಾನ್ಯ ಕಾಲಗಳಲ್ಲಿ ಒನಕೆ ಅಬ್ಬಿಯ ನೀರಿನ ಮೊತ್ತ ಪರಿಗಣಿಸಿ, ನಾವೊಂದು ಮಳೆಗಾಲವನ್ನೇ ಆಯ್ದುಕೊಂಡೆವು (ಜುಲೈ ೧೯೮೩). ನನ್ನ ಭೂಪಟದಲ್ಲಷ್ಟು ಚೌಕಾಸಿ ಮಾಡಿ, ಬಾಡಿಗೆ ಮ್ಯಾಟಡೋರ್ ಹೊರಡಿಸಿ ಸೋಮೇಶ್ವರಕ್ಕೇನೋ ಹೋದೆವು. ಅಲ್ಲೇ ದೇವಳದ ಆಚಿನ ತೆಳುತೋಡು ಹುಚ್ಚುಹೊಳೆಯಾಗಿ ಹರಿದಿತ್ತು. ಅಲ್ಲಿ ಊರವರ ಅನುಕೂಲಕ್ಕಾಗಿ ಮಾಡಿದ್ದ ಅಡಿಕೆ ಮರದ ಪಾಲದಲ್ಲಿ ದಾಟುವಾಗಲೇ ಸಣ್ಣ ಆತಂಕ ಮನಸ್ಸಿನ ಮೂಲೆಗೆ ಸೇರಿಕೊಂಡಿತು. ಅರ್ಧ ಮನಸ್ಸಿನಲ್ಲೇ ಆಚೆ ದಂಡೆಯ ಮೇಲೆ (ಹೊಳೆಯ ಬಲದಂಡೆ) ಅದರ ಎದುರು ಜಾಡು ಹಿಡಿದೆವು. ಬಿಸಿಲ ದಿನಗಳಲ್ಲಿ ಹೊಳೆ ಪಾತ್ರೆಯಲ್ಲಿ ನಾವು ಗುರುತಿಸಿದ್ದ ಭಾರೀ ಬಂಡೆಗುಂಡುಗಳು, ಪೊದರುಗಳಿದ್ದ ನಡುಗಡ್ಡೆಗಳು ಒಂದೂ ಕಾಣುತ್ತಿರಲಿಲ್ಲ. ಘಟ್ಟದ ತಪ್ಪಲಿನ ಹೊಳೆಗಳ ಸಾಮಾನ್ಯ ಲಕ್ಷಣವಾದ ನೀರಿನ ವೈವಿಧ್ಯಮಯ ಬೀಳು, ಹರಿವು, ರಚನೆ, ಕಲರವಗಳೆಲ್ಲ ನಿಗೂಢವಾಗಿ ಹೂತುಹೋದಂತಿತ್ತು. ಗಾಢ ಕಂದು ಬಣ್ಣದ ಪ್ರವಾಹ ಒಂದೇ ನುಣ್ಣಗೆ ಬಾಗುಬಳಕನ್ನಷ್ಟೇ ತೋರುತ್ತಿತ್ತು. ಸರಸದ ಕಲರವವಿಲ್ಲದೇ ಎಲ್ಲೋ ಅಂತರಾಳದಲ್ಲಿ ಎಲ್ಲವನ್ನೂ ಮರೆಸಿ, ಅಬ್ಬರಿಸುತ್ತಿತ್ತು. ನೂರಿನ್ನೂರು ಮೀಟರ್ ಮುಂದುವರಿಯುತ್ತಿದ್ದಂತೆ ನನ್ನ ಯೋಜನೆ ಭಾರೀ ಮೂರ್ಖತನದ್ದೇ ಆದೀತೆಂದು ಪೂರ್ಣ ಅರಿವಿಗೆ ಬಂತು. ಎಲ್ಲೋ ಮರದಿಂದ ಮರಕ್ಕೆ ಹಗ್ಗ ಬೆಸೆದು, ನೇತಾಡಿ ದಾಟಿ, ಈ ದಂಡೆ ಆ ದಂಡೆ ಮಾಡಿ ಜಲಪಾತದ ಬುಡ ತಲಪುವ ಪ್ರಯತ್ನ ಕೈಬಿಟ್ಟು ಮರಳಿದೆವು. ಬಂದದ್ದಕ್ಕೆ ಕನಿಷ್ಠ ಅಬ್ಬಿಯನ್ನು ತಲೆಯಿಂದಾದರೂ ನೋಡೋಣವೆಂದು ದಾರಿಯಲ್ಲೇ ಘಟ್ಟ ಏರಿ, ಮಣ್ಣದಾರಿಯಲ್ಲಿ ನಡೆದೆವು. ಇಂಬುಳದ ಅಕ್ಷೋಹಿಣಿಯನ್ನು ಹಾಗೂ ಹೀಗೂ ನಿಭಾಯಿಸಿದರೂ ಮೊದಲು ಮೋಡ ಮುತ್ತಿಗೆಯಲ್ಲಿ ಕಣಿವೆಯ ದೃಶ್ಯ ಇಲ್ಲ. ಮತ್ತೆ ಅದುವರೆಗೆ ನಾವು ಕಂಡಿದ್ದ ಪುಟ್ಟತೊರೆ, ಬಂಡೆಗಳೆಡೆಯ ನಾಚಿನುಸಿವ ನೀರೆ ದಿಗಿಲೆಬ್ಬಿಸುವ ಮಹಾಪ್ರವಾಹವಾಗಿ ಜಲಪಾತ ವೀಕ್ಷಣೆಯನ್ನೂ ವಂಚಿಸಿತು. ತೊರೆ ನೀರು ಕನಿಷ್ಠ ಮೂವತ್ತಡಿ ಮೊದಲೇ ನಮ್ಮ ಕಾಲು ತೊಳೆದಿತ್ತು! ಧಾರೆ ಕಡಿಯದ ಮಳೆ ಅದರಿಂದ ನಮ್ಮ ಕಾಲೆಳೆಸುವ ಮೊದಲು ನಾವು ಹಿಂದೋಡಿದ್ದೆವು!
೩. ಛಲಬಿಡದ ತ್ರಿವಿಕ್ರಮರಂತೆ ಮಳೆ ದೂರವಾದ ದಿನಗಳಲ್ಲಿ ಮತ್ತೊಮ್ಮೆ ಒನಕೆ ಅಬ್ಬಿಯ ತಳ ನೋಡಲು ಹೋಗಿದ್ದೆವು. ಸೋಮೇಶ್ವರದಲ್ಲಿ ಸಿಗುವ ಹೊಳೆಯ ಬಲದಂಡೆಯಲ್ಲಿ ಎದುರು ನಡಿಗೆ ಸ್ವಲ್ಪ ದೂರ ಮಾತ್ರ. ಅಲ್ಲೊಂದು ಕವಲು, ತೊರೆಗಳೆರಡರ ಸಂಗಮ. ನಕ್ಷೆಯಾಧಾರದಲ್ಲಿ ಸಣ್ಣದಾಗಿದ್ದ ಎಡತೊರೆಯೇ ಒನಕೆಯದ್ದು ಎಂದು ಸರಿಯಾಗಿಯೇ ಊಹಿಸಿದೆವು. ಅಂದು ಹೊಳೆಪಾತ್ರೆ ಏನೋ ನಿರಪಾಯಕಾರಿಯಾಗಿತ್ತು. ಆದರೆ ಅಲ್ಲೇ ಅರವತ್ತೆಪ್ಪತ್ತಡಿಯ ಕಡಿದಾದ ದರೆಮೈಯಲ್ಲಿ ಜುಳುಜುಳಿಸಿ ಇಳಿಯುವ ತೊರೆಯನ್ನು ಅನುಸರಿಸುವುದು ಹೊಸದೇ ಸವಲಾಗಿತ್ತು. ಝರಿಯ ಎರಡೂ ದಂಡೆಗಳಲ್ಲಿ ದಟ್ಟ ಮರ ಪೊದರಿನ ಹೆಣಿಗೆ ಇತ್ತು. ಅವುಗಳ ಬುಡದಲ್ಲಿ ಜಾಡುಬಿಡಿಸಿಕೊಳ್ಳುತ್ತ ಏರುವುದು ನಮಗೆ ಸಮಸ್ಯೆಯಾಗಿ ಕಾಣಲಿಲ್ಲ. ಬದಲು ಅಲ್ಲಿ ಸುಲಭವಾಗಿ ಜರಿದು ಬರುವ ಮಣ್ಣು, ಕಸ, ಪುಡಿಗಲ್ಲುಗಳನ್ನೂ ಎಚ್ಚರದಲ್ಲಿ ಸುಧಾರಿಸಬಹುದಿತ್ತು. ಆದರೆ ಯಾವುದೋ ಬಳ್ಳಿಯ ತುಯ್ತಕ್ಕೆ, ನಮ್ಮದೇ ಹೆಜ್ಜೆಗಾರಿಕೆಯ ತಪ್ಪಿಗೆ ಸುಲಭದಲ್ಲಿ ಕದಲಬಹುದಾದ ಭಾರೀ ಬಂಡೆಗುಂಡುಗಳು ನಮ್ಮನ್ನು ನಿಜಕ್ಕು ಹೆದರಿಸಿದವು. ಸ್ವಲ್ಪವೂ ಆತುರ ತೋರದೆ ವ್ಯಕ್ತಿಯಿಂದ ವ್ಯಕ್ತಿಗೆ ರಕ್ಷಣಾ ಹಗ್ಗದ ಆಧಾರ ಕೊಟ್ಟು, ಸ್ಪಷ್ಟ ಓರೆ ಜಾಡು ಹಿಡಿದು, ಏನು ಉರುಳಿದರೂ ಕೆಳಗಾರೂ ಸಿಕ್ಕಿಕೊಳ್ಳದ ಜಾಗ್ರತೆವಹಿಸಿ ಮೇಲಿನ ಪಾತ್ರೆ ಸೇರಿದೆವು.
ಒನಕೆ ಹೊಳೆಯ ಆ ಮೇಲ್ ಸ್ತರ ಬಹಳ ವಿರಳ ಜನಸಂಚಾರವನ್ನು ಕಂಡಂತಿತ್ತು. ಕೆಲವು ವಾರಗಳ ಹಿಂದೆ, (ಕಂದಕಕ್ಕೆ ಉರುಳಿಯೋ ಮಾಂಸಾಹಾರಿ ಹೊಡೆದೋ) ಸತ್ತ ಯಾವುದೋ ದೊಡ್ಡ ವನ್ಯ ಪ್ರಾಣಿಯ (ಕಾಟಿಯೋ ಕಡವೆಯೋ ಇದ್ದಿರಬಹುದು) ಅವಶೇಷಗಳು, ಇನ್ನೂ ಮಾಸದ ದುರ್ನಾತ ನಮ್ಮನ್ನು ಸ್ವಾಗತಿಸಿತು. ಅನಂತರ ಸ್ವಲ್ಪೇ ಅಂತರದಲ್ಲಿ ವಾಸ್ತವದ ಒನಕೆ ಅಬ್ಬಿಯ ತಳವನ್ನೇನೋ ಕಂಡೆವು. ಆದರೆ ಅಲ್ಲಿ ಆಗಲೆ ನಾಗರಿಕತೆ ಮೇಲಿನಿಂದ ಎಸೆದೇ ಪೇರಿಸಿದ್ದಿರಬಹುದಾದ ವೈವಿಧ್ಯಮಯ ಮತ್ತು ಅಪಾಯಕಾರೀ (ಒಡಕು ಬಾಟಲು ಇತ್ಯಾದಿ) ಕಸ ನೋಡಿ ನೇರ ಬುಡಕ್ಕೆ ಹೋಗುವ, ಸಂಭ್ರಮಿಸುವ ಆಸಕ್ತಿಯನ್ನೇ ಕಳೆದುಕೊಂಡು ಮರಳಿದೆವು.
