ಇಷ್ಟದ ಮೇಳದ ಹಿಡಿಸದ ಆಟ ನೋಡಿ (ಆಸಕ್ತರು ಇಲ್ಲೇ ಚಿಟಿಕೆ ಹೊಡೆಯಿರಿ) ಹಿಡಿದ ತಲೆನೋವು ಇಳಿದಿರಲಿಲ್ಲ. ಪ್ರಾಯೋಜಕರ ಧಾರಾಳಕ್ಕೆ ಪಾತಾಳಗರಡಿ ಹುಡುಕುತ್ತಾ ಪ್ರಯೋಜಕರ ಔದಾರ್ಯಕ್ಕೆ ಅರ್ಥಗಳನ್ನು ಹೇರುತ್ತಾ ಮನಸ್ಸು ಕಹಿಯಾಗಿತ್ತು. ಆಗ ಹಿರಿಯ ಗೆಳೆಯ, ಡಾ| ಎಂ. ಪ್ರಭಾಕರ ಜೋಶಿಯವರ ಸಮ್ಮಾನ ಸಭೆಯ ಸುದ್ದಿ ಸಿಕ್ಕಿ, ತುಸು ಹಗುರವಾಯ್ತು. ಸಮ್ಮಾನ ಯೋಜನೆಯ ಸಂಸ್ಥೆ, ನಿಂತು ನಡೆಸುವ ವ್ಯಕ್ತಿಗಳ ಲೆಕ್ಕ ಹಿಡಿಯದೆ, ಪಡೆಯುವವರ ಅರ್ಹತೆಯಷ್ಟೇ ನನ್ನ ಭಾವದಲ್ಲಿತ್ತು. ಸಾಮಾನ್ಯವಾಗಿ ಔಪಚಾರಿಕ ಸಭೆ, ಸಮ್ಮಾನ ಭೀಷಣಗಳನ್ನು ಉಗ್ರ ಖಂಡಿಸುವ ನಾನು, ಅಪೂರ್ವಕ್ಕೆ ಮುಕ್ತ ಮನದಿಂದ ಪುರಭವನಕ್ಕೆ ಹೋಗಿದ್ದೆ. ಪತ್ರಿಕಾ ಪ್ರಕಟಣೆಯಲ್ಲಿ (೪-೧೦-೧೨) ಸಂಜೆ ಐದಕ್ಕೆ ಸಮ್ಮಾನ, ಆರಕ್ಕೆ ಮಕ್ಕಳ ತಂಡದ ಪ್ರದರ್ಶನ ಎಂಬ ಸ್ಪಷ್ಟ ಉಲ್ಲೇಖಗಳಿತ್ತು. ಹುಂಬತನದಲ್ಲಿ ಅದನ್ನು ನಂಬಿ ಸಕಾಲಕ್ಕೆ ಹೋದ ನಾನು ಮುಕ್ಕಾಲು ಗಂಟೆ ಕೇವಲ ಜೋಶಿಯವರ ಮೇಲಿನ ಪ್ರೀತಿಗೆ ಕಾದು ಕುಳಿತಿದ್ದೆ. ಬುದ್ಧಿಯಿದ್ದ ಯಾರೂ ಮುಜುಗರಗೊಳ್ಳುವ ಮತ್ತದೇ ಛತ್ರ, ಚಾಮರ, ಪೂರ್ಣ ಕುಂಭ, ಯಕ್ಷವೇಷ ಸಹಿತ ಪಕ್ಕದ ಬಾಗಿಲಿನಿಂದ ಎದುರು ಬಾಗಿಲಿಗೆ ಮೆರವಣಿಗೆ. ಭೋ ಪರಾಕ್, ನಿರ್ವಹಣೆ, ಸ್ವಾಗತ, ಪ್ರಾಸ್ತಾವಿಕ ಮುಂತಾದ ನವ-ವೈದಿಕಗಳು. ದೊಡ್ಡ ದೊಡ್ಡ ಶಬ್ದಗಳು, ವಾಚಾಳಿತನದಲ್ಲಿ ಎಲ್ಲವೂ ‘ಅದ್ಭುತ ರಸವೇ.’ ಕೇಳುಗರು ಬೇಕಾದಂತೆ ಅರ್ಥ ಎಳೆದಾಡಬಹುದಾದ ಮಾತು ಕ್ರಿಯೆಗಳ ಮೊತ್ತದಲ್ಲಿ ಪ್ರಕಟವಾದದ್ದು ಪ್ರೀತಿಯೋ ಠಕ್ಕೋ ಭಕ್ತಿಯೋ ಮೌಢ್ಯವೋ ತಿಳಿಯುವ ಕಷ್ಟ ನಾನು ಮಾಡಲಿಲ್ಲ. ಜೋಶಿಯವರ ದೀರ್ಘ ಒಡನಾಟದ ಸಹಕಲಾವಿದರೂ ಪ್ರಾಯದಲ್ಲಿ ಹಿರಿಯರೂ ಆದ ಕುಂಬಳೆ ಸುಂದರರಾವ್ ಮತ್ತು ಸೂರಿಕುಮೇರು ಗೋವಿಂದ ಭಟ್ಟರ ಉಪಸ್ಥಿತಿ ನನ್ನ ಕುತೂಹಲದ ಎಲ್ಲೆ. ಇಬ್ಬರೂ ತಾವು ಜೋಶಿಗೆ ಕೊಟ್ಟದ್ದಕ್ಕಿಂತ ಅವರಿಂದ ಪಡೆದುಕೊಂಡ ಹೊರೆಯೇ ದೊಡ್ಡದು. ಯಕ್ಷ-ಪರಿಸರದ ಸ್ಥಿರೀಕರಣಕ್ಕೆ ಜೋಶಿಯವರ ಕೊಡುಗೆ (ಸ್ವತಃ ಉತ್ತಮ, ಕಲಾವಿದ, ಸಂಶೋಧಕ, ದಾಖಲೀಕರಣ ಮತ್ತು ಪ್ರಸರಣ ತಜ್ಞ) ಅದ್ವಿತೀಯ ಎಂದ ನುಡಿಗಳನ್ನಷ್ಟು ಕೇಳಿ ಮನಸ್ಸು ತಂಪಾಯ್ತು. ಜೋಶಿಯವರ ಕೃತಜ್ಞತಾ ಮಾತುಗಳು ನಿರೀಕ್ಷೆಯಂತೇ ಸಕಾಲಿಕವೂ ಔಚಿತ್ಯಪೂರ್ಣವೂ ಆಗಿತ್ತು. ಅನಂತರದ ಭಾಷಣ ಪಟ್ಟಿಯಲ್ಲಿ ನನ್ನ ತಿಳುವಳಿಕೆಯಂತೆ, ಸನ್ನಿವೇಶಕ್ಕೆ ಏನೇನೂ ಒಗ್ಗದ ಕಾರ್ಮಿಕ ಮುಖಂಡ, ನಗರಸಭಾ ಸದಸ್ಯರೇ ಮುಂತಾದವರಿದ್ದರು. ಅವರನ್ನೆಲ್ಲ ಕೊನೆಯ ಕಲಾಪವಾದ ಮಕ್ಕಳ ಮೇಳದ ಆಟಕ್ಕಾಗಿ ಸಹಿಸಿಕೊಳ್ಳುತ್ತಿದ್ದೆನೋ ಏನೋ. ಆದರೆ ಆ ಸಭಾ ಸಂಘಟಕರೇ ಮಕ್ಕಳ ತಂಡದ ತರಬೇತಿದಾರರೂ ಹೌದು ಎಂದು ಸ್ಪಷ್ಟ ತಿಳಿದಿತ್ತು. ಅದಕ್ಕೂ ಮಿಗಿಲಾಗಿ ಸಂಘಟಕರ ಔಚಿತ್ಯ ಜ್ಞಾನದ ಬಗ್ಗೆ ಸಾಕಷ್ಟು ಸಾಕ್ಷಿಗಳು ಸಂಗ್ರಹವಾಗಿದ್ದುದರಿಂದ, ನನ್ನ ಕುತೂಹಲ ಬತ್ತಿ ಹೋಯ್ತು. ಮೊದಲು ನಾನೇ ಯೋಚಿಸಿದ ಮಾತು – ‘ಸಮ್ಮಾನಿಸುವ ಸಂಸ್ಥೆ, ವ್ಯಕ್ತಿ ಅಲ್ಲ’ ಎಂದು ಒಪ್ಪಿ ಹೋದದ್ದಕ್ಕೆ ನನಗಾದ ನಿರಾಶೆಗಿಂತಲೂ ಜೋಶಿಯವರಿಗೆ ಹೀಗಾಗಬಾರದಿತ್ತು ಎಂದನ್ನಿಸಿತು. ಮನೆ ದಾರಿ ತುಳಿಯುತ್ತ, ಜೋಶಿಯವರ ವಿಚಾರ ಬಿಟ್ಟು, ನಿಜ ಸಮ್ಮಾನದ ಕುರಿತು ಯೋಚನೆ ವಿಸ್ತರಿಸಿದೆ.

