ಶನಿವಾರ ಮಧ್ಯಾಹ್ನ ಅವಸರದ ಊಟ ಮಾಡಿ ಮಂಗಳೂರಿನ ಶ್ರೀ ರಾಮಕೃಷ್ಣಾಶ್ರಮ ಸೇರಿದ ನಾನು ದೇವಕಿ ಲೆಕ್ಕಕ್ಕೆ ಎರಡು ರಾತ್ರಿಗಳ ನಿದ್ರೆಗಾಗಿ ಮನೆಗೆ ಬಂದದ್ದಿದೆ. ಆದರೆ ನಮ್ಮ ದಿನಚರಿ ಮಾತ್ರ ಇನ್ನೂ ‘ಪಂಚಮದ ಇಂಚರ’ – ಒಂದೂವರೆ ಹಗಲಿನ ಗುಂಗು, ಕಳಚಿಕೊಳ್ಳುತ್ತಲೇ ಇಲ್ಲ. ಚಂದ್ರಮತಿಯ ಸತ್ಯ ಸಾಕ್ಷಾತ್ಕಾರ, ಪ್ರಭಾವತಿಯ ಕರ್ತವ್ಯಪ್ರಜ್ಞೆ ಮತ್ತು ಮೋಕ್ಷ ಕಲ್ಪನೆ, ವಿಜಯದೊಳಗೆ ಗರ್ವಭಂಗವನ್ನೆಳೆದುಕೊಂಡ ಸುದರ್ಶನನೇ ಮೊದಲಾದ ಯಕ್ಷವೇಷಗಳು, ವಿಚಾರಗಳು ರಿಂಗಣಿಸುತ್ತಲೇ ಇವೆ. ಯಕ್ಷಕ್ಕೂ ಸೇರಿ ಬಂದ ಗಾನ ಶುದ್ಧ ಗಂಗೆಯೇ ಆಗಿ ಮುಂಜಾವು, ಹಗಲು, ಅಪರಾಹ್ನದ ರಾಗಗಳ ಪಾತ್ರೆಯಲ್ಲಿ ಅರಳುವ ಎಲರಾಗಿ, ಮೆರೆಯುವ ಭಾವವಾಗಿ, ಉಲಿಯುವ ಕೊಳಲಾಗಿ, ನುಡಿಯುವ ತಂತಿಯಾಗಿ, ಮಿಡಿಯುವ ತಾಳವಾಗಿ, ಗದ್ಯ ಲಹರಿಯಾಗಿ, ಪ್ರೀತಿ ಸಮ್ಮಾನವಾಗಿ ನಮ್ಮ ಇರವನ್ನು ಆವರಿಸಿ ತೊಯ್ಯಿಸಿದ ಪರಿ ನಿಜಕ್ಕೂ ಮುಗಿದುಹೋಯ್ತು ಎಂದು ಒಪ್ಪಲು ಮನಸ್ಸು ಕೇಳುತ್ತಲೇ ಇಲ್ಲ. ಇವೆಲ್ಲವನ್ನು ಅನುಭವಿಸದಿದ್ದ ‘ಅಲ್ಪ ಪುಣ್ಯ’ರಿಗೆ ನನ್ನ ಮಾತು ಒಗಟಾಗಿ ಕೇಳಬಹುದು. ಅವರಿಗಾಗಿ, ಮೂರು ಮುಖ್ಯ ಶಕ್ತಿಗಳು ಯೋಜಿಸಿ, ಸುಂದರವಾಗಿ ಕಾರ್ಯಗತಗೊಳಿಸಿದ ಒಂಡು ದೊಡ್ಡ ರಾಗಲಹರಿಯನ್ನು ನನ್ನ ಮಿತಿಯ ಮಾತುಗಳಲ್ಲಿ ಹಿಡಿದಿಡಲು ಪ್ರಯತ್ನಿಸುತ್ತೇನೆ.

ಶ್ರೀರಾಮಕೃಷ್ಣ ಆಶ್ರಮ, ಮಂಗಳೂರು ಇವರಿಗೆ ಸ್ವಾಮಿ ವಿವೇಕಾನಂದರ ನೂರೈವತ್ತನೇ ಜನ್ಮದಿನೋತ್ಸವದ ಸಂಭ್ರಮ. ಅದನ್ನೊಂದು ಸುಂದರ ನೆಪವಾಗಿಟ್ಟುಕೊಂಡು, ತಮ್ಮ ಮಿತಿಯ ಎಲ್ಲವನ್ನೂ ‘ಪಂಚಮದ ಇಂಚರ’ಕ್ಕೆ ಮೀಸಲಿಟ್ಟರು. ಇವರ ಪ್ರಾಯೋಜಕತ್ವದ ಭಾಗವಾಗಿ ಒದಗಿದ ಆಶ್ರಮದ ಪ್ರಶಾಂತ ಪರಿಸರ, ಸುಂದರ ಸಭಾಭವನವೇ ಮೊದಲಾದ ವ್ಯವಸ್ಥೆಗಳು, ನಿಜ ಅರ್ಥದ ಸ್ವಯಂಸೇವಕ ಬಳಗ ಅನನ್ಯ ಮತ್ತು ಮೌಲ್ಯಯುತವಾದದ್ದು. ಮತೀಯ ಮಠಗಳ ಸೋಂಕಿಲ್ಲದೆ, ವ್ಯಕ್ತಿ ಮೌಲ್ಯವನ್ನು ಉದಾರವಾಗಿ ಉನ್ನತೀಕರಿಸುವ ರಾಮಕೃಷ್ಣಾಶ್ರಮಕ್ಕೆ ಮಾತ್ರ ಇದು ಸಾಧ್ಯ. ವಾಸ್ತವವಾಗಿ ರಾಮಕೃಷ್ಣ ಆಶ್ರಮ, ಬೆಂಗಳೂರು ನನಗೆ ಹಳೆಯ ಸಂಬಂಧಿ. ಸೂಕ್ಷ್ಮದಲ್ಲಿ ಹೇಳುವುದಾದರೆ ಮೊದಲ ನೆನಪು ಸುಮಾರು ೧೯೬೬ ರಿಂದ ೧೯೬೯. ನನ್ನ ಬೆಂಗಳೂರಿನ ಪ್ರೌಢಶಾಲಾ ದಿನಗಳಲ್ಲಿ ನಾನು ಅಲ್ಲಿನ ಶ್ರೀ ರಾಮಕೃಷ್ಣಾಶ್ರಮದ ವಿವೇಕಾನಂದ ಬಾಲಕ ಸಂಘದ (ಆದಿತ್ಯವಾರದ) ಸದಸ್ಯನಾಗಿದ್ದೆ. ಸದ್ಯ ಬಿಳಿಗಿರಿರಂಗನ ಬೆಟ್ಟ ಮೂಲವಾಗಿ ವಿಶ್ವಖ್ಯಾತರಾಗಿರುವ ಡಾ| ಸುದರ್ಶನ್ ಆಗಷ್ಟೇ ವೈದ್ಯಕೀಯ ಕಾಲೇಜು ಸೇರಿದ್ದ, ಅಲ್ಲಿನ ಬಾಲಕ ಸಂಘದಲ್ಲಿ (ದೈನಿಕ) ನನಗೆ ಎರಡೋ ಮೂರೋ ವರ್ಷ ಹಿರಿಯ ಸದಸ್ಯ. ಆಶ್ರಮದ ಅರ್ಧ ದಿನದ ಮತ್ತು ವಿಶೇಷ ದಿನಗಳ ಚಟುವಟಿಕೆ (ಆಟ, ಪಾಠ ಮತ್ತು ಕೆಲಸ) ನಮಗೆ ಪ್ರೀತಿಯಿಂದ ಉತ್ತಮ ಮನುಷ್ಯನಾಗಲು ಪ್ರೇರಣೆ ಮಾತ್ರ ಕೊಡುತ್ತಿತ್ತು. ಅಂದು ಹೀಗೇ ವಿಶೇಷ ಕಲಾಪಗಳಲ್ಲಿ ಭಾಗಿಯಾಗಿ ನಾನು ಗಳಿಸಿದ ಧನ್ಯತೆ (ಹಣ, ಪದವಿ, ಸಾರ್ವಜನಿಕ ಪ್ರಶಂಸೆ ಇತ್ಯಾದಿ ಯಾವುದೇ ಆಮಿಷಗಳಿರುತ್ತಿರಲಿಲ್ಲ – ಕಾಯಕವೇ ಕೈಲಾಸ!) ಮಂಗಳೂರಿನ ಆಶ್ರಮದ ಸ್ವಯಂ ಸೇವಾ ಬಾಲರನ್ನು ನೋಡಿದಾಗ ಮರುಕಳಿಸಿತು. [ಆಶ್ರಮದೊಡನೆ ನನ್ನ ಇನ್ನೊಂದು ಬಲವತ್ತರವಾದ ಸಂಬಂಧ ಸ್ವಾಮಿ ಜಗದಾತ್ಮಾನಂದರದು, ಇನ್ನೆಂದಾದರೂ ವಿಸ್ತರಿಸುತ್ತೇನೆ

