ನಗ್ರಿಮೂಲೆಯ, ನೆಲ್ಯಾರುಸ್ಥಿತನಾದ ಗೋವಿಂದ ಸೈಕಲ್ಲೇರಿ ವಿಶ್ವಯಾನಿ ಎನ್ನಿಸಿಕೊಂಡದ್ದು ನಮ್ಮ ನಿಮ್ಮ ಮಾತಿನಲ್ಲಿ. ಅವನದು ವಿಶ್ವ ಪರಿಸರ ಗೀತೆ. ಪ್ರಾಕೃತಿಕ ಶಕ್ತಿಗಳು ಇದ್ದಂತೆ ನಮ್ಮನುಕೂಲಕ್ಕೆ ಪಳಗಿಸಿಕೊಳ್ಳುವ ಕಡೆಗೆ ಗಮನ ಹೆಚ್ಚು. ಒಂದಡಿಯಿಟ್ಟು ಭೂಮಿಯಳೆದವ ಎರಡನೆಯದನ್ನು ಆಕಾಶಕ್ಕಿಟ್ಟಂತೆ ಈ ಅವತಾರ ಪುರುಷನೂ ಮುಂದುವರಿದು ರೆಕ್ಕೆ ಕಟ್ಟಿಕೊಂಡ. ಬೀಸುಗಾಳಿಗೆ ಒಡ್ಡಿಕೊಳ್ಳುವ, ಪ್ರಾಥಮಿಕ ಹಂತದಲ್ಲಿ ಕ್ರೀಡೆ ಎಂದೇ ಹೇಳಬಹುದಾದ ನೇತು ತೇಲಾಟಕ್ಕಿಳಿದ. ಆಗ ಆದ ಅಪಘಾತ ಆತನ ದೇಹಕ್ಕೆ ಭಾರೀ ಕಟ್ಟುಪಾಡುಗಳನ್ನೇ ವಿಧಿಸಿತು. ಈಗ ಅವನ ವಿಶ್ವತೋಮುಖಕ್ಕೆ ಸಹಕಾರಿಯಾದದ್ದು ಗಣಕ ಮತ್ತು ಅಂತರ್ಜಾಲ. ಆ ಮೂಲಕ ಆತನ ಕೃಷಿಮೂಲ ಬದುಕಿಗೆ ಸಹಾಯಕ ಆಗಬಹುದಾದ ಸಕಲ ಸಂಚಾರಿ (All terrain vehicle) ವಾಹನ ಸಂಪಾದಿಸಿ ಕೆಲಕಾಲ ಪ್ರಯೋಗ ಮಾಡಿದ, ಉಪಯೋಗವನ್ನೂ ಪಡೆದ. ಆದರೆ ಆತನ ಮೂಲ ಆಶಯವಾದ ಕಡಿಮೆ ಇಂಧನ, ಕಡಿಮೆ ಮಾಲಿನ್ಯಕ್ಕಿದು ಒಗ್ಗಿ ಬರಲಿಲ್ಲ. ಮತ್ತೆ ಕಂಡದ್ದು ಮೂರು ಚಕ್ರದ ಸೈಕಲ್. ಇವನ ದುರ್ಬಲ ಶರೀರಕ್ಕೆ ಅದನ್ನು ಚಲಾಯಿಸುವಲ್ಲಿ ಪೂರಕ ಶಕ್ತಿ ಊಡಲು, ಅದರಲ್ಲೇ ಬ್ಯಾಟರಿ ಚಾಲಿತ ಸಣ್ಣ ಮೋಟಾರೂ ಇತ್ತು. ಇದನ್ನು ಹಂತಹಂತವಾಗಿ ಪುತ್ತೂರು, ಮಂಗಳೂರು ಎಂದು ಓಡಿಸಿದ್ದಲ್ಲದೆ, ಒಂದು ಹಂತದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೂ ಒಂಟಿಯಾಗಿಯೇ ದಾರಿಗಿಳಿಸಿದ್ದ. ಯಾಂತ್ರಿಕ ತೊಂದರೆಗಳು ಇವನನ್ನು ನಿರುತ್ತೇಜನಗೊಳಿಸಿದ್ದಕ್ಕೆ ತಮಿಳ್ನಾಡು ಮತ್ತು ಕರ್ನಾಟಕ ಹಾಯ್ದು ಮಹಾರಾಷ್ಟ್ರದವರೆಗೂ ಹೋದವನು ಹಿಂಜರಿಯಬೇಕಾಯ್ತು. ಎಷ್ಟು ಕಿರಿದುಗೊಳಿಸಲು ಹೊರಟರೂ ಗೋವಿಂದ-ಪುರಾಣ ಹಿರಿದಾಗಿಯೇ ಕಾಡುತ್ತದೆ. ಹಾಗಾಗಿ ಇನ್ನು ಹೆಚ್ಚಿನ ತಿಳುವಳಿಕೆಗೆ ಅವನದೇ ಜಾಲತಾಣವನ್ನು (ಹಳ್ಳಿಯಿಂದ) ನೀವು ಅವಶ್ಯ ಜಾಲಾಡಬೇಕು.