ಯಕ್ಷಗಾನದ ಹುಟ್ಟು, ಬೆಳವಣಿಗೆ ಹೇಗೇ ಆಗಿರಲಿ ಅದು ಒಂದು ಕಾಲದ ಅನಿವಾರ್ಯ ಅಭಿವ್ಯಕ್ತಿಯಂತೂ ಹೌದೇ ಹೌದು. ಅದೇ ಅನಿವಾರ್ಯತೆಯಲ್ಲಿ ಅದನ್ನು ವೃತ್ತಿಯಾಗಿ ನಂಬಿ ಬಂದ ಕೆಲವು ಕೈಗಳು ಪರಂಪರೆಯ ದುರ್ಬಲ ತುಣುಕುಗಳನ್ನು ಹಿಡಿದುಕೊಂಡು ವರ್ತಮಾನದ ಸಂಪರ್ಕ ಮಾಧ್ಯಮಗಳ ಮತ್ತು ಕಲಾ ವೈವಿಧ್ಯಗಳ ಕಂಪದಾಳದಲ್ಲಿ ಮುಳುಗಲು ಬಾಕಿಯಿವೆ. ವ್ಯಕ್ತಿ ಮಟ್ಟದಲ್ಲಿ ಅವರ ರಕ್ಷಣೆಗೆ ಇಳಿಯುವವರ ಬಲ ಸಾಲದಾಗುತ್ತಿದೆ. ಇದನ್ನು ನೀಗಿಸುವಲ್ಲಿ ಮುಳುಗುವ ಕೈಗಳಿಗೆ ಅದುವರೆಗೆ ಸಲ್ಲದ ಸವಲತ್ತು ಮುಟ್ಟಿಸಿ, ದಕ್ಕದ ಜೀವಸುಖ ಒದಗಿಸಿ, ಸಹಜ ಕೊನೆಗಾಣುವವರೆಗಿನ ಭದ್ರತೆ ರೂಪಿಸಿ, ಪರ್ಯಾಯವಾಗಿ ಅರ್ಥಪೂರ್ಣ ಸಮ್ಮಾನ (ಬಹುಮಾನ, ನಿಧಿ, ವಿಮೆ, ಪ್ರಶಸ್ತಿ, ಪುರಸ್ಕಾರ ಎಂದೇನಾದರೂ ಹೇಳಿ) ಸಲ್ಲಿಸುವಲ್ಲಿ ಗಟ್ಟಿಯಾಗಿ ಕೆಲಸ ನಡೆಸುತ್ತಿರುವ ಏಕೈಕ ಸಂಸ್ಥೆ ಉಡುಪಿಯ ಯಕ್ಷಗಾನ ಕಲಾರಂಗ (ರಿ). ಕಲಾರಂಗ ಒಂದು ಸಾರ್ವಜನಿಕ ಸಂಸ್ಥೆಯ ನೆಲೆಯಲ್ಲಿ ಅಷ್ಟಕ್ಕೇ ನಿಲ್ಲದೆ ಆರೋಗ್ಯಪೂರ್ಣ ಸಂಯೋಜನೆಯೊಡನೆ ಒಳ್ಳೆಯ ಪ್ರದರ್ಶನಗಳೊಡನೆ ಒಟ್ಟಾರೆ ಯಕ್ಷಗಾನ ಕಲೆಯನ್ನು ದೃಢಗೊಳಿಸುವ ನಿಟ್ಟಿನಲ್ಲೂ ನಿರಂತರ ಯೋಚನೆ, ಯೋಜನೆ ನಡೆಸುತ್ತಲೇ ಬಂದಿದೆ.

ಕಾಲಚಕ್ರಕ್ಕೆ ಹಿಂದುರುಳಿಲ್ಲ. ಇಂದು ಯಾರೆಷ್ಟು ಸಮರ್ಥವಾಗಿ ಯಕ್ಷಗಾನದಲ್ಲಿ ದುಡಿದರೂ ಕಾಲದ ಪುನಾರಚನೆಯ ಆಶಯ ಮಾತ್ರ ಇಟ್ಟುಕೊಳ್ಳಬಹುದು. ಕ್ರಮವಾಗಿ ಸಂಶೋಧನ, ದಾಖಲೀಕರಣ, ತರಬೇತಿ ಅಥವಾ ಶಿಕ್ಷಣ, ಅಭಿವೃದ್ಧಿ ಮತ್ತೆ ಪ್ರದರ್ಶನ ಎನ್ನುವ ಚಕ್ರ ಕಾಲಚಕ್ರಕ್ಕೆ ಜೊತೆಗೊಟ್ಟಲ್ಲಿ ಯಕ್ಷ-ಪರಿಸರ ನಿರ್ಮಾಣ ಪೂರ್ಣಗೊಂಡೀತು. ಇದು ವ್ಯಕ್ತಿ ಮಾತ್ರನಿಂದ ಸಾಧ್ಯವಾಗುವ ಮಾತಲ್ಲ. ಬಡಗುತಿಟ್ಟಿನಲ್ಲಿ ಆ ಕೊರತೆಯನ್ನು ದುರ್ಬಲವಾಗಿಯಾದರೂ ತುಂಬಿ ಕೊಡುವಲ್ಲಿ ಮತ್ತೆ ನನಗೆ ಉಡುಪಿಯೇ ಕಾಣಿಸುತ್ತದೆ. ನಿರಾಶೆಯ ನಿಶಿಯಲ್ಲೂ ಅಲ್ಲಿ ಕುಶಿ ಹರಿದಾಸ ಭಟ್ಟರು ಹಚ್ಚಿಟ್ಟ ನಂದಾದೀಪ – ಎಂ.ಜಿ.ಎಂ ಕಾಲೇಜಿನ ಆಶ್ರಯದ ಯಕ್ಷಗಾನ ಕೇಂದ್ರ, ಮಂದ ಬೆಳಕು ಬೀರುತ್ತಲೇ ಇದೆ. ಅಲ್ಲಿ ವೀರಭದ್ರ ನಾಯಕರಿಂದ ತೊಡಗಿದ ಗುರುಪರಂಪರೆ ಬನ್ನಂಜೆ ಸಂಜೀವ ಸುವರ್ಣರವರೆಗೂ ಹೊಸ ಬೆಳಕಿನ ಕುಡಿಗಳನ್ನು ಹಚ್ಚುತ್ತಲೇ ಇದ್ದಾರೆ.