ಜೀವನ ಸಂಧ್ಯೆಯಲ್ಲಿರುವ ಅತಂತ್ರರಿಗೆ, ವ್ಯವಸ್ಥಿತ ನಿತ್ಯ ಅಗತ್ಯಗಳೊಡನೆ ಮಾನಸಿಕ ಭದ್ರತೆಯನ್ನು ಚಿರಂತನವಾಗಿಸುವ ವಿಶ್ವಾಸಿಗ – ‘ಚಿರಂತನ ಟ್ರಸ್ಟ್,’ ಸರಳವಾಗಿ ಹೇಳುವುದಾದರೆ ಸುರತ್ಕಲ್ಲಿನ ವೃದ್ಧಾಶ್ರಮ, ‘ಪಂಚಮದಿಂಚರ’ದ ಇನ್ನೋರ್ವ ಸಂಘಟನಾ ಪ್ರಾಯೋಜಕ. ಭಾರವಿ ದೇರಾಜೆ ಲೆಕ್ಕಕ್ಕೆ ಇದರ ವರಿಷ್ಠ. ಈತ ಕಲಿಕಾ ಯೋಗ್ಯತೆ (ಸಮಾಜಸೇವಾ ವಿಷಯದಲ್ಲಿ ಸ್ನಾತಕೋತ್ತರ ಪದವೀಧರ) ಮತ್ತು (ಸ್ವಯಂ ಆಯ್ದುಕೊಂಡು) ವೃತ್ತಿರಂಗಗಳ ಅಬೇಧ ಕಲ್ಪಿಸಿ ಯಶಸ್ವಿಯಾದ ತೀರಾ ವಿರಳ ‘ಪ್ರಬೇಧ.’ ಇಲ್ಲದೇ ಹೋದರೆ ಇಪ್ಪತ್ತರ ತಾರುಣ್ಯದಲ್ಲಿ, ಯಾವುದೋ ಕಂಪನಿ ಸುಪ್ಪತ್ತಿಗೆಯಲ್ಲಿ ಐದಂಕಿ ಗಳಿಸುವ ವಿದ್ಯಾರ್ಹತೆ ಇಟ್ಟುಕೊಂಡು, ಸೊನ್ನೆ ಬಂಡವಾಳದಲ್ಲಿ ಯಾರಾದರೂ ವೃದ್ಧಾಶ್ರಮ ಕಲ್ಪಿಸುವುದು ಉಂಟೇ? ಈತನ ‘ಅತಿರೇಕ’ದ ಹಿಂದೆ ಅದನ್ನು ಪೂರ್ಣ ಒಪ್ಪಿ, ಸಹಯೋಗವನ್ನೂ ಕೊಡುವ ಆತನ ಕುಟುಂಬದ ‘ದೋಷ’ವೂ ಇದೆ ಎಂದರೆ ತಪ್ಪಾಗದು. ಕುಟುಂಬ ಸದಸ್ಯ ಒಬ್ಬೊಬ್ಬರ ವಿಶ್ಲೇಷಣೆ, ವಿವರಣೆಗಿಳಿಯುವುದಿಲ್ಲ. ತುಸು ದೀರ್ಘ ಆದರೆ ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಭಾರವಿಯ ಅಜ್ಜ (ದೇರಾಜೆ ಸೀತಾರಾಮಯ್ಯ), ಅಪ್ಪ ಮತ್ತು ಮಾವ (ದೇರಾಜೆ ಮೂರ್ತಿ ಮತ್ತು ಪ್ರೊ| ಶಂಕರ್ – ಸ್ನಾತಕ ಪದವಿಯಲ್ಲಿ ನನ್ನ ಸಹಪಾಠಿಗಳು, ಗೆಳೆಯರು), ತಂಗಿ, ಭಾವ, ಹೆಂಡತಿ ಎಂದಿತ್ಯಾದಿ ಪಟ್ಟಿ ಮಾಡುತ್ತ ಹೋದರೆ ಎಲ್ಲರೂ ಸಾಹಿತ್ಯ, ಯಕ್ಷಗಾನ, ಸಂಗೀತ, ನಾಟಕ, ಯಕ್ಷಿಣಿ ಎಂಬಿತ್ಯಾದಿ ಸಾಂಸ್ಕೃತಿಕ ಕಲಾಪಗಳ ಕಡು ಮೋಹಿಗಳು. ಒಂದರ್ಥದಲ್ಲಿ ಇವರ ಕೂಟವೇ ಭಾರವಿ ‘ವಹಿಸಿಕೊಂಡ ಅಜ್ಜಜ್ಜಿ’ಯರ ಮಾನಸಿಕ ಆರೋಗ್ಯಕ್ಕೆ, ಸಾಂಸ್ಕೃತಿಕ ಕಲಾಪಗಳನ್ನೂ ಬಳಸುವಲ್ಲಿ ಬೆಂಬಲಿಸಿತು. ‘ಬಾರಯ್ಯ ಬೆಳದಿಂಗಳೆ’ ಎಂಬ ಹೆಸರಿನಲ್ಲಿ ತಿಂಗಳಿಗೊಮ್ಮೆ ಆಶ್ರಮದ ವಠಾರದಲ್ಲೇ ಒಂದು ಕಿರು ಚಿಂತನ, ಅಲ್ಪಾವಧಿಯ ಕಲಾಚಟುವಟಿಕೆ – ಸಂಗೀತ, ನಾಟಕ, ಯಕ್ಷಗಾನ ಇತ್ಯಾದಿ. ಇದನ್ನು ‘ಆಶ್ರಮದ’ ಹೊರಗಿನ ಸೀಮಿತ ಸಂಖ್ಯೆಯ ಸಹೃದಯಿಗಳಿಗೂ ಮುಕ್ತಗೊಳಿಸಿ, ಸಾಮಾಜಿಕ ಸ್ಪಂದನಕ್ಕೂ ಪರೋಕ್ಷವಾಗಿ ಆಶ್ರಮದ ಕಲಾಪಗಳ ಪಾರದರ್ಶಕತೆಗೂ ಅವಕಾಶಮಾಡಿಟ್ಟಿದ್ದಾರೆ. ‘ಪಂಚಮದಿಂಚರ’ದ ಸದಭಿರುಚಿಯಲ್ಲಿ ‘ಚಿರಂತನ’ದ ಪರಿಮಳವನ್ನು ಪ್ರತ್ಯೇಕಿಸಿ ಗುರುತಿಸುವುದು ಅಸಾಧ್ಯವೂ ಅನಾವಶ್ಯಕವೂ ಸರಿ.

ಪಂಚಮದಿಂಚರದ ಮೂಲ ಕಲ್ಪನೆ ಮತ್ತು ಪ್ರಧಾನ ಸಂಯೋಜನಾ ಶಕ್ತಿ – ‘ವಿಭಿನ್ನ’. ಇದರ ಹಿಂದೆ ರುಚಿಶುದ್ಧ ವ್ಯಕ್ತಿಗಳಿದ್ದಾರೆ. ಆದರೆ ಹೆಸರಿಸುವುದು ಅವರಿಗೆ ಮೈಲಿಗೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಈಚಿನ ಮಂದ್ರ ಸಂಗೀತದವರೆಗೂ ‘ವಿಭಿನ್ನ’ಕ್ಕೆ ಬಹಳ ಒಳ್ಳೆಯ ಚರಿತವಿದೆ. ಆದರೆ ದಾಖಲೆ ಇದಕ್ಕೆ ನಿಷಿದ್ಧ. ಪ್ರಸ್ತುತ ಕಾರ್ಯಕ್ರಮಕ್ಕಂತೂ ಆರ್ಥಿಕ ನೆರವು ಕೊಡುವಲ್ಲಿ ಹಲವು ಘನ ಸಾರ್ವಜನಿಕ ಸಂಸ್ಥೆಗಳನ್ನೇ ಒಟ್ಟುಮಾಡಿದ್ದಾರೆ, ಗೌರವಪೂರ್ಣ ಸ್ಮರಣೆ ಕೇಳಿದ್ದೇವೆ. ಆದರೆ ವಿಭಿನ್ನದ ಆರ್ಥಿಕ ತತ್ತ್ವ – ಶೂನ್ಯದಿಂದ ಶೂನ್ಯಕ್ಕೆ. ಕಳೆದ ಒಂದೋ ಎರಡೋ ಕಲಾಪಗಳಲ್ಲಿ ‘ಸಾರ್ವಜನಿಕ ದೇಣಿಗೆ (ರಸೀದಿ ಸಹಿತ) ಸ್ವೀಕರಿಸುತ್ತೇವೆ’ ಎಂದೇನೋ ಜನ ಕೂರಿಸಿದ್ದರು. ಆದರೆ ಕಲಾಪ ಮುಗಿದು ಕೆಲವೇ ದಿನಗಳಲ್ಲಿ (ಎಷ್ಟೂ) ದೇಣಿಗೆ ಕೊಟ್ಟ ಅಷ್ಟೂ ಜನಕ್ಕೆ ಕಲಾಪದ ಒಟ್ಟು ಆದಾಯ ಮತ್ತು ವಿನಿಯೋಗ ವಿವರಗಳ ಪತ್ರ ಹೋಗಿದೆ. ಅವುಗಳ ಕೊನೆಯಲ್ಲಿ ಕೊರತೆಯನ್ನು ತುಂಬಿ ಕೊಟ್ಟ, ಅನೌಪಚಾರಿಕ ಸಂಘಟನೆ – ವಿಭಿನ್ನದ, ಆಧಾರ ಸ್ತಂಭಗಳಿಗೆ ಕಿಂಚಿತ್ತೂ ಪ್ರಚಾರದ ಅಲಂಕಾರ ಒಗ್ಗುವುದಿಲ್ಲ. ಘೋಷಿತ ಕಲಾಪಗಳಲ್ಲಿ ನಡೆಗೆ ಬೇಕಾದಷ್ಟೇ ಮಾತು. ಮತ್ತದೂ ಶಬ್ದ ಶಬ್ದ ತೂಗಿ, ಅರ್ಥಗ್ರಹಿಸಿ, ಸರಿಯಾದ ಸ್ವರಭಾರ ಹಾಕಿ ನಿರೂಪಿಸಬಲ್ಲ ತಜ್ಞನ ಚೀಟಿ ಮತ್ತು ಧ್ವನಿಗಳಲ್ಲಿ ಇರುತ್ತದೆ. ಸಂಘಟನಾ ಚತುರರ ‘ಪ್ರದರ್ಶನ’ವಾಗಿ ಅಲ್ಲ, ಕೃಪಾಳುವಿನ ದೊಡ್ಡತನವಂತೂ ಖಂಡಿತ ಇಲ್ಲ. ಪ್ರಸ್ತುತಿಗಳಲ್ಲಿ ರಸಿಕರ ರುಚಿಶುದ್ಧ ಮತ್ತು ಜ್ಞಾನ ಸಮೃದ್ಧಿ ಒಂದೇ ಲಕ್ಷ್ಯ.

