(ದಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿತನ ಹಳವಂಡ)

“ವಾಷಿಂಗ್ಟನ್ನಿನಲ್ಲಿರುವ ಮಹಾಪ್ರಭುಗಳು ನಮ್ಮ ನೆಲವನ್ನು ಕೊಳ್ಳುವ ತಮ್ಮ ಆಶಯದೊಡನೆ ಸ್ನೇಹ ಮತ್ತು ಸದ್ಭಾವನೆಯ ಮಾತುಗಳನ್ನು ನಮಗೆ ಕಳಿಸಿರುವರು. ಇದು ಅವರ ದಯವಂತಿಕೆಯ ದ್ಯೋತಕ. ಏಕೆಂದರೆ ನಾವು ಮರುಸಲ್ಲಿಸಬಹುದಾದ ಸ್ನೇಹ ಅವರಿಗೆ ಅಗತ್ಯವಿಲ್ಲ…” ನಾನು ಅಂದು (೩೧-೧೦-೧೨) ಸಂಜೆ ನಾಲ್ಕೂವರೆ ಗಂಟೆಯ ಸುಮಾರಿಗೆ ಗಣಕದಲ್ಲಿ ಹೀಗೊಂದು ಲೇಖನ ನಕಲು ತೆಗೆಯುತ್ತಾ ಇದ್ದೆ. (ವಿವರಗಳಿಗೆ ನನ್ನ ಜಾಲಲೇಖನ ‘ಸವಾಲು ಎಸೆದಿದ್ದೇನೆ, ಜವಾಬ್ ಕೊಡೀ’ಯ ಪ್ರತಿಕ್ರಿಯಾ ಅಂಕಣದಲ್ಲಿ ಎರಡು ಭಾಗಗಳಲ್ಲಿರುವ ನನ್ನ ಪತ್ರ ಅವಶ್ಯ ನೋಡಲು ಇಲ್ಲಿ ಚಿಟಿಕೆ ಹೊಡೆಯಿರಿ.) ಗೆಳೆಯ, ವಿಜಯವಾಣಿಯ ವೇಣು ವಿನೋದ್ ಪಕ್ಕದ ಸಂಭಾಷಣಾ ಅಂಕಣದಲ್ಲಿ ಅಗೋಚರವಾಗಿದ್ದವರು, ಒಮ್ಮೆಗೆ ಸಂದೇಶ ಕಳಿಸಿದರು – ಶುಭಾಶಯಗಳು, ದಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗಳಿಸಿದ್ದಕ್ಕೆ! ವನ್ಯಜೀವಿಗಳ ಮುಕ್ತಿಗೆ ಹೋರಾಡುವವನಿಗೆ ವಿದ್ಯುತ್ ಬೇಲಿ ಮುಟ್ಟಿದಂತಾಯ್ತು. “ಅಯ್ಯೋ, ನನಗಿದೇ ಪ್ರಥಮ ಸುದ್ದಿ. ಮತ್ತೆ ಕೆಲವು ವರ್ಷಗಳ ಹಿಂದೆ ನಾನು ಯಾಕೆ ಪ್ರಶಸ್ತಿ ಸಮ್ಮಾನಗಳನ್ನು ತಿರಸ್ಕರಿಸುತ್ತೇನೆ ಎಂದು ಲೇಖನವನ್ನೇ ಬರೆದು ಖಂಡಿಸಿದವನು. ಈಗ ಇದನ್ನು ತೆಗೆದುಕೊಳ್ಳುವ ಮಾತೇ ಇಲ್ಲ. ನನ್ನ ಅರ್ಜಿ ಅಥವಾ ನಾಮ ಸೂಚನೆಯನ್ನು ತಳ್ಳಿದವರಿಗೆ, ಇದನ್ನು ಅನುಮೋದಿಸಿದವರಿಗೆ (ಯಾರೆಂದು ತಿಳಿದರೆ) ಅವಮಾನವಾಗದಂತೆ ಖಂಡಿತವಾಗಿಯೂ ತಿರಸ್ಕರಿಸುತ್ತೇನೆ” ಎಂದೇ ಉತ್ತರಿಸಿದೆ. ಸಂಜೆ ಐದೂವರೆಯ ಸುಮಾರಿಗೆ ಕಸಾಪದ ಜಿಲ್ಲಾಧ್ಯಕ್ಷ, ಪ್ರದೀಪ ಕುಮಾರ ಕಲ್ಕೂರರು ಚರವಾಣಿ ಸಂಪರ್ಕ ಮಾಡಿ “ನಾಳೆ ರಾಜ್ಯೋತ್ಸವ ಸಂದರ್ಭದಲ್ಲಿ ನೀವು ನಮ್ಮೊಂದಿಗೆ ಇರಬೇಕು…” ಎನ್ನತೊಡಗಿದರು. ನಾನು “ಇಲ್ಲ, ನಾನು ನಾಳೆ ಕಾಡಿಗೆ ಹೋಗುತ್ತಿದ್ದೇನೆ…” ಎನ್ನುವುದರೊಳಗೆ ಸಂಪರ್ಕ ತಪ್ಪಿತು. ಮತ್ತೆ ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ ಪುನಃ ಸಂಪರ್ಕಿಸಿದಾಗ ವಿವರ ಹೇಳಿದರು. ‘ಪರಿಸರ ವಿಭಾಗದಲ್ಲಿ ನಿಮ್ಮ ಹೆಸರನ್ನು ಪ್ರಶಸ್ತಿ ಆಯ್ಕಾ ಸಮಿತಿ ಸರ್ವಾನುಮತವಾಗಿ ಸ್ವೀಕರಿಸಿದೆ.’ ನಾನು ಸ್ಪಷ್ಟವಾಗಿ “ಪ್ರಶಸ್ತಿ, ಸಮ್ಮಾನಗಳಿಗೆ ನಾನು ವಿರೋಧಿ. ಪ್ರಜಾಸತ್ತಾತ್ಮಕ ಸರಕಾರ ಕೊಡುವುದು ತಪ್ಪು, ನಾನಂತೂ ಸ್ವೀಕರಿಸುವುದಿಲ್ಲ” ಎಂದೆ. ಸಾಲದ್ದಕ್ಕೆ ಕಾಡಿಗೆ ಹೋಗುತ್ತಿರುವುದಾಗಿಯೂ ಅವರ ಸಭೆ, ಮೆರವಣಿಗೆಯ ಭಾಗ ಆಗುವುದೂ ಅಸಾಧ್ಯವೆಂದು ತಿಳಿಸಿದೆ. ಏತನ್ಮಧ್ಯೆ ಗೆಳೆಯರಾದ ಕರುಣಾಕರ ಬಳ್ಕೂರು, ಮುರಳೀ ಕಡೇಕಾರ್ ಎಲ್ಲೆಲ್ಲಿಂದಲೋ ಸುದ್ದಿ ಸಿಕ್ಕಿ, ನನಗೆ ಅಭಿನಂದನಾ ಕರೆ ಮಾಡಿದರು. ಅವರು ನನ್ನ ತಿರಸ್ಕಾರ ತಿಳಿದು, ವಿಚಾರಿಸಿದ್ದರಿಂದ ಮತ್ತು ಇತರ ಮಿತ್ರರಿಗೂ ಮಾಧ್ಯಮಗಳಿಗೂ ಅನಿವಾರ್ಯವಾಗಿ ಹಾಕಿದ ಟಿಪ್ಪಣಿಯನ್ನೇ ಈಗ ವಿಸ್ತರಿಸುತ್ತೇನೆ.

ರಾಜಸತ್ತೆಯ ಅವಲಕ್ಷಣವಾಗಿ ಮುಂದುವರಿಯುತ್ತಿರುವ ಪ್ರಶಸ್ತಿ, ಸಮ್ಮಾನಗಳು ರದ್ದಾಗಬೇಕು. ಸಾಮಾಜಿಕ ಆಡಳಿತಕ್ಕೆ ಜನಮತ ಪಡೆದು ಬರುವವರು, ಸಮಷ್ಟಿಯ ಹಣವನ್ನು ಹೊರಕೈ ಮಾಡಿ ಕೆಲವರಿಗೆ ವಿತರಿಸಿ, ಪ್ರಚಾರ ಗಿಟ್ಟಿಸುತ್ತಿರುವುದು ಅಬದ್ಧ. ಇನ್ನು ನನ್ನದೇ ಉದಾಹರಣೆಯಲ್ಲಿ ಹೇಳುವುದಾದರೆ ಮೊದಲನೆಯದಾಗಿ, ನವೆಂಬರ್ ಒಂದರ ಸನ್ನಿವೇಶ ಎಲ್ಲರಿಗೂ ಗೊತ್ತಿರುವಂತದ್ದೇ. ಹಾಗಿರುವಾಗ ಸಾಕಷ್ಟು ಮೊದಲೇ ಪಾರದರ್ಶಕವಾಗಿ ಆಯ್ಕೆ ಮಾಡಿ, ‘ಬಲಿಪಶು’ವಿಗೆ (ನನ್ನಂಥವರಿಗೆ) ಸೂಚನೆ ನೀಡಿ, ಒಪ್ಪಿಗೆ ಪಡೆದು ಮುಂದುವರಿಯಬೇಡವೇ?

ಎರಡನೆಯದಾಗಿ, ಮಾಧ್ಯಮಗಳಿಗೆ ತಿಳಿಸಿಯಾದ ಮೇಲೆ ಅವರ (ನನ್ನ) ಅನುಕೂಲ ಕೇಳುವುದೇ? ಅದೂ ಸ್ಪಷ್ಟ ಕಾರ್ಯ, ಕಾರಣಗಳ ವಿವರಣೆ ಇಲ್ಲದೇ ‘ನಾವು ಕೊಡುತ್ತಿದ್ದೇವೆ, ನೀವು ತೆಗೆದುಕೊಳ್ಳಬೇಕು’ ಎಂಬ ಧೋರಣೆ ಸಾಧುವೇ?

೩. ಇದು ಜಿಲ್ಲಾಡಳಿತದ್ದೇ? ಜಿಲ್ಲಾ ಕಸಾಪ ವ್ಯವಸ್ಥೆಯೇ? ವೈಯಕ್ತಿಕವೇ? ಹಣಕಾಸಿನ ವ್ಯವಸ್ಥೆ ಎಂಥದ್ದು? ಇತ್ಯಾದಿ ನೂರು ಪ್ರಶ್ನೆಗಳು ಕೊರೆಯುತ್ತಿರುವಾಗ ಒಂದು ಶಾಲು, ಹೂಹಣ್ಣಿನ ಬುಟ್ಟಿ ಹಿಡಿದು ಮಾಧ್ಯಮಗಳಲ್ಲಿ ಚಿತ್ರ ಬರುವುದೇ ಸಮ್ಮಾನವೇ?

೪. ಈಚೆಗೆ ಇಡಗುಂಜಿ ಮೇಳದ ಪ್ರದರ್ಶನಾವಧಿಯಲ್ಲಿ ಮತ್ತೆ ಪ್ರಭಾಕರ ಜೋಶಿಯವರ ಸಮ್ಮಾನಗಳ ಕುರಿತು ಸಾಕಷ್ಟು ಟೀಕೆ ಸಹಿತ ನಾನು ನನ್ನ ಜಾಲತಾಣದಲ್ಲಿ ಬರೆದದ್ದೇ ಇದೆ. ಅವೆಲ್ಲವನ್ನು ಮರೆತು ಸಮ್ಮಾನ ನಾನೊಪ್ಪಿಕೊಂಡರೆ ಮೇಲೆ ಹೇಳಿದ ಬರಹಗಳೆಲ್ಲವೂ ‘ಅದುವರೆಗೆ ನನಗೆ ಪ್ರಶಸ್ತಿ ದಕ್ಕಲಿಲ್ಲ’ ಎನ್ನುವ ಸ್ವಾರ್ಥದ ಕೊರಗಿನಂತೆ ಕೇಳಲಾರದೇ?

೫. ನನಗೆ ಪ್ರಶಸ್ತಿ ಪರಿಸರಪರ ಕಾರ್ಯಗಳಿಗಾಗಿ ಘೋಷಿತವಾಗಿತ್ತು. ಅದರ ಸತ್ಯಾಸತ್ಯತೆಗಳನ್ನು ಬೇಕಿದ್ದರೆ ಒರೆಗೆ ಹಚ್ಚಿ, ಪೂರಕವಾಗಿ ಸ್ಪಂದಿಸುವುದಕ್ಕಿಂತ ದೊಡ್ಡ ಪ್ರಶಸ್ತಿ ಬೇರೆ ಇದೆಯೇ? ಹಾಗೂ ಪರಿಸರ ಪ್ರಶಸ್ತಿ ಕೊಡುವುದೇ ಇದ್ದಲ್ಲಿ ನನ್ನಂತೆ ಜನಪ್ರಿಯ ಮಾಧ್ಯಮಗಳಿಗೆ ಸಿಗದ (ನನಗೆ ಅಂಗಡಿ ಮತ್ತು ಲೇಖನಗಳಿಂದ ಇದು ಒದಗಿತ್ತು) ಎಷ್ಟೋ ಹೆಚ್ಚುಪಾಲು ಕೆಲಸ ಮಾಡುತ್ತಿರುವವರು ಇದ್ದಾರೆ. ಅವರನ್ನು ಅವಗಣಿಸುವ ಮಾನದಂಡ ಎಷ್ಟು ಸರಿ?

೬. ಪ್ರಜಾಸತ್ತೆಯಲ್ಲಿ ಪ್ರತಿನಿಧಿಯಾದವರು (ಕಾರ್ಪೊರೇಟರ್‌ನಿಂದ ರಾಷ್ಠ್ರಪತಿಯವರೆಗೂ) ಸೀಮಿತ ಅವಧಿಗೆ, ಸ್ಪಷ್ಟ ಚೌಕಟ್ಟಿನೊಳಗೆ ಸಾರ್ವಜನಿಕ ಆಡಳಿತಕ್ಕೆ ಮಾತ್ರ ಅಧಿಕಾರ ಪಡೆದು ಬರುತ್ತಾರೆ. ಇವರು ಒಡೆಯರಲ್ಲ, ಸೇವಕರು. ಆದರೆ ವಾಸ್ತವದಲ್ಲಿ ಇವರು ಆಳಿದ ಮಹಾರಾಜರುಗಳಂತೆ, ಭೂಮಿಯ ಮೇಲಿನ ಎಲ್ಲಕ್ಕೂ ಒಡೆಯರಂತೆ ವ್ಯವಹರಿಸುವುದು ಅಜ್ಞಾನ. ಇವರಲ್ಲಿ ಇಂದು ಬಹುತೇಕರು ಮುಚ್ಚುಮರೆಯಿಲ್ಲದೆ ಸ್ವಾರ್ಥವೊಂದನ್ನೇ ಬೆಳೆಸುತ್ತಿದ್ದಾರೆ. ಇದು ಸಹಜವಾಗಿ ಆಡಳಿತವನ್ನು ಬಟವಾಡೆಯ ಹೀನ ಮಟ್ಟಕ್ಕಿಳಿಸಿದೆ. ಇಂಥ ವ್ಯವಸ್ಥೆ ಕೊಡುವ ಸಮ್ಮಾನ, ಪ್ರಶಸ್ತಿಯನ್ನು ನಾನು (ಅಥವಾ ಯಾರೂ) ಸ್ವೀಕರಿಸಿದ್ದೇ ಆದರೆ ಅವರ ಪಾಪಕರ್ಮಗಳಿಗೆ ನಿಸ್ಸಂದೇಹವಾಗಿ ಪಾಲುದಾರನಾಗುತ್ತೇನೆ.

ನಾನು ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಮತ್ತು ಈ ಕ್ರಮವನ್ನೇ ಖಂಡಿಸುತ್ತೇನೆ. ಇನ್ನೂ ಹೆಚ್ಚಿನ ವಿವರಗಳಿಗೆ ವಿಜಯ ಕರ್ನಾಟಕದ ೨೩-೧೨-೨೦೦೭ರ ಸಾಪ್ತಾಹಿಕ ಸಂಚಿಕೆಯಲ್ಲಿ ಹೆಚ್ಚಿನ ಉದಾಹರಣೆಗಳೊಂದಿಗೆ ಪ್ರಕಟವಾದ ನನ್ನದೇ ಲೇಖನದ ಯಥಾ ಪ್ರತಿಯನ್ನು ಮುಖ್ಯಧಾರೆಯಲ್ಲೂ ಸಂದರ್ಭ ಬಂದಂತೆ ವರ್ತಮಾನದ ಟಿಪ್ಪಣಿಗಳನ್ನು [ ] ಈ ತೆರನ ದೊಡ್ಡ ಕಂಸದೊಳಗೂ ಕೊಡುತ್ತೇನೆ.

ಪ್ರಶಸ್ತಿ, ಸಮ್ಮಾನ – ಅಪರಾಧದ ಸಲಕರಣೆಗಳು

ಕೆಲವು ವರ್ಷಗಳ ಹಿಂದೆ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಮಿತ್ರ ಸುಬ್ರಹ್ಮಣ್ಯ ತನ್ನ ತಂದೆಯ ಪ್ರತಿ ವಾರ್ಷಿಕ ಸ್ಮರಣೆಯನ್ನು ಶ್ರೇಷ್ಠ ಪುಸ್ತಕೋದ್ಯಮಿಯೊಬ್ಬರಿಗೆ ಪ್ರಶಸ್ತಿ ಕೊಟ್ಟು ಆಚರಿಸುವ ‘ವ್ರತ’ ತೊಟ್ಟಿದ್ದರು. ಗೆಳೆತನದ ಸದರದಲ್ಲಿ ನಾನು ಕೊಕ್ಕೆ ಹಾಕಿದ್ದೆ “ಹೆಚ್ಚುಕಾಲ ನಡೆಯದು ನಿಮ್ಮ ಸಂಕಲ್ಪ. ಕೊರತೆ ಬರುವುದು ನಿಮ್ಮ ಆರ್ಥಿಕತೆ ಮತ್ತು ಮನಸ್ಸಿನದ್ದಲ್ಲ, ಉದ್ಯಮದೊಳಗೆ ಶ್ರೇಷ್ಠರದ್ದು.” ಅದೊಂದು ವರ್ಷ ಅವರು ಯಾವುದೇ ಆಮಿಷಗಳಿಗೆ ಬಲಿಯಾಗದ ಉದ್ಯಮದೊಳಗಿನ ಮಹಾಸಲಗ, ಡಿವಿಕೆ ಮೂರ್ತಿಯವರನ್ನು ಲಕ್ಷ್ಯವಾಗಿಟ್ಟುಕೊಂಡು ಹೊರಟರು. ಸುಬ್ರಹ್ಮಣ್ಯ ಅವರನ್ನು ಖೆಡ್ಡಾ ಮಾಡುವಲ್ಲಿ ಆಪ್ತ ಶಿಷ್ಯನಾದ ನನ್ನನ್ನೂ ಬಳಸಿಕೊಂಡಿದ್ದರು. ಡಿವಿಕೆ ಕೇವಲ ವೈಯಕ್ತಿಕ ಸ್ನೇಹಾಚಾರಕ್ಕಾಗಿ ಮೈಸೂರಿನಿಂದ ಹೋಗಿ, ಬರುವ ಮತ್ತು ವಾಸ್ತವ್ಯದ ಖರ್ಚನ್ನು ತಾವೇ ಹಾಕಿಕೊಂಡು ಭಾಗಿಯಾಗಿದ್ದರು. ಸುಬ್ರಹ್ಮಣ್ಯ ಆಗಲೇ ಸೂಚನೆ ಕೊಟ್ಟು, ಹಿಂಬಾಲಿಸಿದ ವರ್ಷದಲ್ಲಿ ನನ್ನನ್ನೇ ಸಮ್ಮಾನಿತನನ್ನಾಗಿಸುವ ಪ್ರಯತ್ನ ಮಾಡಿದರು. “ನನಗೆ ಆ ಹಿರಿತನವಿಲ್ಲ ಮತ್ತು ಆಯಾಮವೂ ಇಲ್ಲ” ಎಂದು ನಿಸ್ಸಂದಿಗ್ಧವಾಗಿ ನಿರಾಕರಿಸಿದೆ. ಸ್ನೇಹಾಚಾರಕ್ಕೆ ಮನ್ನಣೆ ಕೊಟ್ಟು ಕೇವಲ ವಿಶೇಷ ಉಪನ್ಯಾಸಕಾರನಾಗಿ ಭಾಗಿಯಾಗಿ ಬಂದೆ.

ಹುಬ್ಬಳ್ಳಿಯ ಕುಲಕರ್ಣಿ ಬುಕ್ ಡಿಪೋದೊಡನೆ ಎಲ್ಲಾ ಪ್ರಕಾಶನ ಸಂಸ್ಥೆಗಳೊಡನೆ ಇದ್ದಂತೇ ವ್ಯಾಪಾರಿಯಾಗಿ ನನ್ನ ಸಂಬಂಧ ಚೆನ್ನಾಗಿತ್ತು. ಅದರ ಮಾಲೀಕರಾದ ಅಕೃ ಕುಲಕರ್ಣಿಯವರು ಅದೇನೋ ಒಂದು ಪ್ರಕಾಶಕರ ಸಂಘದ ಅಧ್ಯಕ್ಷರಾಗಿದ್ದರು. ಅವರು ಅದೊಂದು ವರ್ಷ ವ್ಯವಾಹಾರ ನಿಮಿತ್ತ ನನ್ನಂಗಡಿಗೆ ಬಂದಿದ್ದಾಗ, ಸಂಘದ ವಾರ್ಷಿಕ ಪ್ರಶಸ್ತಿಯನ್ನು ನನಗೆ ಕೊಡುವ ಮಾತಾಡಿದರು. ನಾನು ನಿರಾಕರಿಸಿದೆ. ಅವರು ಪ್ರತಿ ವಾದ ಹೂಡಿದರು. “ನಿಮ್ಮ ಪ್ರಾಮಾಣಿಕತೆ, ಉದ್ಯಮದಲ್ಲಿನ ಶ್ರದ್ಧೆ ಮತ್ತು ಸಮಾಜದ ಬಗೆಗಿನ ಸದ್ವಿಚಾರಗಳು ಸಮ್ಮಾನಯೋಗ್ಯವಾಗಿವೆ.” ನಾನು “ನೀವು ಹೇಳಿದ ಅಷ್ಟೂ ಗುಣಗಳು ಯಾವುದೇ ವೃತ್ತಿಪರನಿಗೆ ಸಹಜವಾಗಿ ಇರಬೇಕಾದ ಗುಣಗಳು. ಇಂದು ಆಗಬೇಕಿರುವುದು ಅದಿಲ್ಲದವರನ್ನು ಆದ್ಯತೆಯಲ್ಲಿ ಶಿಕ್ಷಿಸುವ ಕೆಲಸ” ಎಂದು ಪ್ರಸ್ತಾವದ ಹುಟ್ಟಡಗಿಸಿಬಿಟ್ಟೆ.

ಕಾಸರಗೋಡಿನಿಂದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಹೆಸರಿನಲ್ಲಿ ಎರಡು ದೀರ್ಘ ಪತ್ರಗಳು, ತಲಾ ಎಂಟು ಪುಟದ ಎರಡು ಬ್ರೋಶರುಗಳ ದೊಡ್ಡ ಕವರೊಂದೂ ಬಂತು. ೨೦೦೬ ಡಿಸೆಂಬರ್ ೨೫, ೨೬ರಂದು ಅಲ್ಲಿ ನಡೆಯಲಿರುವ ‘ಅಖಿಲ ಕರ್ನಾಟಕ ರಾಜ್ಯ ಮಟ್ಟದ ೧೬ನೆಯ ಚುಟುಕು ಸಾಹಿತ್ಯ ಸಮ್ಮೇಳನ ೨೦೦೬’ರಲ್ಲಿ ನನಗೆ ‘ಸುವರ್ಣ ಕನ್ನಡಿಗ’ ಪ್ರಶಸ್ತಿಯನ್ನು ಕೊಡುವುದಾಗಿ ಘೋಷಿಸಿದ್ದರು. ಲಗತ್ತಿಸಿದ ಒಂದು ಬ್ರೋಶರಿನಲ್ಲಿ ಈ ಮಹಾ ಅದೃಷ್ಟ ಭಾಜನರಾದ ಇನ್ನೂ ಇನ್ನೂರಾ ಎಪ್ಪತ್ತೊಂಬತ್ತು (೨೭೯) ಮಂದಿಯ ಹೆಸರಿತ್ತು. ಸಾಲದೆಂಬಂತೆ ಐವತ್ತು ಕವನ ಸಂಕಲನಗಳಿಗೂ ಒಂದು ನೂರು ಸಾಹಿತ್ಯ ಕೃತಿಗಳಿಗೂ ಪ್ರಶಸ್ತಿ ಘೋಷಣೆಯಾಗಿತ್ತು! ವಿಶೇಷ ಸಮ್ಮಾನ, ಪ್ರಶಸ್ತಿಗಳು ಪ್ರತ್ಯೇಕ. ಸಮ್ಮಾನಿತರಿಗೆ ‘ಸಕುಟುಂಬಿಕರಾಗಿ ಬಂಧುಮಿತ್ರರೊಂದಿಗೆ ಆಗಮಿಸಿ’ ಎರಡೂ ದಿನಗಳ ಕಲಾಪಗಳಲ್ಲಿ ಭಾಗವಹಿಸಲು ಆಮಂತ್ರಣ ಕೊಟ್ಟಿದ್ದರು. ಆದರೆ ವಿಶೇಷ ಸೂಚನೆಯಲ್ಲಿ ‘ಯಾವುದೇ ಪ್ರಯಾಣ ವೆಚ್ಚ, ಗೌರವ ಧನ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಲ್ಲದೆ ‘ಪ್ರತಿಷ್ಠಾನಕ್ಕೆ ತಾವು ವೈಯಕ್ತಿಕವಾಗಿಯೂ ಅಥವಾ ತಮ್ಮ ಸಂಘ ಸಂಸ್ಥೆಗಳಿಂದಲೂ ದೇಣಿಗೆ ಸಹಾಯಧನವನ್ನು ಕೊಡಬೇಕಾಗಿ ನಿರೀಕ್ಷಿಸುತ್ತೇವೆ’ ಎಂದು ಮುಗಿಸಿದ್ದರು.

ಸುಮಾರು ಹತ್ತು ದಿನಗಳ ಮೊದಲು ನನಗೆ ಇದೇ ಸಂಸ್ಥೆಯಿಂದ ಅನಿರೀಕ್ಷಿತವಾಗಿ ಎರಡೋ ಮೂರೋ ಪುಟದುದ್ದದ ಪತ್ರ, ಅರ್ಜಿ ನಮೂನೆ ಬಂದಿತ್ತು. ಹೀಗೊಂದು ಪ್ರಶಸ್ತಿಗೆ ನಿಮ್ಮ ಹೆಸರನ್ನು ಪರಿಗಣಿಸುತ್ತಿದ್ದೇವೆ. ಅರ್ಜಿ ಭರ್ತಿ ಮಾಡಿ ಕಳಿಸಿ, ಅದರ ಸಾರಾಂಶ. ಅಂದೇ ಎರಡು ಯೋಚನೆ ಇಲ್ಲದೇ ಅದನ್ನು ಕಸಬುಟ್ಟಿಗೆ ರವಾನಿಸಿದ್ದೆ. ಈಗ ಅದಕ್ಕೂ ಮೀರಿದ ಬೆರಗಾಗಿ ಪ್ರಶಸ್ತಿ ಘೋಷಣೆಯೇ ಆಗಿತ್ತು. ನನಗೆ ಅಥವಾ ಉಳಿದೆಲ್ಲರಿಗೂ ಹೀಗೇ ಬಂದಿರಬಹುದಾದ ಮತ್ತದರಿಂದುಟಾಗುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುವುದಕ್ಕಾಗಿ ಪ್ರತಿಷ್ಠಾನದ ಅಧ್ಯಕ್ಷ ಎಂದು ಘೋಷಿಸಿಕೊಂಡ ಶಿವರಾಮ ಕಾಸರಗೋಡಿಗೆ ಬರೆದ ಪತ್ರದ ಯಥಾಪ್ರತಿ ಹೀಗಿದೆ.

“ನಮ್ಮ ಯಾವುದೇ ಪ್ರಯತ್ನವಿಲ್ಲದೆಯೂ ಕಾಲಪ್ರವಾಹ ನಡೆದಿರುತ್ತದೆ. ಅದಕ್ಕೆ ನಮ್ಮದೇ ಕಲ್ಪನೆಯ ಕಿರೀಟ ತೊಡಿಸಿ, ಇಂದು ‘ಸುವರ್ಣ ಕರ್ನಾಟಕ’ ಎಂದು ಹುಚ್ಚೇಳುತ್ತಿರುವುದು ಸಾರ್ವಜನಿಕ ಹಣದ ಅಪವ್ಯಯಕ್ಕೊಂದು ಉದಾತ್ತ ಮುಸುಕು. ಇಲ್ಲಿನ ಸಭೆ, ಪ್ರಶಸ್ತಿ, ಸಮ್ಮಾನ, ಮಾಧ್ಯಮಗಳ ಮಿಂಚು ಮೊದಲಾದವು ಈ ಆರ್ಥಿಕ ಅಪರಾಧದ ಸಲಕರಣೆಗಳು. ಅಪರಾಧದಲ್ಲಿ ನಾನು ಶಾಮೀಲಾಗುವಂತೆ, ಅದೂ ಅಯಾಚಿತವಾಗಿ ನನ್ನ ಹೆಸರು ಸೇರಿಸಿರುವುದು ತಪ್ಪು. ಈ ಕುರಿತು ನೀವು ಸಾರ್ವಜನಿಕ ಪ್ರಕಟಣೆ ಕೊಡುವುದು ಅವಶ್ಯ ಮತ್ತು ಅನಿವಾರ್ಯ.” ಈ ಪತ್ರದ ಪ್ರತಿಗಳನ್ನು ಪತ್ರಿಕೆಗಳಿಗೂ ವಿತರಿಸಿದ್ದೆ. ಹಲವು ಪತ್ರಿಕೆಗಳೇನೋ ಪ್ರಕಟಿಸಿದವು. ಸಂಘಟಕ ಉತ್ತರಿಸುವ ಗೋಜಿಗೆ ಹೋಗದೆ ನನ್ನಂಥ ಅಲ್ಪ ಸಂಖ್ಯಾತರನ್ನು ಮರೆತು ತನ್ನ ಕೆಲಸ ನಡೆಸಿಯೇಬಿಟ್ಟ. [ಇಂದಿಗೂ ಆ ಸಭೆಗೆ ಹೋಗಿ ನರಳಿದ, ಹೋಗದೇ ಬಚಾವಾದ ಹಲವು ಮಂದಿ ಅಲ್ಲಲ್ಲಿ ನನ್ನನ್ನು ಕಂಡಾಗ “ನೀವು ಸಕಾಲಿಕವಾಗಿ ಎಚ್ಚರಿಸಿದ್ದಿರಿ” ಎಂದು ನೆನಪಿಸಿಕೊಳ್ಳುತ್ತಾರೆ. ದುರಂತವೆಂದರೆ, ಮುಂದೊಂದು ದಿನ ಧಾರವಾಡದಲ್ಲಿ ಪಾಟೀಲ ಪುಟ್ಟಪ್ಪನವರ ಘನ ಅಧ್ಯಕ್ಷತೆಯಲ್ಲಿ ನಡೆದ ಗ್ರಂಥಪಾಲರ ಕಮ್ಮಟದಲ್ಲಿ ಇದೇ ಶಿವರಾಮ ಕಾಸರಗೋಡಿಗೆ ಸಮ್ಮಾನಗಳ ಸರದಾರನೆಂದೋ ಗಡಿನಾಡ ಕನ್ನಡಿಗನೆಂದೋ ಪ್ರಶಸ್ತಿ, ಸಮ್ಮಾನ ನಡೆದಾಗ ನಾನು ಸಾಕ್ಷಿಯಾಗಿದ್ದೆ. ಪಾಟೀಲ ಪುಟ್ಟಪ್ಪನವರು ಸಾಲ ತೀರಿಸುವ ಕ್ರಮ ಇದಾಗಿದ್ದಿರಬಹುದು. ನಾನು ಬೇರೊಂದೇ ಅವಧಿಗೆ ಕೇವಲ ಪ್ರಬಂಧಕಾರನಾಗಿ ಹೋಗಿದ್ದುದರಿಂದ ಏನೂ ಹೇಳಲಾಗಲೇ ಇಲ್ಲ!

ಕನ್ನಡದ ಓರ್ವ ಬಹುಮುಖೀ ಪ್ರತಿಭಾವಂತನ ಹೆಸರಿನಲ್ಲಿ ಮೂಡಬಿದ್ರೆಯ ಪ್ರತಿಷ್ಠಾನವೊಂದು ಪ್ರತಿ ವರ್ಷ ಒಂದೊಂದು ಸಾಹಿತ್ಯ ಪ್ರಕಾರದಲ್ಲಿ ಒಬ್ಬ ಹಿರಿಯ, ಮತ್ತೊಬ್ಬ ಉದಯೋನ್ಮುಖ ಸಾಹಿತಿಗೆ ಪುರಸ್ಕಾರ ಕೊಡುವ ಪರಿಪಾಠವಿದೆ. ಅದೊಂದು ವರ್ಷ ಆ ಪ್ರತಿಷ್ಠಾನದ ಕಾರ್ಯದರ್ಶಿ (ಪೂರ್ವಪರಿಚಿತನಾದ್ದರಿಂದ) ನನಗೆ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯದ ಅರ್ಜಿ ನಮೂನೆ ಕಳಿಸಿದ. ಮತ್ತು ಜಿ.ಟಿ ನಾರಾಯಣ ರಾಯರ (ನನ್ನ ತಂದೆ) ಪರವಾಗಿ, ಪ್ರತಿಷ್ಠಾನದ ನಿಬಂಧನೆಗಳ ಪ್ರಕಾರ ಅವರೆಲ್ಲ ವಿಜ್ಞಾನ ಪ್ರಕಟಣೆಗಳ ಪ್ರತಿ ಸಹಿತ ಅರ್ಜಿ ಗುಜರಾಯಿಸಲು ಸೂಚಿಸಿದ. (ಇಂಥವುಗಳಲ್ಲಿ ಒಲವಿಲ್ಲದ ಮತ್ತು ನೈತಿಕವಾಗಿ ಕೇಳಿ ಪಡೆಯುವ ಕ್ರಮವೇ ಹೀನಾಯ, ಸರಿಯಲ್ಲ ಎಂದೇ ಘೋಷಿಸುವ ತಂದೆಯವರನ್ನು ಆತ ನೇರ ಸಂಪರ್ಕಿಸಿರಲೇ ಇಲ್ಲ) ನಾನು ಪ್ರತಿನುಡಿಗೆ ವಿಳಂಬಿಸಲಿಲ್ಲ. “ಅಷ್ಟು ‘ದೊಡ್ಡ’ ಪ್ರಶಸ್ತಿಯನ್ನು ಪಡೆಯಬಲ್ಲ ಯೋಗ್ಯತಾವಂತರು ಜಿಟಿನಾ ಆಗಿದ್ದರೆ ಅವರ ನಾಲ್ಕು ಪುಸ್ತಕ ಕೊಳ್ಳುವುದು ನಿಮಗೆ ಹೊರೆಯಾಗಬಾರದು. ಹಾಗೇ ಪ್ರತಿಷ್ಠಾನದ ದಾಖಲೆಗಾಗಿಯಾದರೂ ಅರ್ಜಿ ನಮೂನೆಯಲ್ಲಿ ಸಮ್ಮಾನಿತನ ಮಾಹಿತಿಗಳು ಬೇಕಾದರೆ ನಿಮಗೆ ಪರೋಕ್ಷವಾಗಿ ಸಂಗ್ರಹಿಸುವುದು ಕಷ್ಟವಾಗದು. ಬದಲು ಅರ್ಜಿ, ಶಿಫಾರಸುಗಳ ಆಧಾರದಲ್ಲೇ ಯೋಗ್ಯತೆ ನಿರ್ಧಾರವಾಗುವುದಿದ್ದರೆ ನಮ್ಮ ಪ್ರಜಾಪ್ರತಿನಿಧಿಗಳ ಹೀನಾಯ ಇಲ್ಲಿಗೂ ಬಂದಂತಾಗಲಿಲ್ಲವೇ? (ನಮ್ಮ ಮತದಾರ ಪಟ್ಟಿ ಸದಾ ಅಪೂರ್ಣ. ಅದರಲ್ಲೂ ಸರಾಸರಿ ಅರವತ್ತು ಶೇಕಡಾ ಮತ ಚಲಾಯಿಸಿದರೆ ಭಾರೀ ಸಂಗತಿ. ಮತ್ತದರೊಳಗೆ ಅಸಿಂಧು, ಖೋಟಾ ಮತ್ತು ವಿವಿಧ ಪಕ್ಷಗಳ ಅಭ್ಯರ್ಥಿಗಳೊಳಗೆ ಹರಿಹಂಚಿಹೋಗುತ್ತದೆ. ಅವನ್ನೆಲ್ಲ ಮೀರಿ ಗೆದ್ದವನ ಯೋಗ್ಯಾಯೋಗ್ಯತೆ ಗಣಿಸದೆ ಇಡೀ ಸಮಾಜದ ಪ್ರತಿನಿಧಿ ಎಂದೊಪ್ಪಿಕೊಳ್ಳುವುದು ನಮಗೆ ಅನಿವಾರ್ಯವಾಗಿದೆ.)” ಎಂದೇ ಕಟಕಿದೆ. ಅರ್ಜಿ ತುಂಬಲಿಲ್ಲ, ಪುಸ್ತಕ ಕಳಿಸಲಿಲ್ಲ. ನಿರೀಕ್ಷೆಯಂತೆ ತಂದೆಗೆ ಪ್ರಶಸ್ತಿ ಬರಲಿಲ್ಲ.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ತುಮಕೂರು ಘಟಕಕ್ಕೆ ಅದೊಂದು ವರ್ಷ ಜಿಟಿನಾ ಅವರನ್ನು ಅಭಿನಂದಿಸಬೇಕೆನ್ನಿಸಿತು. ಪ್ರಯಾಣ, ವಾಸ ವ್ಯವಸ್ಥೆ ಕೊಟ್ಟು, ಕರೆಸಿಕೊಳ್ಳಲು ಪ್ರಯತ್ನವನ್ನೂ ಮಾಡಿದರು. ಆದರೆ ತಂದೆ ಎಂದಿನಂತೆ “ಪ್ರಯಾಣ ಮತ್ತು ದೇವರನ್ನು ನಾನು ಪ್ರಥಮ ಆದ್ಯತೆಯಲ್ಲಿ ತಿರಸ್ಕರಿಸುತ್ತೇನೆ” ಎಂದು ಬಿಟ್ಟರು. “ಹೋಗಲಿ, ಸಮಾರಂಭದಂದು ನಿಮ್ಮ ಪುಸ್ತಕಗಳನ್ನಾದರೂ ಪ್ರದರ್ಶಿಸುತ್ತೇವೆ. ಪೂರ್ಣ ಒಂದು ಕಟ್ಟು ಕಳಿಸಿಕೊಡಿ” ಎಂದಿತು ಕರಾವಿಪ. ತಂದೆ “ನಿಮ್ಮ ಸಮೀಪದ ಪುಸ್ತಕ ಮಳಿಗೆ ಸಂಪರ್ಕಿಸಿ. ಇಲ್ಲವಾದರೆ ನನ್ನ ಪ್ರಕಾಶಕನನ್ನು (ನನ್ನ ವಿಳಾಸ ಕೊಟ್ಟು) ಸಂಪರ್ಕಿಸಿ, ಸಂಗ್ರಹಿಸಿಕೊಳ್ಳಿ” ಎಂದರು. ಮರುದಿನ ಒಂದು ಹೆಣ್ಣು ಧ್ವನಿ ನನ್ನನ್ನು ದೂರವಾಣಿಯಲ್ಲಿ ತುಮಕೂರಿನಿಂದ ಸಂಪರ್ಕಿಸಿ, ಸಭೆಯ ವಿವರ ಹೇಳಿ, ಜಿಟಿನಾ ಪೂರ್ಣ ಪ್ರಕಟಣೆಗಳ ಒಂದು ಕಟ್ಟನ್ನು ಪ್ರದರ್ಶನಕ್ಕೆ ಕಳಿಸಿ ಕೊಡಲು ಆದೇಶಿಸಿತು. ನಾನು ಸೌಮ್ಯವಾಗಿಯೇ “ಪ್ರಶಸ್ತಿಯೋ ಪ್ರದರ್ಶನವೋ ನಿಮ್ಮ ವ್ರತ. ಅದು ಫಲಪ್ರದವಾಗಲು ಪುಸ್ತಕಗಳು ಬೇಕಿದ್ದರೆ ನೀವು ಖರೀದಿಸಬೇಕು” ಎಂಬರ್ಥದ ಸೂಚನೆ ಕೊಟ್ಟೆ. ಆದರೆ ಸಂಘಟಕರ ಸಂಕಲ್ಪ ಶುದ್ಧವಿದ್ದುದರಿಂದ, ವಕ್ತಾರೆಯ ದೋಷ ನುಂಗಿಕೊಂಡು, ನಗದು ಕಳಿಸಿ ಪುಸ್ತಕ ತರಿಸಿಕೊಂಡರು.

ಮೊನ್ನೆ (೨೦೦೭ರ ಮಾತಿದು) ಅಕ್ಟೋಬರ್ ೨೯ರ ಪೂರ್ವಾಹ್ನ ಮೈಸೂರಿನಿಂದ ತಂದೆ ದೂರವಾಣಿಸಿದ್ದರು. “ಈಗ ಯಾವುದೋ ಟೀವಿಯವರಿಂದ ಸುದ್ದಿ ಬಂದಿದೆ. ನವೆಂಬರ್ ಒಂದರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ನನ್ನ ಹೆಸರಿದೆಯಂತೆ. ಆ ಕೂಡಲೇ ನಾನು ಹೇಳಿದೆ, ನಾನು ಅರ್ಜಿ ಹಾಕಿಲ್ಲ, ಯಾರ ಮೂಲಕವೂ ಹೇಳಿ ಕಳಿಸಿಲ್ಲ. ನಿಮ್ಮ ಸುದ್ದಿ ಮೂಲವನ್ನು ಇನ್ನೊಮ್ಮೆ ತಟ್ಟಿ ನೋಡಿ, ಸುದ್ದಿ ಖಾತ್ರಿಪಡಿಸಿಕೊಳ್ಳಿ. ಅದು ನನ್ನ ಹೆಸರಲ್ಲವಾದರೆ ನಾನು ಖಂಡಿತಾ ದುಃಖಿಯಲ್ಲ. ಅದು ಹೌದಾದರೆ ಸಂಭ್ರಮಿಸುವ ಭ್ರಾಂತಿ ನನಗಿಲ್ಲ.”

ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ವಾರ್ಷಿಕ ಸಾಹಿತ್ಯ ಪ್ರಶಸ್ತಿ ಕೊಡುವುದು ನಮಗೆಲ್ಲ ತಿಳಿದದ್ದೇ. ಒಮ್ಮೆ ನನ್ನನ್ನು ಅಕಾಡೆಮಿ ಪ್ರವಾಸ ಸಾಹಿತ್ಯಕ್ಕೆ (ಬಹುಶಃ ಮೂವರಲ್ಲಿ) ತೀರ್ಪುಗಾರರಲ್ಲಿ ಒಬ್ಬನನ್ನಾಗಿ ನಿಯೋಜಿಸಿದ್ದರು. ಮತ್ತೆಂದೋ ಅಕಾಡೆಮಿಯಿಂದ ಒಂದು ಕಟ್ಟಿನಲ್ಲಿ ಐದೋ ಆರೋ ಪುಸ್ತಕಗಳು ಬಂದವು. ಒಂದೆರಡನ್ನು ಬಿಟ್ಟು ಎಲ್ಲವೂ ಕಳಪೆ ಮಾಲುಗಳು! ಪುಸ್ತಕ ವ್ಯಾಪಾರಿಯಾಗಿ ನನಗೆ ಸ್ಪಷ್ಟವಾಗಿ ತಿಳಿದಿತ್ತು – ಆ ವರ್ಷ ಕನ್ನಡಕ್ಕೇನೂ ವಿಶೇಷ ಅನಾರೋಗ್ಯ ಕಾಡಿರಲಿಲ್ಲ. ಯಾಕೆ ಹೀಗೆ ಎಂದು ಪರಿಶೀಲಿಸಿದಾಗ ತಿಳಿಯಿತು – ಅಕಾಡೆಮಿಗೆ ಅರ್ಜಿ ಸಹಿತ, ತಮ್ಮ ಕೃತಿಗಳನ್ನು ಕಳಿಸಿಕೊಟ್ಟವರು ಇಷ್ಟೇ ಜನ. ಈ ಪುಸ್ತಕಗಳಲ್ಲಿ ಒಳ್ಳೆಯದನ್ನು ಆಯುವ ಕೆಲಸ (ಅಳಿದೂರಿಗೆ ಉಳಿದೋನು ಯಾರು!?) ಮಾತ್ರ ನನ್ನದು. ಒಟ್ಟು ತಿರಸ್ಕರಿಸುವ, ಔಪಚಾರಿಕ ದಾರಿಯಲ್ಲಿ ಬಾರದ ಹೊರಗಿನವನ್ನು ಪರಿಗಣಿಸುವ ಸ್ವಾತಂತ್ರ್ಯ ನನಗಿರಲಿಲ್ಲ. ನನ್ನ ತೀರ್ಮಾನ ನನಗೆ ಏನೇನೂ ಸಂಪರ್ಕವಿಲ್ಲದ (ಪರಿಚತರೂ ಅಲ್ಲದ) ಇತರ ಪರೀಕ್ಷಕರ ಅಭಿಪ್ರಾಯಗಳೊಡನೆ ಸೇರಿ ಸರಾಸರಿಯಲ್ಲೋ ಅಕಾಡೆಮಿಯ ಪದಾಧಿಕಾರಿಗಳ ಖಯಾಲಿಯಲ್ಲೋ ‘ವರ್ಷದ ವಿಜೇತ’ ಘೋಷಣೆಯಾಯ್ತು.

ಸಾಹಿತ್ಯ ಅಕಾಡೆಮಿ ಕಾದಂಬರಿ, ಕವನ, ನಾಟಕ, ವಿಮರ್ಶೆ, ವಿಜ್ಞಾನ, ಜನಪದ ಇತ್ಯಾದಿ ಎಷ್ಟೋ ಸಾಹಿತ್ಯ ಪ್ರಕಾರಗಳಲ್ಲಿ ಪ್ರಶಸ್ತಿ ಘೋಷಿಸುತ್ತದೆ. ಅಕಾಡೆಮಿಯಿಂದ ಸ್ವಲ್ಪ ಈಚೆಗೆ ಬಂದರೆ ಅವುಗಳಲ್ಲಿ ನಾಟಕ, ಜನಪದ, ಲಲಿತಕಲೆ, ಪತ್ರಿಕೋದ್ಯಮ, ಅನುವಾದ ಎಂದಿತ್ಯಾದಿ ಪ್ರಕಾರಗಳಿಗೆ ಪ್ರತ್ಯೇಕ ಅಕಾಡೆಮಿಗಳೇ ಇವೆ ಮತ್ತವೂ ಹೀಗೆ ಪ್ರತ್ಯೇಕ ‘ಬಟವಾಡೆ’ ವ್ಯವಸ್ಥೆ ಮಾಡುತ್ತವೆ. ಈ ಎಲ್ಲಾ ಅಕಾಡೆಮಿಗಳು, ಪ್ರಾಧಿಕಾರಗಳು, ತೋರಿಕೆಗೆ ಸ್ವಾಯತ್ತ ಎನ್ನುವಂತೇ ಕಾಣುವ ಕಸಾಪಾದಿ ಹಲವು ಸಂಘ ಸಂಸ್ಥೆಗಳು ತಮ್ಮ ಕಡಿಯದ ಹೊಕ್ಕುಳ ಸಂಬಂಧಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನೇ ಅವಲಂಬಿಸಿವೆ. ಈ ಇಲಾಖೆಯಿಂದಲೂ ಹೊರಗೆ ಬಂದಾಗಲೂ ನಮಗೆಷ್ಟೋ ವಿಷಯಗಳಲ್ಲಿ ಮತ್ತೆ ಶಿಕ್ಷಣ, ಕೃಷಿ, ಆರೋಗ್ಯ ಎಂದಿತ್ಯಾದಿ ಸ್ವತಂತ್ರವಾದ ಇಲಾಖೆಗಳು ಕಾಣುತ್ತವೆ. ಮತ್ತೆ ಅಲ್ಲೂ ವಿವಿಧ ಬಟವಾಡೆ ವ್ಯವಸ್ಥೆಗಳು ಇವೆ ಮತ್ತು ಒಟ್ಟಾರೆ ಇಂಥವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೂ ಇವೆ. ಇನ್ನೂ ತಮಾಷೆ ಎಂದರೆ ಇಂಥವನ್ನು ಶುರುಮಾಡಿದವರೆಲ್ಲ ಕೀರ್ತಿ ಭಾಜನರಾಗುತ್ತಾರೆ. ಅವೆಷ್ಟು ವ್ಯರ್ಥವೆಂದರೂ ವಿಮರ್ಶಿಸಿದವ ಖಳನಾಗುತ್ತಾನೆ, ಬರ್ಖಾಸ್ತು ಮಾಡಲಂತೂ ಸಾಧ್ಯವೇ ಇಲ್ಲ! [ಯಾವ್ಯಾವುದೋ ದೇವರ, ಆಚರಣೆಯ ಹೆಸರಿನಲ್ಲಿ ಕೊಳಕು ಜೋಪಡಿ ವ್ಯವಸ್ಥೆ ಮಾಡುವ ಗೌರವಾನ್ವಿತ ಬಿಕ್ಷುಕರು ನನ್ನಂಗಡಿಯಲ್ಲಿ ಬಂದು ಹೇಳುವುದು ಕೇಳಿದ್ದೇನೆ “ನೀವು ಕಳೆದ ವರ್ಷ ಕೊಟ್ಟಿದ್ದೀರಿ.” ಇದರಲ್ಲಿ ಸಂಪ್ರದಾಯ ಮುರಿಯಬೇಡಿ ಎಂಬ ಸ್ಪಷ್ಟ ಬೆದರಿಕೆ ಇರುತ್ತದೆ. ಆದರೆ ಅವರ ದುರದೃಷ್ಟಕ್ಕೆ ನನ್ನ ನೆನಪೂ ವಿವೇಚನೆಯೂ ಈ ವಿಚಾರದಲ್ಲಿ ಕೈಕೊಟ್ಟದ್ದಿಲ್ಲ; ಇಂಥವಕ್ಕೆ ನಾನೆಂದೂ ವಂತಿಗೆ ಕೊಟ್ಟವನಲ್ಲ] ಇವೆಲ್ಲದರ ಖರ್ಚು, ಸಮಾರಂಭದ ವೆಚ್ಚ, ಮತ್ತೂ ಮುಖ್ಯವಾಗಿ ಒಟ್ಟಾರೆ ವ್ಯವಸ್ಥೆಯ ಔಚಿತ್ಯವನ್ನು ಲೆಕ್ಕ ಹಾಕಿದವರು ವಿರಳಾತಿವಿರಳ. ಅಷ್ಟಾಗಿಯೂ ವರ್ಷದಿಂದ ವರ್ಷಕ್ಕೆ ಸಂತೃಪ್ತರ ಸಂಖ್ಯೆಗಿಂತ ಅವಕಾಶವಂಚಿತರ ಹುಯಿಲೇ ಹೆಚ್ಚಾಗುತ್ತಿದೆ!

ಮೈಸೂರಿನ ಖ್ಯಾತ ಪ್ರಕಾಶಕ, ಚಿಂತಕ ಡಿವಿಕೆ ಮೂರ್ತಿಯವರಿಗೆ [ಇವರು ಇಂದು ನಮ್ಮೊಡನಿಲ್ಲ] ಅದೊಂದು ವರ್ಷ ಕನ್ನಡ ಪುಸ್ತಕ ಪ್ರಾಧಿಕಾರ ತನ್ನ ವಾರ್ಷಿಕ ‘ಕನ್ನಡದ ಉತ್ತಮ ಪ್ರಕಾಶಕ’ ಪ್ರಶಸ್ತಿ ಕೊಡುವುದೆಂದು ನಿರ್ಧರಿಸಿತು. ಈ ಕುರಿತು ಸಾರ್ವಜನಿಕ ಘೋಷಣೆಯ ಮೊದಲು ಕಪುಪ್ರಾ ಡಿವಿಕೆಯಿಂದ ಒಪ್ಪಿಗೆ ಕೋರಿತು. ಹೇಳಿದರೇ “ಎಸ್”? ಇಲ್ಲ, ಎರಡು ಪುಟದುದ್ದದ ಸವಿನಯ ಪತ್ರ ಬರೆದು ತಿರಸ್ಕರಿಸಿಬಿಟ್ಟರು! ಅವರ ಪತ್ರ ಸುದ್ದಿಯಾಗಲಿಲ್ಲ, ಆ ವರ್ಷದ ಪ್ರಶಸ್ತಿ ಇನ್ಯಾರಿಗೋ ಹೋಯ್ತು. ಮುಂದೆಯೂ ‘ಸಂಪ್ರದಾಯ’ಕ್ಕೆ ಚ್ಯುತಿ ಬರಲಿಲ್ಲ. ಹೆಸರಿಗೆ ಸಾರ್ವಜನಿಕ ಸಂಸ್ಥೆಗಳೇ ಆದ ಅಕಾಡೆಮಿಗಳು, ಪ್ರಾಧಿಕಾರಗಳು, ಇಲಾಖೆಗಳು ಆತ್ಮನಿರೀಕ್ಷೆ ಬಿಡಿ, ವಿಮರ್ಶೆಯನ್ನೂ ಒಪ್ಪಿ ನಡೆದದ್ದಿಲ್ಲ. ಸಾಧ್ಯವಾದರೆ ಟೀಕಾಕಾರರನ್ನು ಕೊಳ್ಳಲು ನೋಡುತ್ತವೆ. ಅಸಾಧ್ಯವಾದರೆ ಶಿಕ್ಷಿಸಲೂ ಹೊಂಚುತ್ತವೆ! ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ನನ್ನ ‘ಪುಸ್ತಕ ಮಾರಾಟ ಹೋರಾಟ’ ಪುಸ್ತಕದಲ್ಲಿ ಗಮನಿಸಬಹುದು. ಮತ್ತೂ ಈಚಿನವು ಹಲವಿವೆ. ಆದರೆ ಉಲ್ಲೇಖಿಸಿ, ವಿಸ್ತರಿಸಲು ಇದು ಸಂದರ್ಭವಲ್ಲ.

ಪ್ರಜಾಸತ್ತೆಯಲ್ಲಿ ಚುನಾವಣೆಯ ವಿಜೇತ ಎಂದರೆ ಕೇವಲ ಒಂದು ಅವಧಿಯ ಸೇವಾ ಸನದಿನ ಹಕ್ಕುದಾರ. ಆದರಿಂದು ಆರಿಸಿ ಬರುವವರು ‘ಸನ್ಮಾನ್ಯರೋ,’ ‘ಅತಿ ವಂದನೀಯರೋ’ ಆಗಿ ರಾಜಸತ್ತೆಯ ಅವಗುಣಗಳನ್ನೆಲ್ಲ ಆರೋಪಿಸಿಕೊಳ್ಳುತ್ತಿದ್ದಾರೆ. ವಿಜಯೋತ್ಸವದಿಂದ ತೊಡಗುವ ಇವರ ಹುಚ್ಚು, ನಿಂತ ಮೆಟ್ಟಿನಲ್ಲಿ ಪ್ರಶಸ್ತಿ, ಪುರಸ್ಕಾರ ಪ್ರದಾನಿಸುವವರೆಗೂ ಹಬ್ಬಿದೆ! (ಟ್ವೆಂಟಿ ಟ್ವೆಂಟಿ ಉತ್ತಪ್ಪನಿಗೆ ಡಬ್ಬಲ್ ಧಮಾಕಾ – ಕೇರಳದಿಂದಲೂ ಕರ್ನಾಟಕದಿಂದಲೂ ಧನವರ್ಷ.) ಸಮಾಜಪರ ವಿನಿಯೋಗ ಆಗಬೇಕಾದ್ದೆಲ್ಲ ಕೇವಲ ಉತ್ಸವದ ಬೂಟಾಟಿಕೆಗಳಲ್ಲಿ ಕರಗಿಹೋಗುತ್ತಿದೆ. [ವ್ಯಕ್ತಿಪರ ಎಂದು ತೋರುವುದು ಆಕಸ್ಮಿಕ. ವ್ಯಕ್ತಿ ಇಲ್ಲಿ ನೆಪಮಾತ್ರ. ಇಲ್ಲವಾದರೆ ‘ವರ್ಷದ ವ್ಯಕ್ತಿ’ಯಾಗುವ ನನ್ನನ್ನು ಹಿಂದಿನ ರಾತ್ರಿ ಕರೆದು, ಅಷ್ಟೇ ನಿರುಮ್ಮಳವಾಗಿ ಬಿಟ್ಟು, ಮಾರಣೇ ದಿನ ನನ್ನ ಉಲ್ಲೇಖವೂ ಇಲ್ಲದೆ ದಿನಾಚರಣೆ ನಡೆಯಲಿಲ್ಲವೇ? ವರ್ಷ ೨೦೧೦ ಮತ್ತು ೨೦೧೧ರ ಪಂಪ ಪ್ರಶಸ್ತಿಗೆ ಹೆಸರು ‘ಘೋಷಿತ’ರಾದ ವ್ಯಕ್ತಿಗಳನ್ನು ಇನ್ನೂ ಸರಕಾರ ‘ಪಾಪ್ತ’ರನ್ನಾಗಿಸಿಲ್ಲ; ೨೦೧೨ ಇನ್ನೇನು ಮುಗಿಯುವುದರಲ್ಲಿದೆ! ಅಂಥವರನ್ನು ಸಗಟು ಸಮಾರಂಭಗಳಲ್ಲಿ ‘ಪಾತ್ರ’ರಾದಂತೆ ಕಾಣಿಸಿಯೂ ಚೆಕ್ಕೋ ಪದಕವೋ ಸವಲತ್ತೋ ಮುಟ್ಟಿಸದ ಉದಾಹರಣೆಗಳ ಬಗ್ಗೆ ಕೆದಕಿದರೆ ಬಹುಶಃ ಪುಸ್ತಕವನ್ನೇ ಬರೆಯಬಹುದು.] ಪ್ರಶಸ್ತಿ, ಪುರಸ್ಕಾರಗಳೆಲ್ಲ ಕ್ಷೇತ್ರದ ಫಲವಂತಿಕೆಯನ್ನು ಹೆಚ್ಚಿಸುವಂತಿರಬೇಕು, ಕನಿಷ್ಠ ಕೊಡುವ ಸಂಸ್ಥೆಯ ಪಾರಮ್ಯವನ್ನಾದರೂ ಮೆರೆಯಿಸುವಂತಿರಬೇಕು. [ಇಲ್ಲೇ ಹಿಂದಿನ ಲೇಖನ ‘ಪಂಚಮದಿಂಚರ’ದಲ್ಲಿ ನಡೆದ ಕಲಾವಿದ ಸಮ್ಮಾನ ಇಂಥಾ ಒಂದು ಆದರ್ಶಕ್ಕೆ ಉದಾಹರಣೆ.] ಆದರೆ ಹೆಚ್ಚಿನೆಲ್ಲಾ ಪ್ರಶಸ್ತಿ, ಪುರಸ್ಕಾರಗಳು ಕೊಡುವವನ ಔದಾರ್ಯ ಮೆರೆಯಿಸುವ, ಎಷ್ಟೋ ಬಾರಿ ನೆಪಮಾತ್ರದ ಸಂಸ್ಥೆಯ ವರಿಷ್ಠನ ‘ಸೇವಾ ದಾಖಲೆ’ ಹೆಚ್ಚಿಸುವ ವಿನಿಯೋಗ ಆಗುವುದು ದೊಡ್ಡ ದುರಂತ. ಈ ವರಿಷ್ಠರು (ಪುಡಾರಿ ಇರಬಹುದು, ಅಧಿಕಾರಿಯೂ ಇರಬಹುದು) ತಾವಲಂಕರಿಸಿದ ಸ್ಥಾನದ ಘನತೆಗಾಗಿ ವೈಯಕ್ತಿಕ ಯೋಗ್ಯತೆ ಹೆಚ್ಚಿಸಿಕೊಳ್ಳಬೇಕು. ಇಂಥ ಡೊಂಬರಾಟ ಮಾಡಿ, ಇದ್ದದ್ದನ್ನೂ ಕಳೆದುಕೊಳ್ಳುವುದು ಕಾಣುವಾಗ ನನಗೇನು, ಯಾರಿಗೂ ಪ್ರಶಸ್ತಿ ಮೋಹ ಹರಿಯಲೇಬೇಕು!