ಹರಕೆಯಾಟ, ವೃತ್ತಿಪರ ಮೇಳದ ತಿರುಗಾಟ, ಕೊನೆಗೆ ವಿವಿಧ ಪ್ರಯೋಗ ಮುಖಗಳ ಮತ್ತು ಗುಣಮಟ್ಟದ ಸೀಮಿತ ಅವಧಿಯ ಪ್ರದರ್ಶನಗಳಿಗೆಲ್ಲಾ ಇಂದು ಸೇವಾದಾರರು ಇದ್ದಾರೆ. ಆದರೆ ಕುಳಿತು ನೋಡುವ ಕಲಾರಸಿಕರು ತುಂಬಾ ಕಡಿಮೆಯಾಗುತ್ತಿದ್ದಾರೆ. ಅಲ್ಲೂ ಗಮನವಿಟ್ಟು ನೋಡಿದರೆ ಆಡುವವರು, ಆಡಿಸುವವರು, ನೋಡುವವರು ಎಲ್ಲಾ ಹಳೆ ತಲೆಮಾರಿನವರು! ಉಡುಪಿಯ ಯಕ್ಷಗಾನ ಕೇಂದ್ರ ಗುರುಕುಲ ಮಾದರಿಯಲ್ಲೇ ತೊಡಗಿದ್ದರೂ ಇಂದಿನ ಅಗತ್ಯ ಮನಗಂಡು, ಉಳಿಗಾಲದ ಉಪಾಯ ಕಂಡುಕೊಂಡಿದೆ. ದುಡಿಯುವ ಮನುಷ್ಯ ಶಕ್ತಿ ಧಾರಾಳವಿದ್ದ ಕಾಲದಲ್ಲಿ ಸಾಮಾನ್ಯ ತಿಳುವಳಿಕೆಯಂತೆ ಯಾಕೂ ಆಗದ ಮಕ್ಕಳನ್ನು, ಕನಿಷ್ಠ ಹೊಟ್ಟೆಪಾಡಿಗೊಂದು ದಾರಿ ಎಂದು ಯಕ್ಷಗಾನಕ್ಕೆ ತಳ್ಳುತ್ತಿದ್ದ ಮಾತು ಕೇಳುತ್ತೇವೆ. (ಇಂದಿನ ಖ್ಯಾತನಾಮರಾದ ಕುಂಬಳೆ ಸುಂದರರಾಯರು, ಸೂರಿಕುಮೇರು ಗೋವಿಂದ ಭಟ್ಟರು ಅದೇ ಕಾರಣಕ್ಕೆ ಮೇಳಕ್ಕೆ ನುಗ್ಗಿ ಬೆಳೆದವರೆನ್ನುವುದನ್ನು ಮರೆಯಬಾರದು!) ಇಂದು ಕೇಂದ್ರಕ್ಕೆ ವಿದ್ಯಾರ್ಥಿಯಾಗಿ ಬರುವವರಿಗೆ ಹಿಂದಿನಂತೇ ಉಚಿತ ಊಟ, ವಸತಿ ಕೊಡುವುದಲ್ಲದೆ ಪರ್ಯಾಯ ಭದ್ರತೆ ಎಂಬಂತೆ ಔಪಚಾರಿಕ ಶಿಕ್ಷಣಕ್ಕೆ ಅನುಕೂಲವನ್ನೂ ಮಾಡಿಕೊಟ್ಟಿದೆ. (ಕೇಂದ್ರದ ವಿದ್ಯಾರ್ಥಿ ಯಾವುದೇ ಹಂತದಲ್ಲಿ ಅನ್ಯ ಉದ್ಯೋಗಾರ್ಥಿಯಾಗಿ, ಯಕ್ಷಗಾನಕ್ಕೆ ಎರವಾಗುವ ಅವಕಾಶ ಇದೆ) ದಿನವಿಡೀ ಯಕ್ಷ-ಶಿಕ್ಷಣ ಎನ್ನುವುದಿಂದು ಶಾಲಾಶಿಕ್ಷಣದ ಅನುಸಾರಿಯಾಗುವುದು ಅನಿವಾರ್ಯವಾಗಿದೆ.

ತೆಂಕು ತಿಟ್ಟಿನ ವಲಯದಲ್ಲಿ ಕಟೀಲು, ಧರ್ಮಸ್ಥಳಗಳು ತಂತಮ್ಮ ಮೇಳದ ಅಗತ್ಯಕ್ಕಷ್ಟೇ ಯಕ್ಷ-ಶಿಕ್ಷಣ ನಡೆಸುತ್ತಿದ್ದದ್ದುಂಟು. ಈಗ ಅವೂ ಅಭ್ಯರ್ಥಿಗಳಿಲ್ಲದೆ ಸ್ಥಗಿತಗೊಂಡಿವೆ ಎಂದು ಕೇಳಿದ್ದೇನೆ. ಹೊಸನಗರ ಮೇಳದ ಆರು ವರ್ಷಗಳ ತಿರುಗಾಟದಲ್ಲಿ ಸಂಚಾಲಕನಾಗಿ ಗಳಿಸಿದ ಅನುಭವದಲ್ಲಿ ಉಜಿರೆ ಅಶೋಕ ಭಟ್ಟರು ಹೇಳುತ್ತಾರೆ “ಹಿಂದಿನಂತಲ್ಲದೆ ಸಾಕಷ್ಟು ಆರ್ಥಿಕ ಭದ್ರತೆ ಕೊಟ್ಟರೂ ಯುವ ಪೀಳಿಗೆಯಲ್ಲಿ ಕಲಾವಿದರಾಗಲು ಜನ ಬರುತ್ತಿಲ್ಲ. ಲವಕುಶರಂಥ ಬಾಲ ಪಾತ್ರಗಳನ್ನೂ ಆಯುಷ್ಯದಲ್ಲಿ ಅರ್ಧ ಶತಕ ಅಥವಾ ಹೆಚ್ಚು ಹೊಡೆದವರೇ ನಿರ್ವಹಿಸುವ ಸ್ಥಿತಿ ಇದೆ. (ಅರವತ್ತೈದರ ಅಜ್ಜ – ಶ್ರೀಧರ ಭಂಡಾರಿ, ಮತ್ತೆ ಮತ್ತೆ ಮೀಸೆಮೂಡದ ಬಾಲ ಅಭಿಮನ್ಯುವಾಗಿ ಚಕ್ರವ್ಯೂಹ ಬೇಧಿಸಿದ್ದಕ್ಕೇ ಇಂದು ಮೊಣಕಾಲಿಗೆ ಕೈಕೊಟ್ಟು ನಡೆಯುವಂತಾಗಿದೆ) ಈಚೆಗೆ ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ತೆಂಕುತಿಟ್ಟು ಯಕ್ಷ-ಶಿಕ್ಷಣ ಕೇಂದ್ರ ತೆರೆಯಲೆಂದು ಒಳ್ಳೆಯ ಗುರುವೃಂದ, ಊಟ, ವಸತಿ, ಶಿಕ್ಷಣವೆಲ್ಲ ಉಚಿತ ಕೊಡುವುದರೊಡನೆ ವಿದ್ಯಾರ್ಥಿ ವೇತನವನ್ನೂ ಘೋಷಿಸಿದರೆ ಒಂದೂ ಅರ್ಜಿ ಬಂದಿಲ್ಲ.’

ಇಂಥ ಒಂದು ದುಷ್ಕಾಲವನ್ನು ಸುಮಾರು ಮೂರೂವರೆ ದಶಕಗಳ ಹಿಂದೆಯೇ ಮುಂಗಂಡಂತೆ ಸಾಲಿಗ್ರಾಮದ ಸಾಮಾನ್ಯ ಶಾಲಾಶಿಕ್ಷಕದ್ವಯ – ಕಾರ್ಕಡ ಶ್ರೀನಿವಾಸ ಉಡುಪ (ಇಂದು ನಮ್ಮೊಡನಿಲ್ಲ) ಮತ್ತು ಶ್ರೀಧರ ಹಂದೆಯವರು, ಮಕ್ಕಳ ಮೇಳ ಕಟ್ಟಿದ್ದಿರಬೇಕು. ಶುದ್ಧ ಹವ್ಯಾಸಕ್ಕೆ (ಅವರಿಗೆ ಪೈಸೆ ಆದಾಯ ಇಲ್ಲ. ಬದಲಿಗೆ ವೇಷ ಭೂಷಣ, ಬಣ್ಣ, ಓಡಾಟ, ಕಾಫಿ, ಊಟ ಇತ್ಯಾದಿ ಖರ್ಚುಗಳಿಗೆ ದಾರಿ!) ಎಳೆಯ ಪ್ರತಿಭೆಗಳನ್ನು ವಿವಿಧ ಶಾಲೆಗಳಿಂದ ಆರಿಸಿ ತಂದು, ಅವರ ಶಾಲಾನುಕೂಲಕ್ಕೆ ಭಂಗ ಬಾರದಂತೆ ಯಕ್ಷ ತರಬೇತಿ, ಪ್ರದರ್ಶನಾವಕಾಶ ಕೊಡುತ್ತಲೇ ಬಂದರು. ಕೆಲವೊಮ್ಮೆ ನಾಲ್ಕೈದೇ ಪ್ರದರ್ಶನಗಳು ಕಳೆಯುವುದರೊಳಗೆ ಪ್ರಾಯ ಸಹಜವಾದ ಬೆಳವಣಿಗೆಯಲ್ಲಿ ಬಾಲರು ಪ್ರೌಢರಾಗಿ ಇವರ ಕೈತಪ್ಪಿದ್ದುಂಟು. ಆಗ ಮತ್ತೆ ಹಂದೆಯವರಲ್ಲಿನ ಸಂಘಟಕ, ತನ್ನೊಳಗಿನ ಭಾಗವತನನ್ನು ಜಾಗೃತಗೊಳಿಸಿ ‘ಬೇಟೆಯಾಡೂತ ಬಂದರಾಗ’ ರಾಗ ತೆಗೆಯ ಬೇಕಾಗುತ್ತದೆ! “ಅಲ್ಲಿಗೇನು ಸಾಧಿಸಿದ ಹಾಗಾಯ್ತು ನೀವು?” ಎಂದು ಮೂಗು ಮುರಿಯುವವರಿಗೆ ಇವರು ತೃಪ್ತಿಯಲ್ಲಿ ಹೇಳುತ್ತಲೇ ಇರುತ್ತಾರೆ (ವರ್ಷಕ್ಕೂ ಮಿಕ್ಕು ಅನುಭವದಲ್ಲಿ ಸಾಕಷ್ಟು ಗಟ್ಟಿ ಉದಾಹರಣೆಗಳೂ ಅವರಲ್ಲಿವೆ). “ಆ ಮಕ್ಕಳು ಮುಂದುವರಿದ ಶಾಲಾ ಕಾಲೇಜುಗಳಲ್ಲಿ ಯಕ್ಷ-ಸಂಘ ಕಟ್ಟಬಹುದು. ಅನ್ಯ ವೃತ್ತಿ ರಂಗವೇ ಆದರೂ ಯಕ್ಷ-ಪ್ರೋತ್ಸಾಹಕ ಚಟುವಟಿಕೆಗಳಲ್ಲಿ ತೊಡಗಬಹುದು. ಏನಲ್ಲದಿದ್ದರೂ ಯುವ ಜನಾಂಗದಲ್ಲಿ ಒಳ್ಳೆಯ ಒಬ್ಬ ಯಕ್ಷ-ಪ್ರೇಕ್ಷಕನನ್ನು ಸಿದ್ಧಪಡಿಸಿದ ಸಂತೋಷ ಇದ್ದೇ ಇದೆ.”

ಬನ್ನಂಜೆ ಸಂಜೀವ ಸುವರ್ಣರ ಗುರುತ್ವದೊಳಗೆ (ಯಕ್ಷಗಾನ ಕೇಂದ್ರದ ಪ್ರಾಂಶುಪಾಲ) ಅನೇಕ ಕಕ್ಷೆಗಳಲ್ಲಿ ಅನೇಕಾನೇಕ ಗ್ರಹೋಪಗ್ರಹಗಳಿವೆ. ಆರರ ಮಗುವಿನಿಂದ ಅರವತ್ತಾರರ ವೈದ್ಯರವರೆಗೆ, ಪೇಜಾವರಶ್ರೀಗಳ ಗುರುಕುಲದ ಪಿಳ್ಳಂಜುಟ್ಟಿನ ಮಾಣಿಯಿಂದ ಜರ್ಮನಿಯ ಕ್ಯಾಥರೀನ್‌ವರೆಗೆ ಯಾವ ಹೊತ್ತಿಗೆ ಯಾರು ಬಂದರೂ ಎಲ್ಲಿಗೆ ಕರೆದರೂ ಯಕ್ಷಗಾನೋತ್ಕರ್ಷಕ್ಕೆ ನಿರ್ವಂಚನೆಯಿಂದ ಮತ್ತು ನಿರ್ಭಿಡೆಯಿಂದ ತೆರೆದುಕೊಂಡ ಮಹಾಗುರು ಈ ಸಂಜೀವರು. (ಇವರ ಕುರಿತು ಹೆಚ್ಚಿನ ಓದಿಗೆ ಗೆಳೆಯ ಮಾಲಿಂಗರ ಲೇಖನ ನೋಡಿ. ಹಾಗೇ ವಿಡಿಯೋ ವಿಭಾಗದಲ್ಲಿ ಪೂರ್ವರಂಗದ ಕುರಿತು ಅಭಯ ಮಾಡಿದ ಚಿತ್ರವೂ ಅವಶ್ಯ ನೋಡಿ.)

ಕಲಾರಂಗ ಯಕ್ಷ ಸೀಮೆಯ ವಿಸ್ತರಣೆಯಲ್ಲಿ ಉಡುಪಿಯ ನಲವತ್ತೆಂಟು ಶಾಲೆಗಳನ್ನು ಒಳಗೊಂಡ ಕತೆ ಈಗ ಹಳತಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ನೆರವಿನೊಡನೆ ಅದಕ್ಕೆಂದೇ ಇವರು ಹುಟ್ಟು ಹಾಕಿದ ಸಂಸ್ಥೆ ಯಕ್ಷ ಶಿಕ್ಷಣ ಟ್ರಸ್ಟ್. ಅದು ಒಂದು ವಾರ್ಷಿಕ ಪ್ರದರ್ಶನ ಮತ್ತು ಸ್ಪರ್ಧೆ ನಡೆಸಿದಾಗ ದಿನಕ್ಕೆರಡೋ ಮೂರೋ ತಂಡದ ಪ್ರದರ್ಶನ ವ್ಯವಸ್ಥಾಪನೆ ಮಾಡಿಕೊಂಡರೂ ವಾರ – ಹತ್ತು ದಿನಗಳ ಕಾಲ ನಡೆಸಬೇಕಾದಷ್ಟು ತಂಡಗಳು ಸಜ್ಜುಗೊಂಡಿತ್ತಂತೆ! ಆ ಎಲ್ಲ ಶಾಲೆಗಳಿಗೂ ಅವರ ದೂರ, ಕಾಲ ಹೊಂದಿಸಿಕೊಂಡು ಯಕ್ಷ-ಶಿಕ್ಷಕರನ್ನು (ಬಹುತೇಕ ಸಂಜೀವರ ಶಿಷ್ಯರೇ) ಪೂರೈಸಿದ ಸಾಹಸ ಯಕ್ಷಗಾನ ಕೇಂದ್ರದ್ದು.

[ಉಡುಪಿಯ ಖ್ಯಾತಿಗೆ ಮರುಳಾಗಿ, ದಕದಲ್ಲಿ ತೆಂಕು ತಿಟ್ಟು ಹಿಡಿದುಕೊಂಡು ತಾವೂ ಏನೋ ಸಾಧಿಸುತ್ತೇವೆ ಎಂದು ಕೆಲವರು ಕೆಲ ಸಮಯದ ಹಿಂದೆ ಒಡ್ಡೋಲಗದ ಪುಂಡನಂತೆ ಧಿಂಗಣ ಹಾಕಿದ್ದು ನೋಡಿದ್ದೆ. ಮತ್ತೆ ಬೆವರೊರೆಸುತ್ತ ನೇಪಥ್ಯ ಸೇರಿದವರು ಹೊರಗೆ ಬಂದಂತೇ ಇಲ್ಲ.]