ವಿಶ್ವಯಾನಿ ಗೋವಿಂದನ ಈ ವಿಶ್ವಪ್ರಜ್ಞೆಯ ಸಮೃದ್ಧ ಫಲಗಳು ಆತನ ಜಾಲಕ್ಕೆ ಮಾತ್ರ ಸೀಮಿತವಲ್ಲ. ಸದ್ಯ ನಾನು ಅದರದೇ ಒಂದು ಎಳೆಯನ್ನಷ್ಟೇ ಇಲ್ಲಿ ವಿಸ್ತರಿಸುತ್ತೇನೆ. ಈಚೆಗೆ ಗೋವಿಂದನ ಮಿಂಚಂಚೆ ಪತ್ರಗಳ ಕೊನೆಯಲ್ಲಿ ಹೀಗೊಂದು ಉದ್ಧರಣೆ ಕಾಣಿಸತೊಡಗಿತು.

Only after the last tree has been cut down,
Only after the last river has been poisoned,
Only after the last fish has been caught,
Only then will you find that money cannot be eaten?

ಆತ ಪ್ರಾಮಾಣಿಕವಾಗಿ ‘ಇದು ನನ್ನದೇನಲ್ಲಾ’ ಎಂಬಂತೆ ಕೊನೆಯಲ್ಲಿ – Cree prophesy ಎಂದು ಕಾಣಿಸುತ್ತಲೂ ಇದ್ದ. “ಇಷ್ಟು ಚಂದದ್ದು ನಿನಗೆಲ್ಲಿ ಸಿಕ್ಕಿತೋ” ಎಂದಾಗ ಅಮೆರಿಕಾದ ಯಾವುದೋ ಆದಿವಾಸಿಗಳ ಜನಪದಕ್ಕೆ ಆರೋಪಿಸಿ ಸುಮ್ಮನಾಗಿದ್ದ.

ಮುಂದೆಂದೋ ನಾನು ಕುಮಾರಪರ್ವತದ ಆಸುಪಾಸಿನ ಲೇಖನಮಾಲೆ ಕುಟ್ಟುತ್ತಿದ್ದಾಗ (ಈಗ ಬರೆಯುವ ಕ್ರಮ ಇಲ್ಲವಲ್ಲಾ! ಹೀಗೇ ಚರವಾಣಿಯಲ್ಲಿ ಮಾತು ಮುಗಿಸುವ ಎಷ್ಟೋ ಮಂದಿ ‘ಇಡ್ತೇನೆ’ ಅಥವಾ ‘ಬಿಡ್ತೇನೆ’ ಎನ್ನುವಾಗಲೂ ನನಗೆ “ಎಲ್ಲಿ ಇಡ್ಲೇ ಇಲ್ಲ, ಹಿಡ್ಕೊಂಡೇ ಇದ್ದೀರಿ” ಎಂದೋ “ಅಯ್ಯೋ ಬಿಟ್ರೆ ಒಡೆದು ಹೋದೀತು, ಮಾತು ಮುಗಿಸಿ ಸಾಕು” ಎಂದಿತ್ಯಾದಿ ತಮಾಷೆ ಮಾಡದಿದ್ದರೆ ತಿಂದನ್ನ ಮೈಗೆ ಹಿಡಿಸುವುದಿಲ್ಲ!!) ಬಿಸಿಲೆಯ ಅರಣ್ಯನಾಶ, ಜೀವವೈವಿಧ್ಯಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ, ಗುಂಡ್ಯ ಹೊಳೆಯ ಮೇಲಿನ ಅನಾಚಾರಗಳನ್ನು ಅಸಂಖ್ಯ ಶಬ್ದಗಳಲ್ಲಿ ಹಿಡಿಯುತ್ತಿದ್ದಾಗ ಈ ಕ್ರೀ ಜನಾಂಗದ ಭವಿಷ್ಯವಾಣಿ ಅದ್ಭುತ ಸೂತ್ರದಂತೇ ಕಾಣಿಸಿತು. ನನ್ನ ತಿಳುವಳಿಕೆ, ಭಾಷಾಜ್ಞಾನ ಬಳಸಿ ಏನೋ ಒಂದು ಅನುವಾದವೂ ಮಾಡಿ ಬಳಸಿಕೊಂಡದ್ದು ಹೀಗಿತ್ತು:

ಕಡೆಯ ಮರ ಬೀಳಿಸಿದ ಮೇಲೆ
ಕೊನೆಯ ನದಿ ವಿಷಮಾಡಿದ ಮೇಲೆ
ಉಳಿದೊಂದೇ ಮೀನು ಹಿಡಿದ ಮೇಲೆ
ಉದಿಸೀತು ಜ್ಞಾನ, ತಿನ್ನಲುಳಿದಿಲ್ಲ ಏನೂ ಹಣದಿಂದ ಮೇಲೆ

ಈಚೆಗೆ ಗೆಳೆಯ ಸುಂದರರಾಯರು ಅವರ ಜಾಲತಾಣದಲ್ಲಿ ನದಿ ತಿರುಗಿಸುವವರ ಉತ್ಪಾತಗಳ ಹೊಸ ಒಂದು ಅಧ್ಯಾಯ ‘ತಿರುಗಲಿದೆ ನೇತ್ರಾವತಿಯ ದಿಕ್ಕು’ ಲೇಖಿಸುವಾಗ, ಅವರಿಗೂ ಗೋವಿಂದನ ಇದೇ ಉದ್ಧರಣೆ ನೆನಪಾಯ್ತು. ರಾಯರು ವೃತ್ತಿ ದಿನಗಳಲ್ಲಿ ಮುದ್ರಕನಾಗಿದ್ದರೂ ಕನ್ನಡ ಸ್ನಾತಕೋತ್ತರ ಕಲಿಕೆಯನ್ನು ಇಂದಿಗೂ ಪ್ರೀತಿಯಿಂದ ಊರ್ಜಿತದಲ್ಲಿಟ್ಟುಕೊಂಡವರು. (ನನ್ನ ಇಂಗ್ಲಿಷ್ ಎಮ್ಮೆ ಗೊಡ್ಡಾದ್ದಕ್ಕೆ ರಾಯರ ಮೇಲೆ ನನಗೆ ಸದಾ ಒಂದು ಈರ್ಷ್ಯೆಯ ಕಣ್ಣಿತ್ತು!) ಸುಂದರರಾಯರ ಅನುವಾದ ಹೀಗಿದೆ: ಕೊನೆಯ ಮರವನ್ನು ಕಡಿದುರುಳಿಸಿ ಆದ ಮೇಲೆಕೊನೆಯ ನದಿಗೂ ವಿಷವುಣಿಸಿ ಮುಗಿದ ಮೇಲೆಕೊನೆಗುಳಿದ ಒಂದೇ ಮೀನನ್ನು ತಿಂದು ಮುಗಿಸಿದ ಮೇಲೆಆಗ, ಆಗ ನಿಮಗೆ ತಿಳಿಯುತ್ತದೆ: “ಹಣ ತಿನ್ನಲು ಬರುವುದಿಲ್ಲ”!

ನಮ್ಮೊಳಗಿನ ಪ್ರಿಯ ಕಲಹಕ್ಕನುಸಾರವಾಗಿ ನಾನು ಮೂಲದೊಡನೆ ಎರಡೂ ಅನುವಾದಗಳನ್ನು ಲಗತ್ತಿಸಿ ಗೋವಿಂದ, ಕೃಶಿ, ಪಂಡಿತಾರಾಧ್ಯ ಮತ್ತು ರಾಯರಿಗೂ ಪ್ರತಿ ಹಾಕಿ “ಯಾವುದು ಉತ್ತಮ ಅನುವಾದ” ಎಂದು ಸವಾಲು ಹಾಕಿದೆ.

