[ಭವಿಷ್ಯ ವಿಜ್ಞಾನ – ಲೇಖಕ ಜಿ.ಟಿ. ನಾರಾಯಣ ರಾವ್
೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨]
[ಎರಡನೇ ಕಂತು]

ಕವಿ ಖಲೀಲ್ ಗಿಬ್ರಾನ್ ಬರೆದಿರುವ Vision ಭಾವಾನುವಾದ: ಸ್ಫಟಿಕ ನಿರ್ಮಲ ಸಲಿಲದ ತೊರೆ, ಬಳಿಯಲ್ಲೇ ಹುಲುಸಾದ ಹೊಲ. ನಡುವಿನಲ್ಲೊಂದು ಹಕ್ಕಿಪಂಜರ – ಒಬ್ಬ ಯಂತ್ರಪರಿಣತ ರಚಿಸಿದ ಕಲಾಕೃತಿಯೋ ಎಂಬಂತಿತ್ತು ಅದರ ಸರಳುಗಳ ಜೋಡಣೆ ಮತ್ತು ಬಿಜಾಗರದ ಅಳವಡಿಕೆ. ಪಂಜರದ ಮೂಲೆಯಲ್ಲೊಂದು ಮೃತಪಕ್ಷಿ. ಎದುರು ಮೂಲೆಯಲ್ಲಿ ಎರಡು ಬೋಗುಣಿಗಳು: ಒಂದರಲ್ಲಿ ನೀರು ಖಾಲಿ, ಇನ್ನೊಂದರಲ್ಲಿ ಕಾಳು ನಾಸ್ತಿ. ಅಲ್ಲೇ ನಿಂತೆ ನಿವೇದಿತನಾಗಿ – ಆ ಜೀವರಹಿತ ಪಕ್ಷಿ ಮತ್ತು ನೀರಿನ ಕಲರವ ಎರಡೂ ಗಂಭೀರ ಮೌನ ಮತ್ತು ಪರಮಗೌರವ ಭಾಜನವಾಗಿದ್ದುವೋ ಹೃದಯ ಮತ್ತು ಮನಸ್ಸಾಕ್ಷಿಗಳ ಪರಿಗಣನೆಗೆ ಅರ್ಹವಾದ ವಿಶೇಷಗಳೋ ಎಂಬಂತೆ.

ನೋಡುತ್ತ ಬಗೆಯುತ್ತ ತನ್ಮಯತೆ ತಳೆಯುತ್ತ ನಿಂತಿದ್ದಂತೆ ಗೊತ್ತಾಯಿತು: ಬಾಳ ತೊಟ್ಟಿಲಾದ ನೀರ ಸೆಲೆಯ ಬಳಿಯಲ್ಲೇ ಆ ಮುಗ್ಧ ಜಂತು ತೃಷೆಯಿಂದ, ಅಂತೆಯೇ ಸಮೃದ್ಧ ಪೈರು ಪಚ್ಚೆಯ ಕಡಲ ನಡುವಲ್ಲೇ ಹಸಿವಿನಿಂದ ಅಸುನೀಗಿತ್ತು – ಕಬ್ಬಿಣದ ಪೆಠಾರಿಯೊಳಗೆ ಬಂಧಿತನಾದ ಶ್ರೀಮಂತ, ಹೊನ್ನ ಹೆಗ್ಗೆಗಳ ನಡುವೆಯೇ ಅಶನವಿಲ್ಲದೆ ಮಡಿದಂತೆ.

ನನ್ನ ಕಣ್ಣೆದುರೇ ಹಠಾತ್ತನೆ ಆ ಪಂಜರ ಮಾನವ ಕಂಕಾಲವಾಗಿಯೂ ಮೃತಪಕ್ಷಿ ಮಾನವ ಹೃದಯವಾಗಿಯೂ ರೂಪ ಪರಿವರ್ತನೆಗೊಂಡುದನ್ನು ಕಂಡೆ. ದುಃಖತಪ್ತ ಸ್ತ್ರೀಯ ತುಟಿಗಳಿಂದ ರಕ್ತ ಒಸರುವಂತೆ ಆ ಹೃದಯದಿಂದ ಜೀವರಸ ಜಿನುಗುತ್ತಿತ್ತು. ಗಾಯಕ್ಕೆ ಬಂತು ಬಾಯಿ “ನಾನು ಮಾನವ ಹೃದಯ – ವಿಧಿಜಾಲಗಳ ಕೈದಿ, ನೆಲದ ನಿಯಮಗಳ ಬಂಧಿ.

