ಓರಿಗೆಮಿ – ಕಾಗದ ಮಡಚಿ ಆಕೃತಿ ಮೂಡಿಸುವ ಕಲೆ, ಇಂದು ನಮ್ಮ ಬಾಲಲೋಕದಲ್ಲಿ ಪಠ್ಯದ ಭಾಗವೇ ಆಗಿರುವ ಕ್ರೀಡೆಗೆ ಜಪಾನೀ ಹೆಸರು. ಇದರಲ್ಲಿ ನನಗೆ ಬಾಲ್ಯದಿಂದಲೂ ತಕ್ಕಮಟ್ಟಿಗೆ ಆಸಕ್ತಿ ಇತ್ತು. (ಶಿವರಾಮ ಕಾರಂತರು ತಾವು ಸೇದಿ ಬಿಟ್ಟ ಸಿಗರೇಟ್ ಪ್ಯಾಕಿನ ಡಬ್ಬಿ, ಸೀಸದಲ್ಲಿ ವಿವಿಧ ಆಕೃತಿಗಳನ್ನು ಮಾಡಿಕೊಟ್ಟು ಮಕ್ಕಳನ್ನು ರಂಜಿಸುತ್ತಿದ್ದದ್ದು ನೆನಪಿದೆ.) ಅದರಲ್ಲೂ ಬಳ್ಳಾರಿ ಶಾಲೆಯಲ್ಲಿದ್ದಾಗ ಅಜಿತ್ ಡೇವಿಡ್ ಎನ್ನುವ ಸಹಪಾಠಿ ಮೂಲಕ ಕಲಿತ ಹಾರುವ ದೋಣಿ, ಚಿಕ್ಕಪ್ಪ ರಾಘವೇಂದ್ರನ ಮೂಲಕ ಕಲಿತ ಲಾಂಚ್, ನನ್ನದೇ ಆವಿಷ್ಕಾರ ಜೆಟ್ ಬೋಟ್ ಸಾಮಾನ್ಯವಾಗಿ ಯಾವ ಮಕ್ಕಳ ಕುತೂಹಲವನ್ನೂ ಹಿಡಿದಿಡುವುದು ನಿಶ್ಚಿತ. ಅಂಗಡಿಯಲ್ಲಿ ಪುರುಸೊತ್ತಿದ್ದಾಗ, ಗಿರಾಕಿಗಳು ಒಯ್ಯದ ಬಿಲ್ಲಿನ ತುಣುಕಿನಲ್ಲಿ ಇಂಥ ಒಂದೊಂದು ಮಾದರಿಯನ್ನು ನಾನು ಮಾಡಿಡುತ್ತಿದ್ದೆ. ಮತ್ತೆ ಬಂದ ಯಾವುದೇ ಮಕ್ಕಳಿಗೆ ಇದನ್ನು ಕೊಟ್ಟು ಮನಸ್ಸು ಗೆಲ್ಲುತ್ತಿದ್ದೆ. ಅವೆಲ್ಲಾ ನಮ್ಮ ಮೊನ್ನಿನ ಬೆಂಗಳೂರಿನ ಹಗಲು ಪ್ರಯಾಣದಲ್ಲಿ ಮರುಕಳಿಸಿದ್ದಕ್ಕೆ ಇಲ್ಲೊಂದಿಷ್ಟು!