೧೯೮೦ರ ದಶಕದಲ್ಲೆಲ್ಲೋ ನನ್ನಂಗಡಿಗೆ ಬರುತ್ತಿದ್ದ ಅಸಂಖ್ಯ ಗಿರಾಕಿಗಳಲ್ಲಿ ತುಸು ಹೆಚ್ಚೇ ಪುಸ್ತಕ ಗೀಳಿನ ಒಬ್ಬ ತರುಣನ ಮೇಲೆ ನನ್ನ ವಿಶೇಷ ಕಣ್ಣಿತ್ತು. ಆಗೀಗ ಆತ ಭುಜದ ಮೇಲೆ ಎಸೆದುಕೊಂಡಿರುತ್ತಿದ್ದ ಬಿಳಿ ಕೋಟಿನಿಂದ ವೈದ್ಯ ವಿದ್ಯಾರ್ಥಿ ಎಂದೂ ಕೆಲವ್ಮೊಮ್ಮೆ ಜೊತೆಗೆ ತರುತ್ತಿದ್ದ ಮಿತ್ರರ ಮುಖ ನೋಡಿ, ಸಂಭಾಷಿಸುತ್ತಿದ್ದ ಕ್ರಮದಲ್ಲಿ ಮಲೇಶಿಯನ್ನಿರಬೇಕೆಂದೂ ತರ್ಕಿಸಿದ್ದೆ. ಆದರೆ ಒಂದು ದಿನ ಆತ ಯಾವುದೋ ಕನ್ನಡ ಪುಸ್ತಕವನ್ನು ಸಹಜವಾಗಿ ಕೊಂಡಾಗ ನನ್ನ ಊಹಾಪೋಹಗಳು ಮಾತಿನ ಮಹಾಪೂರದಲ್ಲಿ ಕೊಚ್ಚಿಹೋಯ್ತು. ಮೂಡಬಿದ್ರೆಯ, ಅಪ್ಪಟ ಕನ್ನಡ ಮಾಧ್ಯಮದಲ್ಲೇ ಎಸ್ಸೆಲ್ಸಿಯವರೆಗೂ ಓದಿ ಬಂದ ಈ ಕೃಶಿ, ಉರುಫ್ ಡಾ| ಕೃಷ್ಣಮೋಹನ ಪ್ರಭುವಿನ ಪರಿಚಯವಾಯ್ತು, ಆಪ್ತತೆಯೂ ಪ್ರಾಪ್ತವಾಯ್ತು. ಕೃಶಿಯ ದೊಡ್ಡ ದೋಷ – ಎಲ್ಲಾ ಮುಖದಲ್ಲಿ ಜ್ಞಾನಸಂಗ್ರಹ, ಅದರ ನೆನಪು ಮತ್ತು ಅಗತ್ಯ ಬಂದಲ್ಲಿ ವಿಶ್ಲೇಷಣಾತ್ಮಕ ಅನ್ವಯ. ಅವರು ಕೊಂಡ, ಈಗಲೂ ಕೊಳ್ಳುವ ಪುಸ್ತಕಗಳು ಅಸಂಖ್ಯ ಎಂದರೆ ಅವರು ಓದಿದ ಪುಸ್ತಕಗಳು ನಿಸ್ಸಂಖ್ಯೆ ಎನ್ನಬೇಕಾದೀತು. ಗಣಕಲೋಕಕ್ಕೆ ಬಂದರೆ ಅವರನ್ನು ನಮ್ಮ ಮಿತ್ರಬಳಗವೆಲ್ಲಾ ‘ಕಂಪ್ಯೂ-ಡಾಕ್’ (ಗಣಕವೈದ್ಯ) ಎಂದೇ ತಮಾಷೆ ಮಾಡುವುದು ಇದ್ದದ್ದೇ. ಗಣಕದ ಯಂತ್ರಾಂಶ, ತಂತ್ರಾಂಶಗಳಲ್ಲಿ ನಮಗೆ ಕಾಲಕಾಲಕ್ಕೆ ಬರುವ ಗ್ಲಾನಿ ಏನೇ ಇದ್ದರೂ ಈ ಕೃಷ್ಣ ಮೂರುತಿ ಅಲ್ಲಿ ಹಾಜರ್! ಸ್ವಂತ ಆಸ್ಪತ್ರೆಯಲ್ಲಿ ‘…ತುರಿಸಿಕೊಳ್ಳಲಾಗದಷ್ಟು’ ಕೆಲಸವಿದ್ದರೂ ಸಮಯ ಹೊಂದಿಸಿಕೊಂಡು ಉಚಿತಸೇವೆ! ಕಡೆಗೆ ನಾವೇ ದಾಕ್ಷಿಣ್ಯದಲ್ಲಿ ಗಣಕದ ವಿಚಾರ ಇವರಲ್ಲಿ ಪ್ರಸ್ತಾಪಿಸದೇ ಇರಬೇಕು, ಅಷ್ಟೆ. (ಇಲ್ಲಿ ಇವರ ಛಾಯಾಚಿತ್ರಗ್ರಹಣ, ವನ್ಯ ಪ್ರೀತಿಗಳ ಕಡತ ಬಿಚ್ಚಿದರೆ ನನ್ನ ಸದ್ಯದ ಲಕ್ಷ್ಯ ಭಂಗವಾಗುತ್ತದೆ. ಅವಶ್ಯ ನೀವೇ ಸಣ್ಣದಾಗಿ ಪರಿಚಯಿಸಿಕೊಳ್ಳಲು ಅವರ ಈ ಜಾಲತಾಣಕ್ಕೆ ನುಗ್ಗಿ ನೋಡಿ: www.drkrishi.com)