ಜೀವವೈವಿಧ್ಯ ಇದ್ದಂತೆ ಒಂದೇ ಜೀವಿಯ ಪ್ರತಿ ಜೈವಿಕ ಪ್ರಸ್ತುತಿಯೂ ಭಿನ್ನ; ಒಂದು ಇನ್ನೊಂದರ ನಕಲಲ್ಲ. ಭೀಮಸೇನ ಜೋಶಿಯವರು ಭೈರವ್ ರಾಗ ಒಂದಕ್ಕೇ ಎಷ್ಟೋ ವರ್ಷ ಹೆಣಗಿ, ಸಾಧನೆಯಲ್ಲೂ “ರಾಗ ಸಾಗರ ಅಪಾರ” ಎಂದಿದ್ದರಂತೆ. ಇದರ ಅರಿವಿದ್ದ ‘ವಿಭಿನ್ನ’, ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮಂಗಳೂರಿನ ಪ್ರಸ್ತುತಿ ವಿಶಿಷ್ಟವಾಗುವಂತೆ ಮುಂದಾಗಿಯೇ ಕೆಲಸ ನಡೆಸಿತ್ತು. ಪ್ರಯತ್ನದ ಸಾಕ್ಷಿಗಳು – ಕೇವಲ ಪ್ರೇಕ್ಷಕನಾದ ನನಗೇ ಬಂದ ಅಸಂಖ್ಯ ಮಿಂಚಂಚೆ, ಚರವಾಣಿಯ ಚುಟುಕು ಸಂದೇಶ, ಆರು ಅಂಕಣಗಳ ಸವಿವರ ಆಮಂತ್ರಣ ಪತ್ರಿಕೆ ಮತ್ತು ಹನ್ನೆರಡು ಪುಟಗಳ ಪುಸ್ತಿಕೆ – ಕಲಾಂತರಂಗ ಕೈ ದೀವಿಗೆ. ಆಮಂತ್ರಣ ಒಟ್ಟಾರೆ ಕಲಾಪಗಳ ಸಮಯ, ವಿಷಯ, ವ್ಯಕ್ತಿಯ ಕ್ರಮಬದ್ಧ ಪಟ್ಟಿ. ಯಕ್ಷಗಾನ, ಸಮ್ಮಾನ ಮತ್ತು ಸಂಗೀತ ಎನ್ನುವ ಮೂರು ಮುಖಗಳ ಕಲಾಪದಲ್ಲಿನ ಮುಖ್ಯ ವ್ಯಕ್ತಿ ಪರಿಚಯ, ಪ್ರಸಂಗ ಪರಿಚಯ (ಇದು ಯಕ್ಷಗಾನಕ್ಕೇ ಮೀಸಲಲ್ಲ), ರಸಿಕರ ನಿರೀಕ್ಷೆಗಳ ಸೂಚಿ ಮತ್ತು ಕಲಾವಿದರ ಆಶಯಗಳ ವಿಸ್ತರಣೆಯೇ ಈ ಕೈದೀವಿಗೆ. ಪುಸ್ತಿಕೆಯ ಉಪಯುಕ್ತತೆಗೆ ಒಂದು ಉದಾಹರಣೆಯಾಗಿ ಸ್ವಲ್ಪ ವಿಸ್ತರಣೆ ನೋಡಿ. ಆಮಂತ್ರಣ ಯಕ್ಷಕಲೆಯ ಮೊದಲ ಪ್ರಸ್ತುತಿಯನ್ನು ೨-೧೫ರಿಂದ ೬-೧೫ಕ್ಕೆ ಕಾಣಿಸುತ್ತಾ ಮೇಳ, ಪ್ರಸಂಗ ಮತ್ತು ಕಲಾವಿದರ ಹೆಸರುಗಳನ್ನು ಹೇಳುತ್ತದೆ. ಕೈದೀವಿಗೆ ಆ ಕಥಾನಕದ ಹಿನ್ನೆಲೆ, ಅದು ಯಕ್ಷ-ಪ್ರಸಂಗವಾಗಿ ನಡೆದು ಬಂದ ದಾರಿಯನ್ನು ಚುಟುಕಿನಲ್ಲಿ ಪರಿಚಯಿಸುತ್ತದೆ. ಮುಂದುವರಿದು ಯಕ್ಷಗಾನದಲ್ಲಿ ಆಶು ಸಂಭಾಷಣೆಗಳಿದ್ದಂತೆ, ವ್ಯವಸ್ಥಿತ ಮೇಳ ನಡೆಗಳೂ ಇದೆ ಎನ್ನುವುದನ್ನು ಜ್ಞಾಪಿಸುತ್ತದೆ. ಪಾತ್ರೌಚಿತ್ಯದ ಕುರಿತು ಮುಖ್ಯ ಕಲಾವಿದರ ವಿಚಾರಗಳಿಗೆ ಕುಮ್ಮಕ್ಕು ಕೊಟ್ಟು, ಪ್ರಾತಿನಿಧಿಕ ಪ್ರತಿಕ್ರಿಯೆಯನ್ನು ದಾಖಲಿಸಿದ್ದಾರೆ. ಇವೆಲ್ಲದರ ಫಲವಾಗಿ ಒಂದೂವರೆ ದಿನದ ಅನುಭವ ಕಲಾವಿದರಿಗೆ ರಸಿಕರಿಗೆ ಏಕಕಾಲದಲ್ಲಿ ನವೋನ್ಮೇಷಶಾಲಿನಿಯಾಗಿತ್ತು.

ಶನಿವಾರ ಅಪರಾಹ್ನ ಶ್ರೀರಾಮಕೃಷ್ಣಾಶ್ರಮದ ಖಾಲಿ ರಂಗಸ್ಥಳದ ನಡು ಎದುರಂಚಿನಲ್ಲಿ ಆಳೆತ್ತರದ ಹಿತ್ತಾಳೆ ದೀಪದ ಕಂಬ ಮಾತ್ರ ನಿಂತಿತ್ತು. ಹಿಂದಿನ ತೆರೆಯ ಮೇಲಂಚಿನಲ್ಲಿ ಮೂರು ಮುಖ್ಯ ಸಂಘಟಕರ ನಾಮೋಲ್ಲೇಖ. ವಿಸ್ತೃತ ರಂಗವನ್ನು ಕಲಾಪದ ಅಗತ್ಯಕ್ಕೆ ಇಳಿಸುವ ಪಕ್ಕದ ಅರೆಗಳಲ್ಲಿ (ಸೈಡ್ ವಿಂಗ್ಸ್) ಎದುರಿನ ಎರಡು, ಸ್ವಾಮಿ ವಿವೇಕಾನಂದರ ಆಳೆತ್ತರದ ಗಂಭೀರ ಚಿತ್ರಗಳನ್ನು ಹೊತ್ತಿದ್ದವು. ಉಳಿದಂತೆ ಎಲ್ಲವೂ ಗಾಢ ಕಂದು ಬಣ್ಣ ಹೊದ್ದು, ಬಿಳಿ ಮತ್ತು ಕೆಂಬಣ್ಣದ ಮಿಶ್ರ ಬೆಳಕಿನಲ್ಲಿ ಶೂನ್ಯಕ್ಕೂ ಒಂದು ಗಾಂಭೀರ್ಯ ಬಂದಿತ್ತು. ವೇದಿಕೆಯ ಹೊರಗಿನ ಎರಡೂ ಪಕ್ಕಗಳಲ್ಲಿ ನೀಳ ಫಲಕವೊಂದರಲ್ಲಿ ಆರ್ಥಿಕ ನೆರವು ನೀಡಿದ ಸಾರ್ವಜನಿಕ ಸಂಸ್ಥೆಗಳ ಸ್ಫುಟ ಸರಳ ಪಟ್ಟಿ.

ಘೋಷಿತ ಸಮಯಕ್ಕೆ ಸರಿಯಾಗಿ, ರಂಗದ ಎಡ ಎದುರು ಮೂಲೆಯಿಂದ ಮೈಕ್ ಸಹಿತ ಪ್ರಕಟವಾಗಿ ಯಾವುದೇ ಅಬ್ಬರವಿಲ್ಲದೆ ಕಲಾಪಗಳನ್ನು ಚಾಲನೆಗಿಟ್ಟವನು ತೇಜಸ್ವಿ (ಜೂನಿಯರ್ ಶಂಕರ್). ರಾಮಕೃಷ್ಣಾಶ್ರಮದ ಅಧ್ಯಕ್ಷರು – ಸ್ವಾಮಿ ಜಿತಕಾಮಾನಂದರು ಮತ್ತು ಆರ್ಥಿಕ ನೆರವು ನೀಡಿದ ಸಂಸ್ಥೆಗಳ ಮೂರು ಪ್ರತಿನಿಧಿಗಳು ಮಾತ್ರ ವೇದಿಕೆಗೆ (ಊರುಗೋಲುಗಳಿಲ್ಲದೇ) ಬಂದು ಸಾಂಕೇತಿಕ ಜ್ಯೋತಿ ಬೆಳಗಿದರು. ಮೌನ ಬಂಗಾರ, ಉದ್ಘಾಟನೆ ಮುಗಿಯಿತು.

ದೀಪದ ಕಂಬವನ್ನು ಎದುರು ಬಲಮೂಲೆಗೆ ಸ್ಥಳಾಂತರಿಸಿ, ಯಕ್ಷ-ಕಲಾಪಗಳ ನಿರೂಪಣೆಗೆ ನಿಂತವರು ಅರವಿಂದ ಕುಡ್ಲ. ವೇದಿಕೆಯಲ್ಲಿ ಎರಡು ಸರಳ ಆಸನದ ಮೇಲೆ ಯಕ್ಷ-ಸಮ್ಮಾನಿತರು – ಬಳ್ಕೂರು ಕೃಷ್ಣ ಯಾಜಿ ಮತ್ತು ಕೊಂಡದಕುಳಿ ರಾಮಚಂದ್ರ ಹೆಗಡೆ. ಸಾಂದರ್ಭಿಕವಾಗಿ ವೇದಿಕೆಯ ಮೇಲೇ ನಿಂತೇ ಇದ್ದ ನಾಲ್ವರು ಗಣ್ಯರು ಶಾಲು, ಹಾರ, ಫಲ, ಸ್ಮರಣಿಕೆಗಳನ್ನು ಸಮ್ಮಾನಿತರಿಗೆ ತೊಡಿಸಿದರು. ಮಾರಣೇ ದಿನ ಅಪರಾಹ್ನದ ಕಛೇರಿಗೂ ಮುನ್ನ ಹೀಗೇ ಸಂಗೀತ ಸಮ್ಮಾನವೂ ನಡೆಯಿತು. ಸಮ್ಮಾನಿತರು: ಉಸ್ತಾದ್ ರಫೀಕ್ ಖಾನ್, ಮಂಗಳೂರು ಮತ್ತು ಪಂಡಿತ್ ರವಿಕಿರಣ್, ಮಣಿಪಾಲ. ಆಗ ಮುಂದಿನ ಸಂಗೀತ ಕಲಾಪ ನಡೆಸಿಕೊಡಲು ವೇದಿಕೆಗೆ ಬಂದಿದ್ದ ಪಂಡಿತ್ ನಾಗರಾಜ ರಾವ್ ಹವಾಲ್ದಾರ್, ಬೆಂಗಳೂರು ಮತ್ತು ಪಂಡಿತ್ ವೆಂಕಟೇಶ್ ಕುಮಾರ್, ಧಾರವಾಡ, ಇವರು ಸ್ವಾಮಿ ಜಿತಕಾಮಾನಂದರೊಡನೆ ಕೈ ಜೋಡಿಸಿದರು. ಸಂಗೀತ ಕಾರ್ಯಕ್ರಮಗಳ ನಿರೂಪಕ ರಾಮಪ್ರಸಾದ್ ಕಾಂಚೋಡು. ಸಮ್ಮಾನದ ಅವಧಿಯೊಳಗೆ ನಿರೂಪಕರು ಕೈದೀವಿಗೆಯಲ್ಲಿ ಪ್ರಚುರಿಸಿದ್ದ ಸಮ್ಮಾನಿತರ ಸಾಧನೆಗಳ ಸಂಗ್ರಹ ರೂಪವನ್ನು ಮಾತ್ರ ಅರ್ಥ ಸ್ಫುಟವಾಗುವಂತೆ ಓದುತ್ತಿದ್ದರು. ಮಾತು ಮಾಣಿಕ್ಯ. ಉಳಿದಂತೆ ಯಾರಿಗೂ ಮಾತಿಲ್ಲ. ನೆನಪಿರಲಿ, ಮೌನ ಬಂಗಾರ! ಕೊಟ್ಟೆವೆಂಬ ಹಮ್ಮಿಗೆ ಅವಕಾಶ ಸಲ್ಲ, ಪಡೆದೆವೆಂಬ ದೈನ್ಯಕ್ಕೆ ಎಡೆಯೇ ಇಲ್ಲ. ಕೊನೆಯಲ್ಲಿ ಕೇವಲ ಸ್ಮರಣಿಕೆಯ ಮಟ್ಟದ ಒಂದೆರಡು ಚಿತ್ರಗ್ರಹಣ ಮಾತ್ರ.