ಸುಳ್ಯದಲ್ಲಿ ಒಬ್ಬ ತಾಯಿ ತನ್ನೆರಡು ಪುಟ್ಟ ಮಕ್ಕಳೊಡನೆ ನಮ್ಮ ಪಕ್ಕದ ಸೀಟಿಗೆ ಬಂದಳು. ಮಕ್ಕಳತ್ತ ನನ್ನ ಕುತೂಹಲದ ಕಣ್ಣ ಮಿಟುಕು, ಪುಟ್ಟ ನಗೆ ಎಲ್ಲಾ ನನಗೇ ಮರಳಿತು. ‘ದಪ್ಪ ಕನ್ನಡಕದ, ಪೊದರುಮೀಸೆಯ ಈ ಅಜ್ಜನಿಗೆ ಏನಾಗಿದೆ’ ಎಂದೇ ಅವಕ್ಕೆ ಕಂಡಿದ್ದರೆ ಆಶ್ಚರ್ಯವಿಲ್ಲ. ಮಡಿಕೇರಿವರೆಗೆ ಅವು ನಿದ್ರೆ ಹೋದವು. ಮತ್ತೆ ನನ್ನ ‘ಚರವಾಣಿ ಕಥಾಸಾಹಿತ್ಯ’ಕ್ಕೆ (ಮುಂದೆ ಬರಲಿದೆ!) ಅಡ್ಡಿ ಬಂದ ಕಾಲದಲ್ಲಿ, ಅವರಿಬ್ಬರೂ ಎದ್ದು ಇದ್ದಲ್ಲೇ ಕ್ರಿಯಾಶೀಲರಾದರು. (ಮತ್ತೆ ತಿಳಿದು ಬಂದಂತೆ) ಸುಳ್ಯದ ಅಜ್ಜ, ಪುಳ್ಳಿಯಕ್ಳಿಗೆ ಕ್ರಿಕೆಟ್ ಸಲಕರಣೆಗಳ ಉಡುಗೊರೆ ಕೊಟ್ಟಿದ್ದರು. ಒಂದೋ ಎರಡನೆಯದೋ ತರಗತಿಯಲ್ಲಿ ಇದ್ದಿರಬಹುದಾದ ಅಕ್ಕ – ಋತು, ಇನ್ನೂ ನರಸರಿಯಾಗುತ್ತಿರಬಹುದಾದ ತಮ್ಮ – ಮಾಯಾಂಕ್ (ಅಮ್ಮನ ಪ್ರೀತಿಯ ಮಾಂಕು), ಬ್ಯಾಟ್ ಬಾಲ್ ಹಿಡಿದು ಏನೋ ಹಾಸ್ಯ, ಕೊಸರಾಟ ನಡೆಸಿದ್ದರು. ನನ್ನ ಕಿಸೆಯಲ್ಲಿ ಏನಾದರೂ ಗೀಚಲು ಬರುತ್ತದೆ ಎಂದಿಟ್ಟುಕೊಂಡ ಹಿಂದೆ ಖಾಲಿ ಇದ್ದ ಎರಡು ಹಳೇ ಆಮಂತ್ರಣ ಪತ್ರಿಕೆಗಳನ್ನು ತೆಗೆದೆ. ಮೊದಲು ಒಂದು ಪುಟ್ಟ ಹಾರುದೋಣಿ ಮಾಡಿದೆ. ಮತ್ತೆ ತೂಕಡಿಸುತ್ತಿದ್ದ ಅಮ್ಮನ ಗಮನ ಸೆಳೆಯದಂತೆ, ಕಿಟಕಿ ಬದಿಯಲ್ಲಿ ಕುಳಿತ ಹುಡುಗನ ಮೇಲೆ ಎಸೆದೆ. ಆತ ಒಮ್ಮೆಗೆ ಗಾಬರಿಯಾದರೂ ಮತ್ತೆ ಮಕ್ಕಳಿಬ್ಬರೂ ಅದರ ಆಕರ್ಷಣೆಗೊಳಗಾದರು. ಮತ್ತೆ ಇದ್ದಷ್ಟೂ ಕಾಗದದಲ್ಲಿ ಬೇರೆ ನಾಲ್ಕೆಂಟು ಮಾದರಿಗಳನ್ನೂ ಮಾಡಿಕೊಟ್ಟೆ. ಇದು ನನಗೆ ‘ಅಂಕಲ್ ಪಟ್ಟ’ವನ್ನೂ ಮುಂದೆ ಅವರ ಬಿಸ್ಕೆಟ್ ಪ್ಯಾಕೇಟಿನಲ್ಲಿ ಪಾಲು ಕೊಡುವಷ್ಟೂ (ಏ ಏ ನಾನು ತೆಗೆದುಕೊಳ್ಳಲಿಲ್ಲಪ್ಪಾ) ವಿಶ್ವಾಸವನ್ನು ಬೆಳೆಸಿತು. ಆದರೆ ಎಲ್ಲ ಟೈಂ ಪಾಸ್; ಬೆಂಗಳೂರು ತಲಪುತ್ತಿದ್ದಂತೆ ನಾವೆಲ್ಲೋ ಅವರೆಲ್ಲೋ!