(ಉಪಕಥೆಯೊಳಗಿನ ಕಥೆ: ಅಂದು ನಮ್ಮೊಡನೆ ಭಾಗಿಯಾಗಿದ್ದ ಗೆಳೆಯನೊಬ್ಬ, ಪೂರ್ವಾನುಭವದ ಧೈರ್ಯದಲ್ಲಿ ಸ್ವಲ್ಪ ದಿನ ಕಳೆದು ಸ್ವತಂತ್ರವಾಗಿ ಇನ್ನೊಂದೇ ತಂಡ ಅಲ್ಲಿಗೇ ಒಯ್ದಿದ್ದನಂತೆ. ಆಗ ಅವನ ದುರದೃಷ್ಟಕ್ಕೆ ಅಲ್ಲೊಂದು ಗಂಡಸಿನ ಕೊಳೆತ ಶವವೇ ಕಾಣಸಿಕ್ಕಿತ್ತಂತೆ. ಪಕ್ಕದಲ್ಲಿ ವಿಷವಿರಬಹುದೆಂದು ಊಹಿಸುವಂತಹ ಬಾಟಲಿಯೂ ಬಿದ್ದಿತ್ತಂತೆ. ಚಾರಣದ ಬಡಪಾಯಿಗಳು ದುಸ್ವಪ್ನ ಕಂಡವರಂತೆ ಬೆಚ್ಚಿ, ಬೆದರಿ, ಅಲ್ಲಿಂದಲೇ ವಾಪಾಸಾಗಿದ್ದರು. ಊರಿಗೆ ಹೋಗಿ ಒಂದು ದಿನವಾದ ಮೇಲೆ ಗೆಳೆಯನಿಗೆ, ಮನಸ್ಸಿನ ನ್ಯಾಯಾಲಯದಲ್ಲಿ ಪೋಲಿಸ್ ಭಯ ಮತ್ತು ನಾಗರಿಕ ಪ್ರಜ್ಞೆಗಳ ಮುಖಾಮುಖಿ ಜೋರಾಯ್ತಂತೆ. ಕೊನೆಗೆ ಆಗುಂಬೆ ಠಾಣೆಗೆ ಒಂದು ಸವಿವರ ಬೇನಾಮೀ ಪತ್ರ ಹಾಕಿ ನಿಶ್ಚಿಂತನಾದನಂತೆ!)]
ಚಕ್ರವರ್ತಿಗಳ ಕಥಾಜಾಲ ಉಪಕಥೆಗಳ ಚಕ್ರತೀರ್ಥದಲ್ಲಿ ಮುಳುಗಿಲ್ಲ, ಬನ್ನಿ. ಒನಕೆ ಅಬ್ಬಿ ಬಿಟ್ಟ ಬೈಕ್ ತಂಡ ಮುಂದೇನು ಮಾಡಿತು ಎನ್ನುವುದಕ್ಕೆ ಮುಂದಿನ ವಾರ ಬರೋಣ. ಅದುವರೆಗೆ ನಿಮ್ಮ ಹಳಗಾಲದ ಹೆದ್ದಾರಿ/ ಒಳದಾರಿ ಅನುಭವ, ನೀವು ಕಂಡ ವರಂಗ ಮತ್ತು ಒನಕೆ ಅಬ್ಬಿಯ ಮುಖಗಳ ಬಗ್ಗೆ ಧಾರಾಳ ಬರೆಯುತ್ತೀರಲ್ಲಾ?