[ಪಂಚಮದಿಂಚರ ದಿನದುದ್ದಕ್ಕೆ ನಡೆದ ಕಾರ್ಯಕ್ರಮ. ಹಾಗಾಗಿ ವಿಶಿಷ್ಟ ಚಿತ್ರದ ಮುಹೂರ್ತಕ್ಕಷ್ಟೇ (ಸಂದರ್ಭಕ್ಕೆ ತಕ್ಕಂತೆ ಸಮ್ಮಾನವೋ ಅನಾವರಣವೋ ಅರ್ಚನೆಯೋ ಇತ್ಯಾದಿ) ಹೊಂಚು ಹಾಕುವ, ಮತ್ತೆ ಸಂದರ್ಭ ಬಂದಾಗ ಪ್ರೇಕ್ಷಕರನ್ನು ಉಪೇಕ್ಷಿಸಿ ‘ಕೊಳ್ಳೆ’ಯನ್ನು ಪೂರ್ಣ ಆವರಿಸಿ ಬಲಿ ಹಾಕುವ, ಮಾಧ್ಯಮಗಳ ಚಿತ್ರಗ್ರಾಹಿಗಳ ಹಿಂಡು ಇಲ್ಲಿರಲಿಲ್ಲ! ಕೆಲವು ಖಾಸಗಿ ಚಿತ್ರಗ್ರಾಹಿಗಳಿದ್ದರೂ ಪರಿಸರ ಅವರನ್ನು ವಿನಯಿಗಳಾಗಿರುವಂತೆ ನೋಡಿಕೊಂಡಿತು. (ಪತ್ರಕರ್ತ ಮಿತ್ರರೊಬ್ಬರು ರಂಗದಂಚಿನಲ್ಲಿ ಒಮ್ಮೆ ನಿರ್ಭಿಡೆಯಿಂದ ನಿಂತು ವಿಡಿಯೋ ಮಾಡುತ್ತಿದ್ದಾಗ, ಯಾರೋ ಸೂಚನೆ ಕೊಟ್ಟು ಅವರನ್ನು ಕಳೆದದ್ದು ಪ್ರೇಕ್ಷಕರಿಗೆ ಸಂದ ಗೌರವ)]

ಪ್ರಾಯೋಜಕ ಪ್ರತಿನಿಧಿಗಳು ರಂಗವಿಳಿದ ಬೆನ್ನಿಗೆ ಸ್ವಾಮಿಗಳಿಂದ ಐದೇ ಮಿನಿಟಿನ ವಿವೇಕಾನಂದ ಸ್ಮೃತಿ. (ಇದು ಮರುದಿನವೂ ಹೊಸತಾಗಿ, ಅಷ್ಟೇ ಚುಟುಕಾಗಿ ಇತ್ತು) ಸ್ವತಃ ಒಳ್ಳೆಯ ಸಂಗೀತಪಟು, ನಟನಾಚತುರ ವಿವೇಕಾನಂದರ ನೆನಪೂ ಹೊಸತಾಯ್ತು, ನಡೆಯುವ ಕಲಾರಾಧನೆಗೆ ಎಲ್ಲರಿಗೆ ಸ್ವಾಗತದ ಉಪಚಾರವೂ ಸ್ವಾಮಿಗಳ ಮಾತಿನಲ್ಲಿ ಸೇರಿ ಬಂತು. ಸ್ವಾಮಿಗಳು ಪ್ರತಿ ಕಲಾಪದ ಕೊನೆಯಲ್ಲಿ ಕಲಾವಿದರಿಗೆ ಸ್ಮರಣಿಕೆ ನೀಡಲು ನಿರೂಪಕ ಕರೆದಾಗ ಒದಗುತ್ತಿದ್ದರು. ಯಾವುದೇ ಕಲಾಪ್ರಸ್ತುತಿಯಲ್ಲೂ ಎಲ್ಲರಂತೆ ಮೌನ ಪ್ರೇಕ್ಷಕರಾಗುತ್ತಿದ್ದರು. ಆಶ್ರಮದ ನೈಮಿತ್ತಿಕ ಜವಾಬ್ದಾರಿಗಳನ್ನು ನಿರ್ವಣೆಗಾಗಿ ಸಹಜವಾಗಿ ಹೋಗಿ ಬಂದು ಮಾಡುತ್ತಿದ್ದರು. ಅಷ್ಟೇ ಸಹಜವಾಗಿ ಅಲ್ಲಿನ ಎಲ್ಲಾ ಸ್ವಾಮಿಗಳು, ಬ್ರಹ್ಮಚಾರಿಗಳು, ಸದಸ್ಯರೂ ನಡೆದುಕೊಳ್ಳುತ್ತಿದ್ದರು. ನಾನು ಕಂಡಂತೆ ರಾಮಕೃಷ್ಣ ಆಶ್ರಮದ ಸ್ವಾಮಿಗಳು ಮಾತ್ರ ಮನುಷ್ಯರು.

ಸತ್ಯ ಹರಿಶ್ಚಂದ್ರ ಮೊದಲ ಪ್ರಸಂಗ, ಮೇಳ ಪೂರ್ಣಚಂದ್ರ ಯಕ್ಷಗಾನ ಕಲಾ ಮಂಡಳಿ, ಕೊಂಡದಕುಳಿ. ರಾಜ ಹರಿಶ್ಚಂದ್ರನ (ಕೊಂಡದಕುಳಿ ರಾಮಚಂದ್ರ ಹೆಗಡೆ) ಸತ್ಯ ಪರೀಕ್ಷೆಯ ಏರು ನಡಿಗೆಯಲ್ಲಿ ಪ್ರೇಕ್ಷಕನ ಕಂಬನಿಯ ಕುಯಿಲೂ ಏರೇರುತ್ತ ಸಮೃದ್ಧವಾಗಬೇಕು. ಕೂಟ ಪ್ರವೀಣರಾದ ಕೆರೆಕೈ ಉಮಾಕಾಂತ ಭಟ್ಟರು, ಇಲ್ಲಿ ಆಟದ ವಿಶ್ವಾಮಿತ್ರನಾಗಿ ಕಾಣಿಸಿದ್ದು ವಿಶೇಷ. ಆದರೆ ಕೂಟದ ಯಶಸ್ಸಿಗೆ ಹೆಚ್ಚು ಕಳೆಗಟ್ಟಬಹುದಾದ ಧರ್ಮ ಜಿಜ್ಞಾಸೆ ಆಟದ ಹೆಚ್ಚಿನ ಆವಶ್ಯಕತೆಯಾದ ನಾಟಕೀಯತೆಗೆ ಸೇತು ಕಲ್ಪಿಸುವಲ್ಲಿ ಈ ಪ್ರಯೋಗ ಸೋತಿತು. ಇಲ್ಲಿ ಕಠಿಣ ಪರೀಕ್ಷಕನ ನೆಲೆ ವಿಶ್ವಾಮಿತ್ರನಿಗೆ ದಕ್ಕಲಿಲ್ಲ, ಸಹಜ ಸತ್ಯವ್ರತನ ಅಂತಸ್ತನ್ನು (ಸನ್ನಿವೇಶವನ್ನು ಪರೀಕ್ಷೆಯೆಂದು ಇವನು ತಿಳಿದಿಲ್ಲ) ಹರಿಶ್ಚಂದ್ರನೂ ಸಾಧಿಸಲಿಲ್ಲ. ಎಲ್ಲೋ ಒಂದು ಹಂತದಲ್ಲಿ ಎರಡೂ ಪಾತ್ರಗಳು ರಾಜೀ ಮಾಡಿಕೊಂಡ ಭಾವ ನನಗೆ ಬಂತು. ಒಮ್ಮೆ ಕಥಾವ್ಯೂಹ ಬಲಿತ ಮೇಲೂ ಅಂದರೆ, ಹರಿಶ್ಚಂದ್ರ ರಾಜ್ಯತ್ಯಾಗ ಮಾಡಿ ನಕ್ಷತ್ರಿಕನ ಜೊತೆಯಲ್ಲಿ ಹೊರಟಾಗ, ವೃತ್ತಿಪರ ಕಲಾವಿದರು ಇದ್ದರೂ ಪ್ರಸಂಗದ ನಾಟಕೀಯತೆ ಚೇತರಿಸಿಕೊಳ್ಳಲಿಲ್ಲ. (ವಿಶೇಷ ಸೂಚನೆ: ಇಲ್ಲಿ ಪ್ರೇಕ್ಷಕರು ಮೂಲ ಕತೆಯ ಅರಿವಿನಲ್ಲಿ ಭಾವುಕರಾಗದ ಎಚ್ಚರವಹಿಸಲೇ ಬೇಕು) ಹರಿಶ್ಚಂದ್ರ ಸ್ವಾರ್ಥ-ಪರೀಕ್ಷಾರ್ಥಿಯಾಗಿ (ಫಲಿತಾಂಶ ಒಳ್ಳೇದಾಗಲೇ ಬೇಕೆಂದು ಇತರರ ಅನಾನುಕೂಲ ಬದಿಗಿಟ್ಟು ಓದುವವನ ಹಾಗೆ) ಕಾಣಿಸುತ್ತಾನೆ ವಿನಾ ಸಹಜ ಸತ್ಯಮೂರ್ತಿಯಾಗಿ ಬೆಳಗುವುದಿಲ್ಲ.