ಈಗ ಅಂಥ ಕೆಲವು ಕಾಗದ ಮಡಚಿದ ರಚನೆಗಳನ್ನು ಇಲ್ಲಿ ರೇಖಾಚಿತ್ರ, ವಿವರಣೆ ಮತ್ತು ಫೋಟೋ ಮೂಲಕ ವಿವರಿಸಿತ್ತೇನೆ. ಇಲ್ಲಿ ಕೆಲವು ಮುಖ್ಯ ಲಕ್ಷ್ಯಗಳ ಜಾಡಿನಲ್ಲಿ ಉಪರಚನೆಗಳೂ ಕಾಣುವುದಿವೆ. ಅವುಗಳನ್ನು ಅಲ್ಲಲ್ಲೇ ದಪ್ಪಕ್ಷರಗಳಲ್ಲಿ ಗುರುತಿಸಿದ್ದೇನೆ. ಇನ್ನು ತಡವೇಕೆ, ನೀವೇ ಮಾಡಿ, ನಿಮ್ಮಲ್ಲಿರುವ ಮಕ್ಕಳನ್ನು ತಣಿಸಿ!

ಹಾರುವ ದೋಣಿ: ಸುಮಾರು ಮೂವತ್ತು ಸೆಮೀ ಚೌಕದ ಕಾಗದ ಸಪಾಟು ನೆಲ/ಮೇಜಿನ ಮೇಲೆ ಇಟ್ಟುಕೊಳ್ಳಿ.

ಹಾರುದೋಣಿಯ ದಾರಿಯಲ್ಲಿನ ಕೆಲವು ಉಪೋತ್ಪತ್ತಿಗಳು.

 

ಲಾಂಚ್: (ಸೀಮೆಣ್ಣೇ ಅಥವಾ ಡೀಸೆಲ್ ಇಂಜಿನ್ನಿನ ದೋಣಿ)