ಮುಂದಿನ ಕಂತಿನ ನಿರೀಕ್ಷೆಯಲ್ಲಿದ್ದೇನೆ
Onake Abbi bitta tandada bagge mundina vaara endu baredu neevu bachavadri, Ashok.Impatient aagalu innondu kaarana nimma kathanadalli nanna uchil bandhugalu, seriruvudu. modala chithrada huduga Kishore houde? Andu nanna pusthaka bidugade , Ammana thombattara sambhramakke avarella bandiddaru, sikkidare, Ashoka? Enthenthaha saahasa yaanagalu, prakrithi soundaryaaraadhaneya, mathe avannu nudichitradalli daakhalisuva bhagya padeda neeve dhanyaru. Heege I saviyannu namage unisuthiri.
ನಿಮ್ಮ ಸಂತೋಷ ನನಗೆ ಧನ್ಯತೆ. ಅದು ನಮ್ಮ ಮಗ ಅಭಯಸಿಂಹ. ಕಿಶೋರ್ ತೇಜಸ್ವಿ ಮತ್ತು ಮುಂದಿನ ದಿನಗಳಲ್ಲಿ ಕೋಟೆಕಾರ್ ಚಿನ್ನಾನೆಂದೇ ಖ್ಯಾತನಾದ ಅಶ್ವಿನ್ ತೇಜಸ್ವಿಯರ ಆ ಕಾಲದ ಚಿತ್ರಗಳು ನನ್ನ ಸಂಗ್ರಹಲ್ಲಿಲ್ಲ :-(ಅಶೋಕವರ್ಧನ
Nostalgic to look at the Onake Abbi. I remember having gone with you from Ramakrishna Rayaru House somewhere near Killur. I also remember, Yajna,Prakash, Surya etc walking on boulders and reaching Onake Abbi from downstream
ಬಾಳಿಗರೇ ಕಿಲ್ಲೂರು, ರಾಮಕೃಷ್ಣರಾಯರ ಮನೆ ಎಲ್ಲಾ ಬಂಡಾಜೆ ಅಬ್ಬಿಗೆ ಸಂಬಂಧಪಟ್ಟ ನೆನಪುಗಳು – ಬೆಳ್ತಂಗಡಿ ಕಣಿವೆ ಕಥೆ. ಒನಕೆ ಆಗುಂಬೆ ಘಾಟಿ ದಾರಿಯ ಎಡ ಬದಿಯದ್ದು. ಅಲ್ಲಿಗೆ ನೀವು ನಮ್ಮೊಡನೆ ಬಂದದ್ದರ ಕಡತ ಹುಡುಕುತ್ತೇನೆ :-)ಅಶೋಕವರ್ಧನ
ಸುಂದರ. ಅತಿ ಸುಂದರ. ಪುಟ್ಟ ಪೇಟೆಯ ಹಳ್ಳಿ ವರಂಗ. ನೇಮಿಶನಾಲಯ, ಜೈನಮಠ, ಪೌಳಿಗೋಡೆ, ಸುಂದರ ಸರೋವರ, ಸಹ್ಯಾದ್ರಿ ಘಟ್ಟ, ಕಾಡುಬೆಟ್ಟ, ಗದ್ದೆ, ತೋಟ, ತೆಂಗಿನ ಸಾಲು, ಸರಳ ದೇವಳ, ಸೇವೆಗೈಯಲು ಪುಟ್ಟ ದೋಣಿಯೊಡನೆ ನಿಂತಿರುವ ಅಂಬಿಗ. ಓದಿ ಖುಶಿ ಆಯಿತು. ಮುಂದಿನ ಕಂತಿಗಾಗಿ ಕಾತರದಿಂದ ಕಾಯುತ್ತಿರುವೆವು. ಧನ್ಯವಾದಗಳು.
ವೇಷದವನನ್ನು ಎಬ್ಬಿಸಲು ಮರೆತು ನಾನು ಕೂಡ ಎರಡು ವಾರ ತುಕಡಿಸಿದೆ.ಚಿಕಣಿ ಅಭಯ ಮತ್ತು ವಾಲಗದ ಸುಬ್ಬನನ್ನು ಎತ್ತಿಕೊಂಡು ಓಡಿದಕಥೆ ಚೆನ್ನಾಗಿತ್ತು . ಹೆಬ್ಬಾರ ವಿಟ್ಲ
chennagittu, baravanige Ishtavayithu..