“ಭಗವಂತನ ಔದಾರ್ಯಸಾಗರದ ವಿಸ್ತಾರದಲ್ಲಿ, ಈ ಜೀವನದಿಯ ಅಂಚಿನಲ್ಲಿ, ನಾನು ಮನುಷ್ಯಕೃತ ಬೋನಿನಲ್ಲಿ ಸೆರೆಹಿಡಿಯಲ್ಪಟ್ಟೆ. “ಭಗವಂತ ಅನುಗ್ರಹಿಸಿದ ಸಮೃದ್ಧಿಯನ್ನು ಸವಿಯುವ ಮುಕ್ತಾವಕಾಶ ವಂಚಿತನಾಗಿ ಸುಂದರಸೃಷ್ಟಿಯ ನಡುವಿನಲ್ಲೇ ಮರಣವಪ್ಪಿದೆ. “ನನ್ನೊಳಗೆ ಅನುರಾಗ ಮತ್ತು ಹಂಬಲ ಪ್ರೇರಿಸುವ ಸೌಂದರ್ಯದ ಪ್ರತಿಯೊಂದು ಛಾಯೆಯೂ ಮನುಷ್ಯನ ದೃಷ್ಟಿಯಲ್ಲಿ ಅಸಹ್ಯ. ಒಳ್ಳೆಯದೆಲ್ಲಕ್ಕೂ ನಾನು ಹಾತೊರೆಯುತ್ತೇನೆ. ಆದರೆ ಆತನ ತೀರ್ಮಾನದಲ್ಲಿ ಅದಕ್ಕೆ ದುಗ್ಗಾಣಿ ಬೆಲೆಯೂ ಇಲ್ಲ. “ನಾನಾರು ಗೊತ್ತೇ? ವಿನಷ್ಟಗೊಂಡ ಮಾನವ ಹೃದಯ. ಮನುಷ್ಯನ ಕ್ರೂರ ಆಣತಿಗಳ ಹೊಲಸು ನೆಲಮಾಳಿಗೆಯಲ್ಲಿ ಕೈದಿ. ಈ ಪಾಶವೀ ನೆಲದ ಅಧಿಕಾರ ಸರಪಳಿಗಳು ನನ್ನ ಕೈಕಾಲು ಕಟ್ಟಿ ಹಾಕಿವೆ. ನಾನು ಸತ್ತು ಹೋಗಿದ್ದೇನೆ. ಕೆಲೆತ ಉಲಿತಗಳಲ್ಲಿ ಉನ್ಮತ್ತರಾಗಿರುವ ಜನಮಂದಿ ನನ್ನನ್ನು ಮರೆತಿದ್ದಾರೆ. ಅವರ ನಾಲಗೆಗಳು ಸೀದು ಹೋಗಿವೆ, ಕಣ್ಣುಗಳು ಅಶ್ರು ಶೂನ್ಯವಾಗಿವೆ.” ಶಬ್ದಗಳು – ಹೃದಯವಿದ್ರಾವಕ ಮಾರ್ದನಿಗಳು – ಕೇಳಿದೆ ನಾನವನ್ನು. ಗಾಸಿಗೊಂಡಿದ್ದ ಆ ಹೃದಯದಿಂದ ಕ್ರಮೇಣ ಕೃಶವಾಗುತ್ತ ಒಸರುತ್ತಿದ್ದ ಜೀವದ ಮರ್ಮರವನ್ನು ಕೇಳಿದೆ. ಅದು ಇನ್ನೂ ಏನನ್ನೋ ಉಸುರುತ್ತಿತ್ತು. ಆದರೆ ಮಂಜು ಕವಿದಿದ್ದ ದೃಷ್ಟಿ ಮತ್ತು ರೋದಿಸುತ್ತಿದ್ದ ಹೃದಯ ಇನ್ನಷ್ಟು ಕಾಣುವುದನ್ನಾಗಲೀ ಕೇಳುವುದನ್ನಾಗಲೀ ಆಗಗೊಡಲಿಲ್ಲ.

ಪ್ರಾಣವಾಯು ಆಘಾತ – ನಾಲ್ಕು
ಪ್ರಾಣಿ ವಿಜ್ಞಾನ ಪ್ರಾಧ್ಯಾಪಕ ಹಾ. ಬ. ದೇವರಾಜ ಸರ್ಕಾರರು ಹೇಳಿದ ಕತೆ.

ಈ ಶತಮಾನದ ಆದಿಯ ಸುಂದರ ಸುಕುಮಾರ ಕಲ್ಕತ್ತಾ ನಗರದಲ್ಲಿ ಬಸು ಮತ್ತು ಯಾದವ ಎಂಬ ಇಬ್ಬರು ವಿದ್ಯಾರ್ಥಿಗಳು ಸಹಪಾಠಿ ಮಿತ್ರರಾಗಿದ್ದರು. ಬಸು ಆ ನಗರದವನೇ. ಯಾದವನಾದರೋ ಅತಿ ದೂರದ ಯಾವುದೋ ದುರ್ಗಮಾಭೇದ್ಯ ಕುಗ್ರಾಮದಿಂದ ವಿದ್ಯಾರ್ಜನೆಗೆಂದೇ ನಗರಕ್ಕೆ ಬಂದಿದ್ದ. ಇಬ್ಬರ ನಡುವೆ ಗಾಢಸ್ನೇಹ ವರ್ಧಿಸಿತು. ಲವಕುಶರಂತೆ ಕಲಿತರು, ಬೆಳೆದರು, ಅರಳಿದರು, ಪದವೀಧರರೂ ಆದರು. ಇಪ್ಪತ್ತರ ಏರು ಹರೆಯದಲ್ಲಿ ಅವರ ಹಾದಿ ಕವಲೊಡೆಯಿತು. ಬಸು ಕಲ್ಕತ್ತಾದಲ್ಲಿ ವಕೀಲಿಕೆ ಕಸಬು ಹಿಡಿದ, ಯಾದವ ತನ್ನ ಹಳ್ಳಿಯಲ್ಲಿ ರೈತನಾಗಿ ನೆಲಸಿದ. ಪತ್ರ ಸ್ನೇಹ ಎಡೆಬಿಡದೆ ಮುಂದುವರಿಯಿತು. ಯಾದವ ಹಲವು ವರ್ಷಗಳಿಗೆ ಒಮ್ಮೆಯಾದರೂ ಕಲ್ಕತ್ತಾಕ್ಕೆ ಸುದೀರ್ಘ ಪ್ರಯಾಣ ಮಾಡಿ ಬಂದು ಸ್ನೇಹಿತನ ಜೊತೆ ನಾಲ್ಕು ದಿನ ತಂಗಿದ್ದು ಹಳೆಯ ನೆನಹುಗಳನ್ನು ಮರುಸವಿದು ಮತ್ತು ಹೊಸ ಅನುಭವಗಳನ್ನು ಹಂಚಿಕೊಂಡು ಜಮೀನಿಗೆ ಮರಳುತ್ತಿದ್ದ. ಬಸು ಎಷ್ಟು ಪ್ರಯತ್ನಿಸಿದರೂ ಒಮ್ಮೆ ಕೂಡ ಗೆಳೆಯನ ನೆಲೆಗೆ – ನಿಸರ್ಗದ ಮಡಿಲಿಗೆ ಹಸುರಿನ ಒಡಲಿಗೆ ಪ್ರಾಣವಾಯುವಿನ ಕಡಲಿಗೆ – ಹೋಗಲು ಸಾಧ್ಯವಾಗಲಿಲ್ಲ. ವೃತ್ತಿ ಒತ್ತಡದ ನಡುವೆ ಅಷ್ಟು ದೀರ್ಘ ವಿರಾಮ ಹೊಂದಿಸಿಕೊಳ್ಳುವುದು ಹೇಗೆ!