೧. ಹಾರುವ ದೋಣಿಯ ಒಂದು, ಎರಡನೇ ಕ್ರಮಗಳನ್ನು ಮಾಡಿಕೊಳ್ಳಿ.
೨. ಮತ್ತೆ (ಕವುಚಿ ಹಾಕಬೇಡಿ) ಎರಡು ಪಾರ್ಶ್ವಗಳನ್ನು ಮಧ್ಯಕ್ಕೆ ಮಡಚಿ.
೩. ಸಹಜವಾಗಿ ಅರ್ಧಕ್ಕಿಳಿದ ಉಳಿದೆರಡೂ ಬದಿಗಳನ್ನು ಮಧ್ಯಕ್ಕೆ ಮಡಚಿ.
೪ ಹಾಗೇ ಎತ್ತಿ ಆ ಪುಟ್ಟ ಚೌಕವನ್ನು ಹಿಂದೆ ಅರ್ಧಕ್ಕೆ ಮಡಚಿ.
೫. ಇಂಗ್ಲಿಶಿನ ಡಬ್ಲ್ಯು ಆಕಾರವಿರುತ್ತದೆ. ಆ ಆಕಾರ ಉಳಿಸಿಕೊಂಡು, ಒಳಮುಖಿಯಾಗಿರುವ ನಾಲ್ಕೂ ಮೂಲೆಗಳನ್ನು ಹೊರಕ್ಕೆಳೆದು, ಚೂಪು ಸರಿ ಮಾಡಿ – ಜೋಡುದೋಣಿ ಕಾಣಿಸುತ್ತದೆ.
೬. ದೋಣಿಗಳ ಒಳಮೈಯಲ್ಲಿ ಕಾಣಿಸುವ ಎಸಳನ್ನು ಜಾಗ್ರತೆಯಿಂದ ಬಿಡಿಸಿಕೊಂಡು ಹೊರಗೆಳೆಯಿರಿ.
೭ ಮೂರೂ ಮೂಲೆಗಳನ್ನು ಚೌಕದ ಕೇಂದ್ರಕ್ಕೆ ಮುಟ್ಟುವಂತೆ ಮಡಚಿ; ಎರಡೂ ಬದಿಯಲ್ಲಿ.
೮. ಮೇಲಿನ ಅರ್ಧವನ್ನು ಕೆಳಕ್ಕೆ ಮಡಚಿ.
೯. ಚೂಪು ಮರೆಯಾದ ದೋಣಿಯೆರಡರ ಒಳಗೆ ಹೆಬ್ಬೆರಳುಗಳನ್ನು ತೂರಿ, ಹಗುರಕ್ಕೆ ಎಳೆದರೆ ಸಣ್ಣ ಚೌಕ ಡಬ್ಬಿ ತೆರೆದುಕೊಂಡಂತಿರುತ್ತದೆ.
೧೦. ಹಾಗೇ ತೋರು ಬೆರಳಿನಿಂದ ಉಳಿದೆರಡು ಪಕ್ಕಗಳನ್ನು ಮಧ್ಯೆ ಮಾತ್ರ ಒಳಕ್ಕೆ ಒತ್ತುತ್ತ, ಮೇಲಂಚನ್ನು ಕೆಳ ಅಂಚಿಗೆ ಮುಟ್ಟಿಸಿ.
೧೧. ಆ ನಡುವನ್ನೀಗ ಹೆಬ್ಬೆರಳಿನಿಂದ ಒತ್ತಿ ಹಿಡಿದರೆ ಉಳಿದೆರಡು ಪಾರ್ಶ್ವಗಳ ಮೇಲಂಚು ಸಹಜವಾಗಿ ಮುಂದಕ್ಕೆ ಬಾಗುತ್ತವೆ. ಅವನ್ನು ಚೊಕ್ಕವಾಗಿ ನಡುರೇಖೆಗೆ ಮುಟ್ಟಿಸಿ, ಒತ್ತಿಬಿಡಿ.