ಹೆಂಡತಿ, ಮಗನ ಕಷ್ಟಕ್ಕೆ ಈತ ಸ್ಪಂದಿಸುತ್ತಾನೆ. ಆದರೆ ತನ್ನಿಂದಾಗಿ ಅವರಿಗೆ ಆ ಸ್ಥಿತಿ ಬಂತೆಂಬ ವಿಷಾದದ ಎಳೆ ತುಂಬ ದುರ್ಬಲವಾಗಿದೆ. (ಇಂಥದ್ದೇ ಸಂದರ್ಭದಲ್ಲಿ ರಾಮ, ನಳ, ಒಂದು ಮಿತಿಯಲ್ಲಿ ಧರ್ಮರಾಯನೂ ಸಂಬಂಧಿಗಳನ್ನು ಅಂತಿಮ ಮತ್ತು ಅನಿವಾರ್ಯ ಆಯ್ಕೆಯಾಗಿ ಒಪ್ಪಿಕೊಂಡದ್ದನ್ನೂ ಸಂಕಟಗಳ ಸರಣಿಯಲ್ಲಿ ನಿಷ್ಪಾಪಿಗಳ ಅಂದರೆ ಸೀತೆ, ದಮಯಂತಿ, ದ್ರೌಪದಿಯರ ಕುರಿತು ವಿಷಾದಿಸುವುದನ್ನೂ ನಾವು ನೆನೆಯಬೇಕು.) ‘ನನ್ನ ಸತ್ಯ ದೊಡ್ಡದು’ ಎಂಬ ನಿರ್ಧಾರಕ್ಕೆ ಆಯ್ಕೆ ಇಲ್ಲದೆ ಒಳಪಟ್ಟ ಚಂದ್ರಮತಿ, ಲೋಹಿತಾಶ್ವರನ್ನು ನಿವಾರಿಸುವ ಯೋಚನೆಯೇ ಈತನಿಗೆ ಬಂದಂತಿಲ್ಲ. ಇವಕ್ಕೆ ಕಳಶವಿಟ್ಟಂತೆ ಪ್ರಸಂಗದ ಅಂತಿಮ ದೃಶ್ಯ ನನಗಂತೂ ತೀರಾ ಅಸಂಗತವಾಗಿ ಕಾಣಿಸಿತು.

ನಲವತ್ತೆಂಟು ದಿನಗಳ ಸಂಕಟದ ಉತ್ತುಂಗಕ್ಕೆ ನಮ್ಮನ್ನು ಚಂದ್ರಮತಿಯ ಕಷ್ಟ ಪರಂಪರೆಯ ಅನುಭವಗಳು ಏರಿಸುತ್ತವೆ. ಲೋಹಿತಾಶ್ವನ ಮರಣವಾರ್ತೆ, ಹೆಣದ ಹುಡುಕಾಟ, ಶವಸಂಸ್ಕಾರದ ಇಬ್ಬಂದಿ, ರಾಜಕುಮಾರನ ಕೊಲೆಯ ಮಿಥ್ಯಾರೋಪ, ಪತಿಯ ಸತ್ಯಕ್ಕೇ ತಲೆಯೊಡ್ಡುವ ‘ಸೌಭಾಗ್ಯ’ದವರೆಗೂ ಮತ್ತೆ ಮತ್ತೆ ಕಟ್ಟೊಡೆಯಲೆಳೆಸುವ ಭಾವನೆಗಳಿಗೆ ತಡೆಯನ್ನೂ ಉನ್ನತಿಕೆಯನ್ನೂ ಚಂದ್ರಮತಿ (ಶಶಿಕಾಂತ ಶೆಟ್ಟಿ) ಅದ್ಭುತವಾಗಿ ಕಟ್ಟಿಕೊಡುತ್ತಾಳೆ. ಕೊನೆಯ ಹಂತದಲ್ಲಿ ಕೈ ತಡೆಯುವ ಶಿವ ಬಂದಾಗ ಒಮ್ಮೆಲೆ ಹರಿಶ್ಚಂದ್ರ – ಉದ್ದಕ್ಕೂ ಅಲ್ಪ ನುಡಿಸೇವೆ ಮಾತ್ರ ಕೊಟ್ಟವ, ಸನ್ನಿವೇಶದ ಗಾಂಭೀರ್ಯಕ್ಕೆ ಚ್ಯುತಿಯುಂಟು ಮಾಡಿ, ಸಾಮಾನ್ಯರಿಂದ ಚಪ್ಪಾಳೆ ಗಿಟ್ಟಿಸುವ ಚೇಳು ಬಗ್ಗುವುದು, ಡೊಂಕು ಕುಣಿಯುವುದು ಆಭಾಸಕರ. (ನಿರೀಕ್ಷೆಯಂತೆ ಸಭಾಭವನದಲ್ಲಿ ಚಪ್ಪಾಳೆಯೂ ಬಿದ್ದಿದೆ) ದೇವ ಸಾಕ್ಷಾತ್ಕಾರದ ಸಂಭ್ರಮಕ್ಕಿಂತ ಹೆಂಡತಿ, ಮಗನ ಸಂಕಟ ವಿಮೋಚನೆಯ ಭಾರ ಹರಿಶ್ಚಂದ್ರನನ್ನು ಹೆಚ್ಚು ಕಾಡಬೇಕಿತ್ತು. ಇನ್ನೂ ತಮಾಷೆ ಎಂದರೆ ಸರ್ವಶಕ್ತನಾದ ಶಿವ ತಡೆಯಾಜ್ಞೆ ಮಾತ್ರ ಕೊಡುತ್ತಾನೆ, ಲೋಹಿತಾಶ್ವನಿಗೆ ಜೀವ ಮರಳಿಸಿದ್ದು ವಿಶ್ವಾಮಿತ್ರ!

ಸಮಯದ ಶಿಸ್ತಿಗೊಳಪಡುವಲ್ಲಿ ಮೊದಲ ಪ್ರದರ್ಶನ ಒಂದು ಗಂಟೆಯಷ್ಟು ಸೋತದ್ದು ಪರೋಕ್ಷವಾಗಿ ಎರಡನೇ ಯಕ್ಷಪ್ರಸ್ತುತಿಯನ್ನು ಸಂಕೋಚಗೊಳಿಸಿತ್ತು. ಸಂಯೋಜನೆಯ ದೃಷ್ಟಿಯಲ್ಲೂ ಐದೂವರೆ ಗಂಟೆಯುದ್ದಕ್ಕೆ ರಸವೈವಿಧ್ಯ ಹೆಚ್ಚಿಲ್ಲದ (ಇದು ಪ್ರಸಂಗದ ಮಿತಿ) ವೀಕ್ಷಣೆಯಿಂದ ಬಳಲಿದ್ದ ಪ್ರೇಕ್ಷಕರಿಗೆ ಎರಡನೇ ಪ್ರಸಂಗ ತುಸು ಭಾರವೇ ಆಯ್ತು. (ಬಹುತೇಕ ಆಸನಗಳು ಖಾಲಿಯಾದವು) ಸುಧನ್ವಾರ್ಜುನ, ಮೇಳ ಯಾಜೀ ಯಕ್ಷ ಮಿತ್ರ ಮಂಡಳಿ, ವಾಲ್ಗಳ್ಳಿ. ಇವರದೇ ಇನ್ನೊಂದು ಪ್ರದರ್ಶನ ಮಾರಣೇ ದಿನ ಸಂಜೆಯೂ ಬಂತು – ಪ್ರಸಂಗ ಸುದರ್ಶನ ವಿಜಯ.

ಬಳ್ಕೂರು ಕೃಷ್ಣ ಯಾಜಿ ಅಂದರೆ ನಮ್ಮ ಲೆಕ್ಕಕ್ಕೆ ‘ಶಿಥಿಲ’ (ನಾಗಶ್ರೀ ಪ್ರಸಂಗದ ಒಂದು ಪಾತ್ರ). ಆ ಕರಾರುವಾಕ್ಕು ಕುಣಿತ, ಸ್ಪಷ್ಟ ಸುಂದರ ಔಚಿತ್ಯಪೂರ್ಣ ಮಾತುಗಳು, ರಂಗವನ್ನೂ ಕಥಾನಕವನ್ನೂ ತುಂಬಿಕೊಡುವ ಸಾಭಿನಯ ನಿರ್ವಹಣೆ ಎಂದಿತ್ಯಾದಿ ಪಟ್ಟಿ ಮಾಡ ಹೊರಟರೆ ಎಲ್ಲಕ್ಕೂ ‘ಗ್ಯಾರಂಟೀ ಮಾಲು – ಬಳ್ಕೂರ ಯಾಜಿ.’ ಅಂದು ಅವರು ಸಾಲಿಗ್ರಾಮ ಮೇಳದ ಯುವ ಶಕ್ತಿಯ ಚೆಂಡು. ಈಚೆಗೆ (ಸುಮಾರು ಆರು ವರ್ಷಗಳಿಂದ) ಅವರು ಸ್ವಂತ ಮೇಳ ಕಟ್ಟಿ ಸೀಮಿತಾವಧಿಯ ಪ್ರದರ್ಶನಗಳನ್ನು ಕೊಡುತ್ತಿದ್ದಾರೆ. ಇಂದೂ ‘ಬಳ್ಕೂರು ಯಾಜೀ’ ಮುದ್ರೆಯ ಎಲ್ಲಾ ಸಲ್ಲಕ್ಷಣಗಳ ಸ್ಪಷ್ಟ ಛಾಯೆಗಳು ಅವರ ಪಾತ್ರ ನಿರ್ವಹಣೆಯಲ್ಲಿ ಇವೆ. ಹಾಗೇ ಅನಿವಾರ್ಯ ಪ್ರಾಯದ ಹೊರೆಯೂ ಇದೆ ಎಂದು ಕಾಣುತ್ತದೆ. ಆದರೆ ಅವರು ಔಚಿತ್ಯ ಜ್ಞಾನವನ್ನು ಹರಿತಗೊಳಿಸಿಕೊಂಡು, ಪಾತ್ರಗಳ ಆಯ್ಕೆಯಲ್ಲಿ ಜಾಣ್ಮೆ ಮೆರೆಯುತ್ತಿರುವುದು ಮೆಚ್ಚಲೇ ಬೇಕು. ಮೇಳದ ಯಜಮಾನಿಕೆಯ ಬಲದಲ್ಲಿ, ಪ್ರಮುಖ ಪಾತ್ರಗಳನ್ನು ತಮಗೇ ಮೀಸಲಾಗಿರಿಸಿಕೊಂಡು ತಮ್ಮದೇ ಖ್ಯಾತಿಯ ಮೇಲೆ ಗೋರಿ ಕಟ್ಟುವ ಎಷ್ಟೂ ಮಂದಿಯನ್ನು ನಾವು ಕಂಡಿದ್ದೇವೆ, ಕಾಣುತ್ತಲೂ ಇದ್ದೇವೆ. ಹಾಗಾಗದೇ ಪಂಚಮದಿಂಚರದ ಸುಧನ್ವಾರ್ಜುನದಲ್ಲಿ ಪ್ರಾಯ ಸಂದ ಅರ್ಜುನನಾಗಿಯೂ ಸುದರ್ಶನ ವಿಜಯದಲ್ಲಿ ಶತ್ರುಪ್ರಸೂಧನನಾಗಿಯೂ ಕಾಣಿಸಿಕೊಂಡರು. ಎರಡೂ ಪ್ರದರ್ಶನಗಳಿಗೆ ಉಂಟಾದ ಸಮಯದ ಕೊರತೆಯನ್ನು ತುಂಬಿಕೊಡುವಲ್ಲೂ ಇವರ ತಂಡ ಜಾಣ್ಮೆ ಮೆರೆಯಿತು.