ಬನ್ನಂಜೆ ಯಕ್ಷ-ಕಕ್ಷೆಗೆ ಹೊಸದಾಗಿ ಉಡಾವಣೆಗೊಂಡ ಉಪಗ್ರಹ ಯಕ್ಷನೃತ್ಯಾಭಿನಯ ಶಿಬಿರ; ಯಕ್ಷಪರಿಸರ ನಿರ್ಮಾಣದ ವಿಸ್ತೃತ ಕೆಲಸ. ಯಕ್ಷ-ಸಂಘಟನಾ ಚತುರ ಮುರಲಿ ಕಡೇಕಾರ್ ನಾಲ್ಕೆಂಟು ಹೆಸರು, ಸವಲತ್ತುಗಳನ್ನು ಕಟ್ಟೆ ಕಟ್ಟಿ, ಮೊನ್ನೆ ಮೂರು ದಿನ (೫ ರಿಂದ ೭-೧೦-೧೨) ಉಡುಪಿಯಲ್ಲಿ ನಡೆಸಿಯೇಬಿಟ್ಟರು. ನಲಿದು, ಪಾಡಲು ಸಜ್ಜಾದ ನೂರೆಂಟು ‘ಬಾಲಕೃಷ್ಣರಿಗೆ’ ಪ್ರಸಾದರೂಪೀ ಸಮೃದ್ಧ ಊಟೋಪಚಾರಗಳ ವ್ಯವಸ್ಥೆಯೊಡನೆ, ರಾಜಾಂಗಣದ ವಿಶಾಲ ನೆಲದೊಡನೆ ಶ್ರೀಕೃಷ್ಣಮಠ, ಇನ್ನೊಂದರ್ಥದಲ್ಲಿ ಪರ್ಯಾಯ ಶ್ರೀ ಸೋದೆ ವಾದಿರಾಜಮಠದ ಸ್ವಾಮಿ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳು ಒಲಿದು ನಿಂದರು. ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ ನಿಯಮಿತ, ಯಕ್ಷ ಶಿಕ್ಷಣ ಟ್ರಸ್ಟ್, ಯಕ್ಷಗಾನ ಕಲಾರಂಗ ಮತ್ತು ಯಕ್ಷಗಾನ ಕೇಂದ್ರಗಳ ಸಹಕಾರ ಕೂಡಿ ಬಂತು. ಉಡುಪಿ ವಿಧಾನಸಭಾ ಕ್ಷೇತ್ರದೊಳಗೆ ಈಗಾಗಲೇ ಪ್ರದರ್ಶನ ಮಿತಿಯ ತರಬೇತು ಪಡೆದಿದ್ದ ನಲವತ್ತೆಂಟೂ ಶಾಲೆಗಳಿಗೆ ತಲಾ ಎರಡು ಅಭ್ಯರ್ಥಿಗಳನ್ನು ಮುಂದಾಗಿ ಹೆಸರಿಸಿ ಕಳಿಸಲು ಸುತ್ತೋಲೆ ಕಳಿಸಿದರು. ಆ ಮಕ್ಕಳಿಗೆ ಶಿಬಿರಕ್ಕೆ ಮೂರೂ ದಿನ ನಿರಪಾಯವಾಗಿ ಬಂದು ಹೋಗುವ ಖರ್ಚು, ವ್ಯವಸ್ಥೆ ನೋಡಿಕೊಂಡರು. (ಇದು ಒಂದು ವಾಕ್ಯದಲ್ಲಿ ಹೇಳಿದಷ್ಟು ಸುಲಭದ ಕೆಲಸವಲ್ಲ. ಸುಮಾರು ನಲವತ್ತೈದು ಕಿಮೀ ದೂರದ ಮಕ್ಕಳು, ಎರಡೆರಡು ಬಸ್ ಬದಲಿಸುತ್ತ ಗಂಟೆಗಟ್ಟಳೆ ಪಯಣಿಸುವ ಅಂತರದಲ್ಲಿದ್ದ ಚಿಣ್ಣರನ್ನೆಲ್ಲ ಇಲ್ಲಿ ಸೇರಿಸಿದ್ದಾರೆ. ದೂರ ಮತ್ತು ಸಮಯಮಿತಿಯ ಹೊಂದಾಣಿಕೆಗಾಗಿ ಯಕ್ಷಗಾನ ಕೇಂದ್ರದ ಮಿನಿಬಸ್ ಇದಕ್ಕಾಗಿ ದಿನಕ್ಕೆರಡು ವಿಶೇಷ ಟ್ರಿಪ್ ನಡೆಸಿತ್ತು. ಮತ್ತೆ ಮುರಳೀ (ಕಡೇಕಾರ್) ನಾದಕ್ಕೆ ಹೆಸರಿನ ಮೋಹವಿಲ್ಲದೆ ಶ್ರುತಿಜೋಡಿಸಿದ ನಾರಾಯಣ ಹೆಗಡೆ, ವೆಂಕಟೇಶ್, ಮಂಜುನಾಥ್, ಎಸ್.ವಿ ಭಟ್, ಶಿವರಾಮ ಶೆಟ್ಟಿ, ಸುಬ್ರಹ್ಮಣ್ಯ ಬಾಸ್ರಿ ಮುಂತಾದ ಅಸಂಖ್ಯ ಅಧ್ಯಾಪಕ ಮತ್ತು ಅನ್ಯ ವೃತ್ತಿಯ ಮಿತ್ರ-ಸದಸ್ಯರನ್ನು ಇಲ್ಲಿ ನಾನು ಪ್ರತ್ಯೇಕ ಗುರುತಿಸಲಾಗದ್ದಕ್ಕೆ ವಿಷಾದಿಸುತ್ತೇನೆ.