೧೨. ಚೌಕವನ್ನು ಕವುಚಿ ಹಾಕಿ. ಈಗ ಎದ್ದಂತಿರುವ ಎರಡೂ ಅಂಚುಗಳನ್ನು ನಡುರೇಖೆಗೆ ಸರಿಯಾಗಿ ಮಡಚಿ ಒತ್ತಿಬಿಡಿ.
೧೩. ಮತ್ತೆ ಕವುಚಿ ಹಿಡಿದು ಮುಚ್ಚಿಕೊಂಡಿರುವ ಎರಡು ಪಕ್ಕಗಳನ್ನು ಪೂರ್ತಿ ತೆರೆಯಿರಿ, ಸಹಜವಾಗಿ ಹಿಂದಕ್ಕೆ ಮಡಚಿಕೊಳ್ಳುವ ಅವುಗಳ ಇನ್ನೊಂದೇ ಅಂಚುಗಳನ್ನು ಆ ನಡುವಿಗೇ ಬರುವಂತೆ ಒತ್ತಿ ಬಿಗಿ ಮಾಡಿ. ಇದು ಕನ್ನಡಿ ಮುಖ – ನಾಲ್ಕು ಮರದ ಪಟ್ಟಿಗಳ ಚೌಕಟ್ಟಿನ ಜೋಡಣೆಯ ನಡುವೆ ಕೂರಿಸಿದ ಕನ್ನಡಿಯಂತೇ ತೋರುತ್ತದೆ. (ಫೋಟೋ ಫ್ರೇಮ್ ಎನ್ನಲೂಬಹುದು)
೧೪. ಚೌಕಟ್ಟಿನಲ್ಲಿ ಎರಡು ಪಟ್ಟಿ ಕನ್ನಡಿಯ ಮೇಲಿದ್ದರೆ, ಎರಡು ಒಳಗೆ ಸೇರಿಕೊಂಡಂತಿವೆ – ಗಮನಿಸಿ. ಮೇಲೆ ಮುಚ್ಚಿದಂತಿರುವ ಎರಡೂ ಪಟ್ಟಿಗಳ ಬೆನ್ನು ಸೇರುವಂತೆ ಚೌಕವನ್ನು ಅರ್ಧಕ್ಕೆ ಮಡಚಿ.
೧೫. ಒಳಸೇರಿಕೊಂಡಿರುವ ಪಟ್ಟಿಗಳನ್ನು ಎರಡೂ ಬದಿಗಳಿಂದ, ಜಾಗ್ರತೆಯಲ್ಲಿ ಎಳೆದು ಬಿಡಿಸಿ. ಈಗ ಕವುಚಿ ನೋಡಿದರೆ ಎರಡು ಧಕ್ಕೆಗಳ ಸ್ಟೀಮರ್ ಲಾಂಚ್ ಅರಳಿರುತ್ತದೆ! ನಡುವೆ ಇಂಜಿನ್ ಗುಂಡಿ. ಎರಡು ಪಕ್ಕಗಳಲ್ಲಿ ಓಡಾಡಲು ಓಣಿ.
೧೬. ಸಾಲದ್ದಕ್ಕೆ ಧಕ್ಕೆಯ ಮೇಲೆ ಬಿಸಿಲು ಹೆಚ್ಚೆನಿಸಿದಾಗ ಬೇಕಾದರೆ ಬಿಡಿಸಬಹುದಾದ ಬಿಸಿಲ ಮರೆಯೂ ಲಭ್ಯ. ಇದಕ್ಕೆ ಧಕ್ಕೆಯ ಎರಡೂ ಒಳಮೂಲೆಗಳನ್ನು ಎಳೆದು ಮತ್ತೂ ಒಳಗೆ ಮಡಿಚಿರುವ ಎಸಳನ್ನೂ ಎಳೆದು ಬಿಡಿಸಿದರಾಯ್ತು.