ಕೃಶಿ ಮೊದಲು ಈ ಚೌಪದಿಯ ಮೂಲೋತ್ಪಾಟನೆಗಿಳಿದರು. ಅವರು ಅಂತರ್ಜಾಲ ಬಸಿದು ಕೊಟ್ಟ ಸುಮಾರು ನಾಲ್ಕು ಪುಟದುದ್ದದ ಸಾಹಿತ್ಯ ಮತ್ತು ಸೇತುಗಳ ಸಾರವಿಷ್ಟು: ಒಳ್ಳೆಯ ಉಲ್ಲೇಖವೇನೋ ಹೌದು, ಆದರೆ ಇದು ನಿಜವಾಗಿ ಕ್ರಿ ಇಂಡಿಯನ್ನೇ ಹೇಳಿದ್ದಾಗಬೇಕಿಲ್ಲ. ಸಾಮಾನ್ಯ ಮಾತಿಗೆ ತೂಕಬರಲು ನಮ್ಮಲ್ಲಿ ವೇದ ಪುರಾಣಗಳನ್ನು ಉದ್ಧರಿಸುವಂತೆ ಅಮೆರಿಕಾದಲ್ಲಿ (ರೆಡ್) ಇಂಡಿಯನ್ನರನ್ನು ಬಳಸುತ್ತಾರೆ. (ಇಲ್ಲಿ ರೆಡ್ ಇಂಡಿಯನ್ ನಾಯಕ ಅಮೆರಿಕಾದ ಅಧ್ಯಕ್ಷನಿಗೆ ಪರಿಸರದ ಬಗ್ಗೆ ಬರೆದನೆನ್ನಲಾದ ದೀರ್ಘ ಪತ್ರವನ್ನೂ ನೆನೆಸಿಕೊಳ್ಳಬಹುದು. ಅದರ ಮೂಲೋತ್ಪಾಟನೆ ಮಾಡಿದವರು, ಅಂತಿಮವಾಗಿ ಓರ್ವ ನವನಾಗರಿಕ, ವಕೀಲನನ್ನು ಪತ್ರದ ಲೇಖಕ ಎಂದು ಗುರುತಿಸಿದ್ದಾರೆ. ಹಾಗೇ ಈ ಚೌಪದಿಯ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು ಎನ್ನುತ್ತಾನೆ ಗೋವಿಂದ) ೧೮೯೪ರಿಂದ ಇದನ್ನು ಹೇಳಿಕೆಯಂತೆ ಭಿನ್ನ ರೂಪಗಳಲ್ಲಿ ವಿಭಿನ್ನ ಪಂಗಡಗಳೊಡನೆ ಗುರುತಿಸಲು ಬರುತ್ತದೆ. ೧೯೭೨ರಲ್ಲಿ ಇದನ್ನು ಉತ್ತರ ಅಮೆರಿಕಾದ ಅಬೆನಾಕಿ ಎಂಬ ರೆಡ್ ಇಂಡಿಯನ್ ಬಳಗದೊಡನೆಯೂ ಸಾಕೋಕೇನಾನ್ಕ್ವಾಸ್ ಎಂಬ ಇನ್ನೊಂದೇ ಬಳಗದೊಡನೆಯೂ ನಿಖರವಾಗಿ ಗುರುತಿಸಿದ್ದಕ್ಕೆ ಮುದ್ರಿತ ದಾಖಲೆಗಳೇ ಇವೆ. ೧೯೮೩ರ ಒಂದು ಪುಸ್ತಕ ಇದನ್ನು ಒಸಾಗೆ ಎಂಬ ಜನಾಂಗದ ನಾಣ್ಣುಡಿ ಎಂದೇ ಹೇಳುತ್ತದೆ. ೧೯೮೦ರ ದಶಕದಲ್ಲಿ ಗ್ರೀನ್ ಪೀಸ್ (ಎಂಬ ಪರಿಸರ ಹೋರಾಟಗಾರರ ಬಳಗ) ಇದರ ಜನಪ್ರಿಯತೆಗೆ ಕಾರಣವಾಯ್ತು. ಎಲ್ಲ ವಾದಗಳಿಗೂ ಬಾಗಿಲು ತೆರೆದಿಟ್ಟು ೨೦೦೯ರ ಆಕ್ಸ್ಫರ್ಡ್ ಗಾದೆಗಳ ನಿಘಂಟು ಇದನ್ನು ಅಮೆರಿಕಾದ ಮೂಲವಾಸಿಯ ಹೇಳಿಕೆ ಎಂದಷ್ಟೇ ಉಲ್ಲೇಖಿಸಿ ತನ್ನೊಳಗಡಗಿಸಿಕೊಂಡಿತು.

ಮುಂದುವರಿದ ಕೃಶಿ ನಮ್ಮಿಬ್ಬರ ಅನುವಾದದ ಬಗ್ಗೆ ತೀರ್ಮಾನ ಕೊಡುವುದು ಬಿಟ್ಟು ಅವರದೇ ಅಂದರೆ ಮೂರನೇ ಅನುವಾದ ಹೀಗೆ ಕೊಟ್ಟಿದ್ದಾರೆ:

ಕಡೆಯ ಮರ ಕತ್ತರಿಸಿ ಬಿದ್ದಾಗ
ಕೊನೆಯ ನೀರಿನ ಹನಿ ವಿಷವಾದಾಗ
ಕೊನೆಯ ಮೀನನ್ನು ಹಿಡಿದು ತಿಂದಾಗ
ಆವಾಗ ಮಾತ್ರ ತಿಳಿದೀತು, ಹಣವನ್ನು ತಿನ್ನಲಾಗದು ಎಂಬ ಜ್ಞಾನ.

ಬರಿಯ ಕನ್ನಡದ ಪಾಂಡಿತ್ಯವೇನು, ಹೆಸರಿನಲ್ಲೂ ‘ಪಂಡಿತ’ವನ್ನೇ ಇಟ್ಟುಕೊಂಡ ಗೆಳೆಯ ಪಂಡಿತಾರಾಧ್ಯರಾದರೂ ನ್ಯಾಯ ಕೊಟ್ಟಾರು ಎಂದು ಕಾದದ್ದೇ ಬಂತು. ಸುಂದರರಾಯರು ಅವರಿಗೆ ಮಂಗಳಗಂಗೋತ್ರಿಯಲ್ಲಿ ಮೊದಲು ಶಿಷ್ಯ, ಅನಂತರ ಗೆಳೆಯ. ತೂಕದಲ್ಲಿ ನನ್ನ ಗೆಳೆತನ ಹಳತು ಮತ್ತು ದೀರ್ಘಕಾಲೀನ ಎಂಬ ಧೈರ್ಯದಲ್ಲಿ ‘ನ್ಯಾಯ ಕೊಳ್ಳುವ’ ವಿಶ್ವಾಸದಲ್ಲಿದ್ದೆ. ಅವರು ನನ್ನದೇ ತೂತು ಕಾಸನ್ನು ಮೊದಲು ಮರಳಿಸಿದರು: “ಪ್ರೀಯರೇ, (ಬಹುತೇಕ ಬ್ಯಾನರ್ ಸಾಹಿತಿಗಳು ‘ಪ್ರಿಯ’ರಲ್ಲಿ ‘ಪ್ರೀತಿ’ಕಾಣುತ್ತಾರೆ!) ನಿಮ್ಮ ಅಣುವ್ಯಾಧ ಸರಿಯಾಗಿಯೇ ಇದೆ.” ಅಂದರೆ ರಾಯರ ಅನುವಾದ ಸರಿಯಿಲ್ಲವೋ ಎಂದು ನಾನು ಯೋಚಿಸದಂತೆ ಮುಂದುವರಿದು ಹೀಗೆ ಬರೆದರು, “ಅಮೆರಿಕದ ಮೂಲನಿವಾಸಿ ಇಂಡಿಯನ್ ಆಜ್ಜಿಯ ವಿವೇಕದ ಮಾತು ಎಲ್ಲರಿಗೂ ಸಂಬಂಧಿಸಿದೆ.” ಹೀಗೆ ಹೇಳುವಲ್ಲಿ ನನ್ನ ಕೊಕ್ಕೆಯನ್ನು (ನಾನೋ? ರಾಯರೋ?) ನಯವಾಗಿ ಜಾರಿಸಿ (ಪ್ರೊಫೆಸರರ ಮರೆವೇ ನಿವೃತ್ತಿಯ ಪ್ರಾಯದೋಷವೇ?) ತಮ್ಮದೇ ವ್ಯಾಖ್ಯಾನವೆನ್ನುವಂತೆ ತ್ರಿಪದಿಯೊಂದನ್ನು ಹೊಸದಾಗಿ ಹೊಸೆದಿದ್ದಾರೆ:

ಸಾವಯವ ಪ್ರಕೃತಿಯನ್ನು ತಿಂದು ತೇಗಿದ ಮೇಲೆಮುಕ್ಕಲು ಉಳಿದಿರುವುದು ಮಣ್ಣು ಮಾತ್ರ.
ಮನುಷ್ಯನ ಕೊನೆಯ ನೆಲೆಯೂ ಅದೇ ತಾನೆ!

ಸುಂದರರಾಯರು ಬಳಕೆದಾರ ಮತ್ತು ಮಾಹಿತಿ ಹಕ್ಕುಗಳಲ್ಲಿ ಬಹಳ ಕಾಲದಿಂದ ಗಟ್ಟಿ ಕೆಲಸ ಮಾಡಿದ ಅನುಭವಿ. ಸ್ವಯಂ ಸ್ಪಷ್ಟವಿರುವ ಪತ್ರ, ಸಾಕ್ಷಿಯಿಂದಾಚೆಗೆ ಮಾತಾಡುವುದು ಕಡಿಮೆ. ಅವರ ಲೇಖನ ನೋಡಿದ್ದೇ ನಾನು “ಕೃತಿಚೌರ್ಯಾಂತ” ಕೆಣಕಿದೆ. ಅಲ್ಲಾನ್ನಲಿಲ್ಲ, ವಿವರಣೆ ಕೊಡಲಿಲ್ಲ. ಗಡ್ಡದೊಳಗೇ ನಗಾಡಿಬಿಟ್ಟು “ನೀವೂ ಮಾಡಿದ್ರಾ? ಇದು ನನ್ನ ಅನುವಾದ” ಅಂತ ಮುಗಿಸಿಬಿಟ್ಟರು. ‘ಯಾರ ಅಣುವ್ಯಾಧ ಪರಿಣಾಮಕಾರಿ ಎಂದು ತೌಲನಿಕ ಅಭಿಪ್ರಾಯ ಕೊಡೀ’ ಎಂದದ್ದಕ್ಕೆ ನಾನು ನಿರೀಕ್ಷಿಸಿದ ಹಾಗೆ ಮೌನವೇ ಅವರುತ್ತರ.

ನನ್ನೀ ಜಾಲತಾಣದ ಓದುಗ ಬಳಗದಲ್ಲಿ ನೀವು, ನೂರಾರು ಜನ ವಿದ್ವಾಂಸರಿದ್ದೀರಿ (ಅವಿಳಂಬ ಸರಸ್ವತಿ ಎಂದೇ ಬಿರುದಾಂಕಿತರಾದ ಶತಾವಧಾನಿ ರಾ. ಗಣೇಶರೂ ಇದ್ದಾರೆ), ಅಸಂಖ್ಯ ಪರಿಸರ ಹೋರಾಟಗಾರರಿದ್ದೀರಿ. ಬರಲಿ ನಿಮ್ಮ ಟೀಕೆ ಸಹಸ್ರ!