ವಯಸ್ಸು ಪಡುವಲಿಗೆ ಹೊರಳಿತು. ಎಂಬತ್ತರ ಇಳಿಹರೆಯದಲ್ಲಿ ಬಸುವಿಗೆ ಎಲ್ಲವೂ ಇದ್ದುವು: ಶ್ರೀಮಂತಿಕೆ, ಆರೋಗ್ಯ, ಕೌಟುಂಬಿಕ ಸ್ವಾಸ್ಥ್ಯ, ಆಧುನಿಕ ಜೀವನ ಸೌಕರ್ಯಗಳು ಮತ್ತು ಪೂರ್ತಿ ವಿಶ್ರಾಂತಿ. ಆದರೆ ತೃಪ್ತಿ? ಸಾಯುವ ಮೊದಲು ಒಮ್ಮೆಯಾದರೂ ಮಿತ್ರನ ಜೊತೆ ಹಾಯಾಗಿ ಇರಬೇಕು, ಹರಟಬೇಕು, ಕೆಲೆಯಬೇಕು ಎಂಬ ಹಿಂಗದ ಬಯಕೆ ದಿನೇ ದಿನೇ ಅಧಿಕಾಧಿಕವಾಗಿ ಬಾಧಿಸತೊಡಗಿತು. ತಾನು ಅಷ್ಟು ದೂರ ದೈಹಿಕ ದಂಡಯಾತ್ರೆ ನಿರ್ವಹಿಸಲಾರೆ. ಇನ್ನು ಆ ಕುಗ್ರಾಮದಲ್ಲಿ ಕನಿಷ್ಠ ನಾಗರಿಕ ಸೌಕರ್ಯಗಳಾದರೂ ಇವೆಯೋ ಇಲ್ಲವೋ ತಿಳಿಯದು. ಅಲ್ಲದೇ ತನ್ನ ಸ್ನೇಹಿತನ ಆರ್ಥಿಕ ಸ್ಥಿತಿಗತಿ ಹೇಗಿದೆಯೋ ಗೊತ್ತಿಲ್ಲ.

ಬಸು ಬರೆದ: “ನಾನು ಆರೋಗ್ಯವಾಗಿದ್ದೇನೆ, ವಿರಾಮವಾಗಿಯೂ ಇದ್ದೇನೆ. ಆದರೂ ನಿನ್ನಲ್ಲಿಯವರೆಗೆ ಪಯಣಿಸಲು ಬೇಕಾಗುವ ಮಾನಸಿಕ ಧೃತಿ ನನಗಿಲ್ಲ. ಸಾವು ಹತ್ತಿರವಾಗುತ್ತಿದೆ. ನನಗೆ ಆ ಮೊದಲು ನಿನ್ನ ಜೊತೆ ಒಂದಷ್ಟು ಕಾಲ ಇರಲೇಬೇಕೆಂಬ ಕಡು ಆಸೆ ಇದೆ. ನೀನೇ ಇಲ್ಲಿಗೆ ಬಾ. ನೀನು ತಪ್ಪು ತಿಳಿಯದಿದ್ದರೆ ಒಂದು ಸಂಗತಿ ಹೇಳಬಯಸುತ್ತೇನೆ; ನಿನ್ನ ಪೂರ್ತಿ ಪಯಣ ವೆಚ್ಚವನ್ನು ನಾನು ಭರಿಸುತ್ತೇನೆ, ಬಾ ಗೆಳೆಯಾ ಬಾ! ಬರದಿರಬೇಡ.”

ಯಾದವ ಮರುಬರೆದ: “ನನಗೂ ಅದೇ ಹಂಬಲ. ಆದರೆ ಇಲ್ಲಿ, ನನ್ನ ಮನೆಯಲ್ಲಿ, ನಿನ್ನೊಡನೆ ಕಾಲ ಸವಿಯಬೇಕೆಂದು. ಆರ್ಥಿಕವಾಗಿ ಚೆನ್ನಾಗಿದ್ದೇನೆ. ಅಲ್ಲದೇ ಇದು ಹಳ್ಳಿಯೆಂದು ನೀನು ಹಿಂಜರಿಯಬೇಕಾಗಿಲ್ಲ. ಆಧುನಿಕ ಸೌಕರ್ಯಗಳೆಲ್ಲವೂ ಇಲ್ಲಿವೆ. ಒಡನೆ ಹೊರಟು ಬಾ ಮಿತ್ರನೇ!”

ಬಸು ಹೊರಟ. ಮೊದಲ ಹಂತದಲ್ಲಿ ೨೪ ಗಂಟೆ ರೈಲುಯಾನ. ಎರಡನೆಯ ಹಂತದಲ್ಲಿ ಬಸ್ ಪ್ರಯಾಣ. ಕೊನೆಯ ಹಂತದಲ್ಲಿ ಜೋಡೆತ್ತು ಗಾಡಿಯಲ್ಲಿ ಅಭಿಯಾನ. ಯಾದವನ ಸಮೃದ್ಧ ಸುಂದರ ನಂದನವನಸದೃಶ ಜಮೀನಿನ ಭವ್ಯ ಪ್ರವೇಶದ್ವಾರ. ಹಳ್ಳಿಗೆ ಹಳ್ಳಿಯೇ ಅಲ್ಲಿ ಜಮಾಯಿಸಿದೆ, ಹಬ್ಬದ ವಾತಾವರಣ. ಕಲ್ಕತ್ತಾ ನಗರದ ಸುಪ್ರಸಿದ್ಧ ವರಿಷ್ಠ ವಕೀಲನ ಆಗಮನ ಆ ವಲಯದಲ್ಲೆಲ್ಲ ಒಂದು ಅವಿಸ್ಮರಣೀಯ ಐತಿಹಾಸಿಕ ಘಟನೆ. ಗಾಡಿ ನಿಂತಿತು. ಬಸುವನ್ನು ಆದರದಿಂದ ಕೈ ಹಿಡಿದು ಕೆಳಗಿಳಿಸಿದ ಯಾದವ. ಆನಂದಬಾಷ್ಪ ಕೋಡಿಯೊಡೆದಿದೆ, ಬಾಲ್ಯಮಿತ್ರರಿಬ್ಬರೂ ಗಾಢಾಲಿಂಗನಲೀನರಾಗಿದ್ದಾರೆ…

ಬಸು ನಿಶ್ಚೇಷ್ಟಿತನಾಗಿ ಕುಸಿದು ಬಿದ್ದ. ವೈದ್ಯರು ಧಾವಿಸಿ ಬಂದರು. ಪ್ರಥಮ ಚಿಕಿತ್ಸೆ ನೀಡಿದರು – ನಾಡಿಮಿಡಿತವಿತ್ತು, ಸ್ಮೃತಿ ಇರಲಿಲ್ಲ. ಮುಂದೇನು? ಆತನನ್ನು ಕಲ್ಕತ್ತಾಕ್ಕೆ ಸಾಗಿಸಿ ಅತ್ಯಾಧುನಿಕ ಚಿಕಿತ್ಸೆ ಒದಗಿಸುವುದೊಂದೇ ಶರಣು. ಮೂರು ದಿವಸಗಳ ಹಿಂಪಯಣ. ನಗರ ತಲಪಿದೊಡನೇ ಬಸುವನ್ನು ರುಗ್ಣಾಲಯಕ್ಕೆ ನೇರವಾಗಿ ಒಯ್ದು ದಾಖಲಿಸಿದರು. ಆಶ್ಚರ್ಯ! ಈ ವೇಳೆಗೆ ಆತನಿಗೆ ಸ್ಮೃತಿ ಮರಳಿತ್ತು.

ಒಂದು ವಾರದ ತೀವ್ರ ವೈದ್ಯಕೀಯ ತಪಾಸಣೆ, ಬಗೆಬಗೆಯ ಪರೀಕ್ಷೆಗಳು, ದಾಖಲೆಗಳು, ಯಾದಿಗಳು – ಆದರೆ ಯಾವ ತಜ್ಞನಿಗೂ ಬಸುವಿನ ಹಠಾತ್ ಮೂರ್ಛೆಯ ಕಾರಣ ಗೊತ್ತಾಗಲೇ ಇಲ್ಲ. ಉಭಯ ಪ್ರದೇಶಗಳ (ನಗರ ಮತ್ತು ಹಳ್ಳಿ) ಪರಿಚಯ ಚೆನ್ನಾಗಿದ್ದ ಒಬ್ಬ ಪರಿಸರತಜ್ಞ ಸಮರ್ಪಕ ವಿವರಣೆ ನೀಡಿದ: “ನಗರದ ಕಲುಷಿತ ವಾಯುವಿನಲ್ಲಿ ಇದ್ದವನಿಗೆ ಹಳ್ಳಿಯ ಪರಿಶುದ್ಧ ವಾಯು ಮಾರಕವಾದದ್ದು ಆಶ್ಚರ್ಯವಲ್ಲ!”

ಬುವಿಯಿದು ಬರಿ ಮಣ್ಣಲ್ಲೋ! – ಐದು

೧೮೫೫ರಷ್ಟು ಹಿಂದೆಯೇ ಅಮೆರಿಕದ ರೆಡ್ ಇಂಡಿಯನ್ ನಾಯಕನೊಬ್ಬ ಈ ದಿಶೆಯಲ್ಲಿ ಎಷ್ಟು ವೈಜ್ಞಾನಿಕವಾಗಿ ಯೋಚಿಸಿದ್ದ ಎನ್ನುವುದಕ್ಕೆ ಈಚೆಗೆ ಬೆಳಕಿಗೆ ಬಂದ ಆತನ ಒಂದು ಕಾಗದದಲ್ಲಿ ಪುರಾವೆಗಳು ದೊರೆಯುತ್ತವೆ. ಅಮೆರಿಕದ ಅಧ್ಯಕ್ಷ, ರೆಡ್ ಇಂಡಿಯನ್ ಬುಡಕಟ್ಟಿನ ನಾಯಕ ಸಿಯಾತಲ್ ಎಂಬಾತನಿಗೆ ಒಂದು ಕೋರಿಕೆ ಸಲ್ಲಿಸಿ, ರೆಡ್ ಇಂಡಿಯನ್ನರ ವಸತಿ ಪ್ರದೇಶವನ್ನು ಸರಕಾರಕ್ಕೆ ಮಾರಬೇಕೆಂದು ಕೇಳಿಕೊಂಡಿದ್ದ. ದೊರೆಯ ಕೋರಿಕೆ ಎಂದರೆ ಮಿಲಿಟರಿ ಹುಕುಂ ಎಂದು ಅರ್ಥವಷ್ಟೆ. ಆಧುನಿಕ ಯಂತ್ರ ಸ್ಥಾವರಗಳ ವಿಸ್ತರಣೆಗೆ, ನಾಗರಿಕ ಜನತೆಯ ಹೊಸ ಅಲೆಯ ವಹಿವಾಟುಗಳಿಗೆ ಮತ್ತು ಸಮಗ್ರವಾಗಿ ರಾಷ್ಟ್ರದ ಸುಧಾರಣೆಗೆ ಈ ಹೆಜ್ಜೆ ಅವಶ್ಯವಾಗಿತ್ತು. ಮುಗ್ಧ ಅನಾಗರಿಕ, ಅವಿದ್ಯಾವಂತ ಸಿಯಾತಲ್ ರಾಷ್ಟ್ರಾಧ್ಯಕ್ಷನಿಗೆ ಬರೆದ ಉತ್ತರದ ಕೆಲವು ಅಂಶಗಳನ್ನು ಇಲ್ಲಿ ಉದ್ಧರಿಸಿದೆ.