ಸ್ಟೀಮರಿನ ಉಪೋತ್ಪತ್ತಿಗಳಲ್ಲಿ ಜೋಡಿ ದೋಣಿ ಮತ್ತು ಚೌಕಟ್ಟಿನ ಕನ್ನಡಿ ಅಲ್ಲಲ್ಲೇ ಉಲ್ಲೇಖಿಸಿದ್ದೇನೆ.

ಉಳಿದಂತೆ ಉಗಿಹಡಗು:

೧. ಹಾರುವ ದೋಣಿಯ ೧, ೨ ಮತ್ತು ೩ನೇ ಕ್ರಮವನ್ನೂ ಮಾಡಿ.
೨. ಮತ್ತೆ ಕವುಚಿ ಹಾಕಿ ನಾಲ್ಕೂ ಮೂಲೆಗಳನ್ನು ಕೇಂದ್ರ ಮುಟ್ಟುವಂತೆ ಮಡಚಿ.
೩. ಗಮನಿಸಿ – ಚೌಕದ ನಾಲ್ಕೂ ಖಂಡಗಳು ಅದೇ ಚೌಕದ ಪಾರ್ಶ್ವಗಳಿಗೆ ಲಂಬವಾಗಿ ನಿಲ್ಲಬಲ್ಲ ಪುಟ್ಟ ಚೌಕಗಳಾಗಿರುತ್ತವೆ. ಅವುಗಳಲ್ಲಿ ಎದುರುಬದುರಿನ ಒಂದು ಜೋಡಿಯನ್ನು ಕ್ರಮವಾಗಿ ಚಿಮಣಿ ಮಾಡಬೇಕು. ಅದಕ್ಕೆ ಆ ಪುಟ್ಟ ಚೌಕದ ಸೀಳಿನ ನಡುವನ್ನು ಎತ್ತಿ ಬೇರ್ಪಡಿಸುತ್ತಾ ಎದುರು ಮೂಲೆಗಳನ್ನು ಒಂದು ಮಾಡಬೇಕು. ಇವು ಎರಡು ಚಿಮಣಿ ಬಾಯಿಗಳು. ಇದು ಗೂಡುದೀಪದ ಆಕೃತಿಯಲ್ಲಿರುವುದೂ ಉಪೋತ್ಪನ್ನವೇ.
೪. ಅ. ಇಲ್ಲಿ ಎರಡು ಆಯ್ಕೆಗಳಿವೆ. ಅ. ಈಗ ಮುಂದಕ್ಕೇ ಮಡಚಿ ಎರಡೂ ಚಿಮಣಿಗಳನ್ನು ಸೇರಿಸಿ ಹಿಡಿದರೆ ತುಂಡು ಕೈಯ ಅಂಗಿಯಂತೆ ಕಾಣುತ್ತದೆ
೪. ಇ. ಇನ್ನೆರಡೂ ಪುಟ್ಟ ಚೌಕಗಳನ್ನು ೩ನೇ ಹಂತದಲ್ಲಿ ಮಾಡಿದಂತೆ ಚಿಮಣಿ ಮಾಡಿ.
೪. ಉ. ಈಗ ಹೇಗೂ ಅರ್ಧಕ್ಕೆ ಮಡಚಿ, ತುಂಡುತೋಳಿನ ಅಂಗಿ ಹೆಚ್ಚು ಸಮರ್ಪಕ.
೫. ಈಗ ೪. ಅ. ಹಂತದ ತುಂಡು ಕೈ ಹಂತಕ್ಕೆ, ಮರಳಿ. ಚಿಮಣಿಜೋಡಿ ಅಂದರೆ ಮೈ ಮೇಲಿರುವಂತೆ ಮತ್ತು ಅಂಗಿಯ ಭುಜ ಕತ್ತು ನೆಲಕ್ಕಿರುವಂತೆ ನಿಲ್ಲಿಸಿ. ಮತ್ತೆ ಎರಡೂ ಚಿಮಣಿಗಳ ನಡುವೆ ಸಂದಿಯಲ್ಲಿ ಮಡಚಿಕೊಂಡಿರುವ ಚೂಪನ್ನು ಎತ್ತಿ, ನಿಲ್ಲಿಸಿ. ಜಹಜಿನ ಆಕೃತಿ ಪ್ರತ್ಯಕ್ಷವಾಗುತ್ತದೆ.

ಮೊದಲೇ ಹೇಳಿದ್ದು ನೆನಪಿದೆಯಲ್ಲಾ – ನಿಮ್ಮಲ್ಲೇ ಇರುವ ಮಕ್ಕಳನ್ನು ತಣಿಸಿ! ಅನಂತರ ನಿಮ್ಮ ಭಾಗವಹಿಸುವುವಿಕೆ ಮತ್ತು ನನ್ನ ಈ ಜೋಕ್ಲಾಟಿಕೆಗೆ (ಮಕ್ಕಳಾಟಕ್ಕೆ) ಉತ್ಸಾಹದ ಮಾತುಗಳನ್ನು ನೋಡಿಕೊಂಡು ಮುಂದೆ ನಾನು ಜೆಟ್ ಬೋಟ್ ಇತ್ಯಾದಿ ಇಲ್ಲೇ ಕೊಡಲೂ ಬಹುದು.