ಯಕ್ಷ ನೃತ್ಯಾಭಿನಯದ ಮೊದಲ ದಿನದ ಕಲಾಪದಲ್ಲಿ ಪೂರ್ಣ ವೀಕ್ಷಕ- ಭಾಗಿಯಾಗುವ ಉತ್ಸಾಹದಲ್ಲಿ ನಾನು ಉಡುಪಿಗೆ ಹೋಗಿದ್ದೆ. ಹೆದ್ದಾರಿ, ಚತುಷ್ಪಥ, ಸೂಪರ್ ಎಕ್ಸ್‌ಪ್ರೆಸ್ ಇತ್ಯಾದಿ ಅತಿಶಯೋಕ್ತಿಗಳಾಗುವಂತೆ ಒಂದೂವರೆ ಗಂಟೆ ಪಯಣಿಸಿ ನಾನು ರಾಜಾಂಗಣದಲ್ಲಿ ಕಾಲಿಡುವಾಗ ಉದ್ಘಾಟನಾ ಔಪಚಾರಿಕತೆ ಮುಗಿದುಹೋಗಿತ್ತು. ಲೆಕ್ಕಕ್ಕೆ ಶತಕದೊಳಗೇ ಇರಬೇಕಿದ್ದ ಬಾಲ ಸೈನ್ಯ ನೂರಿಪ್ಪತ್ತರ ಮೇಲೆ ಉಪ್ಪಿಟ್ಟು, ಬಾದಾಮಿಹಾಲಿನ ಪೂರ್ವರಂಗದಲ್ಲಿದ್ದರು. ನೋಡನೋಡುತ್ತಿದ್ದಂತೆ ಎಲ್ಲರ ಪ್ರವರ ನೋಂದಣಿ, ಉಚಿತ ಪೆನ್ನು ಟಿಪ್ಪಣಿ ಪುಸ್ತಕ ವಿತರಣೆ ಮುಗಿಸಿ ರಾಜಾಂಗಣ ದಿತ್ತಾ ಧೈಗುಡತೊಡಗಿತು. ಅಂಗಣದ ಅಷ್ಟೂ ಕುರ್ಚಿಗಳನ್ನು ಕರೆಗೆ ಒತ್ತರಿಸಿ, ತಲಾ ಸುಮಾರು ಹದಿನೈದಿಪ್ಪತ್ತು ಮಂದಿಯ ಆರು ಗುಂಪುಗಳು, ಆರೆಡೆಗಳಲ್ಲಿ, ವೃತ್ತಾಕಾರದಲ್ಲಿ ಪ್ರಾಥಮಿಕ ಹೆಜ್ಜೆಗಳನ್ನು ಇಡತೊಡಗಿದ್ದರು. ಸಭಾಂಗಣದ ಮೈಕ್ ವ್ಯವಸ್ಥೆ ಮೌನ ತಾಳಿತ್ತು. ಬಹುಮೆರೆದ ವೇದಿಕೆ ಖಾಲಿಯಾಗಿತ್ತು. ಎಲ್ಲೆಲ್ಲಿಂದಲೋ ಕೃಷ್ಣದರ್ಶನಕ್ಕೆ ಬಂದ ಭಕ್ತಾದಿಗಳಲ್ಲಿ ಹಲವರು ಇಲ್ಲೇನು ನಡೆದಿದೆ ಎಂಬ ಪ್ರಶ್ನಾಕಾರದ ನೋಟ ಹರಿಸುತ್ತಾ ಬಂದು, ನಿಂದು ಹೋಗುವುದು ನಡೆದೇ ಇತ್ತು. ಹುಡುಗ ಹುಡುಗಿ ಎಂಬ ಭೇದವಿಲ್ಲದ, ಕಲಿಕಾ ಮಾಧ್ಯಮಗಳ ಸಮಸ್ಯೆ ಕಾಡದ, ಪಾಠಪಟ್ಟಿ ಪರೀಕ್ಷೆ ಎಂಬಿತ್ಯಾದಿ ಚೌಕಟ್ಟುಗಳ ಬಾಧೆಯಿಲ್ಲದ ಅಷ್ಟೂ ಪ್ರೌಢಶಾಲಾ ಮಕ್ಕಳು ಅವರವರ ವೃತ್ತಗಳಲ್ಲಿ ಕ್ರಿಯಾಶೀಲರಾಗಿದ್ದರು. ಒಂದು ವೃತ್ತದಲ್ಲಿ ನಿಂತವರು ಚಪ್ಪಾಳೆ ತಟ್ಟುತ್ತ ತಾಳದ ಲಯ ಸಾಧಿಸುತ್ತಿದ್ದರು. ಇನ್ನೊಂದರವರು ಸೊಂಟಕ್ಕೆ ಕೈ ಕೊಟ್ಟು, ಅರೆಡೊಂಕಿಸಿದ ಕಿಸಗಾಲಿನಲ್ಲಿ ಹೆಜ್ಜೆಗಾರಿಕೆಯೊಡನೆ ಬಾಯಿತಾಳದ ಅಭ್ಯಾಸದಲ್ಲಿದ್ದರು. ಗತ್ತಿನಲ್ಲಿ ಕತ್ತನ್ನು ಅತ್ತಿತ್ತ ಹೊರಳಿಸುತ್ತ ಕೈಗಳಲ್ಲಿ ಗಾಳಿ ಮಗುಚುತ್ತಾ ವೃತ್ತದಲ್ಲಿ ಮುನ್ನಡೆಯನ್ನೇ ಕಾಣಿಸುತ್ತಿತ್ತು ಮತ್ತೊಂದು. ಉಸಿರುಗಟ್ಟಿ ಕುಣಿದದ್ದಕ್ಕೆ ತುಸುವೇ ಕುಳಿತು ಪ್ರಾಥಮಿಕ ನಡೆಯ ವಿವರಣೆ ಕೇಳುತ್ತಿದ್ದವರೂ ಉಂಟು. ಮುಂದಿನ ಸುಮಾರು ಎರಡು ಗಂಟೆ ಅಲ್ಲಿ ಬೆವರು ಹರಿದದ್ದು, ಉಸಿರು ಬಿಸಿಯೇರಿದ್ದು, ಕುಡಿನೀರ ಹಂಡೆ ಖಾಲಿಯಾದದ್ದು, ಕೃಷ್ಣಪೂಜೆಯ ಎಡೆಯಲ್ಲಿ ಪರ್ಯಾಯಶ್ರೀಗಳು ಬಂದು ಗುಂಪಿನ ಚಿತ್ರಕ್ಕೆ ಕೇಂದ್ರವಾದದ್ದೆಲ್ಲಕ್ಕು ಮಂತ್ರ ಒಂದೇ ತಧಿಂತಕ್ಕ ತಧಿಂತಕ್ಕ.

ಮೊದಲಿಗೆ ವೇದಿಕೆಯೆದುರು ಅಷ್ಟೂ ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಸಂಜೀವರು ಆರು ಗುಂಪಾಗಿಸಿದ್ದರು. ಮತ್ತೆ ಸ್ವತಃ ಒಂದು ಗುಂಪು ಹಿಡಿಯುವುದರೊಡನೆ ಕೇಂದ್ರದ ಇತರ ಸಹೋದ್ಯೋಗಿಗಳಿಗೆ ಐದು ತಂಡಗಳನ್ನು ವಹಿಸಿದ್ದರು. ಯಕ್ಷಗಾನ ಕೇಂದ್ರದ ಮದ್ದಳೆಗಾರ ದೇವದಾಸ ರಾವ್ ಪಂಚೆ ಮೇಲೆ ಕಟ್ಟಿ, ಶಾಲನ್ನು ಭುಜದ ಮೇಲೇರಿಸಿ ಒಂದು ವೃತ್ತದ ಕೇಂದ್ರದಲ್ಲಿದ್ದರು. ಇವರು ಯಕ್ಷಗಾನಕ್ಕೆ ನುಗ್ಗಿದ್ದು ವೇಷಧಾರಿಯಾಗಿ, ಕೇಂದ್ರದ ಗುರುಪೀಠ ಒಲಿದದ್ದು ಮದ್ದಳೆಗಾರನಾಗಿ, ಊರಿನ ಹವ್ಯಾಸೀ ತಂಡಗಳಲ್ಲಿವರು ಸವ್ಯಸಾಚಿಯೂ ಹೌದು. ದಿನದ ಕೊನೆಯ ಸಮೂಹ ಪ್ರಾರ್ಥನಾ ಸೊಲ್ಲುಗಳಲ್ಲಿ ಶ್ರುತಿ ಸಹಿತ ಇವರ ಕಂಠಸಿರಿಯ ಪರಿಚಯವೂ ನನಗಾಯ್ತು. ಕೇಂದ್ರದ ಚಂಡೆಗುರು ಕೃಷ್ಣಮೂರ್ತಿ ಭಟ್ ಕಡಿಮೆಯವರೇನಲ್ಲ. ಕೇಂದ್ರದ ನೃತ್ಯಗುರು ಮತ್ತು ಹಿರಿಯ ವೇಷಧಾರಿ ಕೃಷ್ಣಮೂರ್ತಿ ಉರಾಳ, ಹಿರಿಯ ವಿದ್ಯಾರ್ಥಿಗಳಾದ ಕಾರ್ತಿಕ್ ಸುಬ್ರಹ್ಮಣ್ಯ ಮತ್ತು ಮಿಥುನ್ ಬ್ರಹ್ಮಾವರ ಕೂಡಾ ಒಂದೊಂದು ತಂಡದ ನಡೆ ನಿರ್ದೇಶನ ನಡೆಸಿದ್ದರು. ಸಂಜೀವರು ಒಂದು ತಂಡದ ಕಲಿಕೆ ನೋಡುವುದರೊಡನೆ ಒಟ್ಟಾರೆ ಶಿಬಿರದ ಕಲಾಪಗಳ ಮೇಲೂ ಕಣ್ಣಿಡುತ್ತಲೇ ಇದ್ದರು. ಕೇಂದ್ರದ ಭಾಗವತ ಸತೀಶ ಕೆದ್ಲಾಯರೂ ಸುಮ್ಮನೆ ಕುಳಿತಿರಲಿಲ್ಲ.