“ವಾಷಿಂಗ್ಟನ್ನಿನಲ್ಲಿರುವ ಮಹಾಪ್ರಭು ನಮ್ಮ ನೆಲವನ್ನು ಕೊಳ್ಳುವ ಆಶಯ ವ್ಯಕ್ತಪಡಿಸಿದ್ದಾರೆ. ಸ್ನೇಹ ಮತ್ತು ಸದ್ಭಾವನೆಯ ಮಾತುಗಳನ್ನು ಸಹ ಮಹಾಪ್ರಭುಗಳು ನಮಗೆ ಕಳಿಸಿರುವರು. ಇದು ಅವರ ದಯವಂತಿಕೆಯ ದ್ಯೋತಕ. ಏಕೆಂದರೆ ನಾವು ಮರುಸಲ್ಲಿಸಬಹುದಾದಂಥ ಸ್ನೇಹ ಅವರಿಗೆ ಅಗತ್ಯವಿಲ್ಲ ಎಂಬುದು ನಮಗೆ ತಿಳಿದಿದೆ. ನಾವು ನಿಮ್ಮ ಬೇಡಿಕೆಯನ್ನು ಪರಿಶೀಲಿಸುತ್ತೇವೆ. ಹಾಗೆ ಮಾಡದಿದ್ದರೆ ಬಿಳಿ ಮನುಷ್ಯ ತುಪಾಕಿಗಳ ಸಮೇತ ಬಂದು ನಮ್ಮ ನೆಲವನ್ನು ನುಂಗಬಲ್ಲ ಎಂದು ನಮಗೆ ಗೊತ್ತುಂಟು. ಆದರೆ ನೀವು ಬಾನನ್ನು ಹೇಗೆ ತಾನೇ ಕೊಳ್ಳಬಲ್ಲಿರಿ ಅಥವಾ ಮಾರಬಲ್ಲಿರಿ? ನೆಲದ ಒಲವನ್ನು? ಈ ಭಾವನೆಯೇ ನಮಗೆ ವಿಚಿತ್ರವಾಗಿದೆ. ಭೂಮಂಡಲದ ಪ್ರತಿಯೊಂದು ಅಂಶವೂ ನನ್ನ ಮಂದಿಗೆ ಪವಿತ್ರವಾದದ್ದು. ಒಂದೊಂದು ಮರದ ಕೊಂಬೆರೆಂಬೆಗಳು ಕಡಲ ಕಿನಾರೆಯಲ್ಲಿಯ ಬಿಳಿಮರಳ ಹಾಸು, ದಟ್ಟ ಕಾಡುಗಳಲ್ಲಿಯ ಮಬ್ಬು ಇಬ್ಬನಿಯ ಮುಸುಕು, ಗುಂಯಿಗುಡುವ ಕೀಟದ ಸ್ವನ ಎಲ್ಲವೂ ನಮ್ಮ ಬಳಗದವರಿಗೆ ಆತ್ಮೀಯವಾದವು. ಬಿಳಿ ಮನುಷ್ಯನಿಗೆ ನಮ್ಮ ರೀತಿಗಳು ಅರ್ಥವಾಗುವುದಿಲ್ಲ ಎಂದು ನಮಗೆ ಗೊತ್ತಿದೆ. ನೆಲದ ಯಾವುದೇ ಭಾಗ ಅವನಿಗೆ ಇನ್ನೊಂದು ಭಾಗದಂತೆ ಒಂದೇ. ಏಕೆಂದರೆ ಅವನು ರಾತ್ರಿಂಚರನಾದ ಹೊಸಬ. ತನಗೆ ಬೇಕಾದದ್ದನ್ನೆಲ್ಲ ನೆಲದಿಂದ ಕತ್ತರಿಸುವುದೊಂದೇ ಅವನಿಗೆ ತಿಳಿದಿರುವ ಕಸಬು. ಭೂಮಿ ಅವನ ಭ್ರಾತೃ ಅಲ್ಲ, ಶತ್ರು. ಇದನ್ನು ಜಯಿಸಿದ ಬಳಿಕ ಅವನು ಮತ್ತೆ ಮುಂದೆ ಸಾಗುತ್ತಾನೆ. ಅವನ ಸುಡುವ ಹಸಿವು ಇಡೀ ಇಳೆಯನ್ನೇ ಕಬಳಿಸಿ ಬೆಂಗಾಡಾಗಿಸುತ್ತದೆ.

“ನಿಮ್ಮ ನಗರಗಳ ದೃಶ್ಯ ಕೆಂಪು ಮನುಷ್ಯನ ಕಂಗಳಲ್ಲಿ ನೋವು ಉಂಟುಮಾಡುವುದು. ಪ್ರಾಯಶಃ ಕೆಂಪು ಮನುಷ್ಯ ಒಬ್ಬ ಮೃಗ. ನಿಮ್ಮ ಸೂಕ್ಷ್ಮ ಅವನಿಗೆ ಅರ್ಥವಾಗುವುದಿಲ್ಲ. ನೀವು ನೀಡಿರುವ ಕರೆಯನ್ನು ನಾವು ಮನ್ನಿಸುವುದು ಅನಿವಾರ್ಯವಾಗಿದೆ. ಆದರೆ ಒಂದು ಷರತ್ತನ್ನು ನಿಮ್ಮ ಮುಂದಿಡ ಬಯಸುವೆನು: ಈ ನೆಲದ ಜಂತುಗಳನ್ನು ಬಿಳಿ ಮನುಷ್ಯ ತನ್ನ ಸೋದರ ಪ್ರಾಣಿಗಳೆಂಬುದಾಗಿ ಪರಿಗಣಿಸಬೇಕು. ನಾವು ಕಂಡುಕೊಂಡಿರುವ ಸತ್ಯ ಒಂದುಂಟು. ಇದನ್ನು ಬಿಳಿ ಮನುಷ್ಯ ಕೂಡ ಒಂದಲ್ಲ ಒಂದು ದಿನ ತಿಳಿದೇ ತಿಳಿಯುತ್ತಾನೆ: ನಮ್ಮೆಲ್ಲರ ದೇವರೂ ಒಬ್ಬನೇ. ನಮ್ಮ ನೆಲವನ್ನು ಹೇಗೆ ನೀವು ಸ್ವಂತಕ್ಕೆ ಪಡೆಯಬೇಕೆಂದು ಹವಣಿಸಿದ್ದೀರೋ ಹಾಗೆ ಆತನನ್ನು ಕೂಡ ಕೇವಲ ನಿಮ್ಮ ಖಾಸಾ ಸೊತ್ತಾಗಿ ಬಾಚಿಕೊಳ್ಳಲು ಬಗೆದಿರಬಹುದು. ಆದರೆ ಇದು ನಡೆಯದು. ಅವನು ಜನರ ದೇವರು. ಅವನ ಕರುಣೆ ಕೆಂಪು ಮಂದಿಗೂ ಬಿಳಿ ಮಂದಿಗೂ ಸಮವಾಗಿಯೇ ಹಂಚಿಕೊಂಡಿದೆ. ಧರಣಿಮಂಡಲ ಅವನಿಗೆ ಅಮೂಲ್ಯವಾದದ್ದು. ಇದನ್ನು ಕುಲಗೆಡಿಸುವುದು ಎಂದರೆ ಸೃಷ್ಟೀಶನ ಮೇಲೆ ಅವಹೇಳನ ಹೇರಿದಂತೆ. ಬಿಳಿಯರು ಕೂಡ, ಪ್ರಾಯಶಃ ಇತರ ಬುಡಕಟ್ಟಿನವರಿಗಿಂತ ಬಲು ಬೇಗ ತೊಲಗಿ ಹೋಗುತ್ತಾರೆ. ನಿಮ್ಮ ಹಾಸಿಗೆಯನ್ನು ಹೊಲಸುಗೊಳಿಸುವುದನ್ನು ಹೀಗೆಯೇ ಮುಂದುವರಿಸುತ್ತಿರಿ – ಒಂದು ದಿನ ಆ ರೊಚ್ಚೆಯಲ್ಲಿ ನಿಮ್ಮ ಉಸಿರೇ ಕಟ್ಟಿಹೋಗುತ್ತದೆ. ಕಾಡೆಮ್ಮೆಗಳೆಲ್ಲವನ್ನೂ ಕಡಿದೊಗೆದ ಬಳಿಕ ಕಾಡುಕುದುರೆಗಳೆಲ್ಲವನ್ನೂ ಪಳಗಿಸಿ ಮುಗಿದ ತರುವಾಯ ವನಾಂತರಗಳ ಪ್ರಶಾಂತ ಏಕಾಂತಗಳೆಲ್ಲವೂ ನರಗಬ್ಬಿನಿಂದ ನಾರುತ್ತಿರುವಾಗ ಮತ್ತು ಫಲಸಮೃದ್ಧ ಗಿರಿ ದೃಶ್ಯಗಳು ಚಲ್ಲಗಾತಿಯರ ಬೋಳು ಹರಟೆಯಲ್ಲಿ ಮುಳುಗಿಹೋದಾಗ ಹೊದರೆಲ್ಲಿ ಉಳಿದಿರುವುದು? ಹದ್ದನ್ನು ಎಲ್ಲರಸಲಿ? ಈ ಸೂರೆಗೆ ಈ ಹನನಕ್ಕೆ ಅಂತ್ಯವೆಂದು? ಸಾವಿನ ಮೊನೆ ತಿವಿಯುವಂದೇ ಬದುಕಿನ ಕೊನೆ.

“ಬಿಳಿ ಮನುಷ್ಯನ ಪಟ್ಟಣಗಳಲ್ಲಿ ಎಲ್ಲಿಯೂ ಶಾಂತ ಪ್ರದೇಶವೇ ಇಲ್ಲ. ವಸಂತ ಮಾರುತದಿಂದ ತೊನೆಯುವ ಎಲೆಗಳ ನಿನದ ಅಲ್ಲಿಲ್ಲ. ಜೀರುಂಡೆಗಳ ರೆಕ್ಕೆ ಅದಿರಿಕೆಯ ಸೊಲ್ಲು ಅಲ್ಲಿಲ್ಲ. ಆದರೆ ನಾನೊಬ್ಬ ಅನಾಗರಿಕ. ನನಗೆ ತಿಳಿಯಲಾರದೋ ಏನೋ ನಗರದ ಹರಟೆ ನನ್ನ ಕಿವಿಗಳನ್ನು ಕಿವಿಡಾಗಿಸುತ್ತದೆ. ಕೋಗಿಲೆಯ ಕುಹೂ ಕುಹೂರವವನ್ನಾಗಲೀ ರಾತ್ರಿ ವೇಳೆ ಕೊಳದ ಸುತ್ತ ನೆರೆದು ಅಖಂಡ ಸಂವಾದದಲ್ಲಿ ಲೀನವಗಿರುವ ಮಂಡೂಕಗಳ ಟ್ರೊಂಯ್ ಟ್ರೊಂಯ್ ನಾದವನ್ನಾಗಲೀ ಆಲಿಸಲಾಗದಿದ್ದರೆ ಬದುಕಿನಲ್ಲಿ ಉಳಿದುದೇನು? ನಡುಹಗಲ ಮಳೆಯಿಂದ ಕೊಳೆ ತೊಳೆದ ಇಲ್ಲವೇ ಸುರಹೊನ್ನೆಯ ಕಂಪನ್ನು ಧರಿಸಿದ ತಂಗಾಳಿಯ ಮೆಲು ಬೀಸು ಕೆಂಪು ಮನುಷ್ಯನಿಗೆ ಬಲು ಇಂಪು. ಈತನಿಗೆ ವಾಯು ಅತ್ಯಮೂಲ್ಯವಾದದ್ದು. ಏಕೆಂದರೆ ಇದೇ ಸರ್ವರಿಗೂ – ಪ್ರಾಣಿಗಳನ್ನೂ ಸಸ್ಯಗಳನ್ನೂ ಒಳಗೊಂಡಂತೆ – ಜೀವದಾಯಕ ಉಸಿರು. ತಾನು ಶ್ವಸನಿಸುವ ವಾಯುವನ್ನು ಬಿಳಿ ಮನುಷ್ಯ ಗಮನಿಸಿರುವಂತೆ ತೋರುವುದಿಲ್ಲ. ನವೆದು ನವೆದು ಸಾಯುತ್ತಿರುವ ರೋಗಿಯಂತೆ ಅವನು ಪರಿಮಳಕ್ಕೆ ಮರವಟ್ಟಿದ್ದಾನೆ. ಪ್ರಾಣಿಸಂಗವಿಲ್ಲದಂಥ ಮಾನವನ ಬದುಕು ಬದುಕೇ? ವನ್ಯಪ್ರಾಣಿಗಳೆಲ್ಲವೂ ನಿರ್ನಾಮವಾಗಿ ಹೋದುವೋ ಮಾನವ ಧೃತಿಗುಂದಿದವನಾಗಿ ಏಕಾಂಗಿಯಾಗಿ ಸತ್ತ್ವ ಕಳೆದುಕೊಂಡವನಾಗಿ ನಶಿಸಿಯೇ ಹೋಗುವುದು ನಿಚ್ಚಳ ಸತ್ಯ. ಏಕೆಂದರೆ ಪ್ರಾಣಿಗಳಿಗೆ ಇಂದು ಯಾವ ಗತಿ ಒದಗುವುದೋ ಅದು ಮಾನವನಿಗೆ ನಾಳೆ ಒದಗುವುದು ನಿಸರ್ಗ ನಿಯಮ.

“ಬಿಳಿ ಮನುಷ್ಯನ ಕನಸುಗಳೇನು? ಚಳಿಗಾಲದ ಸುದೀರ್ಘ ರಾತ್ರಿಗಳಲ್ಲಿ ಅವನು ತನ್ನ ಎಳೆಯರ ಕಲ್ಪನೆಗಳಿಗೆ ಕಟ್ಟುವ ರೆಕ್ಕೆಗಳೇನು? ಅವರ ಮುಂದೆ ಇಡುವ ಘನಾದರ್ಶಗಳೇನು? ಅವರು ಲೋಕವನ್ನು ಯಾವ ತೆರನಾಗಿ ಸ್ವಾಗತಿಸಬೇಕು ಎಂದು ಅವನು ಬಯಸುತ್ತಾನೆ? ಇವು ಯಾವುವೂ ನಮಗೆ ತಿಳಿದಿಲ್ಲ. ನಾವು ದಸ್ಯುಗಳು. ಬಿಳಿ ಮನುಷ್ಯನ ಕನಸುಗಳಿಗೆ ಪ್ರವೇಶ ನಮಗಿಲ್ಲ. ಅವು ಹೇಗಿದ್ದಾವು ಎಂಬುದು ನಮಗೆ ಗೊತ್ತಿಲ್ಲದಿರುವುದರಿಂದ ನಮ್ಮ ಚಿಂತನೆಯ ಧಾಟಿಯಲ್ಲಿಯೇ ಮುಂದುವರಿಯುತ್ತೇವೆ. ನಮಗೆ ನೀವು ಮೀಸಲು ಪ್ರದೇಶವೊಂದನ್ನು ಒದಗಿಸುವ ಮಾತು ಕೊಟ್ಟಿದ್ದೀರಿ. ಆ ಭರವಸೆ ಮೇರೆಗೆ ನಾವು ನಿಮಗೆ ಈ ನೆಲೆಯನ್ನು ಮಾರುತ್ತೇವೆ. ಪ್ರಾಯಶಃ ಆ ಹೊಸ ತಾಣದಲ್ಲಿ ನಮ್ಮ ಇಚ್ಛಾನುಸಾರ ನಾವು ಉಳಿದ ಎಣಿಕೆಯ ದಿನಗಳನ್ನು ತಳ್ಳಿಯೇವು. ಕೊನೆಯ ಕೆಂಪು ಮನುಷ್ಯ ಈ ಸುಂದರ ವಸುಂಧರೆಯಿಂದ ಅಂತರ್ಧಾನನಾದ ಮೇಲೆಯೂ ಅಲ್ಲದೆ, ಆತನ ಸ್ಮೃತಿ ಪ್ರೇಯರಿಗಳ ಮೇಲೆ ಸರಿಯುವ ತೆಳು ಮೋಡದ ನೆರಳಾದ ಮೇಲೆಯೂ, ಈ ಕಿನಾರೆ ಮತ್ತು ಕಾಡುಗಳು ಆತನ ಸತ್ತ್ವ ತೇಜಸ್ಸುಗಳನ್ನು ಹಿಡಿದಿಟ್ಟಿರುತ್ತವೆ. ಏಕೆಂದರೆ ಕೆಂಪು ಜನ ಭೂಮಾತೆಯನ್ನು ನವಜಾತ ಶಿಶು ತನ್ನ ತಾಯಿಯ ಗುಂಡಿಗೆ ಮಿಡಿತವನ್ನು ಮುದ್ದಿಸಿ ಅಪ್ಪುವಂತೆ ಪ್ರೀತಿಸಿ ಆಲಿಂಗಿಸಿಕೊಂಡಿದ್ದಾರೆ. ನಮ್ಮ ಈ ವಲಯವನ್ನು ನಾವು ನಿಮಗೆ ಮಾರುತ್ತೇವೆ. ಆದರೆ ನಾವು ಇದನ್ನು ಪ್ರೀತಿಸಿದಂತೆ ನೀವೂ ಪ್ರೀತಿಸಬೇಕು, ಓಲೈಸಿದಂತೆ ನೀವೂ ಓಲೈಸಬೇಕು. ಆರಯ್ಯಿಸಿದಂತೆ ನೀವೂ ಆರಯ್ಯಿಸಬೇಕು. ಇದರ ಈಗಿನ ಚಿತ್ರವನ್ನು ನಿಮ್ಮ ಮನಃಪಟಲದ ಮೇಲೆ ಪಡಿಮೂಡಿಸಿ ಚೆನ್ನಾಗಿ ಕಾಪಾಡಿಕೊಳ್ಳಿ. ನಿಮ್ಮ ಸಮಸ್ತ ತ್ರಾಣ ಪ್ರಾಣಗಳಿಂದ ಹೃದಯಪೂರ್ವಕವಾಗಿ ಇದನ್ನು ನಿಮ್ಮ ಮಕ್ಕಳಿಗೋಸ್ಕರ ರಕ್ಷಿಸಿ. ಭಗವಂತ ಸಮಸ್ತರನ್ನೂ ಹೇಗೆ ಪ್ರೀತಿಯಿಂದ ಕಾಣುವನೋ ಹಾಗೆ ನೀವು ಇದನ್ನು ಪ್ರೀತಿಯಿಂದ ನೋಡಿಕೊಳ್ಳಿ. ಒಂದು ಸಂಗತಿ ನಮಗೆ ಚೆನ್ನಾಗಿ ಮನದಟ್ಟಾಗಿದೆ. ನಿಮ್ಮ ಮತ್ತು ನಮ್ಮ ದೇವರು ಒಬ್ಬನೇ. ಈ ನೆಲ ಆತನ ಕೃತಿ. ಇದು ಆತನಿಗೆ ಪ್ರಿಯವಾದದ್ದು, ಅಮೂಲ್ಯವಾದದ್ದು. ಮನುಕುಲದ ಸಾಮೂಹಿಕ ಅಭಿಯಾನದಲ್ಲಿ ಬಿಳಿ ಮನುಷ್ಯ ಕೂಡ ಅಪವಾದ ಆಗಲಾರ.”

ಇಪ್ಪತ್ತನೆಯ ಶತಮಾನದ ಕೊನೆಯ ಪಾದದಲ್ಲಿ ವಾಸ್ತವವಾಗಿ ತಲೆದೋರಿರುವ ಪರಿಸರಮಾಲಿನ್ಯದ ಖಚಿತ ಆಗಮನವನ್ನು ಪ್ರವಾದಿಯ ಮಾತುಗಳ ರೀತಿಯಲ್ಲಿ ಮತ್ತು ವಿಜ್ಞಾನಿಯ ಬರವಣಿಗೆಯ ಸೂತ್ರಗಳ ತೆರದಲ್ಲಿ ಈ ಮೇಲಿನ ಗುಂಡಿಗೆ ಕಲಕುವ ಕಾವ್ಯಮಯ ಪತ್ರ ವರ್ಣಿಸಿದೆ.

ನಮಗಿರುವುದು ಒಂದೇ ಪರಿಸರ – ಆರು

ಆಧುನಿಕ ಜೀವನದ ಸೌಕರ್ಯಗಳಿಗೆ ನಾವು ತೆರಬೇಕಾದ ಅತ್ಯಲ್ಪ ಶುಲ್ಕ ಅಥವಾ ದಂಡ ಪರಿಸರ ಮಾಲಿನ್ಯ. ಪರಿಸರ ವಿಜ್ಞಾನಿಗಳು ಕುಂಚಿಸುವಂಥ ಪ್ರಮಾಣದಲ್ಲಿ ಇದು ಪಿಡುಗಾಗಿಲ್ಲ ಎಂದು ಸಮಸ್ಯೆಯನ್ನು ಅಲಕ್ಷಿಸುವುದು ಸುಲಭ. ಆದರೆ ಮುಂಬರುವ ದಿವಸಗಳಲ್ಲಿ ನಮ್ಮ ಪೀಳಿಗೆ ಚೆನ್ನಾಗಿ ಬದುಕಿ ಬಾಳಬೇಕಾದರೆ ನಾವು ಒಂದು ಅಂಶವನ್ನು ಸ್ಪಷ್ಟವಾಗಿ ತಿಳಿದಿರುವುದು ಅವಶ್ಯ. ನಿಸರ್ಗದ ಮಹಾ ಪ್ರಯೋಗಮಂದಿರದಲ್ಲಿ ಸುದೀರ್ಘ ಕಾಲದಿಂದ ಅಸಂಖ್ಯಾತ ಪ್ರಯೋಗಗಳು ನಡೆದು ವರ್ತಮಾನಕಾಲದ ಸಮಷ್ಟಿ ಒಡಮೂಡಿದೆ. ಈ ಪ್ರಯೋಗದ ಹಿನ್ನೆಲೆಯನ್ನು ಅರಿತು ಇವುಗಳಿಗೆ (ಅಂದರೆ ನಿಸರ್ಗದ ಬಲಗಳಿಗೆ) ಅನುವರ್ತಿಯಾಗಿ ಮಾನವ ಬಾಳಲು ಕಲಿತಾಗ ಮಾತ್ರ ಈತನ ದಿನಗಳು ಹಸನಾಗುವುವು. ಈತನ ಪೀಳಿಗೆ ಸೊಗದಿಂದ ಬದುಕುವುದು. ಹಾಗಲ್ಲದೇ ನಿಸರ್ಗ ಅಥವಾ ಪರಿಸರದ ಸಾರ್ವಭೌಮ ತಾನು, ಇದನ್ನು ತನ್ನ ಇಚ್ಛಾನುಸಾರ ಪರಿವರ್ತಿಸಿ ಸೋಲಿಸಿ ಅಲ್ಲಾವುದ್ದೀನನ ವಿಚಿತ್ರ ದೀಪದಿಂದ ಹೊರಹೊಮ್ಮುವ ರಾಕ್ಷಸನ ತೆರದಲ್ಲಿ ತನಗೆ ಸೇವೆ ಸಲ್ಲಿಸಲು ವಿಧಿಸುತ್ತೇನೆ ಎಂದು ಹೊರಟನೋ ಆಗ ಇವನ ಸರ್ವನಾಶ ಖಾತ್ರಿ. ಪೊಡವಿಯೇ ಮುನಿದು ಇವನನ್ನು ಕಬಳಿಸುವುದು ಕಟ್ಟಿಟ್ಟ ಬುತ್ತಿ. ಮನುಕುಲದ ಸಾಮೂಹಿಕ ಅಭಿಯಾನ ಈ ‘ಸಹಗಮನ’ದಲ್ಲಿ ಪರ್ಯವಸಾನಗೊಳ್ಳಬೇಕೇ? ಪರಿಸರವನ್ನು ಎದುರಿಸಿ ಮನುಷ್ಯ ಸುತರಾಂ ಉಳಿಯಲಾರ.

ನಮಗಿರುವುದು ಒಂದೇ ಪರಿಸರ
ನಮ್ಮ ಬದುಕಿಗೆ ಅಮೃತವನ್ನೂಡುವ ಆಕರ
ಪರಿಸರವನ್ನು ರಕ್ಷಿಸೋಣ ಅದು ನಮ್ಮನ್ನು ಪೋಷಿಸುತ್ತದೆ
ಪರಿಸರವನ್ನು ಅಲಕ್ಷಿಸೋಣ ಅದು ನಮ್ಮನ್ನು ಶೋಷಿಸುತ್ತದೆ
ಗಿಡ ನೆಟ್ಟು ಬೆಳೆಸಿ, ಕಾಪಾಡುವಾಗ ಪರಿಸರವನ್ನು ಬೆಳೆಸುತ್ತೇವೆ
ಮರ ಕಡಿದು ಕೆಡೆಸುವಾಗ ಪರಿಸರವನ್ನು ಕೊಲ್ಲುತ್ತೇವೆ
ವನ್ಯ ಮೃಗಗಳೆಲ್ಲವೂ ಪರಿಸರದ ಅಮೂಲ್ಯ ಸಂಪತ್ತು
ನಮ್ಮದೆಷ್ಟೋ ಅಷ್ಟೇ ಅವುಗಳದು ಕೂಡ ಈ ಜಗತ್ತು.

[ಭವಿಷ್ಯವಿಜ್ಞಾನ ಪುಸ್ತಕದ ಮುಂದಿನ ಭಾಗಗಳನ್ನು ಹೀಗೇ ಅಧ್ಯಾಯಗಳ ಅಂತ್ಯದ ಅನುಕೂಲ ನೋಡಿಕೊಂಡು ಕಂತುಗಳಲ್ಲಿ ಪ್ರತಿ ಮಂಗಳವಾರ ಬೆಳಗ್ಗೆ ಪ್ರಕಟವಾಗುವಂತೆ ವ್ಯವಸ್ಥೆ ಮಾಡುತ್ತಿದ್ದೇನೆ. ನಿಮ್ಮ ಪ್ರತಿಕ್ರಿಯೆ, ಚರ್ಚೆಯ ನುಡಿಗಳಿಗೆ ಎಂದಿನಂತೇ ಸ್ವಾಗತವಿದೆ]