ಸುಧನ್ವನಾಗಿ ಮೆರೆದ ತೋಟಿಮನೆ ಗಣಪತಿ ಹೆಗಡೆ, ಎರಡೂ ದಿನ ಹರಿ ಪಾತ್ರಿಯಾದ ಪ್ರಸನ್ನ ಶೆಟ್ಟಿಗಾರ್, ಲಕ್ಷ್ಮಿಯಾದ ಶಶಿಕಾಂತ ಶೆಟ್ಟಿ ಪಾತ್ರೌಚಿತ್ಯಕ್ಕೆ ಕುಂದುಂಟುಮಾಡದೆ ಚಂದಗಾಣಿಸಿದ್ದು ಸಣ್ಣ ವಿಷಯವಲ್ಲ.ಪ್ರಭಾವತಿಯಾದ ದೀಪಕ್ ರಾವ್ ಪೇಜಾವರ ನಾವು ಬಡಗುತಿಟ್ಟಿನಲ್ಲಿ ಸಾಂಪ್ರದಾಯಿಕವಾಗಿ ಎನ್ನುವಂತೇ ಇಂದು ರೂಢಿಯಲ್ಲಿರುವ ಅತಿ ಕುಣಿತವನ್ನು (ಚಾಲು ಕುಣಿತ?) ಇಲ್ಲೂ ಅಂದರೆ ಸಮಯಮಿತಿ ಪ್ರದರ್ಶನದಲ್ಲೂ ಮುಂದುವರಿಸಿದ್ದು ನನಗಂತೂ ಅಪೇಕ್ಷಣೀಯವಾಗಿ ಕಾಣಿಸಲಿಲ್ಲ. ತೋರಿಕೆಯಲ್ಲಿ ಪ್ರಭಾವತಿ ಪಾತ್ರಕ್ಕಿರುವ ರೂಢಿಗತ ನಿರ್ಬಂಧ ಇಲ್ಲದ ಸುದರ್ಶನ ಅರ್ಥಾತ್ ಪಾತ್ರಧಾರಿಯ (ಕಣ್ಣಿಮನೆ ಗಣಪತಿ ಭಟ್) ಕುಣಿತ ಮಣಿತಗಳು ನನಗಂತೂ ಅರ್ಥಹೀನ ಸರ್ಕಸ್ ಎಂದೇ ಕಾಣುತ್ತವೆ. ಪಾತ್ರಧಾರಿ ರಂಗದಲ್ಲಿ ಹರಿಸಿದ ಬೆವರು, ಸಭೆಯಿಂದ ಬುರುಗಿನಂತೇಳುವ ಚಪ್ಪಾಳೆ, ಶಿಳ್ಳೆಗಳ ಗದ್ದಲ ಕಲಾಮೌಲ್ಯ ನಿರ್ಣೈಸುವಲ್ಲಿ ಲೆಕ್ಕಕ್ಕೆ ಸಿಗುವುದಿಲ್ಲ ಎಂದು ಕಲಾವಿದರು ತಿಳಿದಿರಬೇಕು. ಪಾತ್ರಧಾರಿ ನೆಲಕ್ಕೆ ಮೊಣಕಾಲು ಮುಟ್ಟಿಸಿದರೆ ಸಾಕು (ತೆಂಕಿನಲ್ಲಿ ಧಿಂಗಣ ಸಂಖ್ಯೆ ಹತ್ತರ ಮೇಲೆ ಹೋದರಾಯ್ತು), ಸಾಂಪ್ರದಾಯಿಕ ನಡೆಗಳ ಚೌಕಟ್ಟು ಮೀರಿ ಒಂದು ಭಂಗಿ, ಒಂದು ಕಸರತ್ತು ತೋರಿದರೆ ಸಾಕು, ಭಾಗವತ ತಾಳರಹಿತ ಸೊಲ್ಲಿನಲ್ಲಿ ಸುದೀರ್ಘ ನರಳಿದರೆ ಸಾಕು ಎನ್ನುವಂತೆ ಚಪ್ಪಾಳೆ ತಟ್ಟುವ (ಆಶ್ರಮದ ಪರಿಸರವಲ್ಲದಿದ್ದರೆ ಶಿಳ್ಳೆಯೂ ಹಾಕುವ) ಒಂದು ಜನ ವರ್ಗವೇ ಇಂದು ಬೆಳೆದಂತಿದೆ. ಕಲಾವಿದರು ಅವನ್ನು ಮೀರುವ ಛಾತಿ, ಹೆಚ್ಚಿನ ಗುಣವನ್ನು ಪೋಷಿಸುವ ದೃಢತೆ ಬೆಳೆಸಿಕೊಳ್ಳಬೇಕು. ಇನ್ನೆಲ್ಲೋ ಒಂದು ಉತ್ತರಾದಿ ಕಛೇರಿಯ ಓಘದಲ್ಲಿ ಹಿರಿಯ ಕಲಾವಿದರೋರ್ವರು (ಕ್ಷಮಿಸಿ, ವ್ಯಕ್ತಿ ಮರೆತಿದ್ದೇನೆ) ಒಂದು ಅದ್ಭುತ ಸೊಲ್ಲು ಕೊಟ್ಟರು. ಜನ ಕೂಡಲೇ ಚಪ್ಪಾಳೆಯ ಮಳೆಗರೆದರು. ಆದರೆ ಅನಿರೀಕ್ಷಿತವಾಗಿ ಆ ಕಲಾವಿದ ಒಮ್ಮೆಲೆ ಗಾಯನ ನಿಲ್ಲಿಸಿದರು. ಮತ್ತೆ ಗಂಭೀರ ಧ್ವನಿಯಲ್ಲಿ ‘ಕ್ಷಣಿಕ ಸಂತೋಷಗಳಲ್ಲಿ ಮೈಮರೆಯಬೇಡಿ. ಇನ್ನೊಬ್ಬರಿಗೆ, ನನಗೂ ರಸಭಂಗವಾಗುತ್ತದೆ. ಮತ್ತೆ ಈ ಸೊಲ್ಲನ್ನು ಹಿಂಬಾಲಿಸುವ ಇನ್ನಷ್ಟು ಉತ್ತಮಿಕೆಯನ್ನು ನಿಮ್ಮ ಗದ್ದಲ ಹುಗಿದು ಬಿಡುತ್ತದೆ. ಕೃತಿ ಮುಗಿಯುವವರೆಗೆ ತಾಳ್ಮೆ ಇರಲಿ.’

ಸಾಂಪ್ರದಾಯಿಕವಾಗಿ ಉತ್ತರಾದಿ ರಾಗ ಪ್ರಸ್ತುತಿಗೆ ಕಾಲದ ನಿರ್ಬಂಧವಿದೆ. ಸೂರ್ಯೋದಯ, ಗೋಧೂಳೀ, ಏರು ಹಗಲು ಇಳಿಹಗಲು ಎಂದಿತ್ಯಾದಿ ಒಂದು ವರಸೆಯಾದರೆ, ಋತುಮಾನಗಳದ್ದು ಇನ್ನೊಂದೇ ವರಸೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡೇ ಪಂಚಮದಿಂಚರದ ಎರಡನೇ ದಿನದ ಕಲಾಪಗಳು ರೂಪಿತವಾಗಿದ್ದವು. ಬೆಳಿಗ್ಗೆ ಆರೂವರೆಯಿಂದ ಸಂಜೆ ಆರರವರೆಗೆ ಹಗಲಿನ ವಿವಿಧ ಹೊತ್ತುಗಳ ರಾಗಪ್ರಸ್ತುತಿ ವಿವಿಧ ಬಗೆಯಲ್ಲಿ ರಸಿಕರನ್ನು ನಿರ್ವಿವಾದವಾಗಿ ತಣಿಸಿದವು. ಆಮಂತ್ರಣ, ಕೈದೀವಿಗೆಗಳಲ್ಲಿ ಕಂಡ ಶ್ರದ್ಧೆ ಕಲಾವಿದರಲ್ಲಿ ಮನವಿಯಿಟ್ಟು ಪ್ರತಿ ಕೃತಿಯ ಮೊದಲು ಅದರ ರಾಗ, ಭಾವ, ಸಾಹಿತ್ಯಗಳ ಪರಿಚಯವನ್ನೂ ಕೊಡಿಸಿತ್ತು. ನನ್ನ ಸಂಗೀತ ಕಲಾಪಗಳ ವಿಶ್ಲೇಷಣಾ ಸಾಮರ್ಥ್ಯ ತುಂಬ ಸೀಮಿತವಾದ್ದರಿಂದ ಇಲ್ಲಿ ನಿಮ್ಮ ತಿಳುವಳಿಕೆಯ ಸೌಲಭ್ಯಕ್ಕಾಗಿ ಕೈದೀವಿಗೆಯನ್ನೇ ನೋಡಿಕೊಳ್ಳಿ. ಪಂಚಮದಿಂಚರದ ಒಟ್ಟು ಆಶಯ, ಕಲಾ ಪ್ರಸ್ತುತಿಯ ವಿವರಗಳೊಡನೆ ಕಲಾವಿದರ ಸಮರ್ಥ ಪರಿಚಯವೂ ಕೈದೀವಿಗೆಯಲ್ಲಿರುವುದರಿಂದ ಸಂಗೀತ ಸುವರ್ಣ ವೃಷ್ಟಿಯಲ್ಲಿ ನನಗೆ ದಕ್ಕಿದ ಚಿಲ್ಲರೆ ಕಾಸನ್ನಷ್ಟು ಕ್ರಮವಾಗಿ ದಾಖಲಿಸುತ್ತೇನೆ.

ಸುಮಾರು ಆರೂವರೆಯಿಂದ ಎಂಟೂವರೆಯವರೆಗಿನ ಮೊದಲ ಅವಧಿಯಲ್ಲಿ ಶ್ರೀ ಧನಂಜಯ ಹೆಗಡೆಯವರು ನಿರ್ವಹಿಸಿದ ಮುಖ್ಯ ರಾಗಗಳು ಲಲಿತ್ ಮತ್ತು ಭಟಿಯಾ. ಕಲಾವಿದರ ಪರಿಶ್ರಮದ ಬಗ್ಗೆ ಎರಡು ಮಾತಿಲ್ಲವಾದರೂ ಸಹಜವಾಗಿ ಇವರ ಶಾರೀರಕ್ಕೆ ಸುಖದ ಸ್ಪರ್ಷ ಕಡಿಮೆ (ಅಂದು ಅವರ ಆರೋಗ್ಯ ಕೆಟ್ಟಿರಲೂಬಹುದು) ಎಂದೇ ನನಗನ್ನಿಸಿತು. ಒಟ್ಟು ಕಲಾಪಗಳ ಪ್ರಾಯೋಜಕತೆಯಲ್ಲಿ ತಮ್ಮದೂ ಕಿಂಚಿತ್ ಪಾಲು ಕೊಟ್ಟ ಕರ್ನಾಟಕ ಬ್ಯಾಂಕಿನ ವರಿಷ್ಠ ಶ್ರೀ ಅನಂತಕೃಷ್ಣ ಕಛೇರಿಗೆ ಹಾಜರಿದ್ದದ್ದು, ತಮ್ಮದೇ ಸಂಸ್ಥೆಯ ಉದ್ಯೋಗಿಯೂ ಆದ ಕಲಾವಿದನನ್ನು ಕೊನೆಯಲ್ಲಿ ಸ್ಮರಣಿಕೆ ಕೊಟ್ಟು ಗೌರವಿಸಿದ್ದು, ಕಾಕತಾಳೀಯವೇ ಆದರೂ ಹೃದ್ಯವಾಯ್ತು.

ಒಂಬತ್ತೂಕಾಲರಿಂದ ಸುಮಾರು ಹನ್ನೊಂದೂವರೆಯವರೆಗಿನ ಎರಡನೇ ಅವಧಿಯ ಪಂಡಿತ್ ಡಾ. ನಾಗರಾಜ್‌ರಾವ್ ಹವಾಲ್ದಾರ್, ಇಡೀ ದಿನವನ್ನೇ ಆಳಿದರು ಎಂದರೆ ತಪ್ಪಾಗದು. ಡಾ| ಹವಾಲ್ದಾರರಿಗೆ ಸಹ ಗಾಯನದಲ್ಲಿ ಅವರದೇ ಮಗ/ ಶಿಷ್ಯ ಓಂಕಾರನಾಥ್ ಸಹಕರಿಸಿದ್ದೂ ಸ್ಮರಣೀಯವಾಗಿಯೇ ಇತ್ತು. ಅವರು ಭೈರವ್ ರಾಗದ ಪ್ರಬೇಧಗಳಲ್ಲಿ (ಥಾಟ್?) ಮೂರಕ್ಕೂ ಮಿಕ್ಕು ಕೃತಿಗಳನ್ನು ಕೊಟ್ಟರು. ಅವರ ಗಾಯನದಲ್ಲಿನ ಸುಖ, ಕಂಠದಲ್ಲಿನ ಮಾಧುರ್ಯದೊಡಗೂಡಿದ ಸಾಧನೆಯನ್ನು ನಾನು ಶಬ್ದಾಡಂಬರದಲ್ಲಿ ದುರ್ಬಲಗೊಳಿಸುವುದಿಲ್ಲ; ತುಂಬಾ ಚೆನ್ನಾಗಿತ್ತು. ಆದರೆ ಈ ಸಂಗೀತದ ಹವಾಲ್ದಾರ್ (ಸೈನ್ಯದಲ್ಲಿ ಒಂದು ಹುದ್ದೆ) ಎರಡು ಅವಧಿಗಳಲ್ಲಿ ಗದ್ಯದೊಡನೆ ಮಾಡಿದ ಅದ್ಭುತ ಕವಾಯತಿಗೆ ಅಲ್ಲಿ ಮಣಿಯದವರಿಲ್ಲ. (ದಿನದ ಕೊನೆಯ ಅವಧಿಯಲ್ಲಿ ಪಂ| ವೆಂಕಟೇಶ ಕುಮಾರ್ ಅವರ ಕೃತಿಗಳಿಗೆ ಪೀಠಿಕೆ ಮತ್ತು ಪ್ರತಿ ಪ್ರಸ್ತುತಿಯ ಕೊನೆಯಲ್ಲಿ ಮೌಲ್ಯವರ್ಧನೆಯ ವ್ಯಾಖ್ಯಾನವನ್ನು ಇವರೇ ಕೊಟ್ಟರು ಎನ್ನುವುದನ್ನು ಸೇರಿಸಿ ಹೇಳುತ್ತಿದ್ದೇನೆ) ನಾಗರಾಜರಾಯರು ಸಂಗೀತದ ಅಧ್ಯಯನಾತ್ಮಕ ಮುಖದಲ್ಲೂ ಅಪಾರ ಶ್ರಮಿಸಿದ್ದಕ್ಕೆ ಸಾಕ್ಷಿ ಅವರ ಸಾಧನೆಗಳ ಪಟ್ಟಿಯಲ್ಲಿನ ದೇಶೀ, ವಿದೇಶೀ ವಿವಿನಿಲಯಗಳ ಪಟ್ಟಿ. ಈ ಚಿನ್ನಕ್ಕೆ ಪುಟ ಕೊಟ್ಟಂತೆ ಅವರ ಕನ್ನಡದ ಅಭಿವ್ಯಕ್ತಿ ಪ್ರತ್ಯೇಕ ಎತ್ತಿ ಆಡುವಂತದ್ದು. ಅವರ ಬಳ್ಳಾರಿಗನ್ನಡದ ಕಂಪಿನೊಡನೆ ಬರುವ ಔಚಿತ್ಯಪೂರ್ಣ ವಿವರಣೆ, ವಿಶ್ಲೇಷಣೆ, ಆಖ್ಯಾಯಿಕೆಗಳಂತೂ ಮನಮೋಹಕ.

ಹನ್ನೊಂದೂವರೆಯಿಂದ ಒಂದು ಗಂಟೆಯವರೆಗಿನ ಮೂರನೇ ಅವಧಿ ಕೊರಳು ಕೊಳಲುಗಳ ಜುಗಲ್ಬಂಧಿ. ಕೊಳಲಿನಲ್ಲಿ ನಾಗರಾಜ ಹೆಗಡೆ ಶಿರನಾಲ, ಕೊರಳಿನಲ್ಲಿ ಸತೀಶ್ ಭಟ್ ಜಂಟಿ ಕಲಾ ಕಲಾಪಗಳಿಗೆ ಜಗಳಬಂಧಿ ಎಂದೇ ಮೆತ್ತಿಕೊಂಡ ಅಪಖ್ಯಾತಿಯನ್ನು ನಿವಾರಿಸಿದರು. ಸಂಗೀತ ಯುದ್ಧವಲ್ಲ, ಇದು ಮನಃ ಕಷಾಯಕ್ಕೆ ಮದ್ದು ಎನ್ನುವುದನ್ನು ಸಾರಿದರು. ರಸಪೋಷಣೆಯಲ್ಲಿ ಒಬ್ಬರಿಗೊಬ್ಬರು ಒತ್ತುಕೊಡುತ್ತಾ ಸಾರಂಗ್ ಮತ್ತು ಪಟದೀಪ್ ರಾಗಗಳನ್ನು ಪ್ರಸ್ತುತಪಡಿಸಿದರು; ಉದ್ದೇಶಿತ ಇಂಚರ ಕರ್ಕಶವಾಗದ ಎಚ್ಚರವಹಿಸಿದರು. ಗಾನರಸ, ಹಿಂಬಾಲಿಸಿದ ರಸಭೋಜನಕ್ಕೆ ಒಳ್ಳೆಯ ಪೀಠಿಕೆಯೇ ಆಯ್ತು.

ಊಟದ ಬೆನ್ನಿಗೇ ಒಂದೂ ಮುಕ್ಕಾಲರಿಂದ ಮೂರರವರೆಗಿನ ನಾಲ್ಕನೇ ಅವಧಿಯಲ್ಲಿ ಸುಮಾ ಜಿ.ಹೆಗಡೆ ಎಂಬ ಎಳೆಯ ಕಲಾವಿದೆ ತನ್ನ ಶತತಂತ್ರೀ ವಾದನದ ಪ್ರಾವೀಣ್ಯವನ್ನು ಕಲಾರಸಿಕರ ಮಡಿಲಿಗೊಪ್ಪಿಸಿದಳು. (ಅನಿವಾರ್ಯ ಕಾರಣಗಳಿಂದ ನಾನು ಇದಕ್ಕೆ ಗೈರುಹಾಜರಾಗಿದ್ದೆ)

ಮೂರರಿಂದ ಆರರವರೆಗಿನ ಸಂಗೀತಯಾತ್ರೆಯ ಅಂತಿಮ ಅವಧಿ ದಿನದ ಶಿಖರ ಪ್ರಸಂಗ ಎಂದರೂ ತಪ್ಪಿಲ್ಲ. ಇದು ಸಂಯೋಜಕರ ಆಶಯವನ್ನು ಬಲು ದೊಡ್ಡ ಅಂತರದಲ್ಲಿ ಮೀರಿ ಯಶಸ್ಸು ಕಂಡದ್ದಕ್ಕೆ ಗಾಯನದಲ್ಲಿ ಸಂಗೀತರತ್ನ ಪಂಡಿತ್ ವೆಂಕಟೇಶ್‌ಕುಮಾರ್, ಧಾರವಾಡ ಮತ್ತು ಗದ್ಯದಲ್ಲಿ ಪಂಡಿತ್ ನಾಗರಾಜ ರಾವ್ ಹವಾಲ್ದಾರ್ ಸಮಪಾಲಿಗರು ಎಂದರೆ ಯಾರೂ ತಪ್ಪು ತಿಳಿಯರು. ವೆಂಕಟೇಶ ಕುಮಾರರ ಗಾಯನ ದೊಡ್ಡದು, ಹವಾಲ್ದಾರರ ಸಹೃದಯೀ ವಿವರಣೆ ಸಣ್ಣದಲ್ಲ. ಇದನ್ನು ಇನ್ನೊಂದೇ ಆರೋಗ್ಯಪೂರ್ಣ ಜುಗಲ್ಬಂಧಿ ಎನ್ನುವುದೇ ಸರಿ. ಆಯೋಜಕರು ಎಲ್ಲ ಕಲಾವಿದರಿಗು ಕಳಿಸಿದಂತೆ ‘ಮಾತಿನ ವಿವರಣೆ’ಯ ಮನವಿ ವೆಂಕಟೇಶ ಕುಮಾರ್ ಅವರಿಗೂ ಕಳಿಸಿದ್ದರಂತೆ. ಆಗ ಸಹಜವಾಗಿ ವೆಂಕಟೇಶ್ ಕುಮಾರ್ “ನನಗ ಮಾತು ಬರಂಗಿಲ್ರೀ” ಎಂದರಂತೆ. ಆದರೆ ಸಮಾನಸ್ಕಂಧ ಕಲಾವಿದರೇ ಆದ ಹವಾಲ್ದಾರರ ಒಳ್ಳೆಯತನವನ್ನು ಸ್ಮರಿಸಿಕೊಂಡು ‘ಅವರನ್ನು ವಿಶ್ಲೇಷಣೆಗೆ ಹಚ್ಚಲು’ ಸೂಚಿಸಿದ್ದಲ್ಲದೆ, ಖುದ್ದು ಕೇಳಿಕೊಂಡರಂತೆ. ಹವಾಲ್ದಾರರಾದರೋ ಅದನ್ನು ಗೌರವವೆಂದೇ ಸ್ವೀಕರಿಸಿ, ನಿರ್ವಹಿಸಿದ ಚಂದಕ್ಕೆ ಅದು ಬತ್ತದ ತೊರೆಯಾಗಬಾರದೇ ಎಂದು ಎಲ್ಲರ ಮನ ಹಾರೈಸಿತ್ತು. ವೆಂಕಟೇಶ್ ಕುಮಾರ್ ಗೌಡ್ ಸಾರಂಗ್, ಮುಲ್ತಾನೀ ಮತ್ತು ಭೀಮ್ ಪಲಾಸ್ ರಾಗಗಳ ಮುಖ್ಯ ಪ್ರಸ್ತುತಿಯನ್ನು ಕೊಟ್ಟದ್ದಲ್ಲದೆ ಕೆಲವು ಜನಪ್ರಿಯ ಕನ್ನಡ ಕೃತಿಗಳನ್ನೂ ಹಾಡಿ ತಣಿಸಿದರು. ಹವಾಲ್ದಾರರ ‘ಸಹವಾಸ ದೋಷ’ದಲ್ಲಿ ನಿರೀಕ್ಷಿಸದ ನುಡಿಮುತ್ತುಗಳನ್ನೂ ಸಹಜವಾಗಿ ಉದುರಿಸಿ ರಂಜಿಸಿದರು.

ಒಂದೂವರೆ ದಿನದ ಈ ಸುಂದರ ಅನುಭವ ರಸಿಕರಿಗೆ ಅಂತಸ್ತುಗಳ ಬೇಧವಿಲ್ಲದೆ ಪೂರ್ಣ ಉಚಿತ. ಆಶ್ರಮದ ವತಿಯಿಂದ ಎರಡೂ ದಿನ ಪ್ರೇಕ್ಷಕರೆಲ್ಲರಿಗೂ ಸ್ವಾಮಿ ವಿವೇಕಾನಂದರ ಸ್ಮರಣೀಯ ಆಣಿಮುತ್ತುಗಳ ಪುಟ್ಟ ಪುಸ್ತಿಕೆಗಳ ಸ್ಮರಣಿಕೆಯೂ ಸಂದಿತು. ಎಲ್ಲಕ್ಕೂ ಮಿಗಿಲಾಗಿ ಕಾಲಕಾಲಕ್ಕೆ ಕಾಫಿ, ತಿಂಡಿ, ಊಟಗಳನ್ನು ಶುಚಿ ರುಚಿಯಾಗಿ, ಧಾರಾಳವಾಗಿ, ಪ್ರೀತಿಪುರಸ್ಸರವಾಗಿ ಮತ್ತು ಉಚಿತವಾಗಿ ಒದಗಿಸಿದ್ದು ಇನ್ನೊಂದೇ ಅದ್ಭುತ. ಇಷ್ಟಾಗಿಯೂ ಮೊದಲೇ ಹೇಳಿದಂತೆ, ಹಳೆಯ ಸಾಧನೆಗಳ ಲೆಕ್ಕ ಹಿಡಿಯದೆ, ಸ್ವಪ್ರಚಾರದ ಸೋಂಕಿಲ್ಲದೆ, ಧನ್ಯತೆಯೊಂದನ್ನೇ ಲಕ್ಷ್ಯವಾಗಿಟ್ಟುಕೊಂಡು ಮುಂದೆ ಇನ್ನಷ್ಟು ಯೋಜಿಸುವ ಉತ್ಸಾಹ ಉಳಿಸಿಕೊಂಡ ‘ವಿಭಿನ್ನ’ ನಿಜಕ್ಕೂ ಅನ್ವರ್ಥಕ!

ನಾನು ಮಂಗಳೂರಿಗೆ ಬಂದ ಹೊಸತರಲ್ಲೇ ನನಗೊಬ್ಬ ಅಸಾಧ್ಯ ಸಾಹಿತ್ಯ ಪ್ರೇಮೀ ಪತ್ರಕರ್ತ – ಮಂಜುನಾಥ ಭಟ್ಟರ ಗೆಳೆತನವಾಯ್ತು. ಪ್ರಾಮಾಣಿಕತೆ, ವೃತ್ತಿಯಲ್ಲಿನ ಅಪಾರ ಶ್ರದ್ಧೆ, ಕೊನೆಯದಾಗಿ ಹಿಡಿದ ಕೆಲಸಕ್ಕೆ ತಕ್ಕ ವಿದ್ವತ್‌ಗಳು ಮುಪ್ಪುರಿಗೊಂಡ ಭಟ್ಟರು ಭ್ರಷ್ಟ ಅಥವಾ ಅಕಶೇರುಕಗಳ ಸಾಗರದಲ್ಲೂ ಅಚಲ ದೀಪಸ್ತಂಭದಂತೆ ನಿವೃತ್ತಿಯವರೆಗೂ ನಿಂತೇ ಇದ್ದದ್ದು ಮರೆಯಲಾಗದ ಸಂಗತಿ. ನವಭಾರತ ಪತ್ರಿಕೆಯಿಂದ ತೊಡಗಿದ ಅವರ ವೃತ್ತಿ ಜೀವನ ಉದಯವಾಣಿಯಲ್ಲಿ ಕೊನೆಗಂಡು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಯಾವುದೇ ಗುಣಾತ್ಮಕ ಕಾರ್ಯಕ್ರಮಕ್ಕೆ (ಸಾಹಿತ್ಯ ಗೋಷ್ಠಿ, ಕಲಾಕಲಾಪ ಇತ್ಯಾದಿ) ವರದಿಗಾರನಾಗಿ ಮಂಜುನಾಥ ಭಟ್ಟರ ಹಾಜರಿಯಾಯ್ತೆಂದರೆ ಸಂಘಟಕರ ಪ್ರಾಮಾಣಿಕತೆಗೆ ಬೇರೆ ಸಮ್ಮಾನ ಬೇಡ. ಮಂಜುನಾಥ ಭಟ್ಟರು ಸಂಬಳಕ್ಕೆ ವರದಿಗಾರನಿದ್ದಿರಬಹುದು, ಕಲಾಪಕ್ಕೆ ಮಾತ್ರ ಅಪ್ಪಟ ರಸಿಕ, ಬರವಣಿಗೆಯಲ್ಲಿ ಮರುಸೃಷ್ಟಿಕರ್ತ. ವಿಭಿನ್ನದ ಈ ಪಂಚಮದ ಇಂಚರದುದ್ದದಲ್ಲಿ ನಾನು ಕೆಲವೊಮ್ಮೆ ತೂಕಡಿಸಿ, ಉಳಿದಂತೆ ಖಯಾಲಿಯ ಮೇಲೆ ಟಿಪ್ಪಣಿ ಮಾಡಿಕೊಳ್ಳುವಾಗೆಲ್ಲಾ ನನಗೆ ಭಟ್ಟರ ನೆನಪು ಕಾಡುತ್ತಲೇ ಇತ್ತು. ಅವರು ದೃಷ್ಟಿಯೆಲ್ಲಾ ಒಂದು ಕಣ್ಣಾಗಿ ಅನುಭವಿಸಿ, ಕಂತುಗಳಲ್ಲಿ ಹರಿಸಬಹುದಾಗಿದ್ದ ಲೇಖನಮಾಲೆ ಓದುವ ಅವಕಾಶ ಕಳೆದು ಹೋದದ್ದಕ್ಕೆ ಬೇಸರವೂ ಆಯ್ತು. ಸಂಗೀತಜ್ಞ ಡಾ| ನಾಗರಾಜರಾವ್ ಹವಾಲ್ದಾರ್ “ಮಾತು ಸೋಲುವಲ್ಲಿ ಸಂಗೀತ ತೊಡಗುತ್ತದೆ” ಎನ್ನುವ ಮಾತನ್ನು ಮತ್ತೆ ಮತ್ತೆ ಉದ್ಧರಿಸಿದ್ದರು. ಆದರೆ ಇಲ್ಲಿ ನನ್ನ ಕಷ್ಟ – ಮಾತು ಸೋಲುತ್ತದೆ, ಸಂಗೀತ ಬರುವುದಿಲ್ಲ. ಆದರೂ ಮಾಡಿದ ಕಿರು ಪ್ರಯತ್ನವನ್ನು ಹಿರಿ ಮನಸ್ಸು ಮಾಡಿ ನೀವೆಲ್ಲ ಕಣ್ಣಾಡಿಸಿದ್ದಕ್ಕೂ ತಪ್ಪುಗಳನ್ನು ತೋರಿ, ಒಪ್ಪುಗಳಿಗೆ ಪೂರಕವಾಗಿ ಟಿಪ್ಪಣಿಸುವುದಕ್ಕೂ ಮುಂದಾಗಿ ಕೃತಜ್ಞತೆಗಳು.