Namasthe. Nijakku haudu nimmadu batthad asakthi. chalabida trivikramatva matthu hucchu—m p joshy.
ಈಗ ಓದಿ ಮುಗಿಸಿದೆ.ಜಲಪಾತದ ಬಗ್ಗೆ ನೀವು ಬರೆದಿದ್ದು ಯಾವುದೇ ಜಲಪಾತವನ್ನೂ ಕಂಡಷ್ಟಕ್ಕೇ ಮುಗಿಸುವುದಲ್ಲ. ತಳ-ತಲೆಯವರೆಗೂ ಶೋಧಿಸಬೇಕು. ಸಾಧ್ಯವಾದರೆ ದಬದಬೆಗೆ ಮೈ ಒಡ್ಡಿ ಧನ್ಯರಾಗಬೇಕು. ನಿರಪಾಯಕಾರಿ ಆದರೆ ಸ್ಫಟಿಕ ನಿರ್ಮಲ ಮಡುಗಳು ಕಾಣಿಸಿದರೆ ಮುಳುಗು ಹಾಕಿ ಕಲಕುವ ಸಂಭ್ರಮ ಹೇಳಿ ಪೂರೈಸದು, ಅನುಭವಿಸಬೇಕು.ಎಷ್ಟು ಸತ್ಯ.ನಾವಂತೂ ನೀರು ಕಂಡರೆ ಎಮ್ಮೆ ಗಳಾಗುತ್ತಿದ್ದೆವು.ಬಹಳ ಜನ ನೀರು ಕಂಡರೆ ದೂರವೇ ನಿಲ್ಲುತ್ತಾರೆ.ಈ ವರಂಗ ಮಾತ್ರ ನಾವು ಹೋದ ಸಮಯ ಸರಿ ಇರಲಿಲ್ಲ ಅನ್ನಿಸುತ್ತೆ.ನಾವು ಹೋದಾಗ ಆ ಸರಸ್ಸು ಕೊಳಚೆ ನೀರು ತುಂಬಿದ ಹಾಗಿತ್ತು.ದೋಣಿಯಲ್ಲಿ ಹೋಗಲು ಮನಸ್ಸು ಬಾರದೆ ಹಾಗೇ ಹಿಂತಿರುಗಿದೆವು.ಇದು ಕೊರೊನಾ ಬರುವ ಮೊದಲು,ಎರಡು ವರ್ಷಗಳ ಹಿಂದೆ.ನಲವತ್ತು ವರ್ಷಗಳಿಂದ ಆಗುಂಬೆ ಘಾಟಿ ಯಲ್ಲಿ ಓಡಾಡುತ್ತಿದ್ದರೂ ಒಮ್ಮೆಯೂ ಸೂರ್ಯಾಸ್ತ ನೋಡಲು ಆಗಿಲ್ಲ.ಒಮ್ಮೆ ಸುಧಾದಲ್ಲೋ, ಅದರ ವಿಶೇಷಾಂಕ ದಲ್ಲಿಯೋ ಪ್ರಕಟವಾಗಿದ್ದು ನಿಮ್ಮೂರಿನವರೇ ಯಜ್ಞ ರ ಆಗುಂಬೆಯ ಸೂರ್ಯಾಸ್ತ ದ ಚಿತ್ರ ಇನ್ನೂ ನನ್ನ ಕಣ್ಣ ಮುಂದೆ ಇದೆ.ಮಡಕೆಯೊಂದನ್ನು ಬೋರಲು ಹಾಕಿದ ಹಾಗೆ ಕಾಣುವ ಸೂರ್ಯಾಸ್ತ ದ ಚಿತ್ರ.ಆ ವೀಕ್ಷಣಾ ಗೋಪುರ ಬರುತ್ತಿದ್ದಂತೆ ಆಕ್ಸಿಲೇಟರ್ ಜಾಸ್ತಿ ಒತ್ತಬೇಕು ಅನ್ನಿಸುತ್ತೆ.