“ಇವತ್ತು ನಾವು ಹುಡುಗ, ಹುಡುಗಿಯರೆಲ್ಲರಿಗೂಕಲಿಸುತ್ತಿರುವುದು ಪುರುಷ ವೇಶದ ನಾಟ್ಯಗಳು. ಕಿಸಗಾಲಿಕ್ಕಿ, ಮಂಡಿ ಡೊಂಕಿಸಿದರೂ ಸೊಂಟ ನೇರ, ಭುಜ ಹಿಂದೆ. ಬಿಡು ಹಸ್ತದಲ್ಲಿ ಗಾಳಿತಿರುವಿದಂತ ಚಲನೆಗಳು ಎದೆ ಮಟ್ಟದಲ್ಲಿರಲಿ, ಮುಖಕ್ಕಡ್ಡಿಯಾಗದಿರಲಿ. ದೃಷ್ಟಿ ನೇರ. ತಪ್ಪಿ ಅದು ನಿಮ್ಮದೇ ಹಸ್ತಚಲನೆಯನ್ನು ಗಮನಿಸುವಂತಿದ್ದರೆ ಪ್ರೇಕ್ಷಕನಿಗೆ ನೀವು ಕಣ್ಣುಮುಚ್ಚಿ ಕುಣಿದಷ್ಟೇ ಆಭಾಸವಾಗುತ್ತದೆ. ನೆಲದ ತಾಡನ ಮತ್ತು ಹಿಂದು ಮುಂದಿನ ಚಲನಗಳಲ್ಲಿ ದೈಹಿಕ ಶಿಕ್ಷೆಯನ್ನು ಕಡಿಮೆ ಮಾಡಿ. ಅವೇನಿದ್ದರು ಸೂಚನೆಯ ಮಟ್ಟದಲ್ಲಿದ್ದರೆ ಸಾಕು, (ಪ್ರದರ್ಶನ ಕಾಲದಲ್ಲಿನ) ಹಿಮ್ಮೇಳ ಮತ್ತು ತೊಡವುಗಳು ಉತ್ಪ್ರೇಕ್ಷಿಸಿ ತೋರಿಸುತ್ತವೆ. ಅಭ್ಯಾಸದ ನಡೆಯನ್ನು ಅಭಿನಯದ ಆವಶ್ಯಕತೆಗೆ ಬಳಸಿಕೊಳ್ಳಿ. ಉದಾಹರಣೆಗೆ ಎಡ ಪಕ್ಕದಲ್ಲಿ ಅರ್ಜುನ ನಿಂತಿರುವಾಗ ಸುಧನ್ವನ ಅಭಿನಯದ ನಡೆ ರಂಗದ ಹಿಂದು ಮುಂದಕ್ಕಾಡದೆ ಅರ್ಜುನನತ್ತ ಸಾರಬೇಕು…” ದಿನದ ಬೇರೆಬೇರೆ ಹಂತದ ಗುರುವೃಂದದ ಸಲಹೆ ಸೂಚನೆಗಳನ್ನು ಹೀಗೆ (ಮಾತಿನ ಶೈಲಿ ನನ್ನದು) ಕ್ರೋಢೀಕರಿಸುವಷ್ಟು ಇಡೀ ಶಿಬಿರ ಸ್ಪಷ್ಟವಿತ್ತು. ಗುರುವೃಂದದ ಎಲ್ಲ ಮಾತುಗಳು ಅವರಿಗೆ ಸಹಜವಾಗಿ ಅಭಿನಯದೊಡನೆಯೇ ಬರುತ್ತಿದ್ದವು. ಮಕ್ಕಳು ಅನುಕರಿಸಲು ಪ್ರಯತ್ನಿಸುತ್ತಿದ್ದರು, ಎಡವುವುದೂ ಧಾರಾಳ ಇತ್ತು. ಸಂಜೀವರು ಮೊದಲಲ್ಲೇ “ನಮಗೆ ಕೋಪ ಬರುದಿಲ್ಲ. ಆದರೆ ದೊಡ್ಡವರಾದದ್ದಕ್ಕೆ, ತಪ್ಪಿ ಜೋರು ಮಾಡಿದರೆ ಯಾರೂ ಬೇಸರ ಮಾಡಬಾರದು” ಎಂದು ನಿರೀಕ್ಷಣಾ ಜಾಮೀನೇ ತೆಗೆದುಕೊಂಡಿದ್ದರು! ಅದು ಬರಿಯ ಅವರ ವಿನಯವಿರಲಾರದು. ಅವರ ಗುರುವಾಗಿದ್ದ ಶಿವರಾಮ ಕಾರಂತರ ಸ್ಮೃತಿಯೂ ಇರಬಹುದು. ಕಾರಂತರು ಅವರ ವಿನೋದ ಪ್ರಜ್ಞೆಯಷ್ಟೇ ಕೋಪಕ್ಕೂ ಹೆಸರಾಂತವರಾದ್ದರಿಂದಲೇ ಅಲ್ಲವೇ ಅವರ ಬಿರುದುಗಳಲ್ಲಿ (ಕಡಲತಡಿಯ) ಭಾರ್ಗವ!

ತಂಡಗಳ ಕಲಿಕೆಯ ಅಂತರ ವ್ಯತ್ಯಸ್ತವಾಗದಂತೆ ದಿನದಲ್ಲಿ ಎರಡು ಮೂರು ಬಾರಿ ಎಲ್ಲರನ್ನು ಒಟ್ಟು ಮಾಡಿ, ಕ್ರಮಬದ್ಧ ಹಿಮ್ಮೇಳದ ನುಡಿಗಳೊಡನೆಯೂ ಕುಣಿಸಿದರು. ಹತ್ತೆಂಟು ಮಕ್ಕಳು ಶಿಬಿರಕ್ಕೆ ಬರುವ ಮುನ್ನವೇ ಶಾಲಾ ತಂಡಗಳಲ್ಲಿ ಯಕ್ಷ-ಪಾತ್ರ ನಿರ್ವಹಿಸಿ ಅನುಭವ ಪಡೆದವರಿದ್ದರು. ಸಂಜೀವರ ಎರಡನೇ ಮಗ ಶಂತನು ಸೇರಿದಂತೆ ಮೂರೋ ನಾಲ್ಕೋ ಮಕ್ಕಳು ನೇರ ಯಕ್ಷಗಾನ ಕೇಂದ್ರದಲ್ಲೇ ಪಳಗಿದವರೂ ಇದ್ದರು. ಅವರು ಇತರರಿಗೆ ಪ್ರೇರಕರಾಗುವಂತೆ ಶಿಬಿರದಲ್ಲಿ ಸಾಮಾನ್ಯ ಬಾಲರೊಡನೇ ಸೇರಿಕೊಂಡಿದ್ದರು. ಸಮೂಹ ಅಭ್ಯಾಸಗಳ ಎಡೆಯಲ್ಲಿ ಅಂಥವರಿಂದ ಕಿರು ಪ್ರದರ್ಶನಗಳನ್ನೂ ಕೊಡಿಸಿದರು. ಪಳಗಿದವರಿಂದ ಬಾಲಗೋಪಾಲ ಕುಣಿತ ಮೂಡಿದರೆ ಒಬ್ಬ ದೇವರದೇವನಾಗಿ ಪ್ರವೇಶಿಸಿದ. ಅನ್ಯ ಪ್ರದರ್ಶನಗಳಲ್ಲಿ ‘ಕೆಲ್ಸಕ್ಕಲ್ಲದ’ ಪದ್ಯದಲ್ಲಿ ಕಂಬದಂತೆ ನಿಂತ ಅರ್ಜುನನಿಗೆ ಜೀವ ಕೊನರಿಸಿತು, ಸಂಜೀವ ಸ್ಪರ್ಷ. ವೀರ ಸುಧನ್ವನಿಗೆ ಇನ್ನೊಂದು ಪಾತ್ರವನ್ನುದ್ದೇಶಿಸಿ ಅಭಿನಯಿಸುವ ಸೂಕ್ಷ್ಮ ತೋರಿಸಿದ್ದೂ ಆಯ್ತು. ಇಲ್ಲಿ ಆರೂ ಜನರ ಗುರುತ್ವ ‘ಹೇಳಿದಷ್ಟು ಮಾಡಿ’ ಎನ್ನುತ್ತಿರಲಿಲ್ಲ, ದಿನವಿಡೀ ಅವಿರತ ‘ಮಾಡಿದ್ದನ್ನು ಮಾಡಿ’ ಎಂದೇ ಕಾಣಿಸುತ್ತಿತ್ತು. ಕೊನೆ ಕೊನೆಯ ಹಂತದಲ್ಲಂತೂ ಒಬ್ಬೊಬ್ಬರನ್ನೂ ಕುಣಿಸಿ, ತಪ್ಪಿದಾಗ ತಾವು ಕುಣಿದು ಕುಣಿಸುತ್ತಿದ್ದ ಗುರು ವೃಂದವನ್ನು ಬರಿದೇ ನೋಡಿ ನಾನು ದಣಿದೆ!

ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಿಂದ ಹಿಡಿದು ಯಾವುದೇ ವಿಷಯಕ, ಮತೀಯ, ಪಕ್ಷೀಯ ಮಹಾಸಭೆಗಳ ಯಶಸ್ಸಿನ ಬಲುಮುಖ್ಯ ಅಂಶ ಭೋಜನಶಾಲೆ! ಶಿಬಿರದಲ್ಲಿ ಸ್ವಾಗತ ಉಪಾಹಾರದ ಮಾತು ಆಗಲೇ ಹೇಳಿದ್ದೇನೆ. ಮಧ್ಯಾಹ್ನದಂದು ಬಿಸಿ ಅನ್ನಕ್ಕೆ ಸಾರು, ಸಾಂಬಾರು, ಚಟ್ನಿ, ಮಜ್ಜಿಗೆಯ ಮೇಲೆ ಪಾಯಸ, ಹಯಗ್ರೀವ ಮಡ್ಡಿಯ ಸವಿ ಸೇರಿಬಂದಿತ್ತು. ಸಂಜೆಯ ಕಲಾಪ ಮುಗಿತಾಯಕ್ಕೆ ಚಾ, ಕಾಫಿಗಳೊಡನೆ ಕಡಿ, ಬಜ್ಜಿಯ ತಿನಿಸು ಹೆಚ್ಚಿನ ರುಚಿ ಕೊಟ್ಟಿತ್ತು. ಆಗೆಲ್ಲೋ ಮುರಳಿ ನನ್ನೊಡನೆ ಮಾತಾಡುವಾಗ ಅವೆಲ್ಲದರ ಬಗ್ಗೆ ಧನ್ಯತೆಯನ್ನು ಕಾಣುತ್ತಿದ್ದಂತೆ, ಅನ್ಯರ ಸಣ್ಣ ಕುಹಕದ ನುಡಿಯನ್ನೂ ಹೇಳದಿರಲಿಲ್ಲ. “ನೀವೇನು ಯಕ್ಷಗಾನವನ್ನು ಮಠಕ್ಕೆ ಮಾರಿಕೊಂಡದ್ದಾ ಎನ್ನುವವರಿದ್ದಾರೆ. ನಾನು ಸರಳ ಲೆಕ್ಕ ಹೇಳಿದೆ – ಸ್ವಾಮೀ ತುಸು ಹೆಚ್ಚು ಕಡಿಮೆಯಾಗುವಂತೆ ನೂರೈವತ್ತು ಮಂದಿಗೆ, ಮೂರು ಹೊತ್ತಿಗೆ ಉಚಿತ ಊಟ ಕಾಫಿಯ ವ್ಯವಸ್ಥೆ ನೀವೇ ಮಾಡಿಸಿ. ಚಟುವಟಿಕೆಗೆ ಅನಿರ್ಬಂಧಿತ ವಿಸ್ತಾರ ನೆಲ ಕೊಡಿ. ಬೇಕಾದರೆ ನಾಳೆಯೇ ನೀವು ಕರೆದಲ್ಲಿಗೆ ನಾವು ಬರುತ್ತೇವೆ.” ಬಿಸಿಲೆಯಲ್ಲಿ ಮೊನ್ನೆ ಮೊನ್ನೆ ಕೇವಲ ಇಪ್ಪತ್ತೈದು ಮಂದಿಗೆ ಒಂದೂವರೆ ದಿನದ ಆತಿಥ್ಯದ ವ್ಯವಸ್ಥೆ ಮಾಡಿದ ನನಗಂತೂ ಪೂರ್ತಿ ಅರ್ಥವೂ ಸಮಾಧಾನವೂ ಆಯ್ತು.

ಮೂರು ದಿನಗಳ ನೃತ್ಯಾಭಿನಯ ಶಿಬಿರ ಚೆನ್ನಾಗಿಯೇ ಮುಗಿದಿರಬೇಕು. (ಅನ್ಯ ಕಾರ್ಯಗಳ ಒತ್ತಡದಲ್ಲಿ ನನಗೆ ಹೋಗಲಾಗಲಿಲ್ಲ.) ಯಕ್ಷಗಾನ ಬಹು ಶಿಸ್ತುಗಳ (ನೃತ್ಯ, ಸಂಗೀತ, ಅಭಿನಯ, ನಾಟಕ, ಮಾತು, ಬಣ್ಣ, ವೇಷ, ಪುರಾಣ ಇತ್ಯಾದಿ) ಸಹಜವಾಗಿ ಮೇಳದ, ಪ್ರದರ್ಶನ ಕಲೆ. ಶಿಬಿರ ಅದರೊಳಗೆ ಒಂದು ಸೀಮಿತ ಆಶಯವನ್ನಷ್ಟೇ ಲಕ್ಷಿಸಿ, ನೃತ್ಯಾಭಿನಯಕ್ಕೆ ಮಾತ್ರ ದುಡಿಯಿತು. ಸಹಜವಾಗಿ ಕೊನೆಯಲ್ಲಿ ಭಾಗಿಗಳಿಗಿಂತಲೂ ಸಂಘಟಕರಿಗೆ, ಗುರುವೃಂದಕ್ಕೆ ಕಾಡಿದ ದೊಡ್ಡ ಪ್ರಶ್ನೆ ಮುಂದೇನು? ಇಂಥವೇ ಸೀಮಿತ ಕಲಾಪಗಳನ್ನು ವೃತ್ತಿಪರ ಮೇಳಗಳ ಕಲಾವಿದರೊಡನೆ ನಡೆಸುವುದನ್ನು ನಾನು ಶಿವರಾಮ ಕಾರಂತರ ಕಾಲದಿಂದಲೇ ಗಮನಿಸಿದ್ದೇನೆ. ವಿದ್ಯಾಸಂಸ್ಥೆಗಳ ವಾರ್ಷಿಕ ದಿನಾಚರಣೆಗೋ ಹವ್ಯಾಸೀ ಕೂಟಗಳ ನಿರ್ದಿಷ್ಟ ಉದ್ದೇಶಕ್ಕೋ ಒಂದು ಕಥಾನಕವನ್ನೇ ಇಟ್ಟುಕೊಂಡು ತರಬೇತಿ ಕೊಟ್ಟದ್ದೂ ಧಾರಾಳ ಇರಬಹುದು. ಹಾಗೇನೂ ಇಲ್ಲದ ಈ ಶಿಬಿರದ ಫಲಾನುಭವಿಗಳಾದರೂ ವ್ಯರ್ಥವಾಗಬಾರದು ಎಂಬ ಯೋಚನೆ ಈಗ ಸಂಘಟಕರಲ್ಲಿ ಮೂಡಿದೆಯಂತೆ. ಬರಲಿರುವ ಬೇಸಗೆ ರಜಾದಿನಗಳಲ್ಲಿ ಒಂದು ವಾರ ಪೂರ್ತಿ ಮಕ್ಕಳಿಗೆ ಸನಿವಾಸ ಶಿಬಿರ, ಕೊನೆಯಲ್ಲಿ ಒಂದು ಪೂರ್ಣ ಪ್ರದರ್ಶನವನ್ನೂ ಕೊಡುವ ಯೋಜನೆ ಈಗ ರೂಪುಗೊಳ್ಳುತ್ತಿದೆಯಂತೆ. ಆಗ ಇಲ್ಲಿ, ಅಂದರೆ ಜಾಲತಾಣದಲ್ಲಿ, ನಾನು ಶಿಬಿರದ ದಿನಚರಿಯಲ್ಲಿ ಬರಿದೇ ಪುಟ ಮಗುಚುವುದು ಬಿಟ್ಟು ಪೂರ್ಣ ಫಲ ದಕ್ಕಿತ್ತೋ ದಕ್ಕಿತ್ತು ಎನ್ನಬಹುದೋ ಏನೋ! ಅದಕ್ಕೆ ಪೂರ್ವದಲ್ಲಿ ಅಂದರೆ, ಈಗಿನದ್ದಕ್ಕೆ ಬರಲಿ ನಿಮ್ಮ ಸವಿವರ ಆಶಯ “ಪ್ರಾಪ್ತಿ ರಸ